ಸಾಮಾನ್ಯವಾಗಿ ಕಳೆಯೆಂದು ಪರಿಗಣಿಸಲಾದ ನೂರೆಪ್ಪತ್ತು ಸಸ್ಯಗಳನ್ನು ಗುರುತಿಸಿ, ಅವು ಈ ನಿಸರ್ಗದಲ್ಲಿ ಏಕೆ ಹುಟ್ಟಿವೆ, ಅವುಗಳಿಂದ ಏನಾದರೂ ಪ್ರಯೋಜನವಿದೆಯೆ? ಎಂದು ಸಂಶೋಧನೆ ನಡೆಸಿದವರು ವಿಜ್ಞಾನಿ ಪಳ್ಳತ್ತಡ್ಕ ಕೇಶವ ಭಟ್ಟ. ಇಂಥ ವಿಭಿನ್ನ ಕೆಲಸಗಳಿಂದಲೇ ಜಗನ್ಮಾನ್ಯತೆ ಪಡೆದ ಈ ಕನ್ನಡಿಗ ವಿಜ್ಞಾನಿಯ ಮೂಲ ಕಾರ್ಯಕ್ಷೇತ್ರ ದಕ್ಷಿಣ ಅಮೆರಿಕದ ವೆನಿಝ್ಯೂಲ!
ಬಾಲ್ಯದಲ್ಲಿದ್ದಾಗ ಅಂಗಡಿಯಿಂದ ಉಪ್ಪೊ, ಹುರಿಗಡಲೆಯೊ ತಂದುಕೊಡು ಎಂದು ಅಮ್ಮ ಹೇಳಿದೊಡನೆ ನೀವು ನೆಗೆಯುತ್ತಾ ಪೇಟೆಬೀದಿಗೆ ಓಡುತ್ತಿದ್ದೀರಲ್ಲವೆ? ಆ ಓಟವೆಂದೂ ನೇರವಾಗಿರುತ್ತಿರಲಿಲ್ಲ, ಎಡದಿಂದ ಬಲ, ಬಲದಿಂದ ಎಡಕ್ಕೆ ಸುತ್ತುತ್ತಾ ಅಂಗಡಿ ತಲಪುತ್ತಿದ್ದಿರಿ. ನಿಮ್ಮ ನಡೆ-ನುಡಿಗಳೆಲ್ಲವೂ ಥೇಟ್ ಘಟ್ಟವನ್ನು ಹತ್ತಿಸುತ್ತಿದ್ದ ಬಸ್ಡ್ರೈವರ್ನಂತೆ. ಹಾವಿನಂತೆ ಹರಿದಾಡಿದ್ದೇನು, ಸ್ಟೀರಿಂಗ್ ಹಿಡಿದವನಂತೆ ಕೈ ತಿರುಗಿಸಿದ್ದೇನು…. ನೆನೆಸಿಕೊಂಡರೆ ನಗು ಬರುತ್ತದೆ. ಈಗ ಮಕ್ಕಳ ಮುಂದೆ ಹೇಳಿಕೊಂಡರೆ ಮತ್ತ? ನಗೆಪಾಟಲಾಗುತ್ತೀರಿ. ಒಂದು ಅರೆಕ್ಷಣ ಹೀಗೆ ಯೋಚಿಸಿ. ನಮ್ಮ ಸೂರ್ಯ ನಿಮ್ಮ ಬಾಲ್ಯದಾಟವನ್ನು ನೆನಪಿಸುವಂತೆ ಓಡುತ್ತಿದ್ದಾನೆಂದುಕೊಳ್ಳೋಣ. ಆಗ ಅವನ ಸುತ್ತಲೂ ಪರಿಭ್ರಮಿಸುತ್ತಿರುವ ಗ್ರಹಗಳ ಸ್ಥಿತಿಯೇನಾಗುತ್ತದೆ. ಅವನೊಟ್ಟಿಗೆ ಅದೇ ವೇಗದಲ್ಲಿ, ಅದೇ ಧಾಟಿಯಲ್ಲಿ ಓಡುತ್ತಲೇ ಇರಬೇಕಾಗುತ್ತದೆ. ಅವನು ಹಾವಿನಂತೆ ಅತ್ತಿತ್ತ ಚಲಿಸುವ ಬದಲು ಒಂದು ಅಕ್ಷದ ಸುತ್ತಲೂ ಗಿರಿಗಿಟ್ಟಲೆ ಹೊಡೆಯುತ್ತಿದ್ದರೆ, ಭೂಮಿಯೂ ಸೇರಿದಂತೆ ಎಲ್ಲ ಗ್ರಹಗಳೂ ಗಿರಿಗಿಟ್ಟಲೆ ಹೊಡೆಯಬೇಕಾಗುತ್ತದೆ. ಅವನು ಸುರುಳಿ ಸುತ್ತುತ್ತಾ ಮುನ್ನುಗ್ಗುತ್ತಾನೆಂದುಕೊಳ್ಳೋಣ, ಹಿಂಬಾಲಕರಾದ ಎಲ್ಲ ಗ್ರಹಗಳೂ ಸೂರ್ಯನೊಂದಿಗೆ ನಿರ್ದಿಷ್ಟ ಅಂತರವನ್ನು ಇಟ್ಟುಕೊಂಡು ಸುರುಳಿ ಸುರುಳಿಯಾಗಿ ಮುನ್ನುಗ್ಗಬೇಕಾಗುತ್ತದೆ. ಅಕಸ್ಮಾತ್, ನಮ್ಮ ತಾರಾಮಂಡಲವೇ ಸುರುಳಿ ಸುರುಳಿಯಾಗಿ ಮುನ್ನುಗ್ಗುತ್ತಿದ್ದರೆ, ಸೂರ್ಯನೂ ಹಿಂಬಾಲಿಸಬೇಕಾಗುತ್ತದೆ. ಕೋಟಿಗಟ್ಟಲೆ ತಾರೆಗಳನ್ನೊಳಗೊಂಡ ನಮ್ಮ ಕ್ಷೀರಪಥ, ನೀಹಾರಿಕೆಗಳೆಲ್ಲವೂ ಅನಂತ ವಿಶ್ವದಲ್ಲಿ ಸುರುಳಿ ಸುರುಳಿಯಾಗಿ ಮುನ್ನುಗ್ಗುತ್ತಲೊ, ಪರಿಭ್ರಮಿಸುತ್ತಲೊ ಇದ್ದ ರೆ ರೆ ರೆ ರ್ರೆ…. ಯಾವುದು ಎಲ್ಲಿಗಾದರೂ ಸುತ್ತಲಿ, ಸದ್ಯಕ್ಕೆ ನಮ್ಮ ತಲೆ ಗಿರ್ರ್ ಎಂದು ತಿರುಗತೊಡಗುತ್ತದೆ.
ಅರ್ಥವಾಗದೆಯೆ, ಗೊಂದಲವಾಯಿತೆ? ಚಿಂತೆ ಬೇಡ ಬಿಡಿ. ಕಳೆದ ಎಂಟು ವರ್ಷಗಳಿಂದ ನಾನೂ ಅರ್ಥೈಸಿಕೊಳ್ಳಲು ಪ್ರಯತ್ನಿಸುತ್ತಲೇ ಇದ್ದೇನೆ. ಪುಸ್ತಕವೊಂದರ ಒಂದಷ್ಟು ಪುಟಗಳನ್ನು ಓದುವುದು, ಮತ್ತೆ ಮತ್ತೆ ಪುಟಗಳನ್ನು ಹಿಂದಿರುಗಿಸುವುದು. ಬೆಂಗಳೂರಿನಂಥ ಗದ್ದಲದ ಸಂತೆಯಲ್ಲಿ ಸಂತನಂತೆ ಧ್ಯಾನಮಗ್ನನಾಗಲು ಸಾಧ್ಯವಾಗುತ್ತಿಲ್ಲ. ಅಥವಾ ಅದೊಂದೇ ನೆಪದಲ್ಲಿ ಗಹನ ವಿಜ್ಞಾನಪಠ್ಯವೊಂದನ್ನು ಅರ್ಥಮಾಡಿಕೊಳ್ಳದೆಯೇ ತೊಳಲಾಡುತ್ತಿದ್ದೇನೆ. ನಂಬಿಕೆಗಳೇ ಹೀಗೆ. ಕೇಳಿದ್ದು ಸುಳ್ಳಾಗಬಹುದು, ನೋಡಿದ್ದು ಸುಳ್ಳಾಗಬಹುದು, ಅನುಭವಿಸಿದ್ದೇ ಸುಳ್ಳಾಗಬಹುದು. ‘ಸತ್ಯ ಮೇವ ಜಯತೆ’ ಎಂದು ಹೆಮ್ಮೆಯಿಂದ ಹೇಳಿಕೊಳ್ಳುವ ರಾ?ದವರಾದ ನಮಗೆ ‘ಸುಳ್ಳೇ, ಸುಳ್ಳು. ಈ ಭೂಮಿ ಮ್ಯಾಗೆ ಎಲ್ಲಾ ಸುಳ್ಳು’ ಎಂದು ನಿಮ್ಮ ಮುಂದೆ ಹಾಡಿದರೆ ಕೋಪ ಬರಬಹುದು. ಈ ಜಗತ್ತು, ಅಲ್ಲಲ್ಲ ಇಡೀ ವಿಶ್ವದಲ್ಲಿ ಯಾವುದೂ ಶಾಶ್ವತ ಸ್ಥಾನದಲ್ಲಿಲ್ಲ, ಯಾವುದೂ ಸ್ಥಿರವಾಗಿಲ್ಲ, ಯಾವುದೂ ನಿಶ್ಚಲವಾಗಿಲ್ಲ. ಏಕೆಂದರೆ ನಮ್ಮೆಲ್ಲ ಆಕಾಶಕಾಯಗಳಲ್ಲೂ ಬೃಹತ್ ಪ್ರಮಾಣದಲ್ಲಿ ಬದಲಾವಣೆಗಳಾಗುತ್ತಿವೆ. ಸೂರ್ಯ, ಭೂಮಿ, ಚಂದ್ರ ಸೇರಿದಂತೆ ಎಲ್ಲ ಆಕಾಶಕಾಯಗಳು ನಿರ್ದಿ? ಪಥದಲ್ಲಿ ಸುತ್ತುತ್ತವೆ ನಿಜ. ಆದರೆ ಆ ಸುತ್ತುವಿಕೆ ಸುರುಳಿ ಸುರುಳಿಯಾಗಿರುತ್ತದೆ. ಹೆಚ್ಚುತ್ತಲೇ ಇರುವ ಆಯಸ್ಕಾಂತೀಯ ಶಕ್ತಿಯ ಒಟ್ಟಾರೆ ಪರಿಣಾಮವಿದು. ಈ ಕಾರಣದಿಂದ ನಮ್ಮ ಎಲ್ಲ ಅಧ್ಯಯನಗಳಲ್ಲಿ ನಿರಂತರ ಚಲನೆಯ ಅಂಶವನ್ನು ಗಣನೆಗೆ ತೆಗೆದುಕೊಳ್ಳಬೇಕು. ಹಾಗೆಯೇ ವಾತಾವರಣವನ್ನೊಳಗೊಂಡ ಎಲ್ಲ ಆಕಾಶಕಾಯಗಳೂ ಸುರುಳಿ ಸುರುಳಿಯಾಗಿ ಥೇಟ್ ಧೂಮಕೇತುಗಳಂತೆ ಮುನ್ನುಗ್ಗುತ್ತಿರುತ್ತವೆ. ನಮ್ಮ ಇಂದಿನ ಎಲ್ಲ ವೈಜ್ಞಾನಿಕ ಲೆಕ್ಕಾಚಾರಗಳನ್ನೂ ‘ನಿರಂತರ ಚಲನೆ’ಯ ಆಧಾರದ ಮೇಲೆ ಮರುಗಣನೆ ಮಾಡಬೇಕು.
ಸುರುಳಿಯೊಳಗಿನ ಸುರುಳಿ
ಸುಮಾರು ಎಂಟು ವ?ಗಳ ಹಿಂದೆ ಪರಿಚಯವಾದವರು ಡಾ|| ಶಾಮರಾಜ ನಿಡುಗಳ ಎಂಬ ಆಯುರ್ವೇದ ವೈದ್ಯರು. ಥೈವಾನ್ ರಾಷ್ಟ್ರದ ಥಾಯ್ಪೈ ನಗರದಲ್ಲಿ ಆಯುರ್ವೇದ ಸಂಶೋಧನೆಗೆ ಸಂಬಂಧಿಸಿದ ಕಂಪೆನಿಯೊಂದರಲ್ಲಿ ಅವರು ಆಗ ಕಾರ್ಯನಿರ್ವಹಿಸುತ್ತಿದ್ದವರು. ಹೀಗೊಂದು ದಿನ ಶಾಮರಾಜ್ ನನ್ನ ಮನೆಯ ವಿಳಾಸವನ್ನು ಕೋರಿದರು. ತಮ್ಮ ಬಂಧುವೊಬ್ಬರು ಬರೆದ ಪುಸ್ತಕವೊಂದನ್ನು ನೀವು ಓದಲೇಬೇಕು, ಕಳುಹಿಸುತ್ತಿದ್ದೇನೆ ಎಂಬ ಒಕ್ಕಣೆಯ ಇ-ಮೇಲ್ ಸಹಾ ಬಂತು. ಕೊರಿಯರ್ ಮೂಲಕ ಬಂದ ಆ ಪುಸ್ತಕದ ಶೀರ್ಷಿಕೆ ‘ಹೆಲಿಕಲ್ ಹೆಲಿಕ್ಸ್ – ಸೋಲಾರ್ ಸಿಸ್ಟಮ್ ಎ ಡೈನಮಿಕ್ ಪ್ರಾಸೆಸ್’. ಪುಸ್ತಕ ಬರೆದವರ ಹೆಸರು ಪಿ. ಕೇಶವ ಭಟ್, ಎಂ.ಎಸ್ಸಿ., ಪಿಎಚ್.ಡಿ. ಎಂದಿತ್ತು. ಪುಸ್ತಕದ ಮೊದಲನೆಯ ಪುಟದಲ್ಲಿ ಗಮನ ಸೆಳೆದದ್ದು ವೆನಿಝ್ಯೂಲ ದೇಶದ ಪ್ರಕಾಶಕರ ವಿಳಾಸ. ಮತ್ತಷ್ಟು ಕುತೂಹಲದಿಂದ ಕೇಶವ ಭಟ್ಟರ ಪರಿಚಯ ಓದುತ್ತಿದ್ದಂತೆ ಇಡೀ ಮಿದುಳೇ ಸುರುಳಿಯೊಳಗಿನ ಸುರುಳಿಯಾಗಿ ಸಿಂಬೆ ಸುತ್ತಿಕೊಂಡಿತ್ತು.
ಪ್ರಸ್ತುತ ಕಾಸರಗೋಡಿನ ಭಾಗವಾಗಿರುವ ಪಳ್ಳತ್ತಡ್ಕದಲ್ಲಿ ಜನವರಿ 3, 1940ರಂದು ಜನಿಸಿದ ಕೇಶವ ಭಟ್ಟರು, ಸಸ್ಯವಿಜ್ಞಾನ ವಿಷಯದಲ್ಲಿ ಮದ್ರಾಸ್ ವಿಶ್ವವಿದ್ಯಾಲಯದಿಂದ ಬಿ.ಎಸ್ಸಿ., ಎಂ.ಎಸ್ಸಿ., ಪಿಎಚ್ಡಿ. ಪದವಿಗಳನ್ನು ಪಡೆದವರು. ಮದ್ರಾಸಿನ ಪ್ರತಿಷ್ಠಿತ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಎರಡು ವ?ಗಳ ಕಾಲ (1966-68) ಸಂಶೋಧನಾ ಸಹಾಯಕರಾಗಿಯೂ ಕಾರ್ಯ ನಿರ್ವಹಿಸಿದ್ದವರು. ಇದೇ ಕಾಲೇಜಿನಲ್ಲಿ ಸಸ್ಯವಿಜ್ಞಾನವನ್ನು ಸರಳವಾಗಿ ಕನ್ನಡಜನರಿಗೆ ಪರಿಚಯಿಸಿದ ಬಿ.ಜಿ.ಎಲ್. ಸ್ವಾಮಿ ಅವರು ಪ್ರಾಂಶುಪಾಲರಾಗಿದ್ದರು. ಒಂದು ವರ್ಷ (1968-69) ಕೇಂದ್ರ ಸರ್ಕಾರದ ವೈಜ್ಞಾನಿಕ ಹಾಗೂ ಔದ್ಯಮಿಕ ಸಂಶೋಧನಾಮಂಡಲಿಯ ಶಿಷ್ಯವೇತನ ಪಡೆದು ತಮ್ಮ ಸಂಶೋಧನೆಗಳನ್ನು ಕೇಶವ ಭಟ್ ಅವರು ಮುಂದುವರಿಸಿ ತಮ್ಮ ಸಂಶೋಧನಾ ವ್ಯಾಪ್ತಿಯನ್ನು ಹಿಗ್ಗಿಸಿಕೊಂಡರು.
ನಂತರ ವೆನಿಝ್ಯೂಲಾ ದೇಶದ ಕ್ಯುಮನದಲ್ಲಿನ ಓರಿಯಂಟ್ ವಿಶ್ವವಿದ್ಯಾಲಯದಲ್ಲಿ ಹಿರಿಯ ಪ್ರಾಧ್ಯಾಪಕರಾಗಿ 1969ರಲ್ಲಿ ನೇಮಕಗೊಂಡ ಕೇಶವ ಭಟ್ಟರು ಹದಿನೆಂಟು ವರ್ಷಗಳ ಕಾಲ ಅಲ್ಲಿನ ಪದವಿ, ಪದವಿಯೋತ್ತರ ವಿದ್ಯಾರ್ಥಿಗಳಿಗೆ ಸಸ್ಯ ವಿಜ್ಞಾನವನ್ನು ಬೋಧಿಸಿದರು. ಈ ದೇಶದ ಅಧಿಕೃತ ಭಾಷೆಯಾದ ಸ್ಪ್ಯಾನಿಶ್ನಲ್ಲಿ ಪ್ರಭುತ್ವ ಪಡೆದು ಅದೇ ಭಾಷೆಯಲ್ಲಿ ಸಸ್ಯವಿಜ್ಞಾನ ಬೋಧಿಸಿದ್ದು, ಪ್ರೌಢ ಪ್ರಬಂಧಗಳನ್ನು ಪ್ರಕಟಿಸಿದ್ದು, ಪಠ್ಯ ಪುಸ್ತಕಗಳನ್ನು ರಚಿಸಿದ್ದು ಇಲ್ಲಿ ಉಲ್ಲೇಖಾರ್ಹ ಸಂಗತಿಗಳು. ಸ್ಪ್ಯಾನಿಶ್ ಭಾಷೆಯಲ್ಲಿ ಪ್ರಕಟವಾಗಿರುವ ಅವರ ಏಳು ಪುಸ್ತಕಗಳು ದಕ್ಷಿಣ ಅಮೆರಿಕ ಹಾಗೂ ಯುರೋಪ್ ದೇಶಗಳಲ್ಲಿ ಹೆಚ್ಚು ಚರ್ಚೆಗೊಳಗಾಗಿವೆ. ಕೇಶವ ಭಟ್ಟರ ಕಾರ್ಯವ್ಯಾಪ್ತಿ ಕೇವಲ ವೆನಿಝ್ಯೂಲಾ ಮತ್ತು ಭಾರತ ದೇಶಗಳಿಗೆ ಸೀಮಿತವಾಗಿರಲಿಲ್ಲ. ಅಕ್ಷರಶಃ ಅವರೊಬ್ಬ ಜಗತ್ಪ್ರವಾಸಿಯಾಗಿದ್ದರು. ಪೆರು, ಕೊಲಂಬಿಯಾ, ಬ್ರೆಝಿಲ್, ಡಾಮಿನಿಕನ್ ರಿಪಬ್ಲಿಕ್, ಪೋರ್ಟೋ ರೀಕೊ, ನಿಕರಾಗುವಾ, ಕೋಸ್ಟಾ ರೀಕಾ, ಮೆಕ್ಸಿಕೋ, ಬೊಲಿವಿಯಾ, ಗ್ವಾಡಾಲೋಪ್, ಅಮೆರಿಕ, ಕೆನಡಾ, ಫ್ರಾನ್ಸ್, ಸ್ಪೇನ್, ಇಟಲಿ ಸೇರಿದಂತೆ ಹಲವಾರು ದೇಶಗಳನ್ನು ಸಂದರ್ಶಿಸಿ ತಮ್ಮ ವಿವಾದಾಸ್ಪದ ವಿಜ್ಞಾನ ಚಿಂತನೆಗಳನ್ನು ಮಂಡಿಸಿದ್ದಾರೆ, ವಿದ್ವಾಂಸರೊಂದಿಗೆ ಚರ್ಚಿಸಿದ್ದಾರೆ.
‘ಸರಳ ಚಿಕಿತ್ಸೆಯಿಂದ ಸಮಗ್ರ ಚಿಂತನದೆಡೆಗೆ’.
ಆಯುರ್ವೇದ ವೈದ್ಯಕೀಯ ಪದ್ಧತಿಯಲ್ಲಿ ಅಪಾರ ವಿಶ್ವಾಸವಿದ್ದ ಕೇಶವ ಭಟ್ಟರು ಇಡೀ ಜೀವನವನ್ನು ಸಮ್ಯಕ್ ದೃಷ್ಟಿಯಿಂದ ನೋಡಬೇಕೆನ್ನುತ್ತಿದ್ದರು. ಮೈಸೂರಿನ ಕಾವ್ಯಾಲಯ ಪ್ರಕಟಿಸಿರುವ ಅವರ ಏಕೈಕ ಕನ್ನಡ ಪುಸ್ತಕದ ಹೆಸರು ‘ಸರಳ ಚಿಕಿತ್ಸೆಯಿಂದ ಸಮಗ್ರ ಚಿಂತನದೆಡೆಗೆ’. ಅವರ ಚಿಂತನೆಗಳ ಒಟ್ಟಾರೆ ಪ್ರತಿಬಿಂಬವೇ ಈ ಪುಸ್ತಕ. ತಾಂಜಾನಿಯಾ ದೇಶದಲ್ಲಿ ಔ?ಧೀಯ ಸಸ್ಯಗಳ ಕುರಿತು ನಡೆದ ಮೊದಲ ಕಾಂಗ್ರೆಸ್ಗೆ (1990) ವಿಶೇಷ ಆಹ್ವಾನಿತರಾಗಿದ್ದ ಕೇಶವ ಭಟ್ಟರು ಅಭಿವೃದ್ಧಿಶೀಲ ರಾಷ್ಟ್ರಗಳ ಔಷಧೀಯ ಸಸ್ಯಗಳ ಕುರಿತ ಪರಿಣತ ಸಮಿತಿಯ ಸದಸ್ಯರಾಗಿ ನೇಮಕಗೊಂಡರು. ಇದೇ ವಿಷಯ ಕುರಿತು ಬೆಂಗಳೂರಿನಲ್ಲಿ ಜರಗಿದ ಅಂತಾರಾಷ್ಟ್ರೀಯ ಸಮ್ಮೇಳನದಲ್ಲೂ (1968) ಅವರು ಸಕ್ರಿಯವಾಗಿ ಭಾಗವಹಿಸಿದ್ದರು. 64 ಉಷ್ಣವಲಯ ಸಸ್ಯ ಪ್ರಬೇಧಗಳಿಂದ ೪೫೦ ಬಗೆಯ ಕಾಯಿಲೆಗಳಿಗೆ ಪರಿಹಾರ ಸೂಚಿಸುವ ಕೇಶವ ಭಟ್ಟರ ಸ್ಪ್ಯಾನಿಶ್ ಭಾಷೆಯ ಕೈಪಿಡಿಯೊಂದು ಫ್ರೆಂಚ್ ಹಾಗೂ ಇಂಗ್ಲಿಷ್ ಭಾಷೆಗಳಿಗೂ ತರ್ಜುಮೆಗೊಂಡಿವೆ. ಜಗತ್ತಿನಾದ್ಯಂತ ಒಂದು ಲಕ್ಷ ಇಪ್ಪತ್ತು ಸಾವಿರಕ್ಕೂ ಹೆಚ್ಚು ಪ್ರತಿಗಳು ಮಾರಾಟವಾಗಿವೆ. ಉಷ್ಣ ವಲಯದ ರೈತರ ಸುಸ್ಥಿರ ಅಭಿವೃದ್ಧಿಗೆ ಪೂರಕವಾಗುವ ೭೫ ವಿಶಿಷ್ಟ ತಳಿಗಳ ಕುರಿತಾದ ಅವರ ಮತ್ತೊಂದು ಸ್ಪ್ಯಾನಿಶ್ ಕೃತಿಯೂ ಸಹಾ ಅಪಾರ ಜನಮನ್ನಣೆ ಗಳಿಸಿದೆ.
ಅವರ ಮತ್ತೊಂದು ಇಂಗ್ಲಿಷ್ ಪುಸ್ತಕ ‘ಗುಡ್ ಬೈ ಟು ರೂಲಿಂಗ್ ಸೈಂಟಿಫಿಕ್ ಮಾಡೆಲ್, ಪ್ರಪೋಸಲ್ ಫಾರ್ ಎ ನ್ಯೂ ಸೈನ್ಸ್’ ಸಾಕಷ್ಟು ವಿವಾದಾತ್ಮಕ ವಿಷಯಗಳನ್ನು ಪ್ರತಿಪಾದಿಸಿದೆ. ಈ ಪುಸ್ತಕದಲ್ಲಿ ಬ್ಯಾಕ್ಟೀರಿಯಾ, ವೈರಸ್ಗಳಂಥ ಸೂಕ್ಷ್ಮಜೀವಿಗಳ ಬಗ್ಗೆ ಆಧುನಿಕ ವಿಜ್ಞಾನ ನೀಡಿರುವ ಪರಿಕಲ್ಪನೆಯೇ ಸರಿಯಲ್ಲ ಎಂದು ಕೇಶವ ಭಟ್ಟರು ವಾದಿಸುತ್ತಾರೆ. ನಮಗೆ ಕೂಲಂಕಷವಾಗಿ ತಿಳಿದಿದೆ ಎಂದು ನಂಬುವ ಒಂದು ಸಾವಿರದ ಐದುನೂರು ಸೂಕ್ಷ್ಮಜೀವಿ ತಳಿಗಳಲ್ಲಿ ನಮಗೆ ಕೆಡಕು ಮಾಡುವಂಥವುಗಳ ಸಂಖ್ಯೆ ಕೇವಲ ನೂರೈವತ್ತು. ಆದರೆ ಸಣ್ಣ-ಪುಟ್ಟ ಸೋಂಕುಗಳಿಗೆಲ್ಲಾ ಪ್ರತಿಜೈವಿಕಗಳನ್ನು (ಆಂಟಿಬಯಾಟಿಕ್) ಯರ್ರಾಬಿರ್ರಿ ಸೇವಿಸುವ ನಾವು, ಅನುಕೂಲಕರ ಸೂಕ್ಷ್ಮಜೀವಿಗಳನ್ನು ಹೊರದೂಡುತ್ತಿರಬಹುದು. ಎಲ್ಲ ಸೂಕ್ಷ್ಮಜೀವಿಗಳೊಂದಿಗೆ ಸಹಬಾಳ್ವೆ ಮಾಡಬೇಕಾದ ನಮ್ಮ ದೇಹದಲ್ಲಿ ಕೆಲವೊಮ್ಮೆ ಕೆಲವು ಜೀವಕೋಶಗಳು ನಿಶ್ಯಕ್ತವಾಗಬಹುದು. ಆ ಸಂದರ್ಭದಲ್ಲಿ ಹೊರಗಿನ ಸೂಕ್ಷ್ಮ ಜೀವಿಗಳ ಆಕ್ರಮಣದಿಂದಾಗಿ ಕಾಯಿಲೆಯಾಯಿತು ಎನ್ನುವುದು ಸರಿಯಲ್ಲ. ರೋಗಲಕ್ಷಣಗಳ ಆಧಾರದ ಮೇಲೆ ಆ ‘ಸೋಂಕಿಗೆ’ ನಾವು ಮದ್ದು ತೆಗೆದುಕೊಳ್ಳುವುದು ಸರಿಯಲ್ಲ. ಇದೇ ಧಾಟಿಯಲ್ಲಿ ಉನ್ನತ ತಂತ್ರಜ್ಞಾನವೆಂದು ನಾವು ಹೆಮ್ಮೆ ಪಡುವ ಜೀನೆಟಿಕ್ ಎಂಜಿನಿಯರಿಂಗ್ ಸ್ವರ್ಗಕ್ಕೆ ದಾರಿಯೊ, ಇಲ್ಲ ನರಕಕ್ಕೊ? ಎಂದು ಕೇಶವ ಭಟ್ಟರು ಪ್ರಶ್ನಿಸುತ್ತಾರೆ. ನಿಸರ್ಗದತ್ತವಾಗಿ ಲಭ್ಯವಿರುವ ಯಾವುದೇ ಸೌಕರ್ಯವನ್ನು ಅನ್ವೇಷಿಸುತ್ತಿರುವ ನಮ್ಮ ಮಾರ್ಗ ಸರಿಯಾಗಿದೆಯೆ? ಯಾವ ರಾಸಾಯನಿಕ ನಮ್ಮ ಯಾವ ಜೀವಕೋಶದ ಮೇಲೆ ಎಂಥ ಪರಿಣಾಮ ಬೀರುತ್ತದೆಂಬ ವಿಷಯ ಅರ್ಥವಾಗಿದೆಯೆ? ಹೀಗೆ ಅರ್ಥ ಮಾಡಿಕೊಳ್ಳುವ ದಿಸೆಯಲ್ಲಿ ನಡೆಸುವ ಪ್ರಯೋಗಗಳು ಖಚಿತ ಪ್ರಮೇಯಗಳ ಮೇಲೆ ನಿಂತಿವಿಯೆ? ಅಸಲಿಗೆ ಅಂಥ ಪ್ರಮೇಯಗಳು ಕರೆಕ್ಟ್ ಎಂದು ನಿರ್ಧರಿಸುವವರಿಗೆ ಇರುವ ಅರ್ಹತೆಗಳೇನು? – ಹೀಗೆ ಪ್ರಶ್ನೆಗಳ ಸರಮಾಲೆಯನ್ನೇ ನಿಮ್ಮ ಮುಂದಿಡುತ್ತಾರೆ ಕೇಶವ ಭಟ್ಟರು. ಅವg ವಾದಸರಣಿ ಥೇಟ್ ಖೈದಿಯನ್ನು ಬಿಡಿಸಲೇಬೇಕೆಂದು ಹಠತೊಟ್ಟ ವಕೀಲರ ವಿಚಾರ ಮಂಡನೆಯಂತಿರುತ್ತದೆ.
’ಇದೆಲ್ಲವನ್ನೂ ನಂಬಬೇಡಿ…’
ಮೂಲತಃ ಸಸ್ಯವಿಜ್ಞಾನಿ, ಹೀಗಾಗಿ ಜೀವವಿಜ್ಞಾನಕ್ಕೆ ಸಂಬಂಧಿಸಿದ ಅವರ ಚಿಂತನೆಗಳನ್ನು ಒಪ್ಪಬಹುದಲ್ಲವೆ? ಎಂಬ ಅನುಮಾನ ನಿಮ್ಮಲ್ಲಿ ಮೂಡುವಷ್ಟರಲ್ಲೇ ಕೇಶವ ಭಟ್ಟರು ನಿಮ್ಮನ್ನು ಚಕಿತಗೊಳಿಸಿಬಿಡುತ್ತಾರೆ. ಖಗೋಳ ವಿಜ್ಞಾನದ ಬಗ್ಗೆ ನೀವು ಅರಿತುಕೊಂಡಿರುವುದು ತೀರಾ ಅಲ್ಪ ಎಂದು ಕೆಲವೇ ಕ್ಷಣಗಳಲ್ಲಿ ತೋರಿಸಿಕೊಡುತ್ತಾರೆ. ನಾವು ವೀಕ್ಷಿಸುವ ಸ್ಥಾನ ಅಂದರೆ ಈ ಭೂಮಿ. ಇದರ ಮೇಲೆ ಕಿಲೋಮಿಟರ್ಗಟ್ಟಲೆ ಹರಡಿರುವ ವಾತಾವರಣದ ಪದರವನ್ನು ಗಣನೆಗೇ ತೆಗೆದುಕೊಂಡಿಲ್ಲ. ಅದು ನಿಮ್ಮ ದೃಷ್ಟಿ ಕೋನವನ್ನು ಮಸುಕಾಗಿಸುವುದಿಲ್ಲವೆ? ಎಂಬುದು ಅವರ ಮೊದಲ ಪ್ರಶ್ನೆ. ಹಾಗೆಯೇ ನಮ್ಮ ಕಣ್ಣು ತನ್ನ ಮುಂದಿನ ಒಂದು ಶಂಖಾಕೃತಿಯಲ್ಲಿ ಕಂಡ ದೃಶ್ಯಗಳನ್ನಷ್ಟೆ ಗ್ರಹಿಸಬಲ್ಲದು. ಆ ದೃಷ್ಟಿಗೂ ಇತಿ ಮಿತಿಗಳಿವೆಯೆನ್ನುತ್ತಾರೆ ಕೇಶವ ಭಟ್ಟರು. ನೀವು ಖಂಡಿತವಾಗಿಯೂ ಒಪ್ಪದ ವಿಚಾರ ಮಂಡನೆಯೊಂದು ಕೇಶವ ಭಟ್ಟರ್ ಮಂಡೆಯಲ್ಲಿದೆ – ಅದು ಓಝೋನ್ ಪದರ, ಅದಕ್ಕಾಗಿರುವ ರಂಧ್ರ, ಆ ರಂಧ್ರದಿಂದ ಸೂರ್ಯನ ನೇರಳಾತೀತ ಕಿರಣಗಳ ಪ್ರವೇಶ, ಚರ್ಮ ಕ್ಯಾನ್ಸರ್ ತಗಲುವ ಭೀತಿ…. ಇದೆಲ್ಲವನ್ನೂ ನಂಬಬೇಡಿ ಎನ್ನುತ್ತಾರೆ ನಮ್ಮ ಕೇಶವ ಭಟ್ಟರು. ಅವರ ಹೇಳಿಕೆಯ ಪ್ರಕಾರ ಇಂಥದೊಂದು ಕವಚ ಇರುವುದೇ ಪ್ರಶ್ನಾರ್ಹ. ಹಾಗೊಂದು ಬಾರಿ ಇದೆ ಎಂದು ಕೊಳ್ಳೋಣ. ಆ ತೆಳು ಪದರ ಸೂರ್ಯನ ಪ್ರಖರ ನೇರಳಾತೀತ ಕಿರಣಗಳನ್ನು ತಪ್ಪಿಸುವ ಸಾಧ್ಯತೆಗಳು ಕಡಿಮೆ. ಇನ್ನು ಡಾಬ್ಸನ್ ಸ್ಪೆಕ್ಟ್ರೋಮೀಟರ್ನಂಥ ಉಪಕರಣಗಳನ್ನು ಹೊತ್ತ ಬಲೂನ್ಗಳು ಸಂಗ್ರಹಿಸುವ ಮಾಹಿತಿ ಕೂಡಾ ಅಪೂರ್ಣ. ಈ ಬಗೆಯ ಓಝೋನ್ ಪದರದ ಅಳೆಯುವಿಕೆಯೇ ಸರಿಯಲ್ಲ. ಫಡ್ಚ ಆಯಿತು ಬಿಡಿ, ನಿಮ್ಮ ಓಝೋನ್ ಭೂತದ ಭೀತಿ!
ಅವರ ಮಹತ್ಕಾರ್ಯವನ್ನು ವೆನಿಝ್ಯೂಲ ದೇಶದ ಸರ್ಕಾರ ಗಮನಿಸಿತ್ತು. ಅವರ ಮೂವತ್ತು ವರ್ಷಗಳ ಸಾರ್ಥಕ ಸೇವೆಗೆ 1999ರಲ್ಲಿ ವೆನಿಝ್ಯೂಲ ಸರ್ಕಾರವು ಕೇಶವ ಭಟ್ಟರಿಗೆ ದೊಡ್ಡದೊಂದು ಪುರಸ್ಕಾರ ನೀಡಿತು. ಅದೇನೆಂದರೆ 1160 ಹೆಕ್ಟೇರ್ ಫಲವತ್ತಾದ ಮಳೆ ಕಾಡನ್ನು ಅವರ ಉಸ್ತುವಾರಿಗೆ ಬಿಟ್ಟಿತು. ಒರಿನೊಕೊ ನದಿ ತೀರದ ಈ ಸಮೃದ್ಧ ಕಾಡಿನಲ್ಲಿ ಮಾದರಿ ಗ್ರಾಮವೊಂದನ್ನು ನಿರ್ಮಿಸಿಕೊಡಬೇಕೆಂದು ಅಲ್ಲಿನ ಸರ್ಕಾರ ಕೇಶವ ಭಟ್ಟರನ್ನು ಕೇಳಿಕೊಂಡಿತು. ಜಗತ್ತಿನ ಉಷ್ಣ ಪ್ರದೇಶಗಳ ಮಳೆ ಕಾಡುಗಳಲ್ಲಿ ಪರಿಸರಕ್ಕೆ ಹಾನಿ ಮಾಡದ ಸ್ವಾವಲಂಬಿ ಗ್ರಾಮಗಳನ್ನು ವಿನ್ಯಾಸಗೊಳಿಸುವಲ್ಲಿ ಕೇಶವ ಭಟ್ಟರು ತೊಡಗಿಕೊಂಡರು. ಊರ್ಜಿತವಾಗಿ ಉಳಿಯಬಲ್ಲ ಕೃಷಿ ಪದ್ಧತಿ, ನಿಯಂತ್ರಿತ ಪರಿಸರ ವ್ಯವಸ್ಥೆ, ಆರೋಗ್ಯಕರ ಗ್ರಾಮ ಜೀವನ, ಸಂಯೋಜಿತ ಶಿಕ್ಷಣ ವ್ಯವಸ್ಥೆ ಹಾಗೂ ಬದಲಿ ವಿದ್ಯುತ್ ಉತ್ಪಾದನಾ ಕೇಂದ್ರಗಳು … ಹೀಗೆ ಹಲವಾರು ಯೋಜನೆಗಳಿಗೆ ಕೇಶವ ಭಟ್ಟರು ಚಾಲನೆ ನೀಡಿದರು. ಅಲ್ಲಿನ ಸರ್ಕಾರ ಮೆಚ್ಚುವಂಥ ಕೆಲಸವನ್ನು ಮಾಡಿದರು. ಆದರೆ ನಾಲ್ಕೇ ವರ್ಷಗಳನ್ನು ಯೋಜನೆ ಬರಖಾಸ್ತಾಯಿತು, ಸೂಕ್ತ ಸಿಬ್ಬಂದಿಯ ಕೊರತೆಯಿಂದ. ಈ ಅಪೂರ್ಣ ಕೆಲಸ ಕೇಶವ ಭಟ್ಟರಂಥ ಪಾದರಸ ವ್ಯಕ್ತಿಯನ್ನು ಬಹುದಿನ ಕಾಡಿಸಿತ್ತು.
ವಿಭಿನ್ನ ಚಿಂತಕ
ಅವರಿಗೆ ಭಾರತದಲ್ಲೊಂದು ವಿಶಿಷ್ಟ ಹಾಗೂ ವಿನೂತನ ವಿಜ್ಞಾನ ಸಂಸ್ಥೆಯನ್ನು ಸ್ಥಾಪಿಸುವ ಕನಸಿತ್ತು. ಸಂಸ್ಥೆಯ ಪ್ರತಿ ಜ್ಞಾನಶಾಖೆಗಳಲ್ಲಿಯೂ ಕನಿಷ್ಟ ಹತ್ತು ಮಂದಿ ಪರಿಣತರನ್ನು ಸಜ ಗೊಳಿಸಬೇಕೆಂದುಕೊಂಡಿದ್ದರು. ಖಗೋಳ-ಭೌತವಿಜ್ಞಾನ, ಸ್ವಾಸ್ಥ್ಯ-ಪೌಷ್ಟಿಕತೆ, ಪರಿಸರ ಪ್ರವಾಸೋದ್ಯಮ, ವಿಭಿನ್ನ ದೃಷ್ಟಿಕೋನದ ಸಸ್ಯವಿಜ್ಞಾನ, ಸುಸ್ಥಿರ ಕೃಷಿವಿಜ್ಞಾನ, ಆರೋಗ್ಯಕರ ಪಾಕವಿಜ್ಞಾನ, ಯೋಗದೊಂದಿಗಿನ ಜೀವವಿಜ್ಞಾನ, ಶುದ್ಧ ಗಾಳಿ-ನೀರು-ವಿದ್ಯುತ್ ಲಭ್ಯತೆಗಾಗಿ ತಂತ್ರಜ್ಞಾನ, ವಿಜ್ಞಾನ-ತತ್ತ್ವಜ್ಞಾನ ಮೇಳೈಕೆ…. ಹೀಗೆ ಶಿಕ್ಷಣದಲ್ಲಿಯೇ ಸಮಗ್ರತೆಯನ್ನು ಆ ಸಂಸ್ಥೆಯ ಮೂಲಕ ತರುವ ಆಕಾಂಕ್ಷೆ ಕೇಶವ ಭಟ್ಟರದಾಗಿತ್ತು.
ಬಹುತೇಕರು ಒಂದು ಬಗೆಯಲ್ಲಿ ಯೋಚನೆ ಮಾಡಿದರೆ, ಭಿನ್ನವಾಗಿಯೇ ಯೋಚಿಸುವವರ ಸಂಖ್ಯೆ ವಿರಳ. ಆ ವಿರಳರಲ್ಲಿ ವಿರಳರಾಗಿದ್ದ ಕೇಶವ ಭಟ್ಟ ಅವರು ಜುಲೈ 25, 2010 ಅಮೆರಿಕದಲ್ಲಿ ತೀರಿಕೊಂಡರೆಂಬ ಸುದ್ದಿ ಕನ್ನಡ ಪತ್ರಿಕೆಗಳಲ್ಲಿ ಸಣ್ಣದಾಗಿ ಪ್ರಕಟವಾಯಿತು. ಶಾಮರಾಜ್ ಅವರಿಗೆ ವಾಗ್ದಾನ ನೀಡಿದ್ದಂತೆ ಕೇಶವ ಭಟ್ಟ ಅವರನ್ನು ಒಮ್ಮೆ ನೋಡಬೇಕು, ಮಾತನಾಡಿಸಬೇಕು, ಪತ್ರ ಸಂಪರ್ಕ ಇಟ್ಟುಕೊಳ್ಳಬೇಕೆಂಬ ಹಂಬಲ ನನಗಿತ್ತು. ಅದು ಸಾಧ್ಯವಾಗಲಿಲ್ಲ. ವಿಭಿನ್ನ ಚಿಂತನೆಗಳಿಗೆ ಹೊರತಾಗಿ ವೈದ್ಯ ವಿಜ್ಞಾನದಲ್ಲಿ ಬಳಕೆಯಾಗುವ ಸಸ್ಯ ಸಂಪತ್ತಿನ ಬಗ್ಗೆ ಕೇಶವ ಭಟ್ಟರಲ್ಲಿ ಅಪಾರ ಮಾಹಿತಿಯಿತ್ತು. ಸಹಜ ಜೀವನ ಪದ್ಧತಿಯನ್ನು ಅಳವಡಿಸಿಕೊಳ್ಳುವ ಮೂಲಕ ದೀರ್ಘಾಯುಗಳಾಗಬಹುದೆಂಬ ಬಲವಾದ ನಂಬಿಕೆ ಅವರದಾಗಿತ್ತು. ಯೋಗಾಭ್ಯಾಸದ ಮೂಲಕ ಆರೋಗ್ಯವನ್ನು ಉತ್ತಮಪಡಿಸಿಕೊಳ್ಳಬಹುದು ಎಂದು ಅವರು ಪ್ರತಿಪಾದಿಸುತ್ತಿದ್ದರು. ಈ ಎಲ್ಲ ಕೆಲಸಗಳನ್ನು ನಮಗೆ ಹೆಚ್ಚು ತಿಳಿಯದ ವೆನಿಝ್ಯೂಲದಂಥ ದಕ್ಷಿಣ ಅಮೆರಿಕ ರಾಷ್ಟ್ರದಲ್ಲಿ ಅವರು ಮಾಡಿದರು. ಅಲ್ಲಿಂದಲೇ ಅವರು ಜಗನ್ಮಾನ್ಯತೆ ಪಡೆದರು.