ಸುಮಾರು ೯೩ ವರ್ಷಗಳ ಸುದೀರ್ಘ ಲವಲವಿಕೆಯ ಜೀವನವನ್ನು ನಡೆಸಿ ೧೯೯೭ರಲ್ಲಿ ನಿಧನರಾದ ಡಿ.ಆರ್. ದೇಶಪಾಂಡೆ ಅವರು ಸಾಂಗ್ಲಿ ಸಂಸ್ಥಾನದಲ್ಲಿ ಪ್ರಥಮ ಚುನಾಯಿತ ಪ್ರತಿನಿಧಿಯಾಗಿ, ಅನಂತರ ಸಚಿವ ಸಂಪುಟಕ್ಕೆ ಆಯ್ಕೆಯಾಗಿ ಶಿಕ್ಷಣ, ನಾಗರಿಕ ಪೂರೈಕೆ ಮುಂತಾದ ಅನೇಕ ಖಾತೆಗಳನ್ನು ಸಮರ್ಥವಾಗಿ ನಿಭಾಯಿಸಿ ಜನಾನುರಾಗಿ ಮಂತ್ರಿಯಾಗಿ ಖ್ಯಾತರಾಗಿದ್ದರು. ಸಂಸ್ಥಾನಗಳ ವಿಲೀನ ಪ್ರಕ್ರಿಯೆಯಲ್ಲಿ ಸಾಂಗ್ಲಿ ಸಂಸ್ಥಾನವೂ ಭಾರತದ ಒಕ್ಕೂಟದಲ್ಲಿ ಪ್ರಥಮ ಸಂಸ್ಥಾನವಾಗಿ ವಿಲೀನವಾಯಿತು. ಆಗ ಸಿಗಬಹುದಾಗಿದ್ದ ಯಾವುದೇ ದೊಡ್ಡ ಹುದ್ದೆಗಳನ್ನು ವಿನಯದಿಂದ ನಿರಾಕರಿಸಿದ ದೇಶಪಾಂಡೆ ಸ್ವಂತ ಊರು ಶಿರಹಟ್ಟಿ(ಅವಿಭಜಿತ ಧಾರವಾಡ ಜಿಲ್ಲೆಯ ಹಾಗು ಸದ್ಯದ ಗದಗ ಜಿಲ್ಲೆಯ)ಗೆ ಆಗಮಿಸಿ ವಕೀಲಿವೃತ್ತಿಯನ್ನು ಕೈಕೊಂಡು ತಮ್ಮ ಎಂಬತ್ತನೆಯ ವಯಸ್ಸಿನವರೆಗೂ ಜನಾನುರಾಗಿ ವಕೀಲರೆಂದು ಖ್ಯಾತರಾಗಿದ್ದವರು. ಊರಿಗೆ ಹೈಸ್ಕೂಲು, ಕಾಲೇಜುಗಳು, ಬ್ಯಾಂಕುಗಳು ಬರಲು ಪ್ರಮುಖ ಪಾತ್ರವಹಿಸಿದವರು. ಊರಿನ ಒಳಿತಿನ ಯಾವುದೇ ಕೆಲಸಕ್ಕೂ ಸದಾ ಮುಂದು. ನಮ್ಮ ಕಲ್ಪನೆಗೆ ನಿಲುಕಲಾರದಷ್ಟು ಸರಳ, ನಿರಾಡಂಬರ, ಬಡತನದ ಜೀವನವನ್ನು ನಡೆಸಿದವರು. ಗಾಂಧಿಯವರ ನಿಷ್ಠಾವಂತ ಅನುಯಾಯಿ. ಕುಸುಮ ಕೋಮಲ ಶರೀರ-ಮನಸ್ಸುಗಳ ದೇಶಪಾಂಡೆಯವರು ಕೆಲಸ-ಕಾರ್ಯಗಳ ನಿರ್ವಹಣೆಯಲ್ಲಿ ವಜ್ರಕಠೋರರು. ಸಾಂಗ್ಲಿಯಲ್ಲಿ ಮಂತ್ರಿಯಾಗಿದ್ದಾಗ (ಸುಮಾರು ೬೯ ವರ್ಷಗಳಷ್ಟು ಹಿಂದೆ) ಅವರು ಸಂಪೂರ್ಣ ಮರಾಠಿ ಆಡಳಿತದ ರಾಜ್ಯದಲ್ಲಿ ಕನ್ನಡಕ್ಕಾಗಿ ಹೋರಾಡಿ ತಕ್ಕಮಟ್ಟಿಗೆ ಯಶಸ್ವಿಯಾಗಿದ್ದ ದಿನಗಳ ರೋಚಕ ಅನುಭವವನ್ನು ಅವರದೇ ಬರಹದಲ್ಲಿ ಓದಿ ಆಸ್ವಾದಿಸಿದರೆ ಚೆನ್ನ.
ಕನ್ನಡ ಭಾಷೆಗಾಗಿ ಹೋರಾಟ ಇತ್ತೀಚಿನ ಕೆಲ ವರ್ಷಗಳಲ್ಲಿ ಚುರುಕುಗೊಂಡಿದೆ. ಕನ್ನಡ ರಾಜ್ಯದಲ್ಲಿಯೇ ಕನ್ನಡಕ್ಕಾಗಿ ಹೋರಾಡಬೇಕಾಗಿ ಬಂದಿರುವುದನ್ನು ನೋಡಿದರೆ, ಸ್ವಾತಂತ್ರ್ಯ ಪೂರ್ವದಲ್ಲಿ ಮರಾಠಿ ಸಂಸ್ಥಾನದಲ್ಲಿದ್ದ ನಮ್ಮ ನಾಡಿನ, ಕನ್ನಡ ಭಾಷೆಯ ಪರಿಸ್ಥಿತಿ ಹೇಗಿದ್ದಿರಬಹುದು? ಊಹಿಸಲೂ ಕಷ್ಟ ಅಲ್ಲವೇ?
ಸ್ವತಂತ್ರಭಾರತದಲ್ಲಿ ವಿಲೀನಗೊಂಡ ಹಿಂದಿನ ಸಾಂಗ್ಲಿ ಸಂಸ್ಥಾನದಲ್ಲಿ ಆರು ತಾಲ್ಲೂಕುಗಳಿದ್ದವು. ಅವು ಉತ್ತರದಲ್ಲಿ ಭೀಮಾ ನದಿಯಿಂದ ದಕ್ಷಿಣದಲ್ಲಿ ತುಂಗಭದ್ರಾ ನದಿಯವರೆಗೆ ಹಬ್ಬಿದ ಬಹು ವಿಸ್ತಾರವಾದ ಭೂಪ್ರದೇಶದಲ್ಲಿ ಮುಂಬಯಿ ಪ್ರಾಂತದ ಸಾತಾರಾ, ಸೊಲ್ಲಾಪುರ, ಬೆಳಗಾವಿ ಮತ್ತು ಧಾರವಾಡ ಜಿಲ್ಲೆಗಳಲ್ಲಿ ಹಂಚಿಹೋಗಿದ್ದವು.
ಸಾಂಗ್ಲಿ ಸಂಸ್ಥಾನಿಕರು ಮಹಾರಾಷ್ಟ್ರದ ರತ್ನಾಗಿರಿ ಜಿಲ್ಲೆಯವರು. ಅವರ ಮಾತೃಭಾಷೆ ಮರಾಠಿ. ಆದುದರಿಂದ ಸಂಸ್ಥಾನದ ಎಲ್ಲ ತಾಲ್ಲೂಕುಗಳಲ್ಲೂ ಮರಾಠಿಯೇ ಆಡಳಿತ ಭಾಷೆಯಾಗಿತ್ತು. ಈ ಸಂಸ್ಥಾನದ ಶಿರಹಟ್ಟಿ, ಶಹಾಪುರ, ತೇರದಾಳ ತಾಲ್ಲೂಕುಗಳು ಕನ್ನಡ ತಾಲ್ಲೂಕುಗಳಾಗಿದ್ದರೂ ಮರಾಠಿಯಲ್ಲಿಯೇ ಎಲ್ಲ ಆಡಳಿತ ವ್ಯವಹಾರಗಳು ನಡೆಯುತ್ತಿದ್ದವು. ರಾಜಧಾನಿ ಸಾಂಗ್ಲಿಯಿಂದ ಶಿರಹಟ್ಟಿ(ಈಗ ಗದಗ ಜಿಲ್ಲೆ)ಯು ಸುಮಾರು ೨೦೦ ಮೈಲಿಗೂ ದೂರದಲ್ಲಿತ್ತು. ಆದರೂ ಸಹ ಕನ್ನಡ ಆಡಳಿತ ಭಾಷೆಯಾಗಬೇಕೆಂದು ಯಾರೂ ಚಿಂತಿಸುತ್ತಿರಲಿಲ್ಲ.
ಇಂಥ ಪರಿಸ್ಥಿತಿಯಲ್ಲಿ ಕನ್ನಡಿಗರು ಅಲ್ಲದವರೊಬ್ಬರು ಕನ್ನಡವನ್ನು ಆಡಳಿತ ಭಾಷೆ ಮಾಡಬೇಕೆಂದು ಆಜ್ಞೆಮಾಡಿದ್ದು ಆಶ್ಚರ್ಯಕಾರಕವಾಗಿದೆ. ಸಾಂಗ್ಲಿ ರಾಜರು ಅಪ್ರಾಪ್ತ ವಯಸ್ಕರಿದ್ದುದರಿಂದ ೧೯೦೫ರಿಂದ ೧೯೧೦ರವರೆಗೆ ಬ್ರಿಟಿಷ್ ಸರಕಾರ ಕ್ಯಾಪ್ಟನ್ ಆರ್.ಸಿ. ಬರ್ಕ್‌ರನ್ನು ಸಾಂಗ್ಲಿ ಸಂಸ್ಥಾನದ ಆಡಳಿತಗಾರರನ್ನಾಗಿ ನೇಮಕ ಮಾಡಿತು. ಕ್ಯಾ. ಬರ್ಕರು ಐದು ವರ್ಷಗಳ ಆಡಳಿತಾವಧಿಯಲ್ಲಿ ಸಂಸ್ಥಾನದಲ್ಲಿ ಮಾಡಿದ ಸರ್ವತೋಮುಖ ಸುಧಾರಣೆಗಳು ಚಿರಸ್ಥಾಯಿ. ಅವರು ಒಂಟೆಯ ಮೇಲೆ ಸವಾರಿ ಮಾಡಿ ಮೂಲೆ ಮೂಲೆಯ ಹಳ್ಳಿಗಳಿಗೂ ಸಂಚರಿಸಿ ಸ್ಥಳದಲ್ಲಿಯೇ ಲೋಕಹಿತ ಕಾರ್ಯಗಳನ್ನು ಆರಂಭಿಸಲು ಆಜ್ಞೆಯಿತ್ತು ಹಣ ಮಂಜೂರು ಮಾಡುತ್ತಿದ್ದರು. ಕೇವಲ ವಾಹನಗಳಲ್ಲಿ ರಸ್ತೆ ಬದಿಯ ದೊಡ್ಡ ದೊಡ್ಡ ಊರುಗಳಿಗೆ ಮಾತ್ರ ಹೋಗದೆ, ಕುದುರೆಯ ಮೇಲೆ ಕುಗ್ರಾಮಗಳಿಗೂ ಹೋಗಬೇಕೆಂದೂ ರೈತರ, ಬಡವರ ತೊಂದರೆಗಳನ್ನು ಕೂಡಲೇ ನಿವಾರಿಸಬೇಕೆಂದೂ ಮಾಮಲೆದಾರ(ತಹಶೀಲದಾರ)ರಿಗೆ ಬರ್ಕ್ ಆಜ್ಞೆ ಮಾಡಿದ್ದರು.
ಕ್ಯಾಪ್ಟನ್ ಬರ್ಕ್ ೧೯೦೯ರಲ್ಲಿ ಹೊರಡಿಸಿದ ಒಂದು ಆಜ್ಞೆಗೆ ಐತಿಹಾಸಿಕ ಮಹತ್ತ್ವ ಪ್ರಾಪ್ತವಾಗಿದೆ. ಆ ಆಜ್ಞೆಯ ಸಾರ ಹೀಗಿತ್ತು: ಸಾಂಗ್ಲಿ ಸಂಸ್ಥಾನದ ಬಹುಭಾಗ ಕನ್ನಡ ಪ್ರದೇಶವಿರುವುದರಿಂದ ಅಂಥಲ್ಲೆಲ್ಲ ಅಧಿಕಾರಿಗಳು ನಿಶ್ಚಿತ ಅವಧಿಯಲ್ಲಿ ಕನ್ನಡ ಪ್ರಮಾಣ ಪರೀಕ್ಷೆಗಳನ್ನು ಪಾಸಾಗಬೇಕು; ಪಾಸಾಗದಿದ್ದಲ್ಲಿ ಅವರ ವೇತನದಲ್ಲಿ ಕಡಿತ ಮಾಡಬೇಕು; ಅದನ್ನೂ ಲೆಕ್ಕಿಸದೆ ಕನ್ನಡ ಕಲಿಯದವರನ್ನು ನೌಕರಿಯಿಂದ ವಜಾ ಮಾಡಬೇಕು!
ಜನಸಾಮಾನ್ಯರ ಭಾಷೆಯೆ ಆಡಳಿತ ಭಾಷೆಯಾಗಬೇಕೆಂದು ಕ್ಯಾಪ್ಟನ್ ಬರ್ಕ್ ಸರಿಯಾಗಿಯೇ ತೀರ್ಮಾನಿಸಿದ್ದರು. ಆದರೆ ಅವರು ನಿರ್ಗಮಿಸಿದ ಮೇಲೆ, ಅವರಿಗಿದ್ದ ಕನ್ನಡದ ಬಗೆಗಿನ ಕಳಕಳಿ ಮುಂದೆ ಉಳಿಯಲಿಲ್ಲ. ತಾಲೂಕಿನ ಬಹುತೇಕ ಅಧಿಕಾರಿಗಳು ಮರಾಠಿ ಭಾಷಿಕರೇ ಬಂದರು. ಎಲ್ಲ ವ್ಯವಹಾರ ಮರಾಠಿಯಲ್ಲಿಯೆ ನಡೆಯುತ್ತಿದ್ದು ಒಂದು ರೀತಿಯ ಕೃತ್ರಿಮ ವಾತಾವರಣ ನಿರ್ಮಾಣಗೊಂಡಿತ್ತು.
ನಾನು ೧೯೩೪ರಲ್ಲಿ ಶಿರಹಟ್ಟಿಯಲ್ಲಿ ವಕೀಲಿ ವೃತ್ತಿ ಆರಂಭಿಸಿದಾಗ ನ್ಯಾಯಾಲದಲ್ಲಿಯ ಎಲ್ಲ ವ್ಯವಹಾರ ಮರಾಠಿಯಲ್ಲಿತ್ತು. `ಕನ್ನಡದ ತಿರುಳು’ ಎಂದು ಕನ್ನಡ ಸಾಹಿತ್ಯದಲ್ಲಿ ಚಿರಸ್ಥಾಯಿಯಾಗಿರುವ ನಮ್ಮ ತಾಲೂಕಿನಲ್ಲಿ ಕನ್ನಡಕ್ಕೆ ಏನೂ ಸ್ಥಾನವಿಲ್ಲದುದನ್ನು ಕಂಡು ನನಗೆ ತುಂಬಾ ವ್ಯಥೆಯಾಯಿತು. ಶಿರಹಟ್ಟಿಯ ಗೌರವಾನ್ವಿತ ಹಿರಿಯ ವಕೀಲ ಅಶ್ವತ್ಥರಾವ್ ಮಹಿಷಿ ಅವರು ಉಜ್ವಲ ರಾಷ್ಟ್ರಾಭಿಮಾನಿಗಳು ಹಾಗೂ ಕನ್ನಡ ನಾಡು-ನುಡಿಗಳ ಅಭಿಮಾನಿಗಳೂ ಆಗಿದ್ದರು. ೧೯೧೫ರಷ್ಟು ಹಿಂದೆಯೆ ಮೈಸೂರು ಸಂಸ್ಥಾನದ ಬೆಂಗಳೂರಿನಲ್ಲಿ ಜರುಗಿದ ಅಖಿಲ ಕನ್ನಡ ನಾಡು ಪರಿಷತ್‌ಗೆ ಆಮಂತ್ರಿತರಾಗಿದ್ದರು. ನಾನು ಕನ್ನಡಕ್ಕಾಗಿ ಮಾಡಿದ ಪ್ರಯತ್ನಗಳಿಗೆ ಅವರ ಪೂರ್ಣ ಬೆಂಬಲ, ಪ್ರೋತ್ಸಾಹ ಇದ್ದವು. ಶಿರಹಟ್ಟಿ ತಾಲೂಕಿನಲ್ಲಿ ಜರುಗುವ ಎಲ್ಲ ಸಾರ್ವಜನಿಕ ಸಭೆ ಸಮ್ಮೇಳನಗಳ ನಡವಳಿಕೆಗಳು ಕನ್ನಡದಲ್ಲಿಯೇ ನಡೆಯಬೇಕೆಂದು ನಾವು ಪ್ರಯತ್ನಿಸುತ್ತಿದ್ದೆವು.
ಒಂದು ಪ್ರಸಂಗ ನೆನಪಾಗುತ್ತಿದೆ. ಒಮ್ಮೆ ಮರಾಠಿ ಅಧಿಕಾರಿ ಯೊಬ್ಬರು ಕನ್ನಡ ಆಡಳಿತ ಭಾಷೆಯಾಗುವ ಬಗೆಗೆ ನನ್ನೊಂದಿಗೆ ವಾದಕ್ಕಿಳಿದರು:
ಅಧಿಕಾರಿ: ಶಿರಹಟ್ಟಿ ತಾಲೂಕಿನಲ್ಲಿ ಕನ್ನಡ ಕೋರ್ಟ್-ಕಚೇರಿ ಭಾಷೆಯಾಗಬಹುದೆಂದು ನೀವು ನಂಬುತ್ತೀರಾ?
ಸಾಂಗ್ಲಿ ಸಂಸ್ಥಾನದ ಮಂತ್ರಿಮಂಡಳ:
ಎಡದಿಂದ ಬಲಕ್ಕೆ: ಡಿ.ಆರ್. ದೇಶಪಾಂಡೆ, ಬಿ.ಪಿ. ಕದಮ್, ಬಿ.ಬಿ. ಪಾಟೀಲ್ ಹಾಗೂ ಮುಖ್ಯಮಂತ್ರಿ ಬಿ.ಎಸ್. ಕೋರೆ
ನಾನು: ಕನ್ನಡ ನಾಡಿನ ಭಾಗವಾದ ಶಿರಹಟ್ಟಿಯಲ್ಲಿ ಎಂದೆಂದಿಗೂ ಮರಾಠಿಯೇ ಆಡಳಿತ ಭಾಷೆಯಾಗಿ ಉಳಿಯುವುದೆಂದು ನೀವು ನಂಬಿರುವಿರಾ?
ಅಧಿಕಾರಿ: ನೀವು ಪರಕೀಯವಾದ ಇಂಗ್ಲಿಷ್‌ಗೆ ವಿರೋಧ ತೋರುವುದಿಲ್ಲ. ಭಾರತೀಯ ಭಾಷೆಯಾದ ಮರಾಠಿಗೆ ಏಕೆ ಇಷ್ಟೊಂದು ವಿರೋಧ ವ್ಯಕ್ತ ಮಾಡುತ್ತೀರಿ? ಇದು ಸರಿಯೇ?
ನಾನು: ಪರಕೀಯ ಇಂಗ್ಲಿಷ್ ಭಾಷೆಯ ಸ್ಥಾನಮಾನ ನಿರ್ಧರಿಸಿ ದೇಶೀಯ ಭಾಷೆಗಳಿಗೆ ಅಗ್ರಸ್ಥಾನ ಪಡೆದುಕೊಳ್ಳಲು ರಾಷ್ಟ್ರ ನಾಯಕರು ಇದ್ದಾರೆ. ಶಿರಹಟ್ಟಿ ತಾಲ್ಲೂಕಿನಲ್ಲಿ ಆಡಳಿತದಲ್ಲಿ ಕನ್ನಡಕ್ಕೆ ಅಗ್ರಸ್ಥಾನ ಕಲ್ಪಿಸಿಕೊಡಲು ನಮ್ಮ ಸಂಸ್ಥಾನದ ಹೊರಗಿನವರಾರೂ ಬಂದು ಸಹಾಯ ಮಾಡುವುದಿಲ್ಲ. ಅದಕ್ಕಾಗಿ ಇಲ್ಲಿಯ ಕನ್ನಡಿಗರೇ ಪ್ರಯತ್ನಿಸಬೇಕಾಗುವುದು.
ಶಿರಹಟ್ಟಿ, ಶಹಾಪೂರ, ತೇರದಾಳ ತಾಲ್ಲೂಕುಗಳಲ್ಲಿ ಆಡಳಿತ ಭಾಷೆ ಕನ್ನಡವಾಗಬೇಕೆಂಬ ನೂರಾರು ಅಹವಾಲುಗಳು(ನನ್ನ ಸಲಹೆಯಂತೆ) ಸಾಂಗ್ಲಿ ಸರಕಾರಕ್ಕೆ ಹೋಗಿ ಅಧಿಕಾರಿಗಳು ಬೇಸತ್ತುಹೋಗಿರಬೇಕು. ಇಂಥ ಅರ್ಜಿಗಳ ಒಂದು ಪೆಂಡಿ(ಕಟ್ಟು, ರಾಶಿ)ಯನ್ನು ಕಂಡು ಅಂದಿನ ದಿವಾನರಾದ ಬಿ.ಎನ್. ಡೇ, ಇವು ಏನು, ಯಾರು ಏತಕ್ಕಾಗಿ ಸಲ್ಲಿಸಿದ್ದಾರೆ? ಎಂದು ವಿಚಾರಿಸಿದರಂತೆ. ಇವು ಶಿರಹಟ್ಟಿ ತಾಲ್ಲೂಕಿನ ರ್‍ಯೆತರ ಅರ್ಜಿಗಳು. ಶಿರಹಟ್ಟಿ ತಾಲೂಕಿನಲ್ಲಿ ಕೋರ್ಟಿನ ಭಾಷೆ ಕನ್ನಡ ಆಗಬೇಕೆಂದು ಅರಿಕೆ ಮಾಡಿಕೊಂಡಿದ್ದಾರೆ ಎಂದು ಅಧಿಕಾರಿಗಳು ದಿವಾನರಿಗೆ ವಿವರಿಸಿದರು. ಅದಕ್ಕೆ ದಿವಾನರು ಇಷ್ಟೇನೆ? ಅವರೇನೂ ಸರಕಾರದಿಂದ ಹಣ ಬೇಡಿಲ್ಲ; ತಮ್ಮ ಭಾಷೆ ಕೋರ್ಟಿನ ಭಾಷೆಯಾಗಬೇಕೆಂದು ಕೇಳಿಕೊಂಡಿದ್ದಾರೆ. ಅವರ ಬೇಡಿಕೆ ನ್ಯಾಯಸಮ್ಮತವಾದುದು ಎಂದು ಅಭಿಪ್ರಾಯಪಟ್ಟು ವಿಳಂಬವಿಲ್ಲದೆ ಆ ಬಗೆಗೆ ಒಂದು ಹುಕುಂ(ಆಜ್ಞೆ, ಅಪ್ಪಣೆ) ಹೊರಡಿಸಿದರು. ಅದರಲ್ಲಿ `ಶಿರಹಟ್ಟಿ ತಾಲ್ಲೂಕಿನಲ್ಲಿ ಕೋರ್ಟ್‌ನ ಭಾಷೆ ಕನ್ನಡ ಆಗಿರತಕ್ಕದ್ದು’ ಎಂದು ಉಲ್ಲೇಖಿಸಲಾಗಿತ್ತು. ಆ ಆಜ್ಞೆ ೧೯೩೮ರಲ್ಲಿ ಸಾಂಗ್ಲಿ ಸರಕಾರದ ಗ್ಯಾಜೆಟ್‌ನಲ್ಲಿ ಪ್ರಕಟಿತವಾಗಿತ್ತು. ಕನ್ನಡ ಪ್ರದೇಶಗಳಿಗೆ ಇದೊಂದು ಪ್ರೋತ್ಸಾಹಕರ ಘಟನೆಯಾಗಿತ್ತು.
೧೯೪೪ರಲ್ಲಿ ಸಾಂಗ್ಲಿ ಸಂಸ್ಥಾನದ ಶಾಸನ ಸಭೆಗೆ ಚುನಾವಣೆ ಜರುಗಿತು. ಶಿರಹಟ್ಟಿ ತಾಲ್ಲೂಕಿನಿಂದ ನಾನು ಹಾಗು ಮರಿತಮ್ಮಪ್ಪ ಡಬಾಲಿ, ಗೋವಿಂದಗೌಡ ಪಾಟೀಲ, ಗೌಸಮೊಹಿಯುದ್ದೀನ ಹಳ್ಳಿಕೇರಿ ಚುನಾಯಿತ ಶಾಸಕರಾದೆವು. ೧೯೪೬ರಲ್ಲಿ ಹೊಣೆಗಾರ ಸರಕಾರದ ಸ್ಥಾಪನೆಯಾಯಿತು. ಮಂತ್ರಿಮಂಡಲದಲ್ಲಿ ಬಿ.ಎಸ್. ಕೋರೆ ಮುಖ್ಯಮಂತ್ರಿಗಳು, ನಾನು ಶಿಕ್ಷಣಮಂತ್ರಿ. ಕನ್ನಡದ ಕೆಲಸ ಚುರುಕುಗೊಳಿಸಲು ನನಗಿದು ಸದವಕಾಶ.
ಶಿರಹಟ್ಟಿಯಲ್ಲಿ ಮಾಡಿರುವಂತೆ ತೇರದಾಳ ತಾಲ್ಲೂಕಿನಲ್ಲಿ ಸಹ ಕನ್ನಡ ಕೋರ್ಟ್-ಕಚೇರಿ ಭಾಷೆಯಾಗಬೇಕೆಂದು ನಾನು ಮಂತ್ರಿಮಂಡಲದ ಸಭೆಯಲ್ಲಿ ಗೊತ್ತುವಳಿ ಮಂಡಿಸಿದೆನು. ಅದು ಸರ್ವಾನುಮತದಿಂದ ಸ್ವೀಕೃತವಾಯಿತು. ವಾಡಿಕೆಯಂತೆ ಅದಕ್ಕೆ ಮಂತ್ರಿಮಂಡಲದ ಅಧ್ಯಕ್ಷ ಜಗನ್ನಾಥ ಸಾಠೆ ಇವರ ಸಹಿಬಿದ್ದಮೇಲೆ ಅದು ಗ್ಯಾಜೆಟ್‌ನಲ್ಲಿ ಪ್ರಕಟವಾಗಬೇಕಿತ್ತು. ಸಾಠೆ ಸಹಿ ಮಾಡದೇ ಹಾಗೆಯೆ ಇಟ್ಟುಕೊಂಡಿದ್ದರು. ವಿಳಂಬವಾಗುವುದನ್ನು ಕಂಡು ಮುಖ್ಯಮಂತ್ರಿ ಕೋರೆ ಅವರೊಂದಿಗೆ ನಾನು, ಸಾಠೆ ಅವರ ಬಂಗ್ಲೆಗೆ ಹೋಗಿ ವಿಳಂಬದತ್ತ ಅವರ ಗಮನಸೆಳೆದೆ. ಅವರು ದೇಶಪಾಂಡೆ ಅವರೆ, ಆ ಗೊತ್ತುವಳಿಯಲ್ಲಿ ಒಂದು ದೋಷವಿದ್ದಂತೆ ನನಗೆ ಕಂಡುಬಂದುದರಿಂದ ಸಹಿ ಮಾಡದೆ ಹಾಗೆಯೇ ಇಟ್ಟುಕೊಂಡಿರುವೆ. ಗೊತ್ತುವಳಿಯಲ್ಲಿ `ಕೋರ್ಟ್ ಕಚೇರಿಗಳ ಭಾಷೆ ಕನ್ನಡ ಇರತಕ್ಕದ್ದು’ ಎಂದು ಇದೆ. ಹಾಗಾದ ಪಕ್ಷದಲ್ಲಿ ಮರಾಠಿ ಭಾಷೆಗೆ ಧಕ್ಕೆಯಾಗುವುದು. ನಿಮ್ಮ ಉದ್ದೇಶ ಹಾಗಿರಲಿಕ್ಕಿಲ್ಲ ಎಂದರು. ಉದ್ದೇಶಪೂರ್ವಕವಾಗಿಯೇ ಹಾಗೆ ಗೊತ್ತುವಳಿ ಮಾಡಲಾಗಿದೆಯೆಂದು ನಾನು ವಿವರಿಸಿದೆ. ಮರಾಠಿಯ ಆಲದ ಮರದ ಕೆಳಗೆ ಕನ್ನಡದ ಸಸಿ ಬೆಳೆಯಲಾರದು ಎಂದೆನು. ಅಧಿಕಾರಿ ವರ್ಗ, ಮುನಸೀಫರು, ಮರಾಠಿ ಭಾಷಿಕರೇ ದೀರ್ಘಕಾಲದಿಂದ ಇರುತ್ತ ಬಂದಿದ್ದರಿಂದ ಕನ್ನಡದ ಬಳಕೆಗೆ ಅವರು ವಿರೋಧಿಗಳಾಗಬಹುದು. ಹಾಗಾಗಿ, ಮರಾಠಿಯೆ ಮುಂದುವರಿಯಬಹುದು, ಇವೆಲ್ಲ ಸಾಧಕ-ಬಾಧಕಗಳನ್ನು ಪರಿಶೀಲಿಸಿಯೆ ಗೊತ್ತುವಳಿಯಲ್ಲಿ ಕನ್ನಡ ಆಡಳಿತ ಭಾಷೆ ಇರತಕ್ಕದ್ದು ಎಂದು ನಮೂದಿಸಲಾಗಿದೆ ಎಂದು ತಿಳಿಸಿದೆ. ಇದರಿಂದ ಸಾಠೆ ಅವರಿಗೆ ಆಶ್ಚರ್‍ಯವಾದರೂ ಸಹಿ ಮಾಡಿದರು. ಆ ಆಜ್ಞೆ ಸಾಂಗ್ಲಿ ಸರಕಾರದ ಗ್ಯಾಜೆಟ್‌ನಲ್ಲಿ ಪ್ರಕಟಗೊಂಡು ಕನ್ನಡಕ್ಕೆ ಕೋರ್ಟ್ ಭಾಷೆಯಾಗುವ ಗೌರವ ದೊರೆಯಿತು.
ನಾನು ತೇರದಾಳಕ್ಕೆ ಭೇಟಿಯಿತ್ತು ರೈತರು, ವ್ಯಾಪಾರಸ್ಥರು, ವಕೀಲರು, ಸಾರ್ವಜನಿಕ ಕಾರ್ಯಕರ್ತರ ಸಭೆ ಕರೆದು ಕೋರ್ಟ್ ಭಾಷೆಯಾಗಿ ಕನ್ನಡ ಕೇವಲ ಕಾಗದದ ಮೇಲೆ ಉಳಿಯದೆ ಎಲ್ಲ ಕೋರ್ಟ್ ವ್ಯವಹಾರ ಕನ್ನಡದಲ್ಲಿಯೆ ಮಾಡುತ್ತ ಸರಕಾರಿ ಆಜ್ಞೆಯ ಉದ್ದೇಶ ಸಫಲಗೊಳಿಸಿರೆಂದು ಭಿನ್ನವಿಸಿಕೊಂಡೆ. ಅವರೂ ಭರವಸೆ ಇತ್ತರು. ಸಮಾರಂಭದ ನಂತರ ತೇರದಾಳದ ಮುನಸೀಫರಾಗಿದ್ದ ದಾತೆ ಅವರನ್ನು ಭೆಟ್ಟಿಯಾದೆ.
ತೇರದಾಳ ನ್ಯಾಯಾಲಯದ ಭಾಷೆ ಕನ್ನಡವೆಂದು ಸರಕಾರ ತೀರ್ಮಾನಿಸಿದ್ದುದು ನಿಮಗೆ ಗೊತ್ತೇ ಇದೆ. ನಿಮ್ಮ ಮಾತೃಭಾಷೆ ಮರಾಠಿ, ನಿಮಗೆ ತೊಂದರೆಯಾಗಬಹುದು. ಬೇಕಿದ್ದರೆ ನಿಮ್ಮನ್ನು ಮರಾಠಿ ಪ್ರದೇಶಕ್ಕೆ ವರ್ಗ ಮಾಡಿಸಲು ಸಹಾಯ ಮಾಡುವೆ. ನಿಮಗೆ ಅನುಕೂಲವಾಗಬಹುದು ಎಂದು ನಾನು ಅವರಿಗೆ ತಿಳಿಸಿ ಹೇಳಿದೆ. ಇಲ್ಲ ಬೇಡ, ನಾನು ಕನ್ನಡದಲ್ಲಿಯೇ ನ್ಯಾಯಾಲಯದ ವ್ಯವಹಾರ ನಡೆಸುವೆ ಎಂದು ದಾತೆ ಉತ್ತರಿಸಿದರು.
ಸಂಸ್ಥಾನದ ಮೂರನೆಯ ಕನ್ನಡ ತಾಲ್ಲೂಕಾದ ಶಹಪೂರ ನ್ಯಾಯಾಲಯದಲ್ಲಿಯೂ ಕನ್ನಡ ಜಾರಿಗೊಳಿಸುವ ಪ್ರಯತ್ನದಲ್ಲಿದ್ದೆನು. ಅಷ್ಟರಲ್ಲಿ ಸಂಸ್ಥಾನಗಳ ವಿಲೀನೀಕರಣ ಆರಂಭಗೊಂಡು ಸಾಂಗ್ಲಿ ಸಂಸ್ಥಾನದ ಎಲ್ಲ ಕನ್ನಡ ತಾಲ್ಲೂಕುಗಳು ದೀರ್ಘ ಕಾಲಾನಂತರ ಕರ್ನಾಟಕಕ್ಕೆ ಮರಳಿ ಬಂದವು. ವಿಶಾಲ ಕರ್ನಾಟಕ ರಾಜ್ಯ ಸ್ಥಾಪಿತಗೊಂಡು ಕನ್ನಡದ ಕೆಲಸ ಸುಗಮವಾಗಿ ಸಾಗುವುದೆಂಬ ನೆಮ್ಮದಿ ತಾಳಿದೆವು.
ಸಾಂಗ್ಲಿ ಶಾಸನ ಸಭೆಯಲ್ಲಿ ಕನ್ನಡದ ಬಗೆಗೆ ಒಂದು ಮಹತ್ತ್ವದ ಘಟನೆ ಜರುಗಿತು. ಪ್ರತಿ ವರ್ಷ ರಾಜ್ಯದ `ಅಂದಾಜುಪತ್ರಿಕೆ’ಯನ್ನು ಶಾಸನ ಸಭೆಗೆ ಒಪ್ಪಿಸುವುದು ಸಂಪ್ರದಾಯ. ನಾನು ಮಂತ್ರಿ ಇದ್ದಾಗ ೧೯೪೭-೪೮ರ `ಅಂದಾಜುಪತ್ರಿಕೆ’ಯನ್ನು ಮರಾಠಿ ಮತ್ತು ಕನ್ನಡ ಎರಡೂ ಭಾಷೆಯಲ್ಲಿ ಮುದ್ರಿಸಿ ಮಂಡಿಸಬೇಕೆಂದು ಆರ್ಥಿಕ ಮಂತ್ರಿಗಳಿಗೆ ಸೂಚಿಸಿದೆ. ಅವರು ಸಂತೋಷದಿಂದ ಒಪ್ಪಿದರು. ಮುದ್ರಣ ಇಲಾಖೆ ನನ್ನ ಕಡೆಗೆ ಇತ್ತು. `ಅಂದಾಜುಪತ್ರಿಕೆ’ ಎರಡೂ ಭಾಷೆಗಳಲ್ಲಿ ಮುದ್ರಣಗೊಂಡು ಹೊರಬಂದಿತು. ವಿಚಿತ್ರವೆಂದರೆ, ಕನ್ನಡ ಅಕ್ಷರಗಳು ಮರಾಠಿ ಅಕ್ಷರಗಳಿಗಿಂತ ಹೆಚ್ಚು ಸ್ಪಷ್ಟವಾಗಿ ಎದ್ದು ಕಾಣುತ್ತಿದ್ದವು. ಅದಕ್ಕೆ ಕಾರಣವೆಂದರೆ, ಕನ್ನಡದ ಅಚ್ಚು ಮೊಳೆಗಳು ಬಳಕೆಯಾಗಿರದೆ ಹೊಚ್ಚ ಹೊಸದಾಗಿದ್ದವು. ಮರಾಠಿ ಅಚ್ಚು ಮೊಳೆಗಳು ಪದೇ ಪದೇ ಉಪಯೋಗಿಸಲ್ಪಟ್ಟಿದ್ದು ಸವಕಲಾಗಿದ್ದವು. ಶಾಸನ ಸಭೆಯಲ್ಲಿ ನನ್ನ ಮೇಲೆ ಈ ಬಗೆಗೆ ಟೀಕೆ ಬರಬಹುದೆಂದು ಸಹಜವಾಗಿಯೆ ಊಹಿಸಿದ್ದೆ. `ಅಂದಾಜುಪತ್ರಿಕೆ’ ಶಾಸನ ಸಭೆಯಲ್ಲಿ ಮಂಡಿತವಾದಾಗ ಒಬ್ಬ ಶಾಸಕರು ಅಂದಾಜುಪತ್ರಿಕೆಯಲ್ಲಿ ಕನ್ನಡವೆ ರಾರಾಜಿಸುತ್ತಿದೆ, ಮರಾಠಿ ಮಂಕಾಗಿದೆ ಎಂದು ಉಗ್ರವಾಗಿ ಟೀಕಿಸಿದರು. ಇನ್ನೂ ಅನೇಕ ಟೀಕೆಗಳನ್ನು ನಾನು ನಿರೀಕ್ಷಿಸಿದ್ದೆ. ಅಷ್ಟರಲ್ಲೊಂದು ಅನಿರೀಕ್ಷಿತ ಘಟನೆ ಜರುಗಿತು. ಸಾಂಗ್ಲಿ ಚೇಂಬರ್ ಆಫ್ ಕಾಮರ್ಸ್‌ನ ಅಧ್ಯಕ್ಷರಾಗಿದ್ದ ವ್ಹೋರಾ ಶಾಸಕರಾಗಿದ್ದರು. ಅವರು ಜೈನ ಬಂಧುಗಳು; ಮನೆಯಲ್ಲಿ ಕನ್ನಡ ಮಾತಾಡುತ್ತಿದ್ದರು. ದ್ವಿಭಾಷೆಯಲ್ಲಿ `ಅಂದಾಜುಪತ್ರಿಕೆ’ ಮುದ್ರಿಸಿದ್ದನ್ನು ಅವರು ತುಂಬಾ ಶ್ಲಾಘಿಸಿ ಮಾತನಾಡಿದರು. ಕಾವು ಇಳಿದು ಸಭೆ ಶಾಂತವಾಯಿತು. ಮುಂದೆ ಟೀಕೆ ಮಾಡುವವರ ಬಾಯಿ ಕಟ್ಟಿದಂತಾಯಿತು.
ಸಾಂಗ್ಲಿ ರಾಜರು ಸುಸಂಸ್ಕೃತರು, ಪ್ರಗತಿಶೀಲರು. ಶಿರಹಟ್ಟಿ ತಾಲ್ಲೂಕಿನ ಜನರ ಆಸೆ-ಆಕಾಂಕ್ಷೆಗಳನ್ನರಿತು ತಮ್ಮ ಭಾಷಣಗಳನ್ನು ಮರಾಠಿ ಲಿಪಿಯಲ್ಲಿ ಬರೆದುಕೊಂಡು ಕನ್ನಡ ಭಾಷೆಯಲ್ಲಿ ಓದುತ್ತಿದ್ದರು. ಅಂದಿನ ಕಾಲದಲ್ಲಿ ಪ್ರಾಥಮಿಕ ಶಾಲೆಗಳನ್ನು ಸರಕಾರವೆ ನಡೆಸುತ್ತಿತ್ತು. ಪ್ರಾರ್ಥನಾ ಗೀತೆಯನ್ನು ಮರಾಠಿಯಲ್ಲಿಯೇ ಹಾಡಬೇಕಾದುದು ಕಡ್ಡಾಯವಾಗಿತ್ತು. ನನ್ನ ಮಿತ್ರ ಆರ್.ಬಿ. ಬಾಲೆಹೊಸೂರ ಮಾಸ್ತರರು ಕನ್ನಡಾಭಿಮಾನಿಗಳು. ಆ ಮರಾಠಿ ಪ್ರಾರ್ಥನೆಯನ್ನು ಅಷ್ಟೇ ಸುಂದರವಾಗಿ ಕನ್ನಡದಲ್ಲಿ ರಚಿಸಿ, ರಾಜರು ಪಾಲ್ಗೊಂಡಿದ್ದ ಒಂದು ಸಭೆಯಲ್ಲಿ ಹಾಡಿಸಿ ತೋರಿಸಿದಾಗ ರಾಜರು ತುಂಬಾ ಮೆಚ್ಚಿಕೊಂಡರು. ಅಷ್ಟೇ ಅಲ್ಲದೆ ಎಲ್ಲ ಕನ್ನಡ ಶಾಲೆಗಳಲ್ಲಿ ಅದನ್ನೇ ಹಾಡಬೇಕೆಂದು ಆಜ್ಞಾಪಿಸಿದರು!
ದಕ್ಷಿಣ ಸಂಸ್ಥಾನಗಳಲ್ಲಿ `ಪ್ರಜಾಪಕ್ಷ’ ಎಂಬ ರಾಜಕೀಯ ಪಕ್ಷ ಸ್ಥಾಪಿತವಾಗಿತ್ತು. ವಾಮನರಾವ ಪಟವರ್ಧನ ಅವರು ಅದರ ಅಧ್ಯಕ್ಷರಾಗಿದ್ದರು. ಪುಣೆಯಿಂದ ಹೊರಡುತ್ತಿದ್ದ ಸಂಸ್ಥಾನಿ ‘ಸ್ವರಾಜ್ಯ ಸಾಪ್ತಾಹಿಕ’ದ ಸಂಪಾದಕರೂ ಅವರೆ ಆಗಿದ್ದರು. ನಾನು ಪ್ರಜಾಪಕ್ಷದ ಶಿರಹಟ್ಟಿ ಶಾಖೆಯ ಕಾರ್ಯದರ್ಶಿಯಾಗಿದ್ದೆನು. ರೈತ ಸಭೆಯೊಂದರ ನಿಮಿತ್ತ ಶಿರಹಟ್ಟಿಗೆ ಬಂದ ವಾಮನರಾಯರು ಇಲ್ಲಿನ ಪ್ರಜಾಪಕ್ಷದ ಚಟವಟಿಕೆಗಳ ವರದಿ ಸಲ್ಲಿಸುತ್ತ ಹೋಗಿರಿ ಎಂದು ನನಗೆ ಹೇಳಿದರು. ಈ ಪ್ರದೇಶ ಕನ್ನಡದ್ದು, ಸುದ್ದಿಗಳನ್ನು ಕನ್ನಡದಲ್ಲಿಯೇ ಕಳಿಸಿದರೆ ನೀವು ನಿಮ್ಮ ಮರಾಠಿ ಪತ್ರಿಕೆಯಲ್ಲಿ ಕನ್ನಡದಲ್ಲಿ ಪ್ರಕಟಿಸುವಿರಾ? ಎಂದು ನಾನು ಅವರನ್ನು ಕೇಳಿದೆ. ಅವರು ಒಪ್ಪಿ ನಾನು ಕಳಿಸಿದ ಸುದ್ದಿಗಳನ್ನು ಕನ್ನಡದಲ್ಲಿಯೆ ಮುದ್ರಿಸತೊಡಗಿದರು. ಎರಡು-ಮೂರು ಕಾಲಂಗಳಷ್ಟು ಸ್ಥಳ ಕನ್ನಡಕ್ಕಾಗಿ ಮೀಸಲಿಟ್ಟರು! ಮುಂದೆ ಸಂಸ್ಥಾನದ ಶಾಸನ ಸಭೆಯಲ್ಲಿ ಅನೇಕ ಕನ್ನಡ ಶಾಸಕರು ಧೈರ್ಯದಿಂದ ಕನ್ನಡದಲ್ಲಿಯೆ ಮಾತನಾಡಹತ್ತಿದರು. ಮುಖ್ಯಮಂತ್ರಿ ಬಾಳಾಸಾಹೇಬ ಕೋರೆ ಅವರು ನನ್ನನ್ನುದ್ದೇಶಿಸಿ ವಿನೋದವಾಗಿ ಸಾಂಗ್ಲಿಯಲ್ಲಿ ಎಷ್ಟೊಂದು ಕನ್ನಡಿಗರನ್ನು ಕಂಡುಹಿಡಿದಿರುವಿರಲ್ಲ ಎಂದು ಉದ್ಗರಿಸಿದರು; ನಾನೂ ಅಷ್ಟೆ ವಿನೋದವಾಗಿ ದಕ್ಷಿಣ ಮಹಾರಾಷ್ಟ್ರವೆಲ್ಲ ಕನ್ನಡದ್ದೆ ಆಗಿದೆ. ಐತಿಹಾಸಿಕ ಕಾರಣಗಳಿಂದಾಗಿ ಅದು ಮಹಾರಾಷ್ಟ್ರದ್ದೆಂದು ನಿಮ್ಮ ಭಾವನೆ ಆಗಿದೆ ಎಂದೆನು. ನಾಲ್ಕು ಜನ ಮಂತ್ರಿಗಳಲ್ಲಿ ಮೂವರು ಕನ್ನಡ ಭಾಷಿಕರೆ ಇದ್ದು ನಾವು ನಮ್ಮ ನಮ್ಮೊಳಗೆ ಕನ್ನಡದಲ್ಲಿಯೇ ಮಾತನಾಡುತ್ತಿರುವಾಗ ಒಬ್ಬ ಶಾಸಕರು ನಮ್ಮ ಮಂತ್ರಿಮಂಡಲವನ್ನು ‘ಕಾನಡಿ ಮಂತ್ರಿಮಂಡಲ’ ಎಂದು ಹಾಸ್ಯ ಮಾಡಿದರು. ಇದರಿಂದ ನಮಗೆ ಸಂತೋಷವೇ ಆಯಿತು. ಸಾಂಗ್ಲಿಯಲ್ಲಿಯ ಕರ್ನಾಟಕ ಸಂಘದ ಸದಸ್ಯತ್ವ ಬೆಳೆಯುತ್ತ ಹೋಯಿತು. ಪ್ರೊ. ರಂ.ಶ್ರೀ. ಮುಗಳಿಯವರು ಸಂಘದ ಕಾರ್ಯಗಳಲ್ಲಿ ಭಾಗವಹಿಸಿ ಪ್ರೋತ್ಸಾಹಿಸುತ್ತಿದ್ದರು.
೧೯೪೮ರಲ್ಲಿ ಭಾರತದ ಸಂವಿಧಾನ ಮಂಡಳಕ್ಕೆ ದಕ್ಷಿಣ ಸಂಸ್ಥಾನಗಳ ಪರವಾಗಿ ಒಬ್ಬ ಪ್ರತಿನಿಧಿಯನ್ನು ಚುನಾಯಿಸಬೇಕಾಗಿತ್ತು. ಸುಮಾರು ೧೮-೧೯ ಸಂಸ್ಥಾನಗಳ ವತಿಯಿಂದ ಅಭ್ಯರ್ಥಿಯನ್ನಾಗಿ ಔಂಧ ಸಂಸ್ಥಾನದ ಅತ್ಯಂತ ಜನಪ್ರಿಯ ಯುವರಾಜರನ್ನು ಮಹಾರಾಷ್ಟ್ರದ ಕಾರ್ಯಕರ್ತರು ನಿಲ್ಲಿಸಿದರು. ಅವರಿಗೆ ಪ್ರತಿಸ್ಪರ್ಧಿಯೆಂದು ಕನ್ನಡಿಗರ ಪರವಾಗಿ ಮುನವಳ್ಳಿ ವಕೀಲರನ್ನು ನಿಲ್ಲಿಸಿದೆವು. ಚುನಾವಣೆ ಬಿರುಸಿನದೂ, ಪ್ರತಿಷ್ಠೆಯದೂ ಆಗಿತ್ತು. ಮುನವಳ್ಳಿಯವರ ಪ್ರಚಾರಾರ್ಥ ಎಸ್. ನಿಜಲಿಂಗಪ್ಪ, ಹಳ್ಳಿಕೇರಿ ಗುದ್ಲೆಪ್ಪ ಸಂಚರಿಸುತ್ತ ಸಾಂಗ್ಲಿಗೂ ಸಹ ಬಂದಿದ್ದರು. ಮುನವಳ್ಳಿ ಆರಿಸಿಬಂದರು. ಮಹಾರಾಷ್ಟ್ರದ ಮುಖಂಡರಿಗೆ ಆದ ಆಶ್ಚರ್ಯ ಅಷ್ಟಿಷ್ಟಲ್ಲ. ಕಾವೇರಿಯಿಂದ ಗೋದಾವರಿವರೆಗೆ ಕನ್ನಡ ನಾಡಿನ ವಿಸ್ತಾರವನ್ನು ಹಾಡಿದ ನೃಪತುಂಗನ ವಾಣಿ ನನಗೆ ನೆನಪಾಯಿತು.
ಸಾಂಗ್ಲಿ ಸಂಸ್ಥಾನದ ರಬಕವಿಯಲ್ಲಿ ಎಸ್.ಎಂ. ಅಂಗಡಿ ಹೈಸ್ಕೂಲ್ ಶಿಕ್ಷಕರಾಗಿದ್ದರು. ಅವರು ಒಳ್ಳೆಯ ವಿದ್ವಾಂಸರು. ರಬಕವಿಯಲ್ಲಿ ಅಖಿಲ ಕರ್ನಾಟಕ ಕನ್ನಡ ಸಾಹಿತ್ಯ ಪರಿಷತ್‌ನ್ನು ಸಂಘಟಿಸಿದ ಸಮರ್ಥರು. ಅಂತಹ ದಕ್ಷ ಶಿಕ್ಷಕರನ್ನು ಶಿಕ್ಷಣಾಧಿಕಾರಿ(ಮರಾಠಿ ಅಧಿಕಾರಿ ಆಗಿರುತ್ತಿದ್ದುದರಿಂದ)ಗಳು ಒಂದಿಲ್ಲೊಂದು ನೆಪದಿಂದ ಅನಾನುಕೂಲ ಸ್ಥಳಕ್ಕೆ ವರ್ಗಾಯಿಸುತ್ತಿದ್ದರು. ನಾನು ಶಿಕ್ಷಣ ಮಂತ್ರಿಯಾಗಿದ್ದುದರಿಂದ ಅದೆಲ್ಲವನ್ನು ಲೆಕ್ಕಿಸದೆ ಅಂಗಡಿಯವರನ್ನು ರಬಕವಿ ಹೈಸ್ಕೂಲಿನ ಮುಖ್ಯ ಅಧ್ಯಾಪಕನನ್ನಾಗಿ ನಿಯಮಿಸಿದೆ. ಮುಂದೆ ಅವರು ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ವಚನ ವಿಭಾಗದಲ್ಲಿ ಅದ್ಭುತ ಕಾರ್ಯ ಮಾಡಿದರು. ಅದರಿಂದ ನನಗೆ ಹೆಚ್ಚು ಸಂತೋಷ ವಾಯಿತು. ಕೋರ್ಟ್-ಕಚೇರಿಗಳಲ್ಲಿ ಕನ್ನಡದ ಅನುಷ್ಠಾನ ಅಷ್ಟು ಸುಲಭವಾಗಿರಲಿಲ್ಲ. ಏಕೆಂದರೆ ಕನ್ನಡ ಮಾತೃಭಾಷೆಯುಳ್ಳ ಮುನಸೀಫರೆ ಇದ್ದಿರಲಿಲ್ಲ. ಮುನಸೀಫರ ಆಯ್ಕೆ ಸಮಿತಿಯಲ್ಲಿ ನಾನಿದ್ದಾಗ ಇತರ ಅರ್ಹತೆಗಳೊಂದಿಗೆ ಕನ್ನಡ ಬಲ್ಲವರಿಗೆ ಆದ್ಯತೆ ನೀಡಿ ನೇಮಕ ಮಾಡಿದೆವು. ಅವರೆ ಸಂಸ್ಥಾನದ ಪ್ರಥಮ ಕನ್ನಡಿಗ ಮುನಸೀಫರಾದರು. ಸಂಸ್ಥಾನ ವಿಲೀನಗೊಂಡಮೇಲೆ ಅವರಲ್ಲಿ ಕೆಲವರು ಬಡ್ತಿ ಪಡೆದು ಜಿಲ್ಲಾ ನ್ಯಾಯಾಧೀಶರಾಗಿ ಸಕಲರ ಗೌರವಕ್ಕೆ ಪಾತ್ರರಾಗುವಂತೆ ಕಾರ್ಯ ಮಾಡಿದರು.
ಶಿರಹಟ್ಟಿಯಲ್ಲಿ ಕನ್ನಡದ ಅಭಿಮಾನ ಹೆಚ್ಚುತ್ತ ಹೋಗಿ ಇಲ್ಲಿಯ ಸಾರ್ವಜನಿಕ ಸಮಾರಂಭಗಳಿಗೆ, ನಾಡಹಬ್ಬಗಳಿಗೆ ಖ್ಯಾತ ಕನ್ನಡ ವಿದ್ವಾಂಸರಾದ ಬಿ.ಎಮ್. ಶ್ರೀಕಂಠಯ್ಯ, ಹರಡೇಕರ ಮಂಜಪ್ಪ, ಅ.ನ. ಕೃಷ್ಣರಾವ, ದ.ರಾ. ಬೇಂದ್ರೆ, ಪಾಟೀಲ ಪುಟ್ಟಪ್ಪ, ವ್ಹಿ.ಬಿ. ನಾಯಕ, ಬಿ. ಶಿವಮೂರ್ತಿಶಾಸ್ತ್ರಿ, ಬೆಟಗೇರಿ ಕೃಷ್ಣಶರ್ಮ, ಶಂ. ಬಾ. ಜೋಶಿ, ವಿ.ಕೃ ಗೋಕಾಕ, ರಂ.ಶ್ರೀ. ಮುಗಳಿ, ಪಿ.ಕಾಳಿಂಗರಾವ್ ಮೊದಲಾದವರನ್ನು ಕರೆಯಿಸಿದ್ದುಂಟು.ಕನ್ನಡ ಅನುಷ್ಠಾನ ಕಾರ್ಯದಲ್ಲಿ ಅಳಿಲು ಸೇವೆ ಸಲ್ಲಿಸುವ ಅವಕಾಶ ಒದಗಿದ್ದು ನನ್ನ ಭಾಗ್ಯವೇ ಸರಿ.
(ಲೇಖನವನ್ನು ಸಿದ್ಧಪಡಿಸಿ ಒದಗಿಸಿವರು: ಡಿ.ಆರ್. ದೇಶಪಾಂಡೆ ಅವರ ಸುಪುತ್ರಿ ಶಾಂತಾ ರಾ. ನಾಡಗೀರ)
Comments are closed.