೨೦೧೪ರ ವಾರ್ಷಿಕ ಕಥಾಸ್ಪರ್ಧೆಯಲ್ಲಿ ಮೆಚ್ಚುಗೆ ಬಹುಮಾನ ಪಡೆದ ಕಥೆ
ಕೃಷ್ಣರಾಜನಿಗೆ ಗುಲ್ಲಿ ಒಬ್ಬಳು ವಿಶಿಷ್ಟ ವ್ಯಕ್ತಿ ಅನ್ನುವುದು ಖಾತ್ರಿಯಾಯಿತು; ಅವಳ ಬಗ್ಗೆ ಒಂದು ಲೇಖನ ಅಥವಾ ಪುಸ್ತಕವನ್ನು ಬರೆಯಬೇಕೆಂಬ ಅವನ ನಿರ್ಧಾರ ದೃಢವಾಯಿತು….
ಮಾದಯಕುಮೆರಿಯ ಮಹಾಲಿಂಗೇಶ್ವರ ದೇವಾಲಯದ ಅರ್ಚಕ ಕೃಷ್ಣರಾಜ ಆಚಾರ್ಯನು ಬೆಳಗ್ಗಿನ ಪೂಜೆ ಮುಗಿಸಿ, ಬೆಟ್ಟದಿಂದ ಕಾಲುದಾರಿಯಲ್ಲಿ ಐವತ್ತು ಮೀಟರ್ ಇಳಿದು ಡಾಮಾರು ರಸ್ತೆಯನ್ನು ಹಾದು ಮತ್ತೊಂದು ಕಾಲುದಾರಿಯಲ್ಲಿ ತನ್ನ ಊರಾದ ಗಂಪದಬೈಲಿನತ್ತ ಇಳಿಯುವಾಗ ದೂರದಲ್ಲಿ ಕಿನ್ನಿಗೋಳಿಯ ಕಡೆಯಿಂದ ಒಬ್ಬಳು ಮುದುಕಿ ನಡೆಯುತ್ತಾ ಬರುತ್ತಿರುವುದು ಕಂಡಿತು. ಅದು ಯಾರು ಎಂದು ನೋಡಲು ಸ್ವಲ್ಪ ಹೊತ್ತು ನಿಂತುಕೊಂಡ. ಅವಳು ಸ್ವಲ್ಪ ಹತ್ತಿರ ಬಂದಂತೆ ಅವಳ ಗುರುತಾಯಿತು.
ಗಂಪದಬೈಲಿನ ಪಾದೆ ಗುಲ್ಲಿ. ಪಾದೆ ಜಲಜಳ ಅಮ್ಮ.
ಪಾದೆ ಗುಲ್ಲಿಯ ಮನೆ ಬಂಡೆಗಲ್ಲಿನ(ಪಾದೆ) ಹಾಸೊಂದರ ಕಿಬ್ಬಿಯಲ್ಲಿ ಕಟ್ಟಿಕೊಂಡ ಮುಳಿಹುಲ್ಲಿನ ಗುಡಿಸಲಾಗಿತ್ತು. ಹಾಗಾಗಿ ಅವಳನ್ನು ಪಾದೆ ಗುಲ್ಲಿ ಎಂದು ಕರೆಯುತ್ತಿದ್ದುದು ವಾಡಿಕೆ. ಪಾದೆ ಮತ್ತು ಸುತ್ತುಮುತ್ತಲಿನ ಹತ್ತಾರು ಎಕರೆ ಜಾಗ ಸರಕಾರಿ ಜಾಗವಾದರೂ ಅದರ ಬಗ್ಗೆ ಯಾರೂ ನಿಗಾ ಇಡುತ್ತಿರಲಿಲ್ಲ. ಗುಲ್ಲಿಯ ತಂಟೆಗಂತೂ ಯಾರೂ ಬರಲಿಲ್ಲ. ಗುಲ್ಲಿಯ ಮನೆ ಅಲ್ಲಿ ಇದ್ದುದೇ ಊರಿನ ಗಣ್ಯರಿಗೆ ಅನುಕೂಲಕರವಾಗಿತ್ತು. ಯಾಕೆಂದರೆ ಒಂದು ಕಾಲದಲ್ಲಿ ಗುಲ್ಲಿ ಊರಿನ ರಂಬೆಯಾಗಿ ಮೆರೆದವಳು. ಅವಳು ಊರಿನ ಎಲ್ಲ ಗಣ್ಯವ್ಯಕ್ತಿಗಳ ಗುಟ್ಟನ್ನೂ ಬಲ್ಲವಳು ಎನ್ನುವ ಮಾತಿತ್ತು. ಗುಲ್ಲಿಯ ಮನೆಯನ್ನು ಕಟ್ಟಿಸಿಕೊಟ್ಟವರೇ ಆಗಿನ ಪಟೇಲ ಊವಯ್ಯ ಶೆಟ್ಟರು ಎಂದು ಪ್ರತೀತಿ.
ಒಂದು ದಿನ ಪಟೇಲರು ಪದ್ದುವಿನ ಮನೆಗೆ ಹೋದಾಗ ಹೊರಗೆ ಬಾಗಿಲ ಬಳಿ ಚರ್ಮದ ಜೋಡು (ಚಪ್ಪಲಿ) ಇಟ್ಟುಕೊಂಡಿತ್ತಂತೆ. ಅದು ಶಾನುಭೋಗ ಚರಡಪ್ಪಯ್ಯನವರ ಜೋಡು ಅನ್ನುವುದು ಪಟೇಲರಿಗೆ ನೋಡಿದ ತಕ್ಷಣ ಗೊತ್ತಾಯಿತಂತೆ. ಆಗ ಹಿಂದಿರುಗಿ ಹೋದ ಪಟೇಲರು ಆ ಮೇಲೆ ಪದ್ದುವಿನ ಮನೆಗೆ ಕಾಲಿಡಲಿಲ್ಲವಂತೆ. ಇದಾದ ನಂತರ ಚರಡಪ್ಪಯ್ಯನವರೇ ಗುಲ್ಲಿಗೆ ಮುಖ್ಯ ಆಶ್ರಯದಾತರಾದರು.
ಆಮೇಲೆ ಚರಡಪ್ಪಯ್ಯನವರೂ ದೂರವಾಗಿ ಊರಿನ ಇತರ ಗಣ್ಯರು ತಮ್ಮ ಸ್ಥಾನಮಾನಕ್ಕನುಗುಣವಾಗಿ ಒಬ್ಬರ ನಂತರ ಒಬ್ಬರು ಖಾಯಂ ಅತಿಥಿಗಳಾಗಿ ಹೋಗುತ್ತಿದ್ದರಂತೆ. ನಂತರದ ದಿನಗಳಲ್ಲಿ ಏಕಕಾಲದಲ್ಲಿ ಹಲವರು ಅವಳ ಮನೆಯ ಬಾಗಿಲು ಕಾಯುವ ಪರಿಸ್ಥಿತಿಯೂ ಉಂಟಾಗಿತ್ತು. ವರುಷಗಳು ಉರುಳಿದ ಮೇಲೆ ಗಣ್ಯರೆಲ್ಲ ದೂರ ಸರಿದು ಮನೆಯಲ್ಲಿ ನಿತ್ಯ ಜಗಳಾಡಿ ಬೇಸತ್ತ ಕುಡುಕ ಕೃಷಿಕಾರ್ಮಿಕರ ಯಾತ್ರಾ ಸ್ಥಳವಾಯಿತು ಗುಲ್ಲಿಯ ಮನೆ. ಕಡೆ ಕಡೆಗೆ ಅಂಥವರೂ ವಿರಳವಾಗಿ ಗುಲ್ಲಿಯೇ ಮನೆಖರ್ಚಿನ ಹಣಕ್ಕಾಗಿ ತನ್ನ ಗೆಣೆಯಂದಿರಲ್ಲಿ ಒಬ್ಬನನ್ನು ಹುಡುಕಿಕೊಂಡು ಹೋಗುತ್ತಿದ್ದಳು. ಕೆಲವೊಮ್ಮೆ ಆ ಕಾರಣದಿಂದ ಊರಿನಲ್ಲಿ ಸಣ್ಣಪುಟ್ಟ ಜಗಳಗಳೂ ಆಗುತ್ತಿದ್ದವು.
ಗುಲ್ಲಿಯ ಯೌವನ ಇಳಿದುಹೋಗಿ ವೃದ್ಧಾಪ್ಯ ಕಾಲಿಡುತ್ತಿದ್ದಂತೆ ಅವಳು ಸದಾ ಪಿರಿಪಿರಿ ಮಾಡುತ್ತಾ ಮನೆಯ ಒಳಗೆ ಹೊರಗೆ ಅಶಾಂತಿಯಿಂದ ಓಡಾಡುವ ಮುದುಕಿಯಾಗಿ ಮಾರ್ಪಟ್ಟಳು. ಅವಳ ಮಗ ರಮೇಶ ಬುದ್ಧಿ ಬಲಿಯುತ್ತಿದ್ದಂತೆ ತನ್ನ ಹುಟ್ಟಿನ ಅವಮಾನವನ್ನು ಹೊತ್ತುಕೊಂಡು ಊರಿನಲ್ಲಿ ತಿರುಗಾಡಲಾರದೆ ಗಂಪದಬೈಲು ವಾಸುಶೆಟ್ಟರ ಜತೆಗೆ ಬೊಂಬಾಯಿಗೆ ಹೋಗಿ ಅವರ ಹೋಟೆಲಿನಲ್ಲಿಯೇ ಗ್ಲಾಸ್ ತೊಳೆಯುವ ಕೆಲಸಕ್ಕೆ ಸೇರಿಕೊಂಡಿದ್ದ. ತಾಯಿಯ ಮೇಲೆ ಯಾವ ಅನುಕಂಪವೂ ಇಲ್ಲದೆ ಅವಳು ಬರೆಸುತ್ತಿದ್ದ ಯಾವ ಪತ್ರಗಳಿಗೂ ಉತ್ತರ ಬರೆಯದೆ, ಹಣವನ್ನೂ ಕಳಿಸದೆ ದೂರದೂರವೇ ಉಳಿದುಬಿಟ್ಟಿದ್ದ. ಅವಳು ಮಾತ್ರ ಆಗಾಗ ವಾಸುಶೆಟ್ಟರ ಮನೆಗೆ ಹೋಗಿ ಗೋಳು ಹೇಳಿಕೊಳ್ಳುತ್ತಾ ತಾನು ಕರುಳು ಬಳ್ಳಿಯ ಸಂಬಂಧವನ್ನು ಊರ್ಜಿತದಲ್ಲಿಟ್ಟುಕೊಂಡಿದ್ದೇನೆಂಬ ಭ್ರಮೆಯಲ್ಲಿ ಬದುಕುತ್ತಿದ್ದಳು. ವಾಸುಶೆಟ್ಟರು ಬೊಂಬಾಯಿಯಿಂದ ಬಂದಾಗಲೆಲ್ಲ ಗುಲ್ಲಿ ಅವರ ಮನೆಗೆ ಹೋಗಿ ಅವರು ಕೊಡುತ್ತಿದ್ದ ಹಣವನ್ನು ಹಿಡಿದುಕೊಂಡು ಬರುತ್ತಿದ್ದಳು. ಉದಾರಿಗಳಾದ ವಾಸುಶೆಟ್ಟರು ಕೊಡುತ್ತಿದ್ದದ್ದು ರಮೇಶನ ಸಂಬಳದ ಹಣವನ್ನಲ್ಲ. ರಮೇಶ ತಾಯಿಗೆ ಹಣ ಕಳಿಸುವುದಿಲ್ಲವೆಂದು ತಿಳಿದಿದ್ದ ವಾಸುಶೆಟ್ಟರು ಗುಲ್ಲಿಯ ಮೇಲಿನ ಕರುಣೆಯಿಂದ ಒಂದಷ್ಟು ಹಣವನ್ನು ಅವಳ ಕೈಯಲ್ಲಿಡುತ್ತಿದ್ದರು. ಅವರಿಲ್ಲದಾಗ ಗುಲ್ಲಿ ಮನೆಗೆ ಬಂದರೆ ಅವರ ಪತ್ನಿ ರಾಧಕ್ಕನೂ ಹಳೆಯ ಸೀರೆ ರವಕೆಗಳನ್ನು ಮತ್ತು ಸ್ವಲ್ಪ ಹಣವನ್ನು ಕೊಟ್ಟು ಕಳಿಸುತ್ತಿದ್ದರು.
ಗುಲ್ಲಿಯ ಜತೆಗೆ ಮನೆಯಲ್ಲಿದ್ದವಳು ಅವಳ ಮಗಳು ಇಪ್ಪತ್ತರ ಯುವತಿ ಜಲಜ. ಪಾದೆ ಗುಲ್ಲಿಯ ಮಗಳಾದ ಕಾರಣ ಪಾದೆ ಜಲಜ ಎಂದೇ ಜನ ಅವಳನ್ನು ಕರೆಯುತ್ತಿದ್ದರು. ಹೀಗೆ ಹೇಳುವ ಮೂಲಕ ಜಲಜ ಗುಲ್ಲಿಯ ಮಗಳು ಎಂದು ಸೂಚಿಸಿದ ಹಾಗೂ ಆಗುತ್ತಿತ್ತು. ಅಲ್ಲದೆ, ಗುಲ್ಲಿಯ ಮಗಳು ಇವಳು ಎಂದು ಎತ್ತಿ ಹೇಳದಿದ್ದರೆ ಇವಳು ಅವಳ ಮಗಳು ಎಂದು ಯಾರಿಗೂ ಹೇಳಲು ಸಾಧ್ಯವಿರಲಿಲ್ಲ. ಯಾಕೆಂದರೆ ಜಲಜ ನೋಡಲು ತಾಯಿಯಂತಿರದೆ ಬೇರೆಯೇ ಥರ ಇದ್ದಳು. ಮೈಕಟ್ಟು ಚೆನ್ನಾಗಿದ್ದರೂ ಮುಖ ಮಾತ್ರ ಪಟೇಲ ಊವಯ್ಯ ಶೆಟ್ರಂತೆ ಇತ್ತು. ಆದರೂ ಯುವತಿಯಾದುದರಿಂದ ಯುವಕರು ಸ್ವಲ್ಪ ಕಣ್ಣುಹಾಕುತ್ತಿದ್ದರು. ತಾಯಿಯ ಚರಿತ್ರೆ ಸರಿಯಿಲ್ಲದ ಕಾರಣ ಮದುವೆಯಾಗಲು ಯಾರೂ ತಯಾರಿರಲಿಲ್ಲ. ಆದರೆ ಸ್ನೇಹ ಬೆಳೆಸಲು ಮಾತ್ರ ಪ್ರಯತ್ನಿಸುತ್ತಲೇ ಇದ್ದರು. ಜಲಜ ಯಾರ ಬಲೆಗೂ ಬಿದ್ದ ಸುದ್ದಿ ಇನ್ನೂ ಊರವರಿಗೆ ಸಿಕ್ಕಿರಲಿಲ್ಲ. ಜಲಜ ನಾಟಿ, ಕೊಯ್ಲು ಇತ್ಯಾದಿ ಕೆಲಸಗಳ ಜತೆಗೆ ಇತ್ತೀಚೆಗೆ ಬೀಡಿ ಕಟ್ಟಲು ಪ್ರಾರಂಭಿಸಿದ್ದಳು.
ಇಂತಹ ಸಂದರ್ಭದಲ್ಲಿ ಗುಲ್ಲಿ ಊರುಬಿಟ್ಟು ಹೋಗಿದ್ದಳು. ಅಮ್ಮ ಕಾಣಿಸದೇ ಹೋದಾಗ ಜಲಜ ನೆರೆಕರೆಯವರಲ್ಲೆಲ್ಲ ವಿಚಾರಿಸಿ ಆತಂಕ ವ್ಯಕ್ತಪಡಿಸಿದಳು. ಯಾರು ಕೂಡಾ ಅವಳ ಮಾತನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ಗುಲ್ಲಿ ಅಂದರೆ ಊರಿನವರಿಗೆ ಅಷ್ಟು ತಾತ್ಸಾರ.
ಕೊನೆಗೆ ಒಬ್ಬ ಹುಡುಗ ಹೇಳಿದ, ಗುಲ್ಲಮ್ಮ ಮಾದಯಕುಮೆರಿಯಿಂದ ಒಂಟಿಕಟ್ಟೆಯ ಕಡೆಗೆ ಹೋಗುವ ರಸ್ತೆಯಲ್ಲಿ ನಡೆಯುತ್ತಾ ಕಾವುಕಾಡಿನ ಬಳಿ ಹೋಗುತ್ತಿದ್ದಳು. ನಾನು ಸೈಕಲ್ಲಿನಲ್ಲಿ ಒಂಟಿಕಟ್ಟೆಯಿಂದ ಬರುವಾಗ ನೋಡಿದೆ.
ಜಲಜ ಗಾಬರಿಯಿಂದ ಒಂಟಿಕಟ್ಟೆಯ ಕಡೆಗೆ ನಡೆಯತೊಡಗಿದಳು. ಸ್ವಲ್ಪ ದೂರ ನಡೆದಾಗ ಗಂಪದಬೈಲಿನ ಕರಿಯ ಎದುರಿನಿಂದ ನಡೆದುಕೊಂಡು ಬರುತ್ತಿದ್ದ. ಅವನು ಒಂಟಿಕಟ್ಟೆಯ ಬಾಬು ಮೇಸ್ತ್ರಿಯ ಸಂಗಡ ಗಾರೆ ಕೆಲಸಕ್ಕೆ ಹೋಗುವವನು. ಜಲಜ ಅವನನ್ನು ನಿಲ್ಲಿಸಿ ಉದ್ವೇಗದಿಂದ ಕೇಳಿದಳು, ಹೌದಾ ಕರಿಯ, ಅಮ್ಮ ಈ ರಸ್ತೆಯಲ್ಲಿ ಹೋಗುತ್ತಿದ್ದಳಂತಲ್ವ? ನಿನಗೆ ಎದುರು ಸಿಕ್ಕಿದಳಾ?
ಕರಿಯ ಶಾಂತವಾಗಿಯೇ ಸ್ವಲ್ಪ ಮುಗುಳ್ನಗುತ್ತ ಉತ್ತರಿಸಿದ, ಹೌದು. ಅದಕ್ಕೆ ಅಷ್ಟು ಗಾಬರಿ ಯಾಕೆ? ನನ್ನನ್ನು ನಿಲ್ಲಿಸಿ ವೀಳ್ಯದೆಲೆ ಕೇಳಿ ತಿಂದು ಮುಂದಕ್ಕೆ ಹೋದಳು. ಏನು ಗುಲ್ಲಮ್ಮ ಯಾವ ಕಡೆ ಸವಾರಿ ಎಂದು ಕೇಳಿದೆ. ‘ನಾನು ಹುಟ್ಟಿನಿಂದ ಗಂಪದಬೈಲು ಬಿಟ್ಟು ಹೋದವಳಲ್ಲ. ಈಗಲಾದರೂ ಸ್ವಲ್ಪ ಲೋಕಸಂಚಾರ ಮಾಡಿಕೊಂಡು ಬರೋಣ ಎಂದು ಹೊರಟಿದ್ದೇನೆ’ ಎಂದಳು. ‘ನೀನೇನು ಕಡಮೆ ಪ್ರಪಂಚ ಕಂಡವಳಾ?’ ಎಂದು ನಾನು ಕೇಳಿದೆ ಎಂದು ಕರಿಯ ಜಲಜಳನ್ನು ಒಂದು ಥರಾ ನೋಡಿ ನಕ್ಕ.
ಜಲಜ ಅವನ ರಸಿಕತೆಯನ್ನು ಗಮನಿಸುವ ಮನಸ್ಥಿತಿಯಲ್ಲಿರಲಿಲ್ಲ. ಮುದುಕಿ ಹುಚ್ಚು ಹಿಡಿದಂತೆ ಮನೆ ಬಿಟ್ಟು ಹೋದರೆ ಇವನು ತಮಾಷೆ ಮಾಡಿ ನಗುತ್ತಿದ್ದಾನಲ್ಲ ಎಂದು ಸ್ವಲ್ಪ ಸಿಟ್ಟುಮಾಡಿಕೊಂಡರೂ ಅದನ್ನು ತೋರಿಸುವಂತಿರಲಿಲ್ಲ.
ಅದಕ್ಕೆ ಎಂಥ ಹೇಳಿದಳು ಅಮ್ಮ? ಎಲ್ಲಿ ಹೋದಳು? ಎಂದು ಮಾಹಿತಿಗಾಗಿ ಚಡಪಡಿಸಿದಳು ಜಲಜ.
ಇಲ್ಲ ಕರಿಯ, ನಾನು ಸ್ವಲ್ಪ ಲೋಕ ಸುತ್ತಿ ಬರುತ್ತೇನೆ ಎಂದು ಮುಂದೆ ನಡೆದುಕೊಂಡು ಹೋದಳು, ಒಂಟಿಕಟ್ಟೆಯ ಕಡೆಗೆ ಎಂದು ಕರಿಯ ಮಾಹಿತಿ ನೀಡಿದ.
ಅಯ್ಯೋ ದೇವರೇ ಇನ್ನೇನು ಮಾಡುವುದು? ಎಂದು ಜಲಜ ಅಳುಮುಖ ಮಾಡಿಕೊಂಡು ಉದ್ವೇಗದಿಂದ ಒಂಟಿಕಟ್ಟೆಯ ಕಡೆಗೆ ಓಡುತ್ತೇನೆ ಅನ್ನುವಂತೆ ಮುನ್ನುಗ್ಗಿದಳು.
ಕರಿಯ, ಏ ಜಲಜ, ನಿನಗೆ ಮಂಡೆ ಸಮ ಇಲ್ಲವಾ? ಈ ಕತ್ತಲಲ್ಲಿ ಕಾವುಕಾಡಿನ ದಾರಿಯಲ್ಲಿ ಯಾರಾದರೂ ಹೋಗುತ್ತಾರಾ? ಆಗಲೇ ನನಗೆ ಹುಲಿ ಆರ್ಭಟ ಕೊಡುವುದು ಕೇಳಿಸಿತು. ನೀನೀಗ ಸೀದಾ ಮನೆಗೆ ಹೋಗು ನೋಡೋಣ ಎಂದು ಗದರಿಸಿದ.
ಜಲಜ ಅಳುಮುಖ ಮಾಡಿಕೊಂಡು ನಿಂತಳು. ಅಮ್ಮನಿಗೆ ಹುಲಿ ಏನೂ ಮಾಡುವುದಿಲ್ವ? ಎಂದು ಗಾಬರಿಯಿಂದ ಕೇಳಿದಳು.
ಅವಳು ಆಗಲೇ ಒಂಟಿಕಟ್ಟೆಗೆ ತಲಪಿರಬಹುದು. ಅಲ್ಲಿ ಪೇಟೆಯ ಕಾಮತರ ಜಿನಸಿ ಅಂಗಡಿಯ ಎದುರಿನ ಮುಂದಿಲಿನಲ್ಲಿ ಮಲಗಿ ಲೋಕಾನುಭವ ಪಡೆದು ನಾಳೆ ಹಿಂದಿರುಗುತ್ತಾಳೆ ಬಿಡು! ನೀನೀಗ ಮನೆಗೆ ಹೋಗು, ಹೂಂ ಎಂದು ಊರಿನವಳೆಂಬ ಸಲಿಗೆಯಲ್ಲಿ ಗದರಿಸಿ ತನ್ನ ದಾರಿಹಿಡಿದು ಹೋದ. ಜಲಜ ಸ್ವಲ್ಪ ಹೊತ್ತು ಅಲ್ಲಿಯೇ ನಿಂತು ಸೋತವಳಂತೆ ನಿಧಾನವಾಗಿ ಕಾಲೆಳೆಯುತ್ತಾ ತಮ್ಮ ಗುಡಿಸಲಿನತ್ತ ನಡೆದಳು.
ಗುಲ್ಲಿ ಮರುದಿನ ಸಂಜೆಯ ಹೊತ್ತಿಗೆ ಒಂಟಿಕಟ್ಟೆಯಿಂದ ಬರುವ ಎಸ್.ಡಿ.ಪಿ.ಎಂ.ಎಸ್. ಬಸ್ಸಿನಲ್ಲಿ ಬಂದು ಗಂಪದಬೈಲು ಪೇಟೆಯಲ್ಲಿ ಇಳಿದಳು. ಅಲ್ಲಿಂದ ಏನೂ ಸಂಭವಿಸಿಯೇ ಇರದಂತೆ ನಡೆದುಕೊಂಡು ಮನೆಗೆ ಹೋದಳು. ಅವಳನ್ನು ಯಾರು ಬಸ್ಸಿಗೆ ಹತ್ತಿಸಿದರು, ಬಸ್ಸಿನ ಕಂಡಕ್ಟರ್ ಅವಳ ಬಳಿ ಟಿಕೆಟಿನ ಹಣ ಕೇಳಿದಾಗ ಏನು ಮಾಡಿದಳು ಅನ್ನುವುದೊಂದನ್ನೂ ಅವಳು ಜಲಜಳಿಗೆ ಹೇಳಲಿಲ್ಲ. ಜಲಜ ಕೇಳಿದಾಗ, ಸ್ವಲ್ಪ ಊರು ತಿರುಗೋಣ ಎಂದು ಹೋದೆ. ಇನ್ನು ನಾನೇನು ಶಾಶ್ವತವೇ? ಲೋಕ ಹೇಗಿದೆಯೆಂದು ಗೊತ್ತಿಲ್ಲದೆ ನಾನು ಸಾಯಬೇಕಾ? ಎಂದು ಪ್ರತ್ಯುತ್ತರ ನೀಡಿದಳು ಗುಲ್ಲಿ.
ಇನ್ನು ಹಾಗೆಲ್ಲ ಹೋಗಬೇಡ. ಬೇಕಾದರೆ ನಾನೂ ನೀನೂ ಇಬ್ಬರೇ ಹೋಗಿ ಉಡುಪಿ ಮಂಗಳೂರು ಧರ್ಮಸ್ಥಳ ಎಲ್ಲ ನೋಡಿಕೊಂಡು ಬರೋಣ ಎಂದು ಜಲಜ ಹೇಳಿದ್ದಕ್ಕೆ ಹಾಂ ಅಂತಲೂ ಹೇಳದೆ ಹೂಂ ಅಂತಲೂ ಹೇಳದೆ ಮುದುಕಿ ತನ್ನ ಪಾಡಿಗೆ ಇದ್ದಳು.
ಹದಿನೈದು ದಿನಗಳಾಗುವಷ್ಟರಲ್ಲಿ ಗುಲ್ಲಿ ಮತ್ತೊಮ್ಮೆ ಲೋಕಸಂಚಾರಕ್ಕೆಂದು ಹೋದಳು. ಈ ಬಾರಿ ಅವಳು ಕುದರಾಡಿಯ ಕಡೆಗೆ ನಡೆದುಕೊಂಡೇ ಹೋಗಿದ್ದಳು. ಎರಡು ದಿನಗಳ ನಂತರ ಚುಕುಡನ ಲಾರಿ ಹತ್ತಿಕೊಂಡು ಊರಿಗೆ ವಾಪಸ್ ಬಂದಳು. ಮೂರನೆಯ ಬಾರಿಗೆ ಸುಂಕದಕಟ್ಟೆಯ ಕಡೆಗೆ ಹೊರಟಿದ್ದಳು. ಅವಳು ಹೋದ ವಿಷಯ ಜಲಜಳಿಗೆ ತಿಳಿದು ಜಲಜ ಬಸ್ಸು ಹತ್ತಿಕೊಂಡು ಅವಳನ್ನು ಹಿಂಬಾಲಿಸಿಕೊಂಡು ಹೋಗಿ ಅವಳನ್ನು ತಡೆದು ಹಿಂದೆ ಕರೆದುಕೊಂಡು ಬಂದಳು. ಆಮೇಲೆ ಗುಲ್ಲಿ ಹಲವಾರು ಬಾರಿ ಹೀಗೆಯೇ ಖುಷಿ ಕಂಡ ದಿಕ್ಕಿನತ್ತ ನಡೆದುಕೊಂಡು ಹೋಗುವುದು, ಒಂದೆರಡು ದಿನಗಳ ನಂತರ ಯಾವುದಾದರೊಂದು ಸಿಕ್ಕಿದ ವಾಹನ ಹತ್ತಿಕೊಂಡು ಹಿಂದಿರುಗುವುದನ್ನು ಅಭ್ಯಾಸ ಮಾಡಿಕೊಂಡಳು.
ಆಮೇಲೆ ಗುಲ್ಲಿಯ ಲೋಕಸಂಚಾರ ಊರಿನವರಿಗೆ ವಾಡಿಕೆಯ ಸಂಗತಿಯಾಗಿಬಿಟ್ಟಿತು. ಗುಲ್ಲಿ ಎಲ್ಲಿಗೇ ಹೋದರೂ, ಏನು ಗುಲ್ಲಿ, ಲೊಕಸಂಚಾರಕ್ಕೆ ಹೊರಟಿಯಾ? ಎಂದು ಜನ ಕೇಳತೊಡಗಿದರು.
ಅದೇ ರೀತಿ ಈಗ ಕೃಷ್ಣರಾಜನೂ ಗುಲ್ಲಿಯನ್ನು ಕಂಡು, ಏನು ಗುಲ್ಲಿ ಲೋಕಸಂಚಾರಕ್ಕೆ ಹೊರಟಿಯಾ? ಎಂದು ಕೇಳಿದ.
ಅದಕ್ಕೆ ಗುಲ್ಲಿ ನೀಡಿದ ಉತ್ತರ ವಿಚಿತ್ರವಾಗಿತ್ತು: ಇಲ್ಲ, ನಿನ್ನೆ ರಾತ್ರಿ ನನ್ನನ್ನು ಕಾಲೆ ಬಂದು ನೋಡಿಕೊಂಡು ಹೋಗಿದೆ ಎಂದಳು.
ಕೃಷ್ಣರಾಜ ‘ಕಾಲೆ’ ಎಂಬ ಶಬ್ದವನ್ನು ಕೇಳಿರಲಿಲ್ಲ. ಕಾಲೆ ಅಂದರೆ? ಎಂದ.
ಯಮದೇವರು ಇವಳ ಆಯುಸ್ಸು ಮುಗಿಯಿತಾ ಎಂದು ನೋಡಿಕೊಂಡು ಬರಲು ಕಾಲೆಯನ್ನು ಕಳಿಸಿದ್ದರು. ನಾನು ಮಲಗಿರುವಾಗ ಎಷ್ಟು ಹೊತ್ತಿಗೋ ಕಾಲೆ ಬಂದು ಪಕ್ಕದಲ್ಲಿದ್ದ ಸೇವಿಗೆ ಮಣೆಯಲ್ಲಿ ಕುಳಿತುಕೊಂಡು ಕಾಯುತ್ತಿತ್ತು. ಕುತ್ತಿಗೆ ಓರೆ ಮಾಡಿ ನನ್ನನ್ನೇ ನೋಡುತ್ತಿತ್ತು. ನಾನು ಎದ್ದ ಮೇಲೆ ನನ್ನನ್ನು ಸರಿಯಾಗಿ ಅಳೆಯುವಂತೆ ತಲೆಯಿಂದ ಕಾಲಿನವರೆಗೆ ಕಾಲಿನಿಂದ ತಲೆಯವರೆಗೆ ನೋಡಿತು. ಇವಳ ಆಯುಸ್ಸು ಮುಗಿಯಲಿಲ್ಲ ಎಂದು ಕಂಡಿತೋ, ಮುಗಿಯಿತು ಎಂದು ಲೆಕ್ಕ ಹಾಕಿತೋ ಗೊತ್ತಿಲ್ಲ. ಈಗ ಯಮದೇವರ ಬಳಿಗೆ ಹೋಗಿದೆ. ನಾಳೆ ನಾಡಿದ್ದರಲ್ಲಿ ಯಮನ ದೂತರು ಬಂದು ನನ್ನನ್ನು ಕೊಂಡುಹೋದರೂ ಕೊಂಡುಹೋದಾರು. ಹಾಗಾಗಿ ನಾನು ಒಮ್ಮೆ ಕುಮೆರಿಯ ಈಶ್ವರ ದೇವರನ್ನು ನೋಡಿಕೊಂಡು ಬರುತ್ತೇನೆ ಎಂದು ಹೊರಟಿದ್ದೇನೆ ಎಂದಳು.
ಕೃಷ್ಣರಾಜ ಈ ಅರೆಹುಚ್ಚಿಯ ಬಳಿ ಇನ್ನೆಂಥದು ಮಾತು ಎಂದು ಸರಿ, ನಾನು ದೇವಸ್ಥಾನದ ಬಾಗಿಲು ತೆಗೆಯುವುದು ಸಂಜೆ ಆರು ಗಂಟೆಗೆ. ಅಷ್ಟು ಹೊತ್ತಿಗೆ ಬಂದರೆ ನೀನು ಹಿಂದೆ ಬರುವುದು ಹೇಗೆ? ನಾಳೆ ಬೆಳಗ್ಗೆ ಎಂಟು ಗಂಟೆಗೆ ಬಾ ಎಂದ.
ನಾಳೆಯವರೆಗೆ ಯಮದೇವರು ಕಾಯುತ್ತಾನೆ ಎಂದು ಏನು ಗ್ಯಾರಂಟಿ? ಎಂದು ಗುಲ್ಲಿ ಕೇಳಿದಳು. ಅವಳ ಬಾಯಿಯಲ್ಲಿ ಗ್ಯಾರಂಟಿ ಎಂಬ ಇಂಗ್ಲಿಷ್ ಶಬ್ದ ಕೇಳಿ ಕೃಷ್ಣರಾಜನಿಗೆ ಸೋಜಿಗವಾಯಿತು.
ಆದರೆ ಈಗ ದೇವಸ್ಥಾನದ ಬಾಗಿಲು ಹಾಕಿದೆಯಲ್ಲ?
ಸರಿ, ನಾಳೆ ಬರುತ್ತೇನೆ. ಇವತ್ತು ರಾತ್ರಿ ಕಾಲೆ ಏನು ಹೇಳುತ್ತದೋ? ಎಂದು ಆತಂಕ ವ್ಯಕ್ತಪಡಿಸುತ್ತಾ ಗುಲ್ಲಿ ಕಾಲುದಾರಿಯಲ್ಲಿ ಇಳಿದು ಊರಿನತ್ತ ನಡೆಯತೊಡಗಿದಳು.
೨
ಮರುದಿನ ಬೆಳಗಿನ ಹೊತ್ತಿನ ಪೂಜೆಗೆ ಗುಲ್ಲಿ ಹಾಜರಾಗಿದ್ದಳು. ಕೃಷ್ಣರಾಜ ಅವಳಿಗೆ ತೀರ್ಥ ಮತ್ತು ಗಂಧ ನೀಡಿ ಕೇಳಿದ, ಏನು ಗುಲ್ಲಿ, ನಿನ್ನೆ ಕಾಲೆ ಪುನಃ ಬಂದಿತ್ತಾ?
ಹೌದು.
ಹೌದಾ? ಏನು ಹೇಳಿತು?
ಈ ಲೋಕದಲ್ಲಿ ನಿನ್ನ ಅನುಭವ ಪೂರ್ತಿಯಾಗಲಿಲ್ಲ. ಪೂರ್ತಿ ಮಾಡಿಕೊಂಡು ಬಾ. ಆದರೆ ನಿನಗೆ ಹೆಚ್ಚು ಸಮಯ ಕೊಡಲು ಸಾಧ್ಯವಿಲ್ಲ ಎಂದು ಎಚ್ಚರಿಕೆ ನೀಡಿ ಹೋಗಿದೆ.
ಕಾಲೆ ನೋಡಲು ಹೇಗಿರುತ್ತದೆ?”
ನೀವು ಕಾಲೆ ಕೋಲ ನೋಡಿಲ್ವಾ? ಅದರ ಹಾಗೆ ಇರುತ್ತದೆ. ನಮ್ಮ ಮನೆಯಲ್ಲಿ ಒಂದು ಸೇಮಿಗೆ ಒತ್ತುವ ಕುದುರೆಮಣೆ ಇದೆ. ಅದರ ಮೇಲೆ ಕುಳಿತುಕೊಂಡು ಅದು ಮಾತಾಡುವುದು. ನಮ್ಮ ಮನೆಯಲ್ಲಿ ಬೇರೆ ಕುರ್ಚಿ ಇಲ್ಲವಲ್ಲ!
ಕೃಷ್ಣರಾಜ ಕಾಲೆ ಕೋಲ ನೋಡಿರಲಿಲ್ಲ. ಅಂತೂ ಒಂದು ಭೂತದ ಹಾಗಿರಬಹುದು ಎಂದುಕೊಂಡ. ಯಮದೇವರ ಪ್ರತಿನಿಧಿ ಬೇರೆ. ಅದರ ಮಾತುಗಳನ್ನು ತಿಳಿಯಲು ಕೃಷ್ಣರಾಜನಿಗೆ ಎಲ್ಲಿಲ್ಲದ ಉತ್ಸಾಹ ಉಂಟಾಯಿತು.
ಈ ದಿನ ನಿನ್ನ ಪ್ರೋಗ್ರಾಮ್ ಏನು? ಎಂದು ಮುದುಕಿ ಗುಲ್ಲಿಯ ಬಳಿ ಕೇಳಿದ.
ಎಲ್ಲಿಯಾದರೂ ಹೋಗಬೇಕು. ಲೋಕಾನುಭವ ಆಗಬೇಕಲ್ವ? ಎಂದು ಗುಲ್ಲಿ ಹೇಳಿ ದೇವಸ್ಥಾನದಿಂದ ಹೊರಟಳು.
ಇನ್ನು ಈ ಮುದುಕಿ ಹೊಟ್ಟೆಗಿಲ್ಲದೆ ದಿನವಿಡೀ ಲೋಕಸಂಚಾರ ಮಾಡುವುದು ಬೇಡ ಎಂದು ಕೃಷ್ಣರಾಜ ಅವಳನ್ನು, ಸ್ವಲ್ಪ ನಿಲ್ಲು ತಡೆದು ದೇವಸ್ಥಾನದ ನೈವೇದ್ಯವನ್ನು ಒಂದು ಬಾಳೆಎಲೆಯಲ್ಲಿ ಹಾಕಿ ಅದಕ್ಕೆ ಸ್ವಲ್ಪ ತೆಂಗಿನಕಾಯಿ ಚಟ್ನಿಯನ್ನು ಹಾಕಿ ಅವಳಿಗೆ ಕೊಟ್ಟ. ಗುಲ್ಲಿ ಅದನ್ನು ತಿಂದು ಲೋಕಸಂಚಾರಕ್ಕೆ ಹೊರಟಳು.
ಅವಳು ಈ ಬಾರಿ ಮನೆಗೆ ಹಿಂದಿರುಗುವಾಗ ಎರಡು ದಿನ ಕಳೆದಿತ್ತು. ಕೃಷ್ಣರಾಜ ಅವಳು ಹಿಂದಿರುಗಿದಳೋ ಎಂದು ಜನರಲ್ಲಿ ವಿಚಾರಿಸುತ್ತಲೇ ಇದ್ದ. ಜನರಿಗೆ ಅವನ ಆಸಕ್ತಿ ವಿಚಿತ್ರವಾಗಿ ಕಂಡಿತು.
ಗುಲ್ಲಿ ಬಂದಿದ್ದಾಳೆಂದು ತಿಳಿದ ಕೃಷ್ಣರಾಜ ಬೆಳಗಿನ ಪೂಜೆ ಮುಗಿಸಿ ಪಾದೆ ಗುಲ್ಲಿಯ ಮನೆಗೆ ಹೊರಟ. ಕೃಷ್ಣರಾಜ ಸಣ್ಣಮಟ್ಟಿನ ಸಾಹಿತಿಯೂ ಹೌದು. ಅವನ ಕೆಲವು ಕವಿತೆಗಳು ಜಿಲ್ಲಾ ಮಟ್ಟದ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಮಾದಯಕುಮೆರಿಯ ಮಹಾಲಿಂಗೇಶ್ವರ ದೇವಸ್ಥಾನದ ಐತಿಹಾಸಿಕ ಕುರುಹುಗಳು ಎಂಬ ಲೇಖನ ರಾಜ್ಯಮಟ್ಟದ ಪತ್ರಿಕೆಯೊಂದರಲ್ಲಿ ಪ್ರಕಟವಾಗಿದೆ. ಇನ್ನೊಂದು ಮುಖ್ಯಪತ್ರಿಕೆಯಲ್ಲಿ ಅವನು ಬರೆದ ಸಣ್ಣಸಣ್ಣ ಚಿತ್ರಲೇಖನಗಳು ಪ್ರಕಟವಾಗಿವೆ. ಅವುಗಳೆಲ್ಲ ಸ್ಥಳೀಯ ಇತಿಹಾಸಕ್ಕೆ ಸಂಬಂಧಿಸಿದ ಕುರುಹುಗಳ ಕುರಿತಾದ ಒಂದು ಪುಟದ ಬರಹಗಳು; ಜತೆಗೊಂದು ಫೋಟೋ. ಫೋಟೋ ತೆಗೆದು ಕೊಡುತ್ತಿದ್ದವನು ಸ್ಥಳೀಯ ಸ್ಟುಡಿಯೋದ ಶಂಕರ. ಗುಲ್ಲಿಯ ಬಗ್ಗೆಯೂ ಏನಾದರೂ ಲೇಖನ ಮಾಡಲು ಸಾಧ್ಯವೇ ಎಂಬ ಚಿಂತನೆಯೂ ಕೃಷ್ಣರಾಜನ ತಲೆಯಲ್ಲಿ ನಡೆದಿದೆ.
ಕೃಷ್ಣರಾಜ ಬಂದಾಗ ಗುಲ್ಲಿ ಮನೆಯಲ್ಲಿಯೇ ಇದ್ದಳು; ಅಂಗಳದಲ್ಲಿ ಕೋಳಿಗಳ ಜತೆಗೆ ತಾನೂ ಬೆನ್ನು ಬಾಗಿಸಿಕೊಂಡು ಅತ್ತಿತ್ತ ಹೆಜ್ಜೆ ಹಾಕುತ್ತಿದ್ದಳು. ಜಲಜ ಮನೆಯ ಬಾಗಿಲ ಬಳಿ ಕುಳಿತುಕೊಂಡು ಬೀಡಿ ಕಟ್ಟುತ್ತಾ ಇದ್ದಳು.
ಕೃಷ್ಣರಾಜ ಕೇಳಿದ, ಏನು ಗುಲ್ಲಿ, ಈ ಸಲದ ಲೋಕಾನುಭವ ಎಂಥದ್ದು? ಕಾಲೆಗೆ ಅದು ಒಪ್ಪಿಗೆ ಆಯಿತಾ?
ಈ ಸಲ ಬರಪಾಡಿಯಲ್ಲಿ ಒಂದು ಅನುಭವ ಸಿಕ್ಕಿತು. ಅಲ್ಲಿ ಗೂಡಂಗಡಿಯ ಬದಿಯಲ್ಲಿ ಒಂದು ಹಳೆಯ ಬೆಂಚಿನ ಮೇಲೆ ಪೊಂಚು ಎಂಬವನು ಕುಳಿತಿದ್ದ. ಅವನಿಗೆ ಎಂಥದೋ ಕಾಯಿಲೆ. ಕೆಮ್ಮಿಕೊಂಡು, ಆಕ್ ಥೂ ಎಂದು ಉಗುಳಿಕೊಂಡು ಕುಳಿತಿದ್ದ. ಗೂಡಂಗಡಿಯವನು ಬಡವ, ಹೆಚ್ಚು ಮಾತಾಡುವುದಿಲ್ಲ. ಅವನು ‘ದನಿಗಳೇ ಸ್ವಲ್ಪ ಆಚೆ ಹೋಗಿ ಕುಳಿತುಕೊಳ್ಳಿ’ ಎಂದು ಹೇಳುತ್ತಿದ್ದ. ಈ ಪೊಂಚು ಎಂಬವನು ನೋಡಲು ಭಿಕ್ಷುಕನಾಗಿದ್ದರೂ, ‘ನೀನು ಯಾರೋ ಕೇಳುವುದಕ್ಕೆ? ನೀನು ನನ್ನ ಒಕ್ಕಲಿನವನು’ ಎಂದ. ನಾನು ಗೂಡಂಗಡಿಯವನ ಬಳಿ ಪೊಂಚು ಅನ್ನುವವನು ಯಾರು, ಅವನು ನಿನ್ನ ದನಿ ಹೇಗೆ? ಎಂದು ಕೇಳಿದೆ. ಅದಕ್ಕೆ ಅವನು ಪೊಂಚು ಅನ್ನುವವನ ಕಥೆಯನ್ನು ಹೇಳಿದ.
ಅದು ಯಾವ ಕಥೆ?
ಪೊಂಚು ತನ್ನ ಯೌವನದಲ್ಲಿ ಬಹಳ ದೊಡ್ಡ ಅಹಂಕಾರಿಯಂತೆ. ಅವನದು ಅಳಿಯಸಂತಾನದ ದೊಡ್ಡ ಮನೆತನ. ಗೂಡಂಗಡಿಯವನು ಅವರ ಕೆಲವು ಗದ್ದೆಗಳನ್ನು ಗೇಣಿಗೆ ವಹಿಸಿಕೊಂಡಿದ್ದ ಕಾರಣ ಅವರ ಒಕ್ಕಲು. ಪೊಂಚು ಯುವಕನಾಗಿದ್ದಾಗ ಯೆಕ್ಕಾರಿನ ಒಬ್ಬಳು ಯುವತಿಯನ್ನು ಮದುವೆಯಾಗಿದ್ದ. ಅಹಂಕಾರದಿಂದಲೂ, ಕುಡಿದ ಅಮಲಿನಲ್ಲೂ ಅವಳಿಗೆ ದಿನನಿತ್ಯ ಬಡಿದು ಬಡಿದು ಅವಳು ತವರುಮನೆಗೆ ಓಡಿಹೋದಳು. ಈ ಪೊಂಚುನಿಗೆ ಬೇರೆ ಹೆಂಗಸರ ಸಹವಾಸ ಇದ್ದ ಕಾರಣ ಅವಳನ್ನು ಕರೆಸದೆ ಜೀವನ ಕಳೆದು ಮುದುಕನಾದ. ಕೆಲವು ರೋಗಗಳು ಅವನಿಗೆ ಅಂಟಿದವು. ಕೊನೆಗೆ ಮನೆಯವರು ಅವನನ್ನು ಹೊರಗೆ ಹಾಕಿದರು. ಈಗ ಪೇಟೆಬದಿಗೆ ಬಂದು ಪರಿಚಯದ ಅವರಿವರ ಹತ್ತಿರ ಊಟತಿಂಡಿಗೆ ಹಣ ಕೇಳಿ ಬದುಕುತ್ತಿದ್ದಾನೆ. ಒಮ್ಮೆ ಹೇಗೋ ಮೂಡಬಿದಿರೆಯ ಪೊಲೀಸ್ ಸ್ಟೇಷನಿಗೆ ಹೋಗಿ, ನನ್ನ ಹೆಂಡತಿ ತನ್ನನ್ನು ಬಿಟ್ಟು ತವರುಮನೆಗೆ ಹೋಗಿದ್ದಾಳೆ; ಅವಳನ್ನು ತನ್ನ ಬಳಿಗೆ ಹಿಂದೆ ಕಳುಹಿಸಲು ಆರ್ಡರ್ ಮಾಡಬೇಕು ಎಂದು ಕಂಪ್ಲೇಂಟ್ ಕೊಟ್ಟು ಬಂದಿದ್ದಾನಂತೆ. ಈಗ ಯಾವುದೇ ಬಸ್ಸು ಬಂದರೂ, ‘ಪೋಲೀಸರು ನನ್ನ ಹೆಂಡತಿಯನ್ನು ಕರೆದುಕೊಂಡು ಬಂದರು’ ಎಂದು ಹೇಳಿ ಬಸ್ಸಿನಿಂದ ಇಳಿಯುವವರನ್ನು ನೋಡಿ, ಹೆಂಡತಿ ಇಲ್ಲವೆಂದು ತಿಳಿದಾಗ ಪಿರಿಪಿರಿ ಮಾತಾಡಿಕೊಂಡು ಮತ್ತೆ ಅಂಗಡಿಬದಿಯಲ್ಲಿ ಬಿದ್ದುಕೊಳ್ಳುತ್ತಾನೆ.
ಇದೊಂದು ಅನುಭವ ಅನುಭವವೇ ಮಾರಾಯ್ತಿ! ಕಾಲೆ ಏನು ಹೇಳಿತು? ಕೃಷ್ಣರಾಜ ಕೇಳಿದ.
ಕಾಲೆಗೆ ಖುಷಿಯಾಯಿತು. ಪಕಪಕ ನಗಾಡಿತು. ಆದರೆ ಇನ್ನೂ ಸ್ವಲ್ಪ ಅನುಭವ ಪಡೆದುಕೊಂಡು ಬಾ ಎಂದು ಹೇಳಿ ಹೋಯಿತು ಎಂದಳು ಗುಲ್ಲಿ.
ಇದನ್ನು ಕೇಳುತ್ತಿದ್ದ ಗುಲ್ಲಿಯ ಮಗಳು ಜಲಜ, ಎಂಥ ಭಟ್ರೇ ನೀವು, ಅಮ್ಮ ಹೇಳುವುದನ್ನೆಲ್ಲ ನಿಜ ಎಂದು ನಂಬುತ್ತೀರಲ್ಲ? ನಾಳೆ ಬಂದು ಕೇಳಿದರೆ ಅವಳು ಈ ಕಥೆಯನ್ನು ಪೂರ್ತಿ ಮರೆತು ಬೇರೆಯೇ ಕಥೆ ಹೇಳುತ್ತಾಳೆ” ಎಂದಳು.
ಕೃಷ್ಣರಾಜನಿಗೆ ಯಾರದು ಸರಿ ಎಂದು ನಿರ್ಧರಿಸಲಾಗದೆ ಗೊಂದಲ ಉಂಟಾಯಿತು. ‘ಸರಿ, ಬರುತ್ತೇನೆ’ ಎಂದು ಮೆಲುದನಿಯಲ್ಲಿ ಹೇಳಿ ತನ್ನ ಮನೆಯತ್ತ ಹೆಜ್ಜೆ ಹಾಕಿದ.
***
ಸ್ವಲ್ಪ ದಿನಗಳ ಮೇಲೆ ಗುಲ್ಲಿ ಮತ್ತೊಂದು ಲೋಕಸಂಚಾರವನ್ನು ಮುಗಿಸಿಕೊಂಡು ಬಂದಳೆಂದು ಕೃಷ್ಣರಾಜನಿಗೆ ತಿಳಿಯಿತು. ಗುಲ್ಲಿಯನ್ನು ಹುಡುಕಿಕೊಂಡು ಹೋಗಿ ಈ ಬಾರಿಯ ಅನುಭವ ಏನು ಎಂದು ಕೇಳಿದ. ಗುಲ್ಲಿ ಹೇಳಿದ ಅನುಭವ ಇದು (ಶಬ್ದಗಳು ಅವಳವೇ ಅಲ್ಲ):
ಪೊಸ್ರಾಲು ಎನ್ನುವ ಊರು. ಊರಿನಲ್ಲಿ ಒಬ್ಬ ಮುದುಕ. ಅವನಿಗೆ ನೂರ ಇಪ್ಪತ್ತೈದಕ್ಕಿಂತಲೂ ಹೆಚ್ಚು ವಯಸ್ಸಾಗಿದೆಯಂತೆ. ಅವನನ್ನು ನಾಲ್ಕು ಜನ ಮಂಚದ ಮೇಲೆ ಮಲಗಿಸಿ ಹೊತ್ತುಕೊಂಡು ಬಂದರು. ಮುದುಕ ಕಳೆದ ಇಪ್ಪತ್ತೈದು ವರ್ಷಗಳಿಂದಲೂ ಇದೇ ರೀತಿ ಇದ್ದಾನಂತೆ. ಮನೆಯಲ್ಲಿ ಕುಳಿತುಕೊಂಡು ಕುಂಡೆ ಎಳೆಯುತ್ತಾ ಆಚೀಚೆ ಓಡಾಡುತ್ತಾ ಇರುತ್ತಾನೆ. ಇಡೀ ದಿನ ಪಿರಿಪಿರಿ ಮಾಡುತ್ತಾ ಇರುತ್ತಾನಂತೆ. ಮನೆಯವರು ಅವನ ಮಾತಿಗೆ ಗೌರವ ಕೊಡುವ ಹಾಗೆ ನಾಟಕ ಮಾಡುತ್ತಾ ಇದ್ದಾರೆ. ಯಾಕೆಂದರೆ ಅವನ ಆಸ್ತಿಯೆಲ್ಲಾ ಅವನೇ ಸಂಪಾದಿಸಿದ್ದು; ತನ್ನ ನಾಲ್ವರು ಗಂಡು ಮಕ್ಕಳಲ್ಲಿ ಒಬ್ಬರಿಗೆ ಕೊಡುತ್ತೇನೆಂದು ಹೇಳಿದ್ದಾನಂತೆ. ಅದಕ್ಕಾಗಿ ಈ ನಾಲ್ಕು ಜನರ ಕುಟುಂಬಗಳೂ ಆ ಮನೆಯಲ್ಲಿ ಗುದ್ದಾಡುತ್ತಾ ಬದುಕುತ್ತಿದ್ದಾರೆ. ಮನೆಯ ಸುತ್ತಮುತ್ತ ಕೋಣೆಗಳನ್ನು ಸೇರಿಸಿಕಟ್ಟುತ್ತಾ ಮನೆ ಎನ್ನುವುದು ಈಗ ಚಕ್ರವ್ಯೂಹದ ಹಾಗೆ ಆಗಿದೆಯಂತೆ. ಅವನ ಮಕ್ಕಳಲ್ಲಿ ಇಬ್ಬರು ಸತ್ತು ಹೋಗಿ ಈಗ ಅವರ ವಾರಸುದಾರರು ಅಜ್ಜನ ಆಸ್ತಿಯ ಉತ್ತರಾಧಿಕಾರ ಹೋರಾಟದಲ್ಲಿ ಪಾಲುದಾರರಾಗಿದ್ದಾರೆ. ಅಜ್ಜನ ಒಬ್ಬ ಮಗನ ಮಗನೂ ಸತ್ತುಹೋಗಿ ಈಗ ಮರಿಮಗ ಆ ಕುಟುಂಬದ ಗಂಡುದಿಕ್ಕಾಗಿದ್ದಾನೆ.
ಈ ಅಜ್ಜನನ್ನು ಮಂಚದ ಮೇಲೆ ಮಲಗಿಸಿ ಪೊಸ್ರಾಲಿನ ಬಂಡಸಾಲೆಯವರೆಗೆ ಹೊತ್ತುಕೊಂಡು ಬಂದು ಮೊದಲೇ ವ್ಯವಸ್ಥೆ ಮಾಡಿದ್ದ ಒಂದು ಎತ್ತಿನ ಗಾಡಿಯಲ್ಲಿ ಕುಳ್ಳಿರಿಸುವ ಪ್ರಯತ್ನದಲ್ಲಿದ್ದಾಗ ಗುಲ್ಲಿ ಅಲ್ಲಿ ಕುಳಿತಿದ್ದಳು. ಅವರ ಕಥೆಯನ್ನೆಲ್ಲ ಕೇಳಿ ತಿಳಿದಳು. ಅವರಲ್ಲಿ ಒಬ್ಬನನ್ನು ಕರೆದು ಮುದುಕನ ಬಗ್ಗೆ ವಿಚಾರಿಸಿದಳು. ಗುಲ್ಲಿಗೆ ಮಾಹಿತಿ ನೀಡಿದಾತ ಮುದುಕನ ಮೃತ ಮಗನೊಬ್ಬನ ಭಾವನೆಂಟ. ತನ್ನ ತಂಗಿಯ ಕುಟುಂಬಕ್ಕೆ ಅನ್ಯಾಯ ಆಗಬಾರದೆಂದು ಅವನೂ ಈ ಮುದುಕನ ಹಿಂದೆ ಬಿದ್ದಿದ್ದ. ಅವರೆಲ್ಲ ಅಲ್ಲಿಂದ ಗುಡ್ಡೆ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಹೊರಟಿದ್ದರು. ಯಾಕೆ ಅನ್ನುವುದು ಒಂದು ರಹಸ್ಯ. ಅದು ಮುದುಕನಿಗೆ ಗೊತ್ತಿಲ್ಲ. ಉಳಿದವರೆಲ್ಲ ಮುದುಕನ ಬಳಿ ಹೇಳಿದ ಪ್ರಕಾರ ಮುದುಕನ ದೀರ್ಘಾಯುಷ್ಯ ಮತ್ತು ಆರೋಗ್ಯವರ್ಧನೆಗಾಗಿ ಅಲ್ಲಿ ಒಂದು ಪೂಜೆಯನ್ನು ಏರ್ಪಡಿಸಲಾಗಿದೆ. ಆದರೆ ನಿಜವಾದ ಸಂಗತಿಯೇನೆಂದರೆ ಇವರೆಲ್ಲ ಅಲ್ಲಿ ಮಹಾಲಿಂಗೇಶ್ವರ ದೇವರ ಬಳಿ ಮುದುಕನಿಗೆ ಬೇಗನೆ ಮರಣವನ್ನು ದಯಪಾಲಿಸುವಂತೆ ಬೇಡಲಿದ್ದಾರೆ.
ಅದೇ ದೇವಸ್ಥಾನಕ್ಕೆ ಯಾಕೆ ಹೋಗಬೇಕು ಎಂದು ಗುಲ್ಲಿ ಪ್ರಶ್ನಿಸಿದಳು.
ಮುದುಕ ತನ್ನ ಜರ್ಬಿನ ಕಾಲದಲ್ಲಿ ಗುಡ್ಡೆ ಮಹಾಲಿಂಗೇಶ್ವರ ದೇವಸ್ಥಾನದ ಗರ್ಭಗುಡಿ ಜೀರ್ಣೋದ್ಧಾರಕ್ಕೆ ಬಹಳ ಹಣ ಕೊಟ್ಟಿದ್ದನಂತೆ. ಅಲ್ಲಿನ ಅರ್ಚಕರು ದೊಡ್ಡ ತಪಸ್ವಿಗಳು; ಮಾತಾಡುವದೇವರೆಂದೇ ಅವರ ಕೀರ್ತಿ ಹಬ್ಬಿತ್ತು. ಮುದುಕನಿಗೆ ಅವರ ಮೇಲೆ ಬಹಳ ಭಯ ಭಕ್ತಿ ಇದ್ದುದರಿಂದ ಅವರ ಕೋರಿಕೆಯ ಮೇರೆಗೆ ಇವನು ತುಂಬಾ ಹಣವನ್ನು ವೆಚ್ಚ ಮಾಡಿದ್ದ. ಕೊನೆಗೆ ಬ್ರಹ್ಮಕಲಶೋತ್ಸವದ ಸಂದರ್ಭದಲ್ಲಿ ಅರ್ಚಕರು ಮುದುಕನಿಗೆ ಪ್ರಸಾದ ನೀಡುವಾಗ ನೀವು ನೂರೈವತ್ತು ವರ್ಷ ಬದುಕುವ ಹಾಗೆ ಮಹಾಲಿಂಗೇಶ್ವರನು ಅನುಗ್ರಹ ಮಾಡಲಿ ಎಂದು ಆಶೀರ್ವಾದ ಮಾಡಿದರಂತೆ. ಹಾಗೆ ಆ ಮಹಾಲಿಂಗೇಶ್ವರನ ಆಶೀರ್ವಾದದಿಂದ ಈ ಮುದುಕ ಬದುಕಿದ್ದೇ ಆದರೆ ಇನ್ನು ಇಪ್ಪತ್ತೈದು ವರ್ಷ ಬಾಕಿ ಉಳಿದಿದೆ ಎಂದಾಯಿತಲ್ಲ. ಅಷ್ಟು ಕಾಯುವುದಕ್ಕೆ ಆಗುತ್ತದೆಯೇ? ಅದಕ್ಕೆ ಮಹಾಲಿಂಗೇಶ್ವರನ ಬಳಿಯೇ ಕುಟುಂಬಸ್ಥರೆಲ್ಲ ಸೇರಿ ಪ್ರಾರ್ಥನೆ ಮಾಡಲು ಹೊರಟಿದ್ದಾರಂತೆ.
ಅವರ ಮೆರವಣಿಗೆ ಆಚೆ ಹೋದ ಮೇಲೆ ಗುಲ್ಲಿ ಅಲ್ಲಿಯೇ ಒಂದು ಕಡೆ ಎಲೆಯಡಿಕೆ ಜಗಿಯುತ್ತಾ ಕುಳಿತಿದ್ದಳಂತೆ. ಆಗ ಅಲ್ಲಿ ಪಕ್ಕದಲ್ಲಿ ನದಿಯ ದಡದಲ್ಲಿ ದೊಡ್ಡದೊಂದು ಬೊಬ್ಬೆ ಎದ್ದಿತಂತೆ. ಹೋಗಿ ನೋಡಿದರೆ, ಎದೆಮಟ್ಟದವರೆಗೆ ಹರಿಯುತ್ತಿದ್ದ ಶಾಂಭವಿ ನದಿಯನ್ನು ನಡೆದುಕೊಂಡು ದಾಟುವಾಗ ಮುಳುಗಿ ಸತ್ತ ಹದಿನಾರು ವರ್ಷದ ಹುಡುಗನೊಬ್ಬನ ಹೆಣವನ್ನು ಎತ್ತಿ ತಂದು ದಡದಲ್ಲಿ ಮಲಗಿಸಿದ್ದರು. ಅವನ ಮನೆ ಅಲ್ಲೇ ಸ್ವಲ್ಪ ದೂರದಲ್ಲಿತ್ತು. ಸ್ವಲ್ಪ ಹೊತ್ತಿನಲ್ಲಿ ಮನೆಯವರೂ ಓಡಿಕೊಂಡು ಬಂದರು. ಅವರ ಗೋಳು ನೋಡುವವರು ಯಾರು, ಕೇಳುವವರು ಯಾರು? ಗುಲ್ಲಿಯಂತಹ ಗುಲ್ಲಿಗೇ ಅದನ್ನು ತಡೆದುಕೊಳ್ಳಲಿಕ್ಕೆ ಆಗದೆ ಸೀದಾ ಮನೆಗೆ ಬಂದಳಂತೆ.
ಕೃಷ್ಣರಾಜ ಕೇಳಿದ: ಈ ಸಲ ಕಾಲೆಗೆ ತೃಪ್ತಿಯಾಯಿತೆ? ನಿನಗೆ ಸಿಕ್ಕಿದ ಲೋಕಾನುಭವ ಸಾಕಂತೆಯಾ?
ಇಲ್ಲವಂತೆ. ಇನ್ನೂ ಅನುಭವ ಪೂರ್ತಿಯಾಗಲಿಲ್ಲವಂತೆ ಎಂದು ಗುಲ್ಲಿ ನಿಟ್ಟುಸಿರು ಬಿಟ್ಟಳು.
ಅವಳ ಅನುಭವಗಳೆಲ್ಲ ಕಟ್ಟುಕಥೆಗಳು ಎಂದು ನಿರ್ಲಕ್ಷಿಸುವ ಮಗಳು ಜಲಜಳಿಗೆ ತಿಳಿಯಲಿ ಎಂದು ಕೃಷ್ಣರಾಜ ಗುಲ್ಲಿಯನ್ನು ಕೇಳಿದ, ಮೊನ್ನೆ ಹೇಳಿದ ಬರಪಾಡಿಯ ಪೊಂಚು ಎನ್ನುವವನ ಕಥೆಯನ್ನು ಹೇಳು ಗುಲ್ಲಿ?
ಗುಲ್ಲಿ, ನನಗೇನು ಗೊತ್ತು? ಯಾವ ಪೊಂಚು? ನಾನು ಬರಪಾಡಿಗೆ ಹೋಗಲೇ ಇಲ್ಲ ಎಂದು ಉತ್ತರಿಸಿದಳು.
ಜಲಜಳ ಮುಖ ಗೆದ್ದೆ ಎನ್ನುವಂತೆ ಬೀಗಿದರೆ, ಕೃಷ್ಣರಾಜ ಮುಖ ಸಪ್ಪಗೆ ಮಾಡಿಕೊಂಡು ಬರುತ್ತೇನೆ ಎಂದು ಅಲ್ಲಿಂದ ಹೊರಟ. ಆದರೆ ಗುಲ್ಲಿಯ ಅನುಭವಗಳನ್ನು ಬರೆದಿಡಲೇ ಬೇಕು ಎಂಬ ಅವನ ತೀರ್ಮಾನ ಗಟ್ಟಿಯಾಯಿತು.
೩
ಕೆಲವು ದಿನಗಳ ಬಳಿಕ ಗುಲ್ಲಿ ಮತ್ತೊಮ್ಮೆ ಲೋಕಸಂಚಾರಕ್ಕೆ ಹೋಗಿ ಬಂದಳು. ಯಥಾಪ್ರಕಾರ ಕೃಷ್ಣರಾಜನು ಅವಳ ಅನುಭವವನ್ನು ಕೇಳಿ ತಿಳಿದುಕೊಳ್ಳುವುದಕ್ಕಾಗಿ ಅವಳ ಮನೆಯಲ್ಲಿ ಹಾಜರಾದ.
ಈ ಸಲ ಎಲ್ಲಿಗೆ ಹೋಗಿದ್ದಿ ಗುಲ್ಲಿ?
ನಡುಕಣಿಗೆ ಹೋಗಿಬಂದೆ, ಭಟ್ರೇ.
ಏನು ಅನುಭವ ಆಯಿತು ಗುಲ್ಲಿ ?
ಅಲ್ಲಿ ಒಬ್ಬರು ಸಂನ್ಯಾಸಿ ಸಿಕ್ಕಿದರು. ಅವರ ಬಳಿ ಎರಡು ದಿನ ಕುಳಿತುಕೊಂಡು ಅನುಭವ ಪಡೆದುಕೊಂಡೆ.
ಆ ಅನುಭವ ಹೇಳು ಗುಲ್ಲಿ ಎಂದು ಕೃಷ್ಣರಾಜ ಕೇಳಿಕೊಂಡ ಪ್ರಯುಕ್ತ ಗುಲ್ಲಿ ಅದನ್ನು ಹೇಳಿದಳು.
ಎಂದಿನಂತೆ ನಾಲ್ಕು ದಿನಗಳ ಹಿಂದೆ ಗುಲ್ಲಿ ಯಾವುದೋ ಬಸ್ಸು ಹತ್ತಿಕೊಂಡು ಲೋಕಾನುಭವಕ್ಕಾಗಿ ಹೊರಟಿದ್ದಳು. ಇವಳ ಬಗ್ಗೆ ತಿಳಿದಿದ್ದ ಬಸ್ಸಿನ ಕಂಡಕ್ಟರನು ಅವಳನ್ನು ನಡುಕಣಿ ಎಂಬ ಊರಿನಲ್ಲಿ ಇಳಿಸಿಬಿಟ್ಟ. ಬಸ್ಸಿನಿಂದ ಇಳಿದ ಗುಲ್ಲಿ ಎದುರಿಗಿದ್ದ ಅಂಗಡಿಯವನ ಬಳಿ, ಈ ಊರಿನಲ್ಲಿ ಯಾವ ಅನುಭವ ಪಡೆಯಬಹುದು? ಎಂದು ಕೇಳಿದಳು.
ಅಂಗಡಿಯವನಿಗೆ ಈ ಮುದುಕಿ ಹುಚ್ಚಿಯೋ, ಭಿಕ್ಷುಕಿಯೋ ತಿಳಿಯಲಿಲ್ಲ. ಆದರೆ ಅವಳ ಪ್ರಶ್ನೆ ಕೇಳಿದಾಗ ಅವನಿಗೆ ಫಕ್ಕನೆ ನೆನಪಿಗೆ ಬಂದದ್ದು ನಡುಕಣಿ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಇರುತ್ತಿದ್ದ ಒಬ್ಬ ಸಂನ್ಯಾಸಿ. ದೇವಸ್ಥಾನದಲ್ಲಿ ಒಬ್ಬರು ಸಂನ್ಯಾಸಿ ಇದ್ದಾರೆ. ಅವರ ಬಳಿಗೆ ಹೋಗಿ ಅನುಭವ ಕೇಳು ಎಂದು ಹೇಳಿ ಅವಳನ್ನು ನಿವಾರಿಸಿಕೊಂಡ.
ಗುಲ್ಲಿ ನೇರವಾಗಿ ದೇವಸ್ಥಾನಕ್ಕೆ ಹೋಗಿ ಹೊರಗಿನ ಜಗಲಿಯಲ್ಲಿ ಕುಳಿತಿದ್ದ ಸಂನ್ಯಾಸಿಯನ್ನು ಕಂಡಳು. ಅವನಿಗೆ ಸಾಷ್ಟಾಂಗ ನಮಸ್ಕಾರ ಮಾಡಿ ಎದುರಿಗೆ ಕುಳಿತುಕೊಂಡಳು. ಸಂನ್ಯಾಸಿ ಅವಳನ್ನು ನೋಡಿಯೂ ನೋಡದವನಂತೆ ತನ್ನ ಪಾಡಿಗೆ ತಾನು ಕಣ್ಣುಮುಚ್ಚಿ ಕುಳಿತಿದ್ದ. ಮಧ್ಯಾಹ್ನದ ಹೊತ್ತಿಗೆ ಸಂನ್ಯಾಸಿ ತನ್ನ ಜಾಗದಿಂದ ಎದ್ದು ಊಟಕ್ಕೆ ಹೊರಟ. ಅವನ ಊಟಕ್ಕೆ ದೇವಸ್ಥಾನದ ಶಾಂತಿಯವರ ಮನೆಯಲ್ಲಿ ವ್ಯವಸ್ಥೆಯಾಗಿತ್ತಂತೆ; ಒಬ್ಬರು ಶ್ರೀಮಂತರ ವತಿಯಿಂದ.
ಸಂನ್ಯಾಸಿ ಹಿಂದಿರುಗಿ ಗುಲ್ಲಿಯ ಮೇಲೆ ಒಂದು ಕಣ್ಣಿಡುತ್ತಲೇ ಹೊರಟ. ಸ್ವಲ್ಪ ದೂರ ಹೋದವನು ಮತ್ತೆ ಹಿಂದಿರುಗಿ ತನ್ನ ಗಂಟಿನೊಳಗೆ ಕೈಹಾಕಿ ಸಣ್ಣ ಹಣದ ಥೈಲಿಯಂತಹ ವಸ್ತುವನ್ನು ಹಿಡಿದುಕೊಂಡು ಜೋಳಿಗೆ ಹಾಗೂ ಗಂಟುಗಳನ್ನು ಒತ್ತರೆಯಾಗಿರಿಸಿ ಮತ್ತೆ ಎದ್ದುಹೋದ.
ಅವನು ಎಲ್ಲಿಗೆ ಹೋದನೆಂದು ತಿಳಿಯದ ಗುಲ್ಲಿ ಸ್ವಲ್ಪ ಹೊತ್ತು ಅಲ್ಲಿಯೇ ಕಾದಿದ್ದು ಸ್ವಲ್ಪ ಹೊತ್ತು ಅತ್ತ ಇತ್ತ ಓಡಾಡಿದಳು. ದೇವಸ್ಥಾನಕ್ಕೆ ಹಣ್ಣುಕಾಯಿ ಮಾಡಿಸಲೆಂದು ಬಂದವರೊಬ್ಬರಿಂದ ಬಾಳೆಹಣ್ಣನ್ನು ಬೇಡಿ ತಿಂದು ದೇವಸ್ಥಾನದ ಕೆರೆಯಲ್ಲಿ ನೀರುಕುಡಿದು ಬಂದಳು. ಮತ್ತೆ ಸಂನ್ಯಾಸಿಗಾಗಿ ಕಾಯುತ್ತಾ ಕುಳಿತಳು.
ಸಂನ್ಯಾಸಿ ಬಂದವನೇ ಅಸಹನೆಯಿಂದ ಅವಳನ್ನು ನೋಡಿ ಕಣ್ಣುಮುಚ್ಚಿಕೊಂಡು ತಪಸ್ಸಿಗೆ ಕುಳಿತ. ಸಂಜೆಯಾಯಿತು. ರಾತ್ರಿ ಊಟಕ್ಕೆ ಹೋಗುವಾಗ ಸಂನ್ಯಾಸಿ ಮತ್ತೆ ಗಂಟುಮೂಟೆ ಸರಿಪಡಿಸಿ ಹೋಗಿ ಬಂದ. ಗುಲ್ಲಿಯೂ ಅಂಗಡಿಯೊಂದರಲ್ಲಿ ಬೇಡಿ ಅವರು ನೀಡಿದ ಒಂದು ಬ್ರೆಡ್ಡು ತಿಂದು ಹೊಟ್ಟೆ ತುಂಬಿಸಿಕೊಂಡಳು. ರಾತ್ರಿ ಸಂನ್ಯಾಸಿ ಮಲಗಿದ ಮೇಲೆ ತಾನೂ ದೇವಸ್ಥಾನದ ಒಂದು ಅಂಬೆಲದಲ್ಲಿ ಮಲಗಿದಳು.
ಮರುದಿನ ಅದೇ ದಿನಚರಿ ಮುಂದುವರಿಯಿತು. ಮರುದಿನ ಮಧ್ಯಾಹ್ನದ ಊಟಕ್ಕೆ ಸಂನ್ಯಾಸಿ ಹೊರಟಾಗ ಗುಲ್ಲಿ ಅವನ ಗಂಟುಮೂಟೆಯಲ್ಲಿ ಏನಿದೆ ಎಂದು ನೋಡಲು ಅದನ್ನೆತ್ತಿಕೊಂಡಳು. ಸ್ವಲ್ಪ ದೂರ ಹೋಗಿದ್ದ ಸಂನ್ಯಾಸಿ ಅವಳ ಮೇಲೆ ಕಣ್ಣಿಟ್ಟುಕೊಂಡೇ ಇದ್ದುದರಿಂದ ತಕ್ಷಣ ಓಡಿಬಂದ. ಗುಲ್ಲಿ ಗಾಬರಿಯಿಂದಲೋ, ಉದ್ದೇಶಪೂರ್ವಕವಾಗಿಯೋ ಗಂಟನ್ನು ಎತ್ತಿಕೊಂಡೇ ಓಡಿದಳು.
ಸಂನ್ಯಾಸಿ, ಏ! ಏ! ಎಂದು ಅಟ್ಟಿಸಿಕೊಂಡು ಹೊಡೆಯುವ ಹಾಗೆ ಅವಳನ್ನು ಹಿಂಬಾಲಿಸಿದ. ಕೊನೆಗೆ ಗುಲ್ಲಿ ಅವನ ಗಂಟನ್ನು ಅಲ್ಲಿಯೇ ಕೆಳಕ್ಕೆ ಹಾಕಿ ದೂರ ಹೋದಳು. ಸಂನ್ಯಾಸಿ ಸಿಡುಕುತ್ತಾ, ಅವಳನ್ನು ಶಪಿಸುತ್ತಾ ತನ್ನ ಗಂಟನ್ನು ಎತ್ತಿಕೊಂಡು ಮರಳಿಬಂದು ತನ್ನ ಸ್ಥಾನದಲ್ಲಿ ಕುಳಿತ. ಈ ಹುಚ್ಚಿ ಹೆಂಗಸು ಅಲ್ಲಿ ಇರುವವರೆಗೆ ಅವನು ತನ್ನ ಸೊತ್ತುಗಳನ್ನು ಅಲ್ಲಿರಿಸಿ ಊಟಕ್ಕೆ ಹೋಗುವುದಾದರೂ ಹೇಗೆ?
ಇಂತಹವನಿಂದ ಕಲಿಯುವುದಕ್ಕೆ ಏನಿದೆ ಎಂದು ನಿರ್ಧರಿಸಿ ಗುಲ್ಲಿ ಹಿಂದಿರುಗಿದಳಂತೆ.
ಅದು ಹೇಗೆ ನೀನು ಅವನ ಯೋಗ್ಯತೆಯನ್ನು ಅಳೆದೆ? ಕೃಷ್ಣರಾಜ ಕೇಳಿದ.
ಒಂದು ಹಳೆಯ ಗಂಟನ್ನು ಕೂಡಾ ಬಿಡಲಾರದವನು ಸಂನ್ಯಾಸಿಯಾ?
ಅದರೊಳಗೆ ಏನಾದರೂ ಅಮೂಲ್ಯ ವಸ್ತು ಇತ್ತೋ ಏನೋ?
ಅಂತಹ ವಸ್ತುವನ್ನು ಸಂನ್ಯಾಸಿಗಳು ಇಟ್ಟುಕೊಳ್ಳುತ್ತಾರಾ? ಗುಲ್ಲಿಯ ಪ್ರಶ್ನೆ.
ಈಗ ಕೃಷ್ಣರಾಜನಿಗೆ ಈ ಗುಲ್ಲಿ ಅರೆಮರುಳಿಯಲ್ಲ; ಒಬ್ಬಳು ವಿಶಿಷ್ಟ ವ್ಯಕ್ತಿ ಅನ್ನುವುದು ಖಾತ್ರಿಯಾಯಿತು. ಅವಳ ಬಗ್ಗೆ ಒಂದು ಲೇಖನ ಅಥವಾ ಪುಸ್ತಕವನ್ನು ಬರೆಯಬೇಕೆಂಬ ಅವನ ನಿರ್ಧಾರ ದೃಢವಾಯಿತು. ಅತಿಮಾನುಷಲೋಕದ ಕಾಲೆಯಿಂದ ತನ್ನ ಅನುಭವಗಳನ್ನು ದೃಢೀಕರಿಸಿಕೊಳ್ಳುವ ಅವಳ ಅಲೌಕಿಕ ಸಿದ್ಧಿ ಒಂದು ಪವಾಡವಲ್ಲದೆ ಮತ್ತೇನು? ಅವಳ ವಿಷಯವನ್ನು ದಾಖಲಿಸಿ ಇಡಬೇಕಾದುದು ತನ್ನ ಕರ್ತವ್ಯವಲ್ಲವೇ?
ಕೃಷ್ಣರಾಜ ಒಂದು ಹೊಸ ಯೋಜನೆಯನ್ನು ಸಿದ್ಧಪಡಿಸಿದ. ಕಾಲೆ ಕೋಲದಲ್ಲಿ ಪಾತ್ರಿಯಾಗಿ (ಆ ಭೂತದ ವೇಷ ಧರಿಸಿ ನರ್ತಿಸುವ ದೈವ ಮಾಧ್ಯಮ ವ್ಯಕ್ತಿ) ಕಾರ್ಯನಿರ್ವಹಿಸುವ ವಿಟ್ಟು ಎಂಬವನನ್ನು ಕರೆದು ಒಂದು ದಿನ ಕಾಲೆಯ ವೇಷ ಧರಿಸಿ ಗುಲ್ಲಿಯ ಮನೆಯಲ್ಲಿ ಕಾಲೆಯಂತೆ ಅವಳಿಗೆ ದರ್ಶನ ನೀಡಲು ಕೇಳಿಕೊಂಡ. ಆ ದೃಶ್ಯದ ಫೋಟೋ ತೆಗೆದು ತನ್ನ ಪುಸ್ತಕ ಅಥವಾ ಲೇಖನದಲ್ಲಿ ಬಳಸಿಕೊಳ್ಳುವುದು ಅವನ ಉದ್ದೇಶ. ನಾಟಕಕ್ಕಾಗಿ ಕಾಲೆಯ ವೇಷ ಧರಿಸಲು ಹೆದರಿದ ವಿಟ್ಟುವಿಗೆ ಪೂರ್ತಿ ಅದೇ ರೀತಿ ವೇಷ ಹಾಕಬೇಕೆಂದಿಲ್ಲ ಮಾರಾಯ. ಒಟ್ಟಿನಲ್ಲಿ ಕಪ್ಪು ಬಣ್ಣ ಬಳಿದುಕೊಂಡು ಕಾಲೆಯ ಹಾಗೆ ಕಂಡರಾಯಿತು ಎಂದು ಸಮಾಧಾನ ಹೇಳಿ ಒಪ್ಪಿಸಿದ. ಫೋಟೋ ಸ್ಟುಡಿಯೋದ ಶಂಕರನನ್ನು ಕೂಡಾ ಕರೆದುಕೊಂಡು ಹೋದ.
ಈ ವಿಷಯವನ್ನು ಪಾದೆ ಜಲಜಳಿಗೆ ಮೊದಲೇ ಹೇಳಿದ್ದ. ಅವಳು, ನನ್ನ ಅಮ್ಮನಿಗೆ ಮರ್ಲ್ (ಮರುಳು) ಎಂದು ಎಣಿಸಿದರೆ ನಿಮಗೆ ಅದಕ್ಕಿಂತಲೂ ಹೆಚ್ಚು ಮರ್ಲ್ ಎಂದು ಮೂಗುಮುರಿದರೂ, ಕೃಷ್ಣರಾಜ ಕೊಟ್ಟ ಇಪ್ಪತ್ತು ರೂಪಾಯಿಗಳನ್ನು ತೆಗೆದುಕೊಂಡು ಸುಮ್ಮನಾದಳು.
ನಿಗದಿತ ದಿನದಂದು ಕೃಷ್ಣರಾಜನ ತಂಡ ಪಾದೆ ಗುಲ್ಲಿಯ ಮನೆಗೆ ಹೋಯಿತು. ಅವಳ ಮುಳಿಹುಲ್ಲಿನ ಛಾವಣಿಯ ಮನೆಯ ಒಳಗೆ ಒಂದೇ ಒಂದು ಕೋಣೆ; ಒಂದು ಮೋಟುಗೋಡೆಯ ಆಚೆ ಒಲೆ. ಗುಲ್ಲಿ ಆ ಕೋಣೆಯಲ್ಲಿ ಒಲಿಯ ಚಾಪೆಯ ಮೇಲೆ ಮಲಗಿದ್ದಳು. ಒಂದು ಹಳೆಯ ಸೀರೆ ಅವಳ ಹೊದಿಕೆಯಾಗಿತ್ತು. ಚಾಪೆಯ ಪಕ್ಕದಲ್ಲಿ ಒಂದು ಸೇವಿಗೆ ಒತ್ತುವ ಕುದುರೆಮಣೆಯಿತ್ತು. ಅದು ಮೂಲತಃ ಶಾನುಭೋಗ ಚರಡಪ್ಪಯ್ಯನವರ ಮನೆಯಲ್ಲಿದ್ದ ಸೇವಿಗೆ ಮಣೆ. ಅದು ಗುಲ್ಲಿಯ ಮನೆಗೆ ಸೇರಿದ ಸಂದರ್ಭದಲ್ಲಿ ಒಂದು ದೊಡ್ಡ ಗಲಾಟೆ ನಡೆದು ಹೋಗಿತ್ತು. ಅಂತಹ ಭವ್ಯ ಇತಿಹಾಸ ಇರುವ ಸೇವಿಗೆ ಮಣೆಯ ಮೇಲೆ ಕಾಲೆಯೂ ಕುಳಿತುಕೊಳ್ಳುವ ಮೂಲಕ ಅದನ್ನೊಂದು ಚಾರಿತ್ರಿಕ ಮಹತ್ತ್ವವುಳ್ಳ ಮಣೆಯನ್ನಾಗಿ ಮಾಡಿಬಿಟ್ಟಿತ್ತು.
ಕಾಲೆಯ ವೇಷ ಹಾಕಿದ ವಿಟ್ಟು ಕೃಷ್ಣರಾಜ ಹೇಳಿದಂತೆ ಸೇವಿಗೆ ಮಣೆಯ ಮೇಲೆ ಕುಳಿತು ಕುತ್ತಿಗೆಯನ್ನು ಓರೆ ಮಾಡಿ ಗುಲ್ಲಿಯನ್ನು ನೋಡುವ ಭಂಗಿಯಲ್ಲಿ ಕುಳಿತುಕೊಂಡ. ಫೊಟೋಗ್ರಾಫರ್ ಶಂಕರ ಆ ಚಿತ್ರವನ್ನು ತನ್ನ ಕ್ಯಾಮೆರದಲ್ಲಿ ಸೆರೆಹಿಡಿದ. ಆಗ ಉಂಟಾದ ಸದ್ದಿನಿಂದ ಗುಲ್ಲಿಗೆ ಎಚ್ಚರವಾಗಿ ಕಣ್ತೆರೆದು ನೋಡಿದಳು.
ಎದುರಿಗೆ ಸೇವಿಗೆ ಮಣೆಯ ಮೇಲೆ ಕಾಲೆ ಕುಳಿತು ಓರೆತಲೆಯಿಂದ ಅವಳನ್ನೇ ದಿಟ್ಟಿಸಿ ನೋಡುತ್ತಿತ್ತು.
ಗುಲ್ಲಿ: ಕುಡ ಬತ್ತನಾ? (ಪುನಃ ಬಂದಿಯಾ?)
ವಿಟ್ಟು ಮಾತಾಡಬಾರದೆಂದು ಕೃಷ್ಣರಾಜ ಹೇಳಿದ್ದ. ಕೃಷ್ಣರಾಜನಿಗೆ ಬೇಕಾದದ್ದು ಫೋಟೋ ಮಾತ್ರ.
ವಿಟ್ಟು ಮಾತಾಡದಿದ್ದರೂ ಗುಲ್ಲಿಯೇ ಮಾತಾಡತೊಡಗಿದಳು.
ನನ್ನ ಅನುಭವ ಪೂರ್ತಿಯಾಯಿತಾ? ಇನ್ನು ಕರೆದುಕೊಂಡು ಹೋಗುತ್ತೀಯಾ? ಇನ್ನೂ ಏನಾದರೂ ಬಾಕಿ ಉಂಟಾ? ಇಲ್ಲವಾ? ಹಾಗಾದರೆ ಬರಬಹುದಲ್ಲ? ಸರಿ, ಹೊರಡುವ.
ಗುಲ್ಲಿ ಹೀಗೆಲ್ಲ ಮಾತಾಡತೊಡಗಿದಾಗ ಈ ಚಿತ್ರೀಕರಣಕ್ಕೆ ವ್ಯವಸ್ಥೆ ಮಾಡಿದ್ದ ಕೃಷ್ಣರಾಜನಿಗೆ ಭಯವಾಗತೊಡಗಿತು. ಗುಲ್ಲಿಗೆ ಹುಚ್ಚು ಹೆಚ್ಚಾಗಿ ಏನಾದರೂ ಹೆಚ್ಚುಕಡಮೆ ಆದರೆ?
ಕೂಡಲೇ ಅವನು ವಿಟ್ಟುನನ್ನೂ, ಶಂಕರನನ್ನೂ ಕರೆದುಕೊಂಡು ಅಲ್ಲಿಂದ ಹೊರಟುಹೋದ.
***
ಅದೇ ರಾತ್ರಿ ಗುಲ್ಲಿ ಪರಲೋಕವನ್ನು ಸೇರಿಕೊಂಡಳು.
Comments are closed.