‘ಇದು ಯಾವಾಗಲೂ ಹೀಗೇ ಇರುವುದಿಲ್ಲ’ ಎಂಬ ನಂಬಿಕೆ ನಮ್ಮ ಮನೆ-ಮನಸ್ಸುಗಳಿಗೆ ಎಂದೂ ಕಾಣದ ನೆಮ್ಮದಿಯನ್ನು ತಂದುಕೊಡಬಹುದು.
ಯಾಕೋ ಕೆಲವು ಸಮಯದ ಹಿಂದೆ ನಾನು ತುಂಬ ಮಂಕಾಗಿಬಿಟ್ಟಿದ್ದೆ. ಒಂದಾದ ಮೇಲೊಂದರಂತೆ ಘಟಿಸಿದ ಅನಪೇಕ್ಷಿತ ವಿದ್ಯಮಾನಗಳು ನನ್ನ ಧೃತಿಗೆಡಿಸಿದ್ದವು. ಅದೇ ಸಮಯದಲ್ಲಿ ಮನೆಗೆ ಬಂದಿದ್ದ ಅನಿರೀಕ್ಷಿತ ಅತಿಥಿಯೊಬ್ಬರು ಒಂದಷ್ಟು ಹೊತ್ತಿನ ಬಳಿಕ ‘ನಿನ್ನಲ್ಲಿ ಮಾತನಾಡುವುದಿದೆ’ ಅಂದರು. ನಾನು ಅವರೆದುರು ಸುಮ್ಮನೇ ಕುಳಿತಿದ್ದೆ. ಅವರು ನನ್ನಲ್ಲಿ ಏನೊಂದೂ ಕೇಳಲಿಲ್ಲ. ಬದಲಾಗಿ ನಾಲ್ಕೇ ನಾಲ್ಕು ಮಾತು ಹೇಳಿದರು: “ನೋಡು, ನಿನ್ನಲ್ಲಿ ಇರಬೇಕಾದುದು ನಂಬಿಕೆ ಮತ್ತು ಕೇವಲ ನಂಬಿಕೆ ಅಷ್ಟೇ. ನೂರೆಂಟು ಗೊಂದಲಗಳನ್ನು ತುಂಬಿಕೊಂಡು ಕಾರಣವಿಲ್ಲದೇ ಚಿಂತೆ ಮಾಡುತ್ತೀ. ಅದನ್ನು ಬಿಟ್ಟುಬಿಡು. ಎಲ್ಲವೂ ಸರಿಯಾಗಿದೆ ಮತ್ತು ಎಲ್ಲವೂ ಒಳ್ಳೆಯದೇ ಆಗುತ್ತದೆ ಎಂಬ ನಂಬಿಕೆಯೊಂದೇ ನಿನ್ನನ್ನು ಸುಖಿಯನ್ನಾಗಿಸುತ್ತದೆ. ಸುತ್ತಲಿನ ಜನರ ಬಗ್ಗೆ, ಪರಿಸರದ ಬಗ್ಗೆ ನೂರಕ್ಕೆ ನೂರರಷ್ಟು ನಂಬಿಕೆಯಿಡು. ಸಂತೋಷವಾಗಿರು.
ನಾನು ಏನೂ ಹೇಳದೇ ಅವರು ಅದು ಹೇಗೆ ನನ್ನ ಮನಸ್ಸನ್ನು ಓದಿದರೋ ನನಗೆ ಗೊತ್ತಿಲ್ಲ. ಆ ಕ್ಷಣಕ್ಕೆ ಬೆರಗಾಗಿ ಹೋಗಿದ್ದೆ. ಅವರೆಂದ ಮಾತು ಈಗಲೂ ಕಿವಿಯಲ್ಲಿ ರಿಂಗಣಿಸುತ್ತಿದೆ. ನಿಜ ಹೇಳಬೇಕೆಂದರೆ ನನ್ನೊಳಗೆ ಬೇರುಬಿಟ್ಟಿದ್ದ ಚಿಂತೆಯೇನೆಂಬುದು ನನಗೆ ನಿಜವಾಗಿಯೂ ಸ್ಪಷ್ಟವಾಗಿ ಗೊತ್ತಿಲ್ಲ. ಆದರೆ ಮೇಲೆ ಹೇಳಿದ ಮಾತುಗಳು ಮಾತ್ರ ನನ್ನನ್ನು ಆವರಿಸಿದ್ದ ದುಗುಡವನ್ನು ದೂರ ಮಾಡಿತು.
ನಿಜ, ಅಲ್ಲವೇ? ನಂಬಿಕೆಯೆಂಬುದು ದೂರವಾದರೆ ಮನೆಯ ಸೌಂದರ್ಯವೇ ಹಾಳಾಗಿಬಿಡುತ್ತದೆ. ಪತಿ ಪತ್ನಿಯರ ನಡುವೆ, ಹೆತ್ತವರು ಮತ್ತು ಮಕ್ಕಳ ನಡುವೆ ಅಥವಾ ಒಡಹುಟ್ಟಿದವರ ನಡುವೆ ಅಥವಾ ಇತರ ಯಾವುದೇ ಸಂಬಂಧಗಳಿರಲಿ, ಎಲ್ಲ ಬಾಂಧವ್ಯಗಳನ್ನೂ ಕಾಪಾಡಿಕೊಂಡು ಬರುವುದು ಕೇವಲ ನಂಬಿಕೆಯೆಂಬ ದಾರ ಮಾತ್ರ. ಅಪ್ಪಿತಪ್ಪಿ ಅನುಮಾನದ ಎಳೆಯೊಂದು ಸೇರಿಕೊಂಡಿತೋ ಅಲ್ಲಿಗೆ ಆ ಮನೆಯೊಳಗಿನ ಸಂತೋಷ ಮಸಣ ಸೇರುತ್ತದೆ. ಮನೆಯ ಪ್ರತಿ ಇಂಚು ಇಂಚಿನಲ್ಲಿರುವ ಸುಖವನ್ನೆಲ್ಲ ತಾನೇ ಅಪಹರಿಸಿ ಒಟ್ಟಾರೆ ಮನೆಯ ವಾತಾವರಣವೇ ಹಾಳಾಗುವಂತೆ ಮಾಡಿಬಿಡುತ್ತದೆ.
ಗಂಡನ ಅಪನಂಬಿಕೆ
ಗೆಳತಿಯೊಬ್ಬರು ಹೇಳುತ್ತಿದ್ದರು, ಆಕೆ ನಿಜಕ್ಕೂ ಓದಿರುವುದು ಫ್ಯಾಷನ್ ಆಂಡ್ ಡಿಸೈನಿಂಗ್ ಕೋರ್ಸು. ಆಕೆಯಲ್ಲಿದ್ದ ಕಲಾತ್ಮಕತೆ, ಸೌಂದರ್ಯೋಪಾಸನಾ ಶಕ್ತಿಯನ್ನು ನೋಡಿದರೆ ಅವರಿಗೆ ಆ ಕ್ಷೇತ್ರದಲ್ಲಿ ಪ್ರತೀ ಹೆಜ್ಜೆಗೂ ಗೆಲವು ಸಾಧ್ಯವಿತ್ತು. ಉತ್ತಮ ಭವಿಷ್ಯ ಅವರಿಗಾಗಿ ಕಾದಿತ್ತು. ಆದರೆ ಎಲ್ಲ ಮದುವೆಯವರೆಗೆ ಅಷ್ಟೇ. ಪತ್ನಿ ಮನೆಯಿಂದಾಚೆ ಹೋದರೇ ಅನುಮಾನಿಸುವಂಥ ಗಂಡ ಅವರ ಸಾಧನೆಗೇ ಅಡ್ಡಿಯಾಗಿಬಿಟ್ಟರು. ಆಕೆಯ ಜೀವನೋತ್ಸಾಹವೇ ಬತ್ತಿಹೋಗುವಂತಾಯಿತು. ತನ್ನ ಮೆಚ್ಚಿನ ಕೆಲಸ ಬಿಟ್ಟಿದ್ದಾಯಿತು. ಮಗು ಹುಟ್ಟಿದ ಬಳಿಕ ಅದರ ಪಾಲನೆಯಲ್ಲಿ ಕೆಲವು ವರುಷಗಳು ಹೇಗೋ ಸಂದುಹೋದವು. ಆದರೆ ಆ ಮಗು ಬೆಳೆದು ಶಾಲೆಗೆ ಹೋಗಲಾರಂಭಿಸಿದ ಮೇಲೆ ಮನೆಯಲ್ಲಿ ಸಮಯ ಕಳೆಯುವ ಬಗೆಯಾದರೂ ಹೇಗೆ? ತನ್ನೊಳಗೆ ಅಡಕವಾಗಿದ್ದ ಕಲೆಗೆ ಮತ್ತೆ ಜೀವ ಕೊಡುವ ಪ್ರಯತ್ನ ಮಾಡಿದರು. ಉತ್ತಮ ಪೇಂಟಿಂಗ್ಗಳನ್ನು ಬರೆದು ತನ್ನಲ್ಲೇ ಇರಿಸಿಕೊಳ್ಳತೊಡಗಿದರು. ಅಂತೂ ಒಂದು ದಿನ ಯಾರೋ ಗೆಳತಿಯರ ಸಹಾಯದಿಂದ ಆ ವರ್ಣಚಿತ್ರಗಳನ್ನೆಲ್ಲ ಪ್ರದರ್ಶನವಿರಿಸಿದ್ದಾಯಿತು. ಅವೆಲ್ಲ ಒಳ್ಳೆಯ ಬೆಲೆಗೆ ಮಾರಾಟವೂ ಆದವು. ಖುಷಿ ಪಡಬೇಕಾಗಿದ್ದ ಗಂಡನದು ಮತ್ತದೇ ಹಳೆಯ ರಾಗ. ನೀನು ಮನೆಯಲ್ಲಿ ಬೇಕಾದರೆ ಚಿತ್ರ ಬರೆ. ಆದರೆ ಯಾವುದೇ ಕಾರಣಕ್ಕೂ ಪ್ರದರ್ಶನ ಏರ್ಪಡಿಸಬಾರದು.
ಆಕೆ ನಿಜಕ್ಕೂ ದುಃಖಿಯಾದರು. ಗಂಡನಾದವನು ಸ್ವತಃ ಪ್ರೋತ್ಸಾಹ ಕೊಡದಿದ್ದರೆ ಬೇಡ. ಕಡೆಯ ಪಕ್ಷ ಅಡ್ಡಿ ಮಾಡದೇ ತನ್ನ ಪಾಡಿಗೆ ಇರಬಹುದಲ್ಲ? ಆದರೆ ಆತನೊಳಗಿರುವ ಅಸೂಯೆ, ಪತ್ನಿ ಮನೆಯಿಂದಾಚೆ ಹೋದರೆ ಏನಾದರೂ ಘಟಿಸಬಾರದ್ದೇ ನಡೆಯುತ್ತದೆ ಎಂಬ ಅಪನಂಬಿಕೆ ಇವರ ಎಲ್ಲ ಪ್ರತಿಭೆಗಳನ್ನೂ ಮಣ್ಣುಗೂಡಿಸಿತು. ಆದರೂ ಆಗೀಗ ತನ್ನ ಸಂತೋಷಕ್ಕಾಗಿ ಚಿತ್ರ ಬರೆಯುತ್ತಾರೆ. ಗೆಳತಿಯರಿಗೆ ಉಡುಗೊರೆ ಕೊಟ್ಟು ಸುಮ್ಮನಾಗುತ್ತಾರೆ. ಒಂದೊಮ್ಮೆ ಅವರ ಪತಿ `ತನ್ನ ಪತ್ನಿ ಎಷ್ಟೇ ಸಾಧನೆ ಮಾಡಿದರೂ ತನ್ನನ್ನು ಕಡೆಗಣಿಸಲಾರಳು. ಅವಳ ಶ್ರೇಯಸ್ಸು ತನಗೂ ಶ್ರೇಯಸ್ಸೇ’ ಎಂದು ನಂಬಿದ್ದರೆ ಆ ಗೆಳತಿ ಅದೆಷ್ಟು ಸಂತೋಷವಾಗಿರುತ್ತಿದ್ದರು! ಮಾತ್ರವಲ್ಲ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರಾಂತ ಕಲಾವಿದೆಯಾಗಿ ಮೆರೆಯುತ್ತಿದ್ದರು. ಗಂಡನೊಬ್ಬನ ಅಪನಂಬಿಕೆಯಿಂದ ಅದೆಲ್ಲವೂ ಬರಿಯ ಮರೀಚಿಕೆಯಾಗಿ ಹೋಯಿತು.
ನಂಬಿಕೆಯಿಂದಲೇ ನೆಮ್ಮದಿ
ಇತ್ತೀಚೆಗೆ ಎಲ್ಲೋ ಓದಿದ ನೆನಪು. ಒಬ್ಬ ರಾಜ ಯಾವಾಗಲೂ ಸಂತೋಷವಾಗಿರುತ್ತಾನೆ. ಅವನಿಗೆ ಇತರ ರಾಜ್ಯದವರು ದಂಡೆತ್ತಿ ಬರುವ ಭಯವಿಲ್ಲ. ಅಥವಾ ಬರುತ್ತಾರೆ ಎಂಬ ಸುದ್ದಿ ಸಿಕ್ಕಿದರೂ ಅವನ ಮುಖದ ಮಂದಹಾಸ ಮರೆಯಾಗುವುದಿಲ್ಲ. ಒಂದು ಸಲ ಅವನ ಆಸ್ಥಾನಕ್ಕೆ ಬಂದ ಅತಿಥಿಯೊಬ್ಬರಿಗೆ ರಾಜನ ಈ ಪ್ರವೃತ್ತಿಯಿಂದ ಅಚ್ಚರಿಯಾಗಿ ತಡೆಯದೇ ಅವನನ್ನು ಕೇಳುತ್ತಾರೆ – ಅದು ಹೇಗಯ್ಯಾ ನೀನು ಯಾವಾಗಲೂ ಸುಖಿಯಾಗಿರುವಂತೆ ತೋರುತ್ತೀಯಾ? ರಾಜನಾದವನು ಸಾಮಾನ್ಯವಾಗಿ ಗಂಭೀರ ನಾಗಿಯೂ ಯೋಚನಾಬದ್ಧನಾಗಿಯೂ ಕಾಣುವುದು ಸಹಜ. ಆದರೆ ನೀನು ಈ ರೀತಿ ಇರುವುದಕ್ಕೆ ಕಾರಣವೇನು?
ಅರಸ ತಣ್ಣಗೆ ಅದೇ ನಗೆಯೊಂದಿಗೆ ಉತ್ತರಿಸುತ್ತಾನೆ – ಮಾನ್ಯರೇ, ನಾನು ನಂಬಿಕೆಯಿಟ್ಟಿರುವುದು ಕೇವಲ ಒಂದು ಸಿದ್ಧಾಂತದಲ್ಲಿ. ಅದೆಂದರೆ ‘ಇದು ಯಾವಾಗಲೂ ಹೀಗೇ ಇರುವುದಿಲ್ಲ’ ಎಂಬುದು. ಯುದ್ಧಗಳಲ್ಲಿ ಗೆದ್ದಾಗಲೂ ನಾನು ನಂಬುವುದು ಅಷ್ಟೇ. ಸೋತಾಗಲೂ ನನ್ನನ್ನು ದಿಕ್ಕೆಡದಂತೆ ಕಾಪಾಡುವುದು ಇದೇ ಧ್ಯೇಯವಾಕ್ಯ. ಈ ಸೋಲು ಶಾಶ್ವತವಲ್ಲ. ಹಾಗಾಗಿ ಗೆದ್ದಾಗ ಅಹಂಕಾರಿಯಾಗದೇ ಸೋತಾಗ ಸ್ಥೈರ್ಯ ಕಳೆದುಕೊಳ್ಳದೇ ಸಂತೋಷದಿಂದಲೇ ಇರುತ್ತೇನೆ.
ಎಲ್ಲಾ ಮನೆಗಳ ದೋಸೆಗಳೂ ತೂತು ಎಂಬ ಹಾಗೆ ಸಮಸ್ಯೆಗಳಿಲ್ಲದ ಮನೆಗಳಿರುವುದು ಸಾಧ್ಯವಿಲ್ಲ. ಶ್ರೀಮಂತರ ಚಿಂತೆಗಳು ಒಂದಾದರೆ ಬಡವರ ಚಿಂತೆಗಳು ಮಗದೊಂದು. ಆದರೆ ಈ ಹೊತ್ತು ನಮ್ಮಲ್ಲಿಯೇ ಇರುವ ಸಂತೋಷದ ಕ್ಷಣಗಳನ್ನು ಅನುಭವಿಸುವುದರ ಬದಲಾಗಿ ದೊರೆಯದ ಇನ್ನೇನನ್ನೋ ಹಂಬಲಿಸಿಕೊಂಡು ದುಃಖಿಯಾಗುವುದರಲ್ಲಿ ಏನೂ ಸಾರ್ಥಕ್ಯವಿಲ್ಲ. ಬಹುಶಃ ಮೇಲಿನ ಕಥೆಯ ರಾಜನಂತೆ ‘ಇದು ಯಾವಾಗಲೂ ಹೀಗೇ ಇರುವುದಿಲ್ಲ’ ಎಂಬ ನಂಬಿಕೆ ನಮ್ಮ ಮನೆ-ಮನಸ್ಸುಗಳಿಗೆ ಎಂದೂ ಕಾಣದ ನೆಮ್ಮದಿಯನ್ನು ತಂದುಕೊಡಬಹುದು. ಎಷ್ಟೋ ಸಂದರ್ಭಗಳಲ್ಲಿ ‘ಎದೆಯು ಮರಳಿ ತೊಳಲುತಿದೆ/ ದೊರೆಯದುದನೆ ಹುಡುಕುತಿದೆ/ ಅತ್ತ ಇತ್ತ ದಿಕ್ಕುಗೆಟ್ಟು ಬಳ್ಳಿ ಬಾಳು ಚಾಚುತಿದೆ/ ತನ್ನ ಕುಡಿಯನು’ ಎಂಬ ಪದ್ಯ ಆಪ್ಯಾಯಮಾನವಾಗುತ್ತದೆ. ಆದರೆ ತಮಾಷೆಯೆಂದರೆ ವಿನಾಕಾರಣ ದೊರೆಯದುದನ್ನು ಹುಡುಕಿಕೊಂಡು ನಮ್ಮದಾಗಿರುವ ಸಂತೋಷಗಳನ್ನು ಮರೆತಿದ್ದೇವೆ ಎಂಬ ಅರಿವು ಆ ಕ್ಷಣದಲ್ಲಿ ನಮಗೆ ಇರುವುದಿಲ್ಲ! ಅಡಿಗರು ಹೇಳಿದ ಹಾಗೆ ‘ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ’ ಎಂಬುದು ನಮ್ಮ ಬದುಕಿನ ನಿಜಾರ್ಥವಾಗಿದೆ. ಅದರ ಬದಲಾಗಿ ‘ಈ ಪುಟ್ಟ ಬದುಕು ತುಂಬಾ ಗೆಲವಿನಿಂದ ಕೂಡಿದೆ, ನಾನು ಬಯಸಿದ್ದೆಲ್ಲವೂ ದೊರೆಯದಿದ್ದರೂ ನನಗೇನು ಬೇಕೋ ಅದು ದೊರೆತಿದೆ, ದೊರೆಯುತ್ತದೆ’ ಎಂಬ ನಂಬಿಕೆ ನಮ್ಮನ್ನು ಶಾಂತರನ್ನಾಗಿಸದೇ?
ಹಿರಿಯ ಕಲಾವಿದರೊಬ್ಬರು ಸಂದರ್ಶನವೊಂದರಲ್ಲಿ ಹೇಳುತ್ತಿದ್ದರು – ನಾವು ದುಡಿದದ್ದನ್ನು ಉಣ್ಣುವುದಿಲ್ಲ. ಬದಲಾಗಿ ಪಡೆದದ್ದನ್ನು ಮಾತ್ರ ಉಣ್ಣುತ್ತೇವೆ! ಎಷ್ಟೋ ಮಂದಿಗೆ ಹೊಟ್ಟೆ ತುಂಬಾ ಉಂಡು ಕಲ್ಲನ್ನೂ ಕರಗಿಸಿಕೊಳ್ಳುವ ವಯಸ್ಸಿನಲ್ಲಿ ಒಪ್ಪೊತ್ತಿನ ಊಟಕ್ಕೆ ಗತಿಯಿರುವುದಿಲ್ಲ. ಕಷ್ಟಪಟ್ಟು ದುಡಿದು ಸಂಪಾದಿಸಿ ಮನೆ ತುಂಬಾ ಸುಖದ ಸುಪ್ಪತ್ತಿಗೆ ಇದೆ ಎಂದು ಅಂದುಕೊಳ್ಳುವ ವೇಳೆಗೆ ವಿಪರೀತ ದುಡಿಮೆಯ ಕಾರಣದಿಂದಾಗಿ ಬಿಪಿ ಶುಗರ್ ನಮ್ಮ ಶರೀರವನ್ನು ತಮ್ಮ ಆವಾಸ ಮಾಡಿಕೊಂಡಿರುತ್ತವೆ. ಹಾಗೆಂದು ದುಃಖಿಸುತ್ತಾ ಇದ್ದರೆ ಚೆನ್ನಾಗಿರುತ್ತದೆಯೇ? ನಾನು ಸಂತೋಷವಾಗಿದ್ದರೆ ನನ್ನ ಸುತ್ತಲಿನ ಪ್ರಪಂಚ ಸಂತೋಷವಾಗಿರುತ್ತದೆ ಎಂಬ ನಂಬಿಕೆಯೊಂದರಿಂದಲೇ ನಾನು ಖುಷಿಯಾಗಿದ್ದೇನೆ. ಜನರನ್ನು ನಗಿಸುತ್ತೇನೆ.
‘ಚಿಂತೆಗಳು ಮತ್ತು ಆತಂಕಗಳು ಹಕ್ಕಿಗಳ ಹಾಗೆ. ಅವು ನಮ್ಮ ಸುತ್ತ ಹಾರಾಡಿಕೊಂಡಿರಬಹುದು. ಅದನ್ನು ತಡೆಯುವುದು ನಮ್ಮ ಕೈಯ್ಯಲ್ಲಿಲ್ಲ. ಆದರೆ ಅವು ನಮ್ಮ ತಲೆ ಮೇಲೆಯೇ ಗೂಡು ಕಟ್ಟದಂತೆ ನೋಡಿಕೊಳ್ಳುವುದು ನಮಗೇ ಬಿಟ್ಟದ್ದು.’ ಈ ನಂಬಿಕೆ ನಮ್ಮ ಮನೆ-ಮನಗಳಲ್ಲಿ ನಗೆಯ ಬೆಳಕನ್ನು ಪಸರಿಸಲಿ.