ರಾಮನ್ ತಮ್ಮ ಗನ್ ಹೋಲ್ಡರನ್ನು ಮುಟ್ಟಿ ತೋರಿಸುತ್ತಾ, “ಒಂದು ರಿವಾಲ್ವರ್ ನನ್ನದೇ ಇದೆ, ನನ್ನ ಪೊಲೀಸ್ ಸರ್ವೀಸ್ ರಿವಾಲ್ವರ್; ಬಹಳ ವರ್ಷಗಳಿಂದ ನನ್ನ ಬಳಿಯಿದೆ” ಎಂದು ನನ್ನ ಮುಖ ನೋಡಿದರು…
ಇಲ್ಲಿಯವರೆಗೆ……..
ಮೃದುಲಾಳ ಹೆತ್ತವರ ಅನ್ವೇಷಣೆಯಲ್ಲಿ ಇನ್ನಷ್ಟು ಮಾಹಿತಿ ಸಂಗ್ರಹಿಸುವ ಉದ್ದೇಶದಿಂದ ವಿಜಯ್ ನೇರವಾಗಿ ಸೂಲಗಿತ್ತಿ ಸುಬ್ಬಮ್ಮನಲ್ಲಿಗೆ ತೆರಳಿದ. ಅಲ್ಲಿ ಅವನಿಗೆ ದೊರಕಿದ್ದು ಒಗಟಿನ ಉತ್ತರ.
ಇದರಲ್ಲಿ ಜಾನಿಯ ಕೈವಾಡವೇನಾದರೂ ಇರಬಹುದೇ ಎಂಬುದನ್ನು ತಿಳಿಯುವುದಕ್ಕಾಗಿ ಅವನ ಮನೆಗೆ ಹೋದಾಗ ಜಾನಿ ಮತ್ತು ಅವನ ಗಲ್ಫ್ರೆಂಡ್ ಶಾಂತಿ ಕೊಲೆಯಾಗಿದ್ದರು. ಪೊಲೀಸ್ ಕಮಿಷನರ್ಗೆ ಫೋನ್ ಮಾಡಿ ಕೊಲೆ ಕೇಸ್ ದಾಖಲಿಸಿಕೊಳ್ಳುವಂತೆ ಹೇಳುತ್ತಾನೆ ವಿಜಯ್…..
ಸೂಲಗಿತ್ತಿ ಸುಬ್ಬಮ್ಮನ ಒಗಟಿನ ಉತ್ತರದ ಜಾಡು ಹಿಡಿದು ಹೋದಾಗ ನಿರಾಶ್ರಿತರ ಕ್ಯಾಂಪಿನ ತಮಿಳು ಯುವಕನೊಂದಿಗೆ ರಚನಾ ನಂಬೂದರಿಗೆ ಪ್ರೇಮವಾಗಿ ಅಕ್ರಮವಾಗಿ ಮಗು ಜನಿಸಿದ್ದು ತಿಳಿಯುತ್ತದೆ. ಆದರೆ ಗರ್ಭಪಾತ ಮಾಡದೆ ಮಗುವನ್ನು ಹೆತ್ತು ದತ್ತು ಕೊಟ್ಟಿದ್ದು ಯಾಕೆ? ಇದಕ್ಕೆ ರಚನಾ ಮಾತ್ರ ಉತ್ತರ ನೀಡಲು ಸಾಧ್ಯ ಎಂದರಿತ ವಿಜಯ್ ಮತ್ತು ಲೂಸಿ, ರಚನಾ ಮನೆಗೆ ಹೋಗಲು ನಿರ್ಧರಿಸಿದರು…..
ಇಂದು ನಾವು ರಚನಾರ ಅಂಗಡಿಗೆ ಹೋದಾಗ ಆಕೆ ಒಬ್ಬರೇ ಇದ್ದರು. ನಮಗೀಗ ಬಹಳ ವಿಷಯಗಳು ಗೊತ್ತಿದ್ದರಿಂದ ಒಂದು ಹೊಸ ವಿಶ್ವಾಸವಿತ್ತು, ಈ ಬಾರಿಯ ವಿಚಾರಣೆಯಲ್ಲಿ.
ಮತ್ತೆ ಲೂಸಿ ಮತ್ತು ನನ್ನನ್ನು ನೋಡಿ ಆಕೆ ಸ್ವಲ್ಪ ವಿಚಲಿತರಾದರೂ ಹೋದಬಾರಿಯಂತೆ ಗಾಬರಿಯಾಗಲಿಲ್ಲ. ಏನೋ ಒಂದು ಸೋತು ಗೆದ್ದ ಶಾಂತಿಯಿತ್ತು ಆಕೆಯ ಮುಖದಲ್ಲಿ.
“ಬನ್ನಿ ಕುಳಿತುಕೊಳ್ಳಿ” ಎಂದು ಒಳರೂಮಿಗೆ ಕರೆದೊಯ್ದರು. ಏ.ಸಿ. ಹಾಕಿದ್ದ, ಒಂದು ಟೇಬಲ್ ಮತ್ತು ಮೂರು ಕುರ್ಚಿಯಿದ್ದ ಸಣ್ಣ ಕೋಣೆ. ಅಲ್ಲಿ ಹಳೆ ಪೆಯಿಂಟಿಂಗ್ಸ್ ಕ್ಯಾನ್ವಾಸ್ಗಳೂ, ಒಂದು ಕಂಪ್ಯೂಟರ್ ಮತ್ತು ಕೆಲವು ಅಕೌಂಟ್ಸ್ ಲೆಡ್ಜರ್ಗಳು ಸುತ್ತಲೂ ಹರಡಿ ಬಿದ್ದಿದ್ದವು. ಇದು ಅವರ ಲೆಕ್ಕ-ಪತ್ರ ಮತ್ತು ಉಗ್ರಾಣದ ಕೋಣೆ ಇರಬೇಕು ಎನಿಸಿತು.
ಲೂಸಿ ಮೊದಲ ಹತ್ತು ನಿಮಿಷ ನಮಗೆ ಗೊತ್ತಿದ್ದ ಮೃದುಲಾ ಸಂಬಂಧಿತ ವಿಷಯವನ್ನೆಲ್ಲಾ ವಿವರಿಸಿದ ನಂತರ, ರಚನಾ ಏನೂ ಹೇಳದೆ ತೆಪ್ಪಗೆ ನೆಲ ನೋಡುತ್ತಾ ಯೋಚಿಸುತ್ತಾ ಕೂತರು.
ಆಕೆ ತನ್ನ ಆಂತರಿಕ ಗೊಂದಲಗಳೊಂದಿಗೆ ಹೋರಾಡುತ್ತಿದ್ದರೆಂದು ನಮಗೆ ಅರಿವಾಯಿತು.
“ನೀವು ಮಿಕ್ಕ ವಿಷಯಗಳನ್ನೆಲ್ಲಾ ಹೇಳುವುದಾದರೆ ಈ ಸಮಸ್ಯೆ ಬಗೆಹರಿದು, ಮೃದುಲಾಗೂ ನಿಮಗೂ ಪುನರ್ಮಿಲನವಾಗುವ ಅವಕಾಶವೂ ಇರುತ್ತೆ” ಎಂದು ನಾನು ಕುಮ್ಮಕ್ಕು ನೀಡಿದೆ.
ಕೊನೆಗೆ ನಿಟ್ಟುಸಿರು ಬಿಟ್ಟು ಏನೋ ನಿರ್ಧರಿಸಿದವರಂತೆ ರಚನಾ ಆರಂಭಿಸಿದರು: “ಹೌದು, ವಿಜಯ್ ನೀವು ಹೇಳುವುದು ಸರಿಯಾಗೇ ಇದೆ. ಇನ್ನು ನಾನು ನನ್ನನ್ನೇ ಸುಡುತ್ತಿರುವ ಸತ್ಯವನ್ನು ಹೇಳಿಯೇ ಬಿಡುತ್ತೇನೆ.”
“ಅಪ್ಪ ಆಗ ಸುಮಾರು ನಲವತ್ತು ವರ್ಷ ವಯಸ್ಸಿನವರು. ನಾನೊಬ್ಬಳೇ ಮಗಳು. ೧೭ ವರ್ಷ ವಯಸ್ಸು. ಮೊದಲಿಂದಲೂ ಅಪ್ಪನಿಗೆ ಮುಂಗೋಪ ಹೆಚ್ಚು. ಈ ಪ್ರದೇಶಕ್ಕೆಲ್ಲಾ ತಾವೇ ಡಿಸ್ಟ್ರಿಕ್ಟ್ ಕಲೆಕ್ಟರ್ ಎಂಬ ಒಣದರ್ಪ ಬೇರೆ. ನನ್ನನ್ನೂ ಅಮ್ಮನನ್ನೂ ಬಹಳ ಹದ್ದುಬಸ್ತಿನಲ್ಲಿಟ್ಟುಕೊಳ್ಳಲು ಯಾವಾಗಲೂ ಪ್ರಯತ್ನಿಸುತ್ತಿದ್ದರು. ನನ್ನ ಮೇಲೆ ಪ್ರೀತಿಯಿತ್ತಾದರೂ ಉಸಿರುಕಟ್ಟಿಸುವಂತಹ ವಾತಾವರಣ ಮನೆಯಲ್ಲಿ ನಿರ್ಮಿಸಿದ್ದರು. ಅಮ್ಮನಿಗಂತೂ ವಿಧಿಯಿಲ್ಲ, ಸುಮ್ಮನಿರುತ್ತಿದ್ದಳು. ನನಗೋ ಮೊದಲೇ ನಿಸರ್ಗ, ಸಂಗೀತ, ಪೆಯಿಂಟಿಂಗ್ಸ್ ಇಂತಹ ಕಲೆಯ ಕಡೆಗೆ ಒಲುಮೆಯಿತ್ತು. ನೀವು ಪ್ರಾಯಶಃ ಅಪ್ಪನನ್ನು ನೋಡಿರಬೇಕಲ್ಲ, ಅದೇ ನಾವಿದ್ದ ಮನೆ; ಕರ್ಪೂರಿ ನದಿಯ ಬದಿಯಲ್ಲಿ. ನಾನು ಆ ವಯಸ್ಸಿನಲ್ಲಿ ಬಹಳ ಒಂಟಿತನ, ಬೇಸರವನ್ನು ಅನುಭವಿಸುತ್ತಿದ್ದೆ. ಅಪ್ಪ ಮನೆಯಲ್ಲಿಲ್ಲದ ಸಮಯದಲ್ಲಿ ಆ ನದಿ ದಡಕ್ಕೆ ಸ್ವಲ್ಪ ಮನಃಶ್ಶಾಂತಿಗಾಗಿ ಸುತ್ತಾಡಿ, ಹಾಗೇ ಏನಾದರೂ ಚಿತ್ರ ರಚಿಸಲು ಹೋಗುತ್ತಿರುತ್ತಿದ್ದೆ. ಶ್ರೀಲಂಕಾದಿಂದ ನಮ್ಮ ದೇಶಕ್ಕೆ ಓಡಿಬಂದ ತಮಿಳು ನಿರಾಶ್ರಿತರೂ ಆಗ ಅಲ್ಲೇ ಕ್ಯಾಂಪ್ ಮಾಡಿಕೊಂಡು ಮೀನು ಹಿಡಿಯಲು ನದಿಗೆ ಬರುತ್ತಿದ್ದರು. ನಾನು ದಿನಾಲೂ ಪೆಯಿಂಟಿಂಗ್ ಮಾಡುವುದನ್ನು ನೋಡಿದ ಒಬ್ಬ ನನ್ನ ವಯಸ್ಸಿನ ಯುವಕ ನನ್ನನ್ನು ಸಮೀಪಿಸಿದ. ಅವನ ಹೆಸರು ಕಣ್ಣನ್ ಎಂದು. ಅವನು ನನ್ನ ಪಕ್ಕದಲ್ಲಿ ಕುಳಿತು ಸುಶ್ರಾವ್ಯವಾಗಿ ಕೊಳಲು ನುಡಿಸುತ್ತಿದ್ದರೆ ನನಗೆ ಬಹಳೇ ಪ್ರಿಯವಾಗುತ್ತಿತ್ತು. ಪಾಪ, ಅವನ ಅಪ್ಪ-ಅಮ್ಮ ಇಬ್ಬರೂ ತಾಯ್ನಾಡಿನ ಗಲಭೆಯಲ್ಲಿ ಸತ್ತು ಅವನು ತಬ್ಬಲಿಯಾಗಿ ರಾತ್ರೋರಾತ್ರಿ ಕದ್ದು ದೋಣಿಯಲ್ಲಿ ಇಲ್ಲಿಗೆ ಓಡಿಬಂದಿದ್ದ. ಅದೂ ಇದೂ ಮಾತನಾಡುತ್ತಾ ಅವನು ಅಲ್ಲಿ ಕೊಳಲು ನುಡಿಸುವುದು, ನಾನು ಪೆಯಿಂಟಿಂಗ್ ಮಾಡುತ್ತಾ ನಗುನಗುತ್ತಾ ಸಮಯ ಕಳೆಯುವುದೂ ಅಭ್ಯಾಸವಾಗಿಬಿಟ್ಟಿತ್ತು.
ನನ್ನ ಒಂಟಿತನ ಬೇಸರ ಕಳೆಯಲು ನನಗೊಬ್ಬ ಸಮವಯಸ್ಕ, ಸಮಮನಸ್ಕ ಸಂಗಾತಿ ಸಿಕ್ಕನೆಂದು ನಾನು ಬಹಳ ಸಂತಸ ಪಡುತ್ತಿದ್ದೆ. ಅಪ್ಪ ಅತ್ತ ಹೋಗುತ್ತಲೂ, ನನಗೆ ಸ್ಕೂಲ್ ಮುಗಿದ ಕೂಡಲೇ ಅಮ್ಮನಿಗೆ ಹೇಳಿ ಪೆಯಿಂಟಿಂಗ್ ಹೆಸರಿನಲ್ಲಿ ನಾವಿಬ್ಬರೂ ನಿರ್ಜನವಾದ ನದೀತೀರದಲ್ಲಿ ಒಂಟಿಯಾಗಿರುತ್ತಿದ್ದೆವು. ಆಗ ನಮಗೆ ಹದಿಹರೆಯದ ವಯಸ್ಸು. ಎಲ್ಲಾ ಆ ಪ್ರಕೃತಿ ಇಚ್ಛೆಯಂತೆ, ನಾವು ಒಬ್ಬರನ್ನೊಬ್ಬರು ಪ್ರೇಮಿಸಿದೆವು. ನನಗೂ ತಿಳಿವಳಿಕೆ ಕಮ್ಮಿ. ಅವನೂ ಓದಿದವನಲ್ಲ. ಹಾಗಾಗಿ ನಾವು….. ಎಂದಾಕೆ ಸಂಕೋಚದಿಂದ ನಿಲ್ಲಿಸಿದರು.
ಅರ್ಥವಾಯ್ತು ಹೇಳಿ. ನಾವೆಲ್ಲಾ ವಯಸ್ಕರೇ ಇಲ್ಲಿರುವುದು” ಎಂದು ಲೂಸಿ ಪ್ರೋತ್ಸಾಹಿಸಿದಳು.
ರಚನಾಗೆ ಆ ಮಧುರ ಕಾಲವೇ ಕಣ್ಣಲ್ಲಿ ಕಟ್ಟಿದಂತೆ ತೋರುತ್ತಿತ್ತು. “ಸರಿ. ನಾನು ಗರ್ಭಿಣಿ ಎಂದು ನನಗೆ ತಿಳಿಯಲು ಮೂರು ತಿಂಗಳಾದವು. ಅಮ್ಮ ಅಪ್ಪನ ಬಳಿ ಎಂದೂ ಏನೂ ಮುಚ್ಚಿಟ್ಟವಳಲ್ಲ. ನನ್ನ ವಿಷಯ ತಿಳಿದ ರಾತ್ರಿ ಅಪ್ಪ ಭೂಮಿ-ಆಕಾಶ ಒಂದು ಮಾಡಿದರು. ನಮ್ಮ ನಂಬೂದರಿ ಕುಲಗೌರವಕ್ಕೆ ಧಕ್ಕೆಯಾಯಿತೆಂದೂ, ಅದೂ ಒಬ್ಬ ತಮಿಳು ನಿರ್ಗತಿಕನಿಂದ ಎಂದು ಅವರಿಗೆ ಕೋಪ ಸಿಡಿದೆದ್ದಿತು. ನನಗೆ ಹಂಟರ್ ತೆಗೆದುಕೊಂಡು ಸಿಕ್ಕಾಪಟ್ಟೆ ಹೊಡೆದರು. ನನಗೆ ವಿಪರೀತ ಪೆಟ್ಟಾಯಿತು. ಅಮ್ಮ ನನ್ನ ಮೈಮೇಲೆ ಬಿದ್ದು `ನಿಲ್ಲಿಸಿ, ನಿಲ್ಲಿಸಿ’ ಎಂದು ಬೇಡಿಕೊಂಡಳು. ಅಪ್ಪನ ಬೆಸ್ಟ್ ಗೆಳೆಯ ಅಂದರೆ ಆಗ ಇಲ್ಲಿನ ಪೊಲೀಸ್ ಇನ್ಸ್ಪೆಕ್ಟರ್ ಶ್ರೀನಿವಾಸನ್, ದಿನಾಲೂ ಬಂದು ಹೋಗಿ ಮಾಡುವವರು. ಅವರು ಅಪ್ಪ ನನ್ನನ್ನು ಚಚ್ಚುತ್ತಿದ್ದಾರೆ ಎಂಬ ವಿಷಯ ಕೇಳಿ ಓಡೋಡಿ ಬಂದರು. ಅವರ ಸಲಹೆಯಂತೆ ನನ್ನನ್ನು ಡಾಕ್ಟರ್ ಸೋಮನ್ ಎಂಬವರ ಬಳಿ ಕರೆದೊಯ್ದರು, ಅಲ್ಲಿ ಅವರೂ, ಅವರ ನೌಕರಿಯಲ್ಲಿ ಒಬ್ಬ ಸೂಲಗಿತ್ತಿ ಸುಬ್ಬಮ್ಮ, ಇವರಿಬ್ಬರು ಮಾತ್ರವೇ ನಮಗೆ ತಿಳಿದವರು. ರಹಸ್ಯ ಬಾಯಿಬಿಡದವರು ಇದ್ದಿದ್ದು. ಆದರೆ ಅಪ್ಪನಿಂದ ಬಿದ್ದ ಹೊಡೆತಗಳಿಂದ ನನಗೆ ಗರ್ಭದಲ್ಲಿ ಏನೋ ಊನವಾಗಿ ಬಿಟ್ಟಿತಂತೆ. `ಇವಳಿಗೀಗ ಗರ್ಭಪಾತ ಮಾಡಲಾಗುವುದಿಲ್ಲ, ಜೀವಕ್ಕೇ ಅಪಾಯ’ ಎಂದೂ ಹೆರಿಗೆ ಆಗಲೇಬೇಕೆಂದೂ ಡಾಕ್ಟರ್ ಹೇಳಿಬಿಟ್ಟರು.
ಇದರಿಂದ ಅಪ್ಪನ ಕೋಪ ಮತ್ತೆ ತಾರಕಕ್ಕೇರಿತು. ನನಗೆ ಮದುವೆಗೆ ಮುಂಚೆಯೇ ಮಗುವಾಗುವುದನ್ನು ತಡೆಯಲು ಆಗಲಿಲ್ಲವಲ್ಲ ಎಂಬ ಕುಲಗೌರವಕ್ಕಾದ ಅವಮಾನ ಅವರನ್ನು ರಾಕ್ಷಸರನ್ನಾಗಿಸಿತು. ಮನೆಯಿಂದ ಬಿರ್ರನೆ ಒಂದು ರಿವಾಲ್ವರ್ ತೆಗೆದುಕೊಂಡು ನದಿಯ ತೀರಕ್ಕೆ ಹೋದರು. ಅವರಿಗೆ ಬಡಪಾಯಿ ಕಣ್ಣನನ್ನು ಹುಡುಕಲು ಕಷ್ಟವೇನಾಗಲಿಲ್ಲ. ಅವನು ನಾವು ದಿನಾ ಸೇರುತಿದ್ದ ನಿರ್ಜನ ಸ್ಥಳದಲ್ಲೇ ಕೊಳಲೂದುತ್ತಾ ಸಿಕ್ಕಿದನಂತೆ. ಏನೇನು ವಾಗ್ವಾದವಾಯಿತೋ ನನಗೆ ತಿಳಿಯದು. ಅಲ್ಲೇ ಅವನನ್ನು ಅಪ್ಪ ಗುಂಡಿಟ್ಟು ಕೊಂದರು. ನಂತರ ತಾವು ಮಾಡಿದ್ದ ಅಪರಾಧ ಅರಿವಾಗಿ ಹೆದರಿ ಗೆಳೆಯ ಪೊಲೀಸ್ ಇನ್ಸ್ಪೆಕ್ಟರ್ ಶ್ರೀನಿವಾಸನ್ರವರ ಸಹಾಯ ಕೇಳಿದರು. ಇಬ್ಬರೂ ಸೇರಿ ಆ ಹೆಣದ ಕಾಲಿಗೆ ಕಲ್ಲು ಕಟ್ಟಿ ಕರ್ಪೂರಿ ನದಿ ಆಳವಾಗಿದ್ದಲ್ಲಿ ಹೋಗಿ ಬಿಸಾಕಿ ಬಂದರು.
ಆಗಿನ ಕಾಲದಲ್ಲಿ ನಡೆದ `ಆನರ್ ಕಿಲ್ಲಿಂಗ್’ (ಗೌರವಕ್ಕಾಗಿ ಹತ್ಯೆ) ಇದು! ಆದರೆ ಈ ಕೇಸಿಗೆ ಇನ್ಸ್ಪೆಕ್ಟರ್ ಅವರೇ ಐ.ಓ. (ಇನ್ವೆಸ್ಟಿಗೇಟಿಂಗ್ ಆಫೀಸರ್). ಅಪ್ಪನೇ ಆಗ ಕಲೆಕ್ಟರ್! ಇಬ್ಬರೂ ಸೇರಿ ಅವನ ಕೊಲೆಯನ್ನು ತನಿಖೆಯೇ ಮಾಡದೇ ಮುಚ್ಚಿಹಾಕಿಬಿಟ್ಟರು. ಇದರ ಶಾಕ್ನಿಂದ ನನಗೆ ಮತ್ತೆ ಎರಡು ದಿನ ಜ್ಞಾನವೇ ಇರಲಿಲ್ಲ. ಸುಬ್ಬಮ್ಮನಿದ್ದ ಪಕ್ಕದ ಹಳ್ಳಿಯ ಮನೆಯೊಂದರಲ್ಲಿ ನನ್ನನ್ನೂ ಅಮ್ಮನನ್ನೂ ಗುಪ್ತವಾಗಿಟ್ಟು ನನಗೆ ಅಲ್ಲಿಯೇ ಹೆರಿಗೆ ಮಾಡಿಸಿದರು. ಫೆಬ್ರುವರಿ ೧೪, ವ್ಯಾಲೆನ್ಟೈನ್ಸ್ ಡೇ. ಅದೇ ಆ ಮಗು ಹುಟ್ಟಿದ ದಿನ. ಎಂತಹ ವಿಪರ್ಯಾಸ, ನೋಡಿದಿರಾ? ಮಗುವಿಗೆ ಮೂರು ತಿಂಗಳು ತುಂಬುತ್ತಿರುವಂತೆಯೇ ಈ ಊರಿಗೆ ಬಂದಿದ್ದ ಪ್ರವಾಸಿಗಳಾದ ಹೊಸಮನಿ ದಂಪತಿಗಳಿಗೆ ನನ್ನ ಮಗುವನ್ನು ದತ್ತು ಕೊಟ್ಟುಬಿಟ್ಟರು. ಇದೆಲ್ಲಾ ಅವರವರು ಗುಪ್ತವಾಗಿ ಮಾತನಾಡಿಕೊಂಡು ನಡೆಸಿದ್ದು. ನನ್ನ ಹಾಗೂ ಅಮ್ಮನ ಮಾತು ಕಿಂಚಿತ್ತೂ ನಡೆಯಲಿಲ್ಲ. ಇನ್ನೆಂದೂ ನಾವು ಈ ಬಗ್ಗೆ ಯಾರೂ ಮಾತನಾಡಬಾರದೆಂದು ಅಪ್ಪ ವಚನ ತೆಗೆದುಕೊಂಡರು.
ಅಂತೂ ನನ್ನ ಪಾಲಿಗೆ ಕರ್ಪೂರಿ ನದಿ ಕಪ್ಪು ನದಿಯಾಗಿತ್ತು. ನಾನು ಜೀವನವೆಲ್ಲಾ ಕಣ್ಣನ್ನೊಂದಿಗೆ ಕಳೆದ ಮಧುರ ಕ್ಷಣಗಳನ್ನು ಮೆಲುಕುಹಾಕುತ್ತಲೇ ಇದ್ದೇನೆ. ಅವೇ ಈ ಪೆಯಿಂಟಿಂಗ್ಸ್ ಅನ್ನು ಇನ್ನೂ ಜೀವಂತವಾಗಿಟ್ಟಿವೆ” ಎಂದು ಭಾವುಕರಾಗಿ ಕಣ್ಣೊರೆಸಿಕೊಂಡರು ರಚನಾ.
ನಾನೆಂದೆ, “ಆ…. ಮತ್ತೆ ನಿಮ್ಮ ಈಗಿನ ಪತಿ ರಾಮನ್ ಅವರು?”
ನನ್ನತ್ತಲೇ ನೋಡುತ್ತಾ ರಚನಾ ನುಡಿದರು, “ನೀವೇನಾದರೂ ಇನ್ಸ್ಪೆಕ್ಟರ್ ಶ್ರೀನಿವಾಸನ್ರವರ ಫೋಟೋ ನೋಡಿದ್ದಿದ್ದರೆ ಖಂಡಿತಾ ಹೋಲಿಕೆ ಹೇಳಿಬಿಡುತ್ತಿದ್ದಿರಿ. ನನ್ನ ಮೃದುಲಾ ಬಗ್ಗೆ ಹಿಡಿದಿರಲ್ಲ ಹಾಗೆ! ಶ್ರೀನಿವಾಸನ್ರವರ ಮಗನೇ ನನ್ನ ಗಂಡ ರಾಮನ್! ಅಪ್ಪನ ಮಾತಿಗೆ ಎದುರುಹೇಳದೆ ನನ್ನ ಕುತ್ತಿಗೆಗೆ ಮುಂದಿನ ಎರಡು ವರ್ಷದಲ್ಲಿ ತಾಳಿ ಕಟ್ಟಿದ್ದರು. ಅಪ್ಪ ಮತ್ತು ಮಾವ ಮಾತನಾಡಿಕೊಂಡು ಈ ರಹಸ್ಯ ನಮ್ಮಿಬ್ಬರ ಮನೆ-ಮನೆಯಲ್ಲೇ ಇರಲೆಂದು ಸಂಚುಮಾಡಿ ನಡೆಸಿದ್ದ ಮದುವೆ ಇದು. ಆದರೆ, ಹಾಗೆ ನೋಡಿದರೆ ನನ್ನ ಗಂಡ ರಾಮನ್ ಬಹಳ ವಿಶಾಲ ಮನಸ್ಸಿನವರು. ನನ್ನ ರಹಸ್ಯವನ್ನು ತಮ್ಮ ಇಡೀ ಜೀವನದ ಉದ್ದೇಶವೆಂಬಂತೆ ಕಾಪಾಡಿ ನೋಡಿಕೊಂಡರು. ಅಪ್ಪನಂತೆಯೇ ತಾವೂ ಪೊಲೀಸ್ ವೃತ್ತಿಗೆ ಸೇರಿ ಮುಂದೆ ಬಂದರು. ಈಗ ಎರಡೇ ವರ್ಷದ ಹಿಂದೆ ಅವರಿಗೆ ಕಮಿಷನರ್ ಪದವಿ ದೊರಕಿದ್ದು. ನನಗೆ ಹತ್ತು ವರ್ಷಗಳ ನಂತರ ಮತ್ತೆ ಮಗ ರಾಜನ್ ಹುಟ್ಟಿದ. ಈಗ ಅವನು ಮೆಡಿಕಲ್ ಓದಲು ಚೆನ್ನೈನಲ್ಲಿದ್ದಾನೆ” ಎಂದು ಈಗ ಅವರು ಶಾಂತರಾದರು. ಆಕೆಗೆ ಹಲವು ದಶಕಗಳ ಅಪರಾಧಿ ಪ್ರಜ್ಞೆಯ ಭಾರ ಇಳಿದಂತಾಗಿತ್ತು. ನಾವು ಆಕೆ ಹೇಳಿದ್ದನೆಲ್ಲಾ ಅರಗಿಸಿಕೊಳ್ಳುತ್ತಿದ್ದೆವು.
“ಹಾಗಾದರೆ ಇಷ್ಟೆಲ್ಲಾ ಜಾಗ್ರತೆ ವಹಿಸಿ ಕಾಪಾಡಿಕೊಂಡು ಬಂದಿದ್ದ ನಿಮ್ಮ ರಹಸ್ಯ ಈ ಜಾನಿಯಂತವನಿಗೆ ತಿಳಿದಿದ್ದಾದರೂ ಹೇಗೆ?” ಎಂದೆ, ನನ್ನ ಮನಸ್ಸಿನಲ್ಲಿ ಕೊರೆಯುತ್ತಿದ್ದ ಆ ಪ್ರಶ್ನೆಯನ್ನು ಮುಂದಿಟ್ಟು.
ರಚನಾ ನಿಟ್ಟುಸಿರಿಟ್ಟು ಹೇಳಿದರು: “ಹೂಂ. ಅದೊಂದು ಕಡಮೆಯಾಗಿತ್ತು. ನಮ್ಮ ದುರದೃಷ್ಟಕರ ಬಾಳಿನಲ್ಲಿ. ಈ ಜಾನಿ ನಿಮಗೇ ಗೊತ್ತಿದ್ದಂತೆ ಈ ಊರಿನಲ್ಲಿ ಒಬ್ಬ ಕಾರ್ ಮೆಕ್ಯಾನಿಕ್. ಅಪ್ಪ ತಮ್ಮ ಹಳದಿ ಟಾಟಾ ನ್ಯಾನೋ ಕಾರನ್ನು ಅವನ ಬಳಿ ಒಮ್ಮೆ ಸರ್ವೀಸಿಗಾಗಿ ಬಿಟ್ಟಿದ್ದರು. `ಮನೆಗೆ ತಂದು ಬಿಡಪ್ಪ’ ಎಂದಿದ್ದರು. ಅಪ್ಪನಿಗೀಗ ಎಪ್ಪತ್ತೈದು ವರ್ಷ. ಒಂದು ನಾಯಿ ಬಿಟ್ಟರೆ ಅಲ್ಲಿ ಬೇರೆ ಕಂಪನಿಯಿಲ್ಲ. ಅಮ್ಮ ತೀರಿಕೊಂಡು ಹತ್ತು ವರ್ಷವೇ ಆಯಿತು. ನಾನು ಆಗಾಗ ಹೋಗಿ ಹಾಲು ಔಷಧಿ ಕೊಟ್ಟುಬರುತ್ತಿರುತ್ತೇನೆ. ಆದರೆ ನನ್ನ ಗಂಡ ರಾಮನ್ ಎಂದೋ ಒಮ್ಮೊಮ್ಮೆ ಅಪ್ಪನ ಬಳಿಗೆ ಹೋಗಿ ಒಟ್ಟಿಗೇ ಬಿಯರ್ ಕುಡಿದು ಬರುತ್ತಿರುತ್ತಾರೆ. ಅಂತಹ ಸಂಧರ್ಭಗಳಲ್ಲಿ ಅಪ್ಪ ಮತ್ತು ಇವರೂ ಹಳೆಯದ್ದನ್ನೆಲ್ಲ ಮೆಲುಕುಹಾಕುತ್ತಿರುತ್ತಾರೆ, ಒಮ್ಮೊಮ್ಮೆ ಜಗಳವೂ ಆಗುತ್ತದೆ. ಅಂತಹದ್ದೇ ಒಂದು ದಿನ, ಈ ಜಾನಿಯು ಅಪ್ಪನ ಕಾರ್ ಸರ್ವೀಸ್ ಮಾಡಿ ವಾಪಸ್ ಬಿಡಲು ಅಪ್ಪನ ಮನೆಗೆ ಹೋಗಿದ್ದಾನೆ. ಅಲ್ಲಿ ಇವರಿಬ್ಬರೂ ಕುಡಿದ ಅಮಲಿನಲ್ಲಿ ಹಳೆಯ ವಿಷಯಗಳನ್ನೆಲ್ಲಾ ಹಿಡಿದು ವಾದ ಮಾಡಿಕೊಳ್ಳುತ್ತಿದ್ದರಂತೆ. ಅದನ್ನು ಇವನು ಕದ್ದು ಕೇಳಿಸಿಕೊಂಡುಬಿಟ್ಟಿದ್ದಾನೆ. ಅವನಿಗಾಗಲೇ ಈ ದುರ್ಬುದ್ದಿ ಮೊಳಕೆಯೊಡೆದಿದೆ. ಆಮೇಲೆ ಹಲವು ದಿನಗಳ ಕಾಲ ಜಾನಿಯು ಅಪ್ಪನ ದೋಸ್ತಿ ಮಾಡಿದ್ದಾನೆ. ಅವರಿಗೆ ಹೆಂಡ ಕುಡಿಸಿ ತಾನೂ ಅವರೊಂದಿಗೆ ಕುಡಿದು ನಿಧಾನವಾಗಿ ಮತ್ತಿನಲ್ಲಿದ್ದ ಅಪ್ಪನಿಂದ ಎಲ್ಲವನ್ನೂ ತಿಳಿದುಕೊಂಡುಬಿಟ್ಟಿದ್ದಾನೆ.
ಹೊಸಮನಿಗಳಿಗೆ ದತ್ತುಕೊಟ್ಟ ಮಗುವೇ ಮೃದುಲಾ ಎಂಬ ಜನಪ್ರಿಯ ಚಿತ್ರತಾರೆ, ಟಿವಿ ನಟಿ ಎಂದು ತಿಳಿದ ಅವನು ನಮ್ಮೆಲ್ಲರಿಗೂ ಯಶಸ್ವಿಯಾಗಿ ಗಾಳಹಾಕಿದ್ದಾನೆ. ಜತೆಗೆ ಆ ಕಾಲದಲ್ಲಿ ಕಣ್ಣನ್ನನ್ನು ಅಪ್ಪ ಕೊಲೆಮಾಡಿದ್ದೂ ತಿಳಿದದ್ದು ಅವನಿಗೆ ಇನ್ನೊಂದು ಅಸ್ತ್ರವಾಯ್ತು. ಅಂತೂ ನಾವೆಲ್ಲರೂ ಅವನ ಕಪಿಮುಷ್ಟಿಗೆ ಸಿಕ್ಕಿ ಬಿಟ್ಟೆವು.
ಮೊದಮೊದಲು ಅಪ್ಪನ ಹತ್ತಿರ ಬೆದರಿಸಿ ಅವರ ಟಾಟಾ ನ್ಯಾನೋ ಕಾರನ್ನು ತನ್ನ ಹೆಸರಿಗೆ ಮಾಡಿಸಿಕೊಂಡ, ಅದನ್ನೇ ನೀವು ನೋಡಿದ್ದು. ಅನಂತರ ನನ್ನ ಬಳಿ ಮೂರು ನಾಲ್ಕು ಬಾರಿ ೨೫-೩೦ ಸಾವಿರ ರೂ. ಬೆದರಿಸಿ ತೆಗೆದುಕೊಂಡಿದ್ದಾನೆ. ಆಮೇಲೆ ಅವನಿಗೆ ಆ ಶಾಂತಿ ಎಂಬ ಲವರ್ ಬೇರೆ ಮುಖ್ಯವಾದ ದಾಖಲೆ ಪತ್ರಗಳನ್ನು ಆಫೀಸಿನಿಂದ ಕದ್ದು ತಂದುಕೊಟ್ಟಮೇಲೆ ಇನ್ನೂ ದುರಾಸೆ ಹೆಚ್ಚಾಯಿತು. ಅವನಿಗೆ `ಇವರು ಯಾವ ಮಹಾ ಕೊಡುವುದು?’ ದೊಡ್ಡಕುಳಕ್ಕೇ ಕೈಹಾಕೋಣವೆನಿಸಿರಬೇಕು. ಮೃದುಲಾಗೂ ಬೆದರಿಕೆಪತ್ರ ಹಾಕಿ ಹೀಗೆ ತನ್ನ ಜಾಲಕ್ಕೆ ಬೀಳಿಸಿಕೊಂಡ” ಎಂದು ಮುಗಿಸಿ ಎದ್ದರು ರಚನಾ, ಹೊರಗಿನ ಅಂಗಡಿಗೆ ಹೋಗಲು.
ಅದರ ನಂತರದ ಕಥೆ ನಮಗೆ ತಿಳಿದಿತ್ತು. ಆದರೆ ನಾನವರನ್ನು ತಡೆದೆ: “ಅದಕ್ಕೇ ನಿಮ್ಮ ಗಂಡ ಬೇಸತ್ತು, ಈ ಜೀವನಪರ್ಯಂತ ಎಲ್ಲರೂ ಒಂದು ರಹಸ್ಯಕ್ಕಾಗಿ ಇಷ್ಟು ಬೆಲೆ ತೆರುವುದು ಬೇಡ ಎಂದು ಜಾನಿಯನ್ನು ಕೊಂದು ಬಿಟ್ಟರು ಅಲ್ಲವೇ?” ಎಂದೆ. ನನಗೆ ಅವರ ಮೇಲೆ ಸಂದೇಹ ಕಡಮೆಯಾಗಿದ್ದರೂ ಇನ್ನೂ ಆ ವಿಷಯ ದೃಢಪಡುವುದು ಅವಶ್ಯವಿತ್ತು.
ಆಗ ಮೊದಲ ಬಾರಿಗೆ ರಚನಾಗೆ ನಮ್ಮ ಮೇಲೆ ಅತ್ಯಂತ ಕೋಪ ಬಂದಿತ್ತು: “ನೆವರ್! ಅವರೆಂದೂ ಅಂತಹ ಕಾರ್ಯ ಮಾಡಿರುವುದಿಲ್ಲ. ನಿಮಗವರ ಗುಣ ಗೊತ್ತಿಲ್ಲ. ಅವರಿಗೆ ಅಪರಾಧಿಗಳನ್ನು ಹಿಡಿಯುವುದು ಮಾತ್ರ ಗೊತ್ತಿದೆ. ಅಪರಾಧ ಮಾಡುವುದಲ್ಲ” ಎಂದು ಖಡಾಖಂಡಿತವಾಗಿ ನುಡಿದರು.
ಸರಿ, ಅಲ್ಲಿಗೆ ಈ ವಿಚಾರ ಮುಗಿದ ಅಧ್ಯಾಯ ಎಂದೆನಿಸಿ ಕೊನೆಗೆ ಆಕೆಯನ್ನೇ ಉದ್ದೇಶಿಸಿ ಕೇಳಿದೆ: “ಮತ್ತೆ ನೀವು? ನೀವು ಕೊಂದಿರಬಹುದಲ್ಲಾ? ನಿಮಗಂತೂ ಜಾನಿಯನ್ನು ಕೊಲ್ಲಲು ಎಲ್ಲಾ ಉದ್ದೇಶಗಳೂ ಇದ್ದವು ಎಂದೆ.
ರಚನಾ ಒಮ್ಮೆ ವಿಷಾದದ ನಗೆ ಚೆಲ್ಲಿದರು ಅಷ್ಟೇ. “ಹಾಗೆ ಮಾಡಿದ್ದರೆ ಚೆನ್ನಾಗಿರುತ್ತಿತ್ತು, ನಿಜಕ್ಕೂ ಚೆನ್ನಾಗಿರುತ್ತಿತ್ತು, ಎಲ್ಲರಿಗೂ ಎಂದು ಪಿಸು ನುಡಿದಿದ್ದರು.
ಇನ್ನೇನು ನಾವು ಎದ್ದು ಹೊರಡೋಣವೆಂದಿದ್ದೆವು. ಅದೇ ಕ್ಷಣದಲ್ಲಿ ಕಮಿಷನರ್ ರಾಮನ್ ರೂಮಿನೊಳಗೆ ಕಾಲಿಟ್ಟಿದ್ದರು! ಸೊಂಟದ ಮೇಲೆ ಕೈಯಿಟ್ಟು ಹುಬ್ಬುಗಂಟಿಕ್ಕಿ, ಹೆಂಡತಿಯತ್ತ ನೋಡುತ್ತಾ ಸಿಡಿದರು: “ಓಹೋ, ಎಲ್ಲಾ ಹೇಳಿಬಿಟ್ಟೆ ತಾನೆ ಇವರಿಗೆ? ನಾನು ಬರುವುದು ಸ್ವಲ್ಪ ತಡವಾಯಿತು ಅಷ್ಟೇ. ನಾನಂದುಕೊಂಡಿದ್ದೆ, ಹೀಗೇ ಆಗುತ್ತದೆಂದು.
ಅವರು ಮತ್ತೆ ತಮ್ಮ ಪತ್ನಿಯನ್ನು ತರಾಟೆಗೆ ತೆಗೆದುಕೊಳ್ಳುವ ಮುನ್ನ ನಾನು ಮಧ್ಯಪ್ರವೇಶ ಮಾಡಿದೆ: “ಕಮಿಷನರ್, ಅವರೆಲ್ಲಾ ಹೇಳಿ ಮುಗಿದಿದೆ. ಹಾಗೆ ನೋಡಿದರೆ ಇನ್ನು ನೀವು ಆಕೆಯ ರಹಸ್ಯದ ಭಾರ ಹೊರುವ ಅಗತ್ಯವೇ ಇಲ್ಲ. ಮೂವತ್ತೈದು ವರ್ಷಗಳ ಹಿಂದೆ ನಿಮ್ಮ ನಮ್ಮ ಕೈಗೆ ನಿಲುಕದೇ ನಡೆದುಹೋದ ವಿಷಯವನ್ನು ಬಿಟ್ಟು ಮುಂದಾಗಬೇಕಾಗಿರುವುದರತ್ತ ಗಮನಿಸೋಣ. ಏನಂತೀರಾ?” ಎಂದೆ ಧೈರ್ಯವಾಗಿ.
ಕಮಿಷನರ್ ರಾಮನ್ ಮುಖದಲ್ಲಿ ಹಲವಾರು ಭಾವನೆಗಳು ತಾಕಲಾಟ ಮಾಡುತ್ತಿದವು. ಕೋಪ, ನಿರಾಸೆ, ಅಸಹಾಯಕತೆ ಮತ್ತು ತಾನೆಲ್ಲೋ ಸೋತೆನೆಂಬ ಅಳುಕು.
ಅವರು ಮಿದುಳು ನಡೆಯುವುದೂ ಕೇಳಬಲ್ಲಂತಹ ಮೌನವಿತ್ತು ಕೋಣೆಯಲ್ಲಿ ಕೆಲಕಾಲ. ಹಲವಾರು ವರ್ಷಗಳ ದ್ವಂದ್ವವನ್ನು ಬಗೆಹರಿಸಿಕೊಂಡು ಮನಸ್ಸು ತಿಳಿಯಾಗಲು ಸ್ವಲ್ಪ ಸಮಯ ಬೇಕಿದ್ದುದು ಸಹಜವೇ.
ಅವರು ನೆಲದತ್ತಲೇ ನೋಡುತ್ತಿದ್ದವರು ನಿಡುಸುಯ್ದು ಉತ್ತರಿಸಿದರು: “ಹೂಂ. ಬಿಡಿ….. ನಾನಂದು ಮಾವನ ಜತೆ ಕುಡಿದ ಅಮಲಿನಲ್ಲಿ ಜೋರು ದನಿಯಲ್ಲಿ ಆ ಬಗ್ಗೆಯೆಲ್ಲಾ ಕೆದಕಿ ಕೆದಕಿ ವಾದಿಸದಿದ್ದರೆ…. ಜಾನಿ ಅದೇ ಸಮಯಕ್ಕೆ ಬರದೆ ಇದ್ದಿದ್ದರೆ ಈ ಹೊಸ ಗಂಡಾಂತರವೂ ಬರುತ್ತಿರಲಿಲ್ಲ…..”
ಲೂಸಿ ತಲೆಯಾಡಿಸುತ್ತ “ಹಾ, ಗಂಡಾಂತರ ಆದದ್ದು ಕೊನೆಗೆ ಜಾನಿಗೇ ತಾನೆ? ಮತ್ತು ದುರದೃಷ್ಟವಶಾತ್ ಕಾಕತಾಳೀಯವಾಗಿ ಅವನೊಂದಿಗಿದ್ದ ಯುವತಿ ಶಾಂತಿಗೆ. ಅದರ ಬಗ್ಗೆ ಏನು ನಡೆಯುತ್ತಿದೆ. ಆ ಕೊಲೆಗಳ ಬ್ಯಾಲಿಸ್ಟಿಕ್ ರಿಪೋರ್ಟ್ ಏನಾದರೂ ಬಂತೆ?” ಎಂದಳು.
ಲೂಸಿಯಂತಹ ಚುರುಕು ಬುದ್ಧಿಯ ಲಾಯರೊಂದಿಗೆ ವ್ಯವಹರಿಸುವುದು ಎಷ್ಟು ಕಷ್ಟ ಎಂದು ಅರಿವಾದವರಂತೆ ಕಮಿಷನರ್ ಅವಳತ್ತ ದಿಟ್ಟಿಸುತ್ತಾ, “ಹೂಂ ಬಂತು. ಈಗ ತಾನೇ ಅವೆರಡೂ ಶವಪರೀಕ್ಷೆ ಮಾಡಿದ ವೈದ್ಯಾಧಿಕಾರಿ ಹೇಳುವ ಪ್ರಕಾರ, ವಿಜಯ್ ಹೇಳಿದಂತೆ ಅದು ೦.೩೮ ಕೋಲ್ಟ್ ರಿವಾಲ್ವರ್ನಿಂದಲೇ ಹೊಡೆದ ಗುಂಡುಗಳು ಎಂದು ದೃಢಪಟ್ಟಿದೆ” ಎಂದು ನಿರಾಸೆಯಿಂದ ಕೈಚೆಲ್ಲಿದರು. ಅವರಿಗೆ ಹತ್ತಿರದ ಬಲಿಪಶು ಸಿಕ್ಕಲಿಲ್ಲವೆಂಬಂತೆ. ನನ್ನದು ಆ ರಿವಾಲ್ವರ್ ಅಲ್ಲವಲ್ಲ!
“ಅಂತಹ ಎಷ್ಟು ರಿವಾಲ್ವರ್ಗಳು ಈ ಊರಿನಲ್ಲಿದ್ದವು ಎಂಬ ದಾಖಲೆಗಳು, ಗನ್ ರಿಜಿಸ್ಟರ್ ಅಥವಾ ಲಾಗ್ ಏನಾದರೂ ನಿಮ್ಮಲ್ಲಿದೆಯೆ?” ಎಂದೆ ನಾನು ಮುಂದುವರಿಸುತ್ತ.
ರಾಮನ್ ತಮ್ಮ ಗನ್ ಹೋಲ್ಡರನ್ನು ಮುಟ್ಟಿ ತೋರಿಸುತ್ತಾ, “ಒಂದು ರಿವಾಲ್ವರ್ ನನ್ನದೇ ಇದೆ… ನನ್ನ ಪೊಲೀಸ್ ಸರ್ವೀಸ್ ರಿವಾಲ್ವರ್…. ಬಹಳ ವರ್ಷಗಳಿಂದ ನನ್ನ ಬಳಿಯಿದೆ” ಎಂದು ನನ್ನ ಮುಖ ನೋಡಿದರು. `ನನ್ನನ್ನು ಇನ್ನೂ ಅನುಮಾನಿಸುವೆಯೋ’ ಎಂಬಂತೆ.
ನನಗೆ ಅವರ ಜತೆ ಮುಖಾಮುಖಿ ಸಾಕಾಗಿಹೋಗಿತ್ತು.
“ನೀವಲ್ಲದೆ ಬೇರೆ ಯಾರದಿತ್ತು, ಚೆಕ್ ಮಾಡಿ ಹೇಳಬಲ್ಲಿರಾ?” ಎಂದು ಮಾತ್ರ ಪ್ರಶ್ನಿಸಿದೆ.
ಕಮಿಷನರ್ ರಾಮನ್ ಮುಖ ಸೊಟ್ಟಗೆ ಮಾಡಿಕೊಂಡು, “ಹೂಂ… ಮಾಡಲೇಬೇಕಾಗುತ್ತಲ್ಲ? ಹಳೆಯ ರೆಕಾರ್ಡ್ಸ್ ಎಲ್ಲಾ ತೆಗೆದು ನೋಡಬೇಕು. ಅಂತಹ ಯಾವುದಾದರೂ ದಾಖಲೆಯಿದೆಯೇ ಎಂದು. ವಾಪಸ್ ಆಫೀಸಿಗೆ ಹೋಗಬೇಕಾಗುತ್ತದೆ…” ಎಂದು ಎದ್ದರು.
ಹೊರಡುವಮುನ್ನ ಮತ್ತೆ ಪತ್ನಿಯತ್ತ ತಿರುಗಿ, “ಇನ್ನು ನೀನು ಇವರ ಜತೆ ಮಾತನಾಡಿ, ಮೃದುಲಾ ಜತೆ ಹೇಗೆ ಭೇಟಿ ಮಾಡುತ್ತೀ, ಏನು, ಎತ್ತ? ಎಂದು ವಿಚಾರಿಸಿಕೋ. ಇನ್ನು ನನ್ನದೇನೂ ಇಲ್ಲ” ಎಂದು ಬಹಳ ಕಷ್ಟದಿಂದ ಗಿಳಿಯನ್ನು ಪಂಜರದಿಂದ ಬಿಡುಗಡೆ ಮಾಡುತ್ತಿರುವಂತೆ ಹೇಳಿ ಹೊರಟರು.
ಅವರು ಹೋದ ನಂತರ ನಾವು ಸ್ವಲ್ಪ ಹೊತ್ತು ರಚನಾ ಜತೆ ಮನಬಿಚ್ಚಿ ಮಾತನಾಡುವಂಥ ಅವಕಾಶವಿತ್ತು. ಸಂಕ್ಷಿಪ್ತವಾಗಿ ಹೇಳಬೇಕೆಂದರೆ `ಮೃದುಲಾಗೆ ಇಷ್ಟವಿದ್ದರೆ ಆಕೆಯೇ ಇಲ್ಲಿಗೆ ಬರಲಿ…. ತಾವು ಬೆಂಗಳೂರಿಗೆ ಹೋದರೆ ಸುಮ್ಮನೆ ಮಾಧ್ಯಮಗಳಿಗೆಲ್ಲ ತಿಳಿದು ಅನವಶ್ಯ ಪ್ರಚಾರವಾದೀತು. ಅದರಿಂದ ಅವಳಿಗೇ ಮುಜುಗುರ’ ಎಂದು ರಚನಾ ಸಲಹೆಯಿತ್ತರು. ಲೂಸಿ ಅದನ್ನು ಮೃದುಲಾ ಮತ್ತು ಫರ್ನಾಂಡೆಸ್ಗೆ ತಿಳಿಸುವುದಾಗಿ ನುಡಿದಳು.
ಲೂಸಿ ಅಲ್ಲಿಂದಲೇ ಮೃದುಲಾ ಮತ್ತು ಫರ್ನಾಂಡೆಸ್ಗೆ ಫೋನ್ ಹಚ್ಚಿದ್ದಳು. ಮೃದುಲಾಗೆ ಈ ವಿಷಯ ತಿಳಿದ ನಂತರದ ಮೃದುಲಾರ ಉದ್ವೇಗದ ದನಿ ಪಕ್ಕದಲ್ಲಿ ಕುಳಿತಿದ್ದ ನನಗೂ ಕೇಳಿಸುವಷ್ಟು ಜೋರಾಗಿತ್ತು.
`ನಾಳೆಯೇ ಬಂದು ಅಮ್ಮನನ್ನು ನೋಡಿ ಹೋಗುತ್ತೇನೆ, ಒಂದು ದಿನದ ಶೂಟಿಂಗ್ ಹಾಳಾದರೂ ಚಿಂತೆಯಿಲ್ಲ’ ಅಂದಳು.
ಫರ್ನಾಂಡೆಸ್ ಕೂಡಾ ರಚನಾ ಮತ್ತು ಕಮಿಷನರ್ ಇಬ್ಬರನ್ನೂ ಭೇಟಿಮಾಡಲು ಆಸಕ್ತರಾಗಿದ್ದರು. ಅವರಾಗಲೇ ಇದಕ್ಕೆಲ್ಲಾ ವಿಶಾಲ್ ಕಪೂರನ ಆಶೀರ್ವಾದ ಪಡೆದಂತಿತ್ತು. ಇದರ ಮೇಲೆಯ ಅವರ ಧಾರಾವಾಹಿಯ ಒಂದು ಕಂತು ಮಾಡುವಂತಿದ್ದರೂ ನನಗೆ ಅಚ್ಚರಿಯಾಗುವಂತಿರಲಿಲ್ಲ. ಸದ್ಯಃ ನನ್ನನ್ನು ಅದರಲ್ಲಿ ಸೇರಿಸಿಕೊಳ್ಳದಿದ್ದರೆ ಸಾಕು! ಎಂದುಕೊಂಡೆ
ಮೃದುಲಾ ನಾಳೆ ಬಂದರೂ ಬರಬಹುದೆಂದು ಅವರಿಗೆ ತಿಳಿಸಿ ನಾವು ಅಲ್ಲಿಂದ ತೆರಳಿದ್ದೆವು. ಸುಮಾರು ರಾತ್ರಿ ಎಂಟಾಗುತಿತ್ತು.
ಅವಳ ಕಾರ್ ಹತ್ತಿ ಹೊರಡುವಾಗ. ಲೂಸಿ “ಇವತ್ತು ಪಂಜಾಬೀ ಢಾಬಾಗೆ ಹೋಗಲು ಸರಿಯಾದ ದಿನವೇ?” ಎಂದು ಹುಬ್ಬೇರಿಸಿದಳು, ನಾನು ಊಟ ಕೊಡಿಸುತ್ತೇನೋ ಎಂಬಂತೆ.
“ಇದರಲ್ಲಿ ನನ್ನ ಘನಂದಾರಿ ಸಾಧನೆಯೇನಿಲ್ಲ. ಹಾಗೆ ನೋಡಿದರೆ ಮೃದುಲಾಗೇ ಈ ಊಟದ ಬಿಲ್ ಸಲ್ಲಬೇಕು” ಎಂದೆ ಮೊಂಡಾಟ ಮಾಡುತ್ತಾ.
“ಊಟದ ಬಿಲ್ ಮೃದುಲಾ ಲಾಯರ್ ಕೊಡುತ್ತಾಳಂತೆ. ಆದರೆ ಟಿಪ್ಸ್ ಆದರೂ ನೀವು ಕೊಡುವಿರಾ, ಜಿಪುಣ ಮಹಾಶಯರೇ?” ಎಂದು ಚೇಡಿಸಿದಳು.
ಇವಳು ಹೇಳುತ್ತಿದ್ದ ಷೇರ್-ಏ-ಪಂಜಾಬಿ ಢಾಬಾ ಊರಿನ ಹೆದ್ದಾರಿಯಿಂದ ಅನತಿ ದೂರದಲ್ಲಿತ್ತು. ಒಳಹೊರಗೂ ಹಳ್ಳಿಮನೆಯ ಶೈಲಿಯಲ್ಲಿ ಅಲಂಕರಿಸಿತ್ತು.
ಊಟ ಆರ್ಡರ್ ತೆಗೆದುಕೊಳ್ಳಲು ಬಂದ ಸರದಾರ್ಜೀಗೆ ಲೂಸಿಯೇ ಬಟರ್ ನಾನ್, ಎರಡು ತರಹ ಕರ್ರಿ, ಘೀ ರೈಸ್, ಲಸ್ಸಿ ಮುಂತಾದ ಆರ್ಡರನ್ನು ಪಟಪಟನೆ ಇತ್ತಳು. “ನಿಮ್ಮ ಸೆಲೆಕ್ಶನ್ ಚೆನ್ನಾಗಿದೆ. ಇಂಥ ಊಟ ಮಾಡಿದ ಮೇಲೆ ನೀವು ಮಾತಾಡುವುದಕ್ಕೆ ಆಗಲ್ಲಾ ನೋಡಿ!” ಎಂದು ಆ ಸರದಾರ್ಜಿ ವೈಟರ್ ಅವಳನ್ನು ಉಬ್ಬಿಸಿದ.
“ಮನಮೋಹನ್ ಸಿಂಗ್ ತರಹವೆ?” ಎಂದೆ, ನಮ್ಮ ಮಾಜಿ ಪ್ರಧಾನಿಯ ಮೌನ ನಡವಳಿಕೆಯನ್ನು ನೆನಪಿಸಿಕೊಳ್ಳುತ್ತಾ.
ಸರದಾರ್ಜಿಗೆ ಆ ಜೋಕ್ ಅರ್ಥವಾಗಲಿಲ್ಲವೇನೋ; ವಿಚಿತ್ರವಾಗಿ ನೋಡಿ ಹೋದ.
ಅದಕ್ಕೆ ಲೂಸಿ ನನ್ನ ಮುಖ ನೊಡಿ ಮುಸಿಮುಸಿ ನಕ್ಕಳು.
“ನಿಮ್ಮ ಸೆನ್ಸ್ ಆಫ್ ಹ್ಯೂಮರ್ ಮತ್ತೆ ಫೈಲಾಯಿತು!” ಎಂದು ಅಣಕಿಸಿದಳು.
“ನನ್ನ `ಸೆನ್ಸ್ ಆಫ್ ಲವ್’ ಸೋಲುವುದಿಲ್ಲ ತಾನೆ?” ಎಂದೆ ಆತಂಕವಾದವನಂತೆ.
“ಅದು ಈ ಕೇಸ್ ಮುಗಿದ ಮೇಲೆ ಹೇಳುತ್ತೇನೆ!” ಎಂದಳು. ಅವಳದು ಮೊದಲೇ ಕೆಂಚ ಆಂಗ್ಲೋ ಇಂಡಿಯನ್ ಮುಖ. ನಾಚಿಕೆ ಮತ್ತು ಮನದ ತುಮುಲವೂ ಸೇರಿ ಆ ಮುಖ ಇನ್ನೂ ಹೆಚ್ಚು ಕೆಂಪೇರಿತ್ತು. ನನಗೆ ಅದಕ್ಕಿಂತ ಹೆಚ್ಚಿನ ಉತ್ತರ ಬೇಕಿರಲಿಲ್ಲ.
ಸೊಗಸಾದ ಊಟ ಮತ್ತು ನಮ್ಮ ಉಲ್ಲಾಸದ ಸಂಭಾಷಣೆಯಲ್ಲಿ ಸ್ವಲ್ಪ ಈ ಕೇಸಿನ ಒತ್ತಡದಿಂದ ಅಲ್ಪ ವಿರಾಮ ಸಿಕ್ಕಿದಂತಿತ್ತು.
ಆದರೆ ಮರಳಿ ಹೊರಟಾಗ ಲೂಸಿಯ ಮೊಬೈಲ್ಫೋನ್ ರಿಂಗಾಯ್ತು. ಮೃದುಲಾ ನಾಳೆ ಬೆಳಗ್ಗೆ ಫರ್ನಾಂಡೆಸ್ ಜತೆ ಇಲ್ಲಿಗೆ ಬರುವುದನ್ನು ಹೇಳಲು ಕರೆ ಮಾಡಿದ್ದರು.
ಲೂಸಿ ನನ್ನತ್ತ ತಿರುಗಿ, “ಆದ್ದರಿಂದ ನಾಳೆ ನಾನು ಅವರ ಜತೆ ಬಹಳ ಬಿಝಿಯಾಗಿರುತ್ತೇನೆ. ನೀವು?” ಎಂದು ರಾಗವೆತ್ತಿದಳು.
“ನಮ್ಮಂತಹ ಪತ್ತೇದಾದರರಿಗೆ ಸಮಯವೆಲ್ಲಿರುತ್ತದೆ? ನಾನೂ ಬಿಝಿಯೆ!” ಎಂದು ಹೆಗ್ಗಳಿಕೆಯ ಮಾತಾಡಿದೆ.
ಆದರೆ ಎಷ್ಟು ಬಿಝಿಯಾಗಿಬಿಡುತ್ತೇನೆ ಎಂಬ ಅರಿವಿರಲಿಲ್ಲ ಆಗ ನನಗೆ.
(ಸಶೇಷ)