ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ
ಪ್ರಕಟಣೆಯ
60ನೇ
ವರ್ಷ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

Utthana > ಉತ್ಥಾನ ಅಕ್ಟೋಬರ್ 2015 > ಮನಸ್ಸಿನ ಮಾಲಿಕರಾಗೋಣ

ಮನಸ್ಸಿನ ಮಾಲಿಕರಾಗೋಣ

ನಾವು ಹೇಗೆ ಭಾವಿಸುವೆವೋ ಹಾಗೆಯೇ ಆಗುತ್ತೇವೆ. ನಮ್ಮ ಯೋಚನೆಯಂತೆ ನಮ್ಮ ಬದುಕು.

vyakthitva vikasaಮನುಷ್ಯನ ಮನಸ್ಸು ಎಂಬುದು ವಿಚಿತ್ರವಾದದ್ದು. ಅದರ ಆಸೆ-ಆಕಾಂಕ್ಷೆಗಳಿಗೆ ಮಿತಿ ಎಂಬುದೇ ಇಲ್ಲ. ಕಲ್ಪನಾಲಹರಿಗೆ ಅಂತ್ಯ ಇಲ್ಲ. ಅದರ ಶಕ್ತಿ-ಸಾಮರ್ಥ್ಯವನ್ನು ಅಳೆಯಲಾಗದು. ಗತಿ-ಗಮನವನ್ನು ಊಹಿಸಲಾಗದು. ಅವನ ವ್ಯಕ್ತಿತ್ವವನ್ನು ರೂಪಿಸುವುದೇ ಈ ಮನಸ್ಸು. ಎಲ್ಲ ಸಾಧನೆಗೂ ಇದರ ಸಹಕಾರ ಅಗತ್ಯ. ಮನಸ್ಸು ಎಂಬುದು ಕಣ್ಣಿಗೆ ಕಾಣದಿದ್ದರೂ ನಮ್ಮ ಬದುಕಿನಲ್ಲಿ ಅದರ ಪ್ರಭಾವ ಮಾತ್ರ ಅಪರಿಮಿತ.

ಅಮೃತಬಿಂದು ಉಪನಿಪತ್ನಲ್ಲಿ ಒಂದು ಮಾತು ಬರುತ್ತದೆ

ಮನ ಏವ ಮನುಷ್ಯಾಣಾಂ ಕಾರಣಂ ಬಂಧಮೋಕ್ಷಯೋಃ |

ಬಂಧಾಯ ವಿಷಯಾಸಕ್ತಂ ಮುಕ್ತ್ಯೈ ನಿರ್ವಿಷಯಂ ಸ್ಮೃತಮ್ ||

ವಿಷಯಾಸಕ್ತಿಯೇ ಬಂಧನ. ನಿರಾಸಕ್ತಿಯೇ ಮೋಕ್ಷ. ಮನುಷ್ಯನ ಬಂಧನಕ್ಕೂ, ಮೋಕ್ಷಕ್ಕೂ ಮನಸ್ಸೇ ಕಾರಣ. ಮನಸ್ಸೆಂಬುದು ಒಂದು ವಾಹಕ. ಅದನ್ನು ನಾವು ಸರಿಯಾಗಿ ಉಪಯೋಗಪಡಿಸಿಕೊಂಡರೆ ಸ್ವರ್ಗಕ್ಕೇರುತ್ತೇವೆ. ದುರುಪಯೋಗಪಡಿಸಿಕೊಂಡರೆ ನರಕಕ್ಕೆ ಜಾರುತ್ತೇವೆ. ಇಂಗ್ಲಿಷಿನಲ್ಲೊಂದು ಮಾತಿದೆ – The kingdom of heaven is not a place, but a state of mind; ನಮ್ಮ ಮನಸ್ಸೇ ಸ್ವರ್ಗ-ನರಕಗಳ ತಾಣ.

ಫ್ರಾಂಕ್ಲಿನ್ ರೂಸ್‌ವೆಲ್ಟ್ ಹೇಳುತ್ತಾನೆ, Men are not prisoners of fate, but only prisoners of their own minds. ಮನುಷ್ಯ ಹಣೆಬರಹದ ಸೆರೆಯಾಳಲ್ಲ, ಬದಲಿಗೆ ತನ್ನ ಮನಸ್ಸಿನ ಸೆರೆಯಾಳು ಎಂಬುದು ವಾಸ್ತವ ಸಂಗತಿ. ಮನುಷ್ಯನ ಸ್ವಭಾವವೇ ವಿಚಿತ್ರವಾದದ್ದು; ಅಲೆಗಳಂತೆ ಚಂಚಲವಾದದ್ದು. ಆ ಚಂಚಲತೆಯಿಂದ ಬಿಡುಗಡೆ ಹೊಂದದೆ ಅದು ಒಂದುಕ್ಷಣದ ನೆಮ್ಮದಿಯನ್ನು ಹೊಂದಲಾರದು. ವಿಷಯವಸ್ತುಗಳ ಬೆನ್ನುಹತ್ತಿರುವ ಮನಸ್ಸು ನಾನಾ ದಿಕ್ಕುಗಳಲ್ಲಿ ಓಡುತ್ತಾ ತಹತಹಿಸುತ್ತಿರುವುದು. ಆದ್ದರಿಂದಲೇ ಪುರಂದರದಾಸರು ಹಾಡಿದ್ದು – ‘ಮನವ ನಿಲ್ಲಿಸುವುದು ಬಹು ಕಷ್ಟ, ಹರಿದೋಡುವಂತಹ ಮನವ ನಿಲ್ಲಿಸುವುದು ಬಹು ಕಷ್ಟ’ ಎಂದು.

ಒಬ್ಬ ದಣಿದ ಪ್ರಯಾಣಿಕ ಒಂದು ಮರದ ಕೆಳಗೆ ವಿಶ್ರಮಿಸಿದ. ಅದು ಕಲ್ಪತರುವೆಂಬುದು ಆತನಿಗೆ ಗೊತ್ತಿರಲಿಲ್ಲ. ಒಂದು ಒಳ್ಳೆಯ ಹಾಸಿಗೆ ಇದ್ದರೆ ಎಷ್ಟು ಚೆನ್ನಾಗಿರುತ್ತದೆ ಎಂದು ಆತ ಯೋಚಿಸುತ್ತಿದ್ದಂತೆಯೇ ಒಂದು ಮೆತ್ತನೆಯ ಹಾಸಿಗೆ ಪ್ರತ್ಯಕ್ಷವಾಯಿತು. ಹಾಗೆಯೇ ಅವನು ಒಂದು ಮಂಚವನ್ನು ಬಯಸಿದ. ಅದೂ ಬಂತು. ಅವನಿಗೆ ಮೃಷ್ಟಾನ್ನಭೋಜನದ ಆಸೆಯಾಯಿತು. ಅದೂ ಸಿದ್ಧ. `ಈ ನಿರ್ಜನ ಪ್ರದೇಶದಲ್ಲಿ ಒಂದು ಹುಲಿ ಬಂದರೆ ಏನು ಗತಿ’ ಎಂದು ಆತ ಆಲೋಚಿಸುತ್ತಿದ್ದಂತೆಯೇ ಒಂದು ಹುಲಿ ಬಂದು ಅವನನ್ನು ಕಬಳಿಸಿತು. ನಮ್ಮ ಬೇಡಿಕೆಗಳು ಪೂರ್ತಿಯಾಗಬಹುದು. ಆದರೆ ಎಲ್ಲ ಪ್ರಾಪಂಚಿಕ ಸುಖದ ಅಪೇಕ್ಷೆಯ ಹಿಂದೆ ದುಃಖದ ಹುಲಿ ಇದ್ದೇ ಇರುತ್ತದೆ.

ಆದ್ದರಿಂದ ಯಾವಾಗಲೂ ನಾವು ಭಗವಂತನಲ್ಲಿ ಬೇಡುವಾಗ ಮನಸ್ಸಿನಿಂದ ಬೇಡುವುದಕ್ಕಿಂತ, ಹೃದಯದಿಂದ ಬೇಡುವುದು ಒಳ್ಳೆಯದು. ಯಾಕೆಂದರೆ ಮನಸ್ಸಿನಲ್ಲಿ ಸ್ವಲ್ಪವಾದರೂ ಕಲ್ಮಷವಿರುವ ಸಾಧ್ಯತೆ ಇದೆ. ಆದರೆ ಹೃದಯ ಮಾತ್ರ ನಿಷ್ಕಳಂಕವಾಗಿರುತ್ತದೆ. ಮನಸ್ಸು ಯಾವಾಗಲೂ ಸ್ವಾರ್ಥಿ; ಹೃದಯ ನಿಃಸ್ವಾರ್ಥಿ. ಮನಸ್ಸು ಬೇಡುತ್ತದೆ; ಮನಸ್ಸು ಕಾಮಿಸುತ್ತದೆ; ಹೃದಯ ಪ್ರೇಮಿಸುತ್ತದೆ.

ನಾವು ಯೋಚಿಸುವುದರಿಂದ ಮನಸ್ಸು ಅಸ್ತಿತ್ವ ಪಡೆಯುತ್ತದೆ. ಯೋಚನಾರಹಿತ ಸ್ಥಿತಿಯನ್ನು ಪಡೆಯುವುದು ಬಹಳ ಕಷ್ಟ. ಯಾಕೆಂದರೆ ಮನಸ್ಸೆಂದರೆ ನಿರಂತರ ಯೋಚನಾಲಹರಿ. Continuous flow of thoughts is mind ಎಂಬ ಆಂಗ್ಲೋಕ್ತಿ ಮನಸ್ಸಿನ ನಿಜವಾದ ವ್ಯಾಖ್ಯಾನ.

ಶಕ್ಯತೇ ಮನೋ ಜೇತುಮ್

ಮನಸ್ಸಿನ ನಿರಂತರ ಯೋಚನಾಲಹರಿಗೆ ತಡೆ ಬೀಳಬೇಕಾದರೆ ನಾವು ಯಾವುದಾದರೂ ಸತ್ಕರ್ಮದಲ್ಲಿ ತೊಡಗಿಸಿಕೊಳ್ಳಬೇಕು. ಕನಿಷ್ಠಪಕ್ಷ ಯಾವುದಾದರೂ ಸಾಧನೆಯ ಕೆಲಸವನ್ನು, ಸಾಹಸಕಾರ್ಯವನ್ನು ಕೈಗೊಳ್ಳಬೇಕು. ಮನಸ್ಸನ್ನು ಏಕಾಗ್ರಗೊಳಿಸುವುದೇ ಒಂದು ಸಾಹಸ, ಸಾಧನೆ. ಗಂಟು ಬಿಚ್ಚಿ ಚೆಲ್ಲಿಹೋದ ಸಾಸಿವೆಕಾಳುಗಳನ್ನು ಒಂದುಗೂಡಿಸುವುದು ಎಷ್ಟು ಕಷ್ಟವೋ, ಅದರಂತೆಯೇ ಪ್ರಾಪಂಚಿಕ ವಸ್ತುಗಳನ್ನು ಕುರಿತು ಹಲವು ದಿಕ್ಕಿನಲ್ಲಿ ಚದುರಿಹೋಗುವ ಮನಸ್ಸನ್ನು ಒಂದುಗೂಡಿಸುವುದು ಸುಲಭವಲ್ಲ. ‘ನ ಶಕ್ಯತೇ ಮನೋ ಜೇತುಮ್’ ಅಂದರೆ ಮನಸ್ಸನ್ನು ಜಯಿಸುವುದು ಕಷ್ಟಸಾಧ್ಯ ಎಂಬುದಾಗಿ ಸುಭಾಷಿತವೊಂದು ಹೇಳುತ್ತದೆ.

ತಾಯುಮಾನವರ್ ಎಂಬ ಭಕ್ತ ಮನಸ್ಸನ್ನು ಗೆಲ್ಲುವುದು ಎಷ್ಟುಕಷ್ಟ ಎಂಬುದಾಗಿ ಪದ್ಯದ ರೂಪದಲ್ಲಿ ಬಹಳ ಸುಂದರವಾಗಿ ವಿವರಿಸಿದ್ದಾನೆ –

ಉನ್ಮತ್ತದ್ವಿಪವನು ನೀ ನಿಯಂತ್ರಿಸಬಹುದು;

ಕರಡಿ ಹುಲಿಗಳ ಬಾಯಿ ಮುಚ್ಚಿಸಲುಬಹುದು;

ಸಿಂಹವನು ಏರಿ, ಸರ್ಪದೊಡನೆ ಕೇಳಿಯಾಡಲುಬಹುದು;

ರಸವಾದದಿಂದ ನೀ ಜೀವನಾಧಾರವನೆ ಗಳಿಸಲುಬಹುದು;

ದೇವತೆಗಳು ನಿನ್ನ ತೊತ್ತಾಗಿ, ನೀ ಚಿರಯುವಕನಾಗಲುಬಹುದು;

ನೀರ ಮೇಲೆ ನಡೆದು ಬೆಂಕಿಯಲಿ ನೆಲೆಸಲುಬಹುದು;

ಆದರೆ ಮನೋನಿಗ್ರಹವದೇ ಉತ್ತಮ ಮೇಣ್ ದುಸ್ಸಾಧ್ಯ.

ಮನಸ್ಸಿಗೆ ಯಾವುದಾದರೂ ನಿಷೇಧ ಹೇರಿದರೆ, ಮನಸ್ಸು ಅದರ ಬಗ್ಗೆ ಇನ್ನೂ ತೀವ್ರವಾಗಿ ಚಿಂತನೆ ನಡೆಸುತ್ತದೆ. ವಿಚಾರಗಳನ್ನು ಅದುಮಿಡಲು ಪ್ರಯತ್ನಿಸಿದಷ್ಟೂ ಪುಟಿದೇಳುತ್ತದೆ. ಉದಾಹರಣೆಗೆ ಮಧುಮೇಹ ರೋಗಿಗೆ ಸಿಹಿ ತಿನ್ನಬಾರದು ಎಂದು ನಿಷೇಧಿಸಿದಷ್ಟೂ ಅದರ ಬಗ್ಗೆ ಆಕರ್ಷಣೆಗಳು ಜಾಸ್ತಿಯಾಗುತ್ತವೆ. ನಾವು ಕೆಟ್ಟದರ ಬಗ್ಗೆ ಯೋಚನೆ ಮಾಡಬಾರದು ಎಂಬುದಾಗಿ ಎಷ್ಟೇ ಗಟ್ಟಿಯಾಗಿ ನಿರ್ಧರಿಸಿದರೂ ಮನಸ್ಸು ಅದರ ಬಗ್ಗೆಯೆ ಯೋಚಿಸುತ್ತದೆ.

ಮನಸ್ಸಿನ ಬಹುದೊಡ್ಡ ಸಮಸ್ಯೆಯೆಂದರೆ ಅದು ವರ್ತಮಾನದಲ್ಲಿ ಬದುಕುವುದಿಲ್ಲ. ಅದು ಒಂದೋ ಭೂತಕಾಲದೊಡನೆ ಅಥವಾ ಭವಿಷ್ಯದೊಡನೆ ಓಲಾಡುತ್ತಿರುತ್ತದೆ.

ಸಂಸ್ಕೃತದಲ್ಲಿ ಒಂದು ಸುಂದರ ಶ್ಲೋಕವಿದೆ

ಗತೇ ಶೋಕೋ ಕರ್ತವ್ಯೋ ಭವಿಷ್ಯಂ ನೈವ ಚಿಂತಯೇತ್ |

ವರ್ತಮಾನೇನ ಕಾಲೇನ ವರ್ತಯಂತಿ ವಿಚಕ್ಷಣಾಃ || 

ಕಳೆದುಹೋದುದಕ್ಕೆ ಶೋಕಿಸುವ ಅಗತ್ಯವಿಲ್ಲ. ಭವಿಷ್ಯವನ್ನು ಕುರಿತು ಚಿಂತಿಸಲೇಬಾರದು. ವಿವೇಕಿಗಳು ವರ್ತಮಾನದಲ್ಲಿಯೇ ನೆಲೆಸಿರುತ್ತಾರೆ. ವರ್ತಮಾನದಲ್ಲಿರುವವರಿಗೆ ಚಿಂತೆ ಇರಲಾರದು. ನಾವು ಏನೇ ಸುಖ-ಶಾಂತಿಯನ್ನು ಅನುಭವಿಸುವುದಾದರೂ ಅದು ವರ್ತಮಾನದಲ್ಲಿ ಮಾತ್ರ. ಆದರೆ ನಮ್ಮ ಆಲೋಚನೆಗಳೆಲ್ಲ ಭೂತ-ಭವಿಷ್ಯಕ್ಕೆ ಸಂಬಂಧಿಸಿರುತ್ತವೆ. ನಾವು ನಮ್ಮ ಆಲೋಚನೆಗಳನ್ನು ನಿರ್ಲಿಪ್ತವಾಗಿ ಸಾಕ್ಷಿಯಂತೆ ನೋಡುವಾಗ ವರ್ತಮಾನದಲ್ಲಿರುತ್ತೇವೆ. ಆಗ ಮಾತ್ರ ನಾವು ಶಾಂತಿಯಿಂದಿರುತ್ತೇವೆ. ನಿನ್ನೆ ಬರಿಯ ಸ್ವಪ್ನ, ನಾಳೆ ಕೇವಲ ಕಲ್ಪನೆ, ಇಂದು ಸರಿಯಾಗಿ ಬಾಳಿದರೆ ಪ್ರತಿ ನಿನ್ನೆಯೂ ಸುಸ್ವಪ್ನವಾಗುತ್ತದೆ ಮತ್ತು ಪ್ರತಿ ನಾಳೆಯೂ ಭರವಸೆಯ ಕಲ್ಪನೆಯಾಗುತ್ತದೆ ಎಂಬುದು ಅನುಭವಿಗಳ ಮಾತು.

ಮನಸ್ಸು ವಾಸ್ತವವನ್ನು ಗ್ರಹಿಸಬೇಕಾದರೆ ಮನಸ್ಸು ಭೂತ ಮತ್ತು ಭವಿಷ್ಯದಿಂದಾಚೆಗೆ ಬರಬೇಕಾಗುವುದು. ಆಗ ಅದು ಮನಸ್ಸಾಗಿರಲು ಸಾಧ್ಯವಿಲ್ಲ. ಆದ್ದರಿಂದಲೇ ಸಾಧಕರೆಲ್ಲರೂ ಹೇಳಿದರು: ‘ಈ ಮನಸ್ಸನ್ನು ದಾಟಿ, ಮನಸ್ಸನ್ನು ಮೀರಿ ಬೆಳೆಯಿರಿ. ಅಮನಸ್ಕರಾಗಿ, ಆಗಲೇ ಸತ್ಯದ ಸಾಕ್ಷಾತ್ಕಾರ ಆಗುವುದು’ ಎಂಬುದಾಗಿ.

ಬಲಿಷ್ಠ ಮನಸ್ಸೇ ತಾರಕ

ನಮ್ಮ ಮನಸ್ಸನ್ನು ಸಕಾರಾತ್ಮಕವಾಗಿ ಬಳಸಿದರೆ ನಾವು ಎಷ್ಟು ಎತ್ತರಕ್ಕೂ ಏರಬಹುದು; ಬಲಿಷ್ಠ ಮನಸ್ಸಿನಿಂದ ಸಾಮಾನ್ಯ ಸರಳ ಶರೀರದಲ್ಲಿಯೂ ಅಸಾಧಾರಣ ಶಕ್ತಿ ನಿರ್ಮಾಣ ಮಾಡುವ ಸಾಮರ್ಥ್ಯ ಮನಸ್ಸಿಗೆ ಇದೆ. ಬಲಿಷ್ಠ ಮನಸ್ಸೇ ಆರೋಗ್ಯದ ಲಕ್ಷಣ. ಮನೋಬಲವೇ ಸುಖ, ಸರ್ವಸ್ವ. ಅದೇ ಜೀವನ, ಅದೇ ಅಮರತ್ವ. ಮನೋದೌರ್ಬಲ್ಯವೇ ದುಃಖ, ರೋಗ ಹಾಗೂ ಮೃತ್ಯು. ನಾವು ಯಶಸ್ಸುಗಳಿಸಬೇಕಾದರೆ ನಮ್ಮ ಮನಸ್ಸು ಬಲಿಷ್ಠವಾಗಿರಬೇಕು. ಬಲಿಷ್ಠ ಮನಸ್ಸೇ ನಮ್ಮನ್ನು ಸಂಕಟದಿಂದ ಪಾರುಮಾಡಬಲ್ಲದು.

ಒಮ್ಮೆ ಶಿಷ್ಯನೊಬ್ಬ ಬುದ್ಧ ಭಗವಾನನನ್ನು ಕೇಳಿದ: ಭಗವಾನ್, ಕೆಲವರು ಸಂಪತ್ತು ಶಕ್ತಿ ಇದ್ದರೂ ತಮ್ಮ ಪ್ರಯತ್ನಗಳಲ್ಲಿ ವಿಫಲರಾಗುತ್ತಾರೆ. ಆದರೆ ಕೆಲವರು ಅನುಕೂಲತೆಗಳಿಲ್ಲದೆ ಅವನತಿಯ ಸ್ಥಿತಿಯಲ್ಲಿದ್ದರೂ ಅವರಿಗಿಂತಲೂ ಯಶಸ್ವಿಗಳಾಗುವರಲ್ಲ, ಇದು ಹೇಗೆ? ಅದಕ್ಕೆ ಉತ್ತರವೆಂಬಂತೆ ವಿರಾಟನಗರದ ರಾಜ ಸುಕೀರ್ತಿಯ ಹತ್ತಿರವಿದ್ದ ಲೋಹಶೃಂಗವೆಂಬ ಆನೆಯ ಕಥೆಯನ್ನು ಬುದ್ಧ ಹೇಳಿದನು. ರಾಜನು ಆ ಪರಾಕ್ರಮಿ ಆನೆಯ ಮೇಲೆ ಕುಳಿತು ಅನೇಕ ಯುದ್ಧಗಳನ್ನು ಗೆದ್ದಿದ್ದನು. ಕಾಲಕಳೆದಂತೆ ಆನೆ ಮುದಿಯಾಯಿತು. ಎಲ್ಲರಿಂದಲೂ ಅದು ಕಡೆಗಣಿಸಲ್ಪಟ್ಟಿತು. ಒಮ್ಮೆ ಅದು ಕೆರೆಯ ಕೆಸರಿನಲ್ಲಿ ಸಿಲುಕಿತು. ಅದನ್ನು ಹೊರತೆಗೆಯುವ ಎಲ್ಲಾ ಪ್ರಯತ್ನಗಳೂ ವಿಫಲವಾದವು. ಅದು ನಿಶ್ಚಲವಾಯಿತು. ಆಗ ಚತುರ ಸೈನಿಕನೊಬ್ಬ ಉಪಾಯವೊಂದನ್ನು ಮಾಡಿದ. ಜೋರಾಗಿ ರಣವಾದ್ಯ ಬಾರಿಸಿದ. ಆ ಶಬ್ದ ಕಿವಿಗೆ ಬೀಳುತ್ತಿದ್ದಂತೆಯೇ ಲೋಹಶೃಂಗ ತನ್ನೆಲ್ಲ ಶಕ್ತಿ ಒಂದುಗೂಡಿಸಿ ಆವೇಶ ಬಂದಂತೆ ಎದ್ದು ಸೈನಿಕರತ್ತ ಓಡತೊಡಗಿತು. ಮನೋಬಲವೇ ಹಿರಿದಾದುದು. ಅದು ದೃಢವಾಗಿದ್ದರೆ ಯಾವ ಕಾರ್ಯವೂ ಅಸಂಭವವಲ್ಲ.

ನೆಪೋಲಿಯನ್‌ನಲ್ಲಿ ಒಬ್ಬ ಮನುಷ್ಯನು ಸಾಮಾನ್ಯವಾಗಿ ಬಯಸುವ ಎಲ್ಲವೂ ಇತ್ತು. ಕೀರ್ತಿ ಇತ್ತು, ಅಧಿಕಾರ ಇತ್ತು, ಶ್ರೀಮಂತಿಕೆ ಇತ್ತು. ಅಷ್ಟಿದ್ದರೂ ಕೂಡ ಆತ ಹೇಳುತ್ತಿದ್ದುದೇನು ಗೊತ್ತೇ? ನನ್ನ ಬದುಕಿನಲ್ಲಿ ಸಂತೋಷದ ದಿನಗಳನ್ನೇ ಕಾಣದವನು ನಾನು.

ಹೆಲೆನ್ ಕೆಲರ್ ಕುರುಡಿಯಾಗಿದ್ದಳು, ಕಿವುಡಿಯಾಗಿದ್ದಳು, ಆದರೂ ಬದುಕೆಂಬುದು ಎಷ್ಟು ಸುಂದರ ಎನ್ನುತ್ತಿದ್ದಳು ಆಕೆ!

ಯದ್ಭಾವಂ ತದ್ಭವತಿ

ನಾವು ಹೇಗೆ ಭಾವಿಸುವೆವೋ ಹಾಗೆಯೇ ಆಗುತ್ತೇವೆ. ನಮ್ಮ ಯೋಚನೆಯಂತೆ ನಮ್ಮ ಬದುಕು. ನಮ್ಮನ್ನು ನಾವು ದುರ್ಬಲರೆಂದು ಭಾವಿಸಿದರೆ ದುರ್ಬಲರೇ ಆಗುತ್ತೇವೆ. ನಮ್ಮನ್ನು ನಾವು ಬಲಿಷ್ಠರೆಂದು ಭಾವಿಸಿದರೆ ಬಲಿಷ್ಠರೇ ಆಗುತ್ತೇವೆ. ನಮ್ಮನ್ನು ನಾವು ಅಪವಿತ್ರರೆಂದು ಭಾವಿಸಿದರೆ ಅಪವಿತ್ರರೇ ಆಗುತ್ತೇವೆ. ನಮ್ಮನ್ನು ನಾವು ಪವಿತ್ರರೆಂದು ಭಾವಿಸಿದರೆ ಪವಿತ್ರರೇ ಆಗುತ್ತೇವೆ. ಇದು ಅನುಭವಜನ್ಯ ಸತ್ಯ. ಇದು ನಮಗೇನನ್ನು ತಿಳಿಸುತ್ತದೆಯೆಂದರೆ ನಮ್ಮನ್ನು ನಾವು ದುರ್ಬಲರೆಂದುಕೊಳ್ಳಬಾರದು. ಬದಲಾಗಿ ನಾವು ಶಕ್ತರು, ಸರ್ವಶಕ್ತರು ಎಂದೇ ಭಾವಿಸಬೇಕು. ಇಂತಹ ಆಶಾವಾದದ ಚಿಂತನೆಯಿಂದ ನಮ್ಮಲ್ಲಿ ಸಕಾರಾತ್ಮಕ ಬದಲಾವಣೆಗಳು ಆಗುತ್ತವೆ.

ನಗರವೊಂದರಲ್ಲಿ ಶ್ರೀಮಂತ ದಂಪತಿ ಪರಸ್ಪರರನ್ನು ಅಪಾರವಾಗಿ ಪ್ರೀತಿಸುತ್ತಿದ್ದರು. ದೀಪಾವಳಿ ಹಬ್ಬಕ್ಕೆ ೧೫ ದಿನಗಳ ಮುಂಚೆ ಅವರ ವಾಹನ ಅಪಘಾತಕ್ಕೀಡಾಯಿತು. ಗಂಡನಿಗೆ ಸಣ್ಣಪುಟ್ಟ ಗಾಯಗಳಾದವು. ಆದರೆ ಹೆಂಡತಿಯ ತಲೆಗೆ ಹೆಚ್ಚು ಪೆಟ್ಟಾಯಿತು. ಅವಳನ್ನು ಆಸ್ಪತ್ರೆಗೆ ಸೇರಿಸಲಾಯಿತು. ಹೆಂಡತಿ ಒಂದು ದೊಡ್ಡ ಶಸ್ತ್ರಚಿಕಿತ್ಸೆಗೆ ಒಳಗಾದರೂ, ಆಕೆಯ ಸ್ಥಿತಿ ಗಂಭೀರವಾಗಿತ್ತು. ವೈದ್ಯರು ಗಂಡನ ಹತ್ತಿರ ‘ನಾವು ಕೊಡಬಹುದಾದ ಚಿಕಿತ್ಸೆಯನ್ನೆಲ್ಲಾ ಕೊಟ್ಟಿದ್ದೇವೆ. ಆದರೆ ಆಕೆಯ ಪರಿಸ್ಥಿತಿ ಗಂಭೀರವಾಗಿದೆ. ಮುನ್ನೆಚ್ಚರಿಕೆಯ ದೃಷ್ಟಿಯಿಂದ ನಿಮಗೆ ತಿಳಿಸುತ್ತಿದ್ದೇವೆ. ಆಕೆ ಹೆಚ್ಚೆಂದರೆ ಇನ್ನು ೩-೪ ದಿನ ಬದುಕುಳಿಯಬಹುದು’ ಎಂದುಬಿಟ್ಟರು.

ಗಂಡನಿಗೆ ಬಹಳ ದುಃಖವಾಯಿತು. ಆತ ಹೆಂಡತಿಯ ಪಕ್ಕದಲ್ಲಿ ಕುಳಿತು ಬಿಕ್ಕಿ-ಬಿಕ್ಕಿ ಅಳುತ್ತಾ, ‘ಎಷ್ಟೋ ಜನ್ಮಗಳ ಪುಣ್ಯದಿಂದಾಗಿ ನೀನು ನನಗೆ ಹೆಂಡತಿಯಾಗಿ ಸಿಕ್ಕಿದ್ದೀಯ! ಇನ್ನು ೧೫ ದಿನಕ್ಕೆ ದೀಪಾವಳಿ ಹಬ್ಬ. ನಿನಗೇನು ಉಡುಗೊರೆ ಬೇಕು? ಕೇಳು, ತಂದುಕೊಡುತ್ತೇನೆ’ ಎಂದು ಹೇಳಿದ. ತಾನು ಸಾವಿನಂಚಿನಲ್ಲಿದ್ದೇನೆಂಬುದು ಆಕೆಗೂ ಗೊತ್ತಾಗಿತ್ತು. ಆಕೆಯೂ ಅಳುತ್ತಿದ್ದಳು. ನೋವಿನಲ್ಲೂ ನಸು ನಕ್ಕು, ‘ನೀವೂ ನನಗೆ ಒಳ್ಳೆಯ ಗಂಡನೇ ಆಗಿದ್ದೀರಿ. ದೀಪಾವಳಿ ಹಬ್ಬಕ್ಕೆ ನೀವು ನನಗೆ ಉಡುಗೊರೆ ಕೊಡುವ ಮಾತು ಪಕ್ಕಕ್ಕಿಡಿ. ನಾನು ನಿಮಗಾಗಿ ಏನು ಮಾಡಬಹುದು ಹೇಳಿ’ ಎಂದು ಮೆಲುದನಿಯಲ್ಲಿ ಹೇಳಿದಳು. ಗಂಡನಿಗೆ ಏನನಿಸಿತೋ ಏನೋ, ಆತ ಎದ್ದು ವಾರ್ಡಿನ ಗೋಡೆಯ ಕನ್ನಡಿಯ ಮೇಲೆ ಹೆಂಡತಿಯ ಲಿಪ್‌ಸ್ಟಿಕ್ ಬಳಸಿ, ‘ಪ್ರಿಯೆ, ದೀಪಾವಳಿ ಹಬ್ಬಕ್ಕೆ ನೀನು ಮನೆಗೆ ಬಂದು ನಮ್ಮೊಂದಿಗೆ ಹಬ್ಬವನ್ನು ಆಚರಿಸಬೇಕು. ಇದೇ ನಾನು ಬಯಸುವ ಉಡುಗೊರೆ’ ಎಂದು ಬರೆದ. ಕನ್ನಡಿಯ ಮೇಲೆ ಬರೆದಿದ್ದನ್ನು ಕಷ್ಟಪಟ್ಟು ಓದಿದ ಹೆಂಡತಿಯ ಮುಖ ಅರಳಿತು. ಆಕೆ ‘ನಾನು ಹಬ್ಬಕ್ಕೆ ಮನೆಗೆ ಖಂಡಿತ ಬರಬೇಕೆಂದು ಅಂದುಕೊಂಡಿದ್ದೇನೆ’ ಎಂದಳು. ಅಲ್ಲಿದ್ದ ವೈದ್ಯರಿಗೆ, ನರ್ಸುಗಳಿಗೆ ಹೆಚ್ಚೆಂದರೆ ೩-೪ ದಿನ ಬದುಕಬಹುದಾದ ಆಕೆ, ಖಂಡಿತ ಮನೆಗೆ ಹೋಗಬೇಕೆಂದು ಅಂದುಕೊಳ್ಳುತ್ತಿರುವುದನ್ನು ಕೇಳಿ ಕರುಳು ಕಿವುಚಿದಂತಾಯಿತು.

ಮುಂದೆ ನಡೆದದ್ದೆಲ್ಲಾ ಒಂದು ಪವಾಡ. ಆ ಕ್ಷಣದಿಂದಲೇ ಆಕೆಯ ದೇಹಸ್ಥಿತಿ ಸುಧಾರಿಸುತ್ತಾ ಹೋಯಿತು. ಹಬ್ಬದ ಮುನ್ನಾದಿನ ಆಕೆ ಸಂಪೂರ್ಣ ಚೇತರಿಸಿಕೊಂಡಿದ್ದಳು. ಆಸ್ಪತ್ರೆಯಿಂದ ಬಿಡುಗಡೆ ಹೊಂದಿ ಮನೆಗೆ ಹೋಗಿ ಗಂಡ ಮತ್ತು ಮಕ್ಕಳೊಂದಿಗೆ ಹಬ್ಬವನ್ನಾಚರಿಸಿದಳು. ಆಸ್ಪತ್ರೆಯ ವೈದ್ಯರು ಎಲ್ಲರೊಂದಿಗೆ ‘ಇದೊಂದು ವಿಸ್ಮಯ! ಔಷಧಿ-ಚಿಕಿತ್ಸೆಗಿಂತ ಹೆಚ್ಚು ಕೆಲಸ ಮಾಡಿರುವುದು ಆಕೆ ಹಬ್ಬಕ್ಕೆ ಮನೆಗೆ ಹೋಗುತ್ತೇನೆ ಎನ್ನುವ ಮನೋಭಾವನೆ!’ ಎಂದು ಹೇಳಿಕೊಂಡರು. ಎಲ್ಲೆಡೆಯಲ್ಲೂ ಅದೇ ಸುದ್ದಿ.

ಹಬ್ಬ ಮುಗಿದ ಹಲವಾರು ವಾರಗಳ ಅನಂತರ ಗಂಡ ಆಸ್ಪತ್ರೆಗೆ ಬಂದು ವೈದ್ಯರಿಗೆ, ‘ಆ ಕನ್ನಡಿ ಪವಾಡ ಮಾಡಿ ನನ್ನ ಹೆಂಡತಿಯ ಪ್ರಾಣ ಉಳಿಸಿದೆ. ನಾನು ಆ ಕನ್ನಡಿ ಕೊಂಡುಕೊಳ್ಳಲು ಬಯಸುತ್ತೇನೆ. ಎಷ್ಟು ಹಣವಾದರೂ ಸರಿ, ನನಗೆ ಅದನ್ನು ಕೊಡಿ’ ಎಂದಾಗ, ವೈದ್ಯರು ‘ಇಲ್ಲ, ಆ ಕನ್ನಡಿಯನ್ನು ನಾವು ಕೊಡಲು ಬರುವುದಿಲ್ಲ. ಈಗ ನಮ್ಮ ಆಸ್ಪತ್ರೆಗೆ ಬರುವ ಬದುಕುಳಿವ ಸಂದೇಹವಿರುವ ಎಲ್ಲಾ ರೋಗಿಗಳು ಆ ಕನ್ನಡಿಯಿರುವ ವಾರ್ಡನ್ನೇ ಬಯಸುತ್ತಾರೆ. ಆ ಕನ್ನಡಿಗೆ ಬಹಳ ಬೇಡಿಕೆ ಇದೆ’ ಎಂದರಂತೆ.

ಪಾಪಮೂಲ

ಮನಸ್ಸೆಂಬುದು ವಿಚಾರಗಳ ಸಂಗ್ರಾಹಕ. ಅದು ಬೇಕಾದ್ದನ್ನು ಬೇಡವಾದ್ದನ್ನು ಎಲ್ಲವನ್ನು ಸಂಗ್ರಹಿಸಿ ಇಟ್ಟುಕೊಳ್ಳುತ್ತದೆ. ಸೋಲು-ನೋವುಗಳನ್ನು, ಅಪಮಾನ-ಅವಮಾನಗಳನ್ನು ಅದು ಜೋಪಾನವಾಗಿ ಕಾಪಾಡಿಕೊಳ್ಳುತ್ತದೆ. ಸಂದರ್ಭ ಬಂದರೆ ಇದಕ್ಕೆ ಪ್ರತೀಕಾರ ತೀರಿಸಬೇಕೆಂದು ಹಾತೊರೆಯುತ್ತದೆ. ಮನಸ್ಸು ದ್ವೇಷದ, ಕಸದ ತೊಟ್ಟಿಯಾದಾಗ ಮನುಷ್ಯ ದುಃಖಿತನಾಗುತ್ತಾನೆ. ಗೆಲವು-ನಲಿವುಗಳ ಅನುಭವದ ಸಂಗ್ರಹ ಅಹಂಕಾರಕ್ಕೆ ನಾಂದಿಯಾಗುತ್ತದೆ. ಮನಸ್ಸನ್ನು ಗೆಲ್ಲಬೇಕಾದರೆ, ಶಾಂತಿ ಪಡೆಯಬೇಕಾದರೆ ಮೊದಲು ಈ ಅಹಂಕಾರದಿಂದ ಮುಕ್ತರಾಗಬೇಕು. ಇಲ್ಲದಿದ್ದರೆ ನಮ್ಮ ಅಹಂಗೆ ಯಾರಾದರೂ ಆಗಾಗ ಚುಚ್ಚುತ್ತಾ ಇದ್ದರೆ ನಾವು ದುಃಖಿತರಾಗುತ್ತೇವೆ, ಕ್ರೋಧಿತರಾಗುತ್ತೇವೆ. ಅದು ದ್ವೇಷಕ್ಕೆ ಎಡೆಮಾಡಿಕೊಡುತ್ತದೆ.

ಕಾಮವಾಗಲಿ, ಕ್ರೋಧವಾಗಲಿ ಮೊದಲು ಉದಯಿಸುವುದು ಮನಸ್ಸಿನಲ್ಲೇ. ಮಾನವನು ಮೊದಲು ತನ್ನ ಮನಸ್ಸಿನಲ್ಲಿ ತಪ್ಪು ಮಾಡುತ್ತಾನೆ. ತದನಂತರ ಶಾರೀರಿಕ ಮಟ್ಟಕ್ಕೆ ಇಳಿಸುತ್ತಾನೆ. ಆದ್ದ ರಿಂದ ಯಾವಾಗಲೂ ಶರೀರ ನಿರ್ದೋಷಿ, ಮನಸ್ಸೇ ಅಪರಾಧಿ.

೧೨ನೇ ಶತಮಾನದಲ್ಲಿ ನಹರ್ವಾಲಾದಲ್ಲಿ ಗುರುಪಾಲ್ ಎಂಬ ಒಬ್ಬ ರಾಜನಿದ್ದ. ಆರಂಭದ ದಿವಸಗಳಲ್ಲಿ ಅವನೊಬ್ಬ ಭಿಕ್ಷುಕ. ಅದೃಷ್ಟ ಒಲಿದು ರಾಜನಾದ. ಸಿಂಹಾಸನವೇರಿದರೂ ತನ್ನ ಗತಜೀವನವನ್ನೂ, ಹಿಂದೆ ತಾನು ಪಟ್ಟ ಕಷ್ಟಗಳನ್ನೂ ಮರೆಯದೆ, ದುರಹಂಕಾರಪಡದೆ ನ್ಯಾಯಬದ್ಧವಾಗಿ ರಾಜ್ಯವಾಳುತ್ತಿದ್ದ. ಅಂಥವನು ಒಂದು ದಿವಸ ಆನೆಯ ಮೇಲೆ ಗ್ರಾಮವೀಕ್ಷಣೆಗೆ ಹೋಗುತ್ತಿದ್ದಾಗ ಬಟ್ಟೆ ಒಗೆಯಲು ಹೋಗುತ್ತಿದ್ದ ಅಪ್ಸರೆಯಂತಿದ್ದ ಒಬ್ಬ ಅಗಸರ ಹೆಂಗಸನ್ನು ನೋಡಿ ಮೋಹದಲ್ಲಿ ಸಿಲುಕಿಕೊಂಡ. ಹೇಗಾದರೂ ಸರಿ ಅವಳನ್ನು ಅನುಭವಿಸಬೇಕೆಂಬ ತವಕದಲ್ಲಿ ಆನೆಯನ್ನು ಅವಳ ಸನಿಹಕ್ಕೆ ನಡೆಸುತ್ತಿದ್ದಾಗ ಅವನಲ್ಲಿ ವಿವೇಕ ಹುಟ್ಟಿತು. ಇಂದ್ರಿಯಗಳಿಗೆ ವಶನಾಗಿ ತಾನು ಮಾಡಹೊರಟಿದ್ದ ತಪ್ಪನ್ನು ಗುರುತಿಸಿಕೊಂಡು ಪಶ್ಚಾತ್ತಾಪದಿಂದ ಬೆಂದುಹೋದ. ತನ್ನ ಮೇಲೆ ತನಗೇ ಅಸಹ್ಯ ಹುಟ್ಟಿ ನಗರಕ್ಕೆ ಹಿಂದಿರುಗಿದ. ಬ್ರಾಹ್ಮಣ ಪಂಡಿತರನ್ನು ಕರೆಸಿ ತಾನು ಅಗ್ನಿಪ್ರವೇಶ ಮಾಡುವುದಾಗಿಯೂ, ಚಿತೆಯನ್ನು ಏರ್ಪಡಿಸಿರೆಂದೂ ತಿಳಿಸಿದ. ಆತ್ಮಾಹುತಿಯನ್ನು ಮಾಡಿಕೊಳ್ಳುವಂತಹ ಯಾವ ಪಾಪಕಾರ್ಯವನ್ನು ನೀವು ಮಾಡಿದಿರೆಂದು ಬ್ರಾಹ್ಮಣರು ಕೇಳಿದರು. ರಾಜ ತಿಳಿಸಿದ. ಎಲ್ಲವನ್ನು ಆಲಿಸಿದ ಬ್ರಾಹ್ಮಣರು ಹೌದು, ನೀವು ಮಾಡಿರುವುದು ಮಹಾಪಾಪವೇ. ಬೆಂಕಿಗೆ ಹಾರಿದರೂ ಪ್ರಾಯಶ್ಚಿತ್ತವಾಗದಂತಹ ಅಕಾರ್ಯ ಅದು. ರಾಜನಾದವನೇ ಇಂದ್ರಿಯಗಳನ್ನು ಹತೋಟಿಯಲ್ಲಿರಿಸಿಕೊಳ್ಳಲಾಗದೆ ಸುಂದರವಾಗಿ ಕಂಡ ಹೆಂಗಸರನ್ನೆಲ್ಲ ಬಯಸಿದರೆ ಸ್ತ್ರೀಕುಲಕ್ಕೆ ರಕ್ಷಣೆ ಇರುವುದಿಲ್ಲ. ಆದ್ದರಿಂದ ಅಗ್ನಿಪ್ರವೇಶ ಮಾಡಬೇಕೆಂದು ಇಚ್ಛಿಸಿರುವುದು ಸರಿಯಾದದ್ದೇ. ಹಾಗೆಯೇ ಮಾಡಿ ಎಂದು ಹೇಳಿದರು.

ಅಷ್ಟು ಹೇಳಿದ ನಂತರ ಇನ್ನೇನು? ಸೌದೆಗಳನ್ನು ತರಿಸಿ ಚಿತೆಯನ್ನು ನಿರ್ಮಿಸಿದರು. ಬೆಂಕಿಯನ್ನೂ ಹೊತ್ತಿಸಿದರು. ಎಲ್ಲರಿಗೂ ನಮಸ್ಕರಿಸಿದ ರಾಜನು ಚಿತೆಯನ್ನು ಪ್ರವೇಶಿಸಲುದ್ಯುಕ್ತನಾದಾಗ, ಕೊನೆಯ ಕ್ಷಣಗಳಲ್ಲಿ ಪಂಡಿತರು ಸಮಾಧಾನ ಪಡಿಸಿದರು: ರಾಜಾ, ತಪ್ಪು ಮಾಡಿದ್ದು ನಿನ್ನ ಶರೀರವಲ್ಲ….. ಮನಸ್ಸು. ಶರೀರದಿಂದ ಪಾಪವೆಸಗಿದ್ದರೆ ನೀನು ತಪ್ಪದೆ ಸಜೀವ ದಹನಕ್ಕೊಳಗಾಗಬೇಕಿತ್ತು. ಆದರೆ ಮನಸ್ಸು ಮಾಡಿದ ತಪ್ಪಿಗೆ ಶರೀರವನ್ನು ಶಿಕ್ಷಿಸುವುದು ನ್ಯಾಯವಲ್ಲ. ನಿನ್ನ ಮನಸ್ಸು ಈಗಾಗಲೇ ಶಿಕ್ಷಿಸಲ್ಪಟ್ಟು ಪವಿತ್ರವಾಗಿದೆ. ಆದ್ದರಿಂದ ನಿನಗೆ ಪ್ರಾಯಶ್ಚಿತ್ತ ಆಗಿದೆ ಎಂದು ಹೇಳಿ ಗೌರವದಿಂದ ಆತನನ್ನು ಹಿಂದಿರುಗುವಂತೆ ಮಾಡಿದರು.

ಗೆಲ್ಲುವುದು ಹೇಗೆ?

‘ಜಿತಂ ಜಗತ್ತೇನ ಮನೋ ಹಿ ಯೇನ’ ಎಂಬುದೊಂದು ಸುಭಾಷಿತ ನುಡಿ. ಮನಸ್ಸನ್ನು ಯಾರು ಗೆಲ್ಲುತ್ತಾರೋ ಅವರಿಂದ ಜಗತ್ತೇ ಗೆಲ್ಲಲ್ಪಡುತ್ತದೆ ಎಂಬುದು ಇದರ ಭಾವಾರ್ಥ.

ಮನಸ್ಸು ಅಲೆದಾಡುತ್ತಲೇ ಇರುತ್ತದೆ. ಒಂದೇ ಕ್ಷಣದಲ್ಲಿ ಚಂದ್ರಲೋಕಕ್ಕೂ, ಮಂಗಳಗ್ರಹಕ್ಕೂ ಹೋಗಿ ಬರುತ್ತದೆ. ಇದನ್ನು ಒಂದು ಕಡೆ ನಿಲ್ಲಿಸಲು ಒಂದು ಒಳ್ಳೆಯ ಉಪಾಯ ಎಂದರೆ ದೈವಚಿಂತನೆ. ಭಗವಂತನನ್ನೆ ಹಂಬಲಿಸಿದರೆ ಮನಸ್ಸಿನ ಲೌಕಿಕ ಹಂಬಲಗಳು, ಅಲೆದಾಟಗಳು ಮಾಯವಾಗುತ್ತವೆ. ಮನಸ್ಸು ನಮ್ಮ ಹಿಡಿತಕ್ಕೆ ಬರುತ್ತದೆ.

ಮನಸ್ಸಿನ ನಿಜವಾದ ಮಾಲಿಕರಾಗಬೇಕಾದರೆ ಮೊಟ್ಟಮೊದಲು ನಾವು ಗಮನಿಸಬೇಕಾದ ಅಂಶವೆಂದರೆ ಅದನ್ನು ದಮನಿಸಬೇಡಿ, ಬದಲಿಗೆ ಗಮನಿಸಿ. ಮನಸ್ಸಿನಲ್ಲಿ ಉದಯಿಸುವ ಕೆಟ್ಟದು, ಒಳಿತು ಎರಡನ್ನೂ ಸಮಾನವಾಗಿ ಸ್ವೀಕರಿಸಿ. ಮನಸ್ಸಿನಲ್ಲಿ ನಡೆಯುವ ಕ್ರಿಯೆ-ಪ್ರಕ್ರಿಯೆಗಳನ್ನೆಲ್ಲಾ ನಿರ್ಲಿಪ್ತರಾಗಿ ವೀಕ್ಷಿಸಿ. ಯಾವುದೇ ಪಕ್ಷವನ್ನು ವಹಿಸಬೇಡಿ. ಮನಸ್ಸಿನ ಭಾವನೆಯೊಂದಿಗೆ ನಾವು ಒಂದಾಗಬಾರದು. ಮನಸ್ಸು ನಾವಲ್ಲ ಎಂಬುದನ್ನು ಮೊಟ್ಟಮೊದಲು ನಾವು ತಿಳಿದುಕೊಳ್ಳಬೇಕು. ಈ ಶರೀರವೇ ನಾವಲ್ಲ ಅಂದಾಗ ಅದರ ಭಾಗವಾದ ಈ ಮನಸ್ಸಾದರೂ ನಾವಾಗುವುದು ಹೇಗೆ? ಸದಾ ಎಚ್ಚರದಿಂದ ಬದುಕಿ ಮನಸ್ಸಿನ ದ್ವಂದ್ವಗಳನ್ನು ದಾಟಿದಾಗ ನಾವು ಮನಸ್ಸಿನ ನಿಜವಾದ ಮಾಲಿಕರಾಗುತ್ತೇವೆ.

2 Responses to “ಮನಸ್ಸಿನ ಮಾಲಿಕರಾಗೋಣ”

  1. rathnamsjcc

    ಯಾರು ಬ್ರಹ್ಮಭಾವದಲ್ಲಿ ಮನಸ್ಸು ನಿಶ್ಚಯ ಹೊಂದಿದವನೋ, ಅಂತಹ ಸದ್ಗುರುವನ್ನು ಆರಿಸಿ, ಶರಣಾಗಿ, ಸದ್ಗತಿಯನ್ನು ಹೊಂದಬೇಕೆಂದು ಸಾಂಕೃತಿಯು ತನ್ನ ಶಿಷ್ಯರಿಗೆ ಹೇಳಿದನು.

    Reply

ನಿಮ್ಮ ಪ್ರತಿಕ್ರಿಯೆ ನೀಡಿ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

`ಉತ್ಥಾನ’ : ೧೯೬೫ರಿಂದ ಪ್ರಕಟವಾಗುತ್ತಿರುವ ಕನ್ನಡದ ಹೆಮ್ಮೆಯ ಸದಭಿರುಚಿಯ ಮಾಸಪತ್ರಿಕೆ. ರಾಜ್ಯದಾದ್ಯಂತ ಪ್ರಸರಣ ಇರುವ ಸಂಚಿಕೆಯು ಈಗ ಕ್ರೌನ್‌ ಚತುರ್ದಳ ಆಕಾರದಲ್ಲಿ ೧೧೨ ವರ್ಣಪುಟಗಳಲ್ಲಿ ವೈವಿಧ್ಯಮಯ ಲೇಖನ, ನುಡಿಚಿತ್ರ, ಸಾಹಿತ್ಯದ ಬರಹಗಳನ್ನು ಪ್ರಕಟಿಸುತ್ತಿದೆ.  ಸಂಚಿಕೆಯ ಬೆ ಲೆ ೨೦ ರೂ.

Utthana
Kannada Monthly Magazine ​
Utthana Trust
Keshavashilpa, Kempegowda Nagara
Bengaluru - 560019
Karnataka State , INDIA

Phone : 080-26612732
Email : [email protected]

ಉತ್ಥಾನದ ಹೊಸ ಪ್ರಕಟಣೆಗಳ ಬಗ್ಗೆ ನಿಮ್ಮ ಈಮೈಲ್‌ ಅಂಚೆಪೆಟ್ಟಿಗೆಯಲ್ಲೇ ಮಾಹಿತಿ ಪಡೆಯಿರಿ. ಇದಕ್ಕಾಗಿ ನಮ್ಮ ವಾರ್ತಾಪತ್ರಕ್ಕೆ ಉಚಿತವಾಗಿ ಚಂದಾದಾರರಾಗಿ


vulkan vegas, vulkan casino, vulkan vegas casino, vulkan vegas login, vulkan vegas deutschland, vulkan vegas bonus code, vulkan vegas promo code, vulkan vegas österreich, vulkan vegas erfahrung, vulkan vegas bonus code 50 freispiele, 1win, 1 win, 1win az, 1win giriş, 1win aviator, 1 win az, 1win azerbaycan, 1win yukle, pin up, pinup, pin up casino, pin-up, pinup az, pin-up casino giriş, pin-up casino, pin-up kazino, pin up azerbaycan, pin up az, mostbet, mostbet uz, mostbet skachat, mostbet apk, mostbet uz kirish, mostbet online, mostbet casino, mostbet o'ynash, mostbet uz online, most bet, mostbet, mostbet az, mostbet giriş, mostbet yukle, mostbet indir, mostbet aviator, mostbet casino, mostbet azerbaycan, mostbet yükle, mostbet qeydiyyat