ಅಕ್ರಮವನ್ನು ಪ್ರಶ್ನಿಸಿ ೨೦೧೨ರಲ್ಲಿ ಸುಬ್ರಹ್ಮಣ್ಯನ್ ಸ್ವಾಮಿ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದಾಗ ಅಧಿಕಾರದಲ್ಲಿದ್ದುದು ಸೋನಿಯಾ-ನಿಯಂತ್ರಿತ ಯು.ಪಿ.ಎ. ಸರ್ಕಾರ. ಆದರೂ ನ್ಯಾಯಾಲಯವು ಪ್ರಕರಣವನ್ನು ವಿಚಾರಣೆಗೆ ಸ್ವೀಕರಿಸಿತು. ಪ್ರಬಲ ಆಧಾರ ಇದ್ದುದರಿಂದಲೇ ನ್ಯಾಯಾಲಯ ಹಾಗೆ ಮಾಡಿತು…
ಈಗಿನ ಆರೂಢ ಸರ್ಕಾರವು ಸೋನಿಯಾಗಾಂಧಿ ಪರಿವಾರದ ಮೇಲೆ ನಿರಾಧಾರವಾದ ಮತ್ತು ರಾಜಕೀಯೋದ್ದೇಶದ ಆಪಾದನೆಗಳನ್ನು ಮಾಡಿದೆ – ಎಂಬ ರೀತಿಯ ಕಾರಣಗಳನ್ನು ಮುಂದೊಡ್ಡಿ ಕಾಂಗ್ರೆಸ್ ಪಕ್ಷವು ಸಂಸತ್ತಿನ ಕಲಾಪಗಳನ್ನು ಆಗಗೊಡದೆ ನಾಡಿನ ಜನತೆಗೆ ಅಪಾರ ಹಾನಿಯನ್ನು ಎಸಗಿರುವುದನ್ನು ದೇಶವು ನೋಡಿದೆ. ಯಾವ ನ್ಯಾಯವ್ಯವಸ್ಥೆಯು ಕಾಂಗ್ರೆಸ್ ನೇತೃತ್ವದ ಒಕ್ಕೂಟವು ಅಧಿಕಾರದಲ್ಲಿ ಇದ್ದಾಗ ಅಮಲಿನಲ್ಲಿ ಇದ್ದಿತೋ ಈಗಲೂ ಜಾರಿಯಲ್ಲಿರುವುದು ಅದೇ ವ್ಯವಸ್ಥೆಯೇ. ಹೀಗಿರುವಾಗ ಸಂಸತ್ ಕಲಾಪಗಳಿಗೂ ನ್ಯಾಯಾಂಗೀಯ ಚರ್ಯೆಗಳಿಗೂ ಕಾಂಗ್ರೆಸ್ ಆಕ್ಷೇಪಿಸುವುದು ತಾರ್ಕಿಕವೆನಿಸದು. ತಮ್ಮ ಪಕ್ಷ ಅಧಿಕಾರದಲ್ಲಿದ್ದಾಗ ಒಂದು ನಿಯಮಾವಳಿ ಇರಲಿ, ತಾವು ಅಧಿಕಾರದಲ್ಲಿ ಇಲ್ಲದಾಗ ಬೇರೆ ನಿಯಮಾವಳಿ ಅನ್ವಯಿಸಲಿ – ಎಂಬ ನಿಲವು ನಗೆಪಾಟಲಷ್ಟೆ ಆದೀತು. ಕಾಂಗ್ರೆಸ್ ಪಕ್ಷ ತಾನು ಮಿಥ್ಯಾಪವಾದಕ್ಕೆ ಗುರಿಯಾಗಿರುವೆನೆಂದು ಹೇಳಿಕೊಂಡಿರುವ ಒಂದು ಪ್ರಕರಣ ‘ನ್ಯಾಷನಲ್ ಹೆರಾಲ್ಡ್’ ಪತ್ರಿಕೆಯ ವ್ಯವಹಾರಗಳಿಗೆ ಸಂಬಂಧಿಸಿದುದು. ಆ ಘೋಟಾಳದ ಆಳ-ನೀಳಗಳು ಸಾರ್ವಜನಿಕರಿಗೆ ಅರಿವಾಗುವುದು ಅವಶ್ಯವಿದೆ. ದೈತ್ಯಪ್ರಮಾಣದ ಭ್ರಷ್ಟಾಚಾರದಲ್ಲಿ ಸೋನಿಯಾಗಾಂಧಿ ಮತ್ತು ರಾಹುಲ್ಗಾಂಧಿ ನೇರವಾಗಿ ಭಾಗವಹಿಸಿರುವ ಈ ಹಗರಣ ಗಮನ ಸೆಳೆದಿರುವುದು ಈಗ್ಗೆ ನಾಲ್ಕು ವರ್ಷ ಹಿಂದೆ ಸುಬ್ರಹ್ಮಣ್ಯನ್ ಸ್ವಾಮಿ ಅವರು ದೆಹಲಿಯ ವಿಚಾರಣಾ ನ್ಯಾಯಾಲಯದಲ್ಲಿ ದಾಖಲೆ ಮಾಡಿದ್ದ ಮೊಕದ್ದಮೆಯು ಕಳೆದ ವರ್ಷ (೨೦೧೫) ಡಿಸೆಂಬರ್ ತಿಂಗಳ ಆರಂಭದಲ್ಲಿ ದೆಹಲಿಯ ಉಚ್ಚನ್ಯಾಯಾಲಯದ ಮುಂದೆ ಬಂದು ಸೋನಿಯಾಗಾಂಧಿ ಸಮನ್ಸ್ ರದ್ದತಿ ಕೋರಿ ಸಲ್ಲಿಸಿದ್ದ ಮೇಲ್ಮನವಿ ತಿರಸ್ಕೃತವಾದಾಗ.
ಈ ಪ್ರಕರಣದ ವಿವರಗಳು ಸ್ವಾರಸ್ಯಕರವಾಗಿವೆ. ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದ ಸನ್ನಿವೇಶದ ಕೃಪಾಛತ್ರದಡಿಯಲ್ಲಿ ಎಂಥೆಂಥ ಭ್ರಷ್ಟಾಚಾರಗಳು ನಿರ್ಭಿಡೆಯಾಗಿ ನಡೆದಿದ್ದವೆಂಬುದರ ಒಂದು ಕಣ್ಣುಕುಕ್ಕುವ ನಿದರ್ಶನ ‘ನ್ಯಾಷನಲ್ ಹೆರಾಲ್ಡ್’ ಪತ್ರಿಕೆಯದು. ಕಾಂಗ್ರೆಸಿಗಿದ್ದ ಪ್ರತಿಷ್ಠೆಯನ್ನು ಬಳಸಿಕೊಂಡು ಒಂದು ವಿಫಲ ಪತ್ರಿಕೆಯನ್ನು ಮುಂದಿರಿಸಿಕೊಂಡು. ಹೇಗೆ ಸೋನಿಯಾಗಾಂಧಿ ಪರಿವಾರ ಸಾವಿರಾರು ಕೋಟಿ ರೂಪಾಯಿ ಹಣವನ್ನು ದೋಚಿದೆ ಎಂಬುದು ಕೌತುಕಕರ. ‘ನಾಮದ ಬಲ’ ಬೆನ್ನಿಗಿದ್ದರೆ ಏನೇನೆಲ್ಲ ಮಾಡಿ ಜೀರ್ಣಿಸಿಕೊಳ್ಳಬಹುದು!
ಪ್ರಕರಣದ ವಿವರಾಂಶಗಳನ್ನು ನೋಡೋಣ.
ಎಂದೂ ಕುದುರದ ಪ್ರಸಾರ
ಪತ್ರಿಕಾ ಪ್ರಕಟಣೆಯು ಬೃಹದ್ ಉದ್ಯಮವಾಗಿ ಸ್ಫೋಟವಾಗಿರುವ ಈ ಯುಗದಲ್ಲಿಯೂ ಎಲ್ಲರ ನೆನಪಿನಿಂದ ಮಾಸಿಹೋಗಿರುವುದು ‘ನ್ಯಾಷನಲ್ ಹೆರಾಲ್ಡ್’ ದಿನಪತ್ರಿಕೆ. ಇತ್ತೀಚಿನವರಿಗಂತೂ ಹೆಚ್ಚಿನವರಿಗೆ ಅಂತಹದೊಂದು ಪತ್ರಿಕೆ ಇದ್ದಿತೆಂಬುದೂ ತಿಳಿದಿರಲಾರದು. ಆ ಪತ್ರಿಕಾಪರಿವಾರದಲ್ಲಿ ‘ನವಜೀವನ್’ ಎಂಬ ಹಿಂದೀ ಪತ್ರಿಕೆ ಮತ್ತು ‘ಕೌಮೀ ಆವಾಜ್’ ಎಂಬ ಉರ್ದು ಪತ್ರಿಕೆಯೂ ಇದ್ದವು. ತನ್ನ ೭೭ ವರ್ಷಗಳ ಇತಿಹಾಸದಲ್ಲಿ ಎಂದೂ ಗಣನೀಯ ಪ್ರಸಾರ ಪಡೆದಿರದಿದ್ದ ಈ ಪತ್ರಿಕಾಸಮೂಹವು ಸಾವಿರಾರು ಕೋಟಿ ರೂಪಾಯಿ ಆಸ್ತಿಯನ್ನು ಶೇಖರಿಸಿಕೊಂಡದ್ದು ಹೇಗೆಂಬುದು ಸ್ವಾರಸ್ಯಕರ.
ಸ್ವಾತಂತ್ರ್ಯ ಹೋರಾಟದ ದಿನಗಳಲ್ಲಿ ಹೋರಾಟದ ವಿವರಗಳನ್ನೂ ಸ್ವಾತಂತ್ರ್ಯಪರ ಸಂದೇಶವನ್ನೂ ದೇಶದ ಮೂಲೆಮೂಲೆಗಳಿಗೆ ಪ್ರಸಾರ ಮಾಡಲು ಬಳಕೆಯಾಗುತ್ತಿದ್ದ ಪ್ರಮುಖ ಮಾಧ್ಯಮವೆಂದರೆ ದೇಶೀಯ ಪತ್ರಿಕೆಗಳು. ಉತ್ತರಭಾರತದಲ್ಲಿ ಲಾಲಾ ಲಜಪತರಾಯ್ ಮೊದಲಾದವರೂ ದಕ್ಷಿಣಭಾರತದಲ್ಲಿ ಟಂಗುಟೂರಿ ಪ್ರಕಾಶಂ ಮೊದಲಾದವರೂ ಶಕ್ತಿಯುತವಾಗಿ ಬಳಸಿಕೊಂಡದ್ದು ಪತ್ರಿಕಾಮಾಧ್ಯಮವನ್ನು. ಆ ಸನ್ನಿವೇಶದಲ್ಲಿ ತಮ್ಮ ನಿಯಂತ್ರಣದ ಒಂದು ಪತ್ರಿಕಾಸಮೂಹ ಇರುವುದು ಅಪೇಕ್ಷಣೀಯವೆಂದು ಭಾವಿಸಿದ ಜವಾಹರಲಾಲ್ ನೆಹರು ೧೯೩೮ರಲ್ಲಿ ‘ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್’ (ಎ.ಜೆ.ಎಲ್.) ಎಂಬ ಹೆಸರಿನ ಸಂಸ್ಥೆಯನ್ನು ಸ್ಥಾಪಿಸಿದರು. ಅದರ ಮೂಲಕ ‘ನ್ಯಾಷನಲ್ ಹೆರಾಲ್ಡ್’ ಮತ್ತು ಸೋದರಪತ್ರಿಕೆಗಳ ಪ್ರಕಟಣೆ ಆರಂಭವಾಯಿತು. ಪತ್ರಿಕೆಯ ಮೂಲ ಉದ್ದೇಶ ಕಾಂಗ್ರೆಸಿನ ನೀತಿಗಳ ಮತ್ತು ನಡವಳಿಗಳ ಪ್ರಸಾರವೇ ಆದರೂ ಅದೇಕೋ ಕಾಂಗ್ರೆಸ್ ಪಕ್ಷ ಆ ಪತ್ರಿಕೆಯನ್ನು ತನ್ನ ಮುಖವಾಣಿಯೆಂದು ಪರಿಗಣಿಸಲೇ ಇಲ್ಲ. ಹೀಗೆ ಕ್ರಮೇಣ ‘ನ್ಯಾಷನಲ್ ಹೆರಾಲ್ಡ್’ ಜವಾಹರಲಾಲ್ ನೆಹರುರವರ ಪತ್ರಿಕೆಯೆಂಬ ಭಾವನೆಯೇ ಹರಡಿತು. ‘ನೆಹರು ಪತ್ರಿಕೆ’ ಎಂದೇ ಅದು ಎಲ್ಲೆಡೆ ವ್ಯವಹೃತವಾಯಿತು. ಆರಂಭದಿಂದ ಅದು ಎಂದೂ ಬಹುಪ್ರಸಾರ ಪತ್ರಿಕೆಯಾಗಲಿಲ್ಲ. ಆರಂಭವಾದ ನಾಲ್ಕನೇ ವರ್ಷದಲ್ಲಿಯೇ (೧೯೪೨) ಪತ್ರಿಕೆಯ ಪ್ರಕಟಣೆ ನಿಂತಿತು. ಅಲ್ಲಿಂದ ಮೂರು ವರ್ಷ ಕಾಲ ಅದು ಪ್ರಕಟಗೊಳ್ಳಲೇ ಇಲ್ಲ. ಆಗ ಸಂಪಾದಕರಾಗಿದ್ದ ಎಂ. ಚಲಪತಿರಾವ್ ‘ಹಿಂದುಸ್ತಾನ್ ಟೈಮ್ಸ್’ ಸೇರಿಕೊಂಡರು. ೧೯೪೫ರಲ್ಲಿ ಪತ್ರಿಕೆಯ ಪುನಃಪ್ರಕಟಣೆಯ ಯೋಜನೆಯಾದಾಗ ರಾವ್ ಅವರು ಮತ್ತೆ ಲಖ್ನೌವಿಗೆ ಬಂದು ಕಡಮೆ ಸಂಬಳಕ್ಕೆ ‘ನ್ಯಾಷನಲ್ ಹೆರಾಲ್ಡ್’ ಸಂಪಾದಕತ್ವ ವಹಿಸಿಕೊಂಡರು.
ಪ್ರಸಾರ ಶೂನ್ಯ; ಆಸ್ತಿ ಹೇರಳ
ಸ್ವಾತಂತ್ರ್ಯ ಬಂದು ಕಾಂಗ್ರೆಸ್ ಪಕ್ಷ ಗಾದಿಯನ್ನು ಹಿಡಿದ ಮೇಲೂ ‘ನ್ಯಾಷನಲ್ ಹೆರಾಲ್ಡ್’ ಪತ್ರಿಕೆಗೆ ಜನ ಒಲಿಯಲಿಲ್ಲ. ಆದರೆ ಸರ್ಕಾರದ ಪೋಷಣೆ ಧಾರಾಳವಾಗಿ ಲಭ್ಯವಿದ್ದುದರಿಂದ ಪತ್ರಿಕೆ ಸಾಗಿತ್ತು. ಅನ್ಯ ಪ್ರಮುಖ ಪತ್ರಿಕೆಗಳಿಗೆ ದೊರೆತಂತೆ ‘ನ್ಯಾಷನಲ್ ಹೆರಾಲ್ಡ್’ ಪತ್ರಿಕೆಗೂ ದೆಹಲಿಯಲ್ಲಿ ನಿವೇಶನ ಮತ್ತಿತರ ಸೌಕರ್ಯಗಳು ದೊರೆತವು. ೧೯೫೫ರಲ್ಲಿ ಎ.ಜೆ.ಎಲ್. ಸಂಸ್ಥೆಯ ಶೇರುಗಳನ್ನು ‘ಜನಹಿತ ಟ್ರಸ್ಟ್’ ಹೆಸರಿನ ‘ನಾನ್-ಪ್ರಾಫಿಟ್’ ಸಂಸ್ಥೆಗೆ ವರ್ಗಾಯಿಸಲಾಯಿತು. ಆ ವೇಳೆಗೇ ಎ.ಜೆ.ಎಲ್. ಸಂಸ್ಥೆಗೆ ಹಲವಾರು ನಗರಗಳಲ್ಲಿ ಆಸ್ತಿ ಶೇಖರಗೊಂಡಿತ್ತು – ಲಖ್ನೌ, ದೆಹಲಿ, ಮುಂಬಯಿ, ಪಟ್ನಾ, ಹರ್ಯಾಣ, ಮೊದಲಾದೆಡೆ. ಪತ್ರಿಕೆ ಮಾತ್ರ ಕುಂಟುತ್ತಲೇ ಸಾಗಿದ್ದು ೧೯೭೭ರಲ್ಲಿ ಕಾಂಗ್ರೆಸ್ ಪಕ್ಷ ಸೋತೊಡನೆ ಪತ್ರಿಕೆ ಅವಸಾನಗೊಂಡಿತು. ಅದಕ್ಕೆ ಮರುಜೀವ ಬಂದದ್ದು ೧೯೮೦ರಲ್ಲಿ ಇಂದಿರಾಗಾಂಧಿ ಮತ್ತೆ ಅಧಿಷ್ಠಿತರಾದಾಗಲೇ. ಪತ್ರಿಕೆಯ ಸಂಪಾದಕರಾಗಿ ನಿಯುಕ್ತರಾದ ಖುಶವಂತ್ಸಿಂಗ್ ಅವರೇ ಪ್ರಸಾರವೇ ಇಲ್ಲದ ಈ ಪತ್ರಿಕೆಗೆ ಇಷ್ಟೊಂದು ಆಸ್ತಿಯೂ ಸಂಪತ್ತೂ ಹೇಗೆ ಬಂದಿತು? ಎಂದು ಸೋಜಿಗ ವ್ಯಕ್ತಪಡಿಸಿದ್ದರು.
ಇಂದಿರಾಗಾಂಧಿ ಆಡಳಿತದಲ್ಲಿ ಆಕೆಯ ಆಪ್ತರಾದ ಮಹಮ್ಮದ್ ಯೂನುಸ್, ಆರ್.ಕೆ. ಧವನ್ ಮೊದಲಾದವರು ಪತ್ರಿಕೆಯ ವ್ಯವಹಾರದ ಉಸ್ತುವಾರಿ ನೋಡುತ್ತಿದ್ದುದರಿಂದ ಆಸ್ತಿ ಸೇರುತ್ತಹೋದುದು ಆಶ್ಚರ್ಯವೇನಲ್ಲ. ಪತ್ರಿಕೆ ಪ್ರಕಟಗೊಳ್ಳದಿದ್ದರೂ ಎಷ್ಟೋ ಕಡೆಗಳಲ್ಲಿ ಅದರ ನಿವೇಶನಗಳಲ್ಲಿ ವ್ಯಾಪಾರೀ ಸಂಕೀರ್ಣಗಳನ್ನು ನಿರ್ಮಿಸಿ ಆದಾಯ ಗಳಿಸಲಾಗುತ್ತಿತ್ತು.
ಈ ಸೌಲಭ್ಯಗಳೆಲ್ಲ ಇದ್ದರೂ ಪತ್ರಿಕೆಯ ಪ್ರಸಾರ ಎಂದೂ ೫,೦೦೦ ದಾಟಲಿಲ್ಲ. ಆ ‘ನಾಮ್ ಕೇ ವಾಸ್ತೇ’ ಪತ್ರಿಕೆ ಮುದ್ರಣವಾಗುತ್ತಿದ್ದದ್ದೂ ಹಳೆಯ ಕಾಲದ ತಾಂತ್ರಿಕತೆಯಲ್ಲಿ.
೨೦೦೮ರ ವೇಳೆಗೆ ಪತ್ರಿಕೆ ಹೆಸರಿಗಾಗಿಯೂ ಹೊರಬರದೆ ನಿಂತಿತು. ಆ ವೇಳೆಗೆ ಪತ್ರಿಕೆಗೆ ರೂ. ೯೦ ಕೋಟಿಯಷ್ಟು ಸಾಲ ಆಗಿತ್ತು (ಅದು ಬಡ್ಡಿರಹಿತ ಸಾಲ). ಸಾಲ ನೀಡಿದ್ದುದು ಕಾಂಗ್ರೆಸ್ ಪಾರ್ಟಿ. ಹೇರಳ ಆಸ್ತಿ ಇದ್ದುದರಿಂದ ಈ ಸಾಲದ ತೀರುವೆ ಕಷ್ಟದ ಕೆಲಸವೇನಾಗಿರಲಿಲ್ಲ. ಆದರೆ ಹಾಗೆ ಮಾಡುವುದಕ್ಕೆ ಬದಲಾಗಿ ಸಂಸ್ಥೆಯ ಆಸ್ತಿಯನ್ನು ಸ್ವಂತ ಹೆಸರಿಗೆ ಮಾಡಿಕೊಳ್ಳುವ ಪ್ರಯತ್ನ ಉಪಕ್ರಮವಾಯಿತು. ಸಂಸ್ಥೆಯ ಆಸ್ತಿಯನ್ನು ‘ಯಂಗ್ ಇಂಡಿಯನ್’ ಎಂಬ ಮತ್ತೊಂದು ಸಂಸ್ಥೆಗೆ ಹಸ್ತಾಂತರಿಸಲಾಯಿತು. (ಈ ವ್ಯವಹಾರಗಳಲ್ಲಿ ಸರ್ವಸದಸ್ಯಸಭೆ ಮಂಜೂರಾತಿ ಮೊದಲಾದ ಕ್ರಮಗಳನ್ನು ಅನುಸರಿಸಲಾಗಿತ್ತೋ ಇಲ್ಲವೋ ಸಂದೇಹಾಸ್ಪದ). ಈ ಹೊಸ ಸಂಸ್ಥೆಯಲ್ಲಿ ತಲಾ ಶೇ. ೩೮ರಷ್ಟು ಪಾಲನ್ನು ಪಡೆದಿದ್ದವರು ಸೋನಿಯಾಗಾಂಧಿ ಮತ್ತು ರಾಹುಲ್ಗಾಂಧಿ. ಉಳಿದ ಶೇ. ೨೪ರಷ್ಟು ಸೋನಿಯಾರವರ ರಾಜಕೀಯ ನಿಕಟವರ್ತಿಗಳ ಹೆಸರಿನಲ್ಲಿ ಇದ್ದಿತು. ಕಂಪೆನಿಯನ್ನು ಕೊಳ್ಳಲು ‘ಯಂಗ್ ಇಂಡಿಯನ್’ ಸಂಸ್ಥೆ ಹೂಡಿದ್ದುದು ರೂ. ೫೦ ಲಕ್ಷ ಮಾತ್ರ.
ಹೀಗೆ ವಹಿವಾಟು ಹೊಸ ಮಾಲಿಕತ್ವಕ್ಕೆ ಬಂದೊಡನೆ ಕಾಂಗ್ರೆಸ್ ಪಾರ್ಟಿ ತಾನು ನೀಡಿದ್ದ ರೂ. ೯೦ ಕೋಟಿ ಸಾಲವನ್ನು ಪತ್ರಿಕೆ ಹಿಂದಿರುಗಿಸಬೇಕಾಗಿಲ್ಲ ಎಂದು ತೀರ್ಮಾನ ಹೇಳಿತು.
ಹೀಗೆ ಕಡಮೆಯೆಂದರೆ ರೂ. ೨೦೦೦ ಕೋಟಿಗೂ ಮಿಗಿಲಾದ ಆಸ್ತಿಯನ್ನು ಸೋನಿಯಾ ಪರಿವಾರ ಕೇವಲ ರೂ. ೫೦ ಲಕ್ಷದ ಲಾಗೋಡಿನಿಂದ ಕೈವಶ ಮಾಡಿಕೊಂಡಿತು.
ಈಗ ನ್ಯಾಯಾಲಯದಲ್ಲಿ…
ಈ ಅಕ್ರಮವನ್ನು ಪ್ರಶ್ನಿಸಿಯೇ ೨೦೧೨ರಲ್ಲಿ ಸುಬ್ರಹ್ಮಣ್ಯನ್ ಸ್ವಾಮಿ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದುದು. ಆಗ ಅಧಿಕಾರದಲ್ಲಿದ್ದುದು ಸೋನಿಯಾ-ನಿಯಂತ್ರಿತ ಯು.ಪಿ.ಎ. ಸರ್ಕಾರ. ಆದರೂ ನ್ಯಾಯಾಲಯವು ಪ್ರಕರಣವನ್ನು ವಿಚಾರಣೆಗೆ ಸ್ವೀಕರಿಸಿತು, ಅದಕ್ಕೆ ಪ್ರಬಲ ಆಧಾರ ಇದ್ದುದರಿಂದ.
ಸೋನಿಯಾಗಾಂಧಿ ಮತ್ತು ರಾಹುಲ್ಗಾಂಧಿ ಅಲ್ಲದೆ ಇತರ ಪ್ರತಿಷ್ಠಿತರೂ ಆಪಾದಿತರ ಪಟ್ಟಿಯಲ್ಲಿ ಇದ್ದಾರೆ: ಸುಮನ್ ದುಬೇ, ಮೋತಿಲಾಲ್ ವೋರಾ, ಆಸ್ಕರ್ ಫೆರ್ನಾಂಡೆಸ್ ಮತ್ತು ಸ್ಯಾಮ್ ಪಿತ್ರೋದಾ.
೨೦೧೪ರಲ್ಲಿ ಸೋನಿಯಾಗಾಂಧಿ ಅಧಿಕಾರಚ್ಯುತರಾದರು. ೨೦೧೫ರಲ್ಲಿ ನ್ಯಾಯಾಲಯವು ಸಮನ್ಸ್ ಜಾರಿಮಾಡಿದಾಗ ಸೋನಿಯಾಗಾಂಧಿ ನಿರ್ವಾಹವಿಲ್ಲದೆ ಹಾಜರಾಗಿ ಜಾಮೀನು ಪಡೆಯಬೇಕಾಯಿತು. ದೊಡ್ಡ ಪ್ರಮಾಣದ ಅಕ್ರಮ ಆಸ್ತಿಸಂಗ್ರಹಣೆ ನಡೆದಿರುವ ಸಾಧ್ಯತೆಯನ್ನು ನ್ಯಾಯಾಲಯ ಒಪ್ಪಿದಂತೆ ಆಗಿದೆ.
ಸೋನಿಯಾ ಮತ್ತು ರಾಹುಲ್ ಪರವಾಗಿ ಜುಜುಬಿ ಕಾಂಗ್ರೆಸ್ ರಾಜಕಾರಣಿಗಳು ಮಾಡಿರುವ ಮಂಡನೆಗಳು ಎಷ್ಟು ಮಾತ್ರವೂ ಹುರುಳಿಲ್ಲದವು. ಇನ್ನು ‘ಇದೆಲ್ಲ ಕಾಂಗ್ರೆಸ್ ಪಕ್ಷದ ಆಂತರಿಕ ವ್ಯವಹಾರ’ ಇತ್ಯಾದಿ ಮಂಡನೆಗಳಂತೂ ಅತ್ಯಂತ ಬಾಲಿಶ ಎನ್ನದೆ ವಿಧಿಯಿಲ್ಲ.
ಪತ್ರಿಕೆಗಾಗಿ ಎಂದು ನೀಡಿದ ನಿವೇಶನಗಳನ್ನು ಲಾಭಗಳಿಕೆಗಾಗಿ ಬಳಸಿಕೊಂಡಿರುವುದು ಮೊದಲಾದ ಸಂಗತಿಗಳೆಲ್ಲ ಈಗ ಜಾಹೀರಾಗಿವೆ. ಪತ್ರಿಕೆಗಾಗಿ ಎಂದೇ ನೀಡಲಾಗಿದ್ದ ನಿವೇಶನಗಳನ್ನು ಸರ್ಕಾರ ಹಿಂದಕ್ಕೆ ಪಡೆಯುವುದು ಅನಿವಾರ್ಯವಾದೀತು.
ಈ ಪ್ರಕರಣದಲ್ಲಿ ಅನೇಕ ಜಟಿಲತೆಗಳಿವೆ. ಇಂದಿರಾಗಾಂಧಿ ಹೇಗೆ ನೆಹರು ಷೇರುಗಳಿಗೆ ವಾರಸುದಾರರಾದರು, ಸೋನಿಯಾ ಮತ್ತು ರಾಹುಲ್ ಹೇಗೆ ನೆಹರು-ಇಂದಿರಾಗಾಂಧಿ ಷೇರುಗಳಿಗೆ ವಾರಸುದಾರರಾದರು, ಇಂದಿರಾಗಾಂಧಿ ಈ ಆಶಯದ ಉಯಿಲು ಬರೆದಿದ್ದರೇ, ಬೇರೆ ಯಾರೂ ಕ್ಲೇಮುದಾರರು ಇರಲಿಲ್ಲವೆ – ಎಂದೆಲ್ಲ ಪ್ರಶ್ನೆಗಳಿಗೆ ಸಮಾಧಾನ ನೀಡಬೇಕಾಗುತ್ತದೆ. ಸೋನಿಯಾರವರು ಕಂಪೆನಿಯ ರಚನೆಯಲ್ಲಿ ಮಾಡಿರುವ ಮಾರ್ಪಾಡುಗಳನ್ನು ವಿಧ್ಯುಕ್ತ ಷೇರುದಾರರು ಪ್ರಶ್ನಿಸಬಹುದಾಗಿದೆ. ತಮ್ಮ ನಡವಳಿಗಳಿಗೆ ಸಿಂಧುತ್ವ ಕಲ್ಪಿಸಲು ಸೋನಿಯಾ ಆಯ್ದ ಕೆಲವರನ್ನೇ ಕರೆದು ೨೦೧೬ ಜನವರಿ ೨೩ರಂದು ನಡೆಸಿದ ಸದಸ್ಯಸಭೆಯ ವಿಧಿವತ್ತತೆಯೂ ಶಂಕಾಸ್ಪದವಿದೆ. ಪತ್ರಿಕೆಗಳನ್ನು ಪುನರಾರಂಭಿಸುವೆವೆಂದು ಸೋನಿಯಾ ಬಣ ವ್ಯಕ್ತಪಡಿಸಿರುವ ನಿರ್ಧಾರವೂ ಅವರನ್ನು ಆರೋಪಗಳಿಂದ ಪಾರುಮಾಡಲಾರದು.
ಮೇಲಣ ನಡಾವಳಿಗಳನ್ನು ಪರಿಶೀಲಿಸಿದಲ್ಲಿ ಸೋನಿಯಾ ಪರಿವಾರದ ಮೇಲೆ ಈ ಪ್ರಕರಣದಲ್ಲಿ ರಾಜಕೀಯೋದ್ದೇಶದ ಆರೋಪಗಳನ್ನು ಮಾಡಲಾಗಿದೆಯೆಂಬ ಕಾಂಗ್ರೆಸ್ ಪ್ರಚಾರ ಹಾಸ್ಯಾಸ್ಪದವೆನಿಸುತ್ತದೆ.
ಸ್ಪಷ್ಟವಾಗಿ ನ್ಯಾಯಾಲಯಾಂಗಣದಲ್ಲಿ ಮಾತ್ರ ವಿಚಾರಣೆಗೆ ಒಳಪಡಬಹುದಾದ ಪ್ರಕರಣವನ್ನು ಕಾಂಗ್ರೆಸ್ ಪದಾತಿದಳಗಳು ಬೀದಿಕೂಗಾಟಗಳಿಗೆ ವಸ್ತುವನ್ನಾಗಿ ಮಾಡಿಕೊಳ್ಳುವುದನ್ನು ಸಾರ್ವಜನಿಕರು ಕ್ಷಮಿಸಲಾರರು.