ದೇವರು ನಮಗೆ ಎಲ್ಲವನ್ನೂ ಕೊಟ್ಟಿದ್ದರೂ ನಾವು ಸಣ್ಣ ವಿಚಾರ ದೊಡ್ಡದು ಮಾಡಿಕೊಂಡು ಮನಸ್ಸು ಹಾಳ್ಮಾಡಿಕೊಳ್ತಿದ್ದೇವೆ.
ಎಲ್ಲವನ್ನೂ ಕೊಟ್ಟಿರುವೆ ಏನು ಬೇಡಲಿ?
ಜಗವೇ ನಿನಗೆ ಕೊಟ್ಟಿರುವೆ ಏಕೆ ಕಾಡಲಿ?
ರೇಡಿಯೋ ಹಾಕಿದೊಡನೆ ಗಾಯಕಿಯೊಬ್ಬಳು ನರಸಿಂಹಸ್ವಾಮಿಯವರ ಕವನವನ್ನು ಸುಶ್ರಾವ್ಯವಾಗಿ ಹಾಡುತ್ತಿದ್ದಳು. ಎಂತಹ ಸುಂದರ ಸಾಲುಗಳು! ಮನುಷ್ಯ ಇಷ್ಟು ಸಂತೃಪ್ತನಾಗಿರಲು ಸಾಧ್ಯವೆ? ಇಷ್ಟು ನೆಮ್ಮದಿಯಿಂದ ಇರಲು ಸಾಧ್ಯವೆ? ಸಾಗರನ ಮನ ಪ್ರಶ್ನಿಸಿತು.
ಅವನು ಕಾರು ಸ್ಟಾರ್ಟ್ ಮಾಡುತ್ತಾ ಪ್ರಶ್ನಿಸಿಕೊಂಡ – ನಾನು ಯಾಕೆ ಸಂತೋಷವಾಗಿಲ್ಲ? ಒಂದರ್ಥದಲ್ಲಿ ನಾನು ಬಯಸಿದ್ದೆಲ್ಲಾ ನನಗೆ ಸಿಕ್ಕಿದೆ. ನನಗೇನೂ ಕೊರತೆಯಿಲ್ಲ. ತಂದೆ-ತಾಯಿ ವಿದ್ಯಾವಂತರು. ಅವರಿಗೆ ಮಗ ಇಂಜಿನಿಯರ್ ಅಥವಾ ಡಾಕ್ಟರ್ ಆಗಲಿ ಎನ್ನುವ ಆಸೆಯಿತ್ತು. ಆದರೆ ಮಣ್ಣಿನಲ್ಲಿ ಆಡುತ್ತಾ ಬೆಳೆದ ನನಗೆ ಬೇರೆ ಉದ್ಯೋಗ ಹೇಗೆ ಹಿಡಿಸಲು ಸಾಧ್ಯ?
ಅವನಿಗೆ ತಂದೆಯೊಡನೆ ನಡೆದ ಮಾತುಕತೆ ನೆನಪಾಯಿತು.
ಅಪ್ಪ ನನಗೆ ಬಿ.ಇ. ಅಥವಾ ಎಂ.ಬಿ.ಬಿ.ಎಸ್. ಓದಲು ಇಷ್ಟವಿಲ್ಲ?
ಮತ್ತೇನು ಓದ್ತೀಯಾ ?
ನನಗೆ ವ್ಯವಸಾಯ ತುಂಬ ಇಷ್ಟ. ಅದರ ಬಗ್ಗೇನೇ ಓದ್ತೀನಿ…..
ಓದಿ ಏನ್ಮಾಡ್ತೀಯ?
ಭೂಮಿ ತೆಗೆದುಕೊಂಡು ಬಂಗಾರ ಬೆಳೀತೀನಿ.
ತಂದೆ-ತಾಯಿ ಅವನ ಆಸೆಗೆ ಅಡ್ಡಿ ಬಂದಿರಲಿಲ್ಲ. ಅವನು ಅಗ್ರಿಕಲ್ಚರಲ್ ಎಂ.ಎಸ್.ಸಿ. ಮಾಡಿ, ಟಿ. ನರಸೀಪುರದ ಬಳಿ ಭೂಮಿಕೊಳ್ಳಲು ನಿಶ್ಚಯಿಸಿದ್ದ. ಆದರೆ ಪರಮಶಿವಯ್ಯ ಒಪ್ಪಿರಲಿಲ್ಲ. ನೀನು ಈ ಕಡೆ ಜಮೀನು ತಗೋಬೇಡ. ಬೆಂಗಳೂರು ಹತ್ರ ಭೂಮಿ ತೆಗೆದುಕೊಂಡು ಹೂವು, ಹಣ್ಣು, ತರಕಾರಿ ಬೆಳಿ. ಮಾರಾಟಕ್ಕೆ ಅನುಕೂಲವಾಗತ್ತೆ.
ಅವನು ಬೆಂಗಳೂರು ಬಳಿ ಭೂಮಿ ಹುಡುಕುತ್ತಿದ್ದಾಗ ಅವನ ಗೆಳೆಯ ದರ್ಶನ್ ಹೇಳಿದ್ದ. ನೀನು ರಾಗಿ, ಭತ್ತ ಬೆಳೆಯಕ್ಕೆ ಬೆಂಗಳೂರಿಗೆ ಯಾಕೆ ಬರಬೇಕು? ಒಂದು ಫಾರಂಹೌಸ್ ತೆಗೋ. ಅದನ್ನು ಅಭಿವೃದ್ಧಿ ಮಾಡು.
ದರ್ಶನ್ ಸಹಾಯದಿಂದ ಕೆಂಗೇರಿಗೆ ಆರು ಕಿ.ಮೀ. ದೂರದಲ್ಲಿ ಹನ್ನೆರಡು ಎಕರೆಯ ಒಂದು ಫಾರಂಹೌಸ್ ಕೊಂಡಿದ್ದ. ಎರಡು ವರ್ಷಗಳಲ್ಲಿ ಆ ಫಾರಂಹೌಸನ್ನು ಒಂದು ರೂಪಕ್ಕೆ ತಂದಿದ್ದ. ಹೂವು, ಹಣ್ಣು, ತರಕಾರಿ ಬೆಳೆಯುತ್ತಾ ಆರು ಹಸುಗಳನ್ನು ಸಾಕಲಾರಂಭಿಸಿದ್ದ. ಅವನ ತಂದೆ-ತಾಯಿ ಬಂದು ಒಂದು ತಿಂಗಳಿದ್ದು ಹೋಗಿದ್ದರು. ಅವರು ಹೊರಡುವ ಮೊದಲು ಮಗನಿಗೆ ಹೇಳಿದ್ದರು ಸಾಗರ್, ನಿನ್ನಿಚ್ಛೆಯಂತೆ ಇದುವರೆಗೂ ಎಲ್ಲಾ ನಡೆದಿದೆ. ಇನ್ನಾದರೂ ಮದುವೆ ಬಗ್ಗೆ ಯೋಚನೆ ಮಾಡು.
ಆಗಲಿ ಅಪ್ಪ. ನನ್ನ ಹಾಗೆ ವ್ಯವಸಾಯದಲ್ಲಿ ಆಸಕ್ತಿ ಇರುವ ಹುಡುಗಿಯನ್ನ ಹುಡುಕಿ ಮದುವೆಯಾಗ್ತೀನಿ.
ಪರಮಶಿವಯ್ಯ ಕಣ್ಣಿಗೆಬಿದ್ದ ಕನ್ಯೆಯರ ಕುಲಗೋತ್ರ ವಿಚಾರಿಸಿದರು. ಆದರೆ ಅವರು ನೋಡಿದ ಹುಡುಗಿಯರು ಯಾರೂ ಸಾಗರನನ್ನು ಮದುವೆಯಾಗಲು ಒಪ್ಪಿರಲಿಲ್ಲ. ಅವರಿಗೆ ಇಂಜಿನಿಯರ್ ಅಥವಾ ಡಾಕ್ಟರ್ ವರ ಬೇಕಿತ್ತು. ಕೆಲವರು ನೇರವಾಗಿ ಹೇಳಿದ್ದರು. ನಮ್ಮ ಹುಡುಗಿಗೆ ಸರ್ಕಾರಿ ಕೆಲಸದಲ್ಲಿರುವ ಹುಡುಗಬೇಕು. ನಿಮ್ಮ ಮಗ ಅಷ್ಟೊಂದು ಓದಿ ಯಾಕೆ ವ್ಯವಸಾಯಮಾಡಬೇಕು? ಯಾವುದಾದ್ರೂ ಸರ್ಕಾರಿ ಕೆಲಸಕ್ಕೆ ಸೇರಿಸಿ.
ಇದೇ ಅವಧಿಯಲ್ಲಿ ಅವನು ಗೆಳೆಯ ಸೋಮನಾಥನ ಜೊತೆ ಒಂದು ಮದುವೆಗೆ ಹೋಗಬೇಕಾಯಿತು. ಅಲ್ಲಿ ಮಾಧವಿ ಕಣ್ಣಿಗೆ ಬಿದ್ದಿದ್ದಳು. ಸೋಮನಾಥ ಅವಳ ತಂದೆ ರಾಮಕೃಷ್ಣಯ್ಯನವರನ್ನು ಪರಿಚಯಿಸಿದ್ದ. ಅವರು ಮನೆಗೆ ಆಹ್ವಾನಿಸಿದ್ದರು. ಅವನು ಸೋಮನಾಥನ ಜೊತೆ ಅವರ ಮನೆಗೆ ಹೋದಾಗ, ಅವರು ತಮ್ಮ ತೋಟ ತೋರಿಸಲು ಕರೆದೊಯ್ದಿದ್ದರು.
ಮಾಧವಿ ತೋಟದಲ್ಲಿ ತೆಂಗಿನಕಾಯಿ ಕೀಳಿಸುತ್ತಾ ನಿಂತಿದ್ದಳು. ಆಳುಗಳ ಕೆಲಸ ಗಮನಿಸುತ್ತಾ, ರಾಮಣ್ಣನವರಿಗೆ ಗೊಬ್ಬರದ ಜೊತೆ ಯಾವ ಯಾವ ಬೀಜ ತರಬೇಕೆಂದು ಹೇಳುತ್ತಾ ತೋಟದಲ್ಲಿ ಪಾದರಸದಂತೆ ಓಡಾಡುತ್ತಿದ್ದ ಮಾಧವಿ ಅದ್ಭುತ ವ್ಯಕ್ತಿಯಾಗಿ ಕಾಣಿಸಿದ್ದಳು. ಸೋಮನಾಥ ಅವಳ ಪರಿಚಯ ಮಾಡಿಸಿದ್ದ.
ನನಗೂ ಭೂಮಿಗೂ ಒಂದು ರೀತಿಯ ಅವಿನಾಭಾವ ಸಂಬಂಧ. ನನಗೆ ತೋಟ-ಗದ್ದೆ, ಹಸು-ಕರು ಇವುಗಳಿಲ್ಲದ ಪ್ರಪಂಚವೇ ಇಲ್ಲ. ಅವನಿಗೆ ತಮ್ಮ ತೋಟ ತೋರಿಸುತ್ತಾ ಹೇಳಿದ್ದಳು. ಅವನಿಗೆ ಖುಷಿಯಾಗಿತ್ತು. ಆರುತಿಂಗಳಲ್ಲಿ ಅವರ ಮದುವೆಯಾಗಿತ್ತು. ಅವರಿಗೀಗ ಇಬ್ಬರು ಮಕ್ಕಳಿದ್ದರು.
ಸಾಗರನದು ಒಂದು ರೀತಿಯಲ್ಲಿ ಸುಖೀ ಕುಟುಂಬ. ಮಾಧವಿ ಸಂಪೂರ್ಣ ಫಾರಂಹೌಸ್ನ ಜವಾಬ್ದಾರಿ ತೆಗೆದುಕೊಂಡಿದ್ದಾಳೆ. ಅವನ ಫಾರಂಹೌಸ್ನಲ್ಲಿ ನಾನಾರೀತಿಯ ತರಕಾರಿ, ಹೂವು, ಹಣ್ಣು, ತೆಂಗು, ಬಾಳೆ ಬೆಳೆಯುವುದರ ಜೊತೆಗೆ ಡೈರಿ ನಡೆಸುತ್ತಿದ್ದಾರೆ. ಸಾಗರ್ ಪ್ರಾಡಕ್ಟ್ಸ್ – ತುಪ್ಪ, ಬೆಣ್ಣೆ, ಪನ್ನೀರ್ಗೆ ಒಳ್ಳೆಯ ಬೇಡಿಕೆಯಿದೆ. ಹೊರಗಿನ ವ್ಯವಹಾರವೆಲ್ಲಾ ಸಾಗರನದು. ಚಂದನ್-ಚೈತ್ರಾ ಅವರ ಕಣ್ಣುಗಳು.
ಮದುವೆಯಾದ ಹೊಸದರಲ್ಲಿ ಹೇಳಿದ್ದ; ಮನೆಕೆಲಸದವರ ಜೊತೆ ಅಡುಗೆಯವರನ್ನೂ ಇಟ್ಟುಕೊಳ್ಳೋಣ.
ಯಾಕೆ?
ನಿನಗೆ ಅಡುಗೆಕೆಲಸ ಮಾಡಿಕೊಂಡು ತೋಟದ ಕೆಲಸ ನೋಡಿಕೊಳ್ಳುವುದು ಕಷ್ಟವಾಗುತ್ತೆ.
ಅವಳು ಅವನೆದೆಗೆ ಒರಗಿ ಹೇಳಿದ್ದಳು, ಬೇಡ, ನಮ್ಮಿಬ್ಬರ ನಡುವೆ ಯಾರೂ ಈ ಮನೆಯಲ್ಲಿರಬಾರದು. ನಾವಿಬ್ಬರೇ ಇರಬೇಕು.
ನಾಳೆ ಮಕ್ಕಳಾದರೆ?
ಅವರು ನಮ್ಮ ಮಕ್ಕಳು ತಾನೆ? ಅವರು ನಮ್ಮ ಜೊತೆ ಇರಬಹುದು.
ಮಾಧವಿ ಅವನ ಸರ್ವಸ್ವ. ಅವನ ಬೇಕು ಬೇಡ ಗಮನಿಸುತ್ತಾ ಎಲ್ಲಾ ಜವಾಬ್ದಾರಿ ನಿರ್ವಹಿಸುತ್ತಾ, ಮಕ್ಕಳ ಓದಿಗೆ ಗಮನ ಕೊಡುತ್ತಾ ಆಳುಗಳನ್ನು ಮಕ್ಕಳಂತೆ ಕಾಣುತ್ತಾ ಚೈತನ್ಯದ ಚಿಲುಮೆಯಂತೆ ಓಡಾಡುವ ಮಾಧವಿ ಅವನಿಗೊಂದು ಆಶ್ಚರ್ಯ! ಮದುವೆಯ ನಂತರ ಕಾರ್ ಡ್ರೈವಿಂಗ್ ಕಲಿತಿದ್ದಾಳೆ. ಸ್ಕೂಟಿಯಲ್ಲಿ ಓಡಾಡುತ್ತಾ ಮನೆಗೆ ಬೇಕಾಗಿದ್ದನ್ನು ತರುತ್ತಾಳೆ.
ಅವನನ್ನು ಇತ್ತೀಚೆಗೆ ಒಂದು ಪ್ರಶ್ನೆ ಕಾಡುತ್ತಿದೆ. ಮಾಧವಿ ಮೊದಲಿನಂತಿಲ್ಲ. ಬಹಳ ಬೇಗ ಸಿಟ್ಟು ಮಾಡಿಕೊಳ್ಳುತ್ತಾಳೆ. ಮನಸ್ಸು ಬಿಚ್ಚಿ ಮಾತಾಡುವುದಿಲ್ಲ. ಕೆಲಸದಲ್ಲಿ ತಪ್ಪು ಹುಡುಕುವಂತಿಲ್ಲ. ಅಚ್ಚುಕಟ್ಟಾಗಿ ಮಾಡುತ್ತಾಳೆ. ಆದರೂ ಏನೋ ಚಿಂತೆ ಅವಳನ್ನು ಕಾಡುತ್ತಿದೆ.
ಅವನಿಗೆ ಅಂದು ಬೆಳಗಿನ ಘಟನೆ ನೆನಪಾಯಿತು. ಬೆಳಗಾಗುತ್ತಿದ್ದಂತೆ ಮಾಧವಿ ಹೇಳಿದ್ದಳು. ಮಕ್ಕಳ ಸ್ಕೂಲಿಗೆ ಹೋಗಿ ಫೀಸು ಕಟ್ಟಿ ಬನ್ನಿ.
ಸ್ಕೂಲು ತೆಗೆಯುವ ದಿನ ಕಟ್ಟಿದರಾಯ್ತು. ಈಗಲೇ ಏನವಸರ?
ಆದಿನ ತುಂಬಾ ರಷ್ ಇರುತ್ತೆ. ನೀವು ಖಂಡಿತಾ ಕಟ್ಟಕ್ಕಾಗಲ್ಲ. ರಜದಲ್ಲಿ ಫೀಸುಕಟ್ಟುವವರ ಸಂಖ್ಯೆ ಕಡಮೆ….
ಪ್ಲೀಸ್ ಮಧು ಹೇಳಿದ್ದೇ ಹೇಳಬೇಡ. ಫೀಸು ಕಟ್ಟುವ ಜವಾಬ್ದಾರಿ ನನ್ನದು. ನೀನು ಆ ವಿಷಯ ಬಿಡು.
ಅವಳು ಮುಖ ಊದಿಸಿಕೊಂಡೇ ತಿಂಡಿಕೊಟ್ಟಿದ್ದಳು. ಸಿಟಿಗೆ ಹೋಗಿ ಬರ್ತೀನಿ ಎಂದಾಗಲೂ ಏಕೆ ಎಂದು ಕೇಳಿರಲಿಲ್ಲ.
ಅವನು ಗಾಳಿ ಆಂಜನೇಯಸ್ವಾಮಿ ದೇವಸ್ಥಾನದ ಬಳಿ ಬಂದಾಗ ಮೊಬೈಲ್ ರಿಂಗಾಯಿತು.
ಭಾವ ನಾನು ಗೋಪಿ…
ಏನು ವಿಷಯ ಗೋಪಿ?
ಭಾವ ಬೆಳಗ್ಗೆಯಿಂದ ಅಕ್ಕಂಗೆ ಫೋನ್ ಮಾಡಕ್ಕೆ ಪ್ರಯತ್ನಿಸುತ್ತಿದ್ದೇನೆ. ಫೋನ್ ಸ್ವಿಚ್ಆಫ್ ಆಗಿದೆ…..
ಹೌದಾ? ನಾನು ಹೊರಗಿದ್ದೇನೆ. ಏನಾದರೂ ಮುಖ್ಯವಾದ ವಿಷಯ ಹೇಳಬೇಕಿತ್ತಾ?
ಓ ಸಿಟಿಯಲ್ಲಿದ್ದೀರಾ? ಅಕ್ಕಾನೂ ನಿಮ್ಮ ಜೊತೆ ಇದ್ದಾಳಾ? ಅವಳಿಗೆ ಫೋನ್ ಕೊಡಿ.
ಅಕ್ಕ ಮನೆಯಲ್ಲೇ ಇದ್ದಾಳೆ. ಏನು ವಿಷಯಾಂತ ನನ್ನ ಹತ್ತಿರಹೇಳು….
ಏನೂ ಇಲ್ಲ ಭಾವ. ಈದಿನ ಅಕ್ಕನ ಬರ್ತ್ಡೇ ಅಲ್ವಾ? ವಿಷ್ ಮಾಡೋಣಾಂತ ಬೆಳಗ್ಗೆಯಿಂದ ಟ್ರೈ ಮಾಡ್ತಿದ್ದೇನೆ. ಅಕ್ಕ ಫೋನ್ ಎತ್ತುತ್ತಿಲ್ಲ. ಮಕ್ಕಳೂ ಅಮ್ಮನ ಜೊತೆ ಮಾತಾಡಬೇಕು. ವಿಷ್ ಮಾಡಬೇಕು ಅಂತಿದ್ದಾರೆ. ಅಕ್ಕಂಗೆ ಹುಷಾರಿಲ್ವಾ ಏನ್ಕತೆ?
ಹಾಗೇನಿಲ್ಲ. ಯಾವುದೋ ಕೆಲಸ ಹಚ್ಚಿಕೊಂಡು ಕುಳಿತಿರಬೇಕು. ನಾನೀಗ ಮನೆಗೆ ಹೋಗಿ ನೋಡ್ತೀನಿ ಎಂದ ಸಾಗರ್.
ಬೆಳಗ್ಗೆಯಿಂದ ಮಾಧವಿ ಮುಖ ಊದಿಸಿಕೊಂಡಿರುವುದಕ್ಕೆ ಕಾರಣ ತಿಳಿದಾಗ ಅವನಿಗೆ ಅವನ ಬಗ್ಗೆಯೇ ಅಸಹ್ಯವಾಯಿತು. ಹೆಂಡತಿಯ ಬರ್ತ್ಡೇ ಯಾವತ್ತೆಂದು ಮರೆಯುವುದೆ? ಏನಾಗಿದೆ ನನಗೆ? ಮಾಧವಿ ಎಷ್ಟು ಚೆನ್ನಾಗಿ ಎಲ್ಲರ ಬರ್ತ್ಡೇ ಆಚರಿಸ್ತಾಳೆ! ಅತ್ತೆ-ಮಾವ, ನಾದಿನಿ, ತನ್ನ ತಂದೆ-ತಾಯಿ, ತಮ್ಮ ಎಲ್ಲರ ಬರ್ತ್ಡೇ ಹಾಗೂ ಮದುವೆಯ ದಿನಗಳಲ್ಲಿ ಶುಭಾಶಯ ಕೋರುತ್ತಾಳೆ. ನನ್ನ ಹಾಗೂ ಮಕ್ಕಳ ಬರ್ತ್ಡೇ ದಿನಗಳಲ್ಲಿ ಅದೆಷ್ಟು ಸಂಭ್ರಮಿಸುತ್ತಾಳೆ. ನಾನು ಯಾಕೆ ಅವಳಂತಿಲ್ಲ?
ಅವನು ವಾಚ್ ನೋಡಿದ ಗಂಟೆ ಆರೂವರೆ. ಅವನು ಕಾರು ತಿರುಗಿಸಿಕೊಂಡು ಸಿಟಿಗೆ ಹೋಗಿ ಹೆಂಡತಿಗೆ ಒಂದು ಜೊತೆ ಬಳೆ ತೆಗೆದುಕೊಂಡು ಕೇಕ್ಗೆ ಆರ್ಡರ್ ಮಾಡಿದ. ಅನಂತರ ಮಾಧವಿಗಿಷ್ಟವಾದ ಚಂಪಾಕಲಿ, ಸಮೋಸ ಪ್ಯಾಕ್ ಮಾಡಿಸಿದ. ಅವನು ಫಾರಂಹೌಸ್ಗೆ ಹೊರಟಾಗ ಗಂಟೆ ಎಂಟಾಗಿತ್ತು.
ಅಡುಗೆ ಮಾಡಿ, ಟಿ.ವಿ. ಆನ್ ಮಾಡಿದ. ಮಾಧವಿಯ ಮನಸ್ಸು ಕಲ್ಲೆಸೆದ ಕೊಳದಂತಾಗಿತ್ತು. ತಾನು ಇಷ್ಟಪಟ್ಟು ಮದುವೆಯಾದ ಸಾಗರ್ ಯಾಕೆ ಹೀಗೆ ಬದಲಾಗಿದ್ದಾರೆ? ಯಾವುದೂ ನೆನಪಿರಲ್ಲ. ‘ಸಾರಿ’ ಅಂದುಬಿಡ್ತಾರೆ. ಜವಾಬ್ದಾರಿ ತೆಗೆದುಕೊಳ್ಳಲು ಇಷ್ಟವಿಲ್ಲ. ಮಾರಾಟದ ಜವಾಬ್ದಾರಿ, ಬ್ಯಾಂಕ್ನ ವಹಿವಾಟು ಮಾತ್ರ ತನ್ನದೆಂದು ಭಾವಿಸಿದ್ದಾರೆ. ಮಕ್ಕಳಿಗೆ ಹೋಂವರ್ಕ್ ಮಾಡಿಸಲ್ಲ. ಪೇರೆಂಟ್ಸ್ ಮೀಟಿಂಗ್ಗೆ ಹೋಗಲ್ಲ. ಮಕ್ಕಳಿಗೆ ಬೇಕಾದ ಬುಕ್ಸ್, ಪೆನ್-ಪೆನ್ಸಿಲ್ ತರುವುದಕ್ಕೂ ನಾನೇ ಹೋಗಬೇಕು. ಮಕ್ಕಳು ಹೇಗೆ ಓದುತ್ತಿದ್ದಾರೆಂದು ಗಮನಿಸಲ್ಲ. ವೀಕೆಂಡ್ನಲ್ಲಿ ಏನಾದ್ರೂ ಪ್ರೋಗ್ರಾಂ ಹಾಕಿದರೆ ಸರಿಯಾದ ಸಮಯಕ್ಕೆ ಬರಲ್ಲ. ‘ತಪ್ಪಾಯ್ತು ಸಾರಿ’ ಅಂತ ಮುಖ ಪೆಚ್ಚುಮಾಡಿಕೊಂಡು ಹೇಳಿಬಿಡ್ತಾರೆ.
ಈದಿನ ನನ್ನ ಬರ್ತ್ಡೇ ಅನ್ನುವುದು ನೆನಪಿಲ್ಲವಾ? ವಿಷ್ ಮಾಡಬೇಕೂಂತ ಅನ್ನಿಸಲಿಲ್ಲವಾ ಅಥವಾ ನಾನೇ ಅದನ್ನು ನೆನಪು ಮಾಡಬೇಕಾ? ಮಕ್ಕಳ ಹುಟ್ಟಿದಹಬ್ಬ ಇರುವಾಗಲೂ ಎಲ್ಲಾ ನನ್ನದೇ ಸಿದ್ಧತೆ! ಇವರು ಆ ದಿನವೂ ಹೊರಗಿನವರಂತೆ ‘ಕೇಕ್’ ಕಟ್ಮಾಡುವ ಸಮಯಕ್ಕೆ ಹಾಜರಾಗ್ತಾರೆ. ನಾನಾದರೂ ಎಷ್ಟೂಂತ ಮಾಡಲಿ? ಒಂದು ಕಡೆ ತೋಟ, ಮತ್ತೊಂದು ಕಡೆ ಮನೆ – ಎರಡನ್ನೂ ನಾನೇ ಗಮನಿಸಬೇಕು. ಇಂತಹ ಬದುಕು ನನಗೆ ಬೇಕಿತ್ತಾ? ಸರ್ಕಾರಿ ಕೆಲಸದಲ್ಲಿದ್ದ ವ್ಯಕ್ತೀನ್ನ ಮದುವೆಯಾಗಿದ್ದಿದ್ದರೆ ನೆಮ್ಮದಿಯಿಂದ ಇರಬಹುದಾಗಿತ್ತು. ನನಗೂ ಬೆಲೆಯಿಲ್ಲ. ನನ್ನ ಕೆಲಸಕ್ಕೂ ಬೆಲೆಯಿಲ್ಲ. ಈದಿನ ಇವರು ಸಿಟಿಗೆ ಹೋಗುವ ಆವಶ್ಯಕತೆಯಿತ್ತಾ? ನನ್ನನ್ನು ಕರೆಯಬಹುದಿತ್ತು. ಮಕ್ಕಳಾದರೂ ಇದ್ದಿದ್ದರೆ ಚೆನ್ನಾಗಿರುತ್ತಿತ್ತು. ರಜೆಯಿದೆಯೆಂದು ಅಜ್ಜಿ ಮನೆಗೆ ಹೋಗಿ ಕುಳಿತಿದ್ದಾರೆ. ಫೋನ್ ಮಾಡೋಣವೆಂದರೆ ಮೊಬೈಲ್ ಕಾಣಿಸ್ತಿಲ್ಲ. ಲ್ಯಾಂಡ್ಲೈನ್ ಡೆಡ್ ಆಗಿ ಕುಳಿತಿದೆ. ಗಂಟೆ ಒಂಭತ್ತಾದರೂ ಇವರು ಮನೆಗೆ ಬಂದಿಲ್ಲ. ಎಲ್ಲಿದ್ದಾರೋ ಏನೋ? ಅವಳ ಮನಸ್ಸು ಆತಂಕಗೊಂಡಿತು. ಮಳೆ ಬರ್ತಿರುವುದರಿಂದ ಎಲ್ಲೋ ನಿಂತಿರಬಹುದು. ಅಥವಾ ಮಳೆಯಲ್ಲಿ ಡ್ರೈವ್ ಮಾಡ್ತಿರುವಾಗ ಆಕ್ಸಿಡೆಂಟಾಗಿರಬಹುದಾ?
ಅಷ್ಟರಲ್ಲಿ ಕಾರು ಬಂದು ನಿಂತ ಶಬ್ದವಾಯಿತು. ಮಾಧವಿ ಹೊರಗೆ ಬಂದಳು. ಸಾಗರ್ ಕೆಳಗಿಳಿದು ಕೂಗಿದ. ಸಿದ್ದಯ್ಯ ಹಿಂಭಾಗದ ಸೀಟ್ನಲ್ಲಿರುವ ಬಾಕ್ಸ್ ತೊಗೊಂಡುಬಾ
ಎದುರಿಗೆ ಬಂದ ಮಾಧವಿಯನ್ನು ನೋಡಿ ಅವನು ಕೊಂಚ ತಬ್ಬಿಬ್ಬಾದ.
ಯಾಕೆ ಇಷ್ಟು ಲೇಟು?
ಅವನು ಉತ್ತರಿಸದೆ ಕೇಳಿದ ನಿನ್ನ ಮೊಬೈಲ್ ಎಲ್ಲಿ?
ತೋಟದಲ್ಲಿ ಎಲ್ಲೋ ಬಿದ್ದಿರಬೇಕು. ಯಾಕೆ?
ಅದೂ….. ನಾನು…..
ಅವನು ಮಾತನಾಡುತ್ತಿರುವಾಗಲೇ ಸಿದ್ದಯ್ಯ ಒಳಗೆ ಓಡಿ ಬಂದು ಹೇಳಿದ –
ಬುದ್ಯೋರೆ ಇಂದ್ಗಡೆ ಯಾರೋ ಮಲಗವ್ರೆ…..
ಯಾರು ಮಲಗಿದ್ದಾರೆ?
ನೀವೇ ನೋಡ್ಬನ್ನಿ……
ಸಾಗರ್ ಕಾರ್ನ ಲೈಟ್ ಹಾಕಿದ. ಹಿಂದುಗಡೆಯ ಸೀಟ್ನಲ್ಲಿ ೨೬-೨೭ರ ಅಂಚಿನ ತರುಣಿಯೊಬ್ಬಳು ಮಲಗಿದ್ದಳು. ನಸುಹಳದಿಯ ಮೇಲೆ ಬಿಳಿಯ ಸಣ್ಣಸಣ್ಣ ಹೂಗಳಿದ್ದ ಚೂಡಿದಾರ್ ಧರಿಸಿದ್ದಳು. ಮಗುವಿನಂತೆ ಮಲಗಿದ್ದವಳನ್ನು ನೋಡಿ ಮಾಧವಿ ಕೇಳಿದಳು ಯಾರಿವಳು?
ಗೊತ್ತಿಲ್ಲ ಮಧು. ಈಕೆ ಯಾವಾಗ ಕಾರ್ ಹತ್ತಿದಳೋ ತಿಳಿಯುತ್ತಿಲ್ಲ….
ಮಾಧವಿ ಅವಳನ್ನು ಅಲುಗಾಡಿಸಿದಳು. ಎಚ್ಚರವೇ ಆಗಲಿಲ್ಲ. ಕಾರ್ನಲ್ಲಿದ್ದ ನೀರಿನ ಬಾಟಲ್ನಿಂದ ನೀರು ಬಗ್ಗಿಸಿಕೊಂಡು ಅವಳ ಮುಖದ ಮೇಲೆ ಸಿಂಪಡಿಸಿದಳು. ಆಕೆ ಗಾಬರಿಯಿಂದ ಕಣ್ಣುಬಿಟ್ಟು ಎದುರಿಗಿದ್ದವರನ್ನು ನೋಡಿದಳು.
ನೀನ್ಯಾರು? ನನ್ನ ಕಾರ್ನಲ್ಲಿ ಯಾಕೆ ಬಂದ್ರಿ? ಸಾಗರ್ ಕೇಳಿದ.
ಆಕೆಗೆ ಗಾಬರಿಯಾಯಿತೋ ಏನೋ? ಆಕೆಯ ಕಣ್ಣುಗಳಲ್ಲಿ ನೀರು ತುಂಬಿತು.
ಸಾಗರ್ ನೀವು ಒಳಗೆ ಹೋಗಿ. ನಾನು ಇವಳನ್ನು ಕರ್ಕೊಂಡು ಬರ್ತೀನಿ.
ಮಾಧವಿ ಅವಳನ್ನು ಎಬ್ಬಿಸಿ ಕಾರ್ನಿಂದ ಇಳಿಸಿದಳು.
ಅವಳ ತಲೆ, ಬಟ್ಟೆಗಳು ಎಲ್ಲಾ ತೋಯ್ದು ಹೋಗಿದ್ದವು.
ಮಾಧವಿ ಅವಳನ್ನು ರೂಮ್ಗೆ ಕರೆದೊಯ್ದು ತನ್ನ ಚೂಡಿದಾರ್ ಕೊಟ್ಟಳು. ಆಕೆ ಏನು ಮಾಡಬೇಕೋ ತಿಳಿಯದೆ ಗೊಂಬೆಯಂತೆ ನಿಂತಾಗ ಅವಳ ತಲೆ ಒರೆಸಿ, ಚೂಡಿದಾರ್ ಬದಲಾಯಿಸಲು ಸಹಾಯಮಾಡಿದಳು.
ನಿನ್ನ ಹೆಸರೇನು?
ಗೊತ್ತಿಲ್ಲ…..
ನಿನ್ನ ಮನೆ ಎಲ್ಲಿದೆ?
ಗೊತ್ತಿಲ್ಲ, ನೀವು ಯಾರು?
ಅವಳ ಪ್ರಶ್ನೆ ಕೇಳಿ ಮಾಧವಿಗೆ ವಿಚಿತ್ರವೆನ್ನಿಸಿತು. ‘ಯಾವುದೋ ಹೊಸ ಸಮಸ್ಯೆ ಶುರುವಾಗುವಂತಿದೆ’ ಎಂದುಕೊಂಡಳು.
ನಾನ್ಯಾರೂಂತ ಆಮೇಲೆ ಹೇಳ್ತೀನಿ. ಊಟ ಮಾಡೋಣ ಬನ್ನಿ…..
ಅವಳು ಮಾಧವಿಯ ಕೈ ಹಿಡಿದುಕೊಂಡು ಡೈನಿಂಗ್ಹಾಲ್ಗೆ ಬಂದಳು. ಸಾಗರ್ ಎರಡು ತಟ್ಟೆ ಹಾಕಿದ್ದ. ಮಾಧವಿ ಅವಳನ್ನು ಕೂಡಿಸಿ ಬಡಿಸಿದಳು.
ಸಾಗರ್ ನೀವೂ ಊಟಮಾಡಿ
ನಾನು ನಿನ್ನ ಜೊತೆ ಮಾಡ್ತೀನಿ….
ಅವಳು ಅಚ್ಚುಕಟ್ಟಾಗಿ ಊಟಮಾಡಿ ತಟ್ಟೆಯಲ್ಲಿ ಕೈತೊಳೆದಳು.
ನೀರು ಕುಡಿಯಿರಿ.
ಅವಳು ನೀರು ಕುಡಿದು ಸಾಗರ್ ಕಡೆ ತಿರುಗಿ ಕೇಳಿದಳು. ಚಿದೂ ನನಗೆ ಹಾಲು ಬೇಕು….
ಮಾಧವಿ ಹಾಲು ತಂದಿತ್ತಳು. ಅವಳು ಹಾಲು ಕುಡಿದು ಮಾಧವಿಯ ಕಡೆ ತಿರುಗಿ ಕೇಳಿದಳು. ನನಗೆ ತುಂಬಾ ನಿದ್ರೆ ಬರ್ತಿದೆ. ಎಲ್ಲಿ ಮಲಗಿಕೊಳ್ಳಲಿ?
ಮಾಧವಿ ಅವಳನ್ನು ಚೈತ್ರಳ ರೂಮ್ಗೆ ಕರೆದೊಯ್ದಳು. ಅವಳು ವಾಪಸ್ ಬಂದಾಗ ಸಾಗರ್ ಎರಡು ತಟ್ಟೆಗಳಿಗೂ ಅನ್ನ ಹಾಕಿದ್ದ.
ಸಾಗರ್, ಊಟ ಶುರುಮಾಡಿ.
ಒಂದು ನಿಮಿಷ ಬಂದೆ ಸಾಗರ್ ಎದ್ದು ಹೋಗಿ ವರಾಂಡದಲ್ಲಿದ್ದ ಬ್ಯಾಗ್ನಿಂದ ಚಂಪಾಕಲಿ, ಸಮೋಸಗಳ ಕವರ್ ತಂದ.
ಮಧು, ಮೆನಿ ಮೆನಿ ಹ್ಯಾಪಿ ರಿಟನ್ಸ್ ಆಫ್ ದ ಡೇ.
ಈಗ ನೆನಪಾಯ್ತಾ?
ಬೆಳಗ್ಗೆ ನೆನಪಿರಲಿಲ್ಲ ನಿಜ. ಸಾಯಂಕಾಲ ನೆನಪಾಯ್ತು. ಫೋನ್ ಮಾಡಿದೆ. ನಿನ್ನ ಮೊಬೈಲ್ ಸ್ವಿಚ್ಚಾಫ್ ಆಗಿತ್ತು.
ಬಿಡಿ. ಇದೇನು ಹೊಸದಲ್ಲವಲ್ಲಾ. ಬರ್ತಾಬರ್ತಾ ನಿಮಗೆ ನನ್ನಲ್ಲಿ ಆಸಕ್ತಿ ಕಡಮೆಯಾಗ್ತಿದೆ. ನಿಮಗೆ ನಿಜವಾಗಿ ನನ್ನ ಮೇಲೆ, ಮಕ್ಕಳ ಮೇಲೆ ಪ್ರೀತಿ ಇದೇಯಾಂತ ಸಂದೇಹವಾಗುತ್ತೆ…..
ನಾನು ಏನು ಹೇಳಿದ್ರೂ ನೀನು ನಂಬಲ್ಲಾಂತ ನನಗೆ ಗೊತ್ತು. ಹಾಳಾದ್ದು ಮರೆವು ನನ್ನನ್ನು ಕಾಡ್ತಿದೆ. ಒಂದೊಂದು ಸಲ ನನಗೆ ಎಲ್ಲಾ ಮರೆತುಹೋದರೆ ಏನ್ಮಾಡೋದೂಂತ ಭಯವಾಗತ್ತೆ….
ಮಾಧವಿ ಮಾತಾಡಲಿಲ್ಲ. ಸಾಗರ್ ಊಟ ಮುಗಿಸಿ ಮೊಬೈಲ್ ತೆಗೆದುಕೊಂಡು ಹೋಗಿ ಹೊರಗೆ ಕುಳಿತ.
ಸಾಗರ್ ಮಲಗಲ್ವಾ?
ಇನ್ಸ್ಪೆಕ್ಟರ್ ಅಶೋಕ್ಕುಮಾರ್ಗೆ ಫೋನ್ ಮಾಡ್ತಿದ್ದೇನೆ. ನಾವು ನಮ್ಮ ಮನೆಗೆ ಬಂದಿರುವ ಹೆಂಗಸಿನ ಬಗ್ಗೆ ತಿಳಿಸಬೇಕಲ್ವಾ?
ಅವಳನ್ನು ನೋಡಿದ್ರೆ ನಮ್ಮ ಚೈತ್ರನ ನೆನಪಾಗುತ್ತೆ. ಚೈತ್ರಳಿಗಿನ್ನೂ ೮ ವರ್ಷ. ಇವಳಿಗೆ ೨೫-೨೬ ವರ್ಷ ಇರಬಹುದು. ಆದರೆ ಮಗುವಿನ ಮುಗ್ಧತೆ ಅವಳ ಮುಖದಲ್ಲಿದೆ….
ಈ ಹುಡುಗಿಗೆ ತನ್ನ ಹೆಸರು, ವಿಳಾಸ ಏನೂ ಗೊತ್ತಿಲ್ಲವಲ್ಲ ಯಾಕೆ?
ನನ್ನನ್ನೂ ಅದೇ ಪ್ರಶ್ನೆ ಕಾಡ್ತಿದೆ. ಅದಿರ್ಲಿ, ನೀವು ಅಶೋಕ್ಕುಮಾರ್ಗೆ ಫೋನ್ ಮಾಡೋದ್ರಿಂದ ಏನು ಪ್ರಯೋಜನ?
ಯಾರಾದರೂ ಮಗಳೋ, ಹೆಂಡತೀನೋ ಕಳೆದುಹೋಗಿದ್ದಾರೇಂತ ಕಂಪ್ಲೇಂಟ್ ಕೊಟ್ಟಿರಬಹುದಲ್ವಾ? ಅಶೋಕ್ ಹೇಗೋ ಪತ್ತೆಮಾಡ್ತಾನೆ….
ಅಶೋಕ್ಗೆ ಫೋನ್ ಮಾಡಿ ಸಾಗರ್ ಒಳಗೆ ಹೋಗಿ ಮಲಗಿದ. ಬೀದಿಬಾಗಿಲು ಹಾಕಲು ಬಂದ ಮಾಧವಿ ವರಾಂಡದ ಟೇಬಲ್ ಮೇಲಿದ್ದ ಪುಟ್ಟ ರಟ್ಟಿನ ಪೆಟ್ಟಿಗೆ ಗಮನಿಸಿದಳು. ಅವಳು ಅದನ್ನು ಬಿಚ್ಚಿದಾಗ ಹ್ಯಾಪಿ ಬರ್ತ್ಡೇ ಮಧು ಎಂಬ ಬರಹವುಳ್ಳ ಕೇಕ್ ಕಾಣಿಸಿತು. ಅದರ ಪಕ್ಕ ಇದ್ದ ಲೆದರ್ಬ್ಯಾಗ್ನ ಜಿಪ್ ಓಪನ್ ಆಗಿತ್ತು. ಅವಳು ಲೆದರ್ ಬ್ಯಾಗ್ ಕೈಗೆ ತೆಗೆದುಕೊಂಡು ಅದರ ಒಳಗೆ ಇದ್ದ ಬಳೆಯ ಬಾಕ್ಸ್ ಹೊರಗೆ ತೆಗೆದಳು. ಅವಳಿಗೆ ಅಳು ಬಂದಂತಾಯಿತು.
ಮರುದಿನ ಬೆಳಗ್ಗೆ ಐದು ಗಂಟೆಗೆ ಯಾರೋ ಬಾಗಿಲು ಬಡಿದಂತಾಯಿತು. ಸಾಗರ್ ಹೋಗಿ ಬಾಗಿಲು ತೆಗೆದ. ಅವನ ಸ್ನೇಹಿತ ಅಶೋಕ್ ಇಬ್ಬರು ಗಂಡಸರ ಜೊತೆ ನಿಂತಿದ್ದ. ಒಬ್ಬರಿಗೆ ೨೯-೩೦ ವರ್ಷಗಳಿರಬಹುದು. ಮತ್ತೊಬ್ಬರು ೬೪-೬೫ರ ಅಂಚಿನಲ್ಲಿದ್ದರು.
ಸಾಗರ್ ಇವರು ಕಿಶೋರ್. ಸಾಫ್ಟ್ವೇರ್ ಇಂಜಿನಿಯರ್. ಇವರು ಶಾರದಾಪ್ರಸಾದ್. ಕಿಶೋರ್ನ ತಂದೆ.
ಸಾಗರ್ ಅವರ ಕೈಕುಲುಕಿ ಸ್ವಾಗತ ಬಯಸಿದ.
ನಿಮ್ಮ ಮನೆಯಲ್ಲಿರುವ ಹುಡುಗಿ ಕಿಶೋರ್ ಹೆಂಡತಿ. ನೀನು ನನ್ನ ಮೊಬೈಲ್ಗೆ ಫೋಟೋ ಕಳಿಸಿದ್ದೆಯಲ್ಲಾ ಅದನ್ನು ನೋಡಿದ ತಕ್ಷಣ ಇವರು ಹೇಳಿದರು.
ಅಷ್ಟರಲ್ಲಿ ಮಾಧವಿ ಎಲ್ಲರಿಗೂ ಕಾಫಿ ತಂದಳು.
ಮನು ಎಲ್ಲಿ ಮಲಗಿದ್ದಾಳೆ ತೋರಿಸಿ ಕಿಶೋರ್ ಕಾಫಿ ಲೋಟಹಿಡಿದೇ ಕೇಳಿದ.
ರೂಂನಲ್ಲಿ ಮಲಗಿದ್ದಾರೆ. ಅವರಿಗೆ ಎಚ್ಚರವಾದ ಮೇಲೆ ಕರೆದುಕೊಂಡು ಹೋಗಿ.
ಅವನು ಹೋಗಿ ಅವಳ ಪಕ್ಕ ಕುಳಿತು ಅವಳ ತಲೆ ನೇವರಿಸಿದ. ಅನಂತರ ಮೈತುಂಬಾ ಹೊದಿಸಿ ಹೊರಗೆ ಬಂದು ಕೈ ಮುಗಿದು ಸಾಗರ್ಗೆ ಹೇಳಿದ. ನಿಮ್ಮಿಂದ ತುಂಬಾ ಉಪಕಾರವಾಯ್ತು ಸರ್. ರಾತ್ರಿಯೆಲ್ಲಾ ನಾವು ಇವಳಿಗೆ ಹುಡುಕದ ಜಾಗವಿಲ್ಲ. ಇವಳು ನಿಮಗೆ ಎಲ್ಲಿ ಸಿಕ್ಕಿದ್ಳು?
ನಾನು ಫಾರಂಹೌಸ್ ತಲಪುವವರೆಗೂ ನನಗೆ ಈಕೆ ನನ್ನ ಕಾರಲ್ಲಿದ್ದುದು ಗೊತ್ತಿರಲಿಲ್ಲ. ಮನೆ ತಲಪಿದ ಮೇಲೆ ನನಗೆ ಗೊತ್ತಾಗಿದ್ದು. ನಿಮ್ಮನೆಯವರು ನಮ್ಮ ಯಾವ ಪ್ರಶ್ನೆಗಳಿಗೂ ಸರಿಯಾಗಿ ಉತ್ತರಕೊಡಲಿಲ್ಲ…..
ಅವಳಿಗೆ ಏನಾದರೂ ನೆನಪಿದ್ದರೆ ತಾನೆ ಉತ್ತರ ಕೊಡಕ್ಕೆ? ಅವಳು ಮೊದಲು ಹೀಗಿರಲಿಲ್ಲ. ನಾನವಳನ್ನು ಭೇಟಿಯಾದಾಗ ಅವಳು ಬ್ಯಾಂಕ್ನಲ್ಲಿ ಕೆಲಸಮಾಡ್ತಿದ್ದಳು. ಪಾದರಸದಂತಹ ಹುಡುಗಿ. ನಾನು ಅವಳಿಂದ ಆಕರ್ಷಿತನಾದೆ. ಅವಳು ಅನಾಥೆ ಎಂದು ತಿಳಿಯಿತು. ನಮ್ತಂದೆ-ತಾಯಿ ಯಾವ ತಕರಾರೂ ಇಲ್ಲದೆ ಮದುವೆಗೆ ಒಪ್ಪಿಕೊಂಡರು. ನಾವು ತುಂಬಾ ಅನುಕೂಲಸ್ಥರಾಗಿದ್ದುದರಿಂದ ಅವಳು ಕೆಲಸ ಮಾಡುವ ಆವಶ್ಯಕತೆಯಿರಲಿಲ್ಲ. ಅವಳು ಮನೆಯ ಜವಾಬ್ದಾರಿ ನಿಭಾಯಿಸಿಕೊಂಡು ಆರಾಮವಾಗಿದ್ದಳು. ಸ್ಕೂಟಿ ಓಡಿಸ್ತಿದ್ದಳು. ಕಾರ್ ಡ್ರೈವಿಂಗ್ ಕಲಿತಳು. ಸೊಗಸಾಗಿ ಈಜುತ್ತಿದ್ದಳು. ಈಜುಸ್ಪರ್ಧೆಗಳಲ್ಲಿ ಬಹುಮಾನ ತರ್ತಿದ್ದಳು. ಒಂದು ಸಲ ಕಾರ್ನಲ್ಲಿ ಬೆಂಗಳೂರಿನಿಂದ ಬರ್ತಿರುವಾಗ ಆಕ್ಸಿಡೆಂಟ್ ಆಯ್ತು. ಇವಳು ಬದುಕಿದ್ದೇ ಕಷ್ಟವಾಯ್ತು. ಆಗಲಿಂದ ಇವಳ ನೆನಪಿನ ಶಕ್ತಿ ಹೊರಟುಹೋಯಿತು.
ಚಿದೂ ಅಂದ್ರೆ ಯಾರು?
ಗೊತ್ತಿಲ್ಲ. ನನ್ನ ಹೆಸರು ಕಿಶೋರ್. ಮಾನಸ ಆಕ್ಸಿಡೆಂಟ್ ಆದ ಮೇಲೆ ನಲವತ್ತು ದಿನ ಕೋಮಾದಲ್ಲಿದ್ದಳು. ಜ್ಞಾನ ಬಂದ ಮೇಲೆ ನನ್ನನ್ನು ಚಿದೂಂತ ಕೂಗುವುದಕ್ಕೆ ಶುರುಮಾಡಿದಳು.
ಅವರ ಕೆಲಸ ಅವರೇ ಮಾಡಿಕೊಳ್ತಾರಾ?
ಅವಳನ್ನು ನೋಡಿಕೊಳ್ಳುವುದಕ್ಕೆ ನರ್ಸ್ ಇದ್ದಾಳೆ. ಹಸಿವಾದಾಗ ಮಾತ್ರ ಚಿದೂ ಊಟ ಕೊಡು, ತಿಂಡಿ ಕೊಡು, ಹಾಲು ಕೊಡೂಂತ ಹಠಮಾಡ್ತಾಳೆ. ನಾವೇ ಟೈಂ ನೋಡಿಕೊಂಡು ಅವಳಿಗೆ ಹೊತ್ತೊತ್ತಿಗೆ ಊಟ, ತಿಂಡಿ ಕೊಡ್ತೀವಿ.
ಅಷ್ಟರಲ್ಲಿ ಮಾನಸ ಎದ್ದು ಹೊರಗೆ ಬಂದವಳು ಓಡಿಬಂದು ಕಿಶೋರ್ನನ್ನು ಅಪ್ಪಿಕೊಂಡಳು.
ನನ್ನ ಮಗ ಮನಸ್ಸು ಮಾಡಿದ್ದಿದ್ರೆ ಇವಳನ್ನು ಡೈವೋರ್ಸ್ ಮಾಡಿ ಬೇರೆ ಮದುವೆಯಾಗಬಹುದಿತ್ತು. ಆದ್ರೆ ಅವನು ಮಾನಸನ್ನ ಬಿಡಕ್ಕೆ ಒಪ್ತಿಲ್ಲ. ಅವಳು ಹೇಗಿದ್ರೂ ನನಗವಳು ಬೇಕು ಎನ್ನುತ್ತಾನೆ ಎಂದರು. ಅವರು ಹೋದ ಮೇಲೆ ಸಾಗರ್, ಮಾಧವಿ ತಮ್ಮತಮ್ಮ ಕೆಲಸಗಳಲ್ಲಿ ತೊಡಗಿದರು. ಇಬ್ಬರ ಮನಸ್ಸು ಒಂದೇ ತರಹ ಯೋಚಿಸುತ್ತಿತ್ತು.
ದೇವರು ನಮಗೆಲ್ಲಾ ಕೊಟ್ಟಿದ್ದರೂ ನಾವು ಸಣ್ಣ ವಿಚಾರ ದೊಡ್ಡದು ಮಾಡಿಕೊಂಡು ಮನಸ್ಸು ಹಾಳ್ಮಾಡಿಕೊಳ್ತಿದ್ದೇವೆ. ನಮಗಿಂತ ಚಿಕ್ಕವನು ಕಿಶೋರ್. ಅವನಿಗಿರುವ ತಾಳ್ಮೆ ನಮಗಿರದೆ ಹೋಯಿತೆ?
ಸಾಗರ್ ಡೈನಿಂಗ್ಟೇಬಲ್ ಮೇಲೆ ಕೇಕ್ ಇಟ್ಟು ಕೂಗಿದ, ಮಧು, ಒಂದ್ನಿಮಿಷ ಬರ್ತೀಯಾ?
ಅವಳು ಓಡಿಬಂದು ಅವನನ್ನಪ್ಪಿ ಪಿಸುಗುಟ್ಟಿದಳು, ಸಾಗರ್, ಅಯಾಮ್ ಸಾರಿ. ನನ್ನನ್ನು ಕ್ಷಮಿಸಿ.
ಅವನು ಮಾತನಾಡದೆ ಅವಳ ಮುಂದಲೆಗೆ ತುಟಿಯೊತ್ತಿದ.