ಸಾರ್ಧ ಶತಾಬ್ದ ಸ್ಮರಣೆ
“ಗೋಖಲೆಯವರ ದೇಶಭಕ್ತಿಯ ಪ್ರಖರತೆಯೇ ಅವರು ಅಗ್ಗದ ಜನಪ್ರಿಯತೆಯನ್ನು ಅರಸುವುದಕ್ಕೆ ಅಡ್ಡಿ ಬಂದಿತ್ತು. ಬಡಾಯಿಮಾತಿನವರನ್ನೂ ಧೈರ್ಯಹೀನರನ್ನೂ ಅವರು ರವೆಯಷ್ಟೂ ಸಹಿಸುತ್ತಿರಲಿಲ್ಲ. ನೈತಿಕವಾಗಿಯೂ ಬೌದ್ಧಿಕವಾಗಿಯೂ ತಾವು ನಿರ್ಣಯಿಸಿಕೊಂಡಿದ್ದ ಸ್ಥಿತಿಯನ್ನು ಅವರು ಎಂದೂ ಸಡಿಲಗೊಳಿಸಲು ಒಪ್ಪುತ್ತಿದ್ದವರಲ್ಲ.”
ಕೆಲಕಾಲ ದೇಶದ ಆಗಿನ ಅತ್ಯುನ್ನತ ಶಾಸನಮಂಡಳಿಯಾಗಿದ್ದ ಇಂಪೀರಿಯಲ್ (’ವೈಸರಾಯ್ಸ್) ಲೆಜಿಸ್ಲೆಟಿವ್ ಕೌನ್ಸಿಲಿನ ಸದಸ್ಯರಾಗಿದ್ದವರು, ಒಂದು ಅವಧಿಯಲ್ಲಿ ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷರಾಗಿದ್ದವರು, ಪುಣೆಯಲ್ಲಿ ಸರ್ವೆಂಟ್ಸ್ ಆಫ್ ಇಂಡಿಯ ಸೊಸೈಟಿ ಸಂಸ್ಥೆಯನ್ನು ಸ್ಥಾಪಿಸಿದವರು- ಎಂದು ಇತಿಹಾಸಗ್ರಂಥಗಳು ಗೋಪಾಲ ಕೃಷ್ಣ ಗೋಖಲೆಯವರ (9-5-1866–15-2-1915) ಹೆಸರನ್ನು ಸ್ಮರಿಸುತ್ತವೆ. ಆದರೆ ಈ ಸಾಂದರ್ಭಿಕತೆಗಳಿಗಿಂತ ಉನ್ನತವಾದ ಕೊಡುಗೆ ದೇಶದ ಸಾರ್ವಜನಿಕಜೀವನಕ್ಕೆ ಗೋಖಲೆಯವರಿಂದ ಸಂದಿದೆಯೆಂಬುದು ಈಗಿನ ಪೀಳಿಗೆಗೆ ತಿಳಿಯುವುದು ಅವಶ್ಯವಿದೆ. ಈ ವರ್ಷ(2016) ಗೋಖಲೆಯವರ 150ನೇ ಜನ್ಮವರ್ಷವಾಗಿರುವುದು ಅವರ ಜೀವಿತಕಾರ್ಯವನ್ನು ಸ್ಮರಿಸಲು ಅವಕಾಶವನ್ನು ಕಲ್ಪಿಸಿದೆ. ಗಣ್ಯ ರಾಜ್ಯಶಾಸ್ತ್ರಜ್ಞರು ಮಾತ್ರವಲ್ಲದೆ ಗೋಖಲೆಯವರು ಅರ್ಥಶಾಸ್ತ್ರಜ್ಞರೂ ಬೋಧಕರೂ ಶಿಕ್ಷಣತಜ್ಞರೂ ಜನಸೇವಕರೂ ಸುಧಾರಕರೂ ಎಲ್ಲಕ್ಕಿಂತ ಮಿಗಿಲಾಗಿ ಅಪ್ರತಿಮ ದೇಶಭಕ್ತರೂ ಆಗಿದ್ದರು. ಆಧುನಿಕ ಭಾರತದ ವಿಕಾಸಕ್ಕೆ ಅಸ್ತಿಭಾರ ನಿರ್ಮಿಸಿದ ಪ್ರಮುಖರಲ್ಲೊಬ್ಬರು ಗೋಪಾಲ ಕೃಷ್ಣ ಗೋಖಲೆ. ಡಿ.ವಿ.ಜಿ.ಯವರೂ ಸೇರಿದಂತೆ ಹಿಂದಿನ ಪೀಳಿಗೆಯ ಹತ್ತಾರು ಜನ ಸಮಾಜಸೇವಕರಿಗೆ ಸ್ಫೂರ್ತಿಸ್ಥಾನವಾಗಿದ್ದವರು ಗೋಖಲೆ.
ಗೋಖಲೆಯವರು ಜೀವಿಸಿದ್ದುದು 49 ವರ್ಷಕಾಲ ಮಾತ್ರ. ಅವಿರತ ಪರಿಶ್ರಮವೂ ಅವರ ಅಕಾಲಿಕ ಮರಣವನ್ನು ಆಸನ್ನವಾಗಿಸಿದ್ದಿರಬೇಕು.
ಕರ್ತವ್ಯಪ್ರಜ್ಞೆಗೆ ಆದ್ಯತೆ
ಕಣ್ಣು ಕೋರೈಸುವಂತೆ ಲೋಕದ ಗಮನ ಸೆಳೆಯದೆ, ಮುಖ್ಯವಾದುದಾದರೂ ಅಡಿಪಾಯದಂತೆ ಭೂಪ್ರಸರದ ಕೆಳಗಡೆ ಹುದುಗಿರುವಂತಹದು ಗೋಖಲೆಯವರ ಪರಿಶ್ರಮ. ಡಿ.ವಿ.ಜಿ. ಹೇಳಿರುವಂತೆ:
“ರಾಜ್ಯದ ಕಾರ್ಯಗಳು ಕ್ರಮವಾಗಿ ನಡೆಯುವಂತೆ ಮಾಡಲು ಪ್ರತಿಯೊಬ್ಬ ಪ್ರಜೆಯೂ ಯಾವಯಾವ ಕರ್ತವ್ಯಗಳನ್ನು ನೆರವೇರಿಸಬೇಕಾಗಿರುವುದೋ ಅವುಗಳೇ ಪ್ರಜಾಧರ್ಮಗಳು. ಈ ಪ್ರಜಾಧರ್ಮಗಳ ಸ್ವರೂಪವೂ ವಿವರವೂ ಭಾರತೀಯರಿಗೆ ಚೆನ್ನಾಗಿ ಅವಗಾಹನೆಗೆ ಬಾರದೆ ಅದು ಅವರಲ್ಲಿ ವಿಶಾಲವಾಗಿ ಹರಡದೆ ಇದ್ದ ಕಾಲದಲ್ಲಿ ಆ ಧರ್ಮವನ್ನು ಅವರಿಗೆ ಬೋಧಿಸಿ ತೋರಿಸಿಕೊಟ್ಟ ಮಹನೀಯರು ಗೋಖಲೆಯವರು.” (ಡಿ.ವಿ.ಜಿ.: ’ಗೋಪಾಲ ಕೃಷ್ಣ ಗೋಖಲೆ, ಅವತರಣಿಕೆ)
ಪರಕೀಯ ಪ್ರಭುತ್ವದ ಮುಷ್ಟಿಯಿಂದ ದೇಶವು ಮುಕ್ತವಾಗಬೇಕೆಂಬುದು ಒಂದು ಅತ್ಯಂತ ಉದಾತ್ತ ಲಕ್ಷ್ಯವೆಂಬುದು ವಿವಾದಾತೀತ. ಆದರೆ ಅದರ ಮಹತ್ತ್ವದ ಗಮ್ಯವೆಂದರೆ ಸ್ವರಾಜ್ಯವನ್ನು ಸಾರ್ಥಕಗೊಳಿಸಲು ಬೇಕಾದ ಧರ್ಮಾಧಾರಿತವೂ ಅಭ್ಯುದಯಾಭಿಮುಖವೂ ಆದ ನಿಃಸ್ವಾರ್ಥ ಪರಿಶ್ರಮ. ಈ ಪರಿಶ್ರಮವಾದರೋ ಸದಾಕಾಲ ನಡೆಯಬೇಕಾದದ್ದು. ಇಂತಹ ಶೈಕ್ಷಣಿಕ ಕಾರ್ಯಕ್ಕಾಗಿ ಜೀವಮಾನವನ್ನೆಲ್ಲ ವಿನಿಯೋಗಿಸಿದವರು ಗೋಖಲೆ.
ಕಾವ್ಯಗಳಲ್ಲಿ (೧) ಶಿಷ್ಟಸಾಹಿತ್ಯದ ಹಿನ್ನೆಲೆ ಇರುವ ವ್ಯುತ್ಪನ್ನರಿಗೆ ಅಭ್ಯಾಸಸಾಧ್ಯವಾಗುವಂತಹವು; (೨) ಅಂತಹ ಹಿನ್ನೆಲೆಯಿಲ್ಲದ ಸಾಮಾನ್ಯರೂ ಆಸ್ವಾದಿಸಬಹುದಾದಂತಹವು; – ಹೀಗೆ ಸ್ಥೂಲವಾಗಿ ಎರಡು ವರ್ಗಗಳು ಉಂಟಷ್ಟೆ. ಅದರಂತೆ ಜನನಾಯಕರಲ್ಲಿಯೂ ಎರಡು ವರ್ಗಗಳನ್ನು ಕಲ್ಪಿಸಬಹುದು: (೧) ವಿದ್ವತ್ತಿನಿಂದಲೂ ದೂರದೃಷ್ಟಿಯಿಂದಲೂ ಸಂಸ್ಕಾರಗೊಂಡವರು; (೨) ಆಯಾ ಸಂದರ್ಭದಲ್ಲಿ ಜನರಿಗೆ ಗ್ರಾಹ್ಯವಾಗಬಹುದಾದ ಸಮಾಜಾಭಿಮುಖ ನಿಲವುಗಳನ್ನು ಪ್ರವರ್ತಿಸುವವರು; – ಎಂದು. ಈ ಎರಡು ವರ್ಗಗಳವರೂ ದೇಶಹಿತಾಕಾಂಕ್ಷಿಗಳೇ. ಆದರೆ ಹೆಚ್ಚಿನ ಮೇಧಾವಂತಿಕೆ, ಇತಿಹಾಸಪ್ರಜ್ಞೆ, ಪರಾಮರ್ಶನೆಯ ಗಹನತೆ ಮತ್ತು ತಾರ್ಕಿಕತೆ ಮೊದಲಾದ ಗುಣಗಳಿಂದ ಮೊದಲ ವರ್ಗದ ’ಅಭಿಜಾತ’ ನಾಯಕರು ಕಿಂಚಿದ್ ವಿಶಿ?ರೆನಿಸುತ್ತಾರೆ. ಇಂತಹ ಅಭಿಜಾತ ನಾಯಕವರ್ಗಕ್ಕೆ ಸೇರಿದವರು ಗೋಪಾಲ ಕೃ? ಗೋಖಲೆ. ಸಾಮಾನ್ಯವಾಗಿ ’ಮಧ್ಯಮಮಾರ್ಗಿ’ಗಳೆಂದು ವರ್ಣಿತರಾದರೂ
ತಾವು ವಿಶ್ವಾಸ ತಳೆದಿದ್ದ ಸಂಗತಿಗಳ ಬಗೆಗೆ ಅವರು ಭಾವತೀವ್ರತೆ ಇಲ್ಲದವರಲ್ಲ. ಈ ಸ್ವಭಾವವೈಶಿ?ದಿಂದಾಗಿ ಸಮರ್ಪಣಮನೋಭಾವ, ನಿಃಸ್ವಾರ್ಥ, ತ್ಯಾಗಪ್ರವೃತ್ತಿ, ಬೌದ್ಧಿಕ ನಿಶಿತತೆ, ತಾರ್ಕಿಕ ಪರಾಮರ್ಶನಾಭ್ಯಾಸ – ಈ ಗುಣಗಳ ಪ್ರತೀಕವೆಂದು ಹೆಸರಾದವರು ಗೋಖಲೆ. ಈ ಗುಣಸಮುಚ್ಚಯದ ಕಾರಣದಿಂದ ಅವರು ಕಾಂಗ್ರೆಸ್ ಸಂಸ್ಥೆ, ಆಂಗ್ಲಪ್ರಭುತ್ವ – ಇಬ್ಬರಿಗೂ ಸಮಾನ ಆದರಣೀಯರಾಗಿದ್ದರು. ಸಾಮಾಜಿಕ ಜೀವನದಲ್ಲಂತೂ ಅವರ ಸ್ಫಟಿಕೋಪಮ ಪಾರಿಶುದ್ಧ್ಯವು ಜನಜನಿತವೇ ಆಗಿತ್ತು. ಹೀಗೆ ಎಲ್ಲ ವರ್ಗಗಳಿಗೂ ಅವರು ಆಪ್ತರೆನಿಸಿದ್ದರು. ಸೌಮ್ಯಸ್ವಭಾವದವರಾಗಿದ್ದರೂ ತಮಗೆ ತತ್ತ್ವನಿಷ್ಠವೆನಿಸಿದ ನಿಲವುಗಳಿಂದ ಅವರು ಎಂದೂ ಪಕ್ಕಕ್ಕೆ ಸರಿದವರಲ್ಲ. ಇಂತಹ ಧೀಮಂತರನ್ನು ಗಾಂಧಿಯವರು ತಮ್ಮ ಗುರುಗಳೆಂದು ಸ್ವೀಕರಿಸಿದುದು ಸಹಜ.
ನಾಯಕತ್ವ ಗುಣಗಳು
ಗೋಖಲೆಯವರ ವಿಶೇಷ ನಾಯಕತ್ವಗುಣಗಳನ್ನು ಗಾಂಧಿಯವರಿಗಿಂತ ಅಧಿಕವಾಗಿ ಮೆಚ್ಚಿದ್ದವರು ವಿರಳ. ಗಾಂಧಿಯವರಷ್ಟೆ ಗೋಖಲೆಯವರ ಪ್ರಶಂಸಕರಾಗಿದ್ದವರು ಮಹಮ್ಮದಾಲಿ ಜಿನ್ನಾ. ’ಮುಸ್ಲಿಂ ಗೋಖಲೆ ಆಗುವುದು ನನ್ನ ಹೆಗ್ಗುರಿ’ ಎಂದೇ ನಿಸ್ಸಂಕೋಚವಾಗಿ ಜಿನ್ನಾ ಹೇಳುತ್ತಿದ್ದರು.
ತಮಗಿದ್ದ ಸ್ಥಾನೌನ್ನತ್ಯಬಲದಿಂದ ಗೋಖಲೆಯವರು ವ್ಯಕ್ತಪಡಿಸಿದ ಅಭಿಮತವನ್ನು ಪ್ರಶ್ನಿಸುತ್ತಿದ್ದವರು ವಿರಳ. ಆದರೆ ಗೋಖಲೆಯವರು ವ್ಯಾವಹಾರಿಕಪ್ರಜ್ಞೆಯಿಂದ ಎಂದೂ ದೂರ ಸರಿದವರಲ್ಲ. ಅವರ ಚಿಂತನೆ ಸದಾ ರಾಷ್ಟ್ರಹಿತಸಾಧಕ ದಿಶೆಯಲ್ಲಿಯೆ ಇರುತ್ತಿತ್ತೆಂಬುದನ್ನು ದೇಶವೆಲ್ಲ ಅಂಗೀಕರಿಸಿತ್ತು.
ಒಂದೊಂದು ಕಾಲಖಂಡದಲ್ಲಿಯೂ ಸಮಾಜವು ಚಾರಿತ್ರಿಕ ಅನುಭವವನ್ನು ಹೊಸದಾಗಿ ಸಮೀಕ್ಷಿಸಿಕೊಳ್ಳಬೇಕಾಗುತ್ತದೆ. ತತ್ಕಾಲೀನ ಆವೇಶಗಳ ಪ್ರಭಾವವನ್ನು ನಿವಾರಿಸಿಕೊಳ್ಳಲಾಗುವುದು ದೂರ ದೃಷ್ಟಿಯ ಪ್ರಜ್ಞಾವಂತಿಕೆಯಿಂದ ಮಾತ್ರ. ಹೀಗೆ ನೋಡುವಾಗ ಗೋಖಲೆಯವರ ದಾರ್ಶನಿಕ ವಾರಸಿಕೆ ವರ್ತಮಾನಕಾಲಕ್ಕೂ ಸಂಗತವೇ ಎನ್ನಬೇಕಾಗಿದೆ.
1908-09ರ ಮಾರ್ಲೇ-ಮಿಂಟೋ ಸುಧಾರಣೆಗಳ ಪೂರ್ವಭಾವಿ ಪರಿಷ್ಕರಣಗಳಲ್ಲಿಯೂ ಘೋಷಣಾನಂತರ ಅವನ್ನು ಜನತೆಗೆ ವಿವರಿಸುವುದರಲ್ಲಿಯೂ ಗೋಖಲೆಯವರ ಮಾಧ್ಯಸ್ಥ್ಯ ಕೆಲಸ ಮಾಡಿತ್ತು. ಗೋಖಲೆಯವರಲ್ಲಿದ್ದ ಈ ರೀತಿಯ ವ್ಯವಹಾರಪ್ರಜ್ಞೆಯನ್ನು ಗುರುತಿಸಿಯೇ ಅವರನ್ನು ಫ್ಲೀಟ್ವುಡ್ ವಿಲ್ಸನ್ ಎಂಬ ಆಂಗ್ಲಾಧಿಕಾರಿ ’ಇಂಡಿಯದ ಗ್ಲ್ಯಾಡ್ಸ್ಟನ್’ ಎಂದು ಪ್ರಶಂಸಿಸಿದ್ದುದು. (ಇದು ಆಂಗ್ಲ ನುಡಿಗಟ್ಟಿನಲ್ಲಿ ತುಂಬಾ ಉನ್ನತವಾದ ಶ್ಲಾಘನೆ.)
1910ರಲ್ಲಿ ಸರ್ಕಾರವು ವೃತ್ತಪತ್ರಿಕೆಗಳ ಮೇಲಿನ ನಿಯಂತ್ರಣವನ್ನು ಹೆಚ್ಚು ಬಿಗಿಗೊಳಿಸುವ ಕ್ರಮಗಳನ್ನು ಯೋಜಿಸುತ್ತಿದ್ದಾಗ ಗೋಖಲೆಯವರು ಆಂಗ್ಲಾಧಿಕಾರಿಗಳೊಡನೆ ತಮಗಿದ್ದ ಸೌಜನ್ಯಸಂಬಂಧಗಳನ್ನು ಬಳಸಿಕೊಂಡು ಸಂಧಾನ ನಡೆಸಿ ಆ ಶಾಸನದ ತೀವ್ರತೆ ಕಡಮೆಯಾಗಲು ಕಾರಣರಾದರು. ಗೋಖಲೆಯವರ ಸೂಕ್ಷ್ಮಸ್ವರೂಪದ ಇಂತಹ ಕೈಂಕರ್ಯಗಳಲ್ಲಿ ಹೆಚ್ಚಿನವು ಎಲ್ಲಿಯೂ ದಾಖಲೆಗೊಳ್ಳದೆ ವಿಸ್ಮೃತಿಗೊಳಗಾಗಿವೆ.
ಗಾಂಧಿಯವರಿಗೆ ವಿಶಾಲ ಪ್ರಸಿದ್ಧಿಯನ್ನು ತಂದಿತ್ತ ಒಂದು ಸಂದರ್ಭ 1930ರ ದಂಡೀಯಾತ್ರೆ. ಅದಕ್ಕೆ ನಲವತ್ತು ವರ್ಷ ಹಿಂದೆಯೇ (1891) ಉಪ್ಪಿನ ತೆರಿಗೆಯ ಕಡಿತಕ್ಕಾಗಿ ಕಾಂಗ್ರೆಸ್ ಅಧಿವೇಶನ ವೇದಿಕೆಯ ಮೂಲಕ ಗೋಖಲೆ ಆಗ್ರಹಿಸಿದ್ದರು.
ಆಂಗ್ಲಪ್ರಭುತ್ವ ರಾತ್ರೋರಾತ್ರಿ ತೊಡೆದುಹೋಗಬೇಕೆಂಬಂತಹ ಆವೇಶಗಳು ವಿರಾಜಿಸಿದ್ದ ಆಗಿನ ಪರಿಸರದಲ್ಲಿ ಗೋಖಲೆಯವರು ಮೆರೆದ ಪ್ರಬುದ್ಧತೆಯನ್ನು ಗೌರವಾಸ್ಪದವೆನ್ನಬೇಕು.
ಅವಿಚಲ ಪ್ರಾಮಾಣಿಕತೆ
ಆಧುನಿಕ ಭಾರತದ ಸ್ವರೂಪಕ್ಕೆ ವ್ಯವಸ್ಥಿತ ನೆಲಗಟ್ಟನ್ನು ನಿರ್ಮಿಸಿದವರಲ್ಲಿ ಅಧಿಕ ಮಂದಿ 19ನೇ ಶತಮಾನದ ಉತ್ತರಾರ್ಧದಲ್ಲಿ ಜನಿಸಿದವರು. ಈ ಪಥದರ್ಶಕರ ಪಂಕ್ತಿಯಲ್ಲಿ ಗೋಪಾಲ ಕೃಷ್ಣ ಗೋಖಲೆಯವರಿಗೆ ವಿಶಿ? ಸ್ಥಾನವಿದೆ. ಈ ವಿಶಿ?ತೆಗೆ ಕಾರಣ ಗೋಖಲೆಯವರ ಪೂರ್ಣ ನಿರ್ಮಮತೆ, ತಮ್ಮದು ಪ್ರಗತಿಪರ ಪಕ್ಷಪಾತವಿದ್ದರೂ ಸಮಾಜದೊಡನೆ ನಿರಂತರ ಸಾನ್ನಿಹಿತ್ಯ, ತಮ್ಮದು ನಾಸ್ತಿಕತೆಗೆ ಹತ್ತಿರವೆನಿಸುವ? ವ್ಯವಹಾರಪ್ರಜ್ಞೆಯಾದರೂ ಪ್ರಾಮಾಣಿಕತೆಯ ಬಗೆಗೆ ಆತ್ಯಂತಿಕ ನಿಷ್ಠೆ, ಸದಾ ರಾಷ್ಟ್ರಹಿತಸಾಧಕ ದೃಷ್ಟಿ ಇದ್ದರೂ ಎಲ್ಲ ಸಂಕುಚಿತತೆಗಳಿಂದ ಮುಕ್ತರಾಗಿದ್ದುದು, ತಾವು ತಳೆದಿದ್ದ ಧೋರಣೆ ದೋ?ಯುಕ್ತವೆಂದು ಸಿದ್ಧಪಟ್ಟಾಗ ತಮ್ಮ ಪದಸ್ಖಲನವನ್ನು ಘಂಟಾಘೋ?ವಾಗಿ ಸಾರುವ ಎದೆಗಾರಿಕೆ; – ಈ ಅಸಾಮಾನ್ಯ ಗುಣಗಳು.
ಮೇಲಿನ ವಿಶೇಷ ಗುಣಗಳಿಗೆ ಗಮನ ಸೆಳೆದಿರುವುದರ ಆಶಯ ಗೋಖಲೆಯವರ ವ್ಯಕ್ತಿತ್ವಕ್ಕೆ ತತ್ಕಾಲೀನ ರಾಜಕಾರಣವನ್ನು ಮೀರಿದ ಆಯಾಮಗಳಿವೆ ಎಂದು ಸೂಚಿಸುವುದು
ಆಟವಾಡುತ್ತಿದ್ದಾಗ ಒಮ್ಮೆ ಹೇಗಾದರೂ ಗೆಲ್ಲಲು ಮೋಸದ ಉಪಾಯವನ್ನು ತನ್ನ ಅಣ್ಣ ಗೋವಿಂದ ಸೂಚಿಸಿದಾಗ ಗೋಖಲೆ ಇಂತಹ ಕೆಲಸವನ್ನು ಮಾತ್ರ ನಾನು ಪ್ರಾಣ ಹೋದರೂ ಮಾಡಲಾರೆ ಎಂದು ಉತ್ತರಿಸಿದ್ದರು.
ಇವತ್ತಿನ ದಿನಗಳಲ್ಲಿ ಯಾರೋ ಮಾಡಿದ ಕೆಲಸಕ್ಕೆ ತಾವು ಚಪ್ಪಾಳೆ ಗಿಟ್ಟಿಸಿಕೊಳ್ಳಲು ಜನರು ಸಾಲುಗಟ್ಟಿರುತ್ತಾರೆ. ಈ ಪ್ರವೃತ್ತಿಗೆ ತೀರಾ ವಿರುದ್ಧವಾಗಿದ್ದವರು ಗೋಖಲೆ.
ಅವರು ಪ್ರೌಢಶಾಲೆಯಲ್ಲಿದ್ದಾಗ ಕ್ಲಿಷ್ಟ ಗಣಿತ ಸಮಸ್ಯೆಯೊಂದಕ್ಕೆ ಸರಿಯಾಗಿ ಉತ್ತರಿಸಿದುದನ್ನು ಮೆಚ್ಚಿ ಅಧ್ಯಾಪಕರು ಅವರನ್ನು ತರಗತಿಯ ಅಗ್ರಪಂಕ್ತಿಯಲ್ಲಿ ಕುಳಿತುಕೊಳ್ಳುವಂತೆ ಕರೆದರು. ಆದರೆ ಗೋಖಲೆಯವರು ಸಮಸ್ಯೆಯ ಪರಿಹಾರದಲ್ಲಿ ತಾವು ಮಿತ್ರರೊಬ್ಬರ ನೆರವನ್ನು ಪಡೆದಿದ್ದುದಾಗಿ ಹೇಳಿ ಅಧ್ಯಾಪಕರು ಸೂಚಿಸಿದ್ದ ಮೆಚ್ಚಿಕೆಯನ್ನು ನಿರಾಕರಿಸಿದರು.
ಇತರರ ವಿಚಾರಹೀನ ಬೇಡಿಕೆಗಳನ್ನೂ ತಿರಸ್ಕರಿಸದ ಸೌಮ್ಯಸ್ವಭಾವದವರಾಗಿದ್ದರು ಗೋಖಲೆಯವರು – ಎಂದು ಜವಾಹರಲಾಲ್ ನೆಹರು ಒಂದು ಪ್ರಸಂಗವನ್ನು ದಾಖಲೆ ಮಾಡಿದ್ದಾರೆ. ಒಮ್ಮೆ ಆಗ ಪಬ್ಲಿಕ್ ಸರ್ವಿಸ್ ಕಮಿಷನ್ ಸದಸ್ಯರಾಗಿದ್ದ ಗೋಖಲೆಯವರು ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದಾಗ ಅಲ್ಲಿಗೆ ಬಂದ ಇಬ್ಬರು ಪರಿಚಿತರು ಜಾಗ ಕೋರಿದಾಗ ತಾವು ಅನಾರೋಗ್ಯದಲ್ಲಿದ್ದರೂ ಗೋಖಲೆಯವರು ತಮ್ಮ ಜಾಗವನ್ನು ಬಿಟ್ಟುಕೊಟ್ಟು ತಮಗೆ ಅನನುಕೂಲವಾದರೂ ಮೇಲಿನ ಬರ್ತಿಗೆ ಹೋಗಿ ಮಲಗಿ ರಾತ್ರಿಯನ್ನೆಲ್ಲ ಜಾಗರಣೆಯಲ್ಲಿ ಕಳೆದಿದ್ದರಂತೆ.
ಬೆಳೆಯುವ ಕುಡಿ…
ಗೋಖಲೆಯವರು 19 ವರ್ಷ ವಯಸ್ಸಿನವರಿದ್ದಾಗ ನಡೆದ ಈ ಘಟನೆ ಪ್ರಸಿದ್ಧವಾದುದು. ಪುಣೆಯ ಡೆಕ್ಕನ್ ಎಜುಕೇಷನ್ ಸೊಸೈಟಿಯ ಮುಖ್ಯ ಸಮಾರಂಭವೊಂದನ್ನು ಆಗಿನ ಮುಂಬಯಿ ಗವರ್ನರ್ ಉದ್ಘಾಟಿಸುವವರಿದ್ದರು. ಲಿಖಿತ ಆಮಂತ್ರಣಪತ್ರಿಕೆ ಪಡೆದಿದ್ದವರಿಗೆ ಮಾತ್ರ ಪ್ರವೇಶವಿದ್ದಿತು. ದ್ವಾರದಲ್ಲಿ ಅತಿಥಿಗಳನ್ನು ಬರಮಾಡಿಕೊಳ್ಳುವ ಹೊಣೆಯನ್ನು ಯುವಕ ಗೋಖಲೆಯವರಿಗೆ ವಹಿಸಲಾಗಿತ್ತು. ಸಭೆಗೆ ಆಗಮಿಸಿದ ನ್ಯಾಯಮೂರ್ತಿ ಮಹಾದೇವ ಗೋವಿಂದ ರಾನಡೆ ಮಹಾಶಯರು ಆಮಂತ್ರಣಪತ್ರವನ್ನು ತಂದಿರಲಿಲ್ಲ. ಆ ಸಮಯಕ್ಕೆ ಗೋಖಲೆಯವರಿಗೆ ರಾನಡೆಯವರ ಮುಖಪರಿಚಯವೂ ಇರಲಿಲ್ಲ. ಗೋಖಲೆಯವರು ಮುಲಾಜಿಲ್ಲದೆ ರಾನಡೆಯವರಿಗೆ ಪ್ರವೇಶವನ್ನು ನಿರಾಕರಿಸಿದರು. ಇದನ್ನು ದೂರದಿಂದ ಗಮನಿಸಿದ ಅಧಿಕಾರಿಯೊಬ್ಬರು ಧಾವಿಸಿ ಬಂದು ರಾನಡೆಯವರನ್ನು ತಮ್ಮ ಸಂಗಡ ಒಳಕ್ಕೆ ಒಯ್ದರು. (’ಮಹರ್ಷಿ ರಾನಡೆ’ಯವರು ಮುಂಬಯಿ ಉಚ್ಚ ನ್ಯಾಯಾಲಯದ ನ್ಯಾಯಾಧೀಶರಾಗಿದ್ದವರು; ಖ್ಯಾತ ಅರ್ಥಶಾಸ್ತ್ರಜ್ಞರು, ಸಮಾಜಶಾಸ್ತ್ರಜ್ಞರು.)
ತನ್ನಿಂದ ಅಪರಾಧವಾಗಿತ್ತೇನೋ ಎಂಬ ಭಾವನೆ ಗೋಖಲೆಯವರನ್ನು ಬಾಧಿಸಿತು. ಈ ಅಪರಾಧಕ್ಕೆ ’ದಂಡನೆ’ ಆರು ತಿಂಗಳಾದ ಮೇಲೆ ಗೋಖಲೆಯವರಿಗೆ ದೊರೆಯಿತು. ರಾನಡೆಯವರು ಗೋಖಲೆಯವರಿಗೆ ಕರೆಕಳುಹಿಸಿದರು. ಅಳುಕಿನಿಂದಲೇ ರಾನಡೆಯವರಲ್ಲಿಗೆ ಹೋದ ಗೋಖಲೆಯವರಿಗೆ ರಾನಡೆ ಹೇಳಿದರು – ನೀವು ದಯವಿಟ್ಟು ಪುಣೆಯ ಸಾರ್ವಜನಿಕ ಸಭೆಯ ಕಾರ್ಯದರ್ಶಿಸ್ಥಾನವನ್ನು ಒಪ್ಪಿಕೊಳ್ಳಬೇಕೆಂದು ನಾನು ಕೋರುತ್ತಿದ್ದೇನೆ.
* * *
ಎಳವೆಯಿಂದಲೂ ಗೋಖಲೆ ತಮ್ಮ ಸ್ಮರಣಶಕ್ತಿಯನ್ನು ಹರಿತವಾಗಿ ಉಳಿಸಿಕೊಂಡಿದ್ದರು. ಒಮ್ಮೆ ಪಾಠ್ಯಪುಸ್ತಕವೊಂದನ್ನು ಕೊಳ್ಳಲು ಹಣ ಇರದಿದ್ದಾಗ, ಅದನ್ನು ಮಿತ್ರನೊಬ್ಬನಿಂದ ಎರವಲು ಪಡೆದು ಎರಡೇ ದಿನಗಳಲ್ಲಿ ಪುಸ್ತಕವಷ್ಟನ್ನೂ ಕಂಠಸ್ಥ ಮಾಡಿಕೊಂಡಿದ್ದರು.
ಸಾಮಾನ್ಯ ಮಧ್ಯಮವರ್ಗದ ಹಿನ್ನೆಲೆಯಿಂದ ಬಂದು ಕ್ಲಿಷ್ಟ ಸನ್ನಿವೇಶಗಳ ನಡುವೆ ಶಿಕ್ಷಣ ಪಡೆದು ಅಧ್ಯಾಪಕ ವೃತ್ತಿಯಲ್ಲಿ ತೊಡಗಿದ್ದ ವ್ಯಕ್ತಿಯೊಬ್ಬರು ಇಂಗ್ಲೆಂಡಿಗೆ ತೆರಳಿ ಪ್ರತಿಷ್ಠಿತ ಆಯೋಗದ ಮುಂದೆ ಭಾರತದ ಪ್ರತಿನಿಧಿಯಾಗಿ ಸಾಕ್ಷ್ಯ ನೀಡಲು ಆಯ್ಕೆಯಾದದ್ದು (1897), ಮುಂಬಯಿಯ ಶಾಸನಸಭೆಯ ಸದಸ್ಯರಾಗಿ ಆಯ್ಕೆಗೊಂಡದ್ದು (1899), ಆಗಿನ ಭಾರತ ಸರ್ಕಾರದ ಕೇಂದ್ರ ಶಾಸನಮಂಡಳಿಯ ಸದಸ್ಯರಾಗಿ ನೇಮಕಗೊಂಡದ್ದು (1902ರಿಂದ), ಪುಣೆಯ ನಗರಸಭೆಯ ಅಧ್ಯಕ್ಷರಾದದ್ದು (1905), ಅಖಿಲ ಭಾರತ ಕಾಂಗ್ರೆಸಿನ ಅಧ್ಯಕ್ಷರಾಗಿ ನಿಯುಕ್ತರಾದದ್ದು (1905); – ಹೀಗೆ ತಾವು ಸಾರ್ವಜನಿಕಜೀವನದಲ್ಲಿದ್ದ ಕೇವಲ ಎರಡು ದಶಕಗಳ ಅವಧಿಯಲ್ಲಿ ಹಲವು ಚರಿತ್ರಾರ್ಹ ಸಾಧನೆಗಳನ್ನು ಗೋಖಲೆಯವರು ಮಾಡಿದುದು ವಿಸ್ಮಯಾವಹವಾಗಿದೆ.
ಅಧ್ಯಾಪಕವೃತ್ತಿ
ಹೆಚ್ಚು ಗಳಿಕೆಯ ಸಾಧ್ಯತೆಗಳಿದ್ದ ಇಂಜಿನಿಯರಿಂಗ್, ವಕೀಲಿ ಮೊದಲಾದ ಕ್ಷೇತ್ರಗಳ ಆಕರ್ಷಣೆಯಿಂದ ದೂರ ಉಳಿದು ಅಧ್ಯಾಪಕವೃತ್ತಿಯನ್ನೇ ಜೀವನೋಪಾಯವಾಗಿ ಆಯ್ಕೆ ಮಾಡಿಕೊಂಡದ್ದು ಗೋಖಲೆಯವರ ಆದರ್ಶಪ್ರಿಯತೆಯನ್ನು ಸೂಚಿಸುತ್ತದೆ. ಸುಮಾರು ಹದಿನೆಂಟು ವರ್ಷಕಾಲ (1885-1902) ಅವರ ಜೀವಿಕೆಗೆ ಆಧಾರವಾಗಿದ್ದುದು ಪುಣೆಯ ಡೆಕ್ಕನ್ ಎಜುಕೇಶನ್ ಸೊಸೈಟಿ-ಫರ್ಗುಸನ್ ಕಾಲೇಜಿನ ಬೋಧಕತ್ವ. (ಆ ಧ್ಯೇಯವಾದಪ್ರವರ್ತಿತ ಸಂಸ್ಥೆಯಲ್ಲಿ ಮುಖ್ಯೋಪಾಧ್ಯಾಯರೂ ಸೇರಿದಂತೆ ಎಲ್ಲರೂ ಪಡೆಯುತ್ತಿದ್ದ ಗರಿ? ಸಂಬಳ ತಿಂಗಳಿಗೆ ರೂ. 75.)
ಶಿಕ್ಷಣಕ್ಷೇತ್ರಕ್ಕೆ ಗೋಖಲೆಯವರ ಕೊಡುಗೆ ಗಣನೀಯವಾದದ್ದು. ಮೂವತ್ತರ ವಯಸ್ಸಿನಲ್ಲಿ ಗೋಖಲೆಯವರು ಪ್ರೌಢಶಾಲೆಗಳಿಗಾಗಿ 450 ಪುಟದ ಅಂಕಗಣಿತ ಪಾಠ್ಯಗ್ರಂಥವನ್ನು ಮರಾಠಿಯಲ್ಲಿ ಬರೆದು ಪ್ರಕಟಿಸಿದರು. ಅದು ಅನೇಕ ವರ್ಷಕಾಲ ಬಳಕೆಯಲ್ಲಿ ಇದ್ದಿತು. ಯಾವುದೇ ಕಾರ್ಯಕ್ಕೆ ತೊಡಗಿದರೂ ಅದರೊಡನೆ ತಾದಾತ್ಮ್ಯ ಬೆಳೆಸಿಕೊಳ್ಳುವ ಗೋಖಲೆಯವರ ಸ್ವಭಾವಕ್ಕೆ ಇಂತಹ ಹಲವಾರು ನಿದರ್ಶನಗಳನ್ನು ಸ್ಮರಿಸಬಹುದು.
ಬೇರೆಬೇರೆ ವಿಷಯಗಳಿಗೆ ಬೇರೆಬೇರೆ ಬೋಧಕರು ಆ ಕಾಲದಲ್ಲಿ ಇರುತ್ತಿರಲಿಲ್ಲ. ಹೀಗೆ ಆವಶ್ಯಕತೆ ಕಂಡಂತೆ ಇಂಗ್ಲಿಷ್ ಭಾಷಾ-ಸಾಹಿತ್ಯ, ಚರಿತ್ರೆ, ಅರ್ಥಶಾಸ್ತ್ರ, ಗಣಿತಶಾಸ್ತ್ರ ಮೊದಲಾದ ವಿವಿಧ ವಿಷಯಗಳನ್ನು ಗೋಖಲೆಯವರು ಬೋಧಿಸಬೇಕಾಯಿತು.
ರಾಜಕೀಯ ಕಾರ್ಯದ ಒತ್ತಡ ಅಧಿಕವಾದಾಗ ಅರೆಮನಸ್ಸಿನಿಂದಲೇ ಮಾಸ್ತರಿಕೆಗೆ ರಾಜೀನಾಮೆ ನೀಡಿದರು.
ಅವರ ನಿರ್ಧನತೆಗೆ ಸ್ವಲ್ಪಮಟ್ಟಿಗೆ ಶಮನಕಾರಿಯಾಗಿದ್ದುದು ಅವರು ಬರೆದಿದ್ದ ಗಣಿತ ಪಾಠ್ಯಗ್ರಂಥದ ಮಾರಾಟದಿಂದ ಆಗಾಗ ಬರುತ್ತಿದ್ದ ಅಲ್ಪ ಹಣ.
* * *
ತಾವು ಎಂದೂ ಋಣಿಗಳಾಗಿರಬಾರದು ಎಂಬುದರ ಬಗೆಗೆ ಗೋಖಲೆಯವರಿಗೆ ಅಪರಿಮಿತ ಶ್ರದ್ಧೆ ಇದ್ದಿತು. ಅವರು ಊಟ ಮಾಡುತ್ತಿದ್ದ ಭೋಜನಾಲಯದಲ್ಲಿ ನಿಗದಿಯಾಗಿದ್ದ (ಆ ದಿನಗಳಲ್ಲಿ ತಿಂಗಳಿಗೆ ರೂ. 4) ಸಲ್ಲಿಸಲಾಗಿರಲಿಲ್ಲ ಎಂಬ ಕಾರಣಕ್ಕಾಗಿ ಹಲವು ದಿನ ಊಟವನ್ನೇ ಮಾಡದೆ ಉಪವಾಸವಿದ್ದರು.
ಒಮ್ಮೆ ಸ್ನೇಹಿತನೊಬ್ಬನ ದಾಕ್ಷಿಣ್ಯಕ್ಕೊಳಗಾಗಿ ನಾಟಕದ ಟಿಕೆಟ್ ಕೊಳ್ಳಬೇಕಾಯಿತು. ಅದರ ಮೌಲ್ಯ 2 ಆಣೆಗಳು. ಆ ಸಣ್ಣ ಮೊತ್ತವೂ ಗೋಖಲೆಯವರಲ್ಲಿ ಇರಲಿಲ್ಲ. ಅವರು ಹಲವಾರು ದಿನಗಳು ದೀಪದ ಎಣ್ಣೆಯನ್ನು ಕೊಳ್ಳದೆ ಬೀದಿ ದೀಪದಲ್ಲಿ ಓದುತ್ತ ಎರಡಾಣೆಯನ್ನು ತುಂಬಿಸಿದರು.
ಗಾಂಧಿಯವರಿಗೆ ಮಾರ್ಗದರ್ಶಿ
ಗಾಂಧಿಯವರನ್ನು ಕಾಂಗ್ರೆಸಿಗೆ ಪರಿಚಯ ಮಾಡಿಕೊಟ್ಟವರು ಗೋಖಲೆಯವರೇ. 1902ರ ಕೊಲ್ಕತಾ ಕಾಂಗ್ರೆಸ್ ಅಧಿವೇಶನದಲ್ಲಿ ದಕ್ಷಿಣ ಆಫ್ರಿಕಾ-ಸ್ಥಿತ ಭಾರತೀಯರ ಬವಣೆಯನ್ನು ಕುರಿತು ನಿರ್ಣಯವೊಂದನ್ನು ಕಾಂಗ್ರೆಸಿನ ಅಂಗೀಕಾರಕ್ಕಾಗಿ ಗಾಂಧಿಯವರು ಮಂಡಿಸಲು ಇಚ್ಛಿಸಿದ್ದಾರೆ – ಎಂದು ಗೋಖಲೆಯವರು ಆ ಅಧಿವೇಶನದ ವಿಷಯಪರಾಮರ್ಶನ ಸಮಿತಿಯಲ್ಲಿ ಪ್ರಕಟಿಸಿದರು. ಹೆಚ್ಚಿನವರಿಗೆ ಆ ವಿಷಯ ತುಂಬಾ ಮಹತ್ತ್ವದ್ದೆಂದಾಗಲಿ ಗಾಂಧಿಯವರ ವ್ಯಕ್ತಿತ್ವವು ಗಣ್ಯವಾದ್ದೆಂದಾಗಲಿ ಅನಿಸಿರಲಿಕ್ಕಿಲ್ಲ. ಠರಾವೇನೋ ಸ್ವೀಕೃತವಾಯಿತು. ಗಾಂಧಿಯಂತಹ ಕಿರಿಯನನ್ನು ಗೋಖಲೆ ಬೆಂಬಲಿಸಿ ಮುಂದೆ ತಂದದ್ದು ಗೋಖಲೆಯವರ ಉದಾರತೆಗೆ ಸಾಕ್ಷಿ. ಆ ವೇಳೆಗೇ ಇಬ್ಬರ ನಡುವೆ ಗುರು-ಶಿಷ್ಯ ಬಾಂಧವ್ಯ ಏರ್ಪಟಿತ್ತು. ಗೋಖಲೆಯವರ ಸಲಹೆಯಂತೆ ದೇಶಪರಿಜ್ಞಾನದ ಗಳಿಕೆಗಾಗಿ ಗಾಂಧಿಯವರು ಪರ್ಯಟನಕ್ಕೆ ಹೊರಟಾಗ ಅವರನ್ನು ರೇಲ್ವೆ ನಿಲ್ದಾಣದಲ್ಲಿ ಗೋಖಲೆಯವರು ಹರಸಿ ಬೀಳ್ಕೊಟ್ಟರು; ಪ್ರಯಾಣದ ಬಳಕೆಗಾಗಿ ತಿಂಡಿಯ ಡಬ್ಬಿಯನ್ನು ಗಾಂಧಿಯವರ ಕೈಯಲ್ಲಿರಿಸಿದರು.
ಯುವಕ ಗಾಂಧಿಯ ಮೊದಲ ಭೇಟಿಯಾಗುವ ವೇಳೆಗೇ (1896) ಗೋಖಲೆಯವರು ಡೆಕ್ಕನ್ ಎಜುಕೇಷನ್ ಸೊಸೈಟಿಯ ಕಾರ್ಯದರ್ಶಿಯಾಗಿಯೂ ಒಂದೆರಡು ಪತ್ರಿಕೆಗಳ ಸಂಪಾದಕರಾಗಿಯೂ ನಿಯುಕ್ತರಾಗಿದ್ದು ಭಾವೀ ಜನನಾಯಕರೆಂದು ಗುರುತಿಸಲ್ಪಟ್ಟಿದ್ದರು.
ಅವರ ಆರ್ಥಿಕ ತಜ್ಞತೆಯನ್ನು ಲಕ್ಷಿಸಿ ಅವರನ್ನು ಆಂಗ್ಲಸರ್ಕಾರದ ವೆಲ್ಬಿ ಕಮಿಷನ್ನಿನ ಮುಂದೆ ಸಾಕ್ಷ್ಯ ನೀಡಲು ಆಯ್ಕೆ ಮಾಡಲಾಗಿತ್ತು (1897). ಭಾರತದ ಆರ್ಥಿಕ ಸ್ಥಿತಿಗತಿಗಳ ಪರಾಮರ್ಶನೆಗಾಗಿ ಆಂಗ್ಲಸರ್ಕಾರ ರಚಿಸಿದ್ದುದು ’ವೆಲ್ಬಿ ಆಯೋಗ. ಆ ಆಯೋಗದ ಮುಂದೆ ಸಾಕ್ಷ್ಯ ನೀಡಿದವರ ಪೈಕಿ ಎಲ್ಲರಿಗಿಂತ ಹೆಚ್ಚಿನ ಪ್ರಶಂಸೆ ಗಳಿಸಿಕೊಂಡವರು ಗೋಖಲೆ. ಆಯೋಗ ಸದಸ್ಯರು ಕೇಳಿದ ಪ್ರಶ್ನೆಗಳಿಗೆಲ್ಲ ಉತ್ತರಿಸುವುದರಲ್ಲಿ ಗೋಖಲೆ ತೋರಿದ ಪರಿಜ್ಞಾನವೂ ದಿಟ್ಟತನವೂ ವಿಸ್ಮಯಕರವಾಗಿದ್ದವು.
ಗೋಖಲೆಯವರ ನಿರ್ಣಯೂ ವಿದ್ವತ್ತೂ ಅವರಿಗೆ ಮುಂಬಯಿ ವಿಧಾನ ಪರಿಷತ್ತಿನ ಸದಸ್ಯತ್ವವನ್ನೂ (1899) ಕೇಂದ್ರ ಶಾಸನಸಭೆಯ ಸದಸ್ಯತ್ವವನ್ನೂ (1902) ದೊರಕಿಸಿದ್ದವು. ಉಪ್ಪಿನ ತೆರಿಗೆಯ ರದ್ದತಿಗಾಗಿಯೂ ನಿಃಶುಲ್ಕ ಸಾರ್ವತ್ರಿಕ ಪ್ರಾಥಮಿಕ ಶಿಕ್ಷಣ ನೀಡಿಕೆಗಾಗಿಯೂ ಹಲವು ಮುಖ್ಯ ಸಂವಿಧಾನಿಕ ಸುಧಾರಣೆಗಳಿಗಾಗಿಯೂ ಆಗ್ರಹಿಸಿ ಗೋಖಲೆಯವರು ಕೇಂದ್ರ ಶಾಸನಸಭೆಯಲ್ಲಿ ಮಾಡಿದ ಭಾ?ಣ (೧೯೦೭) ಒಂದು ಮೈಲಿಗಲ್ಲು ಎನಿಸಿತು.
ದಕ್ಷಿಣ ಆಫ್ರಿಕಾ ಮತ್ತಿತರ ದೇಶಗಳಲ್ಲಿ ನೆಲೆಸಿದ್ದ ಭಾರತೀಯರ ಸಮಸ್ಯೆಗಳಿಗೆ ಸರ್ಕಾರಗಳ ಹಾಗೂ ಜನತೆಯ ಗಮನ ಸೆಳೆದ ಪ್ರಮುಖರು ಗೋಖಲೆ. 1912ರ ಅಕ್ಟೋಬರ್ ಅಂತ್ಯದಲ್ಲಿ ಗೋಖಲೆಯವರು ಖುದ್ದಾಗಿ ದಕ್ಷಿಣ ಆಫ್ರಿಕಾ ಪ್ರವಾಸವನ್ನೂ ಕೈಗೊಂಡರು.
ನೇಟಾಲ್ನ ’ಟಾಲ್ಸ್ಟಾಯ್ ಫಾರ್ಮ್’ನಲ್ಲಿ ಅವರು ಗಾಂಧಿಯವರ ಅತಿಥಿಯಾಗಿದ್ದಾಗ ಅವರ ಬಳಕೆಗಾಗಿ ಮಂಚವೊಂದನ್ನು ಏರ್ಪಡಿಸಲಾಗಿತ್ತು. ಆದರೆ ಉಳಿದೆಲ್ಲರೂ ನೆಲದ ಮೇಲೆಯೇ ಮಲಗುತ್ತಿದ್ದುದು ತಿಳಿದು ಗೋಖಲೆಯವರು ತಾವೂ ಮಂಚವನ್ನು ನಿರಾಕರಿಸಿದರು.
ಮಧುರ ಬಾಂಧವ್ಯ
ಆ ಆಫ್ರಿಕಾ ಪ್ರವಾಸದ ಅವಕಾಶವನ್ನು ಬಳಸಿಕೊಂಡು ಗೋಖಲೆಯವರು ಗಾಂಧಿಯವರಿಗೆ ಭಾರತದಲ್ಲಿನ ಸ್ಥಿತಿಗತಿಗಳ ಸವಿವರ ಪರಿಚಯ ನೀಡಿ ಆಮೇಲಿನ ಕಾಲದ ಸಾರ್ವಜನಿಕಜೀವನಕ್ಕೆ ಗಾಂಧಿಯವರ ಮನಸ್ಸನ್ನು ಅಣಿಗೊಳಿಸಿದರು.
ದಕ್ಷಿಣ ಆಫ್ರಿಕಾದಲ್ಲಿನ ಎಂಟು ವರ್ಷಗಳ ಸತ್ಯಾಗ್ರಹಪರ್ವ ಮುಕ್ತಾಯಗೊಂಡ ಮೇಲೆ ಗಾಂಧಿಯವರು ಗೋಖಲೆಯವರ ಸಲಹೆಯಂತೆ ಇಂಗ್ಲೆಂಡಿನಲ್ಲಿ ನಾಲ್ಕೈದು ತಿಂಗಳನ್ನು ಕಳೆದು 1915ರ ಆರಂಭದಲ್ಲಿ ಭಾರತಕ್ಕೆ ಮರಳಿದರು.
ಗಾಂಧಿಯವರ ಮಾರ್ಗವನ್ನು ಪ್ರಶಸ್ತಗೊಳಿಸಿದವರು ಗೋಖಲೆಯವರೇ. ಆದರೂ ಗಾಂಧಿಯವರ ಹಲವು ಪ್ರವೃತ್ತಿಗಳು ಗೋಖಲೆಯವರಿಗೆ ಸಮ್ಮತವೆನಿಸಿರಲಿಲ್ಲ. ನಿದರ್ಶನಕ್ಕೆ: ಸೀಮಿತ ಗುರಿಗಳ ಈಡೇರಿಕೆಗಾಗಿ ಜನರಲ್ಲಿ ಪ್ರತಿಭಟನೆಯ ಸ್ವಭಾವವನ್ನು ಬೆಳೆಸಿದರೆ ಅದು ಕ್ರಮೇಣ ಅನುಶಾಸನಹೀನತೆಯಲ್ಲಿ ಪರ್ಯವಸಾನವಾಗುತ್ತದೆ – ಎಂಬುದು ಗೋಖಲೆಯವರ ನಿಲವು. ಈ ನಿಲವಿನ ಉಪಾದೇಯತೆಯನ್ನು ಅಲ್ಲಗಳೆಯುವುದು ಕಷ್ಟ.
ಗೋಖಲೆಯವರು ’ಸಾರ್ವಜನಿಕ ಜೀವನವನ್ನು ಧರ್ಮಮಯವಾಗಿಸಬೇಕು’ ಎಂಬ ಆಶಯದಿಂದ ೧೯೦೫ರಲ್ಲಿ ಪುಣೆಯಲ್ಲಿ ಸ್ಥಾಪಿಸಿದ್ದ ಸರ್ವೆಂಟ್ಸ್ ಆಫ್ ಇಂಡಿಂii ಸೊಸೈಟಿ ಸಂಸ್ಥೆಗೆ ಗಾಂಧಿ ಸದಸ್ಯರಾಗುವ ಒಲವನ್ನು ವ್ಯಕ್ತಪಡಿಸಿದರು. ಗಾಂಧಿಯವರ ಮನಃಪ್ರವೃತ್ತಿಯು ಸಂಸ್ಥೆಯ ಅನುಶಾಸನಕ್ಕೆ ಹೊಂದಲಾರದೆಂಬ ಅಭಿಮತ ತಳೆದು ಗೋಖಲೆಯವರು ಗಾಂಧಿಯವರ ಅಭ್ಯರ್ಥನೆಯನ್ನು ನಿರಾಕರಿಸಿದರು. ಆದರೆ ಆನಂತರವೂ ಅವರಿಬ್ಬರ ಗುರು- ಶಿಷ್ಯ ಬಾಂಧವ್ಯ ಮುಂದುವರಿಯಿತು.
ದುರ್ದೈವದಿಂದ ೧೯೧೫ರ ಫೆಬ್ರುವರಿ ೧೯ರಂದು ಗೋಖಲೆಯವರ ದೇಹಾವಸಾನವಾಯಿತು.
ಗೋಖಲೆ, ಗಾಂಧಿ -ಇಬ್ಬರ ನಡುವೆ ಗಾಢ ಆತ್ಮೀಯತೆ ಇದ್ದರೂ ಅಭಿಪ್ರಾಯಭೇದಗಳೂ ಇಲ್ಲದಿರಲಿಲ್ಲ. ನಿದರ್ಶನಕ್ಕೆ: ಗಾಂಧಿಯವರಿಗೆ ಸಮ್ಮತವಿರದಿದ್ದ ಪ್ರತ್ಯೇಕ ಪ್ರಾತಿನಿಧ್ಯ ವ್ಯವಸ್ಥೆಯನ್ನು ಗೋಖಲೆಯವರು ವಿರೋಧಿಸಲಿಲ್ಲ. ಇಂತಹ ದೃಗ್ಭೇದಗಳು ಇದ್ದರೂ ಅವು ಪರಸ್ಪರ ಪ್ರೀತಿ-ಗೌರವಗಳಿಗೆ ಎಂದೂ ಬಾಧೆ ತರಲಿಲ್ಲ – ಎಂಬುದು ಸಾರ್ವಜನಿಕಜೀವನದ ಒಂದು ಉನ್ನತ ಆದರ್ಶವೆಂಬುದನ್ನು ಒಪ್ಪಬೇಕು.
ಸೌಹಾರ್ದಮಯತೆ
ಪಾಂಡಿತ್ಯದಿಂದಾಗಿಯೂ ನಿಃಸ್ವಾರ್ಥದ ಮತ್ತು ತ್ಯಾಗದ ಹಿನ್ನೆಲೆಯಿಂದಾಗಿಯೂ ಸಾರ್ವಜನಿಕಜೀವನದಲ್ಲಿ ಗೋಖಲೆಯವರಿಗೆ ಲಭಿಸಿದ್ದ ಸ್ಥಾನ ಉನ್ನತವಾದುದು. ಆದರೂ ತಮ್ಮ ಹೆಚ್ಚುಗಾರಿಕೆಯನ್ನು ಮೆರೆಸುವುದು ಅವರ ಸ್ವಭಾವಕ್ಕೆ ಪೂರ್ಣ ಹೊರತಾಗಿದ್ದಿತು. ಅವರ ಅಭಿಪ್ರಾಯಗಳು ಸದಾ ನಿ?ಕ್ಷಿಕವೂ ತರ್ಕಾಧಾರಿತವೂ ಆಗಿರುತ್ತಿದ್ದರೂ, ವಿರೋಧಿಗಳೂ ಸೇರಿದಂತೆ ಎಲ್ಲರ ಬಗೆಗೆ ಗೋಖಲೆಯವರು ತೋರುತ್ತಿದ್ದ ಸೌಹಾರ್ದಪೂರ್ಣ ವರ್ತನೆಗೆ ಎಂದೂ ಭಂಗ ಬಂದುದಿಲ್ಲ.
ತಮ್ಮ ವಿರೋಧಿಗಳ ಬಗೆಗೆ ಯಾರಾದರೂ ಅಗ್ಗದ ಮಾತನ್ನಾಡುವುದನ್ನು ಗೋಖಲೆಯವರು ಖಾಸಗಿ ಗೋಷ್ಠಿಗಳಲ್ಲಿಯೂ ಸಹಿಸುತ್ತಿರಲಿಲ್ಲ. ಪ್ರತಿಕಕ್ಷಿಗಳೂ ಸೇರಿದಂತೆ ಎಲ್ಲರನ್ನೂ ಮನಸಾರ ಗೌರವಿಸುವುದು ಅವರ ರಕ್ತಗತ ಸ್ವಭಾವವಾಗಿತ್ತು. ಅವರಮಟ್ಟಿಗೆ ಇದು ಕೇವಲ ವ್ಯೂಹ ಅಥವಾ ರಣತಂತ್ರವಾಗಿರದೆ ತಾವು ನಂಬಿದ್ದ ಜೀವನಮೌಲ್ಯವಾಗಿತ್ತು.
ಒಮ್ಮೆ ಕೇಂದ್ರ ಶಾಸನಸಭೆಯಲ್ಲಿ ಮುಸ್ಲಿಂ ಸದಸ್ಯರೊಬ್ಬರು ಮಾತನಾಡಿದಾಗ ಅದರಲ್ಲಿ ಇಂಗ್ಲಿಷ್ ಭಾಷಾದೋಷ ಇದ್ದುದರ ಬಗೆಗೆ ಕೆಲವರು ಸದಸ್ಯರು ಮುಸಿಮುಸಿ ನಕ್ಕಾಗ ಗೋಖಲೆಯವರು ಸಭೆಯಿಂದ ಹೊರಗೆ ಬಂದು ಕೇವಲ ಭಾ?ಯಿಂದ ವ್ಯಕ್ತಿಯೊಬ್ಬನ ಯೋಗ್ಯತೆಯನ್ನು ಅಳೆಯಬಹುದೆ? ಇಷ್ಟಾಗಿ ಈತನೂ ಭಾರತೀಯ ಎಂಬುದನ್ನೇ ನೀವೆಲ್ಲ ಮರೆತಿರಲ್ಲ! ಎಂದು ತಮ್ಮ ಸಹಚರರನ್ನು ತರಾಟೆಗೆ ತೆಗೆದುಕೊಂಡರು.
ಅವರ ಉದಾರದೃಷ್ಟಿ ಎಂದೂ ಮಸುಕಾದುದಿಲ್ಲ. ಸಮಾಜದಲ್ಲಿ ವಿರಳವಲ್ಲದ ಸ್ವಾರ್ಥಪ್ರವೃತ್ತಿಯೂ ಪ್ರತಿ?ಕಾಮನೆಯೂ ಎದುರಾದಾಗಲೂ ಗೋಖಲೆಯವರ ವರ್ತನೆ ಸಮತೋಲಿತವಾಗಿಯೆ ಇರುತ್ತಿತ್ತು. ಅವರೇ ಸ್ಥಾಪಿಸಿದ ಸರ್ವೆಂಟ್ಸ್ ಆಫ್ ಇಂಡಿಂii ಸೊಸೈಟಿಯ ವ್ಯವಹಾರಗಳಿಗೆ ಸಂಬಂಧಿಸಿದಂತೆಯೂ ಅವರು ಪ್ರಾಮಾಣಿಕತೆಯ ಮತ್ತು ನಿರ್ಣಯ ಬಗೆಗೆ ಸದಾ ನಿಷ್ಠುರರಾಗಿರುತ್ತಿದ್ದರು.
ಹಲವೊಮ್ಮೆ ಅವರ ನಿಲವುಗಳು ಆಕ್ಷೇಪಗಳಿಗೆ ಗುರಿಯಾಗುವ ಸಂಭವವಿದ್ದಾಗಲೂ ತಾವು ನಂಬಿದ್ದ ತತ್ತ್ವಗಳಿಂದ ಗೋಖಲೆ ಬದಿಗೆ ಸರಿಯುತ್ತಿರಲಿಲ್ಲ. ಅಲಹಾಬಾದಿನಲ್ಲಿ ಆಯೋಜಿತವಾಗಿದ್ದ ಹಿಂದೂ- ಮುಸ್ಲಿಂ ಸಮ್ಮೇಳನದಲ್ಲಿ ಪಾಲ್ಗೊಳ್ಳಲು ಅವರು ನಿರಾಕರಿಸಿ ಹೇಳಿದರು – ನಾನು ನನ್ನನ್ನು ಭಾರತೀಯನೆಂದ? ಪರಿಗಣಿಸುವೆ.
ಸುಧಾರಣ ಕಾರ್ಯಕ್ರಮಗಳಲ್ಲಿ ಅವರು ಅನ್ಯರು ನಿರೀಕ್ಷಿಸಿದ ಪ್ರಮಾಣದಲ್ಲಿ ಪಾಲ್ಗೊಳ್ಳಲಿಲ್ಲವೆಂಬ ವ್ಯಾಖ್ಯೆಯುಂಟು. ಆದರೆ ಅವರು ಆಗಿಂದಾಗ ಸ್ಫುಟೀಕರಿಸುತ್ತಿದ್ದುದು ದೇಶಭಕ್ತಿಗೆ ಆದ್ಯತೆ ಸಂದ ಹೊರತು ಸುಧಾರಣಪ್ರಯತ್ನಗಳು ಸಶಕ್ತಗೊಳ್ಳಲಾರವು ಎಂದು.
ಮುಸಲ್ಮಾನರು ಮಾತ್ರವಲ್ಲ, ಅವರಿಗಿಂತ ಸಣ್ಣ ಸಂಖ್ಯಾಪ್ರಮಾಣದಲ್ಲಿದ್ದ ವೀರಶೈವ ಮತ್ತಿತರ ವರ್ಗಗಳ ಹಿತದ ರಕ್ಷಣೆಗೂ ಸೂಕ್ತಪ್ರಮಾಣದ ಪ್ರಾತಿನಿಧ್ಯದ ಮೂಲಕ ವ್ಯವಸ್ಥೆಯಾಗಬೇಕು ಎಂದು ಗೋಖಲೆಯವರೇ ಕಂಠೋಕ್ತವಾಗಿ ಹೇಳಿದುದು ಆಮೇಲಿನ ಕಾಲದ ಸಂವಿಧಾನ ರೂಪಣಕ್ಕೆ ಪೀಠಿಕೆಯಂತೆ ಇದ್ದಿತು.
ಪ್ರಖರ ರಾಷ್ರಭಕ್ತಿ
ಬೇರೆಯವರ ದೃಷ್ಟಿಯಲ್ಲಿ ಮುಖ್ಯವೆನಿಸಿದ್ದ (ಉದಾ: ಜಾತಿಪದ್ಧತಿ) ಹಲವು ವಿಷಯಗಳ ಬಗೆಗೆ ಗೋಖಲೆಯವರು ಹೆಚ್ಚು ಮಾತಾಡುತ್ತಿರಲಿಲ್ಲ. ಇಂತಹ ವಿಷಯಗಳು ಪ್ರಸ್ತಾವಗೊಂಡಾಗ ಅವರು ಹೇಳುತ್ತಿದ್ದುದು ’ಮೊದಲು ನಮ್ಮ ಬಲವನ್ನು ಬೆಳೆಸಿಕೊಳ್ಳೋಣ ಎಂದು. ಇದಕ್ಕೆ ಹೆಚ್ಚಿನ ವ್ಯಾಖ್ಯಾನದ ಆವಶ್ಯಕತೆಯಿಲ್ಲ.
ಆ ದಿನಗಳಲ್ಲಿ ಯೂರೋಪಿಯನರಲ್ಲಿ ‘ಕಾಯಿಟ್’ (quoit) ಎಂಬ ಕ್ರೀಡೆ ಪ್ರಚಲಿತವಾಗಿತ್ತು. ಒಮ್ಮೆ ಕಲೆನ್ಬಾಕ್ ಮಹಾಶಯರೊಡನೆ ಆ ಆಟದಲ್ಲಿ ಸ್ಪರ್ಧಿಸಲು ಗೋಖಲೆ ಮುಂದಾದರು. ಕಲೆನ್ಬಾಕ್ರವರಿಗೆ ಸರಿಗಟ್ಟುವ ಮಟ್ಟದಲ್ಲಿ ಗೋಖಲೆ ಆಟವನ್ನು ಆಡಿದುದು ಎಲ್ಲರನ್ನೂ ಅಚ್ಚರಿಗೊಳಿಸಿತು. ಗೋಖಲೆಯವರು ಕ್ರೀಡೆಯಲ್ಲಿ ಸಮಯವನ್ನು ತೊಡಗಿಸಿದುದು ಗಾಂಧಿಯವರಿಗೆ ಅಚ್ಚರಿಯನ್ನು ತಂದಿತು. ಅನಂತರದ ಸಂವಾದದಲ್ಲಿ ಗಾಂಧಿಯವರಿಗೆ ಗೋಖಲೆ ಹೇಳಿದರು: ಈ ಹವ್ಯಾಸವನ್ನು ನಾನಾದರೂ ಇಷ್ಟಪಡುತ್ತೇನೆ ಎಂದುಕೊಂಡೆಯಾ? ಆದರೆ ಯಾವುದೇ ವಿಷಯದಲ್ಲಿ ನಾವು ಈ ಯೂರೋಪಿನ ಮಂದಿಗೆ ಕಡಮೆಯವರಲ್ಲ ಎಂದು ತೋರಿಸಿಕೊಡುವುದು ಮುಖ್ಯವಲ್ಲವೆ? ಹೀಗೆ ಎಲ್ಲ ಸನ್ನಿವೇಶಗಳಲ್ಲಿಯೂ ರಾಷ್ಟ್ರಪ್ರೇಮವು ಗೋಖಲೆಯವರನ್ನು ಪ್ರೇರಿಸುತ್ತಿತ್ತು. ವಾಸ್ತವವಾಗಿ ಗೋಖಲೆಯವರು ಆ ಆಟದ ಪರಿಚಯವನ್ನು ಆಗ್ಗೆ ಕೆಲವು ದಿನಗಳ ಹಿಂದೆಯಷ್ಟೆ ಪಡೆದಿದ್ದರು. (ಕಲೆನ್ಬಾಕ್ ಆಫ್ರಿಕಾ ಸತ್ಯಾಗ್ರಹದಲ್ಲಿ ಗಾಂಧಿಯವರ ಸಹಕಾರಿಯಾಗಿದ್ದ ಆಂಗ್ಲೇಯ.)
ಶ್ವೇತವರ್ಣೀಯರಲ್ಲಿ ರಕ್ತಗತವಾಗಿದ್ದ ತೀಕ್ಷ್ಣ ಜನಾಂಗೀಯ ಭಾವನೆಗಳ ಮತ್ತು ತದನುಗುಣ ವರ್ತನೆಗಳ ಉಪಟಳಗಳಿಂದ ಗೋಖಲೆಯವರಂತಹ ಉನ್ನತರೂ ಅನೇಕ ವೇಳೆ ಬಾಧಿತರಾಗದಿರಲಿಲ್ಲ. ಆದರೆ ಎಂದೂ ಅವರು ತಮ್ಮ ಸ್ವಾಭಿಮಾನವನ್ನು ಬಿಟ್ಟುಕೊಡಲಿಲ್ಲ. ಒಮ್ಮೆ ಹಡಗಿನಲ್ಲಿ ಪಯಣಿಸುವಾಗ ಅವರು ಭೋಜನಕೂಟಕ್ಕೆ ಆಮಂತ್ರಿತರಾದರು. ಅಂತಹ ಕೂಟಗಳಲ್ಲಿ ಶ್ವೇತೇತರಮೂಲಗಳವರಿಗೆ ಕೆಳದರ್ಜೆಯ ಆಸನಗಳನ್ನಷ್ಟೆ ನಿಯೋಜಿಸುವುದು ರೂಢಿಯಾಗಿತ್ತು. ಗೋಖಲೆಯವರು ಅಂತಹ ಅವಗಣನೆಯನ್ನೊಪ್ಪದೆ ತಮ್ಮ ಕೋಣೆಯಲ್ಲಿಯೇ ಭೋಜನವನ್ನು ಸ್ವೀಕರಿಸುವುದಾಗಿ ಪ್ರಕಟಪಡಿಸಿದರು. ಹಡಗಿನ ಕಪ್ತಾನನು ಗೋಖಲೆಯವರಿಗಾಗಿ ಇತರರಿಗೆ ಸಮನಾದ ಆಸನವನ್ನು ಏರ್ಪಡಿಸುವುದಾಗಿ ಹೇಳಿದ ಮೇಲ? ಅವರು ಹೋಗಿ ಕೂಟದಲ್ಲಿ ಭಾಗಿಯಾದರು. (ಸಶೇಷ)