ನನ್ನೊಳಗೆ ತುಂಬಿಕೊಂಡಿದ್ದ ಪಾರ್ಥನ ಕುರಿತಾದ ದ್ವೇಷವನ್ನೇ ವಿಷವಾಗಿಸಿಕೊಂಡು ಅವನ ಮೇಲೆ ಕಕ್ಕುವುದಕ್ಕೆಂದು ತೀವ್ರ ವೇಗದಿಂದ ನುಗ್ಗಿಹೋದೆ…
ನಾನೇನೋ ಅರ್ಜುನನ ಮೇಲೆ ಸೇಡು ತೀರಿಸಿಕೊಳ್ಳಬೇಕೆಂಬ ಹಠದಿಂದಲೇ ಇದ್ದೆ. ಆದರೆ ಇದು ಹೊರಗೆ ಗೊತ್ತಾಗುವ ಹಾಗಿರಲಿಲ್ಲ. ಯಾಕೆಂದರೆ ನಮ್ಮ ನಾಗಲೋಕದಲ್ಲಿ ಅರ್ಜುನನ ಹಿತಾಕಾಂಕ್ಷಿಗಳು ಹಲವರಿದ್ದರು. ನಮ್ಮ ನಾಗಕುಲದ ಉಲೂಪಿ ಅರ್ಜುನನನ್ನು ಗಂಡನಾಗಿ ಸ್ವೀಕರಿಸಿದ್ದಳು. ಇಂತಹ ಕಾರಣಗಳಿಂದಾಗಿ ನಾನು ನನ್ನ ಪ್ರತೀಕಾರದ ಉದ್ದೇಶವನ್ನು ಬಹಿರಂಗಪಡಿಸುವ ಹಾಗಿರಲಿಲ್ಲ. ಅದೇನಾದರೂ ಉಳಿದವರಿಗೆ ತಿಳಿದರೆ ನನ್ನನ್ನು ನಾಗಲೋಕದಿಂದ ಹೊರಗಟ್ಟುತ್ತಿದ್ದರೆನ್ನುವುದರಲ್ಲಿ ಯಾವ ಸಂಶಯವೂ ಇರಲಿಲ್ಲ. ಅದು ನನ್ನ ಕುರಿತು ಸಿಟ್ಟಿನಿಂದಲ್ಲ, ಅರ್ಜುನನ ಮೇಲಿದ್ದ ಅಭಿಮಾನ ಮತ್ತು ಅವನ ಪರಾಕ್ರಮದ ಭಯದಿಂದ. ಹೀಗಾಗಿ ಸಿಕ್ಕಿದ ಆಶ್ರಯವನ್ನು ಕಳೆದುಕೊಳ್ಳುವ ಮನಸ್ಸಿಲ್ಲದೆ ನನ್ನೊಳಗಿನ ಭಾವವನ್ನು ಗೋಪ್ಯವಾಗಿ ಇಟ್ಟುಕೊಂಡಿದ್ದೆ.
ಆದರೇನು? ನಾಗಲೋಕದ ವಾಸ ನನಗೆ ಶಾಶ್ವತವಾಗಲಿಲ್ಲ. ನಾನು ಎಣಿಸದ ಆಪತ್ತೊಂದು ಸುದ್ದಿಯ ರೂಪದಲ್ಲಿ ಒದಗಿಬಂತು. ನಾಗಲೋಕದವರು ಚಿಂತಾಕ್ರಾಂತರಾಗುವಂತಹ ಸುದ್ದಿಯದು. ನಾನು ಖಾಂಡವ ವನದಿಂದ ತಪ್ಪಿಸಿಕೊಂಡುದನ್ನು ತಿಳಿದ ಅರ್ಜುನ, `ತಪ್ಪಿಸಿಕೊಂಡ ತಕ್ಷಕ ಪುತ್ರ ನಿರಾಶ್ರಿತನಾಗಲಿ` ಎಂದು ಶಾಪ ಕೊಟ್ಟಿದ್ದನಂತೆ. ಈ ವರ್ತಮಾನವನ್ನು ಕೇಳಿದ ನಾಗಕುಲದವರೆಲ್ಲ ಕಂಗಾಲಾದರು. ಅರ್ಜುನನ ಶಾಪವನ್ನು ಇಷ್ಟವಿರಲಿ, ಇಲ್ಲದಿರಲಿ ನಡೆಸಲೇಬೇಕಾದ ಅನಿವಾರ್ಯಕ್ಕೆ ಅವರು ಸಿಕ್ಕಿದ್ದರು. ನನ್ನನ್ನು ತಮ್ಮೊಂದಿಗೆ ಉಳಿಸಿಕೊಳ್ಳುವ ದಾರಿ ಕಾಣದೆ ಒಳಗೊಳಗೇ ಪರಿತಪಿಸುತ್ತಿದ್ದರು. ನನಗೀಗ ಅಲ್ಲಿಂದ ಹೊರಬೀಳದೆ ವಿಧಿಯಿರಲಿಲ್ಲ. ತಮ್ಮ ಕುಲದವನೊಬ್ಬ ಹೀಗೆ ಅನಾಥನಾಗಿರುವುದು ಅವರಿಗೆ ಪ್ರಿಯವಾಗಿರಲಿಲ್ಲ. ಆದರೆ ಅರ್ಜುನನ ಭೀತಿ ನನ್ನ ಕುರಿತ ಪ್ರೀತಿಯನ್ನು ಮೆಟ್ಟಿನಿಂತಿತ್ತು. ನನ್ನ ಕುಲದವರನ್ನು ಸಂದಿಗ್ಧಕ್ಕೆ ಸಿಲುಕಿಸಲು ಇಷ್ಟವಿಲ್ಲದೆ ನಾನು ಅಲ್ಲಿಂದ ಹೊರಬಿದ್ದೆ.
ಕುಲಾಶ್ರಯದಿಂದ ಹೊರಬಂದ ನನಗೆ ಹೊರಗಿನ ಪ್ರಪಂಚ ಅತ್ಯಂತ ದುರ್ಭರವಾಗಿ ಕಾಣಿಸುತ್ತಿತ್ತು. ನನ್ನವರೆಂಬವರಿಲ್ಲದೆ, ನಾಗನೆಂದು ಕಂಡವೆಲ್ಲರೂ ಅಂಜುವ, ಅಲ್ಲವಾದರೆ ಅಸಹ್ಯದಿಂದ ಓಡಿಸುವವರ ಮಧ್ಯೆ ನಾನು ಬದುಕಬೇಕಿತ್ತು; ಅಲ್ಲ, ಬದುಕಲೇ ಬೇಕಿತ್ತು. ಅಂತರಂಗದಲ್ಲಿ ಸುಪ್ತವಾಗಿ ಕುದಿಯುತ್ತಿದ್ದ ಸೇಡಿನ ಭಾವ ದಿನೇದಿನೇ ವರ್ಧಿಸುತ್ತಿತ್ತೇ ವಿನಾ ಶಮನಗೊಳ್ಳಲಿಲ್ಲ. ಆ ಸೇಡಿನ ಕಿಚ್ಚಿನಲ್ಲಿ ಅರ್ಜುನನ್ನು ದಹಿಸದ ಹೊರತು ನೆಮ್ಮದಿಯಿರಲಿಲ್ಲ ನನಗೆ. ಅದಕ್ಕಾಗಿ ಬದುಕಿದ್ದೆ. ಎಷ್ಟೇ ಪ್ರತಿಕಾರ ಭಾವವಿದ್ದರೂ ಅದನ್ನು ಈಡೇರಿಸಿಕೊಳ್ಳುವ ದಾರಿ ಮಾತ್ರ ಗೋಚರಿಸಲಿಲ್ಲ. ದುರ್ಬಲನೂ ಕೊಂಚ ಅಂಜುಬುರುಕನೂ ಆಗಿದ್ದ ನನಗೆ ಅನ್ಯರೊಬ್ಬರ ಸಹಾಯವಿಲ್ಲದೆ ಏನೂ ಮಾಡಲಾರದ ಅಸಹಾಯಕತೆಯಿತ್ತು. ನಿಲ್ಲುವುದಕ್ಕೆ ನೆಲೆಯಿಲ್ಲದೆ ನಗರ, ಗ್ರಾಮ ಅರಣ್ಯವೆನ್ನದೆ ಅಲೆಯುತ್ತಿದ್ದ ನನಗೆ ಆಗೀಗ ನಾಗಕುಲದ ಯಾರಾದರೂ ಕಾಣಸಿಗುತ್ತಿದ್ದರು. ಹಾಗೆಂದು ಅವರು ಆತ್ಮೀಯತೆಯನ್ನೇನೂ ತೋರಿಸುತ್ತಿರಲಿಲ್ಲ. ಅದಕ್ಕೆ ಕಾರಣ ಎಷ್ಟೋ ಕಾಲದ ಮೇಲೆಯೇ ನನಗೆ ಹೊಳೆದದ್ದು. ನಾನು ಬಾಲ ಕಳೆದುಕೊಂಡವನಾಗಿದ್ದೆ. ಇದರಿಂದಾಗಿ ನನ್ನ ಜಾತಿಯವರಿಗೆ ನಾನು ದೂರದವನಾಗಿಬಿಟ್ಟಿದ್ದೆ. ಬಂಧುಗಳು ಸಹಿಸಿಕೊಂಡರೆಂದು ಇತರರಿಗೆ ಅಸ್ಪೃಶ್ಯನೇ ತಾನೇ. ಇರಲಿ. ಅದರಿಂದಾಗಿ ನನ್ನ ಮೇಲೆ ಯಾವ ಪರಿಣಾಮವೂ ಆಗಲಿಲ್ಲ.
ಹೀಗೆಯೇ ಅನಾಥ ಪ್ರೇತದಂತೆ ಸುತ್ತುತ್ತಿದ್ದ ನಾನು ಹೃದಯದ ಕಿಚ್ಚನ್ನು ಮಾತ್ರ ಆರಗೊಡಲಿಲ್ಲ. ಹೇಗಾದರೂ ಅವನನ್ನು ಸಾಯಿಸದ ಹೊರತು ಅದು ಆರುವುದಕ್ಕೂ ಇರಲಿಲ್ಲ. ಸಾಯಿಸುವುದು ಹೇಗೆ? ಕದ್ದು ಕೊಲ್ಲುವುದಲ್ಲ. ಎದುರಿಗಿದ್ದೇ ಅವನು ಕೊನೆಯುಸಿರೆಳೆಯುವುದನ್ನು ನೋಡಬೇಕು. ಆಗ ಮಾತ್ರ ಕಗ್ಗೊಲೆಗೀಡಾದ ನನ್ನ ತಾಯಿಯ ಆತ್ಮಕ್ಕೆ ಶಾಂತಿ ದೊರಕೀತು. ಹೀಗೆಲ್ಲ ಹಲವು ಯೋಚನೆಗಳೊಂದಿಗೆ ಸಂಚರಿಸುತ್ತಿದ್ದೆ. ಹಸಿವೆಯಾದಾಗ ಸಿಕ್ಕಿದ್ದನ್ನು ತಿನ್ನುವುದು. ಆಯಾಸವಾದಾಗ ಮಲಗುವುದು. ಹೀಗೆಯೇ ನನ್ನ ದಿನಚರಿ ಸಾಗುತ್ತಿತ್ತು.
ಒಂದು ದಿನ `ಪಾಂಡವರು ದ್ಯೂತದಲ್ಲಿ ಸೋತು ವನವಾಸಕ್ಕೆ ಹೋದರಂತೆ’ ಎಂಬ ಸುದ್ದಿಯನ್ನು ಕೇಳಿದೆ. ನನಗಿದರಿಂದ ಸಂತೋಷವೇನೂ ಉಂಟಾಗಲಿಲ್ಲ. ಪಾಂಡವರೆಂದರೆ ಅರ್ಜುನ ಕೂಡಾ ಹೋಗಿರಬೇಕು. ಅರ್ಜುನ ವನವಾಸಕ್ಕೆ ಹೋಗುವುದಲ್ಲ ನನಗೆ ಬೇಕಾದ್ದು, ಅವ ಸಾಯಬೇಕು. ಅದರ ಹೊರತು ಕಾಡಿನಲ್ಲಿದ್ದರೇನು, ನಾಡಿನಲ್ಲಿದ್ದರೇನು? ಕಾಡಿಗೆ ಹೋಗುವ ಮುನ್ನ ಪ್ರತಿಜ್ಞೆಯನ್ನೂ ಮಾಡಿದರಂತೆ. ಅದರಲ್ಲೂ ಅರ್ಜುನ ತಾನು ಕರ್ಣನ ತಲೆ ಕತ್ತರಿಸುತ್ತೇನೆಂದು ಪ್ರತಿಜ್ಞಾಬದ್ಧನಾದನಂತೆ. ಆಗಲಿ, ಅವನ ವೈರಿಗಳ ಸಂಖ್ಯೆ ಹೆಚ್ಚಾದಷ್ಟೂ ಒಳ್ಳೆಯದೇ ಅಂದುಕೊಂಡೆ. ಅದರೊಂದಿಗೆ ಕರ್ಣನ ಕುರಿತು ಕುತೂಹಲವೂ ಮೂಡಿತು. ಅವನು ಜಾತಿ ಕ್ಷತ್ರಿಯನಲ್ಲದಿದ್ದರೂ ಅಸ್ತ್ರಾಭ್ಯಾಸದಲ್ಲಿ ಅರ್ಜುನನಿಗೆ ಸಮಾನನಂತೆ. ಬಹು ಹಿಂದೆ ಅಸ್ತ್ರಪರೀಕ್ಷಾ ರಂಗದಲ್ಲಿ ಅರ್ಜುನನಷ್ಟೇ ಸಮರ್ಥನಾಗಿ ಕಾಣಿಸಿಕೊಂಡಿದ್ದನಂತೆ. ಅರ್ಜುನನಿಗೆ ಅಸ್ತ್ರಾಭ್ಯಾಸ ಮಾಡಿಸಿದ ಆಚಾರ್ಯ ದ್ರೋಣರ ಗುರುಗಳಾಗಿದ್ದ ಪರಶುರಾಮರಲ್ಲಿ ಕಲಿತವನಂತೆ ಕರ್ಣ. ಓಹೋ, ನನಗೆ ಕರ್ಣ ಪ್ರಯೋಜನಕಾರಿಯೆಂದು ತೋರಿದ್ದು ಈ ವಿಚಾರಗಳೆಲ್ಲ ತಿಳಿದ ಮೇಲೆ. ಅರ್ಜುನನ ಪ್ರತಿಜ್ಞೆ ಈಡೇರುತ್ತದೋ ಇಲ್ಲವೋ ಯಾರಿಗೆ ಗೊತ್ತು? ಆದರೆ ಅದನ್ನು ಕರ್ಣನಂತೂ ಪ್ರತಿಭಟಿಸಲೇ ಬೇಕು ತಾನೇ? ಆಗ ನಾನೇನಾದರೂ ಮಾಡಬಹುದು ಎಂದುಕೊಂಡೆ. ಹಾಗೆಂದು ಇದೆಲ್ಲ ತಕ್ಷಣ ಈಡೇರುವಂತಿರಲಿಲ್ಲ. ಅರ್ಜುನಾದಿಗಳ ಪ್ರತಿಜ್ಞೆಯೇ ಹಾಗಿತ್ತು. ಮುಂದೆ ಯುದ್ಧ ಸಂಭವಿಸಿದರೆ ಎಂಬುದು ಆ ಪ್ರತಿಜ್ಞೆಯ ಜತೆಗಿದ್ದ ವಾಕ್ಯ. ಮುಂದೆಂದೋ ಸಂಭವಿಸಬಹುದಾದ ಯುದ್ಧಕ್ಕಾಗಿ ನಾನು ಕಾಯುತ್ತಿರಬೇಕಿತ್ತು. ಅವಧಿಯೇ ಇಲ್ಲದ ಕಾಯುವಿಕೆಯದು.
ಆದರೂ ನಾನು ತಾಳ್ಮೆಗೆಡದೆ ಕಾಯುತ್ತಾ ಉಳಿದೆ. ಅಲ್ಲದೆ ದುರ್ಬಲನಾದ ನನಗೆ ಬೇರೇನು ಮಾಡುವುದು ಸಾಧ್ಯವಿತ್ತು? ಕೆಲಕಾಲ ಕಳೆದ ಮೇಲೆ ಇನ್ನೊಂದು ವರ್ತಮಾನವೂ ನನ್ನ ಕಿವಿಗೆ ಬಿತ್ತು. ಅದು ನನ್ನ ಅಂತರಂಗದ ಭಯವನ್ನು ಮತ್ತೂ ಹೆಚ್ಚಿಸಿತೆನ್ನಬೇಕು. ಕಾಡಿನಲ್ಲಿದ್ದ ಪಾಂಡವರನ್ನು ಭೇಟಿಯಾದ ವೇದವ್ಯಾಸರು ನೀಡಿದ ಸೂಚನೆಯಂತೆ ಅರ್ಜುನ ಇಂದ್ರಕೀಲ ಪರ್ವತದಲ್ಲಿ ಭಗವಾನ್ ಪರಶಿವನ ಕುರಿತು ತಪಸ್ಸು ಮಾಡಿದನಂತೆ. ಕಿರಾತರೂಪಿಯಾಗಿ ಬಂದ ಶಿವನೊಂದಿಗೆ ಸಮದಂಡಿಯಾಗಿ ಅರ್ಜುನ ಕಾದಾಡಿದನಂತೆ. “ವೀರ್ಯ ಪರಾಕ್ರಮಗಳಲ್ಲಿ ಅರ್ಜುನ ನನಗೆ ಸಮಾನ” ಎಂದು ಶಿವನೇ ಮೆಚ್ಚಿ ಪಾಶುಪತವೆಂಬ ದಿವ್ಯಾಸ್ತ್ರವೊಂದನ್ನು ಅವನಿಗೆ ಕರುಣಿಸಿದನಂತೆ. ಅಲ್ಲಿಗೆ ಬಂದ ಉಮೆಯೂ ಇತರ ದೇವಾನುದೇವತೆಗಳೂ ಅನೇಕಾನೇಕ ಮಹಾಸ್ತ್ರಗಳನ್ನು ಅರ್ಜುನನಿಗೆ ನೀಡಿ ಅನುಗ್ರಹಿಸಿದರಂತೆ. ಎಂತಹ ವಿಚಿತ್ರವಿದು! ನನ್ನ ತಾಯಿಯಂತೆ ಅಮಾಯಕರಾಗಿ ಖಾಂಡವ ವನದಲ್ಲಿ ವಾಸವಾಗಿದ್ದ ಅಸಂಖ್ಯ ಮುಗ್ಧರನ್ನು ಕೊಂದು ಕಳೆದ ಅರ್ಜುನನ ಅನ್ಯಾಯವನ್ನು ಪ್ರಶ್ನಿಸಬೇಕಾದ ದೇವವರ್ಗ ಅವನನ್ನು ಅನುಗ್ರಹಿಸುತ್ತದೆ. “ದೇವೋ ದುರ್ಬಲ ಘಾತಕ” ಎಂಬ ಮಾತು ನಿಜವಿರಬೇಕು. ಅಲ್ಲಿಂದ ದೇವಲೋಕಕ್ಕೆ ಹೋದ ಅರ್ಜುನನಿಗೆ ನನ್ನ ತಂದೆಯ ಆಪ್ತನಾದ ದೇವೇಂದ್ರನೇ ಅರ್ಧಾಸನವಿತ್ತು ಸನ್ಮಾನಿಸಿದನಂತೆ. ಅವನಿಗೊಲಿದು ಬಂದ ಊರ್ವಶಿ ತಿರಸ್ಕೃತಳಾಗಿ ಕೊಟ್ಟ ಶಾಪವನ್ನು ಇಂದ್ರನೇ ವರವಾಗಿಸಿದನಂತೆ. ಅಬ್ಬಾ! ಪ್ರಬಲನಾದವನಿಗೆ ಶಾಪವೂ ನಾಟುವುದಿಲ್ಲವೆಂದಾಯಿತಲ್ಲ.
ಇದೆಲ್ಲಾ ಆದಮೇಲೆ ಇನ್ನೊಂದು ಪ್ರಕರಣವೂ ನಡೆಯಿತು. ವನವಾಸದಲ್ಲಿದ್ದ ಪಾಂಡವರನ್ನು ಕೆಣಕುವುದಕ್ಕೆ ಕೌರವರು ಹೋದ ಪ್ರಕರಣವದು. ಅಲ್ಲಿ ಚಿತ್ರಸೇನ ಗಂಧರ್ವನ ಕೈಯಲ್ಲಿ ಕರ್ಣ ಸಹಿತ ಕೌರವರೆಲ್ಲರೂ ಸೋತುಹೋದರು. ಕೊನೆಗೆ ಯುಧಿಷ್ಠಿರನ ಆಣತಿಯಂತೆ ಅರ್ಜುನ ಚಿತ್ರಸೇನನ ಬಂಧಿಗಳಾಗಿದ್ದ ದುರ್ಯೋಧನ ಹಾಗೂ ಅವನ ತಮ್ಮಂದಿರನ್ನು ಬಿಡಿಸಿದನಂತೆ. ಅದರೊಂದಿಗೆ ಕೇಳಿದ ಇನ್ನೊಂದು ವಾರ್ತೆ ನನ್ನಲ್ಲಿ ನಿರಾಶೆ ಹುಟ್ಟಿಸಿತು. ಚಿತ್ರಸೇನನ ಕೈಯಲ್ಲಿ ಸೋತ ಕರ್ಣ ರಣರಂಗದಿಂದಲೇ ಓಡಿಹೋದನಂತೆ. ಅಂದರೆ ನಾನು ಯಾರ ಕುರಿತು ನಿರೀಕ್ಷೆಯಿಟ್ಟುಕೊಂಡಿದ್ದೆನೋ ಆ ಕರ್ಣ ಇಂತಹ ರಣಭೀರುವೆ? ಹಾಗಾದರೆ ನನ್ನ ಸೇಡು ತೀರುವುದೆಂತು? ನಾಳೆ ಯುದ್ಧದಲ್ಲಿ ಅರ್ಜುನನನ್ನು ಎದುರಿಸಿ ಈ ಕರ್ಣ ನಿಲ್ಲುವನೇ? ಆದರೆ ಇಷ್ಟು ನಿರಾಶೆಯ ನಡುವೆ ವಿಧಿ ನನಗೂ ಅನುಕೂಲ ಕಲ್ಪಿಸುತ್ತಿತ್ತು. ಚಿತ್ರಸೇನನಲ್ಲಿ ಸೋತು ಬಂದ ದುರ್ಯೋಧನ ಒಂದು ದೊಡ್ಡಯಾಗ ಮಾಡಿದ. ಅವನಿಗೇನೋ ರಾಜಸೂಯವನ್ನೇ ಮಾಡಬೇಕೆಂದಿತ್ತಂತೆ. ಆದರೆ ಪಾಂಡವರು ಈಗಾಗಲೇ ರಾಜಸೂಯ ಮಾಡಿದ್ದರಿಂದ ಅದನ್ನು ಅದೇ ವಂಶೀಯನಾದ ಇವನು ಮಾಡುವಂತಿರಲಿಲ್ಲ. ಹಾಗಾಗಿ ಇನ್ನೊಂದು ಯಾಗ. ಯಾಗವೇನೋ ನಡೆಯಿತು. ನನಗದು ಮುಖ್ಯವಲ್ಲ. ಆದರೆ ನಾನು ಗುರುತಿಸಿದ್ದು ಕರ್ಣ ಯಾಗಾಂಗವಾಗಿ ಮಾಡಿದ ದಿಗ್ವಿಜಯವನ್ನು. ಏಕಾಂಗಿಯಾಗಿ ಅನೇಕಮಂದಿ ರಾಜರನ್ನು ಗೆದ್ದು ಕಪ್ಪ ಕಾಣಿಕೆಗಳನ್ನು ತಂದು ದುರ್ಯೋಧನನ ಬೊಕ್ಕಸ ತುಂಬಿಸಿದ ಕರ್ಣನದ್ದು ಸಾಮಾನ್ಯ ಸಾಧನೆಯಲ್ಲವೆಂದು ನಾನು ಭಾವಿಸಿದೆ. ಆದರೆ….. ಸಂದೇಹವಿನ್ನೂ ಉಳಿದಿತ್ತು.
ಅರ್ಜುನನ ಕುರಿತು ಕರ್ಣನ ವಿರೋಧವೆಷ್ಟೆಂದು ನನಗಿನ್ನೂ ಧೃಢವಾಗಿರಲಿಲ್ಲ. ಅದು ತಿಳಿಯದ ಹೊರತು ಕರ್ಣನನ್ನು ನಾನು ನೆಚ್ಚುವಂತಿರಲಿಲ್ಲ. ಸಂದರ್ಭದಲ್ಲಿಯೇ ಕರ್ಣನ ಪ್ರತಿಜ್ಞೆಯ ವಿಚಾರ ನನಗೆ ತಿಳಿದದ್ದು. ದುರ್ಯೋಧನನಿಗೆ ಭರವಸೆಯುಂಟುಮಾಡುವುದಕ್ಕಾಗಿ ಮಾಡಿದ ಪ್ರತಿಜ್ಞೆಯದು. ತಾನು ಅರ್ಜುನನ ತಲೆಯನ್ನು ಕತ್ತರಿಸುವವರೆಗೆ ಮಾಂಸಾನ್ನವನ್ನುಣ್ಣುವುದಿಲ್ಲ; ಅನ್ಯರಿಂದ ಕಾಲು ತೊಳೆಸಿಕೊಳ್ಳುವುದಿಲ್ಲ ಎಂಬ ಪ್ರತಿಜ್ಞೆ. ಪ್ರತಿಜ್ಞೆ ಹೇಗಾದರೂ ಇರಲಿ, ಅರ್ಜುನನ ಹಗೆಯೆನ್ನುವುದು ಸ್ಥಿರವಾಯಿತಷ್ಟೆ. ನನಗೆ ಬೇಕಾಗಿದ್ದದ್ದು ಅದೇ. ಈಗ ನನಗೊಂದು ಭರವಸೆ ಉಂಟಾಯಿತು. ನನ್ನ ಜೀವನದ ಮಹದಾಶಯವನ್ನು ಈಡೇರಿಸಿಕೊಳ್ಳುವುದು ಈ ಕರ್ಣನಿಂದ ಸಾಧ್ಯವೆಂಬ ವಿಶ್ವಾಸ ಬಲಿಯತೊಡಗಿತು.
ಇನ್ನೂ ನನ್ನ ಕಾಯುವಿಕೆ ಮುಗಿದಿರಲಿಲ್ಲ.
ಪಾಂಡವರ ವನವಾಸ ಮುಗಿಯುವವರೆಗೆ, ಅವರು ಅಜ್ಞಾತವಾಸ ಪೂರೈಸುವವರೆಗೆ, ಆ ಮೇಲೆ ದುರ್ಯೋಧನ ಅವರ ಪಾಲಿನ ರಾಜ್ಯವನ್ನು ಬಿಟ್ಟುಕೊಡದೆ ಯುದ್ಧ ನಿರ್ಣಯವಾಗುವವರೆಗೆ, ನನ್ನ ಈ ಕಾಯುವಿಕೆಯ ತಪಸ್ಸು ಮುಂದುವರಿಯಲೇ ಬೇಕಿತ್ತು.
ಒಳಗೊಳಗೆ ಒಂದು ಆತಂಕವೂ ಕಾಡುತಿತ್ತು. ಎಲ್ಲಾದರೂ ಪಾಂಡವರ ಭಾಗವನ್ನು ಬಿಟ್ಟುಕೊಡುವುದಕ್ಕೆ ದುರ್ಯೋಧನ ಒಪ್ಪಿದರೆ…..
ಈ ಸಾಧ್ಯತೆಗೆ ನನ್ನಲ್ಲಿ ಉತ್ತರವಿರಲಿಲ್ಲ. ಹಾಗೇನಾದರೂ ಆದರೆ….. ಅರ್ಜುನನ ಹೊಸ ಶತ್ರುವನ್ನು ಹುಡುಕಿ ಅವನನ್ನು ಕೆರಳಿಸಿ, ಅವನಿಗೆ ಸಹಾಯಕನಾಗಿ….. ಎಲ್ಲ ಮೊದಲಿನಿಂದ ತೊಡಗಬೇಕು. ನಾನು ಅದನ್ನು ಸಾಧಿಸುವುದು ಬಹುಶಃ ಶಕ್ಯವಿರಲಿಲ್ಲ. ಅಸಹನೀಯವಾದ ಈ ಸಂಭವವನ್ನು ನಾನು ಕಲ್ಪಿಸಿಕೊಳ್ಳುವುದಕ್ಕೂ ಬಯಸಲಿಲ್ಲ. ಅಂತೂ ದಿನಗಳುರುಳುತ್ತ ಕಾಲ ಸಾಗಿತು. ಪಾಂಡವರು ಮರಳಿ ಬಂದರು. ರಾಜ್ಯಭಾಗವನ್ನು ಕೊಡುವುದಿಲ್ಲವೆಂದ ದುರ್ಯೋಧನ. ಅವನಾಗಲೇ ಯುದ್ಧವನ್ನು ನಿರ್ಣಯಿಸಿಬಿಟ್ಟಿದ್ದರೆ ಪಾಂಡವರು ಶಾಂತಿಯನ್ನು ಬಯಸಿ ಸಂಧಾನಕ್ಕೆ ಪ್ರಯತ್ನಿಸಿದರು. ಆದರೆ ದುರ್ಯೋಧನನ ಹಠವೇ ಮೇಲಾಯಿತು. ಈ ನಡುವೆ ಒಂದೆರಡು ಬೆಳವಣಿಗೆಗಳಾದವು.
ಅದರಲ್ಲೊಂದು ಕೃಷ್ಣ ಅರ್ಜುನನಿಗೆ ಸಾರಥಿಯಾಗುವುದಾಗಿ ಮಾತು ಕೊಟ್ಟದ್ದು. ಈ ವರ್ತಮಾನವನ್ನು ಕೇಳಿ ನಾನು ಸ್ವಲ್ಪ ಮಟ್ಟಿಗೆ ಚಿಂತಾಕ್ರಾಂತನಾದೆ. ಯಾಕೆಂದರೆ ಕೃಷ್ಣ ದೇವರೆಂದು ಜಗತ್ತು ಭಾವಿಸತೊಡಗಿತ್ತು. ಅವನು ಅರ್ಜುನನನ್ನು ಅತಿಯಾಗಿ ಪ್ರೀತಿಸುತ್ತಿದ್ದ. ನಾನು ಹಗೆ ತೀರಿಸಿಕೊಳ್ಳುವ ಸಂದರ್ಭದಲ್ಲಿ ಅವನು ಪೂರ್ಣ ಶಕ್ತಿಯನ್ನು ಬಳಸಿಕೊಂಡು ಅರ್ಜುನನನ್ನು ಉಳಿಸುವ ಯತ್ನ ಮಾಡಿಯೇ ಮಾಡುತ್ತಾನೆಂದು ತಿಳಿದೆ. ಇದು ನನಗೊಂದು ಆತಂಕ ಹುಟ್ಟಿಸುವ ವಿಷಯವೇ ಆಗಿತ್ತು. ಈ ಆತಂಕ ನಿವಾರಣೆಗೆಂಬಂತೆ ಇನ್ನೊಂದು ಪ್ರಕರಣ ನಡೆಯಿತು. ಅದು ಮಾದ್ರದ ಶಲ್ಯ ಭೂಪತಿ ಪಾಂಡವರ ಪಕ್ಷಕ್ಕೆ ಸಹಾಯ ಮಾಡಲೆಂದು ಹೊರಟವನು ಕೌರವನ ತಂತ್ರಕ್ಕೆ ಬಲಿಬಿದ್ದು ಕೌರವನ ಪಕ್ಷದಿಂದ ಹೋರಾಡುತ್ತೇನೆಂದು ಮಾತುಕೊಟ್ಟು ಕೌರವ ಸೇನೆಯನ್ನು ಸೇರಿದ್ದು. ಇದು ನನ್ನ ಉದ್ದೇಶ ಸಾಧನೆಗೆ ಅನುಕೂಲವೇ ಆಯಿತು. ಹೀಗೆ ನಾನು ಭಾವಿಸುವುದಕ್ಕೊಂದು ಹಿನ್ನೆಲೆಯಿತ್ತು.
ಕರ್ಣ ಹಿಂದೆ ದ್ರೋಣರ ಬಳಿ ಅಭ್ಯಾಸ ಮಾಡುತ್ತಿದ್ದಾಗ ಮಂತ್ರಾಸ್ತ್ರಗಳ ಉಪದೇಶ ಹೊಂದುವುದಕ್ಕೆ ಅರ್ಹತೆಯಿಲ್ಲವೆಂದು ಕರ್ಣ ದ್ರೋಣರಿಂದ ತಿರಸ್ಕೃತನಾಗಿದ್ದ. ನಿರಾಶನಾದ ಅವನು ಆಚಾರ್ಯ ಪರಶುರಾಮರ ಬಳಿಹೋಗಿ ತನ್ನ ಹಿನ್ನೆಲೆಯನ್ನು ಮುಚ್ಚಿಟ್ಟು ಅವರಿಂದ ಸಮಸ್ತ ಮಂತ್ರಾಸ್ತ್ರಗಳನ್ನೂ ಕಲಿತಿದ್ದ. ದುರ್ದೈವದಿಂದ ಒಂದು ದಿನ ನಿಜವನ್ನು ತಿಳಿದ ಆಚಾರ್ಯರು ಕಲಿತುದೆಲ್ಲ ಮರೆತು ಹೋಗಲಿ ಎಂದು ಶಪಿಸಿದರು. ಅವರ ಪಾದಗಳ ಮೇಲೆ ಕಣ್ಣೀರುಹರಿಸಿ ಯಾಚಿಸಿದ್ದಕ್ಕೆ ಒಂದು ಉಶ್ಶಾಪವನ್ನೂ ಕೊಟ್ಟಿದ್ದರು. `ಮದ್ರಭೂಪತಿಯಾದ ಶಲ್ಯನ ಸಾರಥ್ಯದಲ್ಲಿ ಮಂತ್ರಾಸ್ತ್ರಗಳ ಸ್ಮರಣೆಯುಂಟಾಗಿ ಯುದ್ಧದಲ್ಲಿ ಗೆಲ್ಲುವೆ’ ಎಂಬುದೇ ಆ ಉಶ್ಶಾಪ. ಇದನ್ನು ತಿಳಿದಿದ್ದ ನನಗೆ ಶಲ್ಯ ಕೌರವನ ಪಕ್ಷ ಸೇರಿದಾಗ ಕರ್ಣನ ಗೆಲವು ನಿಶ್ಚಯವೆನಿಸಿ ಭರವಸೆ ಮೂಡಿತು. ಕೊನೆಗೆ ಪಾಂಡವ ಕೌರವರ ನಡುವೆ ಯುದ್ಧ ನಿಶ್ಚಯವಾದಾಗ ನನ್ನ ಸೇಡು ತೀರಿಸಿಕೊಳ್ಳುವುದಕ್ಕೆ ಸಮಯ ಬಂತೆಂದು ಸಮಾಧಾನವೂ ಉಂಟಾಯಿತು. ಯುದ್ಧ ತೊಡಗಿತು. ಮೊದಲು ಸೇನಾಧಿಪತ್ಯ ವಹಿಸಿದ ಭೀಷ್ಮರು, ಬಳಿಕ ದ್ರೋಣರು ಯುದ್ಧದಲ್ಲಿ ಗೆಲವು ಸಾಧಿಸದೇ ಹೋದರು. ಹದಿನಾರನೆಯ ದಿನದ ಯುದ್ಧ ಕರ್ಣನ ಸೇನಾಧಿಪತ್ಯದಲ್ಲಿ ನಡೆಯಿತು. ಆ ದಿನವಂತೂ ಕೌರವ ಪಕ್ಷಕ್ಕೆ ಹೀನಾಯ ಸೋಲು ಉಂಟಾಯಿತು. ಕರ್ಣ ಖಿನ್ನನಾದ. ಆದರೆ ಪರಶುರಾಮರ ಮಾತನ್ನು ಸ್ಮರಿಸಿಕೊಂಡು ಶಲ್ಯನನ್ನು ಹೇಗೋ ಸಾರಥ್ಯಕ್ಕೆ ಒಪ್ಪಿಸಿ ಮರುದಿನ ಯುದ್ಧರಂಗ ಪ್ರವೇಶ ಮಾಡಿದ.
ಉಭಯ ಪಕ್ಷಗಳ ಕಾದಾಟ ಪ್ರಾರಂಭವಾಗುವ ಕೆಲಗಾಲದ ಮುನ್ನ ನಾನು ನನಗಿದ್ದ ವಿಶಿಷ್ಟ ಶಕ್ತಿಯಿಂದ ಕರ್ಣನ ಬತ್ತಳಿಕೆಯಲ್ಲಿ ಸೇರಿಕೊಂಡಿದ್ದೆ. ಸ್ವತಃ ಕರ್ಣನಿಗೂ ಇದರ ಅರಿವಿರಲಿಲ್ಲ. ಗೊತ್ತಾಗುತ್ತಿದ್ದರೆ ನನಗೆ ಆಶ್ರಯ ಕೊಡುತ್ತಿದ್ದನೆಂದು ಹೇಳುವಂತಿರಲಿಲ್ಲ. ಅವನ ಬತ್ತಳಿಕೆಯಲ್ಲಿ ಸರ್ಪಾಕೃತಿಯ ಒಂದು ವಿಶಿಷ್ಟವಾದ ಅಸ್ತ್ರವಿತ್ತು. ಅದು ಅವನ ಗುರುಗಳೇ ಕರುಣಿಸಿದ್ದು. ಅರ್ಜುನನ ವಧೆಗೆಂದೇ ಮೀಸಲಾಗಿಟ್ಟಿದ್ದ ಅಸ್ತ್ರ ವಿಶೇಷವದು. ನಾನು ಅದರೊಳಗೆ ಆವೇಶಗೊಂಡು ಕಾದುಕುಳಿತಿದ್ದೆ. ಈಗ ನಡೆಯುವ ಕರ್ಣಾರ್ಜುನರ ದ್ವಂದ್ವ ಯುದ್ಧದ ಸಂದರ್ಭ ನನ್ನ ಪ್ರವೇಶದ ಸಮಯದ ನಿರೀಕ್ಷೆಯಲ್ಲಿ ನಾನಿದ್ದದ್ದು ಇದೇ ಕಾರಣಕ್ಕೆ. ಕರ್ಣ ಈ ದಿನವಾದರೂ ಬತ್ತಳಿಕೆಯಿಂದ ಸರ್ಪಾಸ್ತ್ರವನ್ನು ತೆಗೆಯುತ್ತಾನೆಂಬುದು ನನ್ನ ನಿರೀಕ್ಷೆ.
ಕೊನೆಗೂ ನಾನು ಸುದೀರ್ಘ ಕಾಲದಿಂದ ಹಂಬಲಿಸುತ್ತಿದ್ದ ಆ ಗಳಿಗೆ ಬಂದೇ ಬಂತು. ರಣೋತ್ಸಾಹದಿಂದ ವಿಜೃಂಭಿಸುತ್ತಿದ್ದ ಕರ್ಣ ಬತ್ತಳಿಕೆಗೆ ಕೈಯಿಕ್ಕಿ ನನ್ನನ್ನು ಹೊರತೆಗೆದು ತನ್ನ ಧನುಸ್ಸಿಗೆ ಜೋಡಿಸಿ ಅರ್ಜುನನ ಕೊರಳನ್ನು ಗುರಿಯಾಗಿಸಿ ಪ್ರಯೋಗಿಸುವುದಕ್ಕೆ ಸಜ್ಜಾದ. ಇನ್ನೇನು ಪ್ರಯೋಗಿಸಬೇಕು ಅನ್ನುವಷ್ಟರಲ್ಲಿ ಇಷ್ಟು ಕಾಲ ಮೌನವಾಗಿದ್ದು ಸಾರಥಿಯಾಗಿ ರಥ ನಡೆಸುತ್ತಿದ್ದ ಶಲ್ಯ ಮಾತನಾಡಿದ. “ಅಯ್ಯಾ ಕರ್ಣ, ಸ್ವಲ್ಪ ತಡೆ. ನೀನೀಗ ಪ್ರಯೋಗಿಸುವ ಬಾಣ ಅರ್ಜುನನನ್ನು ತಾಗುವುದು ಸಂಶಯ. ನಿನ್ನ ಗುರಿ ಕೊರಳಿಗಾದರೂ ಕೃಷ್ಣಚಮತ್ಕೃತಿಯಿಂದ ಅದು ತಪ್ಪಿಹೋಗುತ್ತದೆ. ಗುರಿಬದಲಿಸಿ ಪ್ರಯೋಗಿಸು. ಕೊರಳಿಗಿಂತ ಕೊಂಚ ಕೆಳಗೆ ಎದೆಗೆ ಗುರಿಯಿಡು.” ಕರ್ಣನಿಗೆ ಇದು ಸಮ್ಮತವಾಗಲಿಲ್ಲ. ತಾನು ಸೇನಾಧ್ಯಕ್ಷ. ಅಸ್ತ್ರಪ್ರಯೋಗದಲ್ಲಿ ನಿಷ್ಣಾತ. ತನಗೆ ಸಾರಥಿ ಹೀಗೆ ಹೇಳುವುದೇ ಸರಿಯಲ್ಲವೆನಿಸಿರಬೇಕು. ಅಲ್ಲದೆ ಗುರಿಬದಲಿಸುವುದು ಧನುರ್ವಿದ್ಯಾಪಾರಂಗತನಿಗೆ ಭೂಷಣವಲ್ಲ. ಸ್ವಾಭಿಮಾನಿಯಾದ ಕರ್ಣ ಇದನ್ನು ಸಹಿಸಿಕೊಳ್ಳುವ ಸ್ವಭಾವದವನೂ ಅಲ್ಲ. ಶಲ್ಯನ ಮಾತನ್ನು ತಿರಸ್ಕರಿಸಿದ. ನನಗೂ ಶಲ್ಯನ ಮಾತು ಸರಿಯೆಂದು ತೋರಿತು. ಕೃಷ್ಣನಂತಹ ಚತುರ ಸಾರಥಿ ಈ ಗುರಿಯನ್ನು ತಪ್ಪಿಸುವಂತೆ ರಥ ನಡೆಸಬಲ್ಲವನಾಗಿದ್ದ. ಆದರೆ ನಾನು ಇದನ್ನು ಹೇಳುವ ಹಾಗಿರಲಿಲ್ಲ. ಶಲ್ಯನ ಮಾತು ಕೇಳುವುದು ಅವಮಾನವೆಂದು ಭಾವಿಸಿದ ಕರ್ಣ ಮೊದಲಿಟ್ಟಿದ್ದ ಗುರಿಗೇ ಬಾಣವನ್ನು ಪ್ರಯೋಗಿಸಿದ. ಪರಿಣಾಮ ಶಲ್ಯನೆಂದಂತೆ ಆಯಿತು. ಗುರಿ ತಪ್ಪಿಹೋಯಿತು. ಅಥವಾ ಕೃಷ್ಣ ತಪ್ಪಿಸಿದನೆಂದರೂ ಸರಿಯೇ. ಅರ್ಜುನನ ಮೇಲೆ ವಿಷಕಕ್ಕುವುದಕ್ಕೆ ಸಿದ್ಧನಾಗಿದ್ದ ನಾನು ಅವನ ಕಿರೀಟವನ್ನು ಕಚ್ಚಿದೆ. ಮೈ ಸಿಕ್ಕಲಿಲ್ಲ. ಅರ್ಜುನ ಬದುಕಿಕೊಂಡ.
ನಾನು ಸೋತು ಹಿಂದೆ ಬಂದೆ. ನನ್ನ ಹಗೆ ಬದುಕಿದನೆಂಬ ಹತಾಶೆಗಿಂತಲೂ ಅಳಿದ ನನ್ನ ತಾಯಿಯ ಅನ್ಯಾಯದ ಕಗ್ಗೊಲೆಗೆ ಪ್ರತಿಕಾರ ಮಾಡಲಾಗಲಿಲ್ಲವೆಂಬ ವ್ಯಥೆಯೇ ನನ್ನ ಹೃದಯವನ್ನು ತುಂಬಿಕೊಂಡಿತು. ಇಲ್ಲ, ಇನ್ನೊಂದು ಪ್ರಯತ್ನ, ಅದು ಕೊನೆಯದೇ ಆದರೂ ಮಾಡಿಯೇ ತೀರುತ್ತೇನೆಂಬ ನಿಶ್ಚಯದಿಂದ ಕರ್ಣನಲ್ಲಿಗೆ ಮರಳಿದೆ. ನಾನು ಯಾರೆಂಬ ನಿಜವನ್ನು ಅವನಿಗೆ ತಿಳಿಸಿ ಮೊದಲ ಪ್ರಯೋಗ ವಿಫಲವಾದರೂ ಇನ್ನೊಮ್ಮೆ ಪ್ರಯೋಗಿಸು, ಹಗೆಯನ್ನು ಗೆದ್ದುಕೊಡುವೆನೆಂದು ಯಾಚಿಸಿದೆ. ಕರ್ಣ ಒಪ್ಪಲಿಲ್ಲ. ನನ್ನ ಹಲವು ಪ್ರಾರ್ಥನೆಗಳಿಗೂ ಅವನೊಲಿಯದೇ ಹೋದ. ನಾನು ದೀನನಾಗಿ ಬೇಡುವಾಗ ನನ್ನ ಕಣ್ಣುಗಳಲ್ಲಿ ಕಂಬನಿ ತುಂಬಿತ್ತು. ಏನು ಪ್ರಯೋಜನ? ನನ್ನ ಅಳಲಿಗೆ ಬದುಕಿನಲ್ಲಿ ತಾಯಿಯ ಮಮತೆ ಏನೆಂದು ಅರಿಯದೆ ನೊಂದವನಾಗಿದ್ದ ಅವನೂ ಕಿವಿಗೊಡಲಿಲ್ಲ. ಕೊನೆಗೆ ಸಿಟ್ಟಿಗೆದ್ದು ನನ್ನನ್ನು ದೂರ ತಳ್ಳಿದ.
ನನಗಿನ್ನೇನು ಉಳಿಯಿತು?
ದುರ್ಬಲನೂ ಅಸಹಾಯಕನೂ ಆಗಿದ್ದ ನಾನು ನನ್ನ ಕೊನೆಯ ಆಕ್ರಮಣವನ್ನು ಮಾಡುವುದಕ್ಕೆ ಮುಂದಾದೆ.
ನನ್ನೊಳಗೆ ತುಂಬಿಕೊಂಡಿದ್ದ ಪಾರ್ಥನ ಕುರಿತಾದ ದ್ವೇಷವನ್ನೇ ವಿಷವಾಗಿಸಿಕೊಂಡು ಅವನ ಮೇಲೆ ಕಕ್ಕುವುದಕ್ಕೆಂದು ತೀವ್ರ ವೇಗದಿಂದ ನುಗ್ಗಿಹೋದೆ. ಏನು ಮಾಡಲಿ ಅಲ್ಲಿ ಕೃಷ್ಣನಿದ್ದನಲ್ಲ! ಅರ್ಜುನನ್ನು ಎಚ್ಚರಿಸಿದ, “ಪಾರ್ಥ, ಅದೋ ನೊಡು, ಅಶ್ವಸೇನ, ತಕ್ಷಕ ಪುತ್ರ ಬರುತ್ತಿದ್ದಾನೆ. ಹೂಡು ಬಾಣ ಅವನನ್ನು ಕತ್ತರಿಸು.” ಅಷ್ಟೆ! ನನ್ನ ದೇಹ ಛಿದ್ರವಾಗುವ ಕ್ಷಣ ಮೊದಲು, ಅರ್ಜುನನ ಬಾಣಕ್ಕೆ ಬಲಿಯಾಗಿ ರಕ್ತ ಸುರಿಸುತ್ತಾ ಅಸಹಾಯಳಾಗಿ ಹೊರಳಾಡುತ್ತಿದ್ದ ನನ್ನ ತಾಯಿಯ ಆಕ್ರಂದನ ನನ್ನ ಕಿವಿಗಳಲ್ಲಿ ಮತ್ತೊಮ್ಮೆ ಮೊರೆಯಿತು. ಆರ್ತಳಾಗಿದ್ದ ಅವಳ ಕರುಣಾಜನಕ ಚಿತ್ರ ನನ್ನ ಕಣ್ಣುಗಳೆದುರು ಮಿಂಚಿಹೋಯಿತು.
ಅಷ್ಟೆ. ನನ್ನ ಕಥೆ ಮುಗಿಯಿತು!