ಆದ್ಯ ಕ್ರಾಂತಿಕಾರಿ ವಾಸುದೇವ ಬಲವಂತ ಫಡಕೆಯ ರೋಮಾಂಚನಕಾರಿ ಜೀವನ ಕಥನ – ‘ಅದಮ್ಯ’. ಬಾಬು ಕೃಷ್ಣಮೂರ್ತಿ ಅವರು ಬರೆದ ಈ ಪುಸ್ತಕ ಲೋಕಾರ್ಪಣೆಗೊಂಡು ಇದೀಗ ೪೦ ವರ್ಷ ಪೂರೈಸಿದೆ. ಈ ನಿಮಿತ್ತ ಬಸವರಾಜ ಕಟ್ಟೀಮನಿ ಅವರ ಈ ಲೇಖನ.
ಮನ-ಮುದ್ರೆ
ಈ ನಾಡಿನಲ್ಲಿ ೧೯೪೭ರಿಂದ ಹಿಂದಕ್ಕೆ ೧೮೫೭ರವರೆಗೂ ಚದುರಿಕೊಂಡಿರುವ ಘಟನಾವಳಿಗಳನ್ನು ಕಾಣಬಯಸುವ ಕಣ್ಣುಗಳಿಗೆ, ಮೂಡಿ ಚೆಲ್ಲಿರುವ ಆಲೋಚನೆಗಳನ್ನು ಕೇಳಬಯಸುವ ಕಿವಿಗಳಿಗೆ, ಅಲ್ಲೇ ರಮಿಸಿ ಅನುಭವಿಸಬೇಕೆಂಬ ಹೃದಯಗಳಿಗೆ, ಹುಡುಕಾಟದಲ್ಲಿ ಸಿಗುವ ರೋಮಾಂಚಕಾರಿ ಮಿಂಚೊಂದಿದೆ, ಈ ಪುಸ್ತಕದಲ್ಲಿ. ಬೇಕಾದರೆ ಕಂಡು, ಕೇಳಿ, ಅನುಭವಿಸಿ, ಉಳಿದವರಿಗೂ ತಟ್ಟಿ ಹೇಳಿ!” ಎಂದು ಬಲ್ಲವರೊಬ್ಬರು ಹೇಳಿದ್ದರು. ಅದು ಆದ್ಯ ಕ್ರಾಂತಿಕಾರಿ ವಾಸುದೇವ ಬಲವಂತ ಫಡಕೆಯವರ ಜೀವನ ಕಥೆ – ‘ಅದಮ್ಯ’. ಚಂದ್ರಶೇಖರ ಆಜಾದರಂಥ ಮಹಾಕ್ರಾಂತಿಕಾರನ ಅತ್ಯಂತ ಅದ್ಭುತವಾದ ಕಥೆಯನ್ನು ಕನ್ನಡಿಗರಿಗೆ ಕೊಟ್ಟು, ಒಂದೆರಡು ವರ್ಷಗಳ ಕಾಲ “ಅಜೇಯ”ದ ಗುಂಗಿನಲ್ಲಿ ನಾವು ಮೈಮರೆಯುವಂತೆ ಮಾಡಿದ ಮಾಂತ್ರಿಕ ಲೇಖಕ ಬಾಬು ಕೃಷ್ಣಮೂರ್ತಿ ಬರೆದದ್ದು ” “ಅದಮ್ಯ”. ಕಥಾವಸ್ತುವಿನ, ಕಥಾನಾಯಕನ ಆ ಕಾಲದ ಐತಿಹಾಸಿಕ ವಾತಾವರಣದ ಸಮಗ್ರ ಸಂಶೋಧನೆ ಮಾಡಿ, ಆ ಕ್ರಾಂತಿಕಾರರು ಅಲೆದಲ್ಲೆಲ್ಲ ಅಲೆದು, ಅವರಿಗೆ ಸಂಬಂಧಪಟ್ಟ ಸಕಲ ಸಾಹಿತ್ಯವನ್ನೂ ಅಭ್ಯಸಿಸಿ, ರಮ್ಯವಾದರೂ ವಾಸ್ತವವಾದ, ಇತಿಹಾಸವನ್ನೇ ಕಣ್ಣೆದುರು ನಿಲ್ಲಿಸುವ, ಕನ್ನಡ ಲೇಖಕರಲ್ಲಿ ಒಂದು ವಿಶಿಷ್ಟ ವ್ಯಕ್ತಿತ್ವವನ್ನುಳ್ಳ ಬಾಬು ಕೃಷ್ಣಮೂರ್ತಿಯವರ “ಅದಮ್ಯ”ಕ್ಕಾಗಿ ಧಾರವಾಡ-ಹುಬ್ಬಳ್ಳಿಗಳ ಎಲ್ಲ ಪುಸ್ತಕಾಲಯಗಳಲ್ಲೂ ಹುಡುಕಾಡಿದರೂ ಸಿಗಲಿಲ್ಲ. “ಔಟ್ ಆಫ್ ಸ್ಟಾಕ್,” “ಔಟ್ ಆಫ್ ಪ್ರಿಂಟ್” ಎಂಬ ಉತ್ತರಗಳು. ಅನಂತರ, ಒಂದು ದಿನ ಆತ್ಮೀಯರೊಬ್ಬರು ಪ್ರೀತಿಯಿಂದ ಕಳಿಸಿಕೊಟ್ಟರು “ಅದಮ್ಯ”ವನ್ನು. ಅದೇ ರೀತಿ ಸಂಪೂರ್ಣವಾಗಿ ಜಾಗರಣೆ ಮಾಡಿ ಓದಿ ಮುಗಿಸಿದೆ. ಮುಗಿಸಿದಾಗ ಕಣ್ಣು ಉರಿಯುತ್ತಿದ್ದುವು. ಆದರೆ, ಮನಸ್ಸು ತೃಪ್ತವಾಗಿತ್ತು. ಸ್ವಾತಂತ್ರ್ಯಪೂರ್ವದ ಆ ದಿನಗಳನ್ನು ನೆನೆದು, ರಾಷ್ಟ್ರದ ಸ್ವಾತಂತ್ರ್ಯಕ್ಕಾಗಿ ಅಕ್ಷರಶಃ ಸರ್ವಸ್ವವನ್ನು ಹೋಮ ಮಾಡಿದ, ಹೆಂಡತಿ ಮಕ್ಕಳನ್ನು ಮರೆತ, ಅತ್ಯಂತ ಸಾಧಾರಣ ಆರ್ಥಿಕ ಸ್ಥಿತಿಯ, ಕ್ರಾಂತಿಯ ಸೈನ್ಯ ಕಟ್ಟಲು ಚತುರ ಸೇನಾಪತಿಯಂತೆ ಕೆಲಸ ಮಾಡಿದ ವಾಸುದೇವ ಫಡಕೆಯವರ ಜೀವನಗಾಥೆ ಓದುತ್ತಾ ಓದುತ್ತ ತನ್ಮಯನಾದೆ.
“ನೆನೆ ನೆನೆಯೋ ಆ ದಿನವ!
ಓ ಭಾರತ ಬಾಂಧವ!”
ಎಂಬ, ಕವಿ ಗೋಪಾಲಕೃಷ್ಣ ಅಡಿಗರ ಚಿರಸ್ಮರಣೀಯ ನೆನಪಾಗಿ ರೋಮಾಂಚಿತನಾದೆ.
ಸ್ಫೂರ್ತಿದಾಯಕ ಹುತಾತ್ಮ
ಆಜಾದ್, ಭಗತಸಿಂಗ್, ರಾಜಗುರು, ಸುಖದೇವ, ಜತೀನ್ ದಾಸ್, ಸಂಗೊಳ್ಳಿ ರಾಯಣ್ಣ, ಬಾಪೂ ಗೋಖಲೆ, ಶಿವಾಜಿ ಮಹರಾಜ್, ನರವೀರ ತಾನಾಜಿ ಮಾಲಸುರೆ, ಮಾಧವರಾವ್ ಪೇಶ್ವೆ, ತಾರಾರಾಣಿ, ಕೆಳದಿ ಚೆನ್ನಮ್ಮ, ಬೆಳವಡಿ ಮಲ್ಲಮ್ಮ, ಕಿತ್ತೂರು ಚೆನ್ನಮ್ಮ, ಝಾಂಸಿ ಲಕ್ಷ್ಮೀಬಾಯಿ, ತಾತ್ಯಾಟೋಪೆ, ಮಂಗಳಪಾಂಡೆ, ನರಗುಂದ ಬಾಬಾ ಸಾಹೇಬ್, ಸಾವರಕರ್, ನೇತಾಜಿ ಸುಭಾಷ್‌ಚಂದ್ರಬೋಸ್, ಜೆ.ಪಿ. ಲೋಹಿಯಾ, ನೂರು ನೂರು ಜನ… ಸಾವಿರ ಸಾವಿರ ಜನ. ಸ್ವಾತಂತ್ರö್ಯಕ್ಕಾಗಿ ಮಡಿದ ಈ ಹುತಾತ್ಮರು ಅಮರರು.
ಅವರ ಸಾಲಿನಲ್ಲಿ ಎದೆಯೆತ್ತಿ ಅಗ್ನಿಗೋಲಗಳಂಥ ಕಣ್ಣುಗಳು ಕಿಡಿ ಕಾರುತ್ತಿರಲು, ಉಪವಾಸ ವನವಾಸ ಸಹಿಸಿ, ಜ್ವರದ ತಾಪವನ್ನು ಹತ್ತಿಕ್ಕಿ, ದೇಹದಲ್ಲಿ ಜೀವವಿರುವವರೆಗೂ ಹುಲಿಯಂತೆ ಹೋರಾಡಿದ ಫಡಕೆ ನಿಜವಾಗಿಯೂ ಕ್ರಾಂತಿಕಾರಿ. ಆತನ ಜೀವನಚರಿತ್ರೆ ಇಂದಿನ ತರುಣ-ತರುಣಿಯರಿಗೆ ಸ್ಫೂರ್ತಿದಾಯಕ.
ಅರ್ಪಿತ ಜೀವನ
‘ಅಂಕುರ’, ‘ಆಸ್ಫೋಟ’, ‘ಆಹುತಿ’ ಎಂಬ ಮೂರು ಭಾಗಗಳಲ್ಲಿ ಈ ಅರ್ಪಿತ ಜೀವನದ ಅಧಿಕೃತ ಇತಿಹಾಸ ಕಾದಂಬರಿಯಂತೆಯೇ ಆಕರ್ಷಕ ಶೈಲಿಯಲ್ಲಿ ನಿರೂಪಿತವಾಗಿದೆ. ಗುರುವಾರ ಏಪ್ರಿಲ್ ೬, ೧೮೭೯. ಗುಲ್ಬರ್ಗದ ಹತ್ತಿರದ ಶಹಾಬಾದ್ ರೈಲುನಿಲ್ದಾಣ. ಆ ಜಿಲ್ಲೆಗೆ ಚಿರಪರಿಚಿತವಾದ ಉಗ್ರ ಬಿಸಿಲಿನ ಝಳ. ಆ ವರ್ಷ ಆ ಭಾಗದಲ್ಲಿ ಭೀಕರ ಕ್ಷಾಮ. “ಧೂಳು ತುಂಬಿಕೊಂಡು ಚಿಂದಿಯಾದ ಬಟ್ಟೆಗಳು, ಮೂಳೆ ಬಿಟ್ಟುಕೊಂಡ ದೇಹಗಳು, ಗುಳಿ ಬಿದ್ದು ನಿಸ್ತೇಜವಾದ ಕಣ್ಣುಗಳು, ಹೊಟ್ಟೆಗಿಲ್ಲದ ಸಿಟ್ಟು – ಅವರ ಪ್ರತಿ ಚಟುವಟಿಕೆಯಲ್ಲೂ ಎದ್ದುಕಾಣುತ್ತಿತ್ತು.” ಹೀಗೆ ಆರಂಭವಾಗುತ್ತದೆ ಕಥೆ.
“ಅಲ್ಲಿ ಒಬ್ಬ ವ್ಯಕ್ತಿ ಕಂಬಕ್ಕೆ ಒರಗಿ ನಿಂತಿದ್ದ. ಅವನ ತಿಳಿಹಸಿರು ಬಣ್ಣದ ಕಣ್ಣುಗಳ ತೀಕ್ಷ್ಣ ದೃಷ್ಟಿ ಅಲ್ಲಿ ಹರಡಿಕೊಂಡಿದ್ದ ಕ್ಷಾಮದ ಕಡೆ ಹೊರಳುತ್ತಿತ್ತು.
“ಎತ್ತರವಾದ ಆಳು. ಐದು ಅಡಿ ಹತ್ತು ಅಂಗುಲ. ದೃಢವಾದ ಮೈಕಟ್ಟು. ದಟ್ಟವಾಗಿ ಬೆಳೆದಿದ್ದ ಸ್ವಲ್ಪ ಗುಂಗುರಾಗಿದ್ದ ತಲೆಗೂದಲು. ಮುಖದ ತುಂಬಾ ಗಡ್ಡ-ಮೀಸೆ. ನೋಡಿದವರಿಗೆ ಹೆದರಿಕೆ ಹುಟ್ಟಿಸುವಂತಿದ್ದ ರೂಪ, ಆಕಾರ, ಮುಖದಲ್ಲಿ ಉದ್ವಿಗ್ನತೆ ಎದ್ದುಕಾಣುತ್ತಿತ್ತು.
“ಅವನು ಧರಿಸಿದ್ದುದು ಅರ್ಧತೋಳಿನ ಅಂಗರಖ. ಮೊಣಕಾಲುದ್ದದ ಕಚ್ಚೆ ಪಂಚೆ. ಭುಜದಿಂದ ಇಳಿಬಿದ್ದ ಒಂದು ತುಂಬಿದ ಚೀಲ.”
ಇದು, ಬಾಬು ಚಿತ್ರಿಸುವ ಫಡಕೆಯ ವ್ಯಕ್ತಿಚಿತ್ರ. ಕ್ರಾಂತಿಕಾರಿಗೆ ತಕ್ಕ ರೂಪು. ತುಂಬ ಭಾವುಕ ಹೃದಯ. ಮನೆಯಲ್ಲಿ ಚಿಕ್ಕಪ್ರಾಯದ ಪತ್ನಿ. ಆಕೆಯನ್ನು ಬಿಟ್ಟು ಬಂದು ತಿಂಗಳುಗಳೇ ಕಳೆದಿದ್ದುವು. ದೇಶದಲ್ಲೆಲ್ಲ ಬರ. ಆಹಾರವಿಲ್ಲ, ನೀರಿಲ್ಲ. ರಸ್ತೆಗಳಲ್ಲಿ ಬಿದ್ದು ಸಾಯುತ್ತಿದ್ದ ಜನ, ದನ. ಭಾರತವನ್ನು ಇಂಥ ಸ್ಥಿತಿಗೆ ತಂದಿಟ್ಟ ಬ್ರಿಟಿಷ್ ಸರ್ಕಾರದ ವಿರುದ್ಧ ಫಡಕೆ ಎದ್ದು ನಿಂತ.
ಆತ ರಾಜನಲ್ಲ, ಸಂಸ್ಥಾನಿಕನಲ್ಲ. ಜಮೀನ್ದಾರನಲ್ಲ. ಬಡ ಮನೆತನದಲ್ಲಿ ಹುಟ್ಟಿದ ಬ್ರಿಟಿಷ್ ಸರಕಾರದ ನೌಕರಿಯಲ್ಲೆ ಇದ್ದ ಒಬ್ಬ ಸಾಮಾನ್ಯ ವ್ಯಕ್ತಿ. ಶಿರಡೋಣ ಎಂಬ ಹಳ್ಳಿಯಲ್ಲಿ ಇವರ ಮನೆ. ವಾಸುದೇವನ ಅಜ್ಜ ಅನಂತರಾವ್ ಫಡಕೆ ಸಹ ಅತ್ಯುಗ್ರ ದೇಶಭಕ್ತ. ಆತನಿಂದಲೇ ಎಳೆಯ ವಾಸುದೇವನಿಗೆ ಸ್ಫೂರ್ತಿ. ೧೮೪೫ ನವೆಂಬರ್ ೪ ಅವನ ಜನ್ಮದಿನ. ಕರ್ನಾಳಾ ಕೋಟೆಯ ಕಿಲ್ಲೇದಾರರಾಗಿದ್ದ ಅವನ ಅಜ್ಜನಿಂದಲೇ ಅವನ ವ್ಯಕ್ತಿತ್ವ ರೂಪುಗೊಂಡಿದ್ದು.
ವಾಸುದೇವ ತನ್ನ ಆತ್ಮಕಥೆಯನ್ನೂ ಒರೆದಿದ್ದಾನೆ. ಅವನ ಚರಿತ್ರೆಯನ್ನು ಚಿತ್ರಿಸಲು ಲೇಖಕರು ಆ ಆತ್ಮಕಥೆಯನ್ನು ಜಾಣ್ಮೆಯಿಂದ ಉಪಯೋಗಿಸಿಕೊಂಡಿದ್ದಾರೆ. ವಾಸುದೇವ ಇಂಗ್ಲಿಷ್ ಕಲಿತ. ನ್ಯಾಯಮೂರ್ತಿ ರಾನಡೆಯವರಿಗೂ ವಾಸುದೇವನಿಗೂ ತುಂಬಾ ವಿಶ್ವಾಸ.
ಕೆಲಕಾಲ ಗ್ರಾಂಟ್ ಮೆಡಿಕಲ್ ಕಾಲೇಜಿನಲ್ಲಿ ಕೆಲಸ ಮಾಡಿದ. ೧೮೫೯ರಲ್ಲಿ ಅವನ ಮದುವೆಯೂ ಆಯಿತು. ೧೮೬೫ರಲ್ಲಿ ಪುಣೆಯಲ್ಲಿ ಮಿಲಿಟರಿ ಅಕೌಂಟ್ಸ್ ಕಚೇರಿಯಲ್ಲಿ ಗುಮಾಸ್ತನಾದ. ಸದಾಶಿವಪೇಟೆಯಲ್ಲಿ ಮನೆ ಮಾಡಿ ಪತ್ನಿ ಸಯೀಬಾಯಿಯನ್ನು ಕರೆದುಕೊಂಡು ಬಂದು ಸಂಸಾರಜೀವನ ಆರಂಭಿಸಿದ. ಮರಾಠಿಯನ್ನಲ್ಲದೆ, ತೆಲುಗು, ಸಂಸ್ಕೃತ, ಹಿಂದಿ, ಇಂಗ್ಲಿಷ್, ಕನ್ನಡ ಭಾಷೆಗಳನ್ನೂ ಆತ ಕಲಿತಿದ್ದ.
ಶಿರಡೋಣದಲ್ಲಿದ್ದ ತಾಯಿಗೆ ಸಖತ್ ಕಾಯಿಲೆಯಾದಾಗ ಆಕೆಯನ್ನು ನೋಡಿ ಬರಲು ರಜೆ ಕೇಳಿದರೆ ಸಿಗಲಿಲ್ಲ. ಫಡಕೆಯ ಮನಸ್ಸು ಸಿಡಿದೆದ್ದು ಫೈಲನ್ನು ರಪ್ಪನೆ ಮೇಜಿಗೆ ಬಡಿದು ಅಲ್ಲಿಂದ ಹೊರಟು ಶಿರಡೋಣಕ್ಕೆ ಬಂದ. ಆದರೆ ಆ ವೇಳೆಗಾಗಲೇ ತಾಯಿ ತೀರಿಕೊಂಡಿದ್ದಳು. ಈ ಘಟನೆಯಿಂದಾಗಿ ವಾಸುದೇವನ ಜೀವನದಲ್ಲಿ ಒಂದು ತಿರುವು ಬಂದಿತು. ಆತ ಬಂಡುಗಾರನಾದ. ರಾಮೋಶಿಗಳ ದಂಡು ಕಟ್ಟಿದ. ಅವರ ಖರ್ಚಿಗಾಗಿ ದರೋಡೆಗಳನ್ನು ಮಾಡಿಸಬೇಕಾಯಿತು. ಕ್ರಾಂತಿಕಾರಿಗಳಿಗೆ ಹಣ ಕೊಡುವರಾದರೂ ಯಾರು? ಸಂಗೊಳ್ಳಿ ರಾಯಣ್ಣನದೂ ಇದೇ ಅನುಭವ. ಫಡಕೆ ಗುಪ್ತ ಸಂಘಗಳನ್ನು ಸ್ಥಾಪಿಸಿದ. ತರುಣರಿಗೆ ಸೈನಿಕ ತರಬೇತಿ ನೀಡಿದ. ಲೋಕಮಾನ್ಯ ತಿಲಕರೂ ಫಡಕೆಯ ಶಿಷ್ಯರೇ! ಫಡಕೆ ಗೆರಿಲ್ಲಾ ಯುದ್ಧ ಆರಂಭಿಸಿದ್ದ. ಅವನನ್ನು ಅವರ ರಾಮೋಶಿ ಪಡೆಯನ್ನು ಹಿಡಿಯಲು ಬ್ರಿಟಿಷ್ ಸರಕಾರ ಡೇನಿಯಲ್ ಎಂಬ ಅಧಿಕಾರಿಯನ್ನು ನೇಮಿಸಿತ್ತು. ಫಡಕೆಯ ಪಡೆಯಲ್ಲಿ ಸಾವಿರದವರೆಗೂ ಜನರಿದ್ದರು. ಒಮ್ಮೆ, ಜ್ವರದಿಂದ ನರಳುತ್ತ ಬೌದ್ಧ ವಿಹಾರವೊಂದರಲ್ಲಿ ಮಲಗಿದ್ದ ಫಡಕೆಯನ್ನು ಬಂಧಿಸಿ ಏಡನಿಗೆ ಕಳಿಸಲಾಯಿತು. ಅಲ್ಲಿಯ ಸೆರೆಮನೆಯಿಂದಲೂ ತಪ್ಪಿಸಿಕೊಂಡ. ಆದರೂ, ಪುನಃ ಬಂಧಿತನಾದ. ಎರಡು ವರ್ಷ ಆ ಜೈಲಿನಲ್ಲಿ ಕೊಳೆಯಬೇಕಾಯಿತು. ೧೮೮೩ರ ಫೆಬ್ರುವರಿ ೧೭ರಂದು ಅಲ್ಲಿಯೇ ತೀರಿಕೊಂಡ.
ಎರಡನೆಯ ‘ಶಿವಾಜಿ’ಯಂತಿದ್ದ ಮಹಾ ಕ್ರಾಂತಿಕಾರಿ ವಾಸುದೇವ ಬಲವಂತ ಫಡಕೆಯವರ ಹೋರಾಟದ ಕಥೆ “ಅದಮ್ಯ”. ಬಾಬುಕೃಷ್ಣಮೂರ್ತಿಯವರ ‘ಅಜೇಯ’ದಂತೆಯೇ ಅವರ “ಅದಮ್ಯ”ವೂ ಎಲ್ಲ ಯುವಕ-ಯುವತಿಯರೂ ಓದಿ ಸ್ಫೂರ್ತಿ ಪಡೆಯಬೇಕಾದ ಗ್ರಂಥ.
(ಪ್ರಗತಿಶೀಲ ಕಾಲದ ಮುಂಚೂಣಿಯ ಕಾದಂಬರಿಕಾರ ಬಸವರಾಜ ಕಟ್ಟೀಮನಿಯವರು ‘ಅದಮ್ಯ’ವನ್ನು ಓದಿದಾಗಿನ ಅವರ ಭಾವಭರಿತ ಅನುಭವವನ್ನು ಇಲ್ಲಿ ಹಂಚಿಕೊಂಡಿದ್ದಾರೆ. ೪-೧೨-೧೯೮೫ರ ಮಂಗಳ ವಾರಪತ್ರಿಕೆಯಲ್ಲಿ ಪ್ರಕಟಿತ.)