ಈ ವರ್ಷ ಎಂ.ಎಸ್. ಸುಬ್ಬುಲಕ್ಷ್ಮಿ (ಸೆಪ್ಟೆಂಬರ್ ೧೬, ೧೯೧೬ – ಡಿಸೆಂಬರ್ ೧೧, ೨೦೦೪) ಅವರ ಜನ್ಮಶತಮಾನೋತ್ಸವ. ತಮ್ಮ ಜೀವಿತಾವಧಿಯಲ್ಲೇ ಎಂ.ಎಸ್. ದಂತಕಥೆಯಂತಾಗಿದ್ದರು. ಅವರ ಜನಪ್ರಿಯತೆ ಆಸೇತುಹಿಮಾಚಲವಾಗಿತ್ತು. ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿ ‘ಭಾರತರತ್ನ’ವನ್ನು ಶಾಸ್ತ್ರೀಯ ಸಂಗೀತಕ್ಕೆ ಮೊದಲಾಗಿ ಪಡೆದವರು ಸುಬ್ಬುಲಕ್ಷ್ಮಿ. ಹೊರಪ್ರಪಂಚಕ್ಕೆ ಕರ್ನಾಟಕ ಸಂಗೀತದ ಸಂಕೇತ ಎಂದರೆ ಅವರೇ – ಎನ್ನುವ ಮಟ್ಟಕ್ಕೆ ಎಂ.ಎಸ್. ಬೆಳೆದಿದ್ದಾರೆ. ಹಿರಿಯ ಪತ್ರಕರ್ತ, ಅಂಕಣಕಾರ ಎಚ್. ಮಂಜುನಾಥ ಭಟ್ `ಉತ್ಥಾನ’ಕ್ಕಾಗಿಯೇ ಬರೆದ ವಿಶೇಷ ಲೇಖನ ಇದು.
ಅನುಭವವನ್ನು ಅಧ್ಯಾತ್ಮಕ್ಕೇರಿಸಿದ ಸಂಗೀತ
ಆಕಾಶವಾಣಿಯವರು ೧೯೪೭ರ ಸೆಪ್ಟೆಂಬರ್ನಲ್ಲಿ ಟಿ. ಸದಾಶಿವಂ ಅವರನ್ನು ಸಂಪರ್ಕಿಸಿ, ಗಾಂಧಿಯವರ ಜನ್ಮದಿನ ಎಂ.ಎಸ್. ಸುಬ್ಬುಲಕ್ಷ್ಮಿ ಅವರಿಗೆ ಕೆಲವು ಭಜನ್ಗಳನ್ನು ಹಾಡಲು ಸಾಧ್ಯವೇ ಎಂದು ಕೇಳಿದರು. ‘ಹರಿ ತುಮ ಹರೋ’ ಎಂಬ ಮೀರಾಭಜನ್ ಅನ್ನು ಸುಬ್ಬುಲಕ್ಷ್ಮಿ ಅವರೇ ಹಾಡಬೇಕೆಂದು ಗಾಂಧಿಯವರು ಒತ್ತಾಯ ಮಾಡಿದಾಗ ಎಲ್ಲರಿಗೂ ಆಶ್ಚರ್ಯವಾಯಿತು.
‘ಸುಬ್ಬುಲಕ್ಷ್ಮಿಗೆ ಆ ರಾಗ ಗೊತ್ತಿಲ್ಲ; ಮತ್ತು ಆ ಕೃತಿಯನ್ನು ಆಕೆ ಕಲಿತಿಲ್ಲ’ ಎಂದು ಸದಾಶಿವಂ ವಿನಯಪೂರ್ವಕವಾಗಿ ಒಂದು ಸಂದೇಶವನ್ನು ಕಳುಹಿಸಿದರು. ಅದಕ್ಕೆ ಗಾಂಧಿಜೀ, ‘ಪರವಾ ಇಲ್ಲ; ಬೇರೆಯವರಿಗೆ ಬದಲಾಗಿ ತನಗೆ ಸುಬ್ಬುಲಕ್ಷ್ಮಿ ಅವರಿಂದಲೇ ಕೇಳಬೇಕೆನ್ನುವ ಆಸೆಯಾಗಿದೆ’ ಎನ್ನುವ ಉತ್ತರವನ್ನು ಕಳುಹಿಸಿದರು. ಸುಬ್ಬುಲಕ್ಷ್ಮಿ ಒಪ್ಪಿಕೊಂಡು ಹೋಗಿ ಹಾಡಿದರು ಮುಂತಾಗಿ ಮುಂದಿನದೆಲ್ಲ ಇತಿಹಾಸ.
ನವೆಂಬರ್ ೨೯, ೧೯೫೩ರಂದು ನವದೆಹಲಿಯಲ್ಲಿ ಒಂದು ಸಹಾಯಾರ್ಥ ಕಾರ್ಯಕ್ರಮದ ಬಳಿಕ ಉಪಸ್ಥಿತರಿದ್ದ ಅಂದಿನ ಪ್ರಧಾನಿ ಜವಾಹರಲಾಲ್ ನೆಹರು ಅವರು, ನಾನು ಕೇವಲ ಒಬ್ಬ ಪ್ರಧಾನಿ; ನೀವಾದರೋ ಓರ್ವ ರಾಣಿ, ಸಂಗೀತದ ಸಾಮ್ರಾಜ್ಞಿ ಎಂದು ಉದ್ಗರಿದರು. ಸರೋಜಿನಿನಾಯ್ಡು ನನಗಿದ್ದ ‘ನೈಟಿಂಗೇಲ್ ಆಫ್ ಇಂಡಿಯಾ’ ಬಿರುದನ್ನು ಎಂ.ಎಸ್.ಗೆ ನೀಡಿದ್ದೇನೆ ಎಂದರು.
ಸಾಮಾನ್ಯವಾಗಿ ಹಿಂದೂಸ್ತಾನಿ ಸಂಗೀತಗಾರರು ಕರ್ನಾಟಕ ಸಂಗೀತವೆಂದರೆ ಮೂಗುಮುರಿಯುತ್ತಾರೆ, ಒಳ್ಳೆಯ ಮಾತುಗಳನ್ನಾಡುವುದಿಲ್ಲ ಎನ್ನುವ ಅಭಿಪ್ರಾಯವಿದೆ. ಹಿರಿಯ ಸಂಗೀತಗಾರ ಅಲ್ಲಾದಿಯಾಖಾನರು ಯಾವ ಪಕ್ಕವಾದ್ಯವೂ ಇಲ್ಲದೆ ಸುಬ್ಬುಲಕ್ಷ್ಮಿ ಅರ್ಧತಾಸು ಹಾಡಿದ ಪಂತುವರಾಳಿಯನ್ನು ಕೇಳಿ ಮನಸೋತು ಅವರನ್ನು ಮುಕ್ತಕಂಠದಿಂದ ಹೊಗಳಿದರು. ಬಡೇ ಗುಲಾಂ ಅಲಿಖಾನ್ ಎಂ.ಎಸ್. ಅವರನ್ನು ‘ಸುಸ್ವರ ಲಕ್ಷ್ಮೀ ಸುಬ್ಬುಲಕ್ಷ್ಮೀ’ ಎಂದೇ ಕರೆಯುತ್ತಿದ್ದರು. ಸುಬ್ಬುಲಕ್ಷ್ಮಿ ಅವರ ಕಚೇರಿ ಕೇಳಿದ ರೋಕ್ಷನಾರಾ ಬೇಗಂ ಅವರು ಭಾವಪರವಶರಾದರೆ ಉಸ್ತಾದ್ ವಿಲಾಯತ್ಖಾನ್ ಅವರು ಎಂ.ಎಸ್. ಹೆಸರನ್ನು ಹೇಳುವಾಗ ಕಣ್ಣುಮುಚ್ಚಿ ಕೈ ಮುಗಿಯುತ್ತಿದ್ದರಂತೆ.
ಮಾನವೀಯ ಅಂತಃಕರಣ
ವಿಶ್ವವಿಖ್ಯಾತ ಸಿತಾರ್ವಾದಕ ಪಂಡಿತ್ ರವಿಶಂಕರ್ ಅವರು ಒಂದೆಡೆ, ಎಂ.ಎಸ್. ಅವರದ್ದು ತೀವ್ರ ಭಾವಪೂರ್ಣತೆ ಮತ್ತು ತಾಂತ್ರಿಕ ಪರಿಪೂರ್ಣತೆಯನ್ನು ಸಮ್ಮಿಳಿತಗೊಳಿಸಿಕೊಂಡಿರುವ ಅಪರೂಪದ ಕಂಠಸಿರಿ. ಅವರು ಹಾಡುವಾಗ ಸೌಂದರ್ಯ ಮತ್ತು ಶುದ್ಧತೆ ಒಟ್ಟಿಗೆ ಹೊರಹೊಮ್ಮುತ್ತವೆ. ಅವರು ಕೇವಲ ಒಬ್ಬ ಒಳ್ಳೆಯ ಸಂಗೀತಗಾರ್ತಿಯಷ್ಟೇ ಅಲ್ಲ, ಅಪಾರ ಮಾನವೀಯ ಅಂತಃಕರಣವುಳ್ಳ ಜೀವಿ. ಸ್ವರಗಂಗೆಯೇ ಮೈವೆತ್ತಂತಿದ್ದರು ಎಂದು ಮುಕ್ತವಾಗಿ ಶ್ಲಾಘಿಸಿದ್ದಾರೆ. ಕಲ್ಕತ್ತಾದ ಸ್ಟುಡಿಯೋದಲ್ಲಿ ‘ಸಾವಿತ್ರಿ’ ಚಿತ್ರದ ಹಾಡುಗಳ ಧ್ವನಿಮುದ್ರಣ ನಡೆಯುತ್ತಿದ್ದಾಗ ನಡೆದ ಘಟನೆ ಇನ್ನಷ್ಟು ಕುತೂಹಲಕರವಿದೆ. ಕೆ.ಎಲ್. ಸೈಗಲ್, ಪಹಾಡಿ ಸೆನ್ಯಾಲ್, ಕಾನನ್ಬಾಲಾ, ಪನ್ನಾಲಾಲ್ ಘೋಷ್ ಮುಂತಾದ ಸಂಗೀತದ ದಿಗ್ಗಜರು ಬಂದು ಎಂ.ಎಸ್. ಅವರ ಗಾಯನವನ್ನು ಕೇಳುತ್ತಿದ್ದರು. ‘ಬ್ರೂಹಿ ಮುಕುಂದೇತಿ’ ಕೃತಿಯನ್ನು ಮತ್ತೆ ಮತ್ತೆ ಹಾಡಿಸಿ ಕೇಳಿ ಸಂತೋಷಪಡುತ್ತಿದ್ದರಂತೆ. ‘ಮೀರಾ’ ಚಿತ್ರೀಕರಣಕ್ಕಾಗಿ ರಾಜಸ್ಥಾನಕ್ಕೆ ಹೋದಾಗ ಉದಯಪುರದ ಮಹಾರಾಣಾ ಹಿಂದಿನ ದಿನಗಳಲ್ಲಾದರೆ ನಿಮ್ಮ ಈ ಕಲ್ಯಾಣಿರಾಗಕ್ಕೆ ನಾನು ನನ್ನ ರಾಜ್ಯವನ್ನೇ ಕೊಡುತ್ತಿದ್ದೆ ಎಂದರಂತೆ.
ಈ ವರ್ಷ ನಾವು ಜನ್ಮಶತಮಾನೋತ್ಸವವನ್ನು ಆಚರಿಸುತ್ತಿರುವ ಎಂ.ಎಸ್. ಸುಬ್ಬುಲಕ್ಷ್ಮಿ ಅವರ ಬಗ್ಗೆ ಇಂತಹ ಲೆಕ್ಕವಿಲ್ಲದಷ್ಟು ಮಾತು-ಘಟನೆಗಳನ್ನು ಉಲ್ಲೇಖಿಸಬಹುದು. ತಮ್ಮ ಜೀವಿತಾವಧಿಯಲ್ಲೇ ಅವರು ದಂತಕಥೆಯಂತಾಗಿದ್ದರು. ಅವರ ಜನಪ್ರಿಯತೆ ಆಸೇತುಹಿಮಾಚಲವಾಗಿತ್ತು. ಆದ್ದರಿಂದ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ‘ಭಾರತರತ್ನ’ವನ್ನು ಶಾಸ್ತ್ರೀಯ ಸಂಗೀತಕ್ಕೆ ಮೊದಲಾಗಿ ಪಡೆದವರು ಸುಬ್ಬುಲಕ್ಷ್ಮಿ ಅವರಾಗಿರುವುದು ಆಕಸ್ಮಿಕವಿರಲು ಸಾಧ್ಯವಿಲ್ಲ. ಹೊರಪ್ರಪಂಚಕ್ಕೆ ಕರ್ನಾಟಕ ಸಂಗೀತದ ಸಂಕೇತ ಅವರು ಎನ್ನುವ ಮಟ್ಟಕ್ಕೆ ಬೆಳೆದಿದ್ದಾರೆ.
ಸಾಮಾನ್ಯವಾಗಿ ಸಾಧಕರನ್ನು ಮೂರು ವರ್ಗಗಳಾಗಿ ವಿಭಾಗಿಸುತ್ತಾರೆ. ಕೆಲವರು ತಳ ಹಂತದಲ್ಲಿ ಆರಂಭಿಸಿ ಅಲ್ಲೇ ಉಳಿಯುತ್ತಾರೆ. ಇನ್ನು ಕೆಲವರು ತಳಭಾಗದಲ್ಲಿ ಆರಂಭಿಸಿ ತಮ್ಮ ಪ್ರಯತ್ನದಿಂದ ಮೇಲೆಕ್ಕೇರಿ ಅಲ್ಲಿ ತಮ್ಮ ಸ್ಥಾನವನ್ನು ಕಂಡುಕೊಳ್ಳುತ್ತಾರೆ. ಉಳಿದ ಕೆಲವರು ಮೇಲುಸ್ತರದಲ್ಲೇ ಆರಂಭಿಸಿ ಕೊನೆಯವರೆಗೂ ಅದನ್ನು ಕಾಯ್ದುಕೊಂಡು ಅಲ್ಲೇ ಇದ್ದುಬಿಡುತ್ತಾರೆ. ಇದರಲ್ಲಿ ಎಂ.ಎಸ್. ಸುಬ್ಬುಲಕ್ಷ್ಮಿ ಅವರನ್ನು ಮೂರನೇ ವರ್ಗದಲ್ಲಿ ಗುರುತಿಸಲಾಗುತ್ತದೆ. ಆಕೆ ೬೦ ವರ್ಷಗಳಿಗೂ ಅಧಿಕಕಾಲ ಈ ರಂಗದ ಮಧ್ಯಭಾಗದಲ್ಲಿ ವಿರಾಜಮಾನರಾಗಿದ್ದು ಸಂಗೀತರಸಿಕರನ್ನು ಆನಂದಸಾಗರದಲ್ಲಿ ತೇಲಿಸಿದರು. ಸಂಗೀತವೆಂದರೆ ಆಕೆಗೆ ಅರ್ಪಣಾ ಮನೋಭಾವ, ಬದ್ಧತೆ, ತನ್ಮಯತೆಗಳಿದ್ದ ಕಲೆಯಷ್ಟೇ ಅಲ್ಲ; ಅದು ತಪಸ್ಸಾಗಿತ್ತು; ಜೀವನಕ್ಕಿಂತ ಹೆಚ್ಚಿನದಾಗಿತ್ತು. ಅವರು ಸಂಗೀತವನ್ನೇ ಉಸಿರಾಡುತ್ತಿದ್ದರು ಎನ್ನಬಹುದು.
ಸುಬ್ಬುಲಕ್ಷ್ಮಿ ಅವರ ಸಂಗೀತದಲ್ಲಿ ರಾಜಿ ಎಂಬುದಿಲ್ಲ; ಚಮತ್ಕಾರದ ಪ್ರಯತ್ನವಿಲ್ಲ; ಶ್ರೋತೃಗಳ ಆಕರ್ಷಣೆಗೆ ಪ್ರಜ್ಞಾಪೂರ್ವಕ ಕಸರತ್ತಿಲ್ಲ; ಶೋಮ್ಯಾನ್ಶಿಪ್(ಪ್ರದರ್ಶನ)ಗಾಗಿ ಗುಣಮಟ್ಟದ ತ್ಯಾಗ ಇಲ್ಲ; ರೋಮಾಂಚನ ಕೊಡುವ ಹಂಬಲವಿಲ್ಲ; ಮೇಲೆತ್ತುವ ಪ್ರಯತ್ನ ಮಾತ್ರ. ಆಕೆ ತಮ್ಮ ಆತ್ಮದ ಆಳದಿಂದ ಹಾಡುತ್ತಾರೆ; ಆಗ ಜಗತ್ತು ಸಂಗೀತದ ಮ್ಯಾಜಿಕ್ನಲ್ಲಿ ತೇಲಾಡುತ್ತದೆ ಎನ್ನುವ ಸುಲೋಚನಾ ಪಟ್ಟಾಭಿರಾಮನ್ ಅವರ ಮಾತುಗಳು ಎಂ.ಎಸ್. ಸಂಗೀತಕ್ಕೆ ಬಹಳಷ್ಟು ನ್ಯಾಯ ಸಲ್ಲಿಸುತ್ತವೆ.
ಇನ್ನು ‘ಆಕೆ ಪೂಜ್ಯರು; ದೇವರು ಆಕೆಯ ಮೂಲಕ ಮಾತನಾಡುತ್ತಾನೆ. ಆ ಸ್ವರದ ಮೂಲಕ ಶಕುಂತಲಾ, ನಾರದ, ಮೀರಾ ಹಾಡಿದರು. ಅವರ ಗಾಯನದಿಂದ ತ್ಯಾಗರಾಜ, ಕಬೀರ, ಸೂರದಾಸ್ ಜೀವಂತವಾದರು. ಆಕೆಯ ಸಂಗೀತ ದೇವರ ಬಳಿಗೊಯ್ಯುವ ವಾಹನ’ ಮುಂತಾಗಿ ಭಾವಿಸುವ, ಅವರ ಸಂಗೀತವನ್ನು ಆಧ್ಯಾತ್ಮಿಕ ಮಟ್ಟಕ್ಕೇರಿಸುವವರು ಕೂಡ ಇದ್ದಾರೆ. ಒಟ್ಟಿನಲ್ಲಿ ಎಂ.ಎಸ್. ಆರಂಭದಲ್ಲಿ ತನ್ನ ತಾಯಿಯ ಪರಂಪರೆಯಿಂದ ಬಂದ ನುಡಿಗಟ್ಟಿನಲ್ಲೇ ಹಾಡಿದರು; ಮುಂದೆ ಆಧ್ಯಾತ್ಮಿಕತೆಯ ಆವಿರ್ಭಾವವಾಯಿತು ಎನ್ನಬಹುದು.
ಸಾಮಾನ್ಯವಾಗಿ ಸಾಧಕರನ್ನು ಮೂರು ವರ್ಗಗಳಾಗಿ ವಿಭಾಗಿಸುತ್ತಾರೆ. ಕೆಲವರು ತಳ ಹಂತದಲ್ಲಿ ಆರಂಭಿಸಿ ಅಲ್ಲೇ ಉಳಿಯುತ್ತಾರೆ. ಇನ್ನು ಕೆಲವರು ತಳಭಾಗದಲ್ಲಿ ಆರಂಭಿಸಿ ತಮ್ಮ ಪ್ರಯತ್ನದಿಂದ ಮೇಲೆಕ್ಕೇರಿ ಅಲ್ಲಿ ತಮ್ಮ ಸ್ಥಾನವನ್ನು ಕಂಡುಕೊಳ್ಳುತ್ತಾರೆ. ಉಳಿದ ಕೆಲವರು ಮೇಲುಸ್ತರದಲ್ಲೇ ಆರಂಭಿಸಿ ಕೊನೆಯವರೆಗೂ ಅದನ್ನು ಕಾಯ್ದುಕೊಂಡು ಅಲ್ಲೇ ಇದ್ದುಬಿಡುತ್ತಾರೆ. ಇದರಲ್ಲಿ ಎಂ.ಎಸ್. ಸುಬ್ಬುಲಕ್ಷ್ಮಿ ಅವರನ್ನು ಮೂರನೇ ವರ್ಗದಲ್ಲಿ ಗುರುತಿಸಲಾಗುತ್ತದೆ.
ಬಾಲ್ಯ, ಮೊದಲಪಾಠ
ನೂರು ವರ್ಷಗಳ ಹಿಂದೆ (೧೯೧೬) ದೇವಾಲಯಗಳ ನಗರ ಮಧುರೆಯಲ್ಲಿ ದೇವದಾಸಿ ಸಂಪ್ರದಾಯದ ವೀಣಾವಾದಕಿ ಷಣ್ಮುಖವಡಿವು ಅವರ ಹಿರಿಯಮಗಳಾಗಿ ಸುಬ್ಬುಲಕ್ಷ್ಮಿ ಜನಿಸಿದರು. ಮುಂದೆ ವೀಣಾವಾದಕಿಯಾದ ವಡಿವಾಂಬಾಳ್ ಅವರ ತಂಗಿಯಾದರೆ ಮೃದಂಗವಾದಕನಾದ ಶಕ್ತಿವೇಲು ಸಹೋದರ.
ಹತ್ತು ವರ್ಷವಿದ್ದಾಗ ಸಂಗೀತಜಗತ್ತಿಗೆ ಸುಬ್ಬುಲಕ್ಷ್ಮಿ ಪರಿಚಯವಾಯಿತು. ಎಚ್.ಎಂ.ವಿ. ಅವರ ಒಂದು ತಟ್ಟೆಗೆ ಝಂಝೋಟಿರಾಗದ ಒಂದು ತಮಿಳು ಹಾಡನ್ನು ಆಕೆ ಹಾಡಿದರು. ತಾಯಿಯೇ ಮೊದಲ ಗುರು. ವೇದಿಕೆಯಲ್ಲಿ ತಾಯಿಯ ವೀಣಾವಾದನದ ಜೊತೆ ಈಕೆ ಹಾಡುವುದಿತ್ತು. ತಟ್ಟೆಯ ಆ ಹಾಡಿನಲ್ಲೇ ಸೌಂದರ್ಯಾತ್ಮಕ ಸೂಚನೆಗಳಿದ್ದವು. ಹರಿತವಾದ ಮತ್ತು ಧೈರ್ಯದ ಸಂಗೀತಾಭಿವ್ಯಕ್ತಿ ಇತ್ತು. ಹಾಡಿಕೆಯಲ್ಲಿ ವೇಗವಿದ್ದು ವೇಗದ ಸಂಗತಿಗಳನ್ನು ಸಲೀಸಾಗಿ ಹಾಡಿದ್ದಾರೆ. ಸಂಗೀತ ಸ್ವರಭಾರ ಮುಕ್ತ ಮತ್ತು ಸಹಜವಾಗಿದ್ದು, ರಚನೆಯ ಬಾಗು-ಬಳುಕುಗಳಲ್ಲಿ ಸಾಗುವಾಗ ಲೋಪಗಳಾಗಿಲ್ಲ. ಆಗಲೇ ಆಕೆಯಲ್ಲಿ ದೊಡ್ಡ ಕಲಾವಿದರ ಪಕ್ವತೆಯಿತ್ತು. ವಿನಿಕೆಯಲ್ಲಿ ಶಕ್ತಿ ಮತ್ತು ತಾನು ಅಪೂರ್ವ ಎಂಬ ಆತ್ಮವಿಶ್ವಾಸವಿದೆ. ಜೊತೆಗೆ ಮಗುವಿನ ಮುಗ್ಧತೆಯೂ ಇದೆ. ಸಂಗೀತವಲ್ಲದೆ ಆಕೆಗೆ ಬೇರೇನೂ ಗೊತ್ತಿಲ್ಲ; ಆ ಗಾಯನದಲ್ಲಿ ಸಂದೇಹ-ಸಂದಿಗ್ಧತೆಗಳೂ ಇಲ್ಲ ಎಂದು ಖ್ಯಾತ ಗಾಯಕ ಟಿ.ಎಂ. ಕೃಷ್ಣ ವಿಶ್ಲೇಷಿಸುತ್ತಾರೆ.
ಕುತೂಹಲದ ಒಂದು ಸಂಗತಿ ಎಂದರೆ ಸಂಗೀತಕ್ಕೆ ಆಧ್ಯಾತ್ಮಿಕದ ಸ್ಪರ್ಶನೀಡುವ ಒಂದು ಘಟನೆ ಎಂ.ಎಸ್. ಅವರ ಬಾಲ್ಯಜೀವನದಲ್ಲಿ ನಡೆದಿತ್ತು. ಪುಟ್ಟ ಬಾಲಕಿಯಾದ ಆಕೆ ಮನೆಬಾಗಿಲಲ್ಲಿ ನಿಂತು ಬೀದಿಯಲ್ಲಿ ಹೋಗಿಬರುವವರನ್ನು ನೋಡುತ್ತಿದ್ದಾಗ, ಕಾವಿಪಂಚೆ, ಹಣೆ-ಕೈಗಳಲ್ಲಿ ವಿಭೂತಿ, ಕುತ್ತಿಗೆಯಲ್ಲಿ ರುದ್ರಾಕ್ಷಿಮಾಲೆ, ಕೈಯಲ್ಲಿ ತಾಮ್ರದ ತಂಬಿಗೆ ಮತ್ತು ಕಮಂಡಲು ಹಿಡಿದ ಓರ್ವ ವೃದ್ಧರು ಸಾಗಿಹೋಗುತ್ತಿದ್ದರು. ಒಂದು ದಿನ ಆತ, ಮಗು, ನಿನಗೊಂದು ಹಾಡು ಹೇಳಿಕೊಡಬೇಕೆನಿಸಿದೆ; ಕಲಿಯುತ್ತೀಯಾ? ಎಂದು ಕೇಳಿದರು. ಈಕೆ ಒಪ್ಪಿದಾಗ ‘ಘೃತಗುಡ ಪಾಯಸಂ’ ಎಂಬ ಶ್ಲೋಕದಿಂದ ಪಾಠವನ್ನು ಆರಂಭಿಸಿದರು. ಅದು ಗ್ರಂಥ ಎಂಬ ಭಾಷೆಯ ರಚನೆ; ಈಗ ಆ ಭಾಷೆ ಕಾಣಿಸುವುದಿಲ್ಲ. ಆತ ತೀರ್ಥಯಾತ್ರೆಗೆಂದು ಕಾಶಿಗೆ ಹೋಗುವ ತನಕ ಪಾಠ ನಡೆಯಿತು ಎಂದು ಸುಬ್ಬುಲಕ್ಷ್ಮಿ ತಮ್ಮ ಬಾಲ್ಯದ ನೆನಪುಗಳಲ್ಲಿ ಹೇಳಿದ್ದಾರೆ; ಅವರ ಗಾಯನದ ಭಾಷಾವೈವಿಧ್ಯವೂ ಅಲ್ಲೇ ಆರಂಭವಾಯಿತು ಎನ್ನಬಹುದೇನೊ!
ತಾಯಿಯೇ ಗುರು
ಎಂ.ಎಸ್. ಅವರ ತಾಯಿ, ವೀಣಾವಾದಕಿ ಷಣ್ಮುಖವಡಿವು
ಶಾಲೆಯಲ್ಲಿ ಎಂ.ಎಸ್. ಐದನೇ ತರಗತಿವರೆಗೆ ಕಲಿತರು. ಒಬ್ಬ ಶಿಕ್ಷಕ ವಿನಾಕಾರಣ ತುಂಬ ಹೊಡೆದರಂತೆ. ಅದರಿಂದ ಹೆದರಿ ಶಾಲೆಯನ್ನೇ ಬಿಟ್ಟರು; ಮತ್ತೆ ಅಮ್ಮನೇ ಗುರು. ಹಾಗೆ ಕುಳಿತು ಅವಳು ನನಗೆ ಎಂದೂ ಪಾಠ ಹೇಳಿಕೊಡದಿದ್ದರೂ ನಿಜವಾಗಿ ಅವಳೇ ನನ್ನ ಮೊದಲ ಗುರು. ಅವಳು ತನ್ನ ಶಿಷ್ಯರಿಗೆ ಹೇಳಿಕೊಡುವಾಗ ನಾನು ಕೇಳಿ ಕಲಿತದ್ದೇ ಹೆಚ್ಚು. ಹಾಗೆಯೇ ಅವಳು ವೀಣೆ ನುಡಿಸುವಾಗ ಜೊತೆಗೆ ಹಾಡುತ್ತಲೂ ಕಲಿಯುತ್ತಿದ್ದೆ; ಮತ್ತು ನನಗೆ ಸಂಗೀತಪಾಠಕ್ಕೆಂದು ಶ್ರೀನಿವಾಸ ಅಯ್ಯಂಗಾರ್ ಎಂಬ ಗುರುಗಳನ್ನು ಅಮ್ಮ ಗೊತ್ತುಮಾಡಿದ್ದಳು. ಅವರಿಂದ ಚೆನ್ನಾಗಿಯೇ ಕಲಿಯುತ್ತಿದ್ದೆ. ಆದರೆ ಪಾಠ ಹೆಚ್ಚು ಮುಂದುವರಿಯಲಿಲ್ಲ. ಯಾವುದೋ ಕೆಲಸದ ನಿಮಿತ್ತ ಬೇರೆ ಊರಿಗೆ ಹೋದ ಅವರು ಮರಳಲಿಲ್ಲ. ಅಲ್ಲೇ ಕಾಲವಾದರು. ದೊಡ್ಡ ಸಂಗೀತಗಾರರ ಸಂಗೀತವನ್ನು ಕೇಳಿ ಕಲಿಯುತ್ತಿದ್ದೆ. ರೇಡಿಯೋದಲ್ಲಿ ಪ್ರಸಾರವಾಗುವ ಸಂಗೀತವನ್ನು ತುಂಬ ಕೇಳುತ್ತಿದ್ದೆ. ನಮ್ಮ ಮನೆಯಲ್ಲಿ ರೇಡಿಯೋ ಇರಲಿಲ್ಲ. ಆದರೆ ನಮ್ಮ ಮನೆ ಮಹಡಿಯ ಮೆಟ್ಟಿಲಿನ ಮೇಲೆ ಹತ್ತಿ ಕುಳಿತರೆ ಪಕ್ಕದ ಮನೆಯ ರೇಡಿಯೋ ಸ್ಪಷ್ಟವಾಗಿ ಕೇಳುತ್ತಿತ್ತು ಎಂದು ಎಂ.ಎಸ್. ಹೇಳಿದ್ದಾರೆ (‘ಭುವನದ ಭಾಗ್ಯ – ಎಂ.ಎಸ್.’ ಲೇಖಕರು – ಶೈಲಜ ಮತ್ತು ಟಿ.ಎಸ್. ವೇಣುಗೋಪಾಲ್).
ಅಂದಿನ ಯುವತಿ ಎಂ.ಎಸ್. ಗಾಯನದಲ್ಲೊಂದು ಧೈರ್ಯ ಕಾಣುತ್ತದೆ ಎನ್ನುತ್ತಾರೆ ಟಿ.ಎಂ. ಕೃಷ್ಣ. ಅದೇ ಧೈರ್ಯದಿಂದ ೨೦ ವರ್ಷದ ಆಕೆ ತಾಯಿಯ ಮನೆಯಿಂದ ಹೊರನಡೆದರು. ಚೆನ್ನೈಗೆ ಹೋಗಿ ಮಧ್ಯಮವರ್ಗದ ಬ್ರಾಹ್ಮಣ ಸಮಾಜಕ್ಕೆ ಸೇರಿದ ಟಿ. ಸದಾಶಿವಂ ಮನೆಯಲ್ಲಿ ನಿಂತರು. ಅವರು ‘ಆನಂದ ವಿಕಟನ್’ (ತಮಿಳು) ಪತ್ರಿಕೆಯ ಸ್ಥಾಪಕರಲ್ಲೊಬ್ಬರು. ಪತ್ರಿಕೆಯ ಜಾಹೀರಾತು ವಿಭಾಗವನ್ನು ನೋಡಿಕೊಳ್ಳುತ್ತಿದ್ದರು. ಸ್ವಾತಂತ್ರ್ಯಹೋರಾಟದಲ್ಲಿ ಭಾಗಿಯಾದವರು ಮತ್ತು ಚಕ್ರವರ್ತಿ ರಾಜಗೋಪಾಲಾಚಾರಿ ಅವರ ಹಿಂಬಾಲಕ. ಹಿಂದೆ ಪ್ರಸಿದ್ಧ ಮದ್ರಾಸ್ ಮ್ಯೂಸಿಕ್ ಅಕಾಡೆಮಿಯಲ್ಲಿ ಅವರ ಪರಿಚಯವಾಗಿತ್ತು. ಈಗ ರಕ್ಷಣೆ ಕೇಳಿ ಹೋಗಿದ್ದರು. ಕಾರಣ ತಾಯಿ ತಮ್ಮ ದೇವದಾಸಿ ಪದ್ಧತಿಯಂತೆ ಯಾರಾದರೂ ಶ್ರೀಮಂತರಿಗೆ ಜೊತೆ ಮಾಡಲು ಮುಂದಾಗಿದ್ದರು.
ಹೀಗೆ ಎಂ.ಎಸ್. ಕರ್ನಾಟಕ ಸಂಗೀತದ ಕೇಂದ್ರಸ್ಥಳ ಮದ್ರಾಸಿಗೆ (ಚೆನ್ನೈ) ಬಂದಂತಾಯಿತು. ಸದಾಶಿವಂ ಆಗಲೇ ವಿವಾಹಿತರು. ವಯಸ್ಸಿನ ಅಂತರವೂ (೧೪ ವರ್ಷ) ಇತ್ತು. ‘ಜನ ಏನೆಂದಾರು’ ಎಂದು ಸದಾಶಿವಂರಿಗೆ ಅನ್ನಿಸಿರಲೇಬೇಕು. ಆದರೆ ಎಂ.ಎಸ್. ಕಡೆಗಿನ ಪ್ರೀತಿ, ಅನುಕಂಪ ಒಂದೆಡೆಯಾದರೆ ಅವರ ಸಂಗೀತದ ಶ್ರೇಷ್ಠತೆ ಮತ್ತು ಉಜ್ಜ್ವಲ ಭವಿಷ್ಯಗಳನ್ನು ಆತ ಊಹಿಸಿರಬೇಕು. ಇನ್ನು ಅವರಲ್ಲಿ ಪ್ರಗತಿಪರ ಚಿಂತನೆಯೂ ಇತ್ತು. ನಾಲ್ಕು ವರ್ಷಗಳ ಬಳಿಕ ೧೯೪೦ರಲ್ಲಿ ಅವರು ವಿವಾಹವಾದರು. ಸದಾಶಿವಂಗೆ ಇಬ್ಬರು ಹೆಣ್ಣುಮಕ್ಕಳು. ಅವರಲ್ಲಿ ಒಬ್ಬಾಕೆ ರಾಧಾ ವಿಶ್ವನಾಥನ್ ಎಂ.ಎಸ್. ಅವರ ಸಹಗಾಯಕಿಯಾಗಿ ನೆಲೆನಿಂತರು.
ಆರಂಭದಲ್ಲೇ ಸ್ವಂತಿಕೆ
ಆರಂಭದ ವರ್ಷಗಳಲ್ಲಿ ಎಂ.ಎಸ್. ಸಂಗೀತದ ಶೈಲಿ ೧೦ ವರ್ಷ ಇದ್ದಾಗ ಇದ್ದುದರ ಮುಂದುವರಿಕೆಯೇ ಆಗಿತ್ತು. ಅವರಿಗೆ ಬಿರ್ಕಾದ ಸ್ವರ ಇತ್ತು. ಸಂಗೀತದ ಲಕ್ಷಣದ ಜೊತೆಗೆ ರಾಜಿ ಮಾಡಿಕೊಳ್ಳದೆ ಖಚಿತವಾಗಿ ನಿರೂಪಿಸುವ ಸಾಮರ್ಥ್ಯವಿತ್ತು; ಗಾಯನವನ್ನು ಬೌದ್ಧಿಕಗೊಳಿಸದೆ ಹಾಡುವ ಗುಣವಿತ್ತು. ಅದು ಎಚ್ಚರವಿಲ್ಲದ ಗಾಯನವಲ್ಲ; ನಿರ್ಭೀತಗಾಯನ ಎನ್ನುವ ಟಿ.ಎಂ.ಕೆ., ಸುಬ್ಬುಲಕ್ಷ್ಮಿ ಅವರ ಆರಂಭದ ರೆಕಾರ್ಡ್ಗಳನ್ನು ಕೇಳಿದರೆ ಆಕೆ ತುಂಬ ಸಮಕಾಲೀನರಾದ ಯುವ ಗಾಯಕಿ, ಸ್ತ್ರೀವಾದಿ ಮತ್ತು ಉದಾರವಾದಿ ಎನಿಸುತ್ತದೆ; ಜನರ ಮಾತಿಗೆ ಅಂಜುವವಳಲ್ಲ ಎನಿಸುತ್ತದೆ. ಈ ಸ್ವಭಾವ ದೇವದಾಸಿ ಸಂಗೀತಪರಂಪರೆಯಲ್ಲೇ ಇದೆ. ಏಕೆಂದರೆ ಅವರಿಗೆ ಅಸರ್ಟಿವ್ (ದೃಢ) ಆಗಿರುವುದು ಹಾಗೂ ಕಲಾತ್ಮಕ ಆತ್ಮವಿಶ್ವಾಸ ಅನಿವಾರ್ಯ. ತಮ್ಮ ಜೀವನವನ್ನು ಅವರು ಶೋಷಣೆಯಿಂದ ರಕ್ಷಿಸಿಕೊಳ್ಳಬೇಕಿತ್ತು. ಮಾಮೂಲಿ ಕಲಾವಿದರೆಂದರೆ ಸಾಲದು. ಅವರ ಕಸುಬಿಗೆ ಗೌರವ ಬೇಕಿತ್ತು. ಕಲಾಸೃಷ್ಟಿಯ ಸಾರ್ವಭೌಮತೆಯನ್ನು ಕಾಪಾಡಬೇಕಿತ್ತು. ದೇವದಾಸಿ ಪರಂಪರೆಯ ಕಲಿಕೆಯ ಸ್ವಭಾವದಲ್ಲೇ ಪುರುಷಪ್ರಧಾನವಲ್ಲದ, ಯಥಾಸ್ಥಿತಿಯೂ (ಕನ್ಸರ್ವೇಟಿವ್) ಅಲ್ಲದ ಗುಣಗಳಿದ್ದವು ಎಂದು ವಿವರಿಸುತ್ತಾರೆ.
ಎಂ.ಎಸ್. ಅವರ ಆರಂಭಿಕ ಸಂಗೀತದ ಇನ್ನೂ ಒಂದು ವ್ಯತ್ಯಾಸವನ್ನು ಗುರುತಿಸುವ ಟಿ.ಎಂ. ಕೃಷ್ಣ, ಅವರ ಸಂಗೀತವು ಮದ್ರಾಸಿನ ಪ್ರಧಾನ ದೇವದಾಸಿ ಸಂಗೀತಪರಂಪರೆಗಿಂತ ಭಿನ್ನವಾದದ್ದು. ಮದ್ರಾಸಿನದ್ದು ಸಂಗೀತದ ದಂತಕಥೆ ವೀಣಾ ಧನಮ್ಮಾಳ್ ಅವರದ್ದು. ೨೦ನೇ ಶತಮಾನದ ಆರಂಭದ ಹೊತ್ತಿಗೆ ಮಹತ್ತ್ವ ಪಡೆದ ಆ ವಿನ್ಯಾಸ ನಿಧಾನವಾಗಿದ್ದು, ಮೃದುವಾದ ತಿರುವುಗಳಿಂದ ಕೂಡಿದ ಜಟಿಲವೂ ಘನವೂ ಆದ ಸಂಗೀತ. ಧನಮ್ಮಾಳ್ ಅವರ ಸಂಗೀತವು ಮುಂದೆ ಮೊಮ್ಮಕ್ಕಳಾದ ಟಿ. ಬೃಂದಾ, ಟಿ. ಮುಕ್ತಾ ಮತ್ತು ಟಿ. ವಿಶ್ವನಾಥನ್ರಿಂದಾಗಿ ಅದೇ ಏಕೈಕ ದೇವದಾಸಿ ಪರಂಪರೆ ಎನಿಸಿತ್ತು. ದೇವದಾಸಿ ಮನೆತನಗಳು ಸಂಗೀತದ ವೈವಿಧ್ಯಮಯ ಚಿಂತನೆಗಳನ್ನು ಬೆಳೆಸಿವೆ ಎಂಬುದನ್ನು ಮರೆಯುವಂತಾಯಿತು. ಆರಂಭದ ಎಂ.ಎಸ್. ನಮಗೆ ಆ ವಾಸ್ತವಿಕತೆಯನ್ನು ಕೂಡ ನೆನಪಿಸುತ್ತಾರೆ ಎಂದವರು ತಿಳಿಸುತ್ತಾರೆ.
ದೇವದಾಸಿ ಮನೆತನಗಳಿಂದ ಬಂದ ಕಲಾವಿದೆಯರು ಏಕೆ ಅಸರ್ಟಿವ್ ಆಗಿ ಗಟ್ಟಿನಿಲವನ್ನು ತೋರಿಸಬೇಕಾಯಿತು ಎಂಬುದಕ್ಕೆ ಮಂಗಳೂರಿನ ಪ್ರಾಧ್ಯಾಪಕ, ಲೇಖಕ ಮಹಾಲಿಂಗಭಟ್ ಒಂದೆರಡು ಕಾರಣಗಳನ್ನು ನೀಡಿದ್ದಾರೆ (ಲೇಖನ – ಕಲೆಯ ಬಸಿರಲ್ಲಿ ಮುಗಿಯದಷ್ಟು ಹೂಗಳು, ‘ಹೊಸದಿಗಂತ’ ದೀಪಾವಳಿ ಸಂಚಿಕೆ, ೨೦೧೪) ಸ್ವಾತಂತ್ರ್ಯ ಹೋರಾಟದೊಂದಿಗೆ ನಮ್ಮದು ವಿಶಿಷ್ಟ ದೇಶ ಎಂಬ ರಾಷ್ಟ್ರೀಯತೆಯ ಆವೇಶ ನಮ್ಮೊಳಗೆ ಬೆಳೆದಂತೆಲ್ಲ ‘ನಮ್ಮೊಳಗೆ ಹಲವು ಕೊಳಕುಗಳಿವೆ’ ಎಂಬ ವಿಚಿತ್ರ ನಂಬುಗೆಗಳೂ ಬೆಳೆಯತೊಡಗಿದವು. ಈ ಕೊಳಕುಗಳನ್ನೆಲ್ಲ ಇಲ್ಲವಾಗಿಸಿ ನಾಳೆ ಅರಳಲಿರುವ ನಮ್ಮ ನೂತನ ರಾಷ್ಟ್ರವನ್ನು ಪರಿಶುದ್ಧಗೊಳಿಸಿಕೊಳ್ಳಬೇಕು ಎಂಬ ಆಸಕ್ತಿಯೂ ಬೆಳೆಯಿತು. ಇವರೆಲ್ಲ (ದೇವದಾಸಿಯರು) ಕುಟುಂಬಪದ್ಧತಿಗೆ ಮಾರಕ, ಗಂಡಸರನ್ನು ದಾರಿತಪ್ಪಿಸುವ ಮಾಟಗಾರ್ತಿಯರು, ಸಮಾಜದ ನೈತಿಕ ಆರೋಗ್ಯಕ್ಕೆ ಅಪಾಯಕಾರಿಗಳು ಎಂಬಂತೆ ದೇಶದುದ್ದಕ್ಕೆ ನಡೆದ ಅಪಪ್ರಚಾರ, ಸಮಾಜ ಸುಧಾರಕರ ಹೀಗಳೆತ, ಬ್ರಿಟಿಷ್ ಸರ್ಕಾರ ಇವರ ವಿರುದ್ಧ ತಂದ ಕಾನೂನು – ಇಂಥವೆಲ್ಲ ಒಟ್ಟಾಗಿ ಈ ಕಲಾವಿದೆಯರ ಮನೆತನಗಳ ಸ್ವಾಭಿಮಾನವನ್ನು ನಾಶಮಾಡಿದವು ಎಂದವರು ವಿಶ್ಲೇಷಿಸಿದ್ದಾರೆ. ದೇವದಾಸಿ ಕಲಾವಿದೆಯರ ಮೇಲೆ ಇಂತಹ ಬೆಳವಣಿಗೆಗಳು ಪರಿಣಾಮ ಬೀರಿದ್ದರೆ ಅದರಲ್ಲಿ ಆಶ್ವರ್ಯವೇನೂ ಇಲ್ಲ.
೧೯೪೦ರ ದಶಕದ ಮಧ್ಯದ ಹೊತ್ತಿಗೆ ಎಂ.ಎಸ್. ಪ್ರಸಿದ್ಧ ಗಾಯಕಿಯಾಗಿ, ಚಿತ್ರನಟಿಯಾಗಿ ಎರಡೂ ಪರಸ್ಪರ ಪೂರಕವಾಗಿ ಬೆಳೆದರು. ೧೯೪೦ರ ಜುಲೈನಲ್ಲಿ ಸದಾಶಿವಂ ಜೊತೆ ವಿವಾಹ ಆಗುವುದರೊಂದಿಗೆ ಅವರ ಸಂಗೀತಜೀವನದಲ್ಲೂ ಬದಲಾವಣೆಗಳು ಕಂಡುಬಂದವು. `ಮೀರಾ’ ಪಾತ್ರಮಾಡಿದ ಆಕೆ ತನ್ನನ್ನು ದಾಸಿ ಮೀರಾ ಎಂದುಕೊಂಡರು.
ಸದಾಶಿವಂ ಸಂಸಾರ: ಎಡದಿಂದ ಬಲಕ್ಕೆ – ಸದಾಶಿವಂ ಮಗಳು ರಾಧಾ, ಸದಾಶಿವಂ, ಎಂ.ಎಸ್. ಸುಬ್ಬುಲಕ್ಷ್ಮಿ ಹಾಗೂ ಸದಾಶಿವಂ ಅವರ ಇನ್ನೊಬ್ಬಳು ಮಗಳು ವಿಜಯಾ.
ಜಿ.ಎನ್.ಬಿ. ಪ್ರಭಾವ
ಎಂ.ಎಸ್. ಅವರ ಸಂಗೀತ ಮೇಲಿನ ಇನ್ನೊಂದು ಪ್ರಭಾವವಾಗಿ ಟಿ.ಎಂ.ಕೆ., ಸಂಗೀತಗಾರ ಜಿ.ಎನ್. ಬಾಲಸುಬ್ರಹ್ಮಣ್ಯಮ್ ಅವರೊಂದಿಗಾದ ಪರಿಚಯ ಮತ್ತು ಒಡನಾಟಗಳನ್ನು ಉಲ್ಲೇಖಿಸುತ್ತಾರೆ. ಜಿ.ಎನ್.ಬಿ. ಅವರು ಎಂ.ಎಸ್.ಗಿಂತ ಆರುವರ್ಷ ದೊಡ್ಡವರು. ಆತನನ್ನು ಈಕೆ ಮೆಚ್ಚಿದ್ದಷ್ಟೇ ಅಲ್ಲ; ಅವರು ಪರಸ್ಪರ ಗಾಢ ಪ್ರೀತಿಯ ಭಾವನೆಯನ್ನು ಹೊಂದಿದ್ದರು; ಸಿನೆಮಾದಲ್ಲಿ ಜೊತೆಯಾಗಿ ಅಭಿನಯಿಸಿದ್ದರು. ಎಂ.ಎಸ್. ಬರೆದ ಪ್ರೇಮಪತ್ರಗಳನ್ನು ಜಿ.ಎನ್.ಬಿ. ಕೊನೆಯ ತನಕ ಇಟ್ಟುಕೊಂಡಿದ್ದರಂತೆ.
೧೯೩೦ರ ದಶಕದ ಕೊನೆಯ ಹೊತ್ತಿಗೆ ಜಿ.ಎನ್.ಬಿ. ಕರ್ನಾಟಕ ಸಂಗೀತ ಪ್ರಸ್ತುತಿಯ ಸ್ವರೂಪ, ಚಿಂತನೆ ಮತ್ತು ವಿಧಾನಗಳಲ್ಲಿ ಕ್ರಾಂತಿಯನ್ನೇ ಮಾಡಿದರು. ಇಂಗ್ಲಿಷ್ ಆನರ್ಸ್ ಪದವೀಧರರಾದ ಅವರು ಕರ್ನಾಟಕ ಸಂಗೀತ ಕ್ಷೇತ್ರಕ್ಕೆ ಪಾಶ್ಚಾತ್ಯ ವಿಶ್ಲೇಷಣೆಯನ್ನು ತಂದರು. ಮ್ಯಾಜಿಕ್ ಮಾಡುವ ಸ್ವರ, ಭಾವೋತ್ಕರ್ಷ ಉಂಟುಮಾಡುವ ವೇಗ, ಯುವ ಅಭಿವ್ಯಕ್ತಿಗಳ ಮೂಲಕ ಸಂಗೀತಪ್ರಿಯ ಯುವಜನರ ಮಧ್ಯೆ ಜಿ.ಎನ್.ಬಿ. ತುಂಬ ಜನಪ್ರಿಯರಾದರು. ಸುಮಾರು ೧೯೫೦ರ ವರೆಗಿನ ಎಂ.ಎಸ್. ಸಂಗೀತ ಜಿ.ಎನ್.ಬಿ. ಸ್ವರ (souಟಿಜ)ಕ್ಕೆ ನಿಕಟವಾಗಿತ್ತು. ಆ ಸಂಗೀತವನ್ನು ಸುಬ್ಬುಲಕ್ಷ್ಮಿ ಪ್ರಜ್ಞಾಪೂರ್ವಕವಾಗಿಯೇ ಅಂತಃಸ್ಥಗೊಳಿಸಿಕೊಂಡಿರಬೇಕು. ಸುಪ್ತಪ್ರಜ್ಞೆಯ ಮೇಲೂ ಆ ಪ್ರಭಾವ ಇದ್ದಿರಬೇಕು. ಅವರು ಜೊತೆಯಾಗಿ ಹಾಡದಿದ್ದರೂ ಹೊಂದಾಣಿಕೆ ಮಾಡಿಕೊಂಡಂತಿತ್ತು. ೧೯೪೦ರಲ್ಲಿ ‘ಶಕುಂತಲೈ’ ಸಿನೆಮಾದಲ್ಲಿ ಇಬ್ಬರೂ ಜೊತೆಯಾಗಿ (ದುಷ್ಯಂತ-ಶಕುಂತಲೆ) ಹಾಡಿದರು. ಆ ಸಿನೆಮಾದ ಅವರ ಯುಗಳಗೀತೆ ತನ್ನ ವಾದಕ್ಕೆ ಪುರಾವೆ ಒದಗಿಸುತ್ತದೆಂದು ಗುರುತಿಸುವ ಟಿ.ಎಂ.ಕೆ. ಆತ ಆಕೆಗೆ ಏನು ನೀಡಿದರೂ ಆಕೆ ಬಡ್ಡಿಸಹಿತ ವಾಪಸು ಕೊಡುತ್ತಿದ್ದರು ಎನ್ನುತ್ತಾರೆ.
೧೯೪೦ರ ದಶಕದ ಮಧ್ಯದ ಹೊತ್ತಿಗೆ ಎಂ.ಎಸ್. ಪ್ರಸಿದ್ಧ ಗಾಯಕಿಯಾಗಿ, ಚಿತ್ರನಟಿಯಾಗಿ ಎರಡೂ ಪರಸ್ಪರ ಪೂರಕವಾಗಿ ಬೆಳೆದರು. ೧೯೪೦ರ ಜುಲೈನಲ್ಲಿ ಸದಾಶಿವಂ ಜೊತೆ ವಿವಾಹ ಆಗುವುದರೊಂದಿಗೆ ಅವರ ಸಂಗೀತಜೀವನದಲ್ಲೂ ಬದಲಾವಣೆಗಳು ಕಂಡುಬಂದವು. ಅದನ್ನು ಪರಿವರ್ತನೆ ಅಥವಾ ಮಾನಸಿಕ ಪುನರ್ವ್ಯವಸ್ಥೆ ಎನ್ನಬಹುದು. ಓರ್ವ ಆದರ್ಶ ಬ್ರಾಹ್ಮಣ ಗೃಹಿಣಿಯಾದ ಆಕೆ ಮೇಲ್ವರ್ಗದವರ ದೃಷ್ಟಿಯಲ್ಲೂ ಪರಿಶುದ್ಧತೆ ಮತ್ತು ಭಕ್ತಿಯ ಸಾಕಾರರೂಪವಾಗಿ ಬೆಳೆದರು; ಸಾಮಾಜಿಕ ಗೌರವ ಬೆಳೆಯಿತು. ವೃತ್ತಿಪರವಾಗಿ ಏನು ಮಾಡಬೇಕೆಂಬುದು ಸದಾಶಿವಂ ಅವರಿಗೆ ಗೊತ್ತೆಂದು ಆಕೆ ನಂಬಿದರು. ವ್ಯವಹಾರಕ್ಕೆ ಸಂಬಂಧಿಸಿದ ವಿಷಯಗಳನ್ನು ಅವರಿಗೆ ಒಪ್ಪಿಸಿ ತಮ್ಮ ಮನಸ್ಸನ್ನು ಸಂಗೀತದಲ್ಲಿ ಕೇಂದ್ರೀಕರಿಸಿದರು. ಕರ್ನಾಟಕ ಸಂಗೀತದಲ್ಲಿ ಸಾಹಿತ್ಯಕ್ಕೆ ಪ್ರಾಧಾನ್ಯ; ಈ ಸಾಹಿತ್ಯ ಮುಖ್ಯವಾಗಿ ಭಕ್ತಿಪರವಾದದ್ದು. ಸಾಹಿತ್ಯಕ್ಕೆ ಒತ್ತುಕೊಟ್ಟು ತನ್ಮಯತೆಯಿಂದ ಹಾಡಿದ ಎಂ.ಎಸ್., ಶ್ರೋತೃಗಳ ದೊಡ್ಡಭಾಗದ ಕಣ್ಣಿನಲ್ಲಿ ಕ್ರಮೇಣ ಭಕ್ತಿ – ಆಧ್ಯಾತ್ಮಿಕತೆಗಳ ಪ್ರತಿರೂಪವಾಗಿ ಬೆಳೆದರು; ಅವರ ಸ್ವರ ಎಲ್ಲರಿಗೂ ಶಾಂತಿ-ಸಮಾಧಾನಗಳನ್ನು ನೀಡಿತು.
‘ಮೀರಾ’ ತಂದ ಖ್ಯಾತಿ
೧೯೪೭ರಲ್ಲಿ ತಮಿಳು ಸಿನೆಮಾ ‘ಮೀರಾ’ ಹಿಂದೀ ಭಾಷೆಯಲ್ಲಿ ಬಿಡುಗಡೆಯಾದಾಗ ಎಂ.ಎಸ್. ದೇಶದಾದ್ಯಂತ ಒಮ್ಮೆಲೇ ಪ್ರಸಿದ್ಧಿಗೆ ಬಂದರು
೧೯೩೮-೪೭ರ ನಡುವೆ ಸುಬ್ಬುಲಕ್ಷ್ಮಿ ಐದು ಸಿನೆಮಾಗಳಲ್ಲಿ ನಟಿಸಿದರು. ಪಾತ್ರಗಳು ಸಂಗೀತಪ್ರಧಾನವಾಗಿದ್ದುದೇ ಅದಕ್ಕೆ ಮುಖ್ಯ ಕಾರಣ. ಸದಾಶಿವಂ ಅವರ ‘ಕಲ್ಕಿ’ ಪತ್ರಿಕೆಯ ಸ್ಥಾಪನೆಗೆ ಹಣ ಸಂಗ್ರಹಿಸಲು ಅವರು ‘ಸಾವಿತ್ರಿ’ ಚಿತ್ರದಲ್ಲಿ ನಾರದನ ಪಾತ್ರ ಮಾಡಿ ಸಂಗೀತದ ಸುಧೆಯನ್ನು ಹರಿಸಿದರು. ಮುಂದಿನ ಮೀರಾ ಪಾತ್ರ ಅವರ ಮೇಲೆ ವೈಯಕ್ತಿಕವಾಗಿಯೂ ವೃತ್ತಿಪರವಾಗಿಯೂ ಪ್ರಭಾವ ಬೀರಿತು. ಆಕೆ ತನ್ನನ್ನು ದಾಸಿ ಮೀರಾ ಎಂದುಕೊಂಡರು. ‘ಮೀರಾ’ ಚಿತ್ರ ಹಿಂದಿಯಲ್ಲಿ ಯಶಸ್ವಿಯಾಗಿ ಉತ್ತರ ಭಾರತದಲ್ಲಿ ಅವರಿಗೆ ಅಧಿಕೃತ ಮನ್ನಣೆ ಸಿಗತೊಡಗಿತು. ಗಾಂಧಿ, ನೆಹರು ಅವರೆಲ್ಲ ಎಂ.ಎಸ್. ಅಭಿಮಾನಿಗಳಾದರು. ಉತ್ತರದಲ್ಲಿ ಅವರ ಸಂಗೀತ ಕಚೇರಿಗಳಿಗೆ ಬೇಡಿಕೆ ಹೆಚ್ಚಿತು.
ಉತ್ತರ ಭಾರತದ ಶ್ರೀಮಂತ ಉದ್ಯಮಪತಿಗಳಿಗೆ ತಮ್ಮ ಮನೆಯ ಮದುವೆಗಳಲ್ಲಿ ಎಂ.ಎಸ್. ಸಂಗೀತ ಏರ್ಪಡಿಸುವ ಹುಚ್ಚು. ಮುಂಬಯಿಯಲ್ಲೇ ಬೇಕಾದ ಭಜನ್ ಗಾಯಕರಿರುವಾಗ ಎಂ.ಎಸ್. ಅವರೇ ಏಕೆ ಎಂದು ಕೇಳಿದಾಗ ಓರ್ವ ಉದ್ಯಮಪತಿ ಹೇಳಿದ್ದು ಮಾರ್ಮಿಕವಾಗಿತ್ತು. ಒಳ್ಳೆಯ ಸಂಗೀತ ಎಷ್ಟೋ ಜನರಿಂದ ಕೇಳಬಹುದು. ಆದರೆ ಒಳ್ಳೆಯದರ ಜೊತೆಗೆ ನಮ್ಮಲ್ಲೊಂದು ದೈವಿಕ, ಸ್ವರ್ಗಸುಖದ ನೆಮ್ಮದಿಯನ್ನು ಸೃಷ್ಟಿಸುವ ಸಂಗೀತವನ್ನು ಇವರಿಂದ ಮಾತ್ರ ಕೇಳಬಹುದು. ಇವರು ಮದುವೆಯಲ್ಲಿ ಹಾಡಿದರೆ ವಧೂವರರಿಗೆ ಉತ್ತಮ ಆಶೀರ್ವಾದ ಸಿಕ್ಕಿದಂತೆ! ಅವರ ಕಚೇರಿಗಳು ಮೀರಾಭಜನ್ ಇಲ್ಲದೆ ಪೂರ್ಣವಾಗುತ್ತಿರಲಿಲ್ಲ. ೧೯೫೦ರ ದಶಕದ ಕೊನೆ ಹಾಗೂ ೧೯೬೦ರ ದಶಕದ ಆರಂಭದ ಹೊತ್ತಿಗೆ ಸುಬ್ಬುಲಕ್ಷ್ಮಿ ಕಚೇರಿಗಳಿಗಾಗಿ ಇಡೀ ದೇಶದಲ್ಲಿ ಪ್ರವಾಸ ಮಾಡುತ್ತಿದ್ದರು. ಅವರ ಕಚೇರಿಗಳು ಒಂದು ಸಾಮಾಜಿಕ ಆಚರಣೆ ಹಾಗೂ ಸಂಗೀತದ ಸಂಭ್ರಮ(celebration)ದಂತಿದ್ದವು.
ದಾಸರ ಕೃತಿಭಂಡಾರ
ಮೀರಾಭಜನ್ಗಳಿಂದ ಮುಂದುವರಿದು ಆಕೆ ಕಚೇರಿಯ ಸ್ಥಳ-ಸನ್ನಿವೇಶಗಳ ಸಂದರ್ಭವನ್ನು ಗಮನಿಸಿಕೊಂಡು ತುಲಸೀದಾಸ್, ಕಬೀರ್, ನಾನಕ್, ಸೂರದಾಸ್, ತುಕಾರಾಮ್ ಮುಂತಾಗಿ ಧಾರ್ಮಿಕ ಸಂಗೀತದ ಭಾರೀ ಸಂಗ್ರಹವನ್ನೇ ಮಾಡಿಕೊಂಡರು. ರಬೀಂದ್ರಸಂಗೀತವನ್ನು ಕೂಡ ಕಲಿತರು. ಆ ಮೂಲಕ ಕಲೆಯ ಕಲಾತ್ಮಕತೆಗೆ ಪುನರ್ವ್ಯವಸ್ಥೆಯನ್ನು ಕಲ್ಪಿಸಿದರು. ಇದಕ್ಕೆಲ್ಲ ಪತಿಯ ಪ್ರೋತ್ಸಾಹವಿತ್ತು.
ಕಲಿಯುವ ಓರ್ವ ವಿದ್ಯಾರ್ಥಿಯ ಮನಸ್ಸು ಅವರಲ್ಲಿ ಸದಾ ಜೀವಂತವಿತ್ತು. ಅದಕ್ಕೊಂದು ಉದಾಹರಣೆ – ಬೆಂಗಳೂರಿನ ಭಾರತೀಯ ವಿದ್ಯಾಭವನದವರು ಪುರಂದರದಾಸರ ಕೆಲವು ಹಾಡುಗಳನ್ನು ಧ್ವನಿಮುದ್ರಣ ಮಾಡಬಯಸಿದರು. ಆರ್.ಕೆ. ಶ್ರೀಕಂಠನ್ ಅವರು ಅಲ್ಲೇ ಇದ್ದಾರಲ್ಲಾ ಎಂದರೆ ಭವನದವರು ಕೇಳಲಿಲ್ಲ; ಅವರ ಕಂಠದಲ್ಲೇ ಬರಬೇಕೆಂದು ಬಯಸಿದರು. ಆಗ ಸುಬ್ಬುಲಕ್ಷ್ಮಿ ಅವರು ಆರ್.ಕೆ. ಶ್ರೀಕಂಠನ್ ಅವರಿಂದಲೇ ಕೆಲವು ಹಾಡುಗಳನ್ನು ಕಲಿತು ಧ್ವನಿಮುದ್ರಿಕೆ ಮಾಡಿಕೊಟ್ಟರು.
ಅವರು ಪ್ರಸಿದ್ಧಿಯ ಶಿಖರದಲ್ಲಿದ್ದಾಗಲೂ ಕರ್ನಾಟಕ ಸಂಗೀತದ ಕಲಿಕೆಯನ್ನು ಮುಂದುವರಿಸಿದ್ದರು. ಮುಸಿರಿ ಸುಬ್ರಹ್ಮಣ್ಯ ಅಯ್ಯರ್, ಶೆಮ್ಮಂಗುಡಿ ಶ್ರೀನಿವಾಸ ಅಯ್ಯರ್, ನಾರಾಯಣಸ್ವಾಮಿ ಅವರಿಂದ ಕಲಿತರು. ಪಂಡಿತ್ ನಾರಾಯಣರಾವ್ ವ್ಯಾಸ್ ಅವರಿಂದ ಹಿಂದೂಸ್ತಾನಿ ಸಂಗೀತವನ್ನು ಕಲಿತಿದ್ದರು. ಎಂ.ಎಸ್.ರ ಬಗೆಬಗೆಯ ಗಾಯನಗಳನ್ನು ಉಲ್ಲೇಖಿಸುವ ಟಿ.ಎಂ.ಕೆ. ಕೃತಿಗಳ ವಿಪುಲ ಸಂಗ್ರಹದೊಂದಿಗೆ ಆಕೆ ವೈವಿಧ್ಯಮಯ ಹಾಡುಗಳನ್ನು ಹಾಡುತ್ತಿದ್ದರೂ ಕೂಡ ಒಂದರ ಕಲಾತ್ಮಕ ಆಯಾಮದಿಂದ ಇನ್ನೊಂದರ ಕಲಾತ್ಮಕ ಆಯಾಮಕ್ಕೆ ಹಾನಿಯಾಗದಂತೆ ತಡೆಯುವ ಸಾಮರ್ಥ್ಯ ಆಕೆಗಿತ್ತು. ಉದಾಹರಣೆಗೆ, ದೀಕ್ಷಿತರ ಕೃತಿಯ ಹಾಡುವಿಕೆಯ ಮೇಲೆ ರಬೀಂದ್ರಸಂಗೀತವು ಪ್ರಭಾವ ಬೀರುತ್ತಿರಲಿಲ್ಲ. ಹಾಗೆಯೇ ಮೀರಾಭಜನ್ ಮೇಲೆ ಕರ್ನಾಟಕಸಂಗೀತದ ಸ್ವರಭಾರ ಬೀಳುತ್ತಿರಲಿಲ್ಲ. ಇದು ಬಹುದೊಡ್ಡ ಸಾಧನೆ; ಆದರೆ ಯಾರೂ ಅದನ್ನು ಗಮನಿಸಲಿಲ್ಲ ಎಂದು ಹೇಳುತ್ತಾರೆ.
ಕರ್ನಾಟಕ ಸಂಗೀತದ ಅಪರೂಪದ ಕೃತಿಗಳನ್ನು ಎಂ.ಎಸ್. ಚೆನ್ನಾಗಿ ಹಾಡುತ್ತಿದ್ದರೂ ಕೂಡ ಅದಕ್ಕೆ ಮೆಚ್ಚುಗೆ ಅಷ್ಟಾಗಿ ಸಿಗುತ್ತಿರಲಿಲ್ಲ ಎನಿಸುತ್ತದೆ. ಕಾರಣವೆಂದರೆ ತುಕಡಾಗಳ ಜನಪ್ರಿಯತೆ; ಸುಂದರವಾದ ರಾಗಂ-ತಾನಂ-ಪಲ್ಲವಿ ಗಾಯನದ ಹಿಂದಿನ ಸಾಧನೆಗಿಂತ ಮೀರಾಭಜನ್ ಮುಖ್ಯವಾಗಿಬಿಡುತ್ತಿತ್ತು. ತುಕಡಾ(ಲಘುಕೃತಿ)ಗಳ ಮಹತ್ತ್ವ ಹೆಚ್ಚಿಸಿದವರು ಎಂ.ಎಸ್. ಆದರೆ ಅದರ ಪರಿಣಾಮ ಇನ್ನೇನೋ ಆಯಿತು. ಕಚೇರಿಯಲ್ಲಿ ಎರಡು ಗಂಟೆಗಳ ಕಲಾಸಂಗೀತ( Art Music)ಕ್ಕಿಂತ ನಂತರದ ಅರ್ಧ ತಾಸಿನ ತುಕಡಾಗಳ ಭಕ್ತಿಸಂಗೀತವೇ ಬಹಳಷ್ಟು ಶ್ರೋತೃಗಳಿಗೆ ಮುಖ್ಯವೆನಿಸಿತು. ಆಕೆ ಅವುಗಳನ್ನು ತುಂಬ ಮಧುರವಾಗಿ ಹಾಡುತ್ತಿದ್ದುದು ನಿಜ, ಆದರೆ ಬಹಳಷ್ಟು ಜನ ಅವುಗಳ ಧಾರ್ಮಿಕತೆಗೆ ಸ್ಪಂದಿಸುತ್ತಿದ್ದರು; ಮತ್ತು ಎಂ.ಎಸ್.ರ ಶಾಸ್ತ್ರೀಯ ಸಂಗೀತದ ಸಾಧನೆಯನ್ನು ಅವರು ಮರೆತರು.
ಕರ್ನಾಟಕ ಸಂಗೀತದ ಇನ್ನೋರ್ವ ಮಹಾನ್ ಗಾಯಕಿ ಡಿ.ಕೆ. ಪಟ್ಟಮ್ಮಾಳ್ರೊಂದಿಗೆ ಎಂ.ಎಸ್.ರನ್ನು ಹೋಲಿಸುವ ಕೃಷ್ಣ, ಪಟ್ಟಮ್ಮಾಳ್ ಅವರು ರಾಗಂ-ತಾನಂಗೆ ಪ್ರಸಿದ್ಧರು. ಅದರಲ್ಲಿ ಆಕೆ ಅಂದಿನ ಘಟಾನುಘಟಿ ಪುರುಷಗಾಯಕರಿಗೆ ಸಮಾನ ಎಂಬ ಗೌರವ ಪಡೆದಿದ್ದಾರೆ. ಸಾಧನೆ ಒಂದೇ ರೀತಿ ಇದ್ದರೂ ಕೂಡ ಈ ಬಗೆಯ ಶ್ಲಾಘನೆ ಪಟ್ಟಮ್ಮಾಳ್ ಅವರಿಗೆ ಎಂ.ಎಸ್.ಗಿಂತ ಜಾಸ್ತಿ ಸಿಕ್ಕಿತೆಂದು ಆಕ್ಷೇಪಿಸುತ್ತಾರೆ.
೧೯೬೩ರಲ್ಲಿ ಸುಬ್ಬುಲಕ್ಷ್ಮಿ ಅವರ ‘ವೆಂಕಟೇಶ ಸುಪ್ರಭಾತ’ ಬಂತು. ಜನಪ್ರಿಯತೆಯಲ್ಲಿ ಅದೊಂದು ಕ್ರಾಂತಿಯನ್ನೇ ಮಾಡಿತು. ವಿಷ್ಣುಸಹಸ್ರನಾಮ, ಭಜಗೋವಿಂದಂ ಮುಂತಾಗಿ ಆಕೆ ಧಾರ್ಮಿಕ ಮತ್ತು ಭಕ್ತಿಪರ ಧ್ವನಿಮುದ್ರಿಕೆಗಳನ್ನು ಮಾಡುತ್ತಾ ಹೋದರು. ಅವುಗಳೊಂದಿಗೆ ಎಂ.ಎಸ್. ಅವರಿಗೆ ಅವಿನಾಭಾವ ಸಂಬಂಧ ಏರ್ಪಟ್ಟಿತೆಂದರೆ ತಪ್ಪಲ್ಲ. ಸಂಸ್ಕೃತ ಶ್ಲೋಕಗಳನ್ನು ಹಾಡುವಾಗ ಭಾಷಾಶುದ್ಧಿ ಮತ್ತು ಸ್ಪಷ್ಟ ಉಚ್ಚಾರಗಳ ಬಗೆಗೆ ಎಂ.ಎಸ್. ಅವರು ವಹಿಸುವ ಎಚ್ಚರ ಅತ್ಯಂತ ಅನುಕರಣೀಯವಾದದ್ದು; ಅದೊಂದು ಬೆಂಚ್ಮಾರ್ಕ್!
ಮೃದಂಗ ಮೌನವಾದಾಗ
ಹಾಡುವಾಗಿನ ಸುಬ್ಬುಲಕ್ಷ್ಮಿ ಅವರ ಮನಃಸ್ಥಿತಿಗೆ ಸಂಬಂಧಿಸಿ ಅವರಿಗೆ ಸುಮಾರು ೧೫ ವರ್ಷ ಮೃದಂಗ ಪಕ್ಕವಾದ್ಯ ನುಡಿಸಿದ ಕೆ.ವಿ. ಪ್ರಸಾದ್ ಒಂದು ಅನುಭವವನ್ನು ಹೇಳುತ್ತಾರೆ: ಅವರು ಹಾಡುವಾಗ ಅದೆಷ್ಟೋ ಬಾರಿ ಭಾವಮಗ್ನರಾಗಿ ಅದರಲ್ಲೇ ಮುಳುಗಿಬಿಡುತ್ತಿದ್ದರು. ಆಗ ನನಗೆ ಮೃದಂಗ ನುಡಿಸಲು ಮನಸ್ಸೇ ಬರುತ್ತಿರಲಿಲ್ಲ. ನುಡಿಸಿದರೆ ರಸಭಂಗವಾಗಿ ಅವರ ಭಾವಲಹರಿ ತುಂಡಾಗುತ್ತದೆ ಎನಿಸುತ್ತಿತ್ತು. ಆಗ ನಾನು ಮೌನದ ಮೊರೆಹೊಗುತ್ತಿದ್ದೆ. ಎಷ್ಟು ಹೊತ್ತು ಅವರು ತಮ್ಮ ಭಾವಸಮಾಧಿಯಲ್ಲಿ ಇರುತ್ತಾರೋ ಅಷ್ಟು ಹೊತ್ತು ಇರಲಿ. ಅವರು ಮರಳಿದ ಮೇಲೆ ನುಡಿಸುವುದೇ ಒಳ್ಳೆಯದೆಂದು ಸುಮ್ಮನೆ ಇರುತ್ತಿದ್ದೆ. ಅವರು ಮೃದಂಗವನ್ನು ತುಂಬ ಸುಖಿಸಿ ಅನುಭವಿಸುತ್ತಿದ್ದರು.
ಮುಂದುವರಿದು, ಕೃತಿಗಳ ಪಾಠಾಂತರ ಪಟ್ಟಮ್ಮಾಳ್ ಅವರ ಭದ್ರಕೋಟೆಯಾದರೆ ಎಂ.ಎಲ್. ವಸಂತಕುಮಾರಿ ತುಂಬ ಸಂಕೀರ್ಣವಾದ ಲಯ, ರಾಗಂ-ತಾನಂ-ಪಲ್ಲವಿ ಇವುಗಳನ್ನು ಆರಿಸಿಕೊಳ್ಳುತ್ತಿದ್ದರು. ಇನ್ನು ಎಂ.ಎಸ್. ಭಕ್ತಿಯನ್ನು ತಮ್ಮ ಕ್ಷೇತ್ರವನ್ನಾಗಿ ಆಯ್ಕೆಮಾಡಿಕೊಂಡರು. ಅದರ ಮೂಲಕ ತಾನು ಜನರನ್ನು ತಲಪಬಹುದು ಎಂದು ಅವರಿಗೆ ಅನ್ನಿಸಿತ್ತು. ಭಕ್ತಿ ಮತ್ತು ಭಾವದ ಮೂಲಕ ಜನರನ್ನು ಪರವಶಗೊಳಿಸಿಬಿಡುತ್ತಿದ್ದರು. ಹೀಗೆ ಭಕ್ತಿಭಾವದಲ್ಲಿ ಹಾಡುವವರನ್ನು ಬೇರೆ ಯಾರನ್ನೂ ಕಂಡಿಲ್ಲ ಎಂದವರು ಹೇಳಿದ್ದಾರೆ.
ಸುಬ್ಬುಲಕ್ಷ್ಮಿ ಅವರು ಕಚೇರಿಗೆ ಮುನ್ನ ಪಕ್ಕವಾದ್ಯದವರೊಂದಿಗೆ ತಾಲೀಮು (ಪ್ರಾಕ್ಟೀಸ್) ನಡೆಸುವ ವಿಧಾನವನ್ನು ಅನುಸರಿಸುತ್ತಿದ್ದರು. ಆ ಮೂಲಕ ದೋಷರಹಿತ ಕಲಾಪ್ರಸ್ತುತಿಗೆ ಒತ್ತು ನೀಡಿದ್ದರು. ಅವರು ಉಡುತ್ತಿದ್ದ ಸೀರೆ, ತಲೆಬಾಚಿ ಹೂ ಮುಡಿಯುವುದು, ಸುಂದರ ಆಭರಣ ಧರಿಸುವುದು ಇದ್ದಂತೆಯೇ ಈ ಪ್ರಾಕ್ಟೀಸ್ ಇತ್ತೆನ್ನಬಹುದು.
ಕೃತಿಗಳ ವಿಪುಲ ಸಂಗ್ರಹದೊಂದಿಗೆ ಆಕೆ ವೈವಿಧ್ಯಮಯ ಹಾಡುಗಳನ್ನು ಹಾಡುತ್ತಿದ್ದರೂ ಕೂಡ ಒಂದರ ಕಲಾತ್ಮಕ ಆಯಾಮದಿಂದ ಇನ್ನೊಂದರ ಕಲಾತ್ಮಕ ಆಯಾಮಕ್ಕೆ ಹಾನಿಯಾಗದಂತೆ ತಡೆಯುವ ಸಾಮರ್ಥ್ಯ ಆಕೆಗಿತ್ತು. ಉದಾಹರಣೆಗೆ, ದೀಕ್ಷಿತರ ಕೃತಿಯ ಹಾಡುವಿಕೆಯ ಮೇಲೆ ರಬೀಂದ್ರಸಂಗೀತವು ಪ್ರಭಾವ ಬೀರುತ್ತಿರಲಿಲ್ಲ.
ಆಭರಣ ತನಗಲ್ಲ
ಎಂ.ಎಸ್. ಅವರ ಕಚೇರಿಗಳಿಗೆ ಮೂರು ದಶಕಕ್ಕೂ ಮಿಕ್ಕಿ ಮೃದಂಗ ನುಡಿಸಿದ ಟಿ.ಕೆ. ಮೂರ್ತಿ ಅವರು ನೀಡುವ ಒಂದು ವಿವರ ಇಲ್ಲಿ ಉಲ್ಲೇಖಾರ್ಹ. ಎಂ.ಎಸ್. ಒಂದೇ ಒಂದು ದಿನ ದೊಡ್ಡಸ್ತಿಕೆ ತೋರಿದವರಲ್ಲ. ಕಚೇರಿ ಇದ್ದಾಗ ಮಾತ್ರ ಅವರು ವಜ್ರದ ಒಡವೆಗಳನ್ನು ಧರಿಸುತ್ತಿದ್ದರು. ಇಲ್ಲದಿದ್ದಾಗ ಎಲ್ಲವನ್ನೂ ಕಳಚಿಟ್ಟು ಗಾಜಿನ ಬಳೆ ಮಾತ್ರ ಧರಿಸುತ್ತಿದ್ದರು. ಕಿವಿಯಲ್ಲಿ ಸಾಧಾರಣವಾದ ಒಂದು ಬಂಗಾರದ ಓಲೆ ಮಾತ್ರ ಇರುತ್ತಿತ್ತು. ಮನೆಯಲ್ಲಿ ಕೇವಲ ನೂಲಿನ ಸೀರೆ ಉಡುತ್ತಿದ್ದರು. ಒಬ್ಬ ಸಾಧಾರಣ ಹುಡುಗಿ ಹಾಡುತ್ತಿದ್ದರೂ ಅವರು ಕುಳಿತು ಕೇಳುತ್ತಿದ್ದರು. ಅವರಿಗೆ ಕೋಪವೇ ಇರಲಿಲ್ಲ. ಮನನೊಂದಾಗ ಅತ್ತುಬಿಡುತ್ತಿದ್ದರು. ಪುರಂದರದಾಸರ ಕೃತಿಗಳ ಅರ್ಥ ತಿಳಿದಾಗ ಅವರ ಕಣ್ಣುಗಳಲ್ಲಿ ನೀರು ಹರಿಯುತ್ತಿತ್ತು. ಅವರು ಬಹುದೊಡ್ಡ ದಾನಿ. ಮದ್ರಾಸ್ ಮ್ಯೂಸಿಕ್ ಅಕಾಡೆಮಿ ಕಟ್ಟಡಕ್ಕೆ ಹಣ ನೀಡಿದವರು ಅವರೇ ಎಂದು ಕೂಡ ಮೂರ್ತಿ ಹೇಳಿದ್ದಾರೆ.
ಸಂಗೀತ ವಿಮರ್ಶಕಿ ಗೌರಿ ರಾಂನಾರಾಯಣ್ ಅವರು ತಮ್ಮ ಒಂದು ಲೇಖನದಲ್ಲಿ, ಸಾಹಿತ್ಯಶುದ್ಧಿಗೆ ಎಂ.ಎಸ್. ಪೂರ್ಣಗಮನ ಕೊಡುತ್ತಿದ್ದರು. ಹಾಡಿನ ಸಾಹಿತ್ಯ ಯಾವುದೇ ಭಾಷೆಯಲ್ಲಿರಲಿ, ಅದಕ್ಕೆ ಅವರು ಪೂರ್ಣ ನ್ಯಾಯ ಒದಗಿಸುತ್ತಿದ್ದರು. ಅರ್ಥ ಮತ್ತು ಉಚ್ಚಾರದ ದೃಷ್ಟಿಯಿಂದ ಎಲ್ಲೆಲ್ಲಿ ನಿಲ್ಲಿಸಬೇಕೆಂಬುದನ್ನು ಪಂಡಿತರೊಡನೆ ಚರ್ಚಿಸಿ ತಿಳಿದುಕೊಳ್ಳುತ್ತಿದ್ದರು. ಎಲ್ಲಿ ಒತ್ತುಕೊಟ್ಟರೆ ಸಾಹಿತ್ಯ ಧ್ವನಿಪೂರ್ಣವಾಗುತ್ತದೆ ಮತ್ತು ಎಲ್ಲಿ ಧ್ವನಿಯ ಏರಿಳಿತ ಬೇಕೆಂದು ಕಲಿತುಕೊಳ್ಳುತ್ತಿದ್ದರು. ಹಾಗಾಗಿ ಸಂಗೀತದಂತೆಯೇ ಸಾಹಿತ್ಯದ ದೃಷ್ಟಿಯಿಂದಲೂ ಎಂ.ಎಸ್. ಸಂಗೀತ ಪರಿಶುದ್ಧ ಎಂದಿದ್ದಾರೆ. ಅಂತಃಕರಣ ತುಂಬಿದ ಅವರ ಸಂತತನ ಮತ್ತು ಭಾರತೀಯ ಜೀವನಕ್ರಮದ ಅತ್ಯುನ್ನತ ಮೌಲ್ಯಗಳು ಅವರ ಸಂಗೀತಕ್ಕೆ ಭವ್ಯತೆಯನ್ನು ತಂದುಕೊಟ್ಟವು. ಆಧ್ಯಾತ್ಮಿಕ ಹುಡುಕಾಟದಿಂದ ಬರುವ ವಿನಯ ಮತ್ತು ಪಟ್ಟುಹಿಡಿದು ಸಾಧಿಸುವ ಛಲಗಳು ಆಕೆಗೆ ಘನತೆಯನ್ನು ತಂದುಕೊಟ್ಟವು ಎಂದು ಈ ವಿಮರ್ಶಕಿ ಗುರುತಿಸಿದ್ದಾರೆ.
ಮೂರು ತಾಂತ್ರಿಕ ಪರಿಣತಿ
ಎಂ.ಎಸ್. ಅವರ ಗುರುಗಳೂ ಆದ ಹಿರಿಯಗಾಯಕ, ಸಂಗೀತ ವಿದ್ವಾಂಸ ಶೆಮ್ಮಂಗುಡಿಯವರು ಎಂ.ಎಸ್. ಅವರಲ್ಲಿ ಮೂರು ತಾಂತ್ರಿಕ ಪರಿಣತಿಗಳನ್ನು ಗುರುತಿಸಿದ್ದರು. ಅವರ ತಾನದ ಪ್ರಸ್ತುತಿ, ಮಂದ್ರಸ್ಥಾಯಿಯಲ್ಲಿ ಸುಲಲಿತವಾಗಿ ಸುಮಧುರವಾಗಿ ಸಂಚರಿಸುವ ಅವರ ಕಂಠ, ಶ್ರುತಿಶುದ್ಧಿ. ಅವರ ಶಾರೀರಕ್ಕೆ ಸ್ಪಷ್ಟತೆ, ಮೊನಚು ಮತ್ತು ಶ್ರುತಿಶುದ್ಧತೆಗಳಿವೆ. ಅದು ಸಮೀಪದಿಂದ ಹಾಗೂ ದೂರದಿಂದ ಗಟ್ಟಿಯಾಗಿ ಸ್ಪಷ್ಟವಾಗಿ ಕೇಳಿಸುವ ಅಪರೂಪದ ಕಂಠ. ತಾನ ಹಾಡುವುದರಲ್ಲಿ ತಮ್ಮ ಕಾಲದ ಗಾಯಕಿಯರಲ್ಲಿ ಎಂ.ಎಸ್. ಅತ್ಯುತ್ತಮ. ಏಕೆಂದರೆ ಎಷ್ಟಾದರೂ ಅವರು ವೀಣಾವಾದಕಿ ಅಲ್ಲವೆ? ಎಂದು ಶೆಮ್ಮಂಗುಡಿ ಹೇಳಿದ್ದಾರೆ.
ಎಂ.ಎಸ್. ಶ್ರುತಿಶುದ್ಧತೆ ಬಗ್ಗೆ ಮತ್ತೆಮತ್ತೆ ಹೇಳಬೇಕು. ಅವರಲ್ಲಿ ಸಹಜವಾಗಿಯೇ ಒಂದು ರಸಪ್ರಜ್ಞೆ ಇತ್ತು. ದೇಹವು ಪ್ರಾಣಕ್ಕೆ ಅಂಟಿಕೊಂಡಿರುವಂತೆ ಅವರು ಶ್ರುತಿಗೆ ಅಂಟಿಕೊಂಡಿದ್ದರು ಎನ್ನುವ ಚಿತ್ರವೀಣಾವಾದಕ ಎನ್. ರವಿಕಿರಣ್, ಶ್ರುತಿ ಎಂದರೆ ಸಾಮಾನ್ಯವಾಗಿ ಷಡ್ಜ ಮತ್ತು ಪಂಚಮಗಳನ್ನು ಶುದ್ಧವಾಗಿ ಹಿಡಿಯುವುದು ಎಂದು ಭಾವಿಸುತ್ತಾರೆ. ಆದರೆ ಎಂ.ಎಸ್. ಅವರಷ್ಟು ಶುದ್ಧವಾಗಿ ತಾರಸ್ಥಾಯಿಯಲ್ಲಿ ಅಂತರ ಗಾಂಧಾರವನ್ನು ಹಿಡಿದು ಅಲ್ಲೇ ತುಂಬ ಹೊತ್ತು ಉಸಿರುಹಿಡಿದು ನಿಲ್ಲಲು ಕರ್ನಾಟಕ ಸಂಗೀತದಲ್ಲಿ ಬಹುಶಃ ಇನ್ಯಾರಿಗೂ ಸಾಧ್ಯವಿರಲಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. ಅವರ ಕಂಠಕ್ಕೆ ಅಪರೂಪದ ನಾದಗುಣ ಇತ್ತು. ನಿರಂತರ ಅಭ್ಯಾಸದಿಂದ ಅದಕ್ಕೆ ಮಾಂತ್ರಿಕತೆ ಬಂದಿತ್ತು. ಒಳ್ಳೆಯ ನಾದಮಾಧುರ್ಯವಿರುವ ಕಲಾವಿದರ ಒಂದೆರಡು ಸ್ವರಗಳೇ ಸಾಕು – ಇಡೀ ಸಭಾಂಗಣವನ್ನು ಆವರಿಸಿಬಿಡುತ್ತವೆ. ಆದರೆ ಎಂ.ಎಸ್. ಅವರ ಕಂಠಸಿರಿ ಸಭಾಂಗಣ ಮಾತ್ರವಲ್ಲ; ಸಾವಿರಾರು ಹೃದಯಗಳನ್ನು ಆವರಿಸಿಬಿಡುತ್ತಿತ್ತು. ಯಾವ ವಯಸ್ಸಿನಲ್ಲೂ ತ್ರಿಸ್ಥಾಯಿಯಲ್ಲಿ ನಿರಾಯಾಸವಾಗಿ ಸಂಚರಿಸುವ ಕಂಠ ಅವರದು ಎಂದು ರವಿಕಿರಣ್ ಕೊಂಡಾಡಿದ್ದಾರೆ.
ಅಪೂರ್ವಜೋಡಿ
ಪತಿ ಟಿ. ಸದಾಶಿವಂ ಒಂದೆಡೆ ಹೀಗೆ ಹೇಳಿದ್ದಾರೆ: ನನಗಿದ್ದ ವ್ಯಾಪಕ ಜನಸಂಪರ್ಕದಿಂದಾಗಿ ಸುಬ್ಬುಲಕ್ಷ್ಮಿಗೆ ಖ್ಯಾತಿ ದೊರಕಿತೆಂದು ಕೆಲವರು ಭಾವಿಸಿದ್ದಾರೆ. ಆದರೆ ಇದು ಅಪ್ಪಟ ಸುಳ್ಳು. ಅವರ ಉತ್ಕೃಷ್ಟ ಸಂಗೀತ ಮತ್ತು ಅಸಾಧಾರಣ ಪ್ರತಿಭೆಗೆ ರೂಪ ನೀಡಿದ್ದಷ್ಟೇ ನನ್ನ ಪಾತ್ರ. ಆಕೆ ಔನ್ನತ್ಯವನ್ನು ಸಾಧಿಸಿದ್ದು ಸಂಪೂರ್ಣವಾಗಿ ತನ್ನ ಕಲೆ ಮತ್ತು ವ್ಯಕ್ತಿತ್ವದ ಸಾಮರ್ಥ್ಯದಿಂದ. ಕಠಿಣ ಅಭ್ಯಾಸ ಅದಕ್ಕೆ ನೆರವಾಗಿದೆ. ೮೦ರ ಹರೆಯದಲ್ಲೂ ಅವಳು ಪ್ರತಿದಿನ ವಿದ್ಯಾರ್ಥಿಯಂತೆ ಕನಿಷ್ಠ ಮೂರು ಗಂಟೆ ಅಭ್ಯಾಸ ಮಾಡುತ್ತಾಳೆ. ಅವರದ್ದು ಅಪರೂಪದ ಜೋಡಿ ಎಂಬುದರಲ್ಲಿ ಸಂದೇಹವಿಲ್ಲ. ಆ ಸಂಬಂಧವಾಗಿ ಕೆ.ವಿ. ಪ್ರಸಾದ್ ಮಾಮಾ (ಸದಾಶಿವಂ) ಬಿಟ್ಟರೆ ಅಮ್ಮನ ಕೈಯಲ್ಲಿ ಏನೂ ಆಗುತ್ತಿರಲಿಲ್ಲ. ಅವರು ತೀರಿಹೋದ ಮೇಲೆ ಅಮ್ಮ ಹಾಡಿದ್ದೇ ಕಡಮೆ ಎಂದು ಹೇಳಿದ್ದಿದೆ.
ಕೆಲವರಿಗೆ ಸಂಗೀತ ಒಂದು ಕಲಾಮಾಧ್ಯಮ ಆಗಿದ್ದರೆ ಮತ್ತೆ ಕೆಲವರಿಗೆ ಅದು ಅಭಿವ್ಯಕ್ತಿಯ ಮಾಧ್ಯಮ. ಆದರೆ ಎಂ.ಎಸ್. ಅವರಿಗೆ ಅದು ಪೂಜಿಸುವ ದೇವರು. ಭಕ್ತಿಯೆ ಕರ್ನಾಟಕ ಸಂಗೀತದ ಸಾರ ಆಗಬೇಕಿಲ್ಲ ಎಂದು ವಾದಿಸುವವರು ಕೂಡ ಎಂ.ಎಸ್. ಸಂಗೀತವನ್ನು ಕೇಳುತ್ತಾ ಸಭಾಂಗಣದಿಂದ ಯಾವುದೋ ಪೂಜಾಸ್ಥಾನಕ್ಕೆ ಬಂದಿರುತ್ತಾರೆ. ಅದು ಮತಾಚರಣೆಯನ್ನು ಮೀರಿದ ಆಧ್ಯಾತ್ಮಿಕತೆ ಎನ್ನುವ ಸುಲೋಚನಾ ಪಟ್ಟಾಭಿರಾಮನ್, ‘ಆಕೆಯ ಕಲೆ ಮಧ್ಯಮದರ್ಜೆಯವರ (mediocre) ಸಮುದ್ರದಲ್ಲಿರುವ ಒಂದು ಶ್ರೇಷ್ಠತೆಯ ದ್ವೀಪ’ ಎನ್ನುವ ಒಂದು ಅಭಿಪ್ರಾಯವನ್ನು ಉಲ್ಲೇಖಿಸುತ್ತಾರೆ. ಆಕೆ ತಮ್ಮ ಕೈಗಳನ್ನು ನಿರಂತರವಾಗಿ ಪರಿಪೂರ್ಣತೆಯತ್ತ ಚಾಚುತ್ತಾ ಬಂದಿದ್ದಾರೆ. ಪೋಲ್ವಾಲ್ಟ್ನಂತೆ ಸ್ವತಃ ಎತ್ತರದ ಗುರಿಯನ್ನು ಇರಿಸಿಕೊಂಡು ಅದನ್ನು ಜಿಗಿಯುತ್ತಾ ಬಂದಿದ್ದಾರೆ ಎನ್ನುತ್ತಾರೆ.
ಮುಂದುವರಿದು ಸರಳತೆ ಎಂ.ಎಸ್. ಅವರ ಶೈಲಿಯ ಮುಖ್ಯಾಂಶ. ಘನತೆಯೊಂದಿಗೆ ಆಕೆ ತಮ್ಮ ಸಂಗೀತಚಿಂತನೆಗಳನ್ನು ದಾಟಿಸುತ್ತಾರೆ. ಇಂದಿನವರಿಗೆ ಅದು ಪಾಠವಾಗಬೇಕು. ಸುಮಾರು ಆರು ದಶಕಗಳ ಅವರ ಸಂಗೀತಜೀವನದಲ್ಲಿ ಕಚೇರಿ ನಿರೀಕ್ಷೆಯ ಮಟ್ಟಕ್ಕೆ ಬರಲಿಲ್ಲ ಎನ್ನುವಂತಾದದ್ದೇ ಇಲ್ಲ. ಆ ಬಗೆಯ ಉತ್ತರದಾಯಿತ್ವ. ಶ್ರೋತೃಗಳ ಬಗೆಗಿನ ಗೌರವ ಅವರದ್ದು. ಆರಂಭದ ಸಂಸ್ಕೃತಶ್ಲೋಕದಿಂದ ಕೊನೆಯ ಮಂಗಳದ ವರೆಗೆ ಹಿಡಿದಿಡುವ ಸಾಮರ್ಥ್ಯ. ಅವರ ಸಂಗೀತವನ್ನು ಕೇಳಿಯೇ ಹಲವರು ತಮ್ಮ ಹೆಮ್ಮಕ್ಕಳನ್ನು ಸಂಗೀತ ಕಲಿಯಲು ಹಾಕಿದ್ದಾರೆ ಎನ್ನುವ ಸುಲೋಚನಾ, ಐದಾರು ದಶಕಗಳ ಹಿಂದಿನ ಎಂ.ಎಸ್. ಚಿತ್ರಗೀತೆಗಳು ಸದಾ ಹಸಿರಾಗಿವೆ; ಈಗಲೂ ತಂಪನ್ನೆರೆಯುತ್ತಿವೆ. ರಾಗ ಯಾವುದೇ ಇರಲಿ, ಅವರು ಮಾಧುರ್ಯವನ್ನು ಬಿಡುವವರಲ್ಲ ಎಂದು ವಿಶ್ಲೇಷಿಸಿದ್ದಾರೆ.
ಅವರು ಹಾಡುವಾಗ ಅದೆಷ್ಟೋ ಬಾರಿ ಭಾವಮಗ್ನರಾಗಿ ಅದರಲ್ಲೇ ಮುಳುಗಿಬಿಡುತ್ತಿದ್ದರು. ಆಗ ನನಗೆ ಮೃದಂಗ ನುಡಿಸಲು ಮನಸ್ಸೇ ಬರುತ್ತಿರಲಿಲ್ಲ. ನುಡಿಸಿದರೆ ರಸಭಂಗವಾಗಿ ಅವರ ಭಾವಲಹರಿ ತುಂಡಾಗುತ್ತದೆ ಎನಿಸುತ್ತಿತ್ತು. ಆಗ ನಾನು ಮೌನದ ಮೊರೆಹೊಗುತ್ತಿದ್ದೆ.”
– ಕೆ.ವಿ. ಪ್ರಸಾದ್
ಸಾಹಿತ್ಯಶುದ್ಧಿಗೆ ಎಂ.ಎಸ್. ಪೂರ್ಣಗಮನ ಕೊಡುತ್ತಿದ್ದರು. ಹಾಡಿನ ಸಾಹಿತ್ಯ ಯಾವುದೇ ಭಾಷೆಯಲ್ಲಿರಲಿ, ಅದಕ್ಕೆ ಅವರು ಪೂರ್ಣ ನ್ಯಾಯ ಒದಗಿಸುತ್ತಿದ್ದರು. ಅರ್ಥ ಮತ್ತು ಉಚ್ಚಾರದ ದೃಷ್ಟಿಯಿಂದ ಎಲ್ಲೆಲ್ಲಿ ನಿಲ್ಲಿಸಬೇಕೆಂಬುದನ್ನು ಪಂಡಿತರೊಡನೆ ಚರ್ಚಿಸಿ ತಿಳಿದುಕೊಳ್ಳುತ್ತಿದ್ದರು. ಎಲ್ಲಿ ಒತ್ತುಕೊಟ್ಟರೆ ಸಾಹಿತ್ಯ ಧ್ವನಿಪೂರ್ಣವಾಗುತ್ತದೆ ಮತ್ತು ಎಲ್ಲಿ ಧ್ವನಿಯ ಏರಿಳಿತ ಬೇಕೆಂದು ಕಲಿತುಕೊಳ್ಳುತ್ತಿದ್ದರು. ಹಾಗಾಗಿ ಸಂಗೀತದಂತೆಯೇ ಸಾಹಿತ್ಯದ ದೃಷ್ಟಿಯಿಂದಲೂ ಎಂ.ಎಸ್. ಸಂಗೀತ ಪರಿಶುದ್ಧ.
– ಚಿತ್ರವೀಣಾವಾದಕ ಎನ್. ರವಿಕಿರಣ್
‘ಮಹಾನ್ ಸಂಗೀತಗಾರ್ತಿ’
ಎಂ.ಎಸ್. ಸುಬ್ಬುಲಕ್ಷ್ಮಿ ಅವರು ‘ಸಂಗೀತದ ವಿಸ್ಮಯ’ ಎಂದು ಬಣ್ಣಿಸುವ ಟಿ.ಎಂ. ಕೃಷ್ಣ, ಎಂ.ಎಸ್. ಸಂಗೀತದಲ್ಲಿ ಒಂದು ಮಿಂಚು ಇರುತ್ತಿತ್ತು. ಒಂದು ಸಂಗತಿ ಇಡೀ ದಿಗಂತವನ್ನು ಬೆಳಗಿಸಿಬಿಡುತ್ತಿತ್ತು. ಆಕೆಯ ಸಂಗೀತದ ಪ್ರಾಮಾಣಿಕ ಹೊರಹರಿವು ಈಗಲೂ ನಮ್ಮನ್ನು ಅಲ್ಲಾಡಿಸುತ್ತದೆ. ಕಲೆಯೇ ಅವರ ಬಿಡುಗಡೆ. ಹಾಡಿದಾಗ ಇಡೀ ಜೀವನಾನುಭವ ಅದರಲ್ಲಿ ಸೇರಿ ಮಧುರವಾಗಿ ಬರುತ್ತಿತ್ತು. ಮಹಾನ್ ಸಂಗೀತಗಾರರಲ್ಲಿ ಇರಬೇಕಾದ ಎಲ್ಲ ಗುಣಗಳಿಗೆ ಅವರ ಸಂಗೀತ ಒಂದು ನಿಜವಾದ ಸಂಕೇತ. ಒಳ್ಳೆಯ ಸಂಗೀತಗಾರರಿಗೂ ಮಹಾನ್ ಸಂಗೀತಗಾರರಿಗೂ ವ್ಯತ್ಯಾಸ ಇರುವುದು ಅವರ ಸಂವಹನಕೌಶಲದಲ್ಲಿ. ಶ್ರೋತೃಗಳೊಂದಿಗೆ ಕರಗಿಹೋಗುವುದು ಸಾಧ್ಯವಾಗದಿದ್ದರೆ ಎಲ್ಲ ಕೌಶಲಗಳು ನಿರರ್ಥಕ. ಎಂ.ಎಸ್. ಅವರಿಗೆ ಅದ್ವಿತೀಯವಾದ ಸಂವಹನ ಸಾಮರ್ಥ್ಯವಿತ್ತು. ಹಾಡುವಾಗ ತಮ್ಮೆಲ್ಲ ಅನುಭವಗಳನ್ನು ಅವರು ಕೇಳುಗರಿಗೆ ದಾಟಿಸಿಬಿಡುತ್ತಿದ್ದರು. ಅದರಿಂದ ಕೇಳುಗರಿಗೆ ಸಂಪೂರ್ಣ ತಲ್ಲೀನತೆ ಉಂಟಾಗುತ್ತಿತ್ತು ಎನ್ನುವ ಸಾರರೂಪವಾದ ಮಾತುಗಳನ್ನಾಡಿದ್ದಾರೆ.
ಎಂ.ಎಸ್. ನಿಧನದಿಂದ ನಾವು ಬೇಸರಪಟ್ಟುಕೊಳ್ಳಬೇಕಿಲ್ಲ; ತಮ್ಮ ಕ್ಯಾಸೆಟ್, ಸಿಡಿ, ಆಲ್ಬಮ್ಗಳ ಮೂಲಕ ಅವರು ಈಗಲೂ ನಮ್ಮೊಂದಿಗಿದ್ದಾರೆ ಎನ್ನುವ ಮಾತನ್ನು ನಾವು ಆಗಾಗ ಕೇಳುತ್ತಿರುತ್ತೇವೆ. ಅವೆಲ್ಲ ಇವೆ ನಿಜ; ಆದರೆ ಮೂಲದೊಂದಿಗೆ ಹೋಲಿಸಿ ನೋಡಲು ಹಾಗೂ ತಪ್ಪುಗಳಾಗಿದ್ದರೆ ಸರಿಪಡಿಸಿಕೊಳ್ಳಲು ಮೂಲ (Original) ಇಲ್ಲದಿರುವುದು ನಮ್ಮನ್ನು ಆಗಾಗ ಬಾಧಿಸುತ್ತದೆ. ಈ ನಿಟ್ಟಿನಲ್ಲಿ ಮೃದಂಗವಾದಕ ಕೆ.ವಿ. ಪ್ರಸಾದ್ ಅವರ ಎಚ್ಚರಿಕೆಯ ಮಾತು ಉಲ್ಲೇಖಾರ್ಹ: ಅಮ್ಮ ಹಾಡಿದ ಸುಪ್ರಭಾತ ಇತ್ಯಾದಿಗಳನ್ನು ಈಗ ರೀಮಿಕ್ಸ್ ಮಾಡುತ್ತಿದ್ದಾರೆ. ಅದು ತುಂಬ ತಪ್ಪು. ಅದನ್ನು ಯಾವ ಕಾರಣಕ್ಕೂ ಮಾಡಬಾರದು. ಆ ಶ್ರೇಷ್ಠತೆ ಬೇರೆ ಯಾರಿಗೂ ಅಸಾಧ್ಯ; ಅದನ್ನು ಮುಟ್ಟಲು ಹೋಗಬಾರದು. ಇದು ಕಲೆಗೆ ಮಾಡುವ ಅಪಚಾರವೂ ಹೌದು. ಆ ಬಗೆಯ ರುಚಿಶುದ್ಧಿಯನ್ನು ನಾವು ಕಳೆದುಕೊಳ್ಳಬಾರದು.