ಸಾಂಸದರಿಗೆ ಈಗ ಸಲ್ಲುತ್ತಿರುವ ಸಂಬಳವನ್ನು ಹೆಚ್ಚಿಸಬೇಕಾದ ಕಾರಣವಿದೆಯೆ ಎಂಬುದು ಒಂದು ಭಾಗ. ಇದಕ್ಕಿಂತ ಹೆಚ್ಚಿನ ಗಮನ ಬೇಡುವುದು – ಸಾಂಸದರಿಗೆ ಲಭ್ಯವಿರುವ ಸವಲತ್ತುಗಳ ಮೇರೆಮೀರಿದ ಪ್ರಮಾಣ…
ಸಂಸತ್ಸದಸ್ಯರ ವೇತನ ಮತ್ತು ಸವಲತ್ತುಗಳ ಪ್ರಮಾಣವನ್ನು ಹೆಚ್ಚಿಸಬೇಕೆಂಬ ಪ್ರಸ್ತಾವ ಈಚೆಗೆ ಚರ್ಚೆಯ ವಿಷಯವಾಗಿದೆ. ಸಾಂಸದರು ತಮ್ಮ ಜನಪರ ಕರ್ತವ್ಯಗಳನ್ನು ಎಷ್ಟುಮಟ್ಟಿಗೆ ನಿರ್ವಹಿಸುತ್ತಿದ್ದಾರೆ ಎಂಬ ಬಗೆಗೇ ಸಾರ್ವಜನಿಕರಲ್ಲಿ ಅಸಂತೃಪ್ತಿ ಮೂಡಿರುವುದರ ಹಿನ್ನೆಲೆಯಲ್ಲಿಯೆ ಅವರ ಸಂಬಳಸಾರಿಗೆಗಳನ್ನು ಶೇ. ನೂರರಷ್ಟು ಹೆಚ್ಚಿಸುವ ಪ್ರಸ್ತಾವ ಎದುರಾಗಿದೆ. ಬೇರೆ ವಲಯಗಳಲ್ಲಾದರೆ ಇಂತಹ ಸಂಗತಿಗಳು ತ್ರಯಸ್ಥ ಅನ್ಯರ ಪರಾಮರ್ಶನೆಗೆ ಒಳಪಟ್ಟಿರುತ್ತವೆ. ಆದರೆ ರಾಜ್ಯಾಂಗವ್ಯವಸ್ಥೆಯಲ್ಲಿ ಅತ್ಯುನ್ನತ ಅಧಿಕಾರಸ್ಥಾನ ಸಂಸತ್ತೇ ಆಗಿದೆ. ಹೀಗೆ ಮನವಿದಾರರು, ಪರಾಮರ್ಶಕರು, ನಿರ್ಣಯಕರ್ತರು – ಮೂರೂ ಸಾಂಸದರೇ ಆಗಿದ್ದಾರೆ. ಕಳೆದ ಚಳಿಗಾಲದ ಅಧಿವೇಶನದಲ್ಲಿ ಸಂಸತ್ತಿನ ಸದಸ್ಯರು ಕಲಾಪಗಳಿಗೆ ಸತತವಾಗಿ ಅಡಚಣೆಗಳನ್ನು ಒಡ್ಡುತ್ತಬಂದದ್ದು ಅವರ ಮೂಲಭೂತ ಉತ್ತರದಾಯಿತ್ವವನ್ನು ಸಾರ್ವಜನಿಕರು ಶಂಕಿಸುವುದಕ್ಕೆ ಎಡೆಮಾಡಿದೆ. ಇನ್ನೊಂದುಕಡೆ ಈಗಿನ ಅಧಿಕಾರಾರೂಢ ಸರ್ಕಾರವು ಸರಳತೆಗೆ ಬದ್ಧವೆಂದು ಹೇಳಿಕೊಳ್ಳುತ್ತಬಂದಿರುವ ಭೂಮಿಕೆಯಲ್ಲಿ ಸಾಂಸದರ ವೇತನ ಈಗಲೇ ಅಪೇಕ್ಷಿತಮಟ್ಟಕ್ಕಿಂತ ಅಧಿಕವಾಗಿದೆಯೆಂಬ ಭಾವನೆ ವ್ಯಾಪಕವಾಗಿ ಹರಡಿರುವುದೂ ಉಂಟು. ಈ ಕಾರಣಕ್ಕೂ ಈಗಿನ ಪ್ರಸ್ತಾವದ ಬಗೆಗೆ ಸದಭಿಪ್ರಾಯ ಇದ್ದಂತಿಲ್ಲ.
ಈ ಸಂಗತಿಗಳ ವಿಮರ್ಶೆಯು ನೂರಕ್ಕೆ ನೂರರಷ್ಟು ವಸ್ತುನಿಷ್ಠವಾಗಿರುವುದು ಕಷ್ಟ; ಆದರೆ ಅವನ್ನು ಅಲ್ಲಗಳೆಯುವುದೂ ಕಷ್ಟವೇ.
ಇದೀಗ ಸಾಂಸದರು ಪಡೆಯುತ್ತಿರುವ ರುಸುಮು ಹೀಗಿದೆ:
೧) ಸಂಬಳ – ತಿಂಗಳಿಗೆ: ರೂ ೫೦,೦೦೦.
೨) ಸ್ವಕ್ಷೇತ್ರ ಕಾರ್ಯ ಅಲೋಯೆನ್ಸ್ – ತಿಂಗಳಿಗೆ: ರೂ. ೪೫,೦೦೦.
೩) ಕಾರ್ಯಾಲಯ ಸಿಬ್ಬಂದಿ ಸೇವೆ: ರೂ. ೩೦,೦೦೦.
೪) ಕಛೇರಿ ಸಾಮಗ್ರಿ ಇತ್ಯಾದಿ: ರೂ. ೧೫,೦೦೦.
೫) ಅಧಿವೇಶನ ನಡೆಯುವಾಗ ದಿನಭತ್ಯ: ರೂ. ೨,೦೦೦.
ಸಾಂಸದರು ಯಾವುದೇ ನಿಮಿತ್ತದಲ್ಲಿ ಅಧಿವೇಶನದಿಂದ ಗೈರುಹಾಜರಾದಾಗಲೂ ದಿನಭತ್ಯೆ ಪಡೆಯುತ್ತಾರೆ.
ಮೂಗು; ಮೂಗುತಿ
ಮೇಲಿನದೆಲ್ಲ ವೇತನಾದಿಗಳಿಗಷ್ಟೆ ಸಂಬಂಧಿಸಿದ್ದಾಯಿತು. ಆದರೆ ಅದರಿಂದಾಚೆಗೆ ಸಾಂಸದರಿಗೆ ಸಲ್ಲುತ್ತಿರುವ ಸವಲತ್ತುಗಳನ್ನು ಕುರಿತೂ ಯೋಚಿಸಬೇಕಾಗಿದೆ.
೧) ಪ್ರತಿ ಸಾಂಸದರಿಗೆ ಅವರ ಚುನಾವಣಾ ಕ್ಷೇತ್ರದ ಅಭಿವೃದ್ಧಿಗಾಗಿ ಎಂದು ವರ್ಷಕ್ಕೆ ರೂ. ೨ ಕೋಟಿ.
೨) ಪ್ರತಿ ವರ್ಷ ಅವರಿಗೆ ಮತ್ತು ಒಬ್ಬ ಜೊತೆಗಾರರಿಗೆ ವಿಮಾನದಲ್ಲಾಗಲಿ ರೈಲಿನಲ್ಲಾಗಲಿ ಮೊದಲ ದರ್ಜೆಯಲ್ಲಿ ಪ್ರಯಾಣ ಮಾಡಲು ವರ್ಷಕ್ಕೆ ೩೪ ನಿಃಶುಲ್ಕ ಟಿಕೆಟುಗಳು; ಅವರ ಪತ್ನಿ/ಪತಿಗೆ ವರ್ಷದಲ್ಲಿ ೮ ಬಾರಿ ಅವರ ವಸತಿಯಿಂದ ದೆಹಲಿಗೆ ವಿಮಾನದಲ್ಲಿ ಪ್ರಯಾಣ ಮಾಡಲು ನಿಃಶುಲ್ಕ ಟಿಕೆಟುಗಳು. ರೈಲಿನಲ್ಲಿ ಎಷ್ಟುಬಾರಿ ಬೇಕಾದರೂ ಪ್ರಯಾಣ ಮಾಡಲು ಸವಲತ್ತು.
೩) ಕಾರನ್ನು ಕೊಳ್ಳಲು ರೂ. ೪ ಲಕ್ಷ ಬಡ್ಡಿರಹಿತ ಸಾಲ.
೪) ಪ್ರತಿ ಸಾಂಸದರಿಗೆ ೩ ಟೆಲಿಫೋನುಗಳು; ಒಟ್ಟು ೧.೫ ಲಕ್ಷ ನಿಃಶುಲ್ಕ ಸ್ಥಳೀಯ ಕರೆಗಳು; ಇವಲ್ಲದೆ ವಸತಿಸ್ಥಾನ ದೆಹಲಿಯಿಂದ ೧,೦೦೦ ಕಿ.ಮೀ.ಗೆ ಅಧಿಕ ದೂರವಿದ್ದಲ್ಲಿ ಇನ್ನೂ ಹೆಚ್ಚುವರಿ ೨೦,೦೦೦ ಕರೆಗಳು. ಅವರ ಕರೆಗಳು ಈ ಸಂಖ್ಯೆಯನ್ನೂ ಮೀರಿದಲ್ಲಿ ಹೆಚ್ಚುವರಿ ಕರೆಗಳಿಗೂ ಹಣ ಕೊಡಬೇಕಾದದ್ದಿಲ್ಲ; ಅವನ್ನು ಮುಂದಿನ ವರ್ಷದ ಲೆಕ್ಕಕ್ಕೆ ಸೇರಿಸಲಾಗುತ್ತದೆ.
೫) ಸಾಂಸದರ ವಸತಿಯ ಪೀಠೋಪಕರಣಗಳು, ವಿದ್ಯುತ್, ನೀರು, ದೋಭಿ ವೆಚ್ಚಗಳು – ಎಲ್ಲವೂ ಉಚಿತ.
೬) ೩ ತಿಂಗಳಿಗೊಮ್ಮೆ ಮನೆಯ ಪರದೆಗಳನ್ನೂ ಸೋಫಾ ಹೊದ್ದಿಕೆಗಳನ್ನೂ ಒಗೆದು ಶುದ್ಧೀಕರಿಸುವ ಖರ್ಚು.
೭) ಅವರ ಭವ್ಯ ವಸತಿ ಬಂಗಲೆಗೆ ಬಾಡಿಗೆ ಕೊಡಬೇಕಾದದ್ದಿಲ್ಲ.
೮) ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಚರಿಸುವಾಗ ಬೂತ್ಗಳಲ್ಲಿ ಟೋಲ್ ಶುಲ್ಕ ಕೊಡಬೇಕಾದದ್ದಿಲ್ಲ.
೯) ಸಂಸತ್ಸದಸ್ಯತ್ವದ ಅವಧಿ ಮುಗಿದ ಮೇಲೆ ಆಜೀವವೂ ರೂ. ೨೫,೦೦೦ ಮಾಸಿಕ ಪಿಂಚಣಿ; ಸದಸ್ಯರಾಗಿ ೫ ವರ್ಷ ಅವಧಿ ದಾಟಿದ್ದರೆ ತಿಂಗಳಿಗೆ ರೂ. ೧೫,೦೦೦ ಹೆಚ್ಚುವರಿ ಪಿಂಚಣಿ.
ಮೇಲಿನವು ಸ್ಥೂಲ ಅಂಕಿ-ಅಂಶಗಳಷ್ಟೆ. ಸಾಂಸದರು ಬೇರೆ ಮೂಲಗಳಿಂದ (ಉದಾ: ರಾಜ್ಯ ಶಾಸಕರಾಗಿದ್ದುದಕ್ಕೆ ಇತ್ಯಾದಿ) ವರಮಾನ ಪಡೆಯುತ್ತಿದ್ದರೂ ಅವರಿಗೆ ಕೇಂದ್ರಸರ್ಕಾರದಿಂದ ಪಿಂಚಣಿ ಬರುತ್ತದೆ.
ಮೇಲಣ ಸಂಬಳ-ಸವಲತ್ತುಗಳು ಸಾಲದೆಂದು ಇದೀಗ ಅವನ್ನು ಹೆಚ್ಚಿಸುವ ಪ್ರಸ್ತಾವ ಬಂದಿದೆ. ಶಾಸನವನ್ನು ಅಂಗೀಕರಿಸುವವರು ಅವರೇ ಆದುದರಿಂದ ಪ್ರಸ್ತಾವಕ್ಕೆ ವಿರೋಧ ಬರುವ ಸಂಭವ ಕಡಮೆ.
ಇದೀಗ ವಿತ್ತ ಸಚಿವಾಲಯಕ್ಕೆ ಸಲ್ಲಿಸಲಾಗಿದೆಯೆಂದು ವರದಿಯಾಗಿರುವ ಪ್ರಸ್ತಾವದಂತೆ ಕೆಳಕಂಡಂತೆ ವೇತನ ಹೆಚ್ಚಳವನ್ನು ಅಂಗೀಕಾರಕ್ಕಾಗಿ ಸೂಚಿಸಲಾಗಿದೆ:
೧) ಸಾಂಸದರ ಮಾಸಿಕ ವೇತನ : ರೂ. ೫೦,೦೦೦ದಿಂದ ರೂ. ೧ ಲಕ್ಷಕ್ಕೆ.
೨) ಕ್ಷೇತ್ರ ಭತ್ಯ : ರೂ. ೪೫,೦೦೦ದಿಂದ ರೂ. ೯೦,೦೦೦ಕ್ಕೆ.
೩) ಕಛೇರಿ ಭತ್ಯ : ರೂ. ೪೫,೦೦೦ದಿಂದ ರೂ. ೯೦,೦೦೦ಕ್ಕೆ.
೪) ಪಿಂಚಣಿ : ರೂ. ೨೦,೦೦೦ದಿಂದ ರೂ. ೩೫,೦೦೦ಕ್ಕೆ.
ಐದು ವರ್ಷಕ್ಕಿಂತ ಹೆಚ್ಚು ಸಮಯ ಸದಸ್ಯರಾಗಿದ್ದವರಿಗೆ ಪ್ರತಿ ವರ್ಷಕ್ಕೆ ರೂ. ೨,೦೦೦ದಂತೆ ಹೆಚ್ಚುವರಿ ಪಿಂಚಣಿ ನೀಡಬೇಕೆಂದೂ ಸಲಹೆ ಮಾಡಲಾಗಿದೆ. (ಈಗ ಹೆಚ್ಚುವರಿ ರೂ. ೧,೫೦೦ ನೀಡಲಾಗುತ್ತಿದೆ.)
ಸಾಂಸದರು ಮತ್ತು ಉದ್ಯಮಪ್ರಮುಖರು
ವೇತನ ಹೆಚ್ಚಳದ ಆವಶ್ಯಕತೆಗೆ ಎರಡು ಕಾರಣಗಳನ್ನು ನೀಡಲಾಗಿದೆ: (೧) ಕಡಮೆ ಸಂಬಳದ ಕಾರಣದಿಂದಾಗಿ
ಅಭ್ಯರ್ಥಿಗಳು ಸಾಂಸದರಾಗುವುದರಿಂದ ಹಿಂದೆಸರಿಯ ಬೇಕೆನಿಸುವಷ್ಟು ಕಡಮೆ ಸಂಬಳ ಇರದೆ ಆಕರ್ಷಕ ಮಟ್ಟದಲ್ಲಿ ಇರಬೇಕು. (೨) ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಾಂಸದರು ಗುರುತರ ಜವಾಬ್ದಾರಿಯನ್ನು ನಿರ್ವಹಿಸಬೇಕಾಗುತ್ತದೆ ಎಂಬುದನ್ನು ಮರೆಯಬಾರದು.
ಈ ಚಿಂತನಧಾಟಿಯು ಪರೀಕ್ಷಾರ್ಹವಾಗಿದೆ. ತಾತ್ತ್ವಿಕವಾಗಿ ಸಾಂಸದರಿಗೆ ಯೋಗ್ಯ ಸಂಬಳ ಸಲ್ಲಬೇಕೆಂಬುದನ್ನು ಎಲ್ಲರೂ ಒಪ್ಪುತ್ತಾರೆ. ಹೀಗಿದ್ದೂ ಈಗಿನ ಚಿಂತನೆಯ ಜಾಡು ಕೆಲವು ಪರಿಶೀಲನೆಗಳನ್ನು ಹೊಮ್ಮಿಸದಿರದು.
ರಾಜಕಾರಣದಿಂದಾಚೆಯ ವ್ಯವಹಾರಗಳಿಗೂ ರಾಜಕಾರಣ ನಡವಳಿಗೂ ಭೇದವುಂಟು. ಉದ್ಯಮಾದಿ ಕ್ಷೇತ್ರಗಳಲ್ಲಿ ಪ್ರಮುಖಸ್ಥಾನಗಳಲ್ಲಿರುವವರು ತಮ್ಮ ವಹಿವಾಟಿನಲ್ಲಿ ಸಮರ್ಪಕತೆಯನ್ನು ಕಾಯ್ದುಕೊಳ್ಳಲೇಬೇಕೆಂಬ, ನಷ್ಟಕ್ಕೆ ಎಡೆಗೊಡಬಾರದೆಂಬ ಮತ್ತು ಷೇರುದಾರ ಅಥವಾ ಇತರ ಪ್ರಾಯೋಜಕರಿಗೆ ಸಂತೃಪ್ತಿಯುಂಟಾಗಬೇಕೆಂಬ ಕಡ್ಡಾಯ ನಿರೀಕ್ಷಣೆ ಇರುತ್ತದೆ; ಕೆಲವು ಕಾನೂನಿನ ಆಯಾಮಗಳೂ ಇರುತ್ತವೆ. ಈ ಬಗೆಯ ಉತ್ತರಬಾಧ್ಯತೆಯನ್ನು ಸಾಂಸದರಿಂದ ನಿರೀಕ್ಷಿಸಲು ಅವಕಾಶವಿದೆಯೆ?
ಸಾಂಸದರ ಸಂಬಳ-ಸವಲತ್ತುಗಳ ಪ್ರಮಾಣವನ್ನು ಕುರಿತು ಯೋಚಿಸುವಾಗ ಅದು ಸಾಮಾನ್ಯ ಖಾಸಗಿ ಉದ್ಯಮದ ಪ್ರಮುಖನ ಗಳಿಕೆಗಿಂತ ಬಹುಪಾಲು ಅಧಿಕವಾಗಿದೆ ಎಂಬುದು ಮೇಲ್ನೋಟಕ್ಕೇ ವಿದಿತವಾಗುತ್ತದೆ. ಒಂದು ಅಂದಾಜಿನಂತೆ ನಮ್ಮ ಜನಸೇವಕ ಸಾಂಸದರ ವಾರ್ಷಿಕ ಗಳಿಕೆ ದೇಶದ ಒಬ್ಬ ನಾಗರಿಕನ ಸರಾಸರಿ ಗಳಿಕೆಯ ೬೮ ಪಟ್ಟು ಇದೆ. ಹೀಗಿದ್ದೂ ಸಾಂಸದರ ಈಗಿನ ಸಂಬಳ ಸಾಲದೆಂದೂ ಖಾಸಗಿ ವಲಯ ಪ್ರತಿಷ್ಠಿತರದಕ್ಕಿಂತ ಕಡಮೆ ಇದೆಯೆಂದೂ ಮಂಡಿಸಲಾಗಿದೆ.
ಕಾಯ್ದೆಯ ‘ಸವರಣೆ’ಯ ಆವಶ್ಯಕತೆ
ಜಗತ್ತಿನಲ್ಲಿಯೆ ಅತಿ ದೀರ್ಘವಾದದ್ದೆನಿಸಿರುವ ನಮ್ಮ ಸಂವಿಧಾನದಲ್ಲಿ ಸಾಂಸದರಿಗೆ ಯಾವ ‘ಜಾಬ್ ಸ್ಪೆಸಿಫಿಕೇಷನ್’ಗಳನ್ನೂ ನಿಗದಿಪಡಿಸಿಲ್ಲ. ಇಂತಹ ‘ಸವರಣೆ’ಯ ಆವಶ್ಯಕತೆ ಇದೆಯೆಂದು ಕಳೆದ ೬೫ ವರ್ಷಗಳಲ್ಲಿ ಯಾವೊಬ್ಬ ಸಾಂಸದರೂ ಹೇಳಿಲ್ಲ.
ಇದುವರೆಗೆ ತಮಗೆ ಎಷ್ಟು ಸಂಬಳ ಸಲ್ಲುತ್ತದೆಂಬುದನ್ನು ಸಾಂಸದರು ತಾವೇ ನಿಶ್ಚಯಿಸುತ್ತ ಬಂದಿದ್ದಾರೆ. ಕಳೆದ ೬೦ ವರ್ಷಗಳ ಅವಧಿಯಲ್ಲಿ ೨೮ ಬಾರಿ ಸಂಬಳ ಏರಿಕೆ ತಿದ್ದುಪಡಿಗಳು ಜಾರಿಯಾಗಿವೆ. ಅದಕ್ಕೆ ಹೋಲಿಸಿದರೆ ಕೇಂದ್ರಸರ್ಕಾರಿ ನೌಕರರ ಸಂಬಳದ ಸ್ಥಿತಿಯು ಪರಿಶೀಲನೆಗೆ ಒಳಪಟ್ಟಿರುವುದು ೬ ಬಾರಿ ಮಾತ್ರ. ಅಧಿಕಾರಿಗಳ ಗಳಿಕೆಗೆ ತೆರಿಗೆ ವಿನಾಯತಿ ಇಲ್ಲ.
ಈಗ್ಗೆ ಐದು ವರ್ಷ ಹಿಂದೆ (ಆಗಸ್ಟ್ ೨೦೧೦) ಸಾಂಸದರು ತಮ್ಮ ಸಂಬಳವನ್ನು ಏಕಾಏಕಿ ಮೂರುಪಟ್ಟು ಹೆಚ್ಚಿಸಿಕೊಂಡಿದ್ದರು (ರೂ. ೧೬,೦೦೦ದಿಂದ ರೂ. ೫೦,೦೦೦ಕ್ಕೆ).
ಸಾಂಸದರಿಗೆ ಗುರುತರ ಹೊಣೆಗಾರಿಕೆ ಇರುತ್ತದೆಂಬುದು ಈಚಿನ ಕಾಲದಲ್ಲಿ ಒಂದು ‘ಕವಿಸಮಯ’ವಷ್ಟೆ ಆಗಿದೆ. ನಿರೀಕ್ಷಿತ ಮಟ್ಟದ ಹೊಣೆಗಾರಿಕೆ ಇದ್ದಿದ್ದರೆ ದಿನಗಳಗಟ್ಟಲೆ ವ್ಯರ್ಥ ಆರೋಪ-ಪ್ರತ್ಯಾರೋಪಗಳಿಂದ ಸಂಸತ್ಕಲಾಪವನ್ನು ಮೇಲಿಂದ ಮೇಲೆ ಸ್ಥಗಿತಗೊಳಿಸುತ್ತಿರುವ ದುರಂತವನ್ನು ನಾವು ಕಾಣುತ್ತಿರಲಿಲ್ಲ.
ಅದು ಹಾಗಿರಲಿ. ವಿದೇಶಗಳಲ್ಲಿನ ಸಾಂಸದರ ಸಂಪಾದನೆಯನ್ನೂ ನಮ್ಮ ಸಾಂಸದರದನ್ನೂ ಹೋಲಿಸಿದರೆ ಏನು ಚಿತ್ರ ಮೂಡುತ್ತದೆ? ಇದೀಗ ಭಾರತದಲ್ಲಿನ ಸಾಂಸದರು ಪಡೆಯುತ್ತಿರುವ ಸಂಬಳ-ಸವಲತ್ತುಗಳ ಮೊತ್ತವು ಜಪಾನ್, ಇಟಲಿ, ಸಿಂಗಾಪುರಗಳ ಸಾಂಸದರದಕ್ಕಿಂತ ಮಿಗಿಲಾಗಿದೆ.
ಅಮೆರಿಕದ ಕಾನೂನಿನಲ್ಲಿ ಸಾಂಸದರು ತಮ್ಮ ಸಂಬಳದ ಶೇ. ೧೫ಕ್ಕಿಂತ ಹೆಚ್ಚು ಹಣವನ್ನು ಹೊರಗಿನ ಯಾವುದೇ ಮೂಲದಿಂದ ಪಡೆಯುವಂತಿಲ್ಲ.
ನಮ್ಮ ಹೆಚ್ಚು ಮಂದಿ ಸಾಂಸದರ ವೈಯಕ್ತಿಕ ಸಂಪನ್ನತೆ ಸಾಮಾನ್ಯರ ಕಲ್ಪನೆಗೂ ಮೀರಿದೆ. ಹಿಂದಿನ (೧೫ನೇ) ಲೋಕಸಭೆಯ ಸದಸ್ಯರಲ್ಲಿ ಶೇ. ೫೮ರಷ್ಟು ಮಂದಿ ಕರೋಡಪತಿಗಳು. ಈಗಿನ (೧೬ನೇ) ಲೋಕಸಭೆಯಲ್ಲಿ ಕರೋಡಪತಿಗಳ ಶೇಕಡಾವಾರು ಪ್ರಮಾಣ ೮೧ಕ್ಕೆ ಏರಿದೆ: ೫೪೧ರ ಪೈಕಿ ೪೪೨ ಮಂದಿ ತಾವು ಕರೋಡಪತಿಗಳೆಂದು ಪ್ರಮಾಣಪತ್ರಗಳಲ್ಲಿಯೆ ಘೋಷಿಸಿದ್ದಾರೆ.
ತ್ರಯಸ್ಥ ಪರಾಮರ್ಶನೆ ಬೇಡವೆ?
ವೇತನ ಹೆಚ್ಚಳದ ಪರವಾಗಿ ವಾದಿಸುತ್ತಿರುವವರು ಹೇಳುವುದು – ಈಗಿನ ಆರ್ಥಿಕ ಪರಿಸರದಲ್ಲಿ ಸಾಂಸದರಿಗಿರುವ ವೇತನ ಸಾಲುವಂತಿಲ್ಲ. ಇಬ್ಬರು ಸಿಬ್ಬಂದಿಗೆ ರೂ. ೩೦,೦೦೦ ನಿಗದಿ ಮಾಡಿದೆ. ಆದರೆ ರೂ. ೧೫,೦೦೦ದಷ್ಟು ಕಡಮೆ ವೇತನಕ್ಕೆ ಈಗ ಸಿಬ್ಬಂದಿ ಸಿಗುತ್ತಾರೆಯೆ? – ಇತ್ಯಾದಿ. ಆದರೆ ಇದರೊಡನೆಯೇ ಯೋಚಿಸಬೇಕಾದುದು ಸಾಂಸದರ ಸರ್ವೇಸಮಸ್ತ ಆದಾಯವೂ ತೆರಿಗೆ ಮುಕ್ತ – ಮೊದಲಾದ ಅನೇಕ ಸವಲತ್ತುಗಳನ್ನು ಕುರಿತೂ, ಅಲ್ಲವೆ?
೧೯೫೪ರ ಕಾಯ್ದೆಯಂತೆ (Salary, Allowances and Pension of Members of Parliament Act) ಸಾಂಸದರ ಸಂಬಳ-ಸವಲತ್ತುಗಳು ಕಾಲದಿಂದ ಕಾಲಕ್ಕೆ ನಿಗದಿಗೊಳ್ಳುತ್ತವೆ – ಸಾಮಾನ್ಯವಾಗಿ ೫ ವರ್ಷಕ್ಕೊಮ್ಮೆ. ಕಾಯ್ದೆಗೆ ಇತ್ತೀಚಿನ ತಿದ್ದುಪಡಿಯಾದದ್ದು ೨೦೧೦ರಲ್ಲಿ. ಆ ಸಮಯದಲ್ಲಿ ಸಾಂಸದರು ಒಮ್ಮೆಗೇ ತಮ್ಮ ವೇತನವನ್ನು ಮೂರುಪಟ್ಟು ಹೆಚ್ಚಿಸಿಕೊಂಡಿದ್ದುದು ತೀವ್ರ ಚರ್ಚೆಯ ವಿಷಯವಾಗಿತ್ತು. ಅದಕ್ಕೂ ಹಿಂದಿನಿಂದ ಸಾಂಸದರ ವೇತನಾದಿಗಳ ಪರಾಮರ್ಶನೆಯು ಒಂದು ಸ್ವತಂತ್ರ ಮಂಡಳಿಯಿಂದ ನಿರ್ಣಯಿಸಲ್ಪಡುವುದು ಅಪೇಕ್ಷಣೀಯವೆಂಬ ಅಭಿಪ್ರಾಯ ತ್ರಯಸ್ಥರಲ್ಲಿ ಇದ್ದಿತು.
ಈಗಿನ ವ್ಯವಸ್ಥೆಯಲ್ಲಿ ಸಮರ್ಪಕತೆಯ ಕೊರತೆ ಇದೆಯೆಂದು ಸರ್ಕಾರದ ಮಟ್ಟದಲ್ಲಿಯೆ ಹಿಂದೆ ಹಲವೊಮ್ಮೆ ಅಭಿಮತ ವ್ಯಕ್ತವಾಗಿರುವುದುಂಟು. ಉದಾಹರಣೆಗೆ: ಹಿಂದಿನ ಸಂಸದ್ವ್ಯವಹಾರ ಸಚಿವರಾಗಿದ್ದ ಪಾವನಕುಮಾರ್ ಬನ್ಸಲ್ ಅವರೇ ಸಂಸದಧಿವೇಶನ ನಡೆಯದಿದ್ದ ದಿನಗಳಲ್ಲಿ ಸದಸ್ಯರಿಗೆ ದೈನಿಕ ಭತ್ಯ ನೀಡುವುದು ಅನುಚಿತವೆಂದು ಹೇಳಿದ್ದರು. ಹಲಕೆಲವರು ಸದಸ್ಯರು ಅಧಿವೇಶನ ನಡೆಯದಿದ್ದ ದಿನಗಳಲ್ಲಿ ತಮಗೆ ಭತ್ಯೆ ಬೇಡವೆಂದು ತಿಳಿಸಿದ್ದುದೂ ಉಂಟು. ಎರಡನೆಯದಾಗಿ ಎಲ್ಲೆಡೆ ಇರುವಂತೆ ಸಾಂಸದರ ವೇತನಾದಿಗಳೂ ಅವರ ಕಾರ್ಯವಂತಿಕೆಯ ಮೇಲೆ ಅವಲಂಬಿತವಾಗಿರಬೇಕೆಂದು ಸ್ವತಂತ್ರ ವಿಶ್ಲೇಷಕ ವಲಯಗಳಲ್ಲಿ ಅಭಿಪ್ರಾಯವು ಹಿಂದಿನಿಂದ ಇದೆ.
ಪರ್ಯಾಯ ವಿನ್ಯಾಸ ಅಸಾಧ್ಯವಲ್ಲ
ಈಗ್ಗೆ ನಾಲ್ಕು ತಿಂಗಳ ಹಿಂದೆಯೂ ಈ ವಿಷಯದ ಸಮಾಲೋಚನೆಗಾಗಿ ಸ್ವತಂತ್ರ ಆಯೋಗ ಏರ್ಪಡಬೇಕೆಂದು ಈಗಿನ ಸಂಸದೀಯ ವ್ಯವಹಾರ ಸಚಿವ ವೆಂಕಯ್ಯನಾಯ್ಡು ಸಲಹೆ ಮಾಡಿ, ಈ ವಿಷಯದಲ್ಲಿ ಎಲ್ಲ ಪಕ್ಷಗಳಲ್ಲಿ ಒಮ್ಮತವಿರುವುದು ಯುಕ್ತವೆಂದು ಅಭಿಪ್ರಾಯವನ್ನು ವ್ಯಕ್ತಮಾಡಿದ್ದರು. ಆದರೆ ಈ ಸಲಹೆಯು ಉಭಯ ಸದನ ಸಮಿತಿಯ ಸಭೆಯಲ್ಲಿ ನಿರಾಕೃತವಾಯಿತು. ಆಗ ನೀಡಲಾದ ತಾಂತ್ರಿಕ ಕಾರಣವೆಂದರೆ – ಯಾವುದೇ ಸಮಿತಿಯು ಸಂಸತ್ತಿಗಿಂತ ಉಚ್ಚಸ್ಥಾನದ್ದು ಆಗಿರಬಾರದು – ಎಂದು. (ಹೀಗೆಂದರೆ ಉನ್ನತ ಸಮಿತಿಯ ಆವಶ್ಯಕತೆಯನ್ನು ಸೂಚಿಸಿದ್ದವರು ವೇತನ ಹೆಚ್ಚಳಕ್ಕೆ ವಿರೋಧವಾಗಿದ್ದವರೆಂದೇನಲ್ಲ.)
ಸಾಂಸದರಿಗೆ ಈಗ ಸಲ್ಲುತ್ತಿರುವ ಸಂಬಳವನ್ನು ಹೆಚ್ಚಿಸಬೇಕಾದ ಕಾರಣವಿದೆಯೆ ಎಂಬುದು ಒಂದು ಭಾಗ. ಇದಕ್ಕಿಂತ ಹೆಚ್ಚಿನ ಗಮನ ಬೇಡುವುದು – ಸಾಂಸದರಿಗೆ ಲಭ್ಯವಿರುವ ಸವಲತ್ತುಗಳ ಮೇರೆಮೀರಿದ ಪ್ರಮಾಣ.
ಈ ಸ್ಥಿತಿಯನ್ನು ಕುರಿತು ಯೋಚಿಸುವಾಗ ಉಂಟಾಗುವ ಒಂದು ಅನಿಸಿಕೆ: ಅವರ ಕಾರ್ಯನಿರ್ವಹಣೆಗೆ ಬಾಧಕವಾಗದಷ್ಟು ಪ್ರಮಾಣದ ಸೌಕರ್ಯವನ್ನು ಲಭ್ಯವಾಗಿಸುವ ದೃಷ್ಟಿಯಿಂದ ಅವರ ಮೂಲ ಸಂಬಳವನ್ನು ಮುಪ್ಪಟ್ಟೋ ಐದುಪಟ್ಟೋ ಹತ್ತುಪಟ್ಟೋ ಹೆಚ್ಚಿಸಿ ಎಲ್ಲ ಪ್ರತ್ಯೇಕ ಸವಲತ್ತು (ಪರ್ಕ್ಸ್)ಗಳನ್ನು ರದ್ದು ಮಾಡಬಹುದು – ಎಂದು.
ಜನರಿಗೆ ‘ಸೇವೆ’ ಸಲ್ಲಿಸಬೇಕೆಂದೇ ಉತ್ಸುಕರಾಗಿ ಮುಂದೆಬಂದಿರುವ ಅಭ್ಯರ್ಥಿಗಳಿಂದ ಒಂದಷ್ಟು ಸೌಕರ್ಯತ್ಯಾಗವನ್ನೂ ನಿರೀಕ್ಷಿಸಬಾರದೆ.