ಹಳ್ಳಿಹೈದ, ಭಾವ ಶೀನನಿಗೆ ನನ್ನ ಸೊಂಟ, ಹಿಪ್ಸ್ ನೋವು ಹೇಳಿಕೊಂಡು, ಮುಂದಿದ್ದ ಹಲವಾರು ಮುಲಾಮುಗಳನ್ನು ತೋರಿಸಿ, ನೋವಿನಿಂದ ಗಳಗಳನೆ ಅಲವತ್ತುಕೊಂಡೆ.
ಹೋದ ಭಾನುವಾರಕ್ಕೆ ಸರಿಯಾಗಿ ಒಂದು ತಿಂಗಳಾಯಿತು; ನನಗೆ ಸೊಂಟ, ಹಿಪ್ಸ್ ನೋವು ಎಲ್ಲಿಂದಲೋ ಬಂದು ವಕ್ಕರಿಸಿಕೊಂಡಿತ್ತು. ಅದಕ್ಕೆ ಮಾಡದೇ ಇರೋ ಔಷಧಿ ಪಥ್ಯವೇ ಇಲ್ಲ. ನೋವು ಹೋಗಲಾಡಿಸಿಕೊಳ್ಳಲು ಸಾರ್ವಜನಿಕ ಟೆಂಡರ್ ಕರೆಯೋದೊಂದೇ ಬಾಕಿ!
ಆ ದಿನದ ದಿನಪತ್ರಿಕೆ ಓದುವುದಕ್ಕೆ ಪಕ್ಕದ ಮನೆ ಶಾಮರಾಯರು ಒಳಗೆ ಬಂದಿದ್ದರು. ಯಾಕೊ ನರಳ್ತಾ ಇದ್ದೀರಿ? ಎಂದು ಮಾತಿಗೆ ಪೀಠಿಕೆಹಾಕಿದರು.
ಹೌದು, ಹೌದು ಸೊಂಟ, ಹಿಪ್ಸ್ ಭಲೇ ನೋವು. ಯಾವ ಶತ್ರುವಿಗೂ ಬೇಡ ಎಂದೆ.
ಪುಕ್ಕಟೆ ಸಲಹೆಗಳು
ನೋಡೀ ರಾಯರೇ ಹೋಮಿಯೋಪತೀಲಿ ಒಳ್ಳೆಯ ಗುಳಿಗೆಗಳಿವೆ. ನಮ್ಮ ಲಕ್ಷ್ಮೀಪತಿ ಕೈಗುಣ ಬಹಳ ಒಳ್ಳೆಯದು, ಅವನ ಹತ್ತಿರ ಒಂದು ವಾರ ಗುಳಿಗೆ ತಗೊಂಡು ನುಂಗಿ. ಆದರೆ, ಕಾಫಿ ಕುಡಿಯಬಾರದು. ಟೀ ಕುಡಿಯಬಹುದು, ಇದೇ ಪಥ್ಯ ಎಂದು ಹೋಮಿಯೋಪತಿ ಕಡೆ ನನ್ನ ಮನಸ್ಸು ತಿರುಗಿಸಿದರು.
ಸದ್ಯ ವಾಸಿಯಾದ್ರೆ ಸಾಕು ಅಂತ ಅದನ್ನೂ ಟ್ರೈ ಮಾಡಿದೆ. ಊಹುಂ ಸೊಂಟನೋವು ಹೋಗಲಿಲ್ಲ. ಎರಡು ದಿನ ಆದ ಮೇಲೆ ನನ್ನ ಗೆಳೆಯ ರಾಜಣ್ಣ ಬಂದು, ನನ್ನ ನೋವು ಕಂಡು ಹೋಮಿಯೋಪತಿ ಬಹಳ ನಿಧಾನ ಕಣಯ್ಯಾ. ಆಯುರ್ವೇದ ಔಷಧಿ ತಗೋ, ಬೇರು ಸಮೇತ ನೋವು ಕಿತ್ತುಹಾಕುತ್ತದೆ. ಬಿಲ್ವದಬೇರು, ಹರಳುಬೇರು, ಮೂರು ಲಾಂಟಾನ ಎಲೆ ಒಂಟೆ ಹಾಲಿನಲ್ಲ್ಲಿ ಅದ್ದಿಹಾಕಿ, ಒಂದೇ ಒಂದು ನಸಗುನ್ನೀಕಾಯಿ ಹಾಕಿ, ಕಲ್ಲಿನ ಒರಳಲ್ಲಿ ತಿರುವಿದ್ರೆ ಅದು ದೋಸೆಹಿಟ್ಟಿನ ತರಹ ಆಗುತ್ತೆ. ಆಗ ಅದನ್ನು ಸ್ನೋ ತರಹ ಹಚ್ಚಿಕೊ. ನಿನ್ನ ನೋವು ಆಗ ಓಟ ಕೀಳುತ್ತೆ. ನೋವಿಗೆ ರಾಮಬಾಣ! ಜೊತೆಗೆ ಯೋಗಾಸನ ಮಾಡು. ಉತ್ಥಿತ ತ್ರಿಕೋಣಾಸನ, ಶಲಭಾಸನ ಮಾಡಿದ್ರೆ ನೋವು ಬೇಗ ಉಪಶಮನ ಆಗುತ್ತದೆ ಎಂದು ಯೋಗಾಭ್ಯಾಸವನ್ನು ಶುರುಮಾಡಲು ಹೇಳಿದ.
ಹೀಗೇ ಎಲ್ಲಾ ಪ್ರಯೋಗಗಳನ್ನು ಮಾಡಿ ಒಂದು ಭಾನುವಾರ ಬೆಳಗ್ಗೆ ಮಂಚದ ಮೇಲೆ ಕುಳಿತುಕೊಂಡು ನನ್ನ ಧರ್ಮಪತ್ನಿ ಪ್ರೇಮಳ ಕೈಲಿ ನೋವು ಹೋಗಲು ಸ್ಪ್ರೇ ಹಾಕಿಸಿಕೊಂಡು, ಅಲ್ಲಿ ನಾನೇ ಸಂಗ್ರಹಿಸಿದ್ದ, ಬೇರೆಬೇರೆ ವೈದ್ಯರು ಬರೆದುಕೊಟ್ಟಂತೆ ಹತ್ತಾರು ಕಂಪೆನಿಗಳ ನಾನಾ ನಮೂನೆಯ ನೋವುನಿವಾರಕ ಮುಲಾಮುಗಳನ್ನು ನನ್ನ ಮುಂದೆ ಹರಡಿಕೊಂಡು, ಒಂದಾದ ಮೇಲೆ ಮತ್ತೊಂದು ಮುಲಾಮು ನನ್ನ ಹೆಂಡತಿಯೇ ನನ್ನ ಬೆನ್ನಿಗೆ, ಹಿಪ್ಸ್ಗೆ ಸಗಣಿತಟ್ಟುವಂತೆ ಬಳಿಯುತ್ತಿದ್ದಳು. ಹಿತವಾಗಿತ್ತು ಹೆಂಡತಿಯ ಕೈ!
ದೇಸೀ ವೈದ್ಯ
ಆಗಲೇ ಶೀನ ಹಳ್ಳಿಯಿಂದ ಏನೋ ಕೆಲಸದ ಮೇಲೆ ಸಿಟಿಯಲ್ಲ್ಲಿದ್ದ ನಮ್ಮ ಮನೆಗೆ ಬಂದ. ಬಂದ ಮೇಲೆ ನನ್ನ ಯೋಗಕ್ಷೇಮ ವಿಚಾರಿಸಿದ. ಅವನಿಗೆ ನನ್ನ ಸೊಂಟ, ಹಿಪ್ಸ್ ನೋವು ಹೇಳಿಕೊಂಡು ನನ್ನ ಮುಂದಿದ್ದ ಹಲವಾರು ಮುಲಾಮುಗಳನ್ನು ತೋರಿಸಿ, ನೋವಿನಿಂದ ಗಳಗಳನೆ ಅಲವತ್ತುಕೊಂಡೆ.
ಇದೆಲ್ಲಾ ಯಾಕೆ ಭಾವಾ? ನಾನು ಇನ್ನೊಂದು ಪರಮಾಯಿಷಿ ಆಯಿಂಟ್ಮೆಂಟ್ ಕೊಡ್ತೀನಿ. ಇದು ನೋವು ಇರೋ ಜಾಗಕ್ಕೆ ಸ್ವಲ್ಪ ಸವರಿಕೊಳ್ಳಿ. ಎಂಥ ಜಗಮೊಂಡು ನೋವೇ ಇರಲಿ, ನಾಗಾಲೋಟ ಓಡಿ ಹೋಗಿ ಬಿಡುತ್ತದೆ ಎಂದು ನನ್ನ ಸೊಂಟದ ಸುತ್ತ, ಕೆಳಭಾಗದಲ್ಲಿ ತಾನೇ ಹಳ್ಳಿಯಿಂದ ತಂದಿದ್ದ ಮುಲಾಮನ್ನು ತನ್ನ ಒರಟು ಕೈನಿಂದ ಸವರಿದ್ದ.
ಅರ್ಧಗಂಟೆ ಆದಮೇಲೆ ಶೀನ ತನ್ನ ಕೆಲಸಕ್ಕೆ ಹೋದ. ಆಗ ನನ್ನ ಪತ್ನಿ ಪ್ರೇಮ ಅವನು ತಂದಿಟ್ಟಿದ್ದ ಮುಲಾಮಿನ ರಟ್ಟಿನ ಪೆಟ್ಟಿಗೆ (ಕಾರ್ಟನ್ ಬಾಕ್ಸ್) ಮೇಲೆ ಬರೆದಿದ್ದ ಅಕ್ಷರಗಳನ್ನು ಓದಿದಳು.
ಇಂಥ …. ಮುಲಾಮು, ತಯಾರಿಸಿದ ದಿನ…. ಮುಗಿಯುವ ದಿನ…. ಬೆಲೆ….. ರೀ, ರೀ, ವೆಟರಿನರಿ ಉಪಯೋಗಕ್ಕೆ ಮಾತ್ರ (ಪ್ರಾಣಿಗಳಿಗೆ ಮಾತ್ರ!) ಅಂತ ಇದರಲ್ಲಿ ಬರೆದಿದೆಯಲ್ಲ. ಇದು ದನ, ಹಸು, ಎಮ್ಮೆಗೆ ಹಚ್ಚೋದು ಕಣ್ರೀ…. ಎಂದಳು ಪ್ರೇಮ.
ಹಳ್ಳಿ ಶೀನನ ಮನೇಲಿರೋ ಮುರಾ ಬಫೆಲೋ ಮುಲಾಮು ಇರಬೇಕು ಕಣೇ ಎಂದೆ.
ಈಗ ನೀವೇನು ಕಮ್ಮಿ ಎಂದಳೀಕೆ!
ಅದೇನು ಕರಾಮತ್ತೋ ಏನೋ, ನೋವು – ನಂಬಿದ್ರೆ ನಂಬಿ, ಬಿಟ್ರೆ ಬಿಡಿ – ನನ್ನ ಹಿಪ್ಸ್, ಸೊಂಟ ನೋವು ಮಾತ್ರ ಓಡಿಯೇ ಹೋಗಿತ್ತು!