ಕೋರ್ಟುಮೆಟ್ಟಿಲು ಹತ್ತದೆ ಜನ ಹೇಗೆ ತಮ್ಮತಮ್ಮಲ್ಲೇ ನ್ಯಾಯತೀರ್ಮಾನ ಮಾಡಿಕೊಳ್ಳುತ್ತಾರೆಂದು ನೋಡುವ ಅವಕಾಶ ನನಗೆ ಅನಾಯಾಸವಾಗಿ ಒದಗಿಬಂದಂತಾಯ್ತು.
ಹೆದ್ದಾರಿಯಿಂದ ಎಡಕ್ಕೆ ತಿರುಗಿ ಒಳದಾರಿಯಲ್ಲಿ ಸುಮಾರು ಒಂದು ಕಿಲೋಮೀಟರ್ ದೂರ ಕ್ರಮಿಸಿದ ಬಳಿಕ ಮತ್ತೊಂದು ಸಣ್ಣ ತಿರುವಿಗೆ ಬಂದಾಗ ಹಸಿರು ವನಶ್ರೀಯ ನಡುವೆ ನೀಲಬಣ್ಣದ ಮನೆ ಗೋಚರಿಸಿತು. ಕಾರನ್ನು ಮನೆಯ ಹತ್ತಿರ ನಿಲ್ಲಿಸಿದೆ. ಕಾರಿನಿಂದ ಇಳಿಯುವಾಗ ಅಬ್ಬಾ….. ಎಷ್ಟು ಸುಂದರ! ಎಂದು ಸುಮಿತ್ರ ಉದ್ಗರಿಸಿದಳು. ನಾನೂ ಸಹ ಸುತ್ತಲೂ ದೃಷ್ಟಿ ಹರಿಸಿದೆ. ಒಂದು ಕಡೆ ತೆಂಗಿನ ತೋಪು, ಇನ್ನೊಂದು ಕಡೆ ಮಾವಿನ ತೋಪು. ಮನೆಯ ಮುಂದಿನ ವಿಸ್ತಾರ ಅಂಗಳದಲ್ಲಿ ಬಗೆಬಗೆಯ ಹೂವಿನ ಗಿಡಗಳು ನಳನಳಿಸುತ್ತಿವೆ. ಒಳಗೆ ನೋಡಿದರೆ ಅಲ್ಲೊಂದು ನಾಯಿ ಧ್ಯಾನಭಂಗಿಯಲ್ಲಿ ಕುಳಿತಿದೆ. ಅದರ ಸನಿಹದಲ್ಲೇ ಬೆಕ್ಕೊಂದು ತನ್ನ ನಾಲಿಗೆಯಿಂದ ಮೈ ನೆಕ್ಕಿಕೊಳ್ಳುತ್ತಿದೆ. ನಾಲ್ಕೈದು ಪಾರಿವಾಳಗಳು ತಟ್ಟೆಯಲ್ಲಿಟ್ಟಿದ್ದ ಕಾಳುಗಳನ್ನು ಹೆಕ್ಕಿ ತಿನ್ನುತ್ತಿವೆ. ಮುದ್ದಾದ ಗಿಣಿಯೊಂದು ಕಿಟಕಿಯಲ್ಲಿ ಅತ್ತ ಇತ್ತ ಕುತ್ತಿಗೆ ತಿರುಗಿಸುತ್ತಾ ಕುಳಿತಿದೆ. ತಾವೆಲ್ಲ ಒಂದೇ ಕುಟುಂಬಕ್ಕೆ ಸೇರಿದವರೆಂಬಂತೆ ಕಾದಾಡದೆ ಆ ಪ್ರಾಣಿ-ಪಕ್ಷಿಗಳು ತಮ್ಮ ಪಾಡಿಗೆ ಇದ್ದುದನ್ನು ಕಂಡು ಇಂತಹ ಸ್ಥಳದಲ್ಲಿ ಕ್ರೌರ್ಯವೇ ಇರಲು ಸಾಧ್ಯವಿಲ್ಲವೇನೋ ಎಂದು ನನಗನಿಸಿತು.
ಈ ಫಾರ್ಮ್ಗೆ `ಶಾಂತಿಧಾಮ’ ಎಂದು ಹೆಸರಿಟ್ಟಿರುವುದು ಅನ್ವರ್ಥವಾಗಿದೆ ಅಲ್ವಾ? ಎಂದು ಸುಮಿತ್ರ ಕಣ್ಣರಳಿಸಿಕೊಂಡು ನನ್ನ ಕಡೆಗೆ ನೋಡಿದಳು.
ಅದೇನೋ ನಿಜ ಸುಮಿ, ಆದರೆ ಇಲ್ಲೇ ಇದ್ದು ಬಿಡ್ತೀನಿ ಅಂತ ಹಟ ಮಾಡ್ಬೇಡ. ನಾವು ಸಂಜೀವನ ಎಸ್ಟೇಟನ್ನು ನೋಡೋಕೆ ಬಂದವರು ಅನ್ನೋದನ್ನು ಮರೆಯಬೇಡ ಎಂದು ತಮಾಷೆ ಮಾಡಿದೆ.
ಅಲ್ಲಾ…. ನಾವು ಕೂಡಾ ಇದೇ ತರಹ ಫಾರ್ಮ್….
ಸುಮಿತ್ರ ಮಾತು ಮುಗಿಸುವಷ್ಟರಲ್ಲಿ ಮನೆಯೊಳಗಿಂದ ಹೊರಬಂದ ಸಂಜೀವ ಗೇಟಿನ ಕಡೆಗೆ ಧಾವಿಸಿ, ಏನೋ ಆನಂದ, ಇವತ್ತು ಬಂತೇನೋ ನಿನ್ಗೆ ಮುಹೂರ್ತ…., ಬನ್ನೀಮ್ಮ ಎಂದು ನಮ್ಮಿಬ್ಬರನ್ನು ಸ್ವಾಗತಿಸಿದ.
ಒಳಗೆ ಬಂದು ಮೆತ್ತನೆಯ ಸೋಫಾದಲ್ಲಿ ಆಸೀನರಾದೆವು. ಚಂದದ ಹೆಣ್ಣುಮಗಳು ತಟ್ಟೆಯೊಳಗೆ ದೊಡ್ಡ ಎರಡು ಗಾಜಿನ ಲೋಟಗಳಲ್ಲಿ ನಿಂಬೆಹಣ್ಣಿನ ಪಾನಕವನ್ನು ಟೀಪಾಯ್ ಮೇಲೆ ತಂದಿರಿಸಿದಳು.
ಈಕೆ ನನ್ನ ಶ್ರೀಮತಿ ಭಾಗೀರಥಿ ಎಂದಾಗ ನಾನು ಸಂಜೀವನತ್ತ ಅಚ್ಚರಿಯಿಂದ ನೋಡಿದೆ. ಅಷ್ಟರಲ್ಲಿ ಅಲ್ಲಿಗೆ ಬಂದ ಅವನ ತಾಯಿ ಕಳೆದ ತಿಂಗಳು ಮದುವೆ ಮಾಡ್ಕೊಂಡ ಇವ್ನು. ನಮ್ಮ ಸಂಬಂಧದ ಹೆಣ್ಣು ಹುಡುಗೀನೇ. ಅಯ್ಯೋ… ಇವನ್ಗೆ ಮದ್ವೆ ಮಾಡ್ಕೊ ಅಂತ ಹೇಳಿ ಹೇಳಿ ನನ್ಗೆ ಸಾಕಾಗಿ ಹೋಗಿತ್ತು. ನಾನೆಷ್ಟು ಕಾಲ ಬದುಕಿರ್ತೀನಿ, ನನ್ನ ನಂತರ ನಿನ್ನನ್ನು ಪ್ರೀತಿಯಿಂದ ನೋಡ್ಕೊಳ್ಳೋವ್ರು ಬೇಡ್ವೇನೋ ಅಂತ ಅದೆಷ್ಟು ಸರ್ತಿ ಹೇಳಿದ್ರೂ ಅವ್ನು ಕಿವಿಗೆ ಹಾಕ್ಕೊಳ್ತಿರಲಿಲ್ಲ. ಮೂರು ತಿಂಗ್ಳ ಹಿಂದೆ ನನ್ಗೆ ಹಾರ್ಟ್ ಅಟ್ಯಾಕ್ ಆಯ್ತು. ದೇವ್ರ ದಯ! ತಕ್ಷಣದ ಚಿಕಿತ್ಸೆಯಿಂದ ಉಳ್ಕೊಂಡೆ. ಆಗ ಇವ್ನಿಗೆ ಜ್ಞಾನ ಬಂದಿರ್ಬೇಕು. ನನ್ನ ಮಾತಿಗೆ ಬೆಲೆಕೊಟ್ಟು ಕಡೆಗೂ ಮದ್ವೆ ಆದ.
ನನ್ನನ್ನು ಮದ್ವೆಗೆ ಕರೀಬಾರದಿತ್ತೇನೋ? ನಮ್ಮನ್ನು ಹ್ಯಾಗೆ ಮರೆತ್ಯೋ?
ಅದಕ್ಕೂ ಅವನ ತಾಯಿಯೇ ಉತ್ತರಿಸಿದರು.
ಎಲ್ಲರಂತೆ ಇವ್ನು ಮದ್ವೆ ಆಗೋಕೆ ಇಷ್ಟಪಡ್ಲಿಲ್ಲವಲ್ಲ. ಮದ್ವೆ ಸರಳವಾಗಿರ್ಬೇಕು ಅಂತ ಕಂಡೀಷನ್. ಹೆಣ್ಣಿನವ್ರ ಕಡೆಯಿಂದ ವರದಕ್ಷಿಣೆ, ಆ ಖರ್ಚು ಈ ಖರ್ಚು ಅಂತ ಇಸ್ಕೋಬಾರ್ದು. ನಮ್ಮ ಕಡೆ ಐದಾರು ಜನ, ಆ ಕಡೆಯಿಂದ ಐದಾರು ಜನ. ದೇವಸ್ಥಾನದಲ್ಲಿ ಮದ್ವೆ ಆಗ್ಬೇಕು ಅಂತೆಲ್ಲ ಹೇಳ್ದ. ಅವನಿಷ್ಟದಂತೆ ಹತ್ತಿಪ್ಪತ್ತು ಮಂದಿ ಸಮಕ್ಷಮದಲ್ಲಿ ಇಲ್ಲೇ ರಾಮದೇವರ ದೇವಸ್ಥಾನದಲ್ಲಿ ಸರಳವಾಗಿ ಮದ್ವೆ ನಡೀತು. ಒಟ್ಟಿನಲ್ಲಿ ಅವ್ನು ಮದ್ವೆ ಆದ್ನಲ್ಲ ಅಂತ್ಲೇ ನನ್ನ ಸಂತೋಷ…
ಕುಡಿದ ಪಾನಕ ಹೊಟ್ಟೆಯನ್ನು ತಂಪು ಮಾಡಿತು.
ಸಂಜೀವ ಮತ್ತು ನಾನು ಒಂದೇ ಕಾಲೇಜಿನಲ್ಲಿ ಓದಿದವರು. ಅವನಿಗೆ ಉದ್ಯೋಗಕ್ಕೆ ಸೇರಿ ಬದುಕು ಸಾಗಿಸುವ ಆವಶ್ಯಕತೆ ಇರಲಿಲ್ಲ. ಬ್ಯಾಂಕ್ ನೌಕರಿ ದೊರಕಿದರೂ ಹತ್ತು ವರ್ಷಗಳು ಕೆಲಸ ಮಾಡುವುದರಲ್ಲಿ ಅವನಿಗೆ ಬೇಸರ ಬಂದು ಕೆಲಸಕ್ಕೆ ರಾಜೀನಾಮೆ ನೀಡಿದ. ಅನಂತರ ನೆಲಮಂಗಲದ ಬಳಿಯ ಪಿತ್ರಾರ್ಜಿತ ಜಮೀನು ಅಭಿವೃದ್ಧಿಪಡಿಸಿಕೊಂಡು ಇದ್ದರೆ ಸಾಕೆಂದು ಅವನಿಗೆ ಅನಿಸಿತು. ಸಾಹಿತ್ಯ ಹಾಗೂ ಸಂಗೀತ ಅವನಿಗಿಷ್ಟವಾದ ವಿಷಯ. ಪುರಾಣ, ತತ್ತ್ವಶಾಸ್ತ್ರ, ಐತಿಹಾಸಿಕ, ಸಾಮಾಜಿಕ, ಜಾನಪದ…. ಹೀಗೆ ಅನೇಕ ಪ್ರಕಾರದ ಸಾಹಿತ್ಯಪುಸ್ತಕಗಳನ್ನು ಓದುವುದೆಂದರೆ ಅವನಿಗೆ ಬಹಳ ಆಸಕ್ತಿ. ದಕ್ಷಿಣಾದಿ ಹಾಗೂ ಉತ್ತರಾದಿ ಸಂಗೀತವೆಂದರೂ ಅವನಿಗೆ ಬಹಳ ಪ್ರಿಯ. ಹಾಗಾಗಿ ಅವನು ಬೆಂಗಳೂರು ಕಡೆ ಯಾವುದಾದರೂ ಸಾಹಿತ್ಯ ಅಥವಾ ಸಂಗೀತ ಕಾರ್ಯಕ್ರಮಕ್ಕೆ ಬಂದಾಗ ಸ್ವಲ್ಪ ಹೊತ್ತಿನ ಮಟ್ಟಿಗಾದರೂ ನನ್ನನ್ನು ಕಾಣದೆ ಹಿಂತಿರುಗುತ್ತಿರಲಿಲ್ಲ.
ನಾನು ಓದುವ ಕಾಲದಲ್ಲಿ ವಕೀಲರಿಗೆ ತುಂಬ ಗೌರವವಿತ್ತು. ಶ್ರೀಮಂತಿಕೆಯೂ ಇತ್ತು. ನನ್ನ ತಂದೆಯವರು ವಕೀಲರೊಬ್ಬರ ಕಾರಕೂನರಾಗಿದ್ದರು. ನನ್ನ ತಂದೆಗೆ ನಾನು ಚೆನ್ನಾಗಿ ಓದಿ ವಕೀಲನಾಗಬೇಕೆಂಬ ಆಸೆ ಇತ್ತು. ಅವರ ಆಸೆಯಂತೆ ನಾನು ಲಾ ಕಾಲೇಜಿಗೆ ಸೇರಿಕೊಂಡು ಎಲ್.ಎಲ್.ಬಿ. ಮಾಡಿದೆ. ತಂದೆಯವರ ವಕೀಲರ ಕೈಕೆಳಗಿನ ಜೂನಿಯರ್ ಆಗಿ ಕಕ್ಷಿಗಾರರನ್ನು ಭಕ್ಷಿಸುವ ವಿದ್ಯೆ ಕಲಿತೆ. ಎಷ್ಟೋ ಬಾರಿ ಸಂಜೀವ ತನ್ನ ಮನೆಗೊಮ್ಮೆ ಬಾ ಎಂದು ಕರೆದರೂ ನಾನು ನನ್ನ ವಕೀಲಿ ವೃತ್ತಿಯಲ್ಲಿ ಮುಳುಗಿಹೋಗಿದ್ದರಿಂದ ಅಲ್ಲಿಗೆ ಹೋಗಲಾಗಿರಲಿಲ್ಲ. ಮದುವೆಯಾಗಿ ಐದಾರು ವರ್ಷಗಳಾದರೂ ನಮಗೆ ಮಕ್ಕಳಾಗದಿದ್ದದ್ದರಿಂದ ಸುಮಿತ್ರಳ ಕಳವಳ ಹೆಚ್ಚಾಗುತ್ತ ಬಂತು. ಅವಳಿಗೊಂದು ಬದಲಾವಣೆ ಇರಲಿ ಎಂದು ನಾನು ಅವಳನ್ನು ಇಲ್ಲಿಗೆ ಕರೆತಂದದ್ದು.
ಊಟದ ನಂತರ ಸಂಜೀವ ನಮ್ಮನ್ನು ಅತಿಥಿಕೋಣೆಗೆ ತಂದುಬಿಟ್ಟು, ಇಬ್ಬರೂ ಸ್ವಲ್ಪ ರೆಸ್ಟ್ ತೊಗೊಳ್ಳಿ. ಆಮೇಲೆ ನಮ್ಮ ತೋಟದ ಕಡೆ ಹೋಗಿ ಸುತ್ತಾಡಿಕೊಂಡು ಬರೋಣ ಎಂದು ಹೇಳಿಹೋದ. ತನ್ನ ಅನುಭವವನ್ನು ನನ್ನ ಮುಂದೆ ಬಿಚ್ಚಿಡಲು ಸುಮಿತ್ರಳಿಗೆ ಸಮಯ ಸಿಕ್ಕಹಾಗಾಯಿತು.
ಎಂಥಾ ಊಟ! ಸ್ವಂತ ಗದ್ದೆಯಲ್ಲಿ ಬೆಳೆದ ಬಂಗಾರಸಣ್ಣ ಅಕ್ಕಿಯ ಅನ್ನ, ತಮ್ಮ ಹೊಲದಲ್ಲೇ ಬೆಳೆದ ತಾಜಾ ತರಕಾರಿಯ ಘಮಘಮ ಹುಳಿ, ಪಲ್ಯ. ಜೊತೆಗೆ ತೆಂಗಿನಕಾಯಿ ಚಟ್ನಿ. ಮನೆಯಲ್ಲೇ ಕರೆದ ಹಸುವಿನ ಹಾಲು ಹೆಪ್ಪುಹಾಕಿ ತಯಾರಿಸಿದ ಗಟ್ಟಿ ಮೊಸರು. ಊಟದ ನಂತರ ಇಲ್ಲೇ ಬೆಳೆದ ಮಾವಿನಹಣ್ಣು ಎಂದು ವರ್ಣನೆ ಮಾಡತೊಡಗಿದಳು.
ಶಾಂತಿ ನೆಲೆಸಬೇಕಾದರೆ ಮೊದಲು ಸಮೃದ್ಧಿ ಇರಬೇಕು ಕಣೆ ಎಂದು ಅವಳ ಮಾತಿಗೆ ಬ್ರೇಕ್ ಹಾಕಿದೆ.
ಸಂಜೀವ ನಮ್ಮ ಮನೆಗೆ ಬಂದಾಗಲೆಲ್ಲ ಸುಮಿತ್ರಳ ಆತಿಥ್ಯವೂ ಜೋರಾಗಿರುತ್ತಿತ್ತು. ಇದನ್ನು ನೆನೆಸಿಕೊಂಡು ಅವನು ಅಪರೂಪಕ್ಕೆ ಅತಿಥಿಗಳಾಗಿ ಬಂದ ನಮಗೆ ಭಕ್ಷ್ಯ ತಯಾರಿಸುವ ಜವಾಬ್ದಾರಿಯನ್ನು ತನ್ನ ಹೆಂಡತಿಯ ಮೇಲೆ ಹೊರಿಸಿರಬೇಕು. ಹಾಗಾಗಿ ಭಾಗೀರಥಿಗೆ ನಮ್ಮೊಡನೆ ಬೆರೆತು ಹೆಚ್ಚು ಸಮಯ ಕಳೆಯಲು ಅವಕಾಶವಿರಲಿಲ್ಲ.
ಸುಮಾರು ಒಂದು ಗಂಟೆಯ ಚಿಕ್ಕ ವಿಶ್ರಾಂತಿ ಮುಗಿದು ನಾವು ಎದ್ದದ್ದು ತಿಳಿದು ಭಾಗೀರಥಿ ಒಳಗೆ ಹೋಗಿ ಚಹಾ ಮಾಡಿ ತಂದಳು.
ಚಹಾ ಹೀರುತ್ತಲೇ ಸುಮಿತ್ರ, ಭಾಗೀರಥಿಯವರೇ, ನಾವು ಬಂದಾಗಿನಿಂದ ನಿಮಗೆ ಕೆಲಸವೋ ಕೆಲಸ. ಮಾತಾಡಲು ನಿಮಗೆ ಸಮಯವೇ ಇಲ್ಲ. ಮುಂದಿನ ಬಾರಿ ನಿಮ್ಮ ಮನೆಯವರು ಬೆಂಗಳೂರಿಗೆ ಬಂದಾಗ ನೀವೂ ಬನ್ನಿ. ನಿಮ್ಮನ್ನು ನಮ್ಮ ಮನೆಯಲ್ಲಿ ಬಿಟ್ಟು ಅವರು ಕಾರ್ಯಕ್ರಮಕ್ಕೆ ಹೋಗಿಬರಲಿ. ಹಿತವಾಗಿ ಮಾತನಾಡುವ ಸುಖಕ್ಕಿಂತ ಹೆಚ್ಚಿನ ಸುಖ ಎಲ್ಲಿದೆ ಹೇಳಿ? ಎಂದಳು.
ಆಯ್ತು, ನೀವು ತೋಟಕ್ಕೆ ಹೋಗಿ ಬನ್ನಿ. ಇವತ್ತು ರಾತ್ರಿ ಊಟ ಮಾಡ್ಕೊಂಡೇ ಹೋಗ್ಬೇಕು ಎಂದ ಭಾಗೀರಥಿಯ ಮಾತನ್ನು ಅನುಮೋದಿಸುತ್ತ ಸಂಜೀವ, ಹೌದು, ಆನಂದ…. ಈ ಮನೆಯಲ್ಲಿ ಭಾಗೀರಥಿ ಹೇಳಿದ್ದನ್ನು ಎಲ್ಲರೂ ಪಾಲಿಸಬೇಕು ಎಂದು ನಕ್ಕನು.
ಸಂಜೀವನ ಜೊತೆ ಸುತ್ತಾಡಿ ಬರಲು ನಾವು ಹೊರಟೆವು. ಮನೆಯ ಹಿಂಭಾಗದಲ್ಲಿ ಸ್ವಲ್ಪವೇ ದೂರಕ್ಕೆ ದನದ ಕೊಟ್ಟಿಗೆ. ಅಲ್ಲಿ ಮೂರ್ನಾಲ್ಕು ಹಸುಗಳು, ಒಂದೆರಡು ಕರುಗಳು, ವಿಶಾಲವಾದ ಕೊಟ್ಟಿಗೆಯೊಳಗೆ ಸಂಜೀವ ಪ್ರವೇಶಿಸುತ್ತಿದ್ದಂತೆ ಆ ಮುಗ್ಧ ಪ್ರಾಣಿಗಳು ತಮ್ಮ ಪ್ರೀತಿಯ ಯಜಮಾನ ಬಂದದ್ದು ನೋಡಿ ಅವನತ್ತಲೇ ಮುಖಮಾಡಿದವು. ಅವನ ಹಿಂದೆಯೇ ನಾವು ಬಂದೆವು. ಅವನು ಅವುಗಳ ತಲೆ, ಕುತ್ತಿಗೆ, ಬೆನ್ನನ್ನು ಪ್ರೀತಿಯಿಂದ ಸವರತೊಡಗಿದ. ಈ ಹಸುಗಳಿಗೆ ದಿನಕ್ಕೊಮ್ಮೆಯಾದರೂ ಬಂದು ಮಾತಾಡಿಸದೆ ಹೋದರೆ ತೃಪ್ತಿಯಿಲ್ಲ. ಅಲ್ವೇನೆ ಗೌರಿ? ಎಂದಾಗ ಅವನ ಮಾತು ಅರ್ಥವಾದಂತೆ ಹಸುವೊಂದು ತಲೆ ಅಲ್ಲಾಡಿಸಿತು.
ಪ್ರಾಣಿಗಳನ್ನು ನಾವು ಕೇವಲ ಪ್ರಾಣಿಗಳನ್ನಾಗಿ ನೋಡಬಾರದು. ಅದೇ ರೀತಿ ಆಳುಗಳನ್ನು ಕೇವಲ ಆಳುಗಳಾಗಿ ಕಾಣಬಾರದು. ಇಲ್ಲಿ ಕೆಲಸ ಮಾಡುವ ಆಳುಗಳಿಗೆ ನಾನು ಷೆಡ್ಡುಗಳನ್ನು ಕಟ್ಟಿಕೊಟ್ಟಿದ್ದೇನೆ. ತಮ್ಮ ತಮ್ಮ ಸಂಸಾರದ ಜೊತೆಯಲ್ಲೇ ವಾಸಮಾಡುವ ಸೌಕರ್ಯ ಅವರಿಗಿದೆ. ಹಾಗಾಗಿ ಇಲ್ಲಿ ಎಲ್ಲರೂ ನಿಷ್ಠೆಯಿಂದ ಕೆಲಸ ಮಾಡಿಕೊಂಡಿದ್ದಾರೆ. ನನಗೆ ಸೂಪರ್ವೈಜ್ ಮಾಡೋ ಆವಶ್ಯಕತೆಯೇ ಇರೋದಿಲ್ಲ.
ಅಷ್ಟರಲ್ಲಿ ಒಬ್ಬ ಆಳು ತೆಂಗಿನಮರ ಏರಿ ಮೂರು ಎಳನೀರು ಕಾಯಿಗಳನ್ನು ಕೆಡವಿದ. ಆತ ಮರಕ್ಕೆ ಪಾದಗಳನ್ನೂರಿ ಸರಸರನೆ ಏರುವ ಚಮತ್ಕಾರಿಕ ದೃಶ್ಯ ನೋಡಿದ ಸುಮಿತ್ರಳ ಆಶ್ಚರ್ಯ ಹೇಳತೀರದು. ಎಳನೀರು ಮತ್ತು ಮಚ್ಚು ಹಿಡಿದು ಆ ಆಳು ನಮ್ಮ ಬಳಿಗೆ ಬಂದ.
ಈಗಷ್ಟೇ ಚಹ ಕುಡಿದು ಬಂದಿದ್ವಲ್ಲ ಸುಮಿತ್ರ ಸಂಕೋಚ ವ್ಯಕ್ತಪಡಿಸಿದಳು.
ನೋಡಿ ಮೇಡಂ, ತೋಟ ನೋಡಲಿಕ್ಕೆ ಬಂದ ಅತಿಥಿಗಳು ಎಳನೀರು ಕುಡಿಯದೆ ಹೋದ್ರೆ ಈ ತೆಂಗಿನಮರಗಳಿಗೆ ಕೋಪ ಬಂದುಬಿಡುತ್ತೆ. ಕಾಯಿ ಬಿಡೋದಿಲ್ಲ ಆಮೇಲೆ ಎಂದು ಸಂಜೀವ ನಗುತ್ತ ನಮ್ಮನ್ನು ಓಲೈಸಿದ.
ಪ್ರಾಣಿಗಳೊಡನೆ ಮಾತ್ರವಲ್ಲ, ಮರಗಿಡಗಳ ನಡುವೆ ಕೂಡಾ ಪ್ರೀತಿ ಸಂಬಂಧ ಇಟ್ಟುಕೊಂಡ ಸಂಜೀವನನ್ನು ಕಂಡು ಅವನು ನನಗಿಂತ ಎಷ್ಟು ಎತ್ತರಕ್ಕೇರಿದ್ದಾನೆ ಎಂದು ವಿಸ್ಮಯವಾಯಿತು.
ಆಳು ಕೊಚ್ಚಿಕೊಟ್ಟ ಎಳನೀರು ಕುಡಿದಾಗ ಅಮೃತದಂತೆನಿಸಿತು.
ಅದೇ ಹೊತ್ತಿಗೆ ಯಾರೋ ಒಬ್ಬ ಓಡಿ ಬಂದು ಸಂಜೀವನಿಗೆ ಕೈ ಜೋಡಿಸಿ, ಅಯ್ಯಾ, ಅರಳಿಕಟ್ಟೆ ಮುಂದೆ ಜನ ಸೇರವ್ರೆ. ಪಂಚಾಯ್ತಿಗೆ ನಿಮ್ಮನ್ನು ಕರ್ಕೊಂಡು ಬಾ ಅಂದ್ರು ನಮ್ಮ ಗೌಡ್ರು ಎಂದು ಹೇಳಿದ. `ಏನಿದು ಸಮಾಚಾರ?’ ಎನ್ನುವಂತೆ ನಾನು ಸಂಜೀವನ ಮುಖ ನೋಡಿದೆ.
ಆನಂದ, ಈ ಹಳ್ಳಿಗಳಲ್ಲಿ ಏನು ಜಗಳ, ತಕರಾರು ನಡೆದರೂ ಎಲ್ಲರೂ ಅರಳಿಕಟ್ಟೆ ಹತ್ರ ಸೇರ್ತಾರೆ. ಐವರು ಹಿರಿಯ ಅನುಭವಸ್ಥರು ವಿಚಾರಣೆ ಮಾಡಿ ನಿರ್ಣಯ ನೀಡುತ್ತಾರೆ. ಅದರಂತೆ ಎಲ್ಲರೂ ನಡೆದುಕೊಳ್ತಾತಾರೆ. ಅಜ್ಜನ ಕಾಲದಿಂದಲೂ ಈ ರೀತಿಯ ಪಂಚಾಯಿತಿಗೆ ನಮ್ಮ ಮನೆಯವರೇ ಮುಖ್ಯಸ್ಥರಾಗಿರಬೇಕಾಗಿ ಬಂದಿದೆ. ಈ ಜಾಗದಲ್ಲಿ ನನಗೆ ಇಷ್ಟವಾಗದ ಕೆಲಸ ಇದೊಂದೇ. ಯಾವುದು ಸರಿ, ಯಾವುದು ತಪ್ಪು ಎಂದು ಹೇಳುವಷ್ಟು ನಾನು ಬದುಕನ್ನು ಕಂಡಿಲ್ಲ. ಆದರೂ ನಾನು ಇರಬೇಕಾಗುತ್ತದೆ. ಏಕೆಂದರೆ ಶಂಖದಿಂದ ಬಂದರೆ ಮಾತ್ರ ತೀರ್ಥ ಎನ್ನುವಂತೆ ನನ್ನ ಮಾತು ಎಂದರೆ ಇಲ್ಲಿ ಎಲ್ಲರಿಗೂ ಮಾನ್ಯ. ನಾನು ನಿರ್ಣಯಗಳನ್ನು ತೆಗೆದುಕೊಳ್ಳುವುದಿಲ್ಲ. ನೆರೆದ ಹಿರಿಯರು ಚರ್ಚೆ ಮಾಡುವಾಗ ನನಗೆ ಸೂಚನೆ ಸಿಗುತ್ತದೆ. ಅವರಿಗೆ ಒಪ್ಪಿಗೆಯಾಗುವಂತೆ ನಿರ್ಣಯ ಘೋಷಿಸುವುದಷ್ಟೇ ನನ್ನ ಕೆಲಸ. ಅಲ್ವೋ, ನೀನು ಹೇಗೂ ವಕೀಲ. ನ್ಯಾಯ ಅನ್ಯಾಯದ ಬಗ್ಗೆ ನಿನಗೆ ಹೆಚ್ಚಿನ ಮಾಹಿತಿ ಇರುತ್ತೆ. ನೀನೂ ಜೊತೆಯಲ್ಲಿ ಬಾ ಎಂದ ಸಂಜೀವ.
ನನಗೂ ಕುತೂಹಲ. ಕೋರ್ಟುಮೆಟ್ಟಿಲು ಹತ್ತದೆ ಜನ ಹೇಗೆ ತಮ್ಮತಮ್ಮಲ್ಲೇ ನ್ಯಾಯತೀರ್ಮಾನ ಮಾಡಿಕೊಳ್ಳುತ್ತಾರೆಂದು ನೋಡುವ ಅವಕಾಶ ನನಗೆ ಅನಾಯಾಸವಾಗಿ ಒದಗಿಬಂದಂತಾಯ್ತು.
ಎಷ್ಟು ದೂರ ಇಲ್ಲಿಂದ?
ಒಳದಾರಿಯಲ್ಲಿ ನಡೆದುಹೋದರೆ ಅಂಥ ದೂರ ಇಲ್ಲ. ನಡೆದೇ ಹೋಗಬಹುದು. ಇಲ್ಲದಿದ್ರೆ ನಿನ್ನ ಕಾರಿನಲ್ಲೇ ಹೋಗೋಣ
ಅಲ್ಲಿಯ ಸಾಮಾನ್ಯ ಜನರ ಮುಂದೆ ನನ್ನ ದೊಡ್ಡಸ್ತಿಕೆ ಏನು ತೋರಿಸೋದು? ನಡೆದುಕೊಂಡೇ ಹೋಗೋಣ ಬಾ. ಸ್ವಲ್ಪ ವ್ಯಾಯಾಮ ಆದಂತಾಗುತ್ತೆ.
ನಾನು ರೆಡಿ. ತಿಂದಿದ್ದಾದರೂ ಸ್ವಲ್ಪ ಕರಗಲಿ ಎಂದು ಸುಮಿತ್ರಳೂ ದನಿಗೂಡಿಸಿದಳು.
ಹಸಿರು ಪರಿಸರದಲ್ಲಿ ನಡೆದುಹೋದದ್ದರಿಂದ ನಮಗೆ ಆಯಾಸವೆನಿಸಲಿಲ್ಲ. ನಾವು ಅರಳಿಕಟ್ಟೆ ಬಳಿಗೆ ಬಂದಾಗ ಅಲ್ಲಿ ನೆರೆದವರ ಗುಜು ಗುಜು ಮಾತು ನಿಂತಿತು. ಸಾಲಾಗಿ ಇರಿಸಿದ ಐದು ಕುರ್ಚಿಗಳ ಪೈಕಿ ನಡುವಿನ ಕುರ್ಚಿಯಲ್ಲಿ ಸಂಜೀವ ಕುಳಿತ. ಇನ್ನೆರಡು ಕುರ್ಚಿ ತಂದು ಅದೇ ಸಾಲಿಗೆ ಸೇರಿಸಿ ನನಗೂ ಸುಮಿತ್ರಳಿಗೂ ಅಲ್ಲಿನವರು ಕೈ ಮುಗಿದು ಕೂರಲು ಕೇಳಿಕೊಂಡರು.
ಎದುರಿನಲ್ಲಿ ಸುಮಾರು ೪೦-೫೦ ಮಂದಿ ಸೇರಿದಂತಿತ್ತು. ಮುಂಭಾಗದಲ್ಲಿ ಒಬ್ಬಳು ಬಸಿರಿ ಹುಡುಗಿ ಕಣ್ಣೀರುಹಾಕುತ್ತ ನಿಂತಿದ್ದಳು. ಅವಳ ಒಂದು ಪಕ್ಕಕ್ಕೆ ಒಬ್ಬ ಹೆಂಗಸು. ಬಹುಶಃ ಅವಳ ತಾಯಿ ಇರಬೇಕು. ಅವಳ ಪಕ್ಕದಲ್ಲಿದ್ದವ ಕೋಪದಿಂದ ಬಸಿರಿಯನ್ನು ನುಂಗುವಂತೆ ನೋಡುತ್ತಿದ್ದ. ಮತ್ತೊಂದು ಕಡೆ ಒಬ್ಬ ಇಂಗುತಿಂದ ಮಂಗನಂತೆ ನಿಂತಿದ್ದಾನೆ. ಅವನ ಪಕ್ಕದಲ್ಲಿ ಒಬ್ಬಳು ಹೆಣ್ಣು ಹುಡುಗಿ. ಅವಳ ಕಂಕುಳಲ್ಲಿ ಒಂದು ಚಿಕ್ಕ ಮಗು.
ಏನಾಯ್ತು? ಏನ್ಸಮಾಚಾರ? ಎಂದು ಸಂಜೀವ ಆರಂಭಿಸಿದ.
ನೋಡಿ ಸ್ವಾಮಿ, ಆ ಹಲ್ಕಾ ……… ನನ್ನ ತಂಗೀನ ಹಾಳುಮಾಡಿ ಈಗ ಮದ್ವೆ ಆಗೋಲ್ಲ ಅಂತಾನೆ ಎಂದು ಬಸಿರಿ ಪಕ್ಕದಲ್ಲಿ ನಿಂತಿದ್ದವನು ಎದುರಿನಲ್ಲಿ ನಿಂತವನ ಕಡೆ ಕೈತೋರಿಸಿ ದುರುಗುಟ್ಟಿಕೊಂಡು ರೋಷದಿಂದ ಹೇಳಿದ.
ನೋಡಪ್ಪ, ಯಾರಿಗೆ ಎಷ್ಟೇ ಸಿಟ್ಟು ಬಂದರೂ ಇಲ್ಲಿ ಬೈದಾಡಬಾರ್ದು. ಹಾಗೆ ನೀವು ನೀವೇ ಗುದ್ದಾಡಿಕೊಳ್ಳೋ ಹಾಗಿದ್ರೆ ನಾವೇಕೆ ಇಲ್ಲಿ ಬರ್ಬೇಕು? ಸಂಜೀವ ನುಡಿದ.
ಆಯ್ತು ಸ್ವಾಮಿ, ಹೊಟ್ಟೆ ಉರೀತದೆ ನನ್ನ ತಂಗಿ ಬಾಳು ಹಾಳು ಮಾಡಿದ್ದಕ್ಕೆ. ನೀವು ನ್ಯಾಯಕೊಟ್ಟರೆ ಸಾಕು ಎಂದು ಆತ ಸ್ವಲ್ಪ ತಣ್ಣಗಾದ.
ಮೊದಲು ಹುಡುಗಿ ಏನು ಹೇಳ್ತಾಳೆ ಅನ್ನೋದನ್ನ ಕೇಳೋಣ. ನಿನ್ನ ಹೆಸರೇನಮ್ಮ?
ಗಂಗಾ.
ನಿನ್ನ ವಯಸ್ಸೇನಮ್ಮ?
ಅವ್ಳಿಗೆ ಹದ್ನೈದು ವರ್ಷ. ಹತ್ತನೇ ಕ್ಲಾಸ್ನಲ್ಲಿ ಇದ್ಳು. ಚೆನ್ನಾಗಿ ಓದ್ತಾ ಇದ್ಳು. ಮುಂದೆ ಅವಳನ್ನ ಕಾಲೇಜಿಗೆ ಸೇರ್ಸಿ ಇನ್ನೂ ಚೆನ್ನಾಗಿ ಓದಿಸ್ಬೇಕಂತಿದ್ದೆ. ಇವ್ನಿಂದ ಎಲ್ಲಾ ಹಾಳಾಗಿಹೋಯ್ತು ಹುಡುಗಿಯ ಅಣ್ಣ ಗದ್ಗದಿತನಾದ.
ಗಂಗಾ, ಯಾಕಮ್ಮ ಹೀಗೆ ಮಾಡ್ದೆ? ಇಂಥ ಅಣ್ಣ ಸಿಗೋಕೆ ನೀನು ಪುಣ್ಯ ಮಾಡಿದ್ದೆ…..
ಸರಿ, ನಿನ್ನ ಈ ಸ್ಥಿತಿಗೆ ಯಾರು ಕಾರಣ? ನೀನೇ ಹೇಳು…
ಶರವಣ ಎದುರಿಗೆ ನಿಂತಿದ್ದವನತ್ತ ಕೈ ತೋರಿಸಿದಳು ಗಂಗಾ.
ಅವಳು ಸುಳ್ಳು ಹೇಳ್ತಾಳೆ ಸಾರ್. ಅವಳು ಬೇರೆ ಹುಡುಗ್ರ ಜೊತೆನೂ ಫ್ರೀಯಾಗಿರ್ತಿದ್ಳು ಶರವಣ ಬಾಯ್ಬಿಟ್ಟ.
ಯಾರು ಆ ಹುಡುಗರು?
ಕೆಂಪರಾಜು, ಶೀನ….. ನಮ್ಮ ಹಳ್ಳಿಯೋರೇ.
ಹೌದೇನಮ್ಮ ಗಂಗಾ?
ಅಯ್ಯಾ, ಅವ್ರ ಜೊತೆ ಮಾತಾಡ್ತಿದ್ದೆ ಅಷ್ಟೆ. ಆದ್ರೆ ನನ್ನನ್ನ ಉಪಯೋಗಿಸಿಕೊಂಡಿದ್ದು ಇವ್ನೇ ಗಂಗಾ ಗಳಗಳನೆ ಅತ್ತಳು.
ಏನಪ್ಪ ಶರವಣ, ತಪ್ಪು ಒಪ್ಕೊ…..
ಇಲ್ಲ ಸಾರ್. ನಾನು, ಅವಳು ಬಸಿರಾಗಿದ್ದಕ್ಕೆ ನಾನು ಕಾರಣ ಅಲ್ಲ ಭಂಡತನದಿಂದ ಹೇಳಿದ.
ಶರವಣ…. ನಿಜ ಒಪ್ಕೊಂಡ್ರೆ ಸರಿ. ಇಲ್ಲದಿದ್ರೆ ಆಓಂ ಟೆಸ್ಟ್ ಅಂತ ಇದೆ. ಅದನ್ನ ಮಾಡಿಸಿದ್ರೆ ನಿನ್ನ ಬಂಡವಾಳ ಹೊರಗೆ ಬರುತ್ತೆ.
ಶರವಣ ತೆಪ್ಪಗಾದ.
ಗಂಗಾ, ಹೇಳಮ್ಮ. ನೀನಾಗಿ ಅವನನ್ನು ಪ್ರೀತಿಸಿದೆಯೋ ಅಥವಾ ಅವನೇ ನಿನ್ನ ಬೆನ್ನಹಿಂದೆ ಬಿದ್ದನೋ? ನೀವಿಬ್ಬರು ಹತ್ತಿರವಾದದ್ದು ಹೇಗೆ?
ಗಂಗಾ ಉತ್ತರಿಸಲು ಅನುಮಾನಿಸಿದಳು.
ಶರವಣ ಕೂಡಲೇ, ಅವಳೇ ಮೇಲೆ ಬಿದ್ದು ನನ್ನನ್ನು ಲವ್ ಮಾಡಿದ್ಳು ಸಾರ್. ನನ್ಗೆ ಮದ್ವೆ ಆಗಿದೆ ಅಂತ ಹೇಳ್ದೆ. ಆದ್ರೂ ಅವ್ಳು ನನ್ನನ್ನು ಬಿಡ್ಲಿಲ್ಲ ಎಂದು ಗಂಗಾಳ ಮೇಲೆ ತಪ್ಪು ಹೊರಿಸಲು ನೋಡಿದ.
ಏಯ್ ಶರವಣ…. ಸುಳ್ಳು ಹೇಳ್ಬೇಡ. ಮದ್ವೆ ಆಗಿದೆ ಅಂತ ನನ್ಗೆ ಯಾವಾಗ ಹೇಳಿದ್ದೆ? ಗಂಗಾ ತನ್ನ ಸಿಟ್ಟನ್ನು ಹೊರಹಾಕಿದಳು.
ಎಲ್ಲವನ್ನೂ ನೋಡುತ್ತಿದ್ದ, ಕೇಳಿಸಿಕೊಳ್ಳುತ್ತಿದ್ದ ಸುಮಿತ್ರಳಿಗೆ ಆ ಭಂಡನ ಮೇಲೆ ವಿಪರೀತ ಸಿಟ್ಟು ಬಂತು.
ಏನಪ್ಪ, ಸುಳ್ಳು ಹೇಳೋದಕ್ಕೆ ಒಂದು ಮಿತಿ ಇದೆ. ಲವ್ ಅಂದ್ರೆ ಏನಂತ ಗೊತ್ತಿಲ್ಲದ ಈ ಪುಟ್ಟ ಹುಡುಗಿ ನಿನ್ನಂಥ ಗಡವನನ್ನು ಬಲವಂತ ಮಾಡಿದಳು ಎಂದ್ರೆ ಯಾವ ಮುಟ್ಠಾಳ ನಂಬ್ತಾನೆ? ನೀನು ಬಲೆ ಬೀಸಿದ್ದೀಯಾ. ಅವಳು ಬಲೆಯಲ್ಲಿ ಬಿದ್ದಿರಬೇಕಷ್ಟೆ ಆವೇಶದಿಂದ ಸುಮಿತ್ರ ನುಡಿದಳು.
ನಾನು ಮಾತ್ರವಲ್ಲ, ಸಂಜೀವ ಮತ್ತು ನಮ್ಮೊಂದಿಗಿದ್ದ ಹಿರಿಯರು ಸುಮಿತ್ರಳ ಮಾತಿಗೆ ಹೌದು ಎನ್ನುವಂತೆ ತಲೆಯಾಡಿಸಿದರು.
ಗಂಗಾ, ನಿಜ ಹೇಳಮ್ಮ. ಇವ್ನು ನಿನ್ಗೆ ಪರಿಚಯವಾದದ್ದು ಹೇಗೆ? ನೀನು ಬಾಯಿಬಿಡದೆ ಇದ್ರೆ ಅವನು ಹೇಳಿದ್ದೇ ನಿಜ ಎಂದು ಇಲ್ಲಿರುವವರು ನಂಬಬೇಕಾಗುತ್ತೆ. ನೀನು ಅಂಥವಳಲ್ಲ ಎಂದು ನಿನ್ನ ಮುಖ ನೋಡಿದ್ರೆ ನನಗನಿಸುತ್ತೆ. ಈಗ ನಾಚಿಕೆಪಡೋ ಸಮಯ ಮೀರಿಹೋಗಿದೆ. ನಿನ್ನ ಕಡೆ ನಾವೆಲ್ಲ ಇದ್ದೇವೆ. ಧೈರ್ಯವಾಗಿ ಹೇಳು ಸಂಜೀವ ಅವಳಲ್ಲಿ ವಿಶ್ವಾಸ ಮೂಡಿಸಿದ.
ಗಂಗಾ ಈಗ ಧೈರ್ಯವಾಗಿ ಮಾತನಾಡಿದಳು.
ಒಂದು ಸಲ ನನ್ನ ಫ್ರೆಂಡ್ ಗೀತಾ ಅನ್ನೋವ್ಳ ಜತೆ ಟಾಕೀಸ್ನಲ್ಲಿ ಸಿನಿಮಾ ನೋಡೋಕೆ ಹೋಗಿದ್ದೆ. ಸಿನಿಮಾದಲ್ಲಿ ಲವ್ ಸೀನು ನೋಡ್ತಿರುವಾಗ ಹಿಂದಿನಿಂದ ನನ್ನ ಬೆನ್ನನ್ನು ಯಾರೋ ಸವರಿದಂತಾಯ್ತು. ಮೊದ್ಲು ನಾನು ಹೆದರಿದೆ. ಹಿಂದಕ್ಕೆ ತಿರುಗಿ ಬೈಯೋ ಧೈರ್ಯ ನನ್ಗೆ ಬರ್ಲಿಲ್ಲ. ನಾನು ಸುಮ್ಮನಿದ್ದಿದ್ದರಿಂದ ಅವ್ನು ಕತ್ತಲೆಯಲ್ಲಿ ಸವರೋದನ್ನು ಮುಂದುವರಿಸಿದ. ನನ್ಗೆ ಏನು ಮಾಡಬೇಕಂತ್ಲೇ ತೋಚಲಿಲ್ಲ. ಸಿನಿಮಾ ಮುಗಿಯೋ ಹೊತ್ಗೆ `ನಾಳೆ ಸಂಜೆ ಆರುಗಂಟೆಗೆ ಆಂಜನೇಯ ದೇವಸ್ಥಾನಕ್ಕೆ ಬಾ. ಅದರ ಹಿಂದಿನ ಮಾವಿನಮರದ ಹತ್ರ ನಾನು ಕಾಯ್ತಾ ಇರ್ತೀನಿ’ ಎಂದು ಕಿವೀಲಿ ಪಿಸಗುಟ್ಟಿದ. ಯಾರೋ ಅಪರಿಚಿತನ ಜೊತೆ ಬೆರೆಯೋದು ನನ್ನ ಮನಸ್ಸಿನಲ್ಲಿರಲಿಲ್ಲ. ಆದರೆ ಮಾರನೆ ದಿನ ಸಂಜೆಯಾಗೋ ಹೊತ್ಗೆ ನನ್ಗೇ ಗೊತ್ತಿಲ್ಲದಂತೆ ನನ್ನ ಕಾಲುಗಳು ದೇವಸ್ಥಾನದ ಹತ್ರಕ್ಕೆ ಎಳೆದೊಯ್ದವು. ಅವ್ನು ಬಂದಿದ್ದಾನೋ ಇಲ್ವೋ ಅಂತ ನೋಡೋಕೆ ದೇವಸ್ಥಾನದ ಹಿಂದೆ ಹೋದೆ. ಮರದ ಕೆಳ್ಗೆ ರಸಪುರಿ ಮಾವಿನಹಣ್ಣು ಹಿಡ್ಕೊಂಡು ಅವ್ನು ನಿಂತಿದ್ದ. ವಾಪಸ್ ಹೊರ್ಟು ಹೋಗೋಣ ಅಂತ ನೋಡ್ದೆ. ಓಡಿಬಂದು ನನ್ನ ಜಡೆ ಎಳೆದು ನನ್ನನ್ನು ಹಿಡ್ಕೊಂಡ. ನನ್ಗೆ ಮಾವಿನಹಣ್ಣು ತಿನ್ನಿಸಿದ, ತಾನೂ ತಿಂದ. ಹಾಗೇ ಕಾಡಿನಂಥ ಆ ಜಾಗದಲ್ಲಿ ನಡ್ಕೊಂಡು ಹೋದ್ವಿ…..
ಸ್ವಲ್ಪ ಹೊತ್ತು ತಡೆದು ಗಂಗಾ ತನ್ನ ಮಾತು ಮುಂದುವರಿಸಿದಳು.
ಅವತ್ತಿನಿಂದ ನಾನು ಕತ್ತಲಾಗೋ ಮುಂಚೆ ಪ್ರತಿದಿನ ದೇವಸ್ಥಾನಕ್ಕೆ ಹೋಗಿ ಬರೋಕೆ ಶುರು ಮಾಡ್ಕೊಂಡೆ. ಮುಂದೆ ಏನಾಗುತ್ತೆ ಅಂತ ನಾನು ಗಂಭೀರವಾಗಿ ಯೋಚಿಸ್ಲೇ ಇಲ್ಲ. ನನ್ನ ಅಮ್ಮಂಗೂ ಅನುಮಾನ ಬರ್ಲಿಲ್ಲ. ಪರೀಕ್ಷೇಲಿ ಫಸ್ಟ್ಕ್ಲಾಸ್ ಬರೋಕೆ ನಾನು ದೇವ್ರಲ್ಲಿ ಬೇಡಿಕೊಳ್ಳೋಕೆ ಹೋಗ್ತಿದೀನಿ ಅಂತ ಅಂದ್ಕೊಂಡಿದ್ಳು. ನನ್ಗೆ ಯಾವಾಗ ವಾಂತಿ ಶುರುವಾಯ್ತೋ ಆಗ ಗುಟ್ಟು ರಟ್ಟಾಯ್ತು. ಅಮ್ಮ ನನ್ಗೆ ಚೆನ್ನಾಗಿ ಹೊಡ್ದು ಯಾರ ಹತ್ರ ಮಲಗಿದ್ದೆ ಅಂತ ತರಾಟೆಗೆ ತೊಗೊಂಡ್ಳು. ಅವನು ಯಾರು? ಅವನ ಮನೆಯವರು ಯಾರು? ಎಂಥವರು ಅಂತ ನಾನು ಸರ್ಯಾಗಿ ತಿಳ್ಕೊಳೋದಕ್ಕೆ ಪ್ರಯತ್ನಿಸಿರ್ಲಿಲ್ಲ. ಅಂಥಾ ಒಂದು ಆವಶ್ಯಕತೆ ಇದೆ ಅಂತ್ಲೂ ನನ್ಗೆ ತೋರ್ಲಿಲ್ಲ. ಅಣ್ಣನಿಗೂ ನನ್ನ ವಿಷ್ಯ ತಿಳಿದುಹೋಯ್ತು. ನಾನು ಹೀಗೆ ಯಾರಿಂದ್ಲೋ ಯಾಮಾರಿದೆ ಅಂತ ಅವನ್ಗೆ ಸಿಕ್ಕಾಪಟ್ಟೆ ಕೋಪ ಬಂದು ನನ್ಗೆ ಯದ್ವಾತದ್ವಾ ಹೊಡ್ದ. ನಾನು ಹೇಳಿದ ಅಲ್ಪಸ್ವಲ್ಪ ವಿವರದಿಂದ ಅಣ್ಣ ಅವನನ್ನು ಹೇಗೋ ಪತ್ತೆ ಮಾಡಿ ಎಳೆತಂದ. ಚೆನ್ನಾಗಿ ಬಾರ್ಸಿ ಅವನ ಬಾಯಿ ಬಿಡಿಸಿದ. ಅವನ್ಗೆ ಮದ್ವೆಯಾಗಿದೆ, ಒಂದು ವರ್ಷದ ಮಗು ಇದೆ ಅಂತ ಗೊತ್ತಾಯ್ತು. ಅಣ್ಣ ದುಃಖದಿಂದ ತನ್ನ ಹಣೆ ಚಚ್ಚಿಕೊಂಡ. ನಾನು ಬಸಿರಿಯಾಗಿರೋದನ್ನ ತಿಳ್ಸಿ ನನ್ನನ್ನು ಮದುವೆಯಾಗೋವಂತೆ ಅವನನ್ನು ಒತ್ತಾಯಿಸಿದ. ಮನೆಯವರನ್ನು ಕೇಳಿ ಮಾಡಿಕೊಳ್ತೀನಿ ಅಂತ ಹೇಳಿದವ್ನು ಊರೇ ಬಿಟ್ಟು ಓಡಿಹೋಗಿದ್ದ. ಈಗ ಮತ್ತೆ ಅಣ್ಣನ ಕೈಗೆ ಸಿಕ್ಕಿದ್ದಾನೆ.
ಇದನ್ನೆಲ್ಲಾ ಕೇಳಿಸಿಕೊಂಡ ಶರವಣನ ಹೆಂಡತಿ ಕಮಲ ತತ್ತರಿಸಿ ಹೋಗಿದ್ದಳು. ಗಂಡನನ್ನು ತಿವಿಯುವಂತೆ ನೋಡಿ, ನಿನಗೆ ನಾನೇನು ಕಮ್ಮಿ ಮಾಡಿದ್ದೆ ಅಂತ ಅವಳ ಹತ್ರ ಹೋದೆ ಹೇಳು. ನಾವಿಬ್ರೂ ಪ್ರೀತ್ಸಿ ಮದ್ವೆ ಆಗಿದ್ದು ಕೂಡಾ ನಿನ್ಗೆ ಮರ್ತುಹೋಯ್ತೆ? ಥೂ….. ನಿನ್ನ ಜನ್ಮಕ್ಕೆ ಎಂದು ಅವನ ಮುಂದೆ ಉಗಿದಳು.
ಶರವಣನ ಬಾಯಿ ಕಟ್ಟಿಹೋಗಿತ್ತು.
ಯಾವ ತಪ್ಪನ್ನೂ ಮಾಡದ ಆ ಹೆಣ್ಣುಮಗಳ ಮೇಲೆ ನನಗೆ ಪರಿತಾಪ ಉಂಟಾಯಿತು.
ನಡೆದುಹೋದದ್ದರ ಬಗ್ಗೆ ಚಿಂತಿಸಿ ಫಲವಿಲ್ಲ. ಮುಂದೇನು ಮಾಡಬೇಕೆಂಬುದಕ್ಕೆ ನಾವಿಲ್ಲಿ ಸೇರಿದ್ದೇವೆ. ದೂರು ಕೊಟ್ಟಿರುವವರ ಅಪೇಕ್ಷೆ ಏನು ಅಂತ ನಾವು ಮೊದಲು ತಿಳಿದುಕೊಳ್ಳೋಣ ಸಂಜೀವ ಹೇಳಿದ.
ಗಂಗಾಳ ತಾಯಿ ಮಾತನಾಡಿದಳು – ಸ್ವಾಮಿ, ನಾಳೆ ನನ್ನ ಮಗಳ ಮಗೂಗೆ ಅಪ್ಪ ಯಾರು ಅನ್ನೋ ಪ್ರಶ್ನೆ ಜನ ಎತ್ತದಂತೆ ಅವ್ನು ಇವ್ಳಿಗೆ ತಾಳಿ ಕಟ್ಟಿ ಬಾಳ್ವೆ ಕೊಡ್ಬೇಕು.
ಇದನ್ನು ಕೇಳಿ ಅಲ್ಲಿ ನೆರೆದವರ ಪೈಕಿ ಕೆಲವರು ಅದೇ ಅವನಿಗೆ ಸರಿಯಾದ ಶಿಕ್ಷೆ. ಇಬ್ಬರು ಹೆಂಡಿರನ್ನೂ, ಅವರ ಮಕ್ಕಳನ್ನೂ ಸಾಕಲಿ ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಪಂಚಾಯ್ತಿಯ ಹಿರಿಯರು ಅದೇ ನಿರ್ಧಾರಕ್ಕೆ ಬಂದಂತಿತ್ತು.
ಅಷ್ಟರಲ್ಲಿ ಸಂಜೀವ ಸಭೆಯನ್ನು ಉದ್ದೇಶಿಸಿ, ಇವತ್ತು ನಿಮ್ಮೆಲ್ಲರ ಪುಣ್ಯಕ್ಕೆ ನಮ್ಮ ನಡುವೆ ನನ್ನ ಗೆಳೆಯ ಆನಂದ ಬಂದಿದ್ದಾರೆ. ಅವರು ಬೆಂಗಳೂರಿನ ಹೈಕೋರ್ಟ್ನಲ್ಲಿ ವಕೀಲರು. ಅವರ ಸಲಹೆ ಕೇಳಿದರೆ ಹೇಗೆ? ಎಂದು ಪ್ರಶ್ನೆ ಹಾಕಿದ.
ಅಲ್ಲಿ ನೆರೆದವರೆಲ್ಲ ಒಕ್ಕೊರಲಿನಿಂದ ಅದಕ್ಕೆ ಸಮ್ಮತಿಸಿದರು.
ಪರಿಸ್ಥಿತಿಯನ್ನು ಚೆನ್ನಾಗಿ ಅರ್ಥಮಾಡಿಕೊಂಡ ನಾನು ನನ್ನ ಅಭಿಪ್ರಾಯವನ್ನು ತಿಳಿಸಲೇಬೇಕಾಗಿ ಬಂತು.
ನಾನು ವಕೀಲನಾಗಿ ನನ್ನ ಬಳಿ ಬಂದ ಕಕ್ಷಿಗಾರರ ಪರವಾಗಿ ಅದು ನ್ಯಾಯವೋ ಅನ್ಯಾಯವೋ ಎಂಬುದರ ಬಗ್ಗೆ ತಲೆಕೆಡಿಸಿಕೊಳ್ಳದೆ ಕೋರ್ಟ್ನಲ್ಲಿ ವಾದಿಸುವುದು ನನಗೆ ಗೊತ್ತಿತ್ತೇ ಹೊರತು ನ್ಯಾಯಾಧೀಶನಾಗಿ ತೀರ್ಪುಕೊಡುವ ಸಂದರ್ಭ ನನಗಿನ್ನೂ ಬಂದಿರಲಿಲ್ಲ. ಈ ಸಂದರ್ಭದಲ್ಲಿ ಸೋಲು ಗೆಲವಿನ ಪ್ರಶ್ನೆ ಇಲ್ಲದೆ ಪ್ರಾಮಾಣಿಕವಾಗಿ ಬಾಧಿತರಿಗೆ ನ್ಯಾಯ ದೊರಕಿಸಿಕೊಡುವಲ್ಲಿ ನೆರವಾಗುವ ಪ್ರಸಂಗ ಬಂದಿದೆ. ನನಗೂ ಮುಂದೆ ನ್ಯಾಯಾಧೀಶನಾಗಬೇಕೆಂಬ ಹಂಬಲ ಇದ್ದುದರಿಂದ ನಾನು ಇದೊಂದು ಸವಾಲು ಎಂದೇ ಪರಿಗಣಿಸಿ ಮಾತಾಡಲು ಮುಂದಾದೆ.
ಮೋಸಕ್ಕೆ ಬಲಿಯಾದ ಹುಡುಗಿಗೆ ಶರವಣ ತಾಳಿಕಟ್ಟಿ ಅವನು ಇಬ್ಬರಿಗೂ ಬಾಳ್ವೆ ಕೊಡಲಿ ಎಂಬ ಅಭಿಪ್ರಾಯಕ್ಕೆ ಇಲ್ಲಿಯವರು ಬಂದಂತಿದೆ. ಇದಕ್ಕೆ ಏನು ಕಾರಣ ಎಂದು ನನಗೆ ಅರ್ಥವಾಗುತ್ತೆ. ಶೀಲಕಳೆದುಕೊಂಡವಳನ್ನು ಬೇರೆ ಯಾರೂ ಮದುವೆಯಾಗುವುದಿಲ್ಲ. ಆದ್ದರಿಂದ ಮೋಸ ಮಾಡಿದವನೇ ಅವಳನ್ನು ಮದುವೆಯಾಗಲಿ ಎನ್ನುವುದು ಒಂದು ತರ್ಕ. ಗಂಡಿಗೆ ಒಂದಕ್ಕಿಂತ ಹೆಚ್ಚು ಮದುವೆಯಾಗುವ ಹಕ್ಕು ಹಿಂದಿನಿಂದಲೂ ಬಂದಿದೆ. ಕಾನೂನು ಬದಲಾದರೂ ಜನರು ಇನ್ನೂ ಬದಲಾಗಿಲ್ಲ. ಕಾನೂನಿನ ದೃಷ್ಟಿಯಿಂದ ಇವನು ತನ್ನ ಮೊದಲನೇ ಹೆಂಡತಿಗೆ ವಿಚ್ಛೇದನ ನೀಡದೆ ಮತ್ತೊಬ್ಬಳನ್ನು ಮದುವೆ ಆಗುವಂತಿಲ್ಲ. ಒಂದು ವೇಳೆ ಮದುವೆಯಾಗದಿದ್ದರೂ ಅವಳ ಹೊಟ್ಟೆಯಲ್ಲಿರುವ ಮಗುವಿನ ಅಪ್ಪ ಈತನೇ ಎಂದು ಕಾನೂನು ಹೇಳುತ್ತದೆ. ಆ ಮಗುವಿಗೂ ಅಪ್ಪನ ಆಸ್ತಿಯ ಮೇಲೆ ಹಕ್ಕು ಬರುತ್ತದೆ…..
ನನ್ನ ಪಕ್ಕದಲ್ಲಿದ್ದ ಹಿರಿಯರು ಕ್ಷಮೆ ಕೇಳಿ ನಡುವೆ ಮಾತಾಡಿದರು.
ಶರವಣನನ್ನುದ್ದೇಶಿಸಿ, ಏನಪ್ಪ? ನಿನಗೇನಾದರೂ ಆಸ್ತಿ ಇದೆಯಾ? ಎಂದು ಕೇಳಿದರು.
ಏನೂ ಇಲ್ಲ ಎಂದ ಶರವಣ.
ಸರಿ, ಏನು ನೌಕ್ರಿ ಮಾಡ್ತೀಯಾ? ಎಷ್ಟು ಸಂಬ್ಳ ಬರುತ್ತೆ?
ಮೆಕಾನಿಕ್ ಕೆಲ್ಸ. ಅರಿಸಿನಕುಂಟೆ ಹತ್ರದ ಫ್ಯಾಕ್ಟ್ರೀಲಿ. ಎಂಟು ಸಾವಿರ ಸಂಬಳ
ಆಹಾ…. ಆ ಹೆಣ್ಣುಮಕ್ಕಳು ಉದ್ಧಾರ ಆದರು ಬಿಡು ಎಂದು ವ್ಯಂಗ್ಯವಾಡಿದರು.
ಅಲ್ಲಿದ್ದವರು ನಕ್ಕರು.
ನೀವು ಮುಂದುವರಿಸಿ ಸ್ವಾಮಿ ಎಂದು ನನಗೆ ಹೇಳಿದರು.
ನಾನು ಮತ್ತೆ ಮಾತಾಡಲು ತೊಡಗಿಕೊಂಡೆ.
ಈ ಹೆಣ್ಣುಮಕ್ಕಳ ಭವಿಷ್ಯದ ಬಗ್ಗೆ ನಾವು ಯೋಚಿಸಬೇಕು. ಇಲ್ಲಿ ಇಬ್ಬರಿಗೂ ಈತ ಮೋಸ ಮಾಡಿದ್ದಾನೆ. ಎರಡನೇ ಮದುವೆ ಮಾಡಿಕೊಂಡ ನಂತರ ಇವನು ಇದೇ ಬಗೆಯ ಇನ್ನೊಂದು ಮೋಸ ಮಾಡುವುದಿಲ್ಲ ಎಂಬ ಖಾತ್ರಿ ಇಲ್ಲ. ನಂಬಲನರ್ಹವಾದವನೊಡನೆ ಬಾಳ್ವೆ ಮಾಡಿ ಎಂದು ಹೆಣ್ಣುಮಕ್ಕಳನ್ನು ಅವನ ಕಡೆ ದೂಡುವುದು ನ್ಯಾಯವಲ್ಲ. ಈಗ ಕಾಲ ಬದಲಾಗಿದೆ. ಮದುವೆಗಿಂತ ಮುಖ್ಯವಾಗಿ ಈ ದಿನಗಳಲ್ಲಿ ಪ್ರತಿಯೊಬ್ಬ ಹೆಣ್ಣುಮಗಳು ಚೆನ್ನಾಗಿ ಓದಿ ಸ್ವಾವಲಂಬಿಯಾಗಿ ನಿಲ್ಲುವಂತಾಗಬೇಕು. ಅನ್ಯಾಯ ಮಾಡಿದವನನ್ನು ತೊರೆದು ಈ ಇಬ್ಬರು ಹೆಣ್ಣುಮಕ್ಕಳಿಗೆ ಧೈರ್ಯವಿದ್ದಲ್ಲಿ ತಮ್ಮ ಓದನ್ನು ಮುಂದುವರಿಸಬಹುದು. ಅವರನ್ನು ಕೆಟ್ಟದಾಗಿ ಕಾಣುವ ಬದಲು ನಾವೆಲ್ಲ ಅವರಿಗೆ ಓದಿ ಮುಂದೆ ಬರಲು ಅವಕಾಶ ಕಲ್ಪಿಸಿಕೊಡಬೇಕು. ಈ ಹುಡುಗಿಯರು ಓದಿಕೊಂಡು ಮುಂದೆ ಒಳ್ಳೆಯ ಕೆಲಸಕ್ಕೆ ಸೇರಿ ಸಂಪಾದಿಸುವ ಸ್ಥಿತಿಗೆ ಬಂದಲ್ಲಿ ಯೋಗ್ಯ ಹುಡುಗರು ಯಾರಾದರೂ ಮುಂದೆ ಬಂದು ಅವರನ್ನು ಮದುವೆ ಮಾಡಿಕೊಳ್ಳಬಹುದು. ಮುಖ್ಯವಾಗಿ ಇಂಥವರಿಗೆ ಬೇಕಾಗಿರುವುದು ಆತ್ಮವಿಶ್ವಾಸ, ಒಳ್ಳೆಯ ಗುರಿ ಹಾಗೂ ಅವಕಾಶ. ಅವಕಾಶ ನೀಡುವುದು ಸಮಾಜದ ಕರ್ತವ್ಯ.
ಅವರ ಮಕ್ಕಳನ್ನು ಏನು ಮಾಡುವುದು ಎಂಬ ಪ್ರಶ್ನೆ ಬರುತ್ತದೆ. ಯಾವ ತಪ್ಪನ್ನೂ ಮಾಡದ ಮಕ್ಕಳನ್ನು ನೋಡಿಕೊಳ್ಳುವಷ್ಟು ಔದಾರ್ಯ ನಮ್ಮಲ್ಲಿಲ್ಲವೇ? ಖಂಡಿತಾ ಇದೆ ಎಂದು ನನ್ನ ನಂಬಿಕೆ.
ಕಡೆಯದಾಗಿ ಮೋಸ ಮಾಡಿದವನ ಮೇಲೆ ದೂರು ಸಲ್ಲಿಸಿ ಅವನಿಗೆ ನ್ಯಾಯಾಲಯದಲ್ಲಿ ತಕ್ಕ ಶಿಕ್ಷೆ ದೊರಕುವಂತೆ ಮಾಡದಿದ್ದರೆ ಹೇಗೆ?
ನಾನು ಹೇಳುವುದನ್ನು ಹೇಳಿ ಆಯ್ತು. ಮುಂದೇನು ಮಾಡಬೇಕೆಂದು ನೀವೇ ಯೋಚಿಸಿ ನೋಡಿ ಎಂದು ನನ್ನ ಮಾತು ಮುಗಿಸಿದೆ.
ಸಂಜೀವ ಶರವಣನ ಹೆಂಡತಿ ಕಮಲಳ ಕಡೆ ತಿರುಗಿ, ವಕೀಲರ ಮಾತು ನಿನಗೇನು ಅನ್ನಿಸಿತು? ಏನು ಮಾಡಬೇಕಂತಿದ್ದೀಯಾ, ಹೇಳಮ್ಮ ಎಂದನು.
ಅವನ ಜೊತೆ ನಾನು ಬಾಳೋಕೆ ತಯಾರಿಲ್ಲ. ನನ್ನನ್ನು ಪ್ರೇಮಿಸಿ ಮದ್ವೆ ಆದವ್ನು ಪ್ರೇಮಕ್ಕೆ ಬೆಲೆ ಕೊಡ್ಲಿಲ್ಲ, ತಾಳಿಗೂ ಬೆಲೆ ಕೊಡ್ಲಿಲ್ಲ. ನಾನು ದುಡಿದು ಮಗುವನ್ನು ಸಾಕಿ ಮುಂದೆ ತರುತ್ತೇನೆ ಕಮಲ ಯಾವುದೇ ಅಳುಕು ಇಲ್ಲದೆ ದಿಟ್ಟವಾಗಿ ನುಡಿದಳು.
ನಿನ್ಗೆ ಅಷ್ಟು ಧೈರ್ಯವಿದ್ರೆ ನಮ್ಮ ಮನೇಲಿ ನಿನ್ಗೆ ಆಶ್ರಯ ನೀಡ್ತೇವೆ. ನೀನು ಓದನ್ನು ಮುಂದುವರಿಸೋ ಹಾಗಿದ್ರೆ ಅದಕ್ಕೂ ಸಹಾಯ ಮಾಡ್ತೇವೆ ಸಂಜೀವ ಭರವಸೆ ನೀಡಿದ.
ಈ ಆಶ್ವಾಸನೆ ಕೇಳಿ ಅವಳು ಕೈಮುಗಿದು, ಆಯ್ತು ಸ್ವಾಮಿ, ನಿಮ್ಮ ಸಹಾಯಕ್ಕೆ ನಾನು ಋಣಿಯಾಗಿರ್ತೇನೆ ಎನ್ನುವಾಗ ಅವಳ ಕಣ್ಣಂಚಿನಲ್ಲಿ ನೀರು ಕಾಣಿಸಿತು.
ನೀನೇನು ಹೇಳ್ತೀಯಮ್ಮ? ಸಂಜೀವ ಗಂಗಾಳನ್ನು ಪ್ರಶ್ನಿಸಿದ.
ನನ್ಗೂ ಅವನು ಬೇಕಾಗಿಲ್ಲ. ಓದು ಮುಂದುವರಿಸ್ತೀನಿ ನಿರ್ಧಾರದ ದನಿಯಲ್ಲಿ ಹೇಳಿದಳು.
ಸರಿಯಾದ ನಿರ್ಧಾರ ಕಣಮ್ಮ. ನಿನ್ನ ಓದಿಗಾಗಲಿ, ಹುಟ್ಟೋ ಮಗುವಿನ ಪೋಷಣೆಗಾಗಲಿ ನಮ್ಮ ಧನಸಹಾಯ ನಿನಗೆ ಖಂಡಿತಾ ಇದೆ ಎಂದು ಸುಮಿತ್ರಾ ಅಭಯವಿತ್ತಳು.
ನೀವು ಇಷ್ಟು ಹೇಳಿದ್ಮೇಲೆ ನನ್ಗೂ ಧೈರ್ಯ ಬಂತು. ಅವ್ಳಿಗೆ ಹುಟ್ಟೋ ಮಗೂನ ನಾನು ನೋಡಿಕೊಳ್ತೀನಿ. ಅವಳು ಧಾರಾಳವಾಗಿ ಓದಲಿ ಗಂಗಾಳ ತಾಯಿ ಹೇಳಿದಳು.
ತಂಗಿಯನ್ನು ಓದಿಸೋ ಜವಾಬ್ದಾರಿ ನನ್ನದು. ನಿಮ್ಮದು ದೊಡ್ಡ ಮನಸ್ಸು ಎಂದು ಗಂಗಾಳ ಅಣ್ಣ ಕೃತಜ್ಞತೆಯಿಂದ ನಮಸ್ಕರಿಸಿದ.
`ತನ್ನ ಪರವಾಗಿ ಯಾರೂ ಇಲ್ಲ. ಇನ್ನು ತನಗೆ ಶಿಕ್ಷೆಯೇ ಗತಿ’ ಎಂಬುದರ ಅರಿವಾಗಿ ಶರವಣ ಅಳುವ ದನಿಯಲ್ಲಿ, ನನ್ನಿಂದ ತಪ್ಪಾಯ್ತು. ಮುಂದೆ ಇಂಥಾ ತಪ್ಪು ಕೆಲಸ ಮಾಡೊಲ್ಲ. ದಯವಿಟ್ಟು ನನ್ನನ್ನು ಕ್ಷಮಿಸಿ ಎಂದು ಬೇಡಿಕೊಂಡ.
ಹಿರಿಯರಾದ ಗೌಡರು, ಕಳ್ ನನ್….., ನಾಟ್ಕ ಆಡ್ತಾನೆ. ಮೈನರ್ ಹುಡ್ಗಿ ಮೇಲೆ ರೇಪ್ ಮಾಡೋವಾಗ ನಿನ್ಗೆ ಬುದ್ಧಿ ಇರ್ಲಿಲ್ವಾ? ನಿನ್ನಂಥ ಅಯೋಗ್ಯನಿಗೆ ಕಾನೂನು ಪ್ರಕಾರ ಶಿಕ್ಷೆ ಆಗೋದೇ ಸರಿ. ಆ ಹುಡ್ಗಿ ಪೊಲೀಸರಿಗೆ ಕಂಪ್ಲೇಂಟ್ ಮಾಡಿದ್ರೆ ನಿನ್ಗೆ ಮುಂದೆ ಜೈಲುಶಿಕ್ಷೆ ಗ್ಯಾರಂಟಿ. ಏನಿದ್ರೂ ಕೋರ್ಟ್ನಲ್ಲಿ ಹೇಳ್ಕೋ ಎಂದು ಝಾಡಿಸಿದರು. ನೆರೆದವರೆಲ್ಲ ಗೊಳ್ ಎಂದು ನಕ್ಕರು.
ಏನಮ್ಮ ಗಂಗಾ, ನೀನು ಪೊಲೀಸ್ ಸ್ಟೇಷನ್ಗೆ ಹೋಗಿ ಶರವಣನ ಮೇಲೆ ಕಂಪ್ಲೇಂಟ್ ಮಾಡು, ನಿನ್ಗೆ ಸಹಾಯ ಮಾಡೋಕೆ ನಾವೆಲ್ಲಾ ಇದ್ದೀವಿ ಸಂಜೀವ ಹೇಳಿದ. `ಆಗಲಿ’ ಎನ್ನುವಂತೆ ಗಂಗಾ ತಲೆ ಆಡಿಸಿದಳು.
ನಾವು ಇಲ್ಲಿಗೆ ಬಂದದ್ದು ಒಂದು ಪುಣ್ಯದ ಕೆಲಸ ಮಾಡಿದಂತಾಯ್ತು ಎಂದು ನನಗೆ ಮಾತ್ರ ಕೇಳುವಂತೆ ಹೇಳಿ ಸುಮಿತ್ರ ನನ್ನ ಕಡೆ ಕೃತಜ್ಞತಾಭಾವದಿಂದ ನೋಡಿದಳು.