ತೆಲುಗು ಮೂಲ: ಕಸ್ತೂರಿ ಮುರಳೀಕೃಷ್ಣ
ಕನ್ನಡಕ್ಕೆ : ಎಸ್.ಆರ್.ಆರ್.
ನೋಡು ನೋಡುತ್ತಿದ್ದಂತೆ ರಾಜಭವನದ ಸೂರಿನಿಂದ ದಂಡವೊಂದು ಕೆಳಕ್ಕಿಳಿದು ಜಯಾಪೀಡನ ಶಿರಸ್ಸಿಗೆ ಅಪ್ಪಳಿಸಿತು…
ಸರ್ವಂ ಖಲ್ವಿದಂ ಬ್ರಹ್ಮ ತಜ್ಜಲಾನಿತಿ ಶಾಂತ ಉಪಾಸೀತ.
ಅಥ ಖಲು ಕ್ರತುಮಯಃ ಪುರುಷಃ ಯಥಾ ಕೃತುರಸ್ಮಿಂಲ್ಲೋಕೇ ಪುರುಷೊ ಭವತಿ ತಥೇತಃ ಪ್ರೇತ್ಸ ಭವತಿ ಸ ಕ್ರತುಂ ಕುರ್ವೀತ.
ಈ ವಿಶ್ವವೆಲ್ಲ ಬ್ರಹ್ಮವೇ. ಬ್ರಹ್ಮದಿಂದಲೇ ಸಕಲ ವಿಶ್ವವೂ ಜನಿಸಿರುವುದು. ಸಕಲ ವಿಶ್ವವೂ ಲಯವಾಗುವುದೂ ಬ್ರಹ್ಮದಲ್ಲಿಯೆ. ಎಲ್ಲ ವಿಶ್ವವನ್ನೂ ನಡೆಸುತ್ತಿರುವುದೂ ಬ್ರಹ್ಮವೇ. ಬ್ರಹ್ಮದಲ್ಲಿಯೇ ಪ್ರಶಾಂತಚಿತ್ತದಿಂದ ಧ್ಯಾನವನ್ನು ಕೇಂದ್ರಿಕರಿಸಬೇಕು. ವ್ಯಕ್ತಿಯ ನಿಶ್ಚಯಕ್ಕೆ ಅನುಗುಣವಾಗಿ ವ್ಯಕ್ತಿಯ ವ್ಯಕ್ತಿತ್ವವಿರುತ್ತದೆ. ವ್ಯಕ್ತಿಯು ತಾನು ಏನಾಗಬೇಕೆಂದು ಭಾವಿಸಿರುತ್ತಾನೋ ಅದೇ ಆಗುತ್ತಾನೆ. ಆದುದರಿಂದ ದೃಢವಾದ ನಿಶ್ಚಯಬುದ್ಧಿಯಿಂದ ಬ್ರಹ್ಮವನ್ನು ಕುರಿತು ಧ್ಯಾನಿಸಬೇಕು.
ಇಟ್ಟಿಲ ಮಹರ್ಷಿಯು ಮಾತನಾಡುವಾಗ ಅವನ ಒಂದೊಂದು ಸ್ವರದಲ್ಲಿಯೂ ದಾರ್ಢ್ಯ ತುಂಬಿರುತ್ತಿತ್ತು. ಆದುದರಿಂದ ಅದು ಶಿಷ್ಯರ ಮನಃಪಟಲದ ಮೇಲೆ ಸ್ಥಿರವಾಗಿ ಮುದ್ರಿತವಾಗುತ್ತಿತ್ತು.
ಗುರುವರ್ಯರೆ! ನನಗೆ ಒಂದು ಸಂದೇಹವಿದೆ ಎಂದ, ಪ್ರಿಯಶಿಷ್ಯ ಶುಕ್ರದಂತ.
ಇಟ್ಟಿಲನು ವಾತ್ಯಲ್ಯದಿಂದ ಶಿಷ್ಯನತ್ತ ನೋಡಿದ.
ಗುರುವರ್ಯರೆ! ವಿಶ್ವವೆಲ್ಲ ಬ್ರಹ್ಮವೇ ಆಗಿರುವಾಗ, ಬ್ರಹ್ಮವನ್ನು ಧ್ಯಾನಿಸುವವರು ‘ಬ್ರಾಹ್ಮಣ’ರೆನಿಸುವವರಾದರೆ, ಮಹಾರಾಜ ಜಯಾಪೀಡನು ಏಕೆ ಬ್ರಾಹ್ಮಣರನ್ನು ದ್ವೇಷಿಸುತ್ತಿದ್ದಾನೆ? ಬ್ರಾಹ್ಮಣರನ್ನು ನಾಶಮಾಡುವುದೇ ತನ್ನ ಲಕ್ಷ್ಯವೆಂದು ಭಾವಿಸಿ ಅವನು ಹಾಗೆ ಪ್ರವರ್ತಿತನಾಗಿರುವುದು ಏಕೆ?
ಇಟ್ಟಿಲ ಮಹರ್ಷಿಯು ಮುಗುಳ್ನಕ್ಕು ಕೇಳಿದ: ನಿಜವಾಗಿ ಜಯಾಪೀಡನ ದ್ವೇಷವು ಬ್ರಾಹ್ಮಣರ ಮೇಲೆ ಎನ್ನುತ್ತೀಯಾ?
ಶುಕ್ರದಂತನು ಗಲಿಬಿಲಿಗೊಂಡ. ಒಂದೆರಡು ಕ್ಷಣಗಳಾದ ಮೇಲೆ ಹೇಳಿದ: ಒಂದೇ ದಿನದಲ್ಲಿ ಯಾವಾಗ ತೊಂಭತ್ತೊಂಭತ್ತು ಮಂದಿ ಬ್ರಾಹ್ಮಣರು ಮರಣ ಹೊಂದುತ್ತಾರೋ ಆಗ ತಾನು ಬ್ರಾಹ್ಮಣರ ಮೇಲಿನ ಹಲ್ಲೆಯನ್ನು ನಿಲ್ಲಿಸುತ್ತೇನೆ ಎಂದು ಅವನು ಘೋಷಿಸಿದ್ದಾನಲ್ಲ? ಹಿಂದೆ ಬ್ರಾಹ್ಮಣರಿಗೆ ನೀಡಲಾಗಿದ್ದ ಅನೇಕ ಅಗ್ರಹಾರಗಳನ್ನು ಮಹಾರಾಜನು ಈಗಾಗಲೇ ಸ್ವಾಧೀನಪಡಿಸಿಕೊಂಡಿದ್ದಾನೆ. ಇದೆಲ್ಲ ಬ್ರಾಹ್ಮಣದ್ವೇಷವಲ್ಲವೆ?
ಇಟ್ಟಿಲನು ನಸುನಕ್ಕು ಹೇಳಿದ: ಬ್ರಾಹ್ಮಣರು ಈ ದೇಶದ ಸಂಸ್ಕೃತಿ ಮತ್ತು ಧರ್ಮಗಳ ಸ್ವರಗಳು, ಆ ಸ್ವರವನ್ನು ಅಣಗಿಸಬೇಕೆಂಬ ಧೋರಣೆ ಇದು. ಹೀಗಾಗಿ ದ್ವೇಷವು ಸಂಸ್ಕೃತಿಯ ಮೇಲೆಯೇ ಹೊರತು ಬ್ರಾಹ್ಮಣರ ಮೇಲೆ ಅಲ್ಲ. ಮತ್ತು ಜನ್ಮಕಾರಣದಿಂದಲೆ ತಾವು ಬ್ರಾಹ್ಮಣರೆಂಬ ಅಭಿಮತದ ಕಾರಣದಿಂದ ಹುಟ್ಟಿರುವುದು ಈ ದ್ವೇಷಭಾವ.
ಹಾಗಾದರೆ ಬ್ರಾಹ್ಮಣರಾಗಿ ಜನಿಸಿದವರು ಬ್ರಾಹ್ಮಣರಲ್ಲವೇ?
ಶುಕ್ರದಂತ, ನಿನ್ನ ತಂದೆ-ತಾಯಿ ಯಾರು?
ಶುಕ್ರದಂತನು ತಲೆತಗ್ಗಿಸಿ ಹೇಳಿದ: ನನಗೆ ತಿಳಿಯದು.
“ಆದರೆ ನಾನು ನಿನಗೆ ಉಪದೇಶ ಮಾಡುತ್ತಿರುವುದು ಹೇಗೆ?
ಶುಕ್ರದಂತನು ಮೌನವಾದ.
ನಿನಗೆ ಸತ್ಯಕಾಮ ಜಾಬಾಲಿಯ ಕಥೆ ತಿಳಿದಿದೆ ತಾನೆ?
ಶುಕ್ರದಂತನು ಹೌದೆಂದು ತಲೆಯಾಡಿಸಿದ.
ಸತ್ಯಕಾಮನು ಕಲಿಕೆಗಾಗಿ ಬ್ರಹ್ಮಚರ್ಯವನ್ನು ಅವಲಂಬಿಸಿ ಗುರುಕುಲವಾಸ ಮಾಡಬಯಸಿದ. ‘ಗುರುಗಳು ನನ್ನ ಗೋತ್ರವೇನೆಂದು ಕೇಳಿದರೆ ಏನು ಹೇಳಲಿ? ಎಂದು ತಾಯಿಯನ್ನು ಕೇಳಿದ ‘ನಾನು ಯೌವನದಲ್ಲಿ ಹಲವರ ಪರಿಚಾರಿಕೆ ಮಾಡುತ್ತಿರುವಾಗ ನೀನು ಜನಿಸಿದೆಯಾದುದರಿಂದ ನಿನ್ನ ಗೋತ್ರವನ್ನು ನಾನರಿಯೆ; ನನ್ನ ಹೆಸರು ಜಾಬಾಲ ಮತ್ತು ನಿನ್ನ ಹೆಸರು ಸತ್ಯಕಾಮನಾಗಿರುವುದರಿಂದ ನೀನು ನಿನ್ನ ಹೆಸರು ಸತ್ಯಕಾಮ ಜಾಬಾಲಿ ಎಂದು ಹೇಳು’ – ಎಂದು ಮಗನಿಗೆ ತಿಳಿಸಿ ಗುರುಗಳಲ್ಲಿಗೆ ಕಳಿಸಿಕೊಟ್ಟಳು. ಗೌತಮ ಮಹರ್ಷಿಯು ಗೋತ್ರವನ್ನು ಕೇಳಿದಾಗ ಸತ್ಯಕಾಮನು ತಾಯಿ ಹೇಳಿದ್ದಂತೆ ನಿವೇದಿಸಿದ. ಹೀಗೆ ಇದ್ದುದನ್ನು ಇದ್ದಂತೆ ಪ್ರಾಮಾಣಿಕವಾಗಿ ಹೇಳುವವನು ಬ್ರಾಹ್ಮಣನೇ ಹೊರತು ಬೇರೆಯವನಲ್ಲ ಎಂದು ಗೌತಮನು ಜಾಬಾಲಿಯನ್ನು ಶಿಷ್ಯನಾಗಿ ಸ್ವೀಕರಿಸಿದ. ಇದರ ತಾತ್ಪರ್ಯ ಏನು?
ವ್ಯಕ್ತಿಯು ಬ್ರಾಹ್ಮಣನಾಗುವುದು ಸತ್ಯವಂತಿಕೆಯಿಂದಲೇ ವಿನಾ ಹುಟ್ಟಿನಿಂದ ಅಲ್ಲ ಎಂದಂತಾಯಿತು.
ಅದರಂತೆ ನೀನೂ ನಾನೂ ಬ್ರಾಹ್ಮಣರು. ಹುಟ್ಟಿನ ವೇಳೆಯಲ್ಲಿ ಒಬ್ಬನು ‘ಬಾಲಕ’ನಷ್ಟೆ. ಬೆಳೆದಂತೆ ಅವನ ವ್ಯಕ್ತಿಲಕ್ಷಣಗಳು ಸ್ಫುಟಗೊಳ್ಳುತ್ತವೆ. ಇದನ್ನರಿಯದೆ ವರ್ತಿಸುವವರೇ ದ್ವೇಷಭಾವನೆಗೆ ಒಳಗಾಗುವವರು.
ಈ ಮಾತುಕತೆ ನಡೆದಿದ್ದಂತೆ ಇನ್ನೊಬ್ಬ ಶಿಷ್ಯನು ಅವಸರವಸರವಾಗಿ ಪ್ರವೇಶಿಸಿ ಹೇಳಿದ:
ಗುರುವರ್ಯರೆ! ದೇಶದ ಹಲವು ಕಡೆಗಳಿಂದ ಹಿರಿಯರೂ ಪಂಡಿತರೂ ತಮ್ಮನ್ನು ಭೇಟಿಯಾಗಲು ಬಂದಿದ್ದಾರೆ.
ಅವರನ್ನು ಒಳಕ್ಕೆ ಬರಹೇಳು.
ಬೇರೆ ಬೇರೆ ಪಟ್ಟಣ-ಹಳ್ಳಿಗಳಿಂದ ಬಂದಿದ್ದ ಹಿರಿಯರು ಸಮೀಪಿಸಿ ಇಟ್ಟಿಲ ಮಹರ್ಷಿಗೆ ನಮಸ್ಕರಿಸಿ ಕುಳಿತರು.
ನೀವು ಇಷ್ಟೊಂದು ಜನರು ನನ್ನಲ್ಲಿ ಆದರವಿಟ್ಟು ಬಂದುದಕ್ಕಾಗಿ ನಾನು ಧನ್ಯನಾದೆ ಎಂದ, ಇಟ್ಟಿಲ.
ಬಂದಿದ್ದವರ ಪೈಕಿ ವಿಷ್ಣುಶರ್ಮನೆಂಬ ಪಂಡಿತನು ಹೇಳಿದ: ಮಹರ್ಷಿಗಳೆ! ವಿಷಯ ತಮಗೆ ತಿಳಿಯದುದೇನಲ್ಲ. ಜಯಾಪೀಡನ ಅವಾಂತರ ಮಿತಿಮೀರುತ್ತಿದೆ. ಈಗ ಅದನ್ನು ಉದಾಸೀನ ಮಾಡುವಂತಿಲ್ಲ. ಹಿಂದೆ ಕಶ್ಮೀರ ದೇಶದಿಂದ ಮ್ಲೇಚ್ಛರನ್ನು ಹೊರಗೋಡಿಸಿ ಸನಾತನಧರ್ಮವನ್ನು ಪುನಃಸ್ಥಾಪಿಸಿದವನೂ ಈಗಿನ ಜಯಾಪೀಡನೂ ಒಬ್ಬನೇ ವ್ಯಕ್ತಿಯೆಂದು ನಂಬಲೇ ಆಗುತ್ತಿಲ್ಲ.
ಮಲ್ಹಣಪುರದಿಂದ ಬಂದಿದ್ದ ಕೇಶವನೆಂಬಾತ ಹೇಳಿದ: ಮಹಾರಾಜನ ಧನಲೋಭ ಮಿತಿಮೀರಿದೆ. ಯಾವಾಗ ದ್ರಾವಿಡ ಮಾಂತ್ರಿಕನ ಉಪಟಳದಿಂದ ಮಹಾಪದ್ಮನಾಗನನ್ನು ರಕ್ಷಿಸಿ ತಾದ್ರು ಧಾತುಪರ್ವತವನ್ನು ಕಂಡುಕೊಂಡನೋ ಆವಾಗಿನಿಂದ ಜಯಾಪೀಡನ ಗರ್ವ ವಿಚ್ಛೃಂಖಲವಾಗಿ ಬೆಳೆದಿದೆ. ತನ್ನ ಅಂಕಿತವನ್ನೊಳಗೊಂಡ ತೊಂಭತ್ತೊಂಭತ್ತು ಕೋಟಿ ತಾಮ್ರ ದೀನಾರಗಳನ್ನು ಛಾಪಿಸಿದ್ದಾನೆ. ಯಾರು ನೂರುಕೋಟಿ ನಾಣ್ಯಗಳನ್ನು ಮಾಡಿಸಬಲ್ಲರೋ ಅವರು ತನ್ನನ್ನು ಗೆದ್ದಂತೆ ಎಂದು ಎಲ್ಲಕಡೆ ಜಾಹೀರು ಮಾಡಿದ್ದಾನೆ. ಸುತ್ತುವರಿದ ಕಾಯಸ್ಥರು ರಾಜನ ಧನದ ಆಸೆಯ ಬೆಂಕಿಗೆ ಆಜ್ಯ ಸುರಿಯುತ್ತಿದ್ದಾರೆ. ಹೆಚ್ಚಿನ ಧನಸಂಗ್ರಹಕ್ಕೆ ಯಾರ ಮೇಲೂ ದಂಡಯಾತ್ರೆ ನಡೆಸಬೇಕಾಗಿಲ್ಲವೆಂದೂ ನಮ್ಮ ದೇಶದಲ್ಲಿಯೆ ತೆರಿಗೆಗಳನ್ನು ಹೆಚ್ಚಿಸಿ ಕೋಶಾಗಾರವನ್ನು ತುಂಬಿಸಬಹುದೆಂದೂ ಮಹಾರಾಜನಿಗೆ ದುರ್ಬೋಧನೆ ಮಾಡಿದ್ದಾರೆ. ಹೀಗೆ ಪ್ರಜೆಗಳು ಮತ್ತು ರಾಜನ ನಡುವೆಯೇ ಯುದ್ಧ ಏರ್ಪಟ್ಟಿದೆ.
ಕಲ್ಯಾಣಪುರದ ಮಿತ್ರಶರ್ಮನೆಂಬಾತ ಹೇಳಿದ: ಈ ರಾಜ್ಯದಲ್ಲಿ ವಿಪ್ರರು ಏನೂ ಕೆಲಸ ಮಾಡದೆ ಪ್ರಜೆಗಳ ದಾರಿತಪ್ಪಿಸಿ ಧನಧಾನ್ಯ ಸಂಗ್ರಹಿಸಿಕೊಳ್ಳುತ್ತಿದ್ದಾರೆ ಎಂದು ಮಹಾರಾಜನನ್ನು ನಂಬಿಸಿದ್ದಾರೆ. ಇದರಿಂದಾಗಿ ವಿಪ್ರರ ಮೇಲೆ ರಾಜನು ಹರಿಹಾಯ್ದಿದ್ದಾನೆ.
ಚಕ್ರಪುರದಿಂದ ಬಂದಿದ್ದ ಚಕ್ರಧರನೆಂಬಾತ ಹೇಳಿದ: ರಾಜನ ವರ್ತನೆಯಿಂದಾಗಿ ರೈತರು ನಷ್ಟಕ್ಕೆ ಒಳಗಾಗಿದ್ದಾರೆ. ವೈಶ್ಯರು ವಾಣಿಜ್ಯವೃತ್ತಿಯನ್ನು ಕೈಬಿಡುತ್ತಿದ್ದಾರೆ; ತಮ್ಮ ಗಳಿಕೆಗಿಂತ ಹೆಚ್ಚಾಗಿ ತೆರಿಗೆಯನ್ನು ಸಲ್ಲಿಸಬೇಕಾಗಿದೆಯೆಂದು ಬಾಧೆಪಡುತ್ತಿದ್ದಾರೆ. ಎಷ್ಟೋ ಜನ ದೇಶಬಿಟ್ಟು ಹೋಗುತ್ತಿದ್ದಾರೆ. ಜನರು ಕ್ರೂರ ರಾಜಭಟರನ್ನು ಎದುರಿಸಲಾಗದೆ ಅಸಹಾಯರಾಗಿದ್ದಾರೆ. ಜನರಿಂದ ಸಂಗ್ರಹಿಸಿದ ಹಣದ ಸ್ವಲ್ಪಭಾಗವಷ್ಟೆ ರಾಜನ ಬೊಕ್ಕಸಕ್ಕೆ ಸೇರುತ್ತಿದೆ. ಹೆಚ್ಚಿನ ಭಾಗ ಅಧಿಕಾರಿಗಳ ಕೈಗೆ ಹೋಗುತ್ತಿದೆ. ರಾಜಾಜ್ಞೆಗಳನ್ನು ವಿಪ್ರರು ಪಾಲಿಸುತ್ತಿಲ್ಲವೆಂದು ಅಧಿಕಾರಿಗಳು ರಾಜನಲ್ಲಿ ತಪ್ಪು ಭಾವನೆಯನ್ನು ಉಂಟುಮಾಡಿದ್ದಾರೆ. ಇದರಿಂದಾಗಿ ಹಿಂದೆ ದೇವಸ್ಥಾನಗಳ ಪೂಜೆಗಳಿಗಾಗಿ ನೀಡಿದ್ದ ಅಗ್ರಹಾರಗಳನ್ನು ರಾಜನು ಸ್ವಾಧೀನಪಡಿಸಿಕೊಂಡಿದ್ದಾನೆ. ದೇವಾಲಯಗಳಲ್ಲಿ ವಿಗ್ರಹಗಳ ಮೇಲಿದ್ದ ಆಭರಣಗಳನ್ನೂ ಉಳಿಸಿಲ್ಲ.
ಚಂದ್ರಕಾಂತಪುರದವನೂ ಎಲ್ಲರಿಗಿಂತ ವೃದ್ಧನೂ, ಪಂಡಿತನೂ ಲಲಿತಾದಿತ್ಯದ ಸಚಿವ ಚಿಂಕುಣನ ತಮ್ಮನೂ ಇಟ್ಟಿಲನಿಗೇ ಗುರುವೂ ಆಗಿದ್ದ ಕಂಕುಣನು ಹೇಳತೊಡಗಿದ: ಇಟ್ಟಿಲ! ಈ ವಿಷಯಗಳನ್ನೆಲ್ಲ ನಿನಗೆ ಏಕೆ ತಿಳಿಸಲಾಯಿತೆಂದರೆ ರಾಜನು ಧನಲೋಭದಿಂದಲೂ ಅಧಿಕಾರಗರ್ವದಿಂದಲೂ ದೇಶದ ಸಾಮಾಜಿಕ ರಚನೆಯನ್ನೇ ಹಾಳುಗೆಡವುತ್ತಿದ್ದಾನೆಂದು ಮನವರಿಕೆ ಮಾಡಿಸುವುದಕ್ಕಾಗಿ. ಪ್ರಜೆಗಳ ಹಿತವನ್ನು ರಾಜನು ಪೂರ್ಣ ಅಲಕ್ಷಿಸಿದ್ದಾನೆ. ಅವನ ನಡವಳಿಗಳಿಂದಾಗಿ ಪ್ರಜೆಗಳ ನಡುವೆಯೂ ದ್ವೇಷಾಸೂಯೆಗಳು ಏರ್ಪಟ್ಟಿವೆ. ಸನಾತನಧರ್ಮಿಗಳಿಗೂ ಇತರರಿಗೂ ನಡುವೆ ಹಾಗೂ ಇತರ ಸಮುದಾಯಗಳ ನಡುವೆ ಭೇದಗಳನ್ನು ಹುಟ್ಟಿಸುವುದು ವಿವೇಕದ ದಾರಿಯಲ್ಲವೆಂದು ಮಹಾರಾಜನಿಗೆ ತಿಳಿಸಿಹೇಳಬೇಕಾಗಿದೆ. ಇದಕ್ಕಾಗಿ ನಮ್ಮೊಡನೆ ನೀನೂ ರಾಜಧಾನಿಗೆ ಬರಬೇಕೆಂದು ಕೋರಲು ನಾನು ಬಂದಿದ್ದೇನೆ.
ಇಟ್ಟಿಲನು ಕಂಕುಣನಿಗೆ ನಮಸ್ಕರಿಸಿ ಹೇಳಿದ: ಗುರುವರ್ಯರೆ! ಪಂಡಿತರ ವಾದವನ್ನು ಅಲಕ್ಷಿಸಿದರೆ ದೇಶಕ್ಕೆ ಅಧೋಗತಿ ತಪ್ಪದು. ನಾನು ತಮ್ಮೊಡನೆ ಅವಶ್ಯ ಬರುವೆ. ಇದಕ್ಕಾಗಿ ನೀವು ಇಷ್ಟುಮಂದಿ ಬರಬೇಕಾಯಿತೆ? ಯಾರೊಡನೆಯಾದರೂ ಒಂದು ಮಾತು ಹೇಳಿಕಳಿಸಿದ್ದರೆ ಸಾಕಾಗಿತ್ತು.
ಕಂಕುಣನು ನಕ್ಕು ಹೇಳಿದ: ನೀನು ಹೀಗೆ ಹೇಳುವೆ ಎಂದು ನಿರೀಕ್ಷಿಸಿದ್ದೆ. ಆದರೂ ನಾವೆಲ್ಲ ಪಂಡಿತ ಮಾತ್ರರು. ನೀನಾದರೂ ಮಹರ್ಷಿ. ಹೇಗೂ ನಾವುಗಳು ಹೋಗಬೇಕಾದ ದಾರಿಯೂ ಇದೇತಾನೆ?
* * * * *
ಮರುದಿನವೇ ಬೆಳಗ್ಗೆ ಹಲವಾರು ಗ್ರಾಮಗಳ ಜನರು ಶ್ರೀನಗರದತ್ತ ಹೊರಟರು. ದಾರಿಯಲ್ಲಿ ಇತರ ಗ್ರಾಮಗಳವರೂ ಸೇರಿಕೊಂಡರು. ಹೀಗೆ ಕ್ರಮೇಣ ಅದು ದೊಡ್ಡ ಜನಪ್ರವಾಹವೇ ಆಯಿತು. ದಾರಿಯಲ್ಲಿ ವಿತಸ್ತಾನದಿಯಲ್ಲಿ ಜನರೆಲ್ಲ ಸ್ನಾನ ಮುಗಿಸಿದರು. ಇಟ್ಟಿಲ ಮಹರ್ಷಿಯು ಪರವಶನಾಗಿ ಹೇಳಿದ: ಈ ವಿತಸ್ತಾನದಿಯ ಮಹಿಮೆಯನ್ನು ಮನುಷ್ಯಮಾತ್ರರು ಹೇಗೆತಾನೆ ವರ್ಣಿಸಿಯಾರು! ಸ್ವಯಂ ಪಾರ್ವತೀದೇವಿಯೇ ಜಲರೂಪ ತಳೆದು ಪರಶಿವನ ಪಾದಗಳನ್ನು ತೊಳೆಯಲು ಧಾವಿಸುತ್ತಿರುವಂತೆ ಹರಿಯುತ್ತಿದೆ ಈ ಜಲರಾಶಿ.
ನದಿಯಲ್ಲಿನ ಕಲ್ಲುಗಳು ಪವಿತ್ರ ಶಿವಲಿಂಗಗಳಂತೆ ಕಂಡವು. ಆ ಕಲ್ಲುಗಳನ್ನು ಆವರಿಸಿದ ಜಲರಾಶಿಯು ಶಿವನಿಗೆ ಅಭಿಷೇಕದಂತೆ ತೋರುತ್ತಿದ್ದುದನ್ನು ಕಂಡು ಜನರು ತನ್ಮಯರಾದರು.
ಒಂದಷ್ಟು ದೂರ ಸಾಗಿದ ಮೇಲೆ ಜನರು ಸ್ತಬ್ಧರಾದರು. ಈಗ ಪ್ರಕೃತಿಯ ವಿರಾಟ್ಸ್ವರೂಪ ಅವರಿಗೆ ಎದುರಾಗಿತ್ತು. ಎದುರಿಗೆ ಗಗನಚುಂಬಿ ಪರ್ವತಪಂಕ್ತಿಗಳು ವಿರಾಜಮಾನವಾಗಿದ್ದವು. ತಪೋಮಗ್ನ ಮುನಿಗಳಂತೆ ಕಂಡ ಆ ಪರ್ವತಗಳು ಜನರಲ್ಲಿ ಭಯ-ಭಕ್ತಿ ಭಾವವನ್ನು ಸೃಷ್ಟಿಸಿದವು. ಮುಗಿಲಿನ ಮೇಘಗಳು ಹೂಮಾಲೆಗಳಂತೆ ತೋರಿದವು. ಆ ಗಂಭೀರ ಪ್ರಕೃತಿಯ ಎದುರಿಗೆ ತಾವು ಎಷ್ಟು ಸಣ್ಣವರೆಂಬ ಭಾವನೆ ಉದಿಸಿ ಜನರು ವಿನಮ್ರರಾದರು. ಕಣ್ಣೆದುರಿಗಿದ್ದ ಪರ್ವತಗಳ ಹಿಂದೆ ಅವಕ್ಕಿಂತ ಎತ್ತರದ ಪರ್ವತಶ್ರೇಣಿಗಳು ಇಣುಕಿ ನೋಡುತ್ತಿದ್ದವು.
ಕಣ್ಣುಮುಚ್ಚಿ ಧ್ಯಾನಸ್ಥನಾದ ಇಟ್ಟಿಲನ ಹೃದಯದಲ್ಲಿ ಓಂಕಾರಧ್ವನಿ ತುಂಬಿತ್ತು. ಆ ಓಂಕಾರಕ್ಕೆ ನದಿಯ ಹರಿವು ಶ್ರುತಿ ನೀಡುತ್ತಿರುವಂತೆ ಭಾಸವಾಯಿತು.
ಇದ್ದಕ್ಕಿದ್ದಂತೆ ಈ ಪ್ರಶಾಂತಿಗೆ ಭಂಗ ಬಂದಿತು. ಒಂದಷ್ಟುಮಂದಿ ಅಶ್ವಾರೋಹಿ ರಾಜಭಟರು ಈ ಜನಸಂದೋಹವನ್ನು ಸುತ್ತುವರಿದರು. ಒಳ್ಳೆಯ ಮಾತಿನಲ್ಲಿ ನಿಮ್ಮಲ್ಲಿರುವ ಹಣವನ್ನು ಕೊಡಿರಿ. ಇಲ್ಲವೆಂದರೆ ನಮ್ಮ ದಂಡಗಳು ನಿಮ್ಮ ಮೇಲೆ ನರ್ತನ ಮಾಡಬಹುದು.
ವೃದ್ಧ ಕಂಕುಣ ಹೇಳಿದ: ನೀವು ದರೋಡೆಕೊರರೆ, ಇಲ್ಲವೆ ರಾಜಭಟರೆ? ನಮ್ಮಲ್ಲಿ ಹಣ ಎಲ್ಲಿಂದ ಬಂದೀತು? ನಾವು ಭಿಕ್ಷಾಟನೆ ಮಾಡಿ ಜೀವಿಸುವವರು. ನಮ್ಮ ಧರ್ಮವೇ ನಮ್ಮ ಆಸ್ತಿ… ನಮ್ಮಲ್ಲಿರುವ ಏನನ್ನು ಬೇಕಾದರೂ ದೋಚಿಕೊಳ್ಳಿರಿ!
ರಾಜಭಟರು ವ್ಯಂಗ್ಯವಾಗಿ ನಕ್ಕು ಹೇಳಿದರು: ನೀವು ಬದುಕಿಕೊಂಡಿರಿ. ಮಹಾರಾಜರು ಗಡಿಯ ಗ್ರಾಮಗಳನ್ನು ವಶಪಡಿಸಿಕೊಳ್ಳಲು ಹೊರಟಿದ್ದುದನ್ನು ದೂರದಿಂದ ಅರಿತೇ ತೊಂಭತ್ತೊಂಭತ್ತು ಜನ ವಿಪ್ರರು ವಿತಸ್ತಾನದಿಗೆ ಹಾರಿ ಮೃತರಾದರೆಂದು ಕೇಳಿದೆವು. ಮಹಾರಾಜರು ಪ್ರತಿಜ್ಞೆಯು ಮುಗಿದಿದ್ದುದರಿಂದ ಇನ್ನು ಮುಂದೆ ವಿಪ್ರರನ್ನು ವಧಿಸುವುದಿಲ್ಲವೆಂದು ಸಾರಿದರು. ಅದರಿಂದಾಗಿಯೇ ನಿಮ್ಮನ್ನು ಉಳಿಸಿದ್ದೇವೆ ಹೀಗೆಂದವರೇ ಸಿಕ್ಕಸಿಕ್ಕವರ ಮೇಲೆ ಪ್ರಹಾರ ನಡೆಸಿ ಅಲ್ಲಿಂದ ಹೊರಟುಹೋದರು.
ಭಟರ ಪ್ರಹಾರಗಳಿಗಿಂತ ಅವರ ಒರಟು ಮಾತುಗಳು ಜನರಿಗೆ ಹೆಚ್ಚು ಬಾಧೆಯನ್ನು ತಂದಿತ್ತು. ಇಂತಹ ಅದ್ಭುತವಾದ ಪ್ರಕೃತಿಯ ನಡುವೆ ಇದ್ದೂ ಮನುಷ್ಯರು ಅದು ಹೇಗೆ ಪಶುಪ್ರಾಯರಾಗಿ ವರ್ತಿಸುತ್ತಿದ್ದಾರೆ! ಎಂದುಕೊಂಡರು.
ಜನರು ರಾಜಭವನವನ್ನು ಸಮೀಪಿಸಿದರು. ಕಾವಲುಗಾರರು ಜನರನ್ನು ಒಳಕ್ಕೆ ಬಿಡಲಿಲ್ಲ.
ಜನರು ತನ್ನನ್ನು ಕಾಣಲು ಬರುತ್ತಿರುವುದನ್ನು ಜಯಾಪೀಡನು ಮೊದಲೇ ಅರಿತಿದ್ದ. ಆದರೂ ಜನರನ್ನು ಒಂದಷ್ಟು ಸತಾಯಿಸಬೇಕೆಂದು ಅವನಿಗೆ ಅನ್ನಿಸಿತ್ತು. ಒಂದು ಇಡೀ ದಿವಸ ಜನರನ್ನು ಹೊರಗೇ ನಿಲ್ಲಿಸಿದ್ದ.
ಮರುದಿನ ಅವರನ್ನು ಒಳಕ್ಕೆ ಬರಹೇಳಿದ. ಯಾರಿಗೂ ಕುಳಿತುಕೊಳ್ಳಿರೆಂದು ಹೇಳದೆ, ಕುಶಲಪ್ರಶ್ನೆಯನ್ನೂ ಕೇಳದೆ ನಿಶ್ಚಲವಾಗಿದ್ದ. ಸ್ವಲ್ಪ ಸಮಯದ ನಂತರ ರಾಜರನ್ನು ನೋಡಲು ಬರಿಗೈಯಲ್ಲಿ ಬಂದಿರುವ ಇವರಿಗೆಲ್ಲ ಕಪಾಳಮೋಕ್ಷ ಮಾಡಿಸಿರಿ ಎಂದು ಭಟರಿಗೆ ಆಜ್ಞಾಪಿಸಿದ.
ಭಟರು ಹಾಗೆಯೇ ಮಾಡಿದರು. ಜನರ ಪಾಡನ್ನು ನೋಡಿ ಆಸ್ಥಾನದಲ್ಲಿದ್ದವರೂ ವಿಕೃತವಾಗಿ ನಕ್ಕರು.
ಅವಮಾನವನ್ನೂ ಕ್ರೋಧವನ್ನು ಅಣಗಿಸಿಕೊಂಡು ಕಂಕುಣನು ಮುಂದೆ ಬಂದು ಹೇಳಿದ:
ಮಹಾರಾಜರೆ! ಹಿಂದೆ ಮನು, ಮಾಂಧಾತ, ಶ್ರೀರಾಮರಂತಹ ರಾಜರು ಈ ಪೃಥಿವಿಯನ್ನು ಪಾಲಿಸಿದ್ದಾರೆ. ಅವರಾರ ಪ್ರಭುತ್ವದಲ್ಲಿಯೂ ಪಂಡಿತರೂ ವಿಪ್ರರೂ ಹೀಗೆ ಅವಮಾನಗೊಂಡದ್ದಿಲ್ಲ. ವಿಪ್ರರ ಕ್ರೋಧಕ್ಕೆ ದೇವತೆಗಳೇ ಹೆದರುತ್ತಾರೆ. ಪಂಡಿತರಿಗೆ ಕ್ರೋಧ ಉಕ್ಕಿದರೆ ಅದು ಸ್ವರ್ಗ ಮರ್ತ್ಯ ಪಾತಾಳಗಳನ್ನೆಲ್ಲ ಭಸ್ಮೀಕರಿಸೀತು.
ಕಂಕುಣನ ಆವೇಶಪೂರ್ಣ ಮಾತನ್ನು ಕೇಳಿ ಆಸ್ಥಾನದಲ್ಲಿದ್ದ ಸಾಮಂತರು ಕಂಪಿತರಾದರು.
ಜಯಾಪೀಡನು ವಿಕಟವಾಗಿ ನಕ್ಕು ನಾನು ಯಾರೆಂಬುದು ನಿಮಗೆ ತಿಳಿದಿದೆಯೇ? ಎಂದ.
ವಿಷ್ಣುಶರ್ಮನು ಸ್ವಲ್ಪ ಮುಂದಕ್ಕೆ ಬಂದು ಹೇಳಿದ: ಪ್ರಭು! ಕಲಿಯುಗಾಬ್ದ ೩೩೯೦ರಲ್ಲಿ (ಕ್ರಿ.ಶ. ೨೮೮) ದುರ್ಲಭವರ್ಧನನು ಐವತ್ತು ವರ್ಷ ಆಳಿದ ಮೇಲೆ ಮೃತನಾದ. ಆನಂಗಲೇಖ ಮಹಾರಾಣಿಯು ತನ್ನ ತಂದೆ ಬಾಲಾದಿತ್ಯನ ದೌಹಿತ್ಯನೆಂಬ(ಮಗಳ ಮಗ) ಕಾರಣ ಪ್ರತಾಪಾದಿತ್ಯನನ್ನು ಉತ್ತರಾಧಿಕಾರಿಯಾಗಿ ನಿಯುಕ್ತಿ ಮಾಡಿದಳು. ಪ್ರತಾಪಾದಿತ್ಯವೆಂದು ಪಟ್ಟದ ಹೆಸರನ್ನು ಧರಿಸಿದ್ದವನು ದುರ್ಲಭಕ. ಅವನು ನರೇಂದ್ರಪ್ರಭನೆಂಬ ವೈಶ್ಯನ ಪತ್ನಿಯನ್ನು ಮೋಹಿಸಿದ. ವೈಶ್ಯನು ಆಸ್ಥಾನದ ಸುಸಂಸ್ಕೃತ ವಾತಾವರಣವನ್ನು ಮನಗಂಡು ತನ್ನ ಪತ್ನಿಯನ್ನು ದೇವದಾಸಿಯಾಗಿ ದಾನ ಮಾಡಿದ. ಅವಳಲ್ಲಿ ದುರ್ಲಭಕನಿಗೆ ಜನಿಸಿದ ಚಂದ್ರಾಪೀಡನು ೫೯ ವರ್ಷ ರಾಜ್ಯಭಾರ ನಡೆಸಿದ. ಆಸ್ಥಾನದ ಆಧಿಕಾರಿಗಳು ತ್ರಿಭುವನಸ್ವಾಮಿಮಂದಿರವನ್ನು ನಿರ್ಮಿಸಲು ಯೋಚಿಸಿದ್ದರು. ಅವರು ಅದಕ್ಕಾಗಿ ಗುರುತಿಸಿದ್ದ ಸ್ಥಳ ಒಬ್ಬ ಚರ್ಮಕಾರನಿಗೆ ಸೇರಿತ್ತು. ಉದ್ದಿಷ್ಟ ಕಾರ್ಯಕ್ಕಾಗಿ ಸ್ಥಳವನ್ನು ನೀಡುವಂತೆ ಚಂದ್ರಾಪೀಡನು ಚರ್ಮಕಾರನನ್ನು ವಿನಯಪೂರ್ವಕವಾಗಿ ಅಭ್ಯರ್ಥನೆ ಮಾಡಿದ. ಅಂತಹ ಧರ್ಮಭೀರುವೂ ವಿನಯವಂತನೂ ಆಗಿದ್ದವನು ನಿಮ್ಮ ಪೂರ್ವಜನಾದ ಚಂದ್ರಾಪೀಡ.
ಎಂಟುವರ್ಷ ಎಂಟುತಿಂಗಳು ರಾಜ್ಯಭಾರ ನಡೆದ ಮೇಲೆ ತಮ್ಮನಾದ ತಾರಾಪೀಡನ ಕುಟಿಲ ದುರ್ಮಂತ್ರ ಪ್ರಯೋಗದಿಂದಾಗಿ ಚಂದ್ರಾಪೀಡನು ಮರಣಹೊಂದಿದ. ಹಾಗೆ ತಾರಾಪೀಡನ ಅಧಿಕಾರಾವಧಿ ಸುಮಾರು ೧೪೦ ದಿವಸಗಳಷ್ಟೆ. ಅದರ ತರುವಾಯ ತಾರಾಪೀಡನ ತಮ್ಮ ಲಲಿತಾದಿತ್ಯನು ಅಭಿಷಿಕ್ತನಾದ…
ಈಗ ಕಂಕುಣನು ಕಥನವನ್ನು ಮುಂದುವರಿಸಿದ: ಮಹಾರಾಜ! ನಿನ್ನ ಅಜ್ಜ ಲಲಿತಾದಿತ್ಯನು ಅದ್ಭುತ ವ್ಯಕ್ತಿ, ಶೀಲವಂತ. ಶೌರ್ಯಬಲದಿಂದ ಗಂಗಾ-ಕಾಲಿಂದೀ ನದಿಗಳ ನಡುವಣ ಪ್ರದೇಶವನ್ನು ದಹನ ಮಾಡಿದ. ಗಾಧಿಪುರವನ್ನು ಜಯಿಸಿದ. ಅವನ ಪ್ರತಾಪಕ್ಕೆ ಮಣಿದು ಕನ್ಯಾಕುಬ್ಜದ ಅಧಿಪತಿಯು ಸಂಧಿಮಾಡಿಕೊಂಡ. ಹೀಗೆ ಯಮುನೆಯ ಉತ್ತರದಿಶೆಯ ಭಾಗದಿಂದ ಹಿಡಿದು ಕಾಲಿಕಾ ತಟದ ಕನ್ಯಾಕುಬ್ಜದ ವರೆಗಿನ ಪ್ರಾಂತವಷ್ಟೂ ಲಲಿತಾದಿತ್ಯನಿಗೆ ವಶವಾಯಿತು. ಅನಂತರ ಕ್ರಮಕ್ರಮವಾಗಿ ಕಳಿಂಗದೇಶ, ಗೌಡದೇಶ ಮೊದಲ್ಗೊಂಡು ದಕ್ಷಿಣದ ಕರ್ಣಾಟ ರಾಜ್ಯದ ವರೆಗಿನ ಭಾಗವೆಲ್ಲ ಅವನಿಗೆ ವಶವಾಯಿತು. ಉತ್ತರದ ಕಾಂಬೋಜದಿಂದ ಪಶ್ಚಿಮದ ದ್ವಾರಕೆಯ ವರೆಗಿನ ಸೀಮೆಯನ್ನೂ ವಶಪಡಿಸಿಕೊಂಡ. ಕುರುದೇಶ ಪೂರ್ವದ ಪ್ರಾಗ್ಜ್ಯೋತಿಷಪುರ ಮೊದಲಾದ ಸಮಸ್ತ ಭಾಗವೂ ಲಲಿತಾದಿತ್ಯನ ಅಂಕೆಗೆ ಒಳಪಟ್ಟಿತು. ಕಶ್ಮೀರಾದಿಪ ಲಲಿತಾದಿತ್ಯನ ಸಾಮ್ರಾಜ್ಯ ದಿಗಂತವ್ಯಾಪಿಯಾಯಿತು…..
ಈಗ ಮಿತ್ರಶರ್ಮನು ಮುಂದಡಿಯಿಟ್ಟು ಹೇಳತೊಡಗಿದ:
ಮೂವತ್ತಾರು ವರ್ಷ ಏಳುತಿಂಗಳು ಹನ್ನೊಂದು ದಿವಸಗಳ ಲಲಿತಾದಿತ್ಯನ ರಾಜ್ಯಪಾಲನೆ ಆದಮೇಲೆ ಅವನ ಆದೇಶದಂತೆ ಅವನ ಪುತ್ರ ಕುವಲಯಾಪೀಡನು ರಾಜನಾಗಿ ಒಂದು ವರ್ಷ ಹದಿನೈದು ದಿನಗಳ ತರುವಾಯ ವೈರಾಗ್ಯ ತಳೆದು ರಾಜ್ಯವನ್ನು ತ್ಯಜಿಸಿ ಹೊರಟುಹೋದ. ಅವನ ಸವತಿ-ಸೋದರ ವಜ್ರಾಪೀಡನು ಗಾದಿಯೇರಿದ. ಅವನಾದರೊ ಭೋಗಲಂಪಟ ಮತ್ತು ಮ್ಲೇಚ್ಛರಲ್ಲಿ ಸಹಾನುಭೂತಿ ಬೆಳಸಿಕೊಂಡಿದ್ದವನು. ಅನೇಕ ಪ್ರಜೆಗಳನ್ನು ಬಲವಂತವಾಗಿ ಬಂಧಿಸಿ ತಾನೇ ಮ್ಲೇಚ್ಛರ ವಶಕ್ಕೆ ಒಪ್ಪಿಸಿದ್ದ. ಹೀಗೆ ಏಳು ವರ್ಷ ಆಳ್ವಿಕೆ ನಡೆಸಿ ಕ್ಷಯರೋಗಕ್ಕೆ ಸಿಲುಕಿ ಮೃತಿಹೊಂದಿದ.
ಅವನ ನಂತರ ಅಧಿಕಾರಕ್ಕೆ ಬಂದವನು ಮಂಜರಿಕಾದೇವಿಯ ಪುತ್ರ ಪೃಥ್ವ್ಯಾಪೀಡ. ಅವನ ನಾಲ್ಕು ವರ್ಷ ಒಂದು ತಿಂಗಳ ರಾಜ್ಯಭಾರ ಭಯಾನಕವಾಗಿತ್ತು. ಆಮೇಲೆ ಅಧಿಕಾರ ಹಿಡಿದ ನಿಮ್ಮ ಅಣ್ಣ ಸಂಗ್ರಾಮಸಿಂಹನು ಏಳು ದಿನಗಳಷ್ಟೆ ಇದ್ದು ಮ್ಲೇಚ್ಛರ ಕುತಂತ್ರಗಳಿಗೆ ಬಲಿಯಾದ. ಹೀಗೆ ಕಶ್ಮೀರವಷ್ಟೂ ಮ್ಲೇಚ್ಛರ ವಶವಾಗಲಿದ್ದ ಕ್ಲಿಷ್ಟ ಪರಿಸ್ಥಿತಿಯಲ್ಲಿ ರಾಜ್ಯಸೂತ್ರವನ್ನು ಹಿಡಿದ ತಾವು ಇಡೀ ರಾಜ್ಯವನ್ನು ಮ್ಲೇಚ್ಛಮುಕ್ತವಾಗಿಸಿದಿರಿ.
ಮಿತ್ರಶರ್ಮನ ಮಾತನ್ನು ಚಕ್ರಧರನು ಮುಂದುವರಿಸಿದ:
ತಮ್ಮ ಅಜ್ಜಂದಿರಂತೆ ತಾವು ದಿಗ್ವಿಜಯಯಾತ್ರೆಗೆ ಹೋಗಿದ್ದಾಗ ಜಜ್ಞನು ದ್ರೋಹವೆಸಗಿ ರಾಜ್ಯವನ್ನು ಆಕ್ರಮಿಸಿಕೊಂಡ. ಅದು ತಿಳಿದೊಡನೆ ತಮ್ಮ ಸೈನ್ಯವು ಕಶ್ಮೀರಕ್ಕೆ ಮರಳಿತು. ಅಂತಹ ಸ್ಥಿತಿಯಲ್ಲಿಯೂ ತಾವು ಹತ್ತಿರಹತ್ತಿರ ಲಕ್ಷದಷ್ಟು ಕುದುರೆಗಳನ್ನು ದಕ್ಷಿಣೆಯ ಸಹಿತ ವಿಪ್ರರಿಗೆ ದಾನವಿತ್ತಿರಿ. ತಾವು ವೇಷ ಮರೆಸಿಕೊಂಡಿದ್ದರೂ ತಾವು ಪ್ರಜಾಕಂಟಕರನ್ನು ಅಣಗಿಸಿದ್ದುದನ್ನು ಗಮನಿಸಿ ತಮ್ಮ ಗುರುತುಹಿಡಿದು ಕಳಿಂಗ ರಾಜನು ತನ್ನ ಪುತ್ರಿ ಕಲ್ಯಾಣದೇವಿಯನ್ನು ತಮಗೆ ಇತ್ತು ವಿವಾಹವನ್ನು ನೆರವೇರಿಸಿದ. ಅದಕ್ಕೆ ಪ್ರತಿಯಾಗಿ ಉಡುಗೊರೆಯಾಗಿ ತಾವು ಕೆಲವು ರಾಜ್ಯಗಳನ್ನು ನಿರ್ಮಿಸಿ ಮಾವಂದಿರಿಗೆ ನೀಡಿದಿರಿ. ಅನಂತರ ಪತ್ನಿ ಕಲ್ಯಾಣದೇವಿ, ರಾಜನರ್ತಕಿ ಕಮಲಾದೇವಿ ಹಾಗೂ ದೊಡ್ಡ ಸೈನ್ಯದೊಡನೆ ಕಶ್ಮೀರಕ್ಕೆ ಹಿಂದಿರುಗಿ ಜಜ್ಞನನ್ನು ವಧೆ ಮಾಡಿದಿರಿ. ನೂತನವಾಗಿ ಕಲ್ಯಾಣಪುರ, ಕಮಲನಗರ, ಮಲ್ಹಣಪುರ ಪಟ್ಟಣಗಳನ್ನು ನಿರ್ಮಿಸಿದಿರಿ. ಹಲವಾರು ಕಡೆ ಕೇಶವಾಲಯಗಳನ್ನು ಕಟ್ಟಿಸಿದಿರಿ.
ಕೇಶವನು ಜಯಾಪೀಡನ ಆಸ್ಥಾನದಲ್ಲಿ ನಿರಂತರ ಪಂಡಿತಪೋಷಣೆ ನಡೆದಿದ್ದುದನ್ನು ಸ್ಮರಿಸಿದ. ಮಿತ್ರಶರ್ಮನು ಜಯಾಪೀಡನ ನೇಪಾಳವಿಜಯವನ್ನು ಪ್ರಸ್ತಾವಿಸಿದ.
ಹಿಂದಿನ ಈ ಹಲವಾರು ಸಂಗತಿಗಳನ್ನು ನೆನಪಿಗೆ ತಂದು ಮಿತ್ರಶರ್ಮನು ಈಚಿನ ಮೂರು ವರ್ಷಗಳಲ್ಲಿ ಮಹಾರಾಜನು ಗುರುತೇ ಸಿಗದಷ್ಟು ಮಾರ್ಪಟ್ಟಿರುವುದನ್ನು ಕಳವಳದಿಂದ ಪ್ರಸ್ತಾವಿಸಿದ. ಮುಂದೆಯಾದರೂ ರಾಜನು ಪ್ರಜಾಹಿತವನ್ನು ಸಾಧಿಸಬೇಕೆಂದು ಬಿನ್ನವಿಸಿದ. ಜನರು ಅವರವರ ಧರ್ಮಗಳನ್ನು ಅನುಸರಣೆ ಮಾಡಲು ಅವಕಾಶ ಕಲ್ಪಿಸಬೇಕೆಂದು ಕಂಕುಣನು ಸೇರಿಸಿದ.
ಇಷ್ಟಾದ ಮೇಲೂ ಜಯಾಪೀಡನ ಮನಃಸ್ಥಿತಿ ಮಾರ್ಪಡಲಿಲ್ಲ. ಅವನು ಅಸಹನೆಯಿಂದ ಹೇಳಿದ: ಬರಿಯ ಶುಷ್ಕ ಚರಿತ್ರೆಯ ಬೋಧನೆಯೇ ಆಯಿತು. ಹಿಂದಿನದಿನಗಳಲ್ಲಿ ರಾಜರು ವಿವೇಚನೆಯಿಲ್ಲದೆ ಕೊಟ್ಟ ದಾನಗಳು ನಿಮ್ಮನ್ನೆಲ್ಲ ನಿಷ್ಪ್ರಯೋಜಕರನ್ನಾಗಿ ಮಾಡಿದೆ ಎಂದ. ಕಂಕುಣ ಮೊದಲಾದವರ ಓಲೈಕೆಯ ಮಾತುಗಳೂ ರಾಜನ ಮೇಲೆ ಪರಿಣಾಮ ಬೀರಲಿಲ್ಲ.
ವಿಶ್ವವ್ಯವಸ್ಥೆಯಲ್ಲಿ ಆಳುವವರು ಮತ್ತು ಪ್ರಜೆಗಳು ಎಂಬ ಕಲ್ಪನೆಗಳೂ ಕ್ಷಣಬಂಗುರ – ಎಂದು ಚಕ್ರಧರನು ಹೇಳಿದಾಗ ಜಯಾಪೀಡನು ಕ್ರುದ್ಧಗೊಂಡು ಹಾಗಾದರೆ ನಾನು ರಾಜನೇ ಅಲ್ಲವೆ? ಎನ್ನುತ್ತ ಒರೆಯಿಂದ ಕತ್ತಿಯನ್ನು ತೆಗೆಯಲು ಉಜ್ಜುಗಿಸಿದ.
ಚಕ್ರಧರನು ಭ್ರಮೆಯ ಆವೇಶಕ್ಕೊಳಗಾಗಿ ತೋರಿದಂತೆ ಮಾತನಾಡುವುದು ವಿವೇಕವಂತಿಕೆಯೆನಿಸದು ಎಂದ.
ಮಿತ್ರಶರ್ಮ ಮೊದಲಾದವರೂ ಹಿತಬೋಧೆ ಮಾಡಿದರು.
ಮಧ್ಯಪ್ರವೇಶ ಮಾಡಿದ ಇಟ್ಟಿಲನು, ಉನ್ನತಿಯು ಸಾಧನೆಯಿಂದ ಬರುತ್ತದೆಯೇ ವಿನಾ ಹುಟ್ಟಿನಿಂದಲ್ಲ ಎಂಬ ಮಿತ್ರಶರ್ಮನ ಮಾತನ್ನು ಸಮರ್ಥಿಸಿದ.
ನಾನು ಮದೋನ್ಮತ್ತನಾಗಿದ್ದರೂ ನೀವೆಲ್ಲ ಅಸಹಾಯರಾಗಿ ಇರುವುದೇಕೆ? ನಿಮ್ಮ ತಪಃಶಕ್ತಿ ಎಲ್ಲಿ ಹೋಗಿದೆ?
_ ಎಂದು ರಾಜನು ಅಟ್ಟಹಾಸ ಮಾಡುತ್ತಿದ್ದಂತೆ, ಇನ್ನು ದೌಷ್ಟ್ಯದಮನ ವಿಳಂಬವಾಗಬಾರದೆಂದು ಇಟ್ಟಿಲನು ಅಭಿಮಂತ್ರಣ ಮಾಡಿದ.
ನೋಡು ನೋಡುತ್ತಿದ್ದಂತೆ ರಾಜಭವನದ ಸೂರಿನಿಂದ ದಂಡವೊಂದು ಕೆಳಕ್ಕಿಳಿದು ಜಯಾಪೀಡನ ಶಿರಸ್ಸಿಗೆ ಅಪ್ಪಳಿಸಿತು. ಅದರ ಹಿಂದುಗೂಡಿ ಗಾಯಗಳ ತುಂಬ ಕೊಳೆತ ಹುಳುಗಳು ತುಂಬಿದ ಸ್ಥಿತಿಯಲ್ಲಿ ರಾಜನು ಬಾವಿಯೊಂದನ್ನು ಸೇರಿ ಅವಸಾನವನ್ನು ಎದುರುನೋಡುತ್ತ ಕಾಲ ಸವೆಸಿದ.
ಮೂವತ್ತೊಂದು ವರ್ಷಗಳ ಆಳ್ವಿಕೆಯ ನಂತರ ಜಯಾಪೀಡನು ಮೃತನಾದದ್ದು ಕಲಿಯುಗಾಬ್ದ ೩೭೨೨ರಲ್ಲಿ (ಎಂದರೆ ಕ್ರಿ.ಶ. ೬೨೧).
ಅನಂತರದ ಕಾಲದಲ್ಲಿ ರಾಜನ ಜೀವಶಾಂತಿಗಾಗಿ ‘ಅಮೃತಪ್ರಭಾ ಕೇಶವಾಲಯ’ವನ್ನು ಜನರು ಕಟ್ಟಿಸಿದರು.
ಧರ್ಮಮಾರ್ಗವನ್ನು ಉಲ್ಲಂಘಿಸಿದವರಿಗೆ ದುರ್ಗತಿ ತಪ್ಪದೆಂಬುದು ಇತಿಹಾಸದಲ್ಲಿ ಹಲವು ಬಾರಿ ನಿರೂಪಣೆಗೊಂಡಿದೆ.
Comments are closed.