ಪನೆಗುತ್ತಮರ್ಕಳೆಣೆ ಕೆಳೆ-
ತನದೊಳ್ ತೆಂಗಿಂಗೆ ಮಧ್ಯಮರ್ಕಳ್
ತೊಣೆ ನೋ- |
ಳ್ಪಿನಮಧಮರ್ಕಳ್ ಕೌಂಗಿಂ-
ಗೆನಸುಂ ಪಾಸಟಿಯೆನುತ್ತೆ ಪಿರಿಯರ್ ಪೇಳ್ವರ್ ||
– ನೀತಿಮಂಜರಿ, i, 64-94
ಗೆಳೆತನದಲ್ಲಿ ಉತ್ತಮರು ವಿಶೇಷ ವ್ಯವಸಾಯವಿಲ್ಲದೆ ಫಲಕೊಡುವ ಪನೆಮರಕ್ಕೆ ಎಣೆ; ಮಧ್ಯಮರು ಅಲ್ಪಕಾಲದ ವ್ಯವಸಾಯಕ್ಕೆ ಫಲ ನೀಡುವ ತೆಂಗಿನಮರಕ್ಕೆ ಸಮಾನ; ಅಧಮರು ಯಾವತ್ತೂ ಕೃಷಿಮಾಡುತ್ತಲೇ ಇರಬೇಕಾದ ಅಡಕೆಮರಕ್ಕೆ ಸಮಾನ ಎಂದು ಹಿರಿಯರು ಹೇಳುತ್ತಾರೆ.
ಶ್ರೀರಾಮ-ಗುಹ, ಶ್ರೀರಾಮ-ಸುಗ್ರೀವ, ದುರ್ಯೋಧನ- ಕರ್ಣ, ಶ್ರೀಕೃಷ್ಣ-ಸುದಾಮ, ಭೋಜರಾಜ-ಕಾಳಿದಾಸ ಮುಂತಾದವರ ಗೆಳೆತನದ ಕಥನಗಳನ್ನು ಪುರಾಣಗಳಲ್ಲಿಯೂ ಅಭಿಜಾತ ಸಾಹಿತ್ಯದಲ್ಲಿಯೂ ಕಾಣಬಹುದು.
ಗೆಳೆತನ ಎನ್ನುವುದು ಒಂದು ಆಸ್ವಾದಕರ ಜವಾಬ್ದಾರಿ; ಅದು ಒಂದು ಅವಕಾಶವಲ್ಲ. ’ಒಬ್ಬ ವಿಶ್ವಾಸಾರ್ಹ ಸ್ನೇಹಿತ ಸಾವಿರ ಬಂಧುಗಳಿಗಿಂತ ಮಿಗಿಲು’ – ಎಂಬುದು ಗ್ರೀಕ್ ನಾಟಕಕಾರ ಯೂರಿಪಿಡೀಸನ (ಕ್ರಿ.ಪೂ. 484-406) ಸುಪ್ರಸಿದ್ಧ ಹೇಳಿಕೆ. ನಿಜವಾದ ಸ್ನೇಹಿತನೊಬ್ಬನಿದ್ದರೆ ಬಹುದೊಡ್ಡ ಆಸ್ತಿ ಇದ್ದಂತೆ.
ಬದುಕಿನ ಅತ್ಯಂತ ಶ್ರೇಷ್ಠ ಉಡುಗೊರೆ ಎಂದರೆ ಅದು ಸ್ನೇಹ. ಜೀವನದಲ್ಲಿ ನಿಜವಾದ ಪ್ರೀತಿ ದೊರಕುವುದು ಅತ್ಯಂತ ಅಪರೂಪ; ಇನ್ನು ನಿಜವಾದ ಸ್ನೇಹವಂತೂ ದುರ್ಲಭಗಳಲ್ಲಿ ದುರ್ಲಭ. ಪ್ರತಿಯೊಬ್ಬರಿಗೂ ಅವರವರ ಗುಣ ಸ್ವಭಾವಕ್ಕೆ ತಕ್ಕಂತೆ ಸ್ನೇಹಿತರು ಇದ್ದೇ ಇರುತ್ತಾರೆ, ಸಿಗುತ್ತಾರೆ ಕೂಡ. ಆದರೆ ಉತ್ತಮ ಸ್ನೇಹಿತರು ಯಾವತ್ತೂ ಕಷ್ಟಕಾಲಗಳಲ್ಲಿ ಜೊತೆಗೇ ಇದ್ದು ನೆರವಾಗುತ್ತ ತಮ್ಮ ಆತ್ಮೀಯತೆಯನ್ನು ತೋರುತ್ತಾರೆಯೇ ಹೊರತು ಸಂತೋಷವಾಗಿದ್ದಾಗಷ್ಟೆ ಅಲ್ಲ.
ಸ್ವಾದಿಷ್ಟ ಭಾವ
ಸ್ನೇಹಭಾವವನ್ನು ಪ್ರತ್ಯಕ್ಷವಾಗಿ ವ್ಯಕ್ತಪಡಿಸುವುದಕ್ಕಿಂತಲೂ ಪರೋಕ್ಷವಾಗಿ ವ್ಯಕ್ತಪಡಿಸಿದಾಗ ಅದು ಇನ್ನೂ ಹೆಚ್ಚು ಸ್ವಾದಿಷ್ಟವಾಗಿರುತ್ತದೆ; ಆದರ್ಶವೂ ಹೌದು. ಕಾರಣ ಅಂತಹ ಅನುಭವಗಳು ಈರ್ವರ ಬದುಕಿನುದ್ದಕ್ಕೂ ಹಚ್ಚಹಸಿರಾಗಿದ್ದು ಫಲವನ್ನು ನೀಡುತ್ತಲೇ ಇರುತ್ತವೆ. ಇದಕ್ಕೆ ಉದಾಹರಣೆಗಳು ಹಲವು ಮಹನೀಯರ ಬದುಕಿನಲ್ಲಿ ದೊರೆಯುತ್ತವೆ.
ಕೆ.ಕೆ. ಪೈಯವರು ಸಿಂಡಿಕೇಟ್ ಬ್ಯಾಂಕಿನ ಅಧ್ಯಕ್ಷರಾಗಿದ್ದಾಗ ಕಾಸರಗೋಡು ಸೇರಿದಂತೆ ಅವಿಭಜಿತ ದಕ್ಷಿಣಕನ್ನಡದ ಹಲವಾರು ಮಂದಿ ಆ ಬ್ಯಾಂಕಿನಲ್ಲಿ ಉದ್ಯೋಗ ಪಡೆದು ಅವರಿಂದ ಉಪಕೃತರಾಗಿ ತಮ್ಮ ಕುಟುಂಬಕ್ಕೆ ಆಧಾರವಾಗಿದ್ದದ್ದು ಜನಜನಿತ ಸಂಗತಿಯಾಗಿದೆ. ಈ ಘಟನೆ ನಡೆದಾಗ ಇನ್ನೂ ಬ್ಯಾಂಕುಗಳ ರಾಷ್ಟ್ರೀಕರಣವಾಗಿರಲಿಲ್ಲ; ಮತ್ತು ಬ್ಯಾಂಕಿನಲ್ಲಿ ಉದ್ಯೋಗ ದೊರೆಯುವುದು ಎಂದರೆ ಅದು ಇಂದು ಐಟಿ ಕಂಪೆನಿಯಲ್ಲಿ ಉದ್ಯೋಗ ದೊರೆತಷ್ಟು ಪ್ರತಿಷ್ಠೆ ಹೊಂದುತ್ತಿದ್ದ ಕಾಲ. ಪೈಯವರ ಬಳಿಗೆ ಉದ್ಯೋಗವನ್ನು ಅಪೇಕ್ಷಿಸಿ ದಕ್ಷಿಣಕನ್ನಡದ ಹಲವಾರು ಮಂದಿ ಅರ್ಜಿಗಳನ್ನು ಕಳುಹಿಸುತ್ತಿದ್ದರು. ಸಾಮಾನ್ಯವಾಗಿ ಅಂತಹ ಪ್ರತಿಯೊಂದು ಅರ್ಜಿಯ ಜೊತೆಗೂ ಅವರವರಿಗೆ ಪರಿಚಯವಿದ್ದ ಪ್ರತಿಷ್ಠಿತ ಸ್ನೇಹಿತರು ನೀಡಿದ್ದ ಶಿಫಾರಸು ಪತ್ರಗಳೂ ಇದ್ದೇ ಇರುತ್ತಿದ್ದವು. ಒಮ್ಮೆ ಬಂದ ಒಂದು ಅರ್ಜಿಯ ಜೊತೆಗೆ ಯಾರೊಬ್ಬರದ್ದೂ ಶಿಫಾರಸುಪತ್ರವೇ ಇರದಿದ್ದುದನ್ನು ಕಂಡು ಪೈಗಳಿಗೆ ಆಶ್ಚರ್ಯವಾಯಿತು. ಅವರು ಕೂಡಲೇ ತಮ್ಮ ಸಹಾಯಕನನ್ನು ಕರೆದು ವಿಚಾರಿಸಿದರು:
“ಏನು! ಈತನಿಗೆ ಯಾರೂ ಪ್ರತಿಷ್ಠಿತ ಸ್ನೇಹಿತರು ಇಲ್ಲವೆ?”
“ಇಲ್ಲ ಸರ್, ಆತನಿಗೆ ಯಾವ ಪ್ರತಿಷ್ಠಿತ ವ್ಯಕ್ತಿಯದ್ದೂ ಪರಿಚಯವಿಲ್ಲ; ಆತ ಹಳ್ಳಿಬದಿಯ ಒಂದು ಸಾಮಾನ್ಯ ಬಡ ಕುಟುಂಬದಿಂದ ಬಂದವನು” ಎಂದು ಸಹಾಯಕ ಉತ್ತರಿಸಿದ.
ಅದಕ್ಕೆ ಪೈಯವರು, “ಹೌದೇ, ಹಾಗಾದರೆ ನಾನೇ ಒಂದು ಶಿಫಾರಸುಪತ್ರ ಬರೆದು ಅವನಿಗೆ ಸ್ನೇಹಿತನಾಗುತ್ತೇನೆ” ಎಂದು ತತ್ಕ್ಷಣವೇ ಉತ್ತರಿಸಿದ್ದಲ್ಲದೆ, ಆತನಿಗೆ ತಮ್ಮ ಬ್ಯಾಂಕಿನಲ್ಲಿ ಉದ್ಯೋಗವನ್ನೂ ನೀಡಿದರು. ಆತ ಇಂದು ಸಿಂಡಿಕೇಟ್ ಬ್ಯಾಂಕಿನಲ್ಲಿ ಉನ್ನತ ಹುದ್ದೆಗಳನ್ನು ಅಲಂಕರಿಸಿ ನಿವೃತ್ತರಾಗಿದ್ದಾರೆ.
ಯಾರೂ ಅಪರಿಚಿತರಲ್ಲ, ಎಲ್ಲರೂ ಸ್ನೇಹಿತರೇ!
ನಿಃಸ್ಪೃಹತೆಯುಳ್ಳ ಮಹನೀಯರು ಯಾವಾಗಲೂ ಕ?ದಲ್ಲಿ ಇರುವವರಿಗೆ ತಾವಾಗೇ ಮುಂದೆಬಂದು ಸ್ನೇಹಭಾವದಿಂದ ನೆರವಾಗುತ್ತಾರೆ ಎಂಬುದು ದಿಟ. ಹಾಗೆ ನೋಡಿದರೆ ಇಲ್ಲಿ ಯಾರೂ ಅಪರಿಚಿತರಲ್ಲ; ಎಲ್ಲರೂ ಸ್ನೇಹಿತರೇ, ಒಬ್ಬರಿಗೊಬ್ಬರು ಭೇಟಿಯಾಗಿಲ್ಲ ಅಷ್ಟೆ.
ರಶಿಯನ್ ಸಾಮ್ರಾಟ ಎರಡನೇ ನಿಕೋಲಸನ ಕಾಲದಲ್ಲಿ ಒಮ್ಮೆ ಒಬ್ಬ ಬಡ ಸೈನಿಕ ತನ್ನ ಸೇನಾಠಾಣೆಯಲ್ಲಿ ಜೀವನದಲ್ಲಿ ಜುಗುಪ್ಸೆ ತಳೆದು ಕುಳಿತಿದ್ದ. ಅವನು ತನ್ನ ಕುಟುಂಬದ ಪೋಷಣೆಗಾಗಿ ಮೈತುಂಬ ಸಾಲವನ್ನು ಮಾಡಿಕೊಂಡಿದ್ದ.
ಕುಳಿತಿದ್ದವನು ಸುಮ್ಮನಿರಲಾರದೆ ತಾನು ತೀರಿಸಬೇಕಾದ ಸಾಲಗಳ ಪಟ್ಟಿಯನ್ನು ಒಂದು ಕಾಗದದ ಹಾಳೆಯಲ್ಲಿ ಬರೆದು ಕೊನೆಯಲ್ಲಿ ’ಇದನ್ನೆಲ್ಲ ತೀರಿಸುವವರು ಯಾರು?’ – ಎಂದು ಬರೆದು ತನ್ನ ನಿರಾಶೆಯನ್ನು ವ್ಯಕ್ತಪಡಿಸಿಕೊಂಡಿದ್ದ. ಸ್ವಲ್ಪ ಹೊತ್ತಿಗೆಲ್ಲ ಆತನಿಗೆ ಅಲ್ಲೇ ನಿದ್ದೆ ಆವರಿಸಿಕೊಂಡಿತು.
ಇತ್ತ ಅವನು ಮೈಮರೆತು ನಿದ್ರಿಸುತ್ತಿದ್ದಂತೆ, ಅತ್ತ ಅನಿರೀಕ್ಷಿತವಾಗಿ ಸಾಮ್ರಾಟ ನಿಕೋಲಸನ ಸವಾರಿ ಆ ದಾರಿಯಾಗಿ ಸಾಗಿಬಂತು. ದಾರಿಯಲ್ಲಿ ಹಾದುಹೋಗುತ್ತಿದ್ದ ಸಾಮ್ರಾಟ ನಿದ್ರಿಸುತ್ತಿದ್ದ ಸೈನಿಕನನ್ನು ನೋಡಿ ಸ್ವಲ್ಪ ತಡೆದು ಆತನ ಬಳಿಗೆ ಬಂದ. ಅವನು ಬರೆದಿಟ್ಟಿದ್ದ ಕಾಗದದ ಹಾಳೆಯನ್ನು ತೆಗೆದುಕೊಂಡು ಅದರಲ್ಲಿ ಪಟ್ಟಿಮಾಡಿದ್ದ ಸಾಲಗಳನ್ನು ವಿವರವಾಗಿ ಓದಿದ. ಅನಂತರ ಪೆನ್ಸಿಲನ್ನು ತೆಗೆದುಕೊಂಡು, ‘ನಿಕೋಲಸ್’ – ಎಂದು ಸೈನಿಕನ ಪ್ರಶ್ನೆಗೆ ಉತ್ತರ ಬರೆದು ತನ್ನಪಾಡಿಗೆ ಸವಾರಿಯನ್ನು ಮುಂದುವರಿಸಿದ.
ಸ್ವಲ್ಪಹೊತ್ತಿಗೆ ಎಚ್ಚರಗೊಂಡ ಸೈನಿಕ ಕಾಗದದ ಮೇಲೆ ಸಾಮ್ರಾಟನ ಹಸ್ತಾಕ್ಷರವನ್ನು ಕಂಡು ಆಶ್ಚರ್ಯಚಕಿತನಾದರೂ, ಬಹುಶಃ ಇದು ಕನಸಿರಬೇಕು ಎಂದುಕೊಂಡು ಸುಮ್ಮನಾದ. ಆದರೆ ಮರುದಿನ ಸಾಮ್ರಾಟನ ಕೋಶಾಧಿಕಾರಿಯೊಬ್ಬರು ಅಗತ್ಯವಾದ ಹಣವನ್ನು ತಂದುಕೊಟ್ಟದ್ದು ಆ ಸೈನಿಕನಿಗೆ ಋಣಮುಕ್ತನಾಗಲು ನೆರವಾಯ್ತು.
ಸ್ನೇಹಾಂತಃಕರಣ
ಯಾರು ನಮ್ಮ ನೋವನ್ನು ಅನುಭವಿಸುತ್ತಾರೋ ಅಂಥವರು ಅಂತಃಕರಣ ಸ್ನೇಹಿತರು. ಅವರಲ್ಲಿ ಸ್ಫುರಿಸುವ ಸ್ನೇಹಭಾವವು ದೈವಿಕವಾದದ್ದು.
ಒಬ್ಬಳು ದೃಷ್ಟಿಹೀನ ಹುಡುಗಿಯಿದ್ದಳು; ಬೆಳದಿಂಗಳ ಸೌಂದರ್ಯ ಎಂದರೆ ಏನು ಎಂದೇ ಆಕೆಗೆ ತಿಳಿದಿರಲಿಲ್ಲ; ಪ್ರಕೃತಿಯಲ್ಲಿ ಮರ ಗಿಡಗಳ ಮೇಲೆ, ಹುಲ್ಲುಹಾಸಿನ ಮೇಲೆ ಚೆಲ್ಲಿರುವ ಹಾಲ್ದಿಂಗಳ ಚೆಲುವಿನಿಂದ ಆಕೆ ಯಾವತ್ತೂ ವಂಚಿತಳಾಗಿದ್ದಳು; ಆಕೆಗೆ ಹಾಲಿನಂತಹ ಬೆಳದಿಂಗಳಿನ ಚೆಲುವನ್ನು ಅನುಭವಿಸುವುದು ಇರಲಿ, ಕಲ್ಪಿಸಿಕೊಳ್ಳುವುದೂ ಕೂಡ ಅಸಾಧ್ಯವಾಗಿತ್ತು.
ಹೀಗಿರಲು ಒಬ್ಬ ಸಂಗೀತಸಂಯೋಜಕನಿಗೆ ಆ ಕುರುಡುಹುಡುಗಿಗೆ ಬೆಳದಿಂಗಳನ್ನು ’ತೋರಿಸಬೇಕು’, ಅದರ ಚೆಲುವನ್ನು ಆಕೆ ಅನುಭವಿಸುವಂತೆ ಮಾಡಬೇಕು ಎಂಬ ಅದಮ್ಯ ಪ್ರೇರಣೆಯಾಯಿತು. ಆ ಕುರುಡುಹುಡುಗಿಗಾಗಿ ಆತ ಒಂದು ಸುಮಧುರವಾದ, ಇಂದು ಜಗತ್ಪ್ರಸಿದ್ಧವಾದ, ಸಂಗೀತಕೃತಿಯನ್ನೇ ರಚಿಸಿ ನೀಡಿದ! ಆ ಸುಪ್ರಸಿದ್ಧ ನಿಃಸ್ವಾರ್ಥಿ, ಸ್ವರಸಂಯೋಜಕನೇ – ಲುಡ್ವಿಗ್ ವೇನ್ ಬೆರ್ಟೊವೆನ್ (Ludwig van Beethoven); ಪಿಯಾನೋವಾದಕನೂ ಆದ ಆ ಜರ್ಮನ್ ವಾಗ್ಗೇಯಕಾರ ಸಂಯೋಜಿಸಿದ ಸುಪ್ರಸಿದ್ಧ ಸಂಗೀತಕೃತಿಯೇ – ’ಮೂನ್ಲೈಟ್ ಸೊನಾಟಾ’ (Moonlight Sonata).
ಕಾರಿರುಳೊಳಾಗಸದಿ ತಾರೆ ನೂರಿದ್ದೇನು?
ದಾರಿಗನ ಕಣ್ಗೆ ಬೇಕೊಂದು ಮನೆಬೆಳಕು |
ದೂರದಾ ದೈವವಂತಿರಲಿ, ಮಾನು?ಸಖನ
ಕೋರುವುದು ಬಡಜೀವ – ಮಂಕುತಿಮ್ಮ ||
– ಮಂಕುತಿಮ್ಮನ ಕಗ್ಗ, 424
ಕಾರಿರುಳಲ್ಲಿ ನಡೆಯುವಾಗ ಆಗಸದಲ್ಲಿ ಮಿನುಗುತ್ತಿರುವ ನಕ್ಷತ್ರಸಮೂಹಗಳು ಚೆಲ್ಲುವ ಬೆಳಕಿನಿಂದ ಅಲ್ಪ ನೆರವಾಗಬಹುದು. ಆದರೆ ಮನೆಯೊಳಗೆ ಹೊಕ್ಕಾಗ ಆ ನಕ್ಷತ್ರಗಳ ಬೆಳಕು ಅನುಕೂಲಕ್ಕೆ ಬರುವುದಿಲ್ಲ. ಮನೆಯೊಳಗೆ ಹಣತೆಯೋ ಬುಡ್ಡಿಯೋ ಏನಾದರೂ ಒಂದು ಬೆಳಕಿನ ಮೂಲ ಬೇಕಾಗುತ್ತದೆ. ಕಷ್ಟಕಾಲದಲ್ಲಿ ಭಗವಂತನನ್ನು ಎಷ್ಟು ಕರೆದರೂ ಅವನು ಪ್ರತ್ಯಕ್ಷವಾಗಿ ನೆರವಿಗೆ ಬರುವುದಿಲ್ಲ. ಸಂಕಟದ ಕಾಲದಲ್ಲಿ ಬೆಂಬಲಕ್ಕೆ ನಿಲ್ಲುವುದು, ಒತ್ತಾಸೆ ಕೊಡುವುದು, ಧೈರ್ಯ ತುಂಬುವುದು, ಸಹಾಯ ಮಾಡುವುದು ಇನ್ನೊಂದು ಮಾನುಷಜೀವವೇ. ಆದ್ದರಿಂದ ತನ್ನಂತೆಯೇ ಮನು?ನಾದ, ತನ್ನಂತೆಯೇ ಸುಖ-ದುಃಖಗಳನ್ನು ಅನುಭವಿಸುವ, ತನ್ನ ಸುಖ-ದುಃಖಗಳನ್ನು ಅರಿತುಕೊಳ್ಳಬಲ್ಲ ಆತ್ಮೀಯ ಸ್ನೇಹಿತನನ್ನು ಪ್ರತಿಯೊಬ್ಬರೂ ಬಯಸುತ್ತಾರೆ. ಅಂತಹ ಗೆಳೆಯರು ದೊರೆತಾಗ ಬದುಕಿನಲ್ಲಿ ನಮಗೆ ಯಾವ ಕಷ್ಟಗಳೂ ಭಯವನ್ನು ಉಂಟುಮಾಡಲಾರವು.
ವಿಭಿನ್ನತೆ
ಸುಪ್ರಸಿದ್ಧ ವಾಗ್ಮಿ, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅತ್ಯಂತ ವಿಭಿನ್ನವಾಗಿಯೇ ಸ್ನೇಹಭಾವನ್ನು ವ್ಯಕ್ತಪಡಿಸುತ್ತಿದ್ದುದು ಸರ್ವವಿದಿತ. ಒಮ್ಮೆ ವಾಜಪೇಯಿಯವರು ಪಕ್ಷದ ಒಂದು ಸಭೆಯಲ್ಲಿ ತಮ್ಮ ರಾಜಕೀಯ ವಿರೋಧಿಯೊಬ್ಬನ ಬಗ್ಗೆ ಸೌಜನ್ಯಪೂರಿತ ಮಾತುಗಳನ್ನಾಡಿದರು. ಇದರಿಂದ ಗೊಂದಲಕ್ಕೊಳಗಾದ ಅಭಿಮಾನಿ ಕಾರ್ಯಕರ್ತೆಯೊಬ್ಬಾಕೆ, “ಅಟಲ್ಜೀ, ಅದೇಕೆ ನೀವು ನಮ್ಮ ಆ ಬದ್ಧವಿರೋಧಿಯನ್ನು ತೀವ್ರವಾಗಿ ಖಂಡಿಸಿ ಮುಗಿಸದೆ ಆತನ ಬಗ್ಗೆ ಸ್ನೇಹಭಾವವನ್ನು ಪ್ರದರ್ಶಿಸುತ್ತಿದ್ದೀರಿ?” – ಎಂದು ನೇರವಾಗಿಯೇ ವಾಜಪೇಯಿಯವರನ್ನು ಪ್ರಶ್ನಿಸಿದರು.
ಅದಕ್ಕೆ ವಾಜಪೇಯಿ ನೀಡಿದ ಉತ್ತರ ಹೀಗಿತ್ತು: “ಈಗೇನಾಯ್ತು ತಾಯಿ, ನಾನು ಆತನೊಂದಿಗೆ ಗೆಳೆತನವನ್ನು ಮಾಡಿಕೊಂಡೆ ಅಂದಮೇಲೆ ಆತನಲ್ಲಿರುವ ವಿರೋಧಿಯನ್ನು ಮುಗಿಸಿದಂತೆಯೇ ಅಲ್ಲವೆ?”
ಸ್ನೇಹಕ್ಕೆ ಹಲವಾರು ಆದರ್ಶಮುಖಗಳಿರುತ್ತವೆ. ಪ್ರತ್ಯಕ್ಷವಾಗಿಯೋ ಪರೋಕ್ಷವಾಗಿಯೋ ಸ್ನೇಹಿತರಂತಿದ್ದು ನಮ್ಮನ್ನು ಸಂತೋ?ವಾಗಿರಿಸುವವರಿಗೆ ನಾವು ಸದಾ ಕೃತಜ್ಞರಾಗಿರಬೇಕು. ನಮ್ಮ ಬದುಕು ಸುಂದರವಾಗಿ ಅರಳಲು ಅಂತಹ ಸ್ನೇಹಿತರ ಕೊಡುಗೆಗಳು ಮಹತ್ತ್ವದ್ದಾಗಿರುತ್ತವೆ.