ಗಣರಾಜ್ಯ ದಿನಾಚರಣೆಯೊಡಗೂಡಿ ನಡೆದ ಅಮೆರಿಕಾಧ್ಯಕ್ಷ ಬರಾಕ್ ಒಬಾಮಾ ಭೇಟಿಯನ್ನು ಒಂದು ಗಣನೀಯ `ಇವೆಂಟ್’ ಎಂದು ಮಾಧ್ಯಮಗಳು ಬಿಂಬಿಸಿದುದು ಸಹಜವೇ. ನೈಮಿತ್ತಿಕ ಪ್ರವಾಸಸರಣಿಯ ಭಾಗವೆಂದಲ್ಲದೆ ಅವರು ಪ್ರತ್ಯೇಕವಾಗಿ ಭಾರತಕ್ಕೇ ಭೇಟಿ ನೀಡಿದುದು – ಇಂತಹ ಒಂದೆರಡು ವಿಶಿಷ್ಟತೆಗಳೂ ಇದ್ದವು. ಈ ಭೇಟಿಯನ್ನು ಅಮೆರಿಕ ಸರ್ಕಾರ, ಭಾರತ ಸರ್ಕಾರ ಎರಡೂ `ಐತಿಹಾಸಿಕ’ವೆಂದು ವರ್ಣಿಸಿದುದು ಸ್ವಾಭಾವಿಕ. ಆದರೆ ಉತ್ಸಾಹಜನಕವೆಂಬ ಅಥವಾ `ನಷ್ಟವಿಲ್ಲ’ವೆಂಬ ಸ್ಥಿತಿಗಿಂತ ಹೆಚ್ಚಿನ ಗಳಿಕೆಯೇನಾದರೂ ಆಯಿತೆ ಎಂದು ಕೇಳಿಕೊಂಡಾಗ ಇರುಸುಮುರುಸೇ. ಭಾರತ-ರಶ್ಯಾ ನಂಟಸ್ತಿಕೆಗೆ ಪ್ರತಿಭಾರ ನಿರ್ಮಿಸಲು ಅಮೆರಿಕ ಕಾತರಗೊಂಡಿತ್ತೆಂಬುದು ಸಿನಿಕ ವ್ಯಾಖ್ಯೆಯೆನಿಸೀತು; ಇರಲಿ. ಆದರೆ ರಶ್ಯಾ-ಚೀಣಾಗಳ ವರ್ಧಿಸುತ್ತಿರುವ ಆರ್ಥಿಕ ಸಾಮರ್ಥ್ಯವು ಡಾಲರಿನ ಪಾಳೆಗಾರಿಕೆಗೆ ಸವಾಲೆನಿಸತೊಡಗಿರುವುದು ಅವಾಸ್ತವವಲ್ಲ. ಆರು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಅಣುಶಕ್ತ್ಯುತ್ಪಾದನವಿಷಯಕ ಒಪ್ಪಂದದ ಸಂಬಂಧದಲ್ಲಿ ಒಬಾಮಾ ಒಂದೆರಡು ಹೆಜ್ಜೆ ಹಿಂದಕ್ಕೆ ಸರಿದರೆಂಬುದು ಭಾರತಕ್ಕೆ ಈ ಭೇಟಿಯ ಮುಷ್ಟಿಗ್ರಾಹ್ಯ ಏಕೈಕ ಉಪಲಬ್ಧಿಯೆನ್ನಬೇಕೇನೊ. ಆದರೆ ಈ ದಿಶೆಯಲ್ಲಿ ಹೆಜ್ಜೆಯಿಡದೆ ಅಮೆರಿಕಕ್ಕೆ ಪರ್ಯಾಯವಾದರೂ ಏನು ಉಳಿದಿತ್ತು? ಅಮೆರಿಕದ ಧಾರ್ಷ್ಟ್ಯಾದ ಬೆನ್ನೆಲುಬಾದ ಅದರ ಆರ್ಥಿಕ ಪ್ರಾಬಲ್ಯ ಈಗ ಇಲ್ಲವೆಂಬುದೂ ರಹಸ್ಯವೇನಲ್ಲ. ಇದೆಲ್ಲ ಒತ್ತಟ್ಟಿಗಿರಲಿ. ಅಮೆರಿಕದಿಂದ ಜಗತ್ತು ನಿರೀಕ್ಷಿಸುತ್ತಿರುವುದು ಇಸ್ಲಾಮೀ ಆತಂಕವಾದವನ್ನು ಸಶಕ್ತವಾಗಿ ಎದುರಿಸುವ ಛಲವಂತಿಕೆ. ಈ ವಿಷಯದಲ್ಲಿ ಅಮೆರಿಕ ದೃಢಪ್ರತಿಜ್ಞವಾಗಿದೆಯೆಂಬ ಸೂಚಕಗಳೇನೂ ಲಭ್ಯವಿಲ್ಲ. ಜಗತ್ತಿಗೆಲ್ಲ ಆತಂಕವಾದವನ್ನು ರಫ್ತುಮಾಡುತ್ತಿರುವ ಸೌದಿ ಅರೇಬಿಯ, ಪಾಕಿಸ್ತಾನಗಳ ಬಗೆಗೆ ಅಮೆರಿಕದ ಮೃದುಧೋರಣೆಯಲ್ಲಿ ವ್ಯತ್ಯಯವೇನೂ ಆದಂತಿಲ್ಲ. ಹೀಗಾಗಿ ಸದ್ಯಕ್ಕೆ ಸ್ವಸ್ತಿವಾಚನಗಳಿಗಿಂತ ತುಂಬ ಹೆಚ್ಚಿನ ಉಪಲಬ್ಧಿಯೇನೂ ತೋರುತ್ತಿಲ್ಲ.
“ಇವೆಂಟ್” ಆಯಿತು; ಉಪಲಬ್ಧಿ ಅಷ್ಟಕಷ್ಟೆ
Month : March-2015 Episode : Author :