‘ಚಾರ್ಲಿ ಹೆಬ್ಡೋ’ ಘಟನಾನಂತರ, ಇಸ್ಲಾಂ ಆತಂಕವಾದದ ವಿರುದ್ಧ ಮತ್ತೆ ದನಿಯೆದ್ದಿದೆ. ವಿಶೇಷವಾಗಿ ಹೇಳುವುದಾದರೆ, ವಿಶ್ವದ ಬಹುದೊಡ್ಡ ಮತವಾದ ಕ್ರಿಶ್ಚಿಯನ್ ಮತಾನುಯಾಯಿಗಳಿಗೂ ಇಸ್ಲಾಮೀಯರಿಗೂ ನಡುವೆ ಹಿಂದಿನಿಂದ ಇದ್ದ ಸಂಘರ್ಷ ಈಗ ತೀವ್ರಗೊಂಡಿದೆ. ಈ ಬೆಳವಣಿಗೆ ಮುಂದೆ ಇನ್ನಷ್ಟು ವ್ಯಾಪಕವಾದ ರಕ್ತಪಾತಗಳಿಗೆ ಎಡೆಮಾಡಿಕೊಟ್ಟೀತು.
ಜನವರಿ ೭, ೨೦೧೫ರಂದು ಬೆಳಗ್ಗೆ ಸುಮಾರು ೧೧.೩೦ಕ್ಕೆ, ಫ್ರಾನ್ಸ್ನ ವಿಡಂಬನಾತ್ಮಕ ವಾರಪತ್ರಿಕೆ `ಚಾರ್ಲಿ ಹೆಬ್ಡೋ’ದ ಪ್ಯಾರಿಸ್ ಪತ್ರಿಕಾಕಚೇರಿಯ ಮೇಲೆ ಮೂವರು ಬಂದೂಕುಧಾರಿಗಳು ನಡೆಸಿದ ಗುಂಡಿನ ದಾಳಿಯಲ್ಲಿ ೮ ಪತ್ರಕರ್ತರು, ಇಬ್ಬರು ಪೊಲೀಸರು ಸೇರಿದಂತೆ ೧೨ ಮಂದಿ ಮೃತರಾದರು. ಫ್ರಾನ್ಸ್ನ ಅಧ್ಯಕ್ಷ ಫ್ರಾಂಸ್ವಾ ಹೊಲಾಂದೇ (Francois Hollande) ಅವರೇ ಹೇಳಿದಂತೆ ಇದು – ಭಯೋತ್ಪಾದಕ ದಾಳಿ.
ಅನಂತರ ಅವರು ಮುಂದುವರಿದು ಹೇಳಿದ್ದು – ಫ್ರೆಂಚರನ್ನು ಯಾವ ಶಕ್ತಿಯೂ ವಿಭಜಿಸಲಾರದು. ಸ್ವಾತಂತ್ರ್ಯವು ಯಾವತ್ತೂ ಬರ್ಬರತೆಯಿಂದ ಇನ್ನಷ್ಟು ಬಲಗೊಳ್ಳುತ್ತದೆ.
ಖಂಡನೆಗಳ ಮಹಾಪೂರ
ಇದು ಭಯಾನಕ, ಅನ್ಯಾಯಪೂರ್ಣ ಹಾಗೂ ಕ್ರೂರ ಅಪರಾಧವಾಗಿದೆ. ಈ ಬೀಭತ್ಸ ದಾಳಿಯ ಹಿಂದಿರುವ ಉದ್ದೇಶ ಜನರನ್ನು ಒಡೆಯುವುದು. ನಾವು ಈ ಜಾಲದಲ್ಲಿ ಖಂಡಿತವಾಗಿಯೂ ಸಿಕ್ಕಿಬೀಳಬಾರದು ಎಂದು ವಿಶ್ವಸಂಸ್ಥೆಯ ಮಹಾಕಾರ್ಯದರ್ಶಿ ಬನ್ ಕಿ ಮೂನ್ ಅವರು ಘಟನೆಯ ಕುರಿತು ತಕ್ಷಣವೇ ಟ್ವೀಟ್ ಮಾಡಿದ್ದಾರೆ.
‘ಸಾಮಾಜಿಕ ವಾತಾವರಣವನ್ನು ಹದಗೆಡಿಸುವ ಇಂತಹ ದಾಳಿಗಳು ಖಂಡನಾರ್ಹ. ೨೦೧೪ರಲ್ಲಿ ವಿಶ್ವದಲ್ಲಿ ಹತ್ಯೆಯಾದ ಪತ್ರಕರ್ತರ ಸಂಖ್ಯೆ ೬೧. ಈಗ, ೨೦೧೫ರ ಆರಂಭದಲ್ಲೇ ನಡೆದ ಈ ಹತ್ಯೆ ಪತ್ರಿಕಾಸ್ವಾತಂತ್ರ್ಯದ ಮೇಲೆ ನಡೆಸಿದ ದಾಳಿ ಮಾತ್ರವಲ್ಲ, ಪ್ರಜಾಪ್ರಭುತ್ವ ಕುರಿತ ಅರಿವಿನ ಗ್ರಹಿಕೆಗೇ ಬಿದ್ದಂತಹ ದೊಡ್ಡ ಹೊಡೆತವಾಗಿದೆ’ – ಎಂದೆಲ್ಲ ಪತ್ರಿಕೆಗಳು ಬರೆದವು.
ಘಟನೆಯ ಬಗ್ಗೆ ಲೇಖಕ ಸಲ್ಮಾನ್ ರುಶ್ದೀ – ವಾಸ್ತವದಲ್ಲಿ ಧರ್ಮ ಮತ್ತು ಆಧುನಿಕ ಶಸ್ತ್ರಾಸ್ತ್ರಗಳ ಸಂಗಮವೇ ಸ್ವಾತಂತ್ರ್ಯಕ್ಕೆ ಒದಗಿಬಂದಿರುವ ನಿಜವಾದ ಅಪಾಯವಾಗಿದೆ. ಜಗತ್ತಿನ ಇತರ ಎಲ್ಲ ವೈಚಾರಿಕತೆ, ಪಂಥಗಳಂತೆ ಇಸ್ಲಾಂ ವೈಚಾರಿಕ ತರ್ಕ ಹಾಗೂ ವ್ಯಂಗ್ಯಗಳಿಗೆ ತೆರೆದುಕೊಳ್ಳುವುದಿಲ್ಲ ಎಂದು ಸಾಮಾಜಿಕಜಾಲತಾಣದಲ್ಲಿ ತಮ್ಮ ಪ್ರತಿಭಟನೆಯನ್ನು ಬರೆದು ಪ್ರಕಟಿಸಿದರು.
ಯಾವ ಜನರು ನನ್ನ ಧರ್ಮದ ಹೆಸರಿನಲ್ಲಿ ಇಂತಹ ಕ್ರೂರ ಹತ್ಯೆಗಳನ್ನು ಎಸಗುತ್ತಾ ಇದ್ದಾರೋ, ಅಂಥವರಿಂದಲೇ ಮುಸಲ್ಮಾನರಿಗೆ ಹಾಗೂ ಇಸ್ಲಾಂಗೆ ಬಹುದೊಡ್ಡ ಹಾನಿಯಾಗುತ್ತಿದೆಯಲ್ಲದೆ, ಇನ್ನಾರಿಂದಲೂ ಅಲ್ಲ – ಎಂದು ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಉಮರ್ ಅಬ್ದುಲ್ಲಾ ಅವರು ತಮ್ಮ ದಿಗ್ಭ್ರಮೆಯನ್ನು ವ್ಯಕ್ತಪಡಿಸಿದರು.
ದಾಳಿಯಿಂದ ದಿಗ್ಭ್ರಮೆಗೊಂಡಿದ್ದೇವೆ ಮತ್ತು ಇಂತಹ ಕೃತ್ಯಗಳನ್ನು ತೀವ್ರವಾಗಿ ವಿರೋಧಿಸುತ್ತೇವೆ – ಎಂದು ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಹಾಂಗ್ ಲೀ ಪ್ರತಿಕ್ರಿಯಿಸಿದರು.
‘ಚಾರ್ಲಿ ಹೆಬ್ಡೋ’ ದಾಳಿಯನ್ನು ಖಂಡಿಸಿ ಪ್ಯಾರಿಸ್ನಲ್ಲಿ ಬೃಹತ್ ಪ್ರತಿಭಟನೆ ನಡೆಯಿತು.
ಹೀಗೆ, `ಚಾರ್ಲಿ ಹೆಬ್ಡೋ’ ದಾಳಿಯ ಬಗ್ಗೆ, ಜಗತ್ತಿನೆಲ್ಲೆಡೆಯಿಂದ ಖಂಡನೆಗಳ ಮಹಾಪೂರವೇ ಹರಿದುಬಂತು. ಆಗಸ್ಟ್ ೧೯೪೪ರಲ್ಲಿ, ಪ್ಯಾರಿಸ್ ವಿಮೋಚನೆಯ ಸಂದರ್ಭದಲ್ಲಿ, ನಡೆದ ಜನಮೆರವಣಿಗೆಯ ನಂತರ, ಸುಮಾರು ೩೭ ಲಕ್ಷ ಜನರು ಸೇರಿ ದಾಖಲೆಯಾದ ಬಹುದೊಡ್ಡ ಮೆರವಣಿಗೆಯೂ ಪ್ಯಾರಿಸ್ನಲ್ಲಿ ನಡೆಯಿತು. ಅದರಲ್ಲಿ ಸಾಮಾಜಿಕ, ರಾಜಕೀಯ ಹಾಗೂ ಧಾರ್ಮಿಕ ಹೀಗೆ ಎಲ್ಲ ವರ್ಗದಿಂದಲೂ ಜನರು ತಾರತಮ್ಯವಿಲ್ಲದೆ ಭಾಗವಹಿಸಿ, ಭಯೋತ್ಪಾದನೆಯ ವಿರುದ್ಧ ತಮ್ಮ ಐಕ್ಯವನ್ನು ಪ್ರದರ್ಶಿಸಿದರು.
‘ಚಾರ್ಲಿ ಹೆಬ್ಡೋ’ ದಾಳಿಯ ಅನಂತರ ಇದೀಗ ಫ್ರಾನ್ಸ್ನಲ್ಲಿ ಮುಸ್ಲಿಂವಿರೋಧಿ ದಾಳಿಗಳು ಹೆಚ್ಚುತ್ತಿವೆಯೆಂಬ ವರದಿಯಿದೆ. ಫ್ರಾನ್ಸ್ನ ‘ಇಸ್ಲಾಮೀ-ಮಾನಸಿಕತೆ ವಿರೋಧಿ ರಾಷ್ಟ್ರೀಯ ಜಾಗೃತಸಂಸ್ಥೆ’ಯ ಪ್ರಕಾರ, ಜನವರಿ ೭-೯ರ ಘಟನೆಯ ನಂತರ ಸುಮಾರು ೧೧೬ ಈ ರೀತಿಯ ಮುಸ್ಲಿಂವಿರೋಧಿ ದಾಳಿಗಳು ಫ್ರಾನ್ಸ್ನಲ್ಲಿ ನಡೆದಿವೆ.
ಪ್ರತಿಭಟನೆಯ ಕಾಳ್ಗಿಚ್ಚು
ಇನ್ನೊಂದೆಡೆ, ‘ಚಾರ್ಲಿ ಹೆಬ್ಡೋ’ ದಾಳಿಯ ಪ್ರೇರಣೆಯೆಂಬಂತೆ, ‘ಚಾರ್ಲಿ ಹೆಬ್ಡೋ’ ಪತ್ರಿಕೆಯಲ್ಲಿ ಪ್ರಕಟವಾದ ವ್ಯಂಗ್ಯಚಿತ್ರವನ್ನು ವಿರೋಧಿಸಿ ನೈಜ಼ರ್ನಲ್ಲಿ ರಕ್ತಪಾತವಾದರೆ, ಚೆಚೆನ್ಯಾದ ರಾಜಧಾನಿ ಗ್ರೋಜ್ನಿಯಲ್ಲಿ ಸರಕಾರದ ಕೃಪಾಶ್ರಯದಲ್ಲೇ ಬಹುದೊಡ್ಡ ಜನಮೆರವಣಿಗೆ ನಡೆಯಿತು (ಫ್ರಾನ್ಸ್ನ ವಾರ್ತಾಸಂಸ್ಥೆ ಎಎಫ್ಪಿಯ ಪತ್ರಕರ್ತನ ವರದಿಯಂತೆ ಹತ್ತಾರು ಸಾವಿರ ಜನರು ಈ ಮೆರವಣಿಗೆಯಲ್ಲಿ ಭಾಗವಹಿಸಿದ್ದರೆ, ಅಧಿಕಾರಿಗಳು ತಿಳಿಸುವಂತೆ ಒಂದು ಮಿಲಿಯಕ್ಕೂ ಹೆಚ್ಚು ಜನ ಪ್ರತಿಭಟನಾಮೆರವಣಿಗೆಯಲ್ಲಿ ಭಾಗವಹಿಸಿದ್ದರು). ಆಫಘನಿಸ್ತಾನದಲ್ಲಿ ಪ್ರತಿಭಟನಕಾರರು ಫ್ರೆಂಚ್ ರಾಷ್ಟ್ರಧ್ವಜವನ್ನು ಸುಟ್ಟುಹಾಕಿದರು. ಗಾಜ಼ಾಪಟ್ಟಿಯಲ್ಲಿ ಮುಸ್ಲಿಮರು ಫ್ರೆಂಚರ ವಿರುದ್ಧ ಬೆದರಿಕೆಹಾಕಿದರು.
ಇದು ಪ್ರವಾದಿ ಮೊಹಮ್ಮದರ ಚಿತ್ರಗಳನ್ನು ಪ್ರಕಟಿಸುವವರನ್ನು ಬೆಂಬಲಿಸುವವರ ವಿರುದ್ಧದ ಒಂದು ಪ್ರತಿಭಟನೆಯಾಗಿದೆ – ಎಂದು ಚೆಚೆನ್ಯಾವನ್ನು ದಶಕಕ್ಕೂ ಹೆಚ್ಚು ಕಾಲ ತನ್ನ ಬಿಗಿಮುಷ್ಟಿಯಲ್ಲಿ ಆಳಿದ್ದ ರಮ್ಜಾನ್ ಕದ್ರೋವ್ ಗ್ರೋಜ್ನಿಯಲ್ಲಿ ನೆರೆದಿದ್ದ ಪ್ರತಿಭಟನಕಾರರನ್ನು ಉತ್ತೇಜಿಸಿ ಭಾಷಣ ಮಾಡಿದ್ದು ಪತ್ರಿಕೆಗಳಲ್ಲಿ ವರದಿಯಾಗಿದೆ.
ಪ್ರಪಂಚದ ಇತರೆಡೆಗಳಲ್ಲಿ ನಡೆದಂತೆ, ಆಫಘನಿಸ್ತಾನ ಮತ್ತು ಪಾಕಿಸ್ತಾನದಲ್ಲಿಯೂ ಸಾವಿರಾರು ಜನರು ಫ್ರೆಂಚ್ ರಾಷ್ಟ್ರಧ್ವಜವನ್ನು ಸುಟ್ಟುಹಾಕಿ ಮತ್ತು ಫ್ರಾನ್ಸ್ ದೇಶದ ಜತೆಗಿನ ರಾಜತಾಂತ್ರಿಕ ಸಂಬಂಧಗಳನ್ನೆಲ್ಲ ಕಡಿದುಕೊಳ್ಳುವಂತೆ ತಮ್ಮತಮ್ಮ ಸರ್ಕಾರವನ್ನು ಒತ್ತಾಯಿಸುವುದರ ಮೂಲಕ ‘ಚಾರ್ಲಿ ಹೆಬ್ಡೋ’ ವಿರುದ್ಧ ಪ್ರತಿಭಟನೆಯನ್ನು ನಡೆಸಿದ್ದಾರೆ. ಪೂರ್ವ ಆಫಘನಿಸ್ತಾನದ ಪಟ್ಟಣ ಜಲಾಲಾಬಾದ್ನಲ್ಲಿ ಪ್ರತಿಭಟನಕಾರರು ಫ್ರಾನ್ಸ್ ವಿರುದ್ಧ ಘೋಷಣೆಗಳನ್ನು ಕೂಗಿದರು; ಇಸ್ಲಾಮನ್ನು ರಕ್ಷಿಸುವ ಪ್ರತಿಜ್ಞೆಯನ್ನು ಮಾಡಿದರು. ನೆರೆಯ ಪಾಕಿಸ್ತಾನದ ಪೇಷಾವರದಲ್ಲಿ ಐದು ಮತ್ತು ಪ್ರಮುಖ ವಾಣಿಜ್ಯಕೇಂದ್ರವಾದ ಕರಾಚಿಯಲ್ಲಿ ಒಂದು ಪ್ರತಿಭಟನಾ ಕಾರ್ಯಕ್ರಮ ನಡೆದಿದೆ.
ಗಾಜ಼ಾಪಟ್ಟಿಯಲ್ಲಿ, ಸುಮಾರು ೨೦೦ ಮಂದಿ ‘ಕಪ್ಪು ಜಿಹಾದಿಗಳು’ ಎಂದು ಗುರುತಿಸಿಕೊಳ್ಳುವ ಇಸ್ಲಾಂ ತೀವ್ರವಾದಿಗಳು ಫ್ರೆಂಚರ ವಿರುದ್ಧ ದಾಳಿನಡೆಸುವುದಾಗಿ ಬೆದರಿಕೆಯನ್ನೊಡ್ಡಿದ್ದಾರೆ. ಫ್ರೆಂಚರೇ, ಗಾಜ಼ಾವನ್ನು ತೊರೆಯಿರಿ; ಇಲ್ಲವಾದರೆ ನಿಮ್ಮನ್ನು ಬಲಿತೆಗೆದುಕೊಳ್ಳುವೆವು – ಎಂಬುದಾಗಿ ಪ್ರತಿಭಟನಕಾರರು ಫ್ರೆಂಚ್ ಸಾಂಸ್ಕೃತಿಕ ಕೇಂದ್ರದ ಎದುರಿನಲ್ಲಿ ಘೋಷಣೆಗಳನ್ನು ಕೂಗಿದ್ದಾರೆ.
೪೫ ಚರ್ಚ್ಗಳಿಗೆ ಬೆಂಕಿ
ನೈಜ಼ರ್ನಲ್ಲಿ ವ್ಯಂಗ್ಯಚಿತ್ರವನ್ನು ವಿರೋಧಿಸಿ ಪ್ರತಿಭಟನೆ ಹಲವು ದಿನಗಳವರೆಗೆ ನಡೆದು, ಆಸ್ತಿ-ಪಾಸ್ತಿಗಳಿಗೂ ಜೀವಕ್ಕೂ ಅಪಾರ ಹಾನಿಯಾಯಿತು. ರಾಜಧಾನಿ ನಿಯಾಮೆಯಲ್ಲಿ ನಡೆದ ಭೀಕರ ಹಿಂಸಾತ್ಮಕ ಪ್ರತಿಭಟನೆಯಲ್ಲಿ ಒಂದು ವಾರದ ಅವಧಿಯಲ್ಲಿ ೪೫ ಚರ್ಚ್ಗಳನ್ನು ಸುಟ್ಟುಹಾಕಲಾಯಿತು ಎಂದು ಪೊಲೀಸ್ ವರದಿಗಳು ಹೇಳುತ್ತವೆ. ಈ ಭೀಕರ ಹಿಂಸಾತ್ಮಕ ಪ್ರತಿಭಟನೆಯಲ್ಲಿ ೫ ಜನರು ಮೃತಪಟ್ಟರು ಮತ್ತು ೧೨೮ ಜನರು ಗಾಯಗೊಂಡರು. ಮಾತ್ರವಲ್ಲ ಹಿಂಸಾಚಾರದಿಂದಾಗಿ ಒಂದು ಕ್ರಿಶ್ಚಿಯನ್ ಶಾಲೆ ಮತ್ತು ಅನಾಥಾಲಯಕ್ಕೆ ಬೆಂಕಿಹಚ್ಚಲಾಯಿತು – ಎಂದು ನೈಜ಼ರ್ನ ರಾಷ್ಟ್ರೀಯ ಪೊಲೀಸ್ ವಕ್ತಾರ ಅದಿಲಿ ತೊರೊ ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದ್ದಾಗಿ ಎಎಫ್ಪಿ ವರದಿಮಾಡಿದ್ದಿದೆ.
‘ಚಾರ್ಲಿ ಹೆಬ್ಡೋ’ ಘಟನೆಯಿಂದ ಉಂಟಾದ ಪ್ರತಿಕ್ರಿಯಾಸರಣಿ ಹೀಗೆ ಮುಂದುವರಿಯುತ್ತಿದ್ದರೆ, ಪ್ಯಾರಿಸ್ನಿಂದ ೪೦೦೦ ಮೈಲಿಗಳ ದೂರದಲ್ಲಿ, ಸೌದಿ ಅರೇಬಿಯಾದ ಜೆದ್ದಾದಲ್ಲಿ, ಜನವರಿ ೯ರ ಪ್ರಾರ್ಥನೆಯ ನಂತರ, ರಯಿಫ್ ಬದ್ವಾಯಿ ಎಂಬ ಒಬ್ಬ ಯುವಕನಿಗೆ ಸಾರ್ವಜನಿಕರ ಮುಂದೆ ೫೦ ಛಡಿಯೇಟಿನ ಶಿಕ್ಷೆ ನೀಡಲಾಗುತ್ತಿತ್ತು. ನೆರೆದಿದ್ದ ಸಾರ್ವಜನಿಕರು ದೊಡ್ಡದನಿಯಲ್ಲಿ ‘ಅಲ್ಲಾಹು ಅಕ್ಬರ್’ ಎಂದು ಕೂಗುತ್ತಿದ್ದರು. ಅಷ್ಟಕ್ಕೂ ಆ ಯುವಕ ಮಾಡಿದ ಅಪರಾಧ ಏನು ಗೊತ್ತೇ? ಪ್ರಜಾತಂತ್ರ ಮತ್ತು ಸ್ವಾತಂತ್ರ್ಯದ ಕುರಿತು ಚರ್ಚೆಗೆ ಅವಕಾಶವನ್ನು ನೀಡಲು ಸಾಧ್ಯವಾಗುವಂತೆ ಆತ ಆನ್ಲೈನ್ ಬ್ಲಾಗ್ ಒಂದನ್ನು ಮಾಡಿದ್ದು! ಅದಕ್ಕಾಗಿ ಆತನಿಗೆ ೨೦೧೪ರ ಮೇ ತಿಂಗಳಲ್ಲಿ ೧೦ ವರ್ಷದ ಜೈಲುಶಿಕ್ಷೆ ಮತ್ತು ೧೦೦೦ ಛಡಿಯೇಟು (ಪ್ರತಿವಾರ ೫೦ರಂತೆ ೨೦ ವಾರ) ಹಾಗೂ ಜತೆಗೆ ಒಂದು ಮಿಲಿಯ ರಿಯಾಲ್ಗಳ (೨.೬ ಲಕ್ಷ ಅಮೆರಿಕನ್ ಡಾಲರ್ಗಳ) ಜುಲ್ಮಾನೆಯ ಶಿಕ್ಷೆಯನ್ನು ವಿಧಿಸಲಾಗಿತ್ತು; ಇಷ್ಟೆಲ್ಲ ಅವನು ಇಸ್ಲಾಮನ್ನು ಅವಹೇಳನ ಮಾಡಿದ್ದಕ್ಕಾಗಿಯಂತೆ.
ಇಸ್ಲಾಂ ಹೆಸರಲ್ಲಿ ನಡೆದ ಜನಸಂಹಾರದ ಇನ್ನೊಂದು ರೂಪ ಇಲ್ಲಿದೆ ನೋಡಿ – ಇದೇ ಜನವರಿ ಮೊದಲವಾರದಲ್ಲಿ ಉತ್ತರ ನೈಜೀರಿಯಾದ ಹಳ್ಳಿಯೊಂದರಲ್ಲಿ ಇಸ್ಲಾಮೀ ಆತಂಕವಾದಿಗಳು ಯದ್ವಾತದ್ವಾ ಗುಂಡುಹಾರಿಸಿ ೨೦೦೦ಕ್ಕೂ ಹೆಚ್ಚು ಜನರನ್ನು ಕೊಂದು, ಅವರ ಶವಗಳನ್ನು ಬೀದಿಯಲ್ಲಿ ರಾಶಿಹಾಕಿದರು.
ಜನಾಂಗೀಯ ಸಂಘರ್ಷದೆಡೆಗೆ
ಇಂದು ಜಾಗತಿಕವಾಗಿ ಇಸ್ಲಾಂ ತೀವ್ರವಾದಿಗಳು ಜನಾಂಗೀಯ ಸಂಘರ್ಷಕ್ಕೆ ಎಡೆಯಾಗುವಂತಹ ವಾತಾವರಣವನ್ನು ಸೃಷ್ಟಿಸುತ್ತಿದ್ದಾರೆ. ಇಡೀ ಜಗತ್ತು ಆಧುನಿಕ, ವೈಜ್ಞಾನಿಕ ವಿಚಾರಧಾರೆಯೊಂದಿಗೆ ಉತ್ಕರ್ಷದ ಕಡೆಗೆ ಮುನ್ನುಗ್ಗುತ್ತಿದ್ದರೆ, ಇಸ್ಲಾಮೀ ತೀವ್ರವಾದಿಗಳು, ಇನ್ನೂ ಮಧ್ಯಯುಗದಲ್ಲಿರುವವರಂತೆ, ಭಯೋತ್ಪಾದನೆಯಂತಹ ಅನಾಗರಿಕ ನಡವಳಿಕೆಯನ್ನು ಪ್ರದರ್ಶಿಸುತ್ತ, ನಾಗರಿಕ-ಸಾಂಸ್ಕೃತಿಕ ಸಂಘರ್ಷಕ್ಕೆ ಕಾರಣವಾಗುತ್ತಿರುವುದು ದುರಂತವೇ ಸರಿ. ಒಂದೆಡೆ ಜಗತ್ತಿನೆಲ್ಲೆಡೆ ಮಾನವಹಕ್ಕು (ವಿಶೇಷವಾಗಿ ಮಹಿಳೆಯರ ಹಾಗೂ ಮಕ್ಕಳ ವಿಷಯದಲ್ಲಿ), ಅಭಿಪ್ರಾಯಸ್ವಾತಂತ್ರ್ಯ ಇತ್ಯಾದಿಗಳ ಬಗ್ಗೆ ಹೆಚ್ಚುಹೆಚ್ಚು ಆಗ್ರಹಗಳು ವ್ಯಕ್ತವಾಗುತ್ತಿದ್ದರೆ, ಇನ್ನೊಂದೆಡೆ ಇಸ್ಲಾಂ ತೀವ್ರವಾದಿಗಳು ಮಾತ್ರ ತಮ್ಮ ಅಭಿಪ್ರಾಯವನ್ನು ಜನರಮೇಲೆ ಹೇರಲು ಹೊರಟಿರುವುದು, ವಿರೋಧಿಸುವವರನ್ನು ಹಿಂಸೆಯ ಮೂಲಕ ಪ್ರತಿಬಂಧಿಸುವುದು ಮೃಗೀಯನಡವಳಿಕೆಯ ಪರಮಾವಧಿಯಲ್ಲದೆ ಮತ್ತೇನೂ ಆಗದು.
ಗ್ರೋಜಿಯಲ್ಲಿ ನೆರೆದಿದ್ದ ‘ಚಾರ್ಲಿ ಹೆಬ್ಡೋ’ ದಾಳಿಯ ಬೆಂಬಲಿಗರು
‘ಇತರ ಮತಗಳನ್ನು ಗೌರವಿಸು’ ಎಂಬ ಮಾತು ಈಗ ಬದಲಾಗಿ ‘ಇತರ ಮತಗಳು ಭಯಾನಕ’ ಎಂಬಲ್ಲಿಗೆ ಬಂದು ತಲಪಿದೆ. ಜಗತ್ತಿನಲ್ಲಿ ಅತಿ ಹೆಚ್ಚು ಅನುಯಾಯಿಗಳನ್ನು ಹೊಂದಿರುವ ಇಸ್ಲಾಂ ಮತ್ತು ಕ್ರಿಶ್ಚಿಯನ್ ಮತಾವಲಂಬಿಗಳು ತಮ್ಮತಮ್ಮ ಮತ-ಪಂಥಗಳ ಪ್ರಚಾರಕ್ಕಾಗಿ ಎಲ್ಲ ರೀತಿಯ ಅಪಮಾರ್ಗಗಳನ್ನೂ ಅನುಸರಿಸುತ್ತಿದ್ದಾರೆ. ಜನರನ್ನು ಹೆದರಿಸಿ, ಹೊಡೆದು-ಬಡಿದು, ಆಶೆ-ಆಮಿಷಗಳನ್ನು ಒಡ್ಡಿ ಮಾತ್ರವಲ್ಲ, ಕ್ರೂರಾತಿಕ್ರೂರವಾಗಿ ಹಿಂಸಿಸುವ ಮೂಲಕವೂ ಇವರು ತಮ್ಮ ಮತ-ಪಂಥಗಳ ಪ್ರಚಾರಕಾರ್ಯವನ್ನು ನಡೆಸಿದ ದೀರ್ಘ ಇತಿಹಾಸವಿದೆ. ಬಹುಶಃ ಈ ವಿಧಾನವನ್ನು ಅವರು ಅನುಸರಿಸದೇ ಹೋಗಿದ್ದಿದ್ದರೆ ಆ ಮತ-ಪಂಥಗಳು ತಮ್ಮ ಜನ್ಮಸ್ಥಾನವನ್ನು ಬಿಟ್ಟು ಉಳಿದೆಡೆಗೆ ಹಬ್ಬುತ್ತಲೇ ಇರಲಿಲ್ಲ. ಏಕೆಂದರೆ ಉಳಿದೆಡೆಯಲ್ಲೆಲ್ಲ ಈ ಮತ-ಪಂಥಗಳು ನಾಶಪಡಿಸಿದ್ದು, ಪಡಿಸುತ್ತಿರುವುದು ಅತ್ಯಂತ ಮುಗ್ಧ ಅಥವಾ ಸಹಿಷ್ಣು ಮಾನವಸಂಸ್ಕೃತಿಗಳನ್ನು.
ಮತ್ತೆ ಎದ್ದ ದನಿ
‘ಚಾರ್ಲಿ ಹೆಬ್ಡೋ’ ಘಟನಾನಂತರ, ಇಸ್ಲಾಂ ಆತಂಕವಾದದ ವಿರುದ್ಧ ಮತ್ತೆ ದನಿಯೆದ್ದಿದೆ. ಶತಮಾನಗಳಷ್ಟು ಹಳೆಯ ಕ್ರೈಸ್ತ-ಇಸ್ಲಾಂ ಸಂಘರ್ಷ ಮರುಕಳಿಸಿದೆ. ಈ ಬೆಳವಣಿಗೆ ಮುಂದೆ ಇನ್ನಷ್ಟು ವ್ಯಾಪಕವಾದ ರಕ್ತಪಾತಗಳಿಗೆ ಎಡೆಮಾಡಿಕೊಟ್ಟೀತು.
ಹಾಗೆ ನೋಡಿದರೆ, ಇಸ್ಲಾಮೀ ಉಗ್ರರು ನ್ಯೂಯಾರ್ಕ್ನಲ್ಲಿ ಜಾಗತಿಕ ವಾಣಿಜ್ಯ ಕೇಂದ್ರದ ಅವಳಿಕಟ್ಟಡಗಳ ಮೇಲೆ ಅಥವಾ ಮುಂಬಯಿಯಲ್ಲಿ ನಡೆಸಿದ ದಾಳಿಯ ತೀವ್ರತೆ ‘ಚಾರ್ಲಿ ಹೆಬ್ಡೋ’ ದಾಳಿಯಲ್ಲಿರಲಿಲ್ಲವಾದರೂ, ‘ಚಾರ್ಲಿ ಹೆಬ್ಡೋ’ ದಾಳಿ ಇಸ್ಲಾಮೀ ಆತಂಕವಾದದ ವಿರುದ್ಧ ಜಾಗೃತಿಯನ್ನು ಮೂಡಿಸಲು ಹಾಗೂ ಜಾಗತಿಕಶಕ್ತಿಗಳನ್ನು ಜನಾಂಗೀಯ ನೆಲೆಯಲ್ಲಿ ಧ್ರುವೀಕರಿಸಲು ಕಾರಣವಾಗಿದೆ.
ಇದು ಒಂದಾದರೆ, ಇನ್ನೊಂದು – ಇಸ್ಲಾಂನ ಆಂತರ್ಯದಲ್ಲೇ ಹಿಂಸಾಪ್ರವೃತ್ತಿಯು ಅಡಗಿರುವುದು. ಎಚ್ಚರಿಕೆಯಿಂದ ಗಮನಿಸಿದ್ದೇ ಆದರೆ ಈ ಪ್ರವೃತ್ತಿಯು ಕ್ಯಾನ್ಸರ್ನಂತೆ ಇಸ್ಲಾಮನ್ನು ವ್ಯಾಪಿಸುತ್ತಿರುವುದು ಅನುಭವಕ್ಕೆ ಬಾರದೇ ಇರದು. ಈ ವಿನಾಶಕಾರಿ ಕಾಯಿಲೆಗೆ ನಿಚ್ಚಳವಾಗಿ ಬಲಿಯಾಗುತ್ತಿರುವುದು ಸ್ವತಃ ಇಸ್ಲಾಮೀ ಸಮಾಜವೇ ಆಗಿದೆ. ಜಗತ್ತಿನಲ್ಲಿ ೧೬೦ ಕೋಟಿಯಷ್ಟು ಜನಬಾಹುಳ್ಯವುಳ್ಳ ಇಸ್ಲಾಂ ಸಮಾಜಕ್ಕೆ ಇದನ್ನು ಅರಗಿಸಿಕೊಳ್ಳಬೇಕಾದ ತೀವ್ರ ಅಗತ್ಯವೂ ಇದೆ.?
ಕಾಕುಂಜೆ ಕೇಶವ ಭಟ್ಟ