“ಇನ್ನು ಮೇಲೆ ನನ್ನ ಪಾರ್ಟ್ನರ್ ಅದ ನಿನ್ನನ್ನು ಬರೇ ಲೂಸಿ ಎಂದೇ ಕರೆಯಲಾಗುತ್ತದೆ” ಎಂದು ಮತ್ತೆ ಅವಳಿಗೆ ಪ್ರತ್ಯುತ್ತರ ನೀಡುವ ಅವಕಾಶ ಕೊಡದೆ ಮುಂದುವರಿಸಿದೆ….
ಇಲ್ಲಿಯವರೆಗೆ…..
ಮೃದುಲಾಳ ತಂದೆ-ತಾಯಿಯನ್ನು ಪತ್ತೆಹಚ್ಚುವ ಸಲುವಾಗಿ ಡಿಟೆಕ್ಟಿವ್ ವಿಜಯ್ ಪತ್ರಗಳ ಫೈಲ್ಗಳೊಂದಿಗೆ ರಿಜಿಸ್ಟ್ರಾರ್ ಆಫೀಸ್ಗೆ ತೆರಳುವಾಗ ಜಾನಿ ಹಿಂಬಾಲಿಸುತ್ತಾನೆ. ಇದನ್ನು ಗಮನಿಸಿದ ವಿಜಯ್, ಜಾನಿಗೆ ತನ್ನನ್ನು ಹಿಂಬಾಲಿಸದಂತೆ ಎಚ್ಚರಿಸಿದ.
ದತ್ತುಕೊಟ್ಟವರ ಲಿಸ್ಟ್ನಲ್ಲಿದ್ದ ಶರ್ಮಿಳಾ ವಾಸುದೇವನ್ ಮನೆಗೆ ಹೋದ ವಿಜಯ್ಗೆ ಹುಚ್ಚಾಸ್ಪತ್ರೆಯಲ್ಲಿದ್ದ ಸೂಲಗಿತ್ತಿ ಸುಬ್ಬಮ್ಮನಿಂದ ಒಗಟಿನ ಉತ್ತರ ದೊರೆಯುತ್ತದೆ. ಅನಂತರ ಅದೇ ಹಾದಿಯಲ್ಲಿದ್ದ ಜಾನಿ ಮನೆಗೆ ತೆರಳಿ ತಡಕಾಡಿದಾಗ ಸಿಕ್ಕಿದ ಫೈಲ್ನಲ್ಲಿ ರಿಜಿಸ್ಟ್ರಾರ್ ಆಫೀಸಿನಿಂದ ಕದ್ದುತಂದಿದ್ದ ದತ್ತಕದ ರೆಕಾರ್ಡ್ಸ್ ಸಿಕ್ಕಿತು. ಇದೇ ಖುಷಿಯಲ್ಲಿ ಮನೆಯಿಂದ ಹೊರಬಂದಾಗ ವಿಜಯ್ನ ತಲೆಯ ಹಿಂಭಾಗಕ್ಕೆ ಯಾರೋ ಬಲವಾಗಿ ಹೊಡೆದರು…..
ನನಗೆ ಎಚ್ಚರವಾದಾಗ ಜಾನಿ ಮನೆಯ ಬಾಗಿಲಿನಲ್ಲೇ ಬಿದ್ದಿದ್ದೆ. ತಲೆಯಲ್ಲಿ ಬಾಂಬ್ ಸಿಡಿದಂತೆ ನೋಯುತ್ತಿತ್ತು. ಮುಖ ಕಿವಿಚಿಕೊಂಡಿದ್ದೆ. ಮುಟ್ಟಿನೋಡಿದರೆ ತಲೆಯ ಹಿಂದೆ ಬೋರೆ ಬಂದಿತ್ತು. ತೂರಾಡುತ್ತಾ ಎದ್ದು ಅತ್ತಿತ್ತ ನೋಡಿದೆ. ಹತ್ತು ನಿಮಿಷಗಳೇ ಕಳೆದಿರಬಹುದು. ಯಾರೂ ಇಲ್ಲ. ಗಾಬರಿಯಿಂದ ನನ್ನ ಜೇಬು ಮುಟ್ಟಿ ನೋಡಿದೆ. ಆ ಎಲ್ಲ ಪತ್ರಗಳು ಅಲ್ಲೇ ಇವೆ.
ನನ್ನ ಮೇಲೆ ದಾಳಿ ಮಾಡಿದವನು ನನ್ನನ್ನೇ ಕತ್ತಲಲ್ಲಿ ಜಾನಿ ಎಂದು ತಪ್ಪು ತಿಳಿದಿರಬಹುದೆಂದು ಅರಿವಾಯಿತು. ಅವನಿಗೆ ಈ ಪತ್ರಗಳು ಬೇಕಿರಲಿಲ್ಲವೆ? ಏಕೆ? ಅವನು ಜಾನಿಯ ವೈರಿಯೆ? ಅದಕ್ಕೇ, ತನ್ನ ತಪ್ಪಿನ ಅರಿವಾಗಿ ನನ್ನನ್ನು ಬಿಟ್ಟುಹೋದನೆ? ಯಾರು?
ಸಿಡಿಯುವ ತಲೆಯಲ್ಲೇ ನನ್ನ ಕಾರನ್ನು ಕೆಟ್ಟದಾಗಿ ಗೇರ್ ಕದಲಿಸುತ್ತಾ ವಡ್ಡುವಡ್ಡಾಗಿ ಡ್ರೈವ್ ಮಾಡುತ್ತಾ ನನ್ನ ಲಾಡ್ಜಿಗೆ ಬಂದೆ. ಸಂಜೆ ಏಳು ಗಂಟೆಯಾಗುತ್ತಿತ್ತು. ಬೆಡ್ಮೇಲೆ ಕುಸಿದು ಕುಳಿತು ಬಾಯಿಗೆ ಎರಡುಸಾರಿ ಡಾನ್ ಹಾಕಿಕೊಂಡೆ. ಕುಳಿತಲ್ಲೇ ಲೂಸಿಯಾ ಆಫೀಸಿಗೆ ಫೋನ್ ಮಾಡಿದೆ.
ಅವಳೇ ಮೊದಲಿಗೆ “ಹಾಯ್ ವಿಜಯ್, ನಾನಿಂದು ಆಫೀಸಿಗೆ ಲೇಟ್ ಬಂದೆ” ಎಂದಳು.
“ಗೊತ್ತಾಯಿತು” ಎಂದೆ ಸ್ವಲ್ಪ ಗಂಭೀರವಾಗಿ; ಅವಳಿಗೆ ಅರಿವಾಗಿರಬೇಕು ನನ್ನ ಮೂಡ್ ಬಗ್ಗೆ.
“ಯಾಕೆ ಏನಾಯಿತು? ಏನಾದರೂ ಕಂಡುಹಿಡಿದ್ರಾ?” ಎಂದಳು ಆಸಕ್ತಿಯಿಂದ.
“ನಿಮಗೆಲ್ಲಾ ಗೊತ್ತಿದ್ದ ವಿಷಯವನ್ನೇ ಮತ್ತೆ ಕಂಡುಹಿಡಿಯಲು ನನ್ನನ್ನು ಬಾಡಿಗೆಗೆ ತೆಗೆದುಕೊಳ್ಳುವ ಉದ್ದೇಶವಾದರೂ ಏನಿತ್ತು, ಮಿಸ್. ಲೂಸಿಯಾ?” ಎಂದೆ ಕುಪಿತನಾಗಿ. ಇವರ ನಾಟಕಕ್ಕೂ ಮಿತಿ ಬೇಡವೆ?
“ಏನು ಹೇಳುತ್ತಿದ್ದೀರಿ ನೀವು? ನನಗೇನೂ ಅರ್ಥವಾಗುತ್ತಿಲ್ಲ, ಸರಿಯಾಗಿ ಹೇಳಿ” ಎಂದಳು ರಂಪ ಮಾಡುವ ಮಗುವಿಗೆ ತಾಯಿ ಮನವೊಲಿಸುವಂತೆ.
ಉಫ್….. ಇವಳಿಗೆ ಗೊತ್ತುಮಾಡಿಸಬೇಕಂತೆ…. ಅಪರೂಪಕ್ಕೆ ಬ್ಯಾಗಿನಿಂದ ತೆಗೆದು ಒಂದು ಸಿಗರೇಟ್ ಹಚ್ಚಿಯೇ ಬಿಟ್ಟೆ. ವಿಕ್ರಮ್ ಬೇಡ ಎಂದು ಹೇಳಿದ್ದರೂ ಕತ್ತೆ ಬಾಲ!
ನಿಧಾನವಾಗಿ ಅವಳಿಗೆ ಬೆಳಗ್ಗಿನಿಂದ ನಡೆದುದರ ವರದಿ ನೀಡಿದೆ. ನಾನು ಭೇಟಿಮಾಡಿದ ವ್ಯಕ್ತಿಗಳು, ಸರಕಾರಿ ಆಫೀಸಿನಲ್ಲಿ ಕಳೆದುಹೋದ ಮುಖ್ಯವಾದ ಕಡತದ ಪತ್ರಗಳು, ಆ ಹುಚ್ಚು ಹಿಡಿದಿದೆ ಎನ್ನಲಾದ ಸೂಲಗಿತ್ತಿಯು ಬರೆದ ಒಗಟಿನ ಮಾತು, ಜಾನಿಯ ರೂಮಿನಲ್ಲಿ ಸಿಕ್ಕ ಶಾಕ್ ಆಗುವಂಥ ದಾಖಲೆ ಪತ್ರಗಳು, ಮೃದುಲಾ ಫರ್ನಾಂಡೆಸ್ ಜತೆಗೆ ಜಾನಿಯ ವ್ಯವಹಾರ, ಕೊನೆಗೆ ಯಾರೋ ನನ್ನ ತಲೆಗೆ ಬಡಿದು ಬೀಳಿಸಿದ್ದು…..
“ಈಗ ನಮ್ಮ ಕೇಸ್ ಓಪನ್ ಆಗಿ ಹರಿದು ಬಿದ್ದಿದೆ. ನನಗೆ ಮಾತ್ರ ಯಾಕೋ ಮೋಸ ಮಾಡಿದಿರಿ. ಇನ್ನು ನಾನು ವಾಪಸ್ ಹೋಗ್ತೇನೆ. ಕೆಲಸ ಮಾಡಲಾರೆ” ಎಂದೆ ಕೊನೆಗೆ ಮುನಿಸಿನಿಂದ.
“ತಾಳಿ, ತಾಳಿ, ವಿಜಯ್…. ಮೊದಲನೆಯದಾಗಿ ನಿಮ್ಮ ಮೇಲೆ ದಾಳಿಯಾಗಿ ನಿಮಗೆ ನೋವಾಗಿದ್ದಕ್ಕೆ ನನಗೂ ಬಹಳ ನೋವು, ಕೋಪ ಎರಡೂ ಆಗಿದೆ. ಇದ್ಯಾಕೋ ಸಿವಿಲ್ಕೇಸಿನಿಂದ ಕ್ರಿಮಿನಲ್ಕೇಸಿಗೆ ತಿರುಗಿದೆ. ಎರಡನೆಯದಾಗಿ ನಮ್ಮ ಫರ್ನಾಂಡೆಸ್ ಆಫೀಸಿನಿಂದ ಜಾನಿಗೆ ಬ್ಲ್ಯಾಕ್ಮೇಲ್ಗೆ ದುಡ್ದು ತೆತ್ತಿದ್ದಾಗಲಿ ನನಗಂತು ಖಂಡಿತ ಗೊತ್ತಿರಲಿಲ್ಲ. ಅವನ ಸುಳಿವೇ ನನಗಿರಲಿಲ್ಲ…. ಅಂದರೆ, ನಮ್ಮ ಆಫೀಸಿನ ಕಡೆಯಿಂದ, ಅದೂ ನನ್ನ ಗಾಡ್ ಫಾದರ್ ಫರ್ನಾಂಡೆಸ್ರಿಂದಲೇ ನನಗೆ ಮೋಸವಾಗಿದೆ ಅಂತಾಯಿತು, ಛೆ……” ಎಂದು ನಿಲ್ಲಿಸಿದಳು ನೊಂದು.
ನನ್ನ ಕಡೆ ಮೌನ.
“ನನ್ನನ್ನು ನಂಬುತ್ತೀರಿ ತಾನೆ, ವಿಜಯ್? ನಿಮ್ಮನ್ನು ಯಾಮಾರಿಸುವಷ್ಟು ನಾನು ಕೆಟ್ಟವಳೇ? ನಿಮಗೆ ಏಟು ಬಿದ್ದುದಕ್ಕೂ ನಾನೇ ಕಾರಣ ಎನ್ನುತ್ತೀರಾ?” ಎಂದು ಲೂಸಿಯಾ ಖಡಾಖಂಡಿತವಾಗಿ ಕೇಳಿದಾಗ, ನಾನು ಸ್ವಲ್ಪ ಕೋಪ ನುಂಗಿಕೊಂಡು, “ನೋ, ನಿಮ್ಮನ್ನು ನೋಡಿದರೆ ಹಾಗನಿಸುವುದಿಲ್ಲ…..” ಎಂದು ರಾಗವೆಳೆದು ನಿಲ್ಲಿಸಿದೆ.
“ಓಹೋ, ನೋಡಿದ್ದೆಲ್ಲ್ಲ ನಂಬಬಾರದು ಎಂದು ತಾನೆ? ಸರಿ. ನಿಮ್ಮ ವಿಷಯಕ್ಕೇ ಬರೋಣ. ನೀವು ಬಂದ ಕೆಲಸ ಹೇಗೆ ಮುಗಿಯಿತು ಅನ್ನುತ್ತೀರಿ? ಮೃದುಲಾ ಕಡೆ ನೀವು ಅಡ್ವಾನ್ಸ್ ಒಂದು ಲಕ್ಷ ರೂ. ಪಡೆದದ್ದು, ಮುಖ್ಯವಾಗಿ ಆಕೆಯ ಹೆತ್ತ ತಂದೆ-ತಾಯಿಯನ್ನು ಇಲ್ಲಿ ಪತ್ತೆಹಚ್ಚಲು ತಾನೆ?…. ಈಗ ಜಾನಿ ರೂಮಿನಲ್ಲಿ ಸಿಕ್ಕ ಮೇ ತಿಂಗಳ ಮಕ್ಕಳನ್ನು ದತ್ತುಕೊಟ್ಟವರ-ಪಡೆದವರ ಕುಲ, ಗೋತ್ರವೆಲ್ಲ ನಿಮ್ಮ ಕೈಯಲ್ಲೇ ಇದೆಯಲ್ಲ? ಅದನ್ನಾದರೂ ಮಾಡಲ್ಲವೇಕೆ?” ಎಂದಳು ಲೂಸಿಯಾ.
ಸ್ವಲ್ಪ ತಬ್ಬಿಬ್ಬಾದೆ. ಪರವಾಗಿಲ್ಲ, ಈ ಲಾಯರ್ ಚುರುಕಾಗಿಯೇ ಇದ್ದಾಳೆ.
“ಯೋಚಿಸುತ್ತೇನೆ” ಎಂದು ಜೇಬಿನಲ್ಲಿ ತುರುಕಿದ್ದ ಆ ರೆಕಾರ್ಡ್ಸ್ ಪತ್ರಗಳನ್ನು ಹೊರತೆಗೆದೆ.
“ಸುಮ್ಮನೆ ಒಬ್ಬರೇ ಯೋಚಿಸಬೇಡಿ, ನನ್ನ ಆಫೀಸಿಗೆ ಬನ್ನಿ, ನಾನು ನಿಮಗೆ ಸಾಥ್ ಕೊಡುತ್ತೇನೆ. ಒಟ್ಟಿಗೆ ಕಂಡು ಹಿಡಿಯೋಣ. ಆಗಲಾದ್ರೂ ನಿಮಗೆ ನನ್ನಮೇಲೆ ವಿಶ್ವಾಸ ಬರಬಹುದು” ಎಂದಳು ಸ್ವಲ್ಪ ನಿರಾಸೆಯಿಂದ.
ನನಗೆ ಮತ್ತೆ ವಿಶ್ವಾಸ, ಉತ್ಸಾಹವನ್ನು ಆ ಮಾತಿನಲ್ಲಿ ತುಂಬಿಕಳಿಸಿದ್ದಳು. ಗುಡ್ ಗರ್ಲ್…..
“ಇದೋ ನಿನ್ನ ಬಾಗಿಲನ್ನು ತಟ್ಟುವುದರ ಸದ್ದು ಕೇಳಿಸಿತೆ? ಅದು ನಾನೇ ಬಂದೆ ಅಂದುಕೋ” ಎಂದು ಗಡಿಬಿಡಿಯಿಂದ ಅವಳ ಆಫೀಸಿಗೆ ಒಡನೆಯೇ ಧಾವಿಸಿದೆ.
***
ತನ್ನ ಟೇಬಲ್ಲ್ಯಾಂಪ್ ಬೆಳಕಿನಲ್ಲಿ ಲೂಸಿಯಾಳ ಕಂಗಳು ನಾನು ತಂದ ಕಾಗದ ಪತ್ರಗಳನ್ನೆಲ್ಲ ಕೂಲಂಕಷವಾಗಿ ವ್ಯವಸ್ಥಿತವಾಗಿ ಪರಿಶೀಲಿಸುತ್ತಿವೆ. ಎರಡು ಗ್ಲಾಸ್ ಕಾಫಿ, ಬಿಸ್ಕೆಟ್ಸ್ ಎಲ್ಲ ಕೊಟ್ಟು ಉಪಚರಿಸಿ, ಸಾಂತ್ವನ ಹೇಳಿ ಮುಂದಿನ ದಾರಿಯ ಜವಾಬ್ದಾರಿಯನ್ನು ಈಗ ತಾನೇ ಹೊತ್ತಿದ್ದಾಳೆ.
ನಂಬಲರ್ಹ ವಿಶ್ವಾಸಿ, ಆಕರ್ಷಕ ಯುವತಿ ಇವಳು ಅನ್ನಿಸಿತು. ಈ ಸ್ನೇಹ ಮುಂದುವರಿಯುವಂಥದ್ದೆ? ಮನ ಉತ್ತರ ಹುಡುಕಿತು.
ಲೂಸಿಯಾ ತನ್ನ ಸಮಯವನ್ನು ತೆಗೆದುಕೊಂಡು ಕೊನೆಗೆ, “ಇದರಲ್ಲಿ ನಾಲ್ಕು ಹೆಸರುಗಳಿವೆ, ಮೇ ತಿಂಗಳಲ್ಲಿ ದತ್ತು ಕೊಟ್ಟ ತಂದೆ-ತಾಯಂದಿರು! ನಾವು ಅರ್ಧರ್ಧ ಹಂಚಿಕೊಳ್ಳೋಣ. ನೀವು ಇಬ್ಬರನ್ನು ಖುದ್ದಾಗಿ ಪತ್ತೆಹಚ್ಚಿ, ಭೇಟಿಮಾಡಿ, ಅವರೇ ಹೌದಾ ಅಲ್ವಾ ಎಂದು ಕಂಡುಹಿಡಿಯರಿ ಎಂದಳು.
“ಈ ನಾಲ್ವರಲ್ಲಿ ಯಾರಾದರೂ ಗೊತ್ತೆ ನಿನಗೆ, ಈ ಊರಿನಲ್ಲಿ?” ಎಂದು ಚೂಯಿಂಗ್ಗಮ್ ಬಾಯಿಗೆ ಹಾಕಿಕೊಂಡೆ.
ಲೂಸಿಯಾ ಹೌದೆಂದು ತಲೆಯಲ್ಲಾಡಿಸಿದಳು. `ಹಾ…. ನನಗೆ ಇದರಲ್ಲಿ ನಂಬೂದರಿ ಎನ್ನುವವರ ಮಗಳು ರಚನಾ ಅಂತಾ, ಇಲ್ಲಿನ ಪೊಲೀಸ್ ಕಮೀಶನರರ ಪತ್ನಿ. ಈ ಪತ್ರಗಳಲ್ಲಿ ನಂಬೂದರಿ ಮನೆಯವರು ಹೆಣ್ಣುಮಗು ದತ್ತು ಕೊಟ್ಟರು ಅಂತಿದೆ. ಆದರೆ ಯಾಕೋ ಇಲ್ಲಿ ಹೊಸಮನಿಯವರಿಗೆ ಆ ಮಗುವನ್ನು ದತ್ತು ಕೊಟ್ಟರೋ ಇಲ್ಲವೋ ಎಂಬ ಪುರಾವೆಯಿಲ್ಲ. ಈ ರಚನಾ ಮನೆಯವರೇ ಆಗಿದ್ದರೆ ಪ್ರಾಯಶಃ ಈ ವಿಷಯ ಅವರಿಗೆ ಗೊತ್ತಿರಬಹುದು. ಜತೆಗೆ ಆ ಮುದಿ ಸೂಲಗಿತ್ತಿ ಸುಬ್ಬಮ್ಮ ಹೇಳಿದ ನಂಬೂದರಿಯ ಒಗಟು ಇದಕ್ಕೇ ಬೆರಳುತೋರಿಸುತ್ತದೆ. ಅವಳು ಅಷ್ಟು ಹುಚ್ಚಿ ಇರಲಾರಳು. ಇದನ್ನು ಮೊದಲು ನೋಡಿ….. ಇನ್ನೊಂದು ಕೇಸ್ ಕರುಣಾಕರನ್ ದಂಪತಿಗಳದ್ದಂತೆ…. ಅವರ್ಯಾರೋ ತಿಳಿಯದು….. ಹುಡುಕಿನೋಡಿ.
“ಓ.ಕೆ. ಇನ್ನು ಮಿಕ್ಕ ಎರಡನ್ನು ನೀನು ವಿಚಾರಿಸು, ನಾನು ಇವೆರಡನ್ನೂ ಕೈಗೆತ್ತಿಕೊಳ್ಳುತ್ತೇನೆ” ಎಂದೆ.
“ಅಬ್ಬಾ, ಸುಸ್ತಾಯಿತಪ್ಪ ಎಂದು ತನ್ನ ಕಪ್ನಲ್ಲಿ ತಣ್ಣಗಾಗಿದ್ದ ಕಾಫಿಯನ್ನು ಒಂದೇ ಗುಟುಕಿಗೆ ನುಂಗಿ, ತಲೆ ಕೂದಲಲ್ಲಿ ಕೈಯಾಡಿಸಿದಳು. ಅಂಥದರಲ್ಲೂ ಚೆನ್ನಾಗಿ ಫ್ರೆಶ್ ಆಗಿಯೇ ಕಾಣುತ್ತಾಳೆ!
“ಹೇಗೂ ನಾಳೆ ಬೆಳಗ್ಗೆ ನಾವು ಮೃದುಲಾ ಮತ್ತು ಫರ್ನಾಂಡೆಸ್ ಜತೆ ಮಾತಾಡಿ, ನಮ್ಮ ಪ್ರತಿಭಟನೆ ಹೇಳೋಣ. ಯಾಕೆ ಅಂತ ಅವರು ಹೇಳುವವರೆಗೂ ಬಿಡುವುದು ಬೇಡ. ನನಗೆ ಇಲ್ಲಿ ವಿಡಿಯೋ ಕಾನ್ಫರೆನ್ಸ್ ಕಾಲ್ ಮಾಡುವ ಸೌಕರ್ಯ ಇದೆ. ಬೆಳಗ್ಗೆ ಬೇಗ ಬಂದು ಬಿಡಿ ಇಲ್ಲಿಗೆ” ಎಂದು ಫೈಲ್ಸ್ ಮುಚ್ಚಿಟ್ಟಳು.
ನನ್ನ ಮುಖ ನೋಡುತ್ತಾ “ಈಗ ತಲೆ ತುಂಬಾ ನೋಯುತ್ತಿದೆಯೆ?” ಎಂದಳು ಕಳಕಳಿಯ ಕಂಗಳಿಂದ.
“ಹೂಂ, ಆದರೆ ಬರೇ ಅವನು ಹೊಡೆದ ಏಟಿನಿಂದಲೇ ಅಂತಲ್ಲ. ನನಗೆ ಹೆಚ್ಚು ಯೋಚಿಸಿದರೂ ತಲೆ ನೋವು ಬರುತ್ತೆ, ಸ್ವಲ್ಪ ಬುದ್ಧಿ ಕಡಮೆಯಲ್ಲವೆ?” ಎಂದು ಹುಳ್ಳಗೆ ನಕ್ಕೆ.
ಮುಂದಕ್ಕೆ ಕೈಚಾಚಿ ನನ್ನ ಕೈತಟ್ಟಿ “ಎಲ್ಲ ಕಂಡುಹಿಡಿಯುವಿರಂತೆ, ಈಗಿನ ಸಮಸ್ಯೆ ನೀವೇ ಪರಿಹರಿಸುತ್ತೀರಿ, ನೋಡಿ….. ನಾನಿಲ್ಲವೆ?” ಎಂದಳು ಲೂಸಿಯಾ.
“ಮೈ ಹೂ ನಾ?” ಎಂದೆ ಥೇಟ್ ಶಾರುಖ್ಖಾನ್ ಸ್ಟೈಲಿನಲ್ಲಿ. ಇಬ್ಬರೂ ನಕ್ಕೆವು.
“ಬನ್ನಿ ಹೋಗೋಣ, ಒಂಭತ್ತಾಗುತ್ತಿದೆ” ಎಂದು ಎದ್ದಳು.
“ಮಧ್ಯಾಹ್ನ ಊಟ ಮಾಡಿದ್ದೀರಿ ತಾನೆ?” ಎಂದಳು ಆಫೀಸಿಗೆ ಬೀಗ ಹಾಕಿ ಹೊರಬರುವಾಗ.
“ಮಾಡಿದ್ದೆ. ಏನೆಂದು ಜ್ಞಾಪಕವಿಲ್ಲ. ನೀವು ಹೊರಡಿ, ನಾನು ಲಾಡ್ಜ್ ಬಳಿ ಊಟ ಮಾಡಿಕೊಳ್ಳುತ್ತೇನೆ” ಎಂದೆ.
“ಉಹುಂ….. ಮನೆಯಲ್ಲಿ ಬೆಳಗ್ಗೆ ಚಪಾತಿ ಮತ್ತು ಪಲ್ಯ, ವೆಜಿಟೆಬಲ್ ಪುಲಾವ್ ಮಾಡಿದ್ದೆ. ಪಚಡಿ ಇದೆ. ಎರಡು ಬಾಟಲ್ ಫಾಂಟಾ ಇದೆ. ಇಬ್ಬರಿಗೆ ಸಾಕಾಗುತ್ತೆ, ಒಬ್ಬಳಿಗೆ ಜಾಸ್ತಿಯಾಗುತ್ತೆ” ಎಂದು ತಲೆಯೆತ್ತಿ ನೋಡಿದಳು.
ಹಿತವಾದ ಒತ್ತಾಯವಿತ್ತು. ಒಬ್ಬಳೇ ಇದ್ದಾಳೆ, ನನ್ನಂತೆ ಒಂಟಿಜೀವ!
ನನ್ನ ಬಾಡಿಗೆ ಹೊಂಡಾ ಕಾರಿನಲ್ಲಿ ಅವಳ ಹ್ಯುಂಡೈ i೧೦ ಕಾರನ್ನು ಸ್ವಲ್ಪ ಅಂತರ ಬಿಟ್ಟು ಹಿಂಬಾಲಿಸಿದೆ. ಜಾನಿಗಿಂತಾ ಚೆನ್ನಾಗಿ ಹಿಂಬಾಲಿಸುತ್ತಿದ್ದೇನಲ್ಲ ಎನಿಸಿತು.
ಅವಳಂತೆಯೆ ಚಿಕ್ಕ ಚೊಕ್ಕ ಮನೆ. ಮನೆ ಮುಂದೆ ಚಿಕ್ಕ ಗಾರ್ಡನ್, ನಾಯಿ ಇಲ್ಲ….. ಒಳಗೆ-ಹೊರಗೆ ಬಿಳಿ ಬಣ್ಣದ ಗೋಡೆಗಳು, ನೀಟಾಗಿ ಚೆನ್ನಾಗಿಟ್ಟುಕೊಂಡಿದ್ದಾಳೆ. ನನ್ನ ಬ್ಯಾಚುಲರ್ ಗೂಡಿಗಿಂತ ವಾಸಿ.
ಸ್ವಲ್ಪ ಹೊತ್ತಿನಲ್ಲೇ ಮೈಕ್ರೋವೇವ್ನಲ್ಲಿ ಬಿಸಿ ಮಾಡಿ ಟೇಬಲ್ ಮೇಲೆ ಊಟ ಬಡಿಸಿದಳು.
ಸ್ವಲ್ಪ ನಕ್ಕೆ.
“ಏನು?” ಎಂದಳು.
“ಇವತ್ತೇಕೆ ನನ್ನ ಊಟದ ದಾರಿ ನಿಮ್ಮ ಮನೆಯ ಒಳಗೆ ಬಂದಿತು ಅಂತ….” ಎನ್ನುತ್ತ ಗಬಗಬಾ ತಿಂದೆ. ಎಷ್ಟು ಹಸಿವಾಗಿತ್ತು ಎಂದು ನನಗೇ ಅರಿವಾಗಿರಲಿಲ್ಲ.
“ನಿಮಗೆ ದಾರಿ ತೋರಿಸಿದರೂ, ನಾವು ದಾರಿ ತಪ್ಪುವುದಿಲ್ಲ ಎಂಬ ವಿಶ್ವಾಸ ಬಂತು, ಅದಕ್ಕೇ ಕರೆದೆ” ಎಂದು ಮುಗುಳ್ನಕ್ಕಳು. ಅವಳ ನಗೆಯ ಹೊಳಪು ಸುತ್ತಲಿನ ಬಿಳಿ ಗೋಡೆಗಳನ್ನೂ ಕಪ್ಪುಗಟ್ಟಿಸುವಂತಿತ್ತು.
ಊಟ ಮಾಡುವಾಗ, “ವಾಹ್! ರುಚಿಯಾಗಿದೆ, ಮತ್ತೆ ಕರೆಯುತ್ತೀರಾ?” ಎಂದೆ.
“ಹೀಗೇನೆ ದಿನಾ ಕರೆಯುತ್ತೀನೋ ಇಲ್ವೋ, ಇವತ್ತು ಮನಸ್ಸಾಯಿತು ಕರೆದೆ” ಎಂದಳು ಹುಷಾರಾಗಿ.
“ಮನಸ್ಸಿನ ಮಾತನ್ನು ಕೇಳಬೇಕು” ಎಂದೆ ಮಾರ್ಮಿಕವಾಗಿ.
“ಆದರೆ ಬುದ್ಧಿ `ಬೇಡಾ’ ಎಂದು ಎಚ್ಚರಿಸಿದರೆ? ಎಂಬ ಪ್ರಶ್ನೆ. ಎಷ್ಟಾದರೂ ಲಾಯರ್ ಅಲ್ಲವೆ?
ಈ ಬಾರಿ ಕೈಚಾಚಿ ನನ್ನ ಕೈಯಿಂದ ಅವಳ ಕೈ ತಟ್ಟಿದೆ. ಹತ್ತಿಯಂತೆ ಮೃದುವಾಗಿತ್ತು.
“ಮನಸ್ಸಿನ ವಿಷಯದಲ್ಲಿ ಬೇರೆ ಯಾವುದರ ಮಾತೂ ಕೇಳಬಾರದು” ಎಂದೆ.
`ಗುಡ್ ನೈಟ್’ ವಿನಿಮಯ ಮಾಡಿಕೊಂಡು ವಿದಾಯ ಹೇಳಿದ್ದೆವು.
ನನ್ನ ಮನದ ಇಂಗಿತ ಅವಳಿಗರ್ಥವಾಯ್ತು ಎಂದುಕೊಂಡೆ. ನನಗಂತೂ ಸ್ಪಷ್ಟವಾಗುತ್ತಿತ್ತು.
***
ಮರುದಿನ ಒಂಬತ್ತಕ್ಕೆ ಮೃದುಲಾ ಮತ್ತು ಫರ್ನಾಂಡೆಸ್ ಇಬ್ಬರು ಅವಳ ಆಫೀಸ್ ರೂಮಿನಲ್ಲಿ ಕಾನ್ಫರೆನ್ಸ್ ಲೈನಿಗೆ ಬಂದರು. ದೊಡ್ಡ ಟಿವಿ ಪರದೆಯ ಮೇಲೆ ಬಂದ ಫರ್ನಾಂಡೆಸ್, “ಅಬ್ಬ, ನಾವು ಕೊಟ್ಟ ದುಡ್ಡಿಗೆ ಮೊದಲ ರಿಪೋರ್ಟ್ ಕೊಡು, ವಿಜಯ್…… ಇವತ್ತಾದರೂ!” ಎಂದರು ಮುಖಗಂಟಿಕ್ಕಿ.
“ನೋಡಿದಿರಾ ಈ ಶ್ರೀಮಂತ ಲಾಯರಿನ ದಾಷ್ಟೀಕ? ನನಗೆ ಕೆಟ್ಟ ಕೋಪ ಬಂದಿತ್ತು.”
“ಅಂಥ ರಿಪೋರ್ಟ್ ಕೊಡಬೇಕಾಗಿರುವುದು ನೀವು! ಇಲ್ಲಿಗೆ ಬಂದ ಎರಡೇ ದಿನದಲ್ಲಿ ಹುಚ್ಚನಂತೆ ಊರೆಲ್ಲಾ ಅಲೆದಿದ್ದೇನೆ. ನನಗೇ ಪ್ರಾಣಾಪಾಯವೂ ಆಗಿದೆ. ಆದರೆ ಕೊನೆಗೆ ನಿಮಗೇ ಗೊತ್ತಿದ್ದ ಮುಖ್ಯವಿಷಯವನ್ನೇ ನನಗೆ ಹೇಳದೆಯೇ ಕಳಿಸಿದಿರಿ. ಹಾಗಾಗಿ ನಿಮ್ಮ ಮೋಸ, ಕಪಟ ಬಯಲಾಗಿದೆ ಎಂದೆ.
“ಯಾವುದು?” ಎಂದರು ಇಬ್ಬರೂ ಒಟ್ಟಿಗೆ. ದನಿಯಲ್ಲಿ ಗಾಬರಿಯಿತ್ತು. ಕಹಿಸತ್ಯ ನೋಡಿ!
“ಜಾನಿ, ಐವತ್ತು ಸಾವಿರ….. ಎರಡು ಚೆಕ್….. ನೀವು ಕೊಟ್ಟ ಹಣ….. ಏನಿದರ ಅರ್ಥ?”
ಅಷ್ಟು ಸಾಕಲ್ಲ? ಟಿ.ವಿ ಪರದೆಯಲ್ಲಿ ಮೃದುಲಾ ಈಗ ಫರ್ನಾಂಡೆಸ್ ಕಡೆಗೆ ನೋಡಿದರು.
“ನಾನು ಹೇಳಿದೆ ನಿಮಗೆ. ಮುಚ್ಚಿಡುವುದು ಬೇಡ, ವಿಜಯ್ ಕಂಡುಹಿಡಿದೇ ಹಿಡಿಯುತ್ತಾರೆ ಎಂದು. ನೀವು ಕೇಳಲಿಲ್ಲ” ಎಂದು ಆತನನ್ನು ದೂರಿದಳು.
ಫರ್ನಾಂಡೆಸ್ ಚೇತರಿಸಿಕೊಂಡು, “ಹೌದು, ಆದರೆ ನಾವು ಹಾಗೆ ಮಾಡಲೇಬೇಕಾಯ್ತು. ಅವನು ಆ ಎರಡು ವಿಚಿತ್ರ ಪತ್ರಗಳು ಬರೆದು ಕಳಿಸಿದ್ದನಲ್ಲ. ಅನಂತರ ನಮ್ಮ ಆಫೀಸಿಗೆ ಬಂದಿದ್ದ. ನಮ್ಮನ್ನು ಭೇಟಿಯಾದ. ಮೃದುಲಾ ಜನ್ಮದ ಬಗ್ಗೆ ಒಂದು ಭಯಂಕರ ಕಟುಸತ್ಯವನ್ನು ನಮಗೆ ತಿಳಿಸಿದ. ಅದಕ್ಕಾಗಿ ತನಗೆ ಕೇಳಿ-ಕೇಳಿದಾಗ ಹಣ ಕೊಡದಿದ್ದರೆ ಮೃದುಲಾ ಮಾನ-ಮರ್ಯಾದೆ ಹೋಗುವಂಥ ಈ ಅತ್ಯಂತ ಅಪಾಯಕಾರಿಯಾದ ರಹಸ್ಯವನ್ನು ಪತ್ರಿಕೆ-ಮಾಧ್ಯಮಗಳಿಗೆ ಕೊಟ್ಟು ಬಹಿರಂಗ ಮಾಡುತ್ತೇನೆ ಎಂದು ಬೆದರಿಸಿದ. ಮತ್ತು ತಾನು ಬಂದದ್ದಾಗಲೀ, ಹಣ ಪಡೆಯುವ ವಿಷಯವಾಗಲೀ ಯಾರಿಗೂ ಹೇಳಬಾರದೆಂದ. ‘ಒಂದು ಫೋನ್ಕಾಲ್, ಒಂದು ಫ್ಯಾಕ್ಸ್ ಸಾಕು’ ಎಂದ. ಮೊದಲು ಎರಡು ಕಂತಿನಂತೆ ೫೦-೫೦ ಸಾವಿರ ಕೇಳಿದ ಜಾನಿ. ಅದು ದೊಡ್ಡ ದುಡ್ದಲ್ಲ ನಮಗೆ. ಆದರೆ ನಮಗೆ ಪೂರ್ತಿ ವಿಷಯ ಅವನು ಹೇಳಲೇ ಇಲ್ಲ. ಅದಕ್ಕಾಗಿಯೇ ನಿಮಗಾಗಲಿ, ನನ್ನ ಮಗಳಂತಿರುವ ಲೂಸಿಯಾಗಾಗಲೀ ಏನೂ ಹೇಳದೆ ಎಲ್ಲ ಪತ್ತೆಹಚ್ಚಿರೆಂದು ಹೇಳಿ ಸುಮ್ಮನಾದೆವು. ಹೇಗಾದರೂ ಪೂರ್ತಿಸತ್ಯ ಹೊರಗೆ ಬರಲಿ ಎಂದು.”
ಕೊನೆಗೂ ಜಾನಿಗೆ ಗೊತ್ತಿದ್ದ ರಹಸ್ಯ ಏನೆಂದು ನಮಗೆ ಹೇಳುತ್ತಿಲ್ಲ ಈ ಫರ್ನಾಂಡೆಸ್! ಎಂಥ ಚಾಣಾಕ್ಷ ನೋಡಿ…..
ನಾನಂದೆ, “ಮೃದುಲಾ, ನೀವು ನನ್ನ ಕಕ್ಷಿದಾರರು, ನಮ್ಮಿಬ್ಬರ ಮಧ್ಯೆ ಯಾವ ರಹಸ್ಯವೂ ಇರಬಾರದು, ಮುಚ್ಚಿಡಬಾರದು. ಈಗಾಗಲೇ ಈ ಕೇಸ್ ಅಪಾಯಕಾರಿಯಾಗಿದೆ. ನಮಗೆ ಹೇಳಿ, ಏನೆಂದು ಜಾನಿ ನಿಮಗೆ ಹೆದರಿಸಿದ ಆ ಕಟು ಸತ್ಯ? ಯಾಕೆ ನಮ್ಮಿಂದ ಬಚ್ಚಿಟ್ಟಿರಿ. ಇದು ನ್ಯಾಯವೆ?” ಎಂದು ಗಂಭೀರವಾಗಿ ಪ್ರಶ್ನಿಸಿದೆ.
ಪತ್ತೇದಾರರಿಗೂ ಕಸುಬಿನ ನೀತಿಯಿರುತ್ತೆ ಎಂದು ಅವರಿಗೆ ಅರಿವಾಗಿರಬೇಕು.
ಎರಡು ಕ್ಷಣ ಮನದಲ್ಲೆ ಯೋಚಿಸಿ ನಿರ್ಧಾರಕ್ಕೆ ಬಂದರು ಮೃದುಲಾ. “ನಾನು ಹುಟ್ಟಿದ್ದು ಅನೈತಿಕವಾಗಿಯಂತೆ….. ನಮ್ಮಪ್ಪ ಅಮ್ಮನಿಗೆ ಮದುವೆಯಾಗುವ ಮುಂಚೆ ಅಮ್ಮ ಕದ್ದು ಬಸುರಿಯಾಗಿ ನಾನು ಹುಟ್ಟಿದೆನಂತೆ. ಅವನಿಗೆ ಎಲ್ಲ ವಿವರಗಳು ಗೊತ್ತಂತೆ” ಎಂದು ಬಿಕ್ಕಿದರು.
`ವಾಟ್!’ ಎಂದು ಅಚ್ಚರಿಪಟ್ಟೆವು ನಾವಿಬ್ಬರು. ಇದು ಬಾಂಬೇ ಸರಿ.
ಮೃದುಲಾ ಕಣ್ಣಂಚಿನಲ್ಲಿ ನೀರಾಡುತ್ತಿದೆ. ಆದರೆ, ಈಗ ಅದು ಅಭಿನಯವಲ್ಲ.
ಎಲ್ಲರಿಗೂ ಸಮಾಜದಲ್ಲಿ ನಾನು ದತ್ತುಪುತ್ರಿ ಅಂತ ಮಾತ್ರ ಗೊತ್ತಿತ್ತು. ಅದರ ಹಿಂದಿನ ಕಟುಸತ್ಯ ಗೊತ್ತಿರಲಿಲ್ಲ. ನನಗೂ ಕೇಳಿ ನಂಬಿಕೆ ಬರಲಿಲ್ಲ. ಆದರೆ ಅವನು ಪೂರ್ತಿಸತ್ಯವನ್ನು ನಮಗೆ ತಿಳಿಸಲಿಲ್ಲ. ಎಲ್ಲಿ ದುಡ್ದು ಕೊಡದಿದ್ದರೆ ಅವನು ಮಾಧ್ಯಮಗಳಿಗೆ ಹೇಳಿಬಿಟ್ಟರೆ, ಮುಂದಿನ ದಿನದ ಹೆಡ್ಲೈನ್ಸ್ ಊಹಿಸಬಲ್ಲಿರಾ?
“ಜನಪ್ರಿಯ ನಟಿ ಒಬ್ಬ ಅನೈತಿಕ ಶಿಶು! ಟಿ.ವಿ.ಯ ಆದರ್ಶ ನಾರೀಮಣಿ, ಅನೈತಿಕ ಶಿಖಾಮಣಿ….. ಹೀಗೆಲ್ಲ ಪತ್ರಿಕೆ ಮತ್ತು ಟಿ.ವಿ. ಮಾಧ್ಯಮದವರಿಗೆ ಹಬ್ಬವಾಗುತ್ತಿತ್ತು. ನನ್ನ ಮಾನ ಮೂರಾಬಟ್ಟೆಯಾಗುತ್ತಿತ್ತು. ನನ್ನ ಸೀರಿಯಲ್ ನಿಂತು ಲಕ್ಷಾಂತರ ರೂ. ನಷ್ಟವಾಗುತ್ತಿತ್ತು. ಇದಕ್ಕೆಲ್ಲ ನಾನಾಗಲೀ, ವಿಶಾಲ್ ಕಪೂರ್ ಆಗಲಿ ಸಿದ್ಧವಿರಲಿಲ್ಲ. ಅವನಿಗೆ ಎರಡು ಬಾರಿ ದುಡ್ಡು ಕೊಟ್ಟಿದ್ದೇವೆ ಅಷ್ಟೆ. ನಿಮ್ಮನ್ನು ಕೇಳಿಕೊಳ್ಳುವುದು ಇಷ್ಟೇ, ಇನ್ನು ಮುಂದೆ ನಮಗೆ ಜಾನಿಯ ಕಾಟ ನಿಲ್ಲಬೇಕು ಮತ್ತು ನನ್ನ ಜನ್ಮಕೊಟ್ಟ ತಂದೆ-ತಾಯಿಯನ್ನು ನೀವು ಪತ್ತೆಹಚ್ಚಿ ಕೊಡಬೇಕು…..” ಎಂದು ಒತ್ತಾಯಿಸಿದರು ಮೃದುಲಾ. ಮತ್ತದೇ ಹಳೆಯ ಬೇಡಿಕೆ.
“ಹಾಗೆ ನಾನು ಕಂಡುಹಿಡಿದರೂ ನೀವೇನು ಮಾಡಬಲ್ಲಿರಿ?” ಎಂದು ಸವಾಲೆಸೆದೆ.
“ಅವನು ಜೈಲಿಗೆ ಹೋದರೆ ಮೊದಲು ಬ್ಲ್ಯಾಕ್ಮೇಲ್ ನಿಲ್ಲುತ್ತದೆ. ಆತಂಕ ನಿವಾರಣೆ ಮತ್ತು ನನ್ನ ಹೆತ್ತ ತಂದೆ-ತಾಯಿ ಸತ್ಯವಾಗಿ ಸಿಕ್ಕಿದರೆಂದರೆ ನಾನು ನಿಜವಾಗಿಯೂ ಎಲ್ಲರ ಮುಂದೆ ಬಹಿರಂಗವಾಗಿ ಅವರನ್ನು ಒಪ್ಪಿಕೊಳ್ಳುತ್ತೇನೆ. ಟಿ.ವಿ., ಪತ್ರಿಕೆಯವರ ಗೋಷ್ಠಿ ಕರೆದು ಅನುಕಂಪದ ಅಲೆಯನ್ನು ನನ್ನ ಕಡೆಗೆ ತಿರುಗಿಸಿಕೊಳ್ಳುತ್ತೇನೆ. ನಾನೇ ಪಾಸಿಟಿವ್ ಆಗಿ ಅವರಿಗೆ ಹೆಡ್ಲೈನ್ಸ್ ಕೊಡುತ್ತೇನೆ. ಆಗ ಅವರೇ ಟಿ.ವಿ.ಯಲ್ಲಿದ್ದ ಪಾತ್ರದಂತೆಯೇ ನಾನು ಆದರ್ಶ ವ್ಯಕ್ತಿ ಎನ್ನುತ್ತಾರೆ. ಎಲ್ಲ ಸುಖಾಂತ್ಯವಾಗುತ್ತದೆ. ಇದನ್ನು ನನಗೆ ಸೂಚಿಸಿದ್ದೆ ಈ ಫರ್ನಾಂಡೆಸ್. ನನ್ನ ಪ್ರೊಡ್ಯೂಸರ್, ನಿಮ್ಮ ಗೆಳೆಯ ವಿಶಾಲ್ ಕೂಡಾ ಒಪ್ಪಿದ್ದಾರೆ. ಅದನ್ನೇ ಒಂದು ಎಪಿಸೋಡ್ ಮಾಡಿಬಿಡೋಣ ಎಂದು. ವಾಟ್ ಎನ್ ಐಡಿಯ. ಅವರು ಹೇಳಿದ ಮೇಲೆ ಮುಗಿಯಿತು. ಏನಂತೀರಾ? ಎಂದರು ಮೃದುಲಾ ಆ ಸಂಕಟದಲ್ಲೂ ಆಶಾಭಾವನೆಯೇ ಮೂರ್ತಿವೆತ್ತಂತೆ.
“ನಾನು ಮೊದಲು ಜೀವಸಹಿತ ಬಂದು ನಿಮ್ಮ ಅಪ್ಪ-ಅಮ್ಮನನ್ನು ಹುಡುಕಿಕೊಡುವಂತಾಗಲಿ. ಪತ್ರಿಕಾ ಗೋಷ್ಠಿಗಳ ಬಗ್ಗೆ ಆಗ ಮಾತನಾಡೋಣ” ಎಂದು ನಾನು ಅಲ್ಲೇ ಅವರ ಗಾಳಿಗೋಪುರವನ್ನು ಧರೆಗಿಳಿಸಿದೆ.
“ಡ್ಯಾಡ್” ಎಂದು ಸಾಕುತಂದೆ ಫರ್ನಾಂಡೆಸ್ರನ್ನು ಉದ್ದೇಶಿಸಿ ಲೂಸಿ, “ನಾನು ವಿಜಯ್ ಜತೆ ಸೇರಿ ಈ ಕೇಸಿನ ಜವಾಬ್ದಾರಿಯನ್ನು ಹಂಚಿಕೊಳ್ಳುತ್ತಿದ್ದೇನೆ. ನನ್ನ ಜತೆ ಇನ್ನೆಂದಾದರೂ ಈ ತರಹ ಸೀಕ್ರೆಟ್ ಮಾಡಿದರೆ, ನಿಮ್ಮ ಜತೆ ಮಾತನಾಡುವುದೂ ಇಲ್ಲ, ಕೆಲಸ ಮಾಡುವುದು ಮೊದಲೇ ಇಲ್ಲ” ಸಣ್ಣ ಗುಡುಗು ಹಾಕಿ ನನ್ನ ಭಾಗಕ್ಕೆ ಸೇರಿದಳು ಲೂಸಿಯಾ.
“ಸರಿಯಮ್ಮ ಲೂಸಿ, ನೀನೂ ವಿಜಯ್ ಇನ್ನು ಜಂಟಿಕಾರ್ಯಾಚರಣೆ ಮಾಡಬಹುದು. ಟೂ ಹೆಡ್ಸ್ ಆರ್ ಬೆಟರ್ ದಾನ್ ಒನ್” ಎಂದು ತಲೆಯಿಂದ ದೊಡ್ಡ ಭಾರ ಸಾಗಹಾಕಿದಂತೆ ನೆಮ್ಮದಿಯಿಂದ ನಿಡುಸುಯ್ದರು ಫರ್ನಾಂಡೆಸ್.
****
ಅವರಿಬ್ಬರೊಂದಿಗೆ ಸಂಭಾಷಣೆ ಮುಗಿದ ನಂತರ, ನಾನು ಲೂಸಿಯನ್ನು ನೋಡಿ ಮುಗುಳ್ನಕ್ಕೆ.
“ಏನದು ನಿಮ್ಮ ನಗುವಿನ ಅರ್ಥ?” ಎಂದಳು ಕಳ್ಳಿ, ಮಳ್ಳಿ.
“ಅವರು ಟೂ ಹಾರ್ಟ್ಸ್ ಆರ್ ಬೆಟರ್ ದಾನ್ ಒನ್ ಎನ್ನಲಿಲ್ಲವೆ! ಅದಕ್ಕೇ” ಎಂದೆ, ಆ ಫರ್ನಾಂಡೆಸ್ ಹೇಳಿದ್ದನ್ನು ತಿರುಚುತ್ತಾ.
“ಅವರು ಹಾರ್ಟ್ಸ್ ಅಂದರೋ, ಹಾರ್ಸ್ ಅಂದರೋ ಸರಿಯಾಗಿ ಕೇಳಿಸಲಿಲ್ಲಪ್ಪ ಎಂದು ಕಿಲಕಿಲ ನಕ್ಕಳು ಕಿಲಾಡಿ.
“ಇನ್ನು ಮೇಲೆ ನನ್ನ ಪಾರ್ಟ್ನರ್ ಅದ ನಿನ್ನನ್ನು ಬರೇ ಲೂಸಿ ಎಂದೇ ಕರೆಯಲಾಗುತ್ತದೆ” ಎಂದು ಮತ್ತೆ ಅವಳಿಗೆ ಪ್ರತ್ಯುತ್ತರ ನೀಡುವ ಅವಕಾಶ ಕೊಡದೆ ಮುಂದುವರಿಸಿದೆ: “ಲೂಸಿ, ನಾನೀಗ ರಚನಾ ನಂಬೂದರಿಯನ್ನು ಹುಡುಕಿಕೊಂಡು ಹೋಗುತ್ತೇನೆ. ನಂಬೂದರಿಯನ್ನು ನಂಬಬಾರದು ಎಂದು ಆಕೆ ಹೇಳಿದ್ದನ್ನು ಯಾಕೆ ಎಂದು ನೋಡೇಬಿಡೋಣ” ಎನ್ನುತ್ತಾ ಸೀಟಿನಿಂದೆದ್ದು ಹೊರಗೆ ಹೊರಟವನು ತಕ್ಷಣ ನೆನಪಿಗೆ ಬಂದು, “ನಿಮ್ಮ ಕಸ ಗುಡಿಸುವ ಶಾಂತಿ ಬಂದಳೇ; ಅದೇ ಜಾನಿಯ ಗರ್ಲ್ ಫ್ರೆಂಡ್?” ಎಂದೆ.
ಆಗ ಲೂಸಿ ಹುಬ್ಬುಗಂಟಿಕ್ಕುತ್ತಾ ಎದ್ದು, “ಹೌದಲ್ಲ, ಅವಳು ಬಂದರೆ ಜನ್ಮ ಜಾಲಾಡುತ್ತಿದ್ದೆ. ಅರೆಸ್ಟೇ ಮಾಡಿಸಿ ಬಿಡೋಣವೆಂದಿದ್ದೆ. ಆದರೆ ಇವತ್ತೇಕೋ ಬಂದೇ ಇಲ್ಲ” ಎಂದಳು.
“ಇರಲಿ, ಅವರಿಬ್ಬರನ್ನೂ ಪ್ರತ್ಯೇಕವಾಗಿ ಡೀಲ್ ಮಾಡೋಣ. ಮೊದಲು ಅವರಿಗೆ ತಿಳಿದ ರಹಸ್ಯ ಏನೆಂದು ತಿಳಿದುಕೊಳ್ಳೋಣ. ಅವರಿಗೆ ಸ್ವಲ್ಪ ಅನುಮಾನ ಬಂದರೂ ಪತ್ರಿಕೆಗಳಿಗೆ ಲೀಕ್ ಮಾಡಿ ನಮ್ಮ ಕೆಲಸ ಕೆಡಿಸಿಬಿಡಬಹುದು, ಹುಶಾರಾಗಿರಬೇಕು” ಎಂದೆ.
“ಜಾನಿಗೆ ನೀವೇ ಮೇ ತಿಂಗಳ ಕಾಗದಗಳನ್ನು ಅವನ ಮನೆಯಿಂದ ಕದ್ದಿದ್ದು ಅಂತ ಗೊತ್ತಾಗಿಬಿಟ್ಟರೆ? ಎಂದಳು ಜಾಣೆ.
“ನಾನೇ ಎಂದು ಅವನು ನೋಡಿಲ್ಲ. ಜತೆಗೆ ಅವನಿಗೂ ಯಾರೋ ಒಬ್ಬ ಶತ್ರುವಿದ್ದಾನಲ್ಲ….. ಅವನ ಮೇಲೆಯೇ ಜಾನಿಗೆ ಅನುಮಾನ ಬರಬಹುದು ಎಂದು ತಲೆಯ ಬೋರೆ ಮುಟ್ಟಿಕೊಳ್ಳುತ್ತಾ ಹೊರಬಂದೆ.
(ಸಶೇಷ)