ನಮ್ಮ ಸನಾತನ ಧರ್ಮದ ಪ್ರಕಾರ ಯುಗಾದಿ ಹೊಸ ವರ್ಷದ ಆರಂಭದ ದಿನ. ಹೊಸ ವರುಷವಾಗಿ ಯುಗಾದಿಯ ಆಚರಣೆಗೂ, ಡಿಸೆಂಬರ್ ೩೧ರ ರಾತ್ರಿಯ ಆಚರಣೆಗೂ ಅಜಗಜಾಂತರವಿದೆ. ಒಂದರಲ್ಲಿ ಭಾರತೀಯ ಸಂಸ್ಕೃತಿಯ ಸೊಗಡಿದ್ದರೆ ಇನ್ನೊಂದರಲ್ಲಿ ಪಾಶ್ಚಾತ್ಯ ಸಂಸ್ಕೃತಿಯ ವಿಲಾಸೀ ಸೋಗಲಾಡಿತನವಿದೆ….
ಭಾರತೀಯ ಸಂಸ್ಕೃತಿಯ ಮೇಲೆ ಇತ್ತೀಚೆಗೆ ಪಾಶ್ಚಾತ್ಯ ಸಂಸ್ಕೃತಿಯ ಸವಾರಿ ಅತಿಯಾಗುತ್ತಿದೆ. `ಆ ನೋ ಭದ್ರಾಃ ಕ್ರತವೋ ಯಂತು ವಿಶ್ವತಃ’ ಎಂಬುದು ಋಗ್ವೇದದ ಮಾತು. ಅಂದರೆ ಉದಾತ್ತ ವಿಚಾರಗಳು ವಿಶ್ವದ ಎಲ್ಲ ಕಡೆಗಳಿಂದಲೂ ಬರಲಿ ಎಂದು ಪ್ರಾರ್ಥಿಸಿದ ಸಂಸ್ಕೃತಿ ನಮ್ಮದು. ಆದರೆ ಮನೆಯನ್ನು ಪ್ರವೇಶಿಸಿ ತಂಪಾಗಿ ಇಡಬೇಕಾದ ತಂಗಾಳಿ ಬಿರುಗಾಳಿಯಾಗಿ ಬೀಸಿ ನಮ್ಮ ಮನೆಯನ್ನು ಹಾರಿಸಿಕೊಂಡು ಹೋಗುವ ಪರಿಸ್ಥಿತಿ ಬರಬಾರದು. ಪಾಶ್ಚಾತ್ಯ ಸಂಸ್ಕೃತಿಯು ಸನಾತನ ಸಂಸ್ಕೃತಿಗೆ ಪೋಷಕವಾಗಬೇಕೇ ವಿನಾ ಮಾರಕವಾಗಬಾರದು. ಇಂದು ನಾವು ಪಾಶ್ಚಾತ್ಯರ ಒಳ್ಳೆಯ ರೂಢಿಗಳನ್ನು ಸ್ವೀಕರಿಸುವ ಬದಲು ಅವರ ಕೆಟ್ಟ ಅಂಶಗಳನ್ನು ಮಾತ್ರ ಅನುಸರಿಸುತ್ತಿದ್ದೇವೆ.
ಈ ನೆಲದಲ್ಲಿ ಹುಟ್ಟಿದ, ಬೆಳೆದು ಅರಳಿದ ಬಹುತೇಕ ಸಂಪ್ರದಾಯಗಳು, ಆಚರಣೆಗಳು ಮನುಷ್ಯನನ್ನು ಉತ್ತಮ ಸಂಸ್ಕಾರದೆಡೆಗೆ, ಉನ್ನತಿಯೆಡೆಗೆ ಕೊಂಡೊಯ್ಯುತ್ತವೆ. ಆದರೆ ನಾವಿಂದು ಪಾಶ್ಚಾತ್ಯ ಆಚರಣೆಗಳನ್ನು ಕೇವಲ ಕುರುಡಾಗಿ ಅನುಕರಿಸುತ್ತಿದ್ದೇವೆ; ಇದರಿಂದಲೇ ಅಧಃಪತನದತ್ತ ಜಾರುತ್ತಿದ್ದೇವೆ. ಉದಾಹರಣೆಗೆ ಜನವರಿ ೧ರ ಹೊಸ ವರ್ಷದ ಆಚರಣೆಯ ನೆಪದಲ್ಲಿ ಡಿಸೆಂಬರ್ ೩೧ರ ರಾತ್ರಿ ಈ ದೇಶದ ಬಹುತೇಕ ಜನರು ತಿಂದು, ಕುಡಿದು, ಕುಣಿದು ಕುಪ್ಪಳಿಸಿ ಸಂತೋಷವನ್ನು ಪಡೆಯಲು ಪ್ರಯತ್ನಿಸುತ್ತಾರೆ. ಈ ರೀತಿಯ ತಾಮಸೀ ಸಂತೋಷವನ್ನು ಪಡೆಯುವ ಭರದಲ್ಲಿ, ಕುಡಿದ ಅಮಲಿನಲ್ಲಿ ಮಧ್ಯರಾತ್ರಿಯ ರಸ್ತೆ ಅಪಘಾತಗಳಾಗಿ ಎಷ್ಟೋ ಜನ ಪ್ರಾಣವನ್ನು ಕಳೆದುಕೊಳ್ಳುತ್ತಾರೆ.
ಯಾವುದು ಉದಾತ್ತ?
ನಮ್ಮ ಸನಾತನಧರ್ಮದ ಪ್ರಕಾರ ಯುಗಾದಿಯು ಹೊಸ ವರ್ಷದ ಆರಂಭದ ದಿನ. ಯುಗಾದಿ ಅಂದರೆ ಸೃಷ್ಟಿಯ ಪ್ರಾರಂಭದ ದಿನ, ಯುಗದ ಆರಂಭದ ದಿನ, ಹೊಸ ಸಂವತ್ಸರದ ಮೊದಲ ದಿನ. ಯುಗದ ಆರಂಭದ ದಿನ ಆದದ್ದರಿಂದ ಅದನ್ನು ಯುಗಾದಿ ಎಂದು ಕರೆಯುತ್ತಾರೆ. ಬ್ರಹ್ಮನು ಚೈತ್ರ ಶುದ್ಧ ಪ್ರಥಮದಂದು ಸೂರ್ಯೋದಯ ಸಮಯಕ್ಕೆ ಸರಿಯಾಗಿ, ಸಮಗ್ರವಾಗಿ ಈ ಜಗತ್ತನ್ನು ಸೃಷ್ಟಿಸಿದನೆಂದು ಪುರಾಣಗಳು ಹೇಳುತ್ತವೆ. ಅದಕ್ಕಾಗಿ ಆ ದಿನ ನಮಗೆ ಹೊಸ ವರುಷದ ಆರಂಭದ ಹಬ್ಬದ ದಿನವೆನಿಸಿದೆ. ಹೊಸ ವರುಷವಾಗಿ ಯುಗಾದಿಯ ಆಚರಣೆಗೂ ಡಿಸೆಂಬರ್ ೩೧ರ ರಾತ್ರಿಯ ಆಚರಣೆಗೂ ಅಜಗಜಾಂತರವಿದೆ. ಒಂದರಲ್ಲಿ ಭಾರತೀಯ ಸಂಸ್ಕೃತಿಯ ಸೊಗಡಿದ್ದರೆ ಇನ್ನೊಂದರಲ್ಲಿ ಪಾಶ್ಚಾತ್ಯ ಸಂಸ್ಕೃತಿಯ ವಿಲಾಸೀ ಲೋಲುಪತೆಯಿದೆ.
`ಉಂಡಿದ್ದೇ ಯುಗಾದಿ, ಮಿಂದಿದ್ದೇ ದೀಪಾವಳಿ, ಹೊಟ್ಟೆಗಿಲ್ಲದ್ದೇ ಏಕಾದಶಿ’ ಎಂಬುದಾಗಿ ಜನಪದರು ಯುಗಾದಿಯ ಬಗ್ಗೆ ಹಾಡಿದ್ದಾರೆ. ರೈತ ಬಾಂಧವರಿಗೆ ಈ ಹಬ್ಬದ ಸಮಯದಲ್ಲಿ ಕೃಷಿಕೆಲಸಕ್ಕೆ ಬಿಡುವಿರುತ್ತದೆ. ಈ ದಿನದವರೆಗೂ ಅವರು ಬೆಳೆದ ಬೇಳೆ-ಕಾಳುಗಳಿಂದ ಮನೆ-ಮನ ತುಂಬಿ ಸಂತಸದಿಂದಿರುತ್ತಾರೆ. ಈ ಸಂದರ್ಭದಲ್ಲೆ ಹೊಸ ಮಳೆಗಳು ಕೂಡಿಕೊಳ್ಳುತ್ತವೆ. ಅದಕ್ಕೆ ಬೇಸಾಯಗಾರರು ಹೊಲದಲ್ಲಿನ ಕೆಲಸ ನವೀಕರಿಸಿಕೊಳ್ಳುವ ಈ ದಿನವನ್ನು ಹೆಚ್ಚು ಬಳಸುತ್ತಾರೆ. ಚಾಂದ್ರಮಾನ ಕಾಲಗಣನೆಯ ಪ್ರಕಾರ ಮೇಷ ಸಂಕ್ರಮಣಕ್ಕೆ ಯುಗಾದಿ ಬರುತ್ತದೆ. ಇದನ್ನೇ `ವಿಷು’ `ಬಿಸು’ `ಪರ್ಬ’ ಎಂದೆಲ್ಲ ಕರೆಯುತ್ತಾರೆ. ಹಿಂದಿನ ಕಾಲದಲ್ಲಿ ಈ `ಬಿಸು’ ಪರ್ಬದ ದಿವಸ ಒಕ್ಕಲಿಗರು ಹಾಗೂ ಧನಿಕರಲ್ಲಿ ಉಳುವ ಭೂಮಿಯನ್ನು ಬಿಟ್ಟುಕೊಡುವ ಹಾಗೂ ನವೀಕರಿಸುವ ಪದ್ಧತಿಯಿತ್ತು. ಸಾಹುಕಾರನ ಸಾಲ ಸಂದಾಯ ಮಾಡಿ ರೈತ ಋಣಮುಕ್ತನಾಗುವ ಹೊಸ ವರ್ಷದ ಹಬ್ಬವಿದು. ಹೊಸ ವರ್ಷದ ಯುಗಾದಿಯಂದು ತಮ್ಮ ವ್ಯಾಪ್ತಿಯ ಭೂಮಿಯಲ್ಲಿ ಸ್ವಲ್ಪ ಭಾಗವನ್ನಾದರೂ ಉಳುಮೆ ಮಾಡುವ ವಾಡಿಕೆಯಿದೆ. ಯುಗಾದಿಯಂದು ಸಂಜೆ ಎಲ್ಲರೂ ಊರ ದೇವಾಲಯದಲ್ಲಿ ಸೇರಿ ಪಂಚಾಂಗಶ್ರವಣ ಮಾಡಿ, ಮುಂದಿನ ವರ್ಷದ ಮಳೆ-ಬೆಳೆ ಇತರ ಫಲಗಳನ್ನು ತಿಳಿಯುತ್ತಾರೆ. ಯುವಜನತೆ ಕ್ರೀಡೆ ಮತ್ತು ಸಾಂಸ್ಕೃತಿಕ ಉತ್ಸವಗಳಲ್ಲಿ ಭಾಗವಹಿಸುತ್ತ ಮನರಂಜನೆ ಒದಗಿಸುತ್ತಾರೆ. ಹಾಗಾದರೆ ಮನಸ್ಸನ್ನು ಕೆರಳಿಸುವ ಡಿಸೆಂಬರ್ ೩೧ರ ರಾತ್ರಿಯ ಹೊಸ ವರ್ಷಾಚರಣೆ ಉತ್ತಮವೋ, ಮನಸ್ಸನ್ನು ಅರಳಿಸುವ ಯುಗಾದಿಯಂದು ಹೊಸ ವರ್ಷಾಚರಣೆ ಉದಾತ್ತವೋ?
ವೈಜ್ಞಾನಿಕ ಕಾಲಗಣನೆ
ನಮ್ಮ ಪೂರ್ವಜರು ನಂಬಿದ ವರ್ತಮಾನಗಳು ೯. ಭಾರತೀಯರು ಒಂಭತ್ತು ಬಗೆಯ ಕಾಲಗಣನಾ ಪದ್ಧತಿಯನ್ನು ಖಗೋಳವಿಜ್ಞಾನದ ರೀತಿಯಲ್ಲಿ ಆವಿಷ್ಕರಿಸಿದ್ದರು. ಚಾಂದ್ರಮಾನ, ಸೌರಮಾನ, ಸಾವನಮಾನ, ಪಿತೃಮಾನ, ದೇವಮಾನ, ನಾಕ್ಷತ್ರಮಾನ, ಬಾರ್ಹಸ್ಪತ್ಯಮಾನ, ಪ್ರಾಜಾಪತ್ಯಮಾನ ಮತ್ತು ಬ್ರಾಹ್ಮಮಾನ. ಇವುಗಳ ಪೈಕಿ ಚಾಂದ್ರಮಾನ, ಸೌರಮಾನಗಳು ಮಾನವನ ದೈನಂದಿನ ವ್ಯವಹಾರಕ್ಕೆ ಒದಗಿಬರುತ್ತವೆ. ಪ್ರಾಜಾಪತ್ಯಮಾನ, ಬ್ರಾಹ್ಮಮಾನ ಇತ್ಯಾದಿಗಳು ಬ್ರಹ್ಮಾಂಡ, ಮನ್ವಂತರಗಳಿಗೆ ಸಂಬಂಧಪಟ್ಟವುಗಳಾಗಿದ್ದು ಖಗೋಳವಿಜ್ಞಾನಕ್ಕೆ ಉಪಯುಕ್ತವಾದವುಗಳಾಗಿವೆ. ೫೧೧೬ ವರ್ಷಗಳ ಹಿಂದೆ ನವಗ್ರಹಗಳು ಒಂದೇ ರೇಖೆಯಲ್ಲಿ ಬಂದಿದ್ದವು. ಕೋಟ್ಯಂತರ ವರ್ಷಕ್ಕೊಮ್ಮೆ ನವಗ್ರಹಗಳು ಒಂದೇ ರೇಖೆಗೆ ಬರುತ್ತವ. ೫೧೧೬ ವರ್ಷಗಳ ಹಿಂದೆ ಎಲ್ಲಾ ಗ್ರಹಗಳು ಒಂದೇ ರೇಖೆಗೆ ಬಂದ ದಿನವೇ ಕಲಿಯುಗ ಆರಂಭ ಆದದ್ದು. ಅಂದೇ ಶ್ರೀಕೃಷ್ಣನು ಲೋಕವನ್ನು ಬಿಟ್ಟು ಹೋದದ್ದು.
ಭಾರತೀಯ ಕಾಲಗಣನೆ ಅತ್ಯಂತ ವೈಜ್ಞಾನಿಕವಾದದ್ದು. ಕಲ್ಪ, ಮನ್ವಂತರ, ಚತುರ್ಯುಗ, ಯುಗ, ಬ್ರಹ್ಮನ ಆಯುಷ್ಯ ಮುಂತಾದ ಕಾಲಗಣನೆಯನ್ನು ಭಾರತೀಯ ಶಾಸ್ತ್ರಗಳಲ್ಲಿ ಕಾಣಬಹುದು. ಯುಗಗಳು ನಾಲ್ಕು: ಕೃತಯುಗ, ತ್ರೇತಾಯುಗ, ದ್ವಾಪರಯುಗ ಹಾಗೂ ಕಲಿಯುಗ ಎಂಬುದಾಗಿ. ಕಲಿಯುಗದ ಅವಧಿ ೪,೩೨,೦೦೦ ವರ್ಷಗಳು. ಇದಕ್ಕಿಂತ ಎರಡುಪಟ್ಟು ದ್ವಾಪರಯುಗವೂ, ಕಲಿಯುಗದ ಮೂರುಪಟ್ಟು ತ್ರೇತಾಯುಗವೂ ಹಾಗೂ ನಾಲ್ಕುಪಟ್ಟು ಕೃತಯುಗದ ಅವಧಿಯೂ ಆಗಿರುತ್ತದೆ. ಹೀಗೆ ನಾಲ್ಕು ಯುಗಗಳ ಅವಧಿ ೪೩,೨೦,೦೦೦ ವರ್ಷಗಳು. ೧,೦೦೦ ಚತುರ್ಯುಗ ಸೇರಿದರೆ ಒಂದು ಕಲ್ಪ. ಅಂದರೆ ೪೩೨ ಕೋಟಿ ವರ್ಷಕ್ಕೆ ಒಂದು ಕಲ್ಪ. ಇದು ಬ್ರಹ್ಮನ ಒಂದು ಹಗಲು. ಆತನ ಒಂದು ದಿನ ಅಂದರೆ ೮೬೪ ಕೋಟಿ ವರ್ಷಗಳು. ಆತನ ನೂರು ವರ್ಷ ಆಯುಷ್ಯ ಅಂದರೆ ೩,೧೧,೦೪,೦೦೦ ಕೋಟಿ ವರ್ಷ. ಅದರ ನಂತರ ಮಹಾಪ್ರಳಯ. ಈಗ ನಮ್ಮ ಭೂಮಿಯ ಆಯುಷ್ಯ ನೋಡೋಣ. ೧೦೦೦ ಚತುರ್ಯುಗಗಳು ಸೇರಿದರೆ ಒಂದು ಕಲ್ಪ ಆಗುತ್ತದೆ. ೭೧ ಚತುರ್ಯುಗಗಳು ಸೇರಿದರೆ ಒಂದು ಮನ್ವಂತರವಾಗುತ್ತದೆ. ಈಗ ೬ ಮನ್ವಂತರ ಮುಗಿದು ೭ನೇ ಮನ್ವಂತರ ನಡೆಯುತ್ತಾ ಇದೆ. ೭ನೇ ಮನ್ವಂತರದಲ್ಲಿ ೨೭ ಚತುರ್ಯುಗಗಳು ಮುಗಿದು ೨೮ನೇ ಚತುರ್ಯುಗದ ಕಲಿಯುಗದ ೫೧೧೬ನೇ ವರ್ಷದಲ್ಲಿ ಜೀವಿಸುತ್ತಿದ್ದೇವೆ. ಭಾರತೀಯ ಕಾಲಗಣನೆಯ ಪ್ರಕಾರ ಭೂಮಿಯ ಈಗಿನ ಆಯುಷ್ಯ ೧೯೮ ಕೋಟಿ ವರ್ಷ. ವಿಜ್ಞಾನಿಗಳ ಪ್ರಕಾರ ಭೂಮಿಯ ಆಯುಷ್ಯ ಎಷ್ಟು? ಭೂಮಿಯ ಬಗ್ಗೆ ತಿಳಿಸುತ್ತಾ ಪ್ರಖ್ಯಾತ ವಿಜ್ಞಾನಿ ಸರ್ ಜೇಮ್ಸ್ ಜೀನ್ಸ್ ಎಂಬ ವಿಜ್ಞಾನಿ ಭೂಮಿಯು ಹುಟ್ಟಿ ೨೦೦ ಕೋಟಿ ವರ್ಷವಾಗಿದೆಯೆಂದು ತಿಳಿಸಿದ್ದಾನೆ.
ಹೀಗೆ ಭಾರತೀಯ ಕಾಲಗಣನೆಗೂ ವೈಜ್ಞಾನಿಕ ಕಾಲಗಣನೆಗೂ ತುಂಬಾ ಸಾಮ್ಯತೆ ಇದೆ. ನಮ್ಮಲ್ಲಿ ಇನ್ನೂ ಕೆಲವು ಕಾಲಗಣನೆ ಪದ್ಧತಿಗಳು ಇವೆ. ವಿಕ್ರಮ ಶಕೆ, ಶಾಲಿವಾಹನ ಶಕೆ ಮುಂತಾದ ಪದ್ಧತಿಗಳು ಉತ್ತರ ಭಾರತದಲ್ಲಿ ರೂಢಿಯಲ್ಲಿವೆ. ಈ ದೇಶಕ್ಕೆ ವಿದೇಶೀಯರಾದ ಶಕರು, ಹೂಣರು ಆಕ್ರಮಣ ಮಾಡಿದಾಗ ಶಾಲಿವಾಹನ ಎಂಬ ರಾಜ ಮಣ್ಣಿನ ಗೊಂಬೆಗಳನ್ನು ಮಾಡಿ, ಅದರಲ್ಲಿ ಜೀವ ತುಂಬಿ, ಅವರನ್ನು ಸೈನಿಕರನ್ನಾಗಿ ಮಾಡಿ ಶಕರ ವಿರುದ್ಧ ಹೋರಾಟ ಮಾಡಿ ಜಯಗಳಿಸಿದ ಎಂಬುದಾಗಿ ಹೇಳುತ್ತಾರೆ. ಮಣ್ಣಿನ ಗೊಂಬೆ ಮಾಡಿ, ತದನಂತರ ಅದಕ್ಕೆ ಜೀವ ತುಂಬಿ ಹೋರಾಟ ಮಾಡಿದ ಎಂಬುದನ್ನು ಇಂದಿನ ವೈಜ್ಞಾನಿಕ ಯುಗದಲ್ಲಿ ಯಾರಾದರೂ ನಂಬುತ್ತಾರಾ? ಮಣ್ಣಿನ ಗೊಂಬೆಗೆ ಜೀವ ತುಂಬಿಸುವುದು ಎಂಬುದು ಒಂದು ಸಾಂಕೇತಿಕ ಛಾಯೆ. ಅದರ ನಿಜವಾದ ಒಳ ಅರ್ಥವೇನು? ನೈಜ ಮರ್ಮವೇನು?
ನಿಜ ಮರ್ಮ
ನಾವೆಲ್ಲರೂ ಒಂದು ರೀತಿಯಲ್ಲಿ ಮಣ್ಣಿನ ಗೊಂಬೆಗಳೇ. ಮಾನವನ ಶರೀರ ಪಂಚಮಹಾಭೂತಗಳಿಂದ ನಿರ್ಮಿತವಾದದ್ದು ಎಂಬುದಾಗಿ ನಮ್ಮ ಶಾಸ್ತ್ರ ಹೇಳುತ್ತದೆ. ಈ ಮಣ್ಣಿನಲ್ಲೆ ಹುಟ್ಟಿ, ಈ ಮಣ್ಣಿನಲ್ಲೆ ಹೊರಳಾಡಿ, ಈ ಮಣ್ಣಿನಲ್ಲೆ ಓಡಾಡಿ ಒಂದು ದಿನ ಈ ಮಣ್ಣಿನಲ್ಲೆ ಮಣ್ಣಾಗುವ ಮನುಷ್ಯ ಮಣ್ಣಿನ ಗೊಂಬೆಯಲ್ಲವೆ? ಮಣ್ಣಿನಿಂದಲೇ ಜನನ, ಮಣ್ಣಿನಲ್ಲೆ ಮರಣ. ಮಾತ್ರವಲ್ಲ, ಮನುಷ್ಯನ ಬದುಕಿಗೂ ಆಧಾರ ಈ ಮಣ್ಣೇ. ಈ ಮಣ್ಣಿಲ್ಲದಿದ್ದರೆ ಮನುಷ್ಯನ ಜೀವನಕ್ಕೆ ಆಧಾರವಾದ ಆಹಾರ ಉತ್ಪಾದನೆ ಸಾಧ್ಯವೆ?
ಒಬ್ಬ ಬೆಳೆಗಾರ ಎದ್ದು ಒಂದು ಅಂಗಡಿಗೆ ಹೋದ. ಅಂಗಡಿ ಮಾಲೀಕ ಅಂಗಡಿಯ ಬಾಗಿಲು ಆಗತಾನೆ ತೆರೆದು ದೇವರಿಗೆ ಕೈಮುಗಿದು ಕೂತಿದ್ದ ಮಾತ್ರ. ಬಂದವ ಅಂಗಡಿಯವನ ಹತ್ತಿರ ಒಂದು ರೂಪಾಯಿ ಕೊಟ್ಟು ಅಂಗಡಿಯಲ್ಲಿದ್ದ ಎಲ್ಲ ಸಾಮಾನುಗಳನ್ನು ಕೊಡು ಎಂದು ಕೇಳಿದ. ಆದರೆ ಆ ಅಂಗಡಿಯಲ್ಲಿ ಮಾರಾಟಕ್ಕಿದ್ದ ಯಾವ ವಸ್ತುವೂ ಒಂದು ರೂಪಾಯಿಗೆ ಸಿಗುವುದಲ್ಲ. ಅಂಗಡಿ ಮಾಲೀಕ ತುಂಬಾ ಯೋಚನೆಮಾಡಿ ಒಂದು ಮುಷ್ಟಿ ಮಣ್ಣನ್ನು ಆ ಗ್ರಾಹಕನಿಗೆ ಕೊಟ್ಟು ಹೇಳಿದ: ನೋಡು, ನೀನು ಬಯಸಿದಂತೆ ಈ ಒಂದು ಹಿಡಿ ಮಣ್ಣಲ್ಲಿ ಎಲ್ಲವೂ ಇದೆ. ಯಾಕೆಂದರೆ ಈ ಅಂಗಡಿಯಲ್ಲಿರುವ ಎಲ್ಲ ಸಾಮಾನುಗಳೂ ಕೂಡ ಮಣ್ಣಿನಿಂದಲೇ ಸೃಷ್ಟಿಯಾದದ್ದು. ನಿನ್ನ ಒಂದು ರೂಪಾಯಿಗೆ ಮಣ್ಣನ್ನು ತೆಗೆದುಕೊಂಡು ಹೋಗಿ ನಿನಗೆ ಬೇಕಾದುದನ್ನು ಪಡೆದುಕೋ. ಆಗ ಗ್ರಾಹಕನಿಗೆ ಮಣ್ಣಿನ ಮಹತ್ತ್ವ ಅರ್ಥವಾಯಿತು.
ಮಣ್ಣಿನಿಂದ ಹುಟ್ಟಿದ ನಾವೆಲ್ಲರೂ ನಿಜವಾದ ಮಣ್ಣಿನ ಗೊಂಬೆಗಳೇ. ಆದರೆ ಮಣ್ಣಿನ ಗೊಂಬೆಗೆ ಜೀವತುಂಬುವು ದೆಂದರೇನು? ಜಗತ್ತಿನಲ್ಲಿ ನಡೆದಾಡುವ ವ್ಯಕ್ತಿಗಳನ್ನು ನೋಡಿದರೆ ಎಲ್ಲರೂ ಮಣ್ಣಿನ ಗೊಂಬೆಗಳಂತೆ ಕಂಡುಬರುತ್ತಾರೆ. ಯಾರಲ್ಲಿಯೂ ಜೀವಂತಿಕೆಯಿಲ್ಲ, ಲವಲವಿಕೆ ಇಲ್ಲ. ಹೆಚ್ಚಿನವರಿಗೆ ಜೀವನದ ಉದ್ದೇಶವೇ ಗೊತ್ತಿಲ್ಲ. ಜೀವನದ ದಾರಿಯೂ ಗೊತ್ತಿಲ್ಲ. ಪ್ರತಿಯೊಬ್ಬನೂ ಹೊಟ್ಟೆಪಾಡಿಗಾಗಿ ಪಡಬಾರದ ಕಷ್ಟವನ್ನು ಪಡುತ್ತಾನೆ. ಜೀವನ ಹೋರಾಟದ ಜಂಜಾಟದಲ್ಲಿ ಆತ ಸ್ಪಂದನಶಕ್ತಿಯನ್ನೆ ಕಳೆದುಕೊಂಡಿದ್ದಾನೆ. ಇಂದಿನ ಮನುಷ್ಯ ಒಬ್ಬ ವ್ಯಕ್ತಿಯಾಗಿ ಬದುಕುತ್ತಾನೆಯೇ ವಿನಾ ಸಮಷ್ಟಿಯಾಗಿ ಬದುಕುವ ಬಗ್ಗೆ ಯೋಚಿಸುವುದೇ ಇಲ್ಲ. ಹೀಗೆ ಸಮಾಜದ ಸಮಸ್ಯೆಯ ಬಗ್ಗೆ, ದೇಶದ ತೊಂದರೆಯ ಬಗ್ಗೆ ಆತ ನಿರ್ಲಿಪ್ತನಾಗುತ್ತಿದ್ದಾನೆ; ಸಮಾಜ, ದೇಶದ ಬಗ್ಗೆ ಮಣ್ಣಿನ ಗೊಂಬೆಯಂತೆ ವರ್ತಿಸುತ್ತಾನೆ.
ಇಂತಹ ಮಣ್ಣಿನ ಗೊಂಬೆಯಲ್ಲಿ ಜೀವತುಂಬುವುದೆಂದರೆ ನಮ್ಮ ನಮ್ಮ ಸ್ವಭಾವಕ್ಕನುಗುಣವಾಗಿ ನಮ್ಮ ಜೀವನದ ಉದ್ದೇಶವನ್ನು ತಿಳಿದುಕೊಂಡು ಅದಕ್ಕೆ ತಕ್ಕಂತೆ ಬಾಳುವುದು. ಒಂದು ಧ್ಯೇಯಕ್ಕಾಗಿ, ಉದ್ದೇಶಕ್ಕಾಗಿ ಬದುಕಿದರೆ ನಮ್ಮ ಬಾಳು ಸಾರ್ಥಕ ಆಗುತ್ತದೆ. ನಮ್ಮ ಸಮಾಜ, ನಮ್ಮ ಪರಂಪರೆಯನ್ನು ತಿಳಿದುಕೊಂಡು ಅದರ ಉಳಿವು ಮತ್ತು ಬೆಳವಣಿಗೆಗೆ ಕಟಿಬದ್ಧರಾಗುವುದೇ ನಮ್ಮಲ್ಲಿ ಜೀವತುಂಬಿಸುವ ಕೆಲಸ. ಅಂದು ಶಾಲಿವಾಹನ ಮಾಡಿದಂತೆ ಇಂದು ಕೂಡ ಈ ದೇಶದ, ಧರ್ಮದ ಬಗ್ಗೆ ಅರಿವು ಉಂಟುಮಾಡಿ, ನಮ್ಮ ಸಂಸ್ಕೃತಿ, ಸಮಾಜದ ಬಗ್ಗೆ ಅಭಿಮಾನ ಉಂಟುಮಾಡುವ ಕೆಲಸ ಆಗಬೇಕಿದೆ. ಮನುಷ್ಯನನ್ನು ಕ್ರಿಯಾಶೀಲನನ್ನಾಗಿ, ಸಮಾಜಮುಖಿಯನ್ನಾಗಿ ಮಾಡಿ ಆತನಲ್ಲಿ ಜೀವತುಂಬಿಸುವ ಕೆಲಸ ಆಗಬೇಕಿದೆ. ರಾತ್ರಿಯೆಲ್ಲ ಕುಡಿದು ತೂರಾಡುವ ಹೊಸವರ್ಷದ ಆಚರಣೆಗಿಂತ ಉಂಡು, ಉಟ್ಟು ಸಂಭ್ರಮಿಸುವ ಯುಗಾದಿ ಹಬ್ಬದ ಆಚರಣೆ ಮನುಷ್ಯನಲ್ಲಿ ನವೋಲ್ಲಾಸವನ್ನು ತಂದುಕೊಡುತ್ತದೆ.
ಕ್ರಿಸ್ತ ವೈಭವೀಕರಣ
ಜಗತ್ತಿನಲ್ಲಿ ಬೇರೆ ಬೇರೆ ದೇಶಗಳಲ್ಲಿ ಬೇರೆ ಬೇರೆ ದಿನದಂದು ಹೊಸ ವರ್ಷ ಆಚರಣೆ ಮಾಡುತ್ತಾರೆ. ಬ್ಯಾಬಿಲೋನಿಯಾದಲ್ಲಿ ಮೇಷಸಂಕ್ರಾಂತಿ ಹತ್ತಿರದ ಅಮಾವಾಸ್ಯೆಯಂದು ಹೊಸ ವರ್ಷ ಆಚರಿಸಲಾಗುತ್ತಿತ್ತು. ಅಸ್ಸೀರಿಯಾದಲ್ಲಿ ತುಲಾಸಂಕ್ರಾಂತಿಯ ಸಮೀಪದ ಅಮಾವಾಸ್ಯೆ ದಿನದಂದು ಹೊಸ ವರ್ಷ ಪ್ರಾರಂಭವಾಗುತ್ತದೆ. ಈಜಿಪ್ಷಿಯನ್ನರಿಗೆ, ಪರ್ಷಿಯನ್ನರಿಗೆ ತುಲಾಸಂಕ್ರಾಂತಿಯಂದು, ಗ್ರೀಕರಿಗೆ ಮಕರಸಂಕ್ರಾಂತಿಯಂದು ಹೊಸ ವರ್ಷ ಆರಂಭವಾಗುತ್ತದೆ. ಮಹಮ್ಮದೀಯರು ಚಾಂದ್ರಮಾನ ಪದ್ಧತಿಯನ್ನು ಅನುಸರಿಸುತ್ತಾರೆ.
ಅದೇ ರೀತಿ ಕ್ರೈಸ್ತರಿಗೆ ಜನವರಿ ೧ರಂದು ಹೊಸ ವರ್ಷ ಆರಂಭವಾಗುತ್ತದೆ. ಜನವರಿ ೧ರಂದು ಹೊಸ ವರ್ಷ ಆಚರಣೆ ವೈಜ್ಞಾನಿಕವಾದುದಲ್ಲ. ಹಿಂದೆ ಅವರೂ ಮಾರ್ಚ್ ೧ರಂದು ಹೊಸ ವರ್ಷ ಆಚರಿಸುತ್ತಿದ್ದರು. ಆದರೆ ೧೩ನೇ ಪೋಪ್ ಆಗಿದ್ದ ಗ್ರೆಗರಿ ಎಂಬವನು ಯೋಚಿಸಿದ – ಯೇಸುಕ್ರಿಸ್ತ ಇಡೀ ಜಗತ್ತಿಗೆ ದೊಡ್ಡ ಮಹಾಪುರುಷ, ಆದ್ದರಿಂದ ಆತನ ಜನ್ಮದಿನದ ಆಧಾರದ ಮೇಲೆಯೇ ಹೊಸ ವರ್ಷ ಆರಂಭಿಸಬೇಕು ಎಂಬುದಾಗಿ. ಇದರಿಂದ ಪೋಪನ ಅನುಯಾಯಿಗಳು ಯೇಸುಕ್ರಿಸ್ತನ ಜನ್ಮದಿನವಾದ ಡಿಸಂಬರ್ ೨೫ ಮುಗಿದ ೬ ದಿನಗಳಲ್ಲಿ ಬರುವ ಜನವರಿ ೧ನ್ನು ಹೊಸ ವರ್ಷವನ್ನಾಗಿ ಆಚರಿಸಲು ಪ್ರಾರಂಭಿಸಿದರು. ಹೀಗೆ ಯೇಸುಕ್ರಿಸ್ತನನ್ನು ವೈಭವೀಕರಿಸುವುದಕ್ಕಾಗಿ ೧೫೮೨ರಿಂದ ಗ್ರೆಗೋರಿಯನ್ ಕ್ಯಾಲೆಂಡರ್ ಆಚರಣೆಗೆ ಬಂತು. ರೋಮನ್ ಕ್ಯಾಥೊಲಿಕ್ ರಾಷ್ಟ್ರಗಳೆಲ್ಲ ಜನವರಿ ಒಂದನ್ನೇ ವರ್ಷಾರಂಭವೆಂದು ಸ್ವೀಕಾರ ಮಾಡಿದುದರ ಫಲವಾಗಿ ಇಂದು ಪ್ರಪಂಚದ ಬಹುತೇಕ ಕಡೆ ಜನವರಿ ಒಂದರಂದು ಹೊಸ ವರ್ಷ ಆಚರಣೆಯಲ್ಲಿದೆ.
ಮೂರ್ಖರ ದಿನ!?
ಆದರೆ ಪಾಶ್ಚಾತ್ಯರಲ್ಲೂ ಕೆಲವರು ವಿಚಾರವಂತರಿದ್ದರು. ಅವರು: `ಮಾರ್ಚ್ ೧ರಂದು ಹೊಸ ವರ್ಷ ಆಚರಿಸುವುದು ಸೂಕ್ತವಾಗಿದೆ. ಅದನ್ನು ದಯವಿಟ್ಟು ಬದಲಾಯಿಸಬೇಡಿ’ ಎಂಬುದಾಗಿ ಮನವಿ ಮಾಡಿದರು. ಒಂದು ವೇಳೆ ಬದಲಾಯಿಸಲೇಬೇಕಾದರೆ ಭಾರತೀಯರ ಪದ್ಧತಿಯ ಪ್ರಕಾರ ಬದಲಾಯಿಸಬಹುದು. ಭಾರತೀಯರ ಹೊಸ ವರ್ಷವಾದ ಯುಗಾದಿಯಿಂದ ಇಡೀ ಪ್ರಕೃತಿಯೇ ಹೊಸತನದಿಂದ ಕಂಗೊಳಿಸುತ್ತದೆ. ಪಾಡ್ಯದ ದಿನದಂದು ಸೂರ್ಯನು ವಸಂತ ಸಂಪಾತದ ಮೇಲೆ ಬರುತ್ತಾನೆ ಮತ್ತು ವಸಂತಋತು ಪ್ರಾರಂಭ ಆಗುತ್ತದೆ. `ಎಲ್ಲಾ ಋತುಗಳಲ್ಲಿ ಕುಸುಮಾಕರಿ ವಸಂತಋತುವು ತನ್ನ ವಿಶೇಷ ಶಕ್ತಿಯಾಗಿದೆ’ ಎಂದು ಭಗವಂತನು ಭಗವದ್ಗೀತೆಯಲ್ಲಿ ಹೇಳಿದ್ದಾನೆ. ಈ ಸಮಯದಲ್ಲಿ ಸಮಶೀತೋಷ್ಣ, ಉತ್ಸಾಹದಾಯಕ ಮತ್ತು ಆಹ್ಲಾದದಾಯಕ ಹವಾಗುಣಗಳಿರುತ್ತವೆ. ಇಡೀ ಪ್ರಕೃತಿಯಲ್ಲಿ ಈಗ ಜೀವಂತಿಕೆ ಇದೆ, ಲವಲವಿಕೆ ಇದೆ. ಶಿಶಿರ ಋತುವಿನಲ್ಲಿ ಮರಗಳ ಎಲೆಗಳೆಲ್ಲ ಉದುರಿದರೆ, ಯುಗಾದಿಯ ಹೊತ್ತಿಗೆ ಮರಗಳಿಗೆ ಹೊಸ ಚಿಗುರು ಬರುತ್ತಿರುವುದರಿಂದ ವೃಕ್ಷ-ಬಳ್ಳಿಗಳು ಚೈತನ್ಯಮಯವಾಗಿ ಕಾಣುತ್ತವೆ. ಇಡೀ ಪ್ರಕೃತಿಯೇ ಹೊಸ ವರ್ಷವನ್ನು ಆಚರಿಸುವ ಸಂದರ್ಭ ಅಂದರೆ ಯುಗಾದಿ. ಆದ್ದರಿಂದ ಹೊಸ ವರ್ಷವನ್ನು ಏಪ್ರಿಲ್ನಲ್ಲೆ ಆಚರಿಸಿ ಎಂಬುದಾಗಿ ಪಾಶ್ಚಾತ್ಯ ಚಿಂತಕರು, ಬುದ್ಧಿಜೀವಿಗಳು ಹೇಳಿದ್ದಾರೆ. ಆಗ ಸಾಂಪ್ರದಾಯಿಕ ಕ್ರಿಶ್ಚಿಯನ್ನರು: ‘Those who are considering April as a new year, they all are fools” – `ಯಾರು ಏಪ್ರಿಲ್ ತಿಂಗಳನ್ನು ಹೊಸ ವರ್ಷವೆಂದು ಆಚರಿಸುತ್ತಾರೋ ಅವರೆಲ್ಲ ಮೂರ್ಖರು’ ಎಂಬುದಾಗಿ ಹೇಳಿದರು. ಆದ್ದರಿಂದ ಏಪ್ರಿಲ್ ಒಂದು ಮೂರ್ಖರ ದಿನ ಎಂಬುದಾಗಿ ಆಚರಣೆಗೆ ಬಂತು. ಹೀಗೆ ನಮ್ಮೆಲ್ಲರನ್ನೂ ಮೂರ್ಖರನ್ನಾಗಿ ಮಾಡಿದ ಏಪ್ರಿಲ್ ಒಂದನ್ನು `ಮೂರ್ಖರ ದಿನಾಚರಣೆ’ ಎಂದು ಆಚರಿಸಿ ನಾವು ನಿಜವಾದ ಮೂರ್ಖರು ಎಂದು ಜಗತ್ತಿಗೆ ತೋರಿಸಿಕೊಟ್ಟೆವು.
ನಾವು ಆತ್ಮವಿಸ್ಮೃತರಾಗಿದ್ದರ ಪರಿಣಾಮವಾಗಿ ಈ ದೇಶದ ಮೇಲೆ, ನಮ್ಮ ಧರ್ಮದ ಮೇಲೆ, ಸಂಸ್ಕೃತಿ, ಇತಿಹಾಸ, ಪರಂಪರೆ, ಸಂಪ್ರದಾಯಗಳ ಮೇಲೆ ಪಾಶ್ಚಾತ್ಯರ ಆಕ್ರಮಣ ನಡೆಯಿತು. ಆದರೆ ನಮಗೆ ಪಾಶ್ಚಾತ್ಯರ ಅನುಕರಣೆ ಮಾಡುವುದರಲ್ಲೆ ತೃಪ್ತಿ. ಅದರಲ್ಲೆ ಆನಂದ. ಇದಕ್ಕೆ ಹೊಸ ವರ್ಷದ ಆಚರಣೆಯೂ ಹೊರತಾಗಿಲ್ಲ.
ಸುಖ-ದುಃಖ ಸಮ್ಮಿಶ್ರಣ
ಯುಗಾದಿ ಹಬ್ಬದಲ್ಲಿ ಬೇವು-ಬೆಲ್ಲ ತಿನ್ನುವ ಸಂಪ್ರದಾಯ ಇದೆ. ಜೀವನಪೂರ್ತಿ ಯಾರಿಗೂ ಸುಖ ಎಂಬುದಿಲ್ಲ; ಅದೇ ರೀತಿ ಜೀವನಪೂರ್ತಿ ದುಃಖ ಎಂಬುದೂ ಇಲ್ಲ. ಜೀವನವೆಂದರೆ ಪ್ರಕೃತಿಯ ಕತ್ತಲು-ಬೆಳಕಿನ ಚೆಲ್ಲಾಟದಂತೆ, ಸುಖ-ದುಃಖಗಳ ಸಮ್ಮಿಶ್ರಣವಾಗಿದೆ. ಇಂತಹ ಸುಖ-ದುಃಖಗಳ ಜೀವನದಲ್ಲಿ ಮಾನವನು ಧೈರ್ಯ, ಸ್ಥೈರ್ಯ ಪಡೆದು ಆನಂದದಿಂದ ದಾಪುಗಾಲು ಹಾಕಬೇಕೆಂಬುದೇ ಯುಗಾದಿಯ ಸಂದೇಶ. ಮಾನವನು ಸಂಯಮಿಯೂ, ಸಮದರ್ಶಿಯೂ, ಸ್ಥಿತಪ್ರಜ್ಞನೂ ಆಗಬೇಕೆಂಬುದು ಈ ಬೇವು-ಬೆಲ್ಲದ ಸೇವನೆಯ ಹಿಂದಿರುವ ಸತ್ಯ. ಇದು ಸುಖ-ದುಃಖಗಳು ಮಾತ್ರವಲ್ಲದೆ ವೈದ್ಯಕೀಯ ಗುಣದ ವಿವರಣೆಯನ್ನೂ ಒಳಗೊಂಡಿದೆ. ಬೇವಿನ ಎಲೆಗಳನ್ನು ಎರೆದುಕೊಂಡು ಹಾಗೂ ಸೇವಿಸುವುದರಿಂದ ಅನಿಷ್ಟಗಳು ನಾಶಗೊಂಡು ಮಾನವನು ವಜ್ರದೇಹಿಯಾಗುತ್ತಾನೆ. ಸಂಪತ್ತು ಹೆಚ್ಚಾಗಿ, ಆಯುಷ್ಯ ವೃದ್ಧಿಗೊಳ್ಳುತ್ತದೆಂದು ಆಯುರ್ವೇದ ತಿಳಿಸುತ್ತದೆ. ಬೇವು ಅಧರಕ್ಕೆ ಕಹಿಯಾದರೂ, ಉದರಕ್ಕೆ ಸಿಹಿಯೇ ಆಗಿದೆ. ಕಹಿಯನ್ನು ನುಂಗಿ ಸಿಹಿ ಆಲೋಚನೆಯುಳ್ಳವರಾಗಬೇಕೆಂಬ ಗೂಢಾರ್ಥವನ್ನು ಬೇವು-ಬೆಲ್ಲ ನೀಡುತ್ತದೆ. ಹಿಂದಿನ ಕ್ಲೇಶ-ಕಷ್ಟಗಳನ್ನು ಮರೆತು ಸುಖ-ಸಂತೋಷ ಅನುಭವಿಸಲಿ ಎಂಬುದೇ ಹೊಸ ವರ್ಷದ ಆಚರಣೆಯ ಉದ್ದೇಶ. ಶುಭದ ನವೋದಯವೇ ಪ್ರಕೃತಿಲಾಸ್ಯ. ಅಲ್ಲಿ ನಿರಾಸೆಗೆ ಎಡೆ ಇಲ್ಲ. ಅಂತೆಯೇ ಹೊಸ ಚೈತನ್ಯ, ಹುರುಪು ಪಡೆಯಬೇಕೆಂಬ, ರಾಗ-ದ್ವೇಷಗಳ ದಮನ ಮಾಡಬೇಕೆಂಬ ನಿತ್ಯನೂತನ ವಾರ್ಷಿಕ ಸಂದೇಶವನ್ನು ಯುಗಾದಿ ಸಾರುತ್ತದೆ.
ಹೀಗೆ ಪ್ರಕೃತಿಯನ್ನು ಆರಾಧಿಸುವ, ಜೀವನವನ್ನು ಬೆಳಗಿಸುವ, ಮನಸ್ಸನ್ನು ಅರಳಿಸುವ ಯುಗಾದಿಯನ್ನು ಹೊಸ ವರ್ಷವೆಂದು ಆಚರಿಸುವುದು ಶ್ರೇಷ್ಠವೋ? ತಿಂದು, ಕುಡಿದು, ಕುಪ್ಪಳಿಸುವ, ಮನಸ್ಸನ್ನು ಕೆರಳಿಸುವ ಡಿಸೆಂಬರ್ ೩೧ರ ಮಧ್ಯರಾತ್ರಿಯ ಆಚರಣೆ ಸೂಕ್ತವೋ? ಹೊಸ ವರ್ಷವನ್ನು ಸರಿಯಾಗಿ ಅರ್ಥೈಸಿಕೊಂಡು ಆಚರಿಸೋಣ.?