ಪರೋಪಕಾರಶೀಲತ್ವಂ ಪರದುಃಖಾಸಹಿಷ್ಣುತಾ |
ದಯಾಪರತ್ವಂ ದಾಕ್ಷಿಣ್ಯಂ ಸತಾಂ ಸ್ವಾಭಾವಿಕಾ ಗುಣಾಃ ||
“ಸಂದರ್ಭ ಕಂಡಾಗ ತಡಮಾಡದೆ ಇನ್ನೊಬ್ಬರಿಗೆ ಸಹಾಯ ಮಾಡುವುದು, ಬೇರೆಯವರು ದುಃಖಕ್ಕೊಳಗಾಗಿರುವುದು ಕಂಡರೆ ಉದಾಸೀನಮಾಡದೆ ಅವರಿಗೆ ನೆರವಾಗುವುದು, ದಯೆ ತೋರುವುದು, ಇತರರನ್ನು ತನ್ನವರೆಂದೇ ತಕ್ಕೈಸುವುದು – ಇವು ಸಜ್ಜನರ ಸ್ವಭಾವಗತ ಗುಣಗಳು.”
ಸತ್ಪ್ರೇರಣೆಯಿಂದ ನೆರವಿಗೆ ಧಾವಿಸುವುದು ಸಜ್ಜನರ ಸ್ವಭಾವ
ಬೇರೆಯವರು ಒಮ್ಮೆ ನಮ್ಮ ನೆರವಿಗೆ ಬಂದಿದ್ದರೆ ಅದನ್ನು ನೆನಪಿನಲ್ಲಿಟ್ಟು ಆವಶ್ಯಕತೆ ಕಂಡಾಗ ಅವರಿಗೆ ನಾವು ನೆರವಾಗುವುದು, ಇತರರು ಕೋರಿದಾಗ ಅವರಿಗೆ ಸಹಾಯ ಮಾಡುವುದು, ನಾವು ಅನುಕೂಲಸ್ಥಿತಿಯಲ್ಲಿದ್ದಾಗ ಅನ್ಯರಲ್ಲಿ ಔದಾರ್ಯ ತೋರುವುದು – ಇವೆಲ್ಲ ಅಪೇಕ್ಷಣೀಯ ಗುಣಗಳೆಂಬುದು ಅಸಂದಿಗ್ಧ. ಆದರೆ ಈ ರೀತಿಯ ವರ್ತನೆಯ ಬುಡದಲ್ಲಿ ಸ್ವಕೇಂದ್ರಿತ ಲೆಕ್ಕಾಚಾರ ಇರುತ್ತದೆ. ಇಂತಹ ಅಂದಾಜುಗಳಾವುದೂ ಇಲ್ಲದೆ ಸಹಜವರ್ತನೆಯೆಂಬಂತೆ ತಾವಾಗಿ ಸತ್ಪ್ರೇರಣೆಯಿಂದ ಬೇರೆಯವರ ನೆರವಿಗೆ ಧಾವಿಸುವುದು ಸಜ್ಜನರ ಸ್ವಭಾವ. ಇದು ಹೆಚ್ಚು ಉದಾತ್ತವೂ ಪ್ರಶಂಸ್ಯವೂ ಆದದ್ದು, ಮತ್ತು ಜೀವನವನ್ನು ಮಾಧುರ್ಯ ಮಯಗೊಳಿಸುವುದು.
ಈ ಆಶಯವನ್ನು ಸ್ಛುಟಗೊಳಿಸುವ ದೃಷ್ಟಾಂತಗಳು ವಿಪುಲವಾಗಿವೆ. ಅಂತಹ ಒಂದು ದಾರ್ಶನಿಕ ಕಥೆ ಇದು.
ಬೀದಿಯಲ್ಲಿ ಚಳಿಗೆ ನಡುಗುತ್ತ ಮೈಮೇಲೆ ಸರಿಯಾದ ಬಟ್ಟೆ ಇಲ್ಲದೆ ಹೋಗುತ್ತಿದ್ದ ಭಿಕ್ಷುಕನೊಬ್ಬನಿಗೆ ಅಲ್ಲಿಯ ಬಂಗಲೆಯಲ್ಲಿದ್ದ ಸಾಹುಕಾರ ತನ್ನ ಮನೆಯಲ್ಲಿ ಹೇರಳವಾಗಿದ್ದ ಕಂಬಳಿಗಳಲ್ಲೊಂದನ್ನು ದಾನ ಮಾಡಿದ. ಕಾಲಾಂತರದಲ್ಲಿ ಚಿತ್ರಗುಪ್ತನ ಆಸ್ಥಾನದಲ್ಲಿ ಪಾಪಪುಣ್ಯಗಳ ಅಳತೆ ನಡೆದಾಗ ಚಿತ್ರಗುಪ್ತನು ಸಾಹುಕಾರನಿಗೆ ಎರಡು ತಿಂಗಳ ಮತ್ತು ಭಿಕ್ಷುಕನಿಗೆ ಐವತ್ತು ವರ್ಷಗಳ ಸ್ವರ್ಗವಾಸವನ್ನು ವಿಧಿಸಿದ. ಸಾಹುಕಾರ ವಿಸ್ಮಿತನಾಗಿ ಕೇಳಿದ: ಇವನ ಸ್ಥಿತಿಯಲ್ಲಿ ಇವನು ಅದೆಷ್ಟು ಸತ್ಕಾರ್ಯಗಳನ್ನು ಮಾಡಿರಬಹುದು? ನಾನಾದರೋ ವರ್ಷಗಳುದ್ದಕ್ಕೂ ದಾನಧರ್ಮ ಮಾಡಿದ್ದೇನೆ. ಚಿತ್ರಗುಪ್ತ ಹೇಳಿದ: ಇವನು ಒಂದು ಚಳಿಗಾಲ ರಾತ್ರಿ ಒಬ್ಬ ವೃದ್ಧನಿಗೆ ಕಂಬಳಿಯೊಂದನ್ನು ದಾನ ಮಾಡಿದ. ಸಾಹುಕಾರ ವ್ಯಗ್ರನಾಗಿ ಅವನಲ್ಲಿ ಕಂಬಳಿ ಎಲ್ಲಿಂದ ಬರಬೇಕು! ಅದು ನಾನು ಅವನಿಗೆ ದಾನ ಮಾಡಿದ್ದುದಷ್ಟೆ ಎಂದ. ಚಿತ್ರಗುಪ್ತ ಹೇಳಿದ: ನೀನು ನಿನ್ನ ಜೀವಮಾನವೆಲ್ಲ ದಾನವಾಗಿ ಕೊಟ್ಟದ್ದು ನಿನ್ನಲ್ಲಿ ಹೆಚ್ಚುವರಿಯಾಗಿ ಶೇಖರಗೊಂಡಿದ್ದುದನ್ನೇ. ಆದರೆ ಈ ಭಿಕ್ಷುಕನು ತನಗೆ ಆಗುತ್ತಿದ್ದ ಕ್ಲೇಶವನ್ನು ಲೆಕ್ಕಿಸದೆ ಆ ವೃದ್ಧನಿಗೆ ಚಳಿಯ ಬಾಧೆಯಾಗದಿರಲೆಂದು ಅನುಕಂಪದಿಂದ ತನಗೆ ಆವಶ್ಯಕತೆಯಿದ್ದ ಕಂಬಳಿಯನ್ನು ಒಡನೆಯೆ ದಾನ ಮಾಡಿದ. ಈ ಕಾರಣದಿಂದ ಭಿಕ್ಷುಕನ ಲೆಕ್ಕದಲ್ಲಿ ಹೆಚ್ಚು ಪುಣ್ಯ ಜಮೆಯಾಗಿದೆ.