ನಮ್ಮ ಜೀವನ ಇವತ್ತು ಪ್ರಚಾರಮಾಧ್ಯಮಗಳಿಂದ ಎಷ್ಟೊಂದು ಪ್ರಭಾವಿತವಾಗಿದೆ ಎಂದರೆ ನಾವು ನಮ್ಮ ದೈನಂದಿನ ಸಮಸ್ಯೆಗಳನ್ನು ನೋಡುವ ಕ್ರಮ ಮತ್ತು ಅವುಗಳ ಪರಿಹಾರಕ್ಕೆ ಪ್ರಯತ್ನಿಸುವ ವಿಧಾನ ಕೂಡ ಮಾಧ್ಯಮಗಳ ರೀತಿಯಲ್ಲೇ ನಡೆಯುತ್ತಿದೆಯೇನೋ ಅನ್ನಿಸುತ್ತಿದೆ. ಮಾಧ್ಯಮಗಳು, ಅದರಲ್ಲೂ ಮುಖ್ಯವಾಗಿ ೨೪ ಗಂಟೆಯೂ ವಿಷಯ ಕೊಡುತ್ತೇವೆ ಎನ್ನುವ ಸುದ್ದಿವಾಹಿನಿಗಳಿಗೆ ದಿನವೂ ವಿಷಯ ಬೇಕಲ್ಲಾ; ಎಲ್ಲಿಗೆ ಹೋಗುವುದು! ಅದಕ್ಕಾಗಿ ಅವರು ದಿನವೂ ಜನರನ್ನು ಕೆರಳಿಸುವಂತಹ ಸುದ್ದಿ-ವಿಷಯಗಳಿಗಾಗಿ ಹುಡುಕಾಡುತ್ತಿರುತ್ತಾರೆ. ಇಲ್ಲಿ ಕೆರಳಿಸುವುದು ಏಕೆಂದರೆ ಟಿ.ಆರ್.ಪಿ. ಬೇಕಲ್ಲಾ; ಅದಕ್ಕೆ.
ಅದಕ್ಕನುಗುಣವಾಗಿ ಒಂದು ನಾಲ್ಕು ಜನ ರೈತರು ಆತ್ಮಹತ್ಯೆ ಮಾಡಿಕೊಂಡರೆಂದರೆ ವಾಹಿನಿಯವರ ಸಕಲ ಸರಂಜಾಮು ಅಲ್ಲಿಗೆ ಧಾವಿಸುತ್ತದೆ; ಪ್ರಸಾರಕ್ಕೆ ದಿನದ ೨೪ ಗಂಟೆಯೂ ಸಾಲದೆಂಬಂತೆ ಸಮಸ್ಯೆಯ ಬಗೆಬಗೆಯ ಮುಖಗಳನ್ನು ನಮ್ಮೆಲ್ಲರ ಕಣ್ಣು, ಕಿವಿ, ಮನಸ್ಸು, ಮಿದುಳುಗಳಲ್ಲೆಲ್ಲ ತುಂಬಿಬಿಡುತ್ತಾರೆ. ಆದರೆ ಎಷ್ಟು ದಿನ ಹೇಳಿದ್ದನ್ನೇ ಹೇಳಲು ಸಾಧ್ಯ? ಅದಲ್ಲದೆ ಟಿ.ಆರ್.ಪಿ. ಕುಸಿಯುತ್ತದಲ್ಲಾ! ಅದಕ್ಕಾಗಿ ಅವರು ಆ ಸಮಸ್ಯೆಯನ್ನು ಅಲ್ಲಿಗೇ (ಉದಾಹರಣೆಗೆ ರೈತರ ಪಾಲಿಗೆ) ಬಿಟ್ಟು ಇನ್ನೊಂದು ಸಮಸ್ಯೆಯನ್ನು ಹಿಡಿದುಕೊಂಡು ಅದರತ್ತ ಧಾವಿಸುತ್ತಾರೆ. ಈ ಸಮಸ್ಯೆ ಮೂಲೆಗೆ ಸರಿದು ಇನ್ನೊಂದು ಸಮಸ್ಯೆ ರಾರಾಜಿಸುತ್ತದೆ.
ಅನ್ನದಾತನ ಆತ್ಮಹತ್ಯೆ
ಲೇಖಕರು: ಎ.ಪಿ. ಚಂದ್ರಶೇಖರ
ಪ್ರಕಾಶಕರು: ವಿಸ್ಮಯ ಪ್ರಕಾಶನ
‘ಮೌನ’, ೩೬೬, ನವಿಲು ರಸ್ತೆ, ಕುವೆಂಪು ನಗರ,
ಮೈಸೂರು – ೫೭೦ ೦೨೩
ಪುಟಗಳು: ೧೨೦
ಬೆಲೆ: ರೂ. ೧೦೦
ಪ್ರಜಾಪ್ರಭುತ್ವ ಎಂದ ಮೇಲೆ ಜನರ ಚಿತ್ತ ಯಾವಕಡೆಗಿದೆಯೋ ನಮ್ಮ ನಿಜವಾದ ಪ್ರಭುಗಳಾದ ರಾಜಕಾರಣಿಗಳ ಚಿತ್ತವೂ ಅದೇ ಕಡೆಗೆ ಇರಬೇಕಲ್ಲವೆ? ಮಾಧ್ಯಮಗಳು ಸಮಸ್ಯೆಯಿಂದ ಸಮಸ್ಯೆಗೆ ಹಾರುತ್ತಿರುವಂತೆಯೇ ಅವುಗಳ ಹಿಂದೆಯೇ ರಾಜಕಾರಣಿಗಳು ಕೂಡ ಹಾರುತ್ತಿರುತ್ತಾರೆ. ಅಂದರೆ ಅವರಿಗೆ ರೈತರ ಆತ್ಮಹತ್ಯೆಯ ಸಮಸ್ಯೆ ಇತರ ನೂರಾರು ಸಮಸ್ಯೆಗಳಲ್ಲಿ ಒಂದು ಅಷ್ಟೆ. ಇಂತಹ ಮನೋಭಾವವನ್ನು ತೀವ್ರವಾಗಿ ಪ್ರತಿಭಟಿಸುವ ಮತ್ತು ಆತ್ಮಹತ್ಯೆಯಲ್ಲಿ ಪರ್ಯವಸಾನವಾಗುತ್ತಿರುವ ರೈತರ ಸಮಸ್ಯೆಗೆ ದೀರ್ಘಕಾಲೀನ ಮತ್ತು ಮೂಲಭೂತವಾದ ಪರಿಹಾರಗಳನ್ನು ಸೂಚಿಸುವ ಒಂದು ಪುಸ್ತಕ ಈ ವರ್ಷದ ರೈತರ ಆತ್ಮಹತ್ಯೆ ಹಂಗಾಮಿಗಿಂತ ಮೊದಲೇ ಕಳೆದ ವರ್ಷ ಪ್ರಕಟವಾಗಿದೆ. ‘ಅನ್ನದಾತನ ಆತ್ಮಹತ್ಯೆ’ ಎನ್ನುವ ಈ ಪುಸ್ತಕದ ಲೇಖಕರು ಎ.ಪಿ. ಚಂದ್ರಶೇಖರ ಅವರು. ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರು ಮೂಲದವರಾದ ಚಂದ್ರಶೇಖರ್ ಅವರಿಗೆ ಸಾವಯವ ಕೇಂದ್ರಿತವಾದ ಕೃಷಿ ಪ್ರಯೋಗಗಳಲ್ಲಿ ಮೂವತ್ತು ವರ್ಷಗಳಿಗೂ ಹೆಚ್ಚಿನ ಅನುಭವವಿದೆ. ಮೈಸೂರಿನ ಕಳಲವಾಡಿಯಲ್ಲಿ ಕೃಷಿನಿರತರಾದ ಅವರ ಮಾತುಗಳಿಗೆ ದಟ್ಟ ಅನುಭವದ ಬೆನ್ನೆಲುಬಿದೆ. ಅವರ ಕೃಷಿಕ್ಷೇತ್ರ(ತೋಟ)ಕ್ಕೆ ಸಾಕಷ್ಟು ಜನ ಭೇಟಿನೀಡಿ ಸ್ಫೂರ್ತಿ ಪಡೆಯುತ್ತಿದ್ದಾರೆ. ಸ್ವತಃ ಲೇಖಕರಾದ ಚಂದ್ರಶೇಖರ್ ಕೃಷಿ – ಆಧಾರಿತ ಜೀವನ ಮತ್ತು ಆರ್ಥಿಕತೆಗಳಿಗೆ ಸಂಬಂಧಿಸಿ ಹತ್ತಕ್ಕೂ ಮಿಕ್ಕಿ ಪುಸ್ತಕಗಳನ್ನು ಬರೆದಿದ್ದಾರೆ. ತಾವು ಕಂಡುಕೊಂಡ ಸತ್ಯವನ್ನು ದಿಟ್ಟತನದಿಂದ ಮಂಡಿಸುವ ಚಂದ್ರಶೇಖರ್ ಅವರ ಪ್ರಸ್ತುತ ಪುಸ್ತಕ ಸ್ವೋಪಜ್ಞತೆ, ಸ್ವಂತಿಕೆಗಳಿಂದ ಗಮನ ಸೆಳೆಯುತ್ತದೆ. (ಪ್ರಕಾಶನ – ವಿಸ್ಮಯ ಪ್ರಕಾಶನ, ಮೈಸೂರು) ಇಲ್ಲಿನ ಬಹಳಷ್ಟು ವಿಚಾರಗಳು ನಮ್ಮ ಅಧಿಕಾರಸ್ಥರಿಗೆ, ಆರ್ಥಿಕತೆಯ ಸೂತ್ರಗಳನ್ನು ಹಿಡಿದವರಿಗೆ, ಮಾತ್ರವಲ್ಲ; ಪೇಟೆ-ಪಟ್ಟಣಗಳ ಆರಾಮಜೀವನದ ಮೊರೆಹೊಕ್ಕವರಿಗೆ ಕೂಡ ಆಘಾತಕಾರಿಯಾಗಿ ಕಂಡರೆ ಆಶ್ಚರ್ಯವಿಲ್ಲ. ಇಲ್ಲಿ ಮಂಡಿತವಾದ ವಿಚಾರಸರಣಿ ಕಾರ್ಯಗತವಾಗಲು ಸಾಧ್ಯವೇ ಎನ್ನುವ ಸಂದೇಹ ಬರಲೂಬಹುದು. ಆದರೆ ಎಲ್ಲರ ಜೀವನಾಧಾರವಾದ ಕೃಷಿಯ ಈ ಸಮಸ್ಯೆ ಇಂದು ಗಂಭೀರ ಸ್ಥಿತಿಗೆ ತಲಪಿದ್ದು, ಔಷಧೋಪಚಾರದ ಎಟುಕಿಗೆ ಸಿಗುವಂತಿಲ್ಲ; ಇದಕ್ಕೊಂದು ಮೇಜರ್ ಸರ್ಜರಿಯೇ ಅವಶ್ಯವಾಗಿದೆ.
ಆಘಾತಕಾರಿ ಸತ್ಯ
ಆಘಾತಕಾರಿ ಎನಿಸಬಹುದಾದ ಚಂದ್ರಶೇಖರ್ ಅವರ ಒಂದು ವಿಚಾರದಿಂದಲೇ ಆರಂಭಿಸಬಹುದು. ನಿಜವಾಗಿ ನೋಡಿದರೆ ಕೃಷಿಯೊಂದೇ ನಿಜವಾದ ಉದ್ಯೋಗ. ಕೃಷಿ ಆದಾಯ ಮಾತ್ರ ನಿಜವಾದ ಆದಾಯ. ಕೃಷಿಯಲ್ಲಿ ಮಾತ್ರ ನಿಜವಾಗಿ ಉತ್ಪಾದನೆಯಾಗುತ್ತದೆ. ಉಳಿದ ಉದ್ಯೋಗಗಳಲ್ಲಿ ವಸ್ತುವಿನ ರೂಪ ಬದಲಾವಣೆ ಮಾತ್ರ ನಡೆಯುತ್ತದೆ. ಆದ್ದರಿಂದ ಕೃಷಿ ಸದಾ ಮುಂದಿರಬೇಕು; ಉಳಿದ ಉದ್ಯೋಗಗಳು ಅದನ್ನು ಹಿಂಬಾಲಿಸಬೇಕು.
ಈಗ ಆದುದೇನೆಂದರೆ ಕೃಷಿಯನ್ನು ಹಿಂಬಾಲಿಸಬೇಕಾದವು ಮತ್ತು ಕೃಷಿ ಹಾಗೂ ಜೀವನಕ್ಕೆ ಬೇಡವಾದ ಉದ್ಯೋಗಗಳೆಲ್ಲ ಗೌರವಾನ್ವಿತ ಉದ್ಯೋಗಗಳೆಂದು ಖ್ಯಾತಿ ಪಡೆದು, ಕೃಷಿಗಿಂತ ಹೆಚ್ಚಿನ ಆದಾಯ ಪಡೆಯಲು ತೊಡಗಿವೆ. ಕೃಷಿಯ ಆದಾಯದಿಂದ ಮಿತಿ ಮೀರಿ ಪಾಲು ಪಡೆಯುತ್ತಿವೆ. ಕೃಷಿಯಲ್ಲಿ ಎಂದೂ ಸಾಧ್ಯವಾಗದ ದರೋಡೆ, ಉಳಿದ ಉದ್ಯೋಗಗಳಲ್ಲಿ ಸಾಧ್ಯವಾಗಿದೆ. ಒಂದು ಸಮಾಜ ಸ್ವಸ್ಥವಾಗಿರಬೇಕಾದರೆ ಕೃಷಿಯ ಆದಾಯದ ಮಿತಿಯನ್ನು ಕಾಯ್ದುಕೊಳ್ಳವುದು ಅನಿವಾರ್ಯ. ಉಳಿದ ಉದ್ಯೋಗಗಳ ಆದಾಯ ಏನಿದ್ದರೂ ಕೃಷಿ ಆದಾಯಕ್ಕಿಂತ ಕಡಮೆ ಇರಲೇಬೇಕು. ಆಗ ಮಾತ್ರ ಕೃಷಿ ನಡೆಯುತ್ತದೆ. ಉತ್ಪಾದನೆ ನಡೆಯುತ್ತದೆ.
ಈ ವಿಚಾರಗಳು ಆಘಾತಕಾರಿ ಎನಿಸುವುದಲ್ಲದೆ ‘ಉಳಿದ ಉದ್ಯೋಗಗಳ ಆದಾಯ ಏನಿದ್ದರೂ ಕೃಷಿ ಆದಾಯಕ್ಕಿಂತ ಕಡಮೆ ಇರಲೇ ಬೇಕು’ ಎಂಬಂತಹ ಸಲಹೆ ಎಂದಿಗಾದರೂ ಅನುಷ್ಠಾನಕ್ಕೆ ಬರಲು ಸಾಧ್ಯವೇ ಎನಿಸಲೂಬಹುದು. ಆದರೆ ನಾವು ಸಾಗಬೇಕಾದ ದಾರಿಯನ್ನು ಲೇಖಕರು ಸ್ಪಷ್ಟವಾಗಿ ಗುರುತಿಸಿದ್ದಾರೆಂಬುದನ್ನು ಒಪ್ಪಿಕೊಳ್ಳಲೇಬೇಕು. ರೈತರ ಉತ್ಪನ್ನಗಳಿಗೆ ಸರಿಯಾದ ಬೆಲೆ ಸಿಗಬೇಕು, ಫಸಲು ಕೈಗೆ ಬರುವಾಗಲೇ ಬೆಲೆಗಳನ್ನು ಪಾತಾಳಕ್ಕೆ ಇಳಿಸಿ ದಿನನಿತ್ಯ ಶೋಷಿಸುವ ಮಧ್ಯವರ್ತಿಗಳನ್ನು ಮಟ್ಟ ಹಾಕಬೇಕು ಎಂಬಂತಹ ವಿಚಾರಗಳು ರೈತರ ಬಾಯಲ್ಲೂ ಇವೆ; ಇತರರೂ ಅದನ್ನು ಹೇಳುತ್ತಾರೆ. ಆದರೆ ಈ ಒಂದು ಸಮಸ್ಯೆಯ ಪರಿಹಾರಕ್ಕಾದರೂ ಯಾರೇನು ಮಾಡಿದ್ದಾರೆ ಹೇಳಿ. ಕೇಂದ್ರ – ರಾಜ್ಯ ಸರ್ಕಾರಗಳು ಏನು ಮಾಡಿವೆ? ಆರ್ಥಿಕತೆಯ ಸೂತ್ರ ಹಿಡಿದು ಕುಳಿತವರು ಎಲ್ಲಿದ್ದಾರೆ?
ರೈತರಿಗೂ ನಿಯಮ
ಸ್ವತಃ ರೈತರು ಕೂಡ ಪಾಲಿಸಬೇಕಾದ ಜೀವನವಿಧಾನ ಮತ್ತು ನಿಯಮಗಳ ಬಗೆಗೂ ಲೇಖಕರು ಬಹಳಷ್ಟು ಸಲಹೆ-ಸೂಚನೆಗಳನ್ನು ನೀಡುತ್ತಾರೆ. ರೈತರು ಸೇರಿದಂತೆ ಎಲ್ಲರ ದೃಷ್ಟಿಕೋನಗಳನ್ನೇ ಬದಲಿಸುವಂತಹ ವಿಚಾರಗಳನ್ನು ಮುಂದಿಡುತ್ತಾರೆ. ಉದಾಹರಣೆಗೆ ರೈ ಎಂದರೆ ಸಂಪತ್ತು; ತ ಎಂದರೆ ಸಹಿತ. ಸಂಪತ್ತು ಸಹಿತನಾದವನು ರೈತ – ಸಂಪತ್ತೆಂದರೆ ದುಡಿಯುವ ಶಕ್ತಿ, ದುಡಿತದಿಂದ ಉಂಟಾಗುವ ಹಸಿವು, ಹಸಿವಿನಿಂದ ಬರುವ ರುಚಿ, ಹಸಿವು ನೀಗಿಸುವ ಅನ್ನ, ಪ್ರೀತಿಯ ಮಿತ್ರ-ಬಾಂಧವರು, ನಿಶ್ಚಿಂತ ನಿದ್ರೆ ಇತ್ಯಾದಿ. ಇವಿದ್ದರೆ ಯಾರೂ ಸಂಪತ್ತು ಹೊಂದಬಹುದು; ಇವಿಲ್ಲದಿದ್ದರೆ ಸಂಪತ್ತಿದ್ದರೂ ಪ್ರಯೋಜನ ಇಲ್ಲ. ಪ್ರಾಕೃತಿಕ ಸಂಪತ್ತು, ಭೋಗಸಂಪತ್ತು ಎರಡೂ ಇರುವವನೇ ರೈತ ಎನ್ನುವ ಲೇಖಕರು ಮುಂದುವರಿದು, ಯಾರಾದರೂ ರೈತ ಎನಿಸಬೇಕಾದರೆ, ಹೀಗಿರಬೇಕು ಎನ್ನುತ್ತಾರೆ:
- ೧. ಹಣ್ಣು, ತರಕಾರಿಗಳನ್ನು ಪೇಟೆಯಿಂದ ತರಬಾರದು.
- ೨. ಹೊಟೇಲ್, ಬೇಕರಿ ತಿಂಡಿಗಳಿಗೆ ಬಲಿ ಬೀಳಬಾರದು.
- ೩. ಬೀಜ, ಗೊಬ್ಬರಗಳನ್ನು ತನ್ನ ಜಮೀನಿನಲ್ಲೇ ತಯಾರಿಸಿಕೊಳ್ಳಬೇಕು.
- ೪. ಆದಾಯಕ್ಕಿಂತ ಖರ್ಚು ಕಡಮೆ ಇರಬೇಕು.
- ೫. ಕೃಷಿಸಾಲದ ಮೊರೆಹೊಗಬಾರದು.
- ೬. ದಿನವೂ ಏನಾದರೂ ಕೃಷಿಕೆಲಸ ಮತ್ತು ಏನಾದರೂ ಕೊಯ್ಲು ಇರಬೇಕು.
- ೭. ಕೃಷಿಭೂಮಿ ಕ್ರಮೇಣ ಫಲವತ್ತಾಗಬೇಕು.
- ೮. ಕೃಷಿಯ ದಿನದಿನದ ಪರಿವರ್ತನೆಗಳನ್ನು ಗಮನಿಸುತ್ತಿರಬೇಕು.
- ೯. ಕೃಷಿಕನು ಕ್ರಮೇಣ ಸ್ವಾವಲಂಬಿ ಮತ್ತು ಕೃಷಿತಜ್ಞನಾಗಿ ಬೆಳೆಯಬೇಕು.
ಕೃಷಿ ಎಂದರೆ ವ್ಯವಸಾಯ, ಪರಿಶ್ರಮ. ಭೂಮಿಯನ್ನು ಕೆರೆಯುವ, ಅಗೆಯುವ, ಗಿಡನೆಡುವ ಪ್ರಕ್ರಿಯೆಯಲ್ಲಿ ಪ್ರಕೃತಿಯ ಸಹನೆಯ ಕಟ್ಟೆ ಒಡೆಯದಂತೆ, ಧೂಳು ಏಳದಂತೆ, ಮಳೆನೀರು ಕೆನ್ನೀರಾಗಿ ಹರಿಯದಂತೆ, ಅಂತರ್ಜಲ ಬತ್ತದಂತೆ, ಕೊಳಚೆ ಮಡುಗಟ್ಟದಂತೆ, ಯುಕ್ತಾಯುಕ್ತ ವಿವೇಕದಂತೆ ಮಾಡಿದರಷ್ಟೇ ಅದು ಕೃಷಿ. ತಾನಾಗಿ ಬೆಳೆಯುವ, ಯಾವುದೇ ರೋಗ-ರುಜಿನ ಇಲ್ಲದ, ಸರಳತೆಯಲ್ಲಿ ಸೌಂದರ್ಯ ತುಂಬಿದ ದಟ್ಟಕಾಡು ಕೃಷಿಗೆ ಆದರ್ಶವಾಗಬೇಕು. ಪ್ರಕೃತಿಯನ್ನು ಅದು ಇರುವ ಹಾಗೇ ಕಾಪಾಡುತ್ತಾ ಮಾನವ ಪ್ರಕೃತಿಯನ್ನು ಅದರೊಡನೆ ಸಮರಸಗೊಳಿಸಿದರೆ ಅದು ಕೃಷಿ. ಕೃಷಿಯಿಂದ ಕೃಷಿಕನಿಗೆ, ಕೃಷಿಭೂಮಿಗೆ, ಸಮಾಜಜೀವನಕ್ಕೆ ಅಥವಾ ಪರಿಸರಕ್ಕೆ ತೊಂದರೆ ಆಗಿದೆ ಎಂದರೆ, ಕೃಷಿಯಲ್ಲಿ ಜನ ಆಸಕ್ತಿಯನ್ನು ಕಳೆದುಕೊಳ್ಳುತ್ತಾ ಇದ್ದಾರೆಂದರೆ ಕೃಷಿ ಸರಿ ಇಲ್ಲ ಎಂದೇ ಅರ್ಥ. ಈಗ ನಡೆಯುತ್ತಿರುವುದು ಕೃಷಿ ಅಲ್ಲ ಎಂದರ್ಥ. ಕೃಷಿಕನು ಆತ್ಮಹತ್ಯೆಗೆ ಶರಣಾಗುವ ಹಂತಕ್ಕೆ ಕೃಷಿಯನ್ನು ಹಾಳುಮಾಡಲಾಗಿದೆ ಎಂದರೆ ಈಗ ಚಾಲ್ತಿಯಲ್ಲಿರುವ ವಿಜ್ಞಾನ ದುರುಪಯೋಗಗೊಂಡಿದೆ ಎಂದೇ ಅರ್ಥ ಎಂದು ಲೇಖಕರು ಎಚ್ಚರಿಸುತ್ತಾರೆ. ಮುಖ್ಯವಾಗಿ ೧೯೬೦ರ ದಶಕದ ಹಸಿರುಕ್ರಾಂತಿಯ ಮೂಲಕ ಬಂದ ಅನಾಹುತಗಳು ಕೃಷಿಯನ್ನು ಇಂದು ನಾವು ಕಾಣುವ ವಿಕೃತಿಯತ್ತ ಒಯ್ಯುತ್ತಾ ಹೋದವೆಂದು ಒಪ್ಪಿಕೊಳ್ಳಬೇಕು. ಯಂತ್ರ, ರಾಸಾಯನಿಕ, ಕೀಟನಾಶಕಗಳಿಂದಾಗಿ ಕೃಷಿ ದುಬಾರಿಯಾಗುತ್ತಾ ಹೋಯಿತು. ಮಣ್ಣು, ನೀರುಗಳೂ ಹಾಳಾದವು.
ಗಾಂಧಿಯವರ ಮಾತು
ದೇಹದ ಅಗತ್ಯವಾದ ಅನ್ನವನ್ನು ದೈಹಿಕ ಶ್ರಮದಿಂದ ಪಡೆಯಬೇಕೇ ಹೋರತು ಬುದ್ಧಿಯ ಬಲದಿಂದ ಕಸಿಯುವುದಲ್ಲ ಎಂಬ ತತ್ತ್ವವನ್ನು ಮರೆತ ಕಾರಣ ಇಂದು ಕೃಷಿ ಅತ್ಯಂತ ದೀನದರಿದ್ರ ಉದ್ಯೋಗವೆಂಬ ಅಪಖ್ಯಾತಿಯನ್ನು ಪಡೆದಿದೆ ಎನ್ನುವ ಲೇಖಕರ ಮಾತು ತುಂಬ ಅರ್ಥಪೂರ್ಣ. ‘ದೇಹದ ಅಗತ್ಯವಾದ ಅನ್ನವನ್ನು ದೈಹಿಕ ಶ್ರಮದಿಂದ ಪಡೆಯಬೇಕು’ ಎನ್ನುವ ಮಾತನ್ನು ಒಮ್ಮೆ ಗಾಂಧಿ ಕೂಡ ಹೇಳಿದ್ದರು. ಅದನ್ನು ಆಗ ಬಹಳಷ್ಟು ಜನ ಆಚರಣೆಗೂ ತಂದಿದ್ದರು. ಒಂದು ಉದಾಹರಣೆ ನೆನಪಾಗುತ್ತದೆ. ಯುವಕ ಚೇರ್ಕಾಡಿ ರಾಮಚಂದ್ರರಾಯರು ನೇಯ್ಗೆಯೋ ಇನ್ನೇನೋ ಕಸಬು ಮಾಡಿಕೊಂಡು ಪೇಟೆಯ ಕಡೆ ಇದ್ದರು;. ಗಾಂಧಿಯವರ ಕರೆಗೆ ಓಗೊಟ್ಟು ಹಳ್ಳಿಕಡೆಗೆ ಬಂದರು. ತನಗೆ ದೊರೆತ ಗುಡ್ಡೆಯ ಜಾಗದಲ್ಲೇ ಕೃಷಿಗೆ ತೊಡಗಿದರು. ಗಾಂಧಿ ಹೇಳಿದಂತೆ ಅನ್ನ ಬೆಳೆಯುವ ಸಲುವಾಗಿ ಗುಡ್ಡೆಯಲ್ಲೇ ಏರಿ ಮಾಡಿ ಭತ್ತ ಬೆಳೆದರು; ಅದು ‘ಚೇರ್ಕಾಡಿ ಕೃಷಿಪದ್ಧತಿ’ ಎಂದೇ ಹೆಸರಾಯಿತು. ರಾಮಚಂದ್ರರಾಯರು ಒಬ್ಬ ಕೃಷಿತಜ್ಞರೆನಿಸಿ ನಾಡಿನಲ್ಲೇ ಖ್ಯಾತರಾದರು. ದೇಹದ ಅಗತ್ಯವಾದ ಅನ್ನವನ್ನು ದೈಹಿಕ ಶ್ರಮದಿಂದ ಪಡೆಯಬೇಕು, ಎಂಬ ಈ ಒಂದು ಮಾತಿನಿಂದಾಗಿ ಕೃಷಿ ಬಿಟ್ಟು ಪೇಟೆ ಸೇರಿದವರಲ್ಲಿ ಒಂದು ಅಪರಾಧಪ್ರಜ್ಞೆ ಕಾಡುವಂತಾದರೆ, ಆ ಮೂಲಕ ರೈತರ ಬಗೆಗೆ ಗೌರವ, ಸಹಾನುಭೂತಿಗಳು ಬಂದರೆ ಎಷ್ಟೋ ಲಾಭವಿದೆ.
ಇಂದಿನ ಕೃಷಿಯಲ್ಲಿ ಬೆಟ್ಟ-ಗುಡ್ಡಗಳನ್ನು ಹಳ್ಳ-ಕೊಳ್ಳಗಳೊಳಗೆ ತಳ್ಳಿ ತಟ್ಟುಮಾಡುವ ಮಣ್ಣು ಮುಕ್ಕುವ ರಾಕ್ಷಸಯಂತ್ರಗಳು, ಮಳೆಬಂದರೆ (ಮಣ್ಣು ಕೊಚ್ಚಿಹೋಗಿ) ನದಿ-ಹೊಳೆಗಳ ಮಟ್ಟ ಏರಿಸುವ ಟ್ರಾಕ್ಟರ್ ಉಳುಮೆಗಳು – ಹೀಗೆ ಮಣ್ಣಿನ ವಿಕೃತಿಯಿಂದ, ಅತಿಯಾದ ಕೆರೆತದಿಂದ ಆಗಬಾರದ್ದೆಲ್ಲ ಆಗಿಹೋಗಿದೆ ಎನ್ನುವ ಈ ಪುಸ್ತಕ, ಎತ್ತು-ಕೋಣಗಳ ಉಳುಮೆ, ಗುದ್ದಲಿಯ ಅಗೆತವನ್ನು ಪ್ರಕೃತಿ ಸಹಿಸೀತು. ಭತ್ತ-ರಾಗಿಗಳಿಗೆ, ಕೆಲವು ತರಕಾರಿಗಳಿಗೆ ಮಾತ್ರ ಉಳುಮೆ, ಅಗೆತ ಬೇಕು. ದೊಡ್ಡ ಗಿಡ, ತೋಟದ ಬೆಳೆಗಳಿಗೆ ಬೇಡ.
ಮರ-ಗಿಡದ ಬೇರು, ಗೆಡ್ಡೆಗಳು ಉಚಿತವಾಗಿ ಉಳುಮೆ ಕೆಲಸವನ್ನು ಮಾಡುತ್ತವೆ; ಕೃಷಿ ಎಂದರೆ ‘ಪ್ರಕೃತಿಗೆ ನಷ್ಟವಾಗದ ಹಾಗೆ ನಮ್ಮನ್ನು ಸಂಪನ್ನಗೊಳಿಸಿಕೊಳ್ಳುವ ವಿಧಾನ’ ಎನ್ನುತ್ತದೆ. ಎರೆಹುಳದ ಕೆಲಸವನ್ನು ಟ್ರಾಕ್ಟರಿಗೆ ವಹಿಸಿದರೆ, ಎತ್ತಿನ ಕೆಲಸವನ್ನು ಕಳೆನಾಶಕಗಳಿಗೆ ವಹಿಸಿದರೆ, ತರಗೆಲೆಯ ಕೆಲಸವನ್ನು ಗೊಬ್ಬರದ ಕಾರ್ಖಾನೆಗಳಿಗೆ ವಹಿಸಿದರೆ, ಆ ಮೂಲಕ ಮಧ್ಯವರ್ತಿಗಳನ್ನು ಪೋಷಿಸಿದರೆ ರೈತನಿಗೆ ಉಳಿಯುವುದೇನು? ಎಂದು ಪ್ರಶ್ನಿಸುತ್ತದೆ. ಕೃಷಿಗೆ ಸೀಮಿತ ಉಳುಮೆ ಸಾಕು ಎನ್ನುವಲ್ಲಿ ಉಳುಮೆ ಬೇಡವೇ ಬೇಡ ಎನ್ನುವ ಜಪಾನಿ ಕೃಷಿತಜ್ಞ ಮಸನೊಬು ಫುಕುವೋಕ ಅವರ ಪ್ರಭಾವ ಕಂಡರೆ ವಿಶೇಷವಿಲ್ಲ. (ಎ.ಪಿ. ಚಂದ್ರಶೇಖರ್ ‘ಫುಕುವೋಕ’ ಎನ್ನುವ ಒಂದು ಪುಸ್ತಕವನ್ನೂ ಬರೆದಿದ್ದಾರೆ)
ಎಲ್ಲರೂ ನಿಂದಿಸುವವರೇ!
ಆತ್ಮಹತ್ಯೆಯಲ್ಲಿ ಬಹುತೇಕ ಆಗುವುದು ದೇಹದ ಬಡತನವಲ್ಲ; ಬುದ್ಧಿಯ ಬಡತನ, ಪ್ರೀತಿಯ ಬಡತನ, ನೀತಿಯ ಬಡತನ, ಛಾತಿಯ ಬಡತನ, ಸೋಮಾರಿತನ ಮತ್ತು ಪ್ರಲೋಭನ. ರೈತನ ಆತ್ಮಹತ್ಯೆ ಒಂದೆರಡು ದಿನಗಳ ಸೃಷ್ಟಿ ಅಲ್ಲ; ಇದು ಸಮಸ್ಯೆಗಳ ಸಂಚಯನ. ಇದಕ್ಕೆ ಹೊರಗಿನಿಂದ ಬೇರೆಯವರಿಂದ ಪರಿಹಾರ ಕಷ್ಟ ಎನ್ನುವ ಲೇಖಕರು ಮುಂದುವರಿದು ಕೃಷಿಕನಿಗೆ ಇಂದು ಉಂಟಾಗಿರುವ ದಯನೀಯ ಸ್ಥತಿಯನ್ನು ಚಿತ್ರಿಸುತ್ತಾರೆ. ನೀನು ದಡ್ಡ ಎಂದರೆ ಯಾರೂ ಸಿಡಿದೇಳುತ್ತಾರೆ. ಏಕೆಂದರೆ ಆತ್ಮಗೌರವವನ್ನು ಕಾಯ್ದುಕೊಳ್ಳುವುದು ಉಸಿರಾಟದಷ್ಟೇ ಸಹಜ. ಆದರೆ ರೈತ ಹೀಗೊಂದು ಹೀನಾಯ ಸೋಲು ಅನುಭವಿಸುತ್ತಿರುವುದು ಭಯಂಕರ ವಿಸ್ಮಯವೇ ಸರಿ. ರೈತನನ್ನು ನೀನು ದಡ್ಡ, ಪೆದ್ದ, ನಿನಗೇನೂ ಗೊತ್ತಿಲ್ಲ ಎನ್ನುವವರು ಒಬ್ಬರಾ, ಇಬ್ಬರಾ! ಬೀಜ ಕಂಪೆನಿಯವರು, ಗೊಬ್ಬರ ಕಂಪೆನಿಯವರು, ಔಷಧಿ ಕಂಪೆನಿಯವರು, ಬೋರು-ಡ್ರಿಪ್ ಪಂಪಿನವರು, ಟ್ರಾಕ್ಟರಿನವರು, ಕೂಲಿಗಳು, ದಲ್ಲಾಳಿಗಳು, ಅಂಗಡಿ ವರ್ತಕರು, ಬ್ಯಾಂಕಿನವರು, ವಿಜ್ಞಾನಿಗಳು, ರಾಜಕಾರಣಿಗಳು, ಅಧಿಕಾರಿಗಳು, ಓದಿದವರು, ಪೇಟೆಯವರು, ನೀಟಾಗಿ ಡ್ರೆಸ್ ಹಾಕಿದವರು, ಡ್ರೆಸ್ ಹಾಕಿ ಅವರಿವರ ಗೇಟು ಕಾಯುವವರು – ಹೀಗೆ ಮೈಲಿಕಲ್ಲಿಗೊಬ್ಬ ರೈತನ ಮಾನ ಕಳೆಯುವವರೇ.
ನಿನಗೆ ಕೃಷಿ ಗೊತ್ತಿಲ್ಲ; ಏನು ಬೆಳೆಯಬೇಕೆಂದು ಗೊತ್ತಿಲ್ಲ. ಎಂತಹ ಬೀಜ ಒಳ್ಳೆಯದೆಂದು ಗೊತ್ತಿಲ್ಲ. ಗೊಬ್ಬರ ಮಾಡುವುದು ಗೊತ್ತಿಲ್ಲ. ಕೊಯ್ಲು ಮತ್ತು ಸಂಸ್ಕರಣೆ ತಿಳಿದಿಲ್ಲ; ಸಂಗ್ರಹಣೆ ಮತ್ತು ಮಾರಾಟ ಗೊತ್ತಿಲ್ಲ ಎಂದು ಎಲ್ಲರೂ ಹೇಳುತ್ತಾರೆ. ಹೀಗೆ ಹೇಳುವುದನ್ನೇ ಅವರೆಲ್ಲ ಉದ್ಯೋಗ ಮಾಡಿಕೊಂಡವರು; ರೈತನ ಆದಾಯದಲ್ಲಿ ಬಿಟ್ಟಿಪಾಲು ಪಡೆದವರು. ಎಲ್ಲ ಮಾಧ್ಯಮಗಳನ್ನು ಅವರು ಬಳಸಿಕೊಳ್ಳುತ್ತಾರೆ. ಪತ್ರಿಕೆ, ಆಕಾಶವಾಣಿ, ದೂರದರ್ಶನ, ಶಾಲೆ-ಕಾಲೇಜು, ವಿಶ್ವವಿದ್ಯಾಲಯ, ಸಭೆ, ಸಮಾರಂಭ, ಸಂದರ್ಶನ ಹೀಗೆ ಸಿಕ್ಕಲ್ಲೆಲ್ಲಾ ‘ರೈತ ದಡ್ಡ’ ಎಂದು ಹೇಳುತ್ತಾರೆ; ಸಾಂಪ್ರದಾಯಿಕ ಕೃಷಿ ವೈಜ್ಞಾನಿಕವಲ್ಲ ಎನ್ನುತ್ತಾರೆ. ನಿನ್ನ ಆತ್ಮೋದ್ಧಾರ ನಮ್ಮ ಕೈಯಲ್ಲಿದೆ ಎಂದು ಹೇಳುತ್ತಾರೆ.
ಎಂತಹ ಕ್ಷುಲ್ಲಕ ಕಾರಣಗಳಿಗೂ ‘ನಾನು’ ಎಂದು ಎದ್ದುನಿಲ್ಲುವ ಮಾನವಸ್ವಭಾವ ರೈತರ ಮಟ್ಟಿಗೆ ಶರಣಾಗಿಹೋಗಿದೆ. ರೈತನ ಆತ್ಮ ಎಂದೋ ಶವವಾಗಿಹೋಗಿದೆ. ಶೈತ್ಯವನ್ನು, ರಾಸಾಯನಿಕವನ್ನು ಬಳಸಿ ಶವವನ್ನು ಕೆಡದಂತೆ ಕಾಪಿಡುವಂತೆ ತಂತ್ರವಿದ್ಯೆಯ ಬಲದಿಂದ ೪-೫ ದಶಕಗಳಿಂದ ಕೃಷಿಯನ್ನೂ ಕೃಷಿಕನನ್ನೂ ಕೆಡದಂತೆ ಇರಿಸಲಾಗಿದೆ. ಆದರೆ ಕಾಲ ಒಂದಿಲ್ಲೊಂದು ದಿನ ಸತ್ಯವನ್ನು ಪ್ರಕಟಿಸಿಬಿಡುತ್ತದೆ. ಎಂದೋ ಸತ್ತ ಕೃಷಿಕನ ಆತ್ಮದಿಂದ ಇಂದು ಕೊಳೆತ ವಾಸನೆ ಹೊರಡಲು ಶುರುವಾಗಿದೆ ಎಂದು ಚಂದ್ರಶೇಖರ್ ಭೀಕರವಾಗಿ ಬರೆಯುತ್ತಾರೆ. ಅಧಿಕಾರಪೀಠಗಳಲ್ಲಿ ಕುಳಿತ ನಮ್ಮ ದಪ್ಪ ಚರ್ಮದವರಿಗೆ ಇಂತಹ ಭಾಷೆ ಕೂಡ ತಾಗುವುದಿಲ್ಲವೋ ಏನೋ! ಆದರೆ ಇದಕ್ಕೆ ಪರಿಹಾರ ರೈತನ ಕೈಯಲ್ಲೂ ಇದೆ ಎನ್ನುತ್ತಾ, ಪ್ರಕೃತಿ ಹೇಳಿದ ದಾರಿಯಲ್ಲಿ ಕೃಷಿಯನ್ನೂ ಜೀವನವನ್ನೂ ಮಾಡಿದರೆ ಅವನನ್ನು ತಡೆಯುವವರು ಇಂದಿಗೂ ಯಾರೂ ಇಲ್ಲ. ಅಷ್ಟೊಂದು ಸ್ವಾಭಿಮಾನಕ್ಕೆ ಬೇಕಾದ ಸ್ವಾತಂತ್ರ್ಯ ಇದೆಯಲ್ಲಾ ಎಂದು ಸೂಚಿಸುತ್ತಾರೆ; ರೈತನನ್ನು ಹೆಡ್ಡ, ಪೆದ್ದ, ಅಜ್ಞಾನಿ ಎನ್ನುವವರು ಮುಟ್ಟಿನೋಡಿಕೊಳ್ಳುವಂತೆಯೂ ಮಾಡುತ್ತಾರೆ.
ಹಣ ಮಾಡುವ ಟೆಕ್ನಿಕ್
ಕೃಷಿ ಹಣಮಾಡುವತ್ತ ಹೊರಟು ಹಲವು ಆಪತ್ತುಗಳನ್ನು ತಂದುಕೊಂಡಿದೆ. ರಾಸಾಯನಿಕ ಗೊಬ್ಬರ ಮಾಡಬಹುದಾದ ಕೆಡುಕುಗಳ ಪರಿಚಯವಿಲ್ಲದೆ, ಅದು ಹೆಚ್ಚಿಸಿದ ಇಳುವರಿಯನ್ನಷ್ಟೇ ಗಮನಿಸಿ ಅಂದಿನವರು ಕೈಗೊಂಡ ನಿರ್ಣಯಗಳು ಅಂದಿನ ಮಟ್ಟಿಗೆ ಬೇಕಾದರೆ ಮುತ್ಸದ್ದಿತನವೆಂದು ಒಪ್ಪಿಕೊಳ್ಳೋಣ. ಆದರೆ ಈ ಗೊಬ್ಬರಗಳು ಏರಿಸಿದ ಇಳುವರಿ ಇದೆಯಲ್ಲ; ಪ್ರಕೃತಿಯ ಇತಿಮಿತಿಯನ್ನು ಮೀರಿ ತೋರಿದ ಚಮತ್ಕಾರ ಇದೆಯಲ್ಲ; ಇದು ವಿಜ್ಞಾನಿ, ಪ್ರಭು (ಸರ್ಕಾರ) ಮತ್ತು ಪ್ರಜೆಗಳನ್ನು ಸಮಾನವಾಗಿ ವಶೀಕರಿಸಿಬಿಟ್ಟಿದೆ. ಆ ವಶೀಕರಣದಿಂದ ಇವರು ಇನ್ನೂ ಹೊರಬಂದಿಲ್ಲ. ರಾಸಾಯನಿಕ ಗೊಬ್ಬರಗಳು ಸಾಯಿಸಿದ್ದು ಕೇವಲ ಮಣ್ಣನ್ನಲ್ಲ; ಬತ್ತಿಸಿದ್ದು ಕೇವಲ ನೀರನ್ನಲ್ಲ; ಹೊತ್ತಿಸಿದ್ದು ಕೇವಲ ಗಾಳಿಯನ್ನಲ್ಲ. ಇದು ತೋರಿದ ಧನಲಾಭ ಎಲ್ಲರ ಚಿತ್ತ, ಬುದ್ಧಿಗಳನ್ನು ಸಾಯಿಸಿದೆ, ಬತ್ತಿಸಿದೆ, ಹೊತ್ತಿಸಿದೆ. ಇಂತಿಪ್ಪ ಸ್ಥಿತಿಯಲ್ಲಿ ಅದೇ ಸತ್ತ ಮಣ್ಣು, ನೀರು, ಗಾಳಿಗಳಿಂದಾದ ಈ ದೇಹವಾದರೂ ಹೆಚ್ಚು ದಿನ ಬದುಕಿರಲು ಹೇಗೆ ಸಾಧ್ಯ? ಒಂದೆಡೆ ಧನದಾಹ, ಇನ್ನೊಂದೆಡೆ ಅನಾರೋಗ್ಯ, ಮತ್ತೊಂದೆಡೆ ವೈವಿಧ್ಯಮಯ ಆಕರ್ಷಣೆಗಳಿಂದು ಮುಪ್ಪುರಿಗೊಂಡ ಪರಿಣಾಮ ಎಲ್ಲ ಬಡವರಿಗೂ ಆತ್ಮಹತ್ಯೆ ಅನಿವಾರ್ಯವಾಗುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂಬಂತಹ ಸಾಲುಗಳಲ್ಲಿ ಲೇಖಕರು ಗದ್ಯದಿಂದ ಕಾವ್ಯದ ಮಟ್ಟಕ್ಕೇರುತ್ತಾರೆ. ಇವತ್ತಿನ ಇಡೀ ಸಂದರ್ಭವನ್ನು ಕೆಲವೇ ಸಾಲುಗಳಲ್ಲಿ ಸಂಕೇತಿಸಿಬಿಡುತ್ತಾರೆ.
ಅಧಿಕ ಇಳುವರಿ, ಆ ಮೂಲಕ ಹಸಿವಿನ ಪರಿಮಾರ್ಜನೆ ವಿಜ್ಞಾನಿಗಳ ಉದ್ದೇಶವಾದರೂ ಅದು ಅಷ್ಟಕ್ಕೆ ಮಿತಿಗೊಳ್ಳಲೇ ಇಲ್ಲ. ಅದು ಅನ್ನದ ದಾರಿಯಾಗಿ ಉಳಿಯದೆ ಕನ್ನದ ದಾರಿಯಾಗಿ ಎಲ್ಲೆಡೆ ವ್ಯಾಪಿಸಿತು. ಧಾನ್ಯ, ತರಕಾರಿ, ಹಣ್ಣು, ಹಾಲುಗಳ ಮಿತಿಯನ್ನು ಮೀರಿ ಕಬ್ಬು, ಅಡಿಕೆಗಳಲ್ಲದೆ ಹೊಗೆಸೊಪ್ಪಿನಂತಹ ಅಮಲುಪದಾರ್ಥಗಳನ್ನು ಬೆಳೆಯತೊಡಗಿತು; ಪಚೋಲಿ, ಲೋಳೆಸರ, ಶತಾವರಿ, ಮುಸುಲಿಗಳಂತಹ ಬೆಳೆಗಳಿಗೂ ವ್ಯಾಪಿಸಿತು. ಸ್ವತಂತ್ರವಾಗಿ ಬೆಳೆಯಬಲ್ಲ ಮಾವು, ಹಲಸು, ಬೇವು, ಹೊಂಗೆ, ಸೀಮರೂಬದಂಥ ಸ್ವಾಭಿಮಾನಿ ಗಿಡಗಳ ಮರ್ಯಾದೆಯನ್ನು ಹರಣಮಾಡಿತು. ಹಣಮಾಡುವ ದಂಧೆ ಕೇವಲ ರಸಗೊಬ್ಬರಗಳ ಮಿತಿಯಲ್ಲೂ ಉಳಿಯಲಿಲ್ಲ. ರಾಸಾಯನಿಕ ಕೀಟನಾಶಕಗಳಾಯಿತು. ಹೈಬ್ರಿಡ್ ಬೀಜ, ಟಿಶ್ಯು ಕಲ್ಚರ್, ಬಯೋ-ಟೆಕ್ನಾಲಜಿವರೆಗೂ ಮುಂದುವರಿಯಿತು. ಹಿತವಾದ ಎತ್ತಿನ ಉಳುಮೆಯ ಮಿತಿಯನ್ನು ಮೀರಿ ಭಾರೀ ಟ್ರಾಕ್ಟರ್ವರೆಗೆ ವ್ಯಾಪಿಸಿತು. ಅಂತರ್ಜಲವನ್ನು ಬಸಿಯುವ ತಂತ್ರವಿದ್ಯೆಯಾಯಿತು – ಎನ್ನುವ ಲೇಖಕರು ಇಲ್ಲಿ ಅಪಹರಣಕ್ಕೊಳಗಾದವ ಅಪಹರಣಕಾರನನ್ನು ಹೊಗಳುವ ‘ಸ್ಟಾಕ್ಹೋಂ ಸಿಂಡ್ರೋಮ್’ ಕೂಡ ಇರುವುದನ್ನು ಗುರುತಿಸುತ್ತಾರೆ.
ಸ್ಟಾಕ್ಹೋಂ ಸಿಂಡ್ರೋಮ್
ತಮ್ಮ ಕೃಷಿ ಉತ್ಪಾದನೆಯಿಂದ ಕೊಳ್ಳೆಹೊಡೆಯುವ ರಸಗೊಬ್ಬರ, ಹೈಬ್ರಿಡ್ ಬೀಜ ಇತ್ಯಾದಿ ಕಂಪೆನಿಗಳು, ಬ್ಯಾಂಕುಗಳು ತಮ್ಮ ಉದ್ಧಾರಕ್ಕಾಗಿಯೇ ಇವೆಯೆಂದು ರೈತರೆಲ್ಲ ನಂಬಿಬಿಟ್ಟಿದ್ದಾರೆ. ತಾವೆಲ್ಲ ಸಾವಯವ ಕೃಷಿ ಮಾಡಿದರೆ, ದೇಶದ ಆಹಾರೋತ್ಪಾದನೆ ಇಳಿದರೆ ದೇಶದ ಹೊಟ್ಟೆ ತುಂಬಿಸುವುದು ಹೇಗೆ ಎಂದು ರೈತರೇ ಕೇಳುತ್ತಿದ್ದಾರೆ. ಆ ಮಟ್ಟಕ್ಕೆ ವಶೀಕರಣಗೊಂಡಿದ್ದಾರೆ. ಆತ್ಮಾಭಿಮಾನದ ಹತ್ಯೆ ಮಾಡಿಕೊಂಡಿದ್ದಾರೆಂದು ಲೇಖಕರು ಚಾಟಿ ಬೀಸುತ್ತಾರೆ. ಸಾವಯವ, ಪರಿಸರ, ಸ್ವಾಭಿಮಾನ, ಪರಂಪರೆ, ಸಂಸ್ಕೃತಿ, ಪರಿಶ್ರಮ, ಹಸಿರು, ಸೋಮಾರಿತನ ನಿವಾರಣೆ, ಮಾಲಿನ್ಯ, ಪ್ರಲೋಭನ ಹೀಗೆ ಪ್ರಕೃತಿಗೆ ಪರವಾದ ವಿಚಾರಗಳನ್ನು ಮಾತನಾಡಿದರೆ ಯಾರಿಗೂ ಅರ್ಥವಾಗುವುದಿಲ್ಲ. ಅಂತಹ ವಿಚಾರಗೋಷ್ಠಿಗಳಿಗೆ ಹತ್ತಾರು ಜನ ಬರುವುದೂ ಕಷ್ಟ. ಆದರೆ ಹಣಮಾಡುವ ಟೆಕ್ನಿಕ್ ಹೇಳಿಕೊಡುತ್ತೇವೆಂದರೆ, ವೆನಿಲಾ, ಸಫೇದ್ ಮುಸುಲಿ, ಲೋಳೆಸರದ ಸೆಮಿನಾರ್ ಮಾಡಿದರೆ ಸಾವಿರಾರು ರೂಪಾಯಿ ಪ್ರವೇಶಶುಲ್ಕ ತೆತ್ತು ಜನ ಬರುತ್ತಾರೆ. ಎಷ್ಟಾದರೂ ಖರ್ಚುಮಾಡಿ ಅಲ್ಲಿ ಹೇಳುವ ಟೆಕ್ನಿಕ್ಗಳನ್ನು ಪಾಲಿಸುತ್ತಾರೆ. ಇದನ್ನು ನೋಡುವಾಗ ಉರಿಯುವ ದೀಪಕ್ಕೆಳಸುವ ಪತಂಗಗಳ ನೆನಪಾಗುತ್ತದೆ ಎಂದು ಬೇಸರದಿಂದ ಹೇಳುತ್ತಾರೆ. ಹಾಗಾದರೆ ರೈತ ಹೆಚ್ಚು ಹಣ ಸಂಪಾದಿಸುವುದು ತಪ್ಪೆ? ಅದನ್ನೇಕೆ ಆಕ್ಷೇಪಿಸಬೇಕು ಎನ್ನುವ ಪ್ರಶ್ನೆ ಬರಬಹುದು. ಆದರೆ ಸ್ವಲ್ಪ ಯೋಚಿಸಿದರೂ ಇಂದಿನ ಆತ್ಮಹತ್ಯೆಗಳ ಸರಣಿಗೂ ರೈತ ವಾಣಿಜ್ಯ ಬೆಳೆಗಳ ಹಿಂದೆ ಹೋದುದಕ್ಕೂ ನಿಕಟ ಸಂಬಂಧವಿದೆ ಎಂದು ಗುರುತಿಸಬಹುದು. ಕೃಷಿಗೆ ಆಧಾರವಾದ ಮಣ್ಣು-ನೀರುಗಳನ್ನು ಹಾಳುಮಾಡಿದ್ದರಲ್ಲಿ ಅವುಗಳ ಸಿಂಹಪಾಲಿದೆ.
ನನ್ನ ಅನುಭವದಂತೆ ಕೃಷಿವಿಜ್ಞಾನವೆಂಬ ವಿಭಾಗವೇ ಅತ್ಯಂತ ಅವೈಜ್ಞಾನಿಕ, ದುಬಾರಿ ಮತ್ತು ಅನಾವಶ್ಯಕ. ಕಳ್ಳತನವನ್ನು ಸೃಷ್ಟಿಸಿ, ಪೊಲೀಸರು ಅನಿವಾರ್ಯವೆಂದೂ ಇದರಿಂದ ಉದ್ಯೋಗ ಸೃಷ್ಟಿಯಾಯಿತೆಂದೂ, ವ್ಯಾಪಾರ ವಹಿವಾಟು ಜಾಸ್ತಿಯಾಯಿತೆಂದೂ, ಜಿ.ಡಿ.ಪಿ. (ಒಟ್ಟು ದೇಶೀಯ ಉತ್ಪಾದನೆ) ಏರಿತೆಂದೂ ಬೀಗುವುದು ಕೇವಲ ಬೊಜ್ಜು, ತೀರಾ ಅನಾರೋಗ್ಯ. ನಮಗಿಂದು ಬೇಕಾಗಿರುವುದು ಅಂಗಸಾಧನೆಯಿಂದ ಆಕಾರಗೊಂಡ ವ್ಯವಸ್ಥೆ. ‘ಕಳ್ಳ-ಪೊಲೀಸು’ ಆಟ ನಿಲ್ಲಿಸಿದರೆ, ಕೊಳಚೆ ಸೃಷ್ಟಿಸಿ ಕೊಳಚೆ ನಿರ್ಮೂಲನ ಎಂಬುದೊಂದು ವಿಜ್ಞಾನ ಎಂಬುದನ್ನು ಬಿಟ್ಟರೆ, ಗೋದಾಮುತಂತ್ರಜ್ಞಾನವನ್ನು ಬಿಟ್ಟು ಪ್ರಕೃತಿಯೇ ಗೋದಾಮೆಂದು ನಂಬಿದರೆ, ನಮಗೆಲ್ಲ ಉಂಡುಬಂದಿರುವ ದೈಹಿಕಶಕ್ತಿ ಸದುಪಯೋಗಗೊಂಡರೆ, ತೀರಾ ಅನಿವಾರ್ಯ ವಿಷಯಗಳಿಗಷ್ಟೇ ಯಂತ್ರಶಕ್ತಿಯನ್ನು ಉಪಯೋಗಿಸುವುದಾದರೆ ಶೇ. ೭೦ರಷ್ಟು ಪೇಟೆ, ಕಾರ್ಖಾನೆ, ವಾಹನ, ದುಬಾರಿ ರಸ್ತೆಗಳು ಎಲ್ಲವೂ ಬೇಡವೆನಿಸುತ್ತದೆ. ಉಳಿದ ಶೇ. ೩೦ ನಗರಾಭಿವೃದ್ಧಿಯೊಳಗೇ ಎಲ್ಲ ಸುಖಗಳನ್ನು ಅನುಭವಿಸಬಹುದು; ಸುಖವು ಆನಂದವಾಗಿ ಪರಿವರ್ತನೆಗೊಳ್ಳುವುದು; ಇಂದು ಕೃಷಿಕರಿಗಾಗಿ ಕೃಷಿವಿಜ್ಞಾನಿಗಳಿಲ್ಲ; ಕೃಷಿವಿಜ್ಞಾನದ ಉಳಿವಿಗಾಗಿ ರೈತರು ಹೆಣಗಬೇಕಾಗಿದೆ ಎನ್ನುವ ಲೇಖಕರು, ಸಸ್ಯಗಳಿಗೆ ಪ್ರಿಯವೆಂದು ಏನೆಲ್ಲವನ್ನು ತಿನ್ನಿಸುವವರನ್ನು, ನೀರಿಗೆ ಉಗುರು ಮುಟ್ಟಿಸದವರನ್ನು, ಮಣ್ಣಿಗೆ ಮಣಿದು ಸೊಂಟ ಬಗ್ಗಿಸದವರನ್ನು ವಿಜ್ಞಾನಿಗಳೆಂದು ಕರೆಯುವುದು ನನಗೆ ತೀವ್ರ ಕಿರಿಕಿರಿ ಉಂಟುಮಾಡುತ್ತದೆ. ಇಂತಹ ಸರಳ ಸತ್ಯವು ಬೆತ್ತಲಾಗದೆ ರೈತರ ಆತ್ಮಹತ್ಯೆಯನ್ನು, ಭೂಮಿ ಬಂಜರಾಗುವುದನ್ನು ತಡೆಯಲಾಗದು ಎನ್ನುವ ಪ್ರವಾದಿಯಂತಹ ನುಡಿಗಳನ್ನಾಡುತ್ತಾರೆ. ಪ್ರಕೃತಿ ಮೊದಲು; ವಿದ್ಯೆ, ವಿಜ್ಞಾನ ಅನಂತರ. ವಿಜ್ಞಾನ ಎಂದರೆ ಎಲ್ಲಿಂದಲೋ ಉದುರುವುದಲ್ಲ; ಪ್ರಕೃತಿಯ ಅರಿವೇ ವಿಜ್ಞಾನ ಎಂಬುದು ಅವರ ದೃಢವಾದ ನಿಲುವು. ನಮ್ಮ ಸರ್ಕಾರಗಳು ಒಂದು ಪದವಿ ಹಿಡಿದುಕೊಂಡು ತಾನು ಕೃಷಿವಿಜ್ಞಾನಿ ಎಂಬವನ ಮಾತಿಗೆ ಮನ್ನಣೆ ಕೊಡುತ್ತವೆಯೇ ಹೊರತು ಚಂದ್ರಶೇಖರರಂತಹ ಪ್ರಯೋಗಶೀಲರ ಜ್ಞಾನ-ಅನುಭವಗಳನ್ನು ಎಲ್ಲಿ ಕೇಳುತ್ತವೆ? ಅಲ್ಲೇ ಇದೆ ಸಮಸ್ಯೆಯ ಮೂಲ.
ಯಾಂತ್ರೀಕರಣದ ಸಮಸ್ಯೆ
ಯಾಂತ್ರೀಕರಣವು ಇಂದು ಕೃಷಿಯ ಒಂದು ದೊಡ್ಡ ಸಮಸ್ಯೆ. ಹಳ್ಳಿಗರು ಪೇಟೆಗೆ ವಲಸೆ ಹೋಗುವ ಕಾರಣ ಕೃಷಿಕಾರ್ಮಿಕರ ಸಮಸ್ಯೆ ಉಂಟಾಗಿದೆ. ಅತ್ಯಂತ ದುಬಾರಿಯಾದ ಕೃಷಿಯಂತ್ರಗಳ ಖರೀದಿಗಾಗಿ ಕೃಷಿ ಆದಾಯ ಸೋರಿಹೋಗುತ್ತಿದೆ. ಸಾಮಾನ್ಯ ಕಳೆಕೊಚ್ಚುವ ಯಂತ್ರಕ್ಕೆ ೩೯ ಸಾವಿರ ರೂ. ಇದೆ. ಅದರ ಇಂಧನದ ಖರ್ಚು, ರಿಪೇರಿ ಖರ್ಚು, ವ್ಯರ್ಥ ಅಲೆದಾಟಗಳೂ ರೈತನನ್ನು ಹಿಂಡುತ್ತಿವೆ. ಕಳ್ಳರ ಸಮಸ್ಯೆಯಿಂದಾಗಿ ಕಲ್ಲುಕಂಬ, ಮುಳ್ಳುತಂತಿ, ಸಿಸಿಕೆಮರಾಗಳಿಗಾಗಿಯೂ ರೈತನ ಆದಾಯ ಸೋರಿಕೆಯಾಗುತ್ತಿದೆ. ಸರ್ಕಾರ, ಅದರ ಕಂದಾಯ ಇಲಾಖೆ ಮತ್ತು ಕಾನೂನು ಸಮಸ್ಯೆಗಳು ಕೂಡ ರೈತನನ್ನು ಶೋಷಿಸುತ್ತಿವೆ. ಭೂಮಿಯ ಹಕ್ಕುಪತ್ರ ಹೊಂದುವುದು, ಖಾತಾ ಪರಿವರ್ತನೆ, ಪೋಡಿ, ಸರ್ವೆ ಕೆಲಸಗಳಿಂದ ಹಿಡಿದು ಮರ ಸಿಗಿಯುವುದು, ಮನೆಕಟ್ಟಲು ಪರವಾನಿಗೆ ಎಲ್ಲವೂ ಶೋಷಣೆಯ ಆಗರಗಳೇ; ಈ ಲಂಚದ ಬಲೆಗಳಲ್ಲಿ ಸಿಕ್ಕಿ ಅನ್ನದಾತ ನಲುಗುತ್ತಿರುತ್ತಾನೆ. ಕಂದಾಯ ಇಲಾಖೆ ಕಚೇರಿಗಳಿಗೆ ಹೋದರೆ ಇಂದಿಗೂ ನೂರಾರು, ಸಾವಿರಾರು ‘ತಬರ’ ರನ್ನು ಕಣ್ಣಾರೆ ಕಾಣಬಹುದು.
ಟಿ.ವಿ. ಮತ್ತು ಜಾಹೀರಾತಿನ ಸಮಸ್ಯೆಯನ್ನು ಕೂಡ ಲೇಖಕರು ಇವತ್ತು ರೈತನ ಒಂದು ಸಮಸ್ಯೆಯಾಗಿ ಗುರುತಿಸುತ್ತಾರೆ. ಮನೆಯೊಳಗೆ ಟಿ.ವಿ. ಮತ್ತು ಜಾಹೀರಾತಿನ ಸಮಸ್ಯೆಯನ್ನು ಕೂಡ ಲೇಖಕರು ಇವತ್ತು ರೈತನ ಒಂದು ಸಮಸ್ಯೆಯಾಗಿ ಗುರುತಿಸುತ್ತಾರೆ. ಮನೆಯೊಳಗೆ ಟಿ.ವಿ. ಬರುವವರೆಗೆ ನಾಗರಿಕ ಜಗತ್ತಿನಲ್ಲಿ ಸಾರ್ಥಕ ವಿದ್ಯೆ, ಸಾರ್ಥಕ ಬೆಳವಣಿಗೆ ಅಷ್ಟಿಷ್ಟಾದರೂ ಇತ್ತು. ಆದರೆ ಇಂದು (ಟಿವಿ ಮುಂದೆ ಕುಳಿತು) ಬಾಯಿಬಿಟ್ಟು ನೋಡುವ ಎಲ್ಲರಲ್ಲೂ ಭಯ ಮತ್ತು ಸೋಮಾರಿತನವನ್ನು ಉದ್ದೀಪಿಸಲಾಗಿದೆ. ಕಾಮಕ್ರೋಧಾದಿ ಶತ್ರುಗಳನ್ನು ಪ್ರಚೋದಿಸಲಾಗಿದೆ. ಪ್ರಕೃತಿನಾಶ ಮತ್ತು ಹಣದ ಚಲಾವಣೆಯನ್ನು ಜಿ.ಡಿ.ಪಿ. ಏರಿಕೆ ಎಂದೂ, ಅಭಿವೃದ್ಧಿ ಎಂದೂ ವ್ಯಾಖ್ಯಾನಿಸಲಾಗಿದೆ. ಟಿ.ವಿ. ಅಲ್ಲವಾಗಿದ್ದರೆ ಮನುಷ್ಯ ಅನಿವಾರ್ಯವಾಗಿ ಒಂದಷ್ಟು ಯೋಚಿಸಲೇಬೇಕಾಗಿತ್ತು. ಹೊತ್ತುಕಳೆಯಲು ಬೇರೆ ಉಪಾಯವಿಲ್ಲದೆ ಒಂದಷ್ಟು ಕೆಲಸ ಮಾಡಬಹುದಾಗಿದ್ದ ಮನುಷ್ಯ, ಮನೆಮಂದಿಯನ್ನೂ ಪ್ರಕೃತಿಯನ್ನೂ ಅನಿವಾರ್ಯವಾಗಿ ಪ್ರೀತಿಸಬೇಕಾಗಿದ್ದ ಮನುಷ್ಯ ಈಗ ನಿರ್ಜೀವ ಪೆಟ್ಟಿಗೆಯಲ್ಲಿ ಆಡಿಸುವ ಕಂಪೆನಿಗಳ ಕೈಗೊಂಬೆಯಾಗಿ ಪ್ರತಿದಿನವೂ ಮಾಡಿಕೊಳ್ಳುತ್ತಿರುವ ಆತ್ಮಹತ್ಯೆಯ ಮುಂದುವರಿಕೆಯೇ ಪ್ರಸ್ತುತ ಕಾಣುತ್ತಿರುವ ಜೀವಂತ ಆತ್ಮಹತ್ಯೆ. ಚಾನೆಲ್ಗಳು ಜಾಸ್ತಿಯಾದಂತೆ ಇದು ಜಾಸ್ತಿಯಾಗುತ್ತದೆ. ಆಸೆ ಆಮಿಷ ಹೆಚ್ಚಾಗುತ್ತದೆ. ಕೃಷಿಗೆ ಕಾರ್ಮಿಕರ ಕೊರತೆ ಮಿತಿಮೀರುತ್ತದೆ. ಹಣ ಎಷ್ಟಿದ್ದರೂ ಸಾಲದಾಗುತ್ತದೆ. ಹೆಸರು ತಿಳಿಯದ ರೋಗಗಳೆಲ್ಲ ಬರುತ್ತವೆ-ಮುಂತಾಗಿ ಅವರು ವಿಶ್ಲೇಷಿಸುತ್ತಾರೆ.
ಸಾಮಾಜಿಕ ಗೌರವ ಯಾರಿಗೆ?
ಇನ್ನೊಂದು ಸಮಸ್ಯೆ ಅಲ್ಲವೆಂದು ಕಾಣಬಹುದಾದ ಸಮಸ್ಯೆ – ಸಾಮಾಜಿಕ ಗೌರವದ ಸಮಸ್ಯೆ. ವಿದ್ಯೆ ಎಂದರೆ ಠಾಕುಠೀಕಾಗಿ ಬಟ್ಟೆಹಾಕುವುದು, ಇಂಗ್ಲಿಷ್ ಮಾತನಾಡುವುದು, ಹಣದ ಜೊತೆ ಸರಸವಾಡುವುದು ಎಂದು ವ್ಯಾಖ್ಯಾನಿಸಲ್ಪಡುವ ಈ ದಿನಗಳಲ್ಲಿ ಮಣ್ಣಿನ ಸಂಪರ್ಕದಿಂದ ಒರಟಾದ ಕೈಕಾಲು ಮುಖ ಹೊತ್ತುಕೊಂಡು ಯಾವುದೇ ಊರು, ಕಛೇರಿಗೆ ಹೋದರೂ ‘ಹಳ್ಳಿಗೊಡ್ಡು’ ಎಂದು ಅಸಡ್ಡೆಯಿಂದ ನೋಡುವ ಈ ದಿನಗಳಲ್ಲಿ, ಉಳಿದ ಉದ್ಯೋಗಗಳಿಗಿಂತ ಕಡಮೆ ಸಂಪಾದನೆಯಳ್ಳ, ಆದರೆ ಹೆಚ್ಚು ಕೆಲಸಗಳುಳ್ಳ ಕೃಷಿಯನ್ನು ಪ್ರೀತಿಸಲು ಯಾರಿಗಾದರೂ ಎಂಟೆದೆ ಬೇಕು ಎನ್ನುತ್ತಾರೆ. ಇನ್ನು ಸರ್ಕಾರಿ ಉದ್ಯೋಗವಿರಲಿ, ಖಾಸಗಿ ಉದ್ಯೋಗವಿರಲಿ, ಸಂಬಳ ಅಷ್ಟಕ್ಕಷ್ಟೆ ಆದರೂ ‘ವೈಟ್ಕಾಲರ್’ ಜನ ಮಿಂಚುವ ಕ್ರಮ ಎಲ್ಲರಿಗೂ ಗೊತ್ತು. ಈ ಥಳಕು-ಪಳಕಿನ ನಡುವೆ ಹಳ್ಳಿಗಾಡಿನ ರೈತ ಕುಗ್ಗಿಹೋಗುವುದು ಸಹಜ. ಉಳಿದ ವಿಷಯ ಹೇಗಾದರೂ ಇರಲಿ. ಕೃಷಿಕರಿಗೆ ಭಾರ್ಯೆಯಾಗಲು ಹೆಣ್ಣುಗಳು ಹಿಂಜರಿಯುತ್ತಿರುವ ಈ ಕಾಲವನ್ನು ಸರಿಪಡಿಸಲು ವಿದ್ಯೆಯಿಂದ, ಉತ್ತೇಜಕ ಭಾಷಣಗಳಿಂದ, ಸಾಲ ಸಬ್ಸಿಡಿ ಯೋಜನೆಗಳಿಂದ ಸಾಧ್ಯವಿಲ್ಲವೆಂದು ನನಗನಿಸುತ್ತದೆ ಎಂದು ಲೇಖಕರು ಒಂದು ದೊಡ್ಡ ಸಮಸ್ಯೆಯನ್ನು ಸ್ವಲ್ಪದರಲ್ಲಿ ಹೇಳಿದ್ದಾರೆ. ರಾಜ್ಯದ ಕೆಲವು ಸಮದಾಯಗಳಲ್ಲಿ ಈ ಸಮಸ್ಯೆ ಈಗಾಗಲೆ ತೀವ್ರ ಸ್ಥಿತಿ ತಲಪಿದೆ. ಕೃಷಿ ನೋಡಿಕೊಂಡು ಊರಿನಲ್ಲಿದ್ದರೆ ಮದುವೆ ಆಗುವುದಿಲ್ಲವೆಂದು ಯುವಕರು ಹಳ್ಳಿ ಬಿಟ್ಟು ಪೇಟೆ ಸೇರಿದ ಕಾರಣ ಕೃಷಿ, ತೋಟಗಳು ಕಾಣುವವರಿಲ್ಲದೆ ಬರಡಾಗುತ್ತಿವೆ.
ತಲೆಮಾರಿನ ಸಮಸ್ಯೆ ಕೂಡ ಕೃಷಿಕ ಕುಟುಂಬಗಳಲ್ಲಿ ಅಶಾಂತಿಯನ್ನು ತರುತ್ತಿದೆ. ಈಗ ಒಂದೆರಡು ವರ್ಷಗಳಲ್ಲಿ ಒಂದು ತಲೆಮಾರಿನಷ್ಟು ಬದಲಾವಣೆ ಉಂಟಾಗಿ ತಂದೆ-ಮಕ್ಕಳಿಗೆ ಸರಿಬಾರದ ಕಾರಣ ಕೃಷಿ ಸೊರಗುತ್ತಿದೆ. ಮಕ್ಕಳು ವಾಣಿಜ್ಯಕೃಷಿಯನ್ನು ಬಯಸುವಾಗ ತಂದೆ ಸಾಂಪ್ರದಾಯಿಕ ಕೃಷಿಯನ್ನು ಬಿಡಬಾರದೆಂದು ಹೇಳಿದರೆ ಅಲ್ಲಿ ಘರ್ಷಣೆ ಅನಿವಾರ್ಯ. ಕೃಷಿ ಸೊರಗಿ ಆರ್ಥಿಕ ಸಂಕಷ್ಟ ಉಂಟಾದಾಗ ತಂದೆ-ಮಗ ಇಬ್ಬರೂ ತೊಂದರೆಗೆ ಸಿಲುಕುತ್ತಾರೆ.
ಕೃಷಿಕರಿಗೆ ಸಂಬಂಧಿಸಿದ ಆರ್ಥಿಕ ಸಮಸ್ಯೆಯಲ್ಲಿ ಮುಖ್ಯವಾಗಿ ಸರ್ಕಾರದ ತಪ್ಪು ನೀತಿಗಳನ್ನು ಗುರುತಿಸಲೇಬೇಕು. ಪ್ರಕೃತಿ ಮತ್ತು ಹಣ ಇವುಗಳಲ್ಲಿ ಯಾವುದಕ್ಕೆ ಆದ್ಯತೆ ನೀಡಬೇಕೆಂಬುದು ನಮ್ಮನ್ನಾಳುವ ದೊರೆಗಳಿಗೆ, ಸಲಹೆಕೊಡುವ ಅಧಿಕಾರಿಗಳಿಗೆ, ಸಮಸ್ಯೆ ನಿವಾರಿಸುವ ವಿಜ್ಞಾನಿಗಳಿಗೆ ಗೊತ್ತಿಲ್ಲ. ಅದರಿಂದಾಗಿ ಬ್ಯಾಂಕು, ಷೇರು, ವಿಮೆ, ಡಾಲರ್ಗಳಿಸುವ ಅನಿವಾರ್ಯತೆ, ಆಮದು-ರಫ್ತಿನ ಲೆಕ್ಕಾಚಾರ, ಷೇರುಪೇಟೆ ವ್ಯವಹಾರ, ಜಿ.ಡಿ.ಪಿ. ಏರಿಸುವ ಸರ್ಕಸ್ಸು ಇವೇ ಮುಖ್ಯವಾಗಿ ಹಣದುಬ್ಬರ, ಹೊಟ್ಟೆಯುಬ್ಬರ, ಲೊಟ್ಟೆಯಬ್ಬರಗಳು ಅಧಿಕವಾಗುತ್ತಿವೆ. ಸಮುದ್ರದುಬ್ಬರ, ಮೋಡದುಬ್ಬರ, ಹಸಿರಿನೆತ್ತರಗಳು ಅಲಕ್ಷಿತವಾಗುತ್ತಿವೆ. ಪ್ರಕೃತಿಯನ್ನು ಅಲಕ್ಷಿಸಿದ ಕೃಷಿ ಕ್ರಮೇಣ ಸೊರಗಿ ದಿವಾಳಿಯಂಚಿಗೆ ಬಂದಿದೆ.
೩೦x೪೦ ಸೈಟಿನ ಬೆಲೆ
ಕೇವಲ ನಾಲ್ಕು ತಿಂಗಳೊಳಗೆ ಒಂದು ನಾಲ್ನೂರಾಗುವ ರಾಗಿಯನ್ನೋ ಭತ್ತವನ್ನೋ ಐದರಿಂದ ಹತ್ತುವರ್ಷಗಳ ದೀರ್ಘಾವಧಿಯಲ್ಲಿ ಒಂದು ಕೇವಲ ಎರಡಾಗುವ ಹಣದ ಜೊತೆಗೆ ವಿನಿಮಯ ಮಾಡಲು ಹೊರಟ ಪರಿಣಾಮವಾಗಿ, ಹಣಕ್ಕಾಗಿ ಕೃಷಿ ಮಾಡಲು ಹೊರಟ ಪರಿಣಾಮವಾಗಿ ರೈತನ ಸಾಮಾಜಿಕ ಬೆಲೆಯೂ ಕುಸಿದಿದೆ. ಹತ್ತಾರು ಎಕ್ರೆ ಕೃಷಿ ಜಮೀನು ಪೇಟೆಯ ಕೇವಲ ೩೦x೪೦ ಅಡಿ ಸೈಟಿಗೆ ಸಮನಾಗುತ್ತಿದೆ. ಇದು ನಮ್ಮ ಆರ್ಥಿಕ ದಿವಾಳಿತನದ ಸಂಕೇತವಾಗಿದೆ. ಯಾವುದು ಅತ್ಯಂತ ಲಾಭದಾಯಕ ಉದ್ಯೋಗವಾಗಬೇಕಿತ್ತೋ ಅಂತಹ ಕೃಷಿಯನ್ನು ಮೀರಿ ಎಲ್ಲ ಬಿಕನಾಸಿ ಉದ್ಯೋಗಗಳು ಕೂಡ ನಾಲ್ಕಾರು ತಲೆಮಾರಿಗೆ ಬೇಕಾದಷ್ಟು ಹಣಮಾಡುವ ಮಟ್ಟಕ್ಕೆ ತಲಪಿದ್ದು ನಿಜವಾಗಿ ಅನಾಗರಿಕತೆಯ ಪರಮಾವಧಿ. ಆದರೂ ನಮ್ಮ ವ್ಯವಸ್ಥೆ ‘ನಾವೆಲ್ಲ ನಾಗರಿಕರಾಗಿದ್ದೇವೆ, ಸಮಾನರಾಗಿದ್ದೇವೆ, ಶೋಷಣೆಯನ್ನು ಗೆದ್ದಿದ್ದೇವೆ, ವಿದ್ಯಾವಂತರಾಗಿದ್ದೇವೆ, ವೈಜ್ಞಾನಿಕರಾಗಿದ್ದೇವೆ, ಸಮೃದ್ಧರಾಗಿದ್ದೇವೆ, ಆಹಾರದಲ್ಲಿ ಸ್ವಾವಲಂಬಿಗಳಾಗಿದ್ದೇವೆ ಎಂದು ಹೇಳುತ್ತಿದೆ’ ಎಂದು ಲೇಖಕರು ಆಕ್ಷೇಪಿಸುತ್ತಾರೆ. ಕೃಷಿಗೆ, ಅದನ್ನು ಅವಲಂಬಿಸಿದ ಬಹುದೊಡ್ಡ ಜನವರ್ಗಕ್ಕೆ ಅನ್ಯಾಯವೆಸಗಿ ಅದನ್ನು ಪಾತಾಳಕ್ಕೆ ತಳ್ಳಿರುವಾಗ ಈ ನಾಗರಿಕತೆ, ಸಮಾನತೆ, ವಿದ್ಯಾವಂತಿಕೆ, ವೈಜ್ಞಾನಿಕತೆ ಎಲ್ಲವೂ ಅರ್ಥಕಳೆದುಕೊಂಡ ಸಂಗತಿಯೇ.
ಇತರರು ಕೃಷಿ ಮತ್ತು ಕೃಷಿಕರನ್ನು ನೋಡುವ ಕ್ರಮವನ್ನು ಚಂದ್ರಶೇಖರ್ ಮತ್ತೆ ಮತ್ತೆ ಆಕ್ಷೇಪಿಸುತ್ತಾರೆ. ಹಣ ಉಳ್ಳವರು, ವಿದ್ಯೆ ಉಳ್ಳವರು, ಪೇಟೆಯವರು ಬೆಳೆದದ್ದು ಕೃಷಿಯನ್ನು ದ್ವೇಷಿಸುವ ಮೂಲಕ; ಕೃಷಿಯನ್ನು ತಿರಸ್ಕರಿಸುವ ಮೂಲಕ. ಕೃಷಿಯಲ್ಲಿ ಅಥವಾ ಕೃಷಿಕರಲ್ಲಿ ಇರುವ ದೋಷಗಳನ್ನು ಕಳೆದುಕೊಳ್ಳಲು ಹಣವಾಗಲಿ, ವಿದ್ಯೆಯಾಗಲಿ, ಪೇಟೆಯಾಗಲಿ ಪ್ರಯೋಜನಕ್ಕೆ ಬರಲೇ ಇಲ್ಲ. ಎಲ್ಲವೂ ಬಳಕೆಯಾದದ್ದು ಕೃಷಿಯಿಂದ ತಪ್ಪಿಸಿಕೊಳ್ಳುವ ದಾರಿಯನ್ನು ಕಂಡುಕೊಳ್ಳಲು ಎಂದವರು ಹೇಳುತ್ತಾರೆ.
ಪಲಾಯನವಾದಿಗಳು
ಹಾಗೆ ಕೃಷಿ ಬಿಟ್ಟು ಕೈಕೊಟ್ಟು ಬಂದವರು ದೂರದಿಂದ ಕೃಷಿಯನ್ನು ನಿಯಂತ್ರಿಸುತ್ತಿದ್ದಾರೆ; ಹೇಗೆ? ಪ್ರಕೃತಿಯನ್ನು ದ್ವೇಷಿಸುವುದು, ಮಣ್ಣನ್ನು ದ್ವೇಷಿಸುವುದು, ಮರವನ್ನು, ಕ್ರಿಮಿ ಕೀಟಗಳನ್ನು ದ್ವೇಷಿಸುವುದು; ಋತುಚಕ್ರ ಸರಿ ಇಲ್ಲ, ಹಾಗಾಗಿ ನೀರಾವರಿಯ ಮೂಲಕ ಅದನ್ನು ಸರಿಮಾಡುವುದು, ಗುಡ್ಡೆ, ಮಟ್ಟ, ಹಳ್ಳಗಳು ಸರಿ ಇಲ್ಲ, ಹಾಗಾಗಿ ಬುಲ್ಡೋಜರ್ ಮೂಲಕ ಸರಿ ಮಾಡುವುದು, ತೊಂದರೆಕೊಡುವ ಎಲ್ಲ ಮರಗಿಡಗಳನ್ನು ತೆಗೆಯುವುದು, ರಸಸಾರ ಸಮಮಾಡುವುದು, ನಮಗೆ ಬೇಕಾದ ಗಿಡಗಳನ್ನು ನಮಗೆ ಬೇಕಾದಂತೆ ಬೆಳೆಸುವುದು, ಸಾಲು ಮಾಡುವುದು, ಮಟ್ಟಸವರುವುದು, ಇಷ್ಟಾದರೂ ನಾವು ನಿರೀಕ್ಷಿಸಿದಷ್ಟು ಬೆಳೆ ಕೊಡದಿದ್ದರೆ? ಇನ್ನಷ್ಟು ಗೊಬ್ಬರ ಸುರಿಯುವುದು; ಆದರೂ ಕೊಡದಿದ್ದರೆ ಸವರಿ ತೆಗೆಯುವುದು; ಕ್ರಿಮಿ-ಕೀಟ ಕೊಲ್ಲುವುದು, ಇಂತಹ ಕೃಷಿಯನ್ನು ತನ್ನದಾಗಿಸಿಕೊಂಡ ಪಾಪದ ಫಲವನ್ನು ರೈತನಾದವನು ಅನುಭವಿಸುತ್ತಲೇ ಇದ್ದಾನೆ – ಎಂದು ಲೇಖಕರು ಸಮಸ್ಯೆಯನ್ನು ಬಿಚ್ಚಿಡುತ್ತಾರೆ.
ಲೇಖಕರ ಸ್ವಂತಿಕೆಯ ಚಿಂತನೆ ಇಂದು ಬೆಳೆಯುತ್ತಿರುವ ಪಟ್ಟಣ-ನಗರಗಳಿಗೆ ಮರ್ಮಾಘಾತವನ್ನೇ ನೀಡುತ್ತದೆ. ಪಕ್ಕದಲ್ಲಿರುವ ಪರಿಚಯದವರಿಂದ ಕದಿಯುವುದು ಕಷ್ಟಸಾಧ್ಯವಾದುದರಿಂದ, ಮುಜುಗರ ವಾಗುವುದರಿಂದ ಸ್ವಾರ್ಥಕ್ಕಾಗಿ, ಹೆಚ್ಚಿನ ಲಾಭಕ್ಕಾಗಿ ಗುಟ್ಟಾಗಿ ಕದಿಯುವ ಅವಕಾಶಕ್ಕಾಗಿ ಮಾಡಿಕೊಂಡ ವ್ಯವಸ್ಥೆ ಇಂದಿನ ಪೇಟೆಗಳು. ಸರ್ವಸಮಾನತೆಯನ್ನು ಸಾಧಿಸುವ ಶಕ್ತಿಕೇಂದ್ರಗಳಾಗಿ ಇಂದಿನ ಪೇಟೆಗಳು ಉಳಿದಿಲ್ಲ. ಅದಕ್ಕೆ ಇಷ್ಟು ದೊಡ್ಡ ಪೇಟೆಗಳು ಬೇಕಾಗಿಲ್ಲ. ಕುರಿಮಂದೆಗಿಂತಲೂ ಹಿಂಡಾಗಿ ಹೋಗುವ ವಾಹನದಟ್ಟಣೆಯ ಅಗತ್ಯವಿಲ್ಲ. ನಾಯಕತ್ವ ಇದ್ದಿದ್ದರೆ ಹೀಗಾಗುತ್ತಿರಲಿಲ್ಲ. ಕೃಷಿಕನಿಗಿಂತ ಸ್ವಾವಲಂಬಿಯಾಗಲು ಬೇರೆ ಗತಿ ಇಲ್ಲ ಎನ್ನುತ್ತಾರೆ.
ನಿಜವಾದ ಕೃಷಿಕ, ನಿಜವಾದ ಕೃಷಿ ಹೇಗಿರಬೇಕೆಂದು ಹೀಗೊಂದು ಸ್ಥೂಲ ಪಟ್ಟಿಯನ್ನು ನೀಡುತ್ತಾರೆ:
- ಒಂದು ಬೆಳೆಯ ಬದಲು ಹಲವು ಬೆಳೆಗಳನ್ನು ಬೆಳೆಯುವುದು.
- ಮಾರುವುದಕ್ಕಾಗಿ ಬೆಳೆಯುವ ಬದಲು ಬಳಸುವುದಕ್ಕಾಗಿ ಬೆಳೆಯುವುದು.
- ಪರಸ್ಪರ ವಿನಿಮಯದ ಆಧಾರದಲ್ಲಿ ಅಕ್ಕಪಕ್ಕದ ರೈತರು ಬೆಳೆ ಬೆಳೆಸುವುದು.
- ತಾನಾಗಿ ಬೆಳೆದ ಕಳೆಗಳಲ್ಲಿರುವ ಗುಣವನ್ನು ಗುರುತಿಸಿ ಬಳಸಿಕೊಳ್ಳುವುದು.
- ಗೆಡ್ಡೆಗಳು, ಸೊಪ್ಪು, ಚಿಗುರು, ಹಣ್ಣು, ತರಕಾರಿ, ಷಡ್ರಸಗಳು ಹೀಗೆ ಆಹಾರದಲ್ಲಿ ವೈವಿಧ್ಯ ತರುವುದು; ಹೆಚ್ಚು ಸಸ್ಯವೈವಿಧ್ಯವನ್ನು ಆಧರಿಸುವುದು.
- ಅಡುಗೆಮನೆಗೆ ಮಹತ್ತ್ವ ನೀಡಿ, ಹೊಟೇಲ್, ಬೇಕರಿಗಳನ್ನು ದೂರ ಇಡುವುದು.
- ಕೃಷಿಗೆ ಅಥವಾ ಬಳಕೆಗೆ ಹೊರಗಿನಿಂದ ತರುವ ವಸ್ತು ಕಡಮೆ ಮಾಡುವುದು.
- ಪ್ರಕೃತಿಚಕ್ರವನ್ನು ಗಮನಿಸಿ ಹೆಜ್ಜೆಹಾಕುವುದು; ಸೂರ್ಯಮುಖಿಗಳಾಗುವುದು.
- ಅವರಿವರನ್ನು ದೂರುವುದು ಬಿಟ್ಟು ನಮ್ಮ ಕೃಷಿಕೆಲಸಗಳನ್ನು ನಾವೇ ಮಾಡುವುದು.
- ಬೇಕು-ಬೇಡಗಳನ್ನು, ಮಾಡಬೇಕು ಮಾಡಬಾರದ್ದನ್ನು ತಿಳಿದು ಮಾಡುವುದು.
- ತರ-ತಮ ಪ್ರಕೃತಿ ನಿಯಮ. ಹಾಗಾಗಿ ಎಲ್ಲರೂ ಸಮಾನವಾಗಿ ಶ್ರೀಮಂತರಾಗಲು ಸಾಧ್ಯವಿಲ್ಲವೆಂದು ಅರಿತು ಸಿಕ್ಕಿದ ಅವಕಾಶಕ್ಕಾಗಿ ಸಂಭ್ರಮಿಸುವುದು.
- ಆದಾಯಕ್ಕಿಂತ ಕಡಮೆ ಖರ್ಚುಮಾಡಿದರೆ ಸಿರಿತನ; ಜಾಸ್ತಿ ಖರ್ಚು ಮಾಡಿದರೆ ಬಡತನ; ಅರಿತು ಆಚರಿಸಿದರೆ ಅರ್ಥಶಾಸ್ತ್ರ.
ರೈತರಿಗೆ ನೆರವಾಗಲು….
ಒಂದು ಸಾಮಾಜಿಕ ಜವಾಬ್ದಾರಿಯಾಗಿ ರೈತರಿಗೆ ಸಹಕರಿಸಬೇಕೆನ್ನುವ ಮನೋಭಾವ ಹೊಂದಿದವರಿಗೆ ಎ.ಪಿ. ಚಂದ್ರಶೇಖರ್ ಈ ಕೆಲವು ಸಲಹೆಗಳನ್ನು ನೀಡುತ್ತಾರೆ:
- ಸ್ವಯಂ ಕೃಷಿಕರಾಗಬಹುದು.
- ಸಾಧ್ಯವಾದಾಗೆಲ್ಲ ರೈತರ ಜಮೀನಿಗೆ ಹೋಗಿ ದುಡಿಯಬಹುದು.
- ರೈತರಿಗೆ ಆತ್ಮವಿಶ್ವಾಸ ತುಂಬಬಹುದು.
- ಮಾರುಕಟ್ಟೆ-ಮಾರಾಟ ಇಲ್ಲದೆ ವಿನಿಮಯದ ಆಧಾರದಲ್ಲಿ ಸ್ಥಳೀಯವಾಗಿ ಆವಶ್ಯಕತೆಗಳನ್ನು ಉತ್ಪಾದಿಸಲು ಮಾರ್ಗದರ್ಶನ ನೀಡಬಹುದು.
- ರೈತರಿಗೆ ಮಾರಾಟದಲ್ಲಿ ಸಹಕರಿಸಬಹುದು.
- ಹುಳ ಮೇದದ್ದು, ಮಂಗ ತಿಂದದ್ದು, ಕದ್ದು ಹೋದದ್ದು, ಗಾಳಿಗೆ ಬಿದ್ದದ್ದು, ಬರಕ್ಕೆ ಒಣಗಿದ್ದು ಹೀಗೆ ರೈತನಿಗಾದ ನಷ್ಟಗಳು ಭರ್ತಿಯಾಗುವಂತೆ ವೈಜ್ಞಾನಿಕ ಬೆಲೆಕೊಟ್ಟು ರೈತನಿಂದ ವಸ್ತುಗಳನ್ನು ಖರೀದಿಸಬಹುದು; ಹಾಗೆ ಖರೀದಿಸುವಂತೆ ಗ್ರಾಹಕಜಾಗೃತಿ ಉಂಟುಮಾಡಬಹುದು.
- ಬಟ್ಟೆ-ಬರೆ, ಮನೆ, ಔಷಧಿ ಹೀಗೆ ರೈತರ ಇತರ ಅಗತ್ಯಗಳನ್ನು ಪ್ರೀತಿಯ ನೆಲೆಯಲ್ಲಿ ವಿನಿಮಯದ ಆಧಾರದಲ್ಲಿ ಕೊಡಬಹುದು. ಉದಾ – ವೈದ್ಯರು ಮದ್ದುಕೊಟ್ಟು ಅಕ್ಕಿ ಪಡೆಯಬಹುದು. ಅಂಗಡಿಯವರು ಬಟ್ಟೆ ನೀಡಿ ಬೆಲ್ಲ ಖರೀದಿಸಬಹುದು.
- ‘ವಿದೇಶಿ’ ವಸ್ತುಗಳನ್ನು ಬಹಿಷ್ಕರಿಸಬಹುದು. ವಿದೇಶಿ ಎಂದರೆ ಹೊರದೇಶದ್ದೇ ಆಗಬೇಕಿಲ್ಲ. ಕಾಶ್ಮೀರದ ಸೇಬನ್ನು ಕನಕಪುರದಲ್ಲಿ ತಿನ್ನುವುದು, ಮೈಸೂರಿನ ಕ್ಯಾಬೇಜನ್ನು ಮಂಗಳೂರಿನಲ್ಲಿ ತಿನ್ನುವುದು ಕೂಡ ವಿದೇಶಿಯೇ. ಇದರಿಂದ ಭಾರೀ ಸಂಪನ್ಮೂಲಗಳ ನಷ್ಟ, ಪರಿಸರಮಾಲಿನ್ಯ ಉಂಟಾಗುವುದು.
- ಹತ್ತಿರದ ಕೃಷಿಕರಿಗೆ ಅನುಕೂಲವಾಗುವಂತೆ ಅಲ್ಲಲ್ಲಿ ಬೆಳೆದ ಆಹಾರ ವಸ್ತುಗಳನ್ನಷ್ಟೇ ಸವಿಯಬೇಕು.
- ಹೊಟೇಲ್, ಬೇಕರಿ, ರೆಡಿಮೇಡ್ ಆಹಾರಗಳನ್ನು ತಿರಸ್ಕರಿಸುವುದು. ಇದರಿಂದ ರೈತರಿಗೆ ಉಂಟಾಗಿರುವ ಕಾರ್ಮಿಕರ ಕೊರತೆ ಸುಲಭದಲ್ಲಿ ನೀಗಬಹುದು.
- ಇಂದು ಹಳ್ಳಿಮಂದಿಗೆ ವಿದ್ಯಾಭ್ಯಾಸ ಕೊಡಿಸಲು ಸಾವಿರ ಪ್ರಯತ್ನಗಳು ನಡೆಯುತ್ತಿವೆ. ಸಂಪೂರ್ಣ ಸಾಕ್ಷರತೆಯಾದರೆ ಸಮಸ್ಯೆ ಬಗೆಹರಿಯುತ್ತದೆಂದು ಸಮಾಜ ನಂಬಿದೆ. ಅದು ಸರಿಯಲ್ಲ; ಆಗಬೇಕಾದದ್ದು ಬೇರೆಯೇ ಇದೆ; ಹಳ್ಳಿಯ ಮಂದಿ ಅಕ್ಷರ ಕಲಿಯುವುದಕ್ಕಿಂತ ಮೊದಲು ಪೇಟೆಯ ಮಂದಿ ಕೃಷಿಯನ್ನು ಕಲಿಯಬೇಕಾಗಿದೆ.
- ಶಿಕ್ಷಣಕ್ಕೆಂದು ಹಳ್ಳಿಯ ಜನ ಪೇಟೆಗೆ ಬರುವ ಬದಲು ಪೇಟೆಯ ಜನ ಹಳ್ಳಿಗೆ ಬರುವಂತೆ ಮಾಡಬೇಕು. ಅದರಿಂದ ಪೇಟೆಯ ಮಕ್ಕಳಿಗೆ ಹಳ್ಳಿಯ ಬದುಕು ಸ್ವಲ್ಪವಾದರೂ ಪರಿಚಯವಾಗಬಹುದು.
- ಟ್ಯೂಷನ್ ಮೇಲೆ ಟ್ಯೂಷನ್ ಕೊಡಿಸುವ ಸಮಯವನ್ನು ಕೆಲಸದಲ್ಲಿ ಸದ್ವಿನಿಯೋಗಗೊಳಿಸುವಂತೆ ಮಕ್ಕಳನ್ನು ಪ್ರೇರೇಪಿಸಬೇಕು; ಮಕ್ಕಳಿಗೆ ದುಡಿಮೆಯ ಮಹತ್ತ್ವವನ್ನು ಹೇಳಿಕೊಡಬೇಕು.
- ಸರ್ಕಾರದ ಮೇಲೆ ಪರಿಸರಾತ್ಮಕ, ಧನಾತ್ಮಕ ಚಿಂತನೆಗಳನ್ನು ಹೇರಲು ಪ್ರಯತ್ನಿಸಬೇಕು.
ಸರ್ಕಾರಕ್ಕೆ ಸಲಹೆ
ಆತ್ಮಹತ್ಯಾ ಸರಣಿಯನ್ನು ತಡೆಯಲು ಸರ್ಕಾರ ಏನು ಮಾಡಬಹುದೆಂದು ಕೂಡ ಲೇಖಕರು ಕೆಲವು ಸಲಹೆಗಳನ್ನು ನೀಡುತ್ತಾರೆ:
- ಹಂತಹಂತವಾಗಿ ಕೃಷಿ ವಿಶ್ವವಿದ್ಯಾಲಯಗಳನ್ನು, ಇಲಾಖೆಗಳನ್ನು ಸಣ್ಣದು ಮಾಡಬೇಕು.
- ಕೇವಲ ಲಂಚಕ್ಕೆ ಅವಕಾಶ ಮಾಡಿಕೊಡುವ ಸಬ್ಸಿಡಿಗಳನ್ನು ಕೈಬಿಡಬೇಕು.
- ಕೃಷಿ ಅಧಿಕಾರಿಗಳು ಕೃಷಿಮಿತ್ರರು ಹಾಗೂ ಮಾರ್ಗದರ್ಶಕರಾಗುವಂತೆ ತಾಕೀತು ಮಾಡಬೇಕು.
- ವಿಕೇಂದ್ರೀಕೃತ, ವೈವಿಧ್ಯಮಯ, ಮಿಶ್ರಬೆಳೆಗಳನ್ನು ಬೆಳೆಸಲು ಕ್ರಮ.
- ಸ್ಥಳೀಯವಾಗಿ ಬೇಕಾದದ್ದನ್ನು ಸ್ಥಳೀಯವಾಗಿ ಬೆಳೆಸಲು (ಉತ್ಪಾದಿಸಲು) ಪ್ರೋತ್ಸಾಹಿಸಬೇಕು. ಒತ್ತಡ ತರಬೇಕು.
- ಹಳ್ಳಿಗಳಲ್ಲಿ ಸಂತೆಗಳನ್ನು ಏರ್ಪಡಿಸಿ ಅನಗತ್ಯ ದೂರಸಾಗಾಟ, ಮಧ್ಯವರ್ತಿಗಳ ತಡೆಗೆ ಸಹಕರಿಸಬೇಕು.
- ಮಾದರಿ ತೋಟ (ಕೃಷಿಕ್ಷೇತ್ರ) ಮಾಡಿದ ಕೃಷಿಕರ ಮಾರ್ಗದರ್ಶನ ಪಡೆಯಬೇಕು.
- ಸರ್ಕಾರಿ ತೋಟಗಳು ಮಾದರಿ ಆಗಬೇಕು; ಅಲ್ಲಿನ ಸಂಬಳ ಉತ್ಪಾದಿಸುತ್ತಾ ಸರ್ಕಾರಕ್ಕೆ ಲಾಭ ತರಬೇಕು.
- ಯಾವುದೇ ಸರ್ಕಾರಿ ಉದ್ಯೋಗಿ ಇರಲಿ; ಆತ ಆರಂಭದ ಎರಡು ವರ್ಷ ರೈತರ ಜಮೀನಿನಲ್ಲಿ ಕೆಲಸ ಮಾಡಬೇಕು; ಆಗ ಅವರಿಗೆ ಕೂಲಿಸಂಬಳವಷ್ಟೇ ಇರಬೇಕು. ಯಾವುದೇ ಅಧಿಕಾರಿಯಿಂದ ವರ್ಷದಲ್ಲಿ ಒಂದು ವಾರ ಇಂತಹ ಕೆಲಸ ಮಾಡಿಸಬೇಕು.
- ಬೋರ್-ಡ್ರಿಪ್ಗಳಿಲ್ಲದೆ ಮಳೆ ಆಧಾರಿತವಾಗಿ ಸಮರ್ಥ ಕೃಷಿ ಸಾಧ್ಯ. ಅರಿತು ಮಾಡುವ ಸಾವಯವ ಕೃಷಿಯಿಂದ ಎಲ್ಲ ಅಸಾಧ್ಯಗಳೂ ಸಾಧ್ಯ.
- ಪ್ರಸಾರಮಾಧ್ಯಮಗಳ ಮೂಲಕ ಮುಗ್ಧರನ್ನು ಪ್ರಲೋಭನೆಗೊಳಿಸುವುದು ತಪ್ಪಬೇಕು.
- ಪರಸ್ಪರ ಕದ್ದುತಿನ್ನದ ಹಾಗೆ, ಕಿತ್ತುತಿನ್ನದ ಹಾಗೆ ಕಾನೂನಿನ ನಿಯಂತ್ರಣ ಮುಂತಾಗಿ ತೀರ ಅನಿವಾರ್ಯವಾದ ಒಂದಷ್ಟು ಇಲಾಖೆಗಳು ಮಾತ್ರ ಸರ್ಕಾರಕ್ಕೆ ಸಾಕು. ಎಲ್ಲ ಕೆಲಸ ಸರ್ಕಾರದ್ದಾಗಬಾರದು. ಜನರಲ್ಲಿ ವೈಯಕ್ತಿಕ ಜವಾಬ್ದಾರಿಯನ್ನು ಬೆಳೆಸುವುದು ಮುಖ್ಯವಾಗಬೇಕು.
ಒಟ್ಟಿನಲ್ಲಿ ೧೧೫ ಪುಟಗಳ ‘ಅನ್ನದಾತನ ಆತ್ಮಹತ್ಯೆ’ ಅನುಭವಪೂರ್ಣವಾದ ಸಾಲು ಸಾಲು ವಿಷಯಗಳನ್ನು ಮೊಗೆದು ಮೊಗೆದು ಕೊಡುತ್ತದೆ. ಬಹಳಷ್ಟು ವಿಷಯಗಳು ಇಲ್ಲಿ ಸೂತ್ರರೂಪದಲ್ಲಿದ್ದು ವಿಸ್ತರಿಸಿ ಇನ್ನೆಷ್ಟೋ ಬರೆಯಬಹುದು. ಇಂಗ್ಲಿಷಿಗೆ ಅನುವಾದಗೊಂಡರೆ ರಾಷ್ಟ್ರಮಟ್ಟದ ಖ್ಯಾತಿ ಪಡೆಯುವ ಬಹಳಷ್ಟು ಅರ್ಹತೆ ಇದಕ್ಕಿದೆ. (ಇದು ರಾಷ್ಟ್ರವ್ಯಾಪಿ ಸಮಸ್ಯೆಯಲ್ಲವೆ?) ಲೇಖಕರು, ಪ್ರಕಾಶಕ ಡಾ|| ಹಾಲತಿ ಸೋಮಶೇಖರ್ ಅಭಿನಂದನೆಗೆ ಅರ್ಹರು; ಸಂಬಂಧಪಟ್ಟವರಿಗೆ ತಲಪಿದರೆ ಈ ಶ್ರಮ ಸಾರ್ಥಕವಾಗುತ್ತದೆ.