೨೦೧೫ರ ವಾರ್ಷಿಕ ಕಥಾಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನ ಪಡೆದ ಕಥೆ
ಜಗನ್ನಾಥನ ಅನಿರೀಕ್ಷಿತ ವರ್ತನೆಯಿಂದ ಅವನು ಬದಲಾಗುವನೆಂಬ ಸೂಚನೆ ಸಿಕ್ಕಿ ಮನೆಯವರೆಲ್ಲರಿಗೂ ಖುಷಿಯೇ ಆಗಿತ್ತು. ಆದರೆ….
ಜಗನ್ನಾಥನಿಗೆ ಇತ್ತೀಚೆಗೆ ಬಹುಬೇಗ ಕೋಪ ಬರುತ್ತಿತ್ತು. ಯಾಕೋ ಇಡೀ ಜಗತ್ತಿನಲ್ಲಿ ಯಾವುದೂ ಸರಿಯಿಲ್ಲವೆನಿಸುವಂತೆ ಸಣ್ಣಪುಟ್ಟ ಮಾತಿಗೂ ತಟ್ಟನೇ ಆವೇಗಕ್ಕೊಳಗಾಗುತ್ತಿದ್ದ. ‘ಮೇಷ್ಟ್ರೇ ನಿಮಗೆ ಬಿ.ಪಿ. ಇರಬಹುದು ಚೆಕ್ ಮಾಡಿಸಿಕೊಳ್ಳಿ’ ಎನ್ನುವ ತನ್ನ ಸಹೋದ್ಯೋಗಿಗಳ ಮಾತಿಗೂ ಬಿಪಿಯಂತೆ ಬಿಪಿ, ಯಾರಿಗಿರಲ್ಲಯ್ಯಾ ಬಿಪಿ? ನಿಜ ಹೇಳ್ಬೇಕಂದ್ರೆ ಬಿಪಿ ಅನ್ನೋದಕ್ಕೆ ಯಾರೂ ಮಾತ್ರೆ ತಗೊಳ್ಳಲ್ಲ, ಬಿಪಿನಲ್ಲಿ ಏನಾದ್ರೂ ಹೆಚ್ಚು ಕಡಮೆಯಾದ್ರೆ ಮಾತ್ರ ಮಾತ್ರೆ ತಗೊಳ್ಳೋದು. ಮೊದಲು ಸರಿಯಾಗಿ ತಿಳ್ಕೊಂಡು ಮಾತಾಡೋದು ಕಲಿ ಎಂದು ಗುರಾಯಿಸುತ್ತಿದ್ದ. ಅದೂ ನಿಜವೇ. ಬಿಪಿ ಎಂದರೆ ಅವನ ಕಣ್ಣಮುಂದೆ ಎದೆಗೂಡಿನಲ್ಲಿರುವ ಹಿಡಿ ಹೃದಯ, ಅದರ ನಾಲ್ಕು ಕವಾಟಗಳು, ರಕ್ತನಾಳಗಳು, ರಕ್ತವು ಈ ರಕ್ತನಾಳಗಳ ಮೂಲಕ ನುಗ್ಗುವಾಗಿನ ಲಬ್-ದಬ್ ಸದ್ದು ಎಲ್ಲವೂ ಕಂಡಂತಾಗುತ್ತಿತ್ತು. ಅದನ್ನೇ ಕಣ್ಣಿಗೆ ಕಟ್ಟುವಂತೆ ಹೇಳುತ್ತಾ ಹೃದಯದ ಕಾರ್ಯಕ್ಷಮತೆಯನ್ನು ತಿಳಿಸುವುದೇ ಈ ರಕ್ತದ ಒತ್ತಡ. ಇದೊಂದು ಅರೋಗ್ಯವಂತ ದೇಹದಲ್ಲಿನ ಸಹಜ ಅಂಶ. ಬ್ಲಡ್ಪ್ರೆಶರ್ನಲ್ಲಿ ಏನೋ ಹೆಚ್ಚು ಕಡಮೆಯಾಗಿರಬೇಕೆಂದು ಹೇಳಬೇಕೇ ಹೊರತು ಬಿಪಿ ಇದೆ ಎನ್ನಬಾರದು ಎಂದೇ ವಾದಿಸುತ್ತಿದ್ದ. ಕೆಲವು ದಿನಗಳ ಹಿಂದೆಯಷ್ಟೇ ಕನ್ನಡ ಟೀಚರ್ ಸುನಂದ ತನ್ನ ಸಾಫ಼್ಟ್ವೇರ್ ಇಂಜಿನಿಯರ್ ಮಗ ಕೆಲಸಮಾಡುವ ಕಂಪನಿಯ ನಿಯಮಾನುಸಾರ ಮೆಡಿಕಲ್ ಚೆಕ್ಅಪ್ ಮಾಡಿಸಲು ಹೋಗಿದ್ದನೆಂದೂ, ಉಳಿದದ್ದೆಲ್ಲಾ ನಾರ್ಮಲ್ ಇದ್ದರೂ ಬ್ಲಡ್ಶುಗರ್ ಜಾಸ್ತಿ ಇದೆಯೆನ್ನುವ ರಿಪೋರ್ಟ್ ನೋಡಿ ಖಿನ್ನನಾಗಿ ಬಿಟ್ಟಿದ್ದಾನೆಂದೂ ಹೇಳುತ್ತಿದ್ದುದನ್ನು ಕೇಳಿಸಿಕೊಂಡವನು ಇಷ್ಟುದ್ದ ಭಾಷಣವನ್ನೇ ಮಾಡಿಬಿಟ್ಟಿದ್ದ.
ಜಗನ್ನಾಥನ ಅನಿಸಿಕೆಯ ಪ್ರಕಾರ ಯಾವ ತೊಂದರೆಯೂ ಇಲ್ಲದ ವ್ಯಕ್ತಿಯೊಬ್ಬ ಸುಮ್ಮನೇ ಮೆಡಿಕಲ್ ಚೆಕ್ಅಪ್ ಮಾಡಿಸಿಕೊಳ್ಳುವುದೆಂದರೆ ಊರೊಳಗೆ ಹೋಗುವ ಮಾರಿಯನ್ನು ಬಾ ಎಂದು ಮನೆಗೆ ಆಹ್ವಾನಿಸಿದಂತೆಯೇ ಸರಿ. ಲ್ಯಾಬ್ ಪ್ರವೇಶಿಸುವ ಮುನ್ನ ನಾರ್ಮಲ್ ಎನಿಸಿಕೊಂಡಂಥವರೆಲ್ಲ ರಿಪೋರ್ಟ್ನಲ್ಲಿ ಪೇಷೆಂಟ್ ಎಂದೇ ನಮೂದಿಸಲ್ಪಡುತ್ತಿದ್ದರಲ್ಲ! ಕೊನೆಗೆ ರಿಪೋರ್ಟ್ ಎಲ್ಲ ಸರಿಯಾಗೇ ಇದ್ದರೂ ಕೂಡ ಅದರಲ್ಲಿ ಹೆಸರಿನ ಹಿಂದೆ ಪೇಷೆಂಟ್ ಎಂದೇ ನಮೂದಿಸುವುದಂತೂ ದೊಡ್ಡ ಅಪರಾಧವಾಗಿತ್ತು. ಇನ್ನು ಬಿಪಿಯೋ ಶುಗರೋ, ಥೈರಾಯ್ಡೋ ಇನ್ನೆಂಥದ್ದೋ ಮಣ್ಣೋ ಮಸಿಯೋ ಹೆಚ್ಚು ಕಡಮೆಯಾಗಿದ್ದರಂತೂ ಆ ಮನುಷ್ಯ ಜೀವನಪರ್ಯಂತ ಪೇಷೆಂಟೇ ಸರಿ. ಅಲ್ಲಿಯವರೆಗೂ ಎಲ್ಲರಂತೆ ಬದುಕುತ್ತಿದ್ದವನು ಹಣೆಪಟ್ಟಿ ಹಚ್ಚಿಕೊಂಡು ಮಾತ್ರೆ ನುಂಗುತ್ತಲೇ ಕಾಲಕಳೆಯಬೇಕಾದ ಅನಿವಾರ್ಯತೆಯನ್ನು ಸೃಷ್ಠಿಸುವ ಈ ಕಂಪೆನಿಗಳ ನಿಯಮಾವಳಿಗಳು, ಅವರು ಕೊಡುವ ಐದು ಅಥವಾ ಆರಂಕಿಯ ಸಂಬಳಕ್ಕಾಗಿ ಇಂತಹದ್ದಕ್ಕೆಲ್ಲಾ ಕುರಿಯಂತೆ ತಲೆಯಾಡಿಸುವ ಜನರು ಶತಮೂರ್ಖರೇ ಆಗಿದ್ದರು.
ಜಗನ್ನಾಥನ ಇಂತಹ ಮಾತುಗಳು ಸುತ್ತಲಿದ್ದವರಿಗೆ ಮೊದಲು ಇದೆಂತಹ ವಿತಂಡವಾದ ಅನ್ನಿಸುತ್ತಿತ್ತಾದರೂ ನಿಧಾನವಾಗಿ ಯೋಚಿಸಿದಾಗ ಅರೇ, ಹೌದಲ್ಲವೆ ಎಂದು ಕೆಲವರಿಗಾದರೂ ಅನ್ನಿಸುತ್ತಿದ್ದುದೂ ಸುಳ್ಳಲ್ಲ. ಆದರೂ ಒಪ್ಪಿದಂತೆ ಯಾರೂ ತೋರಿಸಿಕೊಳ್ಳುತ್ತಲೂ ಇರಲಿಲ್ಲವೆನ್ನುವುದೂ ಸತ್ಯವೇ. ಹೋಗಿ ಮೇಷ್ಟ್ರೆ, ಖಾಯಿಲೆ ಬಂದಮೇಲೆ ಅಯ್ಯೋ ಮೊದಲೇ ಎಚ್ಚರಿಕೆಯಿಂದಿದ್ದರೆ ಹೀಗಾಗುತ್ತಲೇ ಇರಲಿಲ್ಲ ಅಂತ ಕೊರಗುವ ಬದಲು, ಮುಂಚೆಯೇ ತಿಳಿದುಕೊಂಡು ಎಚ್ಚರಿಕೆಯಿಂದಿರೋದೇ ವಾಸಿ ಎನ್ನುತ್ತಾ ಅಲ್ಲಿಂದ ಜಾಗ ಖಾಲಿಮಾಡಲನುವಾಗುತ್ತಿದ್ದರೂ ಜಗನ್ನಾಥ ಬಿಡುತ್ತಿರಲಿಲ್ಲ. ಮತ್ತೆ ಪಟ್ಟುಹಿಡಿದವನಂತೆ ಇನ್ನೊಂದು ಪ್ರಸಂಗ ಪ್ರಾರಂಭಿಸುತ್ತಿದ್ದ. ಅವನ ಚಿಕ್ಕಪ್ಪನ ಮಗ ಹಳ್ಳಿಯಿಂದ ಬಂದಾಗ ತನಗೆ ಸಕ್ಕರೆಖಾಯಿಲೆಯಿದೆಯೆಂದು, ಮತ್ತೊಮ್ಮೆ ನಗರದಲ್ಲಿ ಟೆಸ್ಟ್ ಮಾಡಿಸುವುದಾಗಿ ಹೋಗಿದ್ದವನು ಬಹಳ ಖುಶಿಯಾಗಿ ಹಿಂದಿರುಗಿದ್ದ, ಕೈಯಲ್ಲಿ ಸ್ವೀಟ್ ಬಾಕ್ಸಿನೊಂದಿಗೆ. ಕೇಳಿದರೆ ಖಾಲಿಹೊಟ್ಟೆ, ತಿಂಡಿ ಆದ ಒಂದು ಘಂಟೆಯ ನಂತರ, ಮಧ್ಯಾಹ್ನ ಊಟವಾದ ಮೇಲೆ ಹೀಗೇ ಮೂರ್ನಾಲ್ಕು ಬಾರಿ ಟೆಸ್ಟ್ ಮಾಡಿ ಸಕ್ಕರೆ ಖಾಯಿಲೆ ಇಲ್ಲವೆಂದು ರಿಪೋರ್ಟ್ ಕೊಟ್ಟಿದ್ದರಂತೆ.
ಆತನೋ ತನಗೆ ಶುಗರ್ ಕಂಪ್ಲೇಂಟ್ ಇದೆಯೆಂದು ಗೊತ್ತಾದಾಗಿನಿಂದ ಹೊಟ್ಟೆ ತುಂಬ ಊಟ ಮಾಡುವುದನ್ನೂ ಬಿಟ್ಟುಬಿಟ್ಟಿದ್ದನಂತೆ. ಮೂರು ಇಡ್ಲಿ ತಿನ್ನುವ ಜಾಗದಲ್ಲಿ ಒಂದು ಇಡ್ಲಿ, ಎರಡು ಚಪಾತಿ ಬದಲು ಒಂದು ಚಪಾತಿ, ಅನ್ನವಂತೂ ಬೇಡವೇ ಬೇಡ, ಒಮ್ಮೆಗೇ ಹೊಟ್ಟೆ ತುಂಬ ತಿನ್ನುವ ಬದಲು ಚೂರು ಚೂರೇ ಆಗಾಗ ಹೊಟ್ಟೆಗೆ ತೆಗೆದುಕೊಳ್ಳಿ ಎಂದಿದ್ದ ಡಾಕ್ಟರರ ಸಲಹೆಯನ್ನು ಕಟ್ಟುನಿಟ್ಟಾಗಿ ಪಾಲಿಸಿ, ಹಳ್ಳಿಯ ರೈತನ ಕಷ್ಟದ ಬದುಕು ಬಾಳುವ ಆತ ಅರ್ಧ ಇಳಿದುಹೋಗಿದ್ದ ಕಥೆಯನ್ನು ಹೇಳಿ, ಡಾಕ್ಟರುಗಳು, ಲ್ಯಾಬ್ನ ಕಾರ್ಯವೈಖರಿ ಎಲ್ಲದರ ಜನ್ಮ ಜಾಲಾಡಿ, ಕೊನೆಗೆ ಯಾರಾದರೂ ಒಂದು ಲೋಟ ತಣ್ಣನೆಯ ನೀರು ಕೊಡುವವರೆಗೂ ಬುಸುಗುಟ್ಟುತ್ತಲೇ ಕುಳಿತುಕೊಳ್ಳುತ್ತಿದ್ದ ಜಗನ್ನಾಥನ ಸ್ವಭಾವ ಗೊತ್ತಿದ್ದವರಾರೂ ಅವನ ಮಾತಿಗೆ ಅಡ್ಡ ಬರುತ್ತಿರಲಿಲ್ಲ. ಅದಕ್ಕೆ ಇನ್ನೊಂದು ಕಾರಣವೂ ಇತ್ತು. ಅಲ್ಲಿದ್ದವರಲ್ಲೆಲ್ಲಾ ಹಿರಿತಲೆಯೆಂದರೆ ಜಗನ್ನಾಥನೇ. ಆತನ ಬಗ್ಗೆ ಅವನ ವಿಷಯಪಾಂಡಿತ್ಯದ ಬಗ್ಗೆ, ವರ್ಕ್ ಬಗೆಗಿನ ಕಮಿಟ್ಮೆಂಟ್ ಬಗ್ಗೆ ಗೊತ್ತಿದ್ದವರಾರೂ ಅವನಿಗೆ ಎದುರಾಡಿ ಸಣ್ಣವರೆನಿಸಿಕೊಳ್ಳಲು ಇಷ್ಟ ಪಡುತ್ತಿರಲಿಲ್ಲ.
ಬೆಂಗಳೂರಿನ ಪ್ರತಿಷ್ಠಿತ ಖಾಸಗಿ ಶಾಲೆಯಲ್ಲಿ ಸಮಾಜವಿಜ್ಞಾನ ಕಲಿಸುತ್ತಲೇ ತನ್ನ ಬದುಕು ಸವೆಸಿದ್ದ ಜಗನ್ನಾಥನನ್ನು ಕಂಡರೆ ಆಡಳಿತ ಮಂಡಳಿಯವರಿಗೂ ಗೌರವ, ಹೆಮ್ಮೆ. ಇನ್ನೇನು ನಿವೃತ್ತಿಯ ಅಂಚಿಗೆ ಬಂದಿದ್ದ ಜಗನ್ನಾಥ ಕೇವಲ ಪಾಠ ಮಾಡುವುದಷ್ಟೇ ತನ್ನ ಕಾಯಕ ಎಂದು ಎಂದೂ ಅಂದುಕೊಂಡಿರಲಿಲ್ಲ. ಹಗಲು-ರಾತ್ರಿ ಶಕ್ತಿಮೀರಿ ಆ ಸಂಸ್ಥೆಗಾಗಿ ದುಡಿದು ಈ ಮಟ್ಟಕ್ಕೇರಲು ಶ್ರಮಿಸಿದ್ದು ಸುಳ್ಳೇನೂ ಆಗಿರಲಿಲ್ಲ. ಸಮಾಜ ಬೋಧಿಸುವುದರ ಜೊತೆಗೆ ಮಕ್ಕಳಲ್ಲಿ ವ್ಯವಸ್ಥೆಯ ಬಗ್ಗೆ ಜಾಗೃತಿಯನ್ನು ಮೂಡಿಸಲು ಆತ ಬಹಳ ಪ್ರಯತ್ನಿಸುತ್ತಿದ್ದ. ವ್ಯವಸ್ಥೆಯಲ್ಲಿನ ಲೋಪ-ದೋಷಗಳ ಬಗ್ಗೆ, ಜಾತಿ-ಧರ್ಮದ ತಾರತಮ್ಯಗಳು, ರಾಜಕಾರಣಿಗಳು ಅದನ್ನು ಬಳಸಿಕೊಳ್ಳುವ ಕುತಂತ್ರ ಎಲ್ಲದರ ಬಗ್ಗೆ ಸಲೀಸಾಗಿ ಮಕ್ಕಳ ಮನದೊಳಗೆ ಪ್ರಶ್ನೆ ಎಬ್ಬಿಸಿಬಿಡುತ್ತಿದ್ದ. ಅವನ ಶಿಷ್ಯಂದಿರಾದರೋ ಆಗ ಹದಿಹರೆಯಕ್ಕೆ ಕಾಲಿರಿಸುತ್ತಿದ್ದ ಹೈಸ್ಕೂಲ್ ವಿದ್ಯಾರ್ಥಿಗಳು.
ಒಳ್ಳೆಯದು, ಕೆಟ್ಟದ್ದು ಏನೇ ಆದರೂ ಅದರ ಆರಂಭ ಜೀವನದ ಇದೇ ಹಂತದಲ್ಲಿ ಎಂದು ಬಲವಾಗಿ ನಂಬಿದ್ದ ಜಗನ್ನಾಥ ಅನ್ಯಾಯ, ಭ್ರಷ್ಟಾಚಾರಗಳ ಬಗ್ಗೆ ಆವೇಶದಿಂದ ಮಾತನಾಡುತ್ತಿದ್ದರೆ ಅವನ ತರಗತಿಗಳಲ್ಲಿ ಸೂಜಿ ಬಿದ್ದರೂ ಕೇಳಿಸುವ ನಿಶ್ಶಬ್ದವಿರುತ್ತಿತ್ತು. ಐವತ್ತರಲ್ಲಿ ಕನಿಷ್ಠ ಹತ್ತು ಮಕ್ಕಳಾದರೂ ತಮ್ಮ ಮೆಚ್ಚಿನ ಜಗ್ಗುಮೇಷ್ಟ್ರ ತತ್ತ್ವಗಳನ್ನು ರೂಢಿಸಿಕೊಳ್ಳಲು ಪಣತೊಡುತ್ತಿದ್ದರು. ಮೊದಲೆಲ್ಲ ಎಲ್ಲರೊಂದಿಗೆ ಚೆನ್ನಾಗಿಯೇ ಬೆರೆಯುತ್ತಿದ್ದ ಜಗನ್ನಾಥ ಇತ್ತೀಚೆಗೆ ಯಾಕೋ ಮೌನಿಯಾಗತೊಡಗಿದ್ದ. ಬಹುಶಃ ನಿವೃತ್ತಿಯ ದಿನಗಳು ಹತ್ತಿರಬರುತ್ತಿರುವುದರಿಂದ ಬೇಸರ ಮಾಡಿಕೊಂಡಿರಬಹುದು ಎಂದು ಅಂದುಕೊಂಡು ಯಾರಾದರೂ ಮೇಲೆಬಿದ್ದು ಮಾತಾಡಿಸಹೋದರೆ ಹರಿಹಾಯಲಾರಂಭಿಸಿದ್ದ. ಹೋಗಲಿ ಬಿಡು ಎಂದು ಆತನ ತಂಟೆಗೆ ಹೋಗದೇ ಉಳಿದವರು ತಮ್ಮಷ್ಟಕ್ಕೆ ತಾವೇನಾದರೂ ಕಷ್ಟ-ಸುಖ ಹಂಚಿಕೊಳ್ಳುತ್ತಿದ್ದರೂ ಹೀಗೇ, ಅದೇ ಸುನಂದಾ ಮೇಡಮ್ಗೆ ಭಾಷಣ ಕೇಳಿಸಿದನಲ್ಲ ಹಾಗೆ…
ಜಗನ್ನಾಥನ ಮನದಲ್ಲೇನಾಗುತ್ತಿತ್ತೆಂದು ಆತನಿಗೂ ಗೊತ್ತಿತ್ತೋ ಇಲ್ಲವೋ. ಮನೆಯಲ್ಲೂ ಅದೇ ಕಥೆ. ಹೆಂಡತಿ ಊಟಕ್ಕೆ ಕರೆದರೂ ಸಿಡಿಮಿಡಿ, ಮಕ್ಕಳು ಮಾತಾಡಿಸಿದರೂ ಸಿಡಿಮಿಡಿ. ಬೇಜಾರೆಂದು ಟಿವಿ ಹಾಕಿದರೆ ಅವೇ ಮನೆಹಾಳು ಸೀರಿಯಲ್ಗಳು. ಬಹುತೇಕ ಎಲ್ಲ ಧಾರಾವಾಹಿಗಳಲ್ಲೂ ಒಂದಲ್ಲಾ ಒಂದು ಹೆಣ್ಣು ಖಳನಾಯಕಿಯಾಗಿ ಮನೆಯ ನೆಮ್ಮದಿ ಹಾಳುಮಾಡುವುದು ಇರಲೇಬೇಕಾದ್ದರಿಂದ ಜಗನ್ನಾಥನಿಗೆ ಕೆಂಡಾಮಂಡಲ ಕೋಪ ಈ ಸೀರಿಯಲ್ಗಳೆಂದರೆ. ಮಂಥನ, ಮುತ್ತಿನ ತೋರಣ, ಮುಕ್ತದಂತಹ ಧಾರವಾಹಿಗಳೆಂದರೆ ಇದ್ದ ಕೆಲಸ ಬಿಟ್ಟು ಕೂರುತ್ತಿದ್ದ ಜಗನ್ನಾಥನಿಗೆ ಹೆಂಡತಿ ಮನೋರಂಜನೆಗೆಂದು ಮೂಢನಂಬಿಕೆ, ಪುನರ್ಜನ್ಮ, ಕೊಲೆ, ಸುಲಿಗೆಗಳಿಂದ ಕೂಡಿರುವ ಧಾರಾವಾಹಿಗಳನ್ನು ಆಸಕ್ತಿಯಿಂದ ನೋಡುವುದು ಸಹಿಸಲಾಗುತ್ತಿರಲಿಲ್ಲ. ಇದು ಎಲ್ಲಿಗೆ ಮುಟ್ಟಿತೆಂದರೆ ಆತ ಮನೆಯಲ್ಲಿದ್ದಾಗ ಅವನ ಹೆಂಡತಿ ಅಪ್ಪಿತಪ್ಪಿಯೂ ಟಿವಿ, ರಿಮೋಟ್ ಮುಟ್ಟುತ್ತಿರಲಿಲ್ಲ. ಮೊದಲೆಲ್ಲ ನ್ಯೂಸ್ಚಾನಲ್ಗಳನ್ನು ಆಸಕ್ತಿಯಿಂದ ನೋಡುತ್ತಿದ್ದ ಜಗನ್ನಾಥನಿಗೆ ಇತ್ತೀಚೆಗೆ ಅದು ಅಲರ್ಜಿಯಾಗಿ ಹೋಗಿತ್ತು. ಎಲ್ಲಾ ಕಡೆಯೂ ಅದೇ ರಾಜಕಾರಣಿಗಳ ಕೆಸರೆರೆಚಾಟ, ಅತ್ಯಾಚಾರ, ಕೊಲೆ, ಯಾವನೋ ಕಾವಿಯುಟ್ಟವನ ಲಂಪಟತನ, ಯಾರೋ ಸಿನಿಮಾ ನಟನ ಮನೆಯಲ್ಲಿನ ಸಮಾರಂಭವನ್ನು ರಾಷ್ಟ್ರೀಯ ಘಟನೆಯೆನ್ನುವಂತೆ ಇಡೀ ದಿನ ತೋರಿಸುವುದು… ಕೆಲವೇ ನಿಮಿಷಕ್ಕೆ ಜಗನ್ನಾಥ ಅಸಹನೆಯಿಂದ ರಿಮೋಟ್ ಕುಟ್ಟಿ ಎದ್ದುಹೋಗುತ್ತಿದ್ದ. ಇಡೀ ಜಗತ್ತೇ ಯುದ್ಧ, ಅನಾಚಾರಗಳಲ್ಲಿ ಮುಳುಗಿಹೋದಂತೆ ಭಾಸವಾಗುತ್ತಿತ್ತವನಿಗೆ. ಈ ಅಸಹನೆ ಸುತ್ತಮುತ್ತಲೂ ನಡೆಯುತ್ತಿರುವ ಇಂತಹ ಘಟನೆಗಳ ಬಗ್ಗೆಯೋ ಅಥವಾ ನ್ಯೂಸ್ಮಾಡುವ ಭರದಲ್ಲಿ ಇಂತಹವನ್ನು ವೈಭವೀಕರಿಸಿ ಸಮಾಜದಲ್ಲಿ ಇನ್ನಷ್ಟು ಆಕ್ರೋಶ ಅಸಹನೆಯ ಬೆಂಕಿಯನ್ನು ಹಬ್ಬಿಸುತ್ತಿರುವ ಚಾನಲ್ಗಳ ಬಗ್ಗೆಯೋ ಎಂದು ಸ್ವತಃ ಜಗನ್ನಾಥನಿಗೇ ತಿಳಿಯಿತ್ತಿರಲಿಲ್ಲ. ಒಟ್ಟಿನಲ್ಲಿ ಟಿವಿ ಅವನ ನೆಮ್ಮದಿಯನ್ನು, ಅದರ ಮೂಲಕ ಅವನ ಹೆಂಡತಿ, ಮಕ್ಕಳ ಟೈಮ್ಪಾಸ್ ಜಗತ್ತನ್ನು ಹಾಳುಮಾಡುತ್ತಿತ್ತೆಂದರೆ ತಪ್ಪಾಗದು.
ಹೀಗಿರುವಾಗ ಜಗನ್ನಾಥ ನಿವೃತ್ತಿಯಾಗುವ ದಿನವೂ ಬಂದಿತು. ಇಷ್ಟು ವರ್ಷಗಳ ಕಾಲ ನಿಃಸ್ಪೃಹತೆಯಿಂದ ದುಡಿದದ್ದಾಕ್ಕಾಗಿ, ಶಾಲು ಹೊದೆಸಿ, ನೆನಪಿನ ಕಾಣಿಕೆ ಕೊಟ್ಟು, ಒಂದೆರಡು ಫೋಟೊ ತೆಗೆಸಿ ಆತನನ್ನು ಬೀಳ್ಕೊಡಲಾಯಿತು. ನೆನೆಪಿನೊಂದಿಗೆ ಇವೆಲ್ಲವನ್ನೂ ಹೊತ್ತು ಮನೆಗೆ ಬಂದವನಿಗೆ ಒಂದು ಕ್ಷಣ ತಾನಿನ್ನು ಸಂಪೂರ್ಣ ಸ್ವತಂತ್ರ, ಗಡಿಯಾರದ ಹಂಗಿಲ್ಲದೇ ದಿನ ಸವೆಸಬಹುದೆಂದು ಖುಶಿಯೆನಿಸಿದರೂ, ಮರುಕ್ಷಣ ಇಷ್ಟು ವರ್ಷಗಳ ಶಿಸ್ತುಬದ್ಧ ಜೀವನಕ್ಕೆ ಒಮ್ಮೆಗೇ ಇತಿಶ್ರೀ ಹಾಡುವುದೇ? ನಿವೃತ್ತಿಯಾದರೇನು ಬದುಕಿನ್ನೂ ಇದೆಯಲ್ಲ, ಹೇಗಿರಬೇಕೋ ಹಾಗೇ ಇರಬೇಕು ಅನ್ನಿಸಿತ್ತು. ಕಳೆದ ವರ್ಷವಷ್ಟೆ ನಿವೃತ್ತಿಯಾದ ಆತನ ಸ್ನೇಹಿತನೊಬ್ಬ ಅದೇ ಕೊರಗಿನಲ್ಲಿ ಮನೋರೋಗಿಯಾದಂತೆ ಬದುಕುತ್ತಿರುವುದು ನೆನಪಾಗಿ ಜಗನ್ನಾಥನಾಗಲೇ ನಾಳೆಯಿಂದ ಮಾಡಬೇಕಾಗಿರುವ ಕೆಲಸಗಳಿಗೆ ಟೈಮ್ ಟೇಬಲ್ ಸಹ ಮನದಲ್ಲೇ ತಯಾರಿಸಿಟ್ಟುಕೊಂಡಿದ್ದ. ಜಗನ್ನಾಥ ಇನ್ನುಮೇಲೆ ಬಹುತೇಕ ಮನೆಗಂಟಿಕೊಂಡೇ ಇರುವುದರಿಂದಾಗುವ ಪರಿಣಾಮಗಳು, ಅದರಲ್ಲೂ ತನ್ನಿಷ್ಟದ ಕನ್ನಡ, ಹಿಂದಿ ಧಾರವಾಹಿಗಳನ್ನು ನೋಡುವ ಕಾರ್ಯಕ್ರಮ ಸುಗಮವಾಗಿರದು ಎಂಬ ಆತಂಕದಲ್ಲೇ ಅವನನ್ನು ಬರಮಾಡಿಕೊಂಡ ಹೆಂಡತಿ ಕಾಫಿಲೋಟ ಕೈಗಿತ್ತು ಅವನು ಹೊತ್ತುತಂದಿದ್ದ ಚೀಲ ತೆರೆದಳು. ಹೂಹಾರ, ಹಣ್ಣು-ಹಂಪಲುಗಳ ಮಧ್ಯೆ ಅದೋ ಚಿನ್ನಾರಿ ಕಾಗದದಲ್ಲಿ ಸುತ್ತಿದ ಪುಟ್ಟ ಡಬ್ಬವೊಂದು ಮಿರಮಿರನೆ ಮಿಂಚುತ್ತಿತ್ತು! ಅದಾದರೋ, ಜಗನ್ನಾಥ ಊಹಿಸಿಯೂ ಇರದ ಮಿರಮಿರ ಮಿಂಚುವ ಹೊಚ್ಚ ಹೊಸದಾಗಿ ಬಂದಿದ್ದ ಸ್ಮಾರ್ಟ್ಫೋನ್!
ಬೆಳ್ಳಿಯ ದೀಪವೋ ಮತ್ತೇನನ್ನಾದರೂ ಕೊಟ್ಟಿರುತ್ತಾರೆಂದು ಊಹಿಸಿದ್ದವಳಿಗೆ ಅಚ್ಚರಿಯಾಯಿತು. ಮಕ್ಕಳೂ ಖುಷಿಯಾದರು. ಸ್ಮಾರ್ಟ್ಫೋನ್ ತೆಗೆದುಕೊಳ್ಳಲು ಎಲ್ಲರೂ ಒತ್ತಾಯ ಮಾಡುತ್ತಿದ್ದರೂ ಜಗನ್ನಾಥನಿಗೆ ಅದು ಅಷ್ಟು ಆವಶ್ಯಕವೆನಿಸಿರಲಿಲ್ಲ. ಮಾತಾಡಲು, ಮೆಸೇಜ್ ಮಾಡಲು ತನ್ನ ಬಳಿಯಿದ್ದ ಫೋನೇ ಸಾಕೆಂದು ಎಲ್ಲರ ಬಾಯಿ ಮುಚ್ಚಿಸಿದ್ದ. ಅವನ ಡಬ್ಬ ಮೊಬೈಲನ್ನು ಒಂದು ವೇಳೆ ಆತನೆಲ್ಲಿಯಾದರೂ ಬೀಳಿಸಿಕೊಂಡರೂ ಯಾರೂ ತೆಗೆದುಕೊಳ್ಳುವುದಿಲ್ಲವೆಂದು ಎಲ್ಲರೂ ಅವನ ಹಿಂದೆ ಮಾತಾಡಿಕೊಳ್ಳುವುದು ಕಿವಿಗೆಬಿದ್ದರೂ ಡೋಂಟ್ಕೇರ್ ಎಂದಿದ್ದ ಜಗನ್ನಾಥನಿಗೆ ಈಗ ನಿವೃತ್ತಿಯ ದಿನ ಶಾಲೆಯಲ್ಲಿ ಪ್ರೀತಿಯಿಂದ ಕೊಟ್ಟ ಈ ಸ್ಮಾರ್ಟ್ಫೋನ್ ಬಳಸುವುದಿಲ್ಲ ಎಂದು ಹೇಳಲು ಕಷ್ಟವಾಗತೊಡಗಿತು. ನಿಜ ಹೇಳಬೇಕೆಂದರೆ ಜಗನ್ನಾಥನೇನೂ ಇಂತಹದ್ದಕ್ಕೆಲ್ಲಾ ವಿರೋಧಿಯಾಗಿರಲಿಲ್ಲ. ಆದರೆ ತನ್ನ ಕೆಲಸಕಾರ್ಯಗಳ ಮಧ್ಯೆ ಇಂತಹದ್ದಕ್ಕೆಲ್ಲಾ ಆತನಿಗೆ ಪುರುಸೊತ್ತಿರಲಿಲ್ಲವಷ್ಟೆ. ಸ್ಕೂಲಿನಲ್ಲಿ ಕಂಪ್ಯೂಟರ್, ಪ್ರೊಜೆಕ್ಟರ್ ಎಂದೆಲ್ಲಾ ಬಳಸಿದ್ದರೂ ಸಹಾ ತನಗೇನಾದರೂ ಹೆಚ್ಚಿನ ಮಾಹಿತಿ ಬೇಕೆನಿಸಿದಾಗ ಗಂಟೆಗಟ್ಟಲೇ ಸೆಂಟ್ರಲ್ ಲೈಬ್ರರಿ, ಅಲ್ಲಿ ಇಲ್ಲಿ ಎಂದು ಪುಸ್ತಕ, ಪತ್ರಿಕೆಗಳನ್ನು ಜಾಲಾಡುತ್ತಿದ್ದನೆ ಹೊರತು ಗೂಗಲ್ ಬಳಸುತ್ತಿರಲ್ಲಿಲ್ಲ. ಪ್ರಭಾಕರನಂತಹ ಇತ್ತೀಚೆಗಿನ ತಲೆಮಾರಿನವರು ಏಕೆಂದು ಕೇಳಿದರೆ ‘ಅದು ನನ್ನಿಷ್ಟ. ಪುಸ್ತಕ ಓದುವುದು ಎಲ್ಲದಕ್ಕಿಂತ ಒಳ್ಳೆಯ ಅಭ್ಯಾಸ. ಗೂಗಲ್ನಲ್ಲಿ ಹುಡುಕಾಡುವುದೆಂದರೆ ಯಾರೋ ಮಾಡಿಟ್ಟ ಅಡುಗೆಯ ರುಚಿ ನೋಡಿದಂತೆ. ಅಂಗೈಯಲ್ಲೇ ಎಲ್ಲಾ ಸಿಗುವುದಾದರೆ ಪುಸ್ತಕಗಳಿರುವುದೇಕೆ?’ ಎನ್ನುತ್ತಿದ್ದ. ಅದಕ್ಕೆ ತಕ್ಕಂತೆ ಅವನ ಕೆಲವು ಸಹೋದ್ಯೋಗಿಗಳು, ‘ಪ್ರಭಾಕರಾ, ನನ್ನ ಮಗನಿಗೆ ನಾಳೆ ಸ್ಕೂಲಲ್ಲಿ ಎಸ್ಸೆ ಕಾಂಪಿಟೀಷನ್ ಇದೆಯಂತೆ, ಜೀವನದಲ್ಲಿ ಸ್ನೇಹಿತರ ಮಹತ್ತ್ವ. ಇದರ ಬಗ್ಗೆ ಸ್ವಲ್ಪ ನೆಟ್ನಲ್ಲಿ ಕಲೆಕ್ಟ್ ಮಾಡಿಕೊಡ್ತೀಯಾ’ ಎಂತಲೋ, ‘ಪ್ರಭಾಕರಾ, ಮಾಧ್ಯಮಗಳು ಯುವಜನರ ಅಭಿವೃದ್ಧಿಗೆ ಪೂರಕವಾಗಿ ಕೆಲಸ ಮಾಡುತ್ತಿವೆ ಅನ್ನೋ ವಿಶಯದ ಡಿಬೇಟ್ ಇದೆಯಂತೆ ನನ್ನ ಮಗಳ ಕಾಲೇಜಲ್ಲಿ. ಸ್ವಲ್ಪ ನೆಟ್ನಲ್ಲಿ ಹುಡುಕಿ ಪರ ವಿರೋಧ ಎರಡೂ ಕಡೆ ವಿಷಯ ಕೊಡ್ತೀಯಾ’ ಅಂತ ಆಗಾಗ್ಗೆ ಅವಲತ್ತುಕೊಳ್ಳುತ್ತಿದ್ದುದು ಕೇಳಿ ಜಗನ್ನಾಥನಿಗೆ ರೇಜಿಗೆಯಾಗುತ್ತಿತ್ತು. ಕುದುರೆಯನ್ನು ಕಂಡರೆ ಕಾಲುನೋವು ಬರುವ ಗಾದೆಯನ್ನು ಉದ್ಧರಿಸುತ್ತಾ ಈ ಬಡ್ಡಿಮಕ್ಕಳಿಗೆ ಎಲ್ಲಾ ಇಟರ್ನೆಟ್ನಲ್ಲಿ ಹುಡುಕಿಕೊಡಬೇಕು, ತಲೆಯಿದ್ದವರೂ ಯೋಚನೆಮಾಡದೆ ಟೆಕ್ನೋಲಜಿ ಟೆಕ್ನೋಲಜಿ ಎನ್ನುತ್ತಾ ಅಂಗವಿಕಲರಂತಾಗುತ್ತಿದ್ದಾರೆಂದು ಅವರಿಗೆ ಕೇಳುವಂತೆಯೇ ಗೊಣಗಿ ಅವರು ಮುಖ ದುಮ್ಮಿಸಲು ಕಾರಣನಾಗುತ್ತಿದ್ದ. ಮೇಷ್ಟ್ರೇ ನೀವು ಈ ಕಾಲಕ್ಕಲ್ಲ ಬಿಡಿ, ಇಷ್ಟು ಕನ್ಸರ್ವೇಟಿವ್ ಆದ್ರೆ ಕಷ್ಟ ಎನ್ನುವ ಕೆಲವು ಸಹೋದ್ಯೋಗಿಗಳ ಮಾತಿಗೂ ಆತ ಸೊಪ್ಪುಹಾಕುತ್ತಿರಲಿಲ್ಲ.
ಮೊನ್ನೆ ಜಗನ್ನಾಥನ ಸಂಬಂಧಿಯೊಬ್ಬ ಮನೆಗೆ ಬಂದಿದ್ದಾಗ ಅವನ ಬ್ಯಾಗಿನಿಂದ ಮರದ ಒಂದು ಮೊಳ ಉದ್ದದ ತೆಳ್ಳಗಿನ ಕೈಯಂತಹುದನ್ನು ಹೊರತೆಗೆದಿದ್ದ. ಇದೇನಯ್ಯಾ ಎಂದು ಕೇಳಿದ್ದಕ್ಕೆ ಬೆನ್ನು ನವೆಯಾದರೆ ಕೆರೆದುಕೊಳ್ಳಲು ಎಂಬ ಉತ್ತರ ಬಂದಿತ್ತು. ಇರಬಹುದೇನೋ ಎಂದುಕೊಳ್ಳುವಷ್ಟರಲ್ಲೇ ಆತ ಅದರಿಂದ ಎಡ ತೋಳನ್ನು ಕೆರೆದುಕೊಳ್ಳಲಾರಂಭಿಸಿದ್ದ. ‘ತೋಳು ಕೈಗೆ ಸಿಗುವಾಗ ಕೆರೆಯಲು ಮರದ ಕೈಯ್ಯೇಕೆ ಬೇಕು?’ – ಎಂದು ಜಗನ್ನಾಥ ಕೇಳಿದ್ದು, ಆತ ನಾಲ್ಕು ದಿನ ಇರಲು ಬಂದವ ಅವಮಾನಿತನಾಗಿ ಅಂದೇ ವಾಪಸಾಗುವಂತೆ ಮಾಡಿತ್ತು.
ಜಗನ್ನಾಥ ಮೊದಲಿನಿಂದಲೂ ಹೀಗೇ. ಕಷ್ಟಜೀವನದಲ್ಲಿ ನಂಬಿಕೆಯಿಟ್ಟವನು. ಸುಲಭದಲ್ಲಿ ಲಭ್ಯವಾಗುವುದು ಯಾವುದೂ ಸುಖ ತರುವುದಿಲ್ಲವೆಂದೇ ನಂಬಿ ಪಾಲಿಸಿಕೊಂಡು ಬಂದಿದ್ದವನು. ಅಷ್ಟಲ್ಲದಿದ್ದರೆ ಪಿಯುಸಿ ಪಬ್ಲಿಕ್ ಪರೀಕ್ಷೆಯಲ್ಲಿ ಪಕ್ಕದವನು ಬಹಳ ಚಾಣಾಕ್ಷತನದಿಂದ ನಕಲುಮಾಡುತ್ತಿದ್ದುದನ್ನು ರೂಮ್ ಸೂಪರ್ವೈಜ಼ರ್ ಗಮನಕ್ಕೆ ತಂದಾಗ ಆತ ಅಷ್ಟೇ ನಯವಾಗಿ ನಿನಗೆ ಬೇಕಾದರೆ ನೀನೂ ಅವನ ಬಳಿ ತೆಗೆದುಕೊಂಡು ನಕಲು ಮಾಡು ಎಂದದ್ದಕ್ಕೆ, ರೋಸಿ ಪರೀಕ್ಷೆಯನ್ನೇ ಬರೆಯದೆ ಎದ್ದು ಬಂದಿದ್ದ. ಪರಿಣಾಮ ಒಂದು ವರ್ಷ ಕಳೆದುಕೊಂಡಿದ್ದ. ಆತ, ಆ ನಕಲುಪಾರ್ಟಿ ಇಂದು ಜಗನ್ನಾಥನಿಗಿಂತ ಹೆಚ್ಚಿನ ಸಂಬಳತರುವ ಹುದ್ದೆಯಲ್ಲಿದ್ದರೆ ಇವನು ಬರೀ ಮೇಷ್ಟ್ರು! ಹಾಗೆಂದು ಆತ ಎಂದಿಗೂ ಪಶ್ಚಾತ್ತಾಪ ಪಟ್ಟವನೂ ಅಲ್ಲ. ತನ್ನ ಕೆಲಸದಲ್ಲೇ ತೃಪ್ತಿ ಕಂಡುಕೊಂಡು ಸಾವಿರಾರು ಜನ ಶಿಷ್ಯಂದಿರನ್ನು ಗಳಿಸಿದ್ದ. ಅವನ ಕೈಕೆಳಗೆ ಕಲಿತವರಲ್ಲಿ ಬಹಳ ಜನ ದೊಡ್ಡದೊಡ್ಡ ಹುದ್ದೆಗಳಲ್ಲಿದ್ದು, ಇನ್ನು ಕೆಲವರು ಸಾಧಾರಣ ಹುದ್ದೆಯಲ್ಲೇ ಒಳ್ಳೆಯ ಹೆಸರು ಗಳಿಸಿದ್ದು ಅವನಿಗೆ ಹೆಮ್ಮೆಯ ವಿಷಯವಾಗಿತ್ತು. ಇದೆಲ್ಲಾ ಯಾಕೆ ಹೇಳಬೇಕಾಯಿತೆಂದರೆ, ನಿವೃತ್ತಿಯ ದಿನ ಕಾಣಿಕೆಯಾಗಿ ಕೊಟ್ಟ ಸ್ಮಾರ್ಟ್ಫೋನ್ ಅಪ್ಪ ಬಳಸುವುದಿಲ್ಲವೆಂದೂ ತಮಗ್ಯಾರಿಗಾದರೂ ಕೊಟ್ಟುಬಿಡುತ್ತಾನೆಂದೂ ಕಾಯುತ್ತಿದ್ದ ಹೆಂಡತಿ ಮಕ್ಕಳಿಗೆ ನಿರಾಸೆಯಾಗುವಂತೆ ಜಗನ್ನಾಥ ತನ್ನ ಪ್ರೀತಿಯ ವಿದ್ಯಾರ್ಥಿಗಳನ್ನು ನೆನೆದು ಅತ್ಯಂತ ಪ್ರೀತಿಯಿಂದ ಆ ಮೊಬೈಲನ್ನು ಕೈಗೆತ್ತಿಕೊಂಡು ನೇವರಿಸಿದ್ದ. ಅವನ ಈ ಅನಿರೀಕ್ಷಿತ ವರ್ತನೆಯಿಂದ ಮೊಬೈಲ್ ತಮಗೆ ಕೊಡಲಿಲ್ಲವೆಂಬ ಬೇಜಾರಿಗಿಂತ ಆತ ಬದಲಾಗುವ ಸೂಚನೆ ಸಿಕ್ಕಿತೆಂದು ಅವನ ಮನೆಯವರೆಲ್ಲರಿಗೂ ಖುಶಿಯೇ ಆಗಿತ್ತು.
ಜಗನ್ನಾಥನ ನಿವೃತ್ತಿಜೀವನದ ದಿನಚರಿಯಲ್ಲಿ ಎಂದಿನಂತೆಯೇ ಪ್ರಾರಂಭವಾಗಿ ಬೆಳಗಿನ ವಾಕಿಂಗ್, ಸ್ನಾನ, ಪೇಪರ್, ತಿಂಡಿ ಎಲ್ಲಾ ಮುಗಿದ ಬಳಿಕ ರೂಮು ಸೇರಿ ಮಧ್ಯಾಹ್ನ ಊಟದವರೆಗೆ ಮೊಬೈಲನ್ನು ಎಕ್ಸ್ಪ್ಲೋರ್ ಮಾಡುವುದೂ ಸೇರಿತು. ಎರಡೇ ದಿನದಲ್ಲಿ ನೀರುಕುಡಿದಷ್ಟು ಸಲೀಸಾಗಿ ಮೊಬೈಲ್ ಬಳಸುವುದನ್ನು ಕಲಿತ ಜಗನ್ನಾಥ ಫೇಸ್ಬುಕ್, ವ್ಹಾಟ್ಸ್ಆಪ್ ಅದೂ ಇದೂ ಮಣ್ಣು ಮಸಿ ಎಲ್ಲಾ ಜಾಲಾಡಿ ಕೊನೆಗೆ ನೋಡೋಣ ಒಂದು ಅನುಭವವಿರಲಿ ಎಂದುಕೊಂಡು ಫೇಸ್ಬುಕ್ ಅಕೌಂಟ್ ತೆರೆದ. ಪ್ರಭಾಕರ ಯಾವಾಗಲೂ ಮೊಬೈಲ್ ಹಿಡಿದಿರುವುದು ನೆನಪಾಗಿ ಆತನನ್ನು ಸರ್ಚ್ ಮಾಡಿ ಒಂದು ಫ಼್ರೆಂಡ್ ರಿಕ್ವೆಸ್ಟ್ ಕಳಿಸಿದ. ಕೂಡಲೇ ಆ ಕಡೆಯಿಂದ ಅಂಗೀಕೃತವಾಗಿ ‘ಮೇಷ್ಟ್ರೇ ವೆಲ್ಕಮ್ ಟು ಫೇಸ್ಬುಕ್… ನನಗೆ ನಿಜಕ್ಕೂ ಆಶ್ಚರ್ಯವಾಗುತ್ತಿದೆ…’ ಎಂಬ ಕಮೆಂಟ್ ಬಂತು. ಸುಮ್ಮನೆ ಹೀಗೆ ನೋಡೋಣ ಅಂತ ಉತ್ತರಿಸಿದ ಜಗನ್ನಾಥನಿಗೆ ಒಂದು ಘಂಟೆಯೊಳಗೆ ನೂರಾರು ಕೋರಿಕೆಗಳು! ಅವನ ಶಿಷ್ಯಂದಿರು, ವೃತ್ತಿಯಲ್ಲಿ ಪರಿಚಯವಾದವರು ಹಾಗೆ, ಹೀಗೆ ಎಂದು. ಅರೇ ಪರಿಚಯದ ವ್ಯಕ್ತಿಗಳೂ ಹೀಗೆ ಕೋರಿಕೆ ಕಳಿಸಿ ಸಂಪರ್ಕ ಸಾಧಿಸಬೇಕೆ, ಇದೆಂಥಾದ್ದು?! ಎನಿಸಿದರೂ ಎಲ್ಲಾ ಕೋರಿಕೆಗಳನ್ನೂ ಮನ್ನಿಸಿಯೇಬಿಟ್ಟ. ಅಲ್ಲಿಂದ ಪ್ರಾರಂಭವಾಯಿತು ಜಗನ್ನಾಥನ ಫೇಸ್ಬುಕ್ ಪಯಣ!
ಪರಿಚಿತರು, ಅವರ ಪರಿಚಿತರು ಎಂದು ಹನುಮಂತನಬಾಲದಂತೆ ಬೆಳೆಯುತ್ತಾಹೋದ ಅವನ ಸ್ನೇಹಿತರ ಪಟ್ಟಿಯಲ್ಲಿರುವವರು ಮಾಡುವ ಎಲ್ಲಾ ಪೋಸ್ಟ್ಗಳನ್ನೂ ತಾಳ್ಮೆಯಿಂದ ಓದಿ ಕಮೆಂಟಿಸುವುದರಲ್ಲೇ ಜಗನ್ನಾಥನ ಬಹಳ ಸಮಯ ಕಳೆದುಹೋಗಲಾರಂಭಿಸಿತು. ಜಗನ್ನಾಥ ಎಲ್ಲದಕ್ಕೂ ಲೈಕ್ ಕೊಡುತ್ತಾ ಸುಮ್ಮನೇ ಫೈನ್, ಸೂಪರ್ ಎಂದು ಕಮೆಂಟ್ ಮಾಡುತ್ತಾ ಕೇವಲ ಟೈಮ್ಪಾಸ್ ಮಾಡಲು ಮೊಬೈಲ್ ಹಿಡಿದು ಕೂರುತ್ತಿರುತ್ತಿದ್ದ ಎಂದು ಯಾರಾದರೂ ಅಂದುಕೊಂಡರೆ ಅದು ಖಂಡಿತಾ ತಪ್ಪು. ಕೂತಿದ್ದು, ನಿಂತಿದ್ದು, ತಿಂದಿದ್ದು ಎಂದು ಎಲ್ಲದಕ್ಕೂ ಫೋಟೋಗಳನ್ನು ಹಾಕಿಕೊಳ್ಳುವವರಿಗೆ ಸರಿಯಾಗೇ ಟೀಕಿಸುತ್ತಿದ್ದ. ಇಂತಹ ಸಂಪರ್ಕಜಾಲದಲ್ಲಿ ಏನಾದ್ರೂ ಉಪಯೋಗವಾಗುವಂಥಾದ್ದು ಇದ್ರೆ ಪೋಸ್ಟ್ಮಾಡಿ, ಕೆಮ್ಮಿದ್ದು, ಕ್ಯಾಕರಿಸಿದ್ದನ್ನೆಲ್ಲಾ ಹಾಕಬೇಡಿ ಎಂದು ಟೀಕಿಸಿ ಅವನ ಗುಂಪಿನಲ್ಲಿರುವ ಕೆಲವರು ಇದು ಬದಲಾಗದ ಪ್ರಾಣಿ ಎಂದು ಭುಜ ಹಾರಿಸಿ ಜಗನ್ನಾಥನನ್ನು ಅನ್ಫ಼್ರೆಂಡ್ ಮಾಡಿ ಕೈಬಿಟ್ಟರೆ, ಇನ್ನು ಕೆಲವರನ್ನು ಜಗನ್ನಾಥನೇ ಬ್ಲಾಕ್ ಮಾಡಿದ್ದ. ಅವನಿಗೆ ಬಹಳ ಬೇಕಾದವರು ಅನ್ನಿಸಿಕೊಂಡವರು ಏನನ್ನಾದರೂ ಅಪ್ಲೋಡ್ ಮಾಡಬೇಕೆಂದರೆ ಒಂದು ಕ್ಷಣ ಈ ಜಗ್ಗುಮೇಷ್ಟ್ರನ್ನ ನೆನಪಿಸಿಯೇ ಅಪ್ಲೋಡ್ ಮಾಡುತ್ತಿದ್ದರು. ಮೊನ್ನೆ ಹೀಗೇ ಆಯಿತು. ಅವರ ನೆಚ್ಚಿನ ವಿದ್ಯಾರ್ಥಿಯೊಬ್ಬ ಯಾವುದುಯಾವುದೋ ಗುರುಗಳ ಆಶ್ರಮಕ್ಕೆ ಭೇಟಿಕೊಟ್ಟ ಫೋಟೋ ಹಾಕಿ ಅಲ್ಲಿ ಮನಸ್ಸಿಗೆ ಬಹಳ ನೆಮ್ಮದಿ ಸಿಕ್ಕಿತೆಂದೂ, ಗುರುಗಳ ಪ್ರಭಾವದಿಂದ ತನ್ನ ಕಷ್ಟ ಕಳೆಯಿತೆಂದೂ, ಯಾರಾದರೂ ನೆಮ್ಮದಿ ಅರಸುವವರಿದ್ದರೆ ಆ ಆಶ್ರಮಕ್ಕೆ ಹೋದರೆ ಖಂಡಿತಾ ಒಳ್ಳೆಯದಾಗುತ್ತದೆಂದೂ ಹಂಚಿಕೊಂಡಿದ್ದ.
ಜಗನ್ನಾಥನಿಗೆ ಮೈಯೆಲ್ಲಾ ಉರಿದಂತಾಗಿತ್ತು ಆ ಪೋಸ್ಟ್ ನೋಡಿ. ಈ ರೀತಿಯ ಸಂಗತಿಯನ್ನು ಪ್ರಚಾರಮಾಡುವುದು ತಪ್ಪೆಂದೂ, ಮನದಲ್ಲಿಲ್ಲದ ನೆಮ್ಮದಿ ಹೊರಗೆಲ್ಲೋ ಆಶ್ರಮದಲ್ಲಿ ಹುಡುಕಿದರೆ ಸಿಗುವುದಿಲ್ಲವೆಂದೂ, ಹಾಗೆ ಜನರ ಕಷ್ಟಗಳನ್ನು ಪರಿಹರಿಸುವ ಶಕ್ತಿ ಇಂತಹವರಿಗಿದ್ದಿದ್ದರೆ ಪ್ರಪಂಚದಲ್ಲಿ ಎಲ್ಲರೂ ಸುಖಿಗಳೇ ಆಗಿಬಿಟ್ಟಿರುತ್ತಿದ್ದರೆಂದೂ, ಜನ ಟೆಂಪಲ್ರನ್ ಗೇಮ್ನಲ್ಲಿರುವ ಪಾತ್ರಗಳಂತೆ ಹಣದ ಹಿಂದೆ ಬುರ್ರೋ ಎಂದು ಓಡುತ್ತಿರುವುದೇ ಅವರ ನೆಮ್ಮದಿಗೆಡಲು ಕಾರಣವೆಂದು ಕಮೆಂಟಿಸಿ, ಇಂತಹ ನಂಬಿಕೆಗಳಿದ್ದರೆ ಅವರಲ್ಲೇ ಇಟ್ಟುಕೊಳ್ಳಬೇಕೆ ಹೊರತು ಪ್ರಚಾರಮಾಡಿ ಜನರನ್ನು ತಪ್ಪುದಾರಿಗೆ ಎಳೆಯಬಾರದೆಂದು ಉಪದೇಶಿಸಿದ್ದ. ತಾನು ಮಾಡಿದ ಪೋಸ್ಟ್ಗೆ ಎಲ್ಲಾ ಲೈಕ್ಗಳನ್ನೇ ನಿರೀಕ್ಷಿಸಿದ್ದ ಆ ಶಿಷ್ಯ, ಜಗನ್ನಾಥ ಹಣದ ಹಿಂದೆ ಓಡುತ್ತಿದ್ದಾನೆಂದು ತನ್ನನ್ನೇ ಟೀಕಿಸುತ್ತಿದ್ದಾನೆಂದೂ, ತನ್ನನ್ನೊಬ್ಬ ಮೌಢ್ಯವನ್ನು ಹರಡುವ ವ್ಯಕ್ತಿಯಾಗಿ ಫ್ರೇಮ್ ಮಾಡುತ್ತಿದ್ದಾನೆ ಎನಿಸಿ, ನೀವೂ ಹಣಕ್ಕಾಗೇ ಅಲ್ಲವೆ ಇಷ್ಟು ವರ್ಷ ಸಂಸ್ಥೆಯೊಂದರಲ್ಲಿ ಕತ್ತೆಯಂತೆ ದುಡಿದದ್ದು? ನೀವು ದಿನವೂ ಪೂಜೆ ಮಾಡುವ ದೇವರೂ ಒಂದು ಮೂಢನಂಬಿಕೆ ಯಾಕಾಗಬಾರದು? ನೀವೊಬ್ಬರು ದೊಡ್ಡ ಹಿಪೋಕ್ರೈಟ್ ಹಾಗೆ ಹೀಗೆ ಎಂದೆಲ್ಲಾ ಕಾರಿಕೊಂಡೇ ಬಿಟ್ಟ… ಕೋಪದ ಭರದಲ್ಲಿ ಆತನಿಗೆ ಈ ಜಗನ್ನಾಥ ಒಂದು ಕಾಲಕ್ಕೆ ತನ್ನ ಅಚ್ಚುಮೆಚ್ಚಿನ ಗುರುವಾಗಿದ್ದ ಎನ್ನುವುದೂ ಮರೆತುಹೋಗಿತ್ತು. ಆ ಕ್ಷಣದಿಂದಲೇ ಉದ್ದುದ್ದ ಕಮೆಂಟ್ಗಳು ಹರಿದು ಬರಲಾರಂಭಿಸಿದವು. ಜಗನ್ನಾಥ ಮೇಷ್ಟ್ರು ಕೇವಲ ಹಣಕ್ಕಾಗೇ ದುಡಿದಿಲ್ಲವೆಂದೂ ಅವರ ಆದರ್ಶಗಳನ್ನು ಮೈಗೂಡಿಸಿಕೊಂಡಿದ್ದಕ್ಕೆ ತಾವಿಂದು ಜೀವನದಲ್ಲಿ ಮೇಲೇರಿದ್ದೇವೆಂದು ಕೆಲವರು; ಮೇಷ್ಟ್ರಿಗೆ ಅರವತ್ತರ ಅರಳುಮರಳು ಪ್ರಾರಂಭವಾಗಿರಬೇಕು, ನಿವೃತ್ತಿಯಾಯಿತಲ್ಲ ಎಂದು ಕೆಲವರು; ಎಲ್ಲೋ ಒಂದಿಬ್ಬರು ಕಳ್ಳಸಂನ್ಯಾಸಿಗಳು ಲಜ್ಜೆಗೆಟ್ಟವರಾದರೆ ಎಲ್ಲರೂ ಹಾಗೇ ಇರುವುದಿಲ್ಲವೆಂದೂ, ಗುರುಗಳನ್ನು ಟೀಕೆ ಮಾಡಿದ್ದಕ್ಕೆ ಜಗನ್ನಾಥ ಕ್ಷಮೆ ಕೇಳಬೇಕೆಂದು ಕೆಲವರು – ಹೀಗೆ ಪೋಸ್ಟ್ಗಳ ಮೇಲೆ ಪೋಸ್ಟುಗಳ ಸುರಿಮಳೆಯಾಯಿತು.
ಜಗನ್ನಾಥನೇನೂ ಇಂತಹದ್ದಕ್ಕೆಲ್ಲಾ ತಲೆಕೆಡಿಸಿಕೊಳ್ಳುವ ಜಾಯಮಾನದವನಾಗಿರಲಿಲ್ಲ. ನನ್ನ ಪೂಜೆ ನನ್ನ ಮನೆಗೆ ಮಾತ್ರಾ ಸೀಮಿತವಾಗಿರುತ್ತದೇ ಹೊರತು ಜಗತ್ತಿಗಲ್ಲ ಎಂದು ಉತ್ತರಿಸಲನುವಾದವನು ಇಂತಹದ್ದಕ್ಕೆಲ್ಲಾ ಉತ್ತರಿಸಬೇಕೇಕೆ ಅನ್ನಿಸಿ ಸುಮ್ಮನಾಗಿದ್ದ. ಏನೋ ಮಾತಿಗೆ ಬಂದು ಹೆಂಡತಿ ಮಕ್ಕಳ ಮುಂದೆ ಈ ವಿಷಯ ಹೇಳಿದಾಗ ಹೆಂಡತಿಗೆ ಗಾಬರಿಯಾಯಿತು. ಅವರಿವರನ್ನು ಟೀಕಿಸಿ ಏನಾದರೂ ಗಲಾಟೆ ಮಾಡಿಕೊಂಡರೆ ಎಂದು ಭಯವಾಯಿತವಳಿಗೆ. ಅಭಿವ್ಯಕ್ತಿಸ್ವಾತಂತ್ರ್ಯ ಅದೂ ಇದೂ ಎಂದು ಅವಳಿಗೇನೂ ಅಷ್ಟು ತಿಳಿವಳಿಕೆಯಿರದಿದ್ದರು ದಿನಾ ಟಿವಿಯಲ್ಲಿ, ಪೇಪರ್ನಲ್ಲಿ ದೊಡ್ಡದೊಡ್ಡ ವ್ಯಕ್ತಿಗಳು ದೇವರು-ಧರ್ಮದ ಬಗ್ಗೆ, ಗೋಮಾಂಸ ತಿನ್ನುವುದರ ಬಗ್ಗೆ ಮನಸ್ಸಿಗೆಬಂದದ್ದು ಹೇಳುತ್ತಾ ಇರುವುದನ್ನೂ ಅದರ ಬಗ್ಗೆ ಇನ್ನೊಂದು ಗುಂಪಿನ ಜನ ಪ್ರತಿಭಟನೆ ಮಾಡುತ್ತಾ ಒಟ್ಟಿನಲ್ಲಿ ಸಮಾಜದಲ್ಲಿ ಅಲ್ಲೊಲಕಲ್ಲೋಲ ಎಬ್ಬಿಸುತ್ತಿರುವುದನ್ನೂ ನೋಡುತ್ತಲೇ ಇದ್ದಳಲ್ಲ! ಈತ ಇಂದು ಯಾವುದೋ ಗುರುಗಳ ಬಗ್ಗೆ ಟೀಕಿಸಿ ನಾಳೆ ಧರ್ಮದ ಬಗ್ಗೆ ಟೀಕಿಸಿದರೆ ಮುಂದೆ ಏನೇನು ಎದುರಿಸಬೇಕಾಗುತ್ತದೋ ಎಂಬ ಆತಂಕವನ್ನು ಜಗನ್ನಾಥನಲ್ಲಿ ಬಾಯಿಬಿಟ್ಟು ಹೇಳಿಯೂ ಬಿಟ್ಟಳು. ಜಗನ್ನಾಥ ನಕ್ಕುಬಿಟ್ಟ. ಯಾರೋ ದೊಡ್ಡ ಮನುಷ್ಯರೆನಿಸಿಕೊಳ್ಳುವವರು ಆಡುವ ಮಾತುಗಳು ವಿವಾದ ಹುಟ್ಟಿಸುತ್ತವೆಯೇ ಹೊರತು ನನ್ನಂತಹ ಸಾಮಾನ್ಯನದಲ್ಲ ಎಂದು ಸಮಾಧಾನ ಹೇಳಿದ.
ಒಟ್ಟಿನಲ್ಲಿ ಜಗನ್ನಾಥನಿಗೆ ಫೇಸ್ಬುಕ್ ಒಂದು ವೇದಿಕೆಯಾಗಿಬಿಟ್ಟಿತು. ದಾರಿತಪ್ಪುತ್ತಿರುವ ಯುವ ಜನಾಂಗ, ಹಕ್ಕುಗಳ ಬಗ್ಗೆ ಮಾತ್ರ ಮಾತಾಡಿ ಕರ್ತವ್ಯ ಮರೆವ ಸರ್ಕಾರಿ ನೌಕರರು, ಕಾಳಿ-ದುರ್ಗಿಯಂತಹ ರೌದ್ರ ದೇವತೆಗಳ ಉಪಾಸಕರಾಗಿರುವ ತಾವು ಉದ್ಯೋಗ, ಶಿಕ್ಷಣ, ಪ್ರೇಮ, ವಿವಾಹ, ದಾಂಪತ್ಯ, ಆಸ್ತಿ ಹೀಗೆ ಏನೇ ಸಮಸ್ಯೆಯಿದ್ದರೂ ಕೇವಲ ಆರು ಗಂಟೆಗಳಲ್ಲಿ ಪರಿಹರಿಸಿಕೊಡುತ್ತೇವೆಂದು ಬೊಗಳೆಬಿಡುವ ಠಕ್ಕ ಜ್ಯೀತಿಷಿಗಳು ನೀಡುವ ಜಾಹೀರಾತುಗಳನ್ನು ಹಣದಾಸೆಗೆ ಪ್ರಕಟಿಸುವ ಪತ್ರಿಕೆಗಳು, ದೇವನೆನಿಸಿಕೊಂಡಿದ್ದ ಚಂದ್ರ, ನವಗ್ರಹಗಳಲ್ಲಿ ಸ್ಥಾನಪಡೆದು ಪೂಜಿಸಲ್ಪಡುತ್ತಿದ್ದ ಮಂಗಳಗ್ರಹಗಳ ಬಗ್ಗೆ ಕೂತಲ್ಲೇ ಮಾಹಿತಿ ನೀಡುವ, ದೇವರು ಮೇಲೆ ಆಕಾಶದಲ್ಲಿದ್ದಾನೆಂಬ ಕಲ್ಪನೆಯನ್ನು ಸುಳ್ಳು ಎನಿಸುವಷ್ಟು ಅಂತರಿಕ್ಷದ ಬಗ್ಗೆ ವೈಜ್ಞಾನಿಕ ಮಾಹಿತಿ ನೀಡುವ ಟಿವಿಯಂಥ ಮಾಧ್ಯಮವೇ ಜ್ಯೋತಿಷಿಗಳನ್ನು ಗಂಟಗಟ್ಟಲೆ ಕೂರಿಸಿಕೊಂಡು ಜನರಲ್ಲಿ ಮೌಢ್ಯ ಹರಡುತ್ತಿರುವ ಬಗ್ಗೆ ಫೇಸ್ಬುಕ್ನಲ್ಲಿ ಬರೆಯುತ್ತಾ ಹೋದ. ಕೊನೆಗೆ ಇದು ನನ್ನ ಅನಿಸಿಕೆ. ಇಷ್ಟವಿದ್ದರೆ ಇದರ ಬಗ್ಗೆ ಯೋಚಿಸಿ ಎನ್ನುವ ಸಾಲಿನೊಂದಿಗೆ.
ಬಹಳಷ್ಟು ವಿಚಾರವಾದಿಗಳೆನಿಸಿಕೊಂಡವರು ಜಗನ್ನಾಥನ ಮಾತುಗಳ ಬಗ್ಗೆ ಕಮೆಂಟ್ ಮಾಡಲಾರಂಭಿಸಿದರು. ಬಹಳಷ್ಟು ಲೈಕ್ಗಳು ಹರಿದುಬರಲಾರಂಭಿಸಿದವು. ಅವನ ಆತ್ಮೀಯರಂತೂ ಜಗ್ಗುಮೇಷ್ಟ್ರು ಈವತ್ತು ಯಾವ ವಿಚಾರ ಪೋಸ್ಟ್ ಮಾಡುತ್ತಾರೆ ಎಂದು ಕಾಯಲಾರಂಭಿಸಿದರು. ಇದೆಲ್ಲಾ ಸರಿಯೇ, ಆದರೆ ಫೇಸ್ಬುಕ್ಕಿನಲ್ಲಿ ಜಗನ್ನಾಥ ಜನಪ್ರಿಯನಾದಷ್ಟೂ ಮನೆಯಲ್ಲಿ, ಸುಮ್ಮಮುತ್ತಲಿನವರ ಜೊತೆಯಲ್ಲಿ ಅವನ ವರ್ತನೆ ಬದಲಾಯಿತು. ಹೆಂಡತಿ ಮಕ್ಕಳ ಜೊತೆ ಮಾತೇ ಕಡಮೆಯಾಯಿತು. ಸಂಬಂಧಿಕರ ಮನೆ, ಮದುವೆ, ತಿಥಿ ಎಂದು ಹೋದರೂ ಸಹ ಆತನ ಗಮನವೆಲ್ಲಾ ಮೊಬೈಲ್ನಲ್ಲೇ. ಊಟಕ್ಕೆ ಕುಳಿತಾಗಲೂ ಸಾಕು ಬೇಕು ಎಂದಷ್ಟೇ ಮಾತು. ಸಂಜೆ ವಾಕಿಂಗ್ ಹೋದಾಗ ಸಮವಯಸ್ಸಿನವರ ಜೊತೆ ಮೊದಲಿನಂತೆ ಮಾತು ಚರ್ಚೆ ಯಾವುದೂ ಇಲ್ಲವಾಗಿ ದೂರದ ಮರದ ಕೆಳಗೆ ಒಂಟಿಯಾಗಿ ಕೂತು ಮೊಬೈಲ್ ಒತ್ತುವ ಪರಿ ನೋಡುಗರಿಗೆ ಅತಿಯೆನಿಸಿತು. ಅವನ ಹೆಂಡತಿಯ ಸ್ನೇಹಿತೆಯಂತೂ ಮೊಬೈಲ್ ಮೂಲಕ ಪರಿಚಯವಾಗುವ ಕೆಲವು ಬಣ್ಣದ ಬೀಸಣಿಗೆಗಳ ಬಲೆಗೆಲ್ಲಾದರೂ ಈತ ಬಿದ್ದಿದ್ದಾನೇನೋ ಎಂದು ಸಂಶಯಪಟ್ಟು ಅದು ಎಷ್ಟರ ಮಟ್ಟಿಗೆ ಅವನ ಹೆಂಡತಿಯನ್ನು ಕಾಡಿತೆಂದರೆ ಆಕೆ ಅಪ್ಪನ ಮೊಬೈಲನ್ನು ಒಮ್ಮೆ ಪರಿಶೀಲಿಸುವಂತೆ ಮಗನಿಗೆ ದುಂಬಾಲು ಬಿದ್ದಿದ್ದಳು. ಆದರೆ ಮಗನಿಗದು ಸಿಗಬೇಕಲ್ಲ. ಸದಾ ಮೊಬೈಲನ್ನು ಕೈಯಲ್ಲೇ ಹಿಡಿದಿರುತ್ತಿದ್ದ ಜಗನ್ನಾಥ, ಕೊನೆಗೆ ಟಾಯ್ಲೆಟ್ಟಿಗೆ ಹೋಗುವಾಗಲೂ ಅದನ್ನು ಬಿಡುತ್ತಿರಲಿಲ್ಲ. ಕಾಲುನೋವೆಂದು ಇತ್ತೀಚೆಗಷ್ಟೆ ಮನೆಯಲ್ಲಿ ಕಮೋಡ್ ಬೇರೆ ಕೂರಿಸಿದ್ದು ಬೆಳಗಾಗೆದ್ದು ಅಲ್ಲಿಗೂ ಮೊಬೈಲ್ ತೆಗೆದುಕೊಂಡೇ ಹೋಗುತ್ತಿದ್ದ.
ಅನಾಯಾಸವಾಗಿ ದೊರೆತ ಮೊಬೈಲ್ ಜಗನ್ನಾಥ ಬದುಕಿನ ಶೈಲಿಯನ್ನೆ ಬದಲಾಯಿಸಿಬಿಟ್ಟಿತ್ತು. ಹೆಂಡತಿ ಮಕ್ಕಳು ಅಸಮಾಧಾನಪಟ್ಟರೂ ಕೊನೆಗೆ ಏನೂ ಮಾಡಲಾಗದೆ ಸಧ್ಯಃ ಯಾರಿಗೂ ಕಿರಿಕಿರಿ ಮಾಡದೆ ತನ್ನಷ್ಟಕ್ಕೆ ತಾನಿರುತ್ತಾನಲ್ಲ ಎಂದು ಸುಮ್ಮನಾಗಿದ್ದರು. ಅವನ ಹೆಂಡತಿ ಈ ವಯಸ್ಸಿನಲ್ಲಿ ಇವರಿಗ್ಯಾರು ಹಿಂದೆ ಬೀಳಬೇಕು ಎಂದು ತಲೆಕೊಡವಿ ಮತ್ತೆ ನೆಮ್ಮದಿಯಾಗಿ ತನ್ನ ಮೆಚ್ಚಿನ ಧಾರಾವಾಹಿಗಳನ್ನು ನೋಡಲಾರಂಭಿಸಿದ್ದಳು. ಆದರೆ ಮನಸ್ಸಿನ ಎಲ್ಲೋ ಒಂದು ಮೂಲೆಯಲ್ಲಿ ಗಂಡನ ನಿವೃತ್ತಿ ನಂತರ ಎಲ್ಲರಂತೆ ತಾವೂ ಕಾಶಿ, ರಾಮೇಶ್ವರ ಎಂದು ಒಂದಷ್ಟು ಸುತ್ತಬೇಕು ಎಂದು ಆಸೆ ಪಟ್ಟಿದ್ದು ಆಸೆಯಾಗೇ ಉಳಿಯಿತಲ್ಲ ಎಂಬ ದುಃಖವೂ ಇತ್ತು. ಆದರೆ ಎಲ್ಲಿಗೆ ಹೋದರೇನು ಈತನ ಮೊದಲ ಆದ್ಯತೆ ಮೊಬೈಲೇ ಆದಾಗ ಎನಿಸಿ ನಿಟ್ಟುಸಿರುಬಿಟ್ಟು ಸಮಾಧಾನ ಮಾಡಿಕೊಂಡಿದ್ದಳು. ಈ ಮೊಬೈಲ್ ಯಾಕೋ ನನ್ನ ಸವತಿಯಾಗುತ್ತಿದೆ ಎಂದು ಜಗನ್ನಾಥ ಒಳ್ಳೆಯ ಮೂಡಿನಲ್ಲಿದ್ದಾಗ ಆಕೆ ತಮಾಷೆಯೆನ್ನುವಂತೆ ಹೇಳಿದ್ದರು; ಅವನು ಕಾಟಾಚಾರಕ್ಕೆಂಬಂತೆ ನಕ್ಕು ಸುಮ್ಮನಾಗಿದ್ದ.
ಒಳ್ಳೆಯ ಮೇಷ್ಟ್ರಾಗಿ ಮಾತ್ರಾ ಪರಿಚಿತನಾಗಿದ್ದ ಜಗನ್ನಾಥನೀಗ ಸಾಮಾಜಿಕ ಕಳಕಳಿಯುಳ್ಳ ವ್ಯಕ್ತಿಯಾಗಿ ಹೆಸರು ಪಡೆದಿದ್ದ. ಅವನ ಫೇಸ್ಬುಕ್ ಬಳಗ ಬೆಳೆದ ಹಾಗೆ ಕೆಲವು ಸಂಘ ಸಂಸ್ಥೆಗಳವರು ತಾವು ಮಾಡುವ ಕಾರ್ಯಕ್ರಮಗಳಿಗೆ ಅವನನ್ನು ಆಹ್ವಾನಿಸಲಾರಂಭಿಸಿದ್ದರು. ಜಗನ್ನಾಥನಿಗೇ ಅಚ್ಚರಿಯೆನಿಸುವಂತೆ ಫೇಸ್ಬುಕ್ ಆತನನ್ನು ಪ್ರಸಿದ್ಧನನ್ನಾಗಿಸಿತ್ತು. ಎಲ್ಲಾ ಹೀಗೇ ಸಾಗುತ್ತಿರುವಾಗ ಮೊನ್ನೆಯ ದಿನ ಒಂದು ಪತ್ರಿಕೆಯಲ್ಲಿ ಫೇಸ್ಬುಕ್ನಂಥ ಸಾಮಾಜಿಕತಾಣಗಳ ಬಗ್ಗೆ ಕೆಲವರ ಅಭಿಪ್ರಾಯಗಳು ಪ್ರಕಟವಾಗಿದ್ದುದು ಅವನ ಕಣ್ಣಿಗೆ ಬಿದ್ದಿತ್ತು. ಬಹಳಷ್ಟು ಜನ ಹಾಗೆ ಹೀಗೆ, ಮಣ್ಣು ಮಸಿ ಎಂದು ಹೊಗಳಿದ್ದರೆ ಯಾರೋ ಒಬ್ಬರು ಮಾತ್ರ ಇಂತಹ ಜಾಲತಾಣಗಳಲ್ಲಿ ಬಹಳಷ್ಟು ಸಮಯ ವ್ಯಯಿಸುವವರು ನಿಜಜೀವನದಲ್ಲಿ ಬಹಳ ಒಂಟಿಯಾಗಿರುತ್ತಾರೆಂದೂ, ಯಾರು ಇಲ್ಲಿ ಅತಿ ಹೆಚ್ಚು ಗೆಳೆಯರನ್ನು ಹೊಂದಿದ್ದೇವೆಂದು ಬೀಗುತ್ತಾರೋ ಅಂತಹವರು ತಮ್ಮ ಹೆಂಡತಿ ಮಕ್ಕಳಿಗೆ, ಎದುರಿಗಿರುವ ಗೆಳೆಯರಿಗೆ ಎಷ್ಟು ಸಮಯ ನೀಡುತ್ತಿದ್ದಾರೆಂಬುದನ್ನು ಸ್ವತಃ ಪ್ರಶ್ನೆ ಮಾಡಿಕೊಳ್ಳಬೇಕೆಂದು ಬರೆದಿದ್ದ.
ಯಾಕೋ ಜಗನ್ನಾಥನಿಗೆ ಈ ಮಾತು ಕೂತಲ್ಲಿ ನಿಂತಲ್ಲಿ ಕಾಡಲಾರಂಭಿಸಿತ್ತು. ಸಂಜೆ ಹಾಗೇ ತಿರುಗಾಡಲೆಂದು ಬಂದವನು ತಾನು ನಿವೃತ್ತಿಯಾದಾಗಿನಿಂದ ಏನೇನು ಮಾಡಿದ್ದೇನೆಂದು ಮನದಲ್ಲೇ ಪಟ್ಟಿ ಮಾಡಲಾರಂಭಿಸಿದ. ಹೆಂಡತಿ, ಮಕ್ಕಳೊಡನೆ ಮಾತುಕಥೆ, ನಗು, ಹಾಸ್ಯ? ಸುತ್ತಾಟವಂತೂ ದೂರವೇ ಉಳಿಯಿತು. ಅಕ್ಕಪಕ್ಕದವರೂ ಸಹ ಅಪರಿಚಿತರಾಗಿಬಿಟ್ಟಿದ್ದಾರಲ್ಲಾ? ಮಕ್ಕಳು ಏನು ಮಾಡುತ್ತಿದ್ದಾರೆ, ಅವರಿಗೇನು ಬೇಕು ಎಂದು ಎಂದಾದರೂ ಗಮನಹರಿಸಿದ್ದುಂಟೇ? ಏನೋ ಹೆಂಡತಿಯ ಕಾರಣಕ್ಕೆ ಮನೆ, ಸಂಸಾರದ ಬಿಸಿ ತಟ್ಟಿಲ್ಲ. ಆದರೆ ಆಕೆಯನ್ನಾದರೂ ತಾನು ಇತ್ತೀಚೆಗೆ ಪ್ರೀತಿಯಿಂದ ಮಾತಾಡಿದ್ದಿದೆಯಾ? ತನ್ನಂತೆ ಅವಳಿಗೂ ವಯಸ್ಸಾಯಿತಲ್ಲ ಆರೋಗ್ಯ ಹೇಗಿದೆಯೋ ಏನೋ ಎಂದು ಕಾಳಜಿ ತೋರಿದ್ದೇನಾ? ಮೊದಲೆಲ್ಲಾ ಕೆಲಸ ಕೆಲಸ ಎಂದು ಸದಾ ಹೊರಗೇ ಇರುತ್ತಿದ್ದ ತಾನು ನಿವೃತ್ತಿಯ ನಂತರವಾದರೂ ಸಂಸಾರದ ಕಡೆ ಗಮನಹರಿಸಿದ್ದೇನಾ? ಈಗಲೂ ರೇಷನ್, ತರಕಾರಿ, ಹಣ್ಣುಹಂಪಲು ಎಂದು ಅವಳೇ ಮಾರ್ಕೆಟ್ ಸುತ್ತುತ್ತಿರುತ್ತಾಳೆ. ಮಕ್ಕಳು ಸಹಕರಿಸದಿದ್ದರೆ ಲೈಟ್ಬಿಲ್, ನೀರಿನಬಿಲ್ ಎಂದು ಅವಳೇ ಒದ್ದಾಡುತ್ತಿರುತ್ತಾಳೆ. ಇನ್ನು ಮಕ್ಕಳು! ಎಷ್ಟು ದಿನವಾಯಿತು ಅವರ ಬಳಿ ಕುಳಿತು ಪ್ರೀತಿಯಿಂದ ಮಾತಾಡಿ. ಬೆಳೆದು ದೊಡ್ಡವರಾದರೇನಂತೆ ಅಪ್ಪನ ಸಾಂಗತ್ಯ ಬೇಕಲ್ಲವೆ? ಛೇ! ಊರಿಗೆಲ್ಲಾ ಸಾಮಾಜಿಕ ಕಳಕಳಿ ಹರಡಲು ಹೊರಟವನು ಸಂಸಾರದ ಕಳಕಳಿಯನ್ನೇ ಕಳೆದುಕೊಂಡರೆ? ‘ಮನೆಗೆ ಮಾರಿ ಊರಿಗೆ ಉಪಕಾರಿ’ ಎನ್ನುವ ಮಾತು ತನ್ನಂಥವರನ್ನು ನೋಡಿಯೇ ಹೇಳಿರಬೇಕು. ಎಲ್ಲಾ ಈ ದರಿದ್ರ ಮೊಬೈಲಿನಿಂದ ಎಂದುಕೊಂಡವನಿಗೆ ಕೈಯಲ್ಲಿದ್ದ ಮೊಬೈಲ್ ಕೆಂಡದಂತೆ ಸುಡಲಾರಂಭಿಸಿತು. ಒಮ್ಮೆಗೇ ಆಕ್ರೋಶವುಕ್ಕಿ ಕಣ್ಣುಮುಚ್ಚಿ ಅದನ್ನು ದೂರಕ್ಕೆ ಎಸೆಯಲನುವಾದವನಿಗೆ ಅದರ ಹಿಂದೆ ತನ್ನ ಸಹೋದ್ಯೋಗಿಗಳ, ವಿದ್ಯಾರ್ಥಿಗಳ ಪ್ರೀತಿಯಿರುವುದು ನೆನಪಾಗಿ ಮನಸ್ಸು ಒಪ್ಪದಾಯಿತು. ಆದರೂ ಏನಾದರೂ ಮಾಡಿ ತಾನು ಈ ಚಟದಿಂದ ಮುಕ್ತನಾಗೇ ಆಗುತ್ತೇನೆನ್ನುವ ಭರವಸೆಯಿಂದ ಫೇಸ್ಬುಕ್ಕಿನ ತನ್ನ ಅಪಾರ ಬಳಗಕ್ಕೆ ಈ ಜಾಲತಾಣದಲ್ಲಿ ಇಷ್ಟುದಿನ ಗೆಳೆತನ ತೋರಿದ್ದಕ್ಕೆ ಧನ್ಯವಾದಗಳು; ಇನ್ನು ಮುಂದೆ ತಾನಿಲ್ಲಿ ಸಿಗುವುದಿಲ್ಲ; ಇದೇ ನನ್ನ ಕಡೆಯ ಸಂದೇಶ ಎಂದು ಟೈಪ್ಮಾಡಿ ಪೋಸ್ಟ್ಮಾಡಿದ. ತನ್ನ ಕಣ್ಣಿಗೆ ಕಾಣದಂತೆ ಮೊಬೈಲನ್ನು ಮರೆಯಾಗಿಸುವ ನಿರ್ಧಾರ ಮಾಡಿಕೊಂಡು ಏನೋ ತೃಪ್ತಿಯಿಂದ ಮನೆಯ ತಿರುವಿನತ್ತ ನಡೆದವನಿಗೆ ಎದುರಿಗೆ ವೇಗವಾಗಿ ಬರುತ್ತಿರುವ ಬೈಕ್ ಕಾಣಲೇ ಇಲ್ಲ. ಪುಣ್ಯಕ್ಕೆ ಬೈಕ್ಸವಾರ ಸಮಯಸ್ಫೂರ್ತಿಯಿಂದ ಬ್ರೇಕ್ ಹಾಕಿದ್ದಕ್ಕೆ ಅನಾಹುತ ತಪ್ಪಿತ್ತು. ಆದರೆ ಜಗನ್ನಾಥ ಆಯತಪ್ಪಿ ರಸ್ತೆ ಮೇಲೆ ಬೋರಲಾಗಿ ಬಿದ್ದ ರಭಸಕ್ಕೆ ಅವನ ಕೈಯಲ್ಲಿದ್ದ ಸ್ಮಾರ್ಟ್ಫೋನ್ ದೂರಕ್ಕೆ ಎಗರಿಬಿದ್ದು ಮೂರು ತುಂಡಾಯಿತು. ಸುತ್ತಮುತ್ತಲಿದ್ದವರೆಲ್ಲ ಸೇರುತ್ತಿರುವುದನ್ನು ಗಮನಿಸಿದ ಬೈಕ್ ಸವಾರ ಪರಾರಿಯಾಗುವ ಪ್ರಯತ್ನ ಬಿಟ್ಟು ಜಗನ್ನಾಥನನ್ನು ಎಬ್ಬಿಸಿದ. ಎಲ್ಲೋ ಒಂದಷ್ಟು ತರಚಿದ ಗಾಯಗಳಾಗಿದ್ದವೇ ಹೊರತು ಆತ ಸುರಕ್ಷಿತವಾಗೇ ಇದ್ದ. ಮೈಕೈ ಝಾಡಿಸಿಕೊಂಡು ಸುಧಾರಿಸಿಕೊಳ್ಳುವಷ್ಟರಲ್ಲಿ ಯಾರೋ ನೀರಿನ ಬಾಟಲಿ ನೀಡಿದರು. ಮತ್ಯಾರೋ ದೂರದಲ್ಲಿ ಬಿದ್ದಿದ್ದ ಅವನ ಮೊಬೈಲ್ ಚೂರುಗಳನ್ನು ಲೊಚಗುಟ್ಟುತ್ತಾ ತಂದು ಅವನ ಕೈಗಿತ್ತರು. ಮೊಬೈಲಿಗಾದ ಗತಿ ನೋಡಿ ಸುತ್ತಲಿದ್ದವರೆಲ್ಲ ಬೈಕ್ ಸವಾರನ ಮೇಲೆ ಕೂಗಾಡಲಾರಂಭಿಸಿದರು. ಬಹುಶಃ ಹೀಗೇ ಆಗುವುದು ಬೇಕಿತ್ತೇನೋ, ಪೀಡೆ ಕಳೆಯಿತು ಎಂದುಕೊಂಡು ಮೊಬೈಲ್ ಹೋದರೆ ಹೋಗಲಿ, ಸದ್ಯಕ್ಕೆ ತನಗೇನೂ ಆಗಲಿಲ್ಲವೆಂದು ಜಗನ್ನಾಥ ಸಮಾಧಾನ ಪಡಿಸಹೋದರೂ ಅವರುಗಳು ಕೇಳದೆ ನೀವು ಸುಮ್ನಿರಿ ಮೇಷ್ಟ್ರೆ, ಈಗಿನ ಹುಡುಗರಿಗೆ ಕೈಲೊಂದು ಗಾಡಿ ಸಿಕ್ಕರೆ ಕಣ್ಣೇ ಕಾಣಿಸುವುದಿಲ್ಲ ಎನ್ನುತ್ತಾ ಆ ಹುಡುಗನ ಕಾಲರ್ ಹಿಡಿದಾಗ ಹುಡುಗ ಕಕ್ಕಾಬಿಕ್ಕಿಯಾದ. ತಾನು ಸರಿಯಾಗೇ ಬೈಕ್ ಓಡಿಸುತ್ತಿದ್ದೆನೆಂದೂ ಜಗನ್ನಾಥನೇ ಮೊಬೈಲ್ ನೋಡುತ್ತಾ ರಸ್ತೆ ಕಡೆ ಗಮನ ಹರಿಸಿರಲಿಲ್ಲವೆಂದೂ ಅವರೆಲ್ಲರಿಗೆ ಅರ್ಥೈಸಲು ಹೊರಟದ್ದು ವ್ಯರ್ಥವಾಯಿತು.
ನಿಸ್ಸಹಾಯಕನಾದ ಆ ಹುಡುಗ ಬೆದರು ಬೊಂಬೆಯಂತೆ ನಿಂತ. ಮೇಷ್ಟ್ರ ಮೊಬೈಲ್ ಹಾಳಾಗಿದ್ದರಿಂದ ಆತ ತನ್ನ ಮೊಬೈಲನ್ನು ಮೇಷ್ಟ್ರಿಗೆ ಕೊಡಬೇಕೆಂದು ಎಲ್ಲರ ತೀರ್ಮಾನ ಬಂದಾಗ ಆತ ತಡಮಾಡದೆ ತನ್ನ ಮೊಬೈಲಿನಿಂದ ಸಿಮ್ ತೆಗೆದು ಜಗನ್ನಾಥನ ಕೈಗಿತ್ತ. ಜಗನ್ನಾಥ ಏನನ್ನೋ ಹೇಳಲು ಬಾಯ್ತೆರೆವಷ್ಟರಲ್ಲಿ ಆತ ಸುತ್ತಲಿನ ಎಲ್ಲರಿಗು ಕೈ ಮುಗಿದು ತಪ್ಪಿಸಿಕೊಂಡರೆ ಸಾಕೆನ್ನುವಂತೆ ಸರ್ರನೇ ಬೈಕ್ ಏರಿ ದೂರದ ತಿರುವಿನಲ್ಲಿ ಮರೆಯಾದ. ಜನರೂ ಸಹ ಏನನ್ನೋ ಸಾಧಿಸಿದ ತೃಪ್ತಿಯಿಂದ ಬೀಗುತ್ತಾ ಚೆದುರಿಹೋದರು. ಆ ಹುಡುಗ ಕೊಟ್ಟ ಮೊಬೈಲನ್ನು ಕೈಯಲ್ಲಿ ಹಿಡಿದ ಜಗನ್ನಾಥ ರಸ್ತೆಯಲ್ಲಿ ಅನಾಥ ಹುಡುಗನಂತೆ ನಿಂತೇ ಇದ್ದ.