ಯಾರಿಗೆ ಗೊತ್ತು, ನನ್ನ ಬಗೆಗೆ ಕವಿಗೆ ಕರುಣೆಯಿದ್ದಿರಲೂಬಹುದು ಅಥವಾ ನನ್ನ ಪಾತ್ರವಾದರೂ ರಾಮಾಯಣದಲ್ಲಿ ಉಂಟೋ ಇಲ್ಲವೋ!
ಆ ಸಂಜೆ…. ನನ್ನ ಬಾಳಿನಲ್ಲಿ ಬರಬಾರದಾಗಿದ್ದ ಸಂಜೆ. ನಮ್ಮೆಲ್ಲರ ಆರಾಧ್ಯನೂ ಅತ್ಯಾಪ್ತನೂ ಆಗಿದ್ದ ಶ್ರೀರಾಮಚಂದ್ರ ನಮ್ಮೊಂದಿಗೆ ಕುಳಿತು ಸಂತೋಷ ಸಲ್ಲಾಪದಲ್ಲಿದ್ದ. ಅವನನ್ನು ದೊಡ್ಡವನೆಂದು ಲೋಕವೇ ಕೊಂಡಾಡುತ್ತಿದ್ದರೂ ನಮ್ಮೊಂದಿಗೆ ಹಳೆಯ ಸಲುಗೆಯೇ. ಅವನ ವ್ಯಕ್ತಿತ್ವದ ವಿಶೇಷತೆಯೇ ಅದು. ನಾವು ಯಾರನ್ನು ಪೂಜ್ಯಭಾವದಿಂದ ನೋಡುತ್ತೇವೋ ಅವರನ್ನು ಆಪ್ತರಂತೆ ಸಲುಗೆಯಿಂದ ಕಾಣಲಾಗುವುದಿಲ್ಲ. ಯಾರು ನಮಗೆ ಆಪ್ತರೋ ಅವರ ಕುರಿತು ಅನಾದರಣೆಯಿಲ್ಲದಿದ್ದರೂ ಆರಾಧನೆಯಂತೂ ಇರುವುದಿಲ್ಲ. ಆದರೆ ರಾಮ ಏಕಕಾಲಕ್ಕೆ ಏರಡೂ ಆಗಬಲ್ಲವನಾಗಿದ್ದ. ರಾಮ ಅಯೋಧ್ಯೆಯ ರತ್ನಸಿಂಹಾಸನವನ್ನೇರಿ ಮೆರೆಯುತ್ತಿದ್ದ ಕಾಲವದು. ಪ್ರಜಾಜನರೆಲ್ಲ ಸಂತೋಷ ಸಮೃದ್ಧಿಗಳೊಂದಿಗೆ ನೆಮ್ಮದಿಯ ಬದುಕನ್ನು ಬಾಳುತ್ತಿದ್ದರು. ರಾಮನಾಳ್ವಿಕೆಯ ಸುವ್ಯವಸ್ಥೆಯಿಂದಾಗಿ `ರಾಮರಾಜ್ಯ’ ಎಂಬ ಆದರ್ಶದ ಕಲ್ಪನೆಯೂ ಹುಟ್ಟಿಕೊಂಡಿತ್ತು. ವಿಶ್ವಾಮಿತ್ರರ ಯಾಗರಕ್ಷಣೆ ಮಾಡಿದ್ದ; ಪರಶುರಾಮರಂತಹ ಅವತಾರಪುರುಷರನ್ನು ಪರಾಭವಕ್ಕೀಡುಮಾಡಿದ್ದ; ವಾಲಿ ರಾವಣರಂತಹ ಬಲಾಢ್ಯರನ್ನು ಸದೆಬಡಿದಿದ್ದ; ಸಮುದ್ರಕ್ಕೆ ಸೇತುನಿರ್ಮಾಣ ಮಾಡಿದ್ದ ದಶರಥಪುತ್ರ ಲೋಕಲೋಕಾಂತರದಲ್ಲಿ ಕೀರ್ತಿ ಪಡೆದಿದ್ದ. ಎಂತಹವನಿಗಾದರೂ ಮೈಮರೆವು ಉಂಟಾಗಬಹುದಾದ ಸ್ಥಿತಿಯದು, ಆದರೆ ರಾಮನಿಗಲ್ಲ! ಅವನು ಸದಾಜಾಗೃತ. ತನ್ನ ನಡೆನುಡಿಗಳಲ್ಲಿ ಎಲ್ಲಿಯೂ ಧರ್ಮವಿರೋಧವಾದುದು ಕಾಣಿಸಕೂಡದೆಂಬ ಎಚ್ಚರವದು. ಇಂತಹ ಧರ್ಮನಿಷ್ಠುರತೆಯಿದ್ದರೂ ತನ್ನ ಆಪ್ತರಲ್ಲಿ ವಿನೋದ, ಸಲುಗೆಗಳನ್ನು ಬಿಟ್ಟವನಲ್ಲ ರಾಮ. ಆದುದರಿಂದಲೇ ಆ ಸಂಜೆ ನಾವು, ಅಂದರೆ ವಿಜಯ, ಕಾಲಿಯ, ಸುಮಾಗಧ, ನಾನು ಹೀಗೆ ಆರೇಳು ಮಂದಿ ರಾಮನ ಸುತ್ತ ಕುಳಿತು ಸರಸದ ಮಾತುಗಳನ್ನಾಡುತ್ತಿದ್ದೆವು. ನನ್ನ ಮನಸ್ಸು ಮಾತ್ರ ಆ ದಿನ ಸ್ವಸ್ಥವಿರಲಿಲ್ಲ. ಆದುದರಿಂದ ಉಳಿದವರೆಲ್ಲ ಆಡುತ್ತಿದ್ದ ಮಾತುಗಳತ್ತ ನನ್ನ ಲಕ್ಷ್ಯ ಹರಿಯುತ್ತಿರಲಿಲ್ಲ. ಅವರೆಲ್ಲ ನಗುವಾಗ ನಾನೂ ನಕ್ಕಂತೆ ಮಾಡುತ್ತಿದ್ದೆ ಅಷ್ಟೆ.
ನನ್ನ ಮನಸ್ಸು ಮಾತ್ರ ಅಳುತ್ತಿತ್ತು. ನನ್ನ ಅಂತರಂಗಸಾಗರದ ಕಲ್ಲೋಲಗಳ ಅರಿವೇ ಇರದ ಅವರೆಲ್ಲ ರಾಮನಿಗೆ ಹರ್ಷವುಂಟಾಗುವುದಕ್ಕೆ ಬೇಕಾದಂತೆ ಪ್ರಿಯವಾದ ಹಾಸ್ಯದ ನುಡಿಗಳನ್ನಾಡುತ್ತಿದ್ದರು. ಮುಗ್ಧನಾಗಿ ಗೆಳೆಯರ ಹಾಸ್ಯಕ್ಕೆ ಮಂದಸ್ಮಿತವುಳ್ಳ ಮುಖದಿಂದ ಕುಳಿತ ರಾಮನತ್ತ ನೋಡುವುದೂ ನನಗೆ ಕಠಿಣವೆನಿಸುತ್ತಿತ್ತು. ನನ್ನ ಮನಸ್ಸು ಸ್ವಸ್ಥವಿರಲಿಲ್ಲ ಎಂದೆನಲ್ಲ, ಅದಕ್ಕೊಂದು ನಿರ್ದಿಷ್ಟ ಕಾರಣವಿತ್ತು. ಅದನ್ನರಿಯಬೇಕಾದರೆ ಕೆಲವು ದಿನಗಳು ಹಿಂದೆ ಸರಿಯಬೇಕು. ಕೆಲದಿನಗಳಿಂದ ನಾನು ಕೋಸಲದ ಗ್ರಾಮಗಳಲ್ಲಿ ಸುತ್ತಾಡುತ್ತಿದ್ದೆ. ನನ್ನಂತಹ ಗೆಳೆಯರಿಗೆ ರಾಮನೇ ಹೊರಿಸಿದ್ದ ಹೊಣೆಯದು. ಹಳ್ಳಿಗಳಲ್ಲಿ ಸಂಚರಿಸಿ ತನ್ನ ಆಡಳಿತದ ಕುರಿತು ಜನಾಭಿಪ್ರಾಯವನ್ನು ತಿಳಿದು ತನಗೆ ವರದಿ ಮಾಡಬೇಕೆಂಬುದೇ ಆ ಹೊಣೆ. ಪ್ರಜಾಜನರ ಸಂಕಷ್ಟಗಳನ್ನು, ಸಮಸ್ಯೆಗಳನ್ನು ಅರಿತುಕೊಳ್ಳುವುದಕ್ಕೆ ಅವನು ಕಂಡುಕೊಂಡ ದಾರಿಯದು. ಹೀಗಾಗಿ ರಾಮನಿಗೆ ನಾವು ಕಿವಿ, ಕಣ್ಣುಗಳಂತಿದ್ದೆವು. ನಾನು ತಿಂಗಳಾನುಗಟ್ಟಲೆ ಹೀಗೆ ಸಂಚರಿಸುತ್ತಿದ್ದದ್ದೂ ಉಂಟು. ಕಳೆದ ತಿರುಗಾಟದಲ್ಲಿ ವಿರಳವಾಗಿ ಕೇಳಿಬರುತ್ತಿದ್ದ ಜನಾಭಿಪ್ರಾಯವೊಂದನ್ನು ನಾನು ಅಷ್ಟಾಗಿ ಲಕ್ಷಿಸಿರಲಿಲ್ಲ. ರಾಮನ ಕುರಿತು ಪ್ರಜೆಗಳಲ್ಲಿ ಹುಟ್ಟಿಕೊಂಡ ಆಕ್ಷೇಪವದು.
“ರಾಮನೇನೊ ಉತ್ತಮ ರಾಜನೇ. ನಮಗೆಲ್ಲ ಅವನ ಪರಿಪಾಲನೆಯಲ್ಲಿ ಕ್ಷೇಮವುಂಟಾದರೂ, ಅವನು ಸೀತೆಯ ವಿಚಾರದಲ್ಲಿ ನಡೆದುಕೊಂಡ ಬಗೆ ಸರಿಯಲ್ಲ. ಅಸಾಧಾರಣವಾದ ಸಾಹಸಕಾರ್ಯಗಳನ್ನು ಮಾಡಿದವನು ಯಾಕೆ ಸೀತೆಯ ವಿಚಾರದಲ್ಲಿ ತಪ್ಪಿದ? ಅಗಾಧವಾದ ಸಾಗರಕ್ಕೆ ಸೇತುವೆಯನ್ನು ಕಟ್ಟಿ, ಲೋಕಕಂಟಕರೆನ್ನಿಸಿದ ದುಷ್ಟ ರಾವಣಾದ್ಯರನ್ನು ಕೊಂದುದು ನಿಜಕ್ಕೂ ಶ್ಲಾಘನೀಯವೇ; ಸಂಶಯವಿಲ್ಲ. ಅಂತಹ ರಾಮಚಂದ್ರ, ದಶಕಂಠನ ವಶಳಾಗಿ ಒಂದು ವರ್ಷ ಲಂಕೆಯಲ್ಲಿದ್ದ ಸೀತೆಯನ್ನು ಸ್ವೀಕರಿಸಿದ್ದು ಸರಿಯಲ್ಲ. ಕಳಂಕಿತೆಯಾದ ಮೈಥಿಲಿಯನ್ನು ಅವನು ಸ್ವೀಕರಿಸಿದ; ಮನೆಗೆ ಕರೆತಂದ. ಇದರಿಂದ ನಮ್ಮಂತಹ ಪ್ರಜೆಗಳೂ ಇಂತಹ ಸಂದರ್ಭಗಳಲ್ಲಿ ಅವನನ್ನು ಅನುಸರಿಸುವಂತಾಗುವುದಿಲ್ಲವೆ? ಇದು ಸಮ್ಮತವಾದ ಕಾರ್ಯವಲ್ಲ.”
ಇದೇ ವಾಕ್ಯಗಳಲ್ಲಿ ಅಲ್ಲವಾದರೂ ಈ ಅರ್ಥದ ಮಾತುಗಳನ್ನು ನಾಲ್ಕು ಮಂದಿ ಸೇರುವ ಸ್ಥಳಗಳಲ್ಲಿ ಜನರು ಚರ್ಚಿಸುತ್ತಿದ್ದರು. ಮೊದಲು ನಾನದನ್ನು ಅಷ್ಟಾಗಿ ಗಮನಿಸಲಿಲ್ಲ. ಏನೋ ಸೀತಾರಾಮರ ಪಾವಿತ್ರ್ಯವನ್ನರಿಯದ ಪಾಮರರ ಅವಿವೇಕದ ನುಡಿಗಳೆಂದು ನಿರ್ಲಕ್ಷಿಸಿದೆ. ಕ್ಷಯ ರೋಗಿ ಹಾಲು ತನಗೆ ಅಪಥ್ಯವೆಂದು ನಿಂದಿಸಿದರೆ ಹಾಲಿಗೆ ಕಳಂಕವುಂಟೆ? ಇದನ್ನು ಮುಖ್ಯವೆಂದು ನಾನು ತಿಳಿಯಲಿಲ್ಲ. ಆದರೆ ಈ ಬಾರಿ ಜನಧ್ವನಿ ಇನ್ನಷ್ಟು ದೃಢವಾದುದು ನನ್ನ ಗಮನಕ್ಕೆ ಬಂತು. ಬಹುಮಂದಿ ಪ್ರಜೆಗಳು ರಾಮನ ಕುರಿತು ಆಕ್ಷೇಪವೆತ್ತತೊಡಗಿದ್ದರು. ಇದೆಂತಹ ವಿಚಿತ್ರ? ಸೀತೆಯಂತಹ ಸಾಧ್ವಿ ಪ್ರಪಂಚದಲ್ಲಿ ಇನ್ನೊಬ್ಬಳಿರುವುದು ಶಕ್ಯವಿಲ್ಲ. ನಿರಂತರ ಒಂದು ವರ್ಷ ರಾವಣನ ಬಂಧನದಲ್ಲಿದ್ದರೂ ರಾಮನ ಧ್ಯಾನವನ್ನು ಬಿಡದಿದ್ದವಳು; ರಾವಣನೊಡ್ಡಿದ ಯಾವ ಆಮಿಷಗಳಿಂದಲೂ ವಿಚಲಿತಳಾಗದವಳು; ಲಂಕೆಯಲ್ಲಿ ಮೊದಲಿಗೆ ಅವಳನ್ನು ಕಂಡ ಹನುಮಂತ ತಾನು ಹೆಗಲಮೇಲೆ ಕುಳ್ಳಿರಿಸಿ ರಾಮನಲ್ಲಿಗೆ ಒಯ್ಯುತ್ತೇನೆಂದಾಗ ಹೇಳಿದಳಂತೆ, “ಇಲ್ಲ, ನಿನ್ನೊಂದಿಗೆ ನಾನು ಬರಲಾರೆ. ರಾಮನೇ ಬಂದು, ದಶಕಂಠನನ್ನು ಕೊಂದು ತನ್ನನ್ನು ಕರೆದೊಯ್ಯಬೇಕು.” ಅಂತಹ ಪತಿವ್ರತೆಯ ಕುರಿತು ಕೆಡುನುಡಿಯಾಡುವ ಮನಸ್ಸಾದರೂ ಇವರಿಗೆ ಹೇಗೆ ಬಂತು? ಅದು ಹೋಗಲಿ, ಲಂಕೆಯಲ್ಲಿ ಸೀತೆಯ ಅಗ್ನಿಪ್ರವೇಶದ ಸಂದರ್ಭದಲ್ಲಿ ಸಾಕ್ಷಾತ್ ಅಗ್ನಿದೇವನ ಜತೆ ದೇವತೆಗಳು, ಬ್ರಹ್ಮಾದಿಗಳು ಬಂದು ಸೀತೆ ಶುದ್ಧಳೆಂದು ರಾಮನಲ್ಲಿ ಹೇಳಿದ್ದರಂತೆ. ಇದಕ್ಕಿಂತ ಹೆಚ್ಚೇನು ಬೇಕು? ಬೆಂಕಿಯಲ್ಲಿ ಬಿದ್ದೂ ಸುಡದ ದಿವ್ಯಯೋಗ್ಯತೆಯ ಮೌಲ್ಯ ಇವರಿಗೆಲ್ಲಿ ಅರ್ಥವಾಗಬೇಕು? ಹಾಗೆಂದು ನನ್ನನ್ನು ಸಾಂತ್ವನಗೊಳಿಸಿಕೊಂಡಿದ್ದೆ.
ಇದೆಲ್ಲ ಇಲ್ಲಿ ರಾಮನ ಸನ್ನಿಧಿಯಲ್ಲಿ ಕುಳಿತಿದ್ದಾಗ ನೆನಪಿಗೆ ಬಂದು ಮನಸ್ಸಿನೊಳಗೆ ಕ್ಷೋಭೆಯುಂಟಾಗುತ್ತಿತ್ತು. ಜನರ ಸುಖ, ನೆಮ್ಮದಿಗಳಿಗಾಗಿ ಎಷ್ಟು ಶ್ರಮಿಸಿದರೇನು? ಕೊನೆಗೂ ಅಪವಾದ ಕೇಳುವುದೇ ಆಯಿತಲ್ಲ! ಈ ಪ್ರಜೆಗಳಿಗಾಗಿ ದುಡಿಯುವುದಕ್ಕೆ ಅರ್ಥವುಂಟೆ? ನಾನು ಹೀಗೆಲ್ಲ ಚಿಂತಿಸುತ್ತಿರುವಾಗ ರಾಮನೇ ಕೇಳಿದ, “ಮಿತ್ರರೆ, ನಿಮಗೆಲ್ಲ ರಾಜ್ಯದ ಉದ್ದಗಲಕ್ಕೂ ಸಂಚರಿಸಿ ನಮ್ಮ ಆಳ್ವಿಕೆಯ ಕುರಿತು ಪ್ರಜಾಭಿಪ್ರಾಯವೇನೆಂದು ತಿಳಿದು ಹೇಳಬೇಕೆಂದು ಆಜ್ಞಾಪಿಸಿದ್ದೆನಲ್ಲವೆ? ಈಗ ಹೇಳಿ, ನನ್ನ ಕುರಿತು, ನನ್ನ ತಮ್ಮಂದಿರ ಕುರಿತು, ಪ್ರಭುತ್ವದ ಕುರಿತು ಪ್ರಜಾಜನರು ಏನೆನ್ನುತ್ತಾರೆ?”
ನಾನು ಮೌನವಾಗಿದ್ದೆ. ಉಳಿದವರೆಲ್ಲ ರಾಮನ ಕುರಿತು ಶ್ಲಾಘನೆಯ ಮಾತುಗಳನ್ನೇ ಜನರಾಡುತ್ತಾರೆಂದೂ ಯಾವುದೇ ಆಕ್ಷೇಪಗಳಿಲ್ಲವೆಂದೂ ಖಚಿತವಾಗಿ ನುಡಿದರು. ನನಗೆ ಅಚ್ಚರಿಯೆನ್ನಿಸಿತು. ಏಕೆಂದರೆ ರಾಮನ ಕುರಿತು ಪ್ರಜೆಗಳಾಡುತ್ತಿರುವುದನ್ನು ಅವರೂ ಕೇಳಿಸಿಕೊಂಡಿರಲೇಬೇಕು. ಆದರೂ ಅದನ್ನು ಮುಚ್ಚಿಟ್ಟು ಪ್ರಿಯವಾಕ್ಯಗಳನ್ನೇ ಆಡುತ್ತಿದ್ದಾರಲ್ಲ! ನನ್ನ ಸರದಿ ಕೊನೆಗೂ ಬಂತು. ರಾಮ ನನ್ನ ಮುಖನೋಡಿದ. ಏನು ಹೇಳಲಿ ಎಂದು ಕ್ಷಣಕಾಲ ಚಿಂತಿಸಿದೆ. ಧರ್ಮಸಂಕಟವೇ ಒದಗಿಬಂದಿತ್ತು ನನ್ನಪಾಲಿಗೆ.
“ಶ್ರೀರಾಮ, ನಿನ್ನ ಕುರಿತು ಜನರೆಲ್ಲ ಮೆಚ್ಚುಗೆಯ ಮಾತುಗಳನ್ನೇ ಆಡುತ್ತಿದ್ದಾರೆ. ನಿನ್ನ ಆಳ್ವಿಕೆಯಲ್ಲಿ ಎಲ್ಲರೂ ತೃಪ್ತಿ, ಸಮಾಧಾನಗಳಿಂದಿದ್ದಾರೆ. ಯಾರೂ ಆಕ್ಷೇಪದ ನುಡಿಯಾಡುತ್ತಿಲ್ಲ. ನಿನ್ನಂತಹ ದೊರೆಯನ್ನು ಹೊಂದಿದ್ದು ತಮ್ಮ ಪುಣ್ಯವೆಂದೇ ಅವರು ಭಾವಿಸಿದ್ದಾರೆ.” ನನ್ನ ಮಾತುಗಳನ್ನು ಕೇಳಿದ ರಾಮ ಮರುಮಾತಾಡದೆ ನನ್ನ ಮುಖವನ್ನು ಕ್ಷಣಕಾಲ ದಿಟ್ಟಿಸಿದ. “ಭದ್ರ, ನನ್ನಿಂದ ಏನನ್ನೋ ಮುಚ್ಚಿಡುವ ಯತ್ನ ನಡೆಸಿದ್ದೀಯೆ. ನಿನ್ನ ಅಂತರಂಗದಲ್ಲಿರುವುದನ್ನು ಮರೆಮಾಚದೆ ನುಡಿ. ಸತ್ಯ ಹೇಳು. ಪ್ರಜೆಗಳು ನನ್ನ ಕುರಿತು ಯಾವ ಮಾತುಗಳನ್ನಾಡುತ್ತಿದ್ದಾರೆ? ಸಂಕೋಚ ಬೇಡ. ಹೇಳಪ್ಪಾ ಭದ್ರ.” ರಾಮನ ಸಾತ್ತ್ವಿಕತೆಯ ಎದುರು ನಿಜವನ್ನು ಮುಚ್ಚಿಡುವುದು ನನ್ನಿಂದಾಗಲಿಲ್ಲ. ಜನಾಭಿಪ್ರಾಯವನ್ನು ತಿಳಿಸಿದರೆ ಅದರಿಂದ ರಾಮ ನೊಂದುಕೊಳ್ಳುವನೆಂದು ಗೊತ್ತಿತ್ತು. ಹಾಗಾಗಿ ತಡವರಿಸುತ್ತಲೇ ನಾನು ಕೇಳಿದ್ದನ್ನು ರಾಮನಿಗೆ ವರದಿಯೊಪ್ಪಿಸಿದೆ. ಇದಕ್ಕೆಲ್ಲ ದೊರೆಯಾದವನು ಚಿಂತಿಸಬೇಕಿಲ್ಲ. ನಿಜವನ್ನು ತಿಳಿಯದ ಜನ ಎಲುಬಿಲ್ಲದ ನಾಲಗೆಯಲ್ಲಿ ಸಾವಿರ ಮಾತುಗಳನ್ನಾಡುತ್ತಾರೆ. ಕೆಲವೇ ದಿನಗಳಲ್ಲಿ ಮರೆತೂ ಬಿಡುತ್ತಾರೆಂದು ಸಾಂತ್ವನದ ನುಡಿಗಳನ್ನು ಸೇರಿಸಿದೆ.
ನಾನು ಆಡಿದ್ದನ್ನೆಲ್ಲ ಚಿತ್ತವಿಟ್ಟು ಆಲಿಸಿದ ಪ್ರಭು ಪ್ರತಿಯಾಗಿ ಏನೂ ಹೇಳಲಿಲ್ಲ. ಆದರೆ ಅವನು ವಿಚಲಿತನಾದುದು ಸ್ಪಷ್ಟವಿತ್ತು. ಬಹಳ ಹೊತ್ತಿನವರೆಗೆ ಮೌನವಾಗಿ ದೀರ್ಘಾಲೋಚನೆಯಲ್ಲಿ ಮುಳುಗಿದ್ದ. ನಡುನಡುವೆ ನಿಟ್ಟುಸಿರು ಬಿಡುತ್ತಿದ್ದ. ಮಾತಿಲ್ಲದೆ ಕುಳಿತಿದ್ದ ರಾಮನನ್ನು ಕಂಡು ನಾವೂ ಮೂಕರಾದೆವು. ಏನೋ ಕೆಡುಕನ್ನು ನಮ್ಮ ಅಂತರಂಗ ನಿರೀಕ್ಷಿಸುತ್ತಿತ್ತು. ಎಷ್ಟೋ ಹೊತ್ತಿನ ಮೇಲೆ ಒಂದು ಮಾತನ್ನೂ ಆಡದೆ ರಾಮ ಒಳಗೆ ಹೊರಟುಹೋದ. ಅವನ ಈ ಮೌನವು ನನ್ನಲ್ಲಿ ಅಗೋಚರ ಕಳವಳವನ್ನು ಹುಟ್ಟಿಸಿತ್ತು. ನನ್ನ ಪ್ರಾಮಾಣಿಕತೆಯ ಬಗ್ಗೆ ನನಗೇ ತಿರಸ್ಕಾರ ಉಂಟಾಯಿತು. ನಾನು ನಿಜಹೇಳಿ ತಪ್ಪು ಮಾಡಿದೆನೆ?
* * *
ಮರುದಿನ ನಡೆದುದೇನೆಂದು ಎಲ್ಲರೂ ಬಲ್ಲರು. ಆದರ್ಶಪ್ರಭುವಾದ ಶ್ರೀರಾಮ, ಪತ್ನಿ ಸೀತಾದೇವಿಯನ್ನು ಪರಿತ್ಯಜಿಸಿದ. ಯಾವ ಕಷ್ಟಸುಖಗಳ ಭೇದವಿಲ್ಲದೆ ತನ್ನನ್ನೇ ಅನುಸರಿಸಿದಳೋ ಅವಳನ್ನು ಜನಾಪವಾದದ ಭೀತಿಯಿಂದ ಅರಣ್ಯಕ್ಕಟ್ಟಿದ. ವಿಡಂಬನೆಯೆಂದರೆ ಈ ಕಾರ್ಯಕ್ಕೆ ಅವನು ನಿಯೋಜಿಸಿದ್ದು ಲಕ್ಷ್ಮಣನನ್ನು. ಲಕ್ಷ್ಮಣನ ವಿಧಿಯೇ ಹಾಗಿರಬೇಕು. ರಾಮನ ಮೇಲಿನ ಪ್ರೀತಿಯಿಂದ ಅವನು ಸಂಕಟ ಅನುಭವಿಸಿದ್ದು ಆದೆಷ್ಟು ಸಲವೋ! ಹಿಂದೆ ಅಗ್ನಿಪ್ರವೇಶಕ್ಕೆ ಚಿತೆಯನ್ನು ಏರ್ಪಡಿಸುವುದಕ್ಕೂ ಅವನೇ ಬೇಕಿತ್ತು. ಮೂವರು ತಮ್ಮಂದಿರಲ್ಲಿ ಲೋಕಾಪವಾದಕ್ಕಂಜಿ ಸೀತೆಯನ್ನು ಪರಿತ್ಯಜಿಸುತ್ತೇನೆಂದು ಹೇಳಿದ್ದಕ್ಕೆ ಅವರೂ ಪರಿಪರಿಯಾಗಿ ಬೇಡವೆಂದು ಬೇಡಿದರಂತೆ. ಆದರೂ ರಾಮ ವಿಚಲಿತನಾಗಲಿಲ್ಲವಂತೆ. ಧರ್ಮನಿಷ್ಠುರ ವ್ಯಕ್ತಿಗಳ ತೊಡಕೇ ಇದು. ಅವರಿಗೆ ಸರಿಕಂಡದ್ದನ್ನು ಮಾಡುವಲ್ಲಿ ಯಾರ ಮಾತಿಗೂ ಬೆಲೆಕೊಡುವವರಲ್ಲ. ರಾಮನಿಗೂ ತನ್ನ ಆದರ್ಶವೇ ಮುಖ್ಯವಾಯಿತು; ಸೀತೆಯ ಪರಿಶುದ್ಧತೆಯ ವಿಚಾರವಲ್ಲ. ತುಂಬಿದ ಬಸುರಿಯನ್ನು ವಾಲ್ಮೀಕಿ ಮಹರ್ಷಿಗಳ ಆಶ್ರಮದ ಬಳಿ ಬಿಟ್ಟು ಲಕ್ಷ್ಮಣ ಮರಳಿದ.
ಬಹುಶಃ ಅದೇ ಕೊನೆ. ರಾಮನ ಮುಖದಲ್ಲಿ ಸದಾ ಮಿನುಗುತ್ತಿದ್ದ ಮಧುರಹಾಸ ಶಾಶ್ವತವಾಗಿ ಅಳಿಸಿಬಿಟ್ಟಿತು; ಮತ್ತೆಂದೂ ರಾಮ ನಮ್ಮೊಂದಿಗೆ ಸಲ್ಲಾಪ ಮಾಡಲಿಲ್ಲ. ಹಿಂದಿನ ರಾಮನನ್ನು ಮತ್ತೆಂದೂ ನಾವು ಕಾಣಲಿಲ್ಲ; ಸೀತೆಯನ್ನಗಲಿದ ರಾಮ ನಗುವುದನ್ನು ಮರೆತ. ಸೀತೆಯಿಲ್ಲದೆಯೆ ಅಶ್ವಮೇಧ ಮಾಡಿದ. ಕೊನೆಗೆ ಸೀತೆ ಸಿಕ್ಕಿದಳು ಅನ್ನುವಷ್ಟರಲ್ಲಿ ಮತ್ತದೇ ಜನಾಪವಾದದ ಭೀತಿ! ಮತ್ತೊಮ್ಮೆ ಆ ಸಾಧ್ವಿ ತನ್ನ ಪಾವಿತ್ರ್ಯವನ್ನು ನಿರೂಪಿಸಬೇಕೆಂದು ರಾಮ ಬಯಸಿದ. ಆದರೆ ಈ ಬಾರಿ ಸೀತೆ ದೃಢನಿರ್ಣಯವನ್ನು ಕೈಗೊಂಡಿದ್ದಳು. ತನ್ನ ಅಕಳಂಕ ಚಾರಿತ್ರ್ಯವನ್ನು ನಿರೂಪಿಸುವುದು ಮಾತ್ರವಲ್ಲ, ಇನ್ನೊಮ್ಮೆ ಬಾಳಿನಲ್ಲಿ ಇಂತಹ ಸನ್ನಿವೇಶ ಬರಬಾರದೆಂದು ಭೂದೇವಿಯನ್ನು ಪ್ರಾರ್ಥಿಸಿಕೊಂಡಳು. ಅವಳ ತಾಯಿಯಲ್ಲವೆ? ಮಗಳನ್ನು ಅಕಳಂಕಿನಿಯೆಂದು ಜಗತ್ತಿಗೆ ಸಾರುವುದಕ್ಕೆಂದು ತನ್ನೊಡಲಿಗೆ ಅವಳನ್ನು ಸೇರಿಸಿಕೊಂಡಳು. ಅಲ್ಲಿಗೆ ಎಲ್ಲ ಮುಗಿಯಿತು. ಮಕ್ಕಳಾದ ಕುಶಲವರು ರಾಮನೊಂದಿಗೆ ಉಳಿದರು.
* * *
ದುರ್ದೈವವೆಂದರೆ ನಿಸ್ತೇಜನಾದ ರಾಮನನ್ನು ನೋಡುತ್ತ ನಾನಿನ್ನೂ ಬದುಕಿದ್ದೇನೆ. ಹಿಂದಿನ ಘಟನೆಗಳನ್ನು ಮೆಲುಕು ಹಾಕುತ್ತ; ಸೀತೆಯನ್ನು ನೆನೆದು ಕಣ್ಣೀರಿಡುತ್ತ; ಬದುಕಿರುವ ಹೆಣದಂತೆ. ಲೋಕಕ್ಕೆ ಬೆಳಕಾಗಿ ಬಾಳಿದ ಸೀತಾರಾಮರ ದಾಂಪತ್ಯವೇಕೆ ಸುಖಮಯವಾಗಲಿಲ್ಲ ಎಂಬ ಪ್ರಶ್ನೆಗೆ ನನಗಿನ್ನೂ ಉತ್ತರ ದೊರೆತಿಲ್ಲ. ಉತ್ತರಿಸಬಹುದಾದ ಸೀತೆ ಈಗಿಲ್ಲ. ರಾಮನ ಮೌನದ ಚಿಪ್ಪು ಒಡೆಯುವುದಿಲ್ಲ. ನನಗೂ ಏಕಾಂತವೊಂದೇ ಪ್ರಿಯವಾಗಿದೆ. ರಾಮನ ಭೇಟಿಯಿಲ್ಲ; ಹಿಂದಿನ ಸ್ನೇಹಿತರ ಒಡನಾಟವಿಲ್ಲ. ಸುದೀರ್ಘ ಹಗಲುಗಳಲ್ಲಿ, ದುರ್ಭರ ಇರುಳುಗಳಲ್ಲಿ ಒಂದು ಒಳದನಿ ಕೇಳುತ್ತಿದೆ `ನಾನು ತಪ್ಪು ಮಾಡಿದೆನೆ?’ ಈ ದನಿ ಮೊಳಗಿದಾಗೆಲ್ಲ ಎದೆಯಿರಿಯುವ ಯಾತನೆಯನ್ನು ಅನುಭವಿಸುತ್ತಿದ್ದೇನೆ.
ಹೀಗೆ ಕೇಳುವ ಆ ದನಿ ಯಾರದು? ಸೀತೆಯದೆ? ಒಮ್ಮೊಮ್ಮೆ ಹೌದು ಅವಳದೇ ದನಿಯೆನಿಸುತ್ತದೆ. ಮಿಥಿಲೆಯಿಂದ ರಾಮನ ಪತ್ನಿಯಾಗಿ ಬಂದಮೇಲೆ ಒಂದು ದಿನವಾದರೂ ಸುಖವುಂಡೆನೆ ನಾನು? ಬದುಕು ಎಂದರೇನು ಎಂದು ತಿಳಿಯುವ ಹೊತ್ತಿಗೆ ದೊರೆತದ್ದು ವನವಾಸ. ಅಲ್ಲಿಂದ ದಶಕಂಠನ ಬಂಧನ, ಹಿಂಸೆ. ಅಯೋಧ್ಯೆಗೆ ಮರಳುವ ಮುನ್ನವೇ ರಾಮನ ಸಂಶಯಕ್ಕೆ ಒಳಗಾಗಿದ್ದೇನೆಂಬ ಭಾವ ಹುಟ್ಟಿದ ಮೇಲೆ ಪತಿಯೊಂದಿಗೆ ಸಮರಸವಾಗಿ ಬೆರೆಯುವುದು ಶಕ್ಯವೆ? ಕೊನೆಗೊಮ್ಮೆ ದಾಂಪತ್ಯದ ಫಲವೆಂಬಂತೆ ಬಸುರಿಯಾದವಳಿಗೆ ಒದಗಿದ್ದು ಎರಡನೆಯ ವನವಾಸ. ಮಕ್ಕಳ ಮುದ್ದುಮೊಗವನ್ನು ಕಂಡು ಎದೆಗುದಿ ಶಮನವಾದೀತು ಎಂದುಕೊಂಡಾಗ ಮತ್ತೆ ರಾಮದರ್ಶನ. ಅಲ್ಲೂ ಗಂಡನ ಸಂಶಯಕ್ಕೆ ಗುರಿಯಾದವಳು ನಾನು. ರಾಮನ ಹೊರತು ಬೇರಾರನ್ನೂ ಕನಸು ಮನಸುಗಳಲ್ಲೂ ಎಣಿಸದ ನನ್ನ ಯಾವ ಅಪರಾಧಕ್ಕೆ ಈ ಶಿಕ್ಷೆ? ಆದರ್ಶವಾದಿಗಳನ್ನು ಮದುವೆಯಾದ ಹೆಣ್ಣುಗಳಿಗೆಲ್ಲ ಇದೇ ಗತಿಯೆ? ಸೀತೆ ಒಳದನಿಯಾಗಿ ಕೇಳುವ ಪ್ರಶ್ನೆಗಳು ನನ್ನ ಅಂತರಂಗವನ್ನು ಕಲಕಿಬಿಡುತ್ತವೆ.
ಒಮ್ಮೊಮ್ಮೆ ಜಾಗೃತನಾಗಿ ಚಿಂತಿಸುವಾಗ ಅನಿಸುತ್ತದೆ; ಸೀತೆಯಲ್ಲ ಹೀಗೆ ಕೇಳುತ್ತಿರುವುದು. ಇದು ನನ್ನೊಳಗೆ ಹುಟ್ಟಿದ ಧ್ವನಿ. ಅದನ್ನಾಲಿಸುತ್ತ ಹೋದರೆ ಕಳೆದುಹೋದ ದಿನಗಳಿಗೆ ಸಾವಿರಾರು ಕವಲುಗಳು ಮೂಡಿ ಕಳವಳಗೊಳ್ಳುತ್ತೇನೆ. ಹಾಗಾಗುತ್ತಿದ್ದರೆ…. ಅಥವಾ ಹೀಗಾಗುತ್ತಿದ್ದರೆ? ಏನೂ ಆಗಲಿಲ್ಲ. ಆಗುವುದು ಆಗಿಹೋಗಿದೆ. ರಾಮನಾದರೂ ಸೀತೆಯನ್ನಗಲುವಷ್ಟು ಕಠಿಣ ಹೃದಯದವನಲ್ಲ. ಅವಳ ಕುರಿತು ಪ್ರೀತಿಯಿಲ್ಲದವನಲ್ಲ. ಆದರೂ ರಾಜಧರ್ಮದ ಎದುರಿಗೆ ಉಳಿದುದೆಲ್ಲ ಗೌಣ ಅವನಿಗೆ. ಧರ್ಮದ ಮುಂದೆ ಹೆಂಡತಿ, ಸೋದರರು, ತಂದೆ-ತಾಯಿ ಯಾರೂ ಮುಖ್ಯವಲ್ಲ. ಆದರ್ಶಪ್ರಿಯತೆ ವಿಪರೀತಕ್ಕೆ ಹೋದರೆ ಹೀಗೆಯೇ ಆಗುವುದೇನೋ. ಸ್ವತಃ ಅವನಿಗಲ್ಲದಿದ್ದರೂ ಅವನನ್ನು ಅವಲಂಬಿಸಿದವರಿಗೆ ಸಂಕಟ ತಪ್ಪಿದ್ದಲ್ಲ. ತಪ್ಪಿರಲಿ, ಇಲ್ಲದಿರಲಿ ಶಿಕ್ಷೆಯನ್ನಂತೂ ಅನುಭವಿಸಲೇಬೇಕು, ಸೀತೆಯಂತೆ.
ಅವಳಾದರೋ ಪತಿಯ ಹೆಜ್ಜೆಯ ಮೇಲೆ ಹೆಜ್ಜೆಯಿಟ್ಟು ಸಾಗುವವಳು. ಅವನ ಧರ್ಮವನ್ನುಳಿಸುವುದಕ್ಕಾಗಿ ತನ್ನ ಬಲಿದಾನಕ್ಕೂ ಹಿಂಜರಿಯುವವಳಲ್ಲ. ಕೊನೆಗಾದದ್ದು ಅದೇ ತಾನೇ? ಅವಳಿಗೆ ರಾಮನ ಕುರಿತು ಯಾವ ಭಾವನೆಯಿದ್ದಿರಬಹುದು? ಕೋಪ? ತಿರಸ್ಕಾರ? ಉಹುಂ. ಖಂಡಿತ ಇಲ್ಲ. ರಾಮ-ಸೀತೆಯರಿಬ್ಬರನ್ನೂ ಹತ್ತಿರದಿಂದ ಕಂಡ ನನಗೆ ತಿಳಿಯದೆ ಅವರ ಗುಣ? ತನ್ನನ್ನು ರಾಮ ತ್ಯಜಿಸಿದಾಗ ಕೂಡ ಸೀತೆ ಅವನ ಕುರಿತು ಆಕ್ಷೇಪದ ಒಂದು ಸೊಲ್ಲನ್ನೂ ಆಡಲಿಲ್ಲವಂತೆ ಲಕ್ಷ್ಮಣನಲ್ಲಿ. ಅವಳನ್ನು ಬಿಟ್ಟ ಬಳಿಕ ಏಕಾಂತದಲ್ಲಿ ರಾಮ ದುಃಖಿಸುತ್ತಿದ್ದನಂತೆ. ಸೀತೆ ಕಳಂಕಿನಿಯಲ್ಲ; ಶುದ್ಧಳೆಂದು ನಾನು ಬಲ್ಲೆ. ಆದರೆ………. ಹೀಗೆಂದು ರಾಮ ಹೇಳುತ್ತಿದ್ದನಂತೆ.
ಪ್ರಕರಣವನ್ನು ಬಿಡಿಸಿ ನೋಡಿದರೆ ರಾಮ ಸೀತೆ ಇಬ್ಬರಲ್ಲೂ ದೋಷವಿಲ್ಲ. ಅವರು ಧರ್ಮವೆಂದು ತಿಳಿದುದನ್ನು ನಿಃಶಂಕೆಯಿಂದ ಆಚರಿಸಿದ್ದಾರೆ. ಹಾಗಾದರೆ ದೋಷ ಯಾರಲ್ಲಿ? ಅವರ ಪ್ರೇಮಪೂರ್ಣ ದಾಂಪತ್ಯ ಕೊನೆಯಾಗಲು ಯಾರು ಕಾರಣ? ರಾಮನ ಕುರಿತು ಅಸಮಾಧಾನ ಪ್ರಕಟಿಸಿದ ಅಯೋಧ್ಯೆಯ ಪ್ರಜೆಗಳೆ? ಪ್ರಜೆಗಳನ್ನು ದೂರುವುದೆಂತು? ಸಮೂಹಕ್ಕೆ ಮುಖವುಂಟೆ? ಸೀತಾಪರಿತ್ಯಾಗ ಪ್ರಕರಣದಲ್ಲಿ ಅಪರಾಧಿ ಯಾರು? ಉಳಿದ ಯಾರ ಮೇಲೂ ಅಪರಾಧವನ್ನು ಹೊರಿಸುವಂತಿಲ್ಲ. ನಾನೇ ಅಪರಾಧವನ್ನೆಸಗಿದವ. ಆ ದಿನ ರಾಮ ಪ್ರಜಾಭಿಪ್ರಾಯದ ಕುರಿತು ಕೇಳಿದಾಗ ನಾನೇಕೆ ಎಲ್ಲವನ್ನೂ ವರದಿ ಮಾಡಬೇಕಿತ್ತು? ಉಳಿದ ಸ್ನೇಹಿತರಂತೆ ಜನರ ಆಕ್ಷೇಪವನ್ನು ಮುಚ್ಚಿಟ್ಟು ಉಳಿದುದನ್ನು ಹೇಳಿದ್ದರೆ ಸಾಕಿತ್ತಲ್ಲವೆ? ನನ್ನ ವರದಿಯ ಪರಿಣಾಮ ಸೀತೆಗೆ ಸಂಕಟವನ್ನು ತಂದೀತೆಂದು ಸಾಮಾನ್ಯ ತರ್ಕಕ್ಕೆ ಹೊಳೆಯುವ ಸಂಗತಿ. ನನಗೇಕೆ ಅದನ್ನು ಊಹಿಸುವುದಕ್ಕಾಗಲಿಲ್ಲ? ನನ್ನ ಬುದ್ಧಿಗೆ ಮಾಂದ್ಯ ಬಂತು ಯಾಕೆ? ಒಮ್ಮೊಮ್ಮೆ ಅನಿಸುವುದುಂಟು. ನಾನಲ್ಲದಿದ್ದರೆ ಇನ್ನಾರ ಮೂಲಕವಾದರೂ ಈ ವರ್ತಮಾನ ರಾಮನಿಗೆ ತಿಳಿಯದೇ ಇರುತ್ತಿರಲಿಲ್ಲ. ಹಾಗಾಗುತ್ತಿದ್ದರೂ ಪರಿಣಾಮ ಇದೇ ಅಲ್ಲವೆ? ನಾನು ತಿಳಿದೂ ಹೇಳಲಿಲ್ಲವೆಂಬ ಅಪರಾಧೀ ಭಾವವೊಂದು ಆಗಲೂ ನನ್ನನ್ನು ಕಾಡದೇ ಬಿಡುತ್ತಿರಲಿಲ್ಲ. ಭದ್ರ ಇದನ್ನು ತನ್ನಿಂದ ಮುಚ್ಚಿಟ್ಟನೆಂದು ರಾಮನಿಗೂ ನನ್ನ ಕುರಿತು ಬೇಸರವುಂಟಾಗುತ್ತಿತ್ತು ಖಂಡಿತ.
ಎಷ್ಟೇ ಸಮಾಧಾನ ಹೇಳಿಕೊಂಡರೂ ಸೀತಾದೇವಿಯ ಮುಗ್ಧಮುಖ ಕಣ್ಣೆದುರು ಗೋಚರಿಸಿದಾಗೆಲ್ಲ ನಾನು ವಿಹ್ವಲನಾಗುತ್ತೇನೆ. ಅವಳನ್ನು ದುಃಖಕ್ಕೀಡು ಮಾಡಿದವರಲ್ಲಿ ಭದ್ರನೂ ಸೇರಿಕೊಂಡನಲ್ಲ ಎಂಬ ತಳಮಳ ಕಾಡುತ್ತದೆ. ಜನಾಪವಾದವನ್ನು ರಾಮನಿಗೆ ನಿವೇದಿಸಿದ್ದರಿಂದ ಬಾಳಿನುದ್ದಕ್ಕೂ ಈ ನೋವು ಜೀವ ಹಿಂಡುತ್ತಲೇ ಇರುತ್ತದೆ. ಇದನ್ನು ಗುಟ್ಟಾಗಿ ನನ್ನೊಳಗೇ ಇಟ್ಟುಕೊಳ್ಳುತ್ತಿದ್ದರೆ ನನ್ನ ವೃತ್ತಿಗೆ ಕಳಂಕ ತಂದಂತಾಗುತ್ತಿತ್ತು. ಆಗ ರಾಮನೆಂದಿಗೂ ನನ್ನನ್ನು ಕ್ಷಮಿಸುತ್ತಿರಲಿಲ್ಲ. ಆದುದರಿಂದ ನಾನು ಮಾಡಿದ್ದು ಸರಿಯೆಂದುಕೊಳ್ಳುತ್ತೇನೆ. ಸರಿ-ತಪ್ಪುಗಳ ಉಯ್ಯಾಲೆಯಲ್ಲಿ ಆಂದೋಲನಕ್ಕೆ ಸಿಕ್ಕಿ ನನ್ನ ಚಿತ್ತವೇ ಛಿದ್ರವಾಗುತ್ತಲಿದೆ. ಹೇಗೆ ಈ ಮನೋವ್ಯಾಧಿಯಿಂದ ಪಾರಾಗಲಿ?
ಆದರೆ ವಾಲ್ಮೀಕಿಯೆಂಬ ಮಹರ್ಷಿಗಳು ಕುಶ-ಲವರನ್ನು ತಂದು ರಾಮನಿಗೊಪ್ಪಿಸಿ ಹೋದ ಬಳಿಕ ಅಯೋಧ್ಯಾಪುರದಲ್ಲಿ ಹಬ್ಬಿದ ವದಂತಿಗಳಿಂದ ತುಸು ಸಾಂತ್ವನ ದೊರೆತಿದೆಯೆನ್ನಬೇಕು. ಆ ವದಂತಿ ಮತ್ತೇನಲ್ಲ……… ವಾಲ್ಮೀಕಿ ಕೇವಲ ಋಷಿಯಲ್ಲವಂತೆ……… ಅವರು ಕವಿಯೂ ಹೌದಂತೆ……… ಕುಶಲವರು ಹಾಡುತ್ತ ಬಂದುದು ಅವರೇ ರಚಿಸಿದ ರಾಮಾಯಣವೆಂಬ ಕೃತಿಯ ಶ್ಲೋಕಗಳನ್ನಂತೆ. ಅವರ ಕೃತಿಯಲ್ಲಿ ರಾಮನದು ಮಾತ್ರವಲ್ಲ, ನಮ್ಮೆಲ್ಲರ ಕಥೆಯೂ ಉಂಟಂತೆ. ಮಹರ್ಷಿಗಳಿಗೆ ಎಲ್ಲರ ವಿಚಾರವೂ ಬ್ರಹ್ಮದೇವರ ಮೂಲಕ ತಿಳಿದಿದೆಯಂತೆ. ರಾಮ ಸೀತೆಯರು ನಾವು ತಿಳಿದಂತೆ ಮಾನವರಲ್ಲವಂತೆ. ಇದನ್ನೆಲ್ಲ ಕೇಳಿದ ಬಳಿಕವೇ ನಾನು ಮಾಡಿದ್ದು ತಪ್ಪಲ್ಲವೆಂಬ ಭರವಸೆ ಮೂಡತೊಡಗಿದ್ದು ನನಗೆ. ರಾಮ ದೇವರಾದರೆ ಇದೆಲ್ಲ ಅವನ ಇಚ್ಛೆಯಂತೆ ನಡೆದಿದೆಯೆಂದಾಯಿತಷ್ಟೆ? ಮತ್ತೆ ನಾನು ಮಾಡಿದ್ದು ಅದೇ ಪ್ರಕಾರವಲ್ಲವೆ? ರಾಮ ಯಾರೇ ಆಗಿರಲಿ, ನಮಗೆ ನಾವು ಮಾಡಿದ್ದರ ಹೊಣೆಯನ್ನು ಹೊರುವುದಕ್ಕೊಂದು ಹೆಗಲು ಸಿಕ್ಕಿತಲ್ಲ! ಸಾಮಾನ್ಯರಾದ ನಮಗೆ ಅಷ್ಟೇ ಬೇಕಾದದ್ದು. ಅದಲ್ಲವಾದರೂ ನನ್ನ ವೇದನೆ ನಮ್ಮ ಕಥೆ ಬರೆದ ಕವಿಗೆ ತಿಳಿಯಲೇಬೇಕಷ್ಟೆ? ಅದರಲ್ಲೂ ವಾಲ್ಮೀಕಿ ಮಹರ್ಷಿಗಳು ಸಾಮಾನ್ಯರಲ್ಲ.
ಎಲ್ಲರ ಮನಸ್ಸನ್ನೂ ತಿಳಿಯ ಬಲ್ಲವರು. ಈ ಭದ್ರನ ಅಂತರಂಗ ಅವರಿಗೆ ತಿಳಿಯದೆ? ನನ್ನ ಸಂಧಿಗ್ಧ, ತೊಳಲಾಟಗಳು ಅವರಿಗರಿವಾದೀತು. ಏನಿಲ್ಲವಾದರು ರಾಮನ ಆಪ್ತನಾಗಿದ್ದ ಭದ್ರನಿಗೆ ಸೀತಾರಾಮರ ಕುರಿತು ಯಾವುದೇ ಆಗ್ರಹವಿರಲಿಲ್ಲವೆಂದು, ಆಮೇಲೆ ಭದ್ರನ ಒಳಗೆ ಸಂಕಟ ತುಂಬಿತ್ತೆಂದು ಅವರಿಗೆ ಅರಿವಾದರೆ ನಾನು ತೃಪ್ತನಾಗುತ್ತಿದ್ದೆ. ಯಾರಿಗೆ ಗೊತ್ತು, ನನ್ನ ಬಗೆಗೆ ಕವಿಗೆ ಕರುಣೆಯಿದ್ದಿರಲೂಬಹುದು ಅಥವಾ ನನ್ನ ಪಾತ್ರವಾದರೂ ರಾಮಾಯಣದಲ್ಲಿ ಉಂಟೋ ಇಲ್ಲವೋ! ನಮ್ಮ ಭವಿತವ್ಯ ನಾವು ಕಾಣುವೆ?