ಕಳೆದ ಜೂನ್ ೧೫ಕ್ಕೆ ಇಂಗ್ಲೆಂಡಿನಲ್ಲಿ `ಮ್ಯಾಗ್ನಾಕಾರ್ಟಾ’ ಒಡಂಬಡಿಕೆ ಅಮಲಿಗೆ ಬಂದು ೮೦೦ ವರ್ಷ ಕಳೆಯಿತು. ಹಲವರ ನಿಯಂತೃತ್ವಕ್ಕೆ ಬದಲಾಗಿ ಸಮಸ್ತ ಪ್ರಜೆಗಳಲ್ಲಿ ರಾಜ್ಯಾಂಗಾಧಿಕಾರವು ಅಧಿಷ್ಠಿತವಾಗಿರಬೇಕು – ಎಂಬ ಇದೀಗ ಜಗತ್ತಿನೆಲ್ಲೆಡೆ ತಾತ್ತ್ವಿಕವಾಗಿಯಂತೂ ಸ್ವೀಕೃತವಾಗಿರುವ ಪ್ರಣಾಳಿಕೆಯು ಮೊತ್ತಮೊದಲಿಗೆ ಗ್ರಂಥಸ್ಥವಾದುದು `ಮ್ಯಾಗ್ನಾಕಾರ್ಟಾ’ದೊಡನೆ – ಎಂಬುದು ಐತಿಹಾಸಿಕ ಸಂಗತಿ. ಕ್ರಿ.ಶ. ೧೨೧೫ರಲ್ಲಿ ಆಗಿನ ಇಂಗ್ಲೆಂಡಿನ ರಾಜ ಜಾನ್ ಮೇಲೆ ಪ್ರಜೆಗಳು ಒತ್ತಡ ತಂದು ಅಲ್ಲಿಯವರೆಗೆ ನಿರಂಕುಶವಾಗಿ ನಡೆದಿದ್ದ ರಾಜಾಧಿಕಾರವು ಸ್ವೀಕಾರ್‍ಯವಲ್ಲವೆಂಬ ಮತ್ತು ರಾಜಪದವಿಯಲ್ಲಿರುವವನೂ ಎಲ್ಲರಂತೆ ವ್ಯವಸ್ಥಾನಿಬದ್ಧನಾಗಿರತಕ್ಕದ್ದೆಂಬ ಒಡಂಬಡಿಕೆ ಅಂಕಿತಗೊಂಡಿತು. ಈಚಿನ ಕಾಲದಲ್ಲಿ ಪ್ರಜಾಪ್ರಭುತ್ವವೆನಿಸಿರುವ ರಾಜ್ಯವ್ಯವಸ್ಥೆಯ ಅನ್ವಯದ ಉದ್ಗಮವಾದುದು ಮ್ಯಾಗ್ನಾಕಾರ್ಟಾದೊಡನೆ ಎನ್ನಲು ಅಭ್ಯಂತರವಿರದು. ಹೀಗೆ ಅದು ಆಧುನಿಕ ರಾಜ್ಯಶಾಸ್ತ್ರ ಕಲ್ಪನೆಯ ಆವಿಷ್ಕರಣಕ್ಕೆ ಒಂದು ನಿರ್ಣಾಯಕ ತಿರುವನ್ನಿತ್ತ ಘಟನೆಯೆಂದು ಪರಿಗಣಿತವಾಗಿದೆ. (ಪ್ರಜಾಧಿಕಾರದ ಸೂತ್ರೀಕರಣವು ಮ್ಯಾಗ್ನಾಕಾರ್ಟಾದ ಒಂದು ಉಪ-ಉತ್ಪನ್ನ ಎಂದೂ ಭಾವಿಸಿದರೆ ತಪ್ಪಾಗದು; ಆ ಒಡಂಬಡಿಕೆಯಲ್ಲಿ ಬೇರೆಬೇರೆ ಅಂಶಗಳೆಲ್ಲ ಇದ್ದವು.)
ಆ ಐತಿಹಾಸಿಕ ಘಟನೆಯ ೮೦೦ನೇ ವರ್ಷಾಚರಣೆಯೂ ಭಾರತದೊಳಗಡೆ ಇಂದಿರಾಗಾಂಧಿ-ನಿಯಂತ್ರಿತ ಕಾಂಗ್ರೆಸ್ಸಿನಿಂದ ಪ್ರಜಾಪ್ರಭುತ್ವಹರಣವಾದುದರ (ಜೂನ್ ೧೯೭೫) ೪೦ನೇ ವರ್ಷದ ಸ್ಮರಣೆಯೂ ಒಟ್ಟಿಗೇ ಒದಗಿಬಂದಿರುವುದನ್ನು ಗಮನಿಸಬಹುದು. ಗ್ರಾಂಥಿಕ ಸ್ತರದಲ್ಲಿ ಪ್ರಜಾಧಿಕಾರಪಾರಮ್ಯವು ಅಂಗೀಕೃತವಾಗಿದ್ದರೂ ವ್ಯಾವಹಾರಿಕ ಸ್ತರದಲ್ಲಿ ಬಹುಮಟ್ಟಿಗೆ ಬಲಿಷ್ಠ ವರ್ಗಗಳ ನಿಯಂತೃತ್ವವೇ ನಡೆದಿದೆಯೆಂಬುದನ್ನು ಅಲ್ಲಗಳೆಯಲಾಗದು. ತತ್ತ್ವಶಃ ಸ್ವೀಕೃತವೇ ಆಗಿದ್ದರೂ ಸ್ವಾಧಿಕಾರವನ್ನು ಪ್ರಜೆಗಳು ಅತ್ಯಂತ ಶ್ರಮದಿಂದ ಸಾಧಿಸಿಕೊಳ್ಳಬೇಕಾಗಿದೆ – ಎಂಬುದು ವಾಸ್ತವ. ಬಲಿಷ್ಠರ ಪ್ರಭಾವವನ್ನೂ ಆಡಳಿತವರ್ಗದ ಯಾಂತ್ರಿಕತೆಯನ್ನೂ ರಾಜಕೀಯ ಪಕ್ಷಗಳ ಮೇಲಾಟಗಳನ್ನೂ `ಆಬ್ಸ್ಟೆಕಲ್ ರೇಸ್’ನಂತೆ ದಾಟಿ ಹಕ್ಕುಗಳು ಪ್ರಜೆಗಳವರೆಗೆ ಜಿನುಗುವುದು ಸುಲಭವಲ್ಲ. ಇದರೊಡಗೂಡಿ ಆನುವಂಶಿಕ ವಾರಸತ್ವ ಮೊದಲಾದ ವಿಕೃತಿಗಳೂ ಉಂಟು. ಇದರಿಂದಾಗಿ ನಮ್ಮ ದೇಶಕ್ಕೆ ರಾಜಕೀಯ ಸ್ವಾತಂತ್ರ್ಯ ಲಭಿಸಿ ೬೮ ವರ್ಷಗಳು ಸಂದಿದ್ದರೂ, ನಮ್ಮದು ಪ್ರಜಾಪ್ರಭುತ್ವವೆಂದು ಸಂವಿಧಾನಿಕವಾಗಿ ಘೋಷಿತವಾಗಿದ್ದರೂ, ಅಧಿಕಾರಕೇಂದ್ರೀಕರಣ ಪ್ರವೃತ್ತಿಯೇ ಪ್ರಮುಖವಾಗಿ ದೃಶ್ಯಮಾನವಾಗಿದೆ. ಈ ಸ್ಥಿತಿಗೆ ಸ್ವಾತಂತ್ರ್ಯಪೂರ್ವದ ವಿದೇಶೀ ಪ್ರಭುತ್ವದ ರೀತಿನೀತಿಗಳ ಮತ್ತು ಮಾನಸಿಕತೆಯ ಮುಂದುವರಿಕೆಯೂ ಒಂದಷ್ಟುಮಟ್ಟಿಗೆ ಕಾರಣವಿದ್ದೀತು. ಜಯಲಲಿತಾ, ಸಲ್ಮಾನ್‌ಖಾನ್ – ಇಬ್ಬರಿಗೂ ಕ್ಷಣಗಳಲ್ಲಿ ಜಾಮೀನು ದೊರೆತದ್ದು ಜಾಮೀನಿನ ನೀಡಿಕೆಯೂ ಆಪಾದಿತರ ವ್ಯಕ್ತಿವರ್ಚಸ್ಸಿಗೆ ಅನುಗುಣವಾಗಿರುತ್ತದೆಂಬ ಸ್ಥಿತಿಯನ್ನುಂಟುಮಾಡಿದುದನ್ನು ನ್ಯಾಯಪಾರಮ್ಯದ ನಿದರ್ಶನವೆನ್ನಲಾಗದು. ನ್ಯಾಯವಿತರಣೆಯ ವಿಕೇಂದ್ರೀಕರಣ ಮೊದಲಾದ ಕ್ಲಿಷ್ಟವಲ್ಲದ ಸುಧಾರಣೆಗಳೂ ಅನ್ವಿತವಾಗಿಲ್ಲದಿರುವುದು ನಾವು ನೈಜ ಪ್ರಜಾಧಿಕಾರ ಸ್ಥಾಪನೆಯ ದಿಕ್ಕಿನಲ್ಲಿ ಎಷ್ಟುದೂರ ಕ್ರಮಿಸಬೇಕಾಗಿದೆ ಎಂಬುದನ್ನು ಸೂಚಿಸುತ್ತದೆ.