೨೦೧೪ರ ವಾರ್ಷಿಕ ಕಥಾಸ್ಪರ್ಧೆಯಲ್ಲಿ ಮೆಚ್ಚುಗೆ ಬಹುಮಾನ ಪಡೆದ ಕಥೆ
ಜನರ ಮನಸ್ಸಿಗೆ ಮದ್ದು ಎಲ್ಲಿಂದ ಅರೆಯುವುದೋ ಗೊತ್ತಾಗದೆ, ಲಕ್ಷ್ಮಮ್ಮ ಸುಮ್ಮನೆ ಹೆಜ್ಜೆಹಾಕುತ್ತಾ ಮನೆಯ ದಾರಿ ಹಿಡಿದಳು….
ನೀ ಯಾರಿಗರೆ ಹೇಳ್ಕೊ…. ಆ ತ್ಯಾಗಲಿ ಕಡಿಗಿನ ಜನ್ರಿಗ್ ಮಾತ್ರ ಬ್ಯಾಡದೆ….. ಅವ್ರದ್ದು ಕೈ ಸುಮಾರು….. ಎಂದು ಆಚೆ ಕಡಿಗೆ ಜಗ್ಲಿ ಮ್ಯಾಲೆ ಕೂತಿದ್ದ ಆಯಿ ಹೇಳುತ್ತಿದ್ದರೆ…. ಜಗುಲಿ ಮೇಲೆ ಕೂತು ಯೋಚಿಸುತ್ತಿದ್ದ ಬಂಡ್ಯಾ ಮಾವ ಬೆಚ್ಚಿಬಿದ್ದ.
ಈಗ ಇಷ್ಟು ಹೊತ್ತಲ್ಲಿ ಆ ಕಡಿಗೆ ಕ್ವಾಟೆ ಮನಿಯಿಂದ ಹಿಡಿದು ಬೆಳಲೆ ತನಕ ತಿರುಗಾಡಿ ಬಂದ್ನಲ್ಲೆ…. ಯಂಥ ಪ್ರಯೋಜನ ಆಗಿದ್ದು ಹೇಳು. ಇತ್ಲಾಗೆ ತಾಂವ್ ಬರೂದೂ ಇಲ್ಲಾ. ಬೇರೆಯವ್ರಿಗೆ ಹೇಳಿ ವ್ಯವಸ್ಥೆನೂ ಮಾಡೂದಿಲ್ಲ. ಇಂಥ ಹೊತ್ನಲ್ಲಿ ಈ ಅರಸಾಪುರದ ಕೆಳಗೆ ಹಿತ್ಲಮಕ್ಕಿ ತನ್ಕ ಮಳೆ, ಇಂಬುಳ ಹೇಳ್ಕಂಡ್ ಕೈ ಕೊಡುರೇ ಜಾಸ್ತಿ. ಅಂಥದ್ದರಲ್ಲಿ ಅವ್ರು ಬ್ಯಾಡ್ ಇವ್ರು ಬ್ಯಾಡ್ ಅಂದರೆ ಹೇಗೆ? ನಾಳಿಗ್ ಯಾರನ್ನ ಕರ್ಕಂಬರ್ಲಿ ಮತ್ತೆ?”
ನೋಡು….. ಆ ಬಾಳೆಸರದ ಲಕ್ಷ್ಮಿ ಅಂದ್ರ ನೀ ಸಾಯ್ತಿ ಹೇಳಿ ನಂಗ್ ಮೊದ್ಲಿಂದೂ ಗೊತ್ತಿದ್ದುದೇಯಾ….. ಅಂಥದ್ದರಲ್ಲಿ…. ಈಗಲೂ ಆಕಿನ್ನ ಕರ್ಕಂಬರೂದು….. ನಾವ್ ಏನೂ ಅಗದ್ ಬ್ಯಾಡ್ ಅಂಬ ಹೊತ್ತಿನ್ಯಾಗ್ ಇಂಥದ್ದೇನಾದರೂ ಆಗಿ ಕೂತ್ಕಳ್ಳದು ನಂಗೇತಕೋ ಪ್ರಕಾಶು? ಮೊದ್ಲೇ ಮಲ್ನಾಡಲ್ಲಿ ಯಾರಿಗಾದರೂ ಆಕಿ ಹಿಂಗಲ್ಲ ಅಂತ ಗೊತ್ತಿಲ್ಲದ್ದು ಇದಿಯಾ? ಎಲ್ಲೇ ಹೋಗಿ ಕೇಳಕಂಬಾ ಆ ಕಡೆಯವರು ಬ್ಯಾಡ ಅಂತಾರೆ. ಅಲ್ಲದೆ ತ್ಯಾಗಲಿ ಜನರನ್ನ ಬಿಟ್ರೆ ಬಾಳೆಸರದ ಜನರ ಕೈ ಸುಮಾರೇ ಅನ್ನೋದು ಹವ್ಯಕರಲ್ಲಿ ಯಾರಾದರೂ ಇಲ್ಲ ಅಂದಿದ್ದು ಇದೆಯಾ ಕೇಳಿ ನೋಡು. ಅಂಥಾದ್ದರಲ್ಲಿ ಮತ್ತೆ ಅಲ್ಲಿನ ಜನಕ್ಕೇ ಹೇಳೋದು ಯಾಕೆ ನಿಂಗೆ ಬೇಕಾಗಿದ್ಯೋ ಗೊತ್ತಿಲ್ಲ….. ಏನಾದರೂ ಹೆಚ್ಚು ಕಮ್ಮಿ ಆದರೆ ಯಾಕೆ ಎನ್ನುವ ದೂರಾಲೋಚನೆಯಲ್ಲಿ ಬೇಡವೇ ಬೇಡ ಎನ್ನುತ್ತಿದ್ದವಳಿಗೆ ಪ್ರಕಾಶನ ಹೆಂಡತಿ ಉಮಾ ಕತ್ತಲ ಕೋಣೆಯಿಂದ ಹೇಳೋದು ಕೇಳಿಸಿತು….
ಆಯಿ…. ಒಂದ್ಕೆಲ್ಸಾ ಮಾಡಣ. ಅವ್ರು ಲಕ್ಷ್ಮಿಗೇನೆ ಹೇಳ್ಕಂಬರ್ಲಿ. ಬೆಳಗಿಂದ ಸಂಜಿ ತನಕಾ ನಾ ಆಕಿ ಹಿಂದಿಂದೆ ಇರ್ತಿ.. ಪೂರ್ತಿ ಕಾರ್ಯ ಅಗತಂಕಾ ನಾ ಒಂದ್ನಿಮಿಷಾನೂ ಅಲಗದಿಲ್ಲೆ ಆಯ್ತಾ. ಬಡಸ್ಲಿಕ್ಕೆ ಹ್ಯಾಂಗೂ ನಮ್ಮ ಜನಾನೆ ಇದ್ದುವಲಿ…. ಮತ್ತೆ ಈಗ ರಾತ್ರಿ ಯಾರನ್ನಾದರೂ ಬದ್ಲಾಯಿಸೋದು ಅಂದ್ರೂ ಆಗ್ತಿಲ್ಯೆ. ಅಲ್ಲಿಗೆ ನಮ್ಮ ಕೆಲಸವೂ ಆಗ್ತು. ಬಾಕಿ ನಮ್ಮ ಹುಶಾರಿನೂ ಆತು….. ಆಕೆ ಹೇಳುವುದರಲ್ಲೂ ಅರ್ಥ ಇದೆ ಅನ್ನಿಸಿತು ನಿಧಾನವಾಗಿ ಯೋಚಿಸಿದ ಆಯಿಗೆ. ಕಾರಣ ಅಕಸ್ಮಾತ್ ಈಗ ಲಕ್ಷ್ಮಿಯನ್ನು ಬೇಡ ಅನ್ನುವುದಾದರೆ ಮತ್ತೆ ರಾತ್ರಿಯಿಡಿ ಹುಡುಕಾಡಿ ಜನರನ್ನು ತರಬೇಕು. ಅದರಲ್ಲೂ ಆಕೆ ಬಂದುಬಿಟ್ಟರೆ ಅಡಿಗೆದಂತೂ ಕೇಳುವುದೇ ಬೇಡ. ಆದರೆ ಕೈ ಸುಮಾರು ಎನ್ನುವುದು ಮಾತ್ರ ಗೊತ್ತಿರೋದೆ. ಜೊತ್ಗೆ ಇನ್ನೇನು ಆಕೆ ಬರೋ ಸಮಯಾನೂ ಬೇರೆ ಎನ್ನುವಷ್ಟರಲ್ಲೇ, ಮೊನ್ನೆನೆ ಮನೆಗೆ ಬಂದು ಠಿಕಾಣಿ ಹೊಡಿದ್ದ ತಂಗಿ ಮಗ ಕೂಗುತ್ತ ಒಳ ಬಂದ…..
ಅಜ್ಜಿ…. ಲಕ್ಷ್ಮಜ್ಜಿ ಬಂದ್ರು….. ನಿನ್ನೇ ಕೇಳ್ತಿದ್ದಾರೆ….. ಎನ್ನುತ್ತಿದ್ದಂತೆ ಸುಂದರಜ್ಜಿ ಮನದಲ್ಲೇ ಅಂದುಕೊಂಡಳು, ತಾನು ಬೇಡ ಎನ್ನುತ್ತೇನೆನ್ನುವುದು ಗೊತ್ತಿರೋದೆ. ಅದಕ್ಕೆ ಮೊದಲಿಗೆ ತನ್ನನ್ನೇ ಕೇಳ್ತಿದಾಳೆ ಅನುನಯಿಸೋಕೆ ಎಂದುಕೊಳ್ಳುತ್ತಲೇ, ಏನೇ ಲಕ್ಷ್ಮಿ….. ರಾತ್ರಿಗ್ ಅಸ್ರಿಗೂ ಮುಂಚೆನೆ ಬಂದು ಬಿಟ್ಟಿದ್ದಿ…. ಅಷ್ಟು ಬೇಗ ಯಾವ ಗಾಡೀಗ ಬಂದಿ…. ಎನ್ನುತ್ತಿದ್ದರೆ,
ಏನ್ ಹೇಳಲೇ ಸುಂದ್ರಜ್ಜಿ…. ನೀನು ಹೂಂ ಅನ್ನದೇ ಏನಾರ ಆಗ್ತದೇನು ಈ ಮನ್ಯಾಗೇ…. ಅದಕ್ಕೇ ಆಗಲೇ ನಾರಾಯ್ಣಿ ಫೋನ್ ಮಾಡಿ ಹೇಳಿದ್ ಕೂಡಲೇ ಬೆಳಗ್ಗಿನ ಮಡಿಗ್ ಒಂದು ಜುನೇರು, (ಸೀರೆಯ ಕೊನೆಯಲ್ಲಿ ಉಳಿವ ಅರ್ಧ ತುಂಡು) ರಾತ್ರಿಗ್ ಒಂದ್ ಕೈವಸ್ತ್ರ ತಗಂಡು ಹೊರಟ್‌ಬಿಟ್ನೆ. ಅಮೇಲೇನಾದ್ರೂ ನೀ ಮತ್ತ ಹಂಗಾಯ್ತು ಹಿಂಗಾಯ್ತು ಅಂತಾ ನೇವ ಹೇಳೊದು….. ಈ ನಾರಾಯ್ಣಿ, ಪ್ರಕಾಶು ಎಲ್ಲ ಹೌದಾ ಆಯಿ. ಹಂಗಾರ ಲಕ್ಷ್ಮಿ ಬ್ಯಾಡ ಬೇರೆ ವ್ಯವಸ್ಥೆ ಏನಾರ ಮಾಡ್ಲೇನೆ ಅನ್ನೋದು ಎಲ್ಲ ಯಾಕ್ ರಗಳೆ….. ಈಗ ಸರಿಯಾಗಿಲ್ದ….? ಎನ್ನುತ್ತಾ ಮಡಿ ಹೆಂಗಸು ಲಕ್ಷ್ಮಮ್ಮ ಕೈ ಬಾಯಿ ತಿರುಗಿಸುತ್ತಿದ್ದರೆ, ಸುಂದರಜ್ಜಿ ದುರುಗುಡುವ ಮುಂಚೆನೆ ಆ ಕಡಿಗೆ ಇಣುಕಿ ನೋಡುತ್ತಾ, ಒಹೋ, ಉಮಾ…. ನೀ ಎಂಥ ಮಾಡ್ತಿದ್ದೀಯೇ….. ಈಗೀಗ ಕತ್ಲ ಕ್ವಾಣೆ ವ್ಯವಹಾರನೂ ಹೆಂಗಸರದೇ ಆಯ್ತೇನು…..? ನಾಳೀಗ ಏನೇನು ತಯಾರಿ ಎಲ್ಲ ಮಾಡ್ಕಂಡ್ಯಾ ಇಲ್ದ….. ಕಡೀಗ ರಾಶಿ ಹೊತ್ತಲ್ಲಿ ಅಯೋ ಲಕ್ಷ್ಮಮ್ಮ ಮೊಗೆಕಾಯಿ ಕಮ್ಮಿ ಬಿದ್ದುಹೋಯ್ತೆ, ಹಂಗೆ ನಾಲ್ಕು ಗೋವೆಕಾಯಿ ಸೇರ್ಸಿ ಹುಳಿ ಮಾಡಿಬಿಡೆ ಅನ್ತಾ ರಾಗ ಎಳಿಬೇಡಾ ಆಯ್ತಾ…. ಎನ್ನುತ್ತಾ ಆ ಕತ್ತಲಲ್ಲಿ ಇನ್ನಷ್ಟು ಏನಾರ ಕಾಣುತ್ತದೇನೋ ಎಂದು ಕಣ್ಣು ನಿರುಕಿಸಿದಳು.
ಕತ್ತಲ ಕೋಣೆ ಎನ್ನುವುದು ಮಲೆನಾಡ ಮನೆಗಳಲ್ಲಿ ಇದ್ದೇ ಇರುವ ರಹಸ್ಯ ಕೋಣೆ. ಸಾಮಾನ್ಯವಾಗಿ ಮನೆಯ ಮಧ್ಯದ ಭಾಗದಲ್ಲಿರುತ್ತಿದ್ದು ಅದರಲ್ಲಿಯೇ ಮನೆಯ ಸಂಪೂರ್ಣ ಸಂಪತ್ತು ಇರುತ್ತಿತ್ತು. ಹೆಚ್ಚಿನ ಮನೆಗಳಲ್ಲಿ ದವಸ ಧಾನ್ಯದ ಸಂಗ್ರಹವೂ, ಹಣ, ಒಡವೆ, ಕೆಲವೊಮ್ಮೆ ದೇವರ ವಿಗ್ರಹಗಳು, ಹೆಚ್ಚಿನ ಸಿಹಿ ತಿನಿಸು, ಮನೆಯವರ ಸಾಮಾನ್ಯ ದೃಷ್ಟಿಗೆ ನಿಲುಕಬಾರದ ಒಟ್ಟಾರೆ ಅಮೂಲ್ಯ ವಸ್ತುಗಳು ಅಲ್ಲಿರುತ್ತಿದ್ದವು. ಯಾವಾಗಲೂ ಸಾಮಾನ್ಯವಾಗಿ ಮನೆಯ ಯಜಮಾನನ ಸುಪರ್ದಿಯಲ್ಲೇ ಇರುತ್ತಿತ್ತು. ಎಷ್ಟೊ ಮನೆಗಳಲ್ಲಿ ಅದರ ರಹಸ್ಯವನ್ನು ಕಾಪಾಡಿಕೊಳ್ಳುವುದಕ್ಕೋಸ್ಕರ ತಿಂಗಳಾನುಗಟ್ಟಲೆ ತೆರೆಯದೆ ಪೆಟ್ಟಿಗೆ ಸಮೇತ ಒರಲೆ ತಿಂದು ಸಂಪತ್ತು ಕರಗಿಸಿದ ಉದಾಹರಣೆಗಳು ಹೇರಳ. ಆದರೂ ಕತ್ತಲ ಕೋಣೆಯ ಮೋಹ ಈಗಲೂ ಮಲೆನಾಡಿನ ಮನೆಗಳನ್ನು ಬಿಟ್ಟಿಲ್ಲ.
ಹೀಗೆ ಹಿತ್ಲಮಕ್ಕಿಯಮನೆಯ ಯಜಮಾನ ಅಂತೂರಾಯ ತನ್ನ ಕೊನೆಯ ದಿನಗಳನ್ನು ಅಲ್ಲಿಯೇ ಕಳೆದದ್ದು ಮನೆಯವರ ನೆರಳೂ ಹಾಯಗೊಡದಿದ್ದುದರಿಂದ ಮನೆಯವರಿಗೆಲ್ಲ ಕಿರಿಕಿರಿಯಾಗಿದ್ದರೂ ಇನ್ನೇನು ಹೇಗಿದ್ದರೂ ತಿಂಗಳೊ ಎರಡು ತಿಂಗಳೊ ಅಷ್ಟರಲ್ಲಿ ಆಯುಷ್ಯ ಮುಗಿಯುವ ಹಂತದಲ್ಲಿದಾರೆ…. ಎನ್ನುವ ಆಡಿಕೊಳ್ಳಲಾಗದ ಭಾವನೆಯಲ್ಲಿ ಸುಮ್ಮನಿದ್ದರು. ಕೊನೆಗೂ ಮನೆಯ ಯಜಮಾನ ತೀರಿ ಹದಿಮೂರನೆಯ ದಿನ ಊರವರಿಗೆಲ್ಲ ಅದರಲ್ಲೂ ಕುಟುಂಬದ ಜನರಿಗೆ ವಿಶೇಷವಾಗಿ ಮಠದ ಕೇಸರಿಭಾತು ವ್ಯವಸ್ಥೆಯಾಗಬೇಕೆನ್ನುವ ಮಾತು ಶುರುವಾಯಿತು. ಅದಕ್ಕೆ ಹೇಗಿದ್ರೂ ಅಡಿಗೆಯವರು ಬರಲೇಬೇಕು ಮಠದ ಭಟ್ಟರೇ ಬರಲಿ ಎನ್ನುವುದೂ ನಿಗದಿಯಾಗಿತ್ತು.
ಆದರೆ ಕೊನೆಯ ಕ್ಷಣದಲ್ಲಿ ಭಟ್ಟರು ಅರ್ಧಾಂಗವಾಯು ಹೊಡೆಸಿಕೊಂಡು, ಅಲ್ಲೆ ಮಲಗಿದ್ದಲ್ಲೇ ಸ್ವಾಮಿಗಳಿಂದ ಹನಿ ನೀರು ಚಿಮುಕಿಸಿಕೊಂಡು ಶಿರ್ಸಿ ಅಸ್ಪತ್ರೆಯ ಬೆಡ್ಡಿನ ಮೇಲೆ ಮುಲುಕತೊಡಗಿದಾಗ ಮರುದಿನದ ಚಿಂತೆಗೆ ಸಿಕ್ಕಿದ್ದು ದಿ. ಅಂತೂರಾಯರ ಕುಟುಂಬ ವರ್ಗ. ಅಷ್ಟಕ್ಕೂ ಬೇರೆಯವರೇನೂ ಬರೋದಿಲ್ಲ ಅಂತಲ್ಲ. ಆದರೆ ಅವರಂತೆ ಆಗಬೇಕಲ್ಲ. ಜೊತೆಗೆ ಮಡಿ, ಮೈಲಿಗೆ ನೋಡಿಕೊಂಡು ಒಂಚೂರು ಆಗದಂತೆ ಮಾಡುವವರಾದರೂ ಯಾರಿದ್ದಾರೆ….?
ಆಗ ಕೇಳಿ ಬಂದ ಹೆಸರೇ ಈ ಬಾಳೆಸರದ ಲಕ್ಷಮ್ಮನದು. ಕಾರಣ ಸಧ್ಯಕ್ಕೆ ಸುತ್ತಲ ಸೀಮೆಯಲ್ಲಿ ಭಟ್ಟರನ್ನು ಬಿಟ್ಟರೆ ಸಮಸಮಕ್ಕೆ ಅಡಿಗೆ ಮಾಡುವ ಛಾತಿ ಇರುವ ಹೆಂಗಸೆಂದರೆ ಆಕೆ ಮಾತ್ರ. ಆದರೆ ಆಕೆಯ ಕೈ ಸುಮಾರು ಎನ್ನುವುದರಿಂದ ಯಾರೂ ಕರೆಸದಿದ್ದರೂ ಭಟ್ಟರ ಅಥವಾ ಇನ್ನಾರದ್ದೊ ಮೇಲ್ವಿಚಾರಿಕೆಯಲ್ಲಿ ಆಕೆಯನ್ನು ನಿಲ್ಲಿಸ್ಕೊಂಡು ಇನ್ಯಾರೊ ಅಡಿಗೆ ಮಾಡುವುದು ನಡೆದೇ ಇತ್ತು. ಲಕ್ಷ್ಮಮ್ಮನ ಕೈಗುಣವೇ ಅಂತಹದ್ದು. ಸುಮ್ಮನೆ ಅಡಿಗೆಮನೆಯ ಮೂಲೆಯಲ್ಲಿ ಸ್ಟೂಲ್ ಮೇಲೆ ಕೂತಿದ್ದು ತಾಪೇದಾರಿ ಕೆಲಸ ಮಾಡಿದರೂ ಸಾಕು ದುಡ್ಡು ಆಕೆಯ ಕೈ ಸೇರುತ್ತದೆ. ಹೆಸರೂ ಬರುತ್ತದೆ. ಇತರ ಅಡಿಗೆ ಹೆಂಗಸರು, ಆಳುಗಳು ಬಾಕಿ ಕೆಲಸ ನೋಡಿಕೊಳ್ಳುತ್ತಿರುತ್ತಾರೆ. ಕಾರಣ ಸಂಪೂರ್ಣ ಆಕೆಯ ಕೈಗೆ ಕೊಡುವ ಧೈರ್ಯ ಯಾರಿಗೂ ಇವತ್ತಿಗೂ ಇಲ್ಲದಿರುವುದು ಆಕೆಗೂ ಗೋತ್ತಿಲ್ಲದ್ದೇನಲ್ಲ. ಆದರೆ ಹಾಗಂತ ಗಲಾಟೆ ಮಾಡಿದರೆ ಸಿಗುವ ಕೈತುಂಬ ಸಂಬಳಕ್ಕೂ ಸಂಚಕಾರವೇ. ಅದಕ್ಕೆ ಇಂತಹ ವ್ಯವಸ್ಥೆಗೆ ಲಕ್ಷ್ಮಮ್ಮ ಕೂಡಾ ಹೊಂದಿಕೊಂಡಿದ್ದಳು. ಅತ್ತ್ಯುತ್ತಮ ಮನೆ ಮಠ ಎಲ್ಲ ಇದ್ದು ಇವತ್ತು ಈ ಪರಿಸ್ಥಿತಿಗೆ ಇಳಿಯಲು ಮತ್ತು ಆಕೆಯ ಕೈ ಸುಮಾರು ಎನ್ನುವ ಮಾತು ಸುತ್ತೂರಿನ ಸಾವಿರ ಮನೆಗಳಿಗೆ ಹಬ್ಬಿಕೊಂಡಿರಲು ಕಾರಣವೂ ಇಲ್ಲದಿರಲಿಲ್ಲ. ಅದು ಎರಡ್ಮೂರು ದಶಕಗಳ ಹಿಂದಿನ ಕಥೆ…..
***
ಆವತ್ತಿನ ದಿನಕ್ಕೆ ಅಡಿಕೆಗೆ ಮೂರು ಸಾವ್ರ ಬಂದುಬಿಟ್ಟರೆ ಅರೆರೆ ಎಂಥಾ ರೇಟು ಮಾರಾಯಾ ಎನ್ನುತ್ತಿದ್ದ ಕಾಲವದು. ಮದುವೆ ಆಗಿ ಮನೆಗೆ ಕಾಲಿಟ್ಟಿದ್ದ ಲಕ್ಷ್ಮಿಯನ್ನು ಜಗಲಿಯ ಮೇಲಿಂದ ಕೆಳಗಿಳಿಲಿಯಕ್ಕೂ ಬಿಡದೆ ನೋಡಿಕೊಳ್ತಿದ್ದ ಶಂಭು ಹೆಗಡೆರು ಸುಲಭದ ಬಾಯಿಮಾತಿಗೀಡಾಗುತ್ತಿದ್ದರು. ಅಡಿಕೆ ಚಾಲಿ ಸುಲಿಯೋಕೆ ಬರ್ತಿದ್ದೋರೆಲ್ಲ, ….ಹೆಗಡೆರೆ ಕೂಸಿನ ಕೊಳಿಹಾಕು ವಿಚಾರ ಇದ್ದಾ ಹ್ಯಾಂಗೆ….? ಎಂದು ಗೋಳು ಹೊಯ್ದುಕೊಳ್ಳುತ್ತಿದ್ದರು. ಆದರೆ ಅದ್ಯಾವದಕ್ಕೂ ಕ್ಯಾರೇ ಎನ್ನುತ್ತಿರಲಿಲ್ಲ ಶಂಭುಹೆಗ್ಡೆ….. ತೋಟ ಗದ್ದೆ ಎಂದು ಸಮಾ ಕೆಲಸ ಮುಗಿಸುತ್ತಾ, ವಾರಕ್ಕೊಮ್ಮೆ ಮರಿದೇ ಸುತ್ತಮುತ್ತಲ ಯಾವುದೇ ಅಂಗಳದಲ್ಲಿ ನಡೆಯುತ್ತಿದ್ದರೂ, ಹಾಯ್ದು ಬರುತ್ತಿದ್ದ ಚೌಕಿ ಮನೆಯ ಜಗುಲಿಯ ಆಟದ ಕಟ್ಟೆ ಹೊರತು ಪಡಿಸಿದರೆ ಇನ್ಯಾವುದೇ ಉಸಾಬರಿ ಅವನಿಗಿರಲಿಲ್ಲ. ಸುಲಿಯುತ್ತಾ ಮಳ್ಳು ಮಳ್ಳು ಮಾತನಾಡುತ್ತಾ ಕುಳಿತುಕೊಳ್ಳುವ ಹೆಂಗಸರೂ ಒಮ್ಮೊಮ್ಮೆ ಆಕೆಯನ್ನು ಛೇಡಿಸುತ್ತಿದ್ದರು.
…..ಲಕ್ಷ್ಮಮ್ಮ ಹಿಂಗಾದರೆ ಈ ಸರ್ತಿ ಚಾಲಿ ಮ್ಯಾಲೆ ಹತ್ತಿದಂಗೆಯಾ…. ನೀವ್ ಅಷ್ಟೂ ಜಗ್ಲಿ ಬಿಟ್ಟು ಇಳಿಲಿಲ್ಲಂದರೆ ಹೆಂಗೆ…..? ಹೆಗಡೆರು ಕೆಲಸ ಮಾಡ್ಕೊಳ್ಳೋದು ಬೇಡವಾ…..? ಎಂದು ಸಲಕಿನ ಕೊಂಪೆಯ ನಾಣಿ ಕವಳ ಉಗಿಯುವಾಗ್ಲೆಲ್ಲ ಅವಳನ್ನು ಛೇಡಿಸುತ್ತಿದ್ದಳು. ಹಿಂದೆನೇ _
ಇರ್ಲಿ ಬಿಡಮ್ಮ. ಹೆಂಗಿದ್ರೂ ವಾರ ವಾರ ಮಾಣಿ ಆಟಕ್ಕೆ ಅಂತಾ ಚೌಕಿ ಮನೆಗೆ ಹೋಗ್ತಾನಲ್ಲ….. ಆಗೆಲ್ಲ ನಿಂದೆ ಯಜಮಾನಗಿರಿ ಬಿಡು ಅಲ್ದೆನೆ…. ಎನ್ನುತ್ತಿದ್ದರೆ ಈ ವಾರ ವಾರ ಎನ್ನುವುದರ ಒತ್ತಿ ನುಡಿಯುವಿಕೆಯ ಹಿಂದೆ ಏನೋ ಕುಹುಕ ಅಡಗಿದಂತೆನ್ನಿಸುತ್ತಿತಾದರೂ ಹೆಗ್ಡೆರ ಮಕ್ಳಿಗೆ ಈ ಆಟ ಮತ್ತು ಚೌಕಿ ಮನೆ ಅನ್ನೋದು, ಸಂಜೆಯ ಹೊತ್ತಲ್ಲಿ ಆಸ್ರಿಗೆ ಕೂರ್ತಿದ್ದಂತೆ ಅಲ್ಲಲ್ಲೆ ಸೇರ್ಕೊಂಡು ಇಸ್ಪೀಟಿಗೆ ಕೂತಂಥ ಗೀಳೇ ಎನ್ನುವುದು ಅವಳಿಗೂ ಹೊಸದೇನಲ್ಲ. ಅದೇ ಮಲೆನಾಡಿನ ದೂರದ ಜಂಬೆಸರದಿಂದ ಬಂದ ಹುಡುಗಿ ಅವಳು. ಯಾವತ್ತೂ ಆಟ, ತೋಟ ಬಿಟ್ಟು ಬೇರೆಡೆಗೆ ಹೋಗದ ಮನೆಯ ಹಿರಿಯ ಲಕ್ಷ್ಮಿಯ ಗಂಡ ಶಂಭು, ಆಗೀಗ ಅದೇ ಕೊನೆಗೌಡ (ಅಡಿಕೆ ಇಳಿಸುವವ) ಗುಂಪುನಾಯಕನೊಂದಿಗೆ ಸೊಂಟಕ್ಕೊಂದು ಕತ್ತಿ ಬಿಕ್ಕೊಂಡು ಹೋಗಿ ಬಿಟ್ರೆ ಶನಿವಾರದಿಂದ ಭಾನುವಾರ ಕೆಲವೊಮ್ಮೆ ಸೋಮವಾರ ಬೆಳಗಾದರೂ ಆದೀತು.
ಅಷ್ಟಕ್ಕೂ ವಾರಗಟ್ಟಲೆ ಮನೆಲಿ ಬಿದ್ದಿರುತ್ತಿದ್ದ, ತೋಟ ಬಿಟ್ಟರೆ ಬೇರಾವುದಕ್ಕೂ ಹೋಗದ ಗಂಡ ಹಾಗೆ ಹೋದಾಗಲೊಮ್ಮೆ ಲಕ್ಷ್ಮಿನೂ ಉಸಿರೆಳೆದುಕೊಂಡು ಹಾಯಾಗುತ್ತಿದ್ದಳು. ಹಾಗಾಗಿ ಆತ ಆಗೀಗ ಚೌಕಿ ಮನೆಗೆ ಹೋಗಿ ಬಣ್ಣ ಹಚ್ಚುವುದು ತೊಂದರೆ ಎನಿಸದಿದ್ದರೂ ಆಗೀಗ ಮನದಲ್ಲೆಲ್ಲೋ ಮುಳ್ಳು ಮುರಿಯುತ್ತಿದ್ದುದು ಸುಳ್ಳಲ್ಲ. ಹೀಗೆಯೇ ಕಾಲ ನಡೆಯುತ್ತಿರುವಾಗಲೇ ಮಕ್ಕಳು ಮರಿ ಎಂದಾಗುವ ಹೊತ್ತಿಗೆ ಅಡಿಕೆಯ ಏಳು-ಬೀಳಿನ ನಡುವೆ ಬದುಕು ಅಲುಗಾಡದೆ ನಡೆಯುತ್ತಲೆ ಇತ್ತು. ಆದರೆ ಯಾವತ್ತೂ ಏರದ ಅಡಿಕೆ ರೇಟಿನ ಬದಲಾಗದ ಕಥೆಯ ತಿರುವು ಆ ವರ್ಷ ತೆಗೆದುಕೊಂಡಿತ್ತು.
ಆಗೊಮ್ಮೆ ಇದ್ದಕ್ಕಿದ್ದಂತೆ ಉತ್ತರ ಭಾರತದ ಕಡೆಯಲ್ಲಿ ಬೆಳೆ ಬಿದ್ದುಹೋಗಿ, ಅದೆಂಥದ್ದೋ ಗುಟುಕಾದ ಉತ್ಪಾದನೆ ಚಾಲೂ ಆದದ್ದೇ ಆದದ್ದು. ಇಲ್ಲೂ ಶಿರ್ಸಿ ಸೀಮೆಲಿ ಅಡಿಕೆ ರೇಟು ಕೇಳೋದೇ ಬೇಡ…. ಹಂಗೆ ರೇಟು ಮೇಲೆ ಹತ್ತಿ ಹೋಯ್ತು. ನಾಲ್ಕೆಕರೆ ತೋಟದ ಮೂಲೆಯಲ್ಲಿ ಇದ್ದ ಬಾವಿಯಲ್ಲಿ ಹರಿತಿದ್ದ ಇಪ್ಪತ್ನಾಲ್ಕು ಗಂಟೆ ನೀರಿನ ಬೆಂಬಲದಿಂದ ಗಲ ಗಲ ಅಂತಿದ್ದ ತೋಟದಲ್ಲಿ ಆ ಬಾರಿ ಭರ್ಜರಿ ಬೆಳೆ ಬಂದಿತ್ತು. ಹಾಗಾಗಿ ಒಮ್ಮೆಲೆ ಲಕ್ಷದಲ್ಲಿ ಬದಲಾಗಿತ್ತು ವರ್ಷದ ವ್ಯವಹಾರ.
ಸತತವಾಗಿ ಎರಡನೆ ಸರ್ತಿ ಅಡಿಕೆಗೆ ರೇಟು ಬರುವ ಹೊತ್ತಿಗೆ…. ಶಂಭು ಹೆಗಡೆ ಮನೆಯ ಮುಂದೆ ಎರಡನೆಯ ದೊಡ್ಡ ಗಾಡಿ ತಂದು ನಿಲ್ಲಿಸಿದ್ದ. ಆಟಕ್ಕೆ ಚೌಕಿಮನೆಗೆ ಹೊರಡುವ ಮೊದಲು ಅರ್ಧ ಬಣ್ಣ ಮನೆಯಲ್ಲೆ ಮಾಡಿಕೊಂಡು ಹೊರಡತೊಡಗಿದ್ದ. ಅವನು ಚೌಕಿಮನೆಯಲ್ಲಿ ಕಟ್ಟುತ್ತಿದ್ದ ವೇಷಗಳೂ ಹಾಗೇನೆ…. ಎತ್ತರದ ಭರ್ಜರಿ ಆಳ್ತನದ ಶಂಭು ದುರ್ಯೋಧನ, ಕೀಚಕ, ಭೀಮ, ಬಕ ಹೀಗೆ ನಿಂತರೆ ರಂಗ ಧಿಮ್ಮೆನ್ನುತ್ತಿತ್ತು. ಅವನ ಮೀನಖಂಡಗಳು ಅಲುಗುವ ಹೊತ್ತಿಗೆ ತ್ಯಾಗಲಿಯ ಗಜುರಾಯ್ರ ಸೊಸೆಯು ಅಲುಗಾಟಕ್ಕೆ ಹಿತವಾಗಿ ಕುಲುಕತೊಡಗಿದ್ದಳು. ಆಟಕ್ಕೆಂದು ಬರುತ್ತಿದ್ದ ಗಂಡನ ಜೊತೆಯಲ್ಲಿ ಅವನ ಬೇಕು ಬೇಡಗಳನ್ನೂ ಪೂರೈಸತೊಡಗಿದ್ದಳು. ಅಲ್ಲಿಗೆ ಶಂಭು ಹೆಗಡೆಯ ಬದುಕು ಒಂದಿನಿತೂ ಅಲುಗಾಡದೆ ಸಾಗಿ ಹೋಗತೊಡಗಿತ್ತು.
ಆದರೆ ಚೌಕಿಮನೆಯ ಬಣ್ಣದ ಆಟ ರಂಗದ ಹೊರಗೂ ಬೀರುತ್ತಾ ಹಲವು ರಂಗು ರೂಪ ತಾಳತೊಡಗಿತ್ತು. ಕೊನೆಕೊನೆಗೆ ಆಗೀಗ ಗಜುರಾಯ್ರ ಮಗ ಇವನ ಆಟಕ್ಕೆ ಬರುವುದನ್ನೆ ನಿಲ್ಲಿಸುವ ಮಾತಾಡತೊಡಗಿದ್ದ. ಅಷ್ಟಕ್ಕೂ ಗಜುರಾಯ್ರು ಮನೆತನ ಸಂಬಂಧಿಕರೂ ಕೂಡಾ. ಹಾಗೂ ಹೀಗೂ ಮೇಳದ ಹಿರಿಯರು ಒಲಿಕೆಯ ಮಾತಾಡುತ್ತ ಇಬ್ಬರನ್ನೂ ತೂಗಿಸುವ ಹೊತ್ತಿಗೆ ಸಾಕುಸಾಕಾಗತೊಡಗಿತ್ತು. ಆಟಕ್ಕೆ ಅಂತಾ ತ್ಯಾಗಲಿ ಕಡಿಗೆ ಹೋಗಿದ್ದ ಶಂಭು ಹೆಗಡೆ ಆ ದಿನ ಬೆಳಿಗ್ಗೆ ಬರುವ ಹೊತ್ತಿಗೆ ಹೊಟ್ಟೆ ಹಿಡಿದುಕೊಂಡು ಬಂದಿದ್ದ. ಏನಾರ ತಿಂದು ಹೆಚ್ಚು ಕಡಮೆ ಆಗಿರಬೇಕು ಎಂದುಕೊಂಡರೂ ದಿನದಿನಕ್ಕೆ ಒಳಗೊಳಗೆ ನವೆಯತೊಡಗಿದ ಶಂಭು, ನಾಣಿ ಮಾತಿಗೆ ಇನ್ನಷ್ಟು ಹೌಹಾರಿದ.
ಹೆಗ್ಡೆರೆ….. ಬ್ಯಾಡ ಬ್ಯಾಡ ಅಂದರೂ ತ್ಯಾಗಲಿ ಗಜುರಾಯ್ರ ಮನಿಗ ಹೋಗಿ ಬರ್ತೀರಿ. ಮದ್ದು ಹಾಕಿರ್ಬೇಕು ನಿಮಗೆ…. ಎಂದುಬಿಟ್ಟಳು. ಅಷ್ಟೆ ಕತ್ತಲ ಕೋಣೆಯ ಆಚೆಗೆ ಕೂತಿದ್ದ ಲಕ್ಷ್ಮಿ ಎದ್ದು ಮೊದಲ ಬಾರಿಗೆ ಕೆಂಗಣ್ಣು ಬೀರುತ್ತಾ ಹೊರ ಬಂದಳು. ಆತ ಅಲ್ಲಿಗೆ ಹೋಗಿ ಏನು ಮಾಡಿದ್ನೋ ಇಲ್ವೋ ಗೊತ್ತಿಲ್ಲ ಆದರೆ ಶಂಭುಹೆಗ್ಡೆ ಗಜುರಾಯ್ರ ಮನೆ ಸೊಸೆ ಜೊತೆ ಆಟಕ್ಕೆ ಹೋದಾಗ ಚಕ್ಕಂದನೂ ಆಡ್ತಾನೆ ಚೌಕಿ ಮನೇಲಿ ಅನ್ನೋದು ಅವಳ ಕಿವಿಗೂ ಬಿದ್ದಿತ್ತಲ್ಲ.
ಎಂಥಾ ಮಾಡ್ಕ್ಯಂಡ ಬಂದ್ಯಾ….? ನಾಣಿ ಹೇಳಿದ್ದು ಹೌದೆನಾ….? ಎನ್ನುತ್ತಾ ಅವನನ್ನು ದುರುದುರು ನೋಡಿದಳು. ಚಾಲಿ ಚೀಲದ ಪಕ್ಕದ ಕಂಬಳಿ ಗೊಪ್ಪೆ ಮೇಲೆ ಬಿದ್ದುಕೊಂಡಿದ್ದ ಶಂಭು ಸುಮ್ಮನೆ ಪಿರ ಪಿರ ಮಾಡಿದ. ಅಸಲಿಗೆ ಅವ್ನಿಗೂ ಇದು ಹೇಗಾಯಿತು ಎನ್ನುವುದು ಅರಿವಿಗೆ ಬರುತ್ತಿರಲಿಲ್ಲ. ತೀರ ಯಾವತ್ತೂ ತನ್ನೊಂದಿಗೆ ಬಣ್ಣಹಚ್ಚುವ ಮತ್ತು ಸುತ್ತಮುತ್ತಲ ಫಾಸಲೆಯಲ್ಲೇ, ಆ ಕಡೆ ಬೆಳಲೆಯಿಂದ ಈ ಬದಿಯ ಯಲ್ಲಾಪುರ ಸಣಕಿ ತೇರುವರೆಗೂ ಹೆಂಗೆ ಹುಡುಕಿದರೂ ಬಳಗ ಅಂತಾ ಇರುವುದೇ ತ್ಯಾಗಲಿಯಲ್ಲಿ. ಅಲ್ಲಿ ಮನೆಗೊಬ್ಬ ಹೆಂಗಸು ಮದ್ದು ಹಾಕ್ತಾಳೆ ಅಂತಾ ಮಾತು ಇದ್ದಿದ್ದು ಹೌದಾದರೂ, ಕಂಡವರಾದರೂ ಯಾರಾದರೂ ಇದ್ದಾರಾ…..?
ಅಷ್ಟಕ್ಕೂ ಇಂಥವರ ಮನೆಯಲ್ಲಿ ಮದ್ದು ಹಾಕಿದ್ರಂತೆ….. ಹೀಗಂತೆ ಹಾಗಂತೆ ಎನ್ನುವ ಎಲ್ಲ ಕಟ್ಟು ಕಥೆಗಳೆ. ಹಾಗಿದ್ದಾಗ ಹೀಗೆ ತನಗೆ ಬೇಕಾದ, ತೀರ ಅಪರೂಪದ ಗುಪ್ತ ಗುಪ್ತ ಸಂಬಂಧ ಇರುವ ಮನೆಯ ಹೆಂಗಸು ತನಗೇ ಮದ್ದು ಹಾಕ್ತಾಳಾ…..? ತನ್ನೊಂದಿಗೆ ಕದ್ದು ಹಾಸಿಗೆ ಹಂಚಿಕೊಳ್ಳುವ ಹೆಣ್ಣು ಗಂಡನನ್ನು ಯಾಮಾರಿಸಬಲ್ಲಳೆ ವಿನಾ ಯಾವತ್ತೂ ಗೆಣೆಕಾರನನ್ನು ಬಿಟ್ಟುಕೊಡಲಾರಳು. ಜೀವ ಬೇಕಾದರೂ ಕೊಟ್ಟುಬಿಡುತ್ತಾಳೆ. ಇದು ಜಾಗತಿಕ ನಿತ್ಯ ಸತ್ಯ. ಹಾಗಿದ್ದಾಗ ಅವರ ಮನೆಯಲ್ಲಿ ನನಗೆ ಮದ್ದು ಅರಿಯುವವರಾದರೂ ಯಾರು…..? ತಲೆ ಕೊಡಹಿದ ಶಂಭು ಹೆಗಡೆ. ಆಗಿರುವುದು ಏನೋ ಹಾಗೇ ಕಾಣ್ತಿದೆ…. ಮಧ್ಯಾಹ್ನ ಕಡೆಗುಂಟದ ರಾಯ್ರ ಮನೆಗೆ ಹೋಗಿ ಕೇಳ್ಕಂಡು ಬರೋದೆ ಸೈ….. ಎಂದು ಎಣಿಸುತ್ತಿದ್ದವನ ಎದುರಿಗೆ ಹೆಂಡತಿ ಉಪ್ಪಿನ ನೀರನ್ನು ಹಿಡಿದು ನಿಂತಿರುವುದು ಕಾಣಿಸಿ ಬಾಯಿಗಿಟ್ಟುಕೊಂಡು ಮುಕ್ಕಳಿಸತೊಡಗಿದ. ಬಕ ಬಕನೆ ವಾಂತಿಯಾಯಿತು. ಅಲ್ಲಿಗೆ ನಾಣಿ ಹೋ….. ಎಂದರಚಿದಳು
ಹೆಗ್ಡೆರೇ…. ಹೌದೇ ಹೌದು…. ಇದು ತ್ಯಾಗಲಿ ಜನರದ್ದೇ ಕೆಲಸ….. ನಮ್ಮನಿ ಯಂಕನ್ ಕಡೆ ಮಾಣಿಗೆ ಹೀಂಗೆ ವಾಂತಿ ಆಗಿ, ಔಷಧಿ ಕೆಲಸ ಮಾಡದೆ ಸತ್ತೇ ಹೋದ….. ನಿಮಗೂ ಗೊತ್ತಲ್ವ….. ಎಂದು ಕಣ್ಣು ಬಾಯಿ ಬಿಡುತ್ತಿದ್ದರೆ, ಲಕ್ಷ್ಮಿ, ಅದು ಅಮೇಲೆ ನೋಡ್ಕಳದ ಆದೀತು. ನಾಣಿ ಸಧ್ಯ ಬಾಯಿ ಮುಚ್ಕಂಡಿರೆ ಮಾರಾಯ್ತಿ ಎನ್ನುತ್ತ ಅವನನ್ನೆಬ್ಬಿಸಿಕೊಂಡು ಒಳ ನಡೆದಳು. ಮುಂದಿನ ದಿನಗಳಲ್ಲಿ ಎರಡ್ಮೂರು ಸವಾರಿ ತುಂಬಿಕೊಂಡು ಹೊರಡುತ್ತಿದ್ದ ಹೆಗಡೆರ ಗಾಡಿಗಳು ನಿಂತಲ್ಲೆ ನಿಲ್ಲತೊಡಗಿದವು. ತಿಂಗಳೊಪ್ಪತ್ತು ಕಳೆಯುವಷ್ಟರಲ್ಲಿ ಶಿರಶಿ ಪಂಡಿತ ಆಸ್ಪತ್ರೆಯ ಔಷಧಿ ಇಟ್ಟಿದ್ದು ಗುಸು ಗುಸು ಆಗುತ್ತಾ, ಅವನ ಬಗ್ಗೆ ಮೊದಲಿಂದಲೂ ಸಂಬಂಧ ಇಟ್ಕೊಂಡಿದ್ದಾನೆ ಎನ್ನುವ ಆರೋಪಕ್ಕೆ, ಮನೆಯವರೇ ಸೇಡು ತೀರಿಸಿಕೊಂಡಿದ್ದಾರೆ ಎನ್ನುವವರೆಗೂ ಸಾಬೀತಾದಂತಾಗಿ ಹೋಗಿತ್ತು.
ಕಾರಣ ಹೇಗೂ ಮೊದಲೇ ಗುಸು ಗುಸು ಇತ್ತು. ಅವ್ರ ಸೊಸೆದು, ಶಂಭು ಹೆಗಡೆರು ಏನೋ ಆಟ ನಡಿಸ್ತಾರೆ ಎಂದು. ಈಗ ಅದರ ಸೇಡು ತೀರಿಸಿಕೊಳ್ಳುವಂತೆ ಅವ್ರ ಮಗ ಜೊತೆಗಿದ್ದೇ ಮದ್ದು ಇಟ್ಟಿದ್ದಾನೆ ಎನ್ನುವುದು ಅಲ್ಲಲ್ಲಿ ಹಬ್ಬಿತಾದರೂ ತೀರಿಹೋದ ಹೆಗಡೆರು ವಾಪಸ್ಸು ಬರಲಿಲ್ಲ. ಮನೆಯ ಮತ್ತು ಹೊಟ್ಟೆಯ ಸಂಕಟ ತಡೆಯಲಾರದೆ ಬಾಯಿಗೆ ಬಂದಂತೆ ಲಕ್ಷ್ಮಿ ಕೂಗಾಡಿದ್ದು ಬಿಟ್ಟರೆ ಏನೂ ಆಗಲಿಲ್ಲ. ಗಜುರಾಯ್ರ ಕುಟುಂಬವನ್ನೆ ಮುಗಿಸುವುದಾಗಿ ಶಪಥ ಮಾಡಿದಳು ಎನ್ನುವುದರವರೆಗೂ ಮಾತುಕತೆಗಳು ಹಬ್ಬಿದವು. ದಿನಗಳು ಉರುಳಿ ಹದಿಮೂರನೆ ದಿನ ಬಂತು.
ಒಳಗೊಳಗೆ ಏನೇ ಸಂಕಟ ಇದ್ದರೂ ಅವನು ತೀರಿ ಹೋಗಿದ್ದರಿಂದ ಗಜುರಾಯ್ರ ಮನೆಯ ಜನ ಕೂಡ ಎಲ್ಲ ಮರೆತು ಬಂದು ಅವನ ಕಾರ್ಯಾದಿ ಕಾರ್ಯಗಳಲ್ಲಿ ಪಾಲ್ಗೊಂಡರು. ಆದರೆ ಹದಿಮೂರನೆ ದಿನ ಮಾತ್ರ ಅನಾಹುತವಾಗಿ ಬಿಟ್ಟಿತ್ತು. ಎಲ್ಲಾ ಕಾರ್ಯ ಪೂರೈಸಿ ಮಧ್ಯಾಹ್ನ ಊಟ ಆಗುತ್ತಿದ್ದಂತೆ ಅದೇನಾಯಿತೋ ಸಾಲು ಸಾಲಾಗಿ ಪಂಕ್ತಿಗೆ ಪಂಕ್ತಿಯೇ ವಾಂತಿ ಮಾಡಿಕೊಳ್ಳುತ್ತಾ ಎದ್ದೇಳತೊಡಗಿದರು. ಅಲ್ಲಿಗೆ ಮನಸ್ಸಿನ ವ್ಯಗ್ರತೆಯಿಂದ ಲಕ್ಷ್ಮಮ್ಮ ಪೂರ್ತಿ ಕುಟುಂಬದ ಜನರಿಗೆ ಮದ್ದು ಹಾಕಿ ಸೇಡು ತೀರಿಸಿಕೊಂಡಿರಬಹುದಾ ಎನ್ನುವ ಅನುಮಾನ ಹುಟ್ಟಿ ಹಾಗೆಯೇ ಅದು ದಾವಾನಲವಾಗಿ ಹೋಗಿತ್ತು. ಅಸಲಿಗೆ ಆವತ್ತು ಮಾಡು ಕಡೆಯಿಂದ ಉದುರಿ ಬಿದ್ದಿದ್ದ ಕಾಡು ಝರಿ ಹುಳದಿಂದಾಗಿ ಹೀಗಾಯಿತು ಎನ್ನುವುದನ್ನು ಕೂಲಂಕಷವಾಗಿ ಪತ್ತೆಮಾಡಿ ವಿವರಿಸುವ ಮನಃಸ್ಥಿತಿ ಯಾರಿಗೂ ಇರಲಿಲ್ಲ….. ಇದ್ದರೂ ಮಾಡಲಿಲ್ಲ.
ದೇಖರೇಖಿ ಇಲ್ಲದೆ ತೋಟ ಇನ್ನಾರಿಗೋ ಮಾಡಲು ಕೊಟ್ಟು ವರ್ಷಕ್ಕಿಂತಿಷ್ಟು ಎಂದು ಒಪ್ಪಂದ ಮಾಡಿಕೊಂಡಳು. ಆದರೆ ಬದಲಾದ ಪರಿಸ್ಥಿತಿಯಲ್ಲಿ ಬಿದ್ದುಹೋದ ಅಡಿಕೆ ರೇಟು ಅವಳ ಪರಿಸ್ಥಿತಿ ಗಂಭೀರ ಮಾಡತೊಡಗಿತ್ತು. ಸ್ವಾಮಿಗಳ ಸಹಾಯದಿಂದ ಇದ್ದೊಬ್ಬ ಮಗನನ್ನು ಧರ್ಮಸ್ಥಳದ ಹಾಸ್ಟೆಲ್‌ನಲ್ಲಿ ಬಿಟ್ಟು ಓದಿಸುತ್ತಿದ್ದಳು. ಆದರೆ ಅಲ್ಲಲ್ಲಿ ನಿಧಾನಕ್ಕೆ ಬದಲಾದ ಪರಿಸ್ಥಿತಿಯಲ್ಲಿ ಅದ್ಭುತ ಅಡಿಗೆ ಮಾಡುವ ಲಕ್ಷ್ಮಮ್ಮನಿಗೆ ಕೆಲಸ ಸಿಗುತ್ತಿತ್ತಾದರೂ ಯಾರಾದರೊಬ್ಬರು ಹೆಂಗಸು ಆಕೆಯನ್ನು ಹಿಂದಿಂದೆ ನಿಂತು ಕಾಯುವ ಅವಮಾನ ನುಂಗಿ ನಡೆಯತೊಡಗಿದಳು. ಕಾರಣ ಹೊಟ್ಟೆ ಮತ್ತು ನಿರ್ವಹಣೆಗೆ ಅಡಿಗೆ ಬಿಟ್ಟು ಬೇರೆ ಬರುತ್ತಲೂ ಇರಲಿಲ್ಲ ಆಕೆಗೆ. ಅಡುಗೆ ಪ್ರಸಿದ್ಧಿಯನ್ನು ತಡೆಯದವರೂ ಕೂಡಾ ಸುದ್ದಿ ಹರಡತೊಡಗಿದ್ದರು.
ಅತ್ತ ತ್ಯಾಗಲಿಯ ಜನರಿಗಿಂತ, ಬಾಳೆಸರದ ಲಕ್ಷ್ಮಮ್ಮ ಭಯಾನಕ ಮದ್ದಿನ ಮನೆಯ ಹೆಂಗಸಾಗಿ ಗುರುತಿಸಲ್ಪಟ್ಟಳು. ಎಲ್ಲೆಲ್ಲಿ ಯಾರು ಸತ್ತರೂ ಒಂದು ವಾರದ ಹಿಂದೆ ಲಕ್ಷ್ಮಮ್ಮ ಅಲ್ಲಿಗೆ ಹೋಗಿದ್ದಳಂತೆ ಎನ್ನುವ ಗಾಳಿ ಸುದ್ದಿ ಹಬ್ಬತೊಡಗಿತ್ತು. ಆಕೆ ಯಾವ ಊರ ಕಡೆ ಹಾಯ್ದು ಆಚೀಚೇಗೆ ತಿಂಗಳೊಪ್ಪತ್ತಿನಲ್ಲಿ ಸತ್ತುಹೋದರೂ ಅದರ ಅಪವಾದ ಆಕೆಯ ತಲೆಗೇ ಬರತೊಡಗಿತು. ಅಡುಗೆ ಕೆಲಸ ನಂಬಿಕೊಂಡಿದ್ದ ಅವಳು ಉಗುರ ಸಂದಿನಲ್ಲಿ ಮದ್ದಿರಿಸಿಕೊಂಡು ಬರುತ್ತಾಳಂತೆ, ಅಲ್ಲಲ್ಲ ಕಾಚದ ಪಟ್ಟಿಗೆ ಚೀಟಿ ಸಿಕ್ಕಿಸಿಕೊಂಡಿದ್ದು ಸರಕ್ಕನೆ ಸ್ವೀಟು ಮಾಡುವಾಗ ಸೊಂಟದಿಂದ ಜಾರಿಸುತ್ತಾಳೆ ಎಂದು ಇನ್ಯಾರೋ ಕಥೆಗಳು ಹೇಳತೊಡಗಿದ್ದರು. ಹಾಗಾಗಿ ಅವಳ ಮನೆಗೆ ಹೋಗಿ ಬರುವುದೂ ನಿಂತುಹೋಯಿತು. ಯಾವತ್ತೂ ಅವಳ ಮನೆಯ ಒಂತೊಟ್ಟು ನೀರು ಕುಡಿಬಾರದು ಎನ್ನುವಂತಾಗಿ ಹೋಯಿತು.
ಅಸಲಿಗೆ ಶಿರಸಿ ಸುತ್ತ ಮುತ್ತಲ ಕಡೆಯಲ್ಲಿ ತ್ಯಾಗಲಿಗಿದ್ದ ಹೆಸರು ಕಳಂಕ ಈ ಘಟನೆಯಿಂದಾಗಿ ಬಾಳೆಸರದ ಲಕ್ಷ್ಮಮ್ಮನ ಪಾಲಾಗಿಹೋಗಿತ್ತು. ಆಕೆ ಎಷ್ಟೆ ತಾನು ಆವತ್ತು ಮದ್ದು ಹಾಕಿಲ್ಲ ಎಂದು ಧರ್ಮಸ್ಥಳದವರೆಗೂ ಆಣೆ ಪ್ರಾಮಾಣ ಮಾಡಿ ಹೇಳಿದರೂ ಬದಲಾಗದ ಪರಿಸ್ಥಿತಿಯಿಂದ ಕೊನೆಗೆ ಲಕ್ಷ್ಮಮ್ಮ ಸ್ವಾಮಿಗಳ ಹತ್ತಿರ ದೂರು ಒಯ್ದು ಅತ್ಮಹತ್ಯೆ ಮಾಡ್ಕೋತಿನಿ ಎಂದು ಬೆದರಿಸುವುದರೊಂದಿಗೆ, ಅಲ್ಲೇ ಆಕೆಗೆ ಆಸರೆ ನೀಡಿದರು.
ಕೊನೆಕೊನೆಗೆ ಎಲ್ಲರಿಗೂ ಅದು ಅಭ್ಯಾಸವೂ ಆಯಿತು. ಲಕ್ಷ್ಮಮ್ಮನ ಮೇಲ್ವಿಚಾರಣೆಗೆ ಕೂರಿಸಿ ಇಬ್ಬಿಬ್ಬರು ಹೆಂಗಸರನ್ನು ಆಕೆಯ ಕೆಳಗೆ ಬಿಟ್ಟು ಅಡಿಗೆ ಮಾಡಿಸತೊಡಗಿದರು. ಕಾರಣ ಎಲ್ಲಾ ಕಾರ್ಯಕ್ರಮಕ್ಕೂ ಆಕೆಯ ಮಡಿ ಆಗುವುದಿಲ್ಲವಲ್ಲ. ಅದು ಎರಡೂ ರೀತಿಯಲ್ಲಿ ಅರ್ಥೈಸುತ್ತಿತ್ತು. ಒಂದು ಮಡಿಯೂ ಆಯಿತು. ಇನ್ನೊಂದು ಕೈಯ್ಯಾರೆ ಅಪಾಯ ನಿವಾರಿಸಿ ಕೊಂಡಂತೆಯೂ, ಕಾಯುವ ಕೆಲಸವೂ ಇಲ್ಲ. ಇದೆಲ್ಲ ಸೂಕ್ಷ್ಮ ಗೊತಾಗುತ್ತಿತ್ತಾದರೂ ಬೇರೆ ದಾರಿನೂ ಇರದೆ ಅವಮಾನ ನುಂಗಿ ನಡೆಯುತ್ತಿದ್ದಳು ಲಕ್ಷ್ಮಮ್ಮ. ಜೊತೆಗೆ ಸುತ್ತ ಮುತ್ತಲ ಹವ್ಯಕರಿಗೆ, ಬ್ರಾಹ್ಮಣರಿಗೆ ಮಠದ ಭಟ್ಟರು ಬಿಟ್ಟರೆ ಅಡುಗೆಗೆ ಬೇರೆಯವರು ಇದ್ದರಾದರೂ ಎಲ್ಲಿ…..? ಆದ್ದರಿಂದಾಗಿ ಅಡುಗೆಯಲ್ಲಿ ಅದ್ಭುತ ಕೈರುಚಿಯ ಲಕ್ಷ್ಮಮ್ಮ ನಿಧಾನಕ್ಕೆ ಚಾಲ್ತಿಗೆ ಬಂದಳು.
ಹಳೆಯ ತಲೆಮಾರು ಸುಮಾರು ಬದಲಾಗಿಹೋಗಿತ್ತು. ಕಾಲ ಮರೆಸತೊಡಗಿದ ಸಂದರ್ಭದಲ್ಲಿ ಮಠದ ಭಟ್ಟರು ಬಾರದಿದ್ದ ಮನೆಗೆ ಅನಿವಾರ್ಯವಾಗಿ ಸಂಪೂರ್ಣ ಜವಾಬ್ದಾರಿಯನ್ನು ಲಕ್ಷಮ್ಮಮ್ಮನಿಗೆ ವಹಿಸುವ ಮಾತಾಗಿ ಕರೆಸಲಾಗಿತ್ತು; ದಿ. ಅಂತೂರಾಯರ ತಿಥಿಗೆ. ಆಕೆಗೂ ಒಳಗೊಳಗೆ ಒಂದುಥರ ಖುಶಿ. ಎಂದಿನಂತೆ ತನ್ನ ಮೇಲೆ ನಿಗಾ ಇದ್ದರೂ ಇದು ಬೇರೆ ಜವಾಬ್ದಾರಿ. ಕೇಸರಿ ಮಾಡ್ಬೇಕು. ಜೊತೆಗೆ ಇನ್ನೂರೈವತ್ತು ಜನರ ಅಡುಗೆ. ನೈವೇದ್ಯಕ್ಕೆ ಮನೆ ಹೆಂಗಸರೆ ಮಾಡ್ಕೊಳ್ತಾರಂತೆ…. ಇರ್ಲಿ….. ಉಳಿದದ್ದು ಮಾಡಿ ತೋರಿಸ್ಬೇಕು. ಇನ್ಯಾವತ್ತೂ ಮಠದ ಭಟ್ಟರು ಬೇಕು ಎನ್ನುವ ಮಾತು ಬದ್ಲಾಯಿಸಿ ಬಿಡದಿದ್ರೆ ಕೇಳಿ ನಾಳೆ ಎಂದುಕೊಳ್ಳುತ್ತಾ ವಿಚಿತ್ರ ಖುಶಿ ಉಮೇದಿ, ಹುಮ್ಮಸ್ಸಿನಲ್ಲಿ ನಾಲ್ಕು ತುತ್ತು ಕಡಮೆನೆ ಉಂಡು ಒಳ ಮನೆಯ ಹೆಬ್ಬಾಗಿಲಿನ ಪಕ್ಕ ಉರುಳಿಕೊಂಡಳು.
***
ದಿ. ಅಂತೂರಾಯರ ಹೆಸರಿನಲ್ಲಿ ಕೆಲಸ ಕಾರ್ಯ ಸರ್ವ ರೀತಿಯ ಧಾರ್ಮಿಕ ವಿಧಿ-ವಿಧಾನ ನಡೆದು ಹೋಮಕ್ಕೆ ಹಾಕಿದ ಹೊಗೆ ಮೇಲಕ್ಕೇರುತ್ತ ಕಾಣೆಯಾಗುತ್ತಿದ್ದರೆ ಅಡುಗೆಮನೆಯಲ್ಲಿ ಉಮಾಳ ದೇಖರೇಖಿಯಲ್ಲಿ ಕೈ ಕಾಲು ಅತ್ತಿತ್ತ ಆಡಿಸದೆ ಅಡುಗೆ ಕೆಲಸ ನಿರ್ವಹಿಸಿದಳು ಲಕ್ಷ್ಮಮ್ಮ. ಎಲ್ಲೆಲ್ಲೊ ಕೂತಿದ್ದವರೆಲ್ಲ ಮೂಗರಳಿಸುವಂತೆ ಅಡುಗೆ ತಯಾರಿಯ ಘಮಕ್ಕೆ ಬೇಗನೆ ಊಟ ಬಡಿಸಿ ಬಿಡ್ರೊ ಎನ್ನುವಂತೆ ಪುರೋಹಿತರು ಚಾಷ್ಟಿ ಮಾಡುತ್ತಿದ್ದರು.
ಮಧ್ಯಾಹ್ನ ಸರ್ವ ಕಾರ್ಯ ಜರುಗಿ ಒಂದೆರಡು ಪಂಕ್ತಿ ಊಟ ನಡೆದು ಸಾಂಗವಾಗಿ ಬಾಳೆಲೆ ಎಸೆವ ಹೆಂಗಸರು ಕೆಲಸ ಮುಗಿಸಿ ಮೂರನೆ ಪಂಕ್ತಿಗೆ ಎಲೆ ಹಾಕ್ಬೇಕು. ಅಷ್ಟು ದೂರದಲ್ಲಿ ಒಂದೆಡೆ ನಿಂತು ಮೇಲ್ವಿಚಾರಣೆ, ಉಂಡೇಳುತ್ತಿದ್ದವರ ಮುಖದ ಮೇಲಿನ ಸಂಪೃಪ್ತಿಯನ್ನು ಕಣ್ಣಲ್ಲೇ ಅಳೆಯುತ್ತ ಅಡುಗೆ ಸಖತ್ತಾಗಿದೆ ಎಂದು ಮನದಲ್ಲೇ ಖುಶಿ ಪಡುತ್ತಿದ್ದ ಲಕ್ಷ್ಮಮ್ಮ ಆ ಕಡೆಗೆ ಸರಿದು ಅಡುಗೆ ಇನ್ನೆಷ್ಟು ಮಿಕ್ಕಿದೆ ಜನರೆಷ್ಟಿದಾರೆ ಎಂದು ಅಂದಾಜಿಸತೊಡಗಿದಳು. ಸರಸರನೆ ಹಿಂದೆಯೇ ಉಮಾ,
“…..ಏನೇ ಕಾಕಿ ಎಂಥ ಮಾಡ್ತಿದ್ದೇ…..” ಎನ್ನುತ್ತ ಸೊಂಟಕ್ಕೆ ಕೈಯಿಟ್ಟು ನಿಂತುಕೊಂಡಳು. ಅವಳು ಬಂದು ನಿಂತು ನಿರುಕಿಸತೊಡಗಿದ ವೇಗ ಮತ್ತು ಅದರ ಹಿಂದಿನ ಉದ್ದೇಶ ಏನಿರಬಹುದೆನ್ನುವ ಅಂದಾಜಾದರೂ ಇದೆಲ್ಲವೂ, ಇಂಥ ಸಣ್ಣಪುಟ್ಟ ಅವಮಾನದ ಕ್ಷಣಗಳೂ ಆಕೆಗೆ ಹೊಸದೇನೂ ಆಗಿರಲಿಲ್ಲ. ಅದಕ್ಕೆ,
“ಎಂಥಾದ್ದೂ ಇಲ್ಲ್ಯೆ. ಕೇಸರಿ ಎಷ್ಟು ಉಳಿದಿದ್ದು, ಇನ್ನು ಮೂರನೆ ಪಂಕ್ತಿ ಮತ್ತು ಉಳಿದೋರಿಗೆ ಏನಾರ ಸಾಕಾಗತದ ಇಲ್ಲ ನೋಡ್ತಿದ್ನೆ ತಾಯಿ…..” ಎಂದಳು. ಬೇಡವೆಂದರೂ ಆಕೆಯ ಧ್ವನಿಯಲ್ಲಿ ಏರು ಕಂಡಿತ್ತು. ಆ ಧ್ವನಿಯಲ್ಲಿನ ಏರಿಳಿತ ಉಮಾಳಿಗೂ ತಾಗಿದರೂ ಹೊರಗಿನಿಂದ ಬಂದ ಕೂಗಿಗೆ ಅವಳ ಕೈ ಹಿಡಿದುಕೊಂಡೆ ಹೊರ ಬಂದಳು.
ಅಂಗಳದಲ್ಲಿ ಹಾಕಿದ್ದ ಚಪ್ಪರದ ಆಚೆ ಬದಿಗಿದ್ದ ಜಗಲಿ ಮೇಲೆ ನಾಲೈದು ಜನ ಹೊಟ್ಟೆ ಹಿಡ್ಕೊಂಡು ಕೂತಿದಾರೆ. ಇನ್ನಿಬ್ಬರು ವಾಂತಿಮಾಡಿಕೊಳ್ಳುತ್ತಿದ್ದಾರೆ. ಅಲ್ಲಲ್ಲೆ ಮಕ್ಕಳು ವಾಂತಿ ಮಾಡಿಕೊಳ್ಳುತ್ತಿವೆ. ಒಮ್ಮೆಲೆ ಹಾಹಾಕಾರ….. ಎಲ್ಲರ ದೃಷ್ಟಿಯೂ ಲಕ್ಷಮ್ಮಮ್ಮನ ಕಡೆ ತಿರುಗುತ್ತಿದ್ದಂತೆ ಉಮಾ ಹಿಡಿದ ಕೈ ಬಿಗಿ ಮಾಡಿದಳು. ಏನಾಗಿದೆ ಕ್ಷಣಾರ್ಧದಲ್ಲೆ ಲಕ್ಷ್ಮಿಗೆ ಅರ್ಥವಾಯಿತು. ಆದರೆ ಇದರಲ್ಲಿ ತನ್ನ ಕೈವಾಡ ಇಲ್ಲ. ಏನೋ ಬೇರೆ ಘಟಿಸಿದೆ. ಆದರೆ ಸಧ್ಯಕ್ಕೆ ಅದರ ಹೊಣೆ ತನ್ನ ತಲೆಗೆ ಬರುತ್ತಿದೆ. ಕೂಡಲೆ ಕೂತಲ್ಲೇ ಕುಸಿಯುವಂತಾಯಿತು ಆಕೆಗೆ. ಅಷ್ಟಕ್ಕೇ ಅರಸಾಪುರದ ಕೊನೆಯ ಮನೆಯ ವೆಂಕೋಬ,
ಎಂಥಾದ್ದೇ ಲಕ್ಷ್ಮಿ ಇಲ್ಲೂ ಏನಾದರೂ ಕರಾಮತ್ತು ತೋರ್ಸಿದ್ಯಾ ಏನು…..? ನಾನು ಮೊದಲೇ ಹೇಳಿದ್ದೆ…… ಎಂದರಚತೊಡಗಿದ್ದ. ಆ ಕಡೆಯಿಂದ ಸುಂದರಜ್ಜಿ ನೇರವಾಗಿ ಮುಂದಕ್ಕೆ ಬಾರದಿದ್ದರೂ ಕಣ್ನಲ್ಲೆ ಸುಡುವಂತೆ ನೋಡುತ್ತಾ,
ಏನೇ ಲಕ್ಷ್ಮಿ….. ಏನಾದರೂ ಕೈ ತುರಿಸ್ಕೊಂಡೆನು ಮತ್ತೆ….. ಎನ್ನುತ್ತಿದ್ದಂತೆ ಇದ್ದವರದ್ದೆಲ್ಲಾ ಲಕ್ಷ್ಯ ಅತ್ತ, ಕೂತುಕೊಂಡು ಕಾರಿಕೊಳ್ಳುತ್ತಿದ್ದವರ ಕಡೆಗೂ, ಇತ್ತ ಕೈ ಕೊಸರಿಕೊಳ್ಳುತ್ತಿದ್ದ ಲಕ್ಷ್ಮಿಯ ಕಡೆಗೂ ಹೊರಳತೊಡಗಿತ್ತು. ಒಂದಿಷ್ಟು ಜನ ಅತ್ತ ಆರೈಕೆಗೆ ಹೊರಟಿದ್ದರೆ ಇತ್ತ ಉಳಿದವರು ಆಕೆಯನ್ನು ಗಮನಿಸುತ್ತಾ ಸುತ್ತುವರಿದರು…..
…..ಹೌದೇನೆ ಲಕ್ಷ್ಮಿ ಏನಾದರೂ ಮದ್ದು ಗಿದ್ದು ಹಾಕಿದ್ಯೇನೋ…..? ಎನ್ನುತ್ತಾ ಚೌಕಾಶಿಗೆ ಇಳಿದರು. ಹೀಗೆ ಬಿಟ್ಟರೆ ಅನ್ಯಾಯವಾಗಿ ಏನೂ ಮಾಡದ ತನ್ನ ಮೇಲೆ ಅಪವಾದ ಬರುತ್ತಾದೆ ಎಂದು ಎಣಿಸಿದವಳೆ ಒಮ್ಮೆ ಕೊಸರಿಕೊಂಡ ಲಕ್ಷ್ಮಮ್ಮ,
…..ಹೊಯ್ ಬಾಯಿಗ್ ಬಂದಂಗ ಮಾತಾಡ ಬ್ಯಾಡ್ರ…. ನಾನು ನನ್ನ ಪಾಡೀಗೆ ನಿಯತ್ತಾಗಿ ಅಡುಗೆ ಮಾಡಿದಿನಿ….. ಪೂರ್ತಿ ದಿನಾ ಉಮಾ ನನ್ನ ಹಿಂದೆ ನಿಂತು ನನ್ನ ಆಚೀಚೆಗೆ ಹೋಗದಂತೆ ಕಾಯುತ್ತಿದ್ದುದೇನೂ ಗೊತ್ತಿಲ್ಲದ್ದಲ್ಲ. ಸುಖಾಸುಮ್ನೆ ನನ್ನ ಹೊಟ್ಟಿಮ್ಯಾಲೆ ಮದ್ದು ಅರಿಬ್ಯಾಡ್ರಿ. ಯಾವನಾದರೂ ನೋಡಿದ್ರೆ ಹೇಳ್ರಿ. ಯಾಕ ಇಷ್ಟ ವರ್ಷಾದರೂ ಈ ಕಥಿ ಮುಗಿಸೋದೇ ಇಲ್ಲ ಅಂತೀರಲ್ಲ. ಯಾವತ್ತು ಯಾವನು ನನ್ನ ಕೈಯಿಂದ ತೀರಿದಾನು ಅದಾರ ಹೇಳ್ರಿ ನೋಡೋಣ ಒಬ್ಬರಾದರೂ….. ಎಂದು ಎಲ್ಲರನ್ನೂ, ಎಲ್ಲವನ್ನೂ ಒಂದೇ ಸಲ ಹೇಳಿ ಆಪೋಶನ ತೆಗೆದುಕೊಳ್ಳತೊಡಗಿದಳು. ಅವಳ ಆಕ್ರಮಣಕ್ಕೆ ಒಮ್ಮೆ ಸೇರಿದವರೆಲ್ಲಾ ತಣ್ಣಗಾಗಿ ಆಚೀಚೇ ಸರಿಯುತ್ತಿದ್ದಂತೆ ತನ್ನ ಕೈ ಬ್ಯಾಗು ಎತ್ತಿಕೊಂಡು ಲಕ್ಷ್ಮಮ್ಮ ಹೊರಡುವ ತಯಾರಿಯ ಅವಸರಕ್ಕೆ ಈಡಾಗತೊಡಗಿದಳು.
ಚರ್ಚೆ ಜೋರಾಗಿ ಹೊಟ್ಟೆ ಕೆಟ್ಟು ತೊಂದರೆಗೀಡಾದವರನ್ನು ಆಸ್ಪತ್ರೆಗೆ ಒಯ್ಯುವ ತಯಾರಿ ನಡೆಯಿತು. ಇತ್ತ ಮೂರನೆ ಪಂಕ್ತಿ ಕೂರಲೇ ಇಲ್ಲ. ಆಗಲೇ ಒಳ ಮನೆಯಿಂದ ಅಂಗಳಕ್ಕೆ ಬಂದ ಲಕ್ಷ್ಮಮ್ಮ ಮತ್ತೆ ಕೇಂದ್ರ ಬಿಂದುವಾದಳು.
ಅಲ್ಲೇ ಲಕ್ಷ್ಮಿ. ಈಗೆಲ್ಲಾ ನೀನು ಸುಧಾರಿಸಿದ್ದಿ ಅಂತಾ ಅಂದುಕೊಂಡಿದ್ವಲ್ಲೇ…. ಈಗ ನೋಡಿದರೆ ನಿನ್ನ ಕೈ ಸುಮಾರೇ ಅಂತಾ ಕಾಣ್ತದಲ್ಲ. ಯಾರೋ ಎನ್ನುತ್ತಿದ್ದಂತೆ,
ಹೊಯ್…. ಹೆಗ್ಡೇರೆ, ನಾನ್ಯಾವತ್ತೂ ಹಲ್ಕಾ ಕೆಲಸ ಮಾಡಿಲ್ಲ. ನಿಮ್ಮವರೇ ನನ್ನ ತಲಿಮ್ಯಾಲೆ ಮೆಣಸ ಅರದಾರೆ. ಮಾಡದಿದ್ದರೂ ನಾಲ್ಕು ಮಂದಿ ಮಾತಾಡೊ ಹಂಗೆ ಮಾಡಿದವರೂ ನೀವೆ. ಸುಂದರಜ್ಜಿ…. ಹೆಂಗಸಾದ ನೀನಗರ ಬ್ಯಾಡೆನು…. ಸ್ವಲ್ಪಾದರೂ ಕರುಣಾ ಇರ್ಬೇಕು….. ಹೀಂಗ ಏನೂ ನೋಡದೆ ಮಾಡದೆ ಮಾತಾಡ್ತಿರಲ್ಲ. ಯಾರಾದರೂ ಒಬ್ರಿಗಾದರೂ ನಾನು ಮದ್ದು ಅರದಿದ್ದು ಕೇಳಿರೇನು…..? ಇಷ್ಟು ದೊಡ್ಡ ಮನೆತನಾ….. ನೋಡಿದರ ಒಬ್ರಿಗಾದರೂ ಜ್ಞಾನ ಬೇಡಾ….. ಎಂದು ಹಾಯತೊಡಗಿದಳು. ಕೂಡಲೇ ಅವಳನ್ನು ತಡೆಯುವಂತೆ ಎದ್ದು ಬಂದ ದೂರದ ಗಂಗತ್ತಿ ಅವಳನ್ನು ತಳ್ಳುತ್ತಾ ಆಚೆಗೆ ಬಾಗಿಲ ಕಡೆಗೆ ಒಯ್ಯುವಾಗಲೇ, ವೆಂಕೋಬ ಬಂದು ನಿಲ್ಲು ನಿಲ್ಲು ಎನ್ನುತ್ತ ತಡೆಯಲೆತ್ನಿಸಿದ. ಆ ತಳ್ಳಾಟದಲ್ಲಿ ಕೈ ಕೊಸರಿದ ಲಕ್ಷ್ಮಮ್ಮ ಹಿಂದಕ್ಕೆ ವಾಲಿದಳು. ಅಂಗಳದ ಕಂಬಕ್ಕೆ ಕಟ್ಟಿದ್ದ ಗೆಲ್ಲಿಗೆ ತಾಗಿದ ಜುನೇರಿನ ತುಂಡು ಪರಕ್ಕಂತಾ ಹರಿದು, ಕಳಚಿ ನೋಡು ನೋಡುತ್ತಿದ್ದಂತೆ ಅರೆಬೆತ್ತಲಾದಳು ಲಕ್ಷಮ್ಮ. ಒಂದು ಕೈಲಿದ್ದ ಚೀಲವನ್ನು ಸಾವರಿಸಿಕೊಳ್ಳುತ್ತ ಒಮ್ಮೆ ಸುತ್ತ ನೋಡಿದಳು. ಎಲ್ಲರ ಮುಖದಲ್ಲೂ ಯಾವ ಭಾವಗಳೂ ಇಲ್ಲದೆ, ತಮಾಷೆಗೆ ನಿಂತಂತೆ ಕಾಣಿಸತೊಡಗಿದ್ದರು. ಕೆಲವರು ಸರಿಯಾಯಿತು ಎನ್ನುವಂತೆ ಹರಿದ ಸೀರೆಯ ತುಂಡಿನಡಿಯ ಆಕೆಯ ದೇಹದ ಬೆತ್ತಲೆಯನ್ನು ಇಣುಕತೊಡಗಿದ್ದರೆ,
ಹಿಂಗೇನೂ ಆಗಬಾರದು, ಇವತ್ತಾರ ಅಪವಾದ ತೊಳೀಲಿ ಅಂತಾ ಒಳ ವಸ್ತ್ರಾನೂ ಉಟ್ಕೊಳ್ಳದೆ ಬರೀ ಜುನೇರ್ ಮ್ಯಾಲೆ ನಿಂತ್ಕೊಂಡು ಅಡಿಗೆ ಮಾಡಿದೆ. ಇನ್ನು ಎಲ್ಲಿಂದ ಬಚ್ಚಿಟ್ಕೊಂಡು ಮದ್ದು ಹಾಕಲೇ ಸುಂದರಜ್ಜಿ. ನೋಡ್ರೆ, ಇನ್ನು ಎನೇನು ಮಾಡಿ ನೋಡ್ಬೇಕು ಅಂತೀರಿ…… ನೋಡ್ರಿ….. ಎನ್ನುತ್ತ ಇದ್ದೊಂದು ತುಂಡನ್ನೂ ಜಾರಿಸುತ್ತ ಕಣ್ಣಿನಿಂದ ನೋವಿನ ಉಂಡೆಗಳನ್ನು ಉದುರಿಸುತ್ತಿದ್ದರೆ, ಅವಳನ್ನು ಸಾವರಿಸಲು ಹರಸಾಹಸ ಮಾಡುತ್ತಿದ್ದ ಗಂಗತ್ತಿಯ ಕೈಗೂ ಆಕೆಯ ದೇಹ ಸಿಗದೆ ನಿಂತಿದ್ದವರನ್ನೆಲ್ಲ ಬೆತ್ತಲು ಮಾಡುತ್ತಾ, ನೋಡುತ್ತಿದ್ದವರ ಕಣ್ಣಿನಲ್ಲಿ ಆಕೆಯ ದೇಹದ ಮಡಿಕೆಗಳ ನೆರಿಗೆಗಳು ಕರೆಗಟ್ಟುತ್ತಿದ್ದರೆ…. ಹಸಿದ ಹೊಟ್ಟೆಗೆ ಊಟಕ್ಕಿಕ್ಕುವ ಗೋಜಿಗೂ ಹೋಗದೆ ಸರಸರನೆ ನಡೆಯತೊಡಗಿದ್ದಳು.
ಆವತ್ತು ತಮ್ಮ ಮನೆಯಲ್ಲಿ ಆದಂತೆ ಇವತ್ತೂ ಅದೃಷ್ಟ ಕೆಟ್ಟು ಹುಳ ಏನಾದರೂ ಬಿದ್ದಿತ್ತಾ ಅಡುಗೆಯಲ್ಲಿ ಎಂಬ ಯೋಚನೆ ಲಕ್ಷ್ಮಮ್ಮನ ತಲೆಯಲ್ಲಿ ಬಂತಾದರೂ, ಜನರ ಮನಸ್ಸಿಗೆ ಮದ್ದು ಎಲ್ಲಿಂದ ಅರಿಯುವುದೋ ಗೊತ್ತಾಗದೆ ಸುಮ್ಮನೆ ಹೆಜ್ಜೆಹಾಕುತ್ತಾ ಮನೆಯ ದಾರಿ ಹಿಡಿದಳು.
Comments are closed.