ಬಂಡವಾಳ ಹೂಡಿಕೆಗೆ ತೊಂದರೆ ಆಗಬಹುದೆಂದು ಬಿಗಿಯಾದ ಆಹಾರಸುರಕ್ಷತೆ ಶಾಸನ ಮತ್ತು ಪರಿಸರಮಾಲಿನ್ಯದ ವಿಷಯಗಳಲ್ಲಿ ರಾಜಿ ಸಲ್ಲದು.
ಮೆಕ್ಸಿಕೋ ಕೊಲ್ಲಿಯಲ್ಲಿ ೨೦೧೦ರಲ್ಲಿ ತೈಲ ಚೆಲ್ಲಿ ಉಂಟಾದ ಘಟನೆಯಿಂದಾದ ನಷ್ಟ ತುಂಬಿಸುವ ಸಂಬಂಧ ಅಮೆರಿಕ ಸರ್ಕಾರ ಈಚೆಗೆ ಬ್ರಿಟಿಷ್ ಪೆಟ್ರೋಲಿಯಂ(ಬಿಪಿ) ಸಂಸ್ಥೆಯೊಂದಿಗೆ ನ್ಯಾಯಾಲಯದ ಹೊರಗಿನ ಒಪ್ಪಂದವೊಂದನ್ನು ಮಾಡಿಕೊಂಡಿತು. ಅದರಂತೆ ಈ ಬೃಹತ್ ತೈಲ ಕಂಪೆನಿ ನಷ್ಟ ಭರ್ತಿಯ ಬಗ್ಗೆ ೧,೮೭೦ ಕೋಟಿ ಡಾಲರ್ ಹಣವನ್ನು ಪಾವತಿಸಬೇಕಾಗಿದೆ. ೪೦ ಲಕ್ಷ ಬ್ಯಾರಲ್ ತೈಲವು ಸಮುದ್ರದಲ್ಲಿ ಚೆಲ್ಲಿಹೋದ ಪರಿಣಾಮವಾಗಿ ೧೧ ಮಂದಿ ಮೃತಪಟ್ಟಿದ್ದರು; ಮತ್ತು ಸಾಗರದ ಪರಿಸರ ವ್ಯವಸ್ಥೆಗೆ ವ್ಯಾಪಕ ಹಾನಿಯಾಗಿತ್ತು. ತೈಲ ಚೆಲ್ಲಿದ ಆ ಘಟನೆ ಸಂಭವಿಸಿದೊಡನೆ ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ, ಭಾರೀ ದಂಡ ವಿಧಿಸಿದರೆ ವಿದೇಶೀ ಬಂಡವಾಳ ಹೂಡಿಕೆಯ ಮೇಲೆ ದುಷ್ಪರಿಣಾಮ ಉಂಟಾಗಬಹುದೆಂಬ ಚಿಂತೆ ಮಾಡದೇ ಬಿಪಿಯಿಂದ ನಷ್ಟದ ಮೊತ್ತದ ವಸೂಲಿ ಮಾಡದೆ ಬಿಡುವುದಿಲ್ಲ ಎಂಬ ಹೇಳಿಕೆ ನೀಡಿದ್ದರು. ಮತ್ತು ಅವರು ಹಾಗೆ ಮಾಡಿದರು ಕೂಡ. ಇದು ಇಂದು ಜಗತ್ತಿನ ಏಕೈಕ ಸೂಪರ್ ಪವರ್ ಆಗಿ ಉಳಿದಿರುವ ಅಮೆರಿಕ ಕೆಲಸ ಮಾಡುವ ರೀತಿ.
ತೈಲ ಚೆಲ್ಲಿದ್ದಕ್ಕಾಗಿ ಬಿಪಿಗೆ ವಿಧಿಸಿದ ಭಾರೀ ಮೊತ್ತದ ದಂಡದ ಬಗ್ಗೆ ಯಾರಾದರೂ ಸಿಟ್ಟಾಗುವುದು ಸಹಜವೇ. ಏಕೆಂದರೆ ಭೋಪಾಲ್ ವಿಷಾನಿಲ ದುರಂತ (೧೯೮೪)ಕ್ಕೆ ಕಾರಣವಾದ (ಅಮೆರಿಕನ್ ಕಂಪೆನಿ) ಯೂನಿಯನ್ ಕಾರ್ಬೈಡ್ ಮೇಲೆ ಹೊರಿಸಲಾದ ಪರಿಹಾರದ ಪ್ಯಾಕೇಜ್ ಕೇವಲ ೪೭ ಕೋಟಿ ಡಾಲರ್ಗಳದ್ದು; ಆ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ ಸುಮಾರು ೧೦ ಸಾವಿರ; ಅದಕ್ಕಿಂತ ದೊಡ್ಡ ಸಂಖ್ಯೆಯ ಇನ್ನಷ್ಟು ಜನ ವಿವಿಧ ವೈಕಲ್ಯಗಳಿಗೆ ಗುರಿಯಾಗಿದ್ದರು. ಆ ದುರ್ಘಟನೆಯಿಂದಾಗಿ ಭಾರತ ಕಳೆದ ಮೂರು ದಶಕಗಳಲ್ಲಿ ಪಾಠ ಕಲಿತಿದೆ ಎಂದು ನಾನು ಭಾವಿಸಿದ್ದೆ. ಮಾನವಜೀವಗಳು, ಆಹಾರದ ಭದ್ರತೆ ಮತ್ತು ಪರಿಸರವನ್ನು ಬಲಿಗೊಟ್ಟು ವಿದೇಶೀ ಬಂಡವಾಳಕ್ಕೆ ಹಾತೊರೆಯುವುದಿಲ್ಲ ಎಂದು ತಿಳಿದಿದ್ದೆ. ಅದಲ್ಲದೆ ಭೋಪಾಲ್ ಸಂತ್ರಸ್ತರಿಗೆ ನ್ಯಾಯ ಒದಗಿಸುವಲ್ಲಿ ರಾಜಕಾರಣಿಗಳು, ನ್ಯಾಯಾಂಗ ಮತ್ತು ಕೈಗಾರಿಕೆಗಳ ನಾಯಕರ ಪ್ರಶ್ನಾರ್ಹ ಪಾತ್ರದ ಬಗ್ಗೆ ಬಿಸಿಬಿಸಿ ಚರ್ಚೆಗಳು ಸಾಕಷ್ಟು ನಡೆದಿತ್ತಲ್ಲವೆ?
ಸಚಿವೆಯ ಕೋಪ
ಕೇಂದ್ರ ಆಹಾರ ಸಂಸ್ಕರಣ ಸಚಿವೆ ಹರ್ಸಿಮ್ರಾತ್ ಕೌರ್ ಬಾದಲ್
ಆದರೆ ನನ್ನ ಅಭಿಪ್ರಾಯ ತಪ್ಪಾಗಿತ್ತು. ನೆಸ್ಲೆ ಅವರ ಮ್ಯಾಗಿ ನೂಡಲ್ಸ್(ಶ್ಯಾವಿಗೆ)ನ್ನು ಮಾರುಕಟ್ಟೆಯಿಂದ ಹಿಂತೆಗೆದುಕೊಳ್ಳಲು ಆದೇಶ ಹೊರಡಿಸಿದಾಗ ಕೇಂದ್ರ ಆಹಾರ ಸಂಸ್ಕರಣ ಸಚಿವೆ ಹರ್ಸಿಮ್ರಾತ್ ಕೌರ್ ಬಾದಲ್ ಅವರು ಮೊದಲು ಹೇಳಿದ್ದು, ಆಹಾರ ನಿಯಂತ್ರಕ ಸಂಸ್ಥೆಯಾದ ಭಾರತ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರವು (ಎಫ್ಎಸ್ಎಸ್ಎಐ) ಆಹಾರ ಉದ್ಯಮ ಕ್ಷೇತ್ರದಲ್ಲಿ ‘ಭಯದ ವಾತಾವರಣವನ್ನು’ ಉಂಟುಮಾಡುತ್ತಿದೆ ಎಂಬುದಾಗಿ. ಆಹಾರ ಸುರಕ್ಷತೆಯ ಬಗೆಗಿನ ಈ ಸಂಸ್ಥೆ ಜೂನ್ನಲ್ಲಿ ಮ್ಯಾಗಿ ನೂಡಲ್ಸ್ ಮೇಲೆ ನಿಷೇಧ ಹೇರಿದ್ದು ಸಚಿವೆಯ ಕೋಪಕ್ಕೆ ಕಾರಣವಾಗಿತ್ತು ಎಂಬುದು ಸ್ಪಷ್ಟ.
ಈಚೆಗೆ ಚಂಡೀಗಢದ ಪ್ರಾದೇಶಿಕ ಸಿಐಐ ಕಛೇರಿಯಲ್ಲಿ ಮಾಡಿದ ಭಾಷಣದಲ್ಲಿ ಮತ್ತೆ ಮುಂದೆ ವರ್ತಮಾನ ಪತ್ರಿಕೆಯೊಂದಕ್ಕೆ ನೀಡಿದ ಸವಿವರ ಸಂದರ್ಶನದಲ್ಲಿ ಆಕೆ ಆಹಾರ ಸುರಕ್ಷತೆ ಪರೀಕ್ಷೆಗಳನ್ನು ಹೆಚ್ಚಿಸಿದ್ದನ್ನು ಟೀಕಿಸಿ, ಅದರಿಂದಾಗಿ ದೇಶಕ್ಕೆ ಹೂಡಿಕೆಗಳು ಬರುವುದಕ್ಕೆ ತಡೆಯಾಗುತ್ತದೆ ಎಂದರು. ಸಂಸ್ಕರಿತ ಆಹಾರದ ಗುಣಮಟ್ಟ ತಪಾಸಣೆಗೆ ಯಾವುದೇ ಪರೀಕ್ಷಾ ನಿಯಮಾವಳಿ ಇಲ್ಲ ಎಂಬುದು ಸಚಿವೆಯ ವಾದ. ‘ಇನ್ಸ್ಪೆಕ್ಟರ್ ರಾಜ್’ ಮತ್ತೆ ಮರಳುತ್ತಿದೆ ಹಾಗೂ ಆಹಾರ ಉದ್ಯಮವನ್ನು ಬೇತಾಳವಾಗಿ ಕಾಡುತ್ತಿದೆ ಎಂದು ಹೇಳುವ ವರೆಗೂ ಆಕೆ ಮುಂದುವರಿದರು.
ಒಂದೆಡೆ ಸಚಿವೆ ಬಾದಲ್ ಅವರು ಎಫ್ಎಸ್ಎಸ್ಎಐ ವಿರುದ್ಧ ಈ ರೀತಿ ಕಿಡಿಕಾರುತ್ತಿರುವಾಗ ಇನ್ನೊಂದೆಡೆ ಅಮೆರಿಕದ ಒಂದು ಅಧ್ಯಯನವು ಜಗತ್ತಿನಲ್ಲಿ ಪ್ರತಿವರ್ಷ ೧.೮೪ ಲಕ್ಷ ಮಂದಿ ಸಕ್ಕರೆ ಮಿಶ್ರಿತ ಪಾನೀಯ ಕುಡಿದು ಸಾಯುತ್ತಿದ್ದಾರೆಂದು ಬಹಿರಂಗಗೊಳಿಸಿದೆ. ಪರಿಸ್ಥಿತಿ ಹೀಗಿರುವಾಗ ಭಾರತದಲ್ಲಿ ಕಳೆದ ಕೆಲವು ವರ್ಷಗಳಲ್ಲಿ ಸಕ್ಕರೆ ಮಿಶ್ರಿತ ಪಾನೀಯಗಳ ಸೇವನೆ ಬಹುದೊಡ್ಡ ಪ್ರಮಾಣದಲ್ಲಿ ಹೆಚ್ಚಾಗಿದೆ. ಅದರಿಂದ ಜನರ ಆರೋಗ್ಯದ ಮೇಲೆ ಬಹಳಷ್ಟು ದುಷ್ಪರಿಣಾಮಗಳಾಗುತ್ತವೆ; ಸಾವು ಕೂಡ ಸಂಭವಿಸಬಹುದು. ಆದ್ದರಿಂದ ಆಹಾರ ಸಂಸ್ಕರಣ ಇಲಾಖೆಯು ದೇಶಾದ್ಯಂತ ಕೋಲಾ ಮತ್ತಿತರ ಲಘುಪಾನೀಯಗಳ ಸೇವನೆಯಿಂದ ಎದುರಾಗುವ ಅಪಾಯಗಳ ಕುರಿತು ದೇಶವ್ಯಾಪಿಯಾಗಿ ಬೃಹತ್ ಪ್ರಚಾರಾಂದೋಲನ ನಡೆಸಿ ಜನರನ್ನು ಜಾಗೃತಗೊಳಿಸಬೇಕಿತ್ತು. ಅದೇ ರೀತಿ ಉತ್ಪಾದಕರು ತಾವು ಮಾರಾಟ ಮಾಡುವ ಸಕ್ಕರೆ ಮಿಶ್ರಿತ ಪಾನೀಯಗಳು ಜನರ ಆರೋಗ್ಯಕ್ಕೆ ಪೂರ್ತಿ ಸುರಕ್ಷಿತ ಆಗಿರುವಂತೆ ಅವರಿಗೆ ತಾಕೀತು ಮಾಡಬೇಕಿತ್ತು. ಉದಾಹರಣೆಗೆ, ಪೆಪ್ಸಿಕೋ ಕಂಪೆನಿ ಭಾರತದಲ್ಲಿ ತನ್ನ ಲಘುಪಾನೀಯಗಳಿಗೆ ಆಸ್ಪರ್ಟೇಮ್ ಹಾಕುತ್ತದೆ; ಆದರೆ ಅಮೆರಿಕದಲ್ಲಿ ಅದನ್ನು ಹಾಕುವುದೇ ಇಲ್ಲ; ಅದೇಕೆ ಹೀಗೆ ಎಂದು ಖ್ಯಾತ ಅಡುಗೆ ಲೇಖಕ ವೀರ್ ಸಾಂಘ್ವಿ ಅವರು ಈಚೆಗೆ ಟ್ವೀಟ್ನಲ್ಲಿ ಪ್ರಶ್ನಿಸಿದ್ದರು.
ಮುತುವರ್ಜಿ ಅವಶ್ಯ
ಶಕ್ತಿದಾಯಕ ಪೇಯಗಳು ಸೇರಿದಂತೆ ಸಕ್ಕರೆ ಆಧಾರಿತ ಪಾನೀಯಗಳ ಸೇವನೆ ನಿರಂತರವಾಗಿ ಏರುತ್ತಿರುವ ಬಗ್ಗೆ ಮಧುಮೇಹ ಪ್ರತಿಷ್ಠಾನ (Diabetes Foundation) ಮತ್ತು ಪೌಷ್ಟಿಕತೆ ಹಾಗೂ ಜೀವದ್ರವ್ಯ ಸಂಶೋಧನ ಕೇಂದ್ರ (Centre for Nutrition and Metabolic Research)ಗಳು ಈಗಾಗಲೆ ಗಮನ ಸೆಳೆದಿವೆ. ಸಕ್ಕರೆ ಮಿಶ್ರಿತ ಪಾನೀಯಗಳ ತಲಾ ಸೇವನೆ ೧೯೯೮ರಲ್ಲಿ ಎರಡು ಲೀಟರ್ ಇದ್ದುದು ೨೦೧೪ರ ಹೊತ್ತಿಗೆ ೧೧ ಲೀ.ಗೇರಿದೆ; ಇದರೊಂದಿಗೆ ವಿವಿಧ ರೋಗಗಳಿಂದ ಸಂಭವಿಸಿದ ಸಾವು ಮತ್ತು ಅನಾರೋಗ್ಯ (ವೈಕಲ್ಯ)ಗಳು ಕೂಡ ಹೆಚ್ಚಿವೆ. ಈ ಸೋಡಾ ಮುಂತಾದವು ಶೌಚಾಲಯ ತೊಳೆಯುವ ದ್ರವಗಳಿಗಿಂತ ಉತ್ತಮವೇನೂ ಅಲ್ಲ; ಆದ್ದರಿಂದ ಪ್ರಸ್ತುತ ಲಘುಪಾನೀಯಗಳಿಂದ ದೂರವಿರಿ – ಎಂದು ಸ್ವಾಮಿ ಬಾಬಾ ರಾಮದೇವ್ ಅವರು ಜನರನ್ನು ಎಚ್ಚರಿಸುತ್ತಲೇ ಇದ್ದಾರೆ. ಆ ಹಿನ್ನೆಲೆಯಲ್ಲಾದರೂ ಆಹಾರ ಸಂಸ್ಕರಣ ಸಚಿವಾಲಯವು ಹೆಚ್ಚಿವ ಮುತುವರ್ಜಿ ವಹಿಸುವುದು ಅಗತ್ಯವೆನಿಸಿದೆ.
ಅಮೆರಿಕ ಅಧ್ಯಕ್ಷರ ಸಲಹಾ ಮಂಡಳಿಯು ಕ್ಯಾನ್ಸರಿಗೆ ಸಂಬಂಧಿಸಿ ಸಲ್ಲಿಸಿದ ಒಂದು ವರದಿಯ ಹಿನ್ನೆಲೆಯಿಂದ ಕೂಡ ಸಂಸ್ಕರಿತ ಆಹಾರಗಳು ಸುರಕ್ಷಿತವಾಗಿರುವ ಬಗ್ಗೆ ವಿಶೇಷ ಎಚ್ಚರ ವಹಿಸುವ ತುರ್ತು ಆವಶ್ಯಕತೆ ಕಂಡುಬಂದಿದೆ. ಅಮೆರಿಕದ ಇಂದಿನ ಪ್ರಜೆಗಳಲ್ಲಿ ಶೇ. ೪೧ರಷ್ಟು ಜನ ತಮ್ಮ ಜೀವಿತಾವಧಿಯಲ್ಲಿ ಕ್ಯಾನ್ಸರಿಗೆ ಗುರಿಯಾಗಬಹುದು ಎಂದು ಅದು ಅಂದಾಜಿಸಿದೆ. ಸಂಸ್ಕರಿತ ಆಹಾರಗಳಲ್ಲಿ ರಾಸಾಯನಿಕಗಳನ್ನು ವ್ಯಾಪಕವಾಗಿ ಬಳಸಲಾಗುತ್ತಿದೆ; ಅದರಲ್ಲಿ ಕೀಟನಾಶಕಗಳು ಮತ್ತು ಸಿಂಥೆಟಿಕ್ ಪದಾರ್ಥಗಳು ಕೂಡ ಸೇರಿವೆ ಎಂದು ವರದಿ ಎಚ್ಚರಿಸಿದೆ.
ಆದ್ದರಿಂದ ಕ್ಯಾನ್ಸರ್ ವಿರುದ್ಧ ಹೋರಾಟಕ್ಕೆ ಬಿಗಿಯಾದ ಕಾನೂನುಗಳು ಮತ್ತು ಆಹಾರ ಸಂಬಂಧಿ ಕಾನೂನುಗಳ ಕಟ್ಟುನಿಟ್ಟಿನ ಅನುಷ್ಠಾನ ಅಗತ್ಯವಾಗಿದೆ. ಅಮೆರಿಕದ ಆಹಾರೋದ್ಯಮ ಸಾಕಷ್ಟು ಎಚ್ಚರ ವಹಿಸಿದ್ದರೆ ಕ್ಯಾನ್ಸರ್ ಅಷ್ಟೊಂದು ದೊಡ್ಡ ಪ್ರಮಾಣದಲ್ಲಿ ಹಬ್ಬುತ್ತಿರಲಿಲ್ಲ. ಆದರೂ ಕೂಡ ನಮ್ಮ ಆಹಾರೋದ್ಯಮವು ಅಮೆರಿಕ ಅಥವಾ ಯೂರೋಪಿನ ಗುಣಮಟ್ಟದ ಮಾನದಂಡಗಳನ್ನೇ ತನ್ನ ಮುಂದೆ ಇರಿಸಿಕೊಂಡಿದೆ. ಮುಂದುವರಿದ ದೇಶಗಳಲ್ಲಿನ ಒಂದು ಸಮಸ್ಯೆ ಎಂದರೆ ಉದ್ದಿಮೆಗಳ ಆಕ್ರಮಣಕಾರಿ ರೀತಿಯಲ್ಲಿ ಲಾಬಿ ನಡೆಸುವುದರ ಫಲವಾಗಿ ಗುಣಮಟ್ಟ ನಿಯಂತ್ರಣಗಳು ಸಡಿಲಾಗಿಬಿಟ್ಟಿವೆ.
ಮ್ಯಾಗಿ ನೂಡಲ್ಸ್ನ ನಿಷೇಧದ ನಂತರ ಎಫ್ಎಸ್ಎಸ್ಎಐ ಹಿಂದುಸ್ತಾನ್ ಯುನಿಲಿವರ್, ಬ್ರಿಟಾನಿಯ, ನೆಸ್ಲೆ ಇಂಡಿಯ, ಹೀನ್ಜ್ ಇಂಡಿಯ, ಎಂಟಿಆರ್, ಹಲ್ದೀರಾಮ್, ಮತ್ತಿತರ ಪ್ರಮುಖ ಬ್ರಾಂಡ್ಗಳಿಂದ ಮಾದರಿಗಳನ್ನು ಸಂಗ್ರಹಿಸಿತು. ಈಚಿನ ವರ್ಷಗಳಲ್ಲಿ ಆಹಾರವಸ್ತುಗಳ ಕಲಬೆರಕೆ ಮತ್ತು ಕಾಲುಷ್ಯದ ಕಾರಣದಿಂದಾಗಿ ಸುರಕ್ಷತೆಗಾಗಿ ಆಹಾರೋತ್ಪನ್ನಗಳ ಗುಣಮಟ್ಟ ಪರೀಕ್ಷೆ ತುರ್ತಾಗಿ ನಡೆಯಬೇಕಾಗಿದೆ. ದೇಶದಲ್ಲಿ ಸುಮಾರು ೮೦ ಸಾವಿರ ಆಹಾರ ಸಂಸ್ಕರಣ ಕಂಪೆನಿಗಳು ಕಾರ್ಯಪ್ರವೃತ್ತವಾಗಿದ್ದರೂ ಕೂಡ ಕಾರ್ಖಾನೆಗಳ ಒಳಗೆ ಏನು ನಡೆಯುತ್ತಿದೆ ಎಂಬುದನ್ನು ಸರಿಯಾಗಿ ತಪಾಸಣೆ ನಡೆಸಬಲ್ಲ ಗುಣಮಟ್ಟ ಪ್ರಯೋಗಶಾಲೆಗಳು (quality laboratories) ನಮ್ಮಲ್ಲಿಲ್ಲ; ಅದರಿಂದಾಗಿ ಉತ್ಪಾದಕರು ಇಚ್ಛೆ ಬಂದಂತೆ ನಡೆದುಕೊಳ್ಳುತ್ತಿದ್ದಾರೆ.
ಪ್ರಯೋಗಶಾಲೆಗಳ ಕೊರತೆ
ಮ್ಯಾಗಿ ನೂಡಲ್ಸ್ನ್ನು ಪರೀಕ್ಷೆ ನಡೆಸಿ ಅಂತಿಮ ವರದಿ ಹೊರಬರುವುದಕ್ಕೆ ೧೬ ತಿಂಗಳುಗಳೇ ಹಿಡಿದವು. ಸೂಕ್ತ ಪರೀಕ್ಷಾ ಪ್ರಯೋಗಶಾಲೆಗಳು ಇಲ್ಲದ ಕಾರಣ ಆಹಾರೋತ್ಪನ್ನ ಕಂಪೆನಿಗಳು ಯಾವುದೇ ಶಿಕ್ಷೆ ಇಲ್ಲದೆ ಪಾರಾಗುತ್ತಲೇ ಇವೆ. ಗುಣಮಟ್ಟದ ಪರೀಕ್ಷೆಯಲ್ಲಿ ಸಮಯದ ಅಂತರವಿದ್ದ ಕಾರಣ ಮಾದರಿ ಸಂಗ್ರಹಿಸಲಾದ ಕಂಪೆನಿಗಳಲ್ಲಿ ಶೇ. ೭೫ರಷ್ಟು ಕಂಪೆನಿಗಳು ಯಾವುದೇ ಶಿಕ್ಷೆ ಇಲ್ಲದೆ ಪಾರಾಗುತ್ತವೆಂದು ‘ಝೀ ಬಿಸಿನೆಸ್’ನ ಒಂದು ವರದಿ ತಿಳಿಸಿದೆ. ಕಳೆದ ಐದು ವರ್ಷಗಳಲ್ಲಿ ೫೩,೪೦೬ ಕಂಪೆನಿಗಳ ಮಾದರಿಗಳು ಗುಣಮಟ್ಟದ ಮಾನದಂಡಕ್ಕೆ ಅನುಗುಣವಾಗಿ ಇಲ್ಲವೆಂದು ಕಂಡುಬಂದರೂ ಕೂಡ ಅದರಲ್ಲಿ ಶೇ. ೨೫ರಷ್ಟು ಕಂಪೆನಿಗಳು ಮಾತ್ರ ದಂಡನೆಗೆ ಗುರಿಯಾಗಿವೆ. ಇನ್ನು ದಂಡದ ಮೊತ್ತ (ಪ್ರಮಾಣ) ಕೂಡ ತೀರಾ ಕಡಮೆಯಾಗಿದ್ದು, ಅದು ತಪ್ಪು ಮಾಡುವವರಲ್ಲಿ ಭಯ ಹುಟ್ಟಿಸುವಂತೆ ಇಲ್ಲವೇ ಇಲ್ಲ.
‘ಇನ್ಸ್ಪೆಕ್ಟರ್ ರಾಜ್’ ಎಂದು ಬೊಬ್ಬೆಹೊಡೆಯುವುದು ಸುಲಭ. ಆದರೆ ಇನ್ಸ್ಟೆಕ್ಟರ್ಗಳು ಆಗಾಗ ಇವರ ಉತ್ಪನ್ನಗಳ ಮಾದರಿಯನ್ನು ಸಂಗ್ರಹಿಸದಿದ್ದರೆ ಇವರು (ಇದರಲ್ಲಿ ಹೆಚ್ಚಿನವರು) ಎಂದಾದರೂ ಸರಿಯಾಗಿ ನಡೆದುಕೊಳ್ಳುತ್ತಾರೆಯೆ? ಅಂತಹ ನಂಬಿಕೆ ಎಲ್ಲಿದೆ? ಚೀನಾದಲ್ಲಿ ಪ್ರತಿ ೩ ಲಕ್ಷ ಜನರಿಗೆ ಒಂದು ಆಹಾರ ಪದಾರ್ಥ ಗುಣಮಟ್ಟ ಪ್ರಯೋಗಶಾಲೆ ಇದೆ; ಆದರೆ ಭಾರತದಲ್ಲಿರುವುದು ೮.೮೦ ಕೋಟಿ ಜನರಿಗೆ ಒಂದು ಪ್ರಯೋಗಶಾಲೆ. ಆದ್ದರಿಂದ ಶೀಘ್ರವೇ ಗುಣಮಟ್ಟ ಪರೀಕ್ಷಾ ಪ್ರಯೋಗಶಾಲೆಗಳ ಸಂಖ್ಯೆ ಬಹುದೊಡ್ಡ ಪ್ರಮಾಣದಲ್ಲಿ ಹೆಚ್ಚಾಗಬೇಕಾಗಿದೆ. ಚೀನಾದ ಪ್ರಯೋಗಶಾಲೆಗಳು ಆಹಾರ ಮಾದರಿಗಳನ್ನು ಕೂಡ ಪರೀಕ್ಷಿಸುತ್ತವೆ ಎಂಬುದು ನನ್ನ ಭಾವನೆ. ಚೀನಾದಲ್ಲಿ ಆಹಾರ ಪದಾರ್ಥಗಳ ಪರೀಕ್ಷೆ ನಿಯಮಿತವಾಗಿ ನಡೆಯುತ್ತಿರುವಾಗಲೂ ಉದ್ಯಮ ಚೆನ್ನಾಗಿ ನಡೆಯುತ್ತಿದೆ ಎಂದಾದರೆ ಭಾರತದ ಆಹಾರೋದ್ಯಮದವರು ಬೊಬ್ಬೆಹೊಡೆಯುವ ಉದ್ದೇಶವಾದರೂ ಏನು?
ಆದ್ದರಿಂದ ಬಂಡವಾಳ ಹೂಡಿಕೆಗೆ ತೊಂದರೆ ಆಗಬಹುದೆಂದು ಬಿಗಿಯಾದ ಆಹಾರಸುರಕ್ಷತೆ ಶಾಸನ ಮತ್ತು ಪರಿಸರಮಾಲಿನ್ಯದ ವಿಷಯಗಳಲ್ಲಿ ರಾಜಿ ಸಲ್ಲದು. ಭಾರತಕ್ಕೆ ಸ್ಪಂದನಶೀಲವಾದ ಉದ್ಯಮ ಅಗತ್ಯ; ಎಲ್ಲ ಹೂಡಿಕೆಗಳು ಜನರ ಹಕ್ಕುಗಳನ್ನು ಗೌರವಿಸುವಂತಿರಬೇಕು. ಅದರಂತೆ ಆಹಾರ ಉದ್ಯಮವು ಸುರಕ್ಷತಾ ಶಾಸನಗಳಿಗೆ ಅನುಗುಣವಾಗಿರಬೇಕು; ಅದು ಅವರಿಗೆ ಸಾಧ್ಯವಾಗುವುದಿಲ್ಲ ಎಂದಾದರೆ ಬಾಗಿಲು ಮುಚ್ಚುವುದೇ ಲೇಸು.
ಇಂಗ್ಲಿಷ್ನಲ್ಲಿ: ಡಾ|| ದೇವಿಂದರ್ ಶರ್ಮಾ, ಕನ್ನಡಕ್ಕೆ: ಎಂ.ಬಿ. ಹಾರ್ಯಾಡಿ
Comments are closed.