`ಗಾರ್ಡನ್ ಸಿಟಿ’, `ಸೈಬರ್ ಸಿಟಿ’ ಮೊದಲಾದ ಹೆಸರುಗಳನ್ನು ಹೊಂದಿರುವ ಕಲ್ಯಾಣನಗರಿ ಬೆಂಗಳೂರು ಇದೀಗ `ಡಿವೋರ್ಸ್ ಸಿಟಿ’ (ವಿವಾಹವಿಚ್ಛೇದಗಳ ನಗರ) ಎಂಬ ಬಿರುದಿಗೂ ಅರ್ಹವಾಗುತ್ತಿದೆಯೆ? ದಿನೇ ದಿನೇ ಹೆಚ್ಚುತ್ತಿರುವ ವಿವಾಹವಿಚ್ಛೇದಗಳ ಪ್ರಮುಖ ಮಹಾನಗರಗಳಲ್ಲಿ ರಾಷ್ಟ್ರರಾಜಧಾನಿ ದೆಹಲಿಗೆ ದ್ವಿತೀಯ ಸ್ಥಾನದಲ್ಲಿರುವವು ಹೈದರಾಬಾದ್ ಮತ್ತು ಬೆಂಗಳೂರು – ಎಂದು ಸಮೀಕ್ಷೆಗಳು ತಿಳಿಸಿವೆ. ಸಮೃದ್ಧಿ ಮತ್ತು ಆಧುನಿಕತೆಗಳ ತುತ್ತತುದಿಯಲ್ಲಿ ಇರುವವೆನಿಸಿರುವ ಈ ಪಟ್ಟಣಗಳಲ್ಲಿ ಪ್ರತಿದಿನ ಸರಾಸರಿ ಸುಮಾರು ಮೂವತ್ತು ವಿಚ್ಛೇದ ಅರ್ಜಿಗಳ ಸಲ್ಲಿಕೆಯಾಗುತ್ತಿದೆ ಎನ್ನಲಾಗಿದೆ. ಬೆಂಗಳೂರಿನ ನ್ಯಾಯಾಲಯಗಳಲ್ಲಿ ಸರಾಸರಿ ಪ್ರತಿದಿನ ಕನಿಷ್ಠ ಸುಮಾರು ಇಪ್ಪತ್ತು ಅರ್ಜಿಗಳನ್ನು ಸಲ್ಲಿಸಲಾಗುತ್ತಿದೆ. ವಿಚ್ಛೇದಗಳ `ಡಿಮ್ಯಾಂಡ್’ ಶ್ರೇಣಿಯಲ್ಲಿ ಎರಡನೇ ಸ್ಥಾನದ `ಗೌರವ’ ಪಡೆದಿರುವ ಬೆಂಗಳೂರಿನಲ್ಲಿ ಮೂರು `ಕುಟುಂಬ ನ್ಯಾಯಾಲಯಗಳು’ ಇವೆ. ವಿಚ್ಛೇದ ಅರ್ಜಿಗಳ ಒತ್ತಡ ಎಷ್ಟು ಹೆಚ್ಚಾಗಿದೆಯೆಂದರೆ ಕುಟುಂಬ ನ್ಯಾಯಾಲಯಗಳು ಶನಿವಾರ-ಭಾನುವಾರಗಳಂದೂ ಕೆಲಸ ಮಾಡಬೇಕಾದ ಪರಿಸ್ಥಿತಿಯುಂಟಾಗಿದೆ. ಕಳೆದ ಹತ್ತು ವರ್ಷಗಳ ಅವಧಿಯಲ್ಲಿ ವಿಚ್ಛೇದ ಬಯಸುವವರ ಸಂಖ್ಯೆ ದ್ವಿಗುಣಗೊಂಡಿದೆಯೆಂದು ಸಮೀಕ್ಷೆಗಳು ತಿಳಿಸಿವೆ. ಪ್ರತಿ ಒಂದು ಸಾವಿರ ವಿವಾಹಗಳ ಪೈಕಿ ೧೩ ವಿವಾಹಗಳು ವಿಫಲಗೊಳ್ಳುತ್ತಿವೆ ಎಂದು ಅಂದಾಜು ಮಾಡಲಾಗಿದೆ.
ಇನ್ನೊಂದು ವಿವರವೂ ಗಮನ ಸೆಳೆಯುತ್ತದೆ. ವಿಚ್ಛೇದಕ್ಕಾಗಿ ಅರ್ಜಿ ಸಲ್ಲಿಸುತ್ತಿರುವವರಲ್ಲಿ ಶೇ. ೮೦ರಷ್ಟು ಜನ ೨೫ ರಿಂದ ೩೯ ವರ್ಷ ವಯಸ್ಸಿನವರು. ಇವರಲ್ಲಿ ಶೇ. ೭೫ರಷ್ಟು ಜನ ಸಾಫ್ಟ್ವೇರ್ ಮತ್ತು ಫಿನಾನ್ಸ್ ಕಂಪೆನಿಗಳಲ್ಲಿ ಉದ್ಯೋಗಸ್ಥರಾಗಿರುವವರು.
ಕಳೆದ ಮೂರು ವರ್ಷಗಳಲ್ಲಿ ಬೆಂಗಳೂರು ನಗರವೊಂದರಲ್ಲಿಯೆ ಎಷ್ಟು ವಿವಾಹವಿಚ್ಛೇದ ಅರ್ಜಿಗಳು ನ್ಯಾಯಾಲಯಗಳಲ್ಲಿ ದಾಖಲೆಯಾಗಿವೆಯೆಂದು ಗಮನಿಸಿದರೆ ಆತಂಕವಾಗದಿರದು.
ವರ್ಷ | ದಾಖಲೆಯಾದ ವಿಚ್ಛೇದ ಅರ್ಜಿಗಳು |
---|---|
೨೦೧೨ | ೪೬೪೯ |
೨೦೧೩ | ೫೨೭೮ |
೨೦೧೪ | ೫೫೧೩ |
೨೦೧೫ (ಏಪ್ರಿಲ್ವರೆಗೆ) | ೨೦೫೭ |
ವಿಚ್ಛೇದಕ್ಕೆ ಮುಂದಾಗುತ್ತಿರುವವರಲ್ಲಿ ಅಧಿಕಮಂದಿ ಮಧ್ಯಮವರ್ಗಗಳಿಂದ ಬಂದವರು. ಗಂಡ, ಹೆಂಡತಿ – ಇಬ್ಬರೂ ಉದ್ಯೋಗಸ್ಥರಾಗಿರುವ ಜೋಡಿಗಳಿಂದ ಅತ್ಯಧಿಕ ಪ್ರಮಾಣದ ವಿಚ್ಛೇದ ಅರ್ಜಿಗಳು ದಾಖಲೆಯಾಗುತ್ತಿವೆ. `ಮ್ಯಾರೇಜ್ ಬ್ಯೂರೋ’ಗಳ ಮೂಲಕ ಏರ್ಪಟ್ಟ ವಿವಾಹಗಳದೇ ವಿಫಲತೆಯಲ್ಲಿ ಅಧಿಕಾಂಶ – ಎಂದು ನ್ಯಾಯವಾದಿಗಳ ಅಭಿಮತವಿದೆ. ಹಾಗೆಂದು ತಾಯಿ-ತಂದೆ ಏರ್ಪಡಿಸಿದ ವಿವಾಹಗಳೆಲ್ಲ ಸಫಲಗೊಳ್ಳುತ್ತಿವೆಯೆಂದೂ ಹೇಳಲಾಗದು. ವಿಚ್ಛೇದವನ್ನು ಬಯಸುವವರಲ್ಲಿ ಬಹುತೇಕ ಎಲ್ಲರೂ ಆರ್ಥಿಕವಾಗಿ ಸಂಪನ್ನರು, ಸಮೃದ್ಧವಾಗಿ ಗಳಿಸುತ್ತಿರುವವರು.
ಈ ಸನ್ನಿವೇಶ ಏಕೆ ಏರ್ಪಟ್ಟಿದೆ ಎಂಬುದು ಚಿಂತಿಸಬೇಕಾದ ವಿಷಯ. ಮೇಲ್ನೋಟಕ್ಕೇ ತೋರುವುದೆಂದರೆ ನವಶ್ರೀಮಂತ ಯುವಪೀಳಿಗೆಯವರು ವಿವಾಹವೆಂಬ ಸಂಸ್ಥೆಯನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲವೆಂಬುದು. `ಕುದುರ’ದಿದ್ದರೆ ವಿಚ್ಛೇದ ಮಾಡಿಕೊಂಡರಾಯಿತು – ಎಂಬ ಮನೋವೃತ್ತಿಯಿಂದಲೇ ಯುವಕ-ಯುವತಿಯರು ವಿವಾಹವಾಗುತ್ತಿದ್ದಾರೆಯೆ?
ವಿಚ್ಛೇದದ ಬಯಕೆಯನ್ನು ಪ್ರೇರಿಸುತ್ತಿರುವ ಸನ್ನಿವೇಶಗಳನ್ನು ಪರಿಶೀಲಿಸಿದರೆ ಎಲ್ಲರ ಜೀವನದಲ್ಲಿಯೂ ಹೊಂದಾಣಿಕೆಯ ಸ್ವಭಾವವು ಒಂದು ಮುಖ್ಯ ಮೌಲ್ಯ ಎಂಬ ನಂಬಿಕೆಯು ಸಡಿಲಗೊಳ್ಳುತ್ತಿದೆ – ಎನಿಸುತ್ತಿದೆ. ಕೆಲವು ಈಚಿನ ವಿಚ್ಛೇದ ಪ್ರಕರಣಗಳ ಯಥಾವತ್ ವಿವರಗಳು ಇವು:
ಪತಿ, ಪತ್ನಿ – ಇಬ್ಬರೂ ದೊಡ್ಡ ಕಂಪೆನಿಯಲ್ಲಿ ಉದ್ಯೋಗಸ್ಥರು. ವಿವಾಹವಾಗಿ ಒಂಬತ್ತು ತಿಂಗಳಷ್ಟೆ ಆಗಿದೆ. ವಿಚ್ಛೇದದ ಬಯಕೆಯನ್ನು ಪ್ರೇರಿಸಿರುವ ಸಂಗತಿ: ಪತ್ನಿಯ ನಂಟರು ಊರಿಗೆ ಬಂದಾಗ ಪತ್ನಿಯ ಅಪೇಕ್ಷೆಯಂತೆ ಕಚೇರಿಗೆ ರಜೆ ಹಾಕಿ ನಂಟರೊಡನೆ ಇರಲು ಪತಿಯು ನಿರಾಕರಿಸಿದುದು. ಹೀಗೆ ಶುರುವಾದ ವಿರಸ ಎಲ್ಲಿಗೆ ಹೋಗಿ ಮುಟ್ಟಿತೆಂದರೆ ಕಾರು `ಡೌನ್ ಪೇಮೆಂಟ್’ ಮಾಡಿರುವ ಪತ್ನಿಗೆ ಸೇರಿದುದೋ, ಇಲ್ಲವೆ ತಿಂಗಳ ಕಂತುಗಳನ್ನು ಕಟ್ಟುತ್ತಿರುವ ಪತಿಗೆ ಸೇರಿದುದೋ? – ಇತ್ಯಾದಿ. ಸ್ವಪ್ರತಿಷ್ಠೆ ಬೆಳೆಯುತ್ತ ಹೋಗಿ ಈಗ ನ್ಯಾಯಾಲಯದ ಕಟ್ಟೆ ತಲಪಿದೆ.
- ಕಚೇರಿ ಕೆಲಸದ ಸ್ವರೂಪದಿಂದಾಗಿ ಪತಿಯು ಪತ್ನಿಗೂ ಪತ್ನಿಯು ಪತಿಗೂ (ಇಬ್ಬರೂ ಉದ್ಯೋಗಸ್ಥರು) `ಕ್ವಾಲಿಟಿ ಟೈಮ್’ ಸಮಯ ಕೊಡುತ್ತಿಲ್ಲ – ಎಂಬುದಕ್ಕಾಗಿ ವಿಚ್ಛೇದದ ಕೋರಿಕೆ.
- ಏನೋ ಅಸಂದರ್ಭದಿಂದಾಗಿ ಪತಿಯ ಉದ್ಯೋಗ ನಷ್ಟವಾಗಿ ಬೇರೆಡೆ ಕಡಮೆ ವೇತನಕ್ಕಾಗಿ ಸೇರಿಕೊಂಡಿದ್ದಾನೆ. ಹೆಚ್ಚು ವೇತನ ಗಳಿಸುತ್ತಿರುವ ಪತ್ನಿಗೆ ಇದು ಇರುಸುಮುರುಸಾಗಿದೆ; ಫ್ಯಾಮಿಲಿ ಕೋರ್ಟಿಗೆ ಬಂದಿದ್ದಾಳೆ.
- ಹೊಸದಾಗಿ ಆರಂಭಿಸಿರುವ ಸ್ವಂತ ಉದ್ಯಮದಲ್ಲಿ ಹೆಚ್ಚು ಸಮಯವನ್ನು ತೊಡಗಿಸುತ್ತಿರುವ ಪತಿಯಿಂದ ತನಗೆ ಅಪೇಕ್ಷಿತ ಮಟ್ಟದ ಲೈಂಗಿಕ ತೃಪ್ತಿ ಸಿಗುತ್ತಿಲ್ಲ – ಎಂಬ ಕಾರಣಕ್ಕಾಗಿ ಪತ್ನಿಯಿಂದ ವಿಚ್ಛೇದದ ಕೋರಿಕೆ.
- ಧಾರ್ಮಿಕಾದಿ ಕೌಟುಂಬಿಕ ಆಚರಣೆಗಳ ಬಗೆಗೆ ಇರುವ ದೃಷ್ಟಿಭೇದದ ಕಾರಣದಿಂದ ವಿಚ್ಛೇದ ಬಯಸಿರುವವರುಂಟು.
- ಸದಾ ಅನಗತ್ಯ ಶಾಪಿಂಗ್ ಹವ್ಯಾಸಕ್ಕೆ ಒಳಗಾದ ಪತ್ನಿಯ ವರ್ತನೆಯಿಂದಾಗಿ ಗಂಡಹೆಂಡಿರ ನಡುವಣ ಸಂಬಂಧ ದುರ್ಬಲಗೊಂಡಿದೆ.
* * * *
ಮೇಲೆ ನಿರೂಪಿತವಾಗಿರುವವು ನೂರಕ್ಕೆ ನೂರರಷ್ಟು ನಿಜಜೀವನ ಸಂಗತಿಗಳು. ಈ ಪಟ್ಟಿಯನ್ನು ಎಷ್ಟು ಬೇಕಾದರೂ ಬೆಳೆಸಬಹುದು. ತಾನೂ ಸಂಪಾದಿಸುತ್ತಿರುವವಳೆಂಬುದನ್ನು ಗಮನಿಸದೆ ತನ್ನಿಂದ ಮನೆಗೆಲಸಗಳನ್ನು ಪತಿಯು ನಿರೀಕ್ಷಿಸುತ್ತಿದ್ದಾನೆ – ಎಂದು ದೂರು ಸಲ್ಲಿಸಿರುವ ಪತ್ನಿಯರೂ ಇದ್ದಾರೆ.
ವಿಚ್ಛೇದಗಳಲ್ಲಿ ಪರ್ಯವಸಾನಗೊಳ್ಳುತ್ತಿರುವ ಪ್ರಕರಣಗಳು ಹೆಚ್ಚುತ್ತಿರುವುದರ ಪರಿಣಾಮ ಕೌಟುಂಬಿಕ-ಸಾಮಾಜಿಕ ಸ್ವಾಸ್ಥ್ಯದ ಮೇಲೆ ಏನಾದೀತು – ಎಂದು ಯೋಚಿಸಬೇಕಾದವರು ಯಾರು?
ಆಪ್ತ ಸಲಹೆಗಾರರ ನೆರವನ್ನು ಪಡೆಯುವಂತೆಯೂ, ಅದು ವಿಫಲವಾಗಿ ಮರುಪರಿಶೀಲನೆಗೆ ಧಾರಾಳ ಸಮಯಾವಕಾಶವನ್ನು ವಿಧಿಸಿದ ಮೇಲಷ್ಟೆ ವಿಚ್ಛೇದಕ್ಕಾಗಿ ಅರ್ಜಿಯನ್ನು ಸಲ್ಲಿಸಬಹುದೆಂದೂ ನ್ಯಾಯವಾದಿಗಳೂ ನ್ಯಾಯಾಲಯಗಳೂ ಆಗ್ರಹಿಸುವುದು ಸ್ವಲ್ಪಮಟ್ಟಿಗೆ ಪ್ರಯೋಜನಕರವಾದೀತೇನೊ.
ವಿವಾಹವಾದ ಒಂದಷ್ಟು ಕಾಲಾವಧಿ ಕಳೆದ ಮೇಲೆ ಮಾತ್ರ ವಿಚ್ಛೇದದ ಅರ್ಜಿಯನ್ನು ಸ್ವೀಕರಿಸಲಾಗುತ್ತದೆಂದು ವಿಧಿಸಬಹುದೆ?
ಕೌಟುಂಬಿಕ ಸ್ವಾಸ್ಥ್ಯವನ್ನು ಉಳಿಸಬೇಕಾದುದರ ಆವಶ್ಯಕತೆಯನ್ನು ಪ್ರಚಾರ ಮಾಡುವ ಜಾಗೃತಿ ಕಾರ್ಯಕ್ರಮಗಳನ್ನು ಸೇವಾಸಂಸ್ಥೆಗಳು ವ್ಯಾಪಕವಾಗಿ ನಡೆಸಬೇಕಾಗಿದೆ.
ಈ ಜಾಡಿನ ಪ್ರಯತ್ನಗಳಿಂದ ಕ್ಷುಲ್ಲಕ ಕಾರಣಗಳಿಂದಲೂ ಯುವಕ-ಯುವತಿಯರು ವಿಚ್ಛೇದ ಬಯಸುತ್ತಿರುವ ಈಗಿನ ಆತಂಕಕಾರಿ ಸನ್ನಿವೇಶವನ್ನು ತಿಳಿಗೊಳಿಸಲಾದೀತೆಂದು ಆಶಿಸೋಣ.