ಅವಿನಯಮಪನಯ ವಿಷ್ಟೋ
ಧಮಯ ಮನಃ ಶಮಯ ವಿಷಯಮೃಗತ್ರೃಷ್ಣಾಮ್|
ಭೂತದಯಾಂ ವಿಸ್ತಾರಯ
ತಾರಯ ಸಂಸಾರಸಾಗರತಃ||
ಮಾತಾ ಮೇ ಪಾರ್ವತೀದೇವೀ ಪಿತಾ ದೇವೋ ಮಹೇಶ್ವರಃ|
ಬಾಂಧವಾಃ ಶಿವಭಕ್ತಾಶ್ಚ ಸ್ವದೇಶೋ ಭುವನತ್ರಯಮ್||
ಭಕ್ತಿಭಾವದಿಂದ ಸ್ತೋತ್ರಗಳನ್ನು ಉಚ್ಚರಿಸುವಾಗ ಕಲ್ಯಾಣನ ಕಣ್ಣುಗಳು ಹನಿದುಂಬಿದ್ದವು. ಅದೆಷ್ಟು ಉದಾತ್ತ ಭಾವನೆಗಳು ನಮ್ಮ ಪೂರ್ವಿಕರದು ಎಂದು ಭಾವಾವೇಶಗೊಂಡಿದ್ದ.
ತನ್ನ ಹೆಸರನ್ನು ಹಿಡಿದು ಕರೆದುದು ಕೇಳಿಸಲಾಗಿ ಕಲ್ಯಾಣನು ಒಳಕೋಣೆಗೆ ಹೋದ. ಅಲ್ಲಿದ್ದ ಚಿಕ್ಕಪ್ಪ ಕನಕ ಹೇಳಿದ:
“ನಿಮ್ಮ ತಂದೆಯವರು ಹೇಳಿ ಕಳಿಸಿದ್ದಾರೆ. ಭೂತೇಶ್ವರಮಠದಲ್ಲಿ ಇದ್ದಾರೆ.”
“ನಾನು ಯಾವಾಗ ಹೊರಡಲಿ?”
“ಪ್ರಯಾಣಕ್ಕೆ ಇವು ಪ್ರಶಸ್ತ ದಿನಗಳಲ್ಲ. ತಂದೆಯವರು ಅದೇಕೆ ನಿನ್ನನ್ನು ಕರೆದಿದ್ದಾರೋ ಅರ್ಥವಾಗುತ್ತಿಲ್ಲ.”
ಒಂದೆರಡು ನಿಮಿಷಗಳ ತರುವಾಯ ಕನಕ ಮುಂದುವರಿಸಿದ:
“ಇದೀಗ ಕಶ್ಮೀರ ರಾಜ್ಯದಲ್ಲಿ ಅಸ್ಥಿರತೆ ಇದೆ. ಒಂದು ಬಗೆಯ ಅರಾಜಕತೆ ಇದೆಯೆಂದೇ ಅನಿಸುತ್ತಿದೆ. ಹಳ್ಳಿಗಳು ಹದಗೆಡುತ್ತಿವೆ. ಜನರಾರೂ ನೆಮ್ಮದಿಯಿಂದ ಕಾಯಕ ನಡೆಸುತ್ತಿಲ್ಲ. ಮುಂದೆ ಏನಾಗುವುದೊ ಎಂದು ಆತಂಕವಾಗುತ್ತಿದೆ.”
“ಕತ್ತಲು ಕಳೆದ ಮೇಲೆ ಬೆಳಕು ಹರಿಯಲೇಬೇಕಲ್ಲ!”
“ಆಯಿತು, ಕ್ಷೇಮವಾಗಿ ಹೋಗಿ ಬಾ.”
ಕಲ್ಯಾಣನು ಮುಗುಳ್ನಕ್ಕು ವಸತಿಗೆ ಹಿಂದಿರುಗಿ ದಾರಿಗೆಂದು ಒಂದೆರಡು ಗ್ರಂಥಗಳನ್ನು ಹಿಡಿದು ವಾರಾಣಸಿಯಿಂದ ಕಶ್ಮೀರ ರಾಜಧಾನಿಯತ್ತ ಹೊರಟ.
* * * * * *
ಅದು ಲೌಕಿಕಾಬ್ದ 4023ನೇ ವರ್ಷ ಕಶ್ಮೀರ ಆಗ ಸುಸ್ಸಲನ ಆಳ್ವಿಕೆಯಲ್ಲಿ ಇದ್ದಿತು. ಅವು ಕಶ್ಮೀರಕ್ಕೆ ದುರ್ದಿನಗಳು. ಎಲ್ಲಕಡೆ ಆಂದೋಲನಗಳು, ಅಭದ್ರತೆ, ಅಶಾಂತಿ. ಹರ್ಷನು ಎಸಗಿದ್ದ ಅಕೃತ್ಯಗಳಿಗೆ ಕಶ್ಮೀರ ಈಗ ಬೆಲೆ ತೆರುತ್ತಿತ್ತು. ಉದಾರತೆಯ ಭ್ರಮೆಯಿಂದ ಅಧಿಕಾರಸ್ಥಾನಗಳಲ್ಲಿ ಕುಳ್ಳಿರಿಸಿದ್ದ ತುರುಷ್ಕರು ಆಕ್ರಮಕ ಉಚ್ಚಲನ ಬೆಂಬಲಿಗರಾಗಿ ಮಾರ್ಪಟ್ಟಿದ್ದರು.
ಆದರೆ ಉಚ್ಚಲನು ಚಾಣಾಕ್ಷ. ರಾಜ್ಯಾಧಿಕಾರ ಕೈಗೆ ಬಂದಮೇಲೆ ಕ್ರಮಕ್ರಮವಾಗಿ ತುರುಷ್ಕ ಅಧಿಕಾರಿಗಳನ್ನು ಬಹಿಷ್ಕರಿಸಿದ. ಒಂದಲ್ಲ ಒಂದು ದಿನ ಕಶ್ಮೀರಕ್ಕೆ ತುರುಷ್ಕರಿಂದ ಪ್ರಮಾದ ಒದಗುವ ಸಂಭವವನ್ನು ಉಚ್ಚಲನು ಅರಿತಿದ್ದ. ರಾಜ್ಯಕ್ಕೆ ಕಿರುಕುಳ ಕೊಡುತ್ತಿದ್ದ ದಾಮರರು ಮೊದಲಾದವರಲ್ಲಿ ಒಳಜಗಳಗಳನ್ನು ಸೃಷ್ಟಿಸಿ ತನ್ನ ನಿಯಂತ್ರಣವನ್ನು ಸ್ಥಾಪಿಸಿದ್ದ. ಜನರ ಜೀವನಾವಶ್ಯಕತೆಗಳನ್ನು ಪೂರೈಸಲು ಶ್ರಮಿಸುತ್ತಿದ್ದ; ಜನರ ಕಷ್ಟಸುಖಗಳನ್ನು ವಿಚಾರಿಸುತ್ತಿದ್ದ. ಆದರೆ ಯಾರಾದರೂ ತನಗೆ ವಿರುದ್ಧವಾಗಿ ಮಾತನಾಡುತ್ತಿದ್ದುದು ತಿಳಿದರೆ ಅವರನ್ನು ಕ್ಷಮಿಸುತ್ತಿರಲಿಲ್ಲ. ಹೀಗೆ ಅಧಿಕಾರಿಗಳು ಭಯದ ಆವರಣದಲ್ಲಿದ್ದರು.
ಅನತಿಕಾಲದಲ್ಲಿ ಉಚ್ಚಲನು ಭಸ್ಮಗೊಂಡಿದ್ದ ನಂದಿಕ್ಷೇತ್ರವನ್ನು ಮತ್ತೆ ನಿರ್ಮಿಸಿದ; ಇತರ ಹಲವಾರು ದೇವಾಲಯಗಳನ್ನೂ ಪುನರುದ್ಧರಿಸಿದ.
ತನ್ನ ಸೋದರನ ಜನಪ್ರಿಯತೆ ಹೆಚ್ಚುತ್ತಿದ್ದುದನ್ನು ಕೇಳಿ ಸುಸ್ಸಲನು ಅಸೂಯೆಗೊಂಡ. ಕಡೆಗೊಮ್ಮೆ ಅಸಂತೋಷವನ್ನು ತಡೆದುಕೊಳ್ಳಲಾಗದೆ ಸುಸ್ಸಲನು ಕಶ್ಮೀರದ ಮೇಲೆ ದಾಳಿಯಿಟ್ಟ.
ದಾಮರರು ಕಪಟಮಾರ್ಗದಿಂದ ಉಚ್ಚಲನನ್ನು ಹತ್ಯೆ ಮಾಡಿದರು.
ತೀಕ್ಷ್ಣ ಸಂಘರ್ಷಗಳ ನಂತರ 4189ರಲ್ಲಿ (ಕ್ರಿ.ಶ. 1112) ಸುಸ್ಸಲನು ಕಶ್ಮೀರಾಧಿಪತಿಯಾದ.
ಶಾಂತ ಸ್ಥಿತಿಯಿದ್ದುದು ಆರೇಳು ವರ್ಷ ಮಾತ್ರ. 4196ರಲ್ಲಿ ದಾಮರರು ಬಂಡೆದ್ದರು; ಮತ್ತೆ ಅಲ್ಲೋಲಕಲ್ಲೋಲ ಹರಡಿತು.
ಪ್ರಜೆಗಳಿಗೆ ರಕ್ಷಣೆಯನ್ನು ಕಲ್ಪಿಸಿ ರಾಜ್ಯದಲ್ಲಿ ಶಾಂತಿಯನ್ನು ಸ್ಥಾಪಿಸಬೇಕೆಂದು ರಾಜನಲ್ಲಿ ವಿಜ್ಞಪ್ತಿ ಮಾಡುತ್ತ ಬ್ರಾಹ್ಮಣರೆಲ್ಲ ಉಪವಾಸದೀಕ್ಷೆಯನ್ನು ಕೈಗೊಂಡರು.
ಏತನ್ಮಧ್ಯೆ ದಾಮರರ ಕೈಯಲ್ಲಿ ಪರಾಭವಗೊಂಡಿದ್ದುದು ಸುಸ್ಸಲನ ಆತಂಕವನ್ನು ಹೆಚ್ಚಿಸಿತ್ತು. ಪರಿಣಾಮವಾಗಿ ಸುಸ್ಸಲನು ಇನ್ನಷ್ಟು ಕ್ರೌರ್ಯಕ್ಕೆ ಮೊರೆಹೋದ. ಕೈಗೆ ಸಿಕ್ಕ ದಾಮರರನ್ನು ಹಿಂಸೆಗೊಳಪಡಿಸತೊಡಗಿದುದರಿಂದ ದಾಮರರೂ ತುರುಷ್ಕರೂ ಕ್ರುದ್ಧರಾಗಿ ಬಗೆಬಗೆಯ ಅಪಪ್ರಚಾರವನ್ನು ಮಾಡತೊಡಗಿದರು. ಇಂದಲ್ಲ ನಾಳೆ ಭಿಕ್ಷಾಚಾರನು ಪಟ್ಟಕ್ಕೆ ಏರುತ್ತಾನೆಂದು ನಿರೀಕ್ಷಿಸಿ ಸುಸ್ಸಲನ ಅಧಿಕಾರವನ್ನು ಅಲಕ್ಷ್ಯ ಮಾಡತೊಡಗಿದರು. ಭಿಕ್ಷಾಚಾರನು ಸೇನಾಸಮೇತನಾಗಿ ಬಳಿಸಾರುತ್ತಿರುವುದರ ವಾರ್ತೆಯನ್ನು ಕೇಳಿ ಸುಸ್ಸಲನು ರಾಣಿಯನ್ನೂ ಮಗನನ್ನೂ ಬಂಧುಗಳನ್ನೂ ಸುರಕ್ಷಣೆಗಾಗಿ ಲೋಹಾರಕ್ಕೆ ರಹಸ್ಯವಾಗಿ ಸಾಗಹಾಕಿದ.
ಭಿಕ್ಷಾಚಾರನ ಸೇನೆಯು ಶ್ರೀನಗರವನ್ನು ತಲಪಿದಾಗ ಸುಸ್ಸಲನು ರಾಜಭವನದೊಳಗಡೆಯೆ ಬಂದಿಯಾದಂತಿದ್ದ. ತನಗೆ ಪ್ರಜೆಗಳ ಬೆಂಬಲ ಇಲ್ಲದುದನ್ನು ಗ್ರಹಿಸಿ ಸುಸ್ಸಲನೂ ಕಶ್ಮೀರವನ್ನು ತೊರೆದು ಲೋಹಾರಕ್ಕೆ ಓಡಿಹೋದ. ನಿರ್ವಾಹವಿಲ್ಲದೆ ಮಂತ್ರಿಗಳು ಸಮಾಲೋಚಿಸಿ ಭಿಕ್ಷಾಚಾರನನ್ನು ಸಿಂಹಾಸನದಲ್ಲಿ ಕುಳ್ಳಿರಿಸಿದರು.
ಸುಸ್ಸಲನು ಇರುವವರೆಗೆ ತನ್ನ ಆಳ್ವಿಕೆಗೆ ನೆಮ್ಮದಿ ಇರದೆಂದು ಯೋಚಿಸಿದ ಭಿಕ್ಷಾಚಾರನು ತುರುಷ್ಕ ಸೈನ್ಯವನ್ನೂ ಸೋಮಪಾಲ ಸೈನ್ಯವನ್ನೂ ಸುಸ್ಸಲನ ಮೇಲೆ ದಾಳಿ ಮಾಡಲು ಕಳಿಸಿದ.
ಸುಸ್ಸಲನನ್ನು ಪರಾಭವಗೊಳಿಸಿದ್ದ ಹಿನ್ನೆಲೆಯಲ್ಲಿ ಬೀಗುತ್ತಿದ್ದ ಭಿಕ್ಷಾಚಾರನು ಲಾಲಸೆಗೆ ತುತ್ತಾದ; ವಿಲಾಸಗಳಲ್ಲಿ ಮುಳುಗಿದ; ಅವನ ತುರುಷ್ಕ ಅಧಿಕಾರಿಗಳು ಲೂಟಿ ದಾಂಧಲೆ ನಡೆಸತೊಡಗಿದರು. ಇದರಿಂದ ವಿಚಲಿತರಾದ ಪ್ರಜೆಗಳು ಪ್ರತಿಭಟಿಸತೊಡಗಿ ‘ಭಿಕ್ಷಾಚಾರನಿಗೆ ರಾಜನಾಗುವ ಅರ್ಹತೆಯಿಲ್ಲ. ಸುಸ್ಸುಲನೇ ನಮ್ಮ ರಾಜ’ ಎಂದು ಘೋಷಿಸಿದರು.
ಈ ವೇಳೆಗೆ ಮನೋಬಲವನ್ನು ಹೆಚ್ಚಿಸಿಕೊಂಡಿದ್ದ ಸುಸ್ಸಲನಿಗೆ ಜನಬೆಂಬಲ ಹೆಚ್ಚುತ್ತ ಸಾಗಿತ್ತು. ಮ್ಲೇಚ್ಛ ಸೈನಿಕರು ಸುಸ್ಸಲನ ಶೌರ್ಯವನ್ನು ಎದುರಿಸಲಾಗಲಿಲ್ಲ. ಅವಕಾಶವಾದಿ ತುರುಷ್ಕರು ಸುಸ್ಸಲನ ಕಡೆಗೆ ಪಕ್ಷಾಂತರ ಮಾಡಿದರು. ಅವರಿಗಾದರೋ ಜೀವಂತ ಉಳಿಯುವ ಪ್ರಶ್ನೆಯಾಗಿತ್ತು.
ಲೌಕಿಕಾಬ್ದ ೪೧೯೭ರ (ಕ್ರಿ.ಶ. 1121) ಜ್ಯೇಷ್ಠ ಮಾಸದಲ್ಲಿ ಸುಸ್ಸಲನು ಮತ್ತೆ ಕಶ್ಮೀರದ ರಾಜನಾದ. ಭಿಕ್ಷಾಚಾರನು ಪಲಾಯನ ಮಾಡಿದ.
ಸೋಮಪಾಲನ ರಾಜ್ಯಕ್ಕೆ ಹೋಗಿ ಅಣಗಿಕೊಂಡಿದ್ದ ಭಿಕ್ಷಾಚಾರನು ಮತ್ತೊಮ್ಮೆ ದಾಳಿಯ ಪ್ರಯತ್ನ ನಡೆಸಿದ. ವಿಜಯಕ್ಷೇತ್ರದಲ್ಲಿ ಯುದ್ಧನಡೆದು ಅಲ್ಲಿಯೂ ಸುಸ್ಸಲನ ಸೈನ್ಯದ್ದು ಮೇಲುಗೈಯಾಯಿತು. ತುರುಷ್ಕರೂ ದಾಮರರೂ ದಿಕ್ಕಾಪಾಲಾದರು.
ಆನಂತರವೂ ಸ್ವಲ್ಪ ಕೈಬಲ ಕೂಡಿದಾಗಲೆಲ್ಲ ಭಿಕ್ಷಾಚಾರನು ಸುಸ್ಸಲನ ಮೇಲೆ ಎರಗುತ್ತಲೇ ಇದ್ದ.
ಹೀಗೆ ಅದೊಂದು ನಿರಂತರ ಸಂಘರ್ಷದ ಪರ್ವವೇ ಆಯಿತು. ೪೧೯೮ರಲ್ಲಿ ದೊಡ್ಡ ಸೇತುವೆಯ ಮೇಲೆಯೆ ಭೀಕರ ಯುದ್ಧ ನಡೆದು ಸೇತುವೆ ಕುಸಿದು ಲೆಕ್ಕವಿಲ್ಲದಷ್ಟು ಕಶ್ಮೀರ ಸೈನಿಕರು ಜಲಸಮಾಧಿಯಾದರು.
ಆನಂತರವೂ ಒಂದಷ್ಟು ಸಮಯ ಬಿಟ್ಟುಬಿಟ್ಟು ಭಿಕ್ಷಾಚಾರನು ಮತ್ತೆಮತ್ತೆ ಆಕ್ರಮಣ ನಡೆಸತೊಡಗಿದಾಗ ಅವನ ಶಕ್ತಿಯೂ ದಾರ್ಢ್ಯವೂ ಉಚ್ಚರೀತಿಯದೆಂದು ಸುಸ್ಸಲನಿಗೆ ಅನಿಸದಿರಲಿಲ್ಲ. ೪೧೯೯ರಲ್ಲಿ ಭಿಕ್ಷಾಚಾರನು ನಡೆಸಿದ ದಾಳಿಯಲ್ಲಿ ಇಡೀ ಶ್ರೀನಗರವೇ ದಾಮರರಿಂದ ದಗ್ಧವಾಯಿತು. ವಿತಸ್ತಾ ನದಿಯ ಸೇತುವೆಗಳೇ ಕುಸಿದಿದ್ದುದರಿಂದ ಜೀವ ಉಳಿಸಿಕೊಳ್ಳಲು ಜನರು ಬೇರೆಡೆಗೆ ಹೋಗುವುದೂ ಶಕ್ಯವಾಗಲಿಲ್ಲ.
* * * * * *
ಅಷ್ಟು ಭವ್ಯವಾಗಿದ್ದ ಶ್ರೀನಗರ ಈಗ ಹೀಗೆ ಹಾಳುಸುರಿಯುತ್ತಿದೆಯಲ್ಲ! ಪರಕೀಯರ ಆಕ್ರಮಣದಿಂದ ಈ ದೇಶವನ್ನೂ ಸಂಸ್ಕೃತಿಯನ್ನೂ ಭಗವಂತನು ರಕ್ಷಿಸಬಾರದೆ? -ಎಂದು ಕಲ್ಯಾಣನು ಚಿಂತಿಸುತ್ತಿದ್ದಂತೆ ಖುರಪುಟಧ್ವನಿ ಕೇಳಿಸಿತು. ಬಂದವರು ಹಲವರು ಅಶ್ವಾರೋಹಿಗಳು.
ಬಂದವರ ಪೈಕಿ ಸುಸ್ಸಲನು ಇದ್ದುದನ್ನು ಕಂಡು ಕಲ್ಯಾಣನು ಅಚ್ಚರಿಗೊಂಡ. ನಿರಾಯುಧನಾಗಿದ್ದಾನೆ, ತೀರಾ ಬಲಹೀನನಂತೆ ಕಾಣುತ್ತಿದ್ದಾನೆ. ಸುಸ್ಸಲನೂ ನಿರ್ಗಮಿಸಿದರೆ ಕಶ್ಮೀರ ಸರ್ವನಾಶವಾಗುವುದಲ್ಲದೆ, ತುರುಷ್ಕರಿಗೂ ದಾಮರರಿಗೂ ಸ್ವೈರಾಚಾರಕ್ಕೆ ಯಥೇಷ್ಟ ಅವಕಾಶವಾದೀತು.
ನನ್ನ ಪ್ರತಾಪ ನಿನಗೆ ಅರಿಯದುದಲ್ಲ ಎಂದು ಆರಂಭಿಸಿ ಸುಸ್ಸಲನು ಕಲ್ಯಾಣನ ಸಂಗಡ ಇದ್ದ ಕಮಾಲಿಯನನ್ನು ಕುರಿತು ಹೇಳಿದ – ನಿನ್ನ ಅಜ್ಜಂದಿರು ತುರು?ರ ವಿರುದ್ಧ ಹೋರಾಡಿದ್ದರು. ಈಗ ನೀನು ತುರುಷ್ಕ ಪಡೆ ಕಟ್ಟಿಕೊಂಡಿರುವ ಭಿಕ್ಷಾಚಾರನಿಗೆ ಬೆಂಬಲ ಕೊಡುತ್ತಿಯಾ?
ಕಮಾಲಿಯ ತಲೆಯನ್ನು ಮೇಲೆತ್ತಲಿಲ್ಲ.
ಸುಸ್ಸಲನು ಮುಂದುವರಿಸಿದ – ಮಾತೃಭೂಮಿಯನ್ನು ಶತಾಯಗತಾಯ ರಕ್ಷಿಸುವುದು ನಮ್ಮ ವಿಧಿವಿಹಿತ ಕರ್ತವ್ಯ. ರಣಭೂಮಿಯಲ್ಲಿ ಸತ್ತರೂ ಅದಕ್ಕಿಂತ ಶ್ರೇಷ್ಠ ಮರಣ ಬೇರೆಯಿಲ್ಲ…
ಭಿಕ್ಷಾಚಾರನಿಗೆ ಬೆಂಬಲ ನೀಡಬೇಕೆಂಬ ಯೋಚನೆ ನನಗಿರಲಿಲ್ಲ… ಈ ಸೇವಕರಿರುವಾಗ ನೀವು ರಣಾಂಗಣಕ್ಕೆ ಬರುವುದು ಶೋಭಿಸುವುದಿಲ್ಲ ಎನ್ನುತ್ತ ಕಮಾಲಿಯ ಹೊರಬಿದ್ದ.
ಕೆಲಸಮಯ ಕಳದ ಮೇಲೆ ಭೀಕರ ನಿನಾದ ಕೇಳಿ ಕಲ್ಯಾಣನು ಹೊರಗೆ ಹೊರಟ. ಸುಸ್ಸಲನು ಪ್ರಳಯತಾಂಡವನಂತೆ ವಿಜೃಂಭಿಸುತ್ತಿದ್ದ. ಸಂಜೆಯಾಗುವ ವೇಳೆಗೆ ಶತ್ರುಗಳು ಕಣ್ಣಿಗೇ ಕಾಣದೆ ಚದರಿಹೋಗಿದ್ದರು.
ಸುಸ್ಸಲನೇನೋ ವಿಜಯವನ್ನು ಸಾಧಿಸಿ ಶ್ರೀನಗರಕ್ಕೆ ಮರಳಿದ್ದ. ಆದರೆ ಅವನ ಮುಖ ಕಳಾಹೀನವಾಗಿತ್ತು. ದೇಶದಲ್ಲಿಯೆ ಅನುಪಮವಾಗಿದ್ದ ಭವ್ಯ ನಗರ ಇದೇ? ಎಲ್ಲೆಡೆ ಕುಸಿದ ಹರ್ಮ್ಯಗಳು, ಅಲ್ಲಲ್ಲಿ ಸಂಸ್ಕಾರವನ್ನು ಕಾಣದ ಶವಗಳ ಅವಶೇಷಗಳು. ಇದು ಸಾಲದೆಂಬಂತೆ ತನ್ನ ರಾಣಿಯೂ ಪ್ರೀತಿಪಾತ್ರಳಾಗಿದ್ದ ಮೇಘಮಂಜರಿಯೂ ಪುಲ್ಲಪುರದಲ್ಲಿಯೆ ಮೃತಿ ಹೊಂದಿರುವ ಸಂಗತಿ ತಿಳಿದು ಇನ್ನಷ್ಟು ಖಿನ್ನನಾದ.
ಇಷ್ಟು ರಮ್ಯವಾದ ಪ್ರಕೃತಿಯನ್ನು ದೈವವು ಕರುಣಿಸಿದ್ದರೂ ಜನರು ಏಕೆ ನೆಮ್ಮದಿಯಾಗಿರಲು ಸಾಧ್ಯವಾಗಿಲ್ಲ? – ಎಂದೆಲ್ಲ ಕಲ್ಯಾಣನ ಚಿಂತನಲಹರಿ ನಡೆದಿತ್ತು. ತಮ್ಮವರು ತೀರಿಕೊಂಡಿದ್ದುದಕ್ಕೆ ಶೋಕಿಸುತ್ತಿದ್ದವರು ಕೆಲವರು. ತಮ್ಮದೆಲ್ಲವನ್ನೂ ಕಳೆದುಕೊಂಡು ನಿರ್ಗತಿಕರಾಗಿದ್ದವರು ಕೆಲವರು… ಹಿಂದೆ ಯುದ್ಧಗಳು ನಡೆದಾಗಲೂ ಸಾಮಾನ್ಯಜನರ ಬದುಕಿಗೆ ಆಘಾತಗಳು ಆಗಿರಲಿಲ್ಲ. ಈಗಲಾದರೋ ಶ್ರೀನಗರದ ಭವ್ಯತೆಯೆಲ್ಲ ಮುಗಿದ ಕಥೆಯೆನಿಸುತ್ತಿದೆ. ಇದಕ್ಕೆ ಏನಾದರೂ ಭವಿಷ್ಯ ಇದೆಯೆ – ಎಂದು ಚಿಂತಿಸುತ್ತ ಕಲ್ಯಾಣನು ಭೂತೇಶ್ವರಮಠವನ್ನು ಪ್ರವೇಶಿಸಿದ. ತಂದೆ ಚಂಪಕನು ಮಗನತ್ತ ವಾತ್ಸಲ್ಯಪೂರ್ಣವಾಗಿ ನೋಡಿದ. ಕಲ್ಯಾಣನು ವಿಷಣ್ಣನಾಗಿ ಹೇಳಿದ:
ಕಶ್ಮೀರಕ್ಕೂ ಇಡೀ ದೇಶಕ್ಕೂ ಏನಾಗುತ್ತಿದೆ? ಸುಸ್ಸಲನು ಜೀವಚ್ಛವವಾಗಿದ್ದಾನೆ. ಹೇಗೆ ಇದ್ದ ಹರ್ಷನು ಹೇಗೋ ಆಗಿಬಿಟ್ಟ. ಯೋಗ್ಯನಾಗಿದ್ದ ಉಚ್ಚಲನು ಹತ್ಯೆಗೆ ಈಡಾದ. ಸುಸ್ಸಲನ ಸಮಯವೆಲ್ಲ ಭಿಕ್ಷಾಚಾರನೊಡನೆ ಸಮರದಲ್ಲಿ ಕಳೆಯಿತು…
ಚಂಪಕನು ಹೇಳಿದ – ಇವೆಲ್ಲ ಕಲಿಯುಗಾರಂಭದ ಲಕ್ಷಣಗಳು, ಮಗನೇ ಮುಂದಿನ ದಿನಗಳಲ್ಲಿ ರಾಜರು ಪ್ರಜೆಗಳನ್ನು ರಕ್ಷಿಸರು; ತಮ್ಮ ಹಿತರಕ್ಷಣೆಗಷ್ಟೇ ಗಮನ ಕೊಟ್ಟಾರು. ಧನವೇ ಎಲ್ಲಕ್ಕಿಂತ ಮುಖ್ಯವೆನಿಸುತ್ತದೆ. ದುಷ್ಪ್ರವೃತ್ತಿಗಳು ಬೆಳೆಯುತ್ತವೆ. ಅನ್ನವನ್ನೂ ಮಾರಾಟ ಮಾಡುವ ದಿನಗಳು ಬರುತ್ತವೆ. ಸ್ತ್ರೀಯರಿಗೆ ಶೀಲವನ್ನು ಉಳಿಸಿಕೊಳ್ಳಬೇಕೆಂದೂ ಅನಿಸುವುದಿಲ್ಲ. ಯಾರೂ ಹಿರಿಯರಲ್ಲಿ ಗೌರವವನ್ನು ತೋರುವುದಿಲ್ಲ…
ಸಾಕು, ಇನ್ನು ಕೇಳಲಾರೆ ಎಂದ, ಕಲ್ಯಾಣ – ಈಗ ನಾನು ಮಾಡಬೇಕಾದ ಕರ್ತವ್ಯವಾದರೂ ಏನು?
ನೀನು ಎಂದೂ ರಾಜಾಶ್ರಯವನ್ನು ಹೊಂದಬೇಡ. ಮುಂದಿನವರಿಗಾಗಿ ನೀನು ಮಾಡಬೇಕಾದ ಕೆಲಸ ಒಂದಿದೆ.
ದಯವಿಟ್ಟು ತಿಳಿಸಿರಿ
ಮುಂದಿನ ಪೀಳಿಗೆಗೆ ಮಾರ್ಗದರ್ಶಕವಾಗುವಂತೆ ನಮ್ಮ ಪೂರ್ವಿಕರ ಭವ್ಯ ಚರಿತಗಳನ್ನು ಗ್ರಂಥಸ್ಥಮಾಡಿ ಎಲ್ಲರಿಗೂ ಲಭ್ಯವಾಗಿಸಬೇಕು.
ಕಲ್ಯಾಣನು ತಲೆಯೆತ್ತಿ ನೋಡಿದ.
ನನಗೆ ಈಚೆಗೆ ಇದು ತುಂಬಾ ಅವಶ್ಯವೆನಿಸಿದೆ. ವಿದೇಶೀಯರ ಮಾತಿರಲಿ ನಮ್ಮ ಜನರೇ ತಾವು ಏನೆಂಬುದನ್ನು ಮರೆತುಹೋಗುವ ಸಂಭವವಿದೆ. ಹರ್ಷ ಮಹಾರಾಜನಂತಹವನು ಇದ್ದನೆಂದರೆ ಮುಂದಿನವರು ನಂಬದೆಯೆ ಹೋಗಬಹುದು. ಅಷ್ಟು ಉದಾತ್ತನಾಗಿದ್ದವನು ಆನಂತರ ಅದೇಕೆ ಬದಲಾದ? – ಎನಿಸಬಹುದು. ಕೇಶವಸ್ವಾಮಿ ವಿಗ್ರಹಕ್ಕೂ ಸೂರ್ಯೋದಯಕ್ಕೂ ಏನು ಸಂಬಂಧ – ಎಂದೆಲ್ಲ ಪ್ರಶ್ನಿಸಿಯಾರು… ಅನೇಕ ವಿವರಗಳನ್ನು ನಾನು ಸಂಗ್ರಹಿಸಿದ್ದೇನೆ. ಶಾಸನಗಳನ್ನು ಪ್ರತಿ ಮಾಡಿಸಿದ್ದೇನೆ. ಅದೆಲ್ಲವನ್ನೂ ನಿನಗೆ ಕೊಡುತ್ತಿರುವೆ. ನನಗೆ ಈಗ ವಯಸ್ಸು ಮೀರಿದೆ. ನೀನೂ ಮಾಹಿತಿಗಳನ್ನು ಸಂಗ್ರಹಿಸುವುದಕ್ಕೆ ಗಮನ ಕೊಡು. ಹಿಂದಿನದನ್ನು ನೆನಪಿನಲ್ಲಿ ಇರಿಸಿಕೊಂಡಿರುವ ಹಳಬರು ಈಗಲೂ ಹಲವರು ಇರುತ್ತಾರೆ. ಕಶ್ಮೀರದ ಅಧಿಕೃತ ಚರಿತ್ರೆಯೇ ನಿನ್ನಿಂದ ಆಗಬೇಕಾದ ಸೇವೆ. ನಮ್ಮ ಪೂರ್ವಜರು ಯಾವ ಮೌಲ್ಯಗಳನ್ನು ಅನುಸರಿಸಿ ಬದುಕಿದರೆಂದು ಮುಂದಿನವರಿಗೆ ತಿಳಿಯಲಿ. ಮುಂದೆ ಎಂದಾದರೂ ನಮ್ಮ ಈ ದೇಶವು ದೇವತೆಗಳಿಗೂ ನಿವಾಸಯೋಗ್ಯವಾದೀತು. ಅದಕ್ಕೆ ಸಾಧಕವಾಗುವಂತೆ ಈ ಗ್ರಂಥಲೇಖನ ನಿನ್ನಿಂದ ಆಗಬೇಕಾಗಿದೆ.
ಕೆಲವು ನಿಮಿಷ ಮೌನವಾಗಿದ್ದ, ಕಲ್ಯಾಣ. ತನಗೆ ಜನ್ಮವಿತ್ತ ನೆಲಕ್ಕೆ ಹೀಗಾದರೂ ಋಣಸಂದಾಯ ಮಾಡಲು ಅವಕಾಶ ಇದೆಯಲ್ಲ – ಎನಿಸಿತು. ತಂದೆಗೆ ಹೇಳಿದ:
ಚರಿತ್ರೆ ಬರೆಯುವುದೇನೊ ಆದೀತು. ಆದರೆ ಕಶ್ಮೀರಕ್ಕೆ ಹಿಂದಿನ ವೈಭವ ಮತ್ತೆ ದೊರೆತೀತೆ?
ಎಲ್ಲವೂ ದೈವೇಚ್ಛೆ. ನಮಗೆ ಪ್ರಾಪ್ತವಾದ ಕರ್ತವ್ಯವನ್ನು ಮಾಡುವುದರ ಹೊರತು ಬೇರೆ ದಾರಿಯಿಲ್ಲ. ಇದನ್ನು ನೀನು ಮಾಡುತ್ತೀಯಷ್ಟೆ?
ನಿರ್ವಂಚನೆಯಿಂದ ಇದನ್ನು ಮಾಡುತ್ತೇನೆ. ನನ್ನನ್ನು ಆಶೀರ್ವದಿಸಿರಿ.
ಚಂಪಕನು ಮಗನನ್ನು ಹೃತ್ಪೂರ್ವಕ ಹರಸಿದ.
ಇಷ್ಟರಲ್ಲಿ ಹೊರಗಡೆಯಿಂದ ಗೌಜುಗದ್ದಲ ಕೇಳಿಸಿತು. ಕಲ್ಯಾಣನು ಹೊರಕ್ಕೆ ಹೋಗಿ ಏನಾಗುತ್ತಿದೆಯೆಂದು ವಿಚಾರಿಸಿದ. ತುರುಷ್ಕ ಭಟನು ಹೇಳಿದ:
ಸುಸ್ಸಲನನ್ನು ಉತ್ಪಲನು ಹತ್ಯೆ ಮಾಡಿದ್ದಾನೆ. ಭಿಕ್ಷಾಚಾರನು ಕಶ್ಮೀರದ ಮೇಲೆ ಮತ್ತೊಮ್ಮೆ ದಂಡಯಾತ್ರೆ ಕೈಗೊಂಡಿದ್ದಾನೆ. ಇದೀಗ ಸುಸ್ಸಲನ ಮಗ ಜಯಸಿಂಹನು ಇನ್ನೂ ಬಾಲಕ.
ಈಗ ಸರ್ವನಾಶವಾಗುವುದು ತಪ್ಪದು.
ತಾವು ಯಾರು? ಎಂದು ಕೇಳಿದ, ತುರುಷ್ಕ.
ನನ್ನ ಹೆಸರು ಕಲ್ಯಾಣ.
ಕಲ್ಯಾಣ್, ಕಲ್ಯಣ್ ಕಲ್ಹಣ್… ಎನ್ನುತ್ತ ನಿರ್ಗಮಿಸಿದ, ಉಚ್ಛಾರಣೆಗೆ ಬಾಯಿ ತಿರುಗದ ತುರುಷ್ಕ.
ಒಳಕ್ಕೆ ಹಿಂದಿರುಗುವ ವೇಳೆಗೆ ತಂದೆಯು ತಾಳಪತ್ರಾದಿಗಳನ್ನೆಲ್ಲ ತೆಗೆದು ಜೋಡಿಸಿ ಇರಿಸಿದ್ದ.
ಕಲ್ಯಾಣನು ಅದನ್ನು ತೆಗೆದುಕೊಂಡು ಭಗವಂತನನ್ನು ಸ್ಮರಿಸುತ್ತ ನಿರ್ಗಮಿಸಿದ.
ಒಂದು ಸಮುದ್ರ ತರಂಗ ಆ ಮೇಲಿನದಕ್ಕೆ ದಾರಿಮಾಡಲೇಬೇಕಲ್ಲ.
* * * * * *
ದಟ್ಟ ಕಾಡಿನ ನಡುವೆ ಅಂಗಾತ ಮಲಗಿ ನಿಶ್ಚಲವಾಗಿ ಮುಗಿಲಿನತ್ತ ದಿಟ್ಟಸುತ್ತಿದ್ದ, ಕಲ್ಯಾಣ. ಅಸಂಖ್ಯ ಭಾವನೆಗಳಿಗೆ ಹೇಗೆ ಅಕ್ಷರಾಕೃತಿಯನ್ನು ಕೊಡಬೇಕೆಂಬ ಯೋಚನಾಸರಣಿ ಅವನ ಮಿದುಳಿನಲ್ಲಿ ತುಂಬಿತ್ತು – ಸಮುದ್ರದ ಮೇಲಿನ ಅಲೆಗಳಂತೆ, ಒಂದಕ್ಕೊಂದು ಘಟ್ಟಿಸಿ ಹೊಸ ಅಲೆಗಳು ಏಳುವಂತೆ.
ದೈವಕ್ಕೂ ಮನುಷ್ಯನಿಗೂ ಇರುವ ಭೇದವು ನಿಜವಾದುದೆ ಅಥವಾ ಕಲ್ಪಿತವೆ?
ವಿವಿಧಮುಖವಾಗಿ ಚೆದರಿದ್ದ ಅವನ ಮನಸ್ತರಂಗಗಳಿಗೆ ಕಶ್ಮೀರ ರಾಜರ ಚರಿತ್ರೆಯನ್ನು ರಚಿಸಬೇಕೆಂಬ ತಂದೆಯ ಆದೇಶವು ಉದಾತ್ತವಾದ ಒಂದು ಲಕ್ಷ್ಯವನ್ನು ಸೂಚಿಸಿತ್ತು. ಅವನೊಳಗೆ ಹಿಂದೆ ನೆಲಸಿದ್ದ ಅಹಂಕಾರವು ವಿಲಯನಗೊಂಡಿತ್ತು. ಅಹಂಕಾರದ ಪರದೆ ಸರಿದೊಡನೆ ವ್ಯಾಮೋಹಗಳು ಅಣಗಿ ಸತ್ಯ ಸ್ಫೋಟವಾಗಿ ಅಂತಃಸ್ಥ ಪರಮಾತ್ಮನ ದರ್ಶನವಾಗುತ್ತದೆ. ಸಾಹಿತ್ಯದಲ್ಲಿ ವ್ಯಕ್ತಿಯನ್ನು ಅಂತರ್ಮುಖಗೊಳಿಸುವ ಶಕ್ತಿ ಇರುತ್ತದೆನ್ನುವುದು ಇದಕ್ಕಾಗಿಯೇ. ವಾಲ್ಮೀಕಿ ವ್ಯಾ ಕಾಲಿದಾಸಾದಿಗಳ ರಚನೆಗಳು ಪರವಶತೆಯನ್ನುಂಟುಮಾಡ ವುದು ಹೀಗೆಯೇ. ಆ ಆವರಣವನ್ನು ಹೊಕ್ಕಾಗ ನಮ್ಮ ಅವಿನಾಶಿ ಸಂಸ್ಕೃತಿಯ ಮೈಲುಗಲ್ಲುಗಳು ಎದ್ದುಕಾಣುತ್ತವೆ, ಈಗಿನವರಿಗೆ ತಮ್ಮ ಉನ್ನತ ವಾರಸಿಕೆಯನ್ನು ಅವು ನೆನಪಿಸುತ್ತವೆ.
ಯೋಚಿಸಿದಂತೆಲ್ಲ ಪೂರ್ವಜರ ಚರಿತಗಳನ್ನು ಭಾವೀ ಪೀಳಿಗೆಗಳಿಗೆ ತಿಳಿಸುವುದು ಎಷ್ಟು ಮುಖ್ಯವೆಂದು ಬೋಧೆಯಾಗತೊಡಗಿತು.
ಕಲ್ಯಾಣನು ಹಿಂದೆ ಓದಿದ್ದ ವಿಕ್ರಮಾಂಕದೇವಚರಿತ, ಹರ್ಷಚರಿತಾದಿಗಳಲ್ಲಿ ಹೊಸ ಅರ್ಥಗಳು ಗೋಚರಿಸತೊಡಗಿದವು. ಸುವ್ರತ ಕ್ಷೇಮೇಂದ್ರಾದಿಗಳ ರಚನೆಗಳು ಶ್ರೇಷ್ಠವೇ ಆಗಿದ್ದರೂ ಕಲ್ಪನಾಪ್ರಾಧಾನ್ಯದಿಂದಾಗಿ ಅವು ಪರ್ಯಾಪ್ತವಲ್ಲವೆನಿಸಿತು. ನೀಲಮತಪುರಾಣ ಮೊದಲಾದವುಗಳಲ್ಲಿ ಎಷ್ಟು ರಾಜರ ವಿಷಯ ಬಿಟ್ಟುಹೋಗಿತ್ತು.
ಹೆಚ್ಚಿನ ಮಾಹಿತಿಗಳ ಸಂಗ್ರಹಕ್ಕಾಗಿ ಕಲ್ಯಾಣನು ಬೇರೆಬೇರೆಡೆಗಳಿಗೆ ಪಯಣ ಮಾಡಿ ಶಾಸನಾದಿ ಆಕರಗಳನ್ನು ಅನ್ವೇಷಿಸತೊಡಗಿದ. ಹೇಲರಾಜನ ಹನ್ನೆರಡು ಸಾವಿರ ಶ್ಲೋಕಗಳ ಗ್ರಂಥವನ್ನು ಹುಡುಕುವುದಕ್ಕೇ ಅಗಾಧ ಪ್ರಯಾಸ ನಡೆಸಬೇಕಾಯಿತು. ಬೇರೆಯವರಿಗಾಗಲ್ಲದೆ ಇದು ನಾನು ನನಗಾಗಿಯೆ ಮಾಡಬೇಕಾದ ಕೆಲಸ – ಎಂಬ ಕರ್ತವ್ಯಭಾವನೆ ಮೂಡಿತ್ತು. ತನ್ನ ಬರಹವು ಆಕರ್ಷಕವಾಗಿದ್ದರೆ ಸಾಲದು, ಪ್ರಮಾಣಾನ್ವಿತವಾಗಿಯೂ ಇರಬೇಕು – ಎಂದು ನಿಶ್ಚಯಿಸಿದ.
ಅಪ್ರಯತ್ನವಾಗಿಯೆ ಶ್ಲೋಕಗಳು ಕಲ್ಯಾಣನ ಮನಸ್ಸಿನಲ್ಲಿ ಮೂಡತೊಡಗಿದವು.
ಭೂಷಾ ಭೋಗಿ ಫಣಾರತ್ನ ರೋಚಿಪ್ಸಿಚಯ ಚಾರವೇ
ನಮಃ ಪ್ರವೀನ ಮುಕ್ತಾಯ ಹರಕಲ್ಪ ಮಹೀರುಹೇ
(ಭುಜಗ ಭೂಷಣನ ಹೆಡೆಗಳ ಕಾಂತಿಪುಂಜಗಳು ಶರೀರವೇ ಕಾಣದಂತೆ ಆಚ್ಛಾದಿಸಿರಲು ಮುಕ್ತಾತ್ಮರೆಂಬ ಮುತ್ತುಗಳನ್ನು ಹೂಮಾಲೆಯಂತೆ ಧರಿಸಿ ಪ್ರಕಾಶಿಸುವ ಶಿವನೆಂಬ ಕಲ್ಪವೃಕ್ಷಕ್ಕೆ ನಮಸ್ಕಾರ.)
ಶಿವನು ದಿಗಂಬರನಾದರೂ ರತ್ನಗಳ ಕಾಂತಿಯು ವಸ್ತ್ರದಂತೆ ಹೊದ್ದಿಕೆಯಾಗಿದೆಯೆಂಬ ಚಮತ್ಕಾರ ಇಲ್ಲಿದೆ. ಇದು ಹೇಗೆ ತನ್ನಲ್ಲಿ ಸ್ಫುರಿಸಿತೆಂದು ಕಲ್ಯಾಣನಿಗೇ ಅಚ್ಚರಿಯಾಯಿತು. ಈ ವೈಚಿತ್ರ್ಯಮಯ ಚಿತ್ರ ನನ್ನ ಮನಸ್ಸಿನಲ್ಲಿ ಮೂಡಿದುದು ಹೇಗೆ? – ಎಂದು ವಿಸ್ಮಿತನಾದ. ತಾನು ಹಿಂದೆಂದೂ ಇಂತಹ ಪದ್ಯ ಬರೆದುದಿಲ್ಲ.
ಸೃಷ್ಟಿಯಲ್ಲಿ ಅನೇಕ ಕೆಲಸಗಳು ತನ್ನಿಂದ ಆಗುತ್ತಿದೆಯೆಂದು ಭಾವಿಸುವುದೇ ಮೂರ್ಖತನ ಎನಿಸಿತು.
ತಲೆಯೆತ್ತಿ ನೋಡಿದಾಗ ಮುಗಿಲಿನಲ್ಲಿ ಮೋಡವೊಂದು ವಿಚಿತ್ರವಾಗಿ ವಿನ್ಯಾಸಗೊಳ್ಳುತ್ತ ಅರ್ಧನಾರೀಶ್ವರರೂಪ ತಳೆದಿದೆಯೆನ್ನಿಸಿತು. ಅವನಿಗೇ ಅರಿವಿಲ್ಲದಂತೆ ಶ್ಲೋಕವೊಂದು ಸ್ಫುರಣಗೊಂಡಿತು.
ಫಾಲಂ ವಹ್ನಿಶಿಖಾಂಕಿತಂ ದಧ ದಧಿ
ಶ್ರೋತ್ರಂ ವಹನ್ ಸಂಭ್ರತ –
ಕ್ರೀಡತ್ ಕುಂಡಲಿ ಜೃಂಭಿತಂ ಜಲಧಿಜ –
ಚ್ಛಾಯಚ್ಚ ಕಂಟಚ್ಛವಿಃ… ||
ವಕ್ಷೆಭಿರ್ಭದ್ರಹೀನ ಕಂಚುಕ ಚಿತಂ
ಬದ್ಧಾಂಗನಾರ್ಥಸ್ವವೋ
ಭಾಗಃ ಪುಂಗವಲಕ್ಷಣೋsಸ್ತು
ಯಶಸೇ ಸವಾಮೋsಥ ದಕ್ಷಿಣಃ
ಅರ್ಧಸ್ತ್ರೀ ಶರೀರಿಯಾಗಿ ಎದುರಿಗೆ ಧ್ವಜ ಚಿಹ್ನದಂತಿದ್ದ ನಂದಿಕೇಶ್ವರನು ಮೆರೆದಿರಲಾಗಿ ಪರಮೇಶ್ವರನ ಎಡಭಾಗವಾಗಲಿ ಬಲಭಾಗವಾಗಲಿ ಎಲ್ಲವೂ ನಿಮಗೆ ಯಶಸ್ಕರವೇ. ಮಂಗಲದ ಸಂಕೇತದಂತೆ ನೊಸಲನ್ನು ಕುಂಕುಮ (ವಹ್ನಿಶಿಖಾ) ಅಲಂಕರಿಸಿದೆ…
ಕಲ್ಯಾಣನು ಧಿಗ್ಗನೆ ಎದ್ದು ನಮಸ್ಕರಿಸಿ ಪ್ರಾರ್ಥಿಸಿದ:
ಹೇ ಪ್ರಭು! ಲೌಕಿಕ ರಾಜರ ಚರಿತ್ರೆಯನ್ನು ಬರೆಯಬೇಕಾದ ಅವಸ್ಥೆಯನ್ನು ನನಗೇಕೆ ಕೊಟ್ಟಿರುವೆ? ನಿನ್ನ ಅಪಾರ ಕೀರ್ತಿಯನ್ನೂ ಚರಿತವನ್ನೂ ದಿವ್ಯಲೀಲೆಗಳನ್ನೂ ವರ್ಣಿಸಿದರಾದರೂ ನನ್ನ ಜನ್ಮವು ಪಾವನಗೊಳ್ಳುತ್ತಿತ್ತು. ಈಗ ಬಾಹ್ಯಜೀವನವೇ ಸರ್ವಸ್ವವೆಂದು ಭ್ರಮಿಸಿರುವ ಕಲಿಯುಗ ರಾಜರನ್ನು ವರ್ಣಿಸಬೇಕಾಗಿದೆಯಲ್ಲ!
ಕಣ್ಣು ಮುಚ್ಚಿಕೊಂಡಾಗ ಕಲ್ಯಾಣನ ಒಳಗಣ್ಣಿಗೆ ಚಿತ್ರವಿಚಿತ್ರ ದೃಶ್ಯಗಳು ಕಂಡವು. ಅವನ್ನೆಲ್ಲ ನೋಡುತ್ತಿರುವುದು ತಾನಲ್ಲ ಎಂದೂ ಅನಿಸಿತು.
ಕುದುರೆಯ ಹೆಜ್ಜೆಸಪ್ಪುಳ ಕೇಳಿ ಕಲ್ಯಾಣನು ಕಣ್ಣುತೆರೆದ.
ಅನತಿದೊರದಲ್ಲಿ ಒಂದಷ್ಟುಮಂದಿ ದಾಮರರೂ ತುರುಷ್ಕರೂ ಕುದುರೆಗಳಿಂದಿಳಿದು ಮರದ ಕೆಳಗೆ ವಿಶ್ರಮಿಸುತ್ತ ಸಲ್ಲಾಪ ನಡೆಸುತ್ತಿದ್ದರು. ಅದು ಪ್ರಕೃತಿಯ ಪ್ರಶಾಂತಿಗೆ ಭಂಗ ತರುತ್ತಿದೆಯೆನಿಸಿತು ಕಲ್ಯಾಣನಿಗೆ.
ಕಲ್ಯಾಣನ ಮನಸ್ಸು ಕಶ್ಮೀರದಲ್ಲಿ ಆಗಿಹೋದ ಘಟನಾವಳಿಗಳನ್ನು ಮೆಲುಕುಹಾಕತೊಡಗಿತು. ಡಿದ್ದಾದೇವಿಯ ನಂತರ ಯಾವ ರಾಜರೂ ಸ್ಥಿರವಾಗಿ ಉಳಿದು ರಾಜ್ಯಪಾಲನೆ ಮಾಡಲಾಗಲಿಲ್ಲ. ಸಂಗ್ರಾಮಸಿಂಹ, ಅನಂತ, ಕಲಶ, ಹರ್ಷ, ಸುಸ್ಸಲ – ಎಲ್ಲರೂ ಯಾರಾರಿಂದಲೋ ಉಪಟಳಗಳಿಗೆ ಸಿಲುಕಿ ದುರವಸ್ಥೆಗೀಡಾದವರೇ. ಲೌಕಿಕಾಬ್ದ ೪೧೦೩ರಲ್ಲಿ ಪಟ್ಟಕ್ಕೇರಿದ ಜಯಸಿಂಹನನ್ನು ಭಿಕ್ಷಾಚಾರನು ಕಾಡುತ್ತಹೋದದ್ದು ಈಚೆಗಷ್ಟೆ. ಮೂರೇ ವರ್ಷಗಳಲ್ಲಿ ಸ್ವಯಂ ಭಿಕ್ಷಾಚಾರನೇ ಹತ್ಯೆಗೀಡಾದ. ಅದರ ಹಿಂದುಗೂಡಿ ದಾಮರರ ವಿಪ್ಲವದಿಂದ ಅಲ್ಲೋಲಕಲ್ಲೋಲವಾಯಿತು. ಹೀಗೆ ಒಟ್ಟಿನ ಮೇಲೆ ಅರಾಜಕತೆಯೇ ಕಶ್ಮೀರದ ಪಾಡಾಯಿತು. ಜನರ ಬದುಕಿನಲ್ಲಿ ಯಾವ ಕಟ್ಟುಪಾಡುಗಳೂ ಉಳಿದಿರಲಿಲ್ಲ. ಒಬ್ಬೊಬ್ಬರೂ ತಮ್ಮ ಹಿತಕ್ಕಾಗಿಯೆ ಸೆಣಸುತ್ತಿದ್ದರು.
ಸುತ್ತಲ ಪರಿಸರವನ್ನು ಪ್ರಯತ್ನಪೂರ್ವಕ ಉದಾಸೀನ ಮಾಡಿ ಕಲ್ಯಾಣನು ದೇವರ ಮೇಲೆ ಭಾರ ಹಾಕಿ ತನ್ನ ನಿರ್ದಿಷ್ಟ ಕರ್ತವ್ಯದಲ್ಲಿ ಯೋಗಿಯಂತೆ ಮಗ್ನನಾದ.
ಮೊದಲ ಗೋನಂದ, ದಾಮೋದರ, ಯಶೋವತಿ, ಇಮ್ಮಡಿ ಗೋನಂದ – ಇವರ ಸ್ವಲ್ಪ ವಿವರಗಳೇನೋ ನೀಲಮತಪುರಾಣದಿಂದ ಲಭ್ಯವಾಗಿತ್ತು. ಆನಂತರದ ೩೫ ರಾಜರ ವಿವರಗಳು ಅಲಭ್ಯವಾಗಿದ್ದವು. ಹೇಲರಾಜನ ಗ್ರಂಥದಿಂದ ಲವ, ಕುಶ, ಖಗೇಂದ್ರ, ಸುರೇಂದ್ರ, ಗೋಧರ, ಸುವರ್ಣ, ಜನಕ, ಶಚೀಂದ್ರ – ಇವರ ಚರಿತಗಳು ದೊರಕಿದವು. ಅಶೋಕನಿಂದ ಐದು ದೊರೆಗಳ ಸ್ವಲ್ಪ ಮಾಹಿತಿ ಶ್ರೀಚ್ಛವಿಲ್ಲಕಾರನಿಂದ ಪರಿಚಿತವಾಯಿತು. ಆದರೂ ಕಲ್ಯಾಣನು ಬಯಸುತ್ತಿದ್ದಂತಹ ರಾಜಚರಿತಗಳು ಅಗ್ರಾಹ್ಯವಾಗಿಯೆ ಉಳಿದಿದ್ದವು.
ಇಷ್ಟರಲ್ಲಿ ಅನಂತಜ್ಞಾನಮುನಿಯು ಕಶ್ಮೀರಕ್ಕೆ ಬರಲಿದ್ದ ಸುದ್ದಿ ತಿಳಿಯಿತು. ಹಿಂದಿನಿಂದ ವಿವಿಧ ದೇಶ ಭಾಗಗಳ ಮತ್ತು ಗಣ್ಯ ವ್ಯಕ್ತಿಗಳ ಮಾಹಿತಿಗಳ ಖಜಾನೆಗಳಾಗಿದ್ದವರು ಮುನಿಗಳು. ಹಿರಿಯರ ಸಮ್ಮಖಕ್ಕೆ ಬಂದಾಗ ಎಲ್ಲರೂ ಪ್ರವರಗೋತ್ರ ಸಹಿತ ಸ್ವಪರಿಚಯ ಹೇಳಿ ನಮಸ್ಕರಿಸುವ ಸಂಪ್ರದಾಯ ಬೆಳೆದಿದ್ದುದೂ ಚರಿತ್ರೆಯ ಸಂರಕ್ಷಣೆಗೆ ನೆರವಾಗಲೆಂಬ ಉದ್ದೇಶದಿಂದಲೇ. ಮುನಿಗಳಾದರೋ ದೇಶಾದ್ಯಂತ ಸಂಚರಿಸುತ್ತಿದ್ದವರು. ಹೀಗೆ ಅವರ ಮೂಲಕ ಒಂದು ಭಾಗದ ಚರಿತ್ರೆ ಇತರ ಭಾಗಗಳವರಿಗೆ ತಿಳಿದುಬರುತ್ತಿತ್ತು. ಪುರಾಣಗಳಲ್ಲಿಯೂ ಇದೇ ರೂಢಿಯ ಅನುಸರಣೆ ಇದ್ದಿತು. [ಈಚಿನ ಕಾಲದಲ್ಲಿ ಪ್ರಸಿದ್ಧಿ ಪಡೆದಿರುವ ’ರೂಟ್ಸ್’ ಗ್ರಂಥದ ರಚಯಿತ ಆಲೆಕ್ಸ್ ಹೇಲಿ ತನ್ನ ಪೂರ್ವಿಕರ ಬಗೆಗೆ ವೃತ್ತಾಂತಗಳನ್ನು ಸಂಗ್ರಹಿಸಿದುದು ಇಂತಹ ಕುಲವೃದ್ಧರುಗಳಿಂದಲೇ] ಆದರೆ ದೇಶದಲ್ಲಿ ದೀರ್ಘಕಾಲ ಅಶಾಂತಿ ಮುಂದುವರಿದ ಕಾಲದಲ್ಲಿ ಇಂತಹ ಚರಿತ್ರಸಂರಕ್ಷಣೆಯ ಒಳ್ಳೆಯ ರೂಢಿ ದುರ್ಬಲಗೊಂಡಿತ್ತು. ಗತಕಾಲದ ಎಷ್ಟು ಕಥನಗಳು ಮರೆಯಾಗಿಹೋಗಿದ್ದವು. ಮತಾಂತರಗಳೂ ಒಂದಷ್ಟು ಹಾವಳಿ ಮಾಡಿದ್ದವು.
ಹಿಂದಿನ ಇತಿಹಾಸಕಥನದ ವಾರಸುದಾರರಾಗಿ ಉಳಿದಿದ್ದ ಕೆಲವೇ ವ್ಯಕ್ತಿಗಳ ಪೈಕಿ ಅನಂತಜ್ಞಾನಮುನಿ ಒಬ್ಬರು.
ತನ್ನ ಗಮ್ಯದೆಡೆಗೆ ಸಾಗಿದ್ದ ಕಲ್ಯಾಣನಿಗೆ ಗ್ರಾಮವೊಂದರಲ್ಲಿ ಬ್ರಾಹ್ಮಣನೊಬ್ಬನನ್ನು ಸ್ಥಳೀಯರು ಊರಿನಿಂದಾಚೆಗೆ ತರುಮುತ್ತಿದ್ದುದು ಕಂಡಿತು. ಗ್ರಾಮಸ್ಥರ ಆಪಾದನೆ ಆತನು ಗೋಮಾಂಸ ತಿಂದಿದ್ದನೆಂದು. ವಿಚಾರಿಸಲಾಗಿ ತಿಳಿದದ್ದು ಆತನನ್ನು ಬಲಾತ್ಕಾರದಿಂದ ಮತಾಂತರಿಸಿ ಅವನಿಗೆ ಬಲವಂತವಾಗಿ ಗೋಮಾಂಸವನ್ನು ತಿನ್ನಿಸುವ ಪ್ರಯತ್ನ ನಡೆದಿದ್ದಿತೆಂದು. ಅಮರಶರ್ಮನೆಂಬ ಆ ಬ್ರಾಹ್ಮಣನನ್ನು ಸಾಂತ್ವನಪಡಿಸಿ ಕಲ್ಯಾಣನು ಹೇಳಿದ – ನನ್ನಲ್ಲಿ ಏನಾದರೂ ಸತ್ತ್ವವಂತಿಕೆ ಇರುವುದಾದರೆ ಅದರ ಆಧಾರದ ಮೇಲೆ ನಿನ್ನನ್ನು ನಿರ್ದೋಷಿಯೆಂದು ಸಾರುತ್ತಿದ್ದೇನೆ. ನೀನು ಸನಾತನ ಧರ್ಮಾನುಯಾಯಿಯೇ. ವಿತಸ್ತಾ ನದಿಯಲ್ಲಿ ಸ್ನಾನಮಾಡಿ ಬಾ.
ಆ ನಿರ್ಭಾಗ್ಯ ವ್ಯಕ್ತಿ ತೆರಳಿದ ಮೇಲೆ ಸುತ್ತಲೂ ಇದ್ದ ಗ್ರಾಮಸ್ಥರಿಗೆ ಕಲ್ಯಾಣನು ಹೇಳಿದ:
ನಮ್ಮ ಧರ್ಮ ಎಲ್ಲಕ್ಕಿಂತ ಶ್ರೇಷ್ಠವಾದ್ದು. ಯಾರೋ ಬಾಯಲ್ಲಿ ಬಲವಂತವಾಗಿ ಗೋಮಾಂಸ ತುರುಕಿದ ಕಾರಣದಿಂದ ಈ ವ್ಯಕ್ತಿ ನಮ್ಮ ಧರ್ಮದಿಂದ ಚ್ಯುತನಾಗಲಾರ. ಎಷ್ಟು ವಿದೇಶೀಯರನ್ನು ಸೋದರರಂತೆ ಭಾವಿಸಲು ಯತ್ನಿಸುತ್ತಿರುವ ನಾವು ನಮ್ಮ ನೈಜ ಸೋದರನನ್ನೇ ದೂರಗೊಳಿಸುವುದು ಸರಿಯೆ?… ಇದು ಆಪತ್ಸಮಯ. ಧರ್ಮಪಾಲನೆಯೆಂದರೆ ಯಾವುದೊ ಹಿಂದಿನ ಶ್ಲೋಕಗಳನ್ನು ಯಾಂತ್ರಿಕವಾಗಿ ಹೊರಳಿಸುತ್ತ ಇರುವುದಲ್ಲ. ಅವುಗಳ ಅರ್ಥವನ್ನು ಗ್ರಹಿಸಿ ಆಚರಿಸುವುದು ಮಾತ್ರ ಧರ್ಮವಾದೀತು. ಶಾಸ್ತ್ರಗಳು ಇರುವುದು ಜನರನ್ನು ಒಟ್ಟುಗೂಡಿಸುವುದಕ್ಕಾಗಿಯೇ ಹೊರತು ಜನರಲ್ಲಿ ದ್ವೇಷವನ್ನು ಬಿತ್ತುವುದಕ್ಕಾಗಿ ಅಲ್ಲ.
* * * * * *
ಕಲ್ಯಾಣನು ಹಿಂದಿನ ಘಟನೆಗಳನ್ನೆಲ್ಲ ಮೆಲುಕುಹಾಗುತ್ತಿದ್ದಂತೆಯೆ ಶಾರದಾಪೀಠವನ್ನು ಸಮೀಪಿಸಿದ್ದ. ಹಿಂದೆ ಅತಿಥಿಸತ್ಕಾರಕ್ಕೆ, ಹೆಸರಾಗಿದ್ದ ಗ್ರಾಮಗಳು ಈಗ ಕಳ್ಳಕಾಕರ ಬೀಡುಗಳಾಗಿದ್ದವು. ಹಿಂದೆ ಸಮೃದ್ಧಿ ಇದ್ದ ದೇಶದಲ್ಲಿ ಈಗ ಒಪ್ಪತ್ತಿನ ಊಟವೇ ದುರ್ಲಭವಾಗಿತ್ತು. ಪ್ರಜೆಗಳೆಲ್ಲ ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಕಾಲಯಾಪನೆ ಮಾಡುತ್ತಿದ್ದರು. ನನ್ನ ಕಾಶ್ಮೀರ ಇದೆ? – ಎಂದು ತಳಮಳಗೊಂಡ, ಕಲ್ಯಾಣ. ಶಾರದಾಪೀಠದ ಸನಿಹಕ್ಕೆ ಬರುತ್ತಿದ್ದರೂ ಮನಸ್ಸಿನಲ್ಲಿ ಭಕ್ತಿಭಾವ ಉದಿಸದೆ ಆವೇದನೆ ತುಂಬಿತ್ತು.
ಕಲ್ಯಾಣನು ವಿಪ್ರನೊಬ್ಬನ ಗೋಮಾಂಸಭಕ್ಷಣವನ್ನು ಖಂಡಿಸಲಿಲ್ಲವೆಂಬ ಆಪಾದನೆಯನ್ನು ಮುಂದೆ ಮಾಡಿ ಅರ್ಚಕರು ಅವನಿಗೆ ಪ್ರವೇಶಕ್ಕೆ ಅನುಮತಿ ನೀಡಲಿಲ್ಲ. ತನ್ನ ಸನ್ನಿವೇಶಕ್ಕಿಂತ ಹೆಚ್ಚಾಗಿ ಕಲ್ಯಾಣನಿಗೆ ಚಿಂತೆಗೆ ಕಾರಣವಾದದ್ದು ಉನ್ನತ ಆದರ್ಶಗಳಿಗೆ ಹೆಸರಾಗಿದ್ದ ಸನಾತನಧರ್ಮಕ್ಕೆ ಈ ಸ್ಥಿತಿ ಬಂದಿದೆಯಲ್ಲ – ಎಂಬುದು. ಈ ದೌರ್ಬಲ್ಯದ ದುರ್ಲಾಭ ಪಡೆಯಲು ವಿದೇಶೀಯರು ತುದಿಗಾಲ ಮೇಲೆ ನಿಂತಿದ್ದರು.
ಕಲ್ಯಾಣನು ಹೀಗೆ ಯೋಚಿಸುತ್ತಿದ್ದಂತೆ ಅನತಿ ದೂರದಿಂದ ಗಂಭೀರಸ್ವರ ಕೇಳಿಸಿತು:
ಅವ್ಯಕ್ತಂ ಕಾರಣಂ ಯತ್ ತತ್
ನಿತ್ಯ ಸದಸದಾತ್ಮಕಮ್
ಪ್ರಧಾನಂ ಪುರು?ಸ್ತಸ್ಮಾತ್
ನಿರ್ಮಮೇ ವಿಶ್ವಮೀತ್ವರಃ
* * * * * *
ಕೀರ್ತಿತಂ ಸ್ಥಿರಕೀರ್ತೀನಾಂ
ಸರ್ವೇಷಂ ಪುಣ್ಯವರ್ಧನಮ್
ತತಃ ಸ್ವಯಂ ಭೂಗರ್ಭ ಗವಾನ್
ಸಿಸೃಕ್ಸರ್ ವಿವಿಧಾಃ ಪ್ರಜಾಃ
(ಅರ್ಥವಾಗದುದು, ಅವ್ಯಕ್ತವಾದುದು, ಸರ್ವಕಾರಣ, ನಿತ್ಯವಾದುದು, ಇಲ್ಲದುದು – ಈ ಎಲ್ಲಕ್ಕೂ ಅತೀತವಾದ ಪ್ರಧಾನತತ್ತ್ವ ಒಂದೇ… ಸ್ಥಿತಿಭೇದದಂತೆ ಭೂತಕೋಟಿಯ ಉದಯ. ಶ್ರುತಿಲಬ್ಧವಾದುದರಲ್ಲಿ ನನಗೆ ತಿಳಿದಷ್ಟನ್ನು ನಿನಗೆ ತಿಳಿಸುವೆ. ಇದು ಪುಣ್ಯದಾಯಕ.)
ಧ್ವನಿ ಬಂದಕಡೆಗೆ ಕಲ್ಯಾಣನು ತಿರುಗಿದಾಗ ಕಂಡದ್ದು ಅನಂತಜ್ಞಾನಮುನಿಗಳು.
ಕಲ್ಯಾಣನು ಅವರ ಕಾಲಿಗೆರಗಿದ. ತಾನು ಅಲ್ಲಿಯವರೆಗೆ ಸಂಗ್ರಹಿಸಲಾಗಿದ್ದ ಕಶ್ಮೀರಚರಿತ್ರೆಯನ್ನು ಮುನಿಗಳ ಪಾದದಲ್ಲಿರಿಸಿದ. ಮುನಿಗಳು ವಾತ್ಸಲ್ಯದಿಂದ ಕಲ್ಯಾಣನ ತಲೆಯನ್ನು ನೇವರಿಸಿ ಹೇಳಿದರು:
ಐವತ್ತೆರಡು ರಾಜರ ವೃತ್ತಾಂತ ತಿಳಿಯಲಿಲ್ಲವೆಂದಿರುವೆ. ವಾಸ್ತವವಾಗಿ ನಿನಗೆ ತಿಳಿಯಬೇಕಾದುದು ಮೂವತ್ತೈದು ರಾಜರುಗಳ ಬಗೆಗೆ. ನೀಲಮತಪುರಾಣದಲ್ಲಿರುವಂತೆ ಗೋನಂದ ಮೊದಲಾದ ರಾಜರು, ಹೇಲರಾಜನು ಪಾರ್ಥಿವಾವಳಿಯಲ್ಲಿ ಉಲ್ಲೇಖಿಸಿರುವ ಲವ ಇತ್ಯಾದಿ ಎಂಟು ಮಂದಿ ರಾಜರು, ಅಶೋಕನಿಂದ ಅಭಿಮನ್ಯುವಿನವರೆಗಿನ ರಾಜರು – ಇಷ್ಟು ಮಂದಿಯ ಕಥನಗಳನ್ನು ಪರಿಷ್ಕರಿಸಿಕೋ.
ಹೀಗೆಂದು ಹೇಳಿ ಮುನಿಗಳು ಸ್ವಯಂಭೂ ಬ್ರಹ್ಮನಿಂದ ಆರಂಭಗೊಂಡು ಜಗತ್ಸೃಷ್ಟಿಯು ವಿಕಾಸಗೊಂಡ ಕ್ರಮವನ್ನೂ ಪ್ರತಿ ಮನ್ವಂತರದ ಸಪ್ತರ್ಷಿಪುತ್ರಪೌತ್ರ-ಪರಂಪರೆಯನ್ನು ವಿವರಿಸಿದರು.
ಕಲ್ಯಾಣನು ವಿಸ್ಮಿತನಾಗಿ ಕೇಳಿದ – ಮುನಿವರ್ಯರೆ! ಪರಿಮಿತ ಬುದ್ಧಿಯವರಾದ ನಾವು ತಾವು ಹೇಳುವುದನ್ನು ಹೇಗೆ ನಂಬಬೇಕು?
ಮುನಿಗಳು ಮುಗುಳ್ನಕ್ಕು ಹೇಳಿದರು:
ಭಾರತಕ್ಕೂ ಅನ್ಯದೇಶಗಳಿಗೂ ಇದೇ ವ್ಯತ್ಯಾಸ. ಇತರ ದೇಶಗಳಿಗೆ ಹೇಳಿಕೊಳ್ಳುವಷ್ಟು ಚರಿತ್ರೆ ಇಲ್ಲ. ನಮ್ಮಲ್ಲಿಯಾದರೋ ಚರಿತ್ರೆಯ ಅಭ್ಯಾಸ ಒಂದು ಶಾಸ್ತ್ರ. ಮನುಷ್ಯನ ಆವಿರ್ಭಾವವಾದ ಕಾಲದಿಂದ ೧೯೫ ಕೋಟಿ ವರ್ಷಗಳ ಚರಿತ್ರೆ ನಮಗೆ ಅಧಿಗತವಾಗಿದೆ. ಅದು ತಲೆಮಾರಿನಿಂದ ತಲೆಮಾರಿಗೆ ಪ್ರವಹಿಸುತ್ತ ಬಂದಿದೆ. ಇದೀಗ ಬ್ರಹ್ಮಕಲ್ಪದಲ್ಲಿ ಏಳನೇ ಮನುವಿನ ಕಾಲ ನಡೆದಿದೆ. ಪ್ರತಿ ಮನುವಿನ ಕಾಲಾವಧಿ ೩೦,೬೭,೨೪,೦೦೦ ಸಂವತ್ಸರಗಳು. ವೈವಸ್ವತ ಮನ್ವಂತರದಲ್ಲಿ ೨೭ ಮಹಾಯುಗಗಳು. ಒಂದೊಂದು ಯುಗದಲ್ಲಿ ೪೮,೨೦,೦೦೦ ಸಂವತ್ಸರಗಳು. ಕೃತ, ತ್ರೇತಾ, ದ್ವಾಪರ ಯುಗಗಳು ಸೇರಿ ೩೮,೮೮,೦೦೦ ಸಾವಿರ ಸಂವತ್ಸರಗಳು ಆಗಿವೆ. ದ್ವಾಪರಯುಗದ ಸಂಧಿಕಾಲದಲ್ಲಿ ಅದಕ್ಕೆ 36 ವರ್ಷ ಹಿಂದೆ ನಡೆದದ್ದು. ಮಹಾಭಾರತಯುದ್ಧ. ಅದು ಕಲಿಯುಗಾರಂಭ….. ಇದನ್ನೆಲ್ಲ ತಿಳಿಯುವದಕ್ಕಾಗಿಯೆ ಪುರಾಣಗಳನ್ನು ಅಭ್ಯಾಸ ಮಾಡಬೇಕಾದದ್ದು. ಪುರಾಣಗಳಿಗೆ ಸರ್ಗ ಪ್ರತಿಸರ್ಗಾದಿ ಲಕ್ಷಣಗಳು ಇರುವುದನ್ನು ನೀನು ಬಲ್ಲೆ. ಪುರಾಣಕರ್ತರು ಮೋಹರಹಿತರು, ನಿಷ್ಕಲ್ಮಶರು. ಅಂತಹವರು ರಚಿಸಿದ ಶಾಸ್ತ್ರಗಳನ್ನು ನಂಬದಿದ್ದರೆ ತನ್ನನ್ನು ತಾನು ನಂಬದಂತೆ ಆಗುತ್ತದೆ.
ಈ ವೇಳೆಗೆ ಎಲ್ಲೆಲ್ಲಿಂದಲೋ ಜನ ಬಂದು ಸೇರಿದ್ದರು. ಅನಂತಜ್ಞಾನಮುನಿಗಳು ಪ್ರವಚನವನ್ನು ಮುಂದುವರಿಸುತ್ತ ಯುಗಗತಿಯನ್ನು ವಿವರಿಸತೊಡಗಿದ್ದರು:
ಮಹಾಭಾರತಯುದ್ಧದ ತರುವಾಯ ಯುಧಿಷ್ಠಿರನು ಭಾರತದ ಚಕ್ರವರ್ತಿಯಾದನಷ್ಟೆ. ಸಹದೇವನು ಮಗಧದ ರಾಜನಾದ; ಅವನಿಂದ ಬೃಹದ್ರಥ ವಂಶ ಆರಂಭವಾಯಿತು. ಆ ವಂಶದ 22 ರಾಜರು ಮಗಧದೇಶವನ್ನು ೧೦೦೬ ವರ್ಷಕಾಲ ಪಾಲಿಸಿದರು. ಆನಂತರ ಪ್ರಧ್ಯೋತ ವಂಶದ ಐದು ರಾಜರು ೧೩೮ ವರ್ಷಗಳು, ಹತ್ತು ಶಿಶುನಾಗ ರಾಜರು ೩೬೦ ವರ್ಷಗಳು, ಒಂಬತ್ತು ಜನ ನಂದ ರಾಜರು 100 ವರ್ಷಗಳು, ಆಳಿದರು. ಎಂದರೆ ಕಲಿಯುಗಾರಂಭವಾದ ೧೬೦೪ನೇ ವರ್ಷದ ವೇಳೆಗೆ ಮೌರ್ಯ ಚಂದ್ರಗುಪ್ತನು ಮಗಧದ ರಾಜನಾದ. ಅದಾದ ಮೇಲೆ ಬಿಂದುಸಾರ ಅಶೋಕಾದಿ ಹತ್ತು ರಾಜರು ೧೩೭ ವರ್ಷಗಳು, ಸುಂಗ ವಂಶಿಕರು ೧೧೨ ವರ್ಷಗಳು ನಾಲ್ಕು ಕಣ್ವ ರಾಜರು ೩೪೫ ವರ್ಷಗಳು ೩೧ ಆಂಧ್ರ ರಾಜರು ೪೫೬ ವರ್ಷಗಳು ಆಳ್ವಿಕೆ ನಡೆಸಿದರು.
ಇಷ್ಟು ಕರಾರುವಾಕ್ಕಾಗಿ ತಾವು ಹೇಗೆ ಹೇಳಬಲ್ಲಿರಿ? ಎಂದು ಪ್ರಶ್ನಿಸಿದ ಕಲ್ಯಾಣ.
ಮುನಿಗಳು ಪರೀಕ್ಷಿತನ ಜನನಸಮಯದ ನಕ್ಷತ್ರಸ್ಥಿತಿ, ವಾಯು-ಬ್ರಹ್ಮಾಂಡ-ಮತ್ಸ್ಯ ಪುರಾಣಗಳ ಉಲ್ಲೇಖಗಳು – ಎಲ್ಲವನ್ನೂ ತಿಳಿಸಿದರು. ಮಹಾಭಾರತಯುದ್ಧವಾದ ೨೮೧೧ ವರ್ಷ ಕಳೆದ ಮೇಲೆ ಅಲೆಗ್ಸಾಂಡರನ ದಾಳಿ (ಕ್ರಿ.ಪೂ. ೩೨೭), ಮರುವ? ಗುಪ್ತಸಾಮ್ರಾಟರ ಆಳ್ವಿಕೆ ಏರ್ಪಟ್ಟದ್ದು, ಅದಾದ ೨೪೪ ವರ್ಷದ ನಂತರ ಉಜ್ಜಯನಿಯಲ್ಲಿ ವಿಕ್ರಮಾದಿತ್ಯನ ಪ್ರಭುತ್ವ (ಕ್ರಿ.ಪೂ. ೮೨) ವಿಕ್ರಮಾದಿತ್ಯನ ಮೊಮ್ಮಗ ಶಾಲಿವಾಹನನೇ ಶಕರೊಡನೆ ಹೋರಾಡಿದುದು. ಅವನಿಂದಲೇ ಶಾಲಿವಾಹನ ಶಕೆ ಆರಂಭವಾದದ್ದು (ಕ್ರಿ.ಶ. ೭೮).
ಮುನಿಗಳು ನೀಡಿದ ವಿವರಗಳನ್ನೆಲ್ಲ ಕಲ್ಯಾಣನು ಅವಗತ ಮಾಡಿಕೊಂಡ. ತನ್ನ ಕಥನದಲ್ಲಿ ಸಾಧ್ಯವಾದಷ್ಟು ಮಟ್ಟಿಗೆ ರಾಜಪರಂಪರೆಗಳ ಮತ್ತು ಆಳ್ವಿಕೆಗಳ ಕಾಲವಿವರಗಳನ್ನು ಸೂಚಿಸಬೇಕೆಂದು ನಿಶ್ಚಯಿಸಿದ.
ಯವನರು ಪರಕೀಯರಲ್ಲ; ಕ್ಷತ್ರಿಯರೇ. ವೇದವಿಧಿಗಳನ್ನು ಸರಿಯಾಗಿ ನಿರ್ವಹಿಸದಿದ್ದ ಕಾರಣದಿಂದ ಭ್ರಷ್ಟರೆನಿಸಿ ಈ ದೇಶವನ್ನು ತ್ಯಜಿಸಿ ಹೋದರು. ಹಾಗೆ ಸ್ಥಾನಾಂತರಗೊಂಡ ಮೇಲೂ ತಮ್ಮ ಮಾತೃಭೂಮಿಯ ಬಗೆಗೆ ಮಮತೆಯನ್ನು ಉಳಿಸಿಕೊಂಡು ಆಗಿಂದಾಗ ಇಲ್ಲಿಗೆ ಬರುತ್ತಲೇ ಇದ್ದಾರೆ. ಹಾಗೆಯೇ ಪೌಂಡ್ರಕರು, ಓದ್ರರು, ಕಾಂಬೋಜರು, ಪಲ್ಲವರು ಮೊದಲಾದವರು ಕೂಡಾ ಮೂಲತಃ ಇಲ್ಲಿಯ ಕ್ಷತ್ರಿಯರೇ.
ಕಲಿಯುಗ ಬಂದ ೨೬ ವರ್ಷಗಳಾದ ಮೇಲೆ ಕಶ್ಮೀರದ ’ಲೌಕಿಕಾಬ್ದ’ ಚಾಲನೆಗೊಂಡಿತೆಂದು ತಿಳಿದು ಕಲ್ಯಾಣನು ತನ್ನ ಕಥನದಲ್ಲಿ ಲೌಕಿಕಾಬ್ದವನ್ನೇ ಅನುಸರಿಸಬೇಕೆಂದು ನಿಶ್ಚಯಿಸಿದ. ಕಲಿಯುಗಾರಂಭವಾದ ೬೦ನೇ ವರ್ಷದಲ್ಲಿ ಪರೀಕ್ಷಿತನು ಮರಣಹೊಂದಿದ; ಜನಮೇಜಯನು ಚಕ್ರವರ್ತಿಯಾದ. ಖಗೋಳಶಾಸ್ತ್ರಜ್ಞ ಆರ್ಯಭಟನು ಜೀವಿಸಿದ್ದುದು ಕಲಿಯುಗಾರಂಭವಾದ ೩೬೦ರ ವರ್ಷಗಳಲ್ಲಿ. ಕಲಿಯುಗಾಬ್ದ ೪೬೮ನೇ ವರ್ಷದಲ್ಲಿ ಜೈನರ ಗಣನೆಯ ಯುಧಿಷ್ಠಿರ ಶಕೆ ಆರಂಭವಾಯಿತು. ಆನಂತರ ಆಳಿದವರು ಪ್ರದ್ಯೋತ, ಶಿಶುನಾಗ. ಇಕ್ಷ್ವಾಕು ವಂಶಕ್ಕೆ ಸೇರಿದ ೨೩ನೇ ರಾಜ ಶುದ್ಧೋದನನ ಪುತ್ರ ಗೌತಮಬುದ್ಧನು ಜನಿಸಿದುದು ಕಲಿಯುಗಾಬ್ದ ೧೨೧೫ರಲ್ಲಿ (ಕ್ರಿ.ಪೂ.೧೮೮೭). ಶಿಶುನಾಗವಂಶದ ನಾಲ್ಕನೇ ರಾಜ ಕ್ಷೇಮಜಿತ್. ಬಿಂಬಿಸಾರನೂ ಅಜಾತಶತ್ರು ಬುದ್ಧನೂ ಸಮಕಾಲಿಕರು. ಬುದ್ಧನ ನಿರ್ಯಾಣವಾದದ್ದು ಕಲಿಯುಗಾಬ್ದ ೧೨೯೫ರಲ್ಲಿ (ಕ್ರಿ.ಪೂ. ೧೮೦೭).
ನಮ್ಮ ಚರಿತ್ರೆಯಲ್ಲಿ ಕೆಲವು ವೈಚಿತ್ರಗಳಿವೆ. ’ಅಶೋಕ ಎಂಬ ಒಂದೇ ಹೆಸರಿನ ಇಬ್ಬರು ರಾಜರು ಒಂದೇ ಕಾಲಾವಧಿಯಲ್ಲಿ ರಾಜ್ಯಭಾರ ನಡೆಸಿದರು. ಇಬ್ಬರೂ ಬೌದ್ಧರೇ.
ವಿಷಯಾಂತರ ಮಾಡಿ ಕಲ್ಯಾಣನು ಹೇಳಿದ:
ಮುನಿವರ್ಯರೆ! ರಣಾದಿತ್ಯ ತುಜೀನನು ಕಶ್ಮೀರವನ್ನು ೩೦೦ ವರ್ಷಕಾಲ ಆಳಿದನೆಂದು ದಾಖಲೆಗಳು ಇವೆಯಲ್ಲ? ಇದು ಹೇಗೆ ಸಾಧ್ಯ?
ಅದರಲ್ಲಿ ಅಸಂಭವವೇನಿದೆ? ಎಂದರು ಅನಂತಜ್ಞಾನಮುನಿಗಳು.
ಒಬ್ಬ ವ್ಯಕ್ತಿ ನೂರು ವರ್ಷ ಬದುಕಿರುವುದೇ ಕ?. ಹೀಗಿರುವಾಗ ಮುನ್ನೂರು ವರ್ಷಗಳೆಂದರೆ….
ಮುನಿಗಳು ಮುಗುಳ್ನಕ್ಕು ಹೇಳಿದರು: ನಮ್ಮ ಚರಿತ್ರೆಯನ್ನು ಸಾವಧಾನವಾಗಿ ಪರಿಶೀಲಿಸು. ಕಲಿಯುಗ ಆರಂಭವಾಗಿ ಎರಡೂವರೆ ಸಾವಿರ ವರ್ಷಗಳವರೆಗೆ ಅದ್ಭುತ ವ್ಯಕ್ತಿಗಳ ಜನನವಾಯಿತು. ಆನಂತರವೇ ಕಲಿಪ್ರಭಾವವು ಎಲ್ಲದರ ಮೇಲೂ ಕಾಣಿಸಿಕೊಂಡದ್ದು. ನಮ್ಮ ಪುರಾಣಗಳಲ್ಲಿ ಉತ್ಪ್ರೇಕ್ಷೆ ಇರುವುದಿಲ್ಲ. ಹಾಗೆ ತೋರಿದಲ್ಲಿ ಅದಕ್ಕೆ ನಮ್ಮ ಅಜ್ಞಾನವೇ ಕಾರಣ – ಕಪ್ಪೆಗೆ ತನ್ನ ಬಾವಿಯೇ ಇಡೀ ಪ್ರಪಂಚ ಎನ್ನಿಸುವ ಹಾಗೆ.
ಕಲ್ಯಾಣನು ತಲೆತಗ್ಗಿಸಿದ. ಮುನಿಗಳು ಹೇಳುತ್ತಹೋದ ಕಶ್ಮೀರ ಚರಿತ್ರೆಯನ್ನು ಗಮನವಿಟ್ಟು ಕೇಳಿಸಿಕೊಂಡ.
ಕಥನವು ಎರಡನೇ ಗೋನಂದನವರೆಗೆ ತಲಪಿತ್ತು. ಅಲ್ಲಿಂದ ಕಲ್ಯಾಣನಿಗೆ ತಿಳಿಯದ ಮೂವತೈದು ರಾಜರುಗಳ ಚರಿತ್ರೆ ಸಾಗಬೇಕಾಗಿತ್ತು.
ಇ?ರಲ್ಲಿ ದೂರದಿಂದ ಏನೋ ಕಲರವ ಕೇಳಬಂದಿತು.
ತುರುಷ್ಕರು, ತುರುಷ್ಕರು! ಎಂದು ಉದ್ಗಾರಗಳು ಎಲ್ಲೆಡೆ ಹರಡಿದವು.
ನೋಡನೋಡುತ್ತಿದ್ದಂತೆ ಕುದುರೆಗಳ ಪಾದಘಟ್ಟಣದಿಂದ ಎದ್ದ ಧೂಳು ಎಲ್ಲೆಡೆ ಮುಸುಕಿತು. ಎಲ್ಲೆಡೆ ಹಾಹಾಕಾರ. ದಾರಿ ಸಿಕ್ಕಿದೆಡೆಗೆ ಓಡಲು ಯತ್ನಿಸುತ್ತಿದ್ದರು ಪ್ರಜೆಗಳು.
ತುರುಷ್ಕರು ಸಾಕಷ್ಟು ಸಿದ್ಧತೆ ಮಾಡಿಕೊಂಡು ಬಂದಂತ್ತಿತ್ತು. ಅವರಲ್ಲೊಬ್ಬ ಕೇಳಿದ:
ಯಾರೋ ಚರಿತ್ರೆ ಹೇಳುತ್ತಿರುವಂತೆ ಇದೆಯಲ್ಲ. ಯಾರು ಅದು?
ಮುನಿಗಳು ಮುಂದೆ ಬಂದು ದಿಟ್ಟ ಸ್ವರದಲ್ಲಿ ಹೇಳಿದರು: ಯಾರೋ ಹೇಳುವುದೇನು ಬಂತು? ಈ ನೆಲದ ಕಣಕಣವೂ ಈ ದೇಶದ ಚರಿತ್ರೆಯನ್ನು ಹೇಳುತ್ತದೆ.
ತುರುಷ್ಕನು ಮರುಮಾತಾಡಲಿಲ್ಲ. ಒಡನೆಯೇ ಖಡ್ಗವನ್ನು ಒರೆಯಿಂದ ಸೆಳೆದು ಮುನಿಗಳ ಶಿರವನ್ನು ಕತ್ತರಿಸಿದ.
ಸುತ್ತಲಿದ್ದ ಎಲ್ಲರೂ ದಿಗ್ಭ್ರಾಂತರಾಗಿ ಈ ಘೋರವನ್ನು ನೋಡುತ್ತಿದ್ದರು.
ಜತನದಿಂದ ರಕ್ಷಿಸಿದ್ದ ಅಸಂಖ್ಯ ಶತಮಾನಗಳ ಚರಿತ್ರೆ ಕ್ಷಣದಲ್ಲಿ ಕಣ್ಮರೆಯಾಗಿತ್ತು.
ಕಲ್ಯಾಣನ ಕಣ್ಣುಗಳಿಂದ ಆಶ್ರುಧಾರೆ ಹರಿಯುತ್ತಿತ್ತು. ಪೂರ್ವದ ರಾಜರುಗಳ ಚರಿತ್ರೆಯ ಮನನ ನಡೆಯುವುದೂ ಭಗವಂತನಿಗೆ ಇ?ವಿರಲಿಲ್ಲವೆನಿಸಿತು. ಅವನ್ನು ಕೀರ್ತಿಸುವ ಕವಿಗಳು ಇರದಿದ್ದಾಗಲೂ ಆ ಚರಿತ್ರೆಗಳು ದಿಕ್ಕುದಿಕ್ಕಿಗೆ ಹರಡಿದ್ದವು. ಈ ದೇಶದಲ್ಲಿ ಕವಿಗಳು ರಚನೆ ಮಾಡುತ್ತಿದ್ದುದು ಹೊಗಳುವುದಕ್ಕೆಂದು ಅಲ್ಲ. ಹಾಗಿದ್ದಿದ್ದಲ್ಲಿ ಕಾಲಿದಾಸನು ರಘುವಂಶ ರಾಜರ ಪತನಸ್ಥಿತಿಯನ್ನೂ ಚಿತ್ರಿಸುತ್ತಿದ್ದನೆ?
ಮುನಿಗಳನ್ನು ಸಂಹರಿಸಿದ್ದ ತುರುಷ್ಕನು ಅರಚಿದ:
ನಿಮ್ಮಲ್ಲಿ ಕಶ್ಮೀರ ಚರಿತ್ರೆ ಬರೆಯುತ್ತಿರುವ ಕಲ್ಯಾಣನೆಂಬವನು ಯಾರು? ಅವನ ರಕ್ತದಿಂದ ನನ್ನ ಖಡ್ಗವನ್ನು ತೋಯಿಸಬೇಕಾಗಿದೆ.
ಕಲ್ಯಾಣನು ಆ ತುರುಷ್ಕನೆಡೆಗೆ ದಿಟ್ಟಿಸಿ ನೋಡಿದ. ಅವನನ್ನು ಹಿಂದೆ ಎಲ್ಲಿಯೋ ನೋಡಿದ್ದಂತೆನಿಸಿತು. ತನ್ನ ಹೆಸರನ್ನು ಕೂಡಾ ವಿಧರ್ಮಿಯರು ಸರಿಯಾಗಿ ಉಚ್ಚರಿಸಲಾಗದುದು ಅನುಭವವಾಗಿತ್ತು. ಆದರೆ ಇವನು ಮಾತ್ರ ಸರಿಯಾಗಿ ಉಚ್ಚರಿಸಿದ್ದ. ಒಂದೆರಡು ಕ್ಷಣ ಯೋಚಿಸಿದ ಮೇಲೆ ನೆನಪಾಯಿತು.
ಅಮರಶರ್ಮ! ಎಂದು ಕಲ್ಯಾಣನು ಉದ್ಗರಿಸಿದ.
ನಾನು ಅಮರಶರ್ಮನಲ್ಲ, ಅಮೀರ್ಖಾನ್ ಎಂದು ತುರು?ನು ಉತ್ತರಿಸಿದ. ಆದರೆ ಅವನು ತಡವರಿಸುತ್ತಿದ್ದುದು ಸ್ಪಷ್ಟವಾಗಿತ್ತು.
ಈಗ ಕಲ್ಯಾಣನಿಗೆ ಅರ್ಥವಾಯಿತು – ಅನ್ಯಧರ್ಮೀಯರು ಇಲ್ಲಿಯವರನ್ನೇ ತನ್ನ ಶತ್ರುಗಳಾಗಿ ಮಾರ್ಪಡಿಸುತ್ತಿದ್ದಾರೆ – ಎಂದು.
ಸ್ವಲ್ಪ ಯೋಚಿಸಿದಂತೆ ಬಲಾತ್ಕಾರದ ಮತಾಂತರಗಳ ಪರಿಣಾಮಗಳು ಹೇಗೆ ಹೇಗೆ ಆಗುತ್ತವೆಂಬುದು ಹೆಚ್ಚುಹೆಚ್ಚು ಸ್ಫುಟವಾಗತೊಡಗಿತು. ಮನೆಯನ್ನು ಬೆಳಗಬೇಕಾದ ದೀಪವು ಮನೆಯನ್ನೇ ದಹಿಸತೊಡಗಿದರೆ ಏನಾಗಬೇಕು!
ಕಲ್ಯಾಣನು ನಿನಗೆ ಏಕೆ ಬೇಕಾಗಿದೆ? ಈ ದೇಶದ ಚರಿತ್ರೆಯೆಲ್ಲ ಭೂಗತಗೊಳ್ಳಬೇಕೆ? ಯಾರೂ ಆ ಚರಿತ್ರೆಯನ್ನು ಬರೆಯಬಾರದೆ? ದೇಶದ ಶತಮಾನಗಳ ಚರಿತ್ರೆಯನ್ನು ಎಲ್ಲರೂ ಮರೆತುಬಿಡಬೇಕೆ? ಎಂದು ಪ್ರಶ್ನಿಸಿದನು.
ಇ?ರಲ್ಲಿ ತುರುಷ್ಕನೊಬ್ಬ ಕಲ್ಯಾಣನ ಜುಟ್ಟನ್ನು ಹಿಡಿದು ಒರಟು ಸ್ವರದಲ್ಲಿ ಕೇಳಿದ – ಕಲ್ಲನ್ನ್ ನಿನ್ನ ಹೆಸರು ತಾನೆ?
ಅಲ್ಲ, ನನ್ನ ಹೆಸರು ಕಲ್ಲಣ ಎಂದ, ಕಲ್ಯಾಣ – ತನ್ನ ಹೆಸರನ್ನೇ ಅಪಭ್ರಂಶಗೊಳಿಸುತ್ತ.
ಕಲ್ಯಾಣನೆಡೆಗೆ ಸ್ವಲ್ಪ ಸೌಮ್ಯನಾಗಿ ನೋಡಿ ಅಮೀರ್ಖಾನನು ತನ್ನ ಅನುಚರರಿಗೆ ಆದೇಶಿಸಿದ – ಕಲ್ಹಣನೊಬ್ಬನನ್ನು ಬಿಟ್ಟು ಮಿಕ್ಕವರನ್ನೆಲ್ಲ ಮತಾಂತರಿಸಿ. ಆನಂತರ ಕಲ್ಯಾಣನ ಕಡೆಗೆ ತಿರುಗಿ ಹೇಳಿದ – ನನ್ನಲ್ಲಿರುವ ಪೂರ್ವಸಂಸ್ಕಾರ ಪೂರ್ತಿ ಸತ್ತಿಲ್ಲವಾದುದರಿಂದ ನಿಮ್ಮನ್ನು ಉಳಿಸುತ್ತಿದ್ದೇನೆ. ಮತ್ತೆ ನಮ್ಮ ಕೈಗೆ ಸಿಲುಕಬೇಡಿರಿ. ಹಾಗೇ ಆದರೆ ನಿಮ್ಮನ್ನು ಏನು ಮಾಡುತ್ತೇವೋ ಹೇಳಲಾರೆ.
ಕಲ್ಹಣನು ಮುಗುಳ್ನಕ್ಕು ಭಗವದಿಚ್ಛೆ ಇದ್ದಂತೆ ನಡೆಯುತ್ತದೆ ಎಂದು ಹೇಳಿ ಶಾಂತವಾಗಿ ಅಲ್ಲಿಂದ ಹೊರಕ್ಕೆ ನಡೆದ.
ಕಲ್ಯಾಣನು ಹೆಜ್ಜೆಹಾಕುತ್ತಿದ್ದಂತೆ ಅಕ್ಕಪಕ್ಕಗಳಿಂದ ಗಂಡಸರು ಹೆಂಗಸರ ಆರ್ತನಾದಗಳು ಕಿವಿಗೆ ಬೀಳುತ್ತಿದ್ದವು. ತೀವ್ರ ತಳಮಳಕ್ಕೊಳಗಾದರೂ ಕಲ್ಯಾಣನು ತನ್ನ ಜೀವಿತದ ಲಕ್ಷ್ಯವನ್ನು ನೆನೆದು ತನ್ನನ್ನೇ ಸಾಂತ್ವನಗೊಳಿಸಿಕೊಂಡ. ಕಣ್ಣು ಹಾಯಿಸಿದಾಗ ದೂರದಲ್ಲಿ ಕೈಲಾಸ ಪರ್ವತಾವಳಿ ಕಂಡಿತು. ಕಲ್ಯಾಣನ ಮನಶ್ಚಕ್ಷುವಿನ ಮುಂದೆ ಪರಶಿವನು ಪ್ರತ್ಯಕ್ಷಗೊಂಡ. ಕಲ್ಯಾಣನು ಕೈ ಜೋಡಿಸಿ ಪ್ರಾರ್ಥಿಸಿದ:
ತಂದೆಯೆ! ಸಾವಿರಸಾವಿರ ವರ್ಷಗಳ ಚರಿತ್ರೆ ಇರುವ ಈ ಜನಾಂಗ ನಿನ್ನೆ-ಮೊನ್ನೆಯಷ್ಟೇ ಕಣ್ಣುಬಿಟ್ಟ ಅನಾಗರಿಕರ ದಾಳಿಗೆ ಸಿಕ್ಕಿ ನಶಿಸಿಹೋಗಬೇಕೆ? ಇಲ್ಲಿಯ ದೇಶೀಯರೂ ತಮ್ಮದೆಲ್ಲವನ್ನೂ ಮರೆತುಹೋದಾರೆ? ನನ್ನ ಜನಾಂಗವನ್ನು ರಕ್ಷಿಸಲು ನಾನು ಏನು ಮಾಡಬಲ್ಲೆ?
ದೂರದ ಶಾರದಾಮಂದಿರದಲ್ಲಿ ಯಾರೋ ಘಂಟೆಯನ್ನು ಮೊಳಗಿಸಿದ ಶಬ್ದ ಕೇಳಿಸಿತು.
ಎದುರಿಗೆ ಐದಾರು ಮೊಳಗಳ ದೂರದಲ್ಲಿ ಸರ್ಪವೊಂದು ಹೆಡೆಯೆತ್ತಿ ನಿಂತಿದ್ದುದು ಕಂಡಿತು. ಗಾಳಿಯಲ್ಲಿ ತೇಲಾಡುತ್ತಿದ್ದ ತರಗೆಲೆಯೊಂದು ಸಮೀಪಿಸಿದಾಗ ಸರ್ಪವು ಅದರ ಕಡೆಗೆ ಬುಸುಗುಟ್ಟಿ ಪಕ್ಕಕ್ಕೆ ತಿರುಗಿ ಹೊರಟುಹೋಯಿತು. ಆ ತರಗೆಲೆ ಬಂದು ಕಲ್ಹಣನ ಬೊಗಸೆಯಲ್ಲಿ ಬಿದ್ದಿತು. ಪರಿಶೀಲಿಸಿ ನೋಡಿದಾಗ ಆ ಎಲೆಯ ಮೇಲೆ ಕೆಲವು ಅಕ್ಷರಗಳು ಕಾಣಿಸಿದವು. ಅಲ್ಲಿ ಲಿಖಿತಗೊಂಡಿದ್ದುದು: ರಾಜತರಂಗಿಣಿ, ರಾಜತರಂಗಿಣಿ, ರಾಜತರಂಗಿಣಿ.
ಕಲ್ಹಣನು ಆ ಎಲೆಯನ್ನು ಮಹಾಪ್ರಸಾದವೆಂದು ಸ್ವೀಕರಿಸಿದ.
ಸಮೀಪದ ಗುಹೆಯನ್ನು ಪ್ರವೇಶಿಸಿದ. ತಾನು ಅದುವರೆಗೆ ಸಂಗ್ರಹಿಸಿದ್ದ ಆಧಾರಗಳಷ್ಟೂ ಎದುರಿಗೆ ಹರಡಿಕೊಂಡ. ಭಗವಂತನನ್ನೂ ವ್ಯಾಸರ್ಷಿಗಳನ್ನೂ ದೇವಿ ಸರಸ್ವತಿಯನ್ನೂ ಪರಶಿವನನ್ನೂ ಸ್ತುತಿಸಿದ.
ಬರಲಿದ್ದ ತಲೆಮಾರುಗಳಿಗಾಗಿ ಪೂರ್ವದ ರಾಜರ ಚರಿತ್ರೆಗಳನ್ನು ತರಂಗತರಂಗಗಳಾಗಿ ಬರೆಯಲು ಉದ್ಯುಕ್ತನಾದ.
ಕಲ್ಹಣನು ’ರಾಜತರಂಗಿಣಿ’ಯನ್ನು ರಚಿಸಲು ಆರಂಭಿಸಿದುದು ಕ್ರಿ.ಶ. ೧೧೪೮ರ ವರ್ಷದಲ್ಲಿ.
(ಮುಗಿಯಿತು)