ಈಗ್ಗೆ ಕೆಲವೇ ದಿನಗಳ ಹಿಂದೆ ನಡೆದ ಒಂದು ಮಾರ್ಮಿಕ ಘಟನೆ. ಬೇಲ್‌ಪುರಿ-ಚಾಟ್ಸ್ ಅಂಗಡಿಗೆ ಬಂದಿದ್ದ ಗಿರಾಕಿಯೊಬ್ಬ ಬೇಲ್‌ಪುರಿಯನ್ನು ಬೇಗ ಮಾಡಿಕೊಡುವಂತೆ ಅಂಗಡಿಯವನನ್ನು ಅವಸರಿಸಿದ. ಅಂಗಡಿಯವ ಉತ್ತರಿಸಿದ – “ಕೇಳಿದೊಡನೆ ಕೊಟ್ಟುಬಿಡುವುದಕ್ಕೆ ಇದು ಕೋರ್ಟಿನ ಬೇಲ್ ಎಂದುಕೊಂಡಿದ್ದೀರಾ? ಬೇಲ್‌ಪುರಿ ಮಾಡಿಕೊಡುವುದಕ್ಕೆ ಸ್ವಲ್ಪ ಸಮಯ ಹಿಡಿಯುತ್ತದೆ.” ಈಚಿನ ಬೆಳವಣಿಗೆಗಳು ಜನಸಾಮಾನ್ಯರಲ್ಲಿ ಎಂತಹ ಅನಿಸಿಕೆಗಳನ್ನು ಮೂಡಿಸಿವೆಯೆಂಬುದರ ಒಂದು ಸ್ಯಾಂಪಲ್ ಇದು. ಸಲ್ಮಾನ್‌ಖಾನನ ನರಹತ್ಯೆಯ ಅಪರಾಧಕ್ಕೆ ದಂಡನೆ ಬೆಳಗ್ಗೆ ೧೧ ಗಂಟೆಗೆ ಘೋಷಿತವಾದರೆ ಅಂದು ಸಂಜೆಯೆ ನಾಲ್ಕು ಗಂಟೆಗೆ ಉಚ್ಚನ್ಯಾಯಾಲಯದಲ್ಲಿ ಬೇಲ್ ಪೆಟಿಶನ್ ದಾಖಲೆಯಾಗಿ ಅವನಿಗೆ ಕೂಡಲೆ ಬೇಲ್ ದೊರಕಿಬಿಟ್ಟಿತು. ತ್ವರಿತ ನ್ಯಾಯ ಎಂದರೆ ಹೀಗೆ ಇರಬೇಕಲ್ಲವೆ! ಚಿತ್ರರೂಪದಲ್ಲಿ ನ್ಯಾಯದೇವತೆಯನ್ನು ಅಂಧಳನ್ನಾಗಿ ತೋರಿಸುವ ವಾಡಿಕೆಯಿದೆ – ನಿಷ್ಪಕ್ಷಪಾತತೆಯನ್ನು ಸಂಕೇತಿಸಲು. ಆದರೆ ಈಗ ನ್ಯಾಯಾಂಗವ್ಯವಸ್ಥೆಯೇ ಅಂಧವಾಗಿಬಿಟ್ಟಿದೆಯೆ ಎನಿಸತೊಡಗಿದೆ ಈಚಿನ ಎರಡೂ ಪ್ರಕರಣಗಳಲ್ಲಿ. ಆರೋಪಿಯ ಸ್ಥಾನದಲ್ಲಿರುವುದು ಸಲ್ಮಾನ್‌ಖಾನ್ ಮತ್ತು ಜಯಲಲಿತಾ ಅಲ್ಲ, ನ್ಯಾಯಾಂಗವೇ ಆರೋಪಿಯಂತಿದೆ ಎಂಬ ವ್ಯಾಖ್ಯೆ ಕೇಳಬಂದಿದೆ. ಇದನ್ನು ದೊಡ್ಡ ದುರಂತವೆನ್ನಬೇಕಾಗಿದೆ. ಏಕೆಂದರೆ ರಾಜ್ಯಾಂಗವ್ಯವಸ್ಥೆಯಲ್ಲಿ ಕೋರ್ಟುಗಳಿಗಿಂತ ಆಚೆಯ ನಿರ್ಣಯಾಧಿಕಾರಸ್ಥಾನ ಬೇರಾವುದೂ ಇಲ್ಲ. ಈ ಅಂತಿಮ ನಿರ್ಣಯಸ್ಥಾನದಲ್ಲಿಯೆ ಶೈಥಿಲ್ಯ ತೋರಿದರೆ ಸಮಾಜ ಯಾರ ಮೊರೆಹೊಗಬೇಕು? ಸೆಲೆಬ್ರಿಟಿಗಳೂ ರಾಜಕೀಯ ನೇತಾರರೂ ಕಟಕಟೆಯನ್ನು ಅಲಂಕರಿಸುವ ಸಂದರ್ಭಗಳೇ ವಿರಳ. ಉದ್ದಕ್ಕೂ ಪ್ರತಿಬಂಧಕಗಳನ್ನು ದಾಟಿ ಕಡೆಗೂ ಅಂತಿಮ ಹಂತ ತಲಪಿದ ಪ್ರಕರಣಗಳಲ್ಲಿಯೂ ನ್ಯಾಯಾಲಯಗಳಿಂದ ಋಜುವಾದ ವಿಶ್ವಸನೀಯ ತೀರ್ಪು ಹೊರಬೀಳಲಿಲ್ಲವೆಂಬುದು ನಿಜಕ್ಕೂ ಭಯಾನಕ ಸ್ಥಿತಿ; ಅಧಃಪಾತದ ಪರಮಾವಧಿ. ಮುಂದೆಯಾದರೂ ನ್ಯಾಯಾಂಗದ ಘನತೆ ಪುನಃಸ್ಥಾಪನೆಗೊಳ್ಳಲೆಂದು ಆಶಿಸೋಣ.
ಇದು ಅಧೋಬಿಂದು
Month : July-2015 Episode : Author :