ಜಗತ್ತಿನ ರೀತಿಯೇ ಹೀಗೆ! ಏನೇನೋ ಕಾರಣಕ್ಕೆ ವ್ಯಕ್ತಿಯೊಬ್ಬನು ತಮ್ಮಿಂದ ದೂರವಾಗಲೆಂದು ಆಶಿಸುತ್ತಾರೆ. ಆದರೆ ಅವನು ನಿಜವಾಗಿ ದೂರವಾಗುವ ಸನ್ನಿವೇಶ ಒದಗಿದಾಗ ಆ ವ್ಯಕ್ತಿಯ ಬಗೆಗೆ ತನ್ನ ಅನುಬಂಧ ಅರ್ಥವಾಗುತ್ತದೆ.
ತೆಲುಗು ಮೂಲ: ಕಸ್ತೂರಿ ಮುರಳೀಕೃಷ್ಣ
ಕನ್ನಡಕ್ಕೆ: ಎಸ್.ಆರ್.ಆರ್.
“ಈ ವಿಷಯವನ್ನು ಮಹಾರಾಜನಿಗೆ ತಿಳಿಸುವುದು ಹೇಗೆ?” – ಇದು ಅರಮನೆಯನ್ನು ಸಮೀಪಿಸುತ್ತಿದ್ದ ಹಲವರು ಮಂತ್ರಿಗಳ ಮನಸ್ಸಿನಲ್ಲಿ ಎದ್ದಿದ್ದ ಪ್ರಶ್ನೆ.
ಮುಂದೆ ಇಂತಹ ಒಳ್ಳೆಯ ರಾಜನನ್ನು ಪಡೆಯುವ ಭಾಗ್ಯವು ಕಶ್ಮೀರಕ್ಕೆ ಯಾವಾಗ ಬಂದೀತೋ! – ಎಂದು ಸೇನಾಪತಿ ಯೋಚಿಸತೊಡಗಿದ್ದ.
ರಾಜನ ವಸತಿಯಾಗಿದ್ದರೂ ವಾಸ್ತವವಾಗಿ ಕುಟೀರವೇ ಆಗಿತ್ತು ಅದು.
ಮಂತ್ರಿ, ಸೇನಾಪತಿ ಮತ್ತು ಸಂಗಡ ಇದ್ದ ಭಟರು ಕುದುರೆಗಳಿಂದ ಕೆಳಗಿಳಿದರು.
“ಇನ್ನೂ ಪೂರ್ತಿ ಬೆಳಕು ಹರಿದಿಲ್ಲ. ಆದರೂ ಮಹಾರಾಜನು ಆಗಲೇ ಎದ್ದಿರುವಂತಿದೆ.”
ಪೂಜೆಗಾಗಿ ಯೋಗಿಸದೃಶ ಮಹಾರಾಜನು ಗಿಡಗಳಿಂದ ಹೂಗಳನ್ನು ಬಿಡಿಸುತ್ತಿದ್ದ. ಅವನ ಬಾಯಲ್ಲಿ `ಓಂ ನಮಃ ಶಿವಾಯ’ ಜಪ ನುಡಿಯುತ್ತಿತ್ತು. ಮಹಾರಾಜನ ಮುಖ ಪ್ರಸನ್ನವಾಗಿತ್ತು. ಇನ್ನು ಸ್ವಲ್ಪವೇ ಸಮಯದಲ್ಲಿ ಜಗದೀಶ್ವರನ ಪಾದಗಳನ್ನು ಅಲಂಕರಿಸಲಿದ್ದ ಪುಷ್ಪಗಳನ್ನು ತನ್ನ ಕೈ ಈಗ ಹಿಡಿದಿದೆಯೆಂಬುದೇ ಅವನಲ್ಲಿ ಪುಲಕವನ್ನು ಉಂಟುಮಾಡಿತ್ತು.
* * *
ಅದು ಕಲಿಯುಗಾರಂಭವಾಗಿ ೩೦೨೨ನೇ ಸಂವತ್ಸರ (ಎಂದರೆ ಕ್ರಿ.ಪೂ. ೧೧೫).
ಅಂಧ ಯುಧಿಷ್ಠಿರನ ದುಃಶಾಸನ ಕಳೆದ ಮೇಲೆ ಕ್ರಮವಾಗಿ ಪ್ರತಾಪಾದಿತ್ಯ, ಜಲೌಕರ ನಂತರ ಆಳಿದ ತಂಜೀನ-ವಾಕ್ ಪುಷ್ಪಾದೇವಿಯರ ಆಳ್ವಿಕೆಯ ಕಾಲ ಅವಿಸ್ಮರಣೀಯವಾಗಿತ್ತು. ದೇಶದಲ್ಲಿ ಕ್ಷಾಮ ತಲೆದೋರಿದಾಗ ಆ ರಾಜ-ರಾಣಿಯರು ಕೋಶದಲ್ಲಿದ್ದ ಧನವನ್ನೆಲ್ಲ ಪ್ರಜೆಗಳಿಗೆ ವಿತರಿಸಿದುದಲ್ಲದೆ ಪ್ರತಿಮನೆಗೂ ಹೋಗಿ ಜನರ ಕುಶಲವನ್ನು ವಿಚಾರಿಸಿ ಅಗತ್ಯವಿದ್ದ ನೆರವನ್ನು ಏರ್ಪಡಿಸಿದ್ದರು.
ಆದರೆ ಕ್ಷಾಮವು ಅನಿರ್ದಿಷ್ಟ ಕಾಲ ಮುಂದುವರಿದಾಗ ರಾಜನು ಅದಕ್ಕೆ ತನ್ನಲ್ಲಿ ಯಾವುದೋ ದೋಷವೇ ಕಾರಣವಾಗಿದ್ದೀತೆಂದು ಬಾಧೆಗೊಳಗಾಗಿ ಅಗ್ನಿಪ್ರವೇಶ ಮಾಡಲು ನಿಶ್ಚಯಿಸಿದ. ಮಹಾರಾಣಿಯು ಆರ್ತಳಾಗಿ ಪರಮಶಿವನನ್ನು ಪ್ರಾರ್ಥಿಸಿದಳು. ಪವಾಡವೆಂಬಂತೆ ಬೆಳಗಾಗುವ ವೇಳೆಗೇ ಮುಗಿಲು ಮೇಘಾಚ್ಛಾಧಿತವಾಗಿ ಮಳೆಸುರಿಯತೊಡಗಿತು. ಕಶ್ಮೀರವು ಮತ್ತೆ ಸಸ್ಯಶ್ಯಾಮಲೆಯಾಯಿತು.
ತುಂಜೀನ-ವಾಕ್ಪುಷ್ಪಾ ದೇವಿಯರ ಜನಾನುರಾಗಿ ಶಾಸನ ೩೬ ವರ್ಷ ಮುಂದುವರಿದಿತ್ತು.
ಆದರೆ ಆ ರಾಜದಂಪತಿಗಳಿಗೆ ಸಂತಾನ ಇಲ್ಲದಿದ್ದುದರಿಂದ ಬೇರೊಂದು ರಾಜವಂಶಕ್ಕೆ ಸೇರಿದ ವಿಜಯಾಖ್ಯನೆಂಬವನಿಗೆ ಅಭಿಷೇಕ ಮಾಡಲಾಯಿತು. ಅದಾದ ಎಂಟು ವರ್ಷಗಳ ತರುವಾಯ ರಾಜಪಟ್ಟಕ್ಕೆ ಬಂದವನು ಅವನ ಪುತ್ರ ಜಯೇಂದ್ರ. ಜಯೇಂದ್ರನ ಮಂತ್ರಿ ಸಂಧಿಮತಿ.
ಮುಂದೆ ಸಂಧಿಮತಿಯೇ ರಾಜನಾಗುತ್ತಾನೆ ಎಂದು ಆಸ್ಥಾನಿಕರು ಮಾತನಾಡಿಕೊಳ್ಳುತ್ತಿದ್ದುದನ್ನು ಕೇಳಿ ಆಗ್ರಹಗೊಂಡ ರಾಜನು ಸಂಧಿಮತಿಯ ಆಸ್ತಿಯನ್ನು ಸ್ವಾಧೀನಪಡಿಸಿಕೊಂಡು ಅವನನ್ನು ಸೆರೆಯಲ್ಲಿರಿಸಿದ.
ಕೆಲಸಮಯದ ನಂತರ ಮುಂದೆ ಸಂಧಿಮತಿ ರಾಜನಾಗುತ್ತಾನೆಂದು ಇನ್ನೊಬ್ಬ ಪಂಡಿತನೂ ಹೇಳುತ್ತಿದ್ದುದು ರಾಜನ ಗಮನಕ್ಕೆ ಬಂದಿತು. ರಾಜನು ಕೋಪಗೊಂಡು ಮಂತ್ರಿ ಸಂಧಿಮತಿಯನ್ನು ಶೂಲದಿಂದ ಇರಿದು ಕೊಂದು ದೇಹವನ್ನು ಅಡವಿಗೆ ಒಯ್ದು ಬಿಸಾಡಿ ಬರುವಂತೆ ಆಜ್ಞೆ ಮಾಡಿದ.
ಸಂಧಿಮತಿಯ ಗುರು ಈಶಾನಯೋಗಿಯು ತನ್ನ ಶಿಷ್ಯನಿಗೆ ಅಂತ್ಯಸಂಸ್ಕಾರವನ್ನಾದರೂ ಮಾಡಬಯಸಿ ಅವನ ಕಳೇವರ ಎಲ್ಲಿವೆಯೆಂದು ಹುಡುಕಿಕೊಂಡು ಹೋದ. ಕಳೇವರ ದೊರೆತಾಗ ಅದರ ತಲೆಚಿಪ್ಪಿನಲ್ಲಿ ರಂಧ್ರವಿದ್ದು ಗಾಳಿಯಾಡುತ್ತಿದ್ದುದನ್ನು ನೋಡಿ ಆಶ್ಚರ್ಯಗೊಂಡ. ಆ ರಂಧ್ರದೊಳಕ್ಕೆ ದೃಷ್ಟಿನೆಟ್ಟು ನೋಡಿದಾಗ `ಬದುಕಿರುವಷ್ಟು ಕಾಲ ಬಾಧೆಗಳಿಗೆ ಸಿಕ್ಕಿ ಕಾರಾಗೃಹ ವಾಸವನ್ನು ಅನುಭವಿಸುತ್ತಾನೆ. ಶೂಲದಿಂದ ತಿವಿಯಲ್ಪಟ್ಟು ನೆಲಕ್ಕೊರಗುವ ಇವನು ಕಶ್ಮೀರದ ರಾಜನಾಗುತ್ತಾನೆ’ ಎಂದು ಫಾಲಲಿಖಿತ ಕಂಡಿತು.
`ಸತ್ತವನು ಹೇಗೆ ರಾಜನಾದಾನು?’ – ಎಂದು ವಿಸ್ಮಯಕ್ಕೊಳಗಾದ ಈಶಾನಯೋಗಿಯು “ವಿಧಿಯ ಅದ್ಭುತ ಹೇಗಿದ್ದಿತೊ ಯಾರು ಬಲ್ಲರು!” ಎಂದುಕೊಂಡು ಸಂಧಿಮತಿಯ ಶರೀರವನ್ನು ಅಡವಿಯಲ್ಲಿಯೆ ಜೋಪಾನವಾಗಿ ರಕ್ಷಿಸಿದ.
ಮೂವತ್ತೇಳು ವರ್ಷ ಆಳಿ ಜಯೇಂದ್ರನು ಮೃತಪಟ್ಟಾಗ ವಾರಸುದಾರರಿಲ್ಲದೆ ಕಶ್ಮೀರ ಸಿಂಹಾಸನ ರಿಕ್ತವಾಗಿಬಿಟ್ಟಿತು.
ಇತ್ತ ಅಡವಿಯಲ್ಲಿ ಈಶಾನಯೋಗಿಯ ನಿರೀಕ್ಷೆ ಫಲಿಸದಿರಲಿಲ್ಲ.
ಒಂದು ದಿನ ರಾತ್ರಿ ಹಲವರು ಕಾಂತಿಸಂಪನ್ನ ಯೋಗಿನಿಯರು ಬಂದು ಸಂಧಿಮತಿಯ ಅಸ್ಥಿಪಂಜರವನ್ನು ಒಯ್ದರು. ಈಶಾನಯೋಗಿಯು ಅವರನ್ನು ಅನುಸರಿಸಿದ. ಯೋಗಿನಿಯರು ಅಸ್ಥಿಪಂಜರವನ್ನು ವನಾಂತರಾಳದ ಪ್ರದೇಶದಲ್ಲಿ ಇರಿಸಿದರು. ಒಬ್ಬೊಬ್ಬ ಯೋಗಿನಿಯು ಒಂದೊಂದು ಅವಯವವನ್ನು ಸಂಯೋಜಿಸಿದಳು. ಹೀಗೆ ಸಂಪೂರ್ಣ ಪುರುಷಾಕೃತಿ ನಿರ್ಮಾಣವಾಯಿತು. ಅಷ್ಟಪುರಿ ಎಂಬಲ್ಲಿ ಮರಣಸನ್ನನಾಗಿದ್ದ ಒಬ್ಬ ವ್ಯಕ್ತಿಯ ಪ್ರಾಣವನ್ನು ಸಂಗ್ರಹಿಸಿ ತಂದು ಸಂಧಿಮತಿಯ ಶರೀರದಲ್ಲಿ ಪ್ರತಿಷ್ಠೆ ಮಾಡಿದರು.
“ನಮ್ಮ ವಿಶೇಷ ಶಕ್ತಿಯಿಂದ ಈತನನ್ನು ಮತ್ತೆ ಜೀವಿತನನ್ನಾಗಿ ಮಾಡಿದ್ದೇವೆ. ಈಗ ಕಶ್ಮೀರ ಸಿಂಹಾಸನ ರಿಕ್ತವಾಗಿದೆ. ಈತನನ್ನು ಕಶ್ಮೀರದ ರಾಜನನ್ನಾಗಿ ಮಾಡಬೇಕಾಗಿದೆ.”
ಹೀಗೆ ಹೇಳಿ ಸಂಧಿಮತಿಯನ್ನು ಈಶಾನಯೋಗಿಯ ಬಳಿ ಬಿಟ್ಟು ಯೋಗಿನಿಯರು ಅದೃಶ್ಯರಾದರು.
ಆದರೆ ರಾಜಪದವಿಯನ್ನು ಸ್ವೀಕರಿಸಲು ಸಂಧಿಮತಿಯು ನಿರಾಕರಿಸಿ ಹೇಳಿದ:
“ಜಗತ್ತು ಎಷ್ಟು ಅನಿತ್ಯ, ಜೀವನ ಹೇಗೆ ಸ್ವಪ್ನತುಲ್ಯ ಎಂಬುದು ನನ್ನ ಅನುಭವಕ್ಕೆ ಬಂದಿದೆ. ಕ್ಷಣಿಕವಾದ ರಾಜ್ಯಭೋಗಗಳಲ್ಲಿ ನನಗೆ ಆಸಕ್ತಿಯೂ ಇಲ್ಲ. ಅಂತಹ ಭೋಗಗಳ ಬೆನ್ನಟ್ಟುವುದು ವಿವೇಕಶೂನ್ಯ ಕಾರ್ಯವಾಗುತ್ತದೆ. ಶಾಶ್ವತವಾದುದನ್ನು ಅಶಾಶ್ವತ ವಸ್ತುಗಳ ಮೂಲಕ ಹೊಂದುವುದು ಅಸಾಧ್ಯವೆಂದು ನಾನು ಗ್ರಹಿಸಿದ್ದೇನೆ. ನಾನು ಭಗವದ್ಧ್ಯಾನದಲ್ಲಿ ಇರಲು ದಯವಿಟ್ಟು ನನ್ನನ್ನು ಬಿಡಿರಿ. ಹೇಗೋ ಅಯಾಚಿತವಾಗಿ ಬಂದಿರುವ ಎರಡನೆ ಜನ್ಮವನ್ನು ಸದ್ವಿನಿಯೋಗ ಮಾಡಲು ನನಗೆ ಅವಕಾಶ ಕೊಡಿರಿ.”
ಆದರೆ ವಿಧಿಯು ಬರೆದಿದ್ದ ಫಾಲಲಿಖಿತವನ್ನು ಸ್ವಯಂ ನೋಡಿದ್ದ ಈಶಾನಯೋಗಿಯು ಪಟ್ಟುಬಿಡದೆ ಹೇಳಿದ:
“ಸಂಧಿಮತಿ, ನೀನು ರಾಜಭೋಗಗಳನ್ನು ಅನುಭವಿಸುತ್ತ ಲೋಲುಪನಾಗಿರಬೇಕೆಂದು ನಾನು ಹೇಳುತ್ತಿಲ್ಲ. ರಾಜಪ್ರಾಸಾದಗಳಲ್ಲಿ ಮೋಜು ಮಾಡುತ್ತಿರಬೇಕೆಂದು ಹೇಳುತ್ತಿಲ್ಲ. ನೀನು ನೆರೆಯ ರಾಜ್ಯಗಳ ಮೇಲೆ ಆಕ್ರಮಣ ನಡೆಸಬೇಕೆಂದೂ ಹೇಳುತ್ತಿಲ್ಲ. ಇದೀಗ ದಕ್ಷ ಆಳ್ವಿಕೆಯಿಲ್ಲದೆ ಕಶ್ಮೀರವು ಸಾರಥಿಯಿಲ್ಲದ ರಥದಂತೆ ಆಗಿದೆ. ಈಗ ಕಶ್ಮೀರ ಸಾಮ್ರಾಜ್ಯಕ್ಕೆ ದಿಗ್ದರ್ಶನ ಮಾಡಬಲ್ಲವನು ನೀನೆ. ಜಯೇಂದ್ರನ ಮಂತ್ರಿಯಾಗಿದ್ದು ರಾಜ್ಯಪಾಲನೆಯಲ್ಲಿ ಅಪಾರ ಅನುಭವವನ್ನು ನೀನು ಪಡೆದಿರುವೆ. ಆ ಅನುಭವವನ್ನು ಬಳಸಿಕೊಂಡು ಕಶ್ಮೀರವನ್ನು ದಕ್ಷವಾಗಿ ಆಳಿ ಮತ್ತೆ ಅದರ ಏಳ್ಗೆಯಾಗುವಂತೆ ಮಾಡಬೇಕೆಂದು ಹೇಳುತ್ತಿದ್ದೇನೆ. ಶಕ್ತಿ ಇದ್ದೂ ಅಗತ್ಯವಿರುವಾಗ ಆ ಶಕ್ತಿಯನ್ನು ಬಳಸದೆ ಪ್ರಜೆಗಳ ಕಷ್ಟನಷ್ಟಗಳಿಗೆ ವಿಮುಖನಾಗಿದ್ದರೆ ಇದನ್ನು ವೈರಾಗ್ಯವೆಂದು ಭಾವಿಸುವುದು ಆತ್ಮವಂಚನೆಯಾಗುತ್ತದೆ.”
ಸಂಧಿಮತಿ ಆಲೋಚನೆಗೆ ಒಳಗಾದ. ಒಂದೆರಡು ನಿಮಿಷ ಕಳೆದ ಮೇಲೆ ಕೇಳಿದ: “ಇಷ್ಟು ದೊಡ್ಡ ಪ್ರಪಂಚದಲ್ಲಿ ಕಶ್ಮೀರವನ್ನು ರಕ್ಷಿಸಬಲ್ಲವನು ನಾನು ಮಾತ್ರವೆ? ನಾನಿಲ್ಲದಿದ್ದರೆ ಕಶ್ಮೀರ ನಾಶವಾಗುತ್ತದೆಂದು ಭಾವಿಸುವುದು ನನ್ನ ಅಹಂಕಾರವಾಗದೆ? ಅಲ್ಲದೆ ಮತ್ತೆ ಕರ್ಮಬಂಧನಗಳಲ್ಲಿ ಸಿಕ್ಕಿಹಾಕಿಕೊಂಡರೆ ಶಾಶ್ವತ ಆತ್ಮಶಾಂತಿ ನನ್ನಿಂದ ದೂರವಾಗದೆ?”
ಈಶಾನಯೋಗಿಯು ಸಂಧಿಮತಿಯ ತಲೆಯ ಮೇಲೆ ಕೈಯಿಟ್ಟು ಆಶೀರ್ವದಿಸಿ ಹೇಳಿದ: “ಭಗವಂತನ ಸೃಷ್ಟಿಯಲ್ಲಿ ಪ್ರತಿ ವ್ಯಕ್ತಿಗೂ ಒಂದು ವಿಶೇಷ ಪಾತ್ರ ಇರುತ್ತದೆ. ಒಂದೊಂದು ಪಾತ್ರಕ್ಕೆ ಒಂದೊಂದು ಸಂದರ್ಭದಲ್ಲಿ ಪ್ರಾಮುಖ್ಯ ಬರುತ್ತದೆ. ಆದರೆ ಸೃಷ್ಟಿಯಲ್ಲಿ ಪ್ರತಿ ಪಾತ್ರವೂ ಅನಿವಾರ್ಯವೇ; ಪ್ರತಿ ಕ್ಷಣವೂ ಬೆಲೆಬಾಳುವುದೇ. ಸಮುದ್ರದೊಳಕ್ಕೆ ಎಸೆದ ಅತಿ ಚಿಕ್ಕ ಕಣವೂ ತನ್ನ ಶಕ್ತಿಗೆ ಅನುಗುಣವಾದ ಅಲೆಗಳನ್ನು ಸೃಷ್ಟಿಸುವಂತೆ ಪ್ರತಿ ವ್ಯಕ್ತಿಯ ಜೀವಿತವೂ ಅವನಿಗೆ ಎಷ್ಟು ಅಲ್ಪದ್ದೆನಿಸಿದರೂ ವಿಶ್ವರಚನೆಯಲ್ಲಿ ಅದಕ್ಕೆ ಪ್ರಾಧಾನ್ಯ ಇದ್ದೇ ಇರುತ್ತದೆ. ಅದರದರ ಪ್ರಭಾವ ಅದರದರದು. ಸ್ವಭಾವತಃ ಯೋಗಿಯಾದವನು ನಿಃಸ್ವಾರ್ಥದಿಂದ ಕಶ್ಮೀರವನ್ನು ಹೇಗೆ ಸಮರ್ಥವಾಗಿ ಆಳಬಹುದೆಂಬುದನ್ನು ನಿದರ್ಶನಪಡಿಸುವುದು ನಿನ್ನ ಜೀವಿತದ ಗುರಿಯಾಗಿರಲಿ. ನಿನಗೆ ಪುನರ್ಜನ್ಮ ದೊರೆತಿರುವುದು ಇದಕ್ಕಾಗಿಯೆ. ಈಗಿನ ಸಂದಿಗ್ಧ ಪರಿಸ್ಥಿತಿಯಲ್ಲಿ ನಿನ್ನಿಂದ ಚಿತ್ತಶುದ್ಧಿಪೂರ್ವಕ ಕರ್ತವ್ಯಪಾಲನೆ ಆಗಲಿ.
ಬ್ರಹ್ಮಣ್ಯಾಧಾಯ ಕರ್ಮಾಣಿ
ಸಂಗಂ ತ್ಯಕ್ತ್ವ ಕರೋತಿ ಯಃ |
ಲಿಪುತೇ ನ ಸ ಪಾಪೇನ
ಪದ್ಮಪತ್ರಮಿವಾಂಭಸಾ ||
“ಕರ್ಮಗಳನ್ನೆಲ್ಲ ಪ್ರಕೃತಿಗೋ ಈಶ್ವರನಿಗೋ ವಹಿಸಿ ಸ್ವಾರ್ಥಾಸಕ್ತಿಯ ಸ್ಪರ್ಶವಿಲ್ಲದೆ ವ್ಯವಹರಿಸುವವನನ್ನು ಕರ್ಮಫಲಗಳು ಬಾಧಿಸವು – ತಾವರೆಯ ಎಲೆಯನ್ನು ನೀರಿನ ಕಣಗಳು ಸೋಕಲಾಗದಂತೆ.”
ಸಂಧಿಮತಿಯು ಈಗ ಮನೋನಿಶ್ಚಯ ತಳೆದು ಈಶಾನಯೋಗಿಯ ಪಾದಗಳಿಗೆ ಅಭಿವಂದಿಸಿ ಕಶ್ಮೀರದ ಕಡೆಗೆ ಹೆಜ್ಜೆಹಾಕಿದ.
ಸತ್ತುಹೋಗಿದ್ದವನು ಮತ್ತೆ ಜೀವಂತನಾಗಿರುವುದು ವಾಸ್ತವವೆ? – ಎಂದು ಪ್ರಜೆಗಳು ಶಂಕೆಗೊಳಗಾದರು. ಆದರೆ ಈಶಾನಯೋಗಿಯನ್ನು ಭೇಟಿಯಾದಾಗ ಅವನು ನೀಡಿದ ವಿವರಣೆ ಅವರ ಸಂದೇಹವನ್ನು ನಿವಾರಿಸಿತು. ಅವರು ಸಂತೋಷದಿಂದ ಸಂಧಿಮತಿಯನ್ನು ಸಿಂಹಾಸನಸ್ಥನಾಗುವಂತೆ ಆಹ್ವಾನಿಸಿದರು.
ಅಭಿಷಿಕ್ತನಾದರೂ ಸಂಧಿಮತಿಯು ರಾಜಭವನದಲ್ಲಿ ವಾಸಿಸಲಿಲ್ಲ, ತನ್ನನ್ನು ಭತ್ಸರು ಸುತ್ತುವರಿದಿರಲು ಆಸ್ಪದವನ್ನೂ ಕೊಡಲಿಲ್ಲ. ಅವಕಾಶವಿದ್ದಾಗಲೆಲ್ಲ ಶಿವನಾಮ ಜಪದಲ್ಲಿ ನಿರತನಾಗಿರುತ್ತಿದ್ದ. ಪ್ರತಿದಿನ ತಪ್ಪದೆ ಶಿವಪೂಜೆ ಮಾತ್ರವಲ್ಲದೆ ಭೂತೇಶ-ವಿಜಯೇಶರ ಅರ್ಚನೆಯನ್ನು ಮಾಡಿ ಅನಂತರ ಗುರು ಈಶಾನಯೋಗಿಯ ದರ್ಶನ ಮಾಡಿ ಬಂದು ರಾಜ್ಯಕಾರ್ಯಗಳನ್ನು ಆರಂಭಿಸುತ್ತಿದ್ದ. ತನ್ನ ಪೂಜೆಗಳಿಗೆ ಬೇಕಾದ ಹೂಗಳನ್ನು ತಾನೇ ಬಿಡಿಸಿಕೊಂಡು ಬರುತ್ತಿದ್ದ. ತನ್ನ ಕೈಯಿಂದಲೇ ಪೂಜಾಕಲಾಪಗಳನ್ನು ನಡೆಸುತ್ತಿದ್ದ.
ಕಶ್ಮೀರದ ಕಣಕಣವನ್ನೂ ಸಂಧಿಮತಿ ಶಿವಮಯಗೊಳಿಸಿದ. ಹೀಗೆ ಪ್ರತಿ ಬಾವಿಯದೂ ತೀರ್ಥೋದಕವೆನಿಸಿತು.
ಪ್ರವಾಸದ ಸಂದರ್ಭಗಳಲ್ಲಿ ಪೂಜೆ ತಪ್ಪಬಾರದೆಂಬ ಆಶಯದಿಂದ ದಾರಿಗಳುದ್ದಕ್ಕೂ ಅಲ್ಲಲ್ಲಿ ಮಂದಿರಗಳನ್ನು ನಿರ್ಮಿಸಿ ಅವುಗಳ ಪೋಷಣೆಗೆ ಅಗತ್ಯವಿದ್ದಷ್ಟು ಗ್ರಾಮಗಳನ್ನು ದತ್ತಿಯಾಗಿ ನೀಡಿದ.
ಹೀಗೆ ಇಡೀ ಕಶ್ಮೀರವೇ ಕೈಲಾಸಸದೃಶವಾಯಿತು.
ತಾನೇ ನಿರ್ಮಿಸಿಕೊಂಡ ಪರ್ಣಕುಟಿಯಲ್ಲಿ ಸಂಧಿಮತಿ ವಾಸ ಮಾಡುತ್ತಿದ್ದ. ಪ್ರತಿದಿನ ಭಿಕ್ಷಾಟನೆ ಮಾಡಿಯೇ ಆಹಾರ ಸ್ವೀಕರಿಸುತ್ತಿದ್ದ. ಅವನ ಸಂಚಾರವೆಲ್ಲ ಕಾಲುನಡಿಗೆಯಲ್ಲೇ.
“ಯಾರಾದರೂ ನನ್ನನ್ನು ಕೊಲ್ಲಬಯಸಿದರೆ ನನಗೆ ಬದುಕುವ ಅರ್ಹತೆ ಇಲ್ಲವೆಂದೇ ಅದರ ಅರ್ಥ” ಎನ್ನುತ್ತ ಅಂಗರಕ್ಷಕ ಭಟರ ಸೇವೆಯನ್ನು ನಿರಾಕರಿಸಿದ.
ರಾಜಕಾರ್ಯದಿಂದ ಬಿಡುವು ದೊರೆತಾಗಲೆಲ್ಲ ಧ್ಯಾನದಲ್ಲಿಯೂ ಯೋಗಿಗಳೊಡನೆ ಪಾರಮಾರ್ಥಿಕ ವಿಚಾರ ವಿನಿಮಯದಲ್ಲಿಯೂ ಸಮಯವನ್ನು ವ್ಯಯಮಾಡುತ್ತಿದ್ದ. ಹೀಗೆ ೪೭ ವರ್ಷಗಳಷ್ಟು ಕಾಲ ಸಂಧಿಮತಿಯ ರಾಜ್ಯಭಾರ ನಡೆಯಿತು.
ಆದರೆ ಕಾಲಕ್ರಮದಲ್ಲಿ ರಾಜನು ದೈವಚಿಂತನೆಯಲ್ಲಿ ಅಧಿಕವೇಳೆ ಕಳೆಯುತ್ತಿದ್ದುದರಿಂದ ರಾಜಕಾರ್ಯಗಳಲ್ಲಿ ಶೈಥಿಲ್ಯ ತಲೆದೋರಿತು.
* * *
ದೂರದಲ್ಲಿ ಕುದುರೆಗಳನ್ನು ಬಿಟ್ಟು ಮಂತ್ರಿ ಸೇನಾಪತಿ ಮತ್ತು ಭಟರು ಮಂದಿರವನ್ನು ಸಮೀಪಿಸಿದರು. ಸಂಧಿಮತಿ ಪೂಜೆ ಮುಗಿಸಿ ಮಂದಿರದಿಂದ ಹೊರಬಂದೊಡನೆ ಎಲ್ಲರೂ ಮಹಾರಾಜನಿಗೆ ನಮಸ್ಕರಿಸಿದರು. ಮಹಾರಾಜನು ಪ್ರತಿಯಾಗಿ ನಮಸ್ಕರಿಸುತ್ತ `ಈಶ್ವರಾರ್ಪಣಾ’ ಎಂದ. ಯಾರಾದರೂ `ಪ್ರಭು’ ಎಂದು ಸಂಬೋಧಿಸಿದರೆ ರಾಜನು ಮನಸ್ಸಿನಲ್ಲಿಯೆ ಈಶ್ವರನಿಗೆ ನಮಸ್ಕಾರ ಸಲ್ಲಿಸುತ್ತಿದ್ದುದು ಅವನ ಅಭ್ಯಾಸವಾಗಿತ್ತು.
“ಪ್ರಭುಗಳೆ! ತಾವು ಕಶ್ಮೀರಕ್ಕೆ ಅಧಿಪತಿಗಳಾಗಿ ಬಂದು ೪೭ ವರ್ಷ ತುಂಬುತ್ತಿದೆ. ರಾಜ್ಯವು ಕೈಲಾಸವೆನಿಸುವಂತೆ ತಾವು ಪವಿತ್ರಬುದ್ಧಿಯಿಂದ ರಾಜ್ಯವನ್ನು ಆಳುತ್ತಿದ್ದೀರಿ” ಎಂದ ಮಂತ್ರಿ.
“ಎಲ್ಲವೂ ಪರಮೇಶ್ವರನ ವಿಲಾಸ” ಎಂದ, ಮಹಾರಾಜ.
ಸೇನಾಪತಿ ಹೇಳಿದ: “ಪ್ರಭುಗಳೇ! ಈಚೀಚೆಗೆ ತಾವು ರಾಜ್ಯಕಾರ್ಯಕ್ಕಿಂತ ಹೆಚ್ಚು ಸಮಯವನ್ನು ದೈವಧ್ಯಾನದಲ್ಲಿ ತೊಡಗಿಸುತ್ತಿರುವಿರಿ. ಇದರಿಂದಾಗಿ ಎಷ್ಟೋ ರಾಜ್ಯಕಾರ್ಯಗಳು ನಿಗದಿಯಾದಂತೆ ನಡೆಯುತ್ತಿಲ್ಲ.”
ಸಂಧಿಮತಿ ಹೇಳಿದ: “ಇನ್ನೂ ಎಷ್ಟು ದಿನ ನಾನು ಈ ರಾಜ್ಯಭಾರಕ್ಕೆ ಅಂಟಿಕೊಂಡಿರಬೇಕೋ ತಿಳಿಸಿರಿ.”
ಮಂತ್ರಿಯೂ ಸೇನಾಪತಿಯೂ ಒಬ್ಬರಮುಖವನ್ನೊಬ್ಬರು ನೋಡಿಕೊಂಡರು.
ಮಂತ್ರಿ ಹೇಳಿದ: “ಪ್ರಭುಗಳೆ! ರಾಜ್ಯಪಾಲನೆಯಲ್ಲಿ ತಮ್ಮ ಆಸಕ್ತಿ ಕಡಮೆಯಾಗಿರುವುದರಿಂದಾಗಿ ಪ್ರಜೆಗಳು ಅಸಂತೃಪ್ತರಾಗಿದ್ದಾರೆ. ತಾವು ಯೋಗಿಯಂತೆ ಇರುವಿರಿ. ತಮಗೆ ವಾರಸುದಾರರು ಇಲ್ಲ. ತಮ್ಮ ತರುವಾಯ ಆಳ್ವಿಕೆ ನಡೆಸುವವರು ಯಾರು? – ಎಂಬ ಪ್ರಶ್ನೆ ಎಲ್ಲರನ್ನೂ ಬಾಧಿಸುತ್ತಿದೆ.”
ಸಂಧಿಮತಿ ನಕ್ಕು ಹೇಳಿದ: “ಎಂದರೆ ಇಷ್ಟು ದಿವಸವಾದ ಮೇಲೆ ನನಗೆ ವಿಮುಕ್ತಿ ದೊರೆಯುತ್ತಿದೆ ಎಂದ ಹಾಗಾಯಿತು. ಇಷ್ಟಕ್ಕೂ ಉತ್ತರಾಧಿಕಾರಿ ಯಾರು ಆಗಬಹುದೆಂದು ನಿಮ್ಮ ಮನಸ್ಸಿನಲ್ಲಿದೆಯೋ ತಿಳಿಸಿರಿ.”
ಮಂತ್ರಿಯು ಹೇಳಿದ: “ಎಲ್ಲ ರಾಜರ ದೃಷ್ಟಿಯೂ ಕಶ್ಮೀರದ ಮೇಲೆ ಇದೆ. ಆದರೆ ಕಶ್ಮೀರದ ವಂಶಾಕುರ ಬೆಳೆಯುತ್ತಿರುವುದು ಗಾಂಧಾರ ದೇಶದಲ್ಲಿ.”
“ಅಂಧಯುಧಿಷ್ಠಿರನ ವಂಶಿಕ ಗೋಪಾದಿತ್ಯನ ಪುತ್ರ ಮೇಘವಾಹನನು ದಿವ್ಯಲಕ್ಷಣ ಸಂಪನ್ನನೂ ದೃಢಶರೀರಿಯೂ ಆಗಿದ್ದಾನೆ” ಎಂದ, ಸೇನಾಪತಿ.
ಭಟನೊಬ್ಬ ಮುಂದೆ ಬಂದು ಅರಿಕೆ ಮಾಡಿದ: “ಅವನು ತಂದೆಯ ಅನುಮತಿಯಂತೆ ಪ್ರಾಗ್ ಜ್ಯೋತಿಷಪುರದ ರಾಜಪುತ್ರಿ ಅಮೃತಪ್ರಭೆಯನ್ನು ಸ್ವಯಂವರದಲ್ಲಿ ಗೆದ್ದು ವಿವಾಹವಾಗಿದ್ದಾನೆ.”
“ಮೇಘವಾಹನನಿಗೆ ವರುಣದೇವನ ವಿಶೇಷಾನುಗ್ರಹ ಇರುವಂತಿದೆ” ಎಂದ, ಇನ್ನೊಬ್ಬ ಭಟ.
ಸಂಧಿಮತಿ ಹರ್ಷಗೊಂಡು ಹೇಳಿದ: “ಕಶ್ಮೀರ ರಾಜ್ಯಲಕ್ಷ್ಮಿಯನ್ನು ವರಿಸುವಂತೆ ಅವನನ್ನು ಆಹ್ವಾನಿಸಿರಿ.”
ಮಂತ್ರಿಯೂ ಸೇನಾಪತಿಯೂ ಮೌನವಾದರು.
ಒಂದೆರಡು ಕ್ಷಣಗಳಾದ ಮೇಲೆ ಮಂತ್ರಿಯು ಹೇಳಿದ: “ಮೇಘವಾಹನನ್ನು ಆಮಂತ್ರಿಸುವುದು ನನಗೆ ಸರಿಯೆನಿಸುತ್ತಿಲ್ಲ. ತಮ್ಮ ಅಭೀಷ್ಟಕ್ಕೆ ಸಮ್ಮತವಿಲ್ಲದಿದ್ದರೂ ಪ್ರಜಾಹಿತವನ್ನು ಲಕ್ಷಿಸಿ ರಾಜ್ಯದ ಕೈಹಿಡಿದ ತಮ್ಮ ಸ್ಥಾನದಲ್ಲಿ ಬೇರೆಯವರಿರುವುದನ್ನು ನಾನು ಊಹಿಸಲಾರೆ.”
“ನಮ್ಮ ರಾಜ್ಯದ ಮೇಲೆ ಕಣ್ಣಿರಿಸಿ ಯಾರಾದರೂ ಆಕ್ರಮಣ ಮಾಡಿದರೆ ಅವರ ವಿರುದ್ಧ ಯುದ್ಧ ಮಾಡಲೇಬೇಕಾಗುತ್ತದೆ.” ಎಂದ, ಸೇನಾಪತಿ.
ಸಂಧಿಮತಿಯು ಇಬ್ಬರೆಡೆಗೂ ವಾತ್ಸಲ್ಯದ ನೋಟ ಬೀರಿ ಹೇಳಿದ; “ಈ ಜಗತ್ತು ಒಂದು ನಾಟಕ ರಂಗ. ಮನುಷ್ಯರು ಇಲ್ಲಿಯ ಪಾತ್ರಧಾರಿಗಳು. ಅವರವರು ತಮ್ಮತಮ್ಮ ಪಾತ್ರಗಳನ್ನು ನಿರ್ವಹಿಸಿದ ಮೇಲೆ ರಂಗದಿಂದ ತೆರಳದೆ ವಿಧಿಯಿಲ್ಲ. ಆಗ ಮತ್ತೊಬ್ಬ ಪಾತ್ರಧಾರಿಯು ಪ್ರವೇಶಿಸುತ್ತಾನೆ. ನಾನು ಜೀವಮಾನವೆಲ್ಲ ಕಾದಿದ್ದ ಮುಕ್ತಿಯು ಆಸನ್ನವಾಗಿರುವಾಗ ನಾನು ಮೀನ-ಮೇಷ ಎಣಿಸಲೆ? ಕಶ್ಮೀರವನ್ನು ವಹಿಸಿಕೊಂಡು ಆಳುವಂತೆ ಮೇಘವಾಹನನಿಗೆ ಆಹ್ವಾನ ಕಳಿಸಿರಿ.”
ಮರುದಿನ ಕಶ್ಮೀರಕ್ಕೆ ಸಂಭ್ರಮ ತಂದ ದಿನ.
ಯಾವ ಭೋಗಪ್ರತಿಷ್ಠೆಗಳಿಗಾಗಿ ಜನರು ತಹತಹಿಸುತ್ತಾರೋ, ಮಾಡಬಾರದ್ದನ್ನೆಲ್ಲ ಮಾಡುತ್ತಾರೋ, ಅವನ್ನು ತೃಣಪ್ರಾಯವೆಂದು ಪರಿತ್ಯಾಗ ಮಾಡಲು ಮತ್ತು ರಾಜ್ಯವನ್ನು ಇನ್ನೊಬ್ಬ ವ್ಯಕ್ತಿಯ ಕೈಗೆ ವಹಿಸಲು ತುದಿಗಾಲಲ್ಲಿ ನಿಂತಿದ್ದ, ಸಂಧಿಮತಿ.
ರಾಜ್ಯಕ್ಕಾಗಿ ಹಲವೊಮ್ಮೆ ಅಣ್ಣ-ತಮ್ಮಂದಿರೂ ಹೊಡೆದಾಡುತ್ತಾರೆ. ಮೋಸ ವಂಚನೆಗಳನ್ನೆಸಗಲೂ ಹಿಂದೆಗೆಯರು. ರಾಜ್ಯಕ್ಕಾಗಿ ಅನುಚರರಿಂದಲೇ ಹತ್ಯೆಗೊಂಡ ರಾಜರು ಎಷ್ಟು ಮಂದಿಯೋ!
ಆದರೆ ೪೭ ವರ್ಷದಷ್ಟು ದೀರ್ಘಕಾಲ ಆಳಿಯೂ ರಾಜಭೋಗದಲ್ಲಿ ಅಭಿನಿವೇಶ ತಳೆಯದೆ ಎಲ್ಲವನ್ನೂ ತ್ಯಜಿಸಲು ಸಿದ್ಧನಾದ ಅಪೂರ್ವ ವ್ಯಕ್ತಿಯನ್ನು ಪ್ರಜೆಗಳು ಕಂಡರು. ಇಂತಹ ಯೋಗಿಗಳಿಗೆ ಜನನವಿತ್ತ ಭೂಮಿಯು ಧನ್ಯವಲ್ಲವೆ?
ತನ್ನನ್ನು ಉತ್ಸಾಹದಿಂದ ಬರಮಾಡಿಕೊಳ್ಳುತ್ತಿದ್ದ ಪ್ರಜೆಗಳನ್ನು ನೋಡಿ ಮೇಘವಾಹನನ ಹೃದಯ ತುಂಬಿಬಂದಿತು. ಆದರೆ ಅವನ ಮನಸ್ಸಿನಲ್ಲಿ ಬೇರೆ ಭಾವನೆಗಳೂ ಇಲ್ಲದಿರಲಿಲ್ಲ. ಪ್ರಜೆಗಳ ಸಮ್ಮುಖದಲ್ಲಿ ತನ್ನನ್ನು ಎದುರುಗೊಳ್ಳಲು ಕಾಲುನಡಿಗೆಯಲ್ಲಿ ಬರುತ್ತಿದ್ದಾನೆಂದರೆ ಮಹಾರಾಜನು ಶಕ್ತಿಹೀನನೇ ಆಗಿರಬೇಕಲ್ಲವೆ? ಆದರೆ ಆ ಇಡೀ ಪ್ರಾಂತದ ಕಣಕಣವೂ ಶಿವಮಯವೆಂಬ ಭಾವನೆಯೂ ಮೇಘವಾಹನನಿಗೆ ಬಾರದಿರಲಿಲ್ಲ.
ಸಂಧಿಮತಿ ಮಹಾರಾಜನು ಸಮೀಪಿಸಿ ಆತ್ಮೀಯತೆಯಿಂದ ಮಾತನಾಡತೊಡಗಿದಾಗ ಮೇಘವಾಹನನು ಅಪ್ರಯತ್ನವಾಗಿಯೆ ಸಂಧಿಮತಿಯ ಪಾದಗಳಿಗೆರಗಿದ.
ಮಹಾರಾಜನು ಒಂದು ಹೆಜ್ಜೆ ಹಿಂದಕ್ಕೆ ಸರಿದು “ಪರಮೇಶ್ವರಾರ್ಪಣ” ಎಂದ.
ಕ್ಷಣಮಾತ್ರದಲ್ಲಿ ಮೇಘವಾಹನಲ್ಲಿದ್ದ ಅಹಂಕಾರವು ಆವಿಯಾಗಿಹೋಯಿತು. ತನ್ನ ಎದುರಿಗಿದ್ದ ವ್ಯಕ್ತಿ ಅಸಾಮಾನ್ಯನೆಂದೂ ಅಂತಹ ವ್ಯಕ್ತಿ ಸೃಷ್ಟಿಯಲ್ಲಿ ಇನ್ನೊಬ್ಬ ಇರಲಾರನೆಂದೂ ಅವನಿಗೆನಿಸಿತು.
ದಾರಿಯುದ್ದಕ್ಕೂ ಜನರು ಮಾಡುತ್ತಿದ್ದ ಜಯಜಯಕಾರ ಕೂಡ ಮೇಘವಾಹನನಿಗೆ ಕೇಳಿಸಲಿಲ್ಲ. ಎಲ್ಲ ಧ್ವನಿಗಳೂ ಪರಶಿವನ ಪವಿತ್ರ ನಾಮಸ್ಮರಣೆಯಂತೆ ಭಾಸವಾಯಿತು.
ಮೇಘವಾಹನನ ಮನಸ್ಸಿನಿಂದ ತಾನು ಕಶ್ಮೀರವನ್ನು ಆಳಲು ಬರುತ್ತಿದ್ದೇನೆಂಬ ಭಾವನೆ ಮರೆಯಾಗಿ ತಾನು ದೈವದ ಕೈಯಲ್ಲಿನ ಒಂದು ಗೊಂಬೆ ಮಾತ್ರ ಎಂಬ ಭಾವನೆ ಆವರಿಸಿತು. ತಾನು ಏನೋ ಅದ್ಭುತವನ್ನು ಸಾಧಿಸಹೊರಟಿದ್ದೇನೆಂಬುದು ತನ್ನ ಅಜ್ಞಾನ ಮಾತ್ರವೆನಿಸಿತು. ತಾನು ಹೆಜ್ಜೆಯಿಡುತ್ತಿರುವುದು ಭೂಮಿಯ ಮೇಲಲ್ಲ, ಪರಶಿವಾವೃತ ಲೋಕದಲ್ಲಿ ಎನಿಸಿತು.
ಅವನ ಪಕ್ಕದಲ್ಲಿಯೆ ಇದ್ದ ರಾಣಿ ಅಮೃತಪ್ರಭೆಯ ಪರಿಸ್ಥಿತಿಯೂ ಹಾಗೆಯೆ ಆಗಿತ್ತು – ಎಂದು ಅವಳ ಮುಖದ ಮೇಲಿನ ಪ್ರಸನ್ನತೆಯನ್ನು ಕಂಡಾಗ ಮೇಘವಾಹನನಿಗೆ ಅನಿಸಿತು.
ಸಂಧಿಮತಿಯು ಪ್ರಜೆಗಳ ಸಮ್ಮುಖದಲ್ಲಿ ರಾಜಚಿಹ್ನೆಗಳನ್ನು ಮೇಘವಾಹನನಿಗೆ ಹಸ್ತಾಂತರಿಸಿದ. ಮೇಘವಾಹನನು ಸಂಧಿಮತಿಯ ಪಾದಗಳಿಗೆರಗಿ ಹೇಳಿದ: “ತಾವು ರಾಜ್ಯವನ್ನು ತ್ಯಜಿಸಬೇಕಾಗಿಲ್ಲ. ತಮ್ಮ ಜೀವಿತಾವಧಿ ಪೂರ್ಣವಾಗುವವರೆಗೆ ತಾವೇ ಪ್ರಭುಗಳಾಗಿ ಇರಿ. ಅದು ಅಸಾಧ್ಯವೆನಿಸಿದಲ್ಲಿ ತಾವು ತಮ್ಮ ಕುಟೀರದಲ್ಲಿನ ವಾಸ್ತವ್ಯವನ್ನಂತೂ ಮುಂದುವರಿಸಬಹುದು.”
ಸಂಧಿಮತಿಯು ಮುಗುಳ್ನಕ್ಕು ಹೇಳಿದ: “ಮೇಘವಾಹನ! ಚರ್ಮದ ಪರೆಯನ್ನು ಕಳಚಿಹಾಕಿದ ಹಾವು ಮತ್ತೆ ಅದನ್ನು ಧರಿಸಲಾಗುತ್ತದೆಯೆ? ಹಾಗೆ ನಾನು ಮತ್ತೆ ಈ ಸಾಮ್ರಾಜ್ಯವನ್ನು ಸ್ವೀಕರಿಸುವ ಸ್ಥಿತಿಯಲ್ಲಿ ಇಲ್ಲ….. ರಾಜಭೋಗದ ಮಮತೆ ನಿನ್ನಲ್ಲಿ ಬಾರದಿರಲಿ. ಆಧಿಪತ್ಯವೆಂಬುದು ಗುರುತರ ಬಾಧ್ಯತೆಯೆಂಬ ಮತ್ತು ನೀನು ಪ್ರಜೆಗಳ ಭಾಗ್ಯರಕ್ಷಕನೆಂಬ ಭಾವನೆ ಇರಲಿ. ತೋಟದ ಮಾಲಿಯು ಅದರ ರಕ್ಷಕನೇ ಹೊರತು ಯಜಮಾನನಾಗನು. ಅಂತೆಯೇ ನಿನ್ನ ಪಾತ್ರ ಕೂಡಾ ಎಂಬ ಮನವರಿಕೆ ಇರಲಿ. ನಿನಗೆ ಶುಭವಾಗಲಿ.”
ಹೀಗೆ ಆಶೀರ್ವದಿಸಿ ಸಂಧಿಮತಿಯು ರಾಜ್ಯವನ್ನು ಬಿಟ್ಟು ನಿಷ್ಕ್ರಮಿಸಿದ.
ಸಂಧಿಮತಿಯ ವ್ಯಕ್ತಿತ್ವದ ಔನ್ನತ್ಯ ಈಗ ಪ್ರಜೆಗಳಿಗೆ ಅನುಭವಕ್ಕೆ ಬಂದಿತು. ಜಗತ್ತಿನ ರೀತಿಯೇ ಹೀಗೆ! ಏನೇನೋ ಕಾರಣಕ್ಕೆ ವ್ಯಕ್ತಿಯೊಬ್ಬನು ತಮ್ಮಿಂದ ದೂರವಾಗಲೆಂದು ಆಶಿಸುತ್ತಾರೆ. ಆದರೆ ಅವನು ನಿಜವಾಗಿ ದೂರವಾಗುವ ಸನ್ನಿವೇಶ ಒದಗಿದಾಗ ಆ ವ್ಯಕ್ತಿಯ ಬಗೆಗೆ ತನ್ನ ಅನುಬಂಧ ಅರ್ಥವಾಗುತ್ತದೆ.
ವಿಲಾಪ ಮಾಡುತ್ತ ಪ್ರಜೆಗಳು ಬಹಳ ದೂರ ಸಂಧಿಮತಿಯ ಜೊತೆಗೇ ಸಾಗಿದರು. ಅಂತಹ ವ್ಯಕ್ತಿಯನ್ನು ತಾವು ಮತ್ತೆಂದೂ ಕಾಣಲಾರೆವೆಂದು ತಪಿಸಿದರು.
ಹೀಗೆ ರಾಜ್ಯವನ್ನು ತ್ಯಜಿಸಿದ ಸಂಧಿಮತಿಯು ನಂದಿಕ್ಷೇತ್ರ ಸೇರಿ ಜಗನ್ನಾಥನ ಸೇವೆಯಲ್ಲಿ ಕಾಲಯಾಪನ ಮಾಡುತ್ತ ಕಡೆಗೆ ಪರಶಿವನಲ್ಲಿ ಲೀನವಾದ.
ಸನಾತನಧರ್ಮದಂತೆ ಉತ್ತಮ ರಾಜ್ಯಪಾಲಕ ಹೇಗಿರಬೇಕೆಂಬುದಕ್ಕೆ ಆದರ್ಶವಾಗಿ ಸಂಧಿಮತಿಯ ನೆನಪು ಉಳಿದಿದೆ.