ಬೆಳೆಸುವ ಪ್ರತಿ ಹಂತದಲ್ಲೂ ತಾವೇ ಅವನಿಗೆ ಸ್ವಾರ್ಥಿಯಾಗಬೇಕಾದ ಎಲ್ಲ ಅವಕಾಶಗಳನ್ನೂ ಮಾಡಿಕೊಟ್ಟು ಕೊನೆಗೆ ಮಗ ತಮ್ಮ ಕಷ್ಟ ಅರ್ಥಮಾಡಿಕೊಳ್ಳಲಿಲ್ಲ ಎಂದು ಮರುಗುವುದರಲ್ಲಿ ಯಾವ ಅರ್ಥವೂ ಇಲ್ಲ.
ಅವನು ಸುಮ್ಮನೇ ತಲೆತಗ್ಗಿಸಿ ನಿಂತಿದ್ದ. ಸುತ್ತಲೂ ನಾಲ್ಕು ಮಂದಿ ಮೇಷ್ಟ್ರುಗಳು, ಅವನ ಅಪ್ಪ ಅಮ್ಮ ಮತ್ತು ಅವನ ಅಕ್ಕ. ಆ ಹೆತ್ತವರನ್ನು ನೋಡಿದ ತಕ್ಷಣವೇ ಅವರು ಅತ್ಯಂತ ಬಡತನದಲ್ಲಿ ಬದುಕುತ್ತಿರುವವರು ಎಂದು ಎಂಥವರಾದರೂ ಊಹಿಸಬಹುದಿತ್ತು. ಉಟ್ಟಿದ್ದ ಬಟ್ಟೆ, ಎಣ್ಣೆ ನೀರು ಕಾಣದಂತಿದ್ದ ತಲೆಗೂದಲು, ಬಡಕಲಾದ ಮೈ. ಅವನ ಸುತ್ತಲೂ ಇದ್ದ ಮೇಷ್ಟ್ರುಗಳೆಲ್ಲ ತರಹೇವಾರಿಯಾಗಿ ಅವನನ್ನು ಮಾತನಾಡಿಸಿದರೂ ಅವರ ಪ್ರಶ್ನೆಗೆ ಅವನಲ್ಲಿ ಉತ್ತರ ಇರಲಿಲ್ಲ. ಅಥವಾ ಅವನಿಗೆ ಉತ್ತರಿಸುವುದಕ್ಕೆ ಯಾವ ಎದೆಗಾರಿಕೆಯೂ ಇರಲಿಲ್ಲ. ಆ ತಾಯಿ ಸುರಿಯುವ ಕಣ್ಣೀರನ್ನು ಒರೆಸಿಕೊಳ್ಳುತ್ತಲೇ ತನ್ನ ಮಗನ ಗಲ್ಲ ಹಿಡಿದು ಕೇಳುತ್ತಿದ್ದಳು. ಅವರೆಲ್ಲರ ಪ್ರಶ್ನೆ ಒಂದೇ, ಹೇಳೋ, ಮನೆಯಿಂದ ತಂದ ಎಪ್ಪತ್ತೈದು ಸಾವಿರಾನ ಏನು ಮಾಡ್ದೆ?
ಹಿನ್ನೆಲೆಯಿಷ್ಟೇ. ಆ ವಿದ್ಯಾರ್ಥಿ ಕಾಲೇಜುಶುಲ್ಕ, ಟ್ಯೂಷನ್ಶುಲ್ಕ, ಹಾಸ್ಟಲ್ಶುಲ್ಕ ಎಂಬಿತ್ಯಾದಿ ನೆಪವೊಡ್ಡಿ ಮನೆಯಿಂದ ಒಟ್ಟು ಎಪ್ಪತ್ತೈದು ಸಾವಿರ ತಂದಿದ್ದ.
ಅವನ ಮೌನ ಕಂಡ ಪ್ರಾಂಶುಪಾಲರು ಅವನನ್ನು ತನ್ನ ಕೊಠಡಿಗೆ ಕರೆದೊಯ್ದರು. ನೋಡಪ್ಪಾ, ನಿಜ ಬಾಯಿ ಬಿಡು. ನಿನಗೆ ಯಾರೂ ಏನೂ ಮಾಡೊಲ್ಲ. ಹೇಳು, ಅಷ್ಟೊಂದು ದುಡ್ಡನ್ನು ಏನು ಮಾಡಿದೆ?
ಅವನು ಕಡೆಗೂ ಬಾಯ್ಬಿಟ್ಟ. ಸಾರ್, ಫೀಸು ಕಟ್ಟಿರೋದು ಹದಿನೈದು ಸಾವ್ರ. ಇನ್ನೈದು ಸಾವಿರದ ಬಟ್ಟೆ ತಗೊಂಡೆ. ಮತ್ತೆ ಹತ್ತು ಸಾವಿರದ ಮೊಬೈಲು ತಗೊಂಡೆ. ಹಾಸ್ಟೆಲ್ಲಿಗೆ ಇಪ್ಪತ್ತೈದು ಸಾವಿರ ಕಟ್ಟಿದೆ. ಒಂದೂವರೆ ತಿಂಗಳಿನಿಂದ ಹೋಟೆಲ್ಲಿನಲ್ಲಿ ಊಟ ಮಾಡ್ತಿದ್ದೆ, ಅದು ಸುಮಾರು ಇಪ್ಪತ್ತು ಸಾವಿರ ಆಯ್ತು…..
ಹೊರಗೆ ನಿಂತುಕೊಂಡು ಈ ಮಾತುಗಳನ್ನು ಕೇಳಿದ ತಾಯ್ತಂದೆ ದಂಗಾದರು. ಅವರಿಗೆ ಒಪ್ಪೊತ್ತಿನ ಕೂಳಿಗೆ ಗತಿಯಿಲ್ಲ. ಒಂದು ದಿನ ಮಾಡಿದ ಸಾರು ಮೂರು ದಿನಕ್ಕೆ ಸರಿಹೊಂದಿಸಬೇಕಾದ ಪರಿಸ್ಥಿತಿ. ಅವನ ಅಕ್ಕ ವರುಷ ಇಪ್ಪತ್ತಾರಾದರೂ ತಮ್ಮನನ್ನು ಓದಿಸಬೇಕೆಂಬ ಮನೆಮಂದಿಯ ಅಪೇಕ್ಷೆಗಾಗಿ ಬಟ್ಟೆ ಕಾರ್ಖಾನೆಯೊಂದರಲ್ಲಿ ದುಡಿಯುತ್ತ್ತಾ ತಿಂಗಳಿಗೆ ಹತ್ತು ಸಾವಿರ ಸಂಪಾದಿಸುತ್ತಾಳೆ. ಅದಷ್ಟೂ ತಮ್ಮನ ವಿದ್ಯಾಭ್ಯಾಸಕ್ಕೆ ಮೀಸಲು. ತನ್ನ ಆಸೆಗಳನ್ನೆಲ್ಲ ನುಂಗಿಕೊಳ್ಳುತ್ತಾ ಒಂದೊಂದು ರೂಪಾಯಿಯನ್ನೂ ಕೂಡಿಡುತ್ತಾಳೆ. ಆದರೆ ತಮ್ಮ ಮಾಡಿದ ಕೆಲಸ ಹೀಗೆ. ಅವನು ಪ್ರಾಂಶುಪಾಲರ ಕೊಠಡಿಯಿಂದ ಹೊರಬಂದ ತಕ್ಷಣ ಹೆತ್ತವರು ಏನೂ ಮಾತಾಡಿಸಲಿಲ್ಲ. ಆದರೆ ಅಕ್ಕ ಸುತ್ತಲಿನ ಪರಿಸರವನ್ನೂ ಮರೆತು ಅವನ ಕಾಲರ್ ಪಟ್ಟಿ ಹಿಡಿದು ರಪರಪನೆ ಕೆನ್ನೆಗೆ ಬಾರಿಸಿದಳು. ಅವಳ ರೋಷವನ್ನು ಎದುರಿಸುವ ಮುಖ ಹೆತ್ತವರಿಗೂ ಇರದಿದ್ದದ್ದು ವಿಷಾದ.
ಕಾಡುವ ಪ್ರಶ್ನೆ
ತನ್ನ ಕುಟುಂಬದ, ಒಡಹುಟ್ಟಿದವಳ ಆಶಯಗಳನ್ನು ಎಳ್ಳಿನಿತೂ ಅರ್ಥಮಾಡಿಕೊಳ್ಳದೆ ಅವರು ಕಷ್ಟಪಟ್ಟು ಕೂಡಿಟ್ಟ ಹಣವನ್ನೆಲ್ಲ ತನ್ನ ಹಕ್ಕು ಎಂಬಂತೆ ಖರ್ಚುಮಾಡಿದ ಈ ಹುಡುಗನ ಮತಿಹೀನತೆಗೆ ಏನೆನ್ನಬೇಕು? ಯಾವ ಶಿಕ್ಷೆ ಕೊಟ್ಟರೂ ಅವನು ಖರ್ಚು ಮಾಡಿದ ಮೊತ್ತ ಮತ್ತೆ ಬರಲು ಸಾಧ್ಯವಿಲ್ಲ. ಎದೆಯೊಡೆದಂತಾಗಿರುವ ತಂದೆ-ತಾಯಿಗೆ ಮಗನ ಮೇಲೆ ಮತ್ತಿನ್ಯಾವತ್ತೂ ನಂಬಿಕೆಯೆಂಬುದು ಚಿಗುರಲು ಸಾಧ್ಯವಿಲ್ಲ. ತಾನು ಮದುವೆಯ ವಯಸ್ಸು ಮೀರುತ್ತಿದ್ದರೂ, ಹೆತ್ತವರಿಗೆ ತನ್ನ ಮದುವೆಯ ಯೋಚನೆಯೇ ಇಲ್ಲದಿದ್ದರೂ ಅವರ ಹಂಬಲಕ್ಕಾಗಿ ತಮ್ಮನ ವಿದ್ಯಾಭ್ಯಾಸಕ್ಕೆಂದೇ ಬದುಕು ಸವೆಸುತ್ತಿರುವ ಅಕ್ಕನ ಪಾದದ ಧೂಳನ್ನು ಕಣ್ಣೀರಿಂದಲೇ ತೊಳೆದರೂ ಅವನ ಪಾಪ ಪರಿಹಾರವಾಗುತ್ತದೋ ಗೊತ್ತಿಲ್ಲ. ಆದರೂ ಇಲ್ಲೊಂದು ಪ್ರಶ್ನೆ ಕಾಡುತ್ತದೆ. ಆ ಹುಡುಗನ ಬುದ್ಧಿಗೇಡಿತನಕ್ಕೆ ಅವನೊಬ್ಬನೇ ಹೊಣೆಯೇ?
ಇಂತಹ ಕುಟುಂಬಗಳಲ್ಲಿ ಹೆಚ್ಚಿನ ಸಂದರ್ಭಗಳಲ್ಲೂ ಮಗಳಿಗಿಂತ ಜಾಸ್ತಿ ಮಗನಿಗೆ ಪ್ರಾಶಸ್ತ್ಯ. ಮಗಳ ಕನಸು ಗುರಿಗಳಿಗಿಂತ ಮಗನ ಆಸೆಗಳೇ ಮುಖ್ಯ. ಓದಿನಲ್ಲಿ ಹೆಣ್ಣುಮಗಳೂ ಚುರುಕಿದ್ದರೂ ಇಬ್ಬರಲ್ಲಿ ಒಬ್ಬರನ್ನಷ್ಟೇ ಓದಿಸುವ ಸಾಮರ್ಥ್ಯ ಹೆತ್ತವರಿಗಿದ್ದಾಗ ಮಗನಿಗಷ್ಟೇ ಆದ್ಯತೆ. ಅವನ ಮನೆಗೆಲಸಗಳನ್ನು ಅಕ್ಕ ಮಾಡಿಕೊಟ್ಟರೂ ಸರಿಯೇ, ಶಾಲೆಯ ಮೆಟ್ಟಿಲು ಹತ್ತುವ ಭಾಗ್ಯ ಮಗನದ್ದೇ ಆಗಿರುತ್ತದೆ. ಅವನು ಶಾಲೆಗೆ ಹೋಗುವ ಕಾರಣದಿಂದ ಮನೆಯ ಯಾವ ಕೆಲಸವನ್ನೂ ಹಂಚಿಕೊಳ್ಳಬೇಕಿಲ್ಲ. ಯಾಕೆಂದರೆ ಅವನ ಸಮಯ ಅತ್ಯಮೂಲ್ಯ. ಊಟತಿಂಡಿಗಳಲ್ಲೂ ಅಷ್ಟೇ. ಅವನಿಗೆ ಸಿಂಹಪಾಲು. ಮನೆಗೆ ಅಪರೂಪಕ್ಕೆ ಬರಬಹುದಾದ ಸಿಹಿತಿಂಡಿಗಳಿಗೆ ಅವನೊಬ್ಬನೇ ಹಕ್ಕುದಾರನಾಗುತ್ತಾನೆ. ಪ್ರತಿಹಂತದಲ್ಲೂ ಇದೇ ಮನೋಭಾವದೊಂದಿಗೆ ಬೆಳೆಯುವ ಅವನಲ್ಲಿ ಸ್ವಾರ್ಥ ಬೆಳೆಯದಿದ್ದೀತೇ?
ಸಹಜವಾಗಿಯೇ ಸುತ್ತಲಿನ ಎಲ್ಲ ಸುಖ ಸಂತೋಷಗಳೂ ತನಗೆ ಮಾತ್ರ ಸೇರಬೇಕು. ಮಿಕ್ಕುಳಿದರೆ ಮಾತ್ರ ಇತರರಿಗೆ ಎಂಬ ಭಾವ ಅವನಲ್ಲಿ ತುಂಬುತ್ತಾ ಹೋಗುತ್ತದೆ. ಮನೆಯವರೆಲ್ಲರೂ ತನಗಾಗಿ ಕಷ್ಟ ಪಡುತ್ತಿದ್ದರೆ ಆ ಕಷ್ಟಕ್ಕೆ ಪ್ರತಿಫಲವಾಗಿ ತನ್ನ ಸಾಧನೆ, ಅದರಿಂದ ದೊರೆಯಬಹುದಾದ ಸುಖ-ಸಂತೋಷವನ್ನು ಅವರಿಗೆ ತಂದುಕೊಡಬೇಕು ಎನ್ನುವುದಕ್ಕಿಂತಲೂ ಅವರು ತಮ್ಮ ಆಯ್ಕೆಯಿಂದಲೇ ಕಷ್ಟ ಪಡುತ್ತಾರೆ ಎಂಬ ಯೋಚನೆ ಬೇರೂರುತ್ತದೆ. ಹೀಗಿರುವಾಗ ಅವರ ತ್ಯಾಗಕ್ಕೆ ಕಾಸಿನ ಬೆಲೆಯೂ ಈ ಹುಡುಗ ಕೊಡಲಾರ. ಅವನು ಸ್ವಾರ್ಥಿಯಾಗಿ ಬೆಳೆಯಲು ನೇರವಾಗಿ ಅವನ ಕುಟುಂಬದವರೇ ಕಾರಣರಾಗಲಿಲ್ಲವೇ?
ಇಂಥ ಮನೆಗಳಲ್ಲಿ ನಿಜಕ್ಕೂ ತುಳಿತಕ್ಕೊಳಗಾಗುವಳು ಹೆಣ್ಣುಮಗಳು. ತಂದೆ-ತಾಯಿ ಮಾಡುವ ಎಲ್ಲ ಪಕ್ಷಪಾತವನ್ನೂ ಹತ್ತಿರದಿಂದ ನೋಡುವ ಆಕೆ ಅಸಹಾಯಕಿ. ಶಾಲೆಯ ಕನಸು ಮಣ್ಣಾಗುತ್ತದೆ. ಮನೆಯಲ್ಲೇ ಇರುವವಳೆಂಬ ಕಾರಣಕ್ಕೆ ಹೊಸ ಬಟ್ಟೆಯ ಖುಷಿಯೂ ಅವಳಿಗಿರುವುದಿಲ್ಲ. ತಿಂಡಿತಿನಿಸುಗಳು ತಮ್ಮ ಬಿಟ್ಟರುಂಟು. ಒಲೆಯೂದುವಾಗಿನ ಹೊಗೆಯಿಂದ ಕೆಂಪಗಾಗುವ ಅವಳ ಕಣ್ಣುಗಳಲ್ಲಿ ಅವಳ ಮನಸ್ಸಿನ ನೋವಿನ ಹನಿಗಳು ಇಂಗಿಹೋಗುತ್ತವೆ. ಅದರಲ್ಲೂ ತಾನು ದುಡಿಯುವ ಮೊತ್ತವೂ ಅವನ ವಿದ್ಯಾಭ್ಯಾಸಕ್ಕೆಂದರೆ ಕೊಡುವುದಿಲ್ಲ ಎನ್ನುವ ಯಾವ ಅಧಿಕಾರವೂ ಅವಳಿಗಿಲ್ಲ. ಆದರೆ ತನ್ನ ಪರಿಶ್ರಮಕ್ಕೆ ಕಿಂಚಿತ್ತೂ ಬೆಲೆಯಿಲ್ಲದಂತೆ ತಮ್ಮ ಶೋಕಿ ಮಾಡಿದರೆ ಅವಳಿಗಾಗುವ ನೋವೆಷ್ಟು? ಇದಕ್ಕೆ ಅವಳ ಹೆತ್ತವರೂ ಸ್ವತಃ ಕಾರಣರಷ್ಟೇ?
ಹೆತ್ತವರ ಜವಾಬ್ದಾರಿ
ಮನೆಯಲ್ಲಿ ಹಾಸುಹೊಕ್ಕಾಗಿರುವ ಬಡತನ ಕಷ್ಟ-ಕಾರ್ಪಣ್ಯಗಳನ್ನೆಲ್ಲ ಮಗನಿಗೆ ಅರ್ಥಮಾಡಿಸುವಂಥ ಮನಸ್ಸು ಹೆತ್ತವರಿಗೂ ಇರಬೇಕು. ಊಟವೋ ತಿಂಡಿಯೋ ಏನೇ ಇದ್ದರೂ ಮನೆಮಂದಿ ಸಮಾನವಾಗಿ ಹಂಚಿಕೊಳ್ಳಬೇಕೆಂಬುದನ್ನು ಅವನಿಗೆ ರೂಢಿ ಮಾಡಿಸಬೇಕು. ಹಬ್ಬ-ಹರಿದಿನಗಳಲ್ಲಿ ತರಬಹುದಾದ ಹೊಸ ಉಡುಗೆ ಒಬ್ಬನಿಗೇ ದುಬಾರಿ ಬೆಲೆಯದ್ದು ತರುವುದಕ್ಕಿಂತ ಸಾಮಾನ್ಯವಾದದ್ದು ಮನೆಮಂದಿಯೆಲ್ಲರಿಗೂ ತರಬಹುದು. ಆಗ ಅವನಲ್ಲಿ ಉತ್ತಮವಾದ ಉಡುಪಿನ ಆಸೆ ಮೊಳೆಯುವುದರೊಂದಿಗೆ ಅದನ್ನು ಗಿಟ್ಟಿಸಬೇಕಾದರೆ ತಾನೂ ಕಷ್ಟಪಡಬೇಕು ಎಂಬ ಪ್ರಜ್ಞೆ ಜಾಗೃತವಾಗುತ್ತದೆ. ಪ್ರತಿ ಹಂತದಲ್ಲೂ ತಾವೇ ಅವನಿಗೆ ಸ್ವಾರ್ಥಿಯಾಗ ಬೇಕಾದ ಎಲ್ಲ ಅವಕಾಶಗಳನ್ನೂ ಮಾಡಿಕೊಟ್ಟು ಕೊನೆಗೆ ಮಗ ತಮ್ಮ ಕಷ್ಟ ಅರ್ಥಮಾಡಿಕೊಳ್ಳಲಿಲ್ಲ ಎಂದು ಮರುಗುವುದರಲ್ಲಿ ಯಾವ ಅರ್ಥವೂ ಇಲ್ಲ. ಇಂತಹ ಮಕ್ಕಳು ಕಡೆಗಾಲದಲ್ಲಿ ತಾಯ್ತಂದೆಯರಿಗೆ ಆಸರೆಯಾಗುವ ಭರವಸೆಯೂ ಇಲ್ಲ.