ಪ್ರತಿ ಪ್ರಜೆಯೂ ಹಣವನ್ನು ಸರ್ಕಾರಕ್ಕೆ ತೆರಿಗೆ ಮತ್ತು ಇನ್ನಿತರ ರೂಪದಲ್ಲಿ ಕೊಡದ ಹೊರತು ಅವನು ಹೆಚ್ಚು ಪಡೆಯಲು ಸಾಧ್ಯವಿಲ್ಲ. ಸರ್ಕಾರದಿಂದ ಎಲ್ಲವನ್ನೂ ಉಚಿತವಾಗಿ ಪಡೆದು, ಕ?ಪಡದೆ ಮತ್ತು ಪರಾವಲಂಬಿಗಳಾಗಿ ಜೀವಿಸುವ ಒಂದು ವರ್ಗವನ್ನು ಬಜೆಟ್ ಮೂಲಕ ನಿರ್ಮಾಣ ಮಾಡಬೇಕೆ ಎಂದು ಯೋಚಿಸುವ ಕಾಲ ಈಗ ಬಂದಿದೆ ಎನಿಸುತ್ತದೆ.
ಹಣಕಾಸು ಸಚಿವರು ಅಂತಾರಾಷ್ಟ್ರೀಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ನಡೆಯುತ್ತಿರುವ ಆರ್ಥಿಕ ಬದಲಾವಣೆಗಳ ಹಿನ್ನೆಲೆಯಲ್ಲಿ ತಮ್ಮ 4ನೇ ಬಜೆಟ್ನ್ನು ಮಂಡಿಸಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಜಾಗತೀಕರಣದ ಎರಡು ದಶಕಗಳ ನಂತರ ಅಭಿವೃದ್ಧಿ ಹೊಂದಿದ ಅನೇಕ ರಾಷ್ಟ್ರಗಳು ತಮ್ಮ ಆರ್ಥಿಕ ವ್ಯವಸ್ಥೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಈಗ ಪುನಃ ’ರಕ್ಷಣಾತ್ಮಕ (Protectionist policy) ನೀತಿಯನ್ನು ಜಾರಿಗೆ ತರುತ್ತಿರುವುದು ಹೊಸ ಬೆಳವಣಿಗೆ. ಅಭಿವೃದ್ಧಿ ಹೊಂದಿದ ದೇಶಗಳ ಆರ್ಥಿಕ ಬೆಳವಣಿಗೆಯ ದರದ ಗತಿಯು IMF ಪ್ರಕಾರ ಕೇವಲ 1.6% ರಿಂದ 1.9% ಹಾಗೂ ಅಭಿವೃದ್ಧಿ ಹೊಂದುತ್ತಿರುವ ದೇಶಗಳ ಆರ್ಥಿಕ ಬೆಳವಣಿಗೆಯ ವೇಗದ ಗತಿಯು 4.1% ನಿಂದ 4.5%ರವರೆಗೆ ಇರುವ ನಿರೀಕ್ಷೆಯನ್ನು ವ್ಯಕ್ತಪಡಿಸಿದೆ. ಈ ರೀತಿಯ ವಿಶ್ವ ಆರ್ಥಿಕತೆಯ ಪ್ರತಿಕೂಲ ವಾತಾವರಣದ ಹಿನ್ನೆಲೆಯಲ್ಲಿ ಯೋಚಿಸಿದಾಗ ಭಾರತದಲ್ಲಿ ಕೆಲವು ವ?ಗಳ ಸತತ ಸುಧಾರಣೆಗಳ ಪ್ರತಿಫಲವಾಗಿ ಒಂದ?ಮಟ್ಟಿನ ಸಮಗ್ರ ಆರ್ಥಿಕ ಸ್ಥಿರತೆ ಮೂಡಿದ್ದು, 2017-18ರ ಅವಧಿಯಲ್ಲಿ ಆರ್ಥಿಕ ದರದ ವೇಗ ಸುಮಾರು ೬.೫%ನಿಂದ ೭%ರವರೆಗೆ ಇರಬಹುದೆಂದು ಅಂದಾಜುಮಾಡಲಾಗಿದೆ.
ರಾಷ್ಟ್ರೀಯ ಮಟ್ಟದಲ್ಲಿ ಗಮನಿಸಿದರೆ ಹಣದುಬ್ಬರದ ದರ ಶೇ. ೩-೪ಕ್ಕೆ ಇಳಿಕೆ ಕಂಡಿದೆ ಹಾಗೂ ಬರುವ ತಿಂಗಳುಗಳಲ್ಲಿ ಇನ್ನೂ ಕಡಮೆ ಆಗುವ ನಿರೀಕ್ಷೆ ಇದೆ. ಪಾವತಿ ಶಿಲ್ಕಿನ ಚಾಲ್ತಿಖಾತೆಯ ಕೊರತೆ (’ಕರೆಂಟ್ ಅಕೌಂಟ್ ಡೆಫಿಸಿಟ್’) ಜಿಡಿಪಿಯ ಶೇ. ೧ರಿಂದ ೦.೩ಕ್ಕೆ ತಲಪಿರುವುದು, ವಿದೇಶಿವಿನಿಮಯದ ಸಂಗ್ರಹ ೩೬೧ ಬಿಲಿಯನ್ ಡಾಲರ್ಗೆ ಏರಿಕೆ ಆಗಿರುವುದು ಮತ್ತು ಭಾರತ ಕೈಗಾರಿಕಾ ವಸ್ತುಗಳ ಉತ್ಪಾದನೆಯಲ್ಲಿ ೯ರಿಂದ ೬ನೇ ಸ್ಥಾನಕ್ಕೆ ಏರಿರುವುದು ನಮ್ಮ ದೇಶದ ಆರ್ಥಿಕ ಬೆಳವಣಿಗೆಗೆ ಪೂರಕವಾದ ಅಂಶಗಳಾಗಿವೆ. ಈ ಹಿನ್ನೆಲೆಯಲ್ಲಿ ನಮ್ಮ ದೇಶದ ಬಜೆಟ್ ಮಂಡನೆ ಆಗಿರುವುದನ್ನು ನಾವು ನೆನಪಿಡಬೇಕು.
೨೦೧೭-೧೮ರ ಬಜೆಟ್ಟನ್ನು ಕೆಲವು ಪ್ರಮುಖ ಬದಲಾವಣೆಗಳ ಹಿನ್ನೆಲೆಯಲ್ಲಿ ಮಂಡಿಸಲಾಗಿದೆ. ಈ ಅಂಶಗಳು:
- ನೂತನ ಸರಕು ಮತ್ತು ಸೇವೆಗಳ ತೆರಿಗೆ ವ್ಯವಸ್ಥೆ ಬರುವ ಜುಲೈ ತಿಂಗಳಲ್ಲಿ ಜಾರಿಯಾಗಲಿದೆ. ಆದ್ದರಿಂದ ಪರೋಕ್ಷ ತೆರಿಗೆಯಲ್ಲಿ ಹೆಚ್ಚಿನ ಬದಲಾವಣೆಗಳನ್ನು ಮಾಡಲಾಗಿಲ್ಲ.
- ಹೆಚ್ಚಿನ ಮೌಲ್ಯದ ನೋಟುಗಳ ಅಮಾನ್ಯೀಕರಣ ಕಪ್ಪುಹಣದ ವಿರುದ್ಧ ತನ್ನ ಸಮರವನ್ನು ಮುಂದುವರಿಸಿದೆ.
- ಫೆಬ್ರುವರಿ ತಿಂಗಳ ಕೊನೆಯ ದಿನದ ಬದಲು ಮೊದಲ ದಿನವೇ ಬಜೆಟ್ ಮಂಡನೆ. ಆದ್ದರಿಂದ ಹೊಸ ಹಣಕಾಸು ವರ್ಷದ ಮೊದಲ ದಿನ, ಏಪ್ರಿಲ್ ೧ರಂದು ಬಜೆಟ್ನ ಜಾರಿ ಸಾಧ್ಯತೆ.
- ೯೩ ವರ್ಷಗಳ ಬಳಿಕ ರೇಲ್ವೆ ಬಜೆಟ್ ಮತ್ತು ಸಾಮಾನ್ಯ ಬಜೆಟ್ನ ವಿಲೀನ. ಸ್ವತಂತ್ರ ಭಾರತದ ಮೊಟ್ಟಮೊದಲ ಸಂಯುಕ್ತ ಬಜೆಟ್ ಇದು.
- ಯೋಜನಾವೆಚ್ಚ ಹಾಗೂ ಯೋಜನೇತರವೆಚ್ಚದ ನಡುವಿನ ವ್ಯತ್ಯಾಸವನ್ನು ಇಲ್ಲವಾಗಿಸಿರುವುದು. ಇದರಿಂದ ಬೇರೆಬೇರೆ ಸಚಿವಾಲಯಗಳಿಗೆ ಮತ್ತು ಇಲಾಖೆಗಳಿಗೆ ಸಮರ್ಪಕವಾದ ಹಣಕಾಸಿನ ಹಂಚಿಕೆಯ ಸಾಧ್ಯತೆ.
- ಸ್ವಾತಂತ್ರ್ಯಾನಂತರ ಮೊಟ್ಟಮೊದಲ ಬಾರಿಗೆ ಎಲ್ಲ ಸಚಿವಾಲಯಗಳ ಮತ್ತು ಇಲಾಖೆಗಳ ಫಲ- ಪರಿಣಾಮಗಳನ್ನು ಕ್ರೋಡೀಕರಿಸುವ ಮುಂಗಡಪತ್ರದ ಮಂಡನೆ. ಇದರಲ್ಲಿ ಪ್ರತಿ ಸಚಿವಾಲಯ ಮತ್ತು ಇಲಾಖೆಗಳಿಗೆ ಹಂಚಿಕೆಯಾದ ಹಣದ ವಿವರ, ಉದ್ದೇಶ ಮತ್ತು ನಿರ್ದಿಷ್ಟ ಅವಧಿಯಲ್ಲಿ ಪೂರ್ಣಗೊಳಿಸಬೇಕಾದ ಯೋಜನೆ, ಕಾರ್ಯಕ್ರಮಗಳ ವಿವರ ನೀಡಲಾಗಿದೆ.
2017-18ರ ರ ಬಜೆಟ್ನ ಉದ್ದೇಶಗಳು
ಈ ಬಜೆಟ್ ಮೂರು ಪ್ರಮುಖ ಉದ್ದೇಶಗಳನ್ನು ತನ್ನ ಒಡಲಲ್ಲಿ ತುಂಬಿಕೊಂಡಿದೆ. ಅವುಗಳೆಂದರೆ –
- ಆಡಳಿತದಲ್ಲಿ ಗುಣಾತ್ಮಕ ಪರಿವರ್ತನೆ ಮತ್ತು ಜನರ ಜೀವನಮಟ್ಟದಲ್ಲಿ ಗುಣಾತ್ಮಕ ಬದಲಾವಣೆ ತರುವುದು (Transform).
- ಸಮಾಜದ ಎಲ್ಲ ವರ್ಗಗಳ ಅದರಲ್ಲೂ ಯುವಕರಲ್ಲಿ ಹಾಗೂ ಸಮಾಜದಲ್ಲಿ ತುಳಿತಕ್ಕೆ ಒಳಗಾದ ವರ್ಗದಲ್ಲಿ ಹೊಸ ಉತ್ಸಾಹ ಮತ್ತು ಶಕ್ತಿಯನ್ನು ತುಂಬುವುದು Energise).
- ಭ್ರಷ್ಟಾಚಾರ, ಕಪ್ಪುಹಣ ಮತ್ತು ರಾಜಕೀಯಪಕ್ಷಗಳ ಹಣಸಂಗ್ರಹದಲ್ಲಿ ಪಾರದರ್ಶಕತೆ ತರುವುದರಿಂದ ಸ್ವಚ್ಛಭಾರತದ (Clean India) ನಿರ್ಮಾಣಕ್ಕೆ ಯತ್ನ.
- ಈ ಉದ್ದೇಶಗಳ ಪೂರೈಕೆಗಾಗಿ ೧೦ ಅಂಶಗಳ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ತನ್ಮೂಲಕ ರೈತರು, ಗ್ರಾಮೀಣ ಜನರು, ಯುವಕರು, ನಿರ್ಲಕ್ಷ್ಯಕ್ಕೆ ಒಳಗಾದವರು, ಮೂಲಭೂತ ಸೌಕರ್ಯ, ಹಣಕಾಸು ವಿಭಾಗ, ಡಿಜಿಟಲ್ ಪೇಮೆಂಟ್, ಸಾರ್ವಜನಿಕ ಸೇವೆಗಳು, ವಿವೇಕಯುತವಾದ ವಿತ್ತೀಯ ನಿರ್ವಹಣೆ ಮತ್ತು ಪಾರದರ್ಶಕ ತೆರಿಗೆ ಆಡಳಿತ ಇವುಗಳ ಬಗ್ಗೆ ವಿಶೇಷ ಗಮನಹರಿಸುವ ಮಹತ್ತ್ವಾಕಾಂಕ್ಷೆಯನ್ನು ಹೊಂದಿದೆ.
- ಈ ಬಜೆಟ್ನಲ್ಲಿ ಕೇವಲ ಒಂದು ವ?ದ ಅವಧಿಗೆ ಗಮನ ನೀಡುವುದರ ಜೊತೆಗೆ ಭವಿ?ಭಾರತದ, ದೇಶದ ಎಲ್ಲ ವರ್ಗಗಳ ಆಸೆ-ಆಕಾಂಕ್ಷೆಗಳನ್ನು ಮತ್ತು ಕನಸುಗಳನ್ನು ಸಾಕಾರಗೊಳಿಸುವ ಅನೇಕ ಯೋಜನೆಗಳನ್ನು ಹಮ್ಮಿಕೊಂಡಿರುವುದು ವಿಶೇ? ಸಂಗತಿ. ಆ ಕಾರಣಕ್ಕಾಗಿ ಈ ಬಜೆಟನ್ನು ಭವಿಷ್ಯ- ನಿರ್ದೇಶಿತ ಬಜೆಟ್ ಎಂದು ಕರೆಯಲಾಗಿದೆ.
- ಯಾವುದೇ ಒಂದು ಬಜೆಟ್ ಎಲ್ಲ ವರ್ಗಗಳ ಎಲ್ಲ ತರಹದ ಆಶೋತ್ತರಗಳನ್ನು ಸಂಪನ್ಮೂಲಗಳ ಕೊರತೆಯಿಂದ ಪೂರೈಸಲು ಸಾಧ್ಯವಿಲ್ಲ. ಆದರೂ ರಾಷ್ಟ್ರೀಯ ಹಿತ, ಸಮಗ್ರ ಅರ್ಥವ್ಯವಸ್ಥೆಯ ಸ್ಥಿರತೆ, ಪ್ರಮುಖ ಆರ್ಥಿಕ ವಿಭಾಗಗಳ ಆರ್ಥಿಕ ಚೇತನ ಮತ್ತು ಎಲ್ಲ ವರ್ಗಗಳ ಹಿತವನ್ನು ಗಮನದಲ್ಲಿಟ್ಟುಕೊಂಡು ತಯಾರಿಸಿದ ಬಜೆಟ್ ಇದು ಎಂಬುದು ಗಮನಕ್ಕೆ ಬರುತ್ತದೆ.
- ಹೆಚ್ಚಿನ ಮುಖಬೆಲೆಯ ನೋಟುಗಳ ನಿ?ಧದ ನಂತರ ದೇಶದಲ್ಲಿ ಅನೇಕ ಪ್ರಶ್ನೆಗಳು ಚರ್ಚಿತವಾಗಿ ವಿತ್ತಸಚಿವರು ಇವುಗಳಿಗೆ ಹೇಗೆ ಸಮಾಧಾನಕರ ಹಾಗೂ ಸೂಕ್ತ ಉತ್ತರವನ್ನು ಬಜೆಟ್ನಲ್ಲಿ ನೀಡುತ್ತಾರೆ ಎಂಬ ಕುತೂಹಲ ಸಾಮಾನ್ಯ ಜನರು ಹಾಗೂ ಚಿಂತಕರ ಮನದಲ್ಲಿ ಸಹಜವಾಗಿ ಇತ್ತು.
- ಅನುಭೋಗದ ಪ್ರಮಾಣ ಏರಿಕೆ ಹಾಗೂ ಆರ್ಥಿಕ ಚೇತರಿಕೆ
- ಸಾಮಾನ್ಯ ಜನರ ಅನುಭೋಗದ ಪ್ರಮಾಣವನ್ನು ಹೆಚ್ಚಿಸಿ ಆರ್ಥಿಕ ಚೇತರಿಕೆ ಮೂಡಿಸಲು ಕೈಗೊಂಡ ಕ್ರಮಗಳ ಬಗ್ಗೆ ಪರಿಶೀಲಿಸೋಣ.
ಅಪನಗದೀಕರಣದ ಪ್ರಾರಂಭದ ದಿನಗಳಲ್ಲಿ ಹಣದ ಚಲಾವಣೆಯ ಪ್ರಮಾಣ ಕಡಮೆ ಇದ್ದುದರ ಪರಿಣಾಮವಾಗಿ ಸಾಮಾನ್ಯ ಜನರ ಅನುಭೋಗದ ಪ್ರಮಾಣ ಕಡಮೆ ಆಗಿ ಆರ್ಥಿಕ ಚಟುವಟಿಕೆಗಳು ಸ್ವಲ್ಪ ಮಟ್ಟಿಗೆ ಸ್ಥಗಿತಗೊಂಡಿದ್ದವು. ಅನುಭೋಗದ ಕುಸಿತದಿಂದ ವಿವಿಧ ವಸ್ತುಗಳ ಉತ್ಪಾದನೆ
ಮತ್ತು ವಿತರಣೆಯಲ್ಲಿ ವ್ಯತ್ಯಾಸಗಳಾಗಿದ್ದವು. ಆದರೆ ಅದು ಕೇವಲ ತಾತ್ಕಾಲಿಕ ಅವಧಿಯಲ್ಲಿ ಆದ ಬದಲಾವಣೆಗಳು ಮಾತ್ರ. ಅನುಭೋಗವನ್ನು ಹೆಚ್ಚಿಸಿ ವಿವಿಧ ಆರ್ಥಿಕ ಚಟುವಟಿಕೆಗಳ ಪುನಶ್ಚೇತನಕ್ಕಾಗಿ ಸರ್ಕಾರ ಈ ಬಜೆಟ್ನಲ್ಲಿ ಅನೇಕ ಕಾರ್ಯಕ್ರಮಗಳನ್ನು ಕೈಗೆತ್ತಿಕೊಂಡಿದೆ.
ಸಾಮಾನ್ಯವಾಗಿ ಅನುಭೋಗದ ಪ್ರಮಾಣ ಜನರ ಕೈಯಲ್ಲಿ ಇರುವ ಕೊಳ್ಳುವಶಕ್ತಿ ಮತ್ತು ಆದಾಯದ ಮಟ್ಟದ ಮೇಲೆ ಅವಲಂಬಿಸಿರುತ್ತದೆ. ಆದಾಯದ ಮಟ್ಟವು ತೆರಿಗೆ ಪ್ರಮಾಣವನ್ನು ಅವಲಂಬಿಸಿರುತ್ತದೆ. ಈ ಬಾರಿಯ ಬಜೆಟ್ನಲ್ಲಿ ಕೆಳ ಮಧ್ಯಮವರ್ಗದ ಜನರಲ್ಲಿ ಯಾರಿಗೆ ೩ ಲಕ್ಷ ರೂ. ಗಳಿಂದ ೫ ಲಕ್ಷ ರೂ.ಗಳ ಒಳಗೆ ಆದಾಯ ಇರುತ್ತದೋ ಅಂತಹವರಿಗೆ ಶೇ. ೧೦ರಿಂದ ೫ಕ್ಕೆ ಆದಾಯ ತೆರಿಗೆ ಕಡಿತ ಮಾಡಿದ್ದಾರೆ. ಇದರಿಂದ ಈ ಗುಂಪಿನಲ್ಲಿ ಬರುವ ೧.೯೬ ಕೋಟಿ ಜನರ ಕೈಯಲ್ಲಿ ಶೇ. ೫ರಷ್ಟು ಹಣ ಉಳಿದು ಹೆಚ್ಚು ಖರ್ಚು ಮಾಡಲು ಅವಕಾಶ ಕಲ್ಪಿಸಲಾಗಿದೆ.
ಮೂಲಭೂತ ಸೌಕರ್ಯಗಳ ಸಮಗ್ರ ಅಭಿವೃದ್ಧಿಗೆ ಸಾರಿಗೆ ಕ್ಷೇತ್ರವೂ ಸೇರಿದಂತೆ ಒಟ್ಟು ೪ ಲಕ್ಷ ಸಾವಿರ ಕೋಟಿ ಹಣವನ್ನು ಮೀಸಲಾಗಿರಿಸಿದೆ, ಎಂದರೆ ಕಳೆದ ವರ್ಷಕ್ಕಿಂತ ಶೇ. ೫೫ರಷ್ಟು ಹೆಚ್ಚಾಗಿದೆ. ಈ ಬೃಹತ್ ಪ್ರಮಾಣದ ಹಣ ಮೂಲಭೂತ ಸೌಕರ್ಯಗಳನ್ನು ನಿರ್ಮಾಣ ಮಾಡುವವರ ಕೈಗೆ ಸೇರಲಿದ್ದು ಬರುವ ದಿನಗಳಲ್ಲಿ ಅನುಭೋಗದ ಪ್ರಮಾಣ ಹೆಚ್ಚಳವಾಗಲಿದೆ. ಇದು ಸರಪಳಿವ್ಯೂಹದ ರೀತಿ ಕೆಲಸ ಮಾಡಲಾರಂಭಿಸುತ್ತದೆ.
ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿಗೆ ರೂ. ೧,೮೭,೨೨೩ ಕೋಟಿ ಹಣ ವಿನಿಯೋಗವಾಗಲಿದೆ. ಇದರ ಜೊತೆ ರೈತರಿಗೆ ಕೊಡುವ ಸಾಲದ ಪ್ರಮಾಣ ೧೦ ಲಕ್ಷ ಸಾವಿರ ಕೋಟಿಗೆ ಏರಿಕೆಯಾಗಲಿದೆ. ಇವುಗಳ ಒಟ್ಟು ಪರಿಣಾಮವಾಗಿ ಗ್ರಾಮೀಣಜನರ ಕೈಯಲ್ಲಿ ಹೆಚ್ಚು ಹಣ ಸೇರಲಿದ್ದು ಅನುಭೋಗದ ಪ್ರಮಾಣ ಹೆಚ್ಚಳವಾಗಲಿದೆ.
’ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ’ಯಡಿ ಈ ಬಾರಿ ೪೮,೦೦೦ ಕೋಟಿ ರೂ. ಗಳು ನೇರವಾಗಿ ವ್ಯಯವಾಗಲಿದ್ದು, ಜನರ ಕೈಯಲ್ಲಿ ಹಣದ ಓಡಾಟ ಹೆಚ್ಚಾಗಿ ಅನುಭೋಗದಲ್ಲಿ ವೃದ್ಧಿಯಾಗಲಿದೆ.
ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ ದೊರಕಿದ ಶೇ. ೫ರ ತೆರಿಗೆ ವಿನಾಯತಿಯೂ ಅನುಭೋಗವನ್ನು ಹೆಚ್ಚಿಸಲಿದೆ.
ಕಡಮೆ ಬಡ್ಡಿದರದಲ್ಲಿ ಹೆಚ್ಚು ಮನೆಗಳ ನಿರ್ಮಾಣದ ಗುರಿ ಗ್ರಾಮೀಣ ಪ್ರದೇಶ ಹಾಗೂ ನಗರ ಪ್ರದೇಶಗಳಲ್ಲಿ ಹಣದ ಚಲಾವಣೆಯ ಪ್ರಮಾಣ ಹೆಚ್ಚಿಸಲು ಸಹಕಾರಿಯಾಗಲಿದೆ.
ಗ್ರಾಮೀಣ ಪ್ರದೇಶಗಳಲ್ಲಿ ೧೦ ದಶಲಕ್ಷ ಮನೆಗಳ ನಿರ್ಮಾಣ ಮತ್ತು ೫೦,೦೦೦ ಗ್ರಾಮ ಪಂಚಾಯತಿಗಳನ್ನು ಬಡತನದ ರೇಖೆಯಿಂದ ಮೇಲೆತ್ತುವ ಪ್ರಯತ್ನವು ಅನುಭೋಗಕ್ಕೆ ಹೆಚ್ಚಿನ ಪ್ರೇರಣೆಯನ್ನು ನೀಡಲಿದೆ. ಹಾಗೆಯೆ ಹತ್ತುಹಲವು ಯೋಜನೆಗಳ ಮೂಲಕ ಹಣದ ಹರಿವು ಹೆಚ್ಚಾಗಿ ಶೀಘ್ರದಲ್ಲೆ ಅನುಭೋಗದ ಪ್ರಮಾಣ ಹೆಚ್ಚಲಿದೆ.
ಉದ್ಯೋಗ ನಿರ್ಮಾಣ
ನೋಟುನಿಷೇಧದ ಆರಂಭದಲ್ಲಿ ಬಹಳಷ್ಟು ಜನ ತಮ್ಮ ಉದ್ಯೋಗಗಳನ್ನು ಕಳೆದುಕೊಂಡರು ಎನ್ನುವ ಮಾತನ್ನು ಕೇಳುತ್ತೇವೆ. ಹಣದ ಚಲಾವಣೆಯ ಕೊರತೆಯಿಂದ ದಿನಗೂಲಿ ಮಾಡುವ ಅನೇಕರಿಗೆ ತೊಂದರೆ ಆದದ್ದು ನಿಜ. ಆದರೆ ಅದು ತಾತ್ಕಾಲಿಕ ಮಾತ್ರ. ಆನಂತರದ ದಿನಗಳಲ್ಲಿ ಪರಿಸ್ಥಿತಿ ಸಹಜಸ್ಥಿತಿಗೆ ಮರಳಿದ್ದನ್ನು ನೋಡಿದ್ದೇವೆ. ಹೆಚ್ಚಿನ ಉದ್ಯೋಗಸೃಷ್ಟಿಗೆ ಬಜೆಟ್ನಲ್ಲಿ ಸಾಕಷ್ಟು ಒತ್ತನ್ನು ನೀಡಲಾಗಿದೆ.
ನಿರುದ್ಯೋಗ ಒಂದು ಶಾಪ. ಅದರ ನಿವಾರಣೆಗೆ ಎಲ್ಲಾ ರೀತಿಯ ಪ್ರಯತ್ನಗಳನ್ನು ಎಲ್ಲ ಸರ್ಕಾರಗಳೂ ಮಾಡುತ್ತವೆ. ಹೊಸ ಉದ್ಯೋಗಸೃಷ್ಟಿಗೆ ಬೇಡಿಕೆ ಮತ್ತು ಪೂರೈಕೆ, ಈ ಎರಡೂ ಕಡೆಯಿಂದ ಪ್ರಯತ್ನ ನಡೆಯಬೇಕಾಗುತ್ತದೆ. ಬೇಡಿಕೆಯ ದೃಷ್ಟಿಯಿಂದ ಯೋಚನೆ ಮಾಡಿದರೆ ಈ ಬಜೆಟ್ನಲ್ಲಿ ಅನೇಕ ಕ್ರಮಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಉದ್ಯೋಗಸೃಷ್ಟಿಗೆ ಹೆಚ್ಚಿನ ಆದ್ಯತೆ ನೀಡಿದ್ದು, ’ಮಹಾತ್ಮಾಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ’ಯ ಅಡಿಯಲ್ಲಿ ಒಟ್ಟು ೪೮,೦೦೦ ಕೋಟಿ ರೂ. ಗಳ ವ್ಯಯವಾಗಲಿದೆ. ಕಳೆದ ವರ್ಷಕ್ಕಿಂತ ಈ ಬಾರಿ ೧೦,೦೦೦ ಕೋಟಿ ರೂ.ಗಳ ಹೆಚ್ಚಳವನ್ನು ಮಾಡಲಾಗಿದೆ.
ಈ ದಿಕ್ಕಿನಲ್ಲಿ ಇನ್ನೊಂದು ಪ್ರಮುಖ ಹೆಜ್ಜೆ ಎಂದರೆ ಎಲ್ಲ ರೀತಿಯ ಮೂಲಭೂತ ಸೌಕರ್ಯಗಳ ಅಭಿವೃದ್ಧಿಯ ಅಡಿಯಲ್ಲಿ ಹೊಸ ರಸ್ತೆಗಳ ನಿರ್ಮಾಣ, ಮನೆಗಳ ನಿರ್ಮಾಣ, ಉಳಿಕೆಯ ಎಲ್ಲ ಹಳ್ಳಿಗಳ ವಿದ್ಯುದೀಕರಣ, ಸ್ವಚ್ಛ ಭಾರತ ನಿರ್ಮಾಣ, ಕುಡಿಯುವ ನೀರಿನ ಯೋಜನೆ, ಹೈನುಗಾರಿಕೆ ಅಭಿವೃದ್ಧಿ, ಸಣ್ಣ ನೀರಾವರಿ ಯೋಜನೆಗಳ ಪ್ರಗತಿ, ಗ್ರಾಮೀಣ ಬ್ಯಾಂಕಿಂಗ್ಗಳ ಕಂಪ್ಯೂಟರೀಕರಣ ಮತ್ತು ಕೃಷಿಗೆ ಸಂಬಂಧಪಟ್ಟ ಇತರ ಅನೇಕ ಯೋಜನೆಗಳ ಜಾರಿಗೆ ಹೆಚ್ಚಿನ ಮಹತ್ತ್ವ ನೀಡುವುದರಿಂದಾಗಿ ಸುಮಾರು ೪ ಲಕ್ಷ ಸಾವಿರ ಕೋಟಿ ರೂ. ಗಳ ಹೂಡಿಕೆಯಿಂದ ಹೆಚ್ಚಿನ ಉದ್ಯೋಗ ಸೃಷ್ಟಿಯಾಗಬಹುದೆಂದು ನಿರೀಕ್ಷಿಸಲಾಗಿದೆ.
ಇದರ ಜೊತೆಗೆ ಶ್ರಮಕೇಂದ್ರಿತ ಉದ್ಯೋಗಗಳಿಗೆ, ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ ಶೇ. ೫ರ ತೆರಿಗೆ ವಿನಾಯತಿ, ಹೆಚ್ಚಿನ ಸಾಲದ ಅವಕಾಶಗಳು, ಶ್ರಮಕ್ಕೆ ಸಂಬಂಧಿಸಿದ ಕಾನೂನುಗಳ ಪರಿ?ರಣೆ ಇತ್ಯಾದಿಗಳು ಶ್ರಮಕ್ಕಿಂತ ಹೆಚ್ಚಿನ ಬೇಡಿಕೆಯನ್ನು ಸೃಷ್ಟಿಮಾಡಲಿವೆ.
ಇನ್ನು ಪೂರೈಕೆಯ ದೃಷ್ಟಿಯಿಂದ ಯೋಚಿಸಿದರೆ ವಿದ್ಯಾಕ್ಷೇತ್ರದ ವಿಸ್ತರಣೆ, ಕೌಶಲ ಅಭಿವೃದ್ಧಿಗೆ ತರಬೇತಿ, ಆರೋಗ್ಯದ ಅಭಿವೃದ್ಧಿ, ಹೊಸ ಸರಕು ಮತ್ತು ಸೇವೆಗಳ ತೆರಿಗೆ ಪದ್ಧತಿಯ ಜಾರಿಯಿಂದ ಬರುವ ದಿನಗಳಲ್ಲಿ ಹೆಚ್ಚಿನ ಉದ್ಯೋಗ ಸೃಷ್ಟಿಯಾಗಲಿದೆ. ಈ ಮೇಲೆ ತಿಳಿಸಿದ ಎಲ್ಲಾ ಕ್ರಮಗಳ ಒಟ್ಟು ಪರಿಣಾಮದಿಂದ ಎರಡನೆಯ ಮತ್ತು ಮೂರನೆಯ ಸ್ತರದ ಲಿಂಕೇಜ್ (Linkage) ಪರಿಣಾಮಗಳು ಕಾರ್ಯಪ್ರವೃತ್ತವಾಗಿ ಸಂಬಂಧಪಟ್ಟ ಇತರ ಉದ್ಯಮಗಳಲ್ಲಿ ಹೆಚ್ಚಿನ ಉದ್ಯೋಗ ಸೃಷ್ಟಿಯಾಗುವುದು ಖಚಿತ.
ಆರ್ಥಿಕ ಅಭಿವೃದ್ಧಿಗೆ ಪೂರಕ ಮತ್ತು ವೇಗವರ್ಧಕ
ಅಪನಗದೀಕರಣದಿಂದ ಅನುಭೋಗದ ಪ್ರಮಾಣ ಕಡಮೆಯಾಗಿ ನಿರುದ್ಯೋಗ ಹೆಚ್ಚಿ ಆರ್ಥಿಕ ಪ್ರಗತಿಯ ದರ ಕಡಮೆಯಾಗುತ್ತಿದೆ ಎಂಬುದು ಹಲವರ ಅಭಿಮತ. ತಾತ್ಕಾಲಿಕವಾಗಿ ಸ್ವಲ್ಪಮಟ್ಟಿಗೆ ಪ್ರಗತಿಯ ದರದ ವೇಗ ಕಡಮೆಯಾದದ್ದು ನಿಜವಾದರೂ, ಆನಂತರದ ದಿನಗಳಲ್ಲಿ ಸರ್ಕಾರದ ವಿವಿಧ ಸಮಯೋಚಿತ ಕ್ರಮಗಳಿಂದ ಕುಸಿದಿದ್ದ ಆರ್ಥಿಕಪ್ರಗತಿ ಮತ್ತೆ ಚೇತರಿಸಿಕೊಳ್ಳುತ್ತಿರುವುದು ಸಮಾಧಾನಕರ. ಯಾವುದೇ ದೇಶದಲ್ಲಿ ದೂರಗಾಮಿ ಆರ್ಥಿಕ ಸುಧಾರಣೆಗಳನ್ನು ಮಾಡಿದಾಗ ಹೀಗೆ ತಾತ್ಕಾಲಿಕ ತೊಂದರೆಗಳು ಆಗುವುದು ಸಹಜ. ಆದರೂ ಸಹ ಈ ಬಾರಿಯ ಬಜೆಟ್ನಲ್ಲಿ ಆರ್ಥಿಕಪ್ರಗತಿಯ ದರದ ವೇಗ ಹೆಚ್ಚಿಸಲು ಅರ್ಥಸಚಿವರು ಅನೇಕ ಪ್ರಯೋಜನಕಾರಿ ಕ್ರಮಗಳನ್ನು ಕೈಗೆತ್ತಿಕೊಂಡಿದ್ದಾರೆ. ಈಗ ಅವುಗಳ ಅವಲೋಕನ ಮಾಡೋಣ.
ಆರ್ಥಿಕ ಬೆಳವಣಿಗೆಯ ವೇಗದ ದರ ಮೂಲಭೂತವಾಗಿ ಒಟ್ಟು ಹೂಡಿಕೆಯ ಹಣದ ಮೇಲೆ ನಿರ್ಭರವಾಗಿರುತ್ತದೆ. ಈ ಬಜೆಟ್ನ್ನು ಸೂಕ್ಷ್ಮವಾಗಿ ಗಮನಿಸಿದರೆ ಆರ್ಥಿಕತೆಯ ಎಲ್ಲ ಕ್ಷೇತ್ರಗಳಲ್ಲಿ ಹೆಚ್ಚಿನ ಹೂಡಿಕೆ ಕಂಡುಬರುತ್ತಿದೆ. ಇದು ಶುಭಸೂಚಕ. ಈ ಬಾರಿ ಒಟ್ಟು ಬಜೆಟ್ನ ಒಟ್ಟು ವೆಚ್ಚ ಸುಮಾರು ೨೨ ಲಕ್ಷ ಸಾವಿರ ಕೋಟಿಗಳು. ಅದರಲ್ಲಿ ಮೂಲಭೂತಸೌಕರ್ಯಗಳ ನಿರ್ಮಿತಿಗೆ ಸುಮಾರು ೪ ಲಕ್ಷ ಸಾವಿರ ಕೋಟಿ ರೂ.ಗಳು ಮೀಸಲು. ಈ ಬೃಹತ್ ಮಟ್ಟದ ಹೂಡಿಕೆ ನೇರವಾಗಿ ಸಂಬಂಧಪಟ್ಟ ಕ್ಷೇತ್ರಗಳಲ್ಲಿ ಹಾಗೂ ಇನ್ನಿತರ ಸಂಬಂಧಿತ ಕ್ಷೇತ್ರಗಳಲ್ಲಿ ಸರಪಳಿವ್ಯೂಹದ ರೀತಿಯಲ್ಲಿ ಬೆಳವಣಿಗೆಗೆ ಪ್ರೇರಕವಾಗಲಿದೆ. ಕೃಷಿ ಮತ್ತು ಗ್ರಾಮೀಣ ಕ್ಷೇತ್ರಗಳ ಸರ್ವಾಂಗೀಣ ಉನ್ನತಿಗಾಗಿ ಸುಮಾರು ೧,೮೭,೨೨೩ ಕೋಟಿ ರೂ.ಗಳ ಹೂಡಿಕೆ ಕಡಮೆಯೇನಲ್ಲ. ಇದರ ಜೊತೆ ಹಿಂದುಳಿದ ವರ್ಗಗಳ ಮತ್ತು ತುಳಿತಕ್ಕೆ ಒಳಗಾದ ವರ್ಗಗಳ ಏಳಿಗೆಗಾಗಿ, ಗಿರಿ, ವನ, ಗುಡ್ಡಗಾಡಿನಲ್ಲಿ ವಾಸಮಾಡುತ್ತಿರುವ, ಮಹಿಳೆಯರ ಮತ್ತು ಮಕ್ಕಳ ಕಲ್ಯಾಣ ಯೋಜನೆಗಳಿಗಾಗಿ ಹೂಡಿಕೆಯಾಗುವ ಹಣದ ಮೊತ್ತವೂ ದೊಡ್ಡದಾಗಿಯೇ ಇದೆ. ಇದು ಸುಮಾರು ೧,೮೪,೬೩೨ ಕೋಟಿ ರೂ.ಗಳಿಗೆ ತಲಪಿದೆ. ಈ ಎಲ್ಲ ಕ್ರಮಗಳು ಉತ್ಪಾದನಶಕ್ತಿಯ ಮಟ್ಟವನ್ನು ಹೆಚ್ಚಿಸಲು ಸಹಕಾರಿಯಾಗಿವೆ.
ಇಡೀ ಅರ್ಥವ್ಯವಸ್ಥೆಯನ್ನು ಸಮಗ್ರದೃಷ್ಟಿಯಿಂದ ನೋಡಿದಾಗ ಎಲ್ಲ ಕ್ಷೇತ್ರಗಳಲ್ಲೂ ಈ ಬಾರಿ ಗಣನೀಯ ಪ್ರಮಾಣದಲ್ಲಿ ಹೂಡಿಕೆಮಾಡಿರುವುದನ್ನು ಗಮನಿಸಿ ಅನೇಕ ತಜ್ಞರು ಈ ಬಜೆಟ್ಟನ್ನು “ಎಲ್ಲವನ್ನೂ ಒಳಗೊಂಡ (Inclusive) ಬೆಳವಣಿಗೆ”, “ವಿವೇಕಯುಕ್ತ ವಿತ್ತೀಯ ನಿರ್ವಹಣೆ” ಹಾಗೂ “ಸಮತೋಲಿತ ಬಜೆಟ್”, “ಒಳ್ಳೆಯದನ್ನು ಮಾಡುವ ಹಾಗೂ ಯಾವ ತೊಂದರೆಯನ್ನೂ ಕೊಡದ ಬಜೆಟ್”, “ಕೇವಲ ಕೆಲವರು ಮಾತ್ರ ವಿರೋಧಿಸಬಹುದಾದ ಬಜೆಟ್” ಎಂದು ವರ್ಣಿಸಿರುವುದು ಗಮನಸೆಳೆಯುತ್ತದೆ. ಇನ್ನು ಕೆಲವರು ಇದನ್ನು “ಪರಿವರ್ತನೆಯನ್ನು ತರುವಂತಹ ಬಜೆಟ್” ಎಂದು ಕರೆದಿದ್ದಾರೆ. ಈ ಬಜೆಟ್ ೧೦ ಅಂಶಗಳ ಕಡೆಗೆ ವಿಶೇಷ ಗಮನವನ್ನು ಹರಿಸುತ್ತಿರುವುದರಿಂದ ಇನ್ನು ಕೆಲವರು ಇದನ್ನು “ಆರ್ಥಿಕ ಚೇತರಿಕೆಯನ್ನು ತರುವಂತಹ”, “ಉಳಿತಾಯ ಮತ್ತು ಹೂಡಿಕೆಗಳ ಸಮತೋಲನ ಮಾಡಿದಂತಹ, ಆರ್ಥಿಕ ಪ್ರಗತಿ ಕುಸಿಯದಂತೆ ಹಿಡಿದಿರುವ (Sustainable) ಬಜೆಟ್” ಎಂದು ಕರೆದಿದ್ದಾರೆ. ಮತ್ತೆ ಕೆಲವರು “ಹಣದುಬ್ಬರವನ್ನು ನಿಯಂತ್ರಿಸಿರುವ”, “ಹಿಂದಿನ ಬಜೆಟ್ನಲ್ಲಿ ಆರಂಭಿಸಿದ ಪ್ರಯತ್ನಗಳ ಮುಂದುವರಿದ ಭಾಗದಂತಿರುವ ಬಜೆಟ್” ಎಂದು ಅಭಿಪ್ರಾಯಪಟ್ಟಿದ್ದಾರೆ. ಆರ್ಥಿಕ ಪ್ರಗತಿಗೆ ಇಂಬುಕೊಡುವ ಪ್ರಯತ್ನದ ಭಾಗವಾಗಿ ಹೊರದೇಶಗಳಿಂದ ತರುವ ವಾಣಿಜ್ಯ ಸಾಲಗಳಿಗೆ ಶೇ. ೫ರ ಬಡ್ಡಿದರದ ಕಡಿತ, ನ್ಯೂ ಸ್ಟಾರ್ಟಪ್ಗಳಿಗೆ ೩ ವರು?ದ ಆದಾಯ ತೆರಿಗೆ ವಿನಾಯತಿ ಕೊಡುವ ಕಾರ್ಯ ನಡೆದಿದೆ. ಜೊತೆಯಲ್ಲಿ ಮುದ್ರಾ ಯೋಜನೆಯ ವಿಸ್ತರಣೆ, ಡಿಜಿಟಲ್ ಇಂಡಿಯಾಗೆ ಒತ್ತು, ವ್ಯವಹಾರದಲ್ಲಿ ಪಾರದರ್ಶಕತೆ, ಕಪ್ಪುಹಣ-ಭ್ರ?ಚಾರಕ್ಕೆ ತಡೆ, ತೆರಿಗೆವ್ಯಾಪ್ತಿಯ ವಿಸ್ತರಣೆ, ಕೃಷಿ ಹಾಗೂ ಗ್ರಾಮೀಣ ಕ್ಷೇತ್ರಕ್ಕೆ ಹೆಚ್ಚಿನ ಸವಲತ್ತು, ಹಣದುಬ್ಬರದ ಕಡಿತ, ಆರ್ಥಿಕ ಅಪರಾಧಿಗಳ ಆಸ್ತಿ ಮುಟ್ಟುಗೋಲಿಗೆ ಹೊಸ ಕಾನೂನು, ಆರೋಗ್ಯವಲಯದ ಅಭಿವೃದ್ಧಿ, ’ವಿದೇಶಿ ಹೂಡಿಕೆ ಉತ್ತೇಜನಾ ಮಂಡಳಿ’ಯ ರದ್ದು, ವ್ಯವಸಾಯ ಉತ್ಪನ್ನ ಹೆಚ್ಚಿಸುವ ಸಂಕಲ್ಪ, ಸಣ್ಣ ಉದ್ಯಮಗಳಿಗೆ ಬೆಂಬಲ, ಮೇಕ್ ಇನ್ ಇಂಡಿಯಾ ಕಾರ್ಯಕ್ರಮಕ್ಕೆ ಹೆಚ್ಚಿನ ಪ್ರಾಮುಖ್ಯ – ಹೀಗೆ ಬೆಳವಣಿಗೆಗಳನ್ನು ಉತ್ತೇಜಿಸುವ (Growth promoting) ಅನೇಕ ಕಾರ್ಯಕ್ರಮಗಳಿಂದ ಆರ್ಥಿಕ ಪ್ರಗತಿಯ ವೇಗದರವನ್ನು ಹೆಚ್ಚುಮಾಡುವ ಸಂಕಲ್ಪಗಳನ್ನು ಕಾಣಬಹುದು.
ಭ್ರಷ್ಟಾಚಾರ ಹಾಗೂ ಕಪ್ಪುಹಣದ ವಿರುದ್ಧ ಹೋರಾಟ
ಬಜೆಟ್ ಭಾ?ಣದ ಪ್ರಾರಂಭದಲ್ಲಿ ವಿತ್ತಸಚಿವರು ನೋಟುನಿಷೇಧದ ಮುಖ್ಯ ಉದ್ದೇಶಗಳನ್ನು ಸ್ಪಷ್ಟಪಡಿಸಿದ್ದಾರೆ. ಅವುಗಳೆಂದರೆ ತೆರಿಗೆ ತಪ್ಪಿಸುವಿಕೆ ಮತ್ತು ಕಪ್ಪುಹಣದ ಪ್ರಮಾಣದ ಕಡಿತ, ಸಮಾನಾಂತರ ಆರ್ಥವ್ಯವಸ್ಥೆಯ ಗಾತ್ರದ ಕಡಿತ, ಭ್ರಷ್ಟಾಚಾರ ನಿರ್ಮೂಲನ ಹಾಗೂ ಉಗ್ರವಾದಿಗಳಿಗೆ ಸಿಗುವ ಹಣದ ಮೊತ್ತದ ಕಡಿತ.
ಬಜೆಟ್ನಲ್ಲಿ ಈ ಎಲ್ಲ ಉದ್ದೇಶಗಳ ಪೂರೈಕೆಗಾಗಿ ಕೆಲವು ನಿಶ್ಚಿತ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.
ನಗದು ಹಣದ ಮೂಲಕ ನಡೆಸುವ ಹೆಚ್ಚಿನ ವಾಣಿಜ್ಯ ಹಾಗೂ ವ್ಯಾಪಾರದ ಚಟುವಟಿಕೆಗಳು ಭ್ರ?ಚಾರದ ಪ್ರಮಾಣ ಹೆಚ್ಚಿಸುತ್ತವೆ, ತೆರಿಗೆಯ ಪ್ರಮಾಣ ಕಡಮೆ ಮಾಡುತ್ತವೆ, ಶ್ರಮಜೀವಿಗಳ ಕೂಲಿಯನ್ನು ಕಡಮೆ ಮಾಡಿ ಸಾಧ್ಯವಾಗುವ ಎಲ್ಲ ರೀತಿಯಿಂದ ಅವರನ್ನು ಶೋ?ಣೆ ಮಾಡಲು ಸಹಕಾರಿಯಾಗುತ್ತದೆ. ಆದ್ದರಿಂದ ನಗದುರಹಿತ ಹಣದ ವ್ಯವಹಾರವನ್ನು ಉತ್ತೇಜಿಸಲು ಡಿಜಿಟಲ್ ಪೇಮೆಂಟ್ಗಳಿಗೆ ಹೆಚ್ಚಿನ ಪ್ರಾಧಾನ್ಯ ಕೊಡಲಾಗಿದೆ. ಇನ್ನು ಮುಂದೆ ನಗದು ವಹಿವಾಟಿನ ಪ್ರಮಾಣವನ್ನು ಕಡಮೆ ಮಾಡಬೇಕೆಂಬ ಉದ್ದೇಶದಿಂದ ನಗದು ವಹಿವಾಟಿಗೆ ೩ ಲಕ್ಷ ರೂ.ಗಳ ಮಿತಿಯನ್ನು ನಿಗದಿಪಡಿಸಲಾಗಿದೆ. ನಗದುರಹಿತ ವ್ಯವಸ್ಥೆಯನ್ನು ದೂರು ನಿರ್ವಹಣಾ ವ್ಯವಸ್ಥೆಯೊಂದಿಗೆ ಅಭಿವೃದ್ಧಿಗೊಳಿಸಲಾಗುತ್ತಿದೆ. ಗ್ರಾಮೀಣ ಮತ್ತು ಪಟ್ಟಣ ಪ್ರದೇಶಗಳಲ್ಲಿ ನಗದುರಹಿತ ವ್ಯವಹಾರಗಳನ್ನು ಆರಂಭಿಸಲು ಮೂಲಸೌಕರ್ಯ ಒದಗಿಸಲು ನಿರ್ಧರಿಸಲಾಗಿದೆ.
ರಾಜಕೀಯ ಪಕ್ಷಗಳು ದೇಣಿಗೆ ಸ್ವೀಕರಿಸುವುದರಲ್ಲಿ ಪಾರದರ್ಶಕತೆ ತರುವ ಉದ್ದೇಶದಿಂದ ಹಲವು ನಿಯಮಗಳನ್ನು ಜಾರಿಗೊಳಿಸಲಾಗಿದೆ.
ನಗದು ರೂಪದಲ್ಲಿ ಒಬ್ಬರಿಂದ ಕೇವಲ ೨೦೦೦/- ರೂ.ಗಳನ್ನು ಮಾತ್ರ ದೇಣಿಗೆಯಾಗಿ ಸ್ವೀಕರಿಸಬಹುದು. (೨೦,೦೦೦ದಿಂದ ೨,೦೦೦ಕ್ಕೆ ಇಳಿಕೆ)
ಹೆಚ್ಚಿನ ಮೊತ್ತದ ದೇಣಿಗೆಯನ್ನು ಚೆಕ್ ಅಥವಾ ಡಿಜಿಟಲ್ ಪಾವತಿಯ ಮೂಲಕವೇ ಸ್ವೀಕರಿಸುವುದು ಕಡ್ಡಾಯವಾಗಿದೆ.
ಎಲ್ಲ ರಾಜಕೀಯ ಪಕ್ಷಗಳೂ ಆದಾಯ ತೆರಿಗೆ ರಿಟರ್ನ್ಗಳನ್ನು ಕಡ್ಡಾಯವಾಗಿ ಆದಾಯ ತೆರಿಗೆ ಕಾಯ್ದೆ ಪ್ರಕಾರವೇ ಫೈಲ್ ಮಾಡಬೇಕು.
ದೇಣಿಗೆದಾರರು ಪ್ರಮಾಣೀಕೃತ ಬ್ಯಾಂಕ್ಗಳಿಂದ ಚೆಕ್ ಮತ್ತು ಡಿಜಿಟಲ್ ಪಾವತಿ ಮೂಲಕ ಚುನಾವಣಾ ಬಾಂಡ್ಗಳನ್ನು ಖರೀದಿಸಬಹುದು. ರಾಜಕೀಯ ಪಕ್ಷಗಳ ಅಧಿಕೃತ ಖಾತೆಗಳ ಮೂಲಕವೇ ಈ ಬಾಂಡ್ನಿಂದ ಬರುವ ಹಣ ಜಮೆಯಾಗುತ್ತದೆ. ಈ ಕ್ರಮಗಳಿಂದ ಹಣ ಸಂಗ್ರಹಣೆಯಲ್ಲಿ ಪಾರದರ್ಶಕತೆ ಬರಲಿದೆ ಹಾಗೂ ಭವಿಷ್ಯದಲ್ಲಿ ಕಪ್ಪುಹಣವನ್ನು ನಿರ್ಮೂಲ ಮಾಡಲು ಸಹಕಾರಿಯಾಗಲಿದೆ.
ಸಾವಿರಾರು ಕೋಟಿ ಸಾಲ ಮಾಡಿ ದೇಶಬಿಟ್ಟು ಓಡಿಹೋಗುವವರ ಮತ್ತು ತಲೆಮರೆಸಿಕೊಂಡಿರುವ ವಂಚಕರ ಆಸ್ತಿಯನ್ನು ಮುಟ್ಟುಗೋಲು ಹಾಕಲು ಕಾನೂನು ತಿದ್ದುಪಡಿ ಮಾಡಲಾಗುತ್ತದೆ.
ಕಪ್ಪುಹಣದ ಚಲಾವಣೆ ಕಡಮೆ ಮಾಡುವ ಸಲುವಾಗಿ ಡಿಜಿಟಲೀಕರಣ ಕಾರ್ಯಗತ ಮಾಡಲು ಸರ್ವರೀತಿಯಲ್ಲಿ ವಿಶೇಷ ಪ್ರಯತ್ನಗಳು ನಡೆದಿವೆ. ನಗದುರಹಿತ ವಹಿವಾಟಿನ ಉತ್ತೇಜನಕ್ಕಾಗಿ ಹಲವಾರು ಹೊಸ ತಂತ್ರಗಳು ಮತ್ತು ಮಾಧ್ಯಮಗಳನ್ನು ಬಳಸಲು ಪ್ರಯತ್ನ ಮುಂದುವರಿದಿದೆ. ಮುಂಬರುವ ದಿನಗಳಲ್ಲಿ ಪೆಟ್ರೋಲ್ ಬಂಕ್ಗಳಲ್ಲಿ, ಫರ್ಟಿಲೈಸರ್ ಡಿಪೋಗಳಲ್ಲಿ, ಮುನಿಸಿಪಾಲಿಟಿಗಳಲ್ಲಿ, ಬ್ಲಾಕ್ ಆಫೀಸ್ಗಳಲ್ಲಿ, ರಸ್ತೆ ಸಾರಿಗೆ ಕಛೇರಿಗಳಲ್ಲಿ, ಕಾಲೇಜು ಮತ್ತು ವಿಶ್ವವಿದ್ಯಾಲಯಗಳಲ್ಲಿ, ಆಸ್ಪತ್ರೆಗಳಲ್ಲಿ ಡಿಜಿಟಲ್ ಪೇಮೆಂಟ್ ಮಾಡುವ ಅವಕಾಶವನ್ನು ಕಡ್ಡಾಯಗೊಳಿಸಲಾಗುವುದು. ಈ ಸಲುವಾಗಿ ಬೇಕಾಗುವ ಎಲ್ಲ ರೀತಿಯ ಪರಿಕರಗಳನ್ನು ನಮ್ಮ ದೇಶದಲ್ಲಿಯೇ ಉತ್ಪಾದನೆ ಮಾಡಲು ಉತ್ತೇಜನ ನೀಡಲಾಗುವುದು. ಡಿಜಿಟಲ್ ಕಂಪೆನಿಗಳಿಗೆ ಅನೇಕ ರೀತಿಯ ಆರ್ಥಿಕ ಉತ್ತೇಜನ ನೀಡಲಾಗುವುದು.
ಷೇರುಪೇಟೆಯಲ್ಲಿ ಹಬ್ಬದ ವಾತಾವರಣ
‘ಯಾವುದೇ ದೇಶದ ಆರ್ಥಿಕ ಹಾಗೂ ಹಣಕಾಸಿನ ಸ್ಥಿತಿಗತಿಗಳನ್ನು ತಿಳಿದುಕೊಳ್ಳಬೇಕಾದರೆ ಅಲ್ಲಿನ ಷೇರುಪೇಟೆಯನ್ನು ನೋಡು’ ಎನ್ನುವ ಮಾತಿದೆ. ಬಜೆಟಿನ ಹಲವಾರು ಶಿಸ್ತುಬದ್ಧ ಸಕಾರಾತ್ಮಕ ಘೋಷಣೆಗಳಿಂದ ಷೇರುಪೇಟೆ ಸಕಾರಾತ್ಮಕವಾಗಿ ಸ್ಪಂದಿಸಿದೆ. ಬಜೆಟ್ ಮಂಡನೆಯಾದ ನಂತರ ಒಂದೇ ದಿನದಲ್ಲಿ ನಿಫ್ಟಿ ೧೬೦ ಅಂಕಗಳ ಏರಿಕೆ ಕಂಡು ೮೭೨೦ ತಲಪಿತ್ತು; ಸೆನ್ಸೆಕ್ಸ್ ೪೮೬ ಅಂಕಗಳ ಏರಿಕೆ ಕಂಡು ದಿನದ ಅಂತ್ಯಕ್ಕೆ ೨೮,೧೪೨ ತಲಪಿತ್ತು. ಇಂತಹ ಏರಿಕೆ ಕಳೆದ ೧೩ ವರ್ಷಗಳ ಇತಿಹಾಸದಲ್ಲೇ ಇರಲಿಲ್ಲ. ಅದಕ್ಕೆ ಕಾರಣಗಳು ಹಲವಾರು.
ಸರ್ಕಾರೀ ಸ್ವಾಮ್ಯದ ಬ್ಯಾಂಕ್ಗಳಿಗೆ ೧೦,೦೦೦ ಸಾವಿರ ಕೋಟಿ ಹಣ ನೀಡಿಕೆ, ದೀರ್ಘಾವಧಿ ಮತ್ತು ಅಲ್ಪಾವಧಿ ಕ್ಯಾಪಿಟಲ್ ಗೇನ್ ತೆರಿಗೆಯಲ್ಲಿ ಯಾವುದೇ ಬದಲಾವಣೆ ಮಾಡದಿರುವಿಕೆ, ಲಾಭದ ಮೇಲಿನ ತೆರಿಗೆಯಲ್ಲಿ ಯಾವುದೇ ಬದಲಾವಣೆ ಮಾಡದಿರುವಿಕೆ, ಮೊದಲ ಮತ್ತು ಎರಡನೇ ಹಂತದ ವಿದೇಶೀ ಹೂಡಿಕೆದಾರರಿಗೆ ಇರುವ ತೆರಿಗೆಯಿಂದ ವಿನಾಯತಿ ನೀಡಿಕೆ ಇತ್ಯಾದಿ ಕ್ರಮಗಳು ಹೂಡಿಕೆದಾರರಲ್ಲಿ ಉತ್ಸಾಹ ಮೂಡಿಸಿತು. ಹಾಗಾಗಿ ಎರಡೂ ಸೂಚ್ಯಂಕದಲ್ಲಿ ಏರಿಕೆ. ಬಜೆಟ್ ಪರಿಣಾಮದಿಂದ ರೂಪಾಯಿಯ ವಿನಿಮಯ ದರದಲ್ಲಿ ೨೪ ಪೈಸೆ ಏರಿಕೆ ಆಗಿ, ವಿನಿಮಯದರ ೧ ಡಾಲರ್ಗೆ ೬೭.೬೩ ರೂ.ಗಳಾದವು.
ರಕ್ಷಣಾವಲಯಕ್ಕೆ ೨.೪೭ ಲಕ್ಷ ಕೋಟಿ ಮೀಸಲು
ಈ ಬಾರಿ ರಕ್ಷಣಾವಲಯಕ್ಕೆ ಜಿಡಿಪಿಯ ಶೇ. ೧.೬೨ರಷ್ಟು ಹಣದ ನಿಗದಿಯಾಗಿ ಕಳೆದ ವ?ಕ್ಕಿಂತ ಶೇ. ೬ರಷ್ಟು ಹೆಚ್ಚಾಗಿದೆ. ಈ ಬಜೆಟ್ನಲ್ಲಿ ಯೋಧರ ವೇತನ, ತರಬೇತಿ, ಸೇನಾ ಪರಿಕರಗಳ ನಿರ್ವಹಣೆ ಮತ್ತು ಮೂಲಭೂತ ಸೌಕರ್ಯಗಳ ನಿರ್ಮಾಣಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗಿದೆ. ದೇಶದ ನಾಲ್ಕು ಕಡೆಗಳಲ್ಲಿ ರಕ್ಷಣಾ ಸಂಶೋಧನಾ ಘಟಕಗಳನ್ನು ಸ್ಥಾಪಿಸುವ ಬಗ್ಗೆ ವಿವರಗಳನ್ನು ನೀಡಲಾಗಿದೆ. ನಿವೃತ್ತ ಯೋಧರು ಮತ್ತು ಅವರ ಕುಟುಂಬವರ್ಗದ ಪ್ರಯಾಣಕ್ಕೆ ವಿಶೇಷ ರಿಯಾಯತಿ ಕಲ್ಪಿಸುವ ವ್ಯವಸ್ಥೆ ಮಾಡಲಾಗಿದೆ. ಯೋಧರಿಗೆ ಮತ್ತು ಅಧಿಕಾರಿಗಳಿಗೆ ಆನ್ಲೈನ್ ರೈಲ್ವೇ ಬುಕಿಂಗ್ ವ್ಯವಸ್ಥೆ ಮಾಡಲಾಗಿದೆ. ನಿವೃತ್ತ ಯೋಧರ ಪಿಂಚಣಿಗೆ ವೆಬ್ಸೈಟ್ ಆಧಾರಿತ ಸಂವಹನ ಪಿಂಚಣಿ ವಿತರಣಾ ವ್ಯವಸ್ಥೆ ಜಾರಿಗೆ ತರಲು ನಿರ್ಧರಿಸಲಾಗಿದೆ. ರಕ್ಷಣಾ ಪರಿಕರಗಳ ಖರೀದಿಗೆ ಆದ್ಯತೆ ನೀಡಲಾಗಿದೆ.
ತೆರಿಗೆ ಪಾವತಿದಾರರ ಸಂಖ್ಯೆ ದೇಶದ ಜನಸಂಖ್ಯೆ ಮತ್ತು ಆದಾಯಗಳಿಗೆ ಹೋಲಿಸಿದರೆ ಬಹಳ ಕಡಮೆ
ವಿತ್ತ ಸಚಿವರು ತಮ್ಮ ತೆರಿಗೆ ನೀತಿಯನ್ನು ಘೋಷಣೆ ಮಾಡುವಾಗ ಮೊಟ್ಟಮೊದಲ ಬಾರಿಗೆ ದೇಶದಲ್ಲಿ ಒಟ್ಟು ಎಷ್ಟು ಜನ ತೆರಿಗೆ ಕೊಡುತ್ತಿದ್ದಾರೆ ಎಂಬುದರ ಬಗ್ಗೆ ಸಂಖ್ಯಾವಿವರಗಳನ್ನು ನೀಡಿದ್ದಾರೆ. ೧೨೫ ಕೋಟಿ ಜನಸಂಖ್ಯೆಯಲ್ಲಿ ಕೇವಲ ೧.೯೬ ಕೋಟಿ ಜನರು ಮಾತ್ರ ತೆರಿಗೆ ನೀಡುತ್ತಿದ್ದಾರೆಂಬುದು ಚಿಂತನೀಯ ಸಂಗತಿ. ಕಳೆದ 6 ದಶಕಗಳಿಂದ ತೆರಿಗೆ ನೀಡುವವರ ಸಂಖ್ಯೆ ಹೆಚ್ಚು ಮಾಡಬೇಕೆಂಬುದರ ಬಗ್ಗೆ ಗಮನ ಕೊಡದಿರುವುದು ವಿಷಾದದ ಸಂಗತಿ. ಇದರ ಬಗ್ಗೆ ಈಗ ಜನಜಾಗೃತಿಯಾಗುತ್ತಿರುವುದು ಸಂತಸದ ವಿಷಯ. ಅಪನಗದೀಕರಣದ ನಂತರ ತೆರಿಗೆ ಕಟ್ಟುವವರ ಸಂಖ್ಯೆ ಸ್ವಲ್ಪ ಹೆಚ್ಚಾಗುವ ಸುಳಿವನ್ನು ವಿತ್ತಸಚಿವರು ನೀಡಿರುವುದು ಸಮಾಧಾನಕರ.
ರೈಲ್ವೇ ಬೆಳವಣಿಗೆ
೯೩ ವರ್ಷಗಳ ಸಂಪ್ರದಾಯ ಮುರಿದು ರೈಲ್ವೇ ಬಜೆಟನ್ನು ಸಾಮಾನ್ಯಬಜೆಟ್ಟಿನಲ್ಲಿ ವಿಲೀನಗೊಳಿಸಲಾಗಿದೆ. ಈ ವಿಲೀನತೆ ಒಂದು ಹೊಸ ಪ್ರಯೋಗ. ಇದರಿಂದ ರೈಲ್ವೇಗೆ ಕೇಂದ್ರಸರ್ಕಾರದಿಂದ ಹೆಚ್ಚಿನ ಅನುದಾನ ಸಿಗಲಿದೆ. ಈ ವ? ಸುಮಾರು ೫೫,೦೦೦ ಸಾವಿರ ಕೋಟಿ ರೂ. ಗಳ ಅನುದಾನ ಸಿಕ್ಕಿದೆ. ಏಕೀಕೃತ ಬಜೆಟ್ ಮಂಡನೆಯಿಂದ ಇನ್ನು ಮುಂದೆ ಯಾವುದೇ ರೈಲ್ವೇ ಸಚಿವರು ತಮ್ಮ ರಾಜ್ಯಕ್ಕೇ ಹೆಚ್ಚಿನ ಮಹತ್ತ್ವ ಕೊಡಲು ಸಾಧ್ಯವಾಗುವುದಿಲ್ಲ. ಈ ಬಾರಿ ರೈಲ್ವೇ ಅಭಿವೃದ್ಧಿಗೆ ಒಟ್ಟು ೧.೩೧ ಲಕ್ಷ ಹೆಚ್ಚಿನ ನಿಗದಿಯಾಗಿದೆ. ’ಜನಪ್ರಿಯ’ ಅಂಶಗಳಿಂದ ವಿಮುಖವಾದ ಏಕೀಕೃತ ಬಜೆಟ್ ಈ ಕೆಳಕಂಡ ವಿಷಯಗಳ ಬಗ್ಗೆ ಹೆಚ್ಚಿನ ಗಮನಹರಿಸಿದೆ.
೩,೫೦೦ ಸಾವಿರ ಕಿ.ಮೀ ದೂರದ ಹೊಸರೈಲುಮಾರ್ಗ ನಿರ್ಮಾಣದ ಗುರಿ. ಲಿಫ್ಟ್ಗಳು ಮತ್ತು ಎಸ್ಕಲೇಟರ್ಗಳನ್ನು ಒಳಗೊಂಡ ೫೦೦ ನಿಲ್ದಾಣಗಳಲ್ಲಿ ಅಂಗವಿಕಲಸ್ನೇಹಿ ಸೌಲಭ್ಯಗಳು, ಪ್ರವಾಸೋದ್ಯಮ ಹಾಗೂ ತೀರ್ಥಯಾತ್ರೆಯ ಉದ್ದೇಶಕ್ಕಾಗಿ ಸಮರ್ಪಿತ ರೈಲುಗಳ ಆರಂಭ, ರೈಲ್ವೇ ಇಲಾಖೆಯು ೯ ರಾಜ್ಯಸರ್ಕಾರಗಳ ಜೊತೆ ಜಂಟಿ ಸಹಭಾಗಿತ್ವ ಸಂಸ್ಥೆಗಳನ್ನು ಸ್ಥಾಪಿಸಿದ್ದು, ನಿರ್ಮಾಣ ಹಾಗೂ ಅಭಿವೃದ್ಧಿಗೆ ಸಂಬಂಧಿಸಿದಂತೆ ೭೦ ಯೋಜನೆಗಳ ಗುರುತಿಸುವಿಕೆ, ಸುರಕ್ಷಿತ ಪ್ರಯಾಣಕ್ಕೆ ಆದ್ಯತೆ ಮತ್ತು ಭದ್ರತೆ, ಹಿರಿಯ ನಾಗರಿಕರಿಗೆ ಸ್ಮಾರ್ಟ್ಕಾರ್ಡ್, ೨೫ ನಿಲ್ದಾಣಗಳ ಮೇಲ್ದರ್ಜೆಗೆ ಏರಿಕೆ, ದೂರುದಾರರಿಗೆ “ಕೋಚ್ಮಿತ್ರ” ವ್ಯವಸ್ಥೆ, ಇ-ಟಿಕೆಟ್ಗೆ ಸರ್ವಿಸ್ ಚಾರ್ಜ್ ರದ್ದು, ೨ ಸಾವಿರ ನಿಲ್ದಾಣಗಳಲ್ಲಿ ಸೋಲಾರ್ ವಿದ್ಯುತ್ ಅಳವಡಿಕೆ, ಮೂಲಸೌಕರ್ಯಗಳ ಅಭಿವೃದ್ಧಿ, ಕರಾವಳಿ ಪ್ರದೇಶದಲ್ಲಿ ೨೦೦೦ ಕಿ.ಮೀ ರೈಲುಹಳಿಗಳ ಅಭಿವೃದ್ಧಿ, ಸುರಕ್ಷಿತ ಲೆವೆಲ್ ಕ್ರಾಸಿಂಗ್, ನಿಲ್ದಾಣಗಳ ಆಧುನಿಕೀಕರಣ, ಸುರಕ್ಷಿತ ಕೋಚ್ ಅಳವಡಿಕೆ, ನಗರಪ್ರದೇಶಗಳಲ್ಲಿ ಮೆಟ್ರೋ ರೈಲು ಮಹತ್ತ್ವ ಪಡೆಯುತ್ತಿರುವ ಹಿನ್ನೆಲೆಯಲ್ಲಿ ಇದರ ಅಭಿವೃದ್ಧಿಗಾಗಿ ಹೊಸ ಮೆಟ್ರೋ ರೈಲು ನೀತಿಯ ಜಾರಿ, 3 ವರ್ಷಗಳಲ್ಲಿ ಅತ್ಯಾಧುನಿಕ ರೈಲ್ವೇ ಕಾರಿಡಾರ್ ಸ್ಥಾಪನೆ, ಎಲ್ಲ ಕೋಚ್ಗಳಲ್ಲಿ ಜೈವಿಕ ಶೌಚಾಲಯದ ಅಳವಡಿಕೆ, ಕೇಂದ್ರೀಕೃತ ಸಂಚಾರ ಸೇವಾ ವ್ಯವಸ್ಥೆ ಇತ್ಯಾದಿ ಮಹತ್ತ್ವಾಕಾಂಕ್ಷೆಯ ಯೋಜನೆಗಳನ್ನು ಈ ವ?ದ ಬಜೆಟ್ಟಿನಲ್ಲಿ ಹಮ್ಮಿಕೊಳ್ಳಲಾಗಿದೆ.
ವಿದೇಶೀ ವ್ಯಾಪಾರ ಕ್ಷೇತ್ರ
ಕಳೆದ ಕೆಲವು ವರ್ಷಗಳಲ್ಲಿ ವಿದೇಶೀ ವ್ಯಾಪಾರ ಕ್ಷೇತ್ರದಲ್ಲಿ ಸಾಕಷ್ಟು ಪ್ರಗತಿ ಸಾಧನೆಯಾಗಿ ಪಾವತಿ ಶಿಲ್ಕಿನ (Balance of Payment) ಚಾಲ್ತಿ ಖಾತೆಯ ಕೊರತೆ (Current Account Deficit) ಜಿಡಿಪಿಯ ಶೇ. ೧ರಿಂದ ೦.೩ಕ್ಕೆ ಇಳಿಕೆ ಕಂಡಿರುವುದು, ವಿದೇಶೀ ವಿನಿಮಯದ ಸಂಗ್ರಹ ೩೬೧ ಬಿಲಿಯನ್ ಡಾಲರ್ಗೆ ಏರಿಕೆ ಆಗಿರುವುದು, ವಿದೇಶೀ ಬಂಡವಾಳದ ಹರಿವು ೧೬,೭೦೦ ಕೋಟಿಯಿಂದ ೧,೪೫,೦೦೦ ಕೋಟಿಗೆ ಏರಿಕೆ ಆಗಿರುವುದು – ಇವೆಲ್ಲ ಉತ್ತಮ ಪಾವತಿ ಶಿಲ್ಕಿನ ನಿರ್ವಹಣೆಗೆ ಸಾಕ್ಷಿ. ಇದು ಅಂತಾರಾಷ್ಟ್ರೀಯ ವ್ಯಾಪಾರದಲ್ಲಿ ಹೆಚ್ಚಿನ ಸ್ಥಿರತೆ ಸಾಧಿಸಿರುವುದನ್ನು ಬಿಂಬಿಸುತ್ತದೆ.
ದೇಶದೊಳಗೆ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಇರುವ ವಾತಾವರಣವನ್ನು ಗಮನಿಸಿದರೆ ೨೦೧೭-೧೮ರ ಸಾಲಿಗೆ ವಿತ್ತ ಸಚಿವರು ಒಂದು ಉತ್ತಮ ಬಜೆಟ್ ಮಂಡಿಸಿದ್ದಾರೆ ಎಂದೇ ಹೇಳಬಹುದು.
.ಲೇಖಕರು ಅರ್ಥಶಾಸ್ತ್ರ ಪ್ರಾಧ್ಯಾಪಕರು