ನಿಮ್ಮ ಫೇಸ್ಬುಕ್ ಖಾತೆಯಲ್ಲಿ ನಿಮಗರಿವಿಲ್ಲದೆಯೇ ನಿಮ್ಮ ಹೆಸರಿನಲ್ಲಿ ಪೋಸ್ಟ್ಗಳು ಬರುತ್ತಿದ್ದರೆ, ನಿಮ್ಮ ಬ್ಯಾಂಕ್ ಖಾತೆಯಲ್ಲಿ ಹಣ ಇದ್ದಕ್ಕಿದ್ದಂತೆಯೇ ಕಡಿಮೆಯಾದರೆ, ನಿಮ್ಮ ಮಿಂಚಂಚೆ ಖಾತೆಯಿಂದ ಸ್ನೇಹಿತರಿಗೆ ತಾನಾಗಿಯೇ ಮೈಲ್ ಹೋಗುತ್ತಿದ್ದರೆ, ಅದು ಭೂತ-ಪಿಶಾಚಿಗಳಲ್ಲ – ಆಧುನಿಕ e-ಕಳ್ಳರ ಕರಾಮತ್ತು!
ನಿಮ್ಮ ಈಮೈಲ್, ಫೇಸ್ಬುಕ್ ಮತ್ತಿತರ ಸಾಮಾಜಿಕ ತಾಣಗಳ ಖಾತೆ, ಬ್ಯಾಂಕ್ ಖಾತೆಗಳಿಗೆ ಕನ್ನ ಹಾಕುವವರು ಮುಖ್ಯವಾಗಿ ಎರಡು ವಿಧಾನಗಳನ್ನು ಅವಲಂಬಿಸಿರುತ್ತಾರೆ.
ವೆಬ್-ಸೈಟುಗಳಲ್ಲಿರುವ ಭದ್ರತಾ ದೋಷಗಳು
ನಿಮ್ಮ ಮನೆ/ಕಛೇರಿಯಲ್ಲಿ ಹಲವು ಕಂಪ್ಯೂಟರನ್ನು ಜೋಡಿಸಿದ ಜಾಲವನ್ನು ರೌಟರ್/ಮೋಡೆಮ್ ಮುಖಾಂತರ ಅಂತರ್ಜಾಲಕ್ಕೆ ಸಂಪರ್ಕಿಸಿರಬಹುದು. ಅಲ್ಲಿಂದ ಅದು ಸೇವಾ ಪೂರೈಕೆದಾರರ (ISP) ಮೂಲಕ ಸಂಕೇತಗಳನ್ನು ರವಾನಿಸಿ (ಬಿ.ಎಸ್.ಎನ್.ಎಲ್., ಏರ್ಟೆಲ್, ರಿಲಯೆನ್ಸ್ ಇತ್ಯಾದಿ) DNS ಬಳಿಯಿಂದ ನೀವು ಬಯಸಿದ ತಾಣ ಎಲ್ಲಿದೆಯೆಂಬುದನ್ನು ತಿಳಿದುಕೊಳ್ಳುತ್ತದೆ. ನಂತರ ತನ್ನದೇ ಸಂಕೇತಗಳ ಮೂಲಕ ಜಾಲತಾಣದ ನಿಜವಾದ ಮೂಲ ವೆಬ್ಸರ್ವರ್ನ್ನು ತಲಪುತ್ತದೆ. ಅಲ್ಲಿರುವ ಹಲವಾರು ತಾಣಗಳ ಪೈಕಿ ನೀವು ಕೊಟ್ಟ ವೆಬ್ವಿಳಾಸವನ್ನಾಧರಿಸಿ ನಿಮಗೆ ಬೇಕಾದ ಜಾಲಪುಟವನ್ನು ಕಳುಹಿಸುತ್ತದೆ. ನಿಮ್ಮ ಬಳಕೆನಾಮ, ಗುಪ್ತಪದಗಳನ್ನು ಅಲ್ಲಿರುವ ಮಾಹಿತಿಯೊಂದಿಗೆ ತಾಳೆಹಚ್ಚಿ ನಿಮ್ಮನ್ನು ಗುರುತಿಸುತ್ತದೆ ಮತ್ತು ನಿಮಗೆ ಬೇಕಾದ ಮಾಹಿತಿಯನ್ನು ರವಾನಿಸಬೇಕಾಗುತ್ತದೆ. ಇದಕ್ಕಾಗಿ ಸರ್ವರ್ ಎಂಬ ಕಂಪ್ಯೂಟರಿನಲ್ಲಿರುವ ನಿರ್ವಹಣಾ ತಂತ್ರಾಂಶ (Operating Systsm – Windows, Linux ಇತ್ಯಾದಿ), ಸರ್ವರ್ ತಂತ್ರಾಂಶ, ಕಂಪ್ಯೂಟರ್ ಭಾಷೆಯ ತಂತ್ರಾಂಶ, ದತ್ತಾಂಶಶೇಖರಣಾ ತಂತ್ರಾಂಶ ಹೀಗೆ ಹಲವು ರೀತಿಯ ತಂತ್ರಜ್ಞಾನದ ಪದರಗಳು ಕೆಲಸ ಮಾಡುತ್ತವೆ.
ಇಂತಹ ಸಂಕೀರ್ಣ ವ್ಯವಸ್ಥೆಯಲ್ಲಿನ ಒಂದು ಸಣ್ಣ ಭದ್ರತಾ ದೋಷವನ್ನು ಹ್ಯಾಕರ್ಗಳು ಪತ್ತೆ ಹಚ್ಚಿದರೂ ಸಾಕು – ಅದನ್ನೇ ಬಳಸಿ ತಮ್ಮ ಕೈಚಳಕವನ್ನು ತೋರಿಸುತ್ತಾರೆ. ನೀವು ಕಳುಹಿದ ಈಮೈಲ್ ಸಂದೇಶ ಅದನ್ನು ಉದ್ದೇಶಿಸಿದವರ ಜೊತೆಗೆ ಇಂತಹ ಹ್ಯಾಕರ್ಗಳ ಖಾತೆಗೆ ಕೂಡಾ ಹೋದರೆ ಸಾಕಲ್ಲವೆ? ನಿಮ್ಮ ಎಲ್ಲಾ ಈಮೈಲ್ ವ್ಯವಹಾರಗಳನ್ನು ಅವರು ತಿಳಿದುಕೊಳ್ಳಬಹುದು, ಮಾಹಿತಿ ಕದಿಯಬಹುದು. ನೀವು ನಿಮ್ಮ ನೆಚ್ಚಿನ ತಾಣಕ್ಕೆ ಕಳುಹಿದ ಪಾಸ್ವರ್ಡ್ ಇವರ ಕೈಸೇರಲು ತಂತ್ರಜ್ಞಾನದಲ್ಲಿನ ಒಂದು ಕುಂದು ಕೊರತೆ ಸಾಕು.
ಈ ರೀತಿಯ ಲೋಪದೋಷಗಳನ್ನು ಸರಿಪಡಿಸಲು ದೊಡ್ಡ ಕಂಪೆನಿಗಳು ತಮ್ಮ ವ್ಯವಸ್ಥೆಯನ್ನು ನಿರಂತರವಾಗಿ ಅಭಿವೃದ್ಧಿಪಡಿಸುತ್ತಿರುತ್ತಾರೆ. ಅನೇಕ ಭದ್ರತಾ ಪರಿಣತರನ್ನು ನೇಮಿಸಿರುತ್ತಾರೆ. ಈಮೈಲ್, ಫೇಸ್ಬುಕ್ ಮೊದಲಾದ ತಾಣಗಳು ಎಲ್ಲಾ ಸಂದೇಶಗಳು ಸುರಕ್ಷಿತವಾಗಿ ಎನ್ಕ್ರಿಪ್ಟ್ ಆಗಿ ರವಾನೆಯಾಗುವಂತೆ ನೋಡಿಕೊಳ್ಳುತ್ತಾರೆ. ಇದಕ್ಕಾಗಿ ನೀವು ನಂಬಿಕೆಗರ್ಹವಾದ ಈಮೈಲ್ ಹಾಗೂ ಇಂಟರ್ನೆಟ್ ಪೂರೈಕೆದಾರರ ಮೇಲೆ ಅವಲಂಬಿತವಾಗುವುದು ಅವಶ್ಯ. ಇದಲ್ಲದೆ ಅಷ್ಟೇನೂ ನಂಬಿಕೆಗರ್ಹವಲ್ಲದ, ಖ್ಯಾತವಲ್ಲದ ತಾಣಗಳಲ್ಲಿ ಯಾವುದೇ ಪ್ರಮುಖ, ರಹಸ್ಯ ಮಾಹಿತಿಗಳನ್ನು ಹಂಚಿಕೊಳ್ಳುವುದನ್ನು ಮಾಡಬಾರದು.
ಬಳಕೆದಾರರ ತಿಳುವಳಿಕೆಯ ಕೊರತೆ
ನೀವು ಭಾರೀ ಮೊತ್ತದ ಲಾಟರಿ ಗೆದ್ದಿದ್ದೀರಿ, ಇದಕ್ಕಾಗಿ ನಿಮ್ಮ ಮೊಬೈಲ್, ಮತ್ತಿತರ ವಿವರಗಳನ್ನು ನಮಗೆ ಕಳುಹಿಸಿ; ರವಾನೆ ಖರ್ಚಿಗಾಗಿ ನಮ್ಮ ಖಾತೆಗೆ ಹಣ ಪಾವತಿಸಿ – ಇತ್ಯಾದಿ ಈಮೈಲುಗಳು ನಿಮಗೂ ಬಂದಿರಬಹುದು. ಈ ರೀತಿಯಲ್ಲಿ ನಿಮ್ಮನ್ನು ನಂಬಿಸಿ ಮಾಹಿತಿ, ಹಣ ಎಗರಿಸುವವರಿದ್ದಾರೆ.
ನಿಮ್ಮ ಬ್ಯಾಂಕ್ ಖಾತೆಯ ಢೃಡೀಕರಣಕ್ಕಾಗಿ ನಿಮ್ಮ ಪಿನ್, ಕಾರ್ಡ್ ಸಂಖ್ಯೆ, ಪಾಸ್-ವರ್ಡ್ ಇತ್ಯಾದಿ ಕಳುಹಿಸಿ ಎಂದು ನಿಮ್ಮನ್ನು ನಂಬಿಸಬಹುದು. ಯಾವುದೇ ಬ್ಯಾಂಕ್ ಈರೀತಿಯ ವಿವಿರಗಳನ್ನು ನಿಮ್ಮಿಂದ ಕೇಳುವುದಿಲ್ಲ ಎಂಬುದನ್ನು ಗಮನದಲ್ಲಿರಿಸಿ.
ಫೇಸ್-ಬುಕ್, ವಾಟ್ಸಾಪ್ಗಳಲ್ಲಿ ಬಂದ ಒಂದು ಲಿಂಕ್ ಆಕರ್ಷಕ ಚಿತ್ರ/ಆಸಕ್ತಿದಾಯಕ ಮಾಹಿತಿ/ಉಚಿತ ಕೊಡುಗೆಗಳ ಆಮಿಷವೊಡ್ಡಿ ನೀವು ಅಸುರಕ್ಷಿತ ಲಿಂಕ್ ಮೇಲೆ ಕ್ಲಿಕ್ಕಿಸುವಂತೆ ಮಾಡಬಹುದು. ಅಲ್ಲಿ ಫೇಸ್ಬುಕ್ ನಂತೆಯೇ ಕಾಣುವ ವಿನ್ಯಾಸ, ಪುಟದ ಹೆಸರುಗಳ ಮೂಲಕ ನಿಮ್ಮನ್ನ ದಾರಿತಪ್ಪಿಸಿ ನಿಮ್ಮ ಪಾಸ್ವರ್ಡ್ ಬರೆಯಲು ಕೇಳಬಹುದು. ನೀವೇನಾದರೂ ಆ ಮೋಸವನ್ನು ತಿಳಿಯದೆ ಅಲ್ಲಿ ನಿಮ್ಮ ಪಾಸ್ವರ್ಡ್ ಕೊಟ್ಟರೆ ನಿಮ್ಮ ಖಾತೆಯ ಪೂರ್ಣ ನಿಯಂತ್ರಣ ಅವರ ಕೈಸೇರುತ್ತದೆ. ಇಂತಹ ಲಿಂಕುಗಳು ನಿಮ್ಮ ಸ್ನೇಹಿತರಿಂದಲೇ ಬಂದರೂ ನಂಬಬೇಡಿ – ಅವರ ಖಾತೆಯೂ ಈ ಖದೀಮರ ನಿಯಂತ್ರಣಕ್ಕೆ ಸೇರಿರುವ ಸಾಧ್ಯತೆಯಿದೆ.
ಯಾವುದೇ ಖಾತೆಯ ಪಾಸ್ವರ್ಡ್ ಅನ್ನು ಅವರದಲ್ಲದ ತಾಣದಲ್ಲಿ ನೀಡಬೇಡಿ; ವಿನ್ಯಾಸ, ಹೆಸರುಗಳ ಸಾಮ್ಯತೆ ಇದ್ದರೂ ಕೂಡ. ಉದಾಹರಣೆಗೆ facebook.com ಬದಲಿಗೆ facedook.com ಅಥವಾ facebook.com-secure.com ಎಂಬ ವಿಳಾಸದಲ್ಲಿ ಇನ್ನೊಂದು ತಾಣ ರಚಿಸಿ ನಿಮ್ಮ ದಾರಿ ತಪ್ಪಿಸಬಹುದು.
ನಿಮ್ಮ ವಾಟ್ಸ್ಆಪ್ ಖಾತೆಯನ್ನು ಮುಂದುವರಿಸಲು/ನೀವು ವಾಟ್ಸ್-ಆಪ್ ಬಳಸುತ್ತೀರೆಂದು ಖಚಿತಪಡಿಸಿಕೊಳ್ಳಲು/ನೀಲಿ ಚುಕ್ಕೆ ಪಡೆಯಲು/ಹೊಸ ಸೌಲಭ್ಯ ಪಡೆಯಲು ಒಂದು ಸಂದೇಶವನ್ನು ಎಲ್ಲಾ ಸ್ನೇಹಿತರಿಗೂ ಕಳಿಸಿ ಎಂದು ಸಂದೇಶ ಬರಬಹುದು. ಅವುಗಳನ್ನು ನಂಬಬೇಡಿ. ಎಲ್ಲರಿಗೂ ಕಳಿಸಿ/ಅದರಲ್ಲಿ ಬಂದ ಲಿಂಕ್ ಬಳಸಿರೆಂದು ವಾಟ್ಸಾಪ್ ಆಗಲಿ, ಸಾಮಾಜಿಕ ತಾಣಗಳಾಗಲಿ ಹೇಳುವುದಿಲ್ಲ. ಅಗತ್ಯವಿದ್ದರೆ ಅವರೇ ನಿಮಗೆ ಸಂದೇಶವನ್ನು ಕಳಿಸಬಹುದು, ಇನ್ಯಾರ ಮೂಲಕವೋ ಕಳಿಸಬೇಕಾಗಿಲ್ಲ.
ನೀವು ಆನ್ಲೈನ್ ಬ್ಯಾಂಕಿಂಗ್ ಇರಲಿ, ಇನ್ನಿತರ ಮಹತ್ತ್ವದ ವ್ಯವಹಾರಗಳನ್ನು ನಡೆಸುವಾಗ ಅವರು ಸುರಕ್ಷತೆಗಾಗಿ ನಿಮ್ಮ ಮೊಬೈಲಿಗೆ ಸಂಕೇತವೊಂದನ್ನು ಕಳುಹಿಸಬಹುದು. ಇದನ್ನು ಕಳುಹಿಸಿದ ಬ್ಯಾಂಕ್/ಸಂಸ್ಥೆಯ ಅಧಿಕೃತ ಜಾಲತಾಣ/ಆಪ್ ಅಲ್ಲದೆ ಇನ್ನೆಲ್ಲಿಯೂ ನೀಡಬೇಡಿ – ಬ್ಯಾಂಕ್ ಹೆಸರಿನಲ್ಲಿ ನಿಮಗೆ ಯಾರಾದರೂ ಕರೆಮಾಡಿ ಆ ಗುಪ್ತಸಂಖ್ಯೆಯನ್ನು ಕೇಳಿದರೆ ಕೂಡ.
ಬಳಕೆದಾರರು ಈ ವಿಚಾರಗಳ ಬಗ್ಗೆ ಹೆಚ್ಚು ತಿಳಿದು, ಅರ್ಥಮಾಡಿಕೊಂಡಷ್ಟೂ ಅಂತರ್ಜಾಲ ಸುರಕ್ಷಿತವಾಗುತ್ತಾ ಸಾಗುತ್ತದೆ. ನಿಮ್ಮ ಗೆಳೆಯರಿಂದ ಸಂಶಯಾಸ್ಪದ ಸಂದೇಶ, ಫೇಸ್ಬುಕ್ ಪೋಸ್ಟ್, ಮೈಲ್ ಇತ್ಯಾದಿಗಳು ಕಂಡುಬಂದಲ್ಲಿ ಅವರನ್ನು ನೇರವಾಗಿ ಸಂಪರ್ಕಿಸಿ ಅವರ ಗಮನಕ್ಕೆ ತನ್ನಿ. ಅವರು ನಿಜವಾಗಿಯೂ ಅದನ್ನು ಕಳುಹಿಸಿದ್ದರೆ ಅಥವಾ ಅವರಿಗರಿವಿಲ್ಲದೆಯೇ ಅವರ ಖಾತೆಯಿಂದ ಇನ್ಯಾರೋ ಅದನ್ನು ಕಳಿಸಿದ್ದಾರೆಯೇ ತಿಳಿದುಕೊಳ್ಳಿ. ಆನ್ಲೈನ್ ಸುರಕ್ಷತೆಯನ್ನು ಎಲ್ಲರೂ ಕೈಜೋಡಿಸಿ ಕಾಪಾಡಿಕೊಳ್ಳಬೇಗಿದೆ.
ಟೆಕ್ ಸುದ್ದಿ
- ‘ಮೇಕ್ ಇನ್ ಇಂಡಿಯಾ’ ಯೋಜನೆಗೆ ಪೂರಕವಾಗಿ ತಂತ್ರಜ್ಞಾನ ಪ್ರಯೋಗಾಲಯವೊಂದನ್ನು ಬೆಂಗಳೂರಿನಲ್ಲಿ ಸಿದ್ಧಪಡಿಸುವುದಾಗಿ ಇಂಟೆಲ್ ಘೋಷಿಸಿದೆ. ಸ್ಥಳೀಯ ಸಂಶೋಧಕರು, ಸಣ್ಣ ಕಂಪೆನಿಗಳು ಇಲ್ಲಿ ಲಭ್ಯವಿರುವ ಮೂಲಸೌಕರ್ಯ, ಉಪಕರಣಗಳು, ತಂತ್ರಾಂಶಗಳನ್ನು ಬಳಸಬಹುದೆಂದು ಇಂಟೆಲ್ ಹೇಳಿದೆ.
- ಇದುವರೆಗೆ ಟ್ವಿಟ್ಟರಿನಲ್ಲಿ ಕನ್ನಡ ಬರೆಯಬಹುದಾಗಿದ್ದರೂ ಅವರ ಪುಟ ಇಂಗ್ಲಿಷಿನಲ್ಲೇ ಬಳಸಬೇಕಿತ್ತು. ಇದೀಗ ಸಂಪೂರ್ಣ ಕನ್ನಡದಲ್ಲೇ ಟ್ವಿಟ್ಟರ್ ಬಳಸುವ ಅವಕಾಶ ನೀಡಿದೆ. ಸೆಟ್ಟಿಂಗ್ಸ್ ಹೋಗಿ ನಿಮ್ಮ ಭಾಷೆಯನ್ನು ಬದಲಾಯಿಸಿಕೊಳ್ಳಬಹುದು.