ಬಡ ರೈತರ ಮತ್ತು ಮಹಿಳೆಯರ ಜೀವನವನ್ನು ಸುಸ್ಥಿರ ಕೃಷಿ ಮತ್ತು ಆರ್ಥಿಕಸೇರ್ಪಡೆಯ ಮೂಲಕ ಉತ್ತಮಪಡಿಸುವ ದಿಶೆಯಲ್ಲಿ ಐ.ಡಿ.ಎಫ್. ಸಂಸ್ಥೆ ೨೦೦೯ರಲ್ಲಿ ‘ಸುಜೀವನ’ ಎಂಬ ಕಾರ್ಯಕ್ರಮವನ್ನು ಹಮ್ಮಿಕೊಂಡು ತುಮಕೂರು ಜಿಲ್ಲೆಯ ಕುಣಿಗಲ್ ತಾಲ್ಲೂಕಿನಲ್ಲಿ ತನ್ನ ಚಟುವಟಿಕೆಯನ್ನು ಪ್ರಾರಂಭಿಸಿತು. ಪ್ರಾರಂಭದಲ್ಲಿ ೧೩ ಹಳ್ಳಿಗಳಲ್ಲಿ ಪ್ರಾರಂಭವಾದ ಚಟುವಟಿಕೆ, ಅನಂತರ ತಾಲ್ಲೂಕಿನ ಎಲ್ಲ ೬ ಹೋಬಳಿಗೂ ವಿಸ್ತರಿಸಿತು. ಇದೀಗ ೨೦೧೦ರಿಂದ ಐ.ಡಿ.ಎಫ್. ಸಂಸ್ಥೆಯ ಪ್ರೇರಣೆಯಿಂದ ಜನ್ಮತಾಳಿದ ಕುಣಿಗಲ್ ‘ಐ.ಡಿ.ಎಫ್. ಸುಜೀವನ ಒಕ್ಕೂಟ’ ಕಾರ್ಯಕ್ರಮದ ಜವಾಬ್ದಾರಿಯನ್ನು, ಹಂತಹಂತವಾಗಿ ಹೊತ್ತುಕೊಂಡು, ತಾನೇ ನಿರ್ವಹಿಸುತ್ತಿದೆ.
ಸುಜೀವನ ಒಕ್ಕೂಟ ನಡೆಸುತ್ತಿರುವ ಕಾರ್ಯಕ್ರಮಗಳ ಪರಿಣಾಮಗಳ ಯಶೋಗಾಥೆಯನ್ನು ಪುಸ್ತಕದ ರೂಪದಲ್ಲಿ ನಿರೂಪಿಸುವ ಪ್ರಯತ್ನವನ್ನು – ‘ಸುಸ್ಥಿರತೆಯೆಡೆಗೆ…. ಸುಜೀವನ ಪಯಣ’ ಎಂಬ ಈ ಕೃತಿಯಲ್ಲಿ ಮಾಡಲಾಗಿದೆ. ಇದರಲ್ಲಿರುವ ಬರಹಗಳು ಕೇವಲ ಸಾಂಕೇತಿಕವಾಗಿವೆ ಎಂದು ಕೃತಿಯ ಸಂಪಾದಕ ಮಲ್ಲಿಕಾರ್ಜುನ ಹೊಸಪಾಳ್ಯ ಪುಸ್ತಕದ ಆರಂಭದಲ್ಲೇ ಸ್ಪಷ್ಟಪಡಿಸಿದ್ದಾರೆ. ‘ಸುಜೀವನ ಒಕ್ಕೂಟ ನಡೆಸುತ್ತಿರುವ ಕಾರ್ಯಕ್ರಮಗಳು ಈ ಐದುವರ್ಷಗಳಲ್ಲಿ ೩೦ ಸಾವಿರಕ್ಕೂ ಅಧಿಕ ರೈತರನ್ನು ತಲಪಿದೆ. ಅವರಲ್ಲಿ ಕೆಲವು ರೈತರ ಸಾಧನೆಗಳಿಗಷ್ಟೆ ಕನ್ನಡಿಹಿಡಿಯಲಾಗಿದೆ’ ಎಂದೂ ಮಲ್ಲಿಕಾರ್ಜುನ ಹೇಳಿಕೊಂಡಿದ್ದಾರೆ.
ಸಂಪಾದಕರು ಪುಸ್ತಕದಲ್ಲಿ ಸಂಕಲಿತ ಲೇಖನಗಳನ್ನು ಎರಡು ಅಧ್ಯಾಯಗಳನ್ನಾಗಿ ವಿಂಗಡಿಸಿದ್ದಾರೆ. ಮೊದಲ ಅಧ್ಯಾಯದಲ್ಲಿ ಸುಜೀವನ ಒಕ್ಕೂಟ ನಡೆಸುತ್ತಿರುವ ಕಾರ್ಯಕ್ರಮಗಳ ಪರಿಣಾಮಗಳ ಕುರಿತಾದ ಲೇಖನಗಳಿವೆ. ಎರಡನೆಯ ಅಧ್ಯಾಯದಲ್ಲಿ ‘ಐ.ಡಿ.ಎಫ್. ಸುಜೀವನ ಒಕ್ಕೂಟ’ದ ಕಾರ್ಯಕ್ರಮಗಳಿಗೆ ಒದಗಿದ ಪ್ರೇರಣೆ, ಬೆಳವಣಿಗೆಯ ಏಳು-ಬೀಳುಗಳು, ಎದುರಾದ ಸವಾಲುಗಳು, ಭವಿಷ್ಯದ ಯೋಜನೆಗಳು ಇವುಗಳ ಬಗ್ಗೆ ಸಂದರ್ಶನಗಳು ಹಾಗೂ ಲೇಖನಗಳು ಇವೆ.
ಸುಸ್ಥಿರತೆಯೆಡೆಗೆ…..
ಸುಜೀವನ ಪಯಣ
ಸಂಪಾದಕ: ಮಲ್ಲಿಕಾರ್ಜುನ ಹೊಸಪಾಳ್ಯ
ಪ್ರಕಾಶಕರು: ಐ.ಡಿ.ಎಫ್. ಸುಜೀವನ ಒಕ್ಕೂಟ
ನಾಗಪ್ರಿಯ ಶಾಲೆ ಹತ್ತಿರ, ೫ನೇ ಅಡ್ಡರಸ್ತೆ
ಅಂದಾನಯ್ಯ ಬಡಾವಣೆ
ಕುಣಿಗಲ್ – ೫೭೨ ೧೩೦
ತುಮಕೂರು ಜಿಲ್ಲೆ
ಬೆಲೆ: ರೂ. ೧೨೦
ಪುಟಗಳು: ಗಿII + ೧೧೩
ಆಕಾರ: ೧/೪ ಕ್ರೌನ್
“ಎರಡು ಕಾರಣಗಳಿಂದ ಈ ಪುಸ್ತಿಕೆ ಗಮನಾರ್ಹ. ಮೊದಲನೆಯದು ಉಳಿದವರೂ ಮುಂದೆ ಬರುವಂತೆ ಮಾಡಬೇಕೆಂಬ ಕಳಕಳಿ ಇದರಲ್ಲಿದೆ. ಹೆಚ್ಚಿನ ಬೆಳಕನ್ನೂ ಸಾಧಕರ ಬೆವರಿನ ಮೇಲೆಯೇ ಚೆಲ್ಲಿದ ಕಾರಣದಿಂದ ಈ ಕೃತಿ ಸಮಾಜಮುಖಿಯಾಗಿದೆ. ಎರಡನೆಯದಾಗಿ ಸಾಧಕರ ಯಶಸ್ಸಿನ ಗುಟ್ಟನ್ನು ಬಿಡಿಸಿಹೇಳುವ ಮೂಲಕ ಈ ದಾಖಲಾತಿ ಸಂಸ್ಥೆಯ ಕಾರ್ಯಗಡಿಯಾಚೆಗೂ ತನ್ನ ಪ್ರೇರಣಾಶಕ್ತಿ ಉಳಿಸಿಕೊಂಡಿದೆ” – ಎಂದು ಪುಸ್ತಕದ ಕುರಿತು ತಮ್ಮ ಅಭಿಪ್ರಾಯವನ್ನು ಮುನ್ನುಡಿಯಲ್ಲಿ ಕೃಷಿಪತ್ರಿಕೋದ್ಯಮದ ಗಣ್ಯ ಹಿರಿಯ, ‘ಅಡಿಕೆ ಪತ್ರಿಕೆ’ಯ ಸಂಪಾದಕ ಶ್ರೀ ಪಡ್ರೆ ದಾಖಲಿಸಿದ್ದಾರೆ. “ಇಡೀ ಪುಸ್ತಕ ಓದಿದವರಿಗೆ ನಮ್ಮ ಸಾಮಾನ್ಯ ಹಳ್ಳಿಗಳಲ್ಲೂ ಚಿಗುರಿ ಬಾಳಲು ಎಷ್ಟೊಂದು ದಾರಿಗಳಿವೆ ಎನ್ನುವ ಹೊಳಹು ಸಿಗುತ್ತದೆ. ಇಲ್ಲಿನ ಗೆಲವುಗಾಥೆಗಳಿಗೆಲ್ಲಾ ಸುಸ್ಥಿರತೆಯ ಅಡಿಗಟ್ಟು ಇರುವುದು ಗಮನಾರ್ಹ – ಎಂದು ಶ್ರೀ ಪಡ್ರೆಯವರು ಪುಸ್ತಕದ ಕುರಿತಾಗಿ ಹೇಳುವ ಮಾತು ಕೃತಿಯೊಳಗಿನ ಹೂರಣದ ಸ್ವಾದವನ್ನು ಪರಿಚಯಿಸುತ್ತದೆ.