೧. ಅಂತ್ಯ
ಪ್ರೊಫೆಸರ್ ಸುದರ್ಶನ್ ಹಲವಾರು ವರ್ಷಗಳಿಂದ ಕಾಲಸಿದ್ಧಾಂತದ ಬಗ್ಗೆ ಸಂಶೋಧನೆ ನಡೆಸುತ್ತಿದ್ದರು.
“ನಾನು ಕಾಲದ ಕುರಿತಂತೆ ಬಹಳ ಪ್ರಮುಖ ವಿಷಯವೊಂದನ್ನು ಕಂಡುಹಿಡಿದಿದ್ದೇನೆ” – ಅವರು ಒಂದು ದಿನ ತಮ್ಮ ಮಗಳೊಂದಿಗೆ ನುಡಿದರು. “ಕಾಲ ಎಂಬುದು ಒಂದು ಕಾರ್ಯಕ್ಷೇತ್ರ. ನಾನು ಕಂಡುಹಿಡಿದಿರುವ ಈ ಯಂತ್ರವು ಕಾಲವನ್ನು ಹಿಂದಕ್ಕೆ ತಿರುಗಿಸುವ ಶಕ್ತಿ ಪಡೆದಿದೆ.”
ಯಂತ್ರದ ಗುಂಡಿಯೊಂದನ್ನು ಅದುಮುತ್ತಾ ಅವರು ಮಾತು ಮುಂದುವರಿಸಿದರು – “ಈಗ ಕಾಲವು ಹಿಂದಕ್ಕೆ ಚಲಿಸಲಿದೆ….”
“ಚಲಿಸಲಿದೆ….. ಹಿಂದಕ್ಕೆ ಕಾಲವು ಈಗ” ಮುಂದುವರಿಸಿದರು – ಮಾತು ಅವರು ಅದುಮುತ್ತಾ ಗುಂಡಿಯೊಂದನ್ನು ಯಂತ್ರದ “ಪಡೆದಿದೆ. ಶಕ್ತಿ ತಿರುಗಿಸುವ ಹಿಂದಕ್ಕೆ ಕಾಲವನ್ನು ಯಂತ್ರವು ಈ ಕಂಡುಹಿಡಿದಿರುವ ನಾನು ಕಾರ್ಯಕ್ಷೇತ್ರ. ಒಂದು ಎಂಬುದು ಕಾಲ” ನುಡಿದರು. ಮಗಳೊಂದಿಗೆ ತಮ್ಮ ದಿನ ಒಂದು ಅವರು – “ಹಿಡಿದಿದ್ದೇನೆ ಕಂಡು ವಿಷಯವೊಂದನ್ನು ಪ್ರಮುಖ ಬಹಳ ಕುರಿತಂತೆ ಕಾಲದ ನಾನು”
೨. ಉತ್ತರ
ಸುದರ್ಶನರು ಕೊನೆಯ ಸಂಪರ್ಕವನ್ನು ಚಿನ್ನದಿಂದ ಸೋಲ್ಡರಿಂಗ್ ಮಾಡಿ ಜೋಡಿಸಿದರು. ಹಲವಾರು ಕ್ಯಾಮೆರಗಳು ಅವರ ಕಾರ್ಯವನ್ನು ಸೆರೆಹಿಡಿದವು. ಆ ಚಿತ್ರಗಳು ಬ್ರಹ್ಮಾಂಡದುದ್ದಕ್ಕೂ ಪ್ರಸಾರವಾದವು.
ತಮ್ಮ ಕಾರ್ಯ ಮುಗಿದ ಬಳಿಕ ಸಹಾಯಕ ರಜನೀಶ್ನತ್ತ ತಿರುಗಿ ಎಲ್ಲ ಸರಿಯಾಯಿತು ಎಂಬಂತೆ ತಲೆಯಾಡಿಸಿದರು. ಬಳಿಕ ಅಲ್ಲಿಂದ ತುಸುದೂರದ ಸ್ವಿಚ್ ಬಳಿ ಹೋದರು. ಸ್ವಿಚ್ ಅದುಮುವುದೊಂದೇ ಬಾಕಿ, ಅವರ ಯೋಜನೆಯು ಕಾರ್ಯಾರಂಭಗೊಳ್ಳಲು. ಅವರು ಸ್ವಿಚ್ ಅದುಮಿದರೆ ಬ್ರಹ್ಮಾಂಡದಲ್ಲಿ ಜನವಸತಿಯಿರುವ ೯೬ ಬಿಲಿಯ ಗ್ರಹಗಳಲ್ಲೆಲ್ಲ ನಿಯೋಜಿಸಿರುವ ಕಂಪ್ಯೂಟರ್ಗಳು ಸುದರ್ಶನ್ ಇಲ್ಲಿ ನಿರ್ಮಿಸಿರುವ ಸೂಪರ್ಕಂಪ್ಯೂಟರ್ನೊಂದಿಗೆ ಸಂಪರ್ಕ ಸಾಧಿಸಲಿವೆ. ಈ ಸೂಪರ್ ಕಂಪ್ಯೂಟರ್ ಇಡೀ ಗೆಲಾಕ್ಸಿಯ ಜ್ಞಾನವನ್ನೆಲ್ಲ ತನ್ನಲ್ಲಿ ಅಡಕಗೊಳಿಸಲಿದೆ.
ಟಿವಿಯನ್ನು ವೀಕ್ಷಿಸುತ್ತಿರುವ ಗೆಲಾಕ್ಸಿಯ ಅಸಂಖ್ಯಾತ ಜೀವಿಗಳನ್ನು ಉದ್ದೇಶಿಸಿ ಸುದರ್ಶನ್ ಸಂಕ್ಷಿಪ್ತವಾಗಿ ಮಾತನಾಡಿದರು. ಬಳಿಕ ಸ್ವಿಚ್ ಆನ್ ಮಾಡಿದರು. ಸೂಪರ್ ಕಂಪ್ಯೂಟರ್ ಗುರ್ರೆಂದು ಸದ್ದು ಮಾಡುತ್ತಾ ೯೬ ಬಿಲಿಯ ಗ್ರಹಗಳಿಂದ ಬಂದ ಜ್ಞಾನವನ್ನೆಲ್ಲ ಹೀರತೊಡಗಿತು.
ಸುದರ್ಶನ್ ರಜನೀಶ್ರತ್ತ ತಿರುಗಿದರು. “ಮೊದಲ ಪ್ರಶ್ನೆ ಕೇಳುವ ಅವಕಾಶ ನಿನಗೆ ನೀಡುತ್ತಿದ್ದೇನೆ.”
“ಥ್ಯಾಂಕ್ಯೂ” ರಜನೀಶ್ ನುಡಿದರು. “ಯಾವುದೇ ಸೈಬರ್ನೆಟಿಕ್ಸ್ ಸೂಪರ್ಕಂಪ್ಯೂಟರ್ ಈವರೆಗೆ ಉತ್ತರ ನೀಡಲು ಅಸಮರ್ಥವಾದಂತಹ ಪ್ರಶ್ನೆಯನ್ನೆ ಕೇಳುತ್ತೇನೆ.”
ಬಳಿಕ ರಜನೀಶ್ ಸೂಪರ್ಕಂಪ್ಯೂಟರ್ನತ್ತ ತಿರುಗಿ ಪ್ರಶ್ನಿಸಿದರು – “ದೇವರು ಇದ್ದಾನೆಯೆ?”
ಒಂದರೆಕ್ಷಣವೂ ತಡಮಾಡದೆ ಸೂಪರ್ಕಂಪ್ಯೂಟರ್ ಉತ್ತರಿಸಿತು “ಹೌದು. ಈಗ ದೇವರು ಇದ್ದಾನೆ.”
ಸುದರ್ಶನ್ರ ಮುಖದಲ್ಲಿ ಹಠಾತ್ತನೆ ಭೀತಿ ಕವಿಯಿತು. ತಕ್ಷಣವೆ ಸ್ವಿಚ್ ಆಫ್ ಮಾಡಲು ಅವರು ಧಾವಿಸಿದರು. ಆದರೆ ಅಷ್ಟರಲ್ಲಿ ನೀಲಾಕಾಶದಿಂದ ಮಿಂಚೊಂದು ಅವರಿಗೆ ಬಡಿಯಿತು. ಮುಂದಿನ ಕ್ಷಣದಲ್ಲಿ ಅವರು ಹಾಗೂ ಆ ಸ್ವಿಚ್ ಕರಟಿ ಹೋಯಿತು.
(ಆಧಾರ: ಫ್ರೆಡ್ರಿಕ್ ಬ್ರೌನ್ ಅವರ ಪುಟ್ಟ ಕಥೆಗಳು)