ಯಾರು ಮಾಹಿತಿ ಕೊಟ್ಟಿದ್ದರೋ ದೈವ ಎದ್ದು ನಿಲ್ಲುವ ಹೊತ್ತಿಗೆ ಮಾಧ್ಯಮದ ಮಂದಿ ಕೂಡ ಬಂದು ಸೇರಿದ್ದರು. ಬಹಳ ದೊಡ್ಡ ಸಭೆ. ಯಾರೋ ವಿಡಿಯೋ ಚಿತ್ರೀಕರಣ ಮಾಡುತ್ತಿದ್ದರು. ಇನ್ಯಾರೋ ಫೋಟೋ ತೆಗೆಯುತ್ತಿದ್ದರು. ಮಕ್ಕಳಂತೂ ತಮ್ಮತಮ್ಮ ಮೊಬೈಲುಗಳನ್ನು ಹಿಡಿದು ಚಿತ್ರೀಕರಣಕ್ಕೆ ತಕ್ಕ ಆಯಕಟ್ಟಿನ ಸ್ಥಳ ಹುಡುಕುತ್ತಿದ್ದರು. ಮಹಾದೇವ ಯಾರನ್ನೂ ಗಮನಿಸುತ್ತಿರಲಿಲ್ಲ. ತನ್ನ ಪಾಡಿಗೆ ತಾನಿದ್ದ. ದೈವ ಆವೇಶ ಸುರುವಾಗಿ ಎದ್ದು ನಿಲ್ಲುವ ಸ್ವಲ್ಪ ಮೊದಲು ಡಾ. ಅವನಿ ಕೂಡ ಅಲ್ಲಿಗೆ ಆಗಮಿಸಿದ್ದಳು. ಅವಳು ಚಾವಡಿಮನೆಯ ಒಳಗಿನಿಂದ ಮಹಾದೇವನನ್ನು ನೋಡುತ್ತ ಉಮ್ಮಳಿಸಿ ಬರುತ್ತಿದ್ದ ದುಃಖವನ್ನು ತಡೆಹಿಡಿಯುತ್ತಿದ್ದಳು. ಅವಳು ಕನಸಿನಲ್ಲಿಯೂ ಇಂತಹ ಸನ್ನಿವೇಶವನ್ನು ನಿರೀಕ್ಷೆ ಮಾಡಿರಲಿಲ್ಲ.
ತಿಂಗಳ ಬೆಳಕಲ್ಲಿ ಮರಗಿಡದ ನೆರಳುಗಳು ಒಂದಕ್ಕೊಂದು ಮುತ್ತಿಕ್ಕಿಕೊಂಡು ಚಕ್ಕಂದವಾಡುತ್ತಿವೆ. ಕ್ರಿಮಿ-ಕೀಟಗಳ ದ್ವಂದ್ವ ಗಾಯನದ ನಡುವೆ ಚಂದಿರ ಹುಣ್ಣಿಮೆಗೆ ಬೆಳಕು ಹದ ಮಾಡುತ್ತಿದ್ದಾನೆ. ಬೆಳದಿಂಗಳ ಹೊಳಪು ಪಾಕಕ್ಕೆ ಬರಲು ಇನ್ನೂ ಒಂದೆರಡು ದಿನ ಬೇಕು. ಎತ್ತರಕ್ಕೆ ಬೆಳೆದ ತೆಂಗಿನಗರಿಗಳು ಕರಿಮೋಡಗಳನ್ನು ಜಾಡಿಸಿ ಓಡಿಸುವ ಹುಚ್ಚು ಭ್ರಮೆಯಲ್ಲಿ ಬಾನ ಗುಡಿಸುತ್ತಿವೆ. ಆಸ್ಪತ್ರೆಯ ಆವರಣದಿಂದ ಆಚೆ ದೃಷ್ಟಿನೆಟ್ಟ ಡಾ. ಮಹಾದೇವನ ಮನಸ್ಸು ಕೂಡ ಚಿಂತೆಯ ಭಾರಕ್ಕೆ ಹೊಯ್ದಾಡುತ್ತಿತ್ತು.
“ನಿನ್ನ ಮುತ್ತಜ್ಜ, ಅಜ್ಜ ಮತ್ತು ಮಾವನ ಮಾತು ಬಿಡು. ನೀನು, ನೀನು ಅವರ ಹಾಗೆ ಬಣ್ಣ ಹಚ್ಚಿ, ತೆಂಗಿನಗರಿ ಸೊಂಟಕ್ಕೆ ಕಟ್ಟಿಕೊಂಡು ಕುಣಿಯಬೇಕಾ? ನಿನ್ನ ಅಮ್ಮನಿಗೆ ಏನು ಅರ್ಥ ಆಗುತ್ತೆ? ಹೊರಟಲ್ಲಿಗೆ ಮರಳುವುದಾದರೆ ಈ ಯಾತನೆಯ ಯಾನ ಯಾಕೆ ಬೇಕಿತ್ತು? ಆ ಅಗ್ನಿವೃತ್ತದಿಂದ ಹೊರಗೆ ಬಂದುಬಿಡು, ಪ್ಲೀಸ್…” ಅವಳ ಧ್ವನಿಯಲ್ಲಿ ದೈನ್ಯತೆಯಿತ್ತು.
“ಅಂತಿಮ ಸತ್ಯ ಅದೇ ಅಲ್ವಾ? ಹೊರಟಲ್ಲಿಗೆ ಮರಳುವುದು!” ಅವನು ಅವಳತ್ತ ನೋಡಲಾರದೆ ಬೇರೆಡೆಗೆ ನೋಡುತ್ತ ನಿರ್ಲಿಪ್ತನಾಗಿ ಹೇಳಿದ.
“ಅಂದ್ರೆ! ನೀನು ನಿರ್ಧರಿಸಿ ಆಗಿದೆ? ಅರೇ ದೇವ್…”
ಉದ್ವೇಗದಿಂದ ಅವಳಿಗೆ ಧ್ವನಿಯನ್ನು ನಿಯಂತ್ರಿಸಲು ಆಗಲಿಲ್ಲ. ಕೌಂಟರ್ನಲ್ಲಿ ಕುಳಿತಿದ್ದ ಸ್ಟಾಫ್ ನರ್ಸುಗಳು ಅವರಿಬ್ಬರ ಕಡೆಗೆ ಗಾಬರಿಯಿಂದ ನೋಡಿದರು. ಅವಳು ಒಮ್ಮೆಗೆ ಸಾವರಿಸಿಕೊಂಡು ದೀರ್ಘ ಉಸಿರೆಳೆದು ಆತನ ಸಮೀಪ ಬಂದು ಮೆತ್ತಗೆ ಮಾತನಾಡತೊಡಗಿದಳು.
“ದೇವ್, ಇದೆಲ್ಲ ಒಂದು ನಾಲ್ಕು ದಿನ. ನಿನ್ನ ಅಮ್ಮನಿಗೆ ನಿನ್ನ ಇಲ್ಲಿಯ ಸ್ಥಾನಮಾನದ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಅವರ ತಿಳಿವಳಿಕೆಯ ಮಟ್ಟಕ್ಕೆ ಅದು ನಿಲಕುವುದಿಲ್ಲ. ಅವರ ಬದುಕು ಅಲ್ಲಿನ ಆಚಾರ, ಸಂಪ್ರದಾಯ, ಕಟ್ಟುಕಟ್ಟಲೆ ಎಂದು ಅದಕ್ಕೆ ಅಂಟಿಕೊಂಡಿದೆ. ಅದು ಅವರ ಪ್ರಪಂಚ. ನಿನ್ನ ನಿರಾಕರಣೆಯ ಕಾರಣಕ್ಕೆ ಅಲ್ಲಿ ಆಕಾಶ ಕುಸಿದುಬೀಳುವುದಿಲ್ಲ. ಯಾರೋ ಇನ್ನೊಬ್ಬ ನಿನ್ನ ಜಾಗದಲ್ಲಿ ಕಾಣಿಸಿಕೊಳ್ಳುತ್ತಾನೆ” ಅವಳು ಅನುನಯದಿಂದ ಮಾತನಾಡಿದಳು.
“ಆದ್ರೆ ಅಮ್ಮನ ಮಾತು ಹೇಗೆ ಮೀರಲಿ? ಇವತ್ತು ನಾನು ಏನು ಆಗಿದ್ದೇನೋ ಅದೆಲ್ಲವೂ ಅಮ್ಮನ ತ್ಯಾಗದ ಫಲ ಅಲ್ವಾ? ‘ನಮ್ಮ ವಂಶದ ಅಜಲಿನ ಕರ್ತವ್ಯ ಅದು ಮಗಾ…, ಪಡಿಯಕ್ಕಿ ನೀನು ಉಂಡವನು ಅನ್ನುವುದನ್ನು ಮರೆಯಬೇಡ. ನೇಮ ನಮ್ಮ ಕಾರಣಕ್ಕೆ ನಿಂತರೆ ನಮ್ಮ ವಂಶಕ್ಕೆ ಯಾವತ್ತೂ ದೈವದ ಶಾಪ ತಟ್ಟುತ್ತದೆ. ನೀನು ಈವತ್ತು ಕಲಿತು ದೊಡ್ಡ ಮನುಷ್ಯ ಆಗಿರಬಹುದು. ಆದರೆ ನಮ್ಮ ಸಮುದಾಯದಲ್ಲಿ ಎಷ್ಟು ಜನ ಇದರಲ್ಲಿಯೇ ಎರಡು ಹೊತ್ತಿನ ತುತ್ತಿಗೆ ದಾರಿ ಕಂಡುಕೊಳ್ಳುತ್ತಿದ್ದಾರೆ. ಅವರೆಲ್ಲರ ಅನ್ನಕ್ಕೆ ನಮ್ಮಿಂದ ಕಲ್ಲು ಬೀಳುವುದು ಬೇಡ’ – ಎಂಬ ಅಮ್ಮನ ಮಾತನ್ನು ಹೇಗೆ ನಿರಾಕರಿಸಲಿ? ಅದೂ ನಿಜ ಅಲ್ವಾ? ಒಂದು ಸಮುದಾಯಕ್ಕೆ ಜೀವನಾಧಾರವಾದ ಪರಂಪರೆಯನ್ನು ಪಲ್ಲಟಗೊಳಿಸುವ ಹಕ್ಕು ನನಗಿದೆಯಾ, ಹೇಳು?” ಅವನು ಅವನ ತುಮುಲಗಳಿಗೆ ಅವಳ ಜೊತೆಗಿನ ಮಾತುಕತೆಯ ಮೂಲಕ ಪರಿಹಾರ ಹುಡುಕುತ್ತಿದ್ದ.
“ಬುಲ್ಶಿಟ್! ಅಜಲು, ಪಡಿಯಕ್ಕಿ… ಸಂಪ್ರದಾಯ! ಇದೆಲ್ಲವನ್ನೂ ಮೀರಿ ಬೆಳೆಯುವುದಕ್ಕೆ ಅಲ್ವಾ ನೀನು ವಿದ್ಯಾವಂತನಾದದ್ದು. ನಿನಗೆ ಕಾನೂನು, ನಮ್ಮ ಸಂವಿಧಾನ – ಇದರ ಪರಿಜ್ಞಾನ ಇದೆ ಅಲ್ವಾ? ನಿನ್ನ ಪ್ರಪಂಚ ಬೇರೆಯೇ ದೇವ್. ನಿನ್ನ ಅಮ್ಮನ ಕಾಲಿನ ಆಳವಾದ ಸುಟ್ಟ ಗಾಯದ ಗುರುತನ್ನೇ ನೀನು ಮರೆತೆ ಎಂದಾದರೆ ಮತ್ತೆ ನನ್ನ ಮಾತು ನಿನ್ನ ಮೇಲೆ ಯಾವ ಪರಿಣಾಮವೂ ಬೀರುವುದಿಲ್ಲ. ಮತ್ತೆ ಆ ಮೌಢ್ಯದ ಕೊಳೆಯ ಕೂಪಕ್ಕೆ ಹೋಗಿ ಬೀಳುತ್ತೀಯಾ? ನಿನ್ನಷ್ಟು ಮೂರ್ಖ ಈ ಪ್ರಪಂಚದಲ್ಲಿ ಬೇರೆ ಯಾರೂ ಇಲ್ಲ.” ಇದು ಅವಳು ಅವನನ್ನು ಹಂಗಿಸಿದ ಹಾಗಿತ್ತು. ಆತನ ಕದಡಿದ ಮನಸ್ಸು ತಕ್ಷಣಕ್ಕೆ ಕೆರಳಿತು.
“ಓಹೋ, ನನಗಿಷ್ಟು ಬುದ್ಧಿ ಹೇಳುವ ನೀನು ಹಬ್ಬದ ದಿನ ಕಾಂಚೀವರಂ ಸೀರೆ ಉಟ್ಟು, ಹಣೆಗೆ ಕುಂಕುಮದ ಬಿಂದಿ ಇರಿಸಿ ಸಂಭ್ರಮಿಸುವುದು ನಾನು ಕಂಡಿಲ್ವಾ? ಮರೆತುಹೋಗಿದ್ದರೆ ತರವಾಡು ಮನೆಯ ಮುಂದೆ ನಿಂತಿರುವ ನಿನ್ನ ಡೀಪಿಯ ಪಿಕ್ ಒಮ್ಮೆ ನೋಡು!” ಅವನ ಧ್ವನಿಯಲ್ಲಿ ಕುಹಕ ಹೊಗೆಯಾಡುತ್ತಿತ್ತು. ಆತ ಆ ಕ್ಷಣಕ್ಕೆ ಅವಳಿಗೆ ಅಪರಿಚಿತನಂತೆ ಕಂಡ ಕಾರಣ ಮಾತು ಮರೆತು ಅಚ್ಚರಿಯಿಂದ ಅವನನ್ನೇ ದಿಟ್ಟಿಸಿ ನೋಡಿದಳು!
“ನೋಡು ಅವನಿ, ಇದೆಲ್ಲವೂ ಅಷ್ಟು ಸುಲಭ ಅಲ್ಲ. ಈಗ ನನ್ನ ಪ್ರಪಂಚ ಬೇರೆಯಾಗಿರಬಹುದು. ಆದರೆ ನಂಗೆ ನನ್ನ ಅಮ್ಮನನ್ನು ನನ್ನ ಪ್ರಪಂಚದಿಂದ ಹೊರಗೆ ನಿಲ್ಲಿಸಲು ಅಸಾಧ್ಯ. ಒಟ್ಟಾರೆ ಮೀನಿಗೆ ನೀರು ಬೇಕು ಎಂದು ಮಾತ್ರ ಹೇಳಿದರೆ ತಪ್ಪಾದೀತು. ಮೀನಿನ ಒಳಗೆ ನೀರಿದ್ದರೆ ಪ್ರಯೋಜನವಿಲ್ಲ. ಮೀನು ನೀರಿನಲ್ಲಿ ಇರಬೇಕು ಅಲ್ವಾ? ಪರಂಪರೆಯಿಂದ ಬಂದ ನಡವಳಿಕೆ, ಆರಾಧನೆಗಳು ಗಟ್ಟಿಯಾದ ಮದಿಲುಗಳು ಇದ್ದ ಹಾಗೆ. ಅವುಗಳಲ್ಲಿ ಬಿರುಕು ಮೂಡಿದಾಗ ಭಯ, ಭಕ್ತಿ ಮತ್ತು ನಂಬಿಕೆಯ ಲೇಪ ಹಚ್ಚಿ ತೇಪೆ ಹಾಕಿ ಮುಚ್ಚಲಾಗುತ್ತದೆ. ಕಲ್ಲು-ಮಣ್ಣಿನ ಗೋಡೆಯಾದರೆ ಒಮ್ಮೆಗೆ ಒಂದು ಹತ್ತು ಜನ ಬಲ ಪ್ರಯೋಗಿಸಿ ಕೆಡವಿ ಬಿಡಬಹುದು. ಆದರೆ ಇಲ್ಲಿ ಇನ್ನೊಂದು ಮುಖ್ಯ ವಿಚಾರದ ಬಗ್ಗೆ ನಾವು ಗಮನ ಕೊಡಬೇಕು. ಈ ಗೋಡೆಯ ರಕ್ಷಣೆಗೆ ಒಂದು ದೊಡ್ಡ ಸಮೂಹ ಟೊಂಕ ಕಟ್ಟಿ ಸಿದ್ಧವಾಗಿ ನಿಂತಿರುತ್ತದೆ. ಅವರು ಯಾವುದಕ್ಕೂ ಹೇಸುವವರಲ್ಲ. ಒಂದು ಮಿತಿಯಲ್ಲಿ ಈ ನಂಬಿಕೆಗಳು ಮನುಷ್ಯನಿಗೆ ಬೇಕು. ಎಲ್ಲವನ್ನೂ ಕಣ್ಣುಮುಚ್ಚಿ ಸ್ವೀಕಾರ ಮಾಡಬೇಕು ಎಂದು ನಾನು ಹೇಳುವುದಿಲ್ಲ.” ಅವನ ಧ್ವನಿಯಲ್ಲಿ ಸಂತೈಸುವಿಕೆಯ ಆರ್ದ್ರತೆ ಇತ್ತು. ಆದರೆ ಅವಳ ಕಣ್ಣಿನಲ್ಲಿ ತೆಳುವಾಗಿ ನೀರು ಹರಡಿ ದೃಷ್ಟಿ ಮುಸುಕಾಗಿತ್ತು.
“ನನ್ನ ಮಾತನ್ನು ಕೇಳುವ ಸ್ಥಿತಿಯಲ್ಲಿ ನೀನು ಇಲ್ಲ ದೇವ್. ನೀನು ಇದೇ ದಾರಿಯಲ್ಲಿ ಮುಂದುವರಿಯುವುದಾದರೆ ನನ್ನ ನಿರ್ಧಾರದ ಬಗ್ಗೆ ಮರುಚಿಂತನೆ ಮಾಡುವುದು ಒಳಿತು ಅನ್ನಿಸುತ್ತಿದೆ. ನಿನಗೆ ಗೊತ್ತಲ್ವ, ಆ ಮನೆಯಲ್ಲಿ ನೀನು ಹೊಸ್ತಿಲಿನ ಹೊರಗೆ, ನಾನು ಒಳಗೆ.” ಅವಳು ಗದ್ಗದಿತಳಾಗಿದ್ದಳು.
“ಅವನಿ, ನಾನು ನಾಳೆ ಬೆಳಗ್ಗೆ ಊರಿಗೆ ಹೋಗುತ್ತಿರುವೆ” ಅವನು ಅಸಹಾಯಕನಂತೆ ಹೇಳಿದ.
“ಸರಿ. ನಿನ್ನಿಷ್ಟ. ನಾನು ಇಷ್ಟು ಹೇಳಿದ ಮೇಲೂ ನೀನು ನಿನ್ನ ಈ ನಿರ್ಧಾರದಿಂದ ಹಿಂದೆ ಸರಿಯುವುದಿಲ್ಲ ಎಂದಾದರೆ, ನನ್ನ ದಾರಿ ನನಗೆ, ನಿನ್ನ ದಾರಿ ನಿನಗೆ.” ಅವಳು ಹೊರಡಲು ಅನುವಾದಳು.
“ಪ್ಲೀಸ್ ಅವನಿ. ಹುಟ್ಟಿಗಂಟಿದ ಯಾವ ಗುರುತಿಸುವಿಕೆಯನ್ನೂ ನಾಶ ಮಾಡಲಾಗುವುದಿಲ್ಲ. ಅದನ್ನು ಮೀರಿ ಬೆಳೆಯಬಹುದಷ್ಟೇ.” ಅವಳ ಅಂಗೈಯನ್ನು ಹಿಡಿದುಕೊಂಡು ಮೆತ್ತಗೆ ಅದುಮಿದ. ಅವಳು ಅವನ ಕೈಯಿಂದ ತನ್ನ ಅಂಗೈಯನ್ನು ಬಿಡಿಸಿಕೊಂಡು ಅವನತ್ತ ತಿರುಗಿಯೂ ನೋಡದೆ ಆಸ್ಪತ್ರೆಯ ಕಾರಿಡಾರ್ನಿಂದ ಕೆಳಗೆ ಇಳಿದು ತನ್ನ ಕಾರಿನ ಕಡೆಗೆ ನಡೆದಳು. ಅವಳು ತಿರುಗಿ ನೋಡಬಹುದು ಎಂಬ ಆತನ ನಿರೀಕ್ಷೆ ಸುಳ್ಳಾಯಿತು.
* * *
ಡಾಂಬರು ಕಿತ್ತುಹೋದ ಹಳ್ಳಿಯ ರಸ್ತೆಯಲ್ಲಿ ಆತನ ಮಾರುತಿ ಸ್ವಿಫ್ಟ್ ಕಾರು ಬಂದಾಗ ಅಪರಿಚಿತ ಮುಖಗಳಲ್ಲಿ ಅಚ್ಚರಿ ಕಂಡರೆ, ಪರಿಚಿತರ ಕಣ್ಣಲ್ಲಿ ತೋಯ್ದ ಈರ್ಷೆಯ ಕೆನೆಗೆ ಮಂದಸ್ಮಿತನಾದ. ಈ ಸ್ಥಿತಪ್ರಜ್ಞೆಯನ್ನು ಹೊಂದುವುದಕ್ಕೆ ಅವನು ಬಹಳ ಕಷ್ಟಪಟ್ಟಿದ್ದಾನೆ. ಮುಟ್ಟಿಸಿಕೊಳ್ಳಬಾರದ ದೈವನರ್ತಕ ಕರ್ತನ ಮೊಮ್ಮಗ ಶಾಲೆ ಮೆಟ್ಟಿಲೇರುವುದು ಅಷ್ಟು ಸಣ್ಣ ಸಂಗತಿಯಾಗಿರಲಿಲ್ಲ. ಬಯಲಲ್ಲಿ ಎದ್ದ ಸುಳಿಗಾಳಿಗೆ ಹಲವರ ಕಣ್ಣಿಗೆ ಕಸ ಬಿದ್ದು ಕೆಂಪಾಗಿತ್ತು. ಆದರೆ ಮಹಾದೇವನಿಗೆ ಇದು ಯಾವುದೂ ತಡೆಯಾಗಲಿಲ್ಲ. ಎಲ್ಲದಕ್ಕೂ ಅವನಿಗೆ ಬೆಂಬಲವಾಗಿ ನಿಂತವಳು ಅವನ ಅಮ್ಮ ಲಕುಮಿ. ಸಣ್ಣವಯಸ್ಸಿನಲ್ಲಿಯೇ ವಿಧವೆಯಾಗಿ ಪಡಿಪಾಟಲು ಅನುಭವಿಸಿದ ಹೆಣ್ಣು. ತವರಿನಲ್ಲಿ ಹಂಗಿನ ಅನ್ನ ಪಚನವಾಗಲು ಬಹಳಷ್ಟು ಏಗಬೇಕಿತ್ತು. ಅಣ್ಣನ ಜೊತೆ ದೈವದ ಕೋಲ ನಡೆಯುವ ಜಾಗಕ್ಕೆಲ್ಲ ಹೋಗಿ ರಾತ್ರಿಯಿಡೀ ಜಾಗರಣೆ. ಕೋಳಿ ಕೂಗುವ ಹೊತ್ತಿಗೆ ಅಲ್ಲಿ ಅಷ್ಟಿಷ್ಟು ಸಿಕ್ಕಿದ್ದನ್ನು ಗಂಟುಮೂಟೆ ಕಟ್ಟಿಕೊಂಡು ಮರಳಬೇಕು. ಅಣ್ಣನ ಜೊತೆ ಅತ್ತಿಗೆಗೂ ಒಂದಿಷ್ಟು ನಶೆ ಏರಿದರೆ ಅವರಿಬ್ಬರ ಜಗಳ ಮನೆಗೆ ತಲಪುವ ತನಕ ಮುಗಿಯುತ್ತಿರಲಿಲ್ಲ. ಇವಳು ನಡುವೆ ಸಂಧಾನ ಮಾಡಲು ಹೋದರೆ ಸುಮ್ಮಗೆ ಬೈಗುಳು ತಿನ್ನಬೇಕಿತ್ತು. ಹಾಗಾಗಿ ಮೌನಿಯಾಗಿ ಜಾಣ ಕಿವುಡನ್ನು ಆವಾಹಿಸಿಕೊಂಡಿದ್ದಳು.
ಆ ಊರಿನ ಸರಕಾರೀ ಶಾಲೆಗೆ ಹೊಸದಾಗಿ ವರ್ಗ ಆಗಿ ಬಂದ ಬಸಪ್ಪ ಮೇಷ್ಟ್ರು ಲಕುಮಿ ತಲೆಯಲ್ಲಿ ಹೊಸದೊಂದು ಕನಸು ಬಿತ್ತಿದ್ದರು. ಆವತ್ತು ಒಂದು ದಿನ ಪಟೇಲರ ಚಾವಡಿ ಮನೆಯಲ್ಲಿ ನೇಮ ಮುಗಿಸಿ ಬರುತ್ತಿರಬೇಕಾದರೆ ಅವರಿಬ್ಬರ ಮೊದಲ ಮುಖಾಮುಖಿಯಾಗಿತ್ತು. ಜನ ಯಾರು ಎಂದು ಗೊತ್ತಿರದಿದ್ದರೂ ಮೇಷ್ಟ್ರು ಬಗ್ಗೆ ಅಷ್ಟೂ ಇಷ್ಟೂ ವಿಚಾರ ಅವಳು ಕೇಳಿ ತಿಳಿದುಕೊಂಡಿದ್ದಳು. ಬಹಳ ಒಳ್ಳೆಯ ಮನುಷ್ಯನಂತೆ. ಎರಡು ಮಕ್ಕಳ ತಂದೆ. ಒಂದೆರಡು ವರ್ಷ ಮೊದಲು ವಾಹನ ಅಪಘಾತದಲ್ಲಿ ಮಡದಿಯನ್ನು ಕಳೆದುಕೊಂಡು ಈಗ ಒಬ್ಬಂಟಿ. ಪ್ರತಿ ದಿನ ಮಗನ ಬಾಯಿಯಿಂದ ಮೇಷ್ಟ್ರು ಗುಣಗಾನ ಕೇಳಿಕೇಳಿ ಲಕುಮಿಗೂ ಯಾಕೋ ಅವರನ್ನು ಒಮ್ಮೆ ನೋಡಬೇಕು ಅನ್ನಿಸಿದ್ದು ಹೌದಾದರೂ ಅವರಿಬ್ಬರ ಭೇಟಿಗೆ ಯಾವ ಕಾರಣವೂ ಇರಲಿಲ್ಲ. ಹಾಗಾಗಿ ಮೊದಲ ಭೇಟಿಯಾದ ದಿನ ಆಕೆ ಮೆಲ್ಲಗೆ ದಾರಿಯಿಂದ ಸರಿದು ನಿಂತದ್ದು ಬಿಟ್ಟರೆ, ಒಂದು ಪರಿಚಿತ ನಗುವಿನಿಂದ ತುಟಿ ವಿಸ್ತರಿಸುವ ಧೈರ್ಯ ಮಾಡಲಿಲ್ಲ. ಒಂದೆರಡು ಸಲ ಹೀಗೆ ಎದುರಾದ ನಂತರ ಒಂದು ದಿನ ಅವರಾಗಿಯೇ ಮಾತನಾಡಿಸಿದ್ದರು.
“ಲಕ್ಷ್ಮೀ ಅಲ್ವಾ? ನಮ್ಮ ಮಹಾದೇವನ ತಾಯಿ?”
‘ನಮ್ಮ ಮಹಾದೇವಾ’ ಎಂದು ಅವರು ಹೇಳಿದ್ದು ಲಕುಮಿಗೆ ಯಾಕೋ ರೋಮಾಂಚನ ಉಂಟುಮಾಡಿತ್ತು. ಈ ಕಲಿತವರ ಹತ್ತಿರ ಮಾತನಾಡುವುದು ಹೇಗೆ? – ಎಂಬ ಮುಜುಗರದಿಂದ ಮಾತೇ ಹೊರಡಲಿಲ್ಲ.
“ಹೂಂ..ಹೇ..ಹೇ..” ಎಂದು ಪೆಚ್ಚುಪೆಚ್ಚಾಗಿ ಸ್ವರ ಹೊರಡಿಸಿದ್ದಳು. ಅವರು ಅವಳ ಮುಗ್ಧತೆಗೆ ಜೋರಾಗಿ ನಕ್ಕಾಗ ಅವಳು ಸಂಕೋಚದಿಂದ ದೇಹ ಮುದ್ದೆಯಾಗಿಸಿದ್ದಳು. ಅವರ ನೋಟವನ್ನು ಎದುರಿಸಲಾಗದ ಚಡಪಡಿಕೆಗೆ ಹೊರಡಲು ಅನುವಾದಾಗ ಮಾಷ್ಟ್ರ ಮಾತು ಆಕೆಯನ್ನು ತಡೆದು ನಿಲ್ಲಿಸಿತ್ತು.
“ಮಹಾದೇವ ಬಹಳ ಬುದ್ಧಿವಂತ. ಅವನನ್ನು ದೊಡ್ಡ ಶಾಲೆಗೆ ಕಳುಹಿಸದೇ ಇರಬೇಡ. ಅವನ ತಲೆಯಲ್ಲಿ ದೊಡ್ಡ ಮನುಷ್ಯ ಆಗುವ ಯೋಗ ಇದೆ. ಜಾತಿ, ಕಟ್ಟುಪಾಡು ಅದೂ ಇದೂ ಸಂಪ್ರದಾಯ ಅಂತ ಅವನ ಭವಿಷ್ಯವನ್ನು ನೀನೇ ಬಲಿ ಕೊಡಬೇಡ ಆಯಿತಾ? ಈ ಸುಳಿಯಿಂದ ಬಲುದೂರ ಕಳುಹಿಸಿಬಿಡು.” ಅವರ ಮಾತು ಆಕೆಯನ್ನು ಎಚ್ಚರಿಸಿದಂತಿತ್ತು. ಅವರು ಸರಿದುಹೋದರೂ ತನ್ನ ಮೊಣಕಾಲಿನ ಹಳೆಗಾಯದ ಗುರುತನ್ನು ನೋಡುತ್ತ ಆಕೆ ಅಲ್ಲಿಯೇ ಬಹಳ ಹೊತ್ತು ನಿಂತಿದ್ದಳು.
ಮನೆಯವರೆಲ್ಲರ ವಿರೋಧದ ನಡುವೆಯೂ ಬಸಪ್ಪ ಮೇಷ್ಟ್ರ ಸಹಾಯದಿಂದ ಮಹದೇವನನ್ನು ಮೊರಾರ್ಜಿ ದೇಸಾಯಿ ಉಚಿತ ವಸತಿಶಾಲೆಗೆ ಸೇರಿಸುವುದರಲ್ಲಿ ಲಕುಮಿ ಸಫಲಳಾಗಿದ್ದಳು. ಒಂದು ದಿನ ಬಯಲ ಹಾದಿಯಲ್ಲಿ ಒಂಟಿಯಾಗಿ ಹೋಗುವಾಗ ಬಸಪ್ಪ ಮೇಷ್ಟ್ರು ಕಾಣಸಿಕ್ಕಿದ್ದರು. ಅವರನ್ನು ಕಂಡು ದೇಹ ಹಿಡಿಯಾಗಿಸಿ ದಾರಿಬಿಟ್ಟು ಸರಿದು ನಿಂತವಳಲ್ಲಿ,
‘ಈ ಸರಿದು ನಿಲ್ಲುವಿಕೆ ಇನ್ನೂ ಬೇಕೆಂದು ನಿನಗೆ ಅನ್ನಿಸುತ್ತಿದೆಯೇ?’ ಎಂದು ತೀರಾ ಸಮೀಪಕ್ಕೆ ಬಂದು ಅನುನಯದಿಂದ ಕೇಳಿದ್ದರು. ಅವರ ಮಾತಿನ ಒಳಮರ್ಮ ಆಕೆಗೆ ಗೊತ್ತಾಗಿತ್ತು. ಆದರೆ ಅವಳು ಹೃದಯದೊಳಗೆ ಹುಯಿಲೆಬ್ಬಿಸುವ ಹಂಬಲವನ್ನು ಅದುಮಿ ಹಿಡಿದು ಮೃದುವಾಗಿ ಉತ್ತರಿಸಿದ್ದಳು.
“ನಿಂತ ನೀರಿಗೆ ಮಣ್ಣು ಸುರುವಿದರೆ ಕೊಳಚೆ ಆಗುತ್ತದೆ ಮೇಷ್ಟ್ರೆ! ಬತ್ತಿದ ಹೊತ್ತಿಗೆ ಇಷ್ಟು ಸಾಕು ಅನ್ನಿಸಿದೆ.”
ಒಂದಿಷ್ಟು ದೂರ ಬಿರುಸಿನ ಹೆಜ್ಜೆಯನ್ನಿರಿಸಿದವಳು ನಂತರ ಹೆಜ್ಜೆ ನಿಧಾನಿಸಿದ್ದಳು. ಮುಂಜಾನೆ ಬಯಲ ಬಳಸಿದವರು ಅಲ್ಲಲ್ಲಿ ಬಿಕ್ಕಿಟ್ಟದ್ದು ಎಲ್ಲಿ ತನ್ನ ಬರಿಗಾಲಿಗೆ ಅಂಟಿಕೊಳ್ಳುತ್ತದೋ ಎಂದು ಅವಳು ಎಚ್ಚರದಿಂದ ಅಂಗಾಲು ಎತ್ತಿಎತ್ತಿ ಇಡುತ್ತ ಹೋಗುತ್ತಿರುವುದನ್ನು ನೋಡಿಕೊಂಡು ಮೇಷ್ಟ್ರು ತುಂಬ ಹೊತ್ತು ಹಾಗೆಯೇ ನಿಂತಿದ್ದರು. ಅವಳ ಮಾತಿನಿಂದ ನಿರಾಶೆಯೋ, ಅವಳಲ್ಲಿ ಈ ರೀತಿಯ ಪ್ರಸ್ತಾಪ ಇಟ್ಟ ಮುಜುಗರವೋ ಗೊತ್ತಿಲ್ಲ, ಮೇಷ್ಟ್ರು ಕೆಲವೇ ದಿನಗಳಲ್ಲಿ ಬೇರೆ ಊರಿಗೆ ವರ್ಗ ಮಾಡಿಸಿಕೊಂಡಿದ್ದರು.
ಇತ್ತ ಮಹಾದೇವನ ಓದಿನ ಓಟಕ್ಕೆ ಯಾರಿಗೂ ಕಡಿವಾಣ ಹಾಕಲಾಗಲಿಲ್ಲ. ಅವನ ಓದಿನ ಖರ್ಚಿನ ದಾರಿ ಅವನೇ ನೋಡಿಕೊಂಡಿದ್ದ. ಅರೆಕಾಲಿಕ ಉದ್ಯೋಗ ಮಾಡಿ ತನ್ನ ವಿದ್ಯಾಭ್ಯಾಸ ಮುಂದುವರಿಸಿ ವೈದ್ಯಕೀಯ ಶಿಕ್ಷಣವನ್ನೂ ಪಡೆದುಕೊಂಡಿದ್ದ. ಇಂದು ಅವನು ಒಂದು ದೊಡ್ಡ ಆಸ್ಪತ್ರೆಯಲ್ಲಿ ನ್ಯೂರೊಲೊಜಿಸ್ಟ್ ಆಗಿದ್ದಾನೆ. ಡಾ. ಮಹಾದೇವ್ ಕುರಿತಾಗಿ ಹಲವಾರು ಪತ್ರಿಕೆಗಳು ಲೇಖನಗಳನ್ನು ಪ್ರಕಟಿಸಿದ್ದವು. ಸಂದರ್ಶನಗಳನ್ನೂ ಮಾಡಿದ್ದವು. ಹಲವಾರು ಸಂಘಸಂಸ್ಥೆಗಳು ತಳಸಮುದಾಯದಿಂದ ಬಂದ ಯುವಕನ ಸಾಧನೆಯನ್ನು ಮೆಚ್ಚಿ ಗೌರವಿಸಿದ್ದವು.
ಮಗ ಇಷ್ಟು ದೊಡ್ಡಮಟ್ಟಕ್ಕೆ ಏರಿದರೂ ಅವನ ಅಮ್ಮ ಅವನ ಜೊತೆ ಒಂದೆರಡು ದಿನ ನಿಂತು ಹೋಗುತ್ತಿದ್ದದ್ದು ಬಿಟ್ಟರೆ ಶಾಶ್ವತವಾಗಿ ಬಂದು ನಿಲ್ಲಲಿಲ್ಲ. ಆಕೆ ಅಣ್ಣನಿಗೆ ಸಹಾಯ ಮಾಡುತ್ತ ಅವನ ಜೊತೆಗೇ ಇದ್ದಳು. ಅವನಿಗೂ ಈಗ ವಯಸ್ಸಾಗಿದೆ. ಮೊದಲಿನ ಹಾಗೆ ದೈವನರ್ತನ ಮಾಡಲು ಆಗುವುದಿಲ್ಲ. ಆದರೂ ಅವನ ಅಜಲಿನ ಸೇವೆ ಅವನೇ ನಡೆಸಿಕೊಡಬೇಕಾದ ಅನಿವಾರ್ಯತೆ. ಈ ಸಲ ಹೊಸದೊಂದು ಸಮಸ್ಯೆ ಹುಟ್ಟಿಕೊಂಡಿತ್ತು. ಪಟೇಲರ ಹಳೆಯ ಚಾವಡಿಮನೆ ಮುರಿದು ಹೊಸತು ನಿರ್ಮಾಣವಾಗಿತ್ತು. ಅದರಲ್ಲಿ ದೈವದ ಮಣಿಮಂಚ ಇರಿಸಿ ಭಂಡಾರದ ಕೋಣೆಯನ್ನೂ ನಿರ್ಮಿಸಿದ್ದರು. ತಂತ್ರಿಗಳ ಮೂಲಕ ಬ್ರಹ್ಮಕಲಶವೂ ನಡೆಯಿತು. ಈ ವರ್ಷ ಅದ್ಧೂರಿಯಾಗಿ ನಡೆಯುವ ಧರ್ಮನೇಮಕ್ಕೆ ಊರು, ಪರ-ಊರುಗಳಲ್ಲಿ ಮಾತ್ರವಲ್ಲ ವಿದೇಶಗಳಲ್ಲಿ ನೆಲಸಿರುವ ಚಾವಡಿಮನೆಯ ಮಕ್ಕಳು ಆಗಮಿಸುವವರಿದ್ದರು. ಬಹಳ ದೊಡ್ಡ ಸಭೆ. ಹಲವು ಟಿವಿ ಚಾನೆಲ್ಗಳ ಮಂದಿ ವೀಡಿಯೋ ದಾಖಲೀಕರಣಕ್ಕೆ ಅನುಮತಿ ಕೇಳಿದ್ದರು. ಹೀಗೆಲ್ಲ ಇರುವಾಗ ಈ ವಯಸ್ಸಾದವನು ದೈವಕ್ಕೆ ಕಟ್ಟಿದರೆ ಹೇಗೆ ಸರಿ ಆದೀತು? – ಎಂಬ ಮಾತು ಯಾರೋ ಯುವಕರು ಪಟೇಲರ ಕಿವಿಗೆ ಹಾಕಿದ್ದರು. ಪಟೇಲರಿಗೂ ಅದು ಸರಿ ಅನ್ನಿಸಿರಬೇಕು. ಈ ಸರ್ತಿ ಮಹಾದೇವನೇ ದೈವಕ್ಕೆ ಕಟ್ಟಲಿ ಎಂದು ಹೇಳಿ ಕಳುಹಿಸಿದ್ದರು. ಹೇಗೂ ಅವನೇ ಮುಂದಿನ ಹಕ್ಕಿನವ ಎಂಬ ಒಕ್ಕಣೆಯನ್ನು ಸೇರಿಸುವುದನ್ನೂ ಅವರು ಮರೆತಿರಲಿಲ್ಲ.
ಧಣಿಯ ಮಾತಿಗೆ ಎದುರಾಡುವಂತಿಲ್ಲ. ಲಕುಮಿಯ ಮನೆಯಲ್ಲಿ ಈಗ ಗೊಂದಲ ಶುರುವಾಗಿತ್ತು. ಮಹಾದೇವನಿಗೆ ವಿಚಾರ ತಿಳಿಸಿ ಯಾರು ಒಪ್ಪಿಸುವುದು? ಡಾಕ್ಟ್ರು ದೈವಕ್ಕೆ ಕಟ್ಟುವುದೇ? ಹಾಗಂತ ಪಟೇಲರ ಮಾತಿಗೆ ಎದುರು ನುಡಿದು ಇಲ್ಲಿ ಇವರು ಬದುಕುವುದು ಅಸಾಧ್ಯ. ಅಲ್ಲದೆ ದೈವದ ಶಾಪಕ್ಕೆ ಗುರಿಯಾಗುವುದು ಯಾರಿಗೂ ಬೇಡವಾಗಿತ್ತು. ಹಾಗೆ ನೋಡಿದರೆ ಇದೆಲ್ಲವನ್ನೂ ತಿರಸ್ಕರಿಸಿ ಅವರಿಗೆ ಮಹಾದೇವನ ಜೊತೆ ಹೋಗಿಬಿಡಬಹುದು. ಅವನು ಇವರನ್ನು ಸಾಕುವಷ್ಟು ಸಂಪಾದನೆಯನ್ನು ಹೊಂದಿದ್ದ ಮತ್ತು ಅವರನ್ನು ಆಹ್ವಾನಿಸಿಯೂ ಇದ್ದ. ಆದರೆ ಕರ್ತ ಮತ್ತು ಅವನ ಅಳಿಯ ತಮ್ಮ ಪರಂಪರೆಯ ಹಕ್ಕನ್ನು ಬಿಟ್ಟುಬಿಡುವುದು ಆತ್ಮಹತ್ಯೆಗೆ ಸಮಾನವೆಂದು ನಂಬಿಕೊಂಡಿದ್ದರು. ಅಲ್ಲದೆ ಇವರನ್ನು ಅಲ್ಲಿ ಕರೆದುಕೊಂಡು ಹೋಗಿ ಮಗನಿಗೆ ವಿನಾಃ ಕಿರಿಕಿರಿ ಉಂಟುಮಾಡುವುದಕ್ಕೆ ಲಕುಮಿಗೂ ಮನಸ್ಸಿರಲಿಲ್ಲ. ಯಾಕೆಂದರೆ ಅಲ್ಲಿಯ ಜೀವನಶೈಲಿಗೆ ಹೊಂದಿಕೊಳ್ಳುವುದು ಇವರಿಗೆ ಅಷ್ಟು ಸುಲಭವಾಗಿರಲಿಲ್ಲ. ಈ ಪರಿಸ್ಥಿತಿಯಲ್ಲಿ ಅವರನ್ನು ಇಲ್ಲಿ ಬಿಟ್ಟು ಮಗನ ಜೊತೆ ಹೋಗುವುದಕ್ಕೂ ಅವಳ ಮನಸ್ಸು ಸಮ್ಮತಿಸುತ್ತಿರಲಿಲ್ಲ. ವಿಧಿಯಿಲ್ಲದೆ ಲಕುಮಿ ಮಗನಿಗೆ ನಯವಾಗಿ ವಿಚಾರ ತಿಳಿಸಿದ್ದಳು. ಮೊದಲು ರೇಗಿದರೂ ಅಮ್ಮನ ಅಳುವಿಗೆ ಆತ ಮಣಿದಿದ್ದ. ಆದರೂ ಒಂದಿಷ್ಟು ಸಮಯಾವಕಾಶ ಕೇಳಿದ್ದ. ಅವನ ಮನಸ್ಸು ಯಾವುದೇ ತೀರ್ಮಾನಕ್ಕೆ ಬರಲಾಗದೆ ಗೊಂದಲದ ಗೂಡಾಗಿತ್ತು.
ತನ್ನಲ್ಲೇ ಏನೋ ನಿಶ್ಚಯ ಮಾಡಿಕೊಂಡವನಂತೆ ಮಹಾದೇವ ಊರಿಗೆ ಹೊರಟು ಬಂದಿದ್ದ. ಊರಿಗೆ ಬಂದವನಲ್ಲಿ ಯಾರೂ ಕೂಡ ಮುಖ ಕೊಟ್ಟು ಸರಿಯಾಗಿ ಮಾತನಾಡಿರಲಿಲ್ಲ. ಎಲ್ಲಿ ಅವನ ಅಸಹನೆಯ ಜ್ವಾಲಾಮುಖಿ ಸ್ಫೋಟಿಸುತ್ತದೋ ಎನ್ನುವ ಆತಂಕ ಎಲ್ಲರ ಮೊಗದಲ್ಲೂ ಹೊಗೆಯಾಡುತ್ತಿತ್ತು. ಅವರು ತಮ್ಮಷ್ಟಕ್ಕೆ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದರು.
ನೇಮದ ದಿನ ಮಾವನ ಹಿಂದೆ ಮಹಾದೇವ ಡೋಲು ಬೆನ್ನಿಗೆ ಹಾಕಿಕೊಂಡು ಮೈಬಿಟ್ಟು ಬರಿ ಲುಂಗಿ ಧರಿಸಿ ಹೊರಟು ನಿಂತಾಗ ಲಕುಮಿ ಸಣ್ಣಗೆ ಬಿಕ್ಕಳಿಸಿದ್ದಳು. ಅವಳಿಗೆ ಯಾಕೋ ಬಸ್ಸಪ್ಪ ಮೇಷ್ಟ್ರು ನೆನಪಿಗೆ ಬಂದರು.
ಚಾವಡಿಮನೆಗೆ ಹೋದ ಮಹಾದೇವ ಯಾರ ಜೊತೆಗೂ ಹೆಚ್ಚು ಬೆರೆಯಲಿಲ್ಲ. ತಲೆ ಕೆಳಗೆ ಹಾಕಿ ಅಣಿಯನ್ನು ಸಿಂಗರಿಸುವುದರಲ್ಲಿ ಮಗ್ನನಾಗಿದ್ದ. ಇತ್ತೀಚೆಗೆ ಒಂದೆರಡು ವರ್ಷಗಳನ್ನು ಬಿಟ್ಟರೆ ಮೊದಲೆಲ್ಲ ಆತನೂ ದೈವದ ನೇಮಕ್ಕೆ ಬರುತ್ತಿದ್ದವನೇ. ಈಗೀಗ ಆತ ಬಂದನೆಂದರೆ ಸಭೆಯೆಲ್ಲ ಆತನನ್ನು ಅನ್ಯಗ್ರಹದ ಜೀವಿಯೇನೊ ಎಂಬಂತೆ ನೋಡುತ್ತಿದ್ದರು. ಚಾವಡಿಮನೆಯ ಸಂಬಂಧಿಕರಲ್ಲಿ ಹಲವರು ಅವನ ಸಹಪಾಠಿಗಳಾಗಿದ್ದವರು. ಅವರು ಸಹಜವಾಗಿ ಸಲಿಗೆಯಿಂದ ಮಾತನಾಡಲು ಬಂದರೆ ಹಿರಿಯರು ಕಣ್ಣಲ್ಲೆ ಸನ್ನೆ ಮಾಡಿ ಗದರುತ್ತಿದ್ದರು. ಮಹಾದೇವ ಮೌನವಾಗಿ ನೋವು ನುಂಗಿಕೊಳ್ಳುವುದನ್ನು ಅಭ್ಯಾಸ ಮಾಡಿಕೊಂಡಿದ್ದ.
ಒಮ್ಮೆ ಯಾರೋ ಯುವಕರು ಮಹದೇವನಲ್ಲಿ, “ನಿನ್ನ ಮಾವನಿಗೆ ಈಗ ವಯಸ್ಸಾಗಿದೆ, ನೀನು ದೈವಕ್ಕೆ ಕಟ್ಟಿದರೆ ಒಳ್ಳೆ ರೈಸುತ್ತದೆ ಮಾರಾಯ, ನೀನೇ ಕಟ್ಟು” ಎಂದು ಹೇಳಿದ್ದು ತಪ್ಪಿ ಅವನ ಮಾವನ ಕಿವಿಗೆ ಬಿದ್ದು ಮುದುಕನ ಸಿಟ್ಟು ನೆತ್ತಿಗೇರಿತ್ತು.
“ಹಾಗೆಲ್ಲ ಕಟ್ಟುವುದಕ್ಕೆ ಇದೇನು ನವರಾತ್ರಿಯ ವೇಷವೇ? ನಾನು ಆಶೀರ್ವಾದ ಕೊಟ್ಟು, ಗಗ್ಗರ ಕೊಟ್ಟರೆ ಮಾತ್ರ ಇದೆಲ್ಲ ನಡೆಯುವುದು. ನನ್ನ ಕೈಕಾಲು ಇನ್ನೂ ಗಟ್ಟಿ ಇದೆ.” ಕುಡಿದ ಅಮಲಿನಲ್ಲಿ ಅಳಿಯನಿಗೆ ಕೇಳುವ ಹಾಗೆ ಕೋಪದಲ್ಲಿ ಒದರಿದ್ದ. ಮಹಾದೇವನಿಗೆ ಏನೂ ಅನ್ನಿಸಿರಲಿಲ್ಲ. ವೈದ್ಯನಾದ ಮೇಲಂತೂ ಅವನಿಗೆ ನೇಮದ ಸ್ಥಳಕ್ಕೆ ಹೋಗುವುದಕ್ಕೆ ಇರಿಸುಮುರಿಸು ಆಗುತ್ತಿತ್ತು. ಯಾಕೆಂದರೆ ಇತ್ತೀಚೆಗೆ ಅವನ ಬಳಿ ಬರುತ್ತಿದ್ದ ರೋಗಿಗಳ ಭೇಟಿ ಅಲ್ಲಿಯೂ ಆಗುತ್ತಿತ್ತು. ಒಮ್ಮೆ ಅಲ್ಲಿ ಒಬ್ಬ ಮಹಿಳೆ ಇವನಿಗೆ ಕೇಳುವ ಹಾಗೆ,
“ಇಲ್ಲಿಗೆ ಬಂದರೆ ಡಾಕ್ಟ್ರು ಟೋಕನ್ ಇಲ್ಲದೆ ದೈವದ ಒಟ್ಟಿಗೆ ಸಿಗುತ್ತಾರೆ” ಎಂದು ಅಪಹಾಸ್ಯ ಮಾಡಿದ್ದಳು. ಹಾಗಾಗಿ ಎರಡು ವರ್ಷದಿಂದ ಆತ ನೇಮ-ಕೋಲಗಳ ಸಮಯವನ್ನು ತಪ್ಪಿಸಿಯೇ ಊರಿಗೆ ಬರುತ್ತಿದ್ದ.
“ಈಗ ಹಾಗೆಲ್ಲ ಏನಿಲ್ಲ, ಎಷ್ಟು ಕಲಿತವರು ಕೂಡ ತಮ್ಮ ಕುಲದ ಪರಂಪರಾಗತ ವೃತ್ತಿ ಮಾಡುತ್ತಾರೆ. ನಾವು ಎಷ್ಟು ದೊಡ್ಡ ಜನ ಆದರೂ ನಮ್ಮ ಮೂಲವನ್ನು ಮರೆಯುವುದಕ್ಕೆ ಆಗುತ್ತದೆಯೇ? ವರ್ಷದಲ್ಲಿ ಒಂದು ದಿನ ಅಲ್ಲವೇ?” ಲಕುಮಿ ತಾನು ಅಪರಾಧಿಪ್ರಜ್ಞೆಯಿಂದ ಹೊರಬರುವುದಕ್ಕಾಗಿ ಮಗನಿಗೆ ಕೇಳುವಂತೆ ಜೋರಾಗಿ ಹೇಳಿದರೂ ಮಹಾದೇವ ತುಟಿ ಬಿಚ್ಚಲಿಲ್ಲ. ತನಗೂ ಆ ಮಾತಿಗೂ ಯಾವ ಸಂಬಂಧವೇ ಇಲ್ಲ ಎನ್ನುವ ಹಾಗೆ ಅವಳತ್ತ ನೋಡಲೂ ಇಲ್ಲ. ಮಾತು ಎಷ್ಟು ಖಾರವಾಗಿದ್ದರೂ ಗೀರುತ್ತದೆಯಷ್ಟೆ, ಮೌನ ಇರುವಷ್ಟು ಹೊತ್ತು ಇರಿಯುತ್ತದೆ ಎಂದು ಅನ್ನಿಸಿ ಮುಖ ಬಾಡಿಸಿಕೊಂಡಿದ್ದಳು.
ಮಾವನೇನೋ ವಿಧಿಯಿಲ್ಲದೆ ಅಳಿಯನಿಗೆ ದೈವಕ್ಕೆ ಕಟ್ಟಲು ಅನುಮತಿ ನೀಡಿದ್ದರೂ ಎಲ್ಲಿ ಎಡವಟ್ಟು ಮಾಡುತ್ತಾನೋ ಎಂದು ಆತಂಕದಿಂದ ಅವನಿಗೆ ಅಂಟಿಕೊಂಡೆ ಇರುತ್ತಿದ್ದ.
ಮಹಾದೇವ ಎಣ್ಣೆ ಬೂಲ್ಯ ತೆಗೆದುಕೊಂಡು ಅಂಗಳದ ಮೂಲೆಯಲ್ಲಿ ಹಾಸಿದ್ದ ತೆಂಗಿನ ಮಡಲಿನ ಮೇಲೆ ಕುಳಿತು ಕನ್ನಡಿ ಹಿಡಿದು ಮುಖಕ್ಕೆ ಅರ್ದಲ ಹಾಕತೊಡಗಿದ. ಅವನಿಗೆ ಬಣ್ಣಗಾರಿಕೆ ಬಹಳ ಚೆನ್ನಾಗಿ ಗೊತ್ತಿತ್ತು. ಅಲ್ಲದೆ ಸುಂದರ ಮೈಕಟ್ಟಿನ ಎತ್ತರದ ಯುವಕ. ಯಾಂತ್ರಿಕವಾಗಿ ಅಲಂಕಾರಕ್ಕೆ ತನ್ನನ್ನು ಒಡ್ಡಿಕೊಂಡಿದ್ದ. ಲಕುಮಿ ಸಣ್ಣದಾಗಿ ಡೋಲು ಬಡಿಯುತ್ತಿದ್ದಳು. ಅವಳ ಎದೆಯ ಡವಡವ ಶಬ್ದದೆದುರು ಡೋಲಿನ ಶಬ್ದ ಸೋತಂತೆ ಆಕೆಗೆ ಭಾಸವಾಗುತ್ತಿತ್ತು.
ಯಾರು ಮಾಹಿತಿ ಕೊಟ್ಟಿದ್ದರೋ ದೈವ ಎದ್ದು ನಿಲ್ಲುವ ಹೊತ್ತಿಗೆ ಮಾಧ್ಯಮದ ಮಂದಿ ಕೂಡ ಬಂದು ಸೇರಿದ್ದರು. ಬಹಳ ದೊಡ್ಡ ಸಭೆ. ಯಾರೋ ವಿಡಿಯೋ ಚಿತ್ರೀಕರಣ ಮಾಡುತ್ತಿದ್ದರು. ಇನ್ಯಾರೋ ಫೋಟೋ ತೆಗೆಯುತ್ತಿದ್ದರು. ಮಕ್ಕಳಂತೂ ತಮ್ಮತಮ್ಮ ಮೊಬೈಲುಗಳನ್ನು ಹಿಡಿದು ಚಿತ್ರೀಕರಣಕ್ಕೆ ತಕ್ಕ ಆಯಕಟ್ಟಿನ ಸ್ಥಳ ಹುಡುಕುತ್ತಿದ್ದರು. ಮಹಾದೇವ ಯಾರನ್ನೂ ಗಮನಿಸುತ್ತಿರಲಿಲ್ಲ. ತನ್ನ ಪಾಡಿಗೆ ತಾನಿದ್ದ. ದೈವ ಆವೇಶ ಸುರುವಾಗಿ ಎದ್ದು ನಿಲ್ಲುವ ಸ್ವಲ್ಪ ಮೊದಲು ಡಾ. ಅವನಿ ಕೂಡ ಅಲ್ಲಿಗೆ ಆಗಮಿಸಿದ್ದಳು. ಅವಳು ಚಾವಡಿಮನೆಯ ಒಳಗಿನಿಂದ ಮಹಾದೇವನನ್ನು ನೋಡುತ್ತ ಉಮ್ಮಳಿಸಿ ಬರುತ್ತಿದ್ದ ದುಃಖವನ್ನು ತಡೆಹಿಡಿಯುತ್ತಿದ್ದಳು. ಅವಳು ಕನಸಿನಲ್ಲಿಯೂ ಇಂತಹ ಸನ್ನಿವೇಶವನ್ನು ನಿರೀಕ್ಷೆ ಮಾಡಿರಲಿಲ್ಲ. ಡಾ. ಮಹಾದೇವ್ ಹೀಗೂ ಮಾಡಬಹುದು ಎಂದು ಅವಳಿಗೆ ಒಪ್ಪಿಕೊಳ್ಳುವುದಕ್ಕೆ ಆಗುತ್ತಿರಲಿಲ್ಲ. ಒಮ್ಮೆ ಆತ ತಾನಿಲ್ಲಿ ಇರುವುದನ್ನು ಗಮನಿಸಲಿ ಎಂದು ಎದುರೆದುರು ಬಂದು ಕುಳಿತರೂ ಆತ ಅವಳತ್ತ ಕಣ್ಣೆತ್ತಿಯೂ ನೋಡಲೇ ಇಲ್ಲ. ಆತ ಇತ್ತ ನೋಡಿದರೆ ತನ್ನ ನಿರ್ಧಾರದಿಂದ ಹಿಂದೆ ಸರಿದಾನು ಎನ್ನುವ ಹುಚ್ಚು ಆಸೆ ಅವಳಿಗೆ!
ಆ ವರ್ಷ ಬಹಳ ಗೌಜಿಯಲ್ಲಿ ದೈವದ ನೇಮ ನಡೆಯಿತು. ಸ್ಪಷ್ಟವಾದ ನುಡಿಗಟ್ಟು. ಆಪ್ತತೆಯ ಅಭಯ. ಅರಿಕೆ ಮಾಡಿಕೊಂಡವರಿಗೆ ಅರ್ಧ ನೋವು ದೈವದ ಭರವಸೆಯ ಮಾತಿನಲ್ಲಿಯೇ ಶಮನವಾದ ಭಾವ. ಏನು ಆವೇಶ, ಗಗ್ಗರದ ಧ್ವನಿ ಅಂಗಳದಲ್ಲೆಲ್ಲ ಮಾರ್ದನಿಸಿತ್ತು. ಡಾ. ಅವನಿ ದಿಗ್ಭ್ರಮೆಗೊಂಡಿದ್ದಳು! ಅವಳು ದೈವದ ಎದುರು ಬಂದಾಗಲೂ ಕಾಡಿಗೆ ಗೀಟಿನ ನಡುವೆ ಹೊಳೆವ ಕೆಂಪು ಅದ್ದಿದ ಅಗಲ ಕಂಗಳಲ್ಲಿ ಅಪರಿಚಿತತೆ ತುಂಬಿತುಳುಕುತ್ತಿತ್ತು. ನಿರ್ಲಿಪ್ತ ಮುಖಭಾವ! ಹಿಂಗಾರ ಸೇಸೆಯ ನಡುವೆ, ಚೆಂಡುಮಲ್ಲಿಗೆಯ ಘಮ, ಧೂಪ ದೀವಟಿಕೆಗಳ ಜ್ವಲಿಸುವಿಕೆಯ ನಶೆಯಲ್ಲಿ ಅಲೌಕಿಕ ಜಗತ್ತಿಗೆ ಪ್ರವೇಶ ಪಡೆದ ಡಾ. ಮಹಾದೇವನಿಗೆ ಸಂಪೂರ್ಣ ಗ್ರಹಣ ಬಡಿದಂತೆ ಅವಳಿಗೆ ಅನ್ನಿಸಿತ್ತು. ಆತ ಸಂಧಿ ಹೇಳುವ ಕ್ರಮ, ಗ್ರಾಮದ ಮನೆಗಳಿಗೆ ನೀಡಿದ ಗೌರವದ ಕರೆ, ಗಂಭೀರ ನಡೆ, ಲಯದ ನರ್ತನ, ಜೀಟಿಗೆಯವರು ಮತ್ತು ಇತರರಿಗೆ ನೀಡಿದ ದಸ್ತು ಗೌರವ! ಅವನು ಇವನೇ? ಮತ್ತೆಮತ್ತೆ ಕಣ್ಣು ಹೊಸಕಿಕೊಂಡು ನೋಡಿ ಅವಳಿಗೆ ಅರಿವಿಲ್ಲದೇ ಕೈಗಳೆರಡನ್ನೂ ಜೋಡಿಸಿದ್ದಳು. ಬಂದವರಿಗೆ ಅಚ್ಚರಿ! ಕೆಲವರು ಮಹಾದೇವನನ್ನು ವರ್ಣಿಸುವವರಾದರೆ, ಇನ್ನು ಕೆಲವರು ದೈವದ ಕಾರ್ಣಿಕವನ್ನು ಹೊಗಳುವವರು. ಅವನಿ ನಿಧಾನವಾಗಿ ಹತಾಶೆಯಿಂದ ಸಪ್ಪಗಾಗಿದ್ದಳು. ಎಲ್ಲ್ಲ ಅಚ್ಚುಕಟ್ಟಾಗಿ ನಡೆದಾಗ ಮಹಾದೇವನ ಮಾವನಿಗೆ ಬಹಳ ಹೆಮ್ಮೆ. ಬಾರ್ನೆ ಆದ ನಂತರ ದೈವಕ್ಕೆ ಹಾಲು ಕೊಡುವುದು ಪೂರ್ವ ಸಂಪ್ರದಾಯ. ಮನೆಯ ಹಿರಿಯ ಹೆಂಗಸರು ಅದಕ್ಕಾಗಿ ಸಿದ್ದರಾಗಿದ್ದರು.
ದೈವ ಅಣಿ ತಿರುಗಿಸಿ ಕೈಯಲ್ಲಿ ಖಡ್ಗ ಮತ್ತು ಮಣಿಗಂಟೆ ಹಿಡಿದು ಮನೆಯ ಮುಂಭಾಗದ ಹೊಸಿಲೆದರು ಬಂದಾಗ ಮುಂಡಾಸು ಕಟ್ಟಿದ ಪಟೇಲರು ದೈವದ ಮುಂದೆ ನಿಂತು ಒಳಗಿನಿಂದ ಬೆಳ್ಳಿ ಬಟ್ಟಲಿನಲ್ಲಿ ಹಾಲು ತರುವಂತೆ ಹೆಂಗಳೆಯರಿಗೆ ಸ್ವರ ಎತ್ತರಿಸಿ ಆದೇಶ ನೀಡಿದರು. ಆಗ ದೈವ ಒಮ್ಮೆಗೆ ಗಗ್ಗರದ ಸದ್ದು ಎಬ್ಬಿಸಿ ತನ್ನ ಕೈಗಳಿಂದ ಪಟೇಲರ ಕೈಗಳನ್ನು ಗಟ್ಟಿಯಾಗಿ ಹಿಡಿದುಕೊಂಡಿತು. ಎಲ್ಲರೂ ಭಕ್ತಿ ಆರಾಧನೆಯ ಭಾವ ತುಂಬಿ ದೈವವನ್ನು ಕಣ್ಣು ತುಂಬಿಕೊಳ್ಳುತ್ತಿದ್ದಾರೆ.
“ಗುತ್ತಿನಾರೆ, ಕಾಲಾವಧಿಗೆ ಆಗುವ ನೇಮ. ಭಕ್ತಿಯಿಂದ ಶಕ್ತಿಗನುಸಾರವಾಗಿ ನಡೆಸಿಕೊಟ್ಟಿದ್ದೀರಿ. ಧರ್ಮ ಹೇಗೆ ಚಂದ ಆಯಿತಲ್ಲವೆ? ಹೊಸ ಚಾವಡಿಮನೆ ಕಟ್ಟಿದ್ದೀರಿ, ನನಗೆ ಒಳಗೆ ಅಂದವಾದ ಮಣಿಮಂಚ ಭಂಡಾರದ ಕೋಣೆ ನಿರ್ಮಾಣ ಆಗಿದೆ. ಬಹಳ ಸಂತೋಷ… ಬಹಳ ಸಂತೋಷ… ಕೊಡುವುದು, ಕಾಯುವುದು ನಾನೇ ಎನ್ನುವಾಗ, ಚಂದ ನೋಡುವುದಕ್ಕೆ ಒಳಗೆ ಕರೆಯುವುದಿಲ್ಲವೆ? ಬಾಗಿಲಲ್ಲೇ ನಿಲ್ಲಿಸಿ ಹಾಲು ಕುಡಿಸಿ ಹಿಂದೆ ಕಳುಹಿಸುತ್ತೀರಾ ಹೇಗೆ?”
ದೈವದ ಮಾತಿಗೆ ಒಂದು ಕ್ಷಣ ಹಿರಿಯರೆಲ್ಲರೂ ಮುಖಮುಖ ನೋಡಿಕೊಂಡರು. ಪಟೇಲರು ತಬ್ಬಿಬ್ಬಾಗಿರುವುದಕ್ಕೆ ಸಾಕ್ಷಿಯಾಗಿ ಮುಖದಿಂದ ಬೆವರು ಧಾರಾಕಾರವಾಗಿ ಇಳಿಯುತ್ತಿರುವುದು ಕಾಣಿಸುತ್ತಿತ್ತು. ಸುತ್ತಲೂ ನಿಶ್ಶಬ್ಧ! ಮಹಾದೇವನ ಮಾವ ದೈವದ ಅಣಿಯನ್ನು ಬಲವಾಗಿ ಹಿಂದಕ್ಕೆ ಜಗ್ಗುತ್ತ “ನಾವು ಒಳಗೆ ಹೋಗಲಿಕ್ಕಿಲ್ಲ. ಅಸಂಬದ್ಧ ಮಾತನಾಡಬೇಡ. ನೀನು ನಮ್ಮನ್ನು ಫಾಸಿಗೆ ಹಾಕುವ ಏರ್ಪಾಡಾ… ಹೇಗೆ?” ಎಂದು ಗದರುತ್ತ್ತ ಪಿಸುಗುಟ್ಟುತ್ತಿದ್ದ. ದೈವಕ್ಕೆ ಅದು ಯಾವುದೂ ಕೇಳಿಸುತ್ತಿರಲಿಲ್ಲ. ಡಾ. ಅವನಿ ಕತ್ತು ಉದ್ದ ಮಾಡಿ ಅಲ್ಲಿ ಏನಾಗುತ್ತಿದೆ ಎಂದು ಅರಿಯಲು ಪ್ರಯತ್ನಿಸುತ್ತಿದ್ದಳು. ಪಟೇಲರಿಗೆ ಈಗ ಧರ್ಮಸಂಕಟ. ಧರ್ಮ ದೈವದ ಮರ್ಯಾದೆಯ ಪ್ರಶ್ನೆ. ದೈವ ಕಣ್ಣು ಅರಳಿಸಿ ಒಮ್ಮೆ ಗಗ್ಗರದ ಸ್ವರ ಎಬ್ಬಿಸಿ ಪಟೇಲರನ್ನು ಅಲುಗಾಡಿಸಿತು. ಅವೇಶಭರಿತ ಕೆಂಪು ಕಣ್ಣುಗಳು, ಬಿಗಿಯಾದ ಹಿಡಿತ, ಅಣಿಯ ತುದಿಯಲ್ಲಿ ಇರಿಸಿದ ಸತ್ತಿಗೆಯಲ್ಲಿ ನೇತಾಡುವ ಬೆಳ್ಳಿ ಪಕಳೆಗಳ ಹೊಳಪು, ಅಣಿಗೆ ಅಂಟಿಸಿದ ಬೆಳ್ಳಿಯ ಹೂವುಗಳಲ್ಲಿ ಪ್ರತಿಫಲಿಸುತ್ತಿರುವ ದೊಂದಿಯ ಬೆಳಕು. ಕರ್ಣಾಭರಣ ತಲೆಮಣಿಯಲ್ಲಿರುವ ನಾಗನಲ್ಲಿ ಜೀವಕಲೆ! ಕಡುಕೆಂಪಿನ ಉಡುಪಿನಲ್ಲಿ ಆವರಿಸಿ ನಿಂತ ದೈವಿಕತೆ. ಲೌಕಿಕ ಮತ್ತು ಅಲೌಕಿಕದ ಅದ್ಭುತವಾದ ಅನುಸಂಧಾನ. ಎಲ್ಲರೂ ನೋಡುನೋಡುತ್ತಿದ್ದಂತೆ ಪಟೇಲರು ಒಂದು ರೀತಿಯ ಭಾವಾವೇಶಕ್ಕೆ ಒಳಗಾಗಿ ಸಮ್ಮೋಹನಗೊಂಡಂತೆ ಕಂಪಿಸಿದರು!
ಮರುಕ್ಷಣ ಏನಾಯಿತೋ, ಪಟೇಲರು ದೈವದ ಕೈಹಿಡಿದು ಮೆಟ್ಟ್ಟಿಲೇರಿ ಚಾವಡಿಯ ಒಳಗೆ ಕರೆದುಕೊಂಡು ಬಂದರು. ಹೆಂಗಳೆಯರು ಬೆಳ್ಳಿಯ ಬಟ್ಟಲಿನಲ್ಲಿ ಹಾಲು ತಂದು ಇತ್ತರು. ಅದರಿಂದ ಸಮಪಾಲು ಮಾಡಿ ಅವರಿಗೆ ಹಿಂತಿರುಗಿಸಿದ ದೈವ ಉಳಿದ ಅರ್ಧವನ್ನು ತಾನು ಕುಡಿದು ಎಲ್ಲರನ್ನೂ ಹರಸಿ ಹಿಂಗಾರದ ಅಕ್ಷತೆಯನ್ನು ಭಂಡಾರದ ಕೋಣೆಯತ್ತ ಎಸೆದು ಸಾವಧಾನದಿಂದ ಹೊರಗೆ ಬಂತು. ಅಂಗಳದ ಮೂಲೆಯಲ್ಲಿ ಕುಳಿತ ಲಕುಮಿ ಅಣ್ಣ-ಅತ್ತಿಗೆಯರ ಮೂದಲಿಸುವಿಕೆಗೆ ಉತ್ತರಿಸಲಾಗದೆ ತನ್ನ ಕಾಲಿನ ಗಾಯದ ಕಲೆಯನ್ನು ನೇವರಿಸಿಕೊಳ್ಳುತ್ತ ಸಣ್ಣಗೆ ರೋದಿಸುತ್ತಿದ್ದಳು. ಅವಳು ಮಾತ್ರವಲ್ಲ, ಅಂಗಳದಲ್ಲಿ ನಿಂತ ಹಲವರು ಅವರವರ ದೇಹದ ಒಳಗಿನ ಹೊರಗಿನ ಗಾಯದ ಕಲೆಗಳನ್ನು ನೆನಪಿಸಿಕೊಂಡು ತಡವುತ್ತಿದ್ದಾರೆ!
ಸಭೆಯಲ್ಲಿದ್ದವರಲ್ಲಿ ಒಂದು ವಿಭಾಗದವರು ಇದೇನು ಹೊಸ ಸಂಪ್ರದಾಯ ಎಂದು ಮೂಗು ಮುರಿದರೆ, ಇನ್ನೂ ಕೆಲವರು – ಹಿರಿಯರು ಹೇಳುತ್ತಿದ್ದದ್ದು ಕೇಳಿದ್ದೆವು, ಮೊದಲು ಹೀಗೆ ಇತ್ತಂತೆ! ಈಗ ದೈವಕ್ಕೆ ಎಲ್ಲ ಏರ್ಪಾಡು ಸರಿ ಆಗುವಾಗ ಮೊದಲಿನ ಹಾಗೆ ನಡೆಸುವ ಚಿತ್ತ ಮೂಡಿದ್ದು. ಅಲ್ಲದಿದ್ದರೆ, ಅಷ್ಟು ದೊಡ್ಡ ಉದ್ಯೋಗ, ಸಂಬಳ ಇರುವ ಮನುಷ್ಯ ಈ ಪರಂಪರೆಯ ಚಾಕರಿ ಮಾಡಲು ಬರುತ್ತಿದ್ದನೆ? ಮಾಯದ ಚಿತ್ತ ಏನು ಎಂದು ಅದಕ್ಕೇ ಗೊತ್ತು! ಇದೆಲ್ಲ ಅದರ ಕಾರ್ಣಿಕ, ಅಲ್ಲದೇ ಮನುಷ್ಯಬುದ್ಧಿಗೆ ನಿಲಕುವಂತಹದ್ದಲ್ಲ ಬಿಡಿ! ಎಂದು ಎರಡೆರಡು ಸರ್ತಿ ಅರಿಶಿನ ಪ್ರಸಾದ ಹಣೆಗೆ ಹಚ್ಚಿಕೊಂಡರು. ದಾಖಲೀಕರಣ ಮಾಡಿದ ವೀಡಿಯೋಗಳು ಊರು-ಕೇರಿ ದಾಟಿ ಸೀಮೋಲ್ಲಂಘನ ಮಾಡಿದವು. ಮಧ್ಯಂತರ ಜಗತ್ತಿನ ಮಿತಿ ಮತ್ತು ವಿಸ್ತಾರದ ಬಗ್ಗೆ ಬಿಸಿ ಬಿಸಿ ಚರ್ಚೆಗಳು ನಡೆದವು.
ಮರುದಿವಸ ಯಾರ ಹತ್ತಿರವೂ ಹೆಚ್ಚು ಮಾತನಾಡಲು ಹೋಗದೆ ಮಹಾದೇವ ಮನೆಯಿಂದ ಹೊರಟ. ಕಾರನ್ನು ಪಟೇಲರ ಮನೆಯ ದಾರಿಯಲ್ಲಿ ತಿರುಗಿಸಿದ. ಇವತ್ತು ಅವನು ತನ್ನ ಎಂದಿನ ಉಡುಗೆಯಲ್ಲಿಯೇ ಇದ್ದ. ಮನೆಯೆದುರು ಚಾವಡಿಯಲ್ಲಿ ಪಟೇಲರು ಕುಳಿತಿದ್ದರು. ಧರ್ಮನೇಮಕ್ಕೆ ಬಂದ ನೆಂಟರ ಕಾರುಗಳ ನಡುವೆ ಡಾ. ಅವನಿಯ ಕಾರು ಇರುವುದನ್ನು ಮಹಾದೇವನ ಕಣ್ಣುಗಳು ಗುರುತಿಸಿದವು. ಆತ ಒಮ್ಮೆಗೆ ಕಾರು ನಿಲ್ಲಿಸಿ ಇಳಿದವನೇ ಅವನ ಮನೆಯವರು ಯಾವತ್ತೂ ಹೋಗಿ ನಿಲ್ಲುವ ಸ್ಥಳದವರೆಗೆ ಹೋಗಿ ಒಂದು ಕ್ಷಣ ಮುಂದೆ ಹೋಗಲೋ ಬೇಡವೋ ಎಂಬ ಗೊಂದಲದಲ್ಲಿ ನಿಂತ. ಅಷ್ಟರಲ್ಲಿ ಧರ್ಮನೇಮಕ್ಕೆ ಬಂದಿದ್ದ ಪಟೇಲರ ನೆಂಟರ ಕಡೆಯ ಹತ್ತರ ಹರೆಯದ ಮಗುವೊಂದು ಒಳಗಿನಿಂದ ಓಡಿ ಬಂತು.
“ಅರೇ.. ಮಹಾದೇವ್ ಮಾಮ! ಬನ್ನಿ ಒಳಗೆ” ಮಗು ಆತನ ಕೈ ಹಿಡಿದು ಎಳೆದುಕೊಂಡೇ ಮನೆಯೊಳಗೆ ಕರೆತಂದಿತು. ಪಟೇಲರು ಅರೆಕ್ಷಣ ತಡವರಿಸಿದರೂ ಮತ್ತೆ ಸಾವರಿಸಿಕೊಂಡು ಆತನನ್ನು ಕುಳಿತುಕೊಳ್ಳುವಂತೆ ಸನ್ನೆ ಮಾಡಿದರು. ಮಹಾದೇವ ಅವರ ಎದುರು ಕುರ್ಚಿಯಲ್ಲಿ ಕುಳಿತ. ಪಟೇಲರ ಹೆಂಡತಿ ಕಾಫಿ ತಂದು ಕೊಟ್ಟು ಕುಶಲ ವಿಚಾರಿಸಿದರು. ಸ್ವಲ್ಪ ಹೊತ್ತು ಮಾತನಾಡಿದ ಆತ ಹೊರಡಲು ಅನುವಾದ. ಅಷ್ಟು ಹೊತ್ತು ಒಳಗಿನ ಕೋಣೆಯಿಂದ ಇದನ್ನೆಲ್ಲ್ಲ ಬೆಕ್ಕಸಬೆರಗಾಗಿ ನೋಡುತ್ತಿದ್ದ ಡಾ. ಅವನಿ ಒಮ್ಮೆಗೆ ಹೊರಬಂದಳು. ಪಟೇಲರು ಎದುರು ಇದ್ದಾರೆ ಎಂಬುದನ್ನು ಮರೆತವಳಂತೆ ಅವನನ್ನು ಹಿಂಬಾಲಿಸಿದಳು. ಆತ ಸೀದಾ ಹೋಗಿ ಕಾರಿನಲ್ಲಿ ಕುಳಿತ. ಕಾರಿನ ಬಾಗಿಲನ್ನು ಹಿಡಿದು ನಿಂತ ಆಕೆ ಕೇಳಿದಳು,
“ನಿಜ ಹೇಳು, ನಿನ್ನೆ ನೀನು ಮಾತನಾಡಿದ್ದಾ? ದೈವವಾ?”
ಉದ್ವೇಗದಿಂದ ಅವಳ ಧ್ವನಿ ನಡುಗುತ್ತಿತ್ತು.
“ಗೊತ್ತಿಲ್ಲ.”
ಹಾಗೆಂದವನೇ ಗಾಡಿ ಸ್ಟಾರ್ಟ್ ಮಾಡಿದ. ಅವಳು ನಿಂತೇ ಇದ್ದಳು.