ಮುಂದಿನ ವರ್ಷಗಳಲ್ಲಿ ಸ್ಮಾರ್ಟ್ಫೋನ್ ಜಗತ್ತಿಗೆ ಕಾಲಿರಿಸುವ ಬಹುತೇಕ ಮಂದಿ ಇಂಗ್ಲಿಷ್ ಬರದವರಾಗಲಿದ್ದಾರಂತೆ. ಇಂಗ್ಲಿಷ್ ಬಲ್ಲ ವರ್ಗದವರೇ ಮೊಬೈಲ್ ಬಳಸುವಲ್ಲಿ ಈಗ ಮುಂದಿರುವುದರಿಂದ ಇತರ ಭಾಷೆಗಳವರ ಸಂಖ್ಯೆ ಹೆಚ್ಚಾಗಲಿದೆ ಎಂಬುದು ಒಂದು ಲೆಕ್ಕಾಚಾರ. ಇದಕ್ಕಾಗಿ ಅನೇಕ ಕಂಪೆನಿಗಳು ಈಗಾಗಲೇ ತಮ್ಮ ನೆಲೆ ಗಟ್ಟಿಗೊಳಿಸಲು ಆರಂಭಿಸಿದ್ದು ಹಲವು ಭಾಷೆಗಳ ಬಳಕೆದಾರರನ್ನು ತಲಪಲು ಬೇಕಾದ ತಂತ್ರಜ್ಞಾನಗಳು ತಯಾರಾಗುತ್ತಿವೆ. ಇದು ಭಾರತೀಯ ಭಾಷೆಗಳಿಗೆ ವರದಾನವಾಗುವುದಲ್ಲದೆ ತಂತ್ರಜ್ಞಾನ ಸಾಮಾನ್ಯರಿಗೂ ಕೈಗೆಟಕಿ `ಡಿಜಿಟಲ್ ಡಿವೈಡ್’ ಕಡಮೆಗೊಳಿಸಲು ಸಹಕಾರಿಯಾಗಲಿದೆ.
ಮೊಬೈಲಿನಲ್ಲಿ ಕನ್ನಡ ಓದುವುದು ಮತ್ತು ಬರೆಯುವುದು ಈ ನಿಟ್ಟಿನಲ್ಲಿ ಮುಖ್ಯವಾಗಲಿದೆ. ಕೈಗೆಟಕುವ ಬೆಲೆಯಲ್ಲಿರುವ ಬಹುತೇಕ ಸ್ಮಾರ್ಟ್ಫೋನ್ಗಳು ಆಂಡ್ರಾಯ್ಡ್ ಆಧಾರಿತವಾಗಿದ್ದು, ಅದರಲ್ಲಿ ಕನ್ನಡ ಬರೆಯುವುದು ಈಗ ಎಷ್ಟು ಸರಳವೆಂಬುದು ಅದನ್ನು ಬಳಸುವ ಅನೇಕರಿಗೆ ತಿಳಿದಿಲ್ಲ.
ತನ್ನ ಜೆಲ್ಲಿಬೀನ್ ಆವೃತ್ತಿಯಿಂದಲೇ ಯುನಿಕೋಡ್ ಆಧಾರಿತ ಕನ್ನಡ ಅಕ್ಷರಗಳನ್ನು ಆಂಡ್ರಾಯ್ಡ್ ಸೇರಿಸಿದ್ದು ಕನ್ನಡ ಓದುವುದಕ್ಕೆ ಯಾವುದೇ ವಿಶೇಷ ಸಿದ್ಧತೆ/ಪರಿಕರ ಅಗತ್ಯವಿಲ್ಲ.
ಆಂಡ್ರಾಯ್ಡ್ ಮೊಬೈಲುಗಳಲ್ಲಿ ಖರೀದಿಸುವಾಗ ಬರುವ ಕೀಲಿಮಣೆಯಲ್ಲದೆ ನಮಗಿಷ್ಟವಾದ ಕೀಲಿಮಣೆಯನ್ನು ಬಳಸಲು ಅವಕಾಶ ನೀಡಲಾಗಿದೆ. ಆ ಅವಕಾಶಗಳನ್ನು ಬಳಸಿ ಅನೇಕರು ತಮ್ಮದೇ ಆದ ಕೀಬೋರ್ಡ್ಗಳನ್ನು ರಚಿಸಿದ್ದು, ಅವುಗಳು ಪ್ಲೇಸ್ಟೋರ್ನಲ್ಲಿ ಲಭ್ಯವಿದೆ. ನಿಮಗಿಷ್ಟವಾದ ವಿನ್ಯಾಸ, ಬರೆಯುವ ವಿಧಾನ, ಭಾಷೆ ಸೇರಿದಂತೆ ಹಲವಾರು ವೈವಿಧ್ಯದ ಕೀಲಿಮಣೆಗಳನ್ನು ನೀವು ಬಳಸಬಹುದು. ಕನ್ನಡ ಬರೆಯಲು ಕೂಡ ಇಲ್ಲಿ ಹಲವು ರೀತಿಯ ಕೀಲಿಮಣೆಗಳು ಲಭ್ಯ ಇವೆ. ನಿಮಗೆ ಅಗತ್ಯವಿರುವ ಹಲವು ರೀತಿಯ ಕೀಲಿಮಣೆಗಳನ್ನು ಅನುಷ್ಠಾಪಿಸಿಕೊಂಡು ಬೇಕೆಂದಾಗ ಬದಲಿಸಿಕೊಳ್ಳಲು ಸಾಧ್ಯವಿದೆ.
ಕನ್ನಡ ಅಕ್ಷರಗಳ ಕೀಲಿಮಣೆಗಳು
ಈ ಕೀಲಿಮಣೆಗಳನ್ನು ಅಳವಡಿಸಿಕೊಂಡರೆ ಕೀಲಿಮಣೆಯಲ್ಲಿ ಕನ್ನಡ ಅಕ್ಷರಗಳೇ ನೇರವಾಗಿ ಕಾಣಿಸುತ್ತದೆ. ಕನ್ನಡದಲ್ಲಿರುವ ಅಕ್ಷರಗಳ ಸಂಖ್ಯೆ ಇಂಗ್ಲಿಷ್ಗೆ ಹೋಲಿಸಿದರೆ ಅಧಿಕವಿರುವುದರಿಂದ ಸಾಮಾನ್ಯವಾಗಿ ಅಕ್ಷರಗಳನ್ನು ಎರಡು/ಮೂರು ಭಾಗಗಳನ್ನಾಗಿ ವಿಂಗಡಿಸಿರುತ್ತಾರೆ. ಈ ರೀತಿಯ ಹಲವು ಕೀಲಿಮಣೆಗಳನ್ನು ಪ್ಲೇಸ್ಟೋರ್ನಿಂದ ಅಳವಡಿಸಿಕೊಳ್ಳಬಹುದು.
ಜನಪ್ರಿಯ ಕೀಲಿಮಣೆಗಳು
ಗೂಗಲ್ ಕೀಲಿಮಣೆ: ಅನೇಕ ಭಾರತೀಯ ಭಾಷೆಗಳ ಕೀಲಿಮಣೆಗಳನ್ನು ಸ್ವತಃ ಗೂಗಲ್ ನೀಡಿದ್ದು ಸರಳ ಬರವಣಿಗೆಯ ಅವಕಾಶ ನೀಡಿದೆ. ಕೆಲವು ಅಕ್ಷರಗಳನ್ನು ಬರೆದಾಗಲೇ ಶಬ್ದವನ್ನು ಊಹಿಸುವುದು, ಬರೆದ ಶಬ್ದಗಳನ್ನಾಧಾರಿಸಿ ಮುಂದಿನ ಶಬ್ದದ ಸಲಹೆ ನೀಡುವುದು, ಅಕ್ಷರದೋಷಗಳನ್ನು ತಿದ್ದುವುದು ಸೇರಿದಂತೆ ಹಲವು ಜಾಣ ನಿರ್ಣಯಗಳನ್ನು ಕೈಗೊಳ್ಳುತ್ತದೆ.
ಜಸ್ಟ್ ಕನ್ನಡ ಕೀಲಿಮಣೆ: ಆರಂಭದಲ್ಲೇ ಬಂದ ಒಂದು ಜನಪ್ರಿಯ ಕೀಲಿಮಣೆ.
ಸ್ವಿಫ್ಟ್ಕೀ: ಸಣ್ಣ ಅಕ್ಷರಗಳುಳ್ಳ ದೊಡ್ಡ ಗಾತ್ರದ ಕೀಲಿ ಮಣೆ. ಒಂದೇ ಮಣೆಯಲ್ಲಿ ಹೆಚ್ಚು ಕೀಲಿಗಳು ಕಾಣಿಸುತ್ತಿದ್ದು, ಅವುಗಳನ್ನು ಕೆಲವು ಸೆಕೆಂಡ್ ಒತ್ತಿ ಹಿಡಿದರೆ ಒತ್ತಕ್ಷರಗಳು, ಉಳಿದ ಅಕ್ಷರಗಳು ಕಾಣಿಸುತ್ತವೆ.
ಸ್ವರ ಚಕ್ರ: ಇದೊಂದು ವಿಭಿನ್ನ ಕೀಬೋರ್ಡ್. ಕಾಗುಣಿತ ಆಧಾರದಲ್ಲಿ ಅಕ್ಷರಗಳನ್ನು ಪೋಣಿಸಲಾಗಿದ್ದು ಯಾವುದೇ ಅಕ್ಷರದ ಮೇಲೆ ಬೆರಳಿಟ್ಟರೆ ಆ ಅಕ್ಷರದ ವಿವಿಧ ರೂಪಗಳನ್ನು ತೋರಿಸುವ ಚಕ್ರವೊಂದು ಮೂಡುತ್ತದೆ. ಇದನ್ನೊಮ್ಮೆ ಅಳವಡಿಸಿ ನೋಡಿ, ನಿಮಗೆ ಇಷ್ಟವಾಗಬಹುದು.
ಪದ: ಕಂಪ್ಯೂಟರ್ ಮತ್ತು ಮೊಬೈಲ್ ಎರಡಕ್ಕೂ ಲಭ್ಯವಿರುವ ಕೀಬೋರ್ಡ್.
ಕನ್ನಡ ನೋಟ್: ಸರಕಾರದ ಕನ್ನಡ-ಸಂಸ್ಕೃತಿ ಇಲಾಖೆ ಸಿದ್ಧಪಡಿಸಿದ ಕೀಬೋರ್ಡ್
ಲಿಪ್ಯಂತರಣ
ಈ ವಿಧಾನದಲ್ಲಿ ಇಂಗ್ಲಿಷ್ ಅಕ್ಷರಗಳುಳ್ಳ ಕೀಲಿಮಣೆಯನ್ನೇ ಬಳಸಿ ಕನ್ನಡ ಬರೆಯಲಾಗುತ್ತದೆ. ಉದಾಹರಣೆಗೆ, ಉತ್ಥಾನ ಎಂದು ಬರೆಯಲು “ utthAna ” ಎಂದು ಟೈಪಿಸಬೇಕು. ಅ ಬರೆಯಲು a,, ಆ ಬರೆಯಲು aa, ಕ ಬರೆಯಲು ka, ಖ ಬರೆಯಲು kha ಹೀಗೆ ನೆನಪಿಡಲು ಸುಲಭವಾದ ಪದಗಳ ಸಂಯೋಜನೆಗಳನ್ನು ನೀಡಲಾಗುತ್ತದೆ. ಇಂಗ್ಲಿಷ್ ಬಳಸಿ ಅಭ್ಯಾಸವಿರುವವರಿಗೆ ಅಕ್ಷರಗಳಿರುವ ಜಾಗ ನೆನಪಿನಲ್ಲಿರುವುದರಿಂದ ಇದನ್ನು ಬಳಸಲು ಸುಲಭವಾಗುತ್ತದೆ.
ಲಿಪ್ಯಂತರಣ ಆಧರಿಸಿದ ಕೀಲಿಮಣೆಗಳು
ಇದರ ಜೊತೆಗೆ ಯಾವುದೇ ಹೊಸ ಕೀಲಿಮಣೆಯನ್ನು ಅನುಷ್ಠಾಪಿಸದೆ ಆನ್ಲೈನ್ ಮೂಲಕ ನೀವು ಬರೆದ ಇಂಗ್ಲಿಷ್ ಅಕ್ಷರಗಳನ್ನು ಕನ್ನಡೀಕರಿಸುವ ತಾಣಗಳು Quillpad, Google Input tools ಈ ಅವಕಾಶವನ್ನು ನೀಡುತ್ತದೆ.
ಇಲ್ಲಿ ಬರೆದ ವಾಕ್ಯ/ಲೇಖನಗಳನ್ನು ನೀವು ಬೇಕಾದಲ್ಲಿಗೆ ಕಾಪಿ-ಪೇಸ್ಟ್ ಮಾಡಬಹುದು.
ಬೆರಳಾಡಿಸುವ ಕೀಬೋರ್ಡ್!
ನೀವು ಬರೆಯಬೇಕಾಗಿರುವ ಪದದಲ್ಲಿರುವ ಅಕ್ಷರಗಳ ಮೂಲಕ ನಿಮ್ಮ ಬೆರಳಾಡಿಸಿದಾಗ ನೀವೇನು ಬರೆಯ ಹೊರಟಿರುವುದೆಂಬುದನ್ನು ತಂತ್ರಾಂಶವೇ ಊಹಿಸಿ ಪದಗಳನ್ನು ರೂಪಿಸುತ್ತದೆ. ಇಂಗ್ಲಿಷ್ನಲ್ಲಿ ಇದಕ್ಕೆ ಹಲವಾರು ಆಯ್ಕೆಗಳಿದ್ದು ಕನ್ನಡದಲ್ಲಿ ಸಧ್ಯಕ್ಕೆ ಸ್ವಿಫ್ಟ್ಕೀ ತಂತ್ರಾಂಶ ಲಭ್ಯವಿದೆ. ನೀವು ಬ, ರ, ವ, ಣ, ಗ – ಈ ಅಕ್ಷರಗಳನ್ನು ಹಾದುಹೋಗುವಂತೆ, ಬೆರಳನ್ನು ಪರದೆಯಿಂದ ಮೇಲೆತ್ತದೇ ಗೀಚಿದರೆ, ಆ ಅಕ್ಷರಗಳುಳ್ಳ ಪದವನ್ನು ಊಹಿಸಿ `ಬರವಣಿಗೆ’ ಎಂದು ಗುರುತಿಸುತ್ತದೆ. ಅದೇ ಅಕ್ಷರಗಳುಳ್ಳ ಉಳಿದ ಶಬ್ದಗಳಿಗೆ ಬದಲಾಯಿಸಲು ಆಯ್ಕೆಯನ್ನೂ ನಿಮಗೆ ನೀಡುತ್ತದೆ. ಇದು ಸಾಕಷ್ಟು ಆಸಕ್ತಿಯನ್ನು ಹುಟ್ಟಿಸುವ ವಿಧಾನವಾಗಿರುವುದರಿಂದ ನೀವೊಮ್ಮೆ ಬಳಸಿ ನೋಡುವುದು ಉತ್ತಮ. ಸ್ವಲ್ಪ ಅಭ್ಯಾಸ ಮಾಡಿಕೊಂಡರೆ ತುಂಬ ವೇಗವಾಗಿ ಬರೆಯುವುದಕ್ಕೆ ಈ ವಿಧಾನ ಸಹಕಾರಿ.
ಸ್ವಿಫ್ಟ್ ಕೀ ಕನ್ನಡದಲ್ಲಿ ಈ ಸೌಲಭ್ಯವನ್ನು ನೀಡುತ್ತದೆ.
ಕೈಬರಹ
ನಿಮ್ಮ ಕೈಬರಹವನ್ನೇ ಗುರುತಿಸಿ ಅದನ್ನು ಅಕ್ಷರಗಳಿಗೆ ಪರಿವರ್ತಿಸುವ ವಿಧಾನವಿದು. ಗೂಗಲ್ ಇದಕ್ಕಾಗಿ Kannada Handwriting Keyboard ತಂತ್ರಾಂಶವನ್ನು ಪರಿಚಯಿಸಿದ್ದು ಟೈಪಿಸಿ ಅಭ್ಯಾಸವಿಲ್ಲದವರಿಗೆ ಬರೆಯುವುದನ್ನು ಸರಳಗೊಳಿಸಿದೆ. ಕನ್ನಡ ಆವೃತ್ತಿ ಇನ್ನೂ ಅನೇಕ ದೋಷಗಳನ್ನು ಹೊಂದಿದ್ದರೂ ಬಳಸಲಡ್ಡಿಯಿಲ್ಲ. ಬಳಕೆ ಹೆಚ್ಚಿದಂತೆ ಅವರ ಅಕ್ಷರಗಳನ್ನು ಗುರುತಿಸುವ ತಂತ್ರಾಂಶ ಇನ್ನಷ್ಟು ಉತ್ತಮಗೊಂಡು ಸುಧಾರಿಕೊಳ್ಳಬಹುದು.
ಬದಲಾಗುತ್ತಿರುವ ತಂತ್ರಜ್ಞಾನವನ್ನು ತಡೆಯಲು ಸಾಧ್ಯವಿಲ್ಲ. ಆದರೆ ಅದರೊಂದಿಗೆ ನಮ್ಮತನವನ್ನು ಕಳೆದುಕೊಳ್ಳದೆ ಇರಲು, ಮೊಬೈಲಿನಲ್ಲಿ ಕನ್ನಡದ ಹೆಚ್ಚಿನ ಬಳಕೆ ನೆರವಾಗಲಿದೆ.
ಟೆಕ್ ಸುದ್ದಿ
- ವಿಂಡೋಸ್ ಆಪರೇಟಿಂಗ್ ಸಿಸ್ಟಂನ ಹೊಸ ಆವೃತ್ತಿ ವಿಂಡೋಸ್ ೧೦ ಇದೇ ಜುಲೈ ೨೯ರಂದು ಬಿಡುಗಡೆಯಾಗುತ್ತಿದೆ. ವಿಂಡೋಸ್ ೭ ಅಥವಾ ೮ ಹೊಂದಿದ್ದವರು ಉಚಿತವಾಗಿ ಈ ಅವೃತ್ತಿಯನ್ನು ಅಳವಡಿಸಿಕೊಳ್ಳುವ ಅವಕಾಶವನ್ನು ಮೈಕ್ರೋಸಾಫ್ಟ್ ನೀಡಿದೆ. ೮ನೇ ಆವೃತ್ತಿಯಲ್ಲಿ ಬಿಟ್ಟುಬಿಡಲಾಗಿದ್ದ ಜನಪ್ರಿಯ ಸ್ಟಾರ್ಟ್-ಮೆನು ಈಗ ಮತ್ತೆ ಬರಲಿದೆ.
- ಇಂಟರ್ನೆಟ್ ಮೂಲಕ ಕರೆ, ವಿಡಿಯೋ ಚಾಟ್ ಮಾಡಲು ಜನಪ್ರಿಯವಾಗಿರುವ ಸ್ಕೈಪ್ ((Skype) ಈಗ ವೆಬ್ ಮೂಲಕವೂ ಲಭ್ಯವಿದೆ. ನೀವು ಸ್ಕೈಪ್ ಇನ್ಸ್ಟಾಲ್ ಆಗದಿರುವ ಕಂಪ್ಯೂಟರುಗಳಲ್ಲೂ ಅದನ್ನು ಬಳಸಬಹುದು.
- ಭಾರತದ ಮಂಗಳಯಾನವು ಗ್ರಹಣದ ಸಂದರ್ಭದ ತಡೆಯನ್ನು ದಾಟಿ ಸಂಪರ್ಕವನ್ನು ಉಳಿಸಿಕೊಂಡಿದೆ. ಉಪಗ್ರಹದ ಜೀವಿತಾವಧಿ ನಿರೀಕ್ಷೆಗೂ ಮೀರಬಹುದೆಂದು ತಿಳಿದುಬಂದಿದೆ.
It is wel come news I was finding difficult to instal. Kannada software in mobile as we’ll I Psd