ತೆಲುಗು ಮೂಲ: ಕಸ್ತೂರಿ ಮುರಳೀಕೃಷ್ಣ
ಕನ್ನಡಕ್ಕೆ : ಎಸ್.ಆರ್.ಆರ್.
ನಮ್ಮ ದೇಶವು ಬೆಳೆದಿರುವುದೇ ಧರ್ಮದ ಆಧಾರದ ಮೇಲೆ. ಎಲ್ಲಿಯೊ ಒಬ್ಬ ರಾಜನು ಮಾರ್ಗಚ್ಯುತನಾದರೆ ಇನ್ನೆಲ್ಲಿಯೊ ಧರ್ಮರಕ್ಷಕನೊಬ್ಬನು ಉದಿಸಿರುತ್ತಾನೆ.
ಸೂರ್ಯಕಿರಣಗಳು ಕಶ್ಮೀರ ರಾಜಧಾನಿಯ ಅರಮನೆಯ ತಲೆಬಾಗಿಲಿಗೆ ಮಾಣಿಕ್ಯತೋರಣವನ್ನು ನಿರ್ಮಿಸುತ್ತಿದ್ದ ಸಮಯ ಅದು. ಎಲ್ಲರೂ ಸೂರ್ಯಕಿರಣಕಾಂತಿಯಲ್ಲಿ ಮಿಂದು ತಮಸ್ಸನ್ನು ನೀಗಿಕೊಂಡು ಶುಭ್ರವಸ್ತ್ರಧಾರಿಗಳಾಗಿ ಅಂದಿನ ದಿನಚರಿಗಳಿಗೆ ಸಜ್ಜಾಗುತ್ತಿದ್ದರು.
ಅಂದೂ ಎಂದಿನಂತೆ ಸೂರ್ಯೋದಯವಾದ ಅಲ್ಪಸಮಯದಲ್ಲಿ ಜಯದೇವಪಂಡಿತನು ಕೋಟೆಯ ಬಾಗಿಲು ತೆಗೆಯುವ ವೇಳೆಗೇ ಕೋಟೆಯ ಮುಂಭಾಗದಲ್ಲಿ ಕುಳಿತುಕೊಂಡ. ಜಯದೇವನಂತೆ ಇತರ ಹಲವರೂ ರಾಜದರ್ಶನಕ್ಕಾಗಿ ಒಂದು ವಾರದಿಂದ ಕಾಯುತ್ತಿದ್ದರು.
ಇದುವರೆಗೆ ಯಾವ ರಾಜದೂತರೂ ಜಯದೇವನು ಬಂದಿದ್ದುದೇಕೆಂದು ವಿಚಾರಿಸಿರಲಿಲ್ಲ. ಜಯದೇವನಿಗಿಂತ ಮೊದಲೇ ಬಂದು ಕಾಯುತ್ತಿದ್ದ ಹಲವರೂ ಯಾವುದೋ ಸಮಸ್ಯೆಗಳನ್ನು ರಾಜನಲ್ಲಿ ಬಿನ್ನವಿಸಬಯಸಿದ್ದರು.
ಕಡೆಗೆ ಜಯದೇವನೇ ಮುಂದಾಗಿ ರಾಜಭಟರಲ್ಲಿ ವಿನಂತಿ ಮಾಡಿದ:
ನಾನು ಜಯದೇವಪಂಡಿತ. ರಾಜದರ್ಶನಕ್ಕಾಗಿ ತ್ರಿಭುವನಪುರದಿಂದ ಬಂದಿದ್ದೇನೆ. ದಯವಿಟ್ಟು ಒಳಕ್ಕೆ ಹೋಗಲು ಅನುಮತಿ ನೀಡಿರಿ.
ಆದರೆ ರಾಜಭಟರು ನೀನು ತ್ರಿಭುವನಪುರದ ಜಯದೇವಪಂಡಿತನೆಂದು ನಮಗೆ ಹೇಗೆ ತಿಳಿಯಬೇಕು? ಅದನ್ನು ದೃಢಪಡಿಸುವ ಪತ್ರವನ್ನು ನಿನ್ನ ನಗರಾಧಿಕಾರಿಯಿಂದ ತೆಗೆದುಕೊಂಡು ಬಾ. ಆಗ ರಾಜದರ್ಶನಕ್ಕೆ ಅವಕಾಶವಾದೀತು ಎಂದರು.
ಜಯದೇವನು ವಿಸ್ಮಯದಿಂದ ಹೇಳಿದ: ನಾನು ಒಂದು ವಾರಕಾಲ ಪ್ರಯಾಣ ಮಾಡಿ ರಾಜಧಾನಿಗೆ ಬಂದಿದ್ದೇನೆ. ಮತ್ತೆ ತ್ರಿಭುವನಪುರಕ್ಕೆ ಹೋಗಬೇಕೆಂದರೆ ಒಂದು ವಾರ ಪ್ರಯಾಣ ಮಾಡಬೇಕಾಗುತ್ತದೆ. ಇಷ್ಟಾಗಿ ಯಾರೋ ಒಬ್ಬರು ನಾನು ಇಂತಹವನೆಂದು ಹೇಳಿಕೆ ಕೊಡುವುದರಲ್ಲಿ ಏನು ಮಹತ್ತ್ವ ಇದ್ದೀತು?
ಅದೆಲ್ಲ ನನಗೆ ತಿಳಿಯದು. ಇಲ್ಲಿಯ ಪದ್ಧತಿ ಇರುವುದು ಹೀಗೆ. ಪರಿಚಯಪತ್ರ ಇಲ್ಲದವರಿಗೆ ರಾಜದರ್ಶನಕ್ಕೆ ಅವಕಾಶ ದೊರೆಯದು.
ಜಯದೇವನು ಹೇಳಿದ: ಮಿತ್ರರೆ, ತ್ರಿಭುವನಪುರದ ಅಧಿಪತಿಯೊಡನೆಯೇ ನನಗೆ ಭಿನ್ನತೆಯುಂಟಾಗಿದೆ. ಆ ಅಧಿಪತಿಯ ದುಶ್ಚರ್ಯೆಗಳನ್ನು ಮಹಾರಾಜರಿಗೆ ತಿಳಿಸಬೇಕೆಂದೇ ನಾನು ಬಯಸಿರುವಾಗ ನನಗೆ ಅವರು ಪರಿಚಯಪತ್ರ ನೀಡಿಯಾರೆ? ಅವರು ನನ್ನನ್ನು ಕೊಂದು ಚಂದ್ರಭಾಗಾನದಿಯಲ್ಲಿ ಎಸೆಯಲೂ ಹಿಂಜರಿಯಲಾರರು. ಈ ಕಾರಣದಿಂದ ರಾಜದರ್ಶನಕ್ಕೆ ನನಗೆ ಅನುವು ಮಾಡಿಕೊಡಿರಿ, ನಿಮಗೆ ಕೈಯೆತ್ತಿ ನಮಸ್ಕರಿಸುತ್ತಿದ್ದೇನೆ.
ನೀನೇನೋ ನಮಸ್ಕರಿಸಿ ಕೇಳಿಕೊಳ್ಳುತ್ತಿದ್ದೀ. ಆದರೆ ಇಲ್ಲಿಯ ನಿಯಮವನ್ನು ಪಾಲಿಸದಿದ್ದಲ್ಲಿ ನಾವೇ ನಾಳೆ ಉಳಿಯುವುದೂ ಅಸಂಭವ ಎಂದರು ರಾಜಭಟರು.
ಜಯದೇವನ ಸ್ಥಿತಿ ಇಬ್ಬಂದಿಯಾಯಿತು. ತಾನು ತ್ರಿಭುವನಪುರಕ್ಕೆ ತೆರಳಿದರೆ ಮತ್ತೆ ಅಲ್ಲಿಂದ ಬರಲಾಗದು. ಆದರೆ ಪರಿಚಯಪತ್ರ ಇಲ್ಲದಿದ್ದಲ್ಲಿ ತಾನು ಬಂದಿರುವ ಕೆಲಸ ಕೈಗೂಡುವ ಬಗೆ ಇಲ್ಲ. ಏನು ಮಾಡಬೇಕು?
ಈಗ ತ್ರಿಭುವನಪುರಕ್ಕೆ ಹೊರಡುವುದು ವ್ಯರ್ಥ. ಇಲ್ಲಿಯೇ ಹೇಗೋ ಕೆಲವು ದಿನಗಳನ್ನು ಕಳೆದರೆ ಎಂದೋ ಒಮ್ಮೆ ರಾಜನೇ ಕಾರ್ಯನಿಮಿತ್ತ ಹೊರಕ್ಕೆ ಬಂದಾನು. ಆಗ ತಾನು ರಾಜನಿಗೆದುರಾಗಿ ಸಮಸ್ಯೆಯನ್ನು ನಿವೇದಿಸಬಹುದು – ಎಂದುಕೊಂಡ. ಮಹಾರಾಜನು ತನ್ನೊಡನೆ ಮಾತನಾಡಲು ನಿರಾಕರಿಸಲಾರ.
ಹೀಗೆ ಆಲೋಚಿಸಿ ಜಯದೇವನು ಪ್ರತಿದಿನ ಸೂರ್ಯೋದಯದ ವೇಳೆಗೆ ಕೋಟೆಯ ಬಳಿಗೆ ಬಂದು ದಿನವಿಡೀ ಕಾಯತೊಡಗಿದ. ಅವನೊಡನೆ ಇತರ ಹಲವರೂ ಕಾಯುತ್ತಿದ್ದರೂ ಅವನು ಅವರಾರನ್ನೂ ಪರಿಚಯ ಮಾಡಿಕೊಳ್ಳುವ ಸ್ಥಿತಿ ಇರಲಿಲ್ಲ. ಒಂದು ವಾರವಾದರೂ ರಾಜನು ಹೊರಕ್ಕೆ ಬರಲಿಲ್ಲ. ರಾಜಭಟರು ಕನಿಕರಿಸಲಿಲ್ಲ.
ಆದರೆ ಹಲವರು ಆಢ್ಯರು ಯಾವುದೇ ಪತ್ರ ಇಲ್ಲದೆಯೇ ಬಂದೊಡನೆ ಒಳಕ್ಕೆ ಹೋಗುತ್ತಿದ್ದರು. ಅಂತಹವರನ್ನು ರಾಜಭಟರು ತಡೆಯುತ್ತಿರಲಿಲ್ಲ; ಮಾತ್ರವಲ್ಲ, ಅವರಿಗೆ ತಲೆಬಾಗುತ್ತಲೂ ಇದ್ದರು.
ವಾಸ್ತವವಾಗಿ ರಾಜಸಹಾಯದ ಆವಶ್ಯಕತೆ ಹೆಚ್ಚಾಗಿ ಇರುವುದು ಬಡವರಿಗೇ. ಆದರೆ ಬಡವರು ರಾಜನ ದೃಷ್ಟಿಕಕ್ಷೆಯಿಂದ ಹೊರಗೇ ಉಳಿದಿದ್ದರು. ಹಲವರು ದ್ವಾರಪಾಲಕರ ಕೈಯಲ್ಲಿ ಒಂದಷ್ಟು ಹಣವನ್ನಿರಿಸಿ ಅನಿರ್ಬದ್ಧವಾಗಿ ಒಳಗೆ ಹೋಗುತ್ತಿದ್ದುದನ್ನೂ ಜಯದೇವನು ಗಮನಿಸಿದ. ತನ್ನ ಉದರಭರಣಕ್ಕೇ ಹಣವಿಲ್ಲದ ಅವನಲ್ಲಿ ಲಂಚ ಕೊಡಲು ಹಣ ಎಲ್ಲಿಂದ ಬರಬೇಕು?
ಅದೊಂದು ದಿನ ಜಯದೇವನು ತೀವ್ರ ನಿರಾಶೆಗೊಳಗಾಗಿದ್ದ. ಹಲವು ದಿನಗಳಿಂದ ಆಹಾರವೂ ಸರಿಯಾಗಿ ದೊರೆತಿರಲಿಲ್ಲ. ರಾಜಧಾನಿಯಾದುದರಿಂದ ತನ್ನ ಪಾಂಡಿತ್ಯವನ್ನು ಮನಗಂಡು ಯಾರಾದರೂ ಆಸರೆ ನೀಡಬಹುದೆಂದು ನಿರೀಕ್ಷಿಸಿದ್ದ. ಹಿಂದೆ ಹಣವಿರದಿದ್ದರೂ ಯಾರಾದರೂ ಊಟವನ್ನಾದರೂ ನೀಡುತ್ತಿದ್ದರು. ಆದರೆ ಈಗ ಇಲ್ಲಿಯ ಪರಿಸ್ಥಿತಿಯೇ ಬೇರೆಯಾಗಿತ್ತು. ಇಲ್ಲಿಯಾದರೋ ಹಣಕ್ಕೆ ಮಾತ್ರ ಮಾನ್ಯತೆ ಇದ್ದಂತಿತ್ತು. ಪಾಂಡಿತ್ಯ ಇಲ್ಲಿ ಕೆಲಸಕ್ಕೆ ಬಾರದಿತ್ತು.
ಹಗಲು ಏನೋ ಒಂದೆರಡು ಹಣ್ಣುಗಳನ್ನು ಕೊಂಡು ತಿಂದು ಸಂಜೆಯ ವೇಳೆ ನೀರನ್ನಷ್ಟೆ ಕುಡಿದು ಮಲಗುತ್ತಿದ್ದ. ಇನ್ನು ಒಂದೆರಡು ದಿನ ಕಳೆದರೆ ಹಣ್ಣುಗಳನ್ನು ಕೊಳ್ಳಲೂ ಹಣ ಇರುತ್ತಿರಲಿಲ್ಲ.
ರಾಜದರ್ಶನವಾದ ಮೇಲೆ ಹಣ ಹಿಂತಿರುಗಿಸುವುದಾಗಿ ಹೇಳಿ ಧನವಂತನೊಬ್ಬನಲ್ಲಿ ಯಾಚಿಸಿದಾಗ ಅವನು ಪದ್ಯಗಳನ್ನು ಕೇಳಿ ಆನಂದಿಸಿ ಹಣ ಕೊಡುವ ದಿನಗಳು ಈಗ ಮುಗಿವೆ ಎಂದು ಹೇಳಿ ಅಲಕ್ಷ್ಯದಿಂದ ಒಂದು ನಾಣ್ಯವನ್ನು ಪಂಡಿತನತ್ತ ಎಸೆದಿದ್ದ. ಅದನ್ನು ತೆಗೆದುಕೊಳ್ಳಲು ಜಯದೇವನಿಗೆ ಮನಸ್ಸಾಗಲಿಲ್ಲ.
ಕೋಟೆಯ ಬಾಗಿಲಲ್ಲಿ ಕಾಯುವುದು ತಪ್ಪಲಿಲ್ಲ. ಸಾಲದೆಂಬಂತೆ ರಾಜಭಟರೂ ‘ಇನ್ನೂ ಇಲ್ಲಿಂದ ಹೋಗಲಿಲ್ಲವೇನಯ್ಯ?’ ಎಂದು ಜಬರಿಸುತ್ತಿದ್ದರು. ರಾಜ್ಯವು ಯಾವ ಸ್ಥಿತಿಗೆ ಜಾರಿದೆ ಎಂದು ಜಯದೇವನು ಖಿನ್ನನಾದ.
ಪಕ್ಕದಲ್ಲಿ ಕಾಯುತ್ತಿದ್ದ ಒಬ್ಬಾತ ಹೇಳಿದ: ಅಯ್ಯಾ ಪಂಡಿತ! ಇಲ್ಲಿ ಚಲಾವಣೆಯಾಗುವುದು ಹಣದ ಬಲ ಮಾತ್ರ. ನನ್ನನ್ನು ನೋಡು, ತಿಂಗಳಿಂದ ಕಾಯುತ್ತಿದ್ದೇನೆ. ಗ್ರಾಮಾಧಿಕಾರಿಯ ಮಗಳ ಮದುವೆಗೆ ಹಣ ಬೇಕೆಂದು ಕಳಿಸಿದ್ದ ಭಟರು ಬಂದು ನನ್ನ ಮನೆಯಷ್ಟನ್ನೂ ದೋಚಿದರು. ವಿರೋಧಿಸಿದ ನನ್ನ ಮಗನನ್ನು ಕೊಂದೇಬಿಟ್ಟರು. ರಾಜನನ್ನು ಭೇಟಿಯಾಗಿ ನಿವೇದಿಸಿಕೊಳ್ಳೋಣವೆಂದು ಬಂದರೆ ಅವನು ಅರಮನೆ ಬಿಟ್ಟು ಹೊರಕ್ಕೇ ಬರುತ್ತಿಲ್ಲ.
ನೆರೆಯಲ್ಲಿದ್ದ ಇನ್ನೊಬ್ಬಾತ ದನಿಗೂಡಿಸಿದ: ಇಲ್ಲಿ ರಾಜನಿರುವುದು ನೆಪಮಾತ್ರಕ್ಕೆ. ಅವನ ಕೈಯಲ್ಲಿ ಯಾವ ಅಧಿಕಾರವೂ ಇಲ್ಲ. ಅವನಲ್ಲಿ ಪ್ರಾರ್ಥಿಸುವುದು ವ್ಯರ್ಥವೆಂದು ತಿಳಿದಿದ್ದರೂ ಬೇರೆ ದಾರಿ ಕಾಣದೆ ಇಲ್ಲಿ ಕಾಯುತ್ತಿದ್ದೇವೆ.
ಇದು ನಿಜವಾಗಿ ಕಶ್ಮೀರ ರಾಜ್ಯವೆ? – ಎಂದು ಜಯದೇವನು ಅಚ್ಚರಿಗೊಂಡ. ಹಿಂದೆಯಾದರೆ ತನ್ನಿಂದ ನ್ಯಾಯವನ್ನು ಕೋರಿದ್ದ ವೃದ್ಧಬ್ರಾಹ್ಮಣನ ಸಮಸ್ಯೆ ನೀಗುವವರೆಗೆ ಚಂದ್ರಾಪೀಡ ಮಹಾರಾಜನು ತಾನೇ ನಿರಾಹಾರಿಯಾಗಿದ್ದ. ಅಂತಹ ರಾಜರು ಆಳಿದ್ದ ರಾಜ್ಯವೇ ಇದು?
ಹೀಗೆ ಆಲೋಚನಾ ಸರಣಿ ಸಾಗಿದ್ದಂತೆ ಜಯಂತನ ಬಳಿಗೆ ರಾಜಭಟನೊಬ್ಬ ಬಂದು ಕಿವಿಯಲ್ಲಿ ರಹಸ್ಯವಾಗಿ ಹೇಳಿದ: ಹತ್ತು ನಾಣ್ಯಗಳು ಇದ್ದಲ್ಲಿ ನನಗೆ ಕೊಡು, ನಿನಗೆ ಒಳಕ್ಕೆ ಪ್ರವೇಶವನ್ನು ಏರ್ಪಡಿಸುತ್ತೇನೆ.
ನನ್ನಲ್ಲಿ ಹಣ ಇಲ್ಲವಪ್ಪಾ!
ಹೋಗಲಿ, ಐದು ನಾಣ್ಯಗಳಿದ್ದರೂ ಪರವಾಗಿಲ್ಲ.
ನನ್ನ ಹತ್ತಿರ ಊಟಕ್ಕೆ ಕೂಡಾ ಹಣ ಇಲ್ಲವಪ್ಪಾ!
ಇಂತಹ ದರಿದ್ರ ಸ್ಥಿತಿಯಲ್ಲಿ ಇರುವಾಗ ರಾಜನನ್ನು ಭೇಟಿ ಮಾಡಲು ಬಂದಿದ್ದೀಯಲ್ಲಾ, ನಿನಗೆ ಬುದ್ಧಿ ಇದೆಯೆ?
ಅಯ್ಯಾ! ಪ್ರಜೆಗಳು ದಾರಿದ್ರ್ಯದಲ್ಲಿದ್ದರೆ ಆ ದೋಷವು ರಾಜನದೇ. ಹಿಂದಿನ ಕಾಲದಲ್ಲಿ ಸಾಮಾನ್ಯ ಜನರ ಸಮಸ್ಯೆಗಳನ್ನು ಕೇಳಿಸಿಕೊಳ್ಳಲು ರಾಜರು ಪ್ರತಿದಿನ ನಿಗದಿಯಾದ ಸಮಯದಲ್ಲಿ ಘೋಷಣೆ ಕೂಗುತ್ತಿದ್ದರು. ಎಷ್ಟೇ ಬಡವರೂ ಯಾರ ಅನುಮತಿಯ ಆವಶ್ಯಕತೆಯೂ ಇಲ್ಲದೆ ರಾಜನ ಆಸ್ಥಾನಕ್ಕೆ ನಿರ್ಭಯವಾಗಿ ಪ್ರವೇಶಿಸಬಹುದಾಗಿತ್ತು.
ಹಣ ಕೊಟ್ಟರೆ ಪ್ರವೇಶ ಸಿಗುವುದೆಂದರೆ ನಿನಗೆ ಅರ್ಥವಾಗುತ್ತಿಲ್ಲ. ಅಲ್ಲದೆ ಪರಿಚಯಪತ್ರ ಇಲ್ಲದಿರುವ ಕಾರಣ ಹಣ ಕೊಡಬೇಕೆಂದರೆ ಇಲ್ಲವೆನ್ನುತ್ತಿದ್ದೀ. ನಿನ್ನ ಗತಿ ಇಷ್ಟೇ ಎಂದು ಹೇಳಿ ಭಟನು ಹೊರಟುಹೋದ.
ನೀರಸ ಮುಖಭಾವ ತಳೆದ ಜಯದೇವನನ್ನು ಕುರಿತು ಪಕ್ಕದಲ್ಲಿದ್ದ ವೃದ್ಧನೊಬ್ಬ ಮುಸಿನಕ್ಕು ಹೇಳಿದ: ನಿಮಗೆ ರಾಜಧಾನಿಯ ಈಗಿನ ಪರಿಸ್ಥಿತಿಯ ಅರಿವು ಇದ್ದಂತಿಲ್ಲ.
ಪಂಡಿತರಿಗೆ ಗೌರವ ಸಿಗದ ಪ್ರದೇಶ ಈ ದೇಶದಲ್ಲಿ ಎಲ್ಲಿಯಾದರೂ ಇದ್ದೀತೆಂದೇ ನಾನು ಅಂದುಕೊಂಡಿರಲಿಲ್ಲ. ನಮ್ಮ ದೇಶದಲ್ಲಿ ನಮ್ಮಲ್ಲಿ ಪಂಡಿತರೂ ವಿದ್ಯಾಪೋಷಕರೂ ನೆಮ್ಮದಿಯಿಂದ ಇರುತ್ತಿದ್ದರು. ವಿದ್ಯಾರ್ಥಿಗಳಿಗೆ ಪಂಡಿತರೇ ಊಟ-ವಸತಿ ನೀಡಿ ವಿದ್ಯೆಯನ್ನು ಕಲಿಸುತ್ತಿದ್ದರು. ಈ ಏರ್ಪಾಡು ಪೂರ್ವಕಾಲದಿಂದ ಇದ್ದಿತು. ಅದಕ್ಕೂ ರಾಜಧಾನಿ ರಾಜಕೀಯಕ್ಕೂ ಯಾವ ಸಂಬಂಧವೂ ಇರಲಿಲ್ಲ. ರಾಜಧಾನಿಗೆ ಬಂದರೆ ನಮಗೆ ಊಟಕ್ಕೂ ಕೊರತೆಯಾಗುವುದೆಂದು ನಾನು ಅಂದುಕೊಂಡಿರಲಿಲ್ಲ.
ಇದನ್ನು ಕೇಳಿ ಆ ವೃದ್ಧನು ನಕ್ಕು ಹೇಳಿದ: ಇಟ್ಟಿಲನ ಶಾಪದಿಂದ ದಂಡನೆಯನ್ನು ಅನುಭವಿಸಿ ಜಯಾಪೀಡನು ಮರಣಹೊಂದಿದ. ಅನಂತರ ಜಯಾಪೀಡನಿಗೆ ದುರ್ಗಾದೇವಿಯಲ್ಲಿ ಜನಿಸಿದ್ದ ಲಲಿತಾಪೀಡನು ಪಟ್ಟಕ್ಕೆ ಏರಿದ. ಅವನಾದರೂ ಅತ್ಯಂತ ನೀಚಸ್ವಭಾವದವನಾಗಿದ್ದ. ವೇಶ್ಯೆಯರ ಸಹವಾಸದಲ್ಲಿ ಹಗಲುರಾತ್ರಿ ಮುಳುಗಿದ್ದ.
ನನಗೆ ತಿಳಿದಿದೆ. ಲಲಿತಾಪೀಡನ ವರ್ತನೆಗೆ ವಿರೋಧ ಸೂಚಿಸಿದುದರಿಂದಲೇ ನನ್ನ ತಂದೆ ರಾಜದಂಡನೆಗೆ ಗುರಿಯಾಗಿ ಮೃತಿಹೊಂದಿದ್ದುದು ಎಂದ, ಜಯದೇವ.
ಒಂದೆರಡು ನಿಮಿಷಗಳ ನಂತರ ವೃದ್ಧನು ಮುಂದುವರಿಸಿದ:
ಹನ್ನೆರಡು ವರ್ಷ ಆಳಿದ ಮೇಲೆ ಲಲಿತಾಪೀಡನು ಮರಣಹೊಂದಿದ. ಅನಂತರ ಜಯಾಪೀಡನಿಗೆ ಕಲ್ಯಾಣದೇವಿಯಲ್ಲಿ ಜನಿಸಿದ್ದ ಸಂಗ್ರಾಮಪೀಡನು ರಾಜನಾಗಿ ಏಳುವರ್ಷ ಆಳಿದ. ಆಮೇಲೆ ಲಲಿತಾಪೀಡನಿಗೆ ಜಯಾದೇವಿ ಎಂಬ ವೇಶ್ಯೆಯಲ್ಲಿ ಜನಿಸಿದ್ದ ಇಮ್ಮಡಿ ಜಯಾಪೀಡನು ರಾಜನಾದ. ಆ ಜಯಾದೇವಿಯಾದರೋ ಅಖೂಬ್ ಎಂಬ ಗ್ರಾಮಕ್ಕೆ ಸೇರಿದ್ದ ಉಪ್ಪನೆಂಬಾತನ ಮಗಳು. ಇಮ್ಮಡಿ ಜಯಾಪೀಡನು ಅಪ್ರಾಪ್ತವಯಸ್ಕನಾಗಿದ್ದುದರಿಂದ ಜಯಾದೇವಿಯ ಪದ್ಮ, ಉತ್ಪಲ, ಕಲ್ಯಾಣ, ಮುಮ್ಮ, ಧರ್ಮ ಎಂಬ ಐವರು ಸೋದರರು ಜಯಾಪೀಡನ ಹೆಸರಿನಲ್ಲಿ ಆಳತೊಡಗಿದರು. ಜಯಾದೇವಿಯ ಉಸ್ತುವಾರಿ ಇರುವವರೆಗೆ ರಾಜ್ಯವು ಅಬಾಧಿತವಾಗಿ ನಡೆಯಿತು. ಅನಂತರ ಆ ಐವರು ಸೋದರರ ನಡುವೆಯೆ ಮಾತ್ಸರ್ಯವೂ ಸ್ಪರ್ಧೆಯೂ ಶುರುವಾದವು. ಒಬ್ಬೊಬ್ಬರೂ ತಮ್ಮ ಪ್ರಾಬಲ್ಯ ಸ್ಥಾಪಿಸಲು ಉದ್ಯುಕ್ತರಾದರು, ಪ್ರಜೆಗಳನ್ನು ಹಿಂಸಿಸತೊಡಗಿದರು. ತಮ್ಮಂದಿರ ವರ್ತನೆಗೆ ಬೇಸತ್ತು ಉತ್ಪಲನು ಅಧಿಕಾರದಿಂದ ಹಿಂದೆಸರಿದ. ತಮ್ಮಂದಿರಾದರೂ ಲೋಲುಪ್ತಿಯಲ್ಲಿ ಮುಳುಗಿದರು. ಅಧಿಪತಿಗಳೇ ಹೊಣೆ ತಪ್ಪಿದ್ದುದರಿಂದ ಸೈನಿಕರೂ ನೀಚತನಕ್ಕೆ ಇಳಿದರು….
ಭವ್ಯ ಕಶ್ಮೀರ ರಾಜ್ಯಕ್ಕೆ ಇಂತಹ ದುರ್ಗತಿ ಬಂದಿತೆ? ಎಂದು ಜಯದೇವನು ದಿಗ್ಭ್ರಾಂತನಾದ. ಈ ವಿವರಗಳೆಲ್ಲ ಜಯದೇವನಿಗೆ ತಿಳಿದಿರಲಿಲ್ಲ. ಅವನಾದರೋ ಸದಾ ಅಧ್ಯಯನ-ಬೋಧನೆಗಳಲ್ಲಿ ನಿರತನಾಗಿದ್ದವನು.
ವೃದ್ಧನು ಮುಂದುವರಿಸಿದ: ಆ ಅಣ್ಣತಮ್ಮಂದಿರ ನೀಚತನದ ಪರಾಕಾಷ್ಠೆ ಎಂಬಂತೆ ಇಮ್ಮಡಿ ಜಯಾಪೀಡನ ಹತ್ಯೆಯಾಯಿತು. ಅವನು ವಯಸ್ಸಿಗೆ ಬಂದಲ್ಲಿ ರಾಜ್ಯಕ್ಕೆ ವಾರಸುದಾರನಾದಾನೆಂಬ ಯೋಚನೆಯಿಂದ ಅವನನ್ನು ಕೊಲೆ ಮಾಡಿಸಿದರು….
ಈ ಪ್ರಸಂಗವನ್ನು ಕೇಳಲಾರದೆ ಜಯದೇವನು ತಳಮಳಗೊಂಡ. ಇವರಿಗೆ ಈ ಲೋಕದಲ್ಲಿ ಭಯವಿಲ್ಲದಿದ್ದರೂ ಪರಲೋಕಭೀತಿಯಾದರೂ ಇರಬೇಡವೆ? ಎಂದ.
ವೃದ್ಧನು ನಕ್ಕು ಹೇಳಿದ: ನೀವು ಎಲ್ಲಿಯೋ ದೂರದ ಕಾಡಿನಲ್ಲಿ ಒಂಟಿಯಾಗಿ ಇದ್ದಹಾಗಿದೆ. ಇದೀಗ ಕಶ್ಮೀರವಷ್ಟೂ ಮ್ಲೇಚ್ಛ ನಡವಳಿಗಳಿಂದ ತುಂಬಿದೆ. ಎಲ್ಲ ಕಡೆಗಳಿಂದ ಮ್ಲೇಚ್ಛರು ಬಂದು ಇಲ್ಲಿ ತುಂಬಿಕೊಂಡಿದ್ದಾರೆ. ರಕ್ತನಾಳಗಳಲ್ಲಿ ಹೊಕ್ಕ ವಿಷವು ಶರೀರವನ್ನೆಲ್ಲ ಆವರಿಸುವಂತೆ ಮ್ಲೇಚ್ಛರ ದುರ್ವರ್ತನೆ ದೇಶದಲ್ಲೆಲ್ಲ ಹರಡಿಕೊಂಡಿದೆ. ಈ ಮ್ಲೇಚ್ಛರು ಇಂದ್ರಿಯನಿಗ್ರಹವನ್ನು ಒಪ್ಪುವವರಲ್ಲ. ಪರಲೋಕದಲ್ಲಿಯೂ ಅವರಿಗೆ ನಂಬಿಕೆಯಿಲ್ಲ. ಈಗಿನ ಬದುಕನ್ನು ಮಾತ್ರ ಲಕ್ಷಿಸುವವರು. ಪೂರ್ವಜನ್ಮ, ಜನ್ಮಾಂತರಗಳು ಯಾವುದನ್ನೂ ಅವರು ನಂಬಿರುವವರಲ್ಲ. ಇನ್ನೂ ಒಂದು ವಿಚಿತ್ರವನ್ನು ಕೇಳಿರಿ. ಎಷ್ಟೇ ಘೋರ ಪಾಪಗಳನ್ನು ಮಾಡಿದ್ದರೂ ಸಾಯುವಕಾಲದಲ್ಲಿ ಯಾರನ್ನಾದರೂ ಕರೆದು ತಪ್ಪನ್ನು ನಿವೇದಿಸಿಬಿಟ್ಟರೆ ಎಲ್ಲ ಪಾಪಗಳೂ ತೊಳೆದುಹೋಗುವುವಂತೆ!
ಇದೆಂತಹ ಮತ? ಸ್ವಲ್ಪವೂ ಪಾಪಭೀತಿಯೇ ಇಲ್ಲದವರು ಯಾವ ದುಷ್ಕಾರ್ಯ ಮಾಡಲು ಹಿಂದೆಗೆದಾರು?
ನಾನು ಹೇಳಿದ ಐವರು ಅಣ್ಣತಮ್ಮಂದಿರಲ್ಲಿ ಉತ್ಪಲನನ್ನು ಬಿಟ್ಟು ಉಳಿದವರೆಲ್ಲ ಮ್ಲೇಚ್ಛಮಾರ್ಗಕ್ಕೆ ಸೇರಿದವರೇ.
ಬಹುಶಃ ಕಲಿಕಾಲವೆಂದರೆ ಇದೇ ಇರಬೇಕು! ಎಂದ, ಜಯದೇವ.
ಮುಂದಿನ ಸಂಗತಿ ಕೇಳಿರಿ. ಇಮ್ಮಡಿ ಜಯಾಪೀಡನ ತರುವಾಯ ಒಬ್ಬೊಬ್ಬರೂ ತಮಗೆ ಅನುಕೂಲನಾದವನೇ ರಾಜನಾಗಬೇಕೆಂದು ಸಂಧಾನ ನಡೆಸತೊಡಗಿದರು. ಅವರ ದೃಷ್ಟಿಯಲ್ಲಿ ರಾಜನೆಂದರೆ ತಾನು ಹೇಳಿದುದಕ್ಕೆ ಗೋಣುಹಾಕುವವನು, ಅಷ್ಟೆ.
ಜಲೌಕ, ಮಿಹಿರಕುಲ, ಸಂಧಿಮತಿ, ಮೇಘವಾಹನ, ಲಲಿತಾದಿತ್ಯರಂತಹ ಅದ್ಭುತ ವ್ಯಕ್ತಿಗಳು ಆಳಿದ ಮತ್ತು ಭಾರತದೇಶಕ್ಕೇ ಮಕುಟಪ್ರಾಯವಾದ ಕಶ್ಮೀರಕ್ಕೆ ಇದೆಂತಹ ದುರ್ಗತಿ ಬಂದಿತು! ಶಿವಾಂಶರಾದ ರಾಜರು ಇದ್ದ ಸ್ಥಾನದಲ್ಲಿ ಈಗ ಪಶುತುಲ್ಯರು ನೆಲೆಗೊಂಡಿದ್ದಾರಲ್ಲ! ಪಾರ್ವತಿಗೆ ಸಮಾನವೆಂದು ಹೇಳುತ್ತಿದ್ದ ಕಶ್ಮೀರ ಈಗ ಮ್ಲೇಚ್ಛರ ಕ್ರೀಡಾರಂಗವಾಗಿದೆಯಲ್ಲ!…. ಇಂತಹ ಸನ್ನಿವೇಶದಲ್ಲಿ ನನ್ನಂತಹವರ ಪಾಂಡಿತ್ಯಕ್ಕಾದರೂ ಏನು ಬೆಲೆಯಿದ್ದೀತು! ನಾನು ಬದುಕಿದ್ದು ತಾನೆ ಏನು ಪ್ರಯೋಜನ?
ಜಯದೇವನ ಹೃದಯದಲ್ಲಿ ಆಕ್ರೋಶ ತುಂಬಿತ್ತು. ಅವನ ಮುಖಚಹರೆಯಲ್ಲಿರುವ ಕಳವಳವನ್ನು ಗುರುತಿಸಿ ವೃದ್ಧನು ತನ್ನ ಮಾತನ್ನು ಮುಂದುವರಿಸಿದ.
ಐವರು ಸೋದರರೂ ಎಷ್ಟೋ ತರ್ಜನಭರ್ಜನಗಳ ತರುವಾಯ ವಜ್ರಾದಿತ್ಯನಿಗೆ ಮೇಘಾವಳಿಯಲ್ಲಿ ಜನಿಸಿದ್ದ ಜ್ಯೇಷ್ಠಪುತ್ರ ತ್ರಿಭುವನಾಪೀಡನಿಗೆ ಪಟ್ಟಕಟ್ಟಬೇಕೆಂದು ನಿಶ್ಚಯಿಸಿದರು. ಆದರೆ ತ್ರಿಭುವನಾಪೀಡನಾದರೂ ವಿರಾಗಿಯಾಗಿದ್ದ, ಪ್ರಾಪಂಚಿಕ ಸಂಗತಿಗಳನ್ನು ಮನಸ್ಸಿಗೆ ಹಚ್ಚಿಕೊಳ್ಳುತ್ತಿರಲಿಲ್ಲ. ಸದಾ ಭಗವದ್ಧ್ಯಾನದಲ್ಲಿ ನಿರತನಾಗಿರುತ್ತಿದ್ದ. ಇಂತಹವನನ್ನು ಸಿಂಹಾಸನದ ಮೇಲೆ ಕುಳ್ಳಿರಿಸಿದರೆ ತಮ್ಮ ಸ್ವೇಚ್ಛಾವ್ಯವಹಾರಗಳನ್ನು ನಿರಾತಂಕವಾಗಿ ಮುಂದುವರಿಸಬಹುದು ಎಂದು ಸೋದರರೈವರೂ ಲೆಕ್ಕಹಾಕಿದ್ದರು.
ಆದರೆ ತ್ರಿಭುವನಾಪೀಡನು ರಾಜಪಟ್ಟಕ್ಕೆ ಏರಲಿಲ್ಲ, ಅಲ್ಲವೆ? ಎಂದು ಅನುಮಾನದಿಂದ ಕೇಳಿದ, ಜಯದೇವ.
ತ್ರಿಭುವನಾಪೀಡನು ಪ್ರಜ್ಞಾವಂತ. ಸೋದರರೈವರು ತನ್ನನ್ನು ಅಧಿಕಾರದಲ್ಲಿ ಕುಳ್ಳಿರಿಸಬಯಸಿರುವುದು ತಮ್ಮ ಸೈರಕ್ಕೆ ಅಡ್ಡಿಬಾರದಿರಲಿ ಎಂದೇ ಹೊರತು ತನ್ನ ಮೇಲಿನ ವಿಶ್ವಾಸದಿಂದ ಅಲ್ಲ – ಎಂದು ಗ್ರಹಿಸದಿರಲಿಲ್ಲ. ಮತ್ತು ತಾನು ತನ್ನ ವಿವೇಕದಂತೆ ರಾಜ್ಯಭಾರ ನಡೆಸತೊಡಗಿದಲ್ಲಿ ತನ್ನನ್ನು ನಿರ್ಮೂಲ ಮಾಡಲೂ ಅವರು ಹಿಂದೆಗೆಯುವುದಿಲ್ಲ – ಎಂದೂ ಅರಿತಿದ್ದ. ಹೀಗಾಗಿ ಅವನು ರಾಜನಾಗಲು ಒಪ್ಪಲಿಲ್ಲ.
ಇದಾದ ನಂತರ ಸೋದರರು ಸುಖವರ್ಮ ಅಜಿತಾಪೀಡನನ್ನು ರಾಜನನ್ನಾಗಿ ಮಾಡಿದರು. ಅಜಿತಾಪೀಡನಾದರೋ ಕಶ್ಮೀರ ಇತಿಹಾಸದಲ್ಲೇ ಅತ್ಯಂತ ನಿಸ್ಸತ್ತ್ವನೆನಿಸಿದ್ದ. ಸ್ವಂತವಾಗಿ ಯಾವ ನಿರ್ಣಯವನ್ನೂ ಕೈಗೊಳ್ಳುತ್ತಿರಲಿಲ್ಲ. ಎಲ್ಲದಕ್ಕೂ ಸೋದರರ ಕಡೆಗೆ ನೋಡುತ್ತಿದ್ದ. ತನ್ನ ಯಾವ ನಡೆಯಿಂದ ಸೋದರರಲ್ಲಿ ಯಾರಿಗೆ ಅಸಮಾಧಾನವಾದೀತೋ ಎಂದು ಭೀತನಾಗಿದ್ದ. ಪ್ರತಿದಿನ ಮುಂಜಾನೆ ಸರದಿಯ ಪ್ರಕಾರ ಸೋದರರ ಪಾದಸೇವೆ ಮಾಡುತ್ತಿದ್ದ. ರಾಜನಿಗೆ ಕಾರ್ಯಭಾರಗಳಿಗಾಗಿ ಬೊಕ್ಕಸದಿಂದ ಎಷ್ಟು ಹಣ ಕೊಡಬೇಕೆಂಬುದನ್ನೂ ಸೋದರರೇ ನಿಶ್ಚಯಿಸುತ್ತಿದ್ದರು. ಹೀಗೆ ರಾಜನು ಒಬ್ಬ ನೌಕರನಂತೆ ಮಾತ್ರವಿದ್ದ. ಆಗಾಗ ಸೋದರರು ಅಜಿತಾಪೀಡನನ್ನು ಅವಮಾನಿಸಲೂ ಹಿಂದೆಗೆಯುತ್ತಿರಲಿಲ್ಲ.
ವಾಸ್ತವಗಳನ್ನು ಕೇಳಿದಂತೆಲ್ಲ ಜಯದೇವನು ಹೆಚ್ಚು ಹೆಚ್ಚು ಆತಂಕಗೊಂಡ.
ಯಥಾರ್ಥವೆಂದರೆ ಕಶ್ಮೀರದ ಸಂಪತ್ತನ್ನೆಲ್ಲ ಐವರು ಸೋದರರು ಹಂಚಿಕೊಂಡಂತಿತ್ತು. ಸುಖವರ್ಮನು ಇದ್ದುದರಲ್ಲಿ ಪ್ರಶಾಂತನಾಗಿದ್ದುದರಿಂದ ಅಧ್ಯಯನ-ಬೋಧನೆಗಳಲ್ಲಿ ಸಮಯಕಳೆಯುತ್ತಿರುತ್ತಾನೆ.
ಹಾಗಾದರೆ ರಾಜ್ಯವ್ಯವಹಾರಗಳನ್ನು ಯಾರು ಗಮನಿಸುತ್ತಾರೆ?
ರಾಜ್ಯದ ಬಗೆಗೆ ಯಾರಿಗೆ ತಾನೆ ಕಾಳಜಿ ಇದೆ? ಅನಾಥವಾಗಿ ಬಿದ್ದಿರುವ ಶವವನ್ನು ನರಿಗಳೂ ರಣಹದ್ದುಗಳೂ ಕಿತ್ತುತಿನ್ನುವಂತೆ ಸೋದರರು ರಾಜ್ಯವನ್ನು ಕೊಳ್ಳೆಹೊಡೆದಿದ್ದಾರೆ. ಸೋದರರಲ್ಲಿ ಒಬ್ಬೊಬ್ಬರೂ ಒಂದೊಂದು ಭವ್ಯ ದೇವಾಲಯವನ್ನು ನಿರ್ಮಿಸಿದರು. ಕಲಶಸ್ಥಾಪನೆಯ ಸಮಯದಲ್ಲಿ ಸಾವಿರಾರು ಗೋವುಗಳನ್ನೂ ಹಣವನ್ನೂ ದಾನ ಮಾಡಿದರು. ಅದಕ್ಕೆಲ್ಲ ಹಣ ಒದಗಿದುದು ರಾಜ್ಯ ಖಜಾನೆಯಿಂದಲೇ. ಈ ಅಪಾರ ಖರ್ಚನ್ನು ತೂಗಿಸಲು ಪ್ರಜೆಗಳ ಮೇಲೆ ಹೆಚ್ಚಿನ ತೆರಿಗೆಯ ಭಾರ ಹೇರಿದರು. ದೌರ್ಜನ್ಯ ಮಿತಿಮೀರಿತು. ಅಂತಿಮವಾಗಿ ಧನದ ಹಂಚಿಕೆಯ ವಿಷಯದಲ್ಲಿ ಮುಮ್ಮನಿಗೂ ಸುಖವರ್ಮನಿಗೂ ನಡುವೆ ಸಮರವೇ ನಡೆಯಿತು. ಅದರಲ್ಲಿ ಮಡಿದವರ ಶವಗಳಿಂದ ವಿತಸ್ತಾನದಿ ತುಂಬಿಹೋಯಿತು.
ಈ ಯುದ್ಧದ ಬಗೆಗೆ ಕಾವ್ಯಗಳೂ ರಚನೆಯಾಗಿವೆ ಎಂದೂ ಕೇಳಿದ್ದೇನೆ ಎಂದ, ಜಯದೇವ.
ಮುಮ್ಮನ ಪುತ್ರ ಯಶೋವರ್ಮನು ಯುದ್ಧದಲ್ಲಿ ಪರಾಕ್ರಮವನ್ನು ಮೆರೆದು ಅಜಿತಾಪೀಡನನ್ನು ಸಿಂಹಾಸನದಿಂದಿಳಿಸಿದ ಮೇಲೆ ಇಮ್ಮಡಿ ಸಂಗ್ರಾಮಪೀಡನ ಕುಮಾರ ಅನಂಗಾಪೀಡನನ್ನು ರಾಜನನ್ನಾಗಿ ಮಾಡಿದರು. ಈ ಅನಂಗಾಪೀಡನಾದರೋ ಅಜಿತಾಪೀಡನಿಗಿಂತ ಸತ್ತ್ವಹೀನನಾಗಿದ್ದ; ಇತರರು ಆಡಿಸಿದಂತೆ ಆಡುವ ಕೈಗೊಂಬೆಯಾಗಿದ್ದ. ಇನ್ನೊಂದು ಕಡೆ ಅನಂಗಾಪೀಡನನ್ನು ಪದಚ್ಯುತಗೊಳಿಸಲು ಉತ್ಪಲನ ಮಗ ಸುಖವರ್ಮನು ಹವಣಿಸುತ್ತಿದ್ದ. ಆದರೆ ಉತ್ಪಲ-ಮುಮ್ಮರ ನಡುವೆ ಆಗಿದ್ದ ಒಪ್ಪಂದದಂತೆ ಉತ್ಪಲನು ಜೀವಿಸಿರುವವರೆಗೆ ಯುದ್ಧಕ್ಕೆ ಆಸ್ಪದವಿಲ್ಲ. ಅಲ್ಲಿಂದ ಮುಂದೆ ಏನಾಗುವುದೋ ಯಾರೂ ಊಹಿಸಲಾರರು.
ವೃದ್ಧನ ಕಥನವನ್ನು ಕೇಳಿ ಜಯದೇವನು ಮೌನವಾದ; ತನ್ನೊಳಗೇ ಆಲೋಚನೆಗೊಳಗಾದ.
ಕೆಲವು ನಿಮಿಷಗಳ ತರುವಾಯ ವೃದ್ಧನು ಕೇಳಿದ: ಯಾವ ವಿಷಯದಲ್ಲಿ ನ್ಯಾಯವನ್ನು ಕೋರಿ ನೀವು ರಾಜದರ್ಶನ ಬಯಸಿರುವಿರಿ?
ಜಯದೇವನು ಮಾತನಾಡುವ ಸ್ಥಿತಿಯಲ್ಲಿಯೆ ಇರಲಿಲ್ಲ. ಸ್ವಲ್ಪ ಸಾವರಿಸಿಕೊಂಡು ಹೇಳಿದ:
ನನ್ನ ಪೂರ್ವಿಕರು ಜಯಾಪೀಡನ ಪಿತಾಮಹ ಲಲಿತಾದಿತ್ಯನಲ್ಲಿ ಆಸ್ಥಾನವಿದ್ವಾಂಸರಾಗಿದ್ದರು. ನನ್ನ ಪಿತಾಮಹರೂ ಜಯಾಪೀಡನ ಆಸ್ಥಾನವಿದ್ವಾಂಸರಾಗಿದ್ದರು. ಜಯಾಪೀಡನ ದುರ್ವರ್ತನೆಯನ್ನು ಸಹಿಸಲಾಗದೆ ರಾಜಾಸ್ಥಾನದಿಂದ ನನ್ನ ಪಿತಾಮಹರು ಹೊರಬಿದ್ದರು. ನನ್ನ ತಂದೆ ಧರ್ಮದೇವ ಲಲಿತಾಪೀಡನ ಆಸ್ಥಾನವಿದ್ವಾಂಸರು. ಲಲಿತಾಪೀಡನು ತತ್ತ್ವವಿಚಾರಗಳಲ್ಲಿ ಅನಾಸಕ್ತನಾಗಿದ್ದು ಭೋಗಪ್ರಪಂಚದಲ್ಲಿ ಮುಳುಗಿದ್ದ. ಒಮ್ಮೆ ಅವನು ಪಂಡಿತರನ್ನು ಕುಲಟೆಯರ ಪದಮುದ್ರೆಯುಳ್ಳ ಶಾಲುಗಳಿಂದ ಸತ್ಕರಿಸುತ್ತಿದ್ದಾಗ ನನ್ನ ತಂದೆ ಅದನ್ನು ಸ್ವೀಕರಿಸಲು ನಿರಾಕರಿಸಿದರು. ಆದರೆ ರಾಜಭಟರು ನನ್ನ ತಂದೆಯ ಕೈಕಾಲುಗಳನ್ನು ಬಿಗಿಯಾಗಿ ಹಿಡಿದು ಬಲವಂತವಾಗಿ ಶಾಲನ್ನು ಹೊದೆಸಿದರು. ಅದರಿಂದ ಕ್ರೋಧಗೊಂಡ ನನ್ನ ತಂದೆಯವರು ಜ್ಞಾನವನ್ನು ಗೌರವಿಸದ ರಾಜ್ಯವು ಅಂಧಕಾರದಲ್ಲಿ ಮುಳುಗುತ್ತದೆ. ನೀನು ಕಶ್ಮೀರದ ಅಧಿದೇವತೆ ಪಾರ್ವತಿಗೇ ಅವಮಾನ ಮಾಡುತ್ತಿದ್ದೀ. ಇದನ್ನು ಶಿವನು ಕ್ಷಮಿಸುವುದಿಲ್ಲ. ನೀನು ಮಾತ್ರವಲ್ಲದೆ ನಿನ್ನ ವಂಶವಿಡೀ ನಾಶವಾಗುವುದು ನಿಶ್ಚಿತ ಎಂದು ಶಪಿಸಿದರು.
ರಾಜನಾದರೋ ಆವೇಶಗೊಂಡು ತುಂಬಿದ ಸಭೆಯಲ್ಲಿಯೆ ನನ್ನ ತಂದೆಯವರನ್ನು, ಕೊಲ್ಲಿಸಿದ. ಅಂದು ರಾತ್ರಿಯೇ ನಾವು ರಾಜಧಾನಿಯನ್ನು ತ್ಯಜಿಸಿ ತ್ರಿಭುವನಪುರದಲ್ಲಿದ್ದ ನನ್ನ ಅಜ್ಜಂದಿರಲ್ಲಿಗೆ ಹೋಗಿ ಆಸರೆ ಪಡೆದೆವು.
ನನ್ನ ಶಿಕ್ಷಣವು ಅಜ್ಜಂದಿರಲ್ಲಿಯೆ ನಡೆಯಿತು. ನಾನು ನಾಲ್ಕೂ ವೇದಗಳಲ್ಲಿ ಪರಿಣತನಾದೆ. ಇತಿಹಾಸ, ಪುರಾಣ, ವ್ಯಾಕರಣ, ತರ್ಕಶಾಸ್ತ್ರ, ಪೂಜಾದಿ ಆಗಮಶಾಸ್ತ್ರ, ಗಣಿತಶಾಸ್ತ್ರ, ರಸಾಯನಶಾಸ್ತ್ರ, ರಾಜನೀತಿಶಾಸ್ತ್ರ, ಭಾಷಾಶಾಸ್ತ್ರ, ಭೌತವಿಜ್ಞಾನ, ಖಗೋಳವಿಜ್ಞಾನ, ಸರ್ಪಶಾಸ್ತ್ರ, ಲಲಿತಕಲೆಗಳು – ಎಲ್ಲದರಲ್ಲಿ ಪ್ರಾವೀಣ್ಯ ಸಂಪಾದಿಸಿದೆ.
ನನ್ನ ಜೀವನ ಹೀಗೆ ನೆಮ್ಮದಿಯಿಂದ ಕಳೆದಿದೆ. ಲಲಿತಾದಿತ್ಯನು ನಮ್ಮ ಪೂರ್ವಿಕರಿಗೆ ದಾನವಾಗಿ ಕೊಟ್ಟಿದ್ದ ಜಾಗದಲ್ಲಿ ಪರ್ಣಶಾಲೆಯನ್ನು ನಿರ್ಮಿಸಿಕೊಂಡು ಅಲ್ಲಿ ಶಿಷ್ಯರಿಗೆ ಬೋಧನೆ ಮಾಡುತ್ತಿದ್ದೇನೆ. ಆದರೆ ನಮ್ಮ ಪರ್ಣಶಾಲೆಯ ಸೌಂದರ್ಯಕ್ಕೆ ಮನಸೋತು ಅಲ್ಲಿಯೆ ತನಗೊಂದು ಭವನವನ್ನು ನಿರ್ಮಿಸಿಕೊಡುವಂತೆ ತ್ರಿಭುವನಪುರಾಧೀಶನನ್ನು ಆಶ್ರಿತಳೊಬ್ಬಳು ಕೋರಿದಳು.
ಈಗ ಆಳುತ್ತಿರುವವರು ಯಾರು? – ವೃದ್ಧನು ಪ್ರಶ್ನಿಸಿದ.
ಇದೀಗ ಪಟ್ಟದಲ್ಲಿ ಮತ್ತೇಭನೆಂಬ….
ಅವನ ಮಾತನ್ನು ಅರ್ಧಕ್ಕೇ ತಡೆದು ವೃದ್ಧನು ಹೇಳಿದ – ಅವನಂತೂ ಮದಿಸಿದ ಆನೆಯಂತೆ ನಡೆದುಕೊಳ್ಳುತ್ತಿದ್ದಾನೆ.
ನಿಜವೇ. ಅವನು ತನ್ನ ಆಶ್ರಿತಳ ಕೋರಿಕೆಯನ್ನು ಈಡೇರಿಸುವುದಕ್ಕಾಗಿ ನನ್ನ ಬದುಕನ್ನು ದುರ್ಭರವಾಗಿಸಿದ್ದಾನೆ. ನಾನು ಆ ಸ್ಥಳವನ್ನು ಬಿಟ್ಟು ಹೋಗಬೇಕೆಂದು ಆದೇಶ ಮಾಡಿದ್ದಾನೆ. ನಾನು ಪ್ರತಿಭಟಿಸಿದಾಗ ತನ್ನ ಭಟರನ್ನು ಕಳಿಸಿ ನನ್ನ ಶಿಷ್ಯರ ಮೇಲೆಲ್ಲ ಪ್ರಹಾರ ಮಾಡಿ ಅಲ್ಲಿಂದ ಓಡಿಸಿದ. ನನಗೆ ತ್ರಿಭುವನಪುರದಲ್ಲಿ ಆಸರೆಯೇ ಇಲ್ಲವಾಯಿತು. ನನಗೆ ಸಹಾಯ ಮಾಡುತ್ತಿದ್ದವರನ್ನೂ ಜೈಲಿಗೆ ಕಳಿಸಿದ. ಏತನ್ಮಧ್ಯೆ ರಾಜನ ವೇಶ್ಯೆಯರು ನಮ್ಮ ತೋಟಕ್ಕೆ ಬಂದು ಜುಗುಪ್ಸಾಕರವಾಗಿ ವರ್ತಿಸತೊಡಗಿದರು. ಕ್ರಮೇಣ ಅವರೆಲ್ಲ ಅಲ್ಲಿಯೆ ತಳವೂರಿದರು. ನಾನು ಹೆಂಡತಿಮಕ್ಕಳನ್ನು ಹೆಂಡತಿಯ ತವರಿಗೆ ಕಳಿಸಿದೆ. ನ್ಯಾಯವನ್ನು ಕೋರೋಣವೆಂದು ರಾಜಧಾನಿಗೆ ಬಂದೆ. ಆದರೆ ನನ್ನ ಪ್ರಯಾಣ ವ್ಯರ್ಥವಾಯಿತೆಂದು ಅನಿಸುತ್ತಿದೆ – ಎಂದ, ಜಯದೇವ.
ವೃದ್ಧನು ಹೇಳಿದ: ನಾನೂ ಹೀಗೆಯೇ ಹತಾಶೆಗೊಂಡಿದ್ದೆ. ಆದರೂ ಇಂದಲ್ಲ ನಾಳೆ ಪರಿಸ್ಥಿತಿಯು ಸುಧಾರಿಸೀತೆಂಬ ನಿರೀಕ್ಷೆಯನ್ನು ಬಿಡದೆ ಕಾದು ಕುಳಿತಿದ್ದೇನೆ. ಅವಕಾಶವಾದಲ್ಲಿ ರಾಜಾಸ್ಥಾನದ ಮೇಲೆ ಮೊದಲ ಪ್ರಹಾರ ನನ್ನಿಂದಲೇ ಆಗಲಿ ಎಂದುಕೊಳ್ಳುತ್ತಿದ್ದೇನೆ.
ಇಷ್ಟರಲ್ಲಿ ಒಳಗಿನಿಂದ ಸದ್ದುಗದ್ದಲ ಕೇಳಿಸತೊಡಗಿತು. ರಾಜನು ಬರುತ್ತಿದ್ದಾನೆಂಬ ವಾರ್ತೆಯು ಕ್ಷಣಾರ್ಧದಲ್ಲಿ ಹಬ್ಬಿತು.
ಕೋಟೆಯ ಒಳಭಾಗದಲ್ಲಿ ಕುದುರೆಗಳ ನಡಿಗೆಯ ಆಘಾತದಿಂದ ಧೂಳು ಎದ್ದಿತ್ತು.
ದೂರದಲ್ಲಿ ಮಹಾರಾಜನ ರಥವು ಕಾಣಿಸಿತು. ನೋಡುತ್ತಿದ್ದಂತೆ ಜನರೆಲ್ಲ ಧಾವಿಸಿ ರಥದ ಸುತ್ತ ಮುಕುರಿದರು.
ರಥವು ಸಮೀಪಿಸುತ್ತಿದ್ದಂತೆ ‘ಮಹಾರಾಜ!’ ಎಂದು ಜಯದೇವನು ಏನೋ ಹೇಳಹೊರಟ. ಆದರೆ ಅವನ ಮಾತಿಗೆ ಅವಕಾಶವೇ ಇಲ್ಲದೆ ರಥದ ಒಡನೆ ಇದ್ದ ಭಟರು ಅವನನ್ನು ಶೂಲದಿಂದ ತಿವಿದು ದೂರಕ್ಕೆ ತಳ್ಳಿದರು.
ಸ್ಪೃಹೆ ತಪ್ಪುವುದಕ್ಕೆ ಮಂಚೆ ಯಾರೋ ರಾಜಭಟರೊಡನೆ ಸೆಣಸುತ್ತಿರುವಂತೆ ಮತ್ತು ತನ್ನನ್ನು ಎತ್ತಿಕೊಂಡು ಹೋಗುತ್ತಿರುವಂತೆ ಜಯದೇವನಿಗೆ ಭಾಸವಾಯಿತು.
*****
ಜಯದೇವನು ಕಣ್ಣುಬಿಟ್ಟಾಗ ಎದುರಿಗೆ ರಾಜಠೀವಿಯ ಯುವಕನೊಬ್ಬನೂ ಅವನೊಡನೆ ಮಹಾಮಂತ್ರಿಯ ಚಹರೆಗಳನ್ನುಳ್ಳ ಇನ್ನೊಬ್ಬ ತರುಣನೂ ನಿಂತಿರುವುದನ್ನು ಕಂಡ. ಕಡೆಗೂ ಮಹಾರಾಜನ ದರ್ಶನ ಆಗುತ್ತಿದೆಯೇನೋ ಎನಿಸಿ ಹರ್ಷಗೊಂಡ. ಇವನೇ ಮಹಾರಾಜನಾಗಿದ್ದಲ್ಲಿ ತಾನು ಕೇಳಿದ್ದಂತೆ ಇವನು ದುರ್ಬಲನಾಗಿ ಕಾಣುತ್ತಿಲ್ಲ – ಎನಿಸಿತು.
ಅಷ್ಟರಲ್ಲಿ – ಆಯಾಸದಿಂದಲೋ ಏನೋ – ಜಯದೇವನ ಕಣ್ಣು ಕತ್ತಲೆ ಕವಿದು ಅವನು ಸ್ಪೃಹೆ ತಪ್ಪಿದ.
ಎಚ್ಚರವಾಗುವಾಗ ತಾನು ರಾಜಭವನದಲ್ಲಿಲ್ಲದೆ ಬೇರೆಲ್ಲಿಯೋ ಇರುವ ಸಂಗತಿ ತಿಳಿಯಿತು.
ರಾಜಠೀವಿಯಲ್ಲಿದ್ದ ತರುಣ ಹೇಳಿದ: ನನ್ನ ಹೆಸರು ಅವಂತಿವರ್ಮ. ನನ್ನ ಜೊತೆಗಿರುವವನು ಶೌರ್ಯಶಾಲಿಯಾದ ನನ್ನ ಪ್ರಾಣಮಿತ್ರ. ಇವನೇ ರಾಜಭಟರ ದೌರ್ಜನ್ಯಕ್ಕೆ ಈಡಾಗಿದ್ದ ನಿಮ್ಮನ್ನು ರಕ್ಷಿಸಿ ಇಲ್ಲಿಗೆ ಕರೆತಂದದ್ದು.
ಜೊತೆಗಾರನು ಹೇಳಿದ: ಕಶ್ಮೀರ ರಾಜಧಾನಿಯಲ್ಲಿ ನೀವು ಅಪಮಾನಕ್ಕೆ ಈಡಾದುದನ್ನು ಕಂಡು ನಮಗೆ ಬೇಸರವಾಗಿದೆ. ಇಷ್ಟಕ್ಕೂ ನೀವು ಯಾವ ಕಾರಣಕ್ಕಾಗಿ ರಾಜದರ್ಶನ ಬಯಸುತ್ತಿದ್ದಿರಿ?
ಇಲ್ಲಿಗೆ ಬಂದಾಗಿನಿಂದ ಇಷ್ಟು ಸೌಜನ್ಯದಿಂದಲೂ ಯಾರೂ ನನ್ನನ್ನು ಮಾತನಾಡಿಸಿರಲಿಲ್ಲ…. ಎಂದು ಆರಂಭಿಸಿದ ಜಯದೇವ ತಮ್ಮ ವಿಷಯವನ್ನೆಲ್ಲ ತಿಳಿಸಿದ.
ಶೂರನು ಮುಗುಳ್ನಕ್ಕು ಉತ್ತರಿಸಿದ: ಅನಂಗಾಪೀಡ ಮಹಾರಾಜನನ್ನು ನೀವು ಭೇಟಿಯಾಗುವುದರಿಂದ ಪ್ರಯೋಜನವೇನಿಲ್ಲ. ಅವನು ಮುಮ್ಮನ ಕೈಯಲ್ಲಿ ಕೈಗೊಂಬೆಯಾಗಿದ್ದಾನೆ. ಅನಂಗಾಪೀಡನ ಯಾವುದೇ ನಿರ್ಣಯಕ್ಕೆ ಐವರು ಸೋದರರ ಆಮೋದನಮುದ್ರೆ ಬೇಕಾಗುತ್ತದೆ. ಆದುದರಿಂದ ರಾಜನನ್ನು ಒಪ್ಪಿಸಿ ಮೆಚ್ಚಿಸಿದರೂ ಉಪಯೋಗವಾಗದು…. ಈಚೆಗಷ್ಟೆ ಗಾಂಧಾರದೇಶದಿಂದ ಪಂಡಿತನೊಬ್ಬ ಬಂದಿದ್ದ. ತಾನು ಮಾಡಿದ್ದ ಉತ್ತಮ ರಚನೆಯನ್ನು ರಾಜನಿಗೆ ಕೇಳಿಸಿದ. ರಾಜನು ಅದನ್ನು ಮೆಚ್ಚಿಕೊಂಡ. ಆದರೆ ಪಂಡಿತನನ್ನು ನೆಪಮಾತ್ರಕ್ಕೂ ಸತ್ಕರಿಸದೆ ಹೋದ. ಕಾರಣ ಇದು: ಆ ಪಂಡಿತನನ್ನು ಸುಖವರ್ಮನು ಗಾಂಧಾರದಿಂದ ಕರೆಯಿಸಿದ್ದ. ಸುಖವರ್ಮನೆಂದರೆ ಮುಮ್ಮನಿಗೆ ಹಿಡಿಸದು, ಆದುದರಿಂದ ಆ ಪಂಡಿತನನ್ನು ಸತ್ಕರಿಸಿದರೆ ಉತ್ಪಲನ ಮಾತನ್ನು ಗೌರವಿಸಿದಂತೆ ಆಗುತ್ತದೆ. ಹಾಗೆ ಆಗುವುದು ಮುಮ್ಮನಿಗೆ ಇಷ್ಟವಿಲ್ಲ. ಇದು ಹಿನ್ನೆಲೆ. ಹೀಗಿರುವುದರಿಂದ ನೀವು ಸುಖವರ್ಮನನ್ನು ಬಿಟ್ಟು ಉಳಿದವರಲ್ಲಿ ಯಾರ ಮೂಲಕವಾದರೂ ರಾಜನನ್ನು ಒಲಿಸಿಕೊಳ್ಳಲು ಪ್ರಯತ್ನ ಮಾಡಿರಿ. ಆಗ ನಿಮ್ಮ ಕಾರ್ಯ ಈಡೇರುವ ಸಂಭವವಿರುತ್ತದೆ.
ಎಂದರೆ ಈ ರಾಜಕೀಯ ಕುಣಿಕೆಗಳೆಲ್ಲಕ್ಕೂ ಗಮನಕೊಡದಿದ್ದಲ್ಲಿ ನನ್ನ ಕೆಲಸ ಆಗದೇನೂ! ಎಂದ, ಜಯದೇವ.
ಈಗಂತೂ ಎಲ್ಲರೂ ಅವರವರ ಲೋಕಗಳಲ್ಲಿ ಮುಳುಗಿದ್ದಾರೆ, ಹಾಗೆಯೇ ನಡೆಯುತ್ತಿದೆ. ಆದರೂ ಎಂತಹ ಅವಸ್ಥೆಯೂ ಒಂದಲ್ಲ ಒಂದುದಿನ ಮುಗಿಯಬೇಕಲ್ಲ ಎಂದ, ಶೂರ.
*****
ಮರುದಿನ ಬೆಳಗ್ಗೆ ಶೂರನನ್ನು ಜೊತೆಗಿರಿಸಿಕೊಂಡು ಜಯದೇವನು ರಾಜಸೋದರ ಪಂಚಕದಲ್ಲಿ ಒಬ್ಬನಾದ ಧರ್ಮನ ಬಳಿಗೆ ಹೋದ. ಜಯದೇವನನ್ನು ಪಂಡಿತನೆಂದು ಪರಿಚಯಿಸಿದೊಡನೆ ಆಗಲೇ ಮತ್ತಿನಲ್ಲಿದ್ದ ಧರ್ಮನು ಕಾಮವಿಲಾಸಕಾವ್ಯವಾಗಿದ್ದರೆ ಕೇಳಿಸಿರಿ. ಇಲ್ಲದಿದ್ದರೆ ನೀವು ಹೋಗಬಹುದು ಎಂದ. ಜಯದೇವನು ಅಸಹ್ಯಗೊಂಡ. ಆದರೂ ಸಮಾಧಾನ ತಂದುಕೊಂಡು ತಾನು ಬಂದಿದ್ದ ಉದ್ದೇಶವನ್ನು ವಿವರಿಸಿದ.
ಅದನ್ನು ಕೇಳಿಸಿಕೊಂಡ ಧರ್ಮನು ನಿನ್ನ ಭೂಮಿಯನ್ನು ನಿನಗೆ ಬಿಡಿಸಿಕೊಟ್ಟರೆ ನನಗೆ ಏನನ್ನು ಕೊಡುತ್ತೀ? ಅದರಲ್ಲಿ ಅರ್ಧವನ್ನು ಕೊಡುತ್ತೀಯಾ? ಎಂದ.
ಜಯದೇವನು ಅಚ್ಚರಿಗೊಂಡು ಹೇಳಿದ: ಮಹಾಶಯ! ನಮಗೆ ಭೂಮಿಯೇ ಜೀವನಾಧಾರ. ನಾನು ವಿದ್ಯಾರ್ಥಿಗಳಿಂದ ಹಣವನ್ನು ತೆಗೆದುಕೊಳ್ಳುವುದಿಲ್ಲ. ನಾನೇ ಅವರಿಗೆ ಭೋಜನಾದಿಗಳನ್ನು ಉಚಿತವಾಗಿ ನೀಡಿ ಅವರಿಗೆ ವಿದ್ಯೆಯನ್ನು ಕಲಿಸುತ್ತೇನೆ. ಇರುವ ಜಮೀನಿನಲ್ಲಿ ಅರ್ಧವನ್ನು ನಾನು ತಮಗೆ ಕೊಟ್ಟರೆ ನನ್ನ ಜೀವನಕ್ಕೆ ಏನು ಉಳಿದೀತು?
ಹೇಗೋ ನಿರ್ವಾಹ ಮಾಡಬೇಕು. ಈಗಲೂ ಬದುಕನ್ನು ಸಾಗಿಸಿದ್ದೀಯಲ್ಲ…. ಇಷ್ಟಕ್ಕೂ ನಿನ್ನ ಊರಿನ ಅಧೀಶ ಯಾರು?
ಮತ್ತೇಭ.
ಅದನ್ನು ಕೇಳಿದೊಡನೆ ಧರ್ಮನು ಹೌಹಾರಿದ. ಅಯ್ಯಯ್ಯೋ! ಮತ್ತೇಭನು ಮುಮ್ಮನ ಅಳಿಯ. ನೀವು ಇನ್ನು ಇಲ್ಲಿರಬೇಡಿ, ಹೊರಟುಹೋಗಿ. ನೀವು ಇಲ್ಲಿಗೆ ಬಂದಿದ್ದ ಸಂಗತಿಯು ಮುಮ್ಮನಿಗೆ ತಿಳಿದಲ್ಲಿ ನನ್ನ ಕಥೆ ಮುಗಿದಂತೆಯೇ. ಹೊರಟುಹೋಗಿ ಎಂದ.
ಅಲ್ಲಿಂದ ಹೊರಟು ಕಲ್ಯಾಣನನ್ನು ಭೇಟಿಯಾದಾಗಲೂ ಇದೇ ಉತ್ತರ ಬಂದಿತು: ಪಂಡಿತರ ದುರ್ದಶೆ ನೋಡಿ ನಮಗೆ ಮರುಕವಾಗುತ್ತದೆ. ಆದರೆ ಮತ್ತೇಭನಿಗೆ ವಿರುದ್ಧವಾಗಿ ನಾವು ಏನೂ ಮಾಡಲಾರೆವು. ನೀವು ಆತನನ್ನೇ ಆಶ್ರಯಿಸುವುದು ಮೇಲು.
ಅನಂತರ ಭೇಟಿಯಾದ ಪದ್ಮನು ಇನ್ನೂ ಒರಟಾಗಿ ವರ್ತಿಸಿದ: ನಿಮಗೆ ತುರ್ತು ಕಂಡಾಗ ನಮ್ಮ ಹತ್ತಿರಕ್ಕೆ ಓಡಿಬರುತ್ತೀರಿ…. ಇಷ್ಟಕ್ಕೂ ಮತ್ತೇಭನಿಗೆ ನೀವು ಜಮೀನನ್ನು ಏಕೆ ಬಿಟ್ಟುಕೊಡಬಾರದು? ಏನೋ ಪೂಜೆ ಪುರಸ್ಕಾರಗಳನ್ನು ಮಾಡುತ್ತ ಇರಬಹುದಲ್ಲ? ಜಮೀನಿಗಾಗಿ ಏಕೆ ಆಸೆಪಡುತ್ತೀರಿ?
ಮಾರನೆಯ ದಿನ ಬೆಳಗ್ಗೆ ಶೂರನನ್ನು ಕುರಿತು ಜಯದೇವನು ಆದದ್ದಾಯಿತು. ಹೇಗೂ ಇವರಾರೂ ಸಹಾಯ ಮಾಡುತ್ತಿಲ್ಲ. ನೇರವಾಗಿ ಸುಖವರ್ಮನನ್ನೇ ಭೇಟಿಮಾಡಿದರೆ ನಷ್ಟವೇನು? ಎಂದ. ಇಬ್ಬರೂ ಸುಖವರ್ಮನಲ್ಲಿಗೆ ತೆರಳಿದರು.
ಇವರು ಮಾತನ್ನು ಆರಂಭಿಸುವುದಕ್ಕೆ ಮೊದಲೇ ಸುಖವರ್ಮನು ಹೇಳಿದ: ನಿಮ್ಮ ಬಗ್ಗೆ ಅವಂತಿವರ್ಮನು ಹೇಳಿದ್ದಾನೆ. ನಾನು ಕೂಡಲೆ ತ್ರಿಭುವನಪುರಕ್ಕೆ ಚಾರರನ್ನು ಕಳಿಸಿ ವಿಷಯವನ್ನು ತಿಳಿದುಕೊಂಡೆ. ನಿಮ್ಮ ಪರ್ಣಶಾಲೆಯನ್ನು ಆಗಲೇ ನೆಲಸಮ ಮಾಡಿ ಅಲ್ಲಿ ಭವನನಿರ್ಮಾಣ ನಡೆಯತೊಡಗಿದೆ…. ನೀವು ರಾಜನನ್ನು ಭೇಟಿಯಾದರೂ ಉಪಯೋಗವಾಗದು. ಏಕೆಂದರೆ ನೀವು ಇಲ್ಲಿಗೆ ಪ್ರಸ್ಥಾನ ಮಾಡಿದುದನ್ನರಿತು ಮತ್ತೇಭನು ಮೊದಲೇ ವಿಷಯವನ್ನು ಮುಮ್ಮನಿಗೆ ತಿಳಿಸಿ ನಿಮ್ಮ ಕೋರಿಕೆಯನ್ನು ತಿರಸ್ಕರಿಸುವಂತೆ ಸೂಚಿಸಿದ್ದಾನೆ.
ಹೇಗಾದರಾಗಲಿ, ಒಮ್ಮೆ ನನಗೆ ಮಹಾರಾಜರ ದರ್ಶನವನ್ನು ಮಾಡಿಸಬಲ್ಲಿರಾ? ಕೇಳಿದ, ಜಯದೇವ.
ಅದರಿಂದ ಏನೂ ಆಗದು. ಆದರೂ ನೀವು ಅವಶ್ಯವೆಂದುಕೊಂಡರೆ ಭೇಟಿ ಮಾಡಿಸುತ್ತೇನೆ. ನಿಮ್ಮನ್ನು ಅವನು ಅವಮಾನಿಸುವುದು ನಿಶ್ಚಿತ. ಅದನ್ನು ನೀವು ಸಹಿಸಬಲ್ಲಿರಾ? ಎಂದ, ಸುಖವರ್ಮ.
ನಾನು ಈಗ ಏನನ್ನಾದರೂ ಸಹಿಸಿಕೊಳ್ಳುವ ಸ್ಥಿತಿಯಲ್ಲಿ ಇದ್ದೇನೆ.
ನನ್ನ ಮೊಮ್ಮಗ ಅವಂತಿವರ್ಮ ನಿಮ್ಮ ಬಗ್ಗೆ ಬಹಳ ಹೇಳುತ್ತಿದ್ದ. ಅವನಿಗೆ ದಯವಿಟ್ಟು ಸರಿಯಾದ ದಾರಿ ತೋರಿಸಿರಿ.
ಜಯದೇವನು ಮಾತನಾಡಲಿಲ್ಲ.
ಅನಂತರ ಇಬ್ಬರೂ ಸುಖವರ್ಮನ ರಥದಲ್ಲಿ ರಾಜಭವನ ತಲಪಿದರು.
ಜಯದೇವನನ್ನು ಸಭೆಯಲ್ಲಿ ಪ್ರವೇಶಗೊಳಿಸಿ ಸುಖವರ್ಮನು ತನ್ನ ಸ್ಥಾನಕ್ಕೆ ಹೊರಟುಹೋದ.
ಸಭೆಯು ಆರಂಭವಾಯಿತು. ಜನರು ಒಬ್ಬೊಬ್ಬರಾಗಿ ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳತೊಡಗಿದರು. ಏನೇನೋ ತೀರ್ಪುಗಳು ಬರುತ್ತಿದ್ದವು. ಆದರೆ ಎಲ್ಲ ತೀರ್ಪುಗಳೂ ಮೊದಲೇ ನಿರ್ಧರಿಸಿದ್ದಂತೆ ಭಾಸವಾಗುತ್ತಿತ್ತು.
ಜಯದೇವನು ತನ್ನ ಸರದಿ ಬಂದಾಗ ಎದ್ದುನಿಂತು ಹೇಳತೊಡಗಿದ: ಮಹಾರಾಜರೆ! ನಾನು ತ್ರಿಭುವನಪುರದಿಂದ ಬಂದಿದ್ದೇನೆ….
ಅವನು ಮಾತನ್ನು ಪೂರ್ಣಗೊಳಿಸುವುದಕ್ಕೆ ಮೊದಲೇ ಮುಮ್ಮನು ಅಜಿತಾಪೀಡನನ್ನು ಸಂಬೋಧಿಸಿ ಹೇಳತೊಡಗಿದ: ಮಹಾರಾಜರೆ! ನಿಮ್ಮ ಎದುರಿಗಿರುವವನು ದೇಶದ್ರೋಹಿ….
ಜಯದೇವನ ಕಡೆಗೆ ತಿರುಗಿ ಮುಮ್ಮನು ಮುಂದುವರಿಸಿದ: ರಾಜವಂಶವು ನಿರ್ಣಾಮವಾಗಲೆಂದು ನಿನ್ನ ತಂದೆ ಶಪಿಸಿದ್ದ. ಆದರೂ ಕಶ್ಮೀರದಲ್ಲಿ ನೀನು ಉಳಿದಿರುವುದೆಂದರೆ ನಮ್ಮ ಕರುಣೆಯಿಂದಷ್ಟೆ ಎಂದು ತಿಳಿದುಕೋ. ನೀನು ನಮ್ಮ ಮೇಲೆಯೆ ಅಭಿಯೋಗ ನಡೆಸಿದ್ದೀಯಲ್ಲ!…
ಮಹಾರಾಜನೆಡೆಗೆ ತಿರುಗಿ ಪ್ರಭುಗಳೆ! ಇವನಿಂದ ರಾಜದ್ರೋಹ ನಡೆದಿರುವುದರಿಂದಾಗಿ ಮತ್ತೇಭನು ಇವನ ಜಮೀನನ್ನು ಮುಟ್ಟುಗೋಲು ಹಾಕಿಕೊಂಡಿದ್ದಾನೆ. ಅದು ಈತನ ಸಮಸ್ಯೆ ಎಂದ.
ಜಯದೇವನು ಮೌನವಾಗಿ ಮಹಾರಾಜನತ್ತ ನೋಡಿದ. ರಾಜನ ಮುಖವು ಬಂಡೆಯಂತೆ ಭಾವಶೂನ್ಯವಾಗಿತ್ತು.
ಒಂದೆರಡು ಕ್ಷಣಗಳಲ್ಲಿ ಆಜ್ಞೆ ಹೊರಟಿತು: ಈತನ ಆಸ್ತಿಯಷ್ಟನ್ನೂ ವಶಪಡಿಸಿಕೊಂಡು ಇವನನ್ನು ರಾಜಧಾನಿಯ ಗಡಿಯಾಚೆಗೆ ಕಳಿಸಿರಿ. ಇವನು ಮತ್ತೆ ರಾಜಧಾನಿಯಲ್ಲಿ ಹೆಜ್ಜೆಯಿರಿಸುವುದನ್ನು ನಿಷೇಧಿಸಿರಿ.
ಧೈರ್ಯವಹಿಸಿ ಜಯದೇವನು ಹೇಳಿದ: ಪ್ರಭುಗಳೆ! ಇದು ನಿಮಗೆ ನ್ಯಾಯವಲ್ಲ. ಅನ್ಯಾಯ ಮಾಡುವವರಿಗೆ ಸುಖವು ದೊರೆಯದು.
ಮುಮ್ಮನು ಎದ್ದು ನಿಂತು ನಿನಗೆಷ್ಟು ಧೈರ್ಯ! ನಿನ್ನ ತಂದೆಯು ಇಲ್ಲಿಯ ರಾಜವಂಶ ನಿಃಶೇಷವಾಗಲೆಂದು ಶಪಿಸಿದ್ದಾನೆ. ಹೀಗಿರುವಾಗ ನೀನು ನಿನ್ನ ಆಸ್ತಿ ಬೇಕೆಂದು ಕೇಳುವ ಸಾಹಸ ಮಾಡುತ್ತಿದ್ದೀ! ಎಂದವನೇ ಸನಿಹದಲ್ಲಿದ್ದ ಭಟರಿಗೆ ಸಂಜ್ಞೆ ಮಾಡಿದ. ಭಟರು ಜಯದೇವನನ್ನು ಹಿಡಿದುಕೊಂಡು ಅನಾಮತ್ತಾಗಿ ಎತ್ತಿ ಹೊರಕ್ಕೆ ಎಸೆದರು.
ಜಯದೇವನ ಮೈಯೆಲ್ಲ ಗಾಯಗೊಂಡಿತ್ತು. ಮಣ್ಣು ಬಾಯೊಳಕ್ಕೂ ಹೋಗಿದ್ದಿತು. ಒಂದೆರಡು ಹಲ್ಲು ಮುರಿದು ರಕ್ತ ಸೋರುತ್ತಿತ್ತು. ಜಯದೇವನು ಅಸಹಾಯನಾಗಿ ಕ್ರೋಧವನ್ನು ತಡೆದುಕೊಳ್ಳಲಾಗದೆ ರಕ್ತದಿಂದ ತೋಯ್ದಿದ್ದ ಒಂದು ಹಿಡಿ ಮಣ್ಣನ್ನು ಕೈಯಲ್ಲಿ ಹಿಡಿದುಕೊಂಡ.
ಜಯದೇವನು ಕೆಳಕ್ಕೆ ಬಿದ್ದೊಡನೆ ಅವಂತಿವರ್ಮನೂ ಶೂರನೂ ಧಾವಿಸಿ ಬಂದರು.
ದೃಢವಾದ ಸ್ವರದಲ್ಲಿ ಜಯದೇವನು ಅವಂತಿವರ್ಮನಿಗೆ ಹೇಳಿದ: ನಾನು ನಿಮ್ಮನ್ನು ಮಹಾರಾಜರೆಂದು ಸಂಬೋಧಿಸಿದ್ದೆನಲ್ಲವೆ? ಎಂದ.
ಇವರಿಗೇನು ಹುಚ್ಚು ಹಿಡಿದಿಲ್ಲ ತಾನೆ? – ಎಂದುಕೊಳ್ಳುತ್ತ ಅವಂತಿವರ್ಮನು ಹೌದೆಂದು ತಲೆಯಾಡಿಸಿದ.
ಜಯದೇವನು ಹೇಳಿದ: ನಾನು ಚತುರ್ವೇದ ಪಂಡಿತ. ಸತ್ಯವ್ರತನಿಷ್ಠ. ನನ್ನ ಮಾತು ವ್ಯರ್ಥವಾಗದು. ಇಂದಿನಿಂದ ಕಶ್ಮೀರಕ್ಕೆ ರಾಜರು ನೀವೇ ಎಂದು ಅರಿಯಿರಿ. ಅದನ್ನು ನಾನು ಸಾಧ್ಯವಾಗಿಸುವವನು ಎನ್ನುತ್ತ ಹಿಡಿಯಲ್ಲಿದ್ದ ಮಣ್ಣಿನಿಂದ ಅವಂತಿವರ್ಮನ ಹಣೆಗೆ ಬೊಟ್ಟನ್ನು ಇಟ್ಟ.
ಅವಂತಿವರ್ಮನು ಬೆದರಿದ. ಅಪ್ರಯತ್ನವಾಗಿ ಕೈಗಳನ್ನು ಜೋಡಿಸಿದ.
ಜಯದೇವನು ಮೇಲಕ್ಕೆದ್ದು ನಿಮ್ಮನ್ನು ಕಶ್ಮೀರ ಸಿಂಹಾಸನದಲ್ಲಿ ಕುಳ್ಳಿರಿಸಿದ ಮೇಲೆಯೆ ನಾನು ಇಲ್ಲಿಗೆ ಮತ್ತೆ ಹೆಜ್ಜೆಯಿಡುವುದು. ನನ್ನೊಡನೆ ಬನ್ನಿ ಎಂದ. ಶೂರನತ್ತ ತಿರುಗಿ ಹೇಳಿದ: ನಾಳೆ ಬೆಳಗ್ಗೆ ಇವರ ತಂದೆಯವರನ್ನು ಕರೆತನ್ನಿರಿ. ನಾನು ಆದಿತ್ಯಮಂದಿರದಲ್ಲಿ ಇರುತ್ತೇನೆ.
*****
ಸೂರ್ಯೋದಯವಾಗುತ್ತಿದ್ದ ಸಮಯ. ಅದುವರೆಗೆ ಅಸ್ಫುಟವಾಗಿದ್ದ ಪ್ರಕೃತಿದೃಶ್ಯಗಳು ನಿಧಾನವಾಗಿ ಪ್ರಕಾಶಗೊಳ್ಳತೊಡಗಿದ್ದವು.
ಓ ಸೂರ್ಯದೇವನೆ! ನಿನ್ನ ಕಿರಣಗಳ ಮೂಲಕ ಜಗತ್ತನ್ನೆಲ್ಲ ಬೆಳಗುವವನು ನೀನು ಎಂದು ಮನಸ್ಸಿನಲ್ಲೇ ನಮಿಸಿದ, ಜಯದೇವ.
ಈ ವೇಳೆಗೆ ಅವಂತಿವರ್ಮನು ಬಂದವನೇ ಜಯದೇವನಿಗೆ ನಮಸ್ಕರಿಸಿದ. ಇನ್ನೂ ಪ್ರಕೃತಿಸೌಂದರ್ಯಾಸ್ವಾಧನೆಯ ಗುಂಗಿನಲ್ಲಿಯೆ ಇದ್ದ ಜಯದೇವನು ಉದ್ಗರಿಸಿದ: ಅಲ್ಲಿ ನೋಡು! ಸೂರ್ಯಭಗವಂತನು ಅಸಂಖ್ಯ ಕಿರಣಗಳಿಂದ ಅಲಂಕೃತವಾಗಿ ವಿಶ್ವವನ್ನೆಲ್ಲ ಬೆಳಗುತ್ತಿದ್ದಾನೆ. ಇನ್ನೊಂದು ಕಡೆ ಅವನ ಕಿರಣಗಳು ಸಸ್ಯಗಳಲ್ಲಿಯೂ ನದಿಗಳಲ್ಲಿಯೂ ಬೆಟ್ಟಗಳಲ್ಲಿಯೂ ಪ್ರಾಣಿಪಕ್ಷಿಗಳಲ್ಲಿಯೂ ಜೀವವನ್ನು ತಂಬುತ್ತಿವೆ.
ಮಂತ್ರಮುಗ್ಧನಾದ ಅವಂತಿವರ್ಮನೂ ಕೈಜೋಡಿಸಿ ಸೂರ್ಯದೇವನಿಗೆ ನಮಿಸಿದ.
ಸೂರ್ಯದೇವನಿಗೆ ಸ್ವಾಗತ ಕೋರಲೋ ಎಂಬಂತೆ ಹಕ್ಕಿಗಳು ಕಲರವವನ್ನು ಆರಂಭಿಸಿದ್ದವು.
ಜಯದೇವನು ಹೇಳಿದ: ಪ್ರಕೃತಿಯು ನಿರ್ಜೀವ ಜಡಪದಾರ್ಥವಲ್ಲ. ಈಗ ವಿಜ್ಞಾನವೆಂದು ಕರೆಯಿಸಿಕೊಳ್ಳುತ್ತಿರುವ ಅರಿವಿಗೆಲ್ಲ ಆದಿಗುರುವೆಂದರೆ ಪ್ರಕೃತಿಯೇ. ಶಾಸ್ತ್ರಾನ್ವೇಷಣೆಯ ಮಾರ್ಗದಿಂದ ಕಷ್ಟಪಟ್ಟು ಕಂಡುಕೊಳ್ಳಲಾಗುವ ಎಷ್ಟೋ ತತ್ತ್ವಗಳು ಪ್ರಕೃತಿಯ ದರ್ಶನ ಮಾತ್ರದಿಂದಲೇ ಅನುಭವಕ್ಕೆ ಬರುತ್ತವೆ. ರಾಜನಾದವನು ತಮ್ಮನ್ನು ಪಾಲಿಸಲಿ ಎಂದು ನಿರೀಕ್ಷಿಸುವ ಪ್ರಜೆಗಳು ಮೊದಲು ಪ್ರಕೃತಿಯ ಮೂಲಕ ಅಭಿವ್ಯಕ್ತಗೊಂಡಿರುವುದು ಭಗವಂತನೇ ಎಂಬುದನ್ನು ಗ್ರಹಿಸಬೇಕು. ರಾಜನು ಎಷ್ಟೇ ವೈಭವ ಸಾಧಿಸಿದರೂ ಅವನ ಬೆರಳುಗಳು ಭೂಮಿಯ ಮೇಲೆಯೆ ನೆಲೆಗೊಂಡಿರಬೇಕು – ಎಂಬುದನ್ನು ಗಿಡಮರಗಳು ಸಂಕೇತಿಸುತ್ತಿವೆ…
ಜಯದೇವನ ಒಂದೊಂದು ಮಾತನ್ನೂ ಅವಂತಿವರ್ಮನು ಗಮನವಿಟ್ಟು ಕೇಳಿಸಿಕೊಳ್ಳುತ್ತಿದ್ದ.
ಬೀಸುತ್ತಿರುವ ಗಾಳಿಗೆ ಒಮ್ಮೆಗೇ ಅಲುಗಾಡುತ್ತಿರುವ ಎಲೆಗಳ ಮೇಲೆ ಹೊಳೆಯುತ್ತಲಿರುವ ಮಂಜುಹನಿಗಳು ಆದಿಶೇಷನ ಸಾವಿರ ಹೆಡೆಗಳ ಮೇಲೆ ಮೆರೆದಿರುವ ಮಣಿಗಳಂತೆ ಕಾಣುತ್ತಿವೆ ಎಂದ, ಅವಂತಿವರ್ಮ.
ಇದೆಲ್ಲವೂ ವಿಧಾತನು ನಮ್ಮ ಮೇಲೆ ಸುರಿಸುತ್ತಿರುವ ಕೃಪಾವೃಷ್ಟಿ ಎನಿಸದೆ? ಎಂದ, ಜಯದೇವ. ಅವನ ಅಂತರಂಗದಲ್ಲಿ ಅಸ್ಪಷ್ಟವಾಗಿದ್ದ ಭಾವನೆಗಳು ಹೊರಕ್ಕೆ ಹೊಮ್ಮಲು ಚಡಪಡಿಸುತ್ತಿದ್ದಂತೆ ಇದ್ದಿತು. ಸೃಷ್ಟಿಕರ್ತನಿಗೆ ನಮನ ಸಲ್ಲಿಸಬೇಕೆಂದು ಎನಿಸಿದರೂ ಯಾವ ದಿಕ್ಕಿಗೆ ತಿರುಗಬೇಕು ಎಂದು ಹೊಳೆಯುತ್ತಿರಲಿಲ್ಲ. ಏಕೆಂದರೆ ಯಾವ ಕಡೆಗೆ ತಿರುಗಿದರೂ ವಿಧಾತನ ವಿಶ್ವರೂಪವೇ ಗೋಚರಿಸುತ್ತಿತ್ತು. ಈ ಸ್ಥಿತಿಯಲ್ಲಿ ತಾನು ಹಿಂದಿನಿಂದ ಆರಾಧಿಸಿಕೊಂಡು ಬಂದಿದ್ದ ಪ್ರಕೃತಿವೈಭವಕ್ಕೆ ಪ್ರಣಾಮ ಸಲ್ಲಿಸಿದ.
ಎಷ್ಟೋ ನಿಮಿಷಗಳು ಕಳೆದ ಮೇಲೆ ಅವಂತಿವರ್ಮನು ಸ್ಪೃಹೆ ತಳೆದು ಕ್ಷಮಿಸಿರಿ ಎಂದ.
ಜಯದೇವನು ನಕ್ಕು ಈ ಪ್ರಕೃತಿಯನ್ನು ಕಂಡರೆ ಕಲ್ಲುಬಂಡೆಯೂ ಇದಕ್ಕಾಗಿ ಸೃಷ್ಟಿಕರ್ತನಿಗೆ ವಂದಿಸುತ್ತದೆ. ಹೀಗಿರುವಾಗ ಮಾನವಹೃದಯವು ಸ್ಪಂದಿಸುವುದರಲ್ಲಿ ಏನು ಆಶ್ಚರ್ಯ? ನಿನ್ನೊಳಗೆ ಮೂಡಿರುವ ಈ ಸ್ಪಂದನವನ್ನು ಬಿಡದೆ ರಕ್ಷಿಸಿಕೋ. ಯಾರ ಬಗೆಗಾದರೂ ಕೋಪವೋ ದ್ವೇಷವೋ ಬಂದಾಗ ಈ ಪ್ರಕೃತಿವಿಭವವನ್ನು ಸ್ಮರಿಸಿಕೋ ಎಂದ.
ಇಬ್ಬರೂ ಪಯಣವನ್ನು ಮುಂದುವರಿಸಿದರು. ಆದಿತ್ಯಭಗವಾನನ ಮಂದಿರವನ್ನು ಸೇರಿದರು. ದೇವರ ದರ್ಶನ ಮಾಡಿದ್ದಾದಮೇಲೆ ಪ್ರಾಂಗಣದಲ್ಲಿ ಕುಳಿತರು.
ಲಲಿತಾದಿತ್ಯ ಮಹಾರಾಜನ ದಂಡಯಾತ್ರೆಯ ಸಂದರ್ಭದಲ್ಲಿ ಅವನ ಮಂತ್ರಿಗಳು ಅವನ ಹೆಸರಿನಲ್ಲಿ ಲಲಿತಾದಿತ್ಯಪುರವನ್ನು ನಿರ್ಮಿಸಿದರು. ದಂಡಯಾತ್ರೆಯನ್ನು ಮುಗಿಸಿ ಹಿಂದಿರುಗಿದ ಮಹಾರಾಜನು ಇದನ್ನು ಗಮನಿಸಿ ಕೋಪಗೊಂಡು ಹೇಳಿದ – ‘ಹೇಳಿಕೇಳಿ ನಶ್ವರವಾದ ಈ ಶರೀರದ ಹೆಸರಿನಲ್ಲಿ ಒಂದು ನಗರವನ್ನು ನಿರ್ಮಿಸುವುದು ಉಚಿತವಲ್ಲ. ನೀವು ಮಾಡುವ ಯಾವುದೇ ಕಾರ್ಯವನ್ನು ಭಗವಂತನಿಗೆ ಅಂಕಿತ ಮಾಡಬೇಕು’ ಎಂದು ಆದೇಶಿಸಿದ. ಅನಂತರ ಇಲ್ಲಿಯೆ ಆತನು ಆದಿತ್ಯಮಂದಿರವನ್ನು ಕಟ್ಟಿಸಿದುದರಿಂದಾಗಿ ಲಲಿತಾದಿತ್ಯಪುರವೆಂಬ ಹೆಸರಿಗೆ ಔಚಿತ್ಯ ಬಂದಿತು. ಅಂತಹ ನಿಃಸ್ವಾರ್ಥಿ ರಾಜನು ಆಳಿದ ರಾಜ್ಯ ನಮ್ಮದು. ನೀನು ಅದರ ವಾರಸುದಾರನೆಂಬುದನ್ನು ಸದಾ ನೆನಪಿನಲ್ಲಿಡು ಎಂದ, ಜಯದೇವ. ಅವಂತಿವರ್ಮನು ಲಲಿತಾದಿತ್ಯನ ಉದಾತ್ತತೆಗೆ ಮನಸ್ಸಿನಲ್ಲಿಯೆ ನಮಿಸಿದ.
ಈ ವೇಳೆಗೆ ಶೂರನೂ ಅವಂತಿವರ್ಮನ ತಂದೆ ಸುಖವರ್ಮನೂ ಅಲ್ಲಿಗೆ ಬಂದು ಜಯದೇವನಿಗೆ ವಂದಿಸಿ ಕುಳಿತುಕೊಂಡರು.
ಜಯದೇವನು ಸುಖವರ್ಮನತ್ತ ತಿರುಗಿ ಮಾತನ್ನು ಆರಂಭಿಸಿದ:
ನೀನು ರಾಜನನ್ನು ಗಾದಿಯಿಂದ ಇಳಿಸುವುದಾಗಿ ಪ್ರತಿಜ್ಞೆ ಮಾಡಿದ್ದೆಯಲ್ಲವೆ?
ಹೌದು. ಅದಕ್ಕಾಗಿ ಬೇಕಾದ ಸೈನ್ಯವನ್ನೂ ಸಂಯೋಜನೆ ಮಾಡುತ್ತಿದ್ದೇನೆ.
ನಿನ್ನ ಪ್ರಯತ್ನವು ಫಲಪ್ರದವಾಗುತ್ತದೆ. ರಾಜ್ಯದಲ್ಲಿ ಅಸಂತೃಪ್ತಿಯು ಬೂದಿ ಮುಚ್ಚಿದ ಕೆಂಡದಂತೆ ಕುಮುಲುತ್ತಿದೆ. ಮೇಲಿನ ಬೂದಿಯನ್ನು ಪಕ್ಕಕ್ಕೆ ಸರಿಸಿದೊಡನೆ ಒಳಗಿನ ಕೆಂಡವು ನಿಗಿನಿಗಿ ಉರಿಯುತ್ತದೆ.
ಹೌದು, ಅನೇಕರು ತಾವಾಗಿ ಬಂದು ಸೈನ್ಯವನ್ನು ಸೇರುತ್ತಿದ್ದಾರೆ.
ಈ ಹೊತ್ತಿನಿಂದ ಸರಿಯಾಗಿ ಹತ್ತು ದಿವಸಗಳು ಕಳೆದೊಡನೆ ವಿಪ್ಲವವು ಏಳುವಂತೆ ನಿಶ್ಚಯವಾಗಲಿ. ನಿನ್ನನ್ನು ವಿಜಯಯಲಕ್ಷ್ಮಿಯು ವರಿಸುತ್ತಾಳೆ. ರಾಜನೀತಿಗೆ ಅನುಗುಣವಾಗಿ ಅಜಿತಾಪೀಡನ ಪುತ್ರ ಉತ್ಪಲಾಪೀಡನನ್ನು ರಾಜನಾಗಿ ನಿಯುಕ್ತಿಗೊಳಿಸು. ರಾಜ್ಯಾಭಿಷೇಕವು ಆಶ್ವಯುಜ ಹುಣ್ಣಿಮೆಯಂದು ನಡೆಯಲಿ. ಆ ದಿವಸದಂದು ಪಟ್ಟಕ್ಕೇರುವವರು ಸ್ಥಾಯಿಯಾಗಿ ಉಳಿಯಲಾರರು. ಏತನ್ಮಧ್ಯೆ ಅವಂತಿವರ್ಮನ ಆಪ್ತಮಿತ್ರ ಶೂರನಿಗೆ ರಾಜ್ಯವ್ಯವಹಾರಗಳಲ್ಲಿ ಅವಶ್ಯವಾದ ಅನುಭವ ಒದಗುವಂತೆ ಏರ್ಪಾಟು ಆಗಲಿ. ಉತ್ಪಲಾಪೀಡನ ತರುವಾಯ ಅವಂತಿವರ್ಮನು ರಾಜನಾಗಲಿ; ಶೂರನು ಮಂತ್ರಿಯಾಗಲಿ. ಅವರಿಬ್ಬರೂ ಜೊತೆಗೂಡಿ ಕಶ್ಮೀರದ ಪೂರ್ವವೈಭವವನ್ನು ಮತ್ತೆ ತರುತ್ತಾರೆ. ಕಶ್ಮೀರದಿಂದ ಕರ್ಕಾಟಕವಂಶವು ಮರೆಯಾಗುತ್ತದೆ. ಇನ್ನು ಮುಂದೆ ಕಶ್ಮೀರದ ಪಾಲನೆ ಮಾಡಲಿರುವುದು ಉತ್ಪಲವಂಶವೇ ಎಂದ, ಜಯದೇವ.
ಸುಖವರ್ಮನು ಜಯದೇವನಿಗೆ ನಮಸ್ಕರಿಸಿ ಕೇಳಿದ: ಮಹಾಶಯರೆ, ಕೆಳಗಿನ ಸ್ತರದ ಮನೆತನಗಳವರು ರಾಜ್ಯವನ್ನು ನಿಭಾಯಿಸಬಲ್ಲರೆ?
ಜಯದೇವನು ಉತ್ತರಿಸಿದ – ಸುಖವರ್ಮ, ಸಕಲ ಸೃಷ್ಟಿಯೂ ವಿಧಾತನ ಸ್ವರೂಪವೇ. ಅದರಲ್ಲಿ ವಾಸ್ತವವಾಗಿ ಉಚ್ಚ-ನೀಚ ಭೇದಗಳು ಇರುವುದಿಲ್ಲ. ಇಂತಹ ಭೇದಕಲ್ಪನೆ ಅಜ್ಞಾನದಿಂದ ಜನಿಸಿದುದು. ಈ ಭೇದಗಳು ಬಾಹ್ಯ ಸಂದರ್ಭಗಳಿಗಷ್ಟೆ ಅನ್ವಯಿಸುವಂಥವು. ಮಾನಸಿಕ-ಬೌದ್ಧಿಕ ಸ್ತರದಲ್ಲಿ ವ್ಯಕ್ತಿ-ವ್ಯಕ್ತಿಗಳಲ್ಲಿ ಭೇದ ಇರುವುದಿಲ್ಲ. ಎಲ್ಲವೂ ಈಶ್ವರಮಯವೇ ಆಗಿರುತ್ತದೆ.
ಸುಖವರ್ಮ, ಶೂರ, ಅವಂತಿವರ್ಮ – ಮೂವರೂ ಜಯದೇವನಿಗೆ ವಂದಿಸಿದರು.
ಸರಿಯಾಗಿ ಈ ಹೊತ್ತಿನಿಂದ ಹತ್ತನೆಯ ದಿವಸ ವಿಪ್ಲವ ಆರಂಭಗೊಳ್ಳಬೇಕು. ಆ ಸಮಯಕ್ಕೆ ನಾನು ಅವಂತಿವರ್ಮನೊಡನೆ ಇಲ್ಲಿಗೆ ಬಂದಿರುತ್ತೇನೆ. ವಿಜಯವನ್ನು ಸಾಧಿಸಿ ನೀವೆಲ್ಲ ಇಲ್ಲಿಗೆ ಬರಬೇಕು ಎಂದ, ಜಯದೇವ.
ತಮ್ಮ ಚಿತ್ತ ಎಂದು ಶೂರನೂ ಸುಖವರ್ಮನೂ ನಿರ್ಗಮಿಸಿದರು. ಅವರ ಪಾಲಿಗೆ ಜಯದೇವನ ಮಾತು ವೇದವಾಕ್ಯವಿದ್ದಂತೆನಿಸಿತು. ಅದನ್ನು ಸಂದೇಹಿಸುವ ಪ್ರಶ್ನೆಯೇ ಏಳಲಿಲ್ಲ, ಅಂತಹ ಆಲೋಚನೆಗೂ ಆಸ್ಪದ ಇರಲಿಲ್ಲ.
ತನ್ನೊಡನೆ ಬರುವಂತೆ ಅವಂತಿವರ್ಮನಿಗೆ ಸಂಜ್ಞೆ ಮಾಡಿ ಹೊರಟುನಿಂತ ಜಯದೇವನು ಹೇಳಿದ: ನನ್ನೊಡನೆ ಬಾ, ನಿನಗೆ ಕಶ್ಮೀರದ ನಿಜಸ್ವರೂಪವನ್ನೂ ನಿನ್ನ ಸ್ವಧರ್ಮವನ್ನೂ ಅರ್ಥಮಾಡಿಸುತ್ತೇನೆ ಎಂದ.
*****
ಅಂದಿನಿಂದ ಜಯದೇವನು ತನಗೆ ತಿಳಿದಿದ್ದ ಜ್ಞಾನವನ್ನೆಲ್ಲ ಅವಂತಿವರ್ಮನಿಗೆ ಬೋಧಿಸತೊಡಗಿದ. ವಿವಿಧ ಶಾಸ್ತ್ರಗಳ ಪರಿಚಯ ಹೀಗೆ ಹಗಲುರಾತ್ರಿ ನಡೆಯಿತು. ಅದೆಲ್ಲ ಅವಂತಿವರ್ಮನಿಗೆ ಒಂದು ನೂತನ ಲೋಕವೆಂದೇ ಎನಿಸಿತು. ಈ ಹತ್ತು ದಿವಸಗಳಲ್ಲಿ ಅವನು ಕಲಿತದ್ದು ಹಿಂದೆಲ್ಲ ಕಲಿತಿದ್ದುದಕ್ಕಿಂತ ಪೂರ್ತಿ ಬೇರೆಯೇ ಆಗಿತ್ತು. ಅವನ ಪೂರ್ವಿಕರ ಔನ್ನತ್ಯವೂ ಸನಾತನಧರ್ಮದ ವಿಶಿಷ್ಟತೆಯೂ ಅವಗತವಾಗ ತೊಡಗಿತ್ತು.
ಅನತಿದೂರದಲ್ಲಿ ಸ್ವರ್ಣಕವಚ ಸಹಿತ ವರಾಹಸ್ವಾಮಿಯ ವಿಗ್ರಹವಿದ್ದ ಸನ್ನಿಧಿಯ ಪ್ರಾಂಗಣದಲ್ಲಿ ನೃತ್ಯಾಭ್ಯಾಸ ನಡೆಯುತ್ತಿತ್ತು. ಇನ್ನು ಸ್ವಲ್ಪ ಮುಂದಕ್ಕೆ ಹೋದಾಗ ಐವತ್ತನಾಲ್ಕು ಹಸ್ತಪ್ರಮಾಣದಷ್ಟು ಎತ್ತರವಾದ ಶಿಲಾಸ್ತಂಭ ವಿರಾಜಮಾನವಾಗಿತ್ತು. ಅಲ್ಲಿಯ ಪ್ರಾಂಗಣದಲ್ಲಿಯೆ ನ್ಯಾಯಾಸ್ಥಾನ ನಡೆಯುತ್ತಿತ್ತು. ಇನ್ನೊಂದು ಬದಿಯಲ್ಲಿ ಭವ್ಯವಾದ ಭಗವಾನ್ ಬುದ್ಧನ ವಿಗ್ರಹ ಪೂಜೆಗೊಳ್ಳುತ್ತಿತ್ತು. ಈಚಿನಕಾಲದಲ್ಲಿ ಬೌದ್ಧಮತವು ಕಳಾಹೀನವಾಗಿತ್ತಾದರೂ ಬುದ್ಧನ ಪೂಜೆಗೆ ವಿಚ್ಛಿತ್ತಿ ಒದಗಬಾರದೆಂದು ಸನಾತನಧರ್ಮೀಯರು ವ್ಯವಸ್ಥೆ ಮಾಡಿದ್ದರು.
ಅಲ್ಲಿಂದ ಒಂದಷ್ಟು ದೂರ ಸಾಗಿದಾಗ ಮುಕ್ತಾಪೀಡನ ಎರಡನೇ ರಾಣಿ ಈಶಾನದೇವಿಯು ನಿರ್ಮಿಸಿದ್ದ ಸುಂದರ ಜಲಾಶಯ ಇದ್ದಿತು. ಆ ಜಲಾಶಯದಲ್ಲಿ ಮಿಂದರೆ ಎಷ್ಟೋ ರೋಗಗಳು ಗುಣವಾಗುತ್ತವೆಂದು ಜಯದೇವನು ತಿಳಿಸಿದ.
ಇಬ್ಬರೂ ಅಲ್ಲಿ ಸ್ನಾನವನ್ನು ಮುಗಿಸಿದರು. ಅಲ್ಲಿಂದ ಹಿಂದಿರುಗಿ ಆದಿತ್ಯಮಂದಿರವನ್ನು ಸೇರಿಕೊಂಡರು.
ಅದಾದ ಸ್ವಲ್ಪ ಹೊತ್ತಿನೊಳಗೇ ಶೂರನೂ ಉತ್ಪಲಾಪೀಡನೂ ಸೈನಿಕರೂ ಅಲ್ಲಿಗೆ ಆಗಮಿಸಿದರು.
ಸುಖವರ್ಮನು ವರದಿ ಮಾಡಿದ – ಸ್ವಾಮಿ, ನಾವು ವಿಜಯವನ್ನು ಸಾಧಿಸಿದ್ದೇವೆ. ಭೋಗಲಾಲಸೆಯ ಅಭ್ಯಾಸ ಬೆಳೆಸಿಕೊಂಡಿದ್ದ ಶತ್ರುಸೈನಿಕರು ನಮ್ಮನ್ನು ಸಮರದಲ್ಲಿ ಎದುರಿಸಲು ಅಸಮರ್ಥರಾದರು. ತಾವು ಆದೇಶ ನೀಡಿದ್ದ ಮುಹೂರ್ತದಲ್ಲಿಯೆ ನಾಳೆ ಉತ್ಪಲಾಪೀಡನ ಪಟ್ಟಾಭಿಷೇಕ ಏರ್ಪಟ್ಟಿದೆ.
ಉತ್ಪಲಾಪೀಡನು ಜಯದೇವನಿಗೆ ಪ್ರಣಾಮಸಲ್ಲಿಸಿದ. ಜಯದೇವನು ಹೃದಯಪೂರ್ವಕ ಆಶೀರ್ವದಿಸಿದ.
ಉತ್ಪಲಾಪೀಡನು ಬಿನ್ನವಿಸಿದ: ಸ್ವಾಮಿ, ತ್ರಿಭುವನಪುರದಲ್ಲಿ ನಿಮ್ಮ ವಿಷಯದಲ್ಲಿ ತುಂಬಾ ಅನ್ಯಾಯ ನಡೆದಿದೆ. ಅದರ ಸಾಂಕೇತಿಕ ಪರಿಹಾರವಾಗಿ ತಮ್ಮನ್ನು ಕಶ್ಮೀರ ರಾಜಧಾನಿಯ ನಗರಾಧ್ಯಕ್ಷರನ್ನಾಗಿ ನೇಮಿಸಬಯಸುತ್ತೇನೆ. ಕೃಪೆ ಮಾಡಬೇಕು.
ಜಯದೇವನು ನಕ್ಕು ಹೇಳಿದ – ನಾನು ಸಕ್ಕರೆಯನ್ನು ಬೇಡಿದರೆ ನೀವು ಜೇನುತುಪ್ಪವನ್ನು ನೀಡುತ್ತಿರುವಿರಲ್ಲ! ನನಗೆ ಅದರ ಆವಶ್ಯಕತೆಯಿಲ್ಲ. ತ್ರಿಭುವನಪುರದಲ್ಲಿನ ನನ್ನ ಜಮೀನನ್ನು ನನಗೆ ಕೊಡಿಸಿದರೆ ಸಾಕು. ನಾನು ಇನ್ನೇನನ್ನೂ ಕೋರುವುದಿಲ್ಲ.
ಹಾಗೆಯೆ ಆಗಲಿ ಎಂದು ಹೇಳಿ ರಾಜನು ಸೈನ್ಯ ಸಮೇತ ಅಲ್ಲಿಂದ ನಿರ್ಗಮಿಸಿದ.
ಸಂಗಡ ಇದ್ದ ಶೂರ, ಅವಂತಿವರ್ಮ, ಸುಖವರ್ಮ – ಇವರಿಗೆ ಜಯದೇವ ಹೇಳಿದ:
ನಾನು ತ್ರಿಭುವನಪುರಕ್ಕೆ ಹೋಗುತ್ತಿದ್ದೇನೆ. ಉತ್ಪಲಾಪೀಡನು ರಾಜನಾಗಿ ಹೆಚ್ಚು ದಿವಸ ಮುಂದುವರಿಯಲಾರ. ಅವಂತಿವರ್ಮ, ಕಶ್ಮೀರದ ರಾಜ್ಯಭಾರವನ್ನು ನೀನು ವಹಿಸಿಕೊಳ್ಳಬೇಕಾಗಿದೆ. ಧರ್ಮಭಂಗವಾಗದಂತೆ ಮತ್ತು ನಿನ್ನ ಪೂರ್ವಿಕರ ಹೆಸರಿಗೆ ಕಳಂಕ ಬರದಂತೆ ಮತ್ತು ಎಲ್ಲರೂ ಹೆಮ್ಮೆ ಪಡುವಂತೆ ರಾಜ್ಯಭಾರವನ್ನು ನಡೆಸು ಎಂದು ಹೇಳಿ ಶೂರನ ಕಡೆಗೆ ತಿರುಗಿ ಅವಂತಿವರ್ಮನ ಯೋಗಕ್ಷೇಮವನ್ನು ನಿನ್ನ ಕೈಯಲ್ಲಿ ಇರಿಸುತ್ತಿರುವೆ. ಲಲಿತಾದಿತ್ಯನಿಗೆ ಮಿತ್ರಶರ್ಮನೂ ಜಯಾಪೀಡನಿಗೆ ದೇವಶರ್ಮನೂ ಇದ್ದಂತೆ ನೀನು ಅವಂತಿವರ್ಮನ ಸಹಕಾರಿ ಆಗಬೇಕಾಗಿದೆ. ನೀವಿಬ್ಬರೂ ಶ್ರಮಿಸಿ ಕಶ್ಮೀರದ ಪೂರ್ವವೈಭವವನ್ನು ಮತ್ತೆ ತನ್ನಿರಿ. ಮ್ಲೇಚ್ಛ ದುಷ್ಪ್ರಭಾವದಿಂದ ಸನಾತನಧರ್ಮವನ್ನು ರಕ್ಷಿಸಿ, ಬೆಳೆಸಿ.
ಅವಂತಿವರ್ಮನು ಜಯದೇವನ ಕಾಲಿಗೆರಗಿ ಅಶ್ರುಪೂರ್ಣನಾಗಿ ಹೇಳಿದ – ಸ್ವಾಮಿ, ತಾವು ನನ್ನ ಮೇಲೆ ಗುರುತರ ಜವಾಬ್ದಾರಿಯನ್ನು ಹೊರಿಸಿರುವಿರಿ. ಧರ್ಮದ ಜೀವಂತಿಕೆಯನ್ನು ನನಗೆ ಬೋಧಿಸಿದಿರಿ. ಇನ್ನು ಮುಂದೆ ನಮ್ಮ ಮಂದಿರಗಳಲ್ಲಿ ವೇದಪಠನಾದಿಗಳೂ ನ್ಯಾಯನಿರ್ಣಯವೂ ಸಾಹಿತ್ಯನೃತ್ಯಾದಿಕಲಾಪಗಳೂ ನಿರಂತರ ನಡೆಯುತ್ತವೆ. ಯಾರ ಪ್ರಮೇಯವೂ ಇಲ್ಲದೆ ಸಾಮಾಜಿಕ ಜೀವನವು ನಿರಾತಂಕವಾಗಿ ಸಾಗುತ್ತದೆ. ಈ ಆಲಯವೇ ಜೀವಂತಧರ್ಮದ ಸಂಕೇತವಾಗುತ್ತದೆ. ಅಣುಅಣುವೂ ಪವಿತ್ರವಾಗಿರುವ ಈ ದೇಶಕ್ಕೆ ನನ್ನದಾಗಲಿ ಬೇರೆ ಯಾರದಾಗಲಿ ಪಾಲನೆಯ ಆವಶ್ಯಕತೆ ಹೇಗಿದ್ದೀತು?
ಜಯದೇವನು ಅವಂತಿವರ್ಮನನ್ನು ಆಶೀರ್ವದಿಸಿ ಹೇಳಿದ ನಾನು – ಹೇಳಿರುವ ಅಂಶಗಳನ್ನು ಸದಾ ಸ್ಮರಿಸುತ್ತಿರು. ಇಲ್ಲಿ ಸ್ಥಾಪಿತವಾಗಿರುವ ಧರ್ಮವೇ ಭಾರತದೇಶದಾದ್ಯಂತ ವ್ಯಾಪಿಸಿರುವುದು. ನಮ್ಮ ದೇಶವು ಬೆಳೆದಿರುವುದೇ ಧರ್ಮದ ಆಧಾರದ ಮೇಲೆ. ಎಲ್ಲಿಯೊ ಒಬ್ಬ ರಾಜನು ಮಾರ್ಗಚ್ಯುತನಾದರೆ ಇನ್ನೆಲ್ಲಿಯೊ ಧರ್ಮರಕ್ಷಕನೊಬ್ಬನು ಉದಿಸಿರುತ್ತಾನೆ. ಒಂದು ಅವಧಿಯಲ್ಲಿ ಯಾವ ರಾಜನು ಅಧಿಷ್ಠಿತನಾಗಿರುತ್ತಾನೆಂಬುದರ ಪ್ರಸಕ್ತಿಯಿಲ್ಲದ ಶಾಶ್ವತ ವ್ಯವಸ್ಥೆ ಇಲ್ಲಿ ಇದೆ. ರಾಜನ ಕೆಲಸವೆಂದರೆ ಆ ವ್ಯವಸ್ಥೆಗೆ ಹಾನಿ ಬಾರದಂತೆ ನೋಡಿಕೊಳ್ಳುವುದು. ಅಂತಿಮವಾಗಿ ನಮ್ಮ ದೃಷ್ಟಿ ಇರಬೇಕಾದುದು ಶಾಶ್ವತ ತತ್ತ್ವಗಳಲ್ಲಿ. ನಾವು ಪರಲೋಕಗಳನ್ನೂ ಪಾಪಪುಣ್ಯಗಳನ್ನೂ ಕರ್ಮಫಲ ಸಿದ್ಧಾಂತವನ್ನೂ ನಂಬಿರುವವರು. ಸತ್ಕರ್ಮಾಚರಣೆಯಿಂದ ಮಾತ್ರ ನರಕ ತಪ್ಪುತ್ತದೆ. ಆದರೆ ನಿನಗೆ ನರಕದ ಭಯ ಇರದು.
ಶೂರ, ಅವಂತಿವರ್ಮ, ಸುಖವರ್ಮ – ಮೂವರೂ ಜಯದೇವನ ಉದಾತ್ತತೆಯನ್ನು ನೆನೆಯುತ್ತ ದೇವಾಲಯದಲ್ಲಿ ಆದಿತ್ಯಭಗವಂತನಿಗೆ ಪೂಜೆ ಸಲ್ಲಿಸಿ ರಾಜಧಾನಿಗೆ ತೆರಳಿದರು.
*****
ಅನತಿಕಾಲದಲ್ಲಿ ಅವಂತಿವರ್ಮನು ಕಶ್ಮೀರದ ರಾಜನಾಗಿ ಅಭಿಷಿಕ್ತನಾದ. ಜಯದೇವನಿಂದಲೂ ಶೂರನಿಂದಲೂ ಕಲಿತ ಸಂಗತಿಗಳನ್ನು ಮರೆಯದೆ ಹೃದಯಸ್ಥ ಮಾಡಿಕೊಂಡು ರಾಜ್ಯವನ್ನು ದಕ್ಷತೆಯಿಂದ ಪಾಲನೆ ಮಾಡಿದ. ಅನೇಕ ಧರ್ಮಕಾರ್ಯಗಳನ್ನು ನಡೆಸಿದ ಇವನನ್ನು ಇನ್ನೊಬ್ಬ ಮಾಂಧಾತನೆಂದೇ ಜನರು ಕೊಂಡಾಡಿದರು. ಹೀಗೆ ಶೈವನಾದ ಶೂರನೂ ವೈಷ್ಣವನಾದ ಅವಂತಿವರ್ಮನೂ ಕೈಜೋಡಿಸಿ ಕಶ್ಮೀರದಲ್ಲಿ ಸನಾತನಧರ್ಮವನ್ನು ಉಜ್ಜೀವಿಸಿ ಅದನ್ನು ಹಿಂದಿನ ವೈಭವಸ್ಥಿತಿಗೆ ತಂದರು.
ಲೌಕಿಕಾಬ್ದ ೩೯೫೯ನೇ ಸಂವತ್ಸರದ (ಕ್ರಿ.ಶ. ೮೮೩) ಆಷಾಢ ಶುಕ್ಲ ತದಿಗೆಯಂದು ಅವಂತಿವರ್ಮನು ಭಗವದ್ಗೀತಾ ಪಠನ ಮಾಡುತ್ತಿದ್ದಂತೆ ಮಹಾವಿಷ್ಣುವಿನಲ್ಲಿ ಲೀನನಾದ.