ಗತಶತಮಾನದಲ್ಲಾದ ಮಹಾಯುದ್ಧಗಳಂತೆ ಈಗಿನ ದಿನಗಳಲ್ಲಿ, ಈಗಿನ ಜಗದ್ವ್ಯಾಪಾರದಲ್ಲಿ ಆಗುವುದು ಅಸಾಧ್ಯ. ಹಾಗೇನಾದರೂ ಆಗುವುದನ್ನು ತಡೆಯಲೆಂದೇ ಆಧುನೀಕರಣಗೊಂಡ ಶಕ್ತಿಯುತ, ಸದಾ ಸನ್ನದ್ಧ, ಅಣ್ವಸ್ತ್ರಸಹಿತವಾದ ಸಶಸ್ತ್ರಬಲಗಳ ಸಂಘಟನೆ ಮತ್ತು ಅವುಗಳನ್ನು ಉಪಯೋಗಿಸುವ ಯುಕ್ತಿ, ತಂತ್ರ, ವಿಧಾನಗಳ, ಸ್ಪಷ್ಟೀಕರಣದ ಪ್ರದರ್ಶನ ಇವು ನಮ್ಮ ಎದುರಾಳಿಗಳಿಗೆ ಮತ್ತು ಜಗತ್ತಿಗೆ ಮನದಟ್ಟಾಗುವಂತಿರಬೇಕು. ಅಂತಹ ಯುದ್ಧಸನ್ನದ್ಧತೆ ನಮ್ಮಲ್ಲಿದೆಯೆ?
– ಹಿರಿಯ ಲೇಖಕ, ಸೇನಾಪಡೆಯ ನಿವೃತ್ತ ಅಧಿಕಾರಿ ಲೆ|| ಜ|| ಎಸ್.ಸಿ. ಸರದೇಶಪಾಂಡೆಯವರು `ಉತ್ಥಾನ’ಕ್ಕಾಗಿ ಬರೆದ ಒಂದು ಮಾಹಿತಿಪೂರ್ಣ ವಿಶೇಷ ಲೇಖನ ಇಲ್ಲಿದೆ….
ಯಂತ್ರಯುಗ, ಸಂವಹನ, ತ್ವರಿತ ಸಾಗಾಟ ಸಾಮರ್ಥ್ಯ, ವ್ಯಾಪಾರವೃದ್ಧಿ, ಇತರ ಅನೇಕ ರಾಷ್ಟ್ರಗಳೊಡನೆ ಹೊಂದಾಣಿಕೆ ಹಾಗೂ ಪರಸ್ಪರ ಅವಲಂಬನೆ ಇತ್ಯಾದಿಗಳಿಂದಾಗಿ, ವಿಶೇಷವಾಗಿ ದ್ವಿತೀಯ ಮಹಾಯುದ್ಧದ ನಂತರ, ಚಿಕ್ಕದಾದಂತೆ ಎನಿಸಿಕೊಳ್ಳತೊಡಗಿದ ನಮ್ಮ ಈ ಮಾನವಜಗತ್ತು ತನ್ನ ಆಧುನಿಕ ಪ್ರಗತಿಯಿಂದಾಗಿ ಅಂತಾರಾಷ್ಟ್ರೀಯ ಜಗ್ಗಾಟ, ಪೈಪೋಟಿಗಳನ್ನು ನಿರ್ಮಿಸಿದೆ. ರಾಷ್ಟ್ರೀಯತೆ, ರಾಷ್ಟ್ರಹಿತ, ರಾಷ್ಟ್ರೀಯ ಸುರಕ್ಷೆ, ರಾಷ್ಟ್ರೀಯ ಪ್ರಗತಿ ಇವೆಲ್ಲ ಒಟ್ಟುಗೂಡಿ ರಾಷ್ಟ್ರೀಯ ಪ್ರತಿಷ್ಠಾಪನೆ (ಂsseಡಿಣioಟಿ) ಎಂಬುದನ್ನು ಮುಂಚೂಣಿಯಲ್ಲಿರಿಸಿವೆ. ಅದಕ್ಕಾಗಿಯೇ ರಾಷ್ಟ್ರೀಯ ಸಾಮರ್ಥ್ಯದ ಆವಶ್ಯಕತೆ. ರಾಷ್ಟ್ರ-ರಾಷ್ಟ್ರೀಯತೆ ಇಂದು ಪ್ರತಿಯೊಬ್ಬ ನಾಗರಿಕನನ್ನು ಕಲಕಿಸುತ್ತದೆ, ಆವರಿಸುತ್ತದೆ; ತನ್ನ ಕ್ರಿಯೆಗಳಲ್ಲಿ ವ್ಯಸ್ತವಾಗಿಸುತ್ತದೆ. ವಾಮನಾವತಾರದಂತೆ ಚಿಕ್ಕದಾಗತೊಡಗಿದ ಇಂದಿನ ಜಗದ್ವ್ಯಾಪಾರದಲ್ಲಿ ತ್ರಿವಿಕ್ರಮನ ವಿಸ್ತರಣೆ-ವೈಶಾಲ್ಯಗಳು ಬೇಕು. ರಾಷ್ಟ್ರೀಯ ಹಿತಾಸಕ್ತಿಗಳನ್ನು ಕಾಯ್ದುಕೊಳ್ಳಲು, ಬೆಳೆಸಿಕೊಳ್ಳಲು, ಸಮರ್ಥಿಸಿಕೊಳ್ಳಲು ಶಕ್ತಿ ಬೇಕು. ಜಾಗತಿಕ ರಾಷ್ಟ್ರಕೂಟದಲ್ಲಿ ಇತರ ರಾಷ್ಟ್ರ, ಇತರ ಶಕ್ತಿಗಳೊಡನೆ ಹೋರಾಡಲು, ತಿಕ್ಕಾಡಲು, ಸಂಧಿಸಿಕೊಳ್ಳಲು ಶಕ್ತಿ ಬೇಕು.
ಇದು ಬರಿ ದೈಹಿಕ, ಮಾನಸಿಕ ಅಥವಾ ನೈತಿಕ ಬಲಗಳಿಗಷ್ಟೇ ಸೀಮಿತವಲ್ಲ. ಇವೆಲ್ಲವುಗಳನ್ನೊಳಗೊಂಡ ಸಾಮೂಹಿಕ ಬಲದ ಅಂಗಗಳಾಗಿ ಮುಖ್ಯತಃ ಆರ್ಥಿಕ ಬಲ; ರಾಜತಾಂತ್ರಿಕ ಬಲ; ಔದ್ಯೋಗಿಕ-ತಾಂತ್ರಿಕಬಲ; ಸಾಮಾಜಿಕ ಬಲ; ಮತ್ತು ಶಸ್ತ್ರಬಲ ಎಂದು ಎಣಿಕೆಯಾಗಬಹುದು. ಎಲ್ಲ ಬಲಗಳೂ ಪರಸ್ಪರಾವಲಂಬಿಯಾಗಿವೆ, ಪರಸ್ಪರ ಪ್ರಚೋದಿತವಾಗಿವೆ, ಪರಸ್ಪರ ವರ್ಧಕವಾಗಿವೆ. ಆರ್ಥಿಕ ಬಲವಿಲ್ಲದಿದ್ದರೆ ಶಸ್ತ್ರಬಲವೆಲ್ಲಿಂದ? ಶಸ್ತ್ರಬಲವಿಲ್ಲದೆ ರಾಜತಾಂತ್ರಿಕ ಬಲಕ್ಕೆಂತಹ ಬೆಲೆ? ಸಾಮಾಜಿಕ ಬಲವಿಲ್ಲದೆ (ನಮ್ಮಲ್ಲಿಯೇ ಆಂತರಿಕ ಬಿಕ್ಕಟ್ಟು, ವಿರೋಧ, ಕಚ್ಚಾಟಗಳಿದ್ದರೆ) ಶಸ್ತ್ರಬಲವೇನು ಮಾಡೀತು? ತಾಂತ್ರಿಕ-ಔದ್ಯೋಗಿಕ ಬಲವಿಲ್ಲದಿದ್ದರೆ ಶಸ್ತ್ರಬಲ ಎಷ್ಟು ಪರಿಣಾಮಕಾರಿಯಾದೀತು? ಹೀಗೆಯೇ ಈ ಅಂತಶ್ಚಕ್ರ.
ಶಸ್ತ್ರಬಲ ಇದು ಶಕ್ತಿಪ್ರಯೋಗದ, ವಿಧ್ವಂಸಕ ಹಾಗೂ ಒತ್ತಾಯದ ಕೊನೆಯ ಮಾರ್ಗ. ಇದರ ಪರಿಣಾಮಗಳು, ಅಂಜಿಕೆ ಎಲ್ಲಕ್ಕೂ ಹೆಚ್ಚು ವಿದಾರಕ. ಇದರ ಉಪಯೋಗವನ್ನು ಮನುಷ್ಯ ಸಾವಿರಾರು ವರ್ಷಗಳಿಂದ ತಾನು, ತನ್ನ ಸಮಾಜ, ವಿಚಾರಶಕ್ತಿ, ಸಂಸ್ಕೃತಿಗಳು ಬೆಳೆದಂತೆ, ಬೆಳೆಸುತ್ತ ಪ್ರಗತಿಪರವಾಗಿಸುತ್ತ, ಇನ್ನೂ ಬಿರುಸಾಗಿಸುತ್ತ ಬಂದಿದ್ದಾನೆ. ಶಸ್ತ್ರಬಲದ ಪ್ರಯೋಗವಂತೂ ಮುಖ್ಯ ಸಾಧನವೇ; ಜೊತೆಗೆ ಆ ಬಲಪ್ರಯೋಗದ ಬೆದರಿಕೆಯೂ ಕೂಡ. ಈಗ ನೋಡಿ: ಪಾಕಿಸ್ತಾನವು ದಿನಂಪ್ರತಿ ನಮ್ಮ ದೇಶದಲ್ಲಿ ಭಯೋತ್ಪಾದಕರನ್ನು ಕಳಿಸಿ ಅಥವಾ ನಮ್ಮ ಗಡಿಪ್ರದೇಶದ ಮೇಲೆ ಗುಂಡುಮಳೆ ಸುರಿಸಿ ಕಾಡುತ್ತಿದೆ. ನಾವು ನಮ್ಮ ಸ್ಪೆಶಲ್ ಫೋರ್ಸ್ಗಳನ್ನು ಕಳಿಸಿ ಪಾಕಿಸ್ತಾನದಲ್ಲಿಯ ಕ್ಯಾಂಪ್ಗಳನ್ನು ಧ್ವಂಸಮಾಡುತ್ತೇವೆ ಎಂದೊಡನೆ ಪಾಕಿಸ್ತಾನವು ಅಣ್ವಸ್ತ್ರಗಳ ಬೆದರಿಕೆ ಹಾಕುತ್ತದೆ. ಈಗ ಪ್ರಶ್ನೆ ಬಂತಲ್ಲ? ೧೯೭೧ರ ಯುದ್ಧದಲ್ಲಿ ನಮ್ಮ ನೌಕಾಸೇನೆ ಪಾಕಿಸ್ತಾನದ ಏಕಮೇವ ಬಂದರು ಕರಾಚಿಯ ಮೇಲೆ ದಾಳಿ ಮಾಡಿ ಅದನ್ನು ನಿಷ್ಕ್ರಿಯವಾಗಿಸಿತ್ತು.
ಈಗ ಪಾಕಿಸ್ತಾನವು ತನ್ನ ಪಶ್ಚಿಮಕ್ಕಿದ್ದ ಗ್ವಾದರ್ ಬಂದರವನ್ನು ಸ್ಥಿರಪಡಿಸಿ ಉಪಯೋಗಿಸಲು ಚೀನಾಕ್ಕೆ ಅನುಮತಿಯಿತ್ತು ಮುಂದೊದಗಬಹುದಾದ ಸಮುದ್ರೀ ಮುಖಾಮುಖಿಯಲ್ಲಿ ಪಾಕಿಸ್ತಾನದ ಜೊತೆಗೆ ಚೀನಾದ ನೌಕಾಶಕ್ತಿಯೂ ಸಜ್ಜಾಗಬಹುದಾದ ಭಯವನ್ನು ಭಾರತಕ್ಕೆ ನೀಡಿಲ್ಲವೆ? ಇನ್ನೂ ಒಂದು. ಪಾಕಿಸ್ತಾನವು ತಾನಾಗಿ ಭಾರತವನ್ನೆದುರಿಸುವ ಶಕ್ತಿಯಿಲ್ಲದ್ದು; ಆದರೆ ಅದಕ್ಕೆ ಅಮೆರಿಕ, ಚೀನಾ ಮತ್ತು ಅರಬ್ ರಾಷ್ಟ್ರಗಳ ಪ್ರಬಲ ಬೆಂಬಲವಿದೆಯಲ್ಲ? ಅದನ್ನು ಎದುರಿಸುವುದು ಹೇಗೆ? ಆರ್ಥಿಕವಾಗಿ, ತಂತ್ರಜ್ಞಾನೀಯವಾಗಿ ಚೀನಾವು ನಮಗಿಂತ ಎಷ್ಟೋ ಪಟ್ಟು ಮುಂದುವರಿದಿದೆ. ಈ ಸ್ಥಿತಿಯಲ್ಲಿ ಚೀನಾ ಮತ್ತು ಪಾಕಿಸ್ತಾನ ಎರಡನ್ನೂ ಏಕಕಾಲಕ್ಕೆ ಹಿಮ್ಮೆಟ್ಟಿಸುವ ಸಮಸ್ಯೆ ನಮ್ಮದಾಗಿದೆ. ವೈಜ್ಞಾನಿಕವಾಗಿ, ತಂತ್ರಜ್ಞಾನೀಯವಾಗಿ ಎರಡು-ಮೂರು ದಶಕಗಳಷ್ಟು ನಾವು ಹಿಂದುಳಿದಿದ್ದೇವೆ. ಪರರಾಷ್ಟ್ರಗಳಿಂದ ಶೇಕಡಾ ೭೦ರಷ್ಟು ರಕ್ಷಾ ಶಸ್ತ್ರಾಸ್ತ್ರ ಸಲಕರಣೆಗಳನ್ನು ಆಮದು ಮಾಡುತ್ತೇವೆ. ಪರರಾಷ್ಟ್ರಗಳು ನಮ್ಮ ಮೂಗು ಹಿಡಿದರೆ ನಮ್ಮ ಶಸ್ತ್ರಬಲ ಎಷ್ಟು ಉಳಿದೀತು? ಶಸ್ತ್ರಬಲಪ್ರಯೋಗದಲ್ಲಿ ಹೀಗೆಯೇ ಅನೇಕ ಪ್ರಶ್ನೆಗಳು ಏಳುತ್ತವೆ. ನಮ್ಮೀ ದೌರ್ಬಲ್ಯ, ಕುಂದುಗಳನ್ನು ನೋಡುತ್ತಲಿರುವ ಇತರ ರಾಷ್ಟ್ರಗಳು ನಮ್ಮ ಶಸ್ತ್ರಶಕ್ತಿಯಿಂದ ಎಷ್ಟು ಬೆದರಿಯಾರು ಅಥವಾ ಪ್ರಭಾವಿತರಾದಾರು?
ಶಸ್ತ್ರಬಲದ ಪ್ರಾಮುಖ್ಯ
ಇಂದು ಜಾಗತಿಕ ತಿಕ್ಕಾಟ, ವ್ಯವಹಾರಗಳಲ್ಲಿ, ನಮ್ಮ ಹಿತ ಕಾಯ್ದುಕೊಳ್ಳುವಲ್ಲಿ, ನಮ್ಮನ್ನು ಸಮರ್ಥಿಸಿಕೊಳ್ಳುವಲ್ಲಿ, ನಮ್ಮ ಪ್ರಗತಿ ಮತ್ತು ಪ್ರಾಧಾನ್ಯಗಳ ಆಶಯದಲ್ಲಿ ನಾವು ಇತರ ರಾಷ್ಟ್ರಗಳೊಂದಿಗೆ ಪೈಪೋಟಿಯಲ್ಲಿದ್ದೇವೆ. ನಮ್ಮ ಹಳೆಯ ಇತಿಹಾಸ, ಸಂಸ್ಕೃತಿ, ಆಧ್ಯಾತ್ಮಿಕತೆ, ನಾಗರಿಕತೆ, ನೈತಿಕ ಮೇಲ್ಸ್ತರ ಇತ್ಯಾದಿಗಳ ಗಣನೆ ಈ ಪೈಪೋಟಿಯಲ್ಲಿ ಈ ತಿಕ್ಕಾಟದಲ್ಲಿ ನಾವು ತಿಳಿದಂತೆ ಪ್ರಭಾವಿಯಾಗಲಾರವು. ಶಸ್ತ್ರಬಲ – ಇದೇ ಪ್ರಮುಖ ಅಸ್ತ್ರವಾಗಿದೆ. ಅದಕ್ಕಿರುವಷ್ಟು ಕಿಮ್ಮತ್ತು ಉಳಿದ ಶಕ್ತಿಗಳಿಗಿಲ್ಲ ಅನ್ನಬಹುದು. ಇದು ಪ್ರಥಮ ಸತ್ಯ. ಎರಡನೆಯದೆಂದರೆ ನಮ್ಮ ಮನಸ್ಸು, ಚೈತನ್ಯ, ವಿಚಾರ-ಆಚಾರಗಳು ಬರಿ ಪಾಕಿಸ್ತಾನ-ಚೀನಾಗಳಿಗಷ್ಟೇ ಸೀಮಿತವಾಗಲಾರದು, ಇತರ ಅನೇಕ ರಾಷ್ಟ್ರ, ಶಕ್ತಿಗಳಿಗೂ ವಿಸ್ತರಿಸಬೇಕು. ನಮ್ಮ ನಮ್ಮ ಹಿತಾಸಕ್ತಿಗಾಗಿ ನಾವು ಪಾಕ್-ಚೀನಾ, ಪಾಕ್-ಆಫಘನಿಸ್ತಾನ, ಪಾಕ್-ಅರೇಬಿಯಾ, ಪಾಕ್-ಅಮೆರಿಕ, ಚೀನಾ-ಮ್ಯಾನ್ಮಾರ್, ಚೀನಾ-ಶ್ರೀಲಂಕಾ, ಚೀನಾ-ಅಮೆರಿಕ, ಚೀನಾ-ನೇಪಾಳ, ಚೀನಾ-ರಷ್ಯಾ, ರಷ್ಯಾ-ಪಾಕಿಸ್ತಾನ, ಚೀನಾ-ಪಾಕಿಸ್ತಾನ-ಮಧ್ಯ ಏಶಿಯಾದ ರಾಷ್ಟ್ರಗಳು ಇತ್ಯಾದಿ ಕೊಂಡಿಗಳನ್ನು ಅರಿತು ಭೇದಿಸಬೇಕು. ಇರಾನ್, ಈಜಿಪ್ಟ್, ಇಸ್ರೇಲ್, ದಕ್ಷಿಣ-ಪೂರ್ವ ರಾಷ್ಟ್ರಗಳು, ಜಪಾನ್, ವಿಯೆಟ್ನಾಂ, ಆಸ್ಟ್ರೇಲಿಯಾ, ಬ್ರೆಜಿಲ್, ಕೆನ್ಯಾ, ದಕ್ಷಿಣ ಆಫ್ರಿಕಾ, ಶ್ರೀಲಂಕಾ, ಬಂಗ್ಲಾದೇಶ, ನೇಪಾಳ, ಆಫಘನಿಸ್ತಾನ, ಮ್ಯಾನ್ಮಾರ್, ಐರೋಪ್ಯ ಸಂಘ ಇತ್ಯಾದಿಗಳೊಡನೆ ರಾಜಕೀಯ, ಆರ್ಥಿಕ, ವೈಜ್ಞಾನಿಕ ಹಾಗೂ ಮಿಲಿಟರಿ ಒಪ್ಪಂದ, ಸಂವಹನ, ಸಂಬಂಧಗಳನ್ನು ಸ್ಥಿರಗೊಳಿಸಿಕೊಳ್ಳಬೇಕು.
ಸುತ್ತುವರಿಯುತ್ತಿರುವ ಚೀನಾ
ಪಶ್ಚಿಮಕ್ಕೆ ಸುಯೆಜ್ ಕಾಲುವೆ, ಪೂರ್ವಕ್ಕೆ ಮಲಕ್ಕಾ ಜಲಸಂಧಿ, ದಕ್ಷಿಣಕ್ಕೆ ಅಂಟಾರ್ಕಟಿಕಾದ ದಕ್ಷಿಣ ಸಾಗರ ಇವುಗಳಲ್ಲಿ ವಿರಮಿಸಿದ ಹಿಂದು ಮಹಾಸಾಗರ, ಇದರ ಮೇಲೆ ಹಾಯಾಗಿ, ಇದನ್ನು ನಿಯಂತ್ರಿಸಲೆಂಬಂತೆ ನಿಸರ್ಗದತ್ತ ಸ್ಥಿತಿಯಲ್ಲಿ ಭಾರತ ಇದೆ. ಸುಯೆಜ್-ಮಲಕ್ಕಾ ಸಾಗರಪಥವು ಜಾಗತಿಕ ಸಮುದ್ರವ್ಯಾಪಾರದ ಮೂರನೇ ಒಂದು ಭಾಗವನ್ನು ವಹಿಸುತ್ತದೆ. ಅರೇಬಿಯಾ, ಪರ್ಶಿಯನ್ ಕೊಲ್ಲಿ ಮತ್ತು ಇರಾನಿನ ತೈಲಸಿರಿಯು ಪೂರ್ವ ಏಶಿಯಾ ಮತ್ತು ಪಶ್ಚಿಮ ಐರೋಪ್ಯ-ಅಮೆರಿಕ ದೇಶಗಳಿಗೆ ಹೋಗುವ ಹೆದ್ದಾರಿ. ಈ ದಾರಿಯ ಸುರಕ್ಷೆಯ ಮುಖ್ಯ ಭಾರವಿದ್ದುದು ಭಾರತದ ಮೇಲೆ. ಒಂದೆಡೆ ಕಡಲುಗಳ್ಳರ ಹಾವಳಿಯಾದರೆ ಇನ್ನೊಂದೆಡೆ ಚೀನಾದ ಅಖಂಡ ಪ್ರಯತ್ನ ಇಲ್ಲಿ ತನ್ನ ಪ್ರಭಾವವನ್ನು, ಪ್ರಾಧಾನ್ಯವನ್ನು ಸ್ಥಾಪಿಸುವುದಕ್ಕೆ. ಮಲಕ್ಕಾ ಜಲಸಂಧಿಯನ್ನು ದಾಟಿ ಬರಲು ಅದರ ಅಚಲ ಪ್ರಯಾಸ. ಅಲ್ಲದೆ ಮ್ಯಾನ್ಮಾರದ ಕೊಕೊ ದ್ವೀಪ, ಶ್ರೀಲಂಕಾದ ಹಂಬನ್ತೋಟಾ, ಪಾಕಿಸ್ತಾನದ ಗ್ವಾದರಗಳಲ್ಲಿ ಚೀನೀಯರು ಸ್ಥಾಪಿಸಿದ ನೌಕಾ ಠಾಣೆಗಳು; ಮಾಲ್ದೀವ್ ದ್ವೀಪ, ಕೆನ್ಯಾಗಳಲ್ಲೂ ಅಸ್ತಿತ್ವ. ಇದು ಹೀಗೆ ಸಮುದ್ರೀ ಸರಪಳಿಯಾದರೆ ಉತ್ತರಕ್ಕೆ ತನ್ನ ಯುನಾನ್ ಪ್ರಾಂತದಿಂದ-ಮ್ಯಾನ್ಮಾರದ ಮಿಚಿನಾ-ಮಕ್ಟಿಲಾ-ಕ್ಯಾಕ್ಪೈವರೆಗೆ ರಾಜಮಾರ್ಗ (ಬಂಗಾಲಖಾಡಿಗೆ), ಟಿಬೇಟ್ನಿಂದ ನೇಪಾಳದ ಕಾಠ್ಮಂಡುವರೆಗೆ ರಾಜಮಾರ್ಗ, ಸಿಂಕಿಯಾಂಗ್ನಿಂದ ಕಾರಾಕೋರಂ ಮಾರ್ಗವಾಗಿ ಪೇಶಾವರ-ಕ್ವೆಟ್ಟಾ-ಗ್ವಾದರ ರಾಜಮಾರ್ಗದ ಅರಬ್ಬೀ ಸಮುದ್ರಕ್ಕೆ ಭೂ ಸರಪಳಿಯನ್ನು ಸ್ಥಾಪಿಸಿಯಾಗಿದೆ. ಹೀಗೆ ಉತ್ತರಕ್ಕೆ ಭೂ ಮತ್ತು ದಕ್ಷಿಣಕ್ಕೆ ಸಮುದ್ರೀ ಸರಪಳಿಗಳನ್ನು ಚೀನವು ಸ್ಥಾಪಿಸಿ ಭಾರತವನ್ನು ಸುತ್ತುವರಿದಿದೆ. ಹೀಗೆ ಅದು ಭಾರತವನ್ನು ಸುತ್ತುವರಿಯುವ ಕಾರಣವೇನು? ಏಶಿಯಾದಲ್ಲಿ ಚೀನಾವನ್ನು ಎದುರಿಸುವ, ಅದರ ಮುನ್ನುಗ್ಗುವಿಕೆಯನ್ನು ಪ್ರಶ್ನಿಸುವ ಶಕ್ತಿ ಭಾರತವೊಂದಕ್ಕೇ ಇದ್ದು ಅದನ್ನು ಕುಂಠಿಸುವ ಪ್ರಯತ್ನ ಚೀನಾದ್ದು. ಈ ಮುತ್ತಿಗೆಯನ್ನು ಭೇದಿಸುವ ಮುಖ್ಯ ಸಾಧನವೆಂದರೆ ಇಂದು ಭಾರತದ ಶಸ್ತ್ರಬಲ. ಚೀನಾವನ್ನು ತಡೆಯುವ ಸಾಮರ್ಥ್ಯವುಂಟಾದರೆ ಪಾಕಿಸ್ತಾನ ತಾನೇ ಕಮರುವುದು. ಚೀನಾವು ಏಶಿಯಾದ ಇತರ ರಾಷ್ಟ್ರಗಳೊಡನೆಯೂ ಗುರ್ರೆನ್ನುತ್ತಿದ್ದು ಅವೆಲ್ಲ ಅಮೆರಿಕ ಮತ್ತು ಭಾರತದೆಡೆಗೆ ನೋಡುತ್ತಲಿವೆ. ಭಾರತದ ಸುತ್ತಲಿನ ಚಿಕ್ಕ ದೇಶಗಳಾದ ಮ್ಯಾನ್ಮಾರ್, ಶ್ರೀಲಂಕಾ, ಮಾಲ್ದೀವ್, ಪಾಕಿಸ್ತಾನ, ನೇಪಾಳಗಳು, ಚೀನಾ ಮತ್ತು ಭಾರತಗಳ ಸ್ಪರ್ಧೆಯ ಲಾಭ ಪಡೆದು ಭಾರತವನ್ನು ಬೆದರಿಸುತ್ತವೆ, ಅಲಕ್ಷಿಸುತ್ತವೆ. ಇದೂ ಭಾರತದ ಸುರಕ್ಷಾ ವ್ಯವಸ್ಥೆಯ ಸಂಕಟ.
ಆಂತರಿಕ ಸಮಸ್ಯೆಗಳು
ಇಂಥ ಬಿಕ್ಕಟ್ಟನ್ನು ಸಡಿಲಿಸಲು ಭಾರತವು ಆಫಘನಿಸ್ತಾನದಲ್ಲಿ ಪಾಕಿಸ್ತಾನಕ್ಕೆ ಗಾಳವಾಗುವ ಪ್ರಯತ್ನದಲ್ಲಿ ಮತ್ತು ಇರಾನಿನ ಚಾಹಬಹಾರ ಬಂದರಿನ ಜೀರ್ಣೋದ್ಧಾರ ಕೈಕೊಳ್ಳುವಲ್ಲಿ (ಇಲ್ಲಿಂದ ಆಫಘನಿಸ್ತಾನಕ್ಕೆ ಮತ್ತು ಮಧ್ಯಏಶಿಯಾ ರಾಷ್ಟ್ರಗಳಿಗೆ ಮಾರ್ಗವಿದು) ಮತ್ತು ಮಲಕ್ಕಾ ಜಲಸಂಧಿಯನ್ನು ಹಿಸುಕುವಲ್ಲಿ ತೊಡಗಬೇಕಾಗಿದೆ. ಇಲ್ಲಿಯೂ ಶಸ್ತ್ರಬಲದ ಆವಶ್ಯಕತೆಯಿದೆಯಲ್ಲ? ಕಡಲುಗಳ್ಳರ ಹಾವಳಿಯೂ ಒಂದಿದೆಯಲ್ಲ? ಅಷ್ಟೇ ಅಲ್ಲ, ಅಂಡಮಾನ್-ನಿಕೋಬಾರ್ ದ್ವೀಪಸಮೂಹಗಳು ಇಂಡೊನೇಶಿಯಾ-ಮಲೇಶಿಯಾಗಳ ಹತ್ತಿರವಿದ್ದು ಅವುಗಳ ರಕ್ಷಣೆ ಮತ್ತು ಮಲಕ್ಕಾ ಜಲಸಂಧಿಯನ್ನು ನಿಯಂತ್ರಿಸುವಲ್ಲಿ ಅವುಗಳ ಉಪಯೋಗಗಳೂ ಪ್ರಾಮುಖ್ಯ ಹೊಂದುತ್ತವೆ. ಹೀಗೆ ನಮ್ಮ ಶಸ್ತ್ರಬಲದ ಆವಶ್ಯಕತೆ ಮೂರು ವರ್ತುಲಗಳಲ್ಲಿ ಅಡಗಿಕೊಂಡಿದೆ. ರಾಷ್ಟ್ರೀಯ ಗಡಿಗಳು; ಗಡಿಸುತ್ತಲಿನ ರಾಷ್ಟ್ರಗಳು (ಪಾಕಿಸ್ತಾನ-ಟಿಬೆಟ್-ನೇಪಾಳ-ಭೂತಾನ್-ಮ್ಯಾನ್ಮಾರ್-ಶ್ರೀಲಂಕಾ-ಬಂಗ್ಲಾದೇಶ-ಮಾಲ್ದಿವ್) ಮತ್ತು ಅದಕ್ಕೂ ಹೊರಗಿನ ಸುತ್ತು (ಆಫಘನಿಸ್ತಾನ-ಇರಾನ್-ವಿಯೆಟ್ನಾಂ-ಮಾರಿಶಸ್-ಮಧ್ಯಏಶಿಯಾ ರಾಷ್ಟ್ರಗಳು-ಕೆನ್ಯಾ-ಜಪಾನ್) ಇದಾಯ್ತು. ಬಾಹ್ಯ ರಕ್ಷಾಕವಚದಲ್ಲಿಯ ಶಸ್ತ್ರಬಲ ಪ್ರಯೋಗ ಕ್ಷೇತ್ರ.
ಇನ್ನು ಆಂತರಿಕ ಸುರಕ್ಷೆ. ವೈವಿಧ್ಯದಲ್ಲಿ ಏಕತೆ ನಮ್ಮದು ಎಂದು ನಮ್ಮ ಸಾಂಸ್ಕೃತಿಕ, ಸಾಮಾಜಿಕ, ಐತಿಹಾಸಿಕ ವೈಶಿಷ್ಟ್ಯವನ್ನು ನಾವೇ ಹೊಗಳಿಕೊಳ್ಳುತ್ತೇವೆ. ಆದರೆ ನಮ್ಮ ವೈವಿಧ್ಯದಿಂದಾಗಿ ಅದೆಷ್ಟು ಆಂತರಿಕ ಅಸುರಕ್ಷತೆ ನಮ್ಮನ್ನು ಕಾಡುತ್ತಿದೆ! ನಾಗಾಲ್ಯಾಂಡ್, ಮಿಜೋರಾಂ, ಕಾಶ್ಮೀರ, ಪಂಜಾಬ್, ಮಾರ್ಕ್ಸಿಸ್ಟ್ ನಕ್ಸಲಿಸಮ್ ಬಂಡಾಯಗಳು, ಹಿಂದೂ-ಮುಸ್ಲಿಂ, ಹಿಂದೂ-ಕ್ರೈಸ್ತ ಹೊಡೆದಾಟ, ಜಾತೀಯವಾದ, ದಲಿತರ-ಬುಡಕಟ್ಟಿನವರ ಹೋರಾಟ, ಭಾಷಾವಾರು ಹೋರಾಟ, ಪ್ರಜಾಸತ್ತೆಯಲ್ಲಿಯ ಮತ-ಅಧಿಕಾರ-ಆಳ್ವಿಕೆಗಾಗಿ ಹೋರಾಟ-ಒಂದೇ ಎರಡೇ! ಇಂಥ ಅಸುರಕ್ಷತೆ ನಮ್ಮನ್ನು ಉರಿಯಲ್ಲಿ ಸುಡುತ್ತಿರುವಾಗ ರಾಷ್ಟ್ರಹಿತ, ರಾಷ್ಟ್ರೀಯತೆ, ಜನಹಿತ, ರಾಷ್ಟ್ರೀಯ ಐಕ್ಯ ಎಂತಹದು? ರಾಷ್ಟ್ರೀಯ ಪ್ರಗತಿ, ಬಲವರ್ಧನೆ, ಅಂತಾರಾಷ್ಟ್ರೀಯ ರಂಗಭೂಮಿಯಲ್ಲಿ ನಮ್ಮ ಆತ್ಮಸಮರ್ಥನೆ ಇವೆಲ್ಲ ಎಲ್ಲಿ? ಯಾರು ದರ್ಕಾರ ಮಾಡಿಯಾರು? ನಾವು ಶಾಂತಿಪ್ರಿಯರು ಎಂದುಕೊಳ್ಳುತ್ತೇವೆ. ಯಾರಿಗೆ ಶಾಂತಿ ಬೇಕಾಗಿಲ್ಲ? ಇತರರು ನಮ್ಮನ್ನು ಶಾಂತಿಪ್ರಿಯರಾಗಗೊಡಬೇಕಲ್ಲ! ಚೀನಾ, ಪಾಕಿಸ್ತಾನ, ಶ್ರೀಲಂಕಾ, ನೇಪಾಳ ಕೂಡ ನಮ್ಮನ್ನು ಶಾಂತಿಯುತವಾಗಿ ಇರಗೊಡುತ್ತವೆಯೆ? ಶ್ರೀಲಂಕೆಯಲ್ಲಿ ತಮಿಳರ ಬಿಸಿ, ನೇಪಾಳದಲ್ಲಿ ಮಧೇಸಿಗಳ ಬಿಸಿ, ಆಫಘನಿಸ್ತಾನದಲ್ಲಿ ತಾಲಿಬಾನರು, ನದಿನೀರಿಗಾಗಿ, ಆರಕ್ಷಣೆಗಾಗಿ, ಪ್ರತ್ಯೇಕತೆಯ ಸ್ವಾತಂತ್ರ್ಯಕ್ಕೂ ಬಿಸಿ. ಇವೆಲ್ಲಾ ಆಂತರಿಕ ಅಸುರಕ್ಷತೆ, ಅಪಾಯ. ಬೆಂಕಿ-ಬಿಸಿಗಳು ಧಗಧಗಿಸತೊಡಗಿದರೆ ಶಸ್ತ್ರಬಲದ ಪ್ರಯೋಗ ಅವಶ್ಯವಾಗುತ್ತದಲ್ಲ? ನಾಗಾಲ್ಯಾಂಡಿನಲ್ಲಿ ಈ ೬೦ ವರ್ಷಗಳಿಂದ, ಮಣಿಪುರ-ಕಾಶ್ಮೀರಗಳಲ್ಲಿ ೨೫-೩೦ ವರ್ಷಗಳಿಂದ ಆಂತರಿಕ ಅಸುರಕ್ಷತೆಯನ್ನು ಎದುರಿಸಲು ಶಸ್ತ್ರಬಲಪ್ರಯೋಗ ನಡೆದೇ ಇದೆಯಲ್ಲ? ಪಂಜಾಬಿನಲ್ಲೂ ಆಯಿತು, ತಮಿಳುನಾಡಿನ ಸಲುವಾಗಿ ಶ್ರೀಲಂಕೆಯಲ್ಲೂ ಶಸ್ತ್ರಬಲ ಪ್ರಯೋಗವಾಯಿತು.
ಅಂತಾರಾಷ್ಟ್ರೀಯ ಸುರಕ್ಷಾ ಪರಿಸರದಲ್ಲಿ ನಮ್ಮ ಪಾತ್ರನಿರ್ವಹಣೆ, ಆತ್ಮಸಮರ್ಥನೆ ಮತ್ತು ಪ್ರಸಕ್ತತೆಗಳನ್ನು ಕಾಯ್ದುಕೊಳ್ಳಲು ಹಲವಾರು ಅಂತರ್ದೇಶೀಯ ಜಗಳಾಟಗಳನ್ನು ಶಮನಗೊಳಿಸುವಲ್ಲಿಯೂ ನಮ್ಮ ಶಕ್ತಿಪ್ರಯೋಗದ ಆವಶ್ಯಕತೆಯಿದೆಯಲ್ಲ – ೧೯೫೦ನೇ ದಶಕದಲ್ಲಿ ಕೊರಿಯಾ, ೧೯೬೦ನೇ ದಶಕದಲ್ಲಿ ಈಜಿಪ್ಟ್ ಮತ್ತು ಕಾಂಗೋ (ಇದು ಇದುವರೆಗೂ ನಡೆದಿದೆ), ಈಗೀಗ ಸುಡಾನ್, ಆಫಘನಿಸ್ತಾನದಲ್ಲಿ ಅಮೆರಿಕದ ಕಾಲ್ತೆಗೆತದಿಂದ ಉಂಟಾದ ಅಭದ್ರತೆಯಿಂದಾಗಿ ಭಾರತೀಯ ಯೋಜನೆಗಳ ಸುರಕ್ಷೆ, ಪ್ರಗತಿ ಮತ್ತು ಆಫಘನರೊಡನೆಯ ಮೈತ್ರಿಯನ್ನು ಕಾಯ್ದುಕೊಳ್ಳುವುದಕ್ಕಾಗಿ ಶಸ್ತ್ರಬಲಗಳನ್ನು ಆಫಘನಿಸ್ತಾನಕ್ಕೆ ಕಳಿಸಬೇಕಾಗಬಹುದಾದ ಮಾತುಕತೆ ಇವೆಲ್ಲ ವಿಚಾರಾರ್ಹವಾಗುತ್ತವೆ.
ಸುರಕ್ಷೆಯ ಮೂಲಸೂತ್ರಗಳು
ಹೀಗೆ ರಾಷ್ಟ್ರೀಯ ಸುರಕ್ಷೆ ಮತ್ತು ಅಂತಾರಾಷ್ಟ್ರೀಯ ಕಣದಲ್ಲಿ ರಾಷ್ಟ್ರೀಯ ಆತ್ಮಸಮರ್ಥನೆ ಎಂದೊಡನೆ ಶಸ್ತ್ರಬಲ ಮತ್ತು ಶಸ್ತ್ರಬಲದ ಪ್ರಯೋಗಗಳು ಪ್ರಾಥಮಿಕ ಸ್ಥಿತಿಗೇರುತ್ತವೆ. ಶಸ್ತ್ರಬಲದ ಜೊತೆಗೆ ಮೊದಲೇ ಹೇಳಿದಂತೆ ಇತರ ಬಲಗಳ ಸಾಮರ್ಥ್ಯ ಮತ್ತು ಸಮನ್ವಯ, ಸಮಗ್ರತೆ ಬೇಕು. ಐತಿಹಾಸಿಕವಾಗಿ ನಾವು ಈ ಆಯಾಮಗಳನ್ನು ಅಭ್ಯಸಿಸಿದ್ದೇವೆಯೆ? ಇವುಗಳ ದೀರ್ಘ ಚಿಂತನೆಯಾಗಿದೆಯೆ? ಪರದೇಶೀಯ ದಾಳಿಗಳನ್ನು ನಾವು ನಮ್ಮ ದೇಶದ ಮಧ್ಯದವರೆಗೆ ಅವರು ನುಗ್ಗಿ ಬಂದ ಮೇಲೆಯೇ ಎದುರಿಸಿದ್ದೇವೆ (ಪಾನಿಪತ್), ಗಡಿಯಾಚೆ ಅಥವಾ ಗಡಿಯಲ್ಲಿ ಅಲ್ಲ. ಸ್ವರಕ್ಷಣೆಯ ಮೂಲಗುಟ್ಟು ಎಂದರೆ ಪೂರ್ವಭಾವಿಯಾಗಿ ಎರಗುವುದು. ಗಡಿಯಾಚೆ ಯುದ್ಧಕ್ಕಿಳಿಯುವುದು, ಕೊನೆಯ ಪಕ್ಷ ಮರುದಾಳಿ ಮಾಡಿ ಕಳೆದುಕೊಂಡುದನ್ನು ಮರಳಿ ಪಡೆಯುವುದು. ಈ ಮೂರೂ ಮೂಲ ಗುಟ್ಟುಗಳನ್ನು ಐತಿಹಾಸಿಕವಾಗಿ ನಾವು ಎಸಗಿಯೇ ಇಲ್ಲ. ದಾಳಿಗಾರರಿಂದ ಕಲಿಯಲೂ ಇಲ್ಲ. ಎಂದೇ ಸಾವಿರ ವರ್ಷ ಗುಲಾಮಿಯೂ ಆಯಿತು. ಈಗ ರಾಷ್ಟ್ರದ್ದು ಹೊಸ ಚಿಂತನ, ಆಧುನಿಕ ಜೀವನ, ಪೈಪೋಟಿಯದು. ಈಗಲಾದರೂ ಸುರಕ್ಷಾ ಕಾಳಗದ ಮೂಲಗುಟ್ಟನ್ನು ಅನುಸರಿಸುವ ತಯಾರಿ ಇದೆಯೇ, ಆ ಮನೋಭಾವ, ವಿಚಾರಸರಣಿ ಇದೆಯೇ? ಇತರ ರಾಷ್ಟ್ರಗಳು ಹಾಗೆ ಮಾಡಗೊಡಬಹುದೆ? ಹಾಗೆ ಅವುಗಳನ್ನು ಮನವೊಲಿಸಿ ತಟಸ್ಥರಾಗಿಸಬಹುದೇ ಅಥವಾ ಪರರಾಷ್ಟ್ರ ಹಸ್ತಕ್ಷೇಪವನ್ನು ನಾವು ತಡೆಯಬಹುದೇ? ಅಂಥ ಶಕ್ತಿ ಇದೆಯೆ? ಇದೂ ಒಂದು ಶಸ್ತ್ರಬಲದ ಅಂಗವೇ ಅಲ್ಲವೆ?
ಶಸ್ತ್ರಪ್ರಯೋಗ (ಅಂದರೆ ಯುದ್ಧ) ಎಂದೊಡನೆ ಅನೇಕ ಪ್ರಶ್ನೆಗಳೇಳುತ್ತವೆ. ಯುದ್ಧ, ಶಸ್ತ್ರಶಕ್ತಿ ಪ್ರಯೋಗ ಯಾವ ಗುರಿ ಸಾಧನೆಗಾಗಿ, ಎಷ್ಟು ವ್ಯಾಪ್ತಿಯಲ್ಲಿ, ಎಷ್ಟು ಸಮಯದೊಳಗೆ, ವಿಧಾನವೆಂತಹದ್ದು, ಪರ್ಯಾಯವಿದೆಯೋ, ಲಾಭ-ಲುಕ್ಸಾನುಗಳೆಷ್ಟು, ಬಲಿದಾನದ ಮಿತಿಯೆಷ್ಟು, ಗುರಿಸಾಧನೆಯನ್ನು ಅಳೆಯುವುದೆಂತು, ಯಾರು? – ಇತ್ಯಾದಿ. ಇದನ್ನೆಲ್ಲ ಯೋಜಿಸಲು, ಅಳೆಯಲು, ನಿರ್ದೇಶಿಸಲು ಎಂತಹ ಸಂಘಟನೆ, ವ್ಯವಸ್ಥೆ ಬೇಕು? ನಮ್ಮ ಶಕ್ತಿ, ಮಿತ್ರರು, ಎದುರಾಳಿ ಶಕ್ತಿ, ತಟಸ್ಥರು ಎಷ್ಟು? ಯುದ್ಧ, ಬಲಿದಾನ ಎಂದೊಡನೆ ಭಾರತೀಯರ ಎಣಿಕೆ ಸೈನ್ಯ, ಸೈನಿಕರ ಶೌರ್ಯ, ಬಲಿದಾನಗಳ ಕಡೆಗೆಯಷ್ಟೇ ಹೋಗುತ್ತದೆ. ಇದು ನಿಚ್ಚಳ. ಅವನಿಗಿತ್ತ, ಲಭ್ಯವಿದ್ದ ಸಮರ ಸೌಕರ್ಯಗಳ ಕಡೆಗೆ, ಶಸ್ತ್ರಾಸ್ತ್ರಗಳ ಕಡೆಗೆ ಲಕ್ಷ್ಯ ಹೋಗುವುದಿಲ್ಲ. ಸೈನ್ಯದ ತೈನಾತಿಗೆ, ಚಲನವಲನಕ್ಕೆ ಬೇಕಾಗುವ ಮೂಲಸೌಕರ್ಯ ಅಂದರೆ ರಸ್ತೆ-ರೈಲುಗಳು, ಮದ್ದುಗುಂಡು, ಗೋದಾಮುಗಳು, ಉಳಿದುಕೊಳ್ಳುವ ಸ್ಥಾನಗಳು, ಬೀಡುಬಿಡುವ ಜಾಗಗಳು, ತೋಪುಖಾನೆಗಾಗಿ ವ್ಯೂಹರಚನಾ ವ್ಯವಸ್ಥೆ, ವರ್ಕ್ಶಾಪ್ಗಳು, ಹೆಲಿಪ್ಯಾಡ್ಗಳು ಇತ್ಯಾದಿಗಳ ಕಡೆಗೆ ಅಲಕ್ಷ್ಯ ಅಥವಾ ದುರ್ಲಕ್ಷ್ಯ. ಇವೆಲ್ಲ ನಮ್ಮ ಪಾಕ್ ಮತ್ತು ಚೀನಾದೊಡನೆಯ ಪರ್ವತೀಯ ಗಡಿಪ್ರದೇಶದಲ್ಲಿ ಅವಶ್ಯ. ನಾವಿದರಲ್ಲಿ ಬಹಳ ಹಿಂದುಳಿದಿದ್ದೇವೆ. ಅಲ್ಲದೆ ಸಮರ್ಪಕತೆ, ಬಲಿದಾನ ಸೈನಿಕನೊಬ್ಬನದೇ ಆಗಬೇಕೆ? ಯುದ್ಧದ ತಯಾರಿಗೆ, ಸಾಮಗ್ರಿ ದಾಸ್ತಾನಿಗೆ, ಮೂಲಸೌಕರ್ಯ ರಚನೆಗೆ ದುಡ್ಡು ಬೇಕು. ಜನತೆಯ ದುಡಿಕೆ ಬೇಕು, ಅವರ ಬಲಿದಾನವೂ ಬೇಕು. ಪಾಕಿಸ್ತಾನದ ಮಾಜೀ ಪ್ರಧಾನಿ ಭುಟ್ಟೋ ಅಂದಿದ್ದು ನೆನಪಿದೆಯೇ – “ನಾವು ಹುಲ್ಲು ತಿಂದಾದರೂ ಅಣ್ವಸ್ತ್ರವನ್ನು ತಯಾರಿಸುತ್ತೇವೆ” ಎಂದು; ಆತ ಅದನ್ನು ಮಾಡಿಯೂ ತೋರಿಸಿದ. ಇತ್ತೀಚಿನ ಸೆಮಿನಾರೊಂದರಲ್ಲಿ ಅರ್ಥಶಾಸ್ತ್ರಜ್ಞರೊಬ್ಬರು ಭಾರತೀಯ ಯುದ್ಧ ವ್ಯವಸ್ಥೆಯ ಸಮಗ್ರತೆಗೆ ದೇಶದ ಜಿಡಿಪಿ ಹತ್ತು ಪ್ರತಿಶತ ವೃದ್ಧಿಗೊಳ್ಳಬೇಕು ಮತ್ತು ಸೈನ್ಯಗಳಿಗಾಗಿ ಜಿಡಿಪಿಯ ೨೦ ಪ್ರತಿಶತ ಬಜೆಟ್ಟಿನಲ್ಲಿ ಸೇರಿಸಬೇಕು ಎಂದು. ಇದು ನಾಗರಿಕರ ತ್ಯಾಗವಾಗಬೇಕಲ್ಲ? ಜನತೆ, ಸರಕಾರ, ನಮ್ಮ ಪ್ರಜಾಸತ್ತೆ ಇದಕ್ಕೆ ಒಪ್ಪೀತೆ? ಯುದ್ಧ ಇದು ಬರಿ ಸೈನಿಕನದಲ್ಲ, ನಾಗರಿಕನದೂ ಕೂಡ.
ಯುದ್ಧ ಸಿದ್ಧತೆಯೇ ಜಾಣತನ
ಇಂದು ನಾವು ನಮ್ಮ ಸಶಸ್ತ್ರದಳಗಳಿಗೆ ಅಗತ್ಯವಾದ ಸಮರಸಾಮಗ್ರಿಯ, ಶಸ್ತ್ರಾಸ್ತ್ರಗಳ ೭೦ ಪ್ರತಿಶತ ಆಮದು ಮಾಡಿಕೊಳ್ಳುತ್ತಿದ್ದೇವೆ; ಹೇಳುವುದು ಮಾತ್ರ ನಮ್ಮಲ್ಲಿಯೇ ತಯಾರಿಸಿದ್ದೆಂದು. ಇದು ತಪ್ಪು ಸಮಜಾಯಿಷಿ, ಆತ್ಮವಂಚನೆ. ನಾಳೆ ಯುದ್ಧದಲ್ಲಿ ತಮ್ಮ ನಿರ್ಯಾತವನ್ನು ಅವರು ಬಂದ್ ಮಾಡಿದರೆ? ಅಥವಾ ಕಿಮ್ಮತ್ತನ್ನು ಗಗನಕ್ಕೇರಿಸಿದರೆ? ಹಿಂದೆ ನಡೆದ ನಮ್ಮ ಪ್ರತಿಯೊಂದು ಯುದ್ಧದಲ್ಲೂ ಈ ಸ್ಥಿತಿಯನ್ನು ನಾವು ಎದುರಿಸಬೇಕಾಗಿ ಬಂದಿದೆ. ಇದನ್ನು ಹೇಗೆ ತೂಗಿಸಿಕೊಂಡು ಹೋಗುವುದು? ಅವಸಾನಘಾತವಲ್ಲವೆ? ಎಲ್ಲ ಸರಕಾರಗಳು ಈವರೆಗೆ ಒಳ್ಳೇ ಎದೆ ತಟ್ಟಿ ಜನತೆಯ ಮನೋಬಲ ಬೆಳೆಸಲಿಕ್ಕೆಂದು “ದುಡ್ಡಿಗೇನೂ ಚಿಂತೆ ಬೇಡ, ಸಮಯ ಬಂದರೆ ದುಡ್ಡು ಕೊಟ್ಟೇ ಕೊಡುತ್ತೇವೆ” ಎಂದು ಘೋಷಿಸುತ್ತಲೇ ಬಂದಿವೆ. ಇದು ಮನೆಗೆ ಬೆಂಕಿ ಬಿದ್ದಾಗ ಬಾವಿ ತೋಡತೊಡಗುವ ಸಂಕಲ್ಪವಲ್ಲವೆ? ಸೇನೆಯ ತಯಾರಿ, ಶಸ್ತ್ರಾಸ್ತ್ರಗಳ ಖರೀದಿ ಅಥವಾ ಉತ್ಪಾದನೆ ಮತ್ತು ಅವುಗಳ ಸೇನೆಯ ಯುದ್ಧಯುಕ್ತಿಗಳಲ್ಲಿ ಹೆಣಿಕೆ ಇತ್ಯಾದಿಗಳಿಗೆ ೫ರಿಂದ ೧೦ ವರ್ಷ ಸಮಯ ಹಿಡಿಯುತ್ತದೆ. ಇದನ್ನು ಎಲ್ಲರೂ ಮರೆತೇಬಿಡುತ್ತಾರೆ. ಶಸ್ತ್ರಾಸ್ತ್ರಗಳ ಮತ್ತು ಸೇನೆಯ ತಯಾರಿ ಅಲ್ಲಾದೀನನ ದೀಪದಂತೆ ತತ್ಕ್ಷಣ ಫಲಿಸುವುದಿಲ್ಲವಲ್ಲ! ಯುದ್ಧ ಎದುರು ಧುತ್ತೆಂದು ನಿಂತಾಗಲೇ ಆಧುನಿಕ ಸಮರಸಿದ್ಧತೆ ಎಂಬ ಪರಿಕಲ್ಪನೆಯಂತಹ ಆತ್ಮವಂಚನೆ ಮತ್ತೊಂದಿಲ್ಲ. ಶಾಂತಿಸಮಯದಲ್ಲಿ ಸಿದ್ಧತೆ ಮಾಡಿಕೊಳ್ಳುವುದೇ ಜಾಣತನ. ಏಕೆಂದರೆ ಅಂಥ ಸಿದ್ಧತೆ, ಸಾಮರ್ಥ್ಯಗಳಿಂದಲೂ ನಾವು ಯುದ್ಧವನ್ನು ತಪ್ಪಿಸಬಹುದು, ಹಿತಾಸಕ್ತಿಯನ್ನು ಗಳಿಸಬಹುದು, ಸುರಕ್ಷೆಯನ್ನು ಕಾಪಾಡಿಕೊಳ್ಳಬಹುದು. ಈ ನೈಜತೆ ನಮ್ಮ ರಾಷ್ಟ್ರೀಯ ಮಾನಸಿಕತೆ, ಚಾಣಾಕ್ಷತೆಯಲ್ಲೇ ಕಂಡುಬರುವುದಿಲ್ಲ. ಅಶೋಕನು ಕಳಿಂಗ ಯುದ್ಧಾನಂತರ ಭಾರತವರ್ಷವನ್ನು ಹಸ್ತಗತ ಮಾಡಿಕೊಂಡದ್ದು ನೈತಿಕ ಅಭಿಯಾನದಿಂದ ಎನ್ನಲಾಗುತ್ತದೆ. ಆದರೆ ಅವನು ತನ್ನ ಸೈನ್ಯವನ್ನು ವಿಸರ್ಜಿಸಲಿಲ್ಲವಲ್ಲ? ಶಸ್ತ್ರಬಲ ಅವನ ನೈತಿಕಬಲದ ಹಿಂದೆ ಇದ್ದೇ ಇರಲಿಲ್ಲವೆ? ನಾವು ನಮ್ಮ ತಾತ್ತ್ವಿಕ, ನೈತಿಕ ಔನ್ನತ್ಯದ ಜಿಗಿತದಲ್ಲಿ ವಾಸ್ತವವನ್ನು ಸಹಜವಾಗಿ ಮರೆತುಬಿಡುತ್ತೇವಲ್ಲ! ಇದು ನಮ್ಮ ಬಲಪ್ರಯೋಗದ ದೌರ್ಬಲ್ಯವಾಗಿದೆ. ೧೧೨ ಕೋಟಿ ಜನಸಂಖ್ಯೆ ನಮ್ಮದು, ೪೦ ಪ್ರತಿಶತ ತರುಣರು, ೧೨ ಲಕ್ಷ ಸೈನ್ಯ. ಇಷ್ಟಾಗಿಯೂ ನಮ್ಮ ಶಕ್ತಿಯ ಹತ್ತಂಶದಷ್ಟು ಶಕ್ತಿಯಿದ್ದ ಪಾಕಿಸ್ತಾನ ನಮ್ಮನ್ನು ದಿನಂಪ್ರತಿ ಕುಕ್ಕುತ್ತಿದೆ, ಭಯೋತ್ಪಾದಕ ಹಾವಳಿಗೈಯುತ್ತಿದೆ, ಚೀನದೊಡಗೂಡಿ ನಮ್ಮನ್ನು ಅಧೀರಗೊಳಿಸುತ್ತಿದೆ. ಗಣರಾಜ್ಯದಿವಸದ ಸಶಸ್ತ್ರಪಡೆಗಳ ಪರೇಡಿನಲ್ಲಿ ನಮ್ಮ ಶಸ್ತ್ರಾಸ್ತ್ರಗಳ, ಸೈನ್ಯಬಲದ ಪ್ರದರ್ಶನದಿಂದ ನಾವು ಪ್ರಭಾವಿತರಾಗಬಹುದು, ಎದೆಯುಬ್ಬಿಸಬಹುದು, ಆದರೆ ಪಾಕ್-ಚೀನದ ಹಾವಳಿಯಿಂದ ಮುಕ್ತಿಯಿದೆಯೆ?
ಕೆಲವು ವರ್ಷಗಳ ಹಿಂದೆ ಆಗಿನ ಸೇನಾಪ್ರಮುಖರು ನಮ್ಮ ಸೈನ್ಯದಲ್ಲಿ ಮದ್ದುಗುಂಡುಗಳ ತೀವ್ರ ಕೊರತೆ, ತೋಪುಗಳ ಕೊರತೆ, ಕತ್ತಲಲ್ಲಿ ನೋಡಬಹುದಾದ ದೃಷ್ಟಿಯಂತ್ರಗಳ ಕೊರತೆ, ಮಿಸೈಲ್ಗಳ ಹಳೆತ, ಆಧುನಿಕ ಟಾಟ್ರಾಗಳಂಥ ಗಾಡಿಗಳ ಕೊರತೆ ಇತ್ಯಾದಿಗಳ ಬಗ್ಗೆ ಸರಕಾರಕ್ಕೆ ಬರೆದರೆ ಎಲ್ಲ ರಾಜಕೀಯ ಪಾರ್ಟಿಗಳೂ ಅವರ ಮೇಲೆಯೇ ಎರಗಿದವು, ತನ್ನ ಗಡಿ ಮೀರಿದನು ಎಂದು. ಇದಕ್ಕೂ ಮೊದಲು ನೌಕಾಸೇನಾಧ್ಯಕ್ಷರು ಖಾಡಾಖಾಡಿಯಾಗಿ ಹೇಳಿಕೆ ಕೊಟ್ಟಿದ್ದೆಂದರೆ ಚೀನದೊಡನೆ ಯುದ್ಧವಾದಲ್ಲಿ ನಮ್ಮ ನೌಕಾಸೇನೆ ಅದನ್ನು ಜಯಿಸಲಾರದು ಎಂದು. ಜೊತೆಗೆಯೇ ವಾಯುಸೇನಾಧ್ಯಕ್ಷರು ಹೇಳಿದ್ದೆಂದರೆ ನಮ್ಮ ವಿಮಾನ ಸ್ಕ್ವಾಡ್ರನ್ಗಳ (ಒಂದು ಸ್ಕ್ವಾಡ್ರನ್ನಲ್ಲಿ ಸುಮಾರು ೧೮ ವಿಮಾನಗಳು) ಸಂಖ್ಯೆ ೪೨ರಿಂದ ೨೮ಕ್ಕೆ ಇಳಿದಿದೆ. ಮಿಗ್ ವಿಮಾನಗಳು ಹಳೆಯವಾಗಿವೆ, ಅವುಗಳ ಉತ್ಪಾದನೆಯನ್ನೇ ರಷ್ಯಾ ಸಮಾಪ್ತಗೊಳಿಸಿದೆ, ಅವುಗಳ ಸ್ಪೇರ್ ಪಾರ್ಟ್ಸ್ ಕೂಡ ದೊರೆಯುವುದಿಲ್ಲ. ಇನ್ನು ಐದು ವರ್ಷಗಳಲ್ಲಿ ಸ್ಕ್ವಾಡ್ರನ್ ಸಂಖ್ಯೆ ೨೪ಕ್ಕೂ ಇಳಿಯುತ್ತದೆ. ಈ ಕೊರತೆಗಳನ್ನು ಪೂರೈಕೆ ಮಾಡಲು ಮತ್ತು ಆಧುನಿಕ ವಿಮಾನಗಳನ್ನು ತಂದುಕೊಳ್ಳುವ ಪ್ರಯತ್ನವನ್ನು ಸರಕಾರವು ಮಾಡಿಯೇ ಇಲ್ಲ. ಹಾಗಾಗಿ ಯುದ್ಧವೇನಾದರೂ ಜರುಗಿದಲ್ಲಿ ನಮ್ಮ ಹತ್ತಿರ ಇದ್ದ (ಹಳೆಯ, ಕಡಮೆ ಸಂಖ್ಯೆಯ) ಶಸ್ತ್ರಾಸ್ತ್ರಗಳೊಂದಿಗೆಯೇ ನಾವು ಹೋರಾಡಬಲ್ಲೆವು ಎಂದು. ಇದರ ಅರ್ಥವೇನು? ನಾವು ಹೋರಾಡುತ್ತೇವೆ, ಬಲಿದಾನಕ್ಕೆ ಸಿದ್ಧರಿದ್ದೇವೆ, ವಿಜಯದ ಬಗ್ಗೆ ಹೇಳಲಾರೆವು ಎಂದೇ ಅಲ್ಲವೆ? ಇದು ಯಾವ ಥರದ ಶಸ್ತ್ರಸನ್ನದ್ಧತೆ?
ಈವರೆಗೂ ನಮ್ಮ ಶಸ್ತ್ರಸೇನೆಗಳ ಆಧುನೀಕರಣವಾಗಿಲ್ಲ. ಕಡಮೆಯಾಗತೊಡಗಿದ ಮತ್ತು ಹಳೆಯವಾಗತೊಡಗಿದ ಶಸ್ತ್ರಾಸ್ತ್ರಗಳ ಮೇಲೆಯೇ ನಮ್ಮ ಶಕ್ತಿ ಆಧಾರಿತವಾಗಿ ಉಳಿದಿದೆ. ಹೊಸ ಸರಕಾರ ಕೆಲವೊಂದೇನೋ ಆಯಾತಗಳ ಸಂಧಿಯನ್ನು ಮಾಡಿಕೊಂಡಿದೆ. ಅವು ಫಲಿಸಲು ಇನ್ನೂ ೫ರಿಂದ ೧೦ ವರ್ಷಗಳು ಬೇಕು. ವಿಮಾನಗಳ ಸಲುವಾಗಿ ದೃಢವಾದ ವಿನಿಮಯವೂ ಸುರುವಾಗಿಲ್ಲ, ಮಾತಾಗಿದೆಯಷ್ಟೇ. ಇನ್ನು ನಮ್ಮ ಗಡಿಗಳಲ್ಲಿ ರಸ್ತೆಗಳಾಗಬೇಕು. ವಿಮಾನ ನಿಲ್ದಾಣಗಳಾಗಬೇಕು, ಗೋದಾಮುಗಳಾಗಬೇಕು, ಗಡಿ ಜನತೆಯ ಮಾನಸಿಕ ಸಿದ್ಧತೆಯಾಗಬೇಕು.
ಇರಲಿ ಯುದ್ಧವಿದ್ಯೆಗೆ ಆದ್ಯತೆ
ಇಷ್ಟೆಲ್ಲ ಆದರೂ, ಆದ ಮೇಲೂ ಶಸ್ತ್ರಬಲದ ಉಪಯೋಗ, ಅದರ ಪ್ರಯೋಗಕ್ಕೆ ಸರಕಾರದ ಧೈರ್ಯ, ನಿಶ್ಚಯ, ಜಿಗುಟು ಬೇಕು. ಸೇನೆಗಳಲ್ಲಿ, ನಾಯಕತ್ವದಲ್ಲಿ ಆ ಪ್ರಕಾರದ ಯುದ್ಧತಂತ್ರ ಬೇಕು, ಸೃಜನಶೀಲತೆ, ನಾವೀನ್ಯ ಬೇಕು. ಯುದ್ಧ, ಶಸ್ತ್ರಶಕ್ತಿಪ್ರಯೋಗ ಇವುಗಳ ಬಗ್ಗೆ ಚಿಂತನ-ಮಂಥನ ನಮ್ಮ ಸಮಾಜದಲ್ಲಿ, ಶಿಕ್ಷಣಸಂಸ್ಥೆಗಳಲ್ಲಿ, ಬುದ್ಧಿಜೀವಿಗಳಲ್ಲಿ ಇಲ್ಲವೆಂದರೂ ನಡೆದೀತು. ಇನ್ನೂ ನಾವು ಗತಕಾಲದ ವೈಭವ, ಪಂಪ ರನ್ನ ಹರಿಹರಾದಿಗಳಲ್ಲೇ ಇದ್ದೇವೆ; ಕನಕಪೀಠ, ಬಸವಪೀಠ, ವಿವೇಕಾನಂದಪೀಠ, ದಲಿತಸಾಹಿತ್ಯ, ನವ್ಯಸಾಹಿತ್ಯ, ಬಂಡಾಯ ಸಾಹಿತ್ಯ ಇತ್ಯಾದಿಗಳಲ್ಲೇ ಡುಬುಕಿ ಹೊಡೆಯುತ್ತೇವೆ. ಇರಲಿ, ಅದೂ ಇರಲಿ. ಮಿಲಿಟರಿ ಸಾಹಿತ್ಯವೇಕೆ ಬೇಡ? ಯುದ್ಧ, ಸೈನ್ಯ, ಸೈನಿಕ, ಶಕ್ತಿಪ್ರಯೋಗ, ಅದರ ತಾಂತ್ರಿಕತೆ, ರಚನೆ, ಪರಿಣಾಮ, ನಿರ್ವಹಣೆ, ಉಪಯೋಗ, ಯುದ್ಧಶಾಸ್ತ್ರ ಇವುಗಳ ಅಭ್ಯಾಸ, ಪ್ರಾಥಮಿಕ ಕಲಿಕೆಗಳೇಕೆ ತ್ಯಾಜ್ಯ ಅಥವಾ ಅನೈಚ್ಛಿಕ ಅಥವಾ ಅನಾವಶ್ಯಕ? ಯುದ್ಧ, ಶಕ್ತಿಪ್ರಯೋಗ ಈ ವಿಷಯದಲ್ಲಿ ನಮ್ಮ ಸ್ನಾಯುಬಲ, ಶೌರ್ಯಗಳ ಕೊರತೆಯಿಲ್ಲ, ಕುಂದು ಕಂಡುಬರುವುದು ಬುದ್ಧಿಬಲದಲ್ಲಿ, ಬೌದ್ಧಿಕ ವಿಶ್ಲೇಷಣೆ, ಪರಂಪರೆಗಳಲ್ಲಿ, ಸಮರ ತತ್ತ್ವಾನ್ವೇಷಣೆಯಲ್ಲಿ. ಇದರ ಪೂರೈಕೆ ಹೇಗೆ, ಎಂತು?
ನಮ್ಮ ಭಾರತೀಯ ಸಮರತತ್ತ್ವದ ಅರಿವು ಎಂದರೆ ನಮ್ಮ ಸೈನಿಕರ ಶೌರ್ಯವನ್ನು ಹೊಗಳುವುದು, ಮೃತಸೈನಿಕರ ಗೌರವೀಕರಣ, ಸೈನಿಕನನ್ನು ಹುರಿದುಂಬಿಸುವುದು. ಅವನ ಯುದ್ಧ ಆವಶ್ಯಕತೆಗಳ ಕಡೆಗೆ, ಸಮರಸಾಮಗ್ರಿಯ ಆಧುನೀಕರಣದ ಕಡೆಗೆ, ರಾಷ್ಟ್ರೀಯ ಸುರಕ್ಷೆಯ ಬಾಧ್ಯತೆಗಳ ಕಡೆಗೆ ಲಕ್ಷ್ಯ ಹೋಗುವುದಿಲ್ಲ. ಹೀಗೆ ಹುರಿದುಂಬಿದ ಸೈನಿಕ, ಆಧುನಿಕ ಯುದ್ಧಸೌಕರ್ಯಗಳಿಲ್ಲದವ, ಶತ್ರುವಿನ ಗುಂಡಿಗೆ ತುತ್ತಾಗಿ ಹುತಾತ್ಮನಾಗುತ್ತಾನೆಯೇ ಹೊರತು ವಿಜಯದ ನಿಶ್ಚಿತತೆಯನ್ನು ತರಲಾರ. ಹುತಾತ್ಮರ ಬಾಹ್ಯಗೌರವೀಕರಣವೇ ನಮ್ಮ ಅರಿವಾಗಿದೆಯಷ್ಟೇ.
ಗತಶತಮಾನದಲ್ಲಾದ ಮಹಾಯುದ್ಧಗಳಂತೆ ಈಗಿನ ದಿನಗಳಲ್ಲಿ, ಈಗಿನ ಜಗದ್ವ್ಯಾಪಾರದಲ್ಲಿ ಆಗುವುದು ಅಸಾಧ್ಯ. ಹಾಗೇನಾದರೂ ಆಗುವುದನ್ನು ತಡೆಯಲೆಂದೇ ಆಧುನೀಕರಣಗೊಂಡ ಶಕ್ತಿಯುತ, ಸದಾ ಸನ್ನದ್ಧ, ಅಣ್ವಸ್ತ್ರಸಹಿತವಾದ ಸಶಸ್ತ್ರಬಲಗಳ ಸಂಘಟನೆ ಮತ್ತು ಅವುಗಳನ್ನು ಉಪಯೋಗಿಸುವ ಯುಕ್ತಿ, ತಂತ್ರ, ವಿಧಾನಗಳ, ಸ್ಪಷ್ಟೀಕರಣದ ಪ್ರದರ್ಶನ ಇವು ನಮ್ಮ ಎದುರಾಳಿಗಳಿಗೆ ಮತ್ತು ಜಗತ್ತಿಗೆ ಮನದಟ್ಟಾಗುವಂತಿರಬೇಕು. ಈ ಸನ್ನದ್ಧತೆ ನಮ್ಮಲ್ಲಿದೆಯೆ? ಭೂ-ನೌಕಾ-ವಾಯುಸೇನಾಧ್ಯಕ್ಷರು ಹೇಳಿದ್ದೇನು? ಮಹಾಯುದ್ಧಗಳಾಗದಿದ್ದರೂ ಇತರ ಅನೇಕ ಚಿಕ್ಕಪುಟ್ಟ ಯುದ್ಧತಂತ್ರಗಳಿವೆಯಲ್ಲ? – ಸೀಮಿತ ಯುದ್ಧ (ಕ್ಷೇತ್ರ, ವೇಳೆ, ಗುರಿಗಳಿಗೆ ಸೀಮಿತ: ಕಾರ್ಗಿಲ್, ಬಂಗ್ಲಾಯುದ್ಧ); ಅಪ್ರತ್ಯಕ್ಷ ಯುದ್ಧ (ಈಗ ಪಾಕಿಸ್ತಾನ ಮಾಡುತ್ತಿರುವಂತೆ); ಬಂಡಾಯ ವಿರೋಧಿ ಯುದ್ಧ (ನಾಗಾಲ್ಯಾಂಡ್, ಮಣಿಪುರ, ಕಾಶ್ಮೀರದಲ್ಲಿ, ಶ್ರೀಲಂಕೆಯಲ್ಲಿ ಮಾಡುತ್ತಿರುವಂತೆ/ಮಾಡಿದಂತೆ); ಭಯೋತ್ಪಾದಕವಿರೋಧಿ (ಆಫಘನಿಸ್ತಾನ, ಇರಾಕ್, ಸಿರಿಯಾಗಳಲ್ಲಿ ನಡೆಯುತ್ತಿದ್ದಂತೆ), ನಿಮ್ನ ತೀವ್ರತೆಯ ಯುದ್ಧ (ಇರಾನ್, ಇರಾಕ್ ಯುದ್ಧದಂತೆ). ಸದ್ಯದ ಸ್ಥಿತಿಯೆಂದರೆ ಚೀನಾ ಮತ್ತು ಪಾಕಿಸ್ತಾನಗಳು ನಮ್ಮ ಗಡಿಯಲ್ಲಿ ತಾವು ತಾವಾಗಿಯೋ ಅಥವಾ ಜೊತೆಗೂಡಿಯೋ ನಮ್ಮನ್ನು ಚಿಟುಕುಮುಳ್ಳಾಡಿಸುತ್ತಿವೆ, ಗಡಿಯಲ್ಲಿ ನೆಲವನ್ನು ಕಬಳಿಸುತ್ತಿವೆ, ಗುಂಡುಮಳೆ ಸುರಿಸುತ್ತ ನಮ್ಮ ನಾಗರಿಕರನ್ನು ಕೊಲ್ಲುತ್ತಿವೆ. ಅಷ್ಟೇ ಅಲ್ಲ, ಭಯೋತ್ಪಾದಕ ಕಾರ್ಯಗಳನ್ನು ಕೈಗೊಳ್ಳುತ್ತಿವೆ. `ಸಾವಿರ ಗಾಯಗಳನ್ನು ಮಾಡಿ’ ರಕ್ತ ಹೀರುತ್ತಿದ್ದಾರೆ. ಆಫಘನಿಸ್ತಾನದಲ್ಲಿ ನಮ್ಮ ಮಿತ್ರಕಾರ್ಯವನ್ನು ಕಾಯ್ದುಕೊಳ್ಳುವುದಕ್ಕಾಗಿ ಶಕ್ತಿಪ್ರಯೋಗದ ಆವಶ್ಯಕತೆ ಎದುರಾಗತೊಡಗಿದೆ. ಆಂತರಿಕಸ್ಥಿತಿಯಲ್ಲಿ ಕಾಶ್ಮೀರ, ನಾಗಾ, ಬೋಡೋ, ಮಣಿಪುರಿ ಬಂಡಾಯಗಳನ್ನು ಎದುರಿಸಬೇಕಾಗಿದೆ. ಇವೆಲ್ಲವುಗಳನ್ನು ಎದುರಿಸುವ ಶಕ್ತಿ, ಯುಕ್ತಿ, ವಿಧಾನ, ಧೈರ್ಯಗಳನ್ನು ಹೆಣೆಯಬೇಕಾಗಿದೆ. ಪರಿಣಾಮಕಾರಿಯಾಗಿ ಉಪಯೋಗಿಸಬೇಕಾಗಿದೆ. ಇಂಥ ಸಮರಯುಕ್ತಿಗಳನ್ನು ಸೃಷ್ಟಿಸಬೇಕಾಗಿದೆ. ಆರ್ಥಿಕ, ರಾಜಕೀಯ, ಸಾಮಾಜಿಕ, ತಾಂತ್ರಿಕ ಕಾರ್ಯವಿಧಾನಗಳನ್ನು ಶಸ್ತ್ರಬಲದ ಸುತ್ತ ಹೆಣೆಯಬೇಕಾಗಿದೆ.
೧೯೪೭-೪೮ರ ಪಾಕ್ ಯುದ್ಧದಲ್ಲಿ ನಮ್ಮ ಶಕ್ತಿ-ಯುಕ್ತಿಗಳು ಚುರುಕಾಗಿದ್ದವು. ೧೯೬೨ರ ಚೀನಾ ಯುದ್ಧದಲ್ಲಿ ನಮ್ಮ ರಾಷ್ಟ್ರೀಯ ಅಧಃಪತನವಾಯ್ತು. ೧೯೬೫ರ ಪಾಕ್ಯುದ್ಧದಲ್ಲಿ ಅಂಥದ್ದೇನೂ ನೈಪುಣ್ಯ ತೋರಿಸದೇ ಪಾಕ್ನೊಡನೆ ತಾಟಸ್ಥ್ಯಕ್ಕೆ ಬಂದು ಮುಟ್ಟಿದೆವು. ೧೯೭೧ರ ಯುದ್ಧದಲ್ಲಿ ಯುಕ್ತಿ, ಧೈರ್ಯ, ಚಾಣಾಕ್ಷತೆಗಳ ಪ್ರದರ್ಶನವಾಯಿತು. ೧೯೯೯ರ ಕಾರ್ಗಿಲ್ ಯುದ್ಧದಲ್ಲಿ ಪುನಃ ಯಾವ ಯುಕ್ತಿ-ಚಾಣಾಕ್ಷತೆಗಳನ್ನೂ ತೋರದೆ ಶಾಲಾಪಾಠದ ರೀತಿಯಲ್ಲಿ ಸಾಂಪ್ರದಾಯಿಕ ಸಮರನೀತಿಯೇ ನಮ್ಮದಾಯಿತು. ಬಂಡಾಯವಿರೋಧಿ ಯುದ್ಧದಲ್ಲಿ ನಾವು ಈ ೬೦ ವರ್ಷಗಳಿಂದ ಒದ್ದಾಡುತ್ತಿದ್ದೇವೆ. ಸಶಸ್ತ್ರಸೇನಾ ವಿಶೇಷ ಅಧಿಕಾರ ಕಾಯದೆ(AFSPA)ಯ ಅಡಿಯಲ್ಲೇ ಜಗ್ಗಾಟ ನಡೆದಿದೆ. ಅದೊಂದು ದೊಡ್ಡ ತಲೆನೋವು.
ಇವೆಲ್ಲಕ್ಕೆ ನಾವು ಸಿದ್ಧರಿದ್ದೇವೆಯೆ? ಸಿದ್ಧತೆಯಿದೆಯೇ? ಮನೋಬಲ, ತಾಂತ್ರಿಕಬಲಗಳು ಇವೆಯೆ? ಆಧುನಿಕ ಸಮರವೈವಿಧ್ಯವನ್ನು ಅರಿತು, ಅಭ್ಯಸಿಸಿ, ಬೇರೆ ಬೇರೆ ಪ್ರಗತಿಪರ ಹಾಗೂ ಪರಿಣಾಮಕಾರಿ ಯುಕ್ತಿಗಳನ್ನು ಕಂಡುಹಿಡಿದು ಅವನ್ನು ಉಪಯೋಗಿಸುವ ದೃಢತೆ, ನಿಶ್ಚಿತತೆ, ವಿಶ್ವಾಸಗಳು ಬೇಕಾಗಿವೆ. ೭೦ ವರ್ಷಗಳ ಭಯೋತ್ಪಾದನಾ ವಿರೋಧಗಳು ಇನ್ನೂ ನಮ್ಮನ್ನು ಕಾಡುತ್ತಿದ್ದರೂ ಅವುಗಳನ್ನು ಬಿಡಿಸುವ, ತಡೆಯುವ, ಶಮನ ಮಾಡುವ ನಮ್ಮ ಈವರೆಗಿನ ಯುಕ್ತಿ, ಸಮರತಂತ್ರಗಳು ಪರಿಣಾಮಕಾರಿಯಾಗಿಲ್ಲವಲ್ಲ? ಹೊಸ ಸಿದ್ಧತೆ, ಹೊಸ ಮಾರ್ಗ, ಹೊಸ ಸಮರಯೋಜನೆ ಮತ್ತು ಆಧುನೀಕರಣದ ವೃದ್ಧಿಗಳು ಆದಾಗಲೇ ಅಲ್ಲವೇ ಶಾಂತಿಲಾಭ? ಇದಕ್ಕೆಲ್ಲ ನಮ್ಮ ಮಾನಸಿಕ ಅರಿವು, ಆರ್ಥಿಕ ಬೆಲೆತೆರುವುದು ಮತ್ತು ಆಕ್ರಾಮಕ ನೀತಿಗಳು ಬೆಳೆದುಕೊಳ್ಳಬೇಕಲ್ಲ? ಇವೆಲ್ಲವುಗಳ ಪರಿಧಿಯಲ್ಲೇ ಕುಳಿತಿದೆ ನಮ್ಮ ರಾಷ್ಟ್ರೀಯ ಶಸ್ತ್ರಬಲ ಪ್ರಯೋಗ. ನಾವು ಪುರಾತನ ಸಂಸ್ಕೃತಿ, ನಾಗರಿಕತೆಯವರಾದರೂ ಆಧುನಿಕ ರಾಷ್ಟ್ರೀಯತೆ ಮತ್ತು ಬಲಪ್ರಯೋಗದ ವಿಷಯಗಳಲ್ಲಿ ಇದೀಗ ಪ್ರವೇಶಿಸುತ್ತಿದ್ದು, ಅದೆಷ್ಟೋ ಕಲಿಯುವುದು ಉಳಿದಿದೆ. ಪ್ರಾಯೋಗಿಕತೆಯಲ್ಲಿಯೂ ಹಿಂದುಳಿದಿದ್ದೇವಲ್ಲ!