ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ
ಪ್ರಕಟಣೆಯ
60ನೇ
ವರ್ಷ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

Utthana > ಉತ್ಥಾನ ಮೇ 2016 > ಹಿನ್ನೀರ ಅಜ್ಜಿಯ ಕಣ್ಣೀರ ಕಥೆ

ಹಿನ್ನೀರ ಅಜ್ಜಿಯ ಕಣ್ಣೀರ ಕಥೆ

ಕಬ್ಬನದ ಲಾಂಚ್ಗೆ ಕಣ್ಣೀರು ಬರುತ್ತಾ…?
– ಅಜ್ಜಿ ಹೇಳಿದ ಮಾತು ಪ್ರಶ್ನೆಯಾಗಿಯೇ ಉಳಿಯಿತು.
?????????????
ಆ ಹಾಳಾದ ಲಾಂಚ್ ನಮ್ಮನ್ನು ಈ ಗೋಳಿಗೆ ನೂಕಿದೆ, ಅದಕ್ಕೆ ನಮ್ಮ ಶಾಪ ತಟ್ಟದೆ ಹೋಗ. ನಮ್ಮ ಬದುಕು ಯಾರಿಗೆ ಹೇಳಾನ, ಬೆಳಗಿನಿಂದ ಕೂಳಿಲ್ಲ ನೀರಿಲ್ಲ ಸೂರ್ಯ ಹುಟ್ಟಿ ನಡು ನೇರಕ್ಕೆ ಬಂದಾತು. ನಾನಾದ್ರೂ ಹಳೇಜೀವ ಹೆಂಗಾರು ಆತದೆ, ನನ್ನ ಮಗಳು ಹಸಿಮೈ ಬಾಣಂತೀಗೂ ಏನೂ ಇಲ್ಲದೆ ಕಣ್ ಹೊಳ್ಸ್ತವಳೆ. ಅವಳಿಗೆ ಅದೋ-ಇದೋ ಏನಾದ್ರೂ ಕೊಡಂಗೈತಾ. ಈ ನಮ್ಮ ಊರಿಗೆ ಲಾಂಚ್ ಅಂತ ಮಾಡಿ ನಮ್ಮನ್ನ ಜೀವಹಿಂಡ್ಯಾರೆ. ಹಳೇರು, ಹೆಣ್ಗಳು ಬಂದ್ರೆ ಮುಗೀತು ಅವರ ಗತಿ. ಆ ಸರ್ಕಾರದ ಬಿಳೇ ವಸ್ತ್ರದೋರಿಗೆ ಇವೆಲ್ಲ ಏನ್ ಗೊತ್ತಾತದೆ ಎಂದು ಜೋರಾಗಿ ಕೂಗುತ್ತಿದ್ದ ಈರಜ್ಜಿಯ ಬಾಯಿ ಸುಮ್ಮನಾಗಲೇ ಇಲ್ಲ. ಸಮಾಧಾನಕ್ಕೆಂದು ಡ್ರೈವರ್ ರಾಜಣ್ಣ ಹೇಳಿದ ಮಾತುಗಳು ಅಜ್ಜಿಯ ಕೂಗಿನ ಮುಂದೆ ಸಣ್ಣದಾಗಿತ್ತು.
ಸಿಗಂದೂರಿನ ಅಮಾವಾಸ್ಯೆಯ ಜನಸ್ತೋಮ. ಮಂಡೆ ಮಾತ್ರ ಕಾಣುತ್ತಿತ್ತೇ ಹೊರತು ದೇಹ ತೋರುತ್ತಿರಲಿಲ್ಲ. ಲಾಂಚಿಗೆ ಲಾಂಚೇ ತುಂಬಿ ತುಳುಕುತಿತ್ತು. ಹಸಿ ಬಾಣಂತಿಯನ್ನು ಕರೆತಂದ ಈರಜ್ಜಿಗೆ ದಿಕ್ಕೇ ತೋಚದಂತಾಯಿತು. ಬಾಣಂತಿಯ ಕಣ್ಣುಗಳು ಸಣ್ಣದಾಗುತ್ತಾ, ಪ್ರಪಂಚವೇ ತಿಳಿಯದೆ ಮಲಗಿದ ಮಗುವಿನೊಂದಿಗೆ ನಿದ್ದೆಗೆ ಜಾರಿತು. ಹೊತ್ತು ಮುಳುಗುವುದರೊಳಗೆ ಬಂದು ಕಾಯುತ್ತಿದ್ದ ಜೀವಗಳಿಗೆ ತಮ್ಮೂರು ಎಂಬ ತೃಣಮಾತ್ರದ ಹಂಗೂ ಇರಲಿಲ್ಲ. ದೂರದ ಊರಿನ ದಡೂತಿಯ, ವೈಯ್ಯಾರದ, ಬಣ್ಣ ಬಣ್ಣದ ದೇಹಗಳ ಗುಂಪು ಜಮಾಯಿಸತೊಡಗಿತು. ಅಜ್ಜಿಯ ಕೂಗಿನೊಂದಿಗೆ ಧಾರಾಕಾರವಾಗಿ ಬರುತಿದ್ದ ಕಣ್ಣೀರಿಗೆ ಉತ್ತರವೇ ಇರಲಿಲ್ಲ. ಬದುಕು ಹೀಗೂ ಇದೆಯೇ? ಎಂಬ ಪ್ರಶ್ನೆ ಈರಜ್ಜಿಯ ಮನಸ್ಸನ್ನು ತಟ್ಟುತ್ತಿತ್ತು. ಸ್ವಂತ ಹಳ್ಳಿಗೆ ಹೋಗಲು
ಇಷ್ಟು ಕಷ್ಟವೇ, ಹಾಗಾದರೆ ಇದು ಯಾವ ತರಹದ ದೇಶ, ಸರ್ಕಾರ, ರಾಜಕೀಯ ಎಂಬೆಲ್ಲ ಭಾವನೆಯ ಪ್ರಶ್ನೆಗಳು ಬಡಿದೆಬ್ಬಿಸಿದವು.
ನಗರದಾಗ ಸೇವೆ ಮಾಡೋ ಡಾಕ್ಟರಪ್ಪನ ಮುಖ ನೋಡಿದ ಅಜ್ಜಿ ನನ್ನಯ್ಯ, ಮಗಳು ಬಾಣಂತಿ ತಿಂಡಿ-ತೀರ್ಥ ಇಲ್ಲದೆ ಕೂತ್ಕಂಡೈತೆ, ಏನಾದ್ರೂ ಮಾಡಿ ಅಯ್ಯಾ, ಈ ಹೊಳೆ ದಾಟ್ಸಿ, ನಿಮಗೆ ದಮ್ಮಯ್ಯ ಅಂತೀನಿ ಎಂದು ಅಂಗಲಾಚಿದಳು. ಈ ಅಬಲೆಯ ಅಳಲು ಮಂಜಿನಂತೆ ಆವರಿಸಿ ಡಾಕ್ಟರ್ ಲಾಂಚ್ ಹತ್ತಿರ ಹೋಗಿ ನೋಡಿ ಇದು ನಮ್ಮೂರಿನ ಲಾಂಚ್, ಇಲ್ಲಿಯ ಜನರಿಗೆ ಓಡಾಡಲು ಮಾಡಿದ ವ್ಯವಸ್ಥೆ, ನೀವು ಸುಮ್ಮನೆ ನಮಗೆ ತೊಂದರೆ ಕೊಡಬೇಡಿ, ನಮಗಿರೋದು ಇದೊಂದೇ ಮಾರ್ಗ, ಇದನ್ನು ನೀವು ಈ ರೀತಿ ಹಾಳುಗೆಡವಬೇಡಿ. ಬಸ್ಸಿನಲ್ಲಿ ವಯಸ್ಕರು, ಬಾಣಂತಿಯರು ಕೂತಿದ್ದಾ, ಪರಿಸ್ಥಿತಿ ಅರ್ಥಮಾಡ್ಕೊಳ್ಳಿ ಎಂದು ತಿಳಿಹೇಳಿದರು. ಒಂದೆರಡು ನಿಮಿ? ಸುಮ್ಮನಿದ್ದ ಮನು? ಪ್ರಾಣಿಯಲ್ಲೊಬ್ಬ ಮೀಸೆಮಾವ ಹೊರಬಂದು ಯಾರದ್ದು ಲಾಂಚ್, ನಿಮ್ಮಪ್ಪನದಾ, ಸರ್ಕಾರದ್ದು – ಸರ್ಕಾರದ್ದು, ನಾನೂ ದಾಟೋಕಾಗಿಯೇ ಬಂದಿದ್ದೀನಿ, ಏನ್ ಲೋಕಲ್ ಅಂತ ಮಾತಾಡ್ತೀಯ, ನಾನು ಏನ್ ಅಮೆರಿಕದಿಂದ ಬಂದಿದೀನಾ? ಸಮ್ಕೆ ಇರೋ. ಇವನು ದೊಡ್ಡ ಡಾಕ್ಟರ್ ಅಂತೆ, ಇವನು ಹೇಳಿದ್ದೆಲ್ಲ ಕೇಳಬೇಕಾ? ಮುಚ್ಚಲೋ ಎಂದು ಮುಖಕ್ಕೆ ಮುಖ ತಾಕಿಸಿ ದಬಾಯಿಸಿದ. ಶರಾವತಿಯ ಮುಳುಗಡೆಯಿಂದ ಎಲ್ಲವನ್ನು ಕಳೆದುಕೊಂಡ ಡಾಕ್ಟರಿಗೆ ಮರ್ಯಾದೆಯೂ ಹೋಗುತ್ತಿದೆಯಲ್ಲಾ ಎಂಬ ಇನ್ನೊಂದು ಬೇಸರದ ಕೊಂಡಿ ಬೆಸೆಯತೊಡಗಿತು. ಮುಳುಗಡೆಯಾದ ಮೇಲೆ ಸರ್ಕಾರ ಎತ್ತಂಗಡಿ ಮಾಡಿದ ಬಸವಮಾವನ ಮನೆ, ಮಾವನ ಮಗಳು ಜ್ಯೋತಿ, ಆಗಾಗ ಲಲಿತತ್ತೆ ಪ್ರೀತಿಯಿಂದ ಕೊಡುತ್ತಿದ್ದ ಹುಗ್ಗಿ ಹಾಲು, ಇವೆಲ್ಲ ನೆನಪು ಮಾತ್ರವಾಗಿ ಅವರು ಆಯನೂರು ಸೇರಿದ್ದು, ಗೋವಿಂದ ಚಿಕ್ಕಪ್ಪ ನಾನು ಸತ್ತರೂ ಇಲ್ಲೇ ಎಂದು ಮನೆಯ ಮುಂದಿನ ತೆಂಗಿನ ಮರವನ್ನು ಅಪ್ಪಿ ಹಿಡಿದದ್ದು, ಪೊಲೀಸರು ಲಾಠಿ ಬೀಸಿ ಹೊರಹಾಕಿದ್ದು, ತನ್ನ ಗೆಳೆಯ ಚಂದ್ರ ಮತ್ತು ಲಕ್ಷ್ಮಿಯ ಪ್ರೀತಿ ಮುಳುಗಡೆಯಲ್ಲೇ ಮುಳುಗಿಹೋದದ್ದು ಇವೆಲ್ಲ ಡಾಕ್ಟರಿಗೆ ಒಮ್ಮೆಲೆ ಒತ್ತರಿಸಿ ಬಂದವು.
ಕೂಗಿ ಕೂಗಿ ಗಂಟಲು ಬತ್ತಿಹೋಗಿ ಕೂತ ಈರಜ್ಜಿಯ ಕಣ್ಣಿನೊಳಗೆ ಕತ್ತಲೆಯ ಮೋಡ ಕರಿದಾಯಿತು. ಸಿಗಂದೂರು ತನ್ನೂರು ಎಂಬ ಭಾವನೆಯೆ ಬತ್ತಿಹೋಯಿತು. ಸೂರ್ಯ ನೆತ್ತಿಯನ್ನು ನುಣುಚಿದರೂ ಜನರು ಅಲ್ಲಾಡಲೇ ಇಲ್ಲ. ಲಾಂಚಿಗೆ ನುಗ್ಗುವ, ಬೀಳುವ, ಏಳುವ, ಬಾಗಿಲಿಗೆ ಸಿಕ್ಕಿ ಒದ್ದಾಡುವ ಅನೇಕ ದೃಶ್ಯಗಳು ಸಮದೂಗತೊಡಗಿದವು. ದೂರದಲ್ಲಿ ನಿಂತ ಖಾಕಿ ವಸ್ತ್ರಗಳು ನೋಡಿಯೂ ನೋಡದಹಾಗೆ ನಿಂತುಬಿಟ್ಟಿದ್ದವು. ಇವೆಲ್ಲ ಸತ್ಯವೋ -ಮಿಥ್ಯೆಯೋ ಎಂಬಂತೆ ಈರಜ್ಜಿಗೆ ಭಾಸವಾಗಿ, ಕನ್ನಡಿಯ ಮಿಂಚಿನೊಳಗೆ ತನ್ನಳಲು ತೋಡಿಕೊಂಡು ಮನದಲ್ಲಿಯೇ ಮೂಕಳಾದಳು.
ತಾಯಿಯ ನೋವು ತಡಯಲಾರದೆ ಮಗಳ ಜೀವ ತತ್ತರಿಸುತ್ತಿದ್ದರೂ ಅವ್ವಾ ಸುಮ್ಕಿರೇ, ನಮ್ಮ ನೋವು ಯಾರಿಗೆ ಕೇಳಸ್ತದೆ. ಎಲೆಕ್ಸುನ್ ಬಂದ್ರೆ ಎಲ್ಲಾ ಬಡ್ಡಿಹೈದ್ರೂ ಬರ್ತಾರೆ. ಹೋದಬಾರಿ ಭಾ?ಣ ಬಿಗಿದು ಕಳಸವಳ್ಳಿಗೆ ಸೇತುವೆ ಕಟ್ಟಸ್ತೀನಿ ಅಂದನಲ್ಲ, ಎಲ್ಲೋದ ಅವನು? ಈ ಜನಗಳಿಗೆ ನಾವು ಬೇದ್ರೆ ಅರ್ಥವಾಗಕ್ಕಿಲ್ಲ. ಮೊದಲು ಆ ರಾಜಕೀಯದೋರಿಗೆ ಹೊಡಿಬೇಕು. ಯಾಕಂದ್ರಾ ವೋಟು ಕೇಳೋಕೆ ಮಾತ್ರ ಅವರು ನಮ್ಮತಾವ ನುಸೀತಾರೆ. ಈಗ ನೋಡು ಗೂಟದ ಕಾರಾಗೆ ಗೊರಕಿ ಹೊಡಿತ ತಿರುಗುತವರೆ. ನಮ್ಮ ಜೀವದ ಹಂಗು ಅವರಿಗೆ ಏನ್ ತಿಳಿತದ. ಹಸುಗೂಸಿಗೆ ಹಾಲು ಕುಡಿಸಾಕು ನನ್ನ ಕೈಯಾಗೆ ತ್ರಾಣಿಲ್ಲ ಎಂದು ನರನಾಡಿಯ ಶಕ್ತಿಯನ್ನೆಲ್ಲ ಬಾಯಿಗೆ ತಂದು ನೋವನ್ನು ಹೊರಹಾಕಿದಳು.
ಮುಳುಗಡೆಯ ನೀರು ತುಂಬತೊಡಗಿದಂತೆ ಹೊರಹಾಕಿದ ಸಂಬಂಧಿಕರ ನೆನಪುಗಳು ಅಜ್ಜಿಯ ಒಡಲೊಳಗೆ ಬೀಗತೊಡಗಿದವು. ಕರೂರು ಎಂಬ ಆನೆ ಗಾತ್ರದ ಊರು ಮಾಯವಾಗಿದ್ದು, ಪರಿಹಾರ ಸಿಗದ ಹಲವಾರು ಮಂದಿ ಹಿಡಿಶಾಪ ಹಾಕಿದ್ದು, ತೋಟ ಮುಳುಗಿದಾಗ ಕಿರುವಾಸೆ ನಾಗಕ್ಕ ನೀರಿಗೆ ಹಾರಿ ಪ್ರಾಣ ಬಿಟ್ಟಿದ್ದು, ಎಲ್ಲ ಮುಳುಗಿದ ಮೇಲೆ ನಾನೇಕೆ ಇರಲೆಂದು ಮಸ್ಕಾರು ದ್ಯಾವಪ್ಪನವರು ವಿ? ಕುಡಿದು ಸ್ವರ್ಗ ಸೇರಿದ್ದು, ಇನ್ನೂ ಹಲವಾರು ವಿಷಯಗಳ ಜೊತೆ ಲಾಂಚ್ ತನ್ನ ಬದುಕಿನ ಜೀವನಾಡಿಯಾಗುವುದರ ಬದಲು ಜೀವಹಿಂಡುವ ಕುಣಿಕೆಯೋ ಎಂಬಂತೆ ಈರಜ್ಜಿ ನೀರಿನ ಅಲೆಯೊಳಗೆ ತೇಲತೊಡಗಿದಳು. ಅಲೆಗಳು ತನ್ನ ಮನಸ್ಸಿನಾಳದಲ್ಲೇ ಮುಳುಗುಹಾಕುವಂತೆ ಭಾಸವಾಯಿತು.
ಹೊತ್ತು ಅತ್ತಿತ್ತಲಾಗೆ ತಿರುಗದೆ ಮುಂದೆ ಸಾಗಿದರೂ ಜನರ ಹಿಂಡಿನ ಹೆಜ್ಜೆ ಬತ್ತಲಿಲ್ಲ. ಬದುಕಿಲ್ಲದೆ ಇಲ್ಲಿಗೆ ಬಂದು ಸಾಯ್ತಾವೆ ಎಂದು ಮಂಜಯ್ಯ ಬಯ್ಯತೊಡಗಿದ. ಯಾರು ಏನೇ ಅಂದರೂ ಅಜ್ಜಿಯ ಅಳಲು ಆಕಳಿಸುತ್ತಲೇ ಇತ್ತು. ಹಸುಗೂಸು ಕಂದಮ್ಮ ಹಸಿವಿಗೆ ತಾಯಿಯ ಹಾಲನ್ನು ಜಗ್ಗಿ-ಜಗ್ಗಿ ಸೆಳೆದರೂ ಏನೂ ಪ್ರತಿಫಲ ಸಿಗಲಿಲ್ಲ. ಬಾಣಂತಿಯ ಕಣ್ಣಗುಡ್ಡೆ ಅಡ್ಡವಾಗುತ್ತಾ ಬಂತು. ಕೂಗಿ ಕೂಗಿ ಬೆವತ ಅಜ್ಜಿ ಮರದ ನೆರಳಾಗ ಉಸಿರನ್ನು ತನಿಸಿಕೊಂಡಳು. ಹೊಟ್ಟೆಯಾಗಿನ ಹಸಿವು, ನೀರಿಲ್ಲದ ಬಾಯಿ, ರಕ್ತವಿಲ್ಲದ ಮೈ, ಶಕ್ತಿ ಇಲ್ಲದ ನರ ಇವೆಲ್ಲದರ ಜೊತೆ ಅಜ್ಜಿಗೆ ತಲೆ ಕೆಳಮೇಲು ಎಳೆದಾಡತೊಡಗಿತು. ಆಗಾಗ ಬೀಸುತಿದ್ದ ಗಾಳಿ ಅಜ್ಜಿಯ ಉಸಿರಿಗೆ ಪರಸಂಗ ಹಾಡಿ, ಅಲ್ಲೆ ಕೂಗ್ತಾ, ಬೈತಾ, ರೇಗ್ತಾ ಅಂಗಾತದ ಆಗಸಕ್ಕೆ ಕನ್ನಡಿ ಹಿಡಿದಹಾಗೆ, ಹಸಿದ ಹೊಟ್ಟೆಯ ಉಸಿರು ಮ್ಯಾಲ-ಕೆಳಗ ಆದಾಗ ಅಜ್ಜಿಯ ಜೀವದ ಧ್ವನಿಯನ್ನು ಜೀವಂತದ ಕಡೆ ಒಯ್ಯುತಿತ್ತು.
ಸ್ಥಳೀಯ ಮುಖಂಡ ಧರ್ಮಪ್ಪ ಬಂದು ನಮ್ಮ ಸಾಹೇಬರು ಕೂಡ್ಲೆ ಸೇತುವೆ ಮಾಡಸ್ತಾರೆ, ಹೊಸ ಲಾಂಚ್ ಮಾಡ್ಸಿದೀವಿ. ಎಲ್ಲಾ ವ್ಯವಸ್ಥೆನೂ ಸರಿಯಾಗುತ್ತೆ ಎಂದು ಭಾಷಣ ಬಿಗಿದ. ಆದರೆ ಈರಜ್ಜಿಯ ನಿದ್ದೆ ಇವನ ಮರ್ಯಾದೆಯನ್ನು ಉಳಿಸಿತು ಎನ್ನುವಾಗಲೇ ಪ್ರತಿಪಕ್ಷದ ಚಂದ್ರಣ್ಣ ಭಾ?ಣ ಬಿಗೀತಾರೆ ಸುಮ್ಮನೆ, ಇಲ್ಲಿಯ ಜನ ಕಷ್ಟದಾಗ ಸಾಯ್ತಾ ಇದ್ರು ಕಿವಿಯೇ ಕೇಳೊಲ್ಲ. ಅದ್ರಾಗ ಭಾ?ಣ ಬೇರೆ ಕೇಡು, ಹೊಸ ಲಾಂಚಿಗೆ ಇಂಜನ್ನೇ ಇಲ್ಲದೆ ಹಾಗೇ ಓಡ್ತದಾ ಎಂದು ಗೊಣಗಿದ. ಈ ಚಂದ್ರಣ್ಣ ಒಳ್ಳೇ ರಾಜಕಾರಣೀಯಾದ್ರೂ ಅದೃಷ್ಟ ಸರಿಯಿಲ್ಲದೆ ಒಂದು ಬಾರಿಯೂ ಆರಿಸಿ ಬರಲಿಲ್ಲ. ಮುಖಂಡ ಧರ್ಮಪ್ಪನಿಗೆ ಫುಲ್ ಸೇಮ್ ಆದರೂ ಅದನ್ನು ಹೇಳಿಕೊಳ್ಳದೆ ಈ ವಿಷಯವನ್ನು ಅಲ್ಲಿಗೇ ನಿಲ್ಲಿಸಿ ಬೇರೆ ಯಾವುದೋ ವಿಷಯ ತೆಗೆದು ಅತ್ತಿತ್ತಲಾಗ ತಿರುಗತೊಡಗಿದ. ಈರಜ್ಜಿಯ ಗೊರಕೆ ಸದ್ದಿಗೆ ಅಲ್ಲೇ ಮಲಗಿದ್ದ ನಾಯಿಮರಿ ಗುರ್-ಗುರ್ ಎಂದು ಎದ್ದು ಇತ್ತ ಮುಖ ತಿರುಗಿಸಿತು.
ಸೂರ್ಯ ಬಾನಂಚಿಗೆ ಸರಿದು ಕತ್ತಲು ಚೆಲ್ಲಾಟವಾಡಿ ಗೂಡು ಸೇರಿದ ಕಾಗೆಗಳ ಹಿಂಡಿನ ಕೂರು ಹೊತ್ತುಹೊತ್ತಿಗೂ ಏರತೊಡಗಿತ್ತು. ಕಾ ಕಾ ಎಂದು ಗುಟುಕಿಗಾಗಿ ಬಾಯ್ತೆರೆದು ಮರಿಕಾಗೆಗಳು ಅಂಗಲಾಚಿದವು. ಲಾಂಚಿನ ಜನರ ದಂಡು ತುಸು ಸರಿಯಲೇ ಇಲ್ಲ. ಜನ ತುಂಬಿದ ಬಸ್ಸು ತಿರುಗುತ್ತಾ ಕಂಡಕ್ಟರ್ ಊದಿದ ಪೀಪಿಗೆ ತಲೆತೂಗತೊಡಗಿತು. ಚಕ್ರದ ಅಂಚಿಗೆ ಒಬ್ಬನ ಕಾಲು ಕಟುಂ ಎಂದಾಗಲೇ ಕತ್ತರಿಸಿದ ನೋವು ಕೂಗಾಡತೊಡಗಿತು. ಜನರ ತುಳಿತಕ್ಕೆ ತುಂಡಾದ ಕಾಲು ಎತ್ತ ಹೋಯಿತೆಂಬುದೇ ತಿಳಿಯಲಿಲ್ಲ. 108ರ ಸದ್ದು ಬಂದು ಕಾಲು ಎತ್ತ ಹುಡುಕಿದರೂ ಹೊಳೆಯಲಿಲ್ಲ. ಅಷ್ಟರೊಳಗೆ ಕೃ?ಣ್ಣನ ನಾಯಿ ಕಾಲಿನ ಮೂಳೆಬಿಟ್ಟು ಎಲ್ಲವನ್ನೂ ಮುಗಿಸಿಬಿಟ್ಟಿತ್ತು.
ಸಂಜೆಯಾದರೂ ಬಸ್ಸು ದಾಟಲೇ ಇಲ್ಲ. ಡ್ರೈವರ್ ರಾಜಣ್ಣ ನಾನು ವಾಪಾಸ್ ಹೋಗ್ತೀನಿ ಎಂದು ಕೂಗಿ, ಕಂಡಕ್ಟರ್ ಇಳೀರಮ್ಮ ಎಂದು ಪೀಪಿ ಊದಿದ. ’ಕತ್ತಲಾತು ಏಳಮ್ಮ’ ಎಂದು ಯಾರೋ ಒಬ್ಬ ಕೂಗಿದ ಶಬ್ದಕ್ಕೆ ಈರಜ್ಜಿಯ ನಿದ್ದೆಯ ಗೊರಕೆ ಎಚ್ಚರಾಯಿತು. ಎಲ್ಲಿರುವೆನೆಂದು ತಿಳಿಯದೆ ಕಕ್ಕಾಬಿಕ್ಕಿಯಾಗಿ ಸರಸರನೇ ಬಂದು ಬಸ್ಸು ಹತ್ತಿದಳು. ಬಾಣಂತಿಯ ತೊಡೆಯ ಮೇಲೆ ಮಗು ಬಿಕ್ಕಿಬಿಕ್ಕಿ ಅಳುತ್ತಲಿತ್ತು. ಕಂಡಕ್ಟರಣ್ಣ ಇಳೀರಿ ಇಳೀರಿ ಎಂದು ಮತ್ತೆ ಕೂಗಿದೆ ಏಳು ಮಗಳೇ, ಬಡವರ ಸಿಟ್ಟು ದವಡೆಗೆ ಪೆಟ್ಟು, ನಮ್ ಕಥೆ ಯಾರು ಕೇಳೋರು ಎಂದು ಮಗುವನ್ನು ಎತ್ತಿಕೊಂಡು ಮಗಳನ್ನು ಅಲುಗಾಡಿಸಿದಳು. ಆದರೆ ಯಾವ ಪ್ರತಿರೋಧವೂ ತೋರಲಿಲ್ಲ. ಏನ್ ನಿದ್ದೆ ಮಗಾ, ಏನ್ ಹೇಳಲಿ, ನಿಂದು ಹಸಿಮೈ ಬೇರೆ, ಹಾಳಾದ ಲಾಂಚ್ ನಮ್ಮನ್ನು ಈ ರೀತಿ ನರಕಕ್ಕೆ ನೂಕಿದ ಎಂದು ಗೋಗರೆಯತೊಡಗಿದಳು. ಮಗಳು ನಿದ್ದೆಯಿಂದ ಏಳಲೇ ಇಲ್ಲ. ಅಜ್ಜಿಯ ಅಂತರಾಳದ ಧ್ವನಿ ಮರಳುತ್ತಲೇ ಇತ್ತು. ಆಕ್ರಂದನ ಕತ್ತಲೊಳಗೆ ಕರಗತೊಡಗಿತು. ಸೇರಿದ ಎಲ್ಲರೂ ಛೇ… ಛೇ… ಹೀಗಾಗಬಾರದಿತ್ತು ಎಂದು ಹಿಂದೆ ಸರಿದರು. ಕತ್ತಲು ಆವರಿಸಿ ಮುಖಕ್ಕೆ ಮುಖ ಕಾಣದಾಯಿತು. ಈರಜ್ಜಿಯ ಕಣ್ಣಿನೊಳಗೆ ಎಲ್ಲವೂ ಕತ್ತಲೆ…..
ಹಸಿದ ಹೊಟ್ಟೆಯ ಕಂದಮ್ಮನ ಕೂಗು ಎಲ್ಲರ ಕಣ್ಣಿನೊಳಗೂ ನೀರು ತರಿಸಿತು. ಮಗಳ ಶವದ ಎದುರಿನ ಈರಜ್ಜಿಯ ರೋದನ ಇಂಗಿಹೋಗಲೆ ಇಲ್ಲ. ಕಬ್ಬನದ ಲಾಂಚ್ಗೆ ಕಣ್ಣೀರು ಬರುತ್ತಾ…? ಎಂದು ರೋದನದಲ್ಲೂ ಅಜ್ಜಿ ಹೇಳಿದ ಮಾತು ಪ್ರಶ್ನೆಯಾಗಿಯೇ ಉಳಿಯಿತು.

– ಪರಮೇಶ್ವರ ಕರೂರು
ಲೇಖಕರು ಕನ್ನಡ ಉಪನ್ಯಾಸಕರು ಹಾಗೂ ಕಥೆಗಾರರು

ನಿಮ್ಮ ಪ್ರತಿಕ್ರಿಯೆ ನೀಡಿ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

`ಉತ್ಥಾನ’ : ೧೯೬೫ರಿಂದ ಪ್ರಕಟವಾಗುತ್ತಿರುವ ಕನ್ನಡದ ಹೆಮ್ಮೆಯ ಸದಭಿರುಚಿಯ ಮಾಸಪತ್ರಿಕೆ. ರಾಜ್ಯದಾದ್ಯಂತ ಪ್ರಸರಣ ಇರುವ ಸಂಚಿಕೆಯು ಈಗ ಕ್ರೌನ್‌ ಚತುರ್ದಳ ಆಕಾರದಲ್ಲಿ ೧೧೨ ವರ್ಣಪುಟಗಳಲ್ಲಿ ವೈವಿಧ್ಯಮಯ ಲೇಖನ, ನುಡಿಚಿತ್ರ, ಸಾಹಿತ್ಯದ ಬರಹಗಳನ್ನು ಪ್ರಕಟಿಸುತ್ತಿದೆ.  ಸಂಚಿಕೆಯ ಬೆ ಲೆ ೨೦ ರೂ.

Utthana
Kannada Monthly Magazine ​
Utthana Trust
Keshavashilpa, Kempegowda Nagara
Bengaluru - 560019
Karnataka State , INDIA

Phone : 080-26612732
Email : [email protected]

ಉತ್ಥಾನದ ಹೊಸ ಪ್ರಕಟಣೆಗಳ ಬಗ್ಗೆ ನಿಮ್ಮ ಈಮೈಲ್‌ ಅಂಚೆಪೆಟ್ಟಿಗೆಯಲ್ಲೇ ಮಾಹಿತಿ ಪಡೆಯಿರಿ. ಇದಕ್ಕಾಗಿ ನಮ್ಮ ವಾರ್ತಾಪತ್ರಕ್ಕೆ ಉಚಿತವಾಗಿ ಚಂದಾದಾರರಾಗಿ