ಜೈಮಿನಿ ಭಾರತದಲ್ಲಿ ಕೃಷ್ಣ-ಭೀಮರ ನಡುವಿನ ಹಾಸ್ಯಮಿಶ್ರಿತ ಸಂಭಾಷಣೆಗಳು ಓದುಗರಿಗೆ ಮುದ ಕೊಟ್ಟು – ಇದಕ್ಕೆ ಕೃಷ್ಣ ಏನು ಹೇಳಿದ, ಭೀಮ ಏನು ಹೇಳಿದ ಅಂತ ಕುತೂಹಲದಿಂದ ಓದನ್ನು ಮುಂದುವರಿಸಿಕೊಂಡು ಹೋಗುವಂತೆ ಮಾಡುತ್ತದೆ….
ಕನ್ನಡ ನಾಡಿನ ಕವಿ ಲಕ್ಷ್ಮೀಶ. ಚಿಕ್ಕಮಗಳೂರು ಜಿಲ್ಲೆಯ ದೇವನೂರು ಈ ಕವಿಯ ಜನ್ಮಸ್ಥಳ. ಇವನ ಆರಾಧ್ಯ ದೈವ ದೇವನೂರಿನ ಲಕ್ಷ್ಮೀಕಾಂತ. ವಿವಿಧ ವಿದ್ವಾಂಸರ ಪ್ರಕಾರ ಲಕ್ಷ್ಮೀಶನ ಕಾಲವನ್ನು ೧೩ನೆಯ ಶತಮಾನದ ಆದಿಯಿಂದ ಹಿಡಿದು ೧೬ನೆಯ ಶತಮಾನದವರೆಗೆ ವಿಸ್ತರಿಸಲಾಗುತ್ತದಾದರೂ, ಖಚಿತವಾದ ಮಾಹಿತಿ ಲಭ್ಯವಿಲ್ಲ. ಆದರೆ ಒಂದು ಮೂಲದ ಪ್ರಕಾರ, ಅಂದರೆ ಗೋವಿಂದ ಪೈಯವರ ಪ್ರಕಾರ ತೊರೆಗಲ್ಲು ಸೀಮೆಯ ದೊರೆಯಾದ ಜಾಯೇಂದ್ರನು ರಚಿಸಿರುವ ಕನ್ನಡ ಕುವಲಯಾನಂದದಲ್ಲಿ ಜೈಮಿನಿ ಭಾರತದ ಐವತ್ತು ಪದ್ಯಗಳನ್ನು ವಿವಿಧ ಅಲಂಕಾರಗಳಿಗೆ ಉದಾಹರಣೆಯಾಗಿ ಕೊಟ್ಟಿದೆ. ಜಾಯೇಂದ್ರನ ಕಾಲ ೧೬೭೪. ಅಂದರೆ ಆ ವೇಳೆಗಾಗಲೇ ಜೈಮಿನಿ ಭಾರತವು ಸಾಕಷ್ಟು ಪ್ರಸಿದ್ಧಿಯಾಗಿದ್ದಿತು.
ಜೈಮಿನಿ ಭಾರತದಲ್ಲಿ ಕೃಷ್ಣಭಕ್ತಿ ಹಾಸುಹೊಕ್ಕಾಗಿದೆ. ತಿಳಿಯಹೇಳುವೆ ಕೃಷ್ಣಕಥೆಯನು ಇಳೆಯ ಜಾಣರು ಮೆಚ್ಚುವಂತಿರೆ ಅಂತ ಪಂಪ ಮಹಾಕವಿ ಹೇಳಿದಂತೆ ಜೈಮಿನಿ ಭಾರತವೂ ಒಂದು ರೀತಿ ಕೃಷ್ಣ ಕಥೆಯೇ ಆಗಿದೆ. ಅಶ್ವಮೇಧ ಯಾಗದ ಕಥೆಯ ಸೂತ್ರದಲ್ಲಿ ಅನೇಕ ಸಣ್ಣಸಣ್ಣ ಕಥೆಗಳನ್ನು ಪೋಣಿಸಿದುದೇ ಜೈಮಿನಿ ಭಾರತ.
ಲಕ್ಷ್ಮೀಶನ ಸರಸ ಸಂಭಾಷಣೆ ಮತ್ತು ಹಾಸ್ಯಪ್ರಿಯತೆಗಳು ಕಾವ್ಯದ ಆರಂಭದಲ್ಲೇ ಬಂದಿವೆ. ಅಶ್ವಮೇಧ ಯಾಗವನ್ನು ಮಾಡೆಂದು ವೇದವ್ಯಾಸರು ಹೇಳಿದುದನ್ನು ಧರ್ಮಜನು ತಿಳಿಸಿದಾಗ ಶ್ರೀಕೃಷ್ಣನು `ಮರುಳಹರೆ ಭೂಪಾಲ ಬಾದರಾಯಣ ನಿಕ್ಕಿದುರುಳುಗಣ್ಣಿಗೆ ಸಿಲುಕುವರೇ?’ ಎನ್ನುತ್ತಾನೆ. ಯಾಗಕ್ಕೆ ಕುದುರೆಯನ್ನು ತಂದು ಕೊಡುವೆನೆಂದು ಭೀಮನು ಪ್ರತಿಜ್ಞೆ ಮಾಡಿದ ವಿಷಯದ ಬಗೆಗೆ ಅವನು `ಭೀಮನೆಂಬುವ ದುರುಳನರಿಯಾ, ತರಳತನದಿಂದ ಹಯಮೇಧಕುದ್ಯೋಗಿಪರೇ’ ಎಂದು ಕೇಳುತ್ತಾನೆ.
ಇಡೀ ಕಾವ್ಯದಲ್ಲಿ ಭೀಮ ಮತ್ತು ಕೃಷ್ಣರ ಸಂವಾದದಲ್ಲಿ ಹಾಸ್ಯ ಉಕ್ಕಿ ಬರುತ್ತದೆ. ಒಂದು ಸನ್ನಿವೇಶದಲ್ಲಿ ಶ್ರೀಕೃಷ್ಣನು ಭೀಮನನ್ನು ಕುರಿತು
ಮತಿಯುಳ್ಳೊಡಿವನಸುರಬಲಿಗೊದಗಿಸಿದ ಕೂಳ-
ನತಿ ಮಹೋದರಕಡಸಿಕೊಂಬನೇ ನೀತಿಗಳ
ಗತಿಯನರಿದೊಡೆ ನಿಶಾಚರಿಯನಿವನಾಳ್ವನೇ ರಾಣಿಯೆಂದರಮನೆಯೊಳು |
ಕ್ಷಿತಿಯೊಳದ್ಭುತ ರೂಪನೀ ವೃಕೋದರನಿವನ
ಮತವಿಡಿದು ಹಯಮೇಧಕುದ್ಯೋಗಿಸಿದೊಡೆ ಪೂ-
ರಿತಮಹುದೆ ಮರುಳೆ ಹೇಳೆಂದು ನೃಪನೊಡನೆ ಮುರರಿಪ್ಪು ಭೀಮನಂ ಜರೆದನು ||
(ಸಂಧಿ ೨, ಪದ್ಯ ೫೮)
`ಈ ಭೀಮನು ಬುದ್ಧಿಶೂನ್ಯನು. ಇವನಿಗೆ ಬುದ್ಧಿ ಇರುತ್ತಿದ್ದರೆ ಆ ರಕ್ಕಸನ ಬಂಡಿ ಅನ್ನವನ್ನು ತಾನು ಉಣ್ಣುತ್ತಿದ್ದನೇ. ಅದ್ಭುತ ಗಾತ್ರದ ತನ್ನ ಡೊಳ್ಳು ಹೊಟ್ಟೆಯಲ್ಲಿ ಒಂದು ಗಾಡಿ ಅನ್ನವನ್ನೇ ತುಂಬಿಸಿಕೊಂಡನಲ್ಲ. ಅಬ್ಬಾ ಅವನ ಸಾಮರ್ಥ್ಯವೇ. ಅವನಿಗೆ ಮಾನವನ ರೀತಿನೀತಿ ನಿಯಮ ಕಟ್ಟುಪಾಡುಗಳ ಗೊಡವೆಯೇ ಇಲ್ಲ. ಅಂತಹ ವಿಚಿತ್ರ ವ್ಯಕ್ತಿ ಮಾನವನಾಗಿ ರಕ್ಕಸಿಯೊಬ್ಬಳನ್ನು ಮದುವೆಯಾದನು. ಈ ನಿಶಾಚರಿಯನ್ನು ತಂದು ತನ್ನ ಅರಮನೆಯ ರಾಣೀವಾಸದಲ್ಲಿ ಸೇರಿಸಿರುವ ಇವನಲ್ಲದೇ ಲೋಕದಲ್ಲಿ ಇನ್ಯಾರಿಹರು? ಈ ಭೂಮಿಯಲ್ಲಿ ಇವನಂತಹ ಅದ್ಭುತ ರೂಪದ ಮಹಾಕಾಯನು ಬೇರೊಬ್ಬನಿಲ್ಲ. ಅವನ ಮಾತನ್ನು ಅವನ ಅಣ್ಣನಾದ ನೀನು ನೆರೆನಂಬಿ ಅಶ್ವಮೇಧಯಾಗವನ್ನು ಅಂಗೀಕರಿಸಿರುವೆಯಲ್ಲ. ಇದು ಬರಿಯ ಹುಚ್ಚುತನವೇ ಸರಿ’ ಎಂದು ಯುಧಿಷ್ಟಿರನನ್ನು ಶ್ರೀಕೃಷ್ಣನು ಚೆನ್ನಾಗಿ ನಿಂದಿಸಿದನು.
ಭೀಮನನ್ನು ನೋಡಿದಾಗ ಅವನ ಮುಖದಲ್ಲಿನ ಭಾವನೆಯಲ್ಲಿ ಹುಂಬತನ ಕಾಣಿಸಿತು. ಹೀಗಾಗಿ ಭೀಮನನ್ನು ಕೆಣಕುವುದೆಂದರೆ ಕೃಷ್ಣನಿಗೆ ಅದೇನೋ ಸಂತಸ. ಭೀಮನ ನಡವಳಿಕೆಗಳಿಗೆ ತುಸು ಉತ್ಪ್ರೇಕ್ಷೆಯ ಭಾವನೆಗಳನ್ನು ತುಂಬಿ, ಭೀಮನನ್ನು ಇನ್ನಷ್ಟು ಕೆರಳಿಸುವುದು ಕೃಷ್ಣನ ಉದ್ದೇಶ. ಭೀಮ ಎಷ್ಟಾದರೂ ಅತೀಂದ್ರಿಯ ಶಕ್ತಿ ಉಳ್ಳವನು. ಅಂದುಕೊಂಡಿದ್ದನ್ನು ಮಾಡಿ ಮುಗಿಸುವವನು. ಆದರೆ ಅವನಲ್ಲಿ ಎಲ್ಲಿಯೂ ಲಂಪಟತನ ಕಾಣುವುದಿಲ್ಲ. ಆದರೆ ಬರಿಗಣ್ಣಿನಿಂದ ನೋಡುವವರಿಗೆ ಮಾನವನಾಗಿ ಇವನು ಹೀಗೆಲ್ಲ ಮಾಡುವುದು ಸಾಧ್ಯವೇ ಎಂದೆನಿಸದೇ ಇರದು. ಅದಕ್ಕೇ ಕೃಷ್ಣ-ಭೀಮ ಬಂಡಿ ಅನ್ನವನ್ನು ತಾನೇ ತಿಂದದ್ದು, ಮಾನವನಾಗಿ ಹಿಡಿಂಬೆಯಂಥ ರಾಕ್ಷಸಿಯನ್ನು ಮದುವೆಯಾದದ್ದು, ಮುಂತಾದ ಸಂಗತಿಗಳನ್ನು ಹಾಸ್ಯಮಯವಾಗಿ ಆಡಿದ್ದಾನೆ. ಇದರಿಂದ ಭೀಮನಿಗೆ ಕೋಪ ಬರಲಿಲ್ಲ. ಈ ಕೃಷ್ಣನು ನನ್ನ ರೀತಿನೀತಿಗಳನ್ನು ಕೆಣಕುತ್ತಿದ್ದಾನೆ. ಇವನೇನು ಸಾಮಾನ್ಯನೇ ಎಂದು ಭೀಮನೂ ಕೃಷ್ಣನ ಸಂಗತಿಗಳನ್ನು ಕೆದಕಿ ಸಾಕಷ್ಟು ಕೆಣಕಿ ಮಾತನಾಡುತ್ತಾನೆ. ಹೀಗಾಗಿ ಕೃಷ್ಣನ ಮಾತಿಗೆ ಬದಲುತ್ತರ ಕೊಡುವುದರಲ್ಲೂ ಭೀಮ ಆನಂದವನ್ನನುಭವಿಸುತ್ತಾನೆ. ಹೀಗಾಗಿ ಕಾವ್ಯದಲ್ಲಿ ಅಲ್ಲಲ್ಲಿ ಹಾಸ್ಯಮಯ ಕ್ಷಣಗಳು ಧಾರಾಳವಾಗಿ ಕಾಣಿಸಿಕೊಂಡಿವೆ.
ಕೃಷ್ಣನ ಮಾತು ಕೇಳಿ ಭೀಮ ಸುಮ್ಮನಾಗಲಿಲ್ಲ. ತಾನೂ ನಗುನಗುತ್ತಲೇ ಕೃಷ್ಣನ ಮಾತಿಗೆ ಬದಲುತ್ತರ ಕೊಟ್ಟ.
ಆಹಾ ಮಹದೇವ ಚಿತ್ರಮಂ ಕೇಳಿದೆವ-
ಲಾ ಹಲವು ಲೋಕಮಂ ಕೊಳ್ಳದೇ ನಿನ್ನುದರ
ಮಹಾ ನಿಶಾಚರಿಯರಲ್ಲವೇ ನರಕಾಸುರನ ಮನೆಯ ಬಾಲಿಕೆಯರು
ಈ ಹೆದರದೇಕೆ ಕರಡಿಯ ಮಗಳನಾಳ್ದ ನಿನ-
ಗೋಹೋ ಧರೆಯೊಳದ್ಭುತಾಕಾರರಾರೋ ನಿ-
ನ್ನೂಹೆಗಳ ಬಲ್ಲೆ ನಾನಿತ್ತ ಭಾಷೆಗೆ ತಪ್ಪೆನೆಂದು ಭೀಮಂ ನುಡಿದನು ||
(ಸಂಧಿ ೨, ಪದ್ಯ ೫೯)
ಆಹಾ ಮಹದೇವಾ, ನಾವೀಗ ಸತ್ಯಕ್ಕೆ ದೂರವಾದ ವಿಚಿತ್ರವಾದ ಮಾತೊಂದನ್ನು ಕೇಳಿದೆವಲ್ಲಾ. ಈ ವಿಶ್ವವೇ (ಬ್ರಹ್ಮಾಂಡವೇ) ನಿನ್ನ ಹೊಟ್ಟೆಯಲ್ಲಿ ಅಡಗಿದೆಯೆಂದು ಹೇಳುವರು. ನೀನು ಈಗಾಗಲೇ ತೋರಿರುವ ಅನೇಕ ಪವಾಡಗಳಿಂದ ಇದು ಸರ್ವವಿದಿತವಾಗಿದೆ. ಇರಲಿ. ಎಲೈ ಮಹಾಸ್ವಾಮಿಯೇ ಈ ಸಕಲ ಬ್ರಹ್ಮಾಂಡಗಳನ್ನು ಒಳಗೊಂಡ ನಿನ್ನ ಹೊಟ್ಟೆ ದೊಡ್ಡದೋ ನನ್ನ ಹೊಟ್ಟೆ ದೊಡ್ಡದೋ? ನೀನೇ ಹೇಳು. ನಮ್ಮಿಬ್ಬರಲ್ಲಿ ಅದ್ಭುತ ಗಾತ್ರ ಯಾರದು? ನೋಡುವುದಕ್ಕೆ ನನ್ನ ಹೊಟ್ಟೆಯೇನೋ ದೊಡ್ಡದಾಗೇ ಕಾಣಬಹುದು. ಆದರೆ ಜನರ ಅಂತರಂಗದ ಕಣ್ಣಿಗೆ ನಿನ್ನ ಹೊಟ್ಟೆಯೇ ದೊಡ್ಡದಲ್ಲವೇ. ಆವತ್ತು ನೀನು ನರಕಾಸುರನನ್ನು ಗೆದ್ದು ಅವನ ಮನೆಯ ೧೬೦೦೦ ಬಾಲಿಕೆಯರನ್ನು ವರಿಸಲಿಲ್ಲವೇ? ಇದು ಹುಲು ಮಾನವರು ಮಾಡುವಂಥ ಕೆಲಸವೇ? ನೀನು ಮಾನವನಾಗಿ ಜನಿಸಿ ಆ ರಕ್ಕಸಿಯರ ಕೈ ಹಿಡಿಯಲಿಲ್ಲವೇ? ಜಗತ್ತಿನ ಎಲ್ಲ ಮಾನವರೂ ತಿಳಿಯುವಂತೆ ಕರಡಿಯಾದ ಜಾಂಬವಂತನೊಡನೆ ಹೋರಾಡಿ ಅವನ ಮಗಳಾದ ಜಾಂಬವತಿಯನ್ನು ಪರಿಗ್ರಹಿಸಿ ನಿನ್ನ ಪಟ್ಟದ ರಾಣಿಯನ್ನಾಗಿ ಮಾಡಿಕೊಂಡೆ. ನಾನು ಹಿಡಿಂಬೆಯನ್ನು ಮದುವೆಯಾದರೆ ಅದು ರಾಕ್ಷಸಿಯನ್ನು ಮದುವೆಯಾದಂತೆ. ಆದರೆ ನೀನು ಕರಡಿಯ ಮಗಳನ್ನು ಮದುವೆಯಾದರೆ ಅದಕ್ಕೆ ಏನು ಹೇಳಬೇಕು? ಈ ತೆರನ ನಿನ್ನ ವಿಚಿತ್ರ ಲೀಲೆಗಳು ಲೋಕದಲ್ಲಿ ಈ ಹಿಂದೆಯೇ ಚೆನ್ನಾಗಿ ಪ್ರಕಟಗೊಂಡಿವೆ. ನಿನ್ನ ಆಲೋಚನೆಗಳನ್ನು ನಾನು ಬಲ್ಲೆ. ನಿನ್ನ ಕುಹಕದ ಮಾತುಗಳಿಗೆ ನಾನೂ ಕುಹಕದ ಮಾತುಗಳನ್ನು ಆಡಬಲ್ಲೆ. ಆದರೆ ನೀನು ನಿನ್ನ ಮಾತಿನಿಂದ ನನ್ನನ್ನು ಹಿಂದೆ ಸರಿಸಬಹುದೆಂದು ತಿಳಿದಿದ್ದರೆ ಅದನ್ನು ಮರೆತುಬಿಡು. ನಾನು ಮಾತ್ರ ನನ್ನ ಪ್ರತಿಜ್ಞೆಯನ್ನು ಪೂರೈಸುವೆನು. ಯಜ್ಞಾಶ್ವವನ್ನು ನಿನ್ನ ಪಾದಕ್ಕೆ ಒಪ್ಪಿಸದೇ ಇರೆನು.
ಇಂತಹ ಸಂಭಾಷಣೆಗಳನ್ನು ಕಂಡಾಗ ಓದುಗರಿಗೆ ಕೃಷ್ಣ-ಭೀಮರು ಜಗಳ ಆಡುತ್ತಿದ್ದಾರೆ, ಪರಸ್ಪರರ ಬಲಹೀನತೆಯನ್ನು ಎತ್ತಿ ಆಡುತ್ತಿದ್ದಾರೆ, ಒಬ್ಬರು ಇನ್ನೊಬ್ಬರ ಮನಸ್ಸನ್ನು ನೋಯಿಸುತ್ತಿದ್ದಾರೆ ಅನ್ನಿಸುವುದಿಲ್ಲ. ಇವರಿಬ್ಬರ ಹಾಸ್ಯಮಿಶ್ರಿತ ಸಂಭಾಷಣೆಗಳು ಓದುಗರಿಗೆ ಮುದ ಕೊಟ್ಟು ಇದಕ್ಕೆ ಕೃಷ್ಣ ಏನು ಹೇಳಿದ. ಭೀಮ ಏನು ಹೇಳಿದ ಅಂತ ಕುತೂಹಲದಿಂದ ಓದನ್ನು ಮುಂದುವರಿಸಿಕೊಂಡು ಹೋಗುವಂತೆ ಮಾಡುತ್ತದೆ. ಕೃಷ್ಣ ಮತ್ತು ಭೀಮರಿಗೆ ಪರಸ್ಪರರ ಶಕ್ತಿಯೂ ಗೊತ್ತು, ಯುಕ್ತಿಯೂ ಗೊತ್ತು, ಬಲಹೀನತೆಯೂ ಗೊತ್ತು, ತಂತ್ರಗಾರಿಕೆಯೂ ಗೊತ್ತು. ಓಹೋ ನೀನು ಹೀಗೆ ಹೇಳ್ತಿದೀಯಾ, ನಾನು ನೋಡು ನಿನ್ನ ಇನ್ನೊಂದು ಸಂಗತಿಯನ್ನು ಕೆಣಕುತ್ತೇನೆ ಎನ್ನುವಂತೆ ಸಂಭಾಷಣೆಗಳು ಮುಂದುವರಿದಿವೆ. ಭೀಮನತ್ತ ನೋಡಿಕೊಂಡು ಕೃಷ್ಣ ನಗುನಗುತ್ತಾ ಈ ಮಾತುಗಳನ್ನು ಆಡುತ್ತಾನೆ-
ಭಾಷೆಯಂ ಕೊಟ್ಟು ತಪ್ಪುವನಲ್ಲ ನೀನಾ ವಿ-
ಶೇಷಮಂ ಕಂಡು ಬಲ್ಲೆವು ಹಿಂದೆ ರಣದೊಳಭಿ-
ಲಾಷೆಯಿಂ ಪೈಶಾಚರಂತೆ ಹೇಸದೆ ರಕ್ತಪಾನಮಂ ಮಾಡಿಯೊಡಲ-
ಪೋಷಿಸಿದೆ ಭಂಡತನವಿದು ನಿನ್ನ ಸಾಹಸಕೆ
ಭೂಷಣಗೆ ಹೋಗೆಲವೋ ಬಾಣಸಿಗ ಲೋಕದೊ-
ಳ್ಭ್ಬೂಷಣಕೆ ಬೆದರೆಯೆಂದಂ ಮುರದ್ವಂಸಿ ಮಿಗೆ ಸರಸದೋಳ್ವವನಜನನು ||
(ಸಂಧಿ ೨, ಪದ್ಯ ೬೦)
ಕೃಷ್ಣ ಭೀಮನನ್ನು ಕೆಣಕುವಾಗ ಅವನ ಜೀವನದ ಒಂದೊಂದು ಮೈಲಿಗಲ್ಲುಗಳನ್ನೂ ಅಲುಗಾಡಿಸುತ್ತಿದ್ದಾನೆ. ಒಂದು ವೇಳೆ ಭೀಮ ಮರೆತಿರಬಹುದಾದರೂ ಕೃಷ್ಣ ಮಾತ್ರ ಮರೆಯುವ ಸಾಧ್ಯತೆಯೇ ಇಲ್ಲ. ಹೀಗಾಗಿ ಭೀಮನನ್ನು ಛೇಡಿಸುವಾಗ ಅವನ ಬದುಕಿನ ಒಂದೊಂದು ಹೆಜ್ಜೆಯನ್ನೇ ನೆನಪುಮಾಡುತ್ತಾ ಶ್ರೀಕೃಷ್ಣನು ಹೇಳುತ್ತಾನೆ: `ಅಯ್ಯಾ ವೃಕೋದರ, ನೀನು ಭಾಷೆಯನ್ನು ಕೊಡು ತಪ್ಪೇನಿಲ್ಲ. ಭಾಷೆಯನ್ನು ಕೊಟ್ಟು ನೀನು ಅದಕ್ಕೆ ತಪ್ಪುವವನಲ್ಲ ಅನ್ನುವುದೂ ನನಗೆ ಗೊತ್ತು. ಇದನ್ನು ನಿನ್ನ ಹಿಂದಿನ ನಿದರ್ಶನಗಳಿಂದ ಸಾಬೀತುಪಡಿಸಿರುವೆ. ಆದರೆ, ನೀನು ಭಂಡ, ಪ್ರತಿಜ್ಞಾಪೂರಣವು ನಿನಗೆ ಭೂಷಣವೇ? ಆದರೆ ನಿನ್ನ ವಿಶೇಷತೆಯನ್ನು ನಾನು ಏನೆಂದು ವರ್ಣಿಸಲಿ. ಅಂದು ನಡೆದ ಘೋರಯುದ್ಧದ ಕಾಲದಲ್ಲಿ ನೀನು ರಕ್ಕಸರಂತೆ ವರ್ತಿಸಿ ಹೇಸದೇ ರಕ್ತಪಾನ ಮಾಡಿದೆ. ಇದು ಪೈಶಾಚಿಕ ವರ್ತನೆಯಲ್ಲದೆ ನಿನ್ನ ಸಾಹಸಕ್ಕೆ ಭೂಷಣವೇ? ಮಾನವ ರಕ್ತದಿಂದ ನಿನ್ನ ದೇಹವನ್ನು ಪೋಷಿಸಿದೆ. ಹೋಗಲಿ ಬಿಡು, ಎಲವೋ ಬಾಣಸಿಗ, ಕೇವಲ ಒಬ್ಬ ಅಡಿಗೆಯವನಾಗಿ ವಿರಾಟನಗರಿಯಲ್ಲಿ ಸ್ತ್ರೀಸಹಜವಾದ ಕೆಲಸ ಮಾಡಿ ಲೋಕದ ಅಪವಾದಕ್ಕೆ ಹೆದರದೆ ದಿನ ಕಳೆದೆ. ಇದು ನಿನಗೆ ಭೂಷಣವೇ? ನಾನಂತೂ ಅರಿಯೆನು, ಸಾಕು ಸಾಕು’ ಎಂದು ಸರಸವಾದ ಮಾತುಗಳಿಂದ ಚೆನ್ನಾಗಿ ಭೀಮನನ್ನು ಜರೆದು ಗೇಲಿಮಾಡಿ ಮಾತಾಡಿದನು ಮುರಾರಿ.
ಪಾಂಡವರು ಅಜ್ಞಾತವಾಸದಲ್ಲಿ ಇದ್ದಾಗ ಭೀಮ ಅಡುಗೆಭಟ್ಟನಾಗಿ ಸೇರಿಕೊಂಡಿರಲಿಲ್ಲವೇ. ಹೀಗಾಗಿ ಭೀಮನನ್ನು ಕೃಷ್ಣ ಎಲೋ ಅಡುಗೆಯವನೇ ಎನ್ನುತ್ತಾನೆ. ಭೀಮನು ಎಂಥಾ ಪರಾಕ್ರಮಿ, ಪಾಂಡವರಲ್ಲೇ ಅವನಷ್ಟು ಬಲಶಾಲಿ ಇನ್ನೊಬ್ಬನಿಲ್ಲ. ಅಂಥಾದ್ದರಲ್ಲಿ ಅಡುಗೆಮನೆಯಲ್ಲಿ ಸೇರಿಕೊಂಡು ಕೈಯಲ್ಲಿ ಸೌಟು ಹಿಡಿದು ಅಡುಗೆಮಾಡಿಕೊಂಡು ಇರುವುದು ಎಂದರೆ ಎಂತಹ ಅವಮಾನಕರಪ್ರಸಂಗ ಅಂತ ಕೃಷ್ಣ ಭೀಮನನ್ನು ಕೆಣಕುತ್ತಾನೆ. ಯಾರಿಗೇ ಆಗಲಿ ಅವರ ಬಲಹೀನತೆಯನ್ನು ಕೆದಕಿ, ಕೆಣಕಿ ಮಾತಾಡಿದರೆ ಸಿಟ್ಟು ಬರುತ್ತದೆ. ಆದರೆ ಸಿಟ್ಟು ಮಾಡಿಕೊಂಡು ಸುಮ್ಮನಿರುವ ಜಾಯಮಾನದವನಲ್ಲ ಭೀಮ. ಅವನು ದೈಹಿಕವಾಗಿ ಎಷ್ಟು ಬಲಶಾಲಿಯೋ ಅಷ್ಟೇ ಬುದ್ಧಿಶಾಲಿಯೂ ಆಗಿದ್ದ. ಅವನಿಗೆ ಕೃಷ್ಣನ ಎಲ್ಲಾ ಲೀಲೆಗಳೂ ಗೊತ್ತು. ಹಾಗಿರುವಾಗ ಭೀಮ ಕೃಷ್ಣನನ್ನು ಕೆಣಕಲು ತಿಣುಕಾಡಬೇಕಾಗಿರಲಿಲ್ಲ. ಅದಕ್ಕೆ ಈಗ ಭೀಮ ಇನ್ನಷ್ಟು ಪರಿಹಾಸ್ಯವನ್ನು ಬೆರೆಸಿ ಕೃಷ್ಣನನ್ನು ಛೇಡಿಸುವುದು ಚೆನ್ನಾಗಿದೆ:
ಶಿವಾ ಶಿವಾ ದೂಷಣಕೆ ಬೆದರಿ ಮಾಡಿದಿರಿ ಕೈ-
ತವ ಜಾರವಿದ್ಯೆಗಳ ಹೆಣ್ಣಾಗಿ ಬಾಣಸದ
ಪವಣರಿದುದಿಲ್ಲಲಾ ಹೇವರಿಸದ ಅಸುರೆಯ ಅಸುವೀಂಟಿದವರಾರೋ ಬಳಿಕ |
ಅವನಿಪತಿಗಳ ಕೂಡೆ ಗೋವಳರ್ಗೆ ಯಾವ ಮೇ-
ಳವವಿನ್ನು ನುಡಿಯಲಂಜುವೆವೆಮ್ಮ ನಿಜಭಾಷಿ-
ತವನು ಉಳಿಯೆವಶ್ಚಮಂತಹೆವು ಕ್ರತುವಂ ನಡೆಸಿ ಮೇಣುಳುಹಿ ನೀವೆಂದನು ||
(ಸಂಧಿ, ೨ ಪದ್ಯ ೬೧)
ಭೀಮನು ಕೃಷ್ಣನಿಗೆ ಮಾರುತ್ತರವನ್ನು ನೀಡುತ್ತಾ ಶಿವಾಶಿವಾ, ನಿಂದೆಗೆ ನೀವು ಹೆದರುವವರಲ್ಲವೇ? ಅದಕ್ಕೇ ನೀವು ಮೋಸ, ಜಾರತನಗಳನ್ನು ಮಾಡಿದಿರಿ? ಗೋಪಾಲರನ್ನು ಕೂಡಿಕೊಂಡು ಮನೆಮನೆಗಳಿಗೆ ನುಗ್ಗಿ ಹಾಲು ಮತ್ತು ಬೆಣ್ಣೆಗಳನ್ನು ಕದ್ದು ಸಂದುಗೊಂದುಗಳಲ್ಲಿ ಅಡಗಿ ಅದನ್ನು ಚೆನ್ನಾಗಿ ಸವಿದಿರಿ. ಅಲ್ಲದೇ ಸಾಲದುದಕ್ಕೆ ಗೋಪಿಕಾಸ್ತ್ರೀಯರನ್ನು ಸೇರಿ ರಾಸಕ್ರೀಡೆಯಾಡಿದಿರಿ, ಗೋಪಿಕಾಸ್ತ್ರೀಯರನ್ನು ಕೂಡಿದಿರಿ. ನನ್ನನ್ನು ಹೆಣ್ಣಿನ ಹಾಗೆ ಅಡುಗೆಮನೆ ಸೇರಿಕೊಂಡು ಅಡುಗೆ ಮಾಡಿಕೊಂಡಿದ್ದೆ ಎನ್ನುವಿಯಲ್ಲಾ, ನೀನು ಕೂಡಾ ಈ ಹಿಂದೆ ಹೆಣ್ಣಿನ ರೂಪ ಧರಿಸಿ ಮೋಹಿನಿಯೆಂಬ ಅಭಿದಾನದಿಂದ ದೇವತೆಗಳಿಗೂ ರಕ್ಕಸರಿಗೂ ಅಮೃತವನ್ನು ಉಣಬಡಿಸಿದ್ದನ್ನು ಮರೆತುಬಿಟ್ಟೆಯಾ. ಹೀಗಾಗಿ ಹೆಣ್ಣುಜನ್ಮ ತಳೆದ ನೀವು ಸಹ ಸ್ತ್ರೀಸಹಜವಾದ ಅಡುಗೆ ಕೆಲಸವನ್ನು ನನಗಿಂತಲೂ ಚೆನ್ನಾಗಿ ತಿಳಿದಿರಬೇಕು. (ಶ್ರೀಕೃಷ್ಣನು ಮೋಹಿನಿ ಅವತಾರ ತಾಳಿದ್ದಾಗ ಅಡುಗೆಯನ್ನೂ ಮಾಡುತ್ತಿದ್ದ ಅಂತ ಕುಚೋದ್ಯದಿಂದ ಹೇಳುವುದು. ಭೀಮ ವನವಾಸದಲ್ಲಿ ವಿರಾಟರಾಯನ ರಾಜ್ಯದಲ್ಲಿ ಅಡುಗೆಯವನಾಗಿದ್ದ ಅಂತ ಕೃಷ್ಣ ಹಂಗಿಸಿದರೆ, ಮೋಹಿನಿ ಅವತಾರದಲ್ಲಿ ಹೆಣ್ಣಾಗಿ ನೀನೂ ಅಡುಗೆ ಮಾಡಲಿಲ್ಲವೇ ಎನ್ನುತ್ತಾನೆ ಭೀಮ.) ನಿಮ್ಮಲ್ಲಿ ನಯ ನೀತಿಗಳಿದ್ದರೆ ಹಾಲು ಕುಡಿಸಲು ಬಂದ ಪೂತನಿಯ ಪ್ರಾಣವನ್ನು ಸ್ತ್ರೀಯೆಂಬ ಕರುಣೆಯೂ ಇಲ್ಲದೆ ಹೀರಿದಿರಿ. ಅದಿರಲಿ ನಾವು ಚಂದ್ರವಂಶದವರು, ರಾಜವಂಶದವರು. ಅವನಿಪತಿಗಳಾದ ನಮಗೂ ಗೋವಳದ ನಿಮಗೂ ಸರಿಸಾಟಿಯೇ. ಇನ್ನು ಸಲಿಗೆಯಿಂದ ಮಾತನಾಡಲು ನಾನು ಭಯಪಡುವೆನು. ನೀವು ಅಶ್ವಮೇಧಯಾಗ ಮಾಡಿ, ಇಲ್ಲವೇ ಕೈ ಬಿಡಿ, ನಾನು ಮಾತ್ರ ನನ್ನ ಪ್ರತಿಜ್ಞೆಯಂತೆ ನಡೆದುಕೊಳ್ಳುವೆನು ಎನ್ನುವ ಚಾಟಿಯ ಮಾತು. ಕಡೆಗೆ ಭೀಮ ಇನ್ನು ಮುಂದೆ ನಿನ್ನ ವಿಚಾರ ಹೇಳಲು ನನಗೇ ನಾಚಿಕೆಯಾಗುತ್ತದೆ ಎನ್ನುತ್ತಾನೆ.
ಮಾತಿಗೆ ಪ್ರತಿಮಾತು ಎನ್ನುವುದು ಇದನ್ನೇ. ಚಾಟೂಕ್ತಿಗಳು ಭೀಮನ ಬಾಯಿಂದ ಸರಾಗವಾಗಿ ಬರುತ್ತವೆ. ಕೃಷ್ಣ ತನ್ನ ಇಡೀ ಜೀವನದಲ್ಲಿ ಹೆಣ್ಣಿನೊಂದಿಗೆ ಆಡಿದ್ದು ಕಡಮೆಯೇನಲ್ಲ. ಅದಕ್ಕೇ ಕೃಷ್ಣನ ಬದುಕಿನ ಎಲ್ಲ ಘಟ್ಟಗಳಲ್ಲಿ ಅವನು ಹೆಣ್ಣಿನೊಂದಿಗೆ ಆಡಿದ ಆಟಗಳನ್ನು ಎಳೆಎಳೆಯಾಗಿ ಬಿಡಿಸಿಡುತ್ತಾನೆ. ಇಡೀ ಕಾವ್ಯದಲ್ಲಿ ಈ ಪ್ರಸಂಗ ತುಂಬಾ ಮುದಕೊಡುತ್ತದೆ. ಭೀಮ ಮತ್ತು ಕೃಷ್ಣ ಒಬ್ಬರಿಗೊಬ್ಬರು ಜಗಳ ಆಡಿಕೊಂಡರು ಎನಿಸುವುದೇ ಇಲ್ಲ. ಜೈಮಿನಿ ಭಾರತಕ್ಕೊಂದು ಮೆರುಗು ತಂದುಕೊಟ್ಟಿದೆ ಈ ಪ್ರಸಂಗದ ಸಂಗತಿಗಳು.