ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ
ಪ್ರಕಟಣೆಯ
60ನೇ
ವರ್ಷ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

Utthana > ಉತ್ಥಾನ ಫೆಬ್ರವರಿ 2016 > ರಾಜ್ಯಸಭೆಯ ಸಾರ್ಥಕತೆ

ರಾಜ್ಯಸಭೆಯ ಸಾರ್ಥಕತೆ

ಭಾರತದ ಸಂಸತ್ತಿನ ಸಂರಚನೆಯ ಸ್ವರೂಪದ ಬಗೆಗೆ ಪುನರಾಲೋಚನೆ ಮಾಡಬೇಕಾದ ಪರಿಸ್ಥಿತಿ ಈಗ ಉಂಟಾಗಿದೆ. ರಾಜ್ಯಾಂಗರಚನೆಯ ಸಮಯದಲ್ಲಿ ರಾಜ್ಯಸಭೆಯ ಅಸ್ತಿತ್ವಕ್ಕೆ ಪ್ರೇರಣೆಯನ್ನು ಒದಗಿಸಿದ್ದುದು ಬಹುಮಟ್ಟಿಗೆ ಸಂಖ್ಯಾಧಾರಿತವಾಗಿ ರಚನೆಗೊಳ್ಳುವ ಲೋಕಸಭೆಯ ನಡವಳಿಯಲ್ಲಿ ತೋರಬಹುದಾದ ಅಸಮರ್ಪಕತೆಗಳಿಗೆ ಪರಿಹಾರ ನೀಡಬಲ್ಲ ಪ್ರತಿಭಾರವಾಗಿ ರಾಜ್ಯಸಭೆಯು ಕೆಲಸ ಮಾಡಬೇಕೆಂಬುದು. ಈ ಹಿನ್ನೆಲೆಯಲ್ಲಿಯೆ ವಿವಿಧ ಜೀವನಕ್ಷೇತ್ರಗಳ ಅನುಭವಿಗಳಿಗೆ ರಾಜ್ಯಸಭೆಯಲ್ಲಿ ಸದಸ್ಯತ್ವವನ್ನು ಕಲ್ಪಿಸುವ ಪದ್ಧತಿಯನ್ನು ನೆಲೆಗೊಳಿಸಲಾಗಿತ್ತು. ಕೆಲವು ವರ್ಷಗಳ ಕಾಲ ಈ ವ್ಯವಸ್ಥೆಯು ತಕ್ಕಮಟ್ಟಿಗೆ ಕೆಲಸ ಮಾಡಿದ್ದುದೂ ಹೌದು. ಆದರೆ ಈಚಿನ ದಶಕಗಳಲ್ಲಿ ರಾಜ್ಯಸಭೆಯನ್ನು ಬಲಿಷ್ಠ ಪಕ್ಷದ ಉಪಜೀವಿಗಳಾದವರಿಗೆ ಸ್ಥಾನಗಳನ್ನು ಕಲ್ಪಿಸುವುದಕ್ಕಾಗಿ ಹೆಚ್ಚುಹೆಚ್ಚಾಗಿ ಬಳಸಲಾಗಿದೆ. ರಾಜಕೀಯ ಪಕ್ಷಗಳ ಪ್ರಜ್ಞಾವಂತಿಕೆಯೂ ಹೊಣೆಗಾರಿಕೆಯ ಮನೋಧರ್ಮವೂ ಕುಸಿದಿವೆ. ಹೀಗೆ ಸಂಸತ್ತಿನ ಸತ್ತ್ವವಂತಿಕೆ ಹ್ರಾಸಗೊಳ್ಳುತ್ತ ಸಾಗಿದೆ. ಈಗಲಾದರೋ ರಾಜ್ಯಸಭೆಯು ಸಮತೋಲಸ್ಥಾಪಕವಾಗುವುದಕ್ಕೆ ಬದಲಾಗಿ ಸಂಸದ್ ವ್ಯವಹಾರಕ್ಕೆ ಪ್ರತಿಬಂಧಕವೇ ಆಗಿ ರೂಪತಳೆದಿದೆ. ಈಗಿನ ಸಂಸತ್ತಿನಲ್ಲಿ ರಾಜ್ಯಸಭೆಯಲ್ಲಿ ಅಧಿಕಾರಾರೂಢ ಪಕ್ಷಕ್ಕೆ ಬಹುಮತವಿಲ್ಲದ ಸನ್ನಿವೇಶದಿಂದಾಗಿ ಲೋಕಸಭೆಯಲ್ಲಿ ಸಮಾಲೋಚನೆ ನಡೆದು ಅಂಗೀಕೃತವಾಗಿರುವ ಮತ್ತು ಸಾರ್ವಜನಿಕ ಜೀವನಕ್ಕೆ ಸಂಬಂಧಿಸಿದ ೬೦ಕ್ಕೂ ಹೆಚ್ಚು ಮಸೂದೆಗಳು ರಾಜ್ಯಸಭೆಯಲ್ಲಿ ಸ್ವೀಕೃತಿ ಪಡೆಯದೆ ನೆನೆಗುದಿಗೆ ಬಿದ್ದಿವೆ. ಹೀಗೆ ವಿರೋಧಪಕ್ಷವಾದ ಕಾಂಗ್ರೆಸ್ ಮತ್ತು ಹಲವು ಪ್ರಾದೇಶಿಕ ಪಕ್ಷಗಳದು ರಾಜ್ಯಸಭೆಯಲ್ಲಿ ಮೇಲುಗೈಯಾಗಿರುವ ಸಂದರ್ಭದಿಂದಾಗಿ ಸಂಸತ್ತು ಜನಪರ ಶಾಸನಗಳನ್ನು ಮಾಡಬೇಕಾದ ತನ್ನ ಮೂಲಭೂತಕರ್ತವ್ಯದಿಂದಲೇ ಚ್ಯುತವಾಗಿದೆ. ಈ ದುಃಸ್ಥಿತಿ ಮುಂದುವರಿಯುವುದು ಅಪೇಕ್ಷಣೀಯವೆ? ಈ ನಡವಳಿಗಳಿಂದಾಗಿ ರಾಜ್ಯಸಭೆಯ ಅಸ್ತಿತ್ವದ ಸಮರ್ಥನೀಯತೆಯನ್ನೇ ಸಾರ್ವಜನಿಕರು ಪ್ರಶ್ನಿಸುವಂತೆ ಆಗಿದೆ.

ಮೇಲೆ ಪ್ರಸ್ತಾವಿಸಿದುದಲ್ಲದೆ ಅನ್ಯ ವಿಕೃತಿಗಳೂ ಉಂಟು. ಅನೇಕ ರಾಜ್ಯಸಭಾ ಸದಸ್ಯರು ನಿಜಾರ್ಥದಲ್ಲಿ ಜನಪ್ರತಿನಿಧಿಗಳೇ ಆಗಿಲ್ಲ. ಲೋಕಸಭೆಯ ಚುನಾವಣೆಯಲ್ಲಿ ಸೋತವರಿಗೆ ರಾಜ್ಯಸಭೆಯಲ್ಲಿ ಅವಕಾಶ ಕಲ್ಪಿಸುವ ಹಿಂಬಾಗಿಲ ಏರ್ಪಾಡೂ ಚಾಲ್ತಿಗೆ ಬಂದಿದೆ. ಹಿಂಬಾಗಿಲಿನಿಂದ ಪ್ರವೇಶಿಸಿದ ಡಾ|| ಮನಮೋಹನಸಿಂಗ್ ದೇಶದ ಅತ್ಯುನ್ನತ ಅಧಿಕಾರಸ್ಥಾನವಾದ ಪ್ರಧಾನಮಂತ್ರಿಯ ಹುದ್ದೆಯನ್ನೂ ಅಲಂಕರಿಸಿದ ವೈಚಿತ್ರ್ಯವನ್ನು ನೋಡಿದೆವು. ಹೀಗೆ ಮತದಾರರಿಂದ ತಿರಸ್ಕೃತಗೊಂಡವರು ಅಧಿಕೃತವಾಗಿ ಆಯ್ಕೆಗೊಂಡವರಿಗೆ ಸಮಾನವಾದ ಸವಲತ್ತುಗಳನ್ನು ಅನುಭವಿಸಿ ಮೆರೆಯಲು ಆಸ್ಪದವಾಗಿದೆ. ರಾಜ್ಯಸಭೆಯ ಸದಸ್ಯರೂ ಲೋಕಸಭಾ ಸದಸ್ಯರಂತೆ ವಿಹಿತಕ್ರಮದಲ್ಲಿ ಚುನಾವಣೆಯನ್ನು ಎದುರಿಸಬೇಕಾಗಿದ್ದಿದ್ದರೆ ಸ್ಥಿತಿ ಬೇರೆ ಇರುತ್ತಿತ್ತು. ಆದರೆ ಈಗ ಚುನಾಯಿತ ಸದಸ್ಯರು ಪಕ್ಷನಿರ್ದೇಶನದಂತೆ ಬಹಿರಂಗವಾಗಿ ಮತ ಹಾಕಬೇಕಾದ ಪದ್ಧತಿಯನ್ನು ಜಾರಿಗೊಳಿಸಲಾಗಿದೆ. ಹಿಂದೆ ರಾಜ್ಯಸಭಾ ಸದಸ್ಯರ ಆಯ್ಕೆಯು ರಹಸ್ಯ ಮತದಾನದ ಆಧಾರದ ಮೇಲೆ ನಡೆಯುತ್ತಿತ್ತು. ಈ ವಿನ್ಯಾಸಗಳೂ ಪರೀಕ್ಷಾರ್ಹವಾಗಿವೆ.

ಎಲ್ಲಕ್ಕೂ ಮಿಗಿಲಾಗಿ ಚುನಾಯಿತ ಸದಸ್ಯರಿಂದ ಘಟಿತವಾದ ಲೋಕಸಭೆಯಲ್ಲಿ ವಿಹಿತಕ್ರಮದಲ್ಲಿ ಅಂಗೀಕೃತವಾಗಿರುವ ಪ್ರತಿಯೊಂದು ಮಸೂದೆಯನ್ನೂ ಸ್ವಪಕ್ಷನಿರ್ದೇಶನದಂತೆ ವಿರೋಧಿಸಿ ಸಂಸದ್ ವ್ಯವಹಾರವನ್ನು ನಿರರ್ಥಕಗೊಳಿಸುತ್ತಿರುವ ರಾಜ್ಯಸಭೆ ಯಾವ ಪುರುಷಾರ್ಥಕ್ಕಾಗಿ ಮುಂದುವರಿಯಬೇಕು? ಅಧಿಕಾರೇತರ ಪಕ್ಷಗಳು ಹೆಚ್ಚಿನ ಹೊಣೆಗಾರಿಕೆಯನ್ನು ರೂಢಿಸಿಕೊಳ್ಳದಿದ್ದಲ್ಲಿ ರಾಜ್ಯಾಂಗವಿನ್ಯಾಸದಲ್ಲಿಯೆ ಮೂಲಭೂತ ಮಾರ್ಪಾಡುಗಳನ್ನು ತರುವ ದಿಶೆಯಲ್ಲಿ ಚಿಂತನೆ ನಡೆಯುವುದು ಸೂಕ್ತವಾದೀತು.

ನಿಮ್ಮ ಪ್ರತಿಕ್ರಿಯೆ ನೀಡಿ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

`ಉತ್ಥಾನ’ : ೧೯೬೫ರಿಂದ ಪ್ರಕಟವಾಗುತ್ತಿರುವ ಕನ್ನಡದ ಹೆಮ್ಮೆಯ ಸದಭಿರುಚಿಯ ಮಾಸಪತ್ರಿಕೆ. ರಾಜ್ಯದಾದ್ಯಂತ ಪ್ರಸರಣ ಇರುವ ಸಂಚಿಕೆಯು ಈಗ ಕ್ರೌನ್‌ ಚತುರ್ದಳ ಆಕಾರದಲ್ಲಿ ೧೧೨ ವರ್ಣಪುಟಗಳಲ್ಲಿ ವೈವಿಧ್ಯಮಯ ಲೇಖನ, ನುಡಿಚಿತ್ರ, ಸಾಹಿತ್ಯದ ಬರಹಗಳನ್ನು ಪ್ರಕಟಿಸುತ್ತಿದೆ.  ಸಂಚಿಕೆಯ ಬೆ ಲೆ ೨೦ ರೂ.

Utthana
Kannada Monthly Magazine ​
Utthana Trust
Keshavashilpa, Kempegowda Nagara
Bengaluru - 560019
Karnataka State , INDIA

Phone : 080-26612732
Email : [email protected]

ಉತ್ಥಾನದ ಹೊಸ ಪ್ರಕಟಣೆಗಳ ಬಗ್ಗೆ ನಿಮ್ಮ ಈಮೈಲ್‌ ಅಂಚೆಪೆಟ್ಟಿಗೆಯಲ್ಲೇ ಮಾಹಿತಿ ಪಡೆಯಿರಿ. ಇದಕ್ಕಾಗಿ ನಮ್ಮ ವಾರ್ತಾಪತ್ರಕ್ಕೆ ಉಚಿತವಾಗಿ ಚಂದಾದಾರರಾಗಿ