ಕಳೆದ ಅರವತ್ತೈದು ವರ್ಷಗಳಿಂದ ಅನುಸರಿಸಿಕೊಂಡು ಬಂದಿರುವ ಮೀಸಲಾತಿ ಧೋರಣೆಯ ಪ್ರಯೋಜನ ಎಷ್ಟು ಪ್ರತಿಶತ ವರ್ಗಕ್ಕೆ ತಲಪಿದೆ? ಮತ್ತು ನಿಜವಾಗಿ ಅರ್ಹರಾದ ಎಲ್ಲರಿಗೂ ಆರಕ್ಷಣೆ ಲಭಿಸಿದೆಯೆ? ಇಲ್ಲವೆಂದಾದಲ್ಲಿ ಇಡೀ ಸಮಸ್ಯೆಯ ಮರುವಿಮರ್ಶೆ ನಡೆಯಬೇಕಾದುದು ಅವಶ್ಯವಲ್ಲವೆ?
ಇಂಗ್ಲಿಷಿನ ಒಂದು ಪ್ರಸಿದ್ಧ ಚಿಟ್ಟುಕವಿತೆ ಹೀಗಿದೆ:
There was a young lady of Riga
Who rode with a smile on a tiger.
They returned from the ride
With the lady inside
And the smile on the face of the tiger.
ಹುಲಿಯ ಬೆನ್ನೇರಿ ತನ್ನ ದಿಟ್ಟತನವನ್ನು ಮೆರೆಯಲು ಹವಣಿಸಿ ಆಕೆ ಮುಗುಳ್ನಗುತ್ತಿದ್ದಳು. ಆದರೆ ಅತ್ಯಲ್ಪಕಾಲದ ನಂತರ ನಗು ಇದ್ದದ್ದು ಹುಲಿಯ ಮುಖದ ಮೇಲೆ; ಆ ಸಾಹಸಿ ದಿಟ್ಟೆ ಇದ್ದದ್ದು ಹುಲಿಯ ಹೊಟ್ಟೆಯೊಳಗೆ.
ದೂರಗಾಮಿ ಪರಿಣಾಮಪರಂಪರೆಯನ್ನು ವಿವೇಚಿಸದೆ ಹಿಡಿದ ಯಾವುದೇ ದಾರಿಯ ಫಲಿತ ಹೀಗೆಯೇ ಆಗುವುದು.
ಇತ್ತೀಚೆಗೆ ಗುಜರಾತಿನ ಪಟೇಲ್ ಸಮುದಾಯದವರು ತಾವೂ ಆರಕ್ಷಣೆಗೆ ಅರ್ಹರೆಂದು ಆಂದೋಲನವನ್ನು ಕೈಗೊಂಡಿರುವುದು ಹಲವು ವಲಯಗಳಲ್ಲಿ ದಿಗ್ಭ್ರಮೆಯನ್ನು ಮೂಡಿಸಿದೆ. ಎಲ್ಲ ರಾಜಕೀಯ ಪಕ್ಷಗಳನ್ನೂ ಈ ಆಂದೋಲನ ಚಿಂತಿತಗೊಳಿಸಿದೆ. ಹಲವಾರು ಕೌತುಕಕರ ಅಂಶಗಳಿವೆ: ಪಟೇಲ್ ಸಮುದಾಯದ ಬೇಡಿಕೆಗೆ ಮುಖವಾಣಿಯಾದವನು ಕೇವಲ ಇಪ್ಪತ್ತೆರಡು ವಯಸ್ಸಿನ ಒಬ್ಬ ಪಡ್ಡೆಹುಡುಗ. ಆದರೆ ಹಾರ್ದಿಕ್ ಪಟೇಲ್ ಈ ಸಂದರ್ಭದಲ್ಲಿ ನಿಮಿತ್ತಮಾತ್ರನಾದವನೆಂಬುದೂ ಸ್ಪಷ್ಟವೇ ಆಗಿದೆ. ಯಾರೋ ಒಬ್ಬ ಅನಾಮಧೇಯ ತರುಣನು ಕರೆ ನೀಡಿದೊಡನೆ ಲಕ್ಷಾಂತರ ಜನ ಅವನ ಹಿಂದೆ ಸಾಲುಗಟ್ಟಿಬಿಡುತ್ತಾರೆಯೆ? ಈ ದಿಕ್ಕಿನ ಚಿಂತನೆ ಅಸಂಖ್ಯ ಜನರ ಅಂತರಂಗದಲ್ಲಿ ಕುಮುಲುತಿದ್ದು ಸ್ಫೋಟಗೊಳ್ಳಲು ಕಾಯುತ್ತಿದ್ದಿರಬೇಕೆಂಬುದೇ ತಥ್ಯ. ಈ ಬೇಡಿಕೆ ಸತರ್ಕವೆ ಅಲ್ಲವೆ ಎಂಬುದು ಹಾಗಿರಲಿ. ಈ ಬೆಳವಣಿಗೆಗೆ ಭೂಮಿಕೆಯನ್ನು ನಿರ್ಮಿಸಿರುವವು ಕಳೆದ ಅರವತ್ತು ವರ್ಷಗಳುದ್ದಕ್ಕೂ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅನುಸರಿಸಿಕೊಂಡು ಬಂದಿರುವ ಧೋರಣೆಗಳೇ ಎಂಬುದನ್ನು ಅಲ್ಲಗಳೆಯಲಾಗದು.
ಬೇಡಿಕೆಗಳ ಸಾಂಕ್ರಾಮಿಕ
ಹಲವಾರು ಸಮುದಾಯಗಳ ಅಸಮಾಧಾನ ಮಡುಗಟ್ಟುತ್ತ ಸಾಗಿರುವುದು ಗುಜರಾತಿನಲ್ಲಿ ಮಾತ್ರವೇನಲ್ಲ. ಅಲ್ಪಕಾಲದ ಹಿಂದೆ ರಾಜಸ್ಥಾನದ ಗುಜ್ಜರ್ ಸಮುದಾಯ ಆಂದೋಲನ ನಡೆಸಿದ್ದುದನ್ನು ಸ್ಮರಿಸಬಹುದು. ಉತ್ತರಪ್ರದೇಶ ಮತ್ತು ಹರ್ಯಾಣಾ ಪ್ರಾಂತಗಳಲ್ಲಿ ಜಾಠ ಸಮುದಾಯದವರಿಗೆ ಘೋಷಿತವಾಗಿದ್ದ ಮೀಸಲಾತಿಯನ್ನು ಸರ್ವೋಚ್ಚ ನ್ಯಾಯಾಲಯ ಅನುಮತಿಸಲಿಲ್ಲ. ಮಹಾರಾಷ್ಟ್ರದಲ್ಲಿ ಮರಾಠಾ ಸಮುದಾಯ ಮೀಸಲಾತಿಗಾಗಿ ಆಗ್ರಹಿಸಿದೆ. ಕಳೆದ ಸೆಪ್ಟೆಂಬರ್ ಮಧ್ಯಭಾಗದಲ್ಲಿ ಕೇರಳದ ನಂಬೂದರಿ ಬ್ರಾಹ್ಮಣ ಸಮುದಾಯದವರು ತಾವು ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿರುವ ಕಾರಣ ತಮಗೆ ಅಲ್ಪಸಮುದಾಯ ಸ್ಥಾನಮಾನ ನೀಡಬೇಕೆಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ. ಅನ್ಯ ಹಲವು ಪ್ರಾಂತಗಳಲ್ಲಿಯೂ ಇಂತಹ ಬೇಡಿಕೆಗಳು ಆಗಿಂದಾಗ ಧ್ವನಿತವಾಗುತ್ತಿವೆ.
ಪಟೇಲ್ ಸಮುದಾಯದ ಬಗೆಗೆ ಹೇಳುವುದಾದರೆ: ವಜ್ರಪಡಿ ಉದ್ಯಮವೂ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಪಟೇಲ್ ಸಮುದಾಯದ ಪ್ರಾಬಲ್ಯವಿದೆ. ಬಹಳ ಹಿಂದಿನಿಂದ ಪಟೇಲ್ ಸಮುದಾಯವು ಸ್ವಾವಲಂಬನೆಗೆ ಹೆಸರಾಗಿತ್ತು. ಎಷ್ಟುಮಟ್ಟಿಗೆ ಎಂದರೆ ಸಂವಿಧಾನ ರಚನಾ ಸಭೆಯ ಸಮಾಲೋಚನೆಗಳು ನಡೆದಿದ್ದಾಗ ಪಟೇಲ್ ಸಮುದಾಯವು ಆರಕ್ಷಣೆಗಾಗಿ ಬೇಡುವ ಆವಶ್ಯಕತೆ ಇಲ್ಲವೆಂದು ಸ್ವಯಂ ಸರ್ದಾರ್ ವಲ್ಲಭಭಾಯಿ ಪಟೇಲ್ ತಳ್ಳಿಹಾಕಿದ್ದರು.
ಆದರೆ ವರ್ಷಗಳುದ್ದಕ್ಕೂ ಎಲ್ಲ ಸರ್ಕಾರಗಳೂ ಯಾವುದೋ ಜನವರ್ಗಗಳನ್ನು ಓಲೈಸಲು ಎಷ್ಟು ನಿರ್ಭಿಡೆಯಾಗಿ ಮೀಸಲಾತಿ ಘೋಷಿಸುತ್ತ ಬಂದಿವೆಯೆಂದರೆ ಈಗ ಮೀಸಲಾತಿಯ ಮೂಲ ಸಾತ್ತ್ವಿಕ ಆಶಯವೇ ಮರೆಯಾಗಿದೆ. ಇತ್ತೀಚಿನ ನಿದರ್ಶನವೆಂದರೆ ಯಾವುದೇ ಪರ-ವಿರೋಧ ಪರಾಮರ್ಶನೆ ಇಲ್ಲದೆಯೇ ರಾಜಸ್ಥಾನ ಸರ್ಕಾರವು ಸರ್ಕಾರಿ ಉದ್ಯೋಗಗಳಲ್ಲಿ ಶೇ. ೧೯ ಹೆಚ್ಚುವರಿ ಮೀಸಲಾತಿಯನ್ನು ಘೋಷಿಸಿಬಿಟ್ಟಿದೆ; ಗುಜ್ಜರ್ ಸಮುದಾಯಕ್ಕೆ ಶೇ. ೫, ಉಳಿದ ೪ ಜಾತಿಗಳ ವಿಶೇಷ ಹಿಂದುಳಿದ ವರ್ಗಗಳಿಗೆ (ಎಸ್ಬಿಸಿ) ಶೇ. ೧೪. ಯಾವುದೇ ರಾಜ್ಯದ ಮೀಸಲಾತಿ ಪ್ರಮಾಣವು ಶೇ. ೫೦ಕ್ಕೆ ಮೀರತಕ್ಕದ್ದಲ್ಲವೆಂದು ಸರ್ವೋಚ್ಚ ನ್ಯಾಯಾಲಯದ ನಿರ್ದೇಶನವಿದೆ. ಆದರೆ ಇದೀಗ ರಾಜಸ್ಥಾನ ಸರ್ಕಾರ ಘೋಷಿಸಿರುವ ಹೆಚ್ಚುವರಿ ಮೀಸಲಾತಿ ಜಾರಿಯಾದರೆ ಒಟ್ಟು ಮೀಸಲಾತಿಯ ಪ್ರಮಾಣ ಶೇ. ೪೯ರಿಂದ ಶೇ. ೬೮ಕ್ಕೆ ಏರುತ್ತದೆ.
ಚುನಾವಣೆಗಳ ನಂಟು
ಈಚಿನ ಬೆಳವಣಿಗೆಗಳಿಗೆ ರಾಜಕೀಯ ಆಯಾಮಗಳೂ ಇಲ್ಲದಿಲ್ಲ. ಈಗಿನ ಪ್ರಧಾನಮಂತ್ರಿಗಳಿಗೂ ಭಾರತೀಯ ಜನತಾ ಪಕ್ಷಕ್ಕೂ ಪ್ರಬಲವಾದ ಮದ್ದತ್ತನ್ನು ನೀಡಿದ್ದುದು ಪಟೇಲ್ ಸಮುದಾಯ. ಈಗಲಾದರೋ ಪಟೇಲ್ ಸಮುದಾಯಕ್ಕೆ ಆರಕ್ಷಣೆ ಲಭಿಸದಿದ್ದರೆ ಇನ್ನುಮುಂದೆ ಭಾರತೀಯ ಜನತಾ ಪಕ್ಷಕ್ಕೆ ತಮ್ಮ ಬೆಂಬಲ ಇರದು ಎಂಬ ಜಾಡಿನ ಹೇಳಿಕೆಗಳೂ ಪಟೇಲ್ ಸಮುದಾಯ ಪ್ರಮುಖರಿಂದ ಹೊಮ್ಮಿವೆ.
ವಿಚಾರಹೀನವಾದರೂ ವಿಷಾದನೀಯ ಸಂಗತಿಯೆಂದರೆ ಕೇಂದ್ರದಲ್ಲಿಯೋ ಪ್ರತ್ಯೇಕ ರಾಜ್ಯಗಳಲ್ಲಿಯೋ ಚುನಾವಣೆಗಳು ಸಮೀಪಿಸುತ್ತಿದ್ದಂತೆ ಯಾವಾವುದೋ ಸಮುದಾಯಗಳಿಂದ ಆರಕ್ಷಣೆಯ ಬೇಡಿಕೆಗಳು ಗರಿಗೆದರುತ್ತವೆ. ಇದು ರಾಜಕೀಯ ಪಕ್ಷಗಳಿಗೆ ಗ್ರಾಸವಾಗುತ್ತದೆ. ಈ ವಾಸ್ತವದ ಹಿನ್ನೆಲೆಯಲ್ಲಿ ಇನ್ನೂ ದೂರ ಉಳಿದಿರುವ ಚುನಾವಣೆಗಳನ್ನು ಇಂಗಿತದಲ್ಲಿರಿಸಿಕೊಂಡು ಪೂರ್ವಭಾವಿಯಾಗಿಯೆ ಪಟೇಲ್ ಸಮುದಾಯ ತನ್ನ ಹುನ್ನಾರನ್ನು ಉಪಕ್ರಮಿಸಿರಬಹುದೆ?
ಸಾಮಾಜಿಕ ಸ್ತರದಲ್ಲಿ ಸ್ಥಿತಿವಂತರಾಗಿದ್ದರೂ ನಮಗೆ ಅಧಿಕಾರಾಂಗದಲ್ಲಿಯೂ ಪಾಲು ಬೇಕು ಎಂಬ ಆಕಾಂಕ್ಷೆಯೂ ವ್ಯಕ್ತವಾಗಿದೆ. ವಿಶೇಷವಾಗಿ ಯುವವರ್ಗಗಳಲ್ಲಿ ಈ ಆಗ್ರಹ ಎದ್ದುತೋರುತ್ತಿದೆ.
೧೯೮೦-೯೦ರ ವರ್ಷಗಳಲ್ಲಿ ಮಂಡಲ್ ಆಯೋಗದ ಶಿಫಾರಸುಗಳನ್ನು ವಿರೋಧಿಸಿದ್ದ ಜಾತಿಗಳವರೇ ಈಗ ತಮಗೆ ಮೀಸಲಾತಿಯನ್ನು ಕೋರುತ್ತಿರುವುದು ಒಂದು ವಿಪರ್ಯಾಸ.
ಮೀಸಲಾತಿ ಕೊಡುವುದಿದ್ದರೆ ನಮಗೂ ಕೊಡಿ, ಇಲ್ಲವಾದರೆ ನಮ್ಮಂತಹ ಬೇರೆ ಜಾತಿಗಳವರಿಗೂ ತಪ್ಪಿಸಿ – ಎಂಬ ಜಾಡಿನ ನಿಲವುಗಳೂ ಹಲವೆಡೆ ಕಂಡಿವೆ – ರಾಜಸ್ಥಾನ ಮೊದಲಾದೆಡೆ.
ಮುಗಿಯದ ಬೇಡಿಕೆ
ಮೊದಲ ಕಾಲದ ಆರಕ್ಷಣ ಫಲಾನುಭವಿಗಳಲ್ಲಿ ಅನೇಕರು ಈಗ ಉನ್ನತಸ್ಥಾಯಿಗೆ ತಲಪಿದ್ದಾರೆ. ಇಂತಹವರ ಮುಂದಿನ ಪೀಳಿಗೆಗೂ ಜಾತಿಯ ಕಾರಣದಿಂದ ಆರಕ್ಷಣೆ ಮುಂದುವರಿಯಬೇಕೆ? ಕೇವಲ ಜಾತಿಯ ಕಾರಣದಿಂದಲೇ ಕೇಂದ್ರದಲ್ಲಿ ಉನ್ನತ ಪದವಿಯಲ್ಲಿದ್ದವರ ಮಕ್ಕಳೂ ಈಗ ಆರಕ್ಷಣೆಯ ಬೆನ್ನುಹತ್ತಿರುವುದನ್ನು ನೋಡುತ್ತಿದ್ದೇವೆ.
ಮೀಸಲಾತಿಯ ಪರಾಮರ್ಶನೆಗಾಗಿ ಈ ಹಿಂದೆ ಹಲವು ಆಯೋಗಗಳು ಕೆಲಸಮಾಡಿವೆ (೧೯೫೩-೫೫ರಲ್ಲಿ ಕಾಲೇಲ್ಕರ್ ಆಯೋಗ, ೧೯೭೮-೮೦ರಲ್ಲಿ ಮಂಡಲ್ ಆಯೋಗ). ಮೀಸಲಾತಿಗೆ ಅರ್ಹವೆಂದು ಕಾಲೇಲ್ಕರ್ ಆಯೋಗವು ೨,೩೯೯ ಜಾತಿಗಳನ್ನು ಗುರುತಿಸಿದ್ದರೆ ಈ ಸಂಖ್ಯೆಯು ಮಂಡಲ್ ಆಯೋಗ ವರದಿಯ ವೇಳೆಗೆ ೩,೭೪೩ಕ್ಕೆ ಏರಿತ್ತು. ೨೦೦೬ರಲ್ಲಿ ಕೇಂದ್ರಸರ್ಕಾರವು ಸಂವಿಧಾನಕ್ಕೆ ೯೩ನೇ ತಿದ್ದುಪಡಿಯನ್ನು ತಂದು ದೇಶದ ಎಲ್ಲ ಉನ್ನತಶಿಕ್ಷಣ ಸಂಸ್ಥೆಗಳಲ್ಲಿ ‘ಹಿಂದುಳಿದ’ ವರ್ಗಗಳಿಗೆ ಶೇ. ೨೭ ಮೀಸಲಾತಿಯನ್ನು ವಿಧಿಸಿದುದೂ ಅದಕ್ಕೆ ವಿರುದ್ಧವಾಗಿ ಉಗ್ರ ಆಂದೋಲನಗಳು ನಡೆದುದೂ ಸುವಿದಿತ. ಅಲ್ಲಿಂದೀಚೆಗೆ ಮೀಸಲಾತಿಯನ್ನು ರಾಜಕೀಯ ಸಾಧನವಾಗಿ ಬಳಸಿಕೊಂಡು ಸರ್ಕಾರಗಳು ಮೀಸಲಾತಿಯ ಪ್ರಮಾಣವನ್ನು ಹೆಚ್ಚಿಸುತ್ತಲೇ ಬಂದಿವೆ – ಎಷ್ಟುಮಟ್ಟಿಗೆ ಎಂದರೆ ಮೀಸಲಾತಿಯ ಮೂಲ ಉದ್ದೇಶ ಮತ್ತು ಔಚಿತ್ಯಗಳೇ ಮರೆಯಾಗಿವೆ. ಈ ಹಿನ್ನೆಲೆಯಲ್ಲಿ ಮೀಸಲಾತಿಯು ಒಂದು ಶಾಶ್ವತ ಚರ್ಚಾವಿಷಯವಾಗಿ ಉಳಿದು ಸಂಘರ್ಷಗಳಿಗೆ ಕಾರಣವಾಗುತ್ತಿದೆ.
ಕಾಲಮಿತಿ ಬೇಡವೆ?
ಹಿಂದುಳಿದ ವರ್ಗಗಳ ಏಳ್ಗೆಯ ಆವಶ್ಯಕತೆಯನ್ನು ಪ್ರಖರವಾಗಿ ಪ್ರತಿಪಾದಿಸಿದ್ದ ಡಾ|| ಅಂಬೇಡ್ಕರ್ ಅವರೇ ಮೀಸಲಾತಿಗೆ ಹತ್ತು ವರ್ಷದ ಕಾಲಮಿತಿಯನ್ನು ಸೂಚಿಸಿದ್ದರು. ತದ್ವಿರುದ್ಧವಾಗಿ ಸಂವಿಧಾನವು ಜಾರಿಯಾದ ಆರೂವರೆ ದಶಕಗಳ ನಂತರವೂ ಅಸಂಖ್ಯ ಜಾತಿಗಳು ಮೀಸಲಾತಿಗಾಗಿ ಆಗ್ರಹಿಸುತ್ತಿವೆ. ಮೂರು ತಲೆಮಾರುಗಳ ತರುವಾಯವೂ ಸಾಮಾಜಿಕ ಸಮತೋಲವು ಸಾಧಿತವಾಗಿಲ್ಲವೆಂದರೆ ಈ ಚಿಂತನವಿಧಾನದ ಗ್ರಾಹ್ಯತೆಯೇ ಪ್ರಶ್ನಾರ್ಹವೆಂದು ತ್ರಯಸ್ಥ ಚಿಂತಕರಿಗೆ ಅನಿಸಿದ್ದಲ್ಲಿ ಅಚ್ಚರಿಯಿಲ್ಲ. ಇಷ್ಟಾಗಿ ಆರ್ಥಿಕವಾಗಿ ಹಿಂದುಳಿದಂತಹವರಿಗೆ ಮೀಸಲಾತಿ ನೀಡಿಕೆಯನ್ನು ಯಾರೂ ವಿರೋಧಿಸಿಲ್ಲ. ಸಮಸ್ಯೆಯಾಗಿರುವುದು ಮೀಸಲಾತಿಗೆ ‘ಜಾತಿ’ಯನ್ನು ಮಾನದಂಡವಾಗಿ ಗಣಿಸಿರುವುದರಿಂದ. ಬದಲಾದ ಸನ್ನಿವೇಶದಲ್ಲಿ – ಮೀಸಲಾತಿಯಡಿಯಲ್ಲಿ ‘ಕೆನೆಪದರ’ಗಳವರೂ ಕೂಡಾ ಅಧಿಕ ಫಲಾನುಭವಿಗಳಾಗಿರುವ ಭೂಮಿಕೆಯಲ್ಲಿ – ಮೀಸಲಾತಿಯು ಒಂದು ಅಥವಾ ಎರಡು ತಲೆಮಾರುಗಳಿಗೆ ಸೀಮಿತವಾಗಬೇಕು ಎಂಬ ಸರ್ವೋಚ್ಚ ನ್ಯಾಯಾಲಯದ ದಿಕ್ಸೂಚನೆಯೂ ವ್ಯಾವಹಾರಿಕ ರಾಜಕಾರಣದಿಂದಾಗಿ ಅಲಕ್ಷಿತವಾಯಿತು.
ತಪ್ಪಿದ ಸಮತೋಲ
ಮೀಸಲಾತಿಯು ಅರ್ಥಪೂರ್ಣವೆನಿಸಬೇಕಾದರೆ ಅದು ವಿಹಿತ ಪರಿಧಿಗೆ ಒಳಪಟ್ಟಿರುವುದು ಅನಿವಾರ್ಯ. ಇದೀಗ ಆಂಧ್ರಪ್ರದೇಶದಲ್ಲಿ ಸರ್ಕಾರೀ ಉದ್ಯೋಗ ಮತ್ತು ಶೈಕ್ಷಣಿಕವ್ಯವಸ್ಥೆಯಲ್ಲಿ ಹಿಂದುಳಿದ ವರ್ಗಗಳಿಗೆ (ಓಬಿಸಿ) ಶೇ. ೨೫, ‘ಪರಿಶಿಷ್ಟ’ ಜಾತಿಗಳವರಿಗೆ ಶೇ. ೧೫, ‘ಪರಿಶಿಷ್ಟ’ ಪಂಗಡಗಳಿಗೆ ಶೇ. ೬ – ಈ ಪ್ರಮಾಣದ ಮೀಸಲಾತಿ ಜಾರಿಯಲ್ಲಿದೆ. ಇದರ ಮುಂದುವರಿಕೆಯಿಂದ ಸಾಮಾಜಿಕ ಸಮತೋಲನ ಸಿದ್ಧಿಸುತ್ತದೆಂದು ನಿರೀಕ್ಷಿಸಬಹುದೆ? ಪಶ್ಚಿಮ ಬಂಗಾಳದಲ್ಲಿ ಒಟ್ಟೂ ಶೇ. ೩೫ ಮೀಸಲಾತಿ ಅಮಲಿನಲ್ಲಿದೆ. ತಮಿಳುನಾಡು ಆರಕ್ಷಣೆಯನ್ನು ಶೇ. ೬೭ಕ್ಕೆ ಒಯ್ದಿತು. ಇಂತಹ ಗೊಂದಲದ ಪರಿಸ್ಥಿತಿಯಿಂದ ಯಾರ ಹಿತಸಾಧನೆಯೂ ಆಗುವುದು ಶಂಕಾಸ್ಪದ.
ಇದೀಗಲಾದರೋ ಸಮಸ್ಯೆಯ ಸಂಕಿರ್ಣತೆಗೆ ಇನ್ನಷ್ಟು ಹೊಸ ಆಯಮಗಳು ಸೇರಿಕೊಂಡಿವೆ. ಈಚಿನ ವರ್ಷಗಳ ಜಾಗತೀಕರಣದ ಜಂಝಾವಾತದಲ್ಲಿ ಸಂಪನ್ಮೂಲಗಳ ಪರಭಾರೆಯೂ ಮಾರುಕಟ್ಟೆಯ ನಿಯಂತೃತ್ವದಿಂದ ಪ್ರವರ್ತಿತವಾದ ಧೋರಣೆಗಳೂ ಖಾಸಗೀಕರಣವೂ ವರ್ಧಿಸುತ್ತಹೋಗಿ ಉದ್ಯೋಗಗಳೇ ಕಾಣೆಯಾಗುತ್ತಿವೆ; ಲೆಕ್ಕವಿಲ್ಲದಷ್ಟು ಉದ್ಯಮಗಳು ಮುಚ್ಚುತ್ತಿವೆ. ಹಿಂದೆ ದೊಡ್ಡ ಪ್ರಮಾಣದ ಜನವರ್ಗಕ್ಕೆ ಉದ್ಯೋಗಾವಕಾಶ ಒದಗಿಸುತ್ತಿದ್ದ ಕೃಷಿಕ್ಷೇತ್ರವೂ ಸೊರಗಿದೆ. ಈ ರೀತಿಯ ಉದ್ಯೋಗಾಭಾವದಿಂದಾಗಿ ಪೈಪೋಟಿಯೂ ಸಂಘರ್ಷಗಳೂ ಹೆಚ್ಚಿಯಾವು. ಉದ್ಯೋಗಗಳೇ ಇಲ್ಲದಿರುವಾಗ ಮೀಸಲಾತಿಯ ಬೆನ್ನುಹತ್ತುವುದರಿಂದ ಪ್ರಯೋಜನವಾದರೂ ಏನಾದೀತು?
ಮರುವಿಮರ್ಶೆ ನಡೆಯಲಿ
ಹೀಗಿರುವಾಗ ವಾಸ್ತವ ಸ್ಥಿತಿಯ ಆಧಾರದ ಮೇಲೆ ದೀರ್ಘಾವಧಿ ದೃಷ್ಟಿಯಿಂದ ಮೀಸಲಾತಿಯ ವಿನ್ಯಾಸವನ್ನೂ ಚಿಂತನಾಧಾರವನ್ನೂ ವ್ಯವಹಾರ್ಯತೆಯನ್ನೂ ಕುರಿತು ಸಮಗ್ರ ಪುನಃಪರಿಶೀಲನೆ ನಡೆಯಬೇಕಾದುದು ಅವಶ್ಯವೆನಿಸದೆ?
ಜಾತಿಯನ್ನು ನಿರ್ಮೂಲ ಮಾಡುವೆವೆಂಬುದು ಧೀರ ಘೋಷಣೆಯಾಗಿಯಷ್ಟೆ ಹತ್ತಾರು ವರ್ಷ ಮುಂದುವರಿದೀತು. ಆದರೆ ಎಲ್ಲಕ್ಕೂ ಜಾತಿಯನ್ನು ಮಾನದಂಡವಾಗಿ ಪರಿಗಣಿಸುವ ಅಭ್ಯಾಸವನ್ನು ಕೊನೆಗೊಳಿಸುವುದು ಅಸಾಧ್ಯವಲ್ಲ.
ಆರಕ್ಷಣೆ ಇರಲೇಬೇಕು ಎಂಬುದಾದರೆ ಅದರ ಪ್ರಮಾಣವು ಸರ್ವಸಮ್ಮತವಾಗಿರಬೇಕಾದುದು ಅನಿವಾರ್ಯ. ಕೆಲವು ವರ್ಷಗಳಲ್ಲಿ ಇದನ್ನು ಸಾಧಿಸುವುದು ಅಶಕ್ಯವಾಗದು – ದೃಢಮನಸ್ಸು ಇದ್ದರೆ.
ಕಳೆದ ಅರವತ್ತೈದು ವರ್ಷಗಳಿಂದ ಅನುಸರಿಸಿಕೊಂಡು ಬಂದಿರುವ ಮೀಸಲಾತಿ ಧೋರಣೆಯ ಪ್ರಯೋಜನ ಎಷ್ಟು ಪ್ರತಿಶತ ವರ್ಗಕ್ಕೆ ತಲಪಿದೆ? ಮತ್ತು ನಿಜವಾಗಿ ಅರ್ಹರಾದ ಎಲ್ಲರಿಗೂ ಆರಕ್ಷಣೆ ಲಭಿಸಿದೆಯೆ? ಇಲ್ಲವೆಂದಾದಲ್ಲಿ ಇಡೀ ಸಮಸ್ಯೆಯ ಮರುವಿಮರ್ಶೆ ನಡೆಯಬೇಕಾದುದು ಅವಶ್ಯವಲ್ಲವೆ? ಚಿಂತನೆಯು ತಾತ್ಪೂರ್ತಿಕ ರಾಜಕೀಯ ಲೆಕ್ಕಾಚಾರಗಳಿಂದ ದೂರವಾಗಿ ಸತರ್ಕವಾಗಿ ನಡೆದಲ್ಲಿ ಪ್ರಯೋಜನಕರವಾದೀತು.
Comments are closed.