ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ
ಪ್ರಕಟಣೆಯ
60ನೇ
ವರ್ಷ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

Utthana > ಉತ್ಥಾನ ಅಕ್ಟೋಬರ್ 2015 > ನಡೆಯದ ಕಲಾಪ: ನಷ್ಟ ಯಾರಿಗೆ?

ನಡೆಯದ ಕಲಾಪ: ನಷ್ಟ ಯಾರಿಗೆ?

ಆಳುವ ಪಕ್ಷಕ್ಕೂ ವಿರೋಧಪಕ್ಷಕ್ಕೂ ನಡುವಣ ಸಂಘರ್ಷ ಹೊಸದೇನಲ್ಲ. ಸಂಸತ್ತಿನ ಎರಡು ಬಣಗಳ ನಡುವೆ ಚಕಮಕಿ ನಡೆಯುವುದೂ ಹೊಸದಲ್ಲ. ಆದರೂ ಸಂಸತ್ತಿನ ಕಳೆದ ಇಡೀ ಮಳೆಗಾಲದ ಅಧಿವೇಶನದ ಸಮಯವಷ್ಟೂ ತ್ವಂಚಾಹಂಚಗಳಲ್ಲಿ ವ್ಯಯವಾದುದು ನಾಗರಿಕರಿಗೆ ಬೇಸರವನ್ನೂ ತಳಮಳವನ್ನೂ ತಂದಿದೆ. ನಮ್ಮದು ಜಗತ್ತಿನಲ್ಲಿಯೆ ಅತ್ಯಂತ ದೊಡ್ಡ ಪ್ರಜಾಪ್ರಭುತ್ವವೆಂದು ಪದೇಪದೇ ಹೇಳಿಕೊಳ್ಳುತ್ತೇವೆ. ಆ ಪ್ರಥೆಗೆ ಧಕ್ಕೆಬರುವ ರೀತಿಯಲ್ಲಿ ಜನಪ್ರತಿನಿಧಿಗಳು ವರ್ತಿಸಿದ್ದಾರೆ. ದೇಶದ ಯಾವುದೇ ಸಮಸ್ಯೆ ಕುರಿತ ಚರ್ಚೆಗಾಗಿ ಇರುವ ಅತ್ಯುನ್ನತ ವೇದಿಕೆಯೆಂದರೆ ಸಂಸತ್ತು. ಆ ಅತ್ಯುನ್ನತ ವೇದಿಕೆಯ ಘನತೆಯನ್ನು ಬೀದಿ ನಲ್ಲಿ ಕಟ್ಟೆ ಜಗಳಗಳ ಮಟ್ಟಕ್ಕೆ ಇಳಿಸುವುದು ಯಾರಿಗೂ ಹಿತಕಾರಿಯಲ್ಲ. ವ್ಯಕ್ತಿಗತ ಆರೋಪ-ಪ್ರತ್ಯಾರೋಪಗಳೇ ಜನೋಪಯೋಗಿ ಶಾಸನ ಮಸೂದೆಗಳ ಪರಾಮರ್ಶನೆಗಿಂತ ಮಹತ್ತ್ವದ್ದೆ? ಹೀಗೆ ಆಗಿರುವುದು ಇದೇ ಮೊದಲೇನಲ್ಲ. ಯು.ಪಿ.ಎ. ಅಧಿಕಾರಾವಧಿಯಲ್ಲಿಯೂ (೨೦೦೭) ಕಲ್ಲಿದ್ದಲ ನಿಕ್ಷೇಪಗಳ ಪರವಾನಗಿ ಹಂಚಿಕೆಯ ಸಂದರ್ಭದ ವಿವಾದದ ಹಿನ್ನೆಲೆಯಲ್ಲಿ ಇಂತಹದೇ ಸನ್ನಿವೇಶ ಏರ್ಪಟ್ಟಿತ್ತು. ಈಬಾರಿ ಸತತ ವಾಗ್ದಾಳಿಗಳಿಗೆ ಕಾರಣವಾದುದು ಲಲಿತ್ ಮೋದಿ ಪ್ರಕರಣ. ವಿಷಯ ಏನೇ ಇರಲಿ; ತರ್ಕಾಧಾರಿತ ಚರ್ಚೆಯ ಸ್ಥಾನವನ್ನು ಬರಿಯ ನಿಂದನೆಯೇ ಆಕ್ರಮಿಸಿತೆಂಬುದು ಆತಂಕಕಾರಿ ಸಂಗತಿ. ತಾನು ಸೇಡು ತೀರಿಸಿಕೊಂಡೆನೆಂಬ ಸಮಾಧಾನ ಯು.ಪಿ.ಎ. ಬಣಕ್ಕೆ ಉಂಟಾಗಿರಬಹುದು. ಆದರೆ ಇದೇ ಪರಿಸ್ಥಿತಿ ಮುಂದುವರಿದಲ್ಲಿ ಎಲ್ಲರೂ ಸೋತಂತೆಯೇ ಆದೀತು. ಅದನ್ನು ಸಾರ್ವಜನಿಕರು ಎಷ್ಟುಕಾಲ ಸಹಿಸಿಯಾರು? ತಾವು ಅಪ್ರಬುದ್ಧರನ್ನು ಆಯ್ಕೆ ಮಾಡಿದೆವೆಂಬ ಅನಿಸಿಕೆ ಅವರಲ್ಲಿ ಮೂಡದಿದ್ದೀತೆ? ರಾಷ್ಟ್ರದ ಅತ್ಯುನ್ನತ ವೇದಿಕೆಯ ಘನತೆಯನ್ನು ರಕ್ಷಿಸುವುದರಲ್ಲಿ ವಿರೋಧಪಕ್ಷಕ್ಕೂ ಹೊಣೆಗಾರಿಕೆ ಇಲ್ಲವೆ?

ಘೋಟಾಳಗಳ ಉತ್ಖನನ ಮಾಡುತ್ತಹೋದರೆ ಹೆಚ್ಚು ಆತಂಕಕ್ಕೆ ಒಳಗಾಗಬೇಕಾದುದು ಹೆಚ್ಚು ದೀರ್ಘಕಾಲ ಗಾದಿಯಲ್ಲಿದ್ದ ತಾನೇ – ಎಂಬ ಅರಿವಾದರೂ ಕಾಂಗ್ರೆಸ್ ಪಕ್ಷಕ್ಕೆ ಇರದಿದ್ದುದು ಆಶ್ಚರ್ಯಕರ.

ಕೆಲವು ಸಮಯ ಹಿಂದೆ ನಡೆದಿದ್ದ ಅಧ್ಯಯನದ ಪ್ರಕಾರ ಸಂಸತ್ತಿನ ಸಮಾವೇಶದ ಪ್ರತಿನಿಮಿಷಕ್ಕೆ ರೂ. ಎರಡೂವರೆ ಲಕ್ಷದಷ್ಟು – ಎಂದರೆ ಪ್ರತಿದಿನಕ್ಕೆ ರೂ. ೨ ಕೋಟಿಯಷ್ಟು ವೆಚ್ಚ ತಗಲುತ್ತದೆ. ಇದು ಸಂಸತ್ತಿನ ನಡವಳಿಗೆ ಸಂಬಂಧಿಸಿದ ಖರ್ಚು ಮಾತ್ರ. ಇದರಲ್ಲಿ ಸಾಂಸದರ ಚುನಾವಣೆ, ಅವರ ಸಂಬಳ-ಸಾರಿಗೆ-ಸವಲತ್ತುಗಳು, ನಿಃಶುಲ್ಕ ಪೆಟ್ರೋಲ್, ನಿಃಶುಲ್ಕ ದೂರವಾಣಿ, ವಸತಿ, ಗೃಹೋಪಯೋಗಿ ಸಾಮಗ್ರಿಗಳು, ವಿದ್ಯುತ್ತು, ಆಹಾರಾದಿಗಳಲ್ಲಿ ದರದ ಕಡಿತ – ಮೊದಲಾದ ಹತ್ತಾರು ಖರ್ಚುಗಳು ಸೇರಿಲ್ಲ. ಇಷ್ಟೊಂದು ದುಬಾರಿ ವ್ಯವಸ್ಥೆಯನ್ನು ಅನುತ್ಪಾದಕಗೊಳಿಸುವುದು ಅಪೇಕ್ಷಣೀಯವೆ?

ಸರಾಸರಿ ಲೆಕ್ಕದಲ್ಲಿ ಲೋಕಸಭೆಯ ಕೆಲಸದ ವೇಳೆಯ ಶೇ. ೭೭ರಷ್ಟು ಮತ್ತು ರಾಜ್ಯಸಭೆಯದು ಶೇ. ೭೨ರಷ್ಟು ವ್ಯಕ್ತಿಗತ ದಾಳಿಗಳಿಂದಲೂ ನಿವಾರಣೀಯ ಚರ್ಚೆಗಳಿಂದಲೂ ಪೋಲಾಗುತ್ತಿವೆ – ಎಂದು ಹಿಂದಿನ ಸಂಸದೀಯ ವ್ಯವಹಾರ ಸಚಿವ ಪಾವನ ಕುಮಾರ್ ಬನ್ಸಲ್ ಅಂದಾಜು ಮಾಡಿದ್ದರು.

ಸಾಂಸದರ ಸ್ವೈರ ವರ್ತನೆ ಎಷ್ಟು ದುಬಾರಿಯಾದುದೆಂದು ಇದರಿಂದ ಅನುಮಾನಿಸಬಹುದು. ಕಳೆದ ಅಧಿವೇಶನದಲ್ಲಿ ನಿಗದಿಯಾಗಿದ್ದ ಯಾವುದೇ ಮಸೂದೆಗಳ ಪರಾಮರ್ಶನೆಗೆ ಅವಕಾಶವೇ ಆಗಲಿಲ್ಲ. ಪ್ರಧಾನಮಂತ್ರಿಗಳು ರಾಜೀನಾಮೆ ನೀಡಲಿ, ಸಚಿವರು ರಾಜೀನಾಮೆ ನೀಡಲಿ – ಎಂಬಂತಹ ಅರಚಾಟಗಳಲ್ಲಿಯೆ ಅಧಿವೇಶನ ಮುಗಿಯಿತು. ಇನ್ನು ಮುಂದೆ ಹಲವು ತಿಂಗಳಿಗೊಮ್ಮೆ ಚುನಾವಣೆಯನ್ನು ನಡೆಸಬಹುದೆ?

ಅಧಿವೇಶನ ಆರಂಭಗೊಳ್ಳುವುದಕ್ಕೆ ಮುಂಚೆಯೇ ‘ನಾವು ಸಂಸತ್ತಿನ ಕಲಾಪಗಳನ್ನು ಆಗಗೊಡುವುದಿಲ್ಲ’ ಎಂದು ಪ್ರತಿಪಕ್ಷಗಳು ಘೋಷಿಸಿಬಿಟ್ಟವು. ಆರೂಢಪಕ್ಷದ ಪರವಾದ ಹೇಳಿಕೆಗಳನ್ನು ಕೇಳುವಷ್ಟು ಅವಧಾನವನ್ನೂ ವಿರೋಧಪಕ್ಷವು ಉಳಿಸಿಕೊಳ್ಳಲಿಲ್ಲ. ಅಂತಿಮವಾಗಿ ಕಾಂಗ್ರೆಸ್ ಪಕ್ಷಕ್ಕೇ ಪ್ರತಿಕೂಲವಾದ ಸಂಗತಿಗಳು ಹೊಮ್ಮುವಂತಾದುದು ಒಂದು ವಿಕಟತೆ. ಇದರಿಂದ ಏನು ಸಾಧಿತವಾಯಿತು? ಪದೇ ಪದೇ ಕಲಾಪವನ್ನು ಮುಂದಕ್ಕೆ ಹಾಕಿದುದಾಯಿತು. ನಮ್ಮನ್ನು ಆಯ್ಕೆ ಮಾಡುವವರೆಗೆ ನಿಮ್ಮ ಕೆಲಸ; ಅಲ್ಲಿಂದ ಮುಂದಕ್ಕೆ ನಾವು ಸ್ವತಂತ್ರರು – ಎಂದು ಸಾಂಸದರು ಪ್ರಜೆಗಳಿಗೆ ಹೇಳಬಯಸಿದ್ದಾರೆಯೆ?

ಆಳುವ ಪಕ್ಷ, ವಿರೋಧಪಕ್ಷ – ಇಬ್ಬರಿಗೂ ಆಸಕ್ತಿಯ ವಿಷಯವೇ ಆದ ಗುಡ್ಸ್ ಆಂಡ್ ಸರ್ವಿಸಸ್ ಟ್ಯಾಕ್ಸ್ ಮೊದಲಾದ ಹಲವಾರು ವಿಷಯಗಳ ಪರಾಮರ್ಶನೆ ಬಾಕಿಯಾಗಿಯೆ ಉಳಿಯಿತು. ಸಂಸತ್ತಿನ ನಿಗದಿಯಾದ ಕನಿಷ್ಠ ಕಲಾಪಗಳಿಗಾದರೂ ಚ್ಯುತಿಬಾರದಂತಹ ಕ್ರಮಗಳು ಅಮಲಿಗೆ ಬರಬೇಕಾಗಿದೆ.

ನಿಮ್ಮ ಪ್ರತಿಕ್ರಿಯೆ ನೀಡಿ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

`ಉತ್ಥಾನ’ : ೧೯೬೫ರಿಂದ ಪ್ರಕಟವಾಗುತ್ತಿರುವ ಕನ್ನಡದ ಹೆಮ್ಮೆಯ ಸದಭಿರುಚಿಯ ಮಾಸಪತ್ರಿಕೆ. ರಾಜ್ಯದಾದ್ಯಂತ ಪ್ರಸರಣ ಇರುವ ಸಂಚಿಕೆಯು ಈಗ ಕ್ರೌನ್‌ ಚತುರ್ದಳ ಆಕಾರದಲ್ಲಿ ೧೧೨ ವರ್ಣಪುಟಗಳಲ್ಲಿ ವೈವಿಧ್ಯಮಯ ಲೇಖನ, ನುಡಿಚಿತ್ರ, ಸಾಹಿತ್ಯದ ಬರಹಗಳನ್ನು ಪ್ರಕಟಿಸುತ್ತಿದೆ.  ಸಂಚಿಕೆಯ ಬೆ ಲೆ ೨೦ ರೂ.

Utthana
Kannada Monthly Magazine ​
Utthana Trust
Keshavashilpa, Kempegowda Nagara
Bengaluru - 560019
Karnataka State , INDIA

Phone : 080-26612732
Email : [email protected]

ಉತ್ಥಾನದ ಹೊಸ ಪ್ರಕಟಣೆಗಳ ಬಗ್ಗೆ ನಿಮ್ಮ ಈಮೈಲ್‌ ಅಂಚೆಪೆಟ್ಟಿಗೆಯಲ್ಲೇ ಮಾಹಿತಿ ಪಡೆಯಿರಿ. ಇದಕ್ಕಾಗಿ ನಮ್ಮ ವಾರ್ತಾಪತ್ರಕ್ಕೆ ಉಚಿತವಾಗಿ ಚಂದಾದಾರರಾಗಿ