ಜನ್ಮ ಶತಾಬ್ದ ಸ್ಮರಣೆ
ಈ ವರ್ಷ ಬೆಳಗೆರೆ ಕೃಷ್ಣಶಾಸ್ತ್ರಿಗಳ (೨೨.೫.೧೯೧೬- ೨೩.೩.೨೦೧೩) ಜನ್ಮಶತಾಬ್ದವನ್ನು ವಿವಿಧೆಡೆ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಜೀವಮಾನದುದ್ದಕ್ಕೂ ಯಾವುದೇ ಪ್ರಚಾರವನ್ನಾಗಲಿ ಸಂಮಾನಗಳನ್ನಾಗಲಿ ಬಯಸದೆ ಅವಧೂತರಂತೆ ನಿರ್ಲಿಪ್ತರಾಗಿದ್ದ ಕೃಷ್ಣಶಾಸ್ತ್ರಿಗಳು ಈಗ ಉತ್ಸವಾಚರಣೆಗಳಿಗೆ ವಸ್ತುವಾಗಿರುವುದು ಸ್ವಾರಸ್ಯಕರ. ಇಂತಹ ಹಲವು ವಿಶೇಷತೆಗಳು ಗಮನ ಸೆಳೆಯುತ್ತವೆ. ಜೋಳಿಗೆಯ ಹೊರತು ಬೇರಾವ ಅವಲಂಬವೂ ಇಲ್ಲದ ಅವರು ಚಿತ್ರದುರ್ಗ ಜಿಲ್ಲೆಯ ಬೆಳಗೆರೆಯಂತಹ ಗ್ರಾಮೀಣ ಪ್ರದೇಶದಲ್ಲಿ ಶ್ರೀ ಶಾರದಾಮಂದಿರ ವಿದ್ಯಾಸಂಸ್ಥೆ, ಶ್ರೀ ವೇದಾವತಿ ಉಚಿತ ವಿದ್ಯಾರ್ಥಿನಿಲಯಗಳಂತಹ ಸಂಸ್ಥಾಸಮೂಹವನ್ನು ಸ್ಥಾಪಿಸಿ ಬೆಳೆಸಿದರು (ಈಗ ಈ ಸಂಸ್ಥೆಗಳು ಅರ್ಧಶತಾಬ್ದದ ಹೊಸ್ತಿಲಲ್ಲಿವೆ). ಸಾಹಿತಿ ಎನಿಸಿಕೊಳ್ಳುವ ಉದ್ದೇಶವಿಲ್ಲದ ಕೃಷ್ಣಶಾಸ್ತ್ರಿಗಳು ತಮ್ಮ ಆತ್ಮಾನಂದಕ್ಕಾಗಿ ಮತ್ತು ಎಲ್ಲವನ್ನೂ ಹಂಚಿಕೊಳ್ಳುವ ಸ್ವಭಾವದಿಂದಾಗಿ ಲಿಖಿತಪಡಿಸಿದ ’ಸಾಹಿತಿಗಳ ಸ್ಮೃತಿ’, `ಮರೆಯಲಾದೀತೆ?’, `ಯೇಗ್ದಾಗೆಲ್ಲಾ ಐತೆ’ ಕೃತಿಗಳು ಬೆಸ್ಟ್ಸೆಲ್ಲರ್ಗಳಾದವು. ಲೋಕಪ್ರೇಮದಿಂದ, ಸ್ಫಟಿಕೋಪಮ ಚಾರಿತ್ರದಿಂದಲೇ ಎರಡು ಪೀಳಿಗೆಗಳ ಆಬಾಲವೃದ್ಧರಿಗೆ ಅವರು ಆದರಣೀಯರೆನಿಸಿದರು. ಎಲ್ಲೆಡೆ ವ್ಯಾವಹಾರಿಕದೃಷ್ಟಿಯ ದರ್ಬಾರು ನಡೆದಿರುವಾಗ ಕೃ?ಶಾಸ್ತ್ರಿಗಳಂತಹ ಧ್ಯೇಯಾರಾಧಕರು ಮನೆಮಾತಾದುದು ಒಂದು ವಿಸ್ಮಯ. ಹಾಗೆಂದು ಅವರು ಪಾರಲೌಕಿಕದತ್ತ ದೃಷ್ಟಿ ನೆಟ್ಟವರಲ್ಲ. ಜಗತ್ತನ್ನು ಅವರ? ಪ್ರೀತಿಸಿದವರು ಬೇರೆಯಿಲ್ಲ. ಒಂದೇ ಮಾತಿನಲ್ಲಿ ಹೇಳಬೇಕೆಂದರೆ – ಜೀವದ ಸಹಜತೆಯನ್ನು ಬಿಟ್ಟುಕೊಡದೆ ಉಳಿಸಿಕೊಂಡದ್ದು ಅವರ ಅನನ್ಯತೆ -ಎನ್ನಬೇಕಾದೀತು. ಸಾರ್ಥಕ ಶಿಕ್ಷಕವೃತ್ತಿ, ಗ್ರಾಮೀಣ ಸಮಾಜದ ಸಾಂಸ್ಕೃತಿಕ ಉನ್ಮೀಲನ ಮೊದಲಾದ ಅವರ ಸಾಧನೆಗಳು ಸುತ್ತಲಿನ ಲೋಕದೊಡನೆ ಅವರು ತಳೆದಿದ್ದ ತಾದಾತ್ಮ್ಯದ ಅಭಿವ್ಯಂಜನೆಗಳ?. `ದಂತ’ಕಥೆ
ಮೊದಲ ಪತ್ನಿಯ ನಿಧನಾನಂತರ ದ್ವಿತೀಯ ವಿವಾಹ ಆಗಬೇಕೆಂಬ ಒತ್ತಾಯ ನಂಟರಿಂದ ಬಂದಾಗ ಕೃಷ್ಣಶಾಸ್ತ್ರಿಗಳು ದಂತವೈದ್ಯರಲ್ಲಿಗೆ ಹೋಗಿ ಅಷ್ಟು ಹಲ್ಲುಗಳನ್ನು ಕೀಳಿಸಿಕೊಂಡು ಬಂದು `ವೃದ್ಧರಾಗಿ ಪ್ರಕಟಗೊಂಡದ್ದು – ಮೊದಲಾದ ಘಟನೆಗಳು ಜನಜನಿತವೇ ಆಗಿವೆ. ಹೀಗೆ ಬೋಸುಬಾಯಿ, ತಲೆಗೆ ಸುತ್ತಿದ ಬಿಳಿಯ ಟವಲು ಅವರ ಪರಿಚಾಯಕವೇ ಆಗಿಬಿಟ್ಟವು.
ಕೃಷ್ಣಶಾಸ್ತ್ರಿಗಳ ಕೈಂಕರ್ಯ ಲಭಿಸದಿದ್ದರೆ ಮುಕುಂದೂರು ಸ್ವಾಮಿಗಳಂತಹ ಅವಧೂತರು ಹೊರಗಿನ ಎಂದರೆ ದೂರದ ಪ್ರದೇಶಗಳವರಿಗೆ ಬಹುಮಟ್ಟಿಗೆ ಅಪರಿಚಿತರಾಗಿಯೆ ಉಳಿದುಬಿಡುತ್ತಿದ್ದ ಸಂಭವವಿದ್ದಿತು. ಅಂತಹ ಸಾಧಕಧಾರೆಯವರು ಪ್ರಚಾರವಿಮುಖರು. ಆ ಸಾಧಕರೂ ಅನುಯಾಯಿಗಳೂ ಸತ್ಸಂಗ, ಧ್ಯಾನ, ಸಾಧನಕೇಂದ್ರಿತ ವಿಚಾರವಿನಿಮಯ, ಭಕ್ತಿಪೋಷಕ ಕಲಾಪಗಳು – ಇವುಗಳಲ್ಲಿ ಆನಂದಿಸುತ್ತಿರುತ್ತಾರೆ. ಇದನ್ನು ಅವರು ತಮ್ಮ ಜೀವನಕ್ರಮವನ್ನಾಗಿ ಮಾಡಿಕೊಂಡಿರುತ್ತಾರೆ. ಹೇಗೋ ತಮ್ಮ ಸಂಖ್ಯೆಯನ್ನು ಬೆಳೆಸಬೇಕು ಎಂಬಂತಹ ಅಂದಾಜುಗಳಿಂದ ಅವರು ಗಾವುದ ದೂರ. ಅವಧೂತರು ಬೆಳಕಿನ ಸಾನ್ನಿಧ್ಯದಲ್ಲಿ ನೆಲೆಸಿರುವ ಕಾರಣದಿಂದಲೇ ಅವರು ವಿಶಾಲ ಪ್ರಭಾವವನ್ನು ಬೀರಲು ಶಕ್ತರಾಗಿರುತ್ತಾರೆ. ಆತ್ಮೋತ್ಕರ್ಷವನ್ನು ಲಕ್ಷ್ಯವಾಗಿರಿಸಿಕೊಂಡ ಪ್ರಯತ್ನಶೀಲರು ಅಂತಹ ಸಿದ್ಧಪುರುಷರ ಸಂಪರ್ಕವನ್ನು ಅಹೋಭಾಗ್ಯವಾಗಿ ಭಾವಿಸುತ್ತಾರೆ.
ಬೆಳಗೆರೆ ಕೃಷ್ಣಶಾಸ್ತ್ರಿಗಳು, ಅವರ ತಂದೆ ಚಂದ್ರಶೇಖರಶಾಸ್ತ್ರಿಗಳು (೧೮೭೪-೧೯೬೬), ಕೃಷ್ಣಶಾಸ್ತ್ರಿಗಳ ಅಣ್ಣ ಸೀತಾರಾಮಶಾಸ್ತ್ರಿಗಳು (೧೯೦೬-೧೯೭೭) – ಎಲ್ಲರೂ ವಿಶಿಷ್ಟರೆನಿಸುವ ವ್ಯಕ್ತಿಗಳೇ. ಚಂದ್ರಶೇಖರಶಾಸ್ತ್ರಿಗಳನ್ನೂ ಸೀತಾರಾಮಶಾಸ್ತ್ರಿಗಳನ್ನೂ ನೋಡಿದ್ದವರಿಗೆ ಕೃಷ್ಣಶಾಸ್ತ್ರಿಗಳು `ಸಾಮಾನ್ಯರಲ್ಲಿ ಅಸಾಮಾನ್ಯರು’ ಎಂಬಂತೆ ಜೀವನ ನಡೆಸಿದುದು ಸಹಜವೆಂದೇ ಅನಿಸುತ್ತದೆ. ಒಂದಷ್ಟುಮಟ್ಟದ ಅವಧೂತಪ್ರವೃತ್ತಿ, ಲೋಕಾನುಕಂಪ, ತಮ್ಮ ಮನಃಸ್ಪಂದನಗಳನ್ನು ಇತರರೊಡನೆ ಹಂಚಿಕೊಳ್ಳುತ್ತಿರಬೇಕೆಂಬ ಉತ್ಸಾಹ, ಸದಾ ಉದಾತ್ತರೀತಿಯಲ್ಲಿಯೆ ಚಿಂತನೆ ನಡೆಸುವುದು; – ಈ ಗುಣಗಳು ಅವರೆಲ್ಲರಲ್ಲಿಯೂ ಸ್ವಭಾವಗತವಾಗಿದ್ದವು. ಕೃಷ್ಣಶಾಸ್ತ್ರಿಗಳ ಬದುಕಿನ ವಿನ್ಯಾಸವಂತೂ ಈ ಪೀಳಿಗೆಯ ಸಾವಿರಾರು ಸಹೃದಯರಿಗೂ ನೇರ ಪರಿಚಿತವೇ ಆಗಿದೆ.
ಒಂದು ಕುಟುಂಬಪರಿವಾರದಲ್ಲಿ ಅಷ್ಟೊಂದು ಪ್ರತಿಭಾಬಾಹುಳ್ಯ ಮಡುಗಟ್ಟಿದ್ದುದು ಒಂದು ವಿಸ್ಮಯ. ತಳುಕಿನ ವೆಂಕಣ್ಣಯ್ಯ, ತ.ಸು. ಶಾಮರಾಯ, ಆಶುಕವಿ ಚಂದ್ರಶೇಖರಶಾಸ್ತ್ರಿಗಳು, ಶಾಸ್ತ್ರಿಗಳ ಪುತ್ರಿ ಕವಯಿತ್ರಿ ಜಾನಕಮ್ಮ, ಪುತ್ರ ಖ್ಯಾತ ನಾಟಕಕಾರ `ಕ್ಷೀರಸಾಗರ’ ಕಾವ್ಯನಾಮದ ಸೀತಾರಾಮಶಾಸ್ತ್ರಿ, ಕಾದಂಬರಿಕಾರ ತ.ರಾ.ಸು., ಮುಕುಂದೂರು ಅವಧೂತರನ್ನು ಪರಿಚಯಿಸಿದ ಮತ್ತು ಸ್ವಯಂ ಅವಧೂತಸದೃಶರೇ ಆದ ಕೃಷ್ಣಶಾಸ್ತ್ರಿಗಳು…. ಅದೊಂದು ಪ್ರತಿಭೆಯ ಸಂತೆ.
ಅಣ್ಣ, ತಂದೆ
ಕೃಷ್ಣಶಾಸ್ತ್ರಿಗಳ ಅಣ್ಣ ಸೀತಾರಾಮಶಾಸ್ತ್ರಿಗಳು ಗಣಿತಶಾಸ್ತ್ರ ಪ್ರಾಧ್ಯಾಪಕರಾಗಿದ್ದವರು. ಹಲವಾರು ಕಥೆ, ಕವಿತೆ, ಜೀವನಚರಿತ್ರೆಗಳನ್ನು ಬರೆದಿದ್ದರು. ಸ್ವಕ್ಷೇತ್ರವಾದ ಗಣಿತಶಾಸ್ತ್ರ ಕುರಿತು `ಸಂಖ್ಯೋದ್ಯಾನ’, `ಕಲನವಿನ್ಯಾಸ’ ಮೊದಲಾದ ವಿರಳ ಕೃತಿಗಳನ್ನು ಬರೆದಿದ್ದರು. ’ಕ್ಷೀರಸಾಗರ’ ಎಂಬ ಹೆಸರಿನಲ್ಲಿ ಅವರು ಬರೆದ `ಕಲಹ ಕುತೂಹಲ’, `ಅರ್ಧನಾರಿ’, `ಅರ್ಧಾಂಗಿ’ ಮೊದಲಾದ ಹತ್ತಾರು ವಿನೋದಪ್ರಧಾನ ನಾಟಕಗಳು ೧೯೪೦-೧೯೫೦ರ ವರ್ಷಗಳಲ್ಲಿ ವಿಶಾಲ ಜನಪ್ರಿಯತೆ ಪಡೆದಿದ್ದವು; ಅವು ಅನೇಕ ಶಾಲೆಗಳಲ್ಲಿಯೂ ಸಾಮಾಜಿಕ ವೇದಿಕೆಗಳಲ್ಲಿಯೂ ಪ್ರದರ್ಶನಗೊಳ್ಳುತ್ತಿದ್ದವು.
ಭಾರತೀಯ ಗಣಿತ, ಖಗೋಳಶಾಸ್ತ್ರಜ್ಞ ಪರಂಪರೆಯ ಬಗೆಗೆ ೧೯೫೦ರ ದಶಕದಲ್ಲಿ ಅವರು ನೀಡುತ್ತಿದ್ದ ಉಪನ್ಯಾಸಗಳು ಮರೆಯಲಾಗದವು. ಆ ಕಾಲಕ್ಕೆ ಹೆಚ್ಚು ಪರಿಚಿತವಾಗಿರದ, ಸಂಶೋಧಕವಲಯಗಳಲ್ಲ? ಸಂಚಲನೆ ಇದ್ದ ಆರ್ಯಭಟ, ವರಾಹಮಿಹಿರ, ಭಾಸ್ಕರಾಚಾರ್ಯ ಮೊದಲಾದವರನ್ನು ಕುರಿತು ಸೀತಾರಾಮಶಾಸ್ತ್ರಿಗಳೂ ಅವರ ಸಮಕಾಲೀನರೂ ಗಣಿತಶಾಸ್ತ್ರ ಪ್ರಾಧ್ಯಾಪಕರೂ ಆಗಿದ್ದ ಪ್ರೊ. ಎನ್. ಕೆ. ನರಸಿಂಹಮೂರ್ತಿಗಳೂ ಮಾಡುತ್ತಿದ್ದ ಭಾಷಣಗಳು ನಮ್ಮನ್ನೆಲ್ಲ ಪುಲಕಗೊಳಿಸುತ್ತಿದ್ದವು.
ಕೃಷ್ಣಶಾಸ್ತ್ರಿಗಳ ತಂದೆ ಚಂದ್ರಶೇಖರಶಾಸ್ತ್ರಿಗಳನ್ನು ನಿಕಟವಾಗಿ ಕಂಡಿದ್ದ ಬಹುಮಂದಿಯ ಏಕರೂಪದ ಉದ್ಗಾರ `ಅವರು ಏಕೋ ನಮಗೆ ಅರ್ಥವೇ ಆಗಿಲ್ಲ’ ಎಂಬುದು. ಈ ವರ್ಣನೆಯನ್ನು ಆಗಂತುಕವೆನ್ನುವಂತಿಲ್ಲ. ಏಕೆಂದರೆ ಚಂದ್ರಶೇಖರಶಾಸ್ತ್ರಿಗಳಂಥವರೂ ಕೃಷ್ಣಶಾಸ್ತ್ರಿಗಳಂಥವರೂ ಅರ್ಥವಾಗದಿರುವುದು ಸ್ವಾಭಾವಿಕ. ಕಾರಣ ಇಷ್ಟೆ: ಅರ್ಥವಾಗುವುದು ಎಂಬ ಪ್ರಕ್ರಿಯೆ ಬೌದ್ಧಿಕವಲಯಕ್ಕೆ ಸೇರಿದುದು. ಶಾಸ್ತ್ರಿಗಳು ತಂದೆ-ಮಗ ಇಬ್ಬರೂ ಇದ್ದುದೂ ನಡೆದದ್ದೂ ಆಡಿದುದೂ ಪ್ರಜ್ಞೆಯ ಸ್ತರದಲ್ಲಿ. ಬುದ್ಧಿಯಿಂದ ಅತೀತವಾದುದನ್ನು ಬುದ್ಧಿಯ ಪರಿಭಾಷೆಯಲ್ಲಿ ಹೇಗೆ ಹಿಡಿದಿಡಲಾಗುತ್ತದೆ?
ಬೆಳಗೆರೆ ಕೃಷ್ಣಶಾಸ್ತ್ರಿಗಳು, ಅವರ ಅಕ್ಕ ಜಾನಕಮ್ಮ, ತಂದೆ ಚಂದ್ರಶೇಖರಶಾಸ್ತ್ರಿಗಳು – ಮೂವರದೂ ಒಡನಾಟವಿದ್ದವರು ದ.ರಾ. ಬೇಂದ್ರೆ. ಅರವಿಂದರು ಮೊದಲಾದ ಅನುಭಾವಿಗಳ ಅಂತರಂಗವನ್ನು ಮಥಿಸಿದ್ದ ಬೇಂದ್ರೆಯವರು ಚಂದ್ರಶೇಖರಶಾಸ್ತ್ರಿಗಳ ಬಗೆಗೆ ಹೇಳುತ್ತ “ಚಂದ್ರಶೇಖರಶಾಸ್ತ್ರಿಗಳನ್ನು ಕುರಿತು ಯೋಚಿಸಿದರೆ `ಗಿಡದ ಗುಂಪಿನ ವಿಸ್ತಾರದಲ್ಲಿ ಅಡವಿಯೇ ಕಾಣದೋ’ ಎಂಬಂತೆ ಆಗುತ್ತದೆ” – ಎಂದಿದ್ದರು. ಒಂದು ಪದ್ಯದಲ್ಲಿ ಬೇಂದ್ರೆ ಚಂದ್ರಶೇಖರಶಾಸ್ತ್ರಿಗಳನ್ನು ’ಪ್ರಾಚೀನ ದಂಡಕಾರಣ್ಯ’ ಎಂದೇ ಸಂಬೋಧಿಸಿದ್ದರು.
ಅಂಟಿಲ್ಲದ ನಂಟು
ಅವಧೂತರೆಂಬವರು ಹೇಗಿರುತ್ತಾರೆ? – ಎಂದು ಯಾರಾದರೂ ಕೇಳಿದರೆ ಹೀಗಿರುತ್ತಾರೆ ಎಂದು ಬೊಟ್ಟಿಟ್ಟು ತೋರಿಸಬಹುದಾಗಿದ್ದವರು ಚಂದ್ರಶೇಖರಶಾಸ್ತ್ರಿಗಳು. ಅವಧೂತತ್ವ ಅವರಲ್ಲಿ ಅಷ್ಟು ಮಡುಗಟ್ಟಿ ಮೆರೆದಿತ್ತು. ಶ್ರಮದಿಂದ ಪಾಂಡಿತ್ಯ ಗಳಿಸಿಕೊಂಡಿದ್ದರು; ಆದರೆ ಮಾಸ್ತರಿಕೆ ಮಾಡಹೊರಡಲಿಲ್ಲ. ಪೌರೋಹಿತ್ಯದಲ್ಲಿ ನಿಷ್ಣಾತರು; ಆದರೆ ಅದನ್ನು ವೃತ್ತಿಯಾಗಿ ಮಾಡಿಕೊಳ್ಳಲಿಲ್ಲ – ಎಲ್ಲಿ ನಾಲ್ಕು ಕಾಸು ಬಂದುಬಿಟ್ಟೀತೋ ಎಂದು ಹೆದರುತ್ತಿದ್ದರೇನೋ! ಅಪಾರ ಕಾವ್ಯರಚನಾಪ್ರತಿಭೆ ಇದ್ದವರು; ಆದರೆ ವ್ಯವಸ್ಥಿತ ಸಾಹಿತ್ಯರಚನೆಯಿಂದ ಪೂರ್ತಿ ವಿಮುಖರಾಗಿದ್ದರು. ಮನೆತನದ ಹಿಡಿಯಷ್ಟು ಆಸ್ತಿಯಿಂದ ಯಾವಾಗಲೋ ಎಷ್ಟು ಬಂದರೆ ಬಂತು, ಇಲ್ಲದಿದ್ದರೆ ಇಲ್ಲ. ಆದರೆ ಶಾಸ್ತ್ರಿಗಳು ಎಂದೂ ಯಾರ ಮುಂದೆಯೂ ಕೈಚಾಚಲಿಲ್ಲ.
ತೆಲುಗುಸೀಮೆಯ ಸಂಗಮೇಶ್ವರಸ್ವಾಮಿಗಳೆಂಬ ಉಚ್ಚಕೋಟಿಯ ವಿದ್ವಾಂಸರು ಒಮ್ಮೆ ಬಳ್ಳಾರಿಯಲ್ಲಿ ಭಗವದ್ಗೀತೆ ಕುರಿತು ಪ್ರವಚನಮಾಡುತ್ತ “ಸ್ಥಿತಪ್ರಜ್ಞ ಹೇಗಿರುತ್ತಾನೆಂದು ಕಾಣಬೇಕಾದರೆ ಇವರನ್ನು ನೋಡಿರಿ” ಎಂದು ಸಭೆಯಲ್ಲಿ ಕುಳಿತಿದ್ದ ಚಂದ್ರಶೇಖರಶಾಸ್ತ್ರಿಗಳ ಕಡೆಗೆ ಬೆರಳು ಮಾಡಿದ್ದರು.
ಚಂದ್ರಶೇಖರಶಾಸ್ತ್ರಿಗಳು ಬಾಯಿಬಿಟ್ಟರೆ ಹೊರಡುತ್ತಿದ್ದವು ಸುಭಾಷಿತಗಳೇ: “ಬೇಸಿಗೆಯಲ್ಲಿ ಎಡವಿದ ಕಲ್ಲನ್ನು ಮಳೆಗಾಲದಲ್ಲಿ ಕೀಳಬೇಕು. ಈಗಲೇ ಕೀಳುತ್ತ ಕುಳಿತರೆ ಬರೀ ಮೈಕೈ ನೋವು, ಅಷ್ಟೆ” – ಇಂಥವು.
ಜಾತಿ-ಮತ ಭೇದಗಳು ಅರ್ಥಶೂನ್ಯವೆಂದು ಅವರು ಉಪನ್ಯಾಸ ಮಾಡಲು ಹೊರಡಲಿಲ್ಲ; ತಮ್ಮ ಬದುಕಿನ ರೀತಿಯ ಮೂಲಕವೇ ಆ ಸಂದೇಶವನ್ನು ಪ್ರಸಾರ ಮಾಡಿದರು. ನಡೆ, ನುಡಿ, ಚಿಂತನೆ – ಎಲ್ಲವೂ ಅವರಲ್ಲಿ ಏಕೀಭವಿಸಿಬಿಟ್ಟಿತ್ತು. ಹೀಗೆ ಅವರದು ಪರಿಪೂರ್ಣ ವ್ಯಕ್ತಿತ್ವ.
“ಭಾವನಾ ಪ್ರಪಂಚದೊಳಗೆ ತೇಲಿ ನಲಿವುದೇ ಸುಖ;
ಕೋವಿದರನು ಕಂಡು ತಿಳಿದು ಸುಮ್ಮನಿರುವುದೇ ಸುಖ;
ಬೇಕು ಎಂಬ ಮಾತು ಬಿಟ್ಟು, ಬೇಡವೆಂಬುದೇ ಸುಖ.
ಲೋಕದಾಟವೆಲ್ಲ ನೋಡಿ ನಗುತಲಿರುವುದೇ ಸುಖ”
ಇದೇ ಅವರದೇ ಮಾತುಗಳಲ್ಲಿ ಅವರ ಉಪನಿಷತ್ತು.
ವಿಶ್ವಬಂಧು
ಅವರ ಆಶುಕವನದ ಮಿಂಚು ಆಗಲಿ ನಿತ್ಯಹಸನ್ಮುಖವಾಗಲಿ ಪ್ರಯತ್ನದಿಂದ ರೂಢಿಸಿಕೊಂಡವೆನಿಸುತ್ತಿರಲಿಲ್ಲ. ಅವರು ಇದ್ದದ್ದೇ ಹಾಗೆ, ಅಷ್ಟೆ. ಅವರ ಒಂದು ಲಾವಣಿ:
“ಮನಸಿರಬೇಕಣ್ಣ –
ಒಳ್ಳೆ ಮನಸಿರಬೇಕಣ್ಣ.
ಮನಸೊಂದು ಮಮತೆಯ ಬೀಡಾಗಬೇಕು;
ಮಧುವಿನಂಥ ಒಂದು ಮಾತೇ ಸಾಕು.
ನಗುತಿರಬೇಕಣ್ಣ –
ನಗೆಯೊಳು ತಿರುಳಿರಬೇಕಣ್ಣ –
ಬಗೆ ಬಗೆ ಬಣ್ಣವ ಸವಿದಿರಬೇಕು –
ಜಗವನೆ ತನ್ನೊಳು ತುಂಬಿಸುವಂಥ –
ಮನಸಿರಬೇಕಣ್ಣ !”
ಕೃಷ್ಣಶಾಸ್ತ್ರಿಗಳನ್ನಾಗಲಿ ಅವರ ತಂದೆ ಚಂದ್ರಶೇಖರಶಾಸ್ತ್ರಿಗಳನ್ನಾಗಲಿ ಮುಕುಂದೂರು ಸ್ವಾಮಿಗಳನ್ನಾಗಲಿ ನೆನೆಯುವಾಗ ಮನಃಪಟಲದ ಮುಂದೆ ಮೂಡುವುದು ಅವಧೂತತ್ವದ ಚಿತ್ರ ಮಾತ್ರವೇ ಹೊರತು ಯಾವುದೇ ಬಾಹ್ಯಜೀವನವಿವರಗಳಲ್ಲ. ಅವರು ನಿಜವಾಗಿ ಇದ್ದರೆ, ಅಥವಾ ಅವರು ಇದ್ದರೆಂದು ಉಳಿದವರೆಲ್ಲ ಭ್ರಮಿಸಿದ್ದರೆ? – ಎಂಬ ವಿಸ್ಮಯವಷ್ಟು ಉಳಿಯುತ್ತದೆ.
ಬೀಚಿ ಅವರ `ಸರಸ್ವತೀಸಂಹಾರ’ ಕಾದಂಬರಿಯಲ್ಲಿನ ಬ್ರಹ್ಮಾನಂದಶಾಸ್ತ್ರಿಗಳೆಂಬ ಪಾತ್ರಕ್ಕೆ ಮಾತೃಕೆಯಾಗಿದ್ದವರು ಬೆಳಗೆರೆ ಚಂದ್ರಶೇಖರಶಾಸ್ತ್ರಿಗಳು – ಎಂದು ಬೀಚಿ ಅವರೇ ಹೇಳಿದ್ದರು.
ಡಿ.ವಿ.ಜಿ., ಮಾಸ್ತಿ, ವಿ.ಸೀ., ರಾಜರತ್ನಂ ಮೊದಲಾದವರಿಗೂ ಚಂದ್ರಶೇಖರಶಾಸ್ತ್ರಿಗಳಿಗೂ ನಡುವೆ ಒಂದು ಅಲೌಕಿಕ ಬಾಂಧವ್ಯ ಏರ್ಪಟ್ಟಿತ್ತು. ಹೀಗೆ ಶಾಸ್ತ್ರಿಗಳು ಲಹರಿ ಮೂಡಿದಾಗ ಬೆಂಗಳೂರಿಗೆ ಹೊರಟುಬಂದುಬಿಡುತ್ತಿದ್ದರು. ಹಲವು ವಾರಗಳು ಕಳೆದ ಮೇಲೆ ಒಂದು ದಿನ ಇದ್ದಕ್ಕಿದ್ದಂತೆ ಘೋಷಿಸುವರು – “ನಾನು ಊರಿಗೆ ಹೊರಡುತ್ತೇನೆ” ಎಂದು. “ಇನ್ನು ನಾಲ್ಕು ದಿನ ಇಲ್ಲೆ ಇರಬಾರದೆ?” ಎಂದರೆ ಸುಮ್ಮನೆ ಮುಗುಳ್ನಗುವ? ಉತ್ತರವಾಗುತ್ತಿತ್ತು. ವಿ. ಸೀತಾರಾಮಯ್ಯನವರ ಮನೆಯವರು “ದಾರಿಗೆ ಏನಾದರೂ ಮಾಡಿಕೊಡುತ್ತೇವೆ” ಎನ್ನುತ್ತಿದ್ದರೆ ಇಂಥ ಯಾವ ನಚ್ಚುನಸೆಗಳಿಗೆ ಅವಕಾಶವನ್ನೇ ಕೊಡದೆ ಕಾಲ್ತೆಗೆದು ಅವರು ಗೇಟು ದಾಟಿ ಆಗಿತ್ತು. ಬರುವುದೂ ಮೋಡದ ಹಾಗೆ, ಹೊರಡುವುದೂ ಮೋಡದ ಹಾಗೆ.
ಎಂಬತ್ತು ದಾಟಿದ ಮೇಲೆ ಅವರನ್ನು ಕುರಿತು ’ನಿಮಗೀಗ ವಯಸ್ಸು ಆಯಿತು, ಊರೂರು ಸುತ್ತುವುದನ್ನು ಈಗಲಾದರೂ ಕಡಮೆ ಮಾಡಿ’ ಎಂದಾಗ ಚಂದ್ರಶೇಖರಶಾಸ್ತ್ರಿಗಳು ತಮ್ಮ ಅಭ್ಯಾಸದಂತೆ ಆಶುಕವನದ ಮೂಲಕವೇ ಉತ್ತರಿಸಿದ್ದರು:
“ಸಾಯಾನಾಂದ್ರೆ ನನಗೆ ಪುರಸತ್ತೇ ಇಲ್ಲ, ಪುರಸತ್ತೇ ಇಲ್ಲ!
ಪುರಸತ್ಮಾಡ್ಕೊಂಡ್ ಕುಂತ್ರೆ ಸಾವೇ ಬರದಲ್ಲ –
ಸಾವೇ ಬರದಲ್ಲ!”
ಸತ್ಯದ ಸಾನ್ನಿಧ್ಯ
ಚಂದ್ರಶೇಖರಶಾಸ್ತ್ರಿಗಳ ಪ್ರತಿಭೆ ಅಧ್ಯಯನಾದಿ ಮಾರ್ಗಗಳಿಂದ ಸಿದ್ಧಿಸಿದ್ದುದಲ್ಲ; ಸ್ವಯಂಭೂ ಆದದ್ದು, ಕಾವ್ಯ, ವೇದಾಂತ, ಧರ್ಮ ಮೊದಲಾದವುಗಳ ಮೂಲರೂಪವನ್ನು ಹೃದಯಸ್ಥ ಮಾಡಿಕೊಂಡಿದ್ದವರು ಅವರು. ಹೀಗೆ ಅವರ ಮಾತುಗಳೂ ಅವರು ನಿಂತಕಾಲಲ್ಲಿ ಸುರಿಯುತ್ತಿದ್ದ ಆಶುಕವನಗಳೂ ಅಧ್ಯಾತ್ಮಸಂಪನ್ನವೂ ಕಾಂತಿಮಯವೂ ಆಗಿರುತ್ತಿದ್ದವು. ಸ್ವಯಂ ಸಂಗೀತಶಾಸ್ತ್ರವನ್ನು ಕಲಿತವರಲ್ಲದಿದ್ದರೂ ಹಳ್ಳಿಯ ರೈತರಿಗೆ ಗಾಯನಕಲೆಯನ್ನು ಕಲಿಸಿದ್ದರು.
ಅವರಮಟ್ಟಿಗೆ ತಾತ್ತ್ವಿಕ ಜಿಜ್ಞಾಸೆಯು ಪೂರ್ತಿ ಅಪ್ರಕೃತವೆನಿಸುತ್ತಿತ್ತು. ಸತ್ಯವು ಕಣ್ಣಿಗೇ ಢಾಳಾಗಿ ಕಾಣಿಸುತ್ತಿರುವಾಗ ಅದಕ್ಕೆ ಪ್ರಮಾಣ ಕೇಳಬೇಕೆ? – ಎಂಬುದು ಅವರ ಚಿಂತನೆಯ ಧಾಟಿ.
ಇಳಿವಯಸ್ಸಿನಲ್ಲಿ ಅನಿವಾರ್ಯವಾಗಿ ಹೆಗ್ಗೆರೆಯಲ್ಲಿ ವಿಶ್ರಾಂತಸ್ಥಿತಿಯಲ್ಲಿದ್ದಾಗ ಒಮ್ಮೆ ತಂದೆಯವರ ಮನಸ್ಸಿಗೆ ಲವಲವಿಕೆ ತರಲು ಕೃಷ್ಣಶಾಸ್ತ್ರಿಗಳು ’ಯಂ ಯಂ ವಾsಪಿ ಸ್ಮರನ್ ಭಾವಂ ತ್ಯಜತಿ ಅಂತೇ ಕಲೇವರಂ’ ಗೀತಾಶ್ಲೋಕದ ಅರ್ಥವೇನೆಂದು ಕೇಳಿದರು. ತಂದೆಯವರು ’ಇದು ಹೇಳುವ ಅರ್ಥವಲ್ಲ, ಮಾಡಬೇಕಾದ್ದು’ ಎಂದರು. ಅದಾದ ಹಲವು ತಿಂಗಳು ಕಳೆದಮೇಲೆ ಒಂದು ದಿನ ಇದ್ದಕ್ಕಿದ್ದಂತೆ ಮಗನಿಗೆ ಆ ಹಿಂದಿನ ಪ್ರಸಂಗವನ್ನು ನೆನಪಿಸಿ ’ಈಗ ನೋಡು ಅದರ ಅರ್ಥವನ್ನು’ ಎಂದವರೇ ಕಣ್ಣುಗಳನ್ನು ಮುಚ್ಚಿದರು. ಮತ್ತೆ ಕಣ್ಣು ತೆರೆಯಲಿಲ್ಲ.
ಚಂದ್ರಶೇಖರಶಾಸ್ತ್ರಿಗಳನ್ನೂ ಕೃಷ್ಣಶಾಸ್ತ್ರಿಗಳ್ನೂ ನೋಡುವಾಗ `ನಾವೆಲ್ಲ ಏಕೆ ಇಷ್ಟೊಂದು ಪರಿಪಾಟಲು ಪಡುತ್ತಿದ್ದೇವೆ?’ ಎಂದು ಹಲವರಿಗಾದರೂ ಅನಿಸಿದ್ದೀತು. ಆದರೆ ಅವಧೂತತ್ವ ಸುಲಭಕ್ಕೆ ಸಿದ್ಧಿಸುವುದಲ್ಲ. ಅದನ್ನು ಯಾವಾವ ಜನ್ಮಾಂತರಸಂಸ್ಕಾರಗಳು ಆಗುಮಾಡಿಸುತ್ತವೋ ಯಾರು ಬಲ್ಲರು!
ವಿಚಿತ್ರವೆಂದರೆ ಕೈಯಲ್ಲಿ ದಮ್ಮಡಿ ಇಲ್ಲದ ಈ ಮಹಾನುಭಾವರುಗಳು ಅದೆ? ಮಂದಿಗೆ ಸಮಾಧಾನವನ್ನೂ ಪ್ರಕಾಶವನ್ನೂ ವಿತರಿಸಿದರು – ಎಂಬುದು.
ಜಗದ್ವ್ಯವಹಾರಗಳ ನಟ್ಟನಡುವೆ ಇದ್ದೂ ನಿಸ್ಸಂಗಿಗಳಾಗಿ ಇರುವುದು ಹೇಗೆಂಬುದನ್ನು ನಿದರ್ಶನಪಡಿಸಿದವರು ಈ ತಂದೆ-ಮಕ್ಕಳು.
ದುರ್ಲಭ ಗುಣಸಮುಚ್ಚಯ
ಬಿಳಿಯುಡುಪಿನ ಸಂನ್ಯಾಸಿ ಎಂದೆಲ್ಲ ಕೃಷ್ಣಶಾಸ್ತ್ರಿಗಳನ್ನು ಜನರು ವರ್ಣಿಸಿರುವುದುಂಟು. ಅದು ಅವರ ನಿರ್ಲಿಪ್ತತೆಯನ್ನು ಸ್ವಲ್ಪಮಟ್ಟಿಗೆ ಸೂಚಿಸಬಹುದು. ಆದರೆ ಅವರಂತೆ ಸದಾ ಸಮಾಜಹಿತಸಾಧಕ ಪ್ರಯತ್ನಗಳಲ್ಲಿ ಮಗ್ನರಾದಂತಹ ಸಂನ್ಯಾಸವ್ರತಿಗಳು ಅತ್ಯಂತ ದುರ್ಲಭ.
ಶಂಕರಾಚಾರ್ಯರ `ವಿವೇಕ ಚೂಡಾಮಣಿ’ಯ ಆರಂಭದಲ್ಲಿಯೆ ಬರುವ ಅರ್ಥಗರ್ಭಿತ ಮಾತು ಪ್ರಸಿದ್ಧವಾದುದು:
ದುರ್ಲಭಂ ತ್ರಯಮೇವೈತತ್
ದೇವಾನುಗ್ರಹಹೇತುಕಮ್|
ಮನುಷ್ಯತ್ವಂ ಮುಮುಕ್ಷುತ್ವಂ
ಮಹಾಪುರುಷಸಂಶ್ರಯಃ||
“ಮೂರು ವಿಶೇಷವಾದ ಗುಣಗಳು ಜನರಲ್ಲಿ ಹೊಕ್ಕಿರುವುದು ದೈವಾನುಗ್ರಹ ಇದ್ದರೆ ಮಾತ್ರ: ಜೀವಾನುಕಂಪಾದಿ ಮಾನವೀಯ ಗುಣ, ಮೋಕ್ಷಾಭಿಮುಖತೆ, ಮಹಾಪುರುಷರ ಒಡನಾಟ.”
ಈ ಮೂರೂ ಗುಣಗಳ ಸಮಾವೇಶವು ಬೆಳಗೆರೆ ಕೃಷ್ಣಶಾಸ್ತ್ರಿಗಳಲ್ಲಿ ಇದ್ದಿತು. ಸಂಸ್ಕಾರಪ್ರಾಪ್ತಿಯಿಂದಲೋ ಸ್ವಯತ್ನದಿಂದಲೋ – ಹೇಗೋ ಈ ಗುಣಗಳು ಅವರಲ್ಲಿ ದಟ್ಟವಾಗಿ ಇದ್ದುದಂತೂ ಹೌದು.
ಈ ಗುಣಗಳ ಉದಾತ್ತತೆಯನ್ನು ಗ್ರಹಿಸುವುದು ಕಷ್ಟವಲ್ಲ. ಅವು ಶಾಸ್ತ್ರಿಗಳಲ್ಲಿ ರಕ್ತಗತವಾಗಿದ್ದವೆಂಬುದು ವಿಶೇಷ. ಹೇಳಿಕೊಳ್ಳುವಂತಹ ಉಪಪತ್ತಿ ಇಲ್ಲದ, ಅತಿಸಾಮಾನ್ಯವೆನ್ನಬಹುದಾದ ಸ್ಥಿತಿಯಲ್ಲಿದ್ದ ಈ ಜಂಗಮರು ಸೇವಾವಕಾಶ ಕಂಡಲ್ಲಿ ನುಗ್ಗುತ್ತಾರೆ, ತಾವೇ ಅಂತಹ ಅವಕಾಶಗಳನ್ನು ಸೃಷ್ಟಿಸಿಕೊಳ್ಳುತ್ತಾರೆ. ಗ್ರಾಮಸ್ಥರೊಡನೆ ಅವರಿಗಿದ್ದ ತಾದಾತ್ಮ್ಯ ಪರಿಪೂರ್ಣವಾದದ್ದು. ಹೀಗಾಗಿ `ನಾನು ಇತರರಿಗೆ ಏನೋ ಮಾಡುತ್ತಿದ್ದೇನೆ’ ಎಂಬ ಭಾವನೆಯೇ ಅವರ ಮನಸ್ಸಿನಲ್ಲಿ ಹಾದುಹೋದದ್ದಿಲ್ಲ. ಇನ್ನು ಮುಮುಕ್ಷುತ್ವ ಅವರ ನರನಾಡಿಗಳಲ್ಲಿ ಇದ್ದುದರಿಂದಲೇ ಅವರು ಮುಕುಂದೂರುಸ್ವಾಮಿಗಳಂತಹ ಅವಧೂತರಿಂದ ಆಕರ್ಷಿತರಾದುದು. ಮೂರನೆಯದಾಗಿ ಮಹಾಪುರು?ಸಂಶ್ರಯ. ಸಾಮಾನ್ಯವಾಗಿ ಯಾವುದೋ ಒಂದು ವೃತ್ತಿಗೋ ಪ್ರವೃತ್ತಿಗೂ ಜಾಯಮಾನಕ್ಕೋ ಸೇರಿದವರು ಒಟ್ಟುಗೂಡುವುದು ಸ್ವಾಭಾವಿಕ. ಅಂತಹ ಒಡನಾಟ ಹೆಚ್ಚಿನ ಸಂದರ್ಭಗಳಲ್ಲಿ ಸನ್ನಿವೇಶಾನುಗುಣವೋ ಅನುಕೂಲಾನುಗುಣವೋ ಆಗಿರುತ್ತದೆ. ಆದರೆ ಈ ಜಾಡಿನಿಂದ ಭಿನ್ನವಾದದ್ದು ಕೃ?ಶಾಸ್ತ್ರಿಗಳ ಮಹಾಪುರುಷಸಂಶ್ರಯ. ಯಾವುದೇ ಕ್ಷೇತ್ರದ ಸಾಧಕರಿದ್ದರೂ ಕೃಷ್ಣಶಾಸ್ತ್ರಿಗಳು ತಾವಾಗಿ ಅವರನ್ನು ಅರಸಿ ಹೋಗುವರು, ಊರೂರು ತಿರುಗುವರು.
ಎಲ್ಲರೊಳಗೊಂದಾಗಿ….
ಜೈಮಿನಿಭಾರತದಂತಹ ಸುಲಭವಲ್ಲದ ಪ್ರೌಢಕಾವ್ಯವನ್ನು ಶಾಲಾ ಮಕ್ಕಳಿಗೆ ತನ್ಮಯತೆಯಿಂದ ಪಾಠ ಮಾಡುತ್ತಿದ್ದ ಮತ್ತು ಶಾಲಾಮಾಸ್ತರಿಕೆ ಪೂರ್ವಜನ್ಮಪುಣ್ಯದ ಫಲವೆಂದು ನಂಬಿದ್ದ ಸಿದ್ಧಯ್ಯ, ಅವರ ಒಡನಾಡಿ ಅಲ್ಲಿಸಾಬ್, ದೇವನೂರಿನ ಪಟೇಲ – ಸಜ್ಜನಿಕೆಯ ಸಾಂದ್ರರೂಪವಾಗಿದ್ದ ಮಹಮದ್ ಹಯಾತ್ಸಾಬ್, ಜಾನಪದ ಹಾಡುಗಳ ಅಕ್ಷಯಪಾತ್ರೆಯಾಗಿದ್ದ ಗೊಲ್ಲರಹಟ್ಟಿಯ ಸಿರಿಯಜ್ಜಿ – ಇಂತಹ ಹತ್ತಾರು ಮಂದಿಯನ್ನು ಬೆಳಗೆರೆ ಕೃಷ್ಣಶಾಸ್ತ್ರಿಗಳು ತಮ್ಮ ವ್ಯಕ್ತಿಚಿತ್ರಣಗಳ ಮೂಲಕ ಅಮರರಾಗಿಸಿದ್ದಾರೆ.
ಇಂತಹ ಅಪೂರ್ವ ವ್ಯಕ್ತಿಗಳು ಎಲ್ಲ ಜಿಲ್ಲೆಗಳಲ್ಲಿಯೂ ಅಲ್ಲಲ್ಲಿ ಕಾಣಿಸಿಕೊಳ್ಳುತ್ತಾರೆ. ಅಂತಹವರನ್ನು ಎಲ್ಲರೂ ನೋಡಿಯೂ ಇರುತ್ತಾರೆ. ಆದರೆ ಹೊರನೋಟಕ್ಕೆ ಸಾಮಾನ್ಯರೆನಿಸುವ ಅಂತಹವರ ವ್ಯಕ್ತಿತ್ವದ ಉದಾತ್ತತೆಯನ್ನು ಗುರುತಿಸಿ ಮೆರೆಸಿರುವುದು ಬೆಳಗೆರೆ ಕೃಷ್ಣಶಾಸ್ತ್ರಿಗಳ ವಿಶಿಷ್ಟತೆ. ಸ್ವಯಂ ಉದಾತ್ತರಾದವರ ಕಣ್ಣಿಗೆ ಎಲ್ಲೆಡೆ ಉದಾತ್ತತೆಯೇ ಎದ್ದುಕಾಣುತ್ತದೆ.
ಕೃಷ್ಣಶಾಸ್ತ್ರಿಗಳ ಮನೋಧರ್ಮ ಅವರ ತಂದೆಯ ಮನೋಧರ್ಮವೇ. ಒಂದಷ್ಟು ವರ್ಷ ಕೃಷ್ಣಶಾಸ್ತ್ರಿಗಳು ಮಾಸ್ತರಿಕೆಯನ್ನು ಮಾಡಿದರು; ಆದರೆ ಎಂದೂ ತೇರೀಜುಬೇರೀಜು ಮಾಡಹೋಗಲಿಲ್ಲ. ಆಂತರಂಗಿಕ ಸಂತೃಪ್ತಿಯಲ್ಲಿ ನೆಲೆನಿಂತವರನ್ನು ಬಾಹ್ಯ ಸನ್ನಿವೇಶಗಳು ಹೇಗೆ ತಾನೆ ಬಾಧಿಸಿಯಾವು?
ಉಪಾಧ್ಯಾಯವೃತ್ತಿಯೂ ಅವರು ತುಂಬಾ ಯೋಚನೆಮಾಡಿ ಆರಿಸಿಕೊಂಡರೆಂದು ಹೇಳುವುದು ಕಷ್ಟ. ಆರಂಭದಲ್ಲಿ ಶ್ಯಾನುಭಾವಿಕೆ ನಡೆಸಿದ್ದರು. ಒಂದಷ್ಟು ಸಮಯ ಕಾರ್ಖಾನೆಯೊಂದರಲ್ಲಿ ಉದ್ಯೋಗಿಯಾಗಿದ್ದುದೂ ಉಂಟು. ಅಲ್ಲಿಯೂ ದಕ್ಷತೆಗಾಗಿ, ಕಾರ್ಯಶ್ರದ್ಧೆಗಾಗಿ ಹೆಸರು ಮಾಡಿದ್ದರು. ಹಿತೈಷಿಗಳೊಬ್ಬರು ಶಾಸ್ತ್ರಿಗಳ ಜಾಯಮಾನಕ್ಕೆ ಅಧ್ಯಾಪಕವೃತ್ತಿ ಹೆಚ್ಚು ಹೊಂದಿಕೆಯಾಗುತ್ತದೆಂದು ಸಲಹೆ ಮಾಡಿದಾಗ ಶಾಸ್ತ್ರಿಗಳು `ಅದೇ ಆಗಲಿ’ ಎಂದು ಶಾಲಾ ಮಾಸ್ತರರಾದರು. ಆದರೆ ಎಲ್ಲರಂತಲ್ಲ ಈ ಮಾಸ್ತರರು. ಪಾಠ್ಯಾಂಶಗಳನ್ನು ಮುಗಿಸುವುದು ಅವರಿಗೆ ಕಷ್ಟದ ಕೆಲಸವಾಗಿರಲಿಲ್ಲ. ಮಕ್ಕಳಿಂದ ಕೋಲಾಟ ಆಡಿಸುವರು, ಹಾಡುಗಳನ್ನು ಹಾಡಿಸುವರು, ನಾಟಕಗಳನ್ನು ಆಡಿಸುವರು. ಶಾಸ್ತ್ರಿಗಳು ಬರೆದ ಮತ್ತು ಆಡಿಸಿದ ನಾಟಕಗಳು ಅನೇಕ ಬಹುಮಾನಗಳನ್ನು ಪಡೆದುಕೊಂಡವು. ಅವರ `ಹಳ್ಳಿಚಿತ್ರ’ ನಾಟಕಕ್ಕೆ ಕೇಂದ್ರಸರ್ಕಾರದ ಯೋಜನಾ ಇಲಾಖೆಯ ಪಾರಿತೋಷಿಕ ದೊರೆತಿತ್ತು.
ನಿರಂತರ ಸಂಭ್ರಮೋಲ್ಲಾಸ
ಗ್ರಾಮಾಭ್ಯುದಯ, ಹಳ್ಳಿಗಳ ಏಳ್ಗೆ ಮೊದಲಾದ ಉದ್ದುದ್ದ ಮಾತುಗಳು ತಲೆಚಿಟ್ಟುಹಿಡಿಸುವಷ್ಟು ಸಲ ನಮಗೆ ಕರ್ಣತಾಡಿತವಾಗುತ್ತಿರುತ್ತವೆ. ಈ ಗಮ್ಯವನ್ನು ಯಾವುದೇ ಡಂಗುರವಿಲ್ಲದೆ ದೊಡ್ಡ ರೀತಿಯಲ್ಲಿ ಮಾಡಿ ತೋರಿಸಿದವರು ಕೃ?ಶಾಸ್ತ್ರಿಗಳು. ಅವರು ಇದನ್ನೆಲ್ಲ ಸ್ವಪ್ರೇರಣೆಯಿಂದ ಮಾಡಿದರು – ಎಂಬುದೇ ಅವರ ಸಫಲತೆಯ ಮೂಲ. ಅವರು ಎಂದೂ ಶಾಲೆಯ ಮಾಸ್ತರಿಕೆಗೆ ತಮ್ಮನ್ನು ಮಿತಗೊಳಿಸಿಕೊಳ್ಳಲಿಲ್ಲ. ವರ್ಗವಾದ ಯಾವುದೇ ಗ್ರಾಮದಲ್ಲಿ ನೆಲೆಯೂರಿದೊಡನೆ ಪಡೆಕಟ್ಟಿಕೊಂಡು ಗ್ರಾಮನೈರ್ಮಲ್ಯೀಕರಣ ಮೊದಲಾದ ಚಟುವಟಕೆಗಳಲ್ಲಿ ತೊಡಗುತ್ತಿದ್ದರು. ಇಂಥವರಿಗೆ ಜನಾದರಣೆ ದೊರೆಯದೆ ಇದ್ದೀತೆ? ಇನ್ನು ಅವರ ಉತ್ಸಾಹಕ್ಕೂ ಕಾರ್ಯವಂತಿಕೆಗೂ ಮಿತಿಗಳೇ ಇರಲಿಲ್ಲ. ದೇವನೂರಿನಲ್ಲಿ ಅದ್ಧೂರಿಯಾಗಿ ಅವರು ನಡೆಸಿದ ಲಕ್ಷ್ಮೀಶಕವಿಯ ಜಯಂತ್ಯುತ್ಸವ ಆ ಪ್ರಾಂತದ ಇತಿಹಾಸದ ಒಂದು ಮೈಲಿಗಲ್ಲು
ಚಟುವಟಿಕೆಗಳಿಗೆ ನಾಂದಿಯಾಯಿತು. ಒಮ್ಮೆ ವಿವಿಧ ಕಲಾ ಪ್ರದರ್ಶನ; ಒಮ್ಮೆ ಗೀತಾಜಯಂತಿ; ಒಮ್ಮೆ ನಾಟಕ; ಒಮ್ಮೆ ಗಮಕವಾಚನ; ಒಮ್ಮೆ ಜಾನಪದ ಉತ್ಸವ. ಇದು ಯಾವುದೇ ಒಂದು ಹಳ್ಳಿಯಲ್ಲಲ್ಲ. ಅವರು ಹೋದ ಎಲ್ಲೆಡೆ ಇಂಥದೇ ಸಾಹಸಸರಣಿ. ಹೆಗ್ಗೆರೆಯಾಗಲಿ ಮೀರಸಾಬಿಹಳ್ಳಿಯಾಗಲಿ ಆ ಕಾಲದಲ್ಲಿ ಯಾವ ಮೇ?ರೂ ಇ?ಪಟ್ಟು ಹೋಗುತ್ತಿದ್ದ ಜಾಗಗಳಲ್ಲ. ಅಂತಹ ಹಳ್ಳಿಗಳನ್ನು ಕೃಷ್ಣಶಾಸ್ತ್ರಿಗಳು ನಂದನವನಗಳನ್ನಾಗಿಸಿದರು. ಅವರು ಸ್ವಂತ ಶ್ರಮದಿಂದಲೂ ಅಣ್ಣ ಮತ್ತಿತರರ ನೆರವಿನಿಂದಲೂ ಗ್ರಾಮಸ್ಥರ ತೊಡಗುವಿಕೆಯಿಂದಲೂ ನಿರ್ಮಿಸಿರುವ ಹೆಗ್ಗೆರೆಯ ಶಾಲೆ ಮೊದಲಾದವು ನಿಜವಾದ ಅರ್ಥದಲ್ಲಿ ಶಾಸ್ತ್ರಿಗಳ ಸ್ಮೃತಿಗೆ ಪ್ರಜ್ವಲ ಸ್ಮಾರಕಗಳಾಗಿವೆ.
ಬದುಕಿನ ಬಗೆಗೆ ಪ್ರೀತಿ
ಬದುಕಿನ ಬಗೆಗಿನ ಪ್ರೀತಿಯೇ ಅವರ ಪ್ರಮುಖ ಬೋಧನಸಾಮಗ್ರಿಯಾಗಿತ್ತು ಎನ್ನಬಹುದು. ಅವರಿಗೆ ವರ್ಗವಾದ ಊರುಗಳಲ್ಲಿ ಶಾಲೆಗೆ ಕಟ್ಟಡ ಇಲ್ಲದಿದ್ದಲ್ಲಿ ತಾವೇ ದೇಣಿಗೆ ಸಂಗ್ರಹಿಸಿ ಗ್ರಾiಸ್ಥರನ್ನು ಶ್ರಮದಾನದಲ್ಲಿ ತೊಡಗಿಸಿ ಸೌಕರ್ಯಗಳನ್ನು ನಿರ್ಮಿಸಿದರು. ಅವಶ್ಯವಿದ್ದಲ್ಲಿ ಮೇಷ್ಟ್ರುಗಳಿಗೆ ವಸತಿಗಳನ್ನೂ ಯೋಜಿಸಿದರು, ವಿದ್ಯಾರ್ಥಿಗಳಿಗಾಗಿ ಊಟ-ವಸತಿಗಳನ್ನೂ ಏರ್ಪಡಿಸಿದರು, ತೀವ್ರ ಅವಶ್ಯವಿದ್ದೆಡೆ ಆಸ್ಪತ್ರೆಯನ್ನೂ ಕಟ್ಟಿಸಿದರು. ಒಂದೆ, ಎರಡೆ! ಸದಾ ಬರಿಗೈಯವರಾದ ಶಾಸ್ತ್ರಿಗಳು ಅದೆಷ್ಟು ಬಡಮಕ್ಕಳಿಗೆ ಧನಸಹಾಯ ಮಾಡಿದರೋ ಲೆಕ್ಕವಿಟ್ಟವರಿಲ್ಲ.
ವ್ಯಾವಹಾರಿಕತೆಗೆ ಅತೀತವಾದ ಅವರ ಈ ಲೋಕಸಂಗ್ರಹಕಾರ್ಯ ಹೋಲಿಕೆಯಿಲ್ಲದ್ದು. ಪಾರದರ್ಶಕ ಸಾತ್ತ್ವಿಕತೆ, ಎಂದೂ ಮಾಸದ ಬೋಸುಬಾಯಿಯ ಮುಗುಳ್ನಗೆ – ಇಷ್ಟು ಬಂಡವಾಳದಿಂದ ಶಾಸ್ತ್ರಿಗಳು ಎಂತಹ ಸಾಧನೆ ಮೆರೆದರು – ಎಂಬುದು ಎಲ್ಲರ ಪಾಲಿಗೂ ನಿರಂತರ ವಿಸ್ಮಯವಾಗಿಯೆ ಉಳಿಯುತ್ತದೆ. ಈ ಪವಾಡ-ಸರಣಿ ಮುಕುಂದೂರು ಅವಧೂತರು ಎಸಗಿದ ಪವಾಡಗಳಷ್ಟೆ ಚೇತೋಹಾರಿ.
ಚಿತ್ರದುರ್ಗ ಜಿಲ್ಲೆಯ ಸ್ಪೆಷಲ್ ಡೆಪ್ಯುಟಿ ಕಮಿಷನರಾಗಿದ್ದ ರಾಜಪುರೋಹಿತರ ಅಧ್ವರ್ಯದಲ್ಲಿ ತಳುಕು ಗ್ರಾಮದಲ್ಲಿ ವೆಂಕಣ್ಣಯ್ಯನವರ ಸ್ಮಾರಕವೊಂದನ್ನು ನಿರ್ಮಿಸುವ ತರದೂದು ನಡೆದಿತ್ತು.
ಅಸ್ತಿಭಾರಶಿಲೆಯನ್ನೇನೊ ಆಗಿನ ಮುಖ್ಯಮಂತ್ರಿ ದೇವರಾಜ ಅರಸು ಅವರ ಕೈಯಿಂದ ಮಾಡಿಸಿದ್ದು ಆಗಿತ್ತು. ಅದೊಂದು ರಾತ್ರಿ ಊರ ಹತ್ತು ಸಮಸ್ತರೂ ಹಲವರು ಅನ್ಯ ಗಣ್ಯರೂ ಸೇರಿ ಸ್ಮಾರಕನಿರ್ಮಾಣಕ್ಕೆ ಹಣ ಎಲ್ಲಿಂದ ತರುವುದು ಎಂದು ಸಮಾಲೋಚನೆ ನಡೆಸಿದ್ದರು. ಸರ್ಕಾರವನ್ನು ಕೇಳೋಣ, ಶ್ರೀಮಂತರಿಂದ ಸಂಗ್ರಹಿಸೋಣ – ಎಂದೆಲ್ಲ ಸಲಹೆಗಳ ಹಾರಾಟ ನಡೆದಿತ್ತು. ಆದರೆ ಗಟ್ಟಿ ಸಹಾಯಕ್ಕೆ ಯಾರೂ ತಾವಾಗಿ ಮುಂದಾಗಲಿಲ್ಲ. ಅದುವರೆಗೆ ಮೌನದಿಂದ ಕುಳಿತಿದ್ದ ಬೆಳಗೆರೆ ಕೃಷ್ಣಶಾಸ್ತ್ರಿಗಳು ಎದ್ದುನಿಂತು ಮುಂದೆ ಬಂದು “ದಯವಿಟ್ಟು ನನ್ನ ವಂತಿಗೆ ಒಂದು ಸಾವಿರ ರೂಪಾಯಿ ತೆಗೆದುಕೊಳ್ಳಿರಿ” ಎಂದು ಹೇಳಿ ಹಣವನ್ನು ಅಲ್ಲಿಟ್ಟು ಹಿಂದಕ್ಕೆ ಹೋಗಿ ಕುಳಿತುಬಿಟ್ಟರು. ಕೃಷ್ಣಶಾಸ್ತ್ರಿಗಳಾದರೊ ಪ್ರೈಮರಿ ಸ್ಕೂಲ್ ಮೇಷ್ಟ್ರು. ಆ ದಿನಗಳ ಸಂಬಳವನ್ನು ನೆನೆದರೆ ಈಗ ಅದು ಹಾಸ್ಯದ ವಿಷಯವಾಗಬಹುದಷ್ಟೆ. ಅಂತಹ ಶಾಸ್ತ್ರಿಗಳಲ್ಲಿ ಆ ಕಾಲಕ್ಕೆ ದೊಡ್ಡದೇ ಆದ ಸಾವಿರ ರೂಪಾಯಿ ಎಲ್ಲಿಂದ ಬಂದಿತು – ಎಂದು ಎಲ್ಲರು ದಿಗ್ಭ್ರಾಂತರಾದರು.
ನಡೆದಿದ್ದುದೇನೆಂದರೆ – ಆಗ್ಗೆ ಕೆಲವು ದಿನಗಳ ಹಿಂದೆಯ? ’ಆದರ್ಶ ಶಿಕ್ಷಕ’ ಎಂಬ ಪ್ರಶಸ್ತಿಯ ನಿಮಿತ್ತ ಕೇಂದ್ರಸರ್ಕಾರದಿಂದ ಬಹುಮಾನವಾಗಿ ಬಂದಿದ್ದ ಹಣ ಅದು.
ಅನಿಕೇತನ
ಅದನ್ನೆಲ್ಲ ನೆನೆಯುವಾಗ ಮೂಡುವ ಅನಿಸಿಕೆ ಇದು: ಬೆಳಗೆರೆ ಕೃಷ್ಣಶಾಸ್ತ್ರಿಗಳು ಏನನ್ನೂ ಮಾಡಲಿಲ್ಲ; ಅವರು ತಾವಾಗಿ ಇದ್ದರು ಅಷ್ಟೆ. ಹೂವಿನ ಪರಿಮಳ ದೂರಕ್ಕೂ ಹರಡುವಂತೆ, ಕೃಷ್ಣಶಾಸ್ತ್ರಿಗಳ ಅಕೃತ್ರಿಮ ಸೌಗಂಧವು ಈಗ ಅದೇ ಒಂದು ಇತಿಹಾಸಖಂಡವಾಗಿಬಿಟ್ಟಿದೆ.
ಅನೇಕ ವರ್ಷಕಾಲ ಬೆಳಗೆರೆ ಕೃಷ್ಣಶಾಸ್ತ್ರಿಗಳ `ವಸತಿ’ಯಾಗಿದ್ದುದು ಅವರ ತೋಟದ ಮೂಲೆಯೊಂದರಲ್ಲಿ ಕಟ್ಟಿದ್ದ ಗುಡಿಸಲು. ಎಲ್ಲಿಂದಲೋ ಬಂದ ಕಪ್ಪೆ, ಗುಬ್ಬಚ್ಚಿ, ಮೈನಾಹಕ್ಕಿ, ಒಮ್ಮೊಮ್ಮೆ ವಿಸಿಟಿಂಗ್ ಪ್ರೊಫೆಸರ್ ಆಗಿ ಬರುತ್ತಿದ್ದ ಹಾವು – ಇವಾವುದೂ ಅವರನ್ನು ವಿಚಲಿತಗೊಳಿಸುತ್ತಿರಲಿಲ್ಲ. `ಅವುಗಳ ಜಾಗದಲ್ಲಿ ನಾನು ಇದ್ದೇನ?’ ಎಂದು ಬೊಚ್ಚುಬಾಯಿಯ ನಗು ನಕ್ಕು ಸುಮ್ಮನಾಗುತ್ತಿದ್ದರು.
ಮಾತನ್ನು ಕೇಳಿಸಿಕೊಳ್ಳುವ ಗಿರಾಕಿ ಯಾರಾದರೂ ದೊರೆತರೆ ಕೃಷ್ಣಶಾಸ್ತ್ರಿಗಳಿಂದ ಹೊರಡುತ್ತಿದ್ದುದು ಮಾತಿನ ನಯಾಗರಾ ಜಲಪಾತ. ಅವರು ಸದಾ ಹೇಳಬಯಸುತ್ತಿದ್ದುದು ಅವರು ಕಂಡ ಹಿರಿಯರ ಬಗೆಗೆ ಮತ್ತು ಅವರ ಒಡನಾಟದಲ್ಲಿ ಬಂದ ಸಾಮಾನ್ಯರಲ್ಲಿ ಅತಿಸಾಮಾನ್ಯರಾದ ಮುಗ್ಧ ಸಜ್ಜನರ ಬಗೆಗೆ. ಇವೆಲ್ಲ ಅವರ ಅಂತರಂಗವನ್ನು ಆವರಿಸಿದ್ದ ಸಂಗತಿಗಳು. ಹೀಗಾಗಿ ಆ ವೃತ್ತಾಂತಗಳನ್ನು ಅವರು ನೂರನೆಯ ಬಾರಿ ಹೇಳುವಾಗಲೂ ಪುಲಕವನ್ನು ಅನುಭವಿಸುತ್ತಿದ್ದರು.
ನಮ್ಮ ರಾಜ್ಯದ ಹಲವಾರು ಕಡೆಗಳಲ್ಲಿ ಅವಧೂತರು ಆಗಿಹೋದ ಮಾಹಿತಿ ಲಭ್ಯವಿದೆ. ಆದರೆ ಅದೇನೋ
ಕಾರಣದಿಂದ ಚಿತ್ರದುರ್ಗ ಜಿಲ್ಲೆಯ ಭಾಗದಲ್ಲಿಯೆ ಹಲವಾರು ಅವಧೂತರು ಮೆರೆದುಹೋದರೆಂಬುದು ಕುತೂಹಲಕರ. ಹದಿನೆಂಟನೇ ಶತಮಾನದಲ್ಲಿ ಚಿತ್ರದುರ್ಗ ಸಮೀಪದ ಸಜ್ಜನಕೆರೆಯನ್ನು ವಾಸ್ತವ್ಯ ಮಾಡಿಕೊಂಡಿದ್ದ ಬಸಪ್ಪತಾತ, ಕಳೆದ ಶತಮಾನದ ಪೂರ್ವಾರ್ಧದಲ್ಲಿ ಹಿರಿಯೂರು ಸಮೀಪದ ಮೇಟಿಕುರಿಕೆಯ ಹಠಯೋಗಿ ಉಗುರುಸ್ವಾಮಿಗಳು, ಹಿರಿಯೂರು ಆಸುಪಾಸಿನಲ್ಲಿಯೆ ಶ್ರೀರಾಮಪುರದಲ್ಲಿ ಈಗ್ಗೆ ನಲವತ್ತು ವರ್ಷ ಹಿಂದಿನವರೆಗೆ ವಿರಾಜಮಾನರಾಗಿದ್ದ ಪರಪ್ಪತಾತ, ಚಿತ್ರದುರ್ಗ-ಬಳ್ಳಾರಿ ಜಿಲ್ಲೆಗಳ ಗಡಿಪ್ರಾಂತದಲ್ಲಿ ಹತ್ತೊಂಬತ್ತನೇ ಶತಮಾನದ ಉತ್ತರಾರ್ಧದಲ್ಲಿ ಬೆಳಗಿ ವಿಪುಲವಾಗಿ ತತ್ತ್ವಪದಗಳನ್ನು ರಚಿಸಿದ್ದ ಹನುಮಂತಮೂರ್ತಿಸಾಧುಗಳು- ಮೊದಲಾದವರು ನೆನಪಿಗೆ ಬರುತ್ತಾರೆ. ಇವರೆಲ್ಲರ ವೃತ್ತಾಂತಗಳೂ ಅವರವರ ಜೀವಿತಾವಧಿಗಳಲ್ಲಿ ರಾಜ್ಯದೆಲ್ಲಕಡೆಗಳ ಅಧ್ಯಾತ್ಮಾಸಕ್ತ ವಲಯಗಳಲ್ಲಿ ಚಲಾವಣೆಯಲ್ಲಿದ್ದವು. ಆದರೆ ಇಂತಹ ಯಾರ ಬಗೆಗೂ ಜೀವಿತವಿವರಗಳಾಗಲಿ ಅವರ ಬೋಧನೆಗಳ ನಮೂನೆಗಳಾಗಲಿ ಎಲ್ಲಿಯೂ ಸಮಗ್ರವಾಗಿ ದಾಖಲೆಗೊಂಡಂತಿಲ್ಲ, ಈ ರೀತಿಯ ವೃತ್ತಸಂಗ್ರಹದ ರೂಢಿ ನಮ್ಮಲ್ಲಿ ಬೆಳೆಯಲಿಲ್ಲ. ಹೀಗಾಗಿ ಕಾಲಕಳೆದಂತೆ ಅವರ ಹೆಸರುಗಳೋ – ವಿರಳವಾಗಿ ಗದ್ದುಗೆಗಳೋ – ಅಷ್ಟೆ ಉಳಿದಾವು. ಮುಂದಿನ ದಶಕಗಳಲ್ಲಿ ಆ ಹೆಸರುಗಳೂ ಮರೆಯಾಗಿಹೋದರೆ ಆಶ್ಚರ್ಯವಿಲ್ಲ.
ಮುಕುಂದೂರುಸ್ವಾಮಿಗಳು
ಇದನ್ನು ಗಮನಿಸುವಾಗ ಚಿತ್ರದುರ್ಗ ಸೀಮೆಯನ್ನೇ ಲೀಲಾಕ್ಷೇತ್ರವನ್ನಾಗಿ ಮಾಡಿಕೊಂಡಿದ್ದ ಮುಕುಂದೂರುಸ್ವಾಮಿಗಳು ಭಾಗ್ಯಶಾಲಿಗಳು. ಈ ಪೀಳಿಗೆಯ ವಿಶಾಲ ಜನವರ್ಗಕ್ಕೆ ಮುಕುಂದೂರುಸ್ವಾಮಿಗಳು ಪರಿಚಿತರಾಗಿದ್ದಾರೆ. ಇದು ಸಾಧ್ಯವಾದದ್ದು ಬೆಳಗೆರೆ ಕೃಷ್ಣಶಾಸ್ತ್ರಿಗಳ ಕೈಂಕರ್ಯದಿಂದ. ತಾವು ಕಂಡ ಮುಕುಂದೂರುಸ್ವಾಮಿಗಳನ್ನು ಕೃಷ್ಣಶಾಸ್ತ್ರಿಗಳು ಚಿತ್ರಿಸಿರುವ ಬಗೆಯು ಅನುಪಮವಾಗಿದೆ. ಅದನ್ನು ಅನನ್ಯವಾಗಿಸಿರುವ ಸಂದರ್ಭಗಳು ಹಲವಾರು. ತಾವು ಆಯ್ದುಕೊಂಡ ವಸ್ತುವಿನಲ್ಲಿ ಶಾಸ್ತ್ರಿಗಳು ಬೆಳೆಸಿಕೊಂಡ ತನ್ಮಯತೆ, ವಸ್ತುವಿನ ಮಹತ್ತ್ವವನ್ನು ಗ್ರಹಿಸಿ ಅದನ್ನು ಹೊರಜಗತ್ತಿಗೆ ತಲಪಿಸಬೇಕೆಂಬ ಅವರ ಶ್ರದ್ಧೆ, ಶಾಸ್ತ್ರಿಗಳ ಅಕೃತಕ ವಾಗ್ರೀತಿ – ಇವೆಲ್ಲ ಶಾಸ್ತ್ರಿಗಳ ಬರಹವನ್ನು ರೂಪಿಸಿವೆ. ಇವೆಲ್ಲಕ್ಕಿಂತ ಮಿಗಿಲಾದ ಸಂಗತಿಯೂ ಒಂದುಂಟು. ಅದೆಂದರೆ ಕೃ?ಶಾಸ್ತ್ರಿಗಳೂ ಒಂದಷ್ಟುಮಟ್ಟಿಗಾದರೂ ಸ್ವಯಂ ಅವಧೂತಪ್ರಜ್ಞೆ ಬೆಳೆಸಿಕೊಂಡವರು. ಉದಾತ್ತವಾದುದನ್ನು ಕಂಡಲ್ಲಿ ಅದನ್ನು ಅಂತಃಸ್ಥ ಮಾಡಿಕೊಂಡು ಸಂದರ್ಭ ಒದಗಿದಾಗಲೆಲ್ಲ ಆ ಭಾವಸ್ಪಂದನವನ್ನು ಸಮಾನಮನಸ್ಕರೊಡನೆ ಹಂಚಿಕೊಳ್ಳುವುದನ್ನು ಅವರು ಜೀವನಕ್ರಮವಾಗಿ ಮಾಡಿಕೊಂಡಿದ್ದರು. ಆ ಆತ್ಮನಿವೇದನೆಗಳೇ ಕ್ರಮೇಣ ಬರಹದ ಆಕಾರ ತಳೆದವು. ಹೀಗೆ ಶಾಸ್ತ್ರಿಗಳು ಅನುದ್ದಿ?ವಾಗಿಯೆ ಮತ್ತು ಯಾವುದೇ ಪ್ರತಿಷ್ಠೆಕಾಮನೆ ಇಲ್ಲದೆಯೇ ಸಾಹಿತಿಯೂ ಆದರು. ಇದನ್ನು ಸದ್ಯೋಜಾತ ಸಾಹಿತ್ಯ ಎಂದು ಬೇಕಾದರೆ ಕರೆಯಬಹುದು. ಈ ಸಾಹಿತ್ಯಪ್ರಕಾರದ ಪ್ರವರ್ತಕರೂ ಅನುಸಂಧಾನಿಗಳೂ ಕೃಷ್ಣಶಾಸ್ತ್ರಿಗಳು ಮಾತ್ರ.
ಡಾ. ಬಿ.ಜಿ.ಎಲ್. ಸ್ವಾಮಿ ಹೇಳುತ್ತಿದ್ದರು: “ನಾನು ವಿಜ್ಞಾನ ಎಂದು ಬರೆದದ್ದು ಸಾಹಿತ್ಯವಾಯಿತು; ಸಾಹಿತ್ಯ ಎಂದು ಬರೆದದ್ದು ಹ್ಯೂಮರ್ ಆಯಿತು” – ಎಂದು. ಕೃಷ್ಣಶಾಸ್ತ್ರಿಗಳದ್ದೂ ಹಾಗೆಯೇ. ಅವರು ಬರೆದದ್ದೆಲ್ಲ ಸ್ವಾನುಭವಗಳೇ – ಎಂಬ ಸಂಗತಿ ಮಾತ್ರ ಅದಕ್ಕೆ ಪ್ರಮಾಣ, ಮೌಲ್ಯಮಾಪಕ – ಎಲ್ಲವೂ. ಇದು ಯಾವುದೇ ವಿಶ್ಲೇಷಣೆಗೂ ವರ್ಗೀಕರಣಕ್ಕೂ ಅತೀತವಾದುದು. ಅದನ್ನು ಬೇರೆ ರೀತಿಯಾಗಿ ಲಕ್ಷಣೀಕರಿಸುವುದು ಸಾಧ್ಯವೂ ಅಲ್ಲ, ಅವಶ್ಯವೂ ಅಲ್ಲ. ಅದನ್ನು ಪರಿಮಳಭರಿತ ಹೂವಿನಂತೆ ಆಸ್ವಾದಿಸಬೇಕಷ್ಟೆ. ಹೀಗೆ ಅದು ಅನನುಕರಣೀಯವೂ ಆಗಿದೆ.
ಇದರಿಂದಾಗಿ ನಮ್ಮ ನಾಡಿನ ಸಾಮಾಜಿಕ ಇತಿಹಾಸದ ದೃಷ್ಟಿಯಿಂದ ಮಹತ್ತ್ವದ್ದಾದ ಸಾಮಗ್ರಿಯನ್ನು ಬೆಳಗೆರೆ ಕೃಷ್ಣಶಾಸ್ತ್ರಿಗಳು ಉಳಿಸಿ ಹೋಗಿದ್ದಾರೆ.
ಅವರ `ಸಾಹಿತಿಗಳ ಸ್ಮೃತಿ’ ಕಥನಗಳಲ್ಲಿ ನಮ್ಮ ಸಾಹಿತ್ಯಕ್ಷೇತ್ರದ ಧೀಮಂತರ ಬಗೆಗೆ ಅನ್ಯತ್ರ ದುರ್ಲಭವಾದ ವೃತ್ತಾಂತಗಳೂ ಒಳನೋಟಗಳೂ ತುಂಬಿವೆ.
ಶಾಸ್ತ್ರಿಗಳ ಜನ್ಮಶತಾಬ್ದದ ಸಂದರ್ಭದಲ್ಲಿ ಅವರ ಸ್ಮೃತಿಗೆ ಶತನಮನಗಳು.
ಬೆಳಗೆರೆ ಕೃಷ್ಣಶಾಸ್ತ್ರಿಯವರ ಸ್ಮರಣೆ ಒಂದು ಅಲೌಕಿಕ ಆನಂದವನ್ನು ನೀಡಿತು.