ಅಂದಿನ ಪ್ರಧಾನಿ ಜವಾಹರಲಾಲ್ ನೆಹರು ಅವರಿಂದ ಹಿಡಿದು ಇಂದಿನ ಮನಮೋಹನಸಿಂಗ್ ಸೇರಿದಂತೆ ಭಾರತದ ಬಹುತೇಕ
ರಾಜಕಾರಣಿಗಳು, ಅಧಿಕಾರಿಗಳು, ಉದ್ಯಮಿಗಳು, ಕಲಾವಿದರು, ಕ್ರೀಡಾಪಟುಗಳು ಲಕ್ಷ್ಮಣ್ ಅವರ ವ್ಯಂಗ್ಯಕ್ಕೆ ತುತ್ತಾಗಿದ್ದಾರೆ. ಕೆಲವರು ಲಕ್ಷ್ಮಣ್ ಅವರ ಗೆರೆಗಳಲ್ಲಿ ತಮ್ಮ ಮುಖ ರಚನೆಯಾಗಲಿ ಎಂದು ಹಂಬಲಿಸಿದ್ದೂ ಇದೆ.
ಭಾರತೀಯ ವ್ಯಂಗ್ಯಚಿತ್ರಲೋಕದ ಧ್ರುವತಾರೆಯೊಂದು ಅಸ್ತಂಗತವಾಗಿದೆ. ಸುಮಾರು ಐದು ದಶಕಗಳ ಕಾಲ ತಮ್ಮ ಮೊನಚುಗೆರೆಗಳಿಂದ ವ್ಯಂಗ್ಯಚಿತ್ರಸಾಮ್ರಾಜ್ಯವನ್ನು ಅಕ್ಷರಶಃ ಅನಭಿಷಿಕ್ತದೊರೆಯಾಗಿ ಆಳಿದ ಆರ್.ಕೆ. ಲಕ್ಷ್ಮಣ್ (ರಾಶಿಪುರಮ್ ಕೃಷ್ಣಸ್ವಾಮಿ ಲಕ್ಷ್ಮಣ ಅಯ್ಯರ್) ಈಗ ನಮ್ಮೊಂದಿಗಿಲ್ಲ. ದೀರ್ಘಕಾಲದ ಅನಾರೋಗ್ಯದಿಂದ ನರಳುತ್ತಿದ್ದ ಅವರು ಜನವರಿ ೨೬ರ ಸಂಜೆ ಪುಣೆಯ ದೀನನಾಥ ಮಂಗೇಶ್ಕರ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಶಾಲಾದಿನಗಳಲ್ಲಿಯೇ ವ್ಯಂಗ್ಯಚಿತ್ರ ಬರೆಯುವ ಗೀಳು ಅಂಟಿಸಿಕೊಂಡಿದ್ದ ಲಕ್ಷ್ಮಣ್ ಅವರಿಗೆ ‘ರಾಶಿ’ ಅವರು (ಡಾ|| ಎಂ. ಶಿವರಾಂ) ಹೊರತರುತ್ತಿದ್ದ ‘ಕೊರವಂಜಿ’ ಹಾಸ್ಯಪತ್ರಿಕೆ ಮತ್ತು ಮುಂಬಯಿಯ ‘ದಿ ಫ್ರೀ ಪ್ರೆಸ್ ಜರ್ನಲ್’ ಪತ್ರಿಕೆಗಳು ಮೊದಲ ವೇದಿಕೆಯಾಗಿದ್ದವು. ಅನಂತರ ‘ಟೈಮ್ಸ್ ಆಫ್ ಇಂಡಿಯಾ’ ಆಂಗ್ಲ ದಿನಪತ್ರಿಕೆಯು ಅವರ ವೃತ್ತಿಜೀವನಕ್ಕೆ ಮಹತ್ತರವಾದ ಬುನಾದಿಯನ್ನೇ ಹಾಕಿಕೊಟ್ಟಿತು. ಸುಮಾರು ೫೭ ವರ್ಷಗಳ ಕಾಲ ಅದೊಂದೇ ಪತ್ರಿಕೆಗೆ ೩ ಲಕ್ಷಕ್ಕೂ ಹೆಚ್ಚು ವ್ಯಂಗ್ಯಚಿತ್ರಗಳನ್ನು ಬರೆದು ಹೊಸ ದಾಖಲೆಗೆ ಕಾರಣರಾದರು. ‘ಟೈಮ್ಸ್ ಆಫ್ ಇಂಡಿಯಾ’ ಪತ್ರಿಕೆಗೆ ಆರ್.ಕೆ. ಲಕ್ಷ್ಮಣ್ ಅವರ ಪಾಕೆಟ್ವ್ಯಂಗ್ಯಚಿತ್ರ ಎಷ್ಟು ಅನಿವಾರ್ಯವಾಗಿತ್ತೆಂದರೆ, ಅವರ ವ್ಯಂಗ್ಯಚಿತ್ರವಿಲ್ಲದ ‘ಟೈಮ್ಸ್ ಆಫ್ ಇಂಡಿಯಾ’ ಪತ್ರಿಕೆಯನ್ನು ಊಹಿಸಿಕೊಳ್ಳುವುದೂ ಕಷ್ಟವಾಗಿತ್ತು. ಅನೇಕ ಓದುಗರು ಆರ್.ಕೆ. ಲಕ್ಷ್ಮಣ್ ಅವರ ವ್ಯಂಗ್ಯಚಿತ್ರಕ್ಕಾಗಿಯೇ ‘ಟೈಮ್ಸ್ ಆಫ್ ಇಂಡಿಯಾ’ ಪತ್ರಿಕೆಯನ್ನು ಖರೀದಿಸುತ್ತಿದ್ದರು. ವರ್ತಮಾನದ ಬಹುತೇಕ ವಿಷಯಗಳು ಲಕ್ಷ್ಮಣ್ ಅವರ ಚಿತ್ರಗಳಲ್ಲಿ ಪ್ರತಿಬಿಂಬಿತವಾಗುತ್ತಿದ್ದುದೇ ಅವರ ವ್ಯಂಗ್ಯಚಿತ್ರಗಳ ಜನಪ್ರಿಯತೆಗೆ ಕಾರಣವಾಗಿತ್ತು.
ಅಂದಿನ ಪ್ರಧಾನಿ ಜವಾಹರಲಾಲ್ ನೆಹರು ಅವರಿಂದ ಹಿಡಿದು ಇಂದಿನ ಮನಮೋಹನಸಿಂಗ್ ಸೇರಿದಂತೆ ಭಾರತದ ಬಹುತೇಕ ರಾಜಕಾರಣಿಗಳು, ಅಧಿಕಾರಿಗಳು, ಉದ್ಯಮಿಗಳು, ಕಲಾವಿದರು, ಕ್ರೀಡಾಪಟುಗಳು ಲಕ್ಷ್ಮಣ್ ಅವರ ವ್ಯಂಗ್ಯಕ್ಕೆ ತುತ್ತಾಗಿದ್ದಾರೆ. ಕೆಲವರು ಲಕ್ಷ್ಮಣ್ ಅವರ ಗೆರೆಗಳಲ್ಲಿ ತಮ್ಮ ಮುಖ ರಚನೆಯಾಗಲಿ ಎಂದು ಹಂಬಲಿಸಿದ್ದೂ ಇದೆ. ಎಷ್ಟೋ ಬಾರಿ ವಿಧಾನಸಭೆ ಹಾಗೂ ಲೋಕಸಭೆಗಳಲ್ಲಿ ಇವರ ವ್ಯಂಗ್ಯಚಿತ್ರಗಳೇ ಆಯಾ ದಿನಗಳ ಚರ್ಚೆಯ ವಸ್ತುಗಳಾಗಿದ್ದವು. ಅಷ್ಟೇ ಅಲ್ಲ, ಕೆಲವು ಸಂದರ್ಭಗಳಲ್ಲಿ ಲಕ್ಷ್ಮಣ್ ಅವರ ಚಿತ್ರಗಳನ್ನೇ ನ್ಯಾಯಾಲಯಕ್ಕೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನಾಗಿ ಪರಿಗಣಿಸಿದ ಉದಾಹರಣೆಗಳೂ ಇವೆ. ಇವರು ಸೃಷ್ಟಿಸಿದ ‘ಶ್ರೀಸಾಮಾನ್ಯ’ ಚಿತ್ರ ಅದೆಷ್ಟು ಜನಪ್ರಿಯವಾಗಿದೆ ಎಂದರೆ ಭಾರತೀಯ ಅಂಚೆ ಇಲಾಖೆಯು ೧೯೮೮ ಮತ್ತು ೨೦೧೩ರಲ್ಲಿ ‘ಶ್ರೀಸಾಮಾನ್ಯ’ ಚಿತ್ರವುಳ್ಳ ಅಂಚೆಚೀಟಿಗಳನ್ನು ಬಿಡುಗಡೆಗೊಳಿಸಿತು. ಏರ್ಡೆಕ್ಕನ್ ವೈಮಾನಿಕಸಂಸ್ಥೆಯು ಇದೇ ಚಿತ್ರವನ್ನು ತಮ್ಮ ಸಂಸ್ಥೆಯ ಲಾಂಛನವನ್ನಾಗಿ ಬಳಸಿಕೊಂಡಿತು. ಪುಣೆ ಮತ್ತು ಮುಂಬಯಿಯಲ್ಲಿ ‘ಶ್ರೀಸಾಮಾನ್ಯ’ನ ಪ್ರತಿಮೆಗಳೂ ಅನಾವರಣಗೊಂಡವು.
ಅಕ್ಟೋಬರ್ ೨೪, ೧೯೨೧ರಲ್ಲಿ ಮೈಸೂರಿನಲ್ಲಿ ಜನಿಸಿದ ಲಕ್ಷ್ಮಣ್ ಅವರು ಇಂಗ್ಲೆಂಡಿನ ಖ್ಯಾತ ವ್ಯಂಗ್ಯಚಿತ್ರಕಾರ ಡೇವಿಡ್ ಲೋ ಅವರ ಚಿತ್ರಗಳ ಪ್ರಭಾವಕ್ಕೆ ಒಳಗಾಗಿದ್ದರಾದರೂ ತಮ್ಮ ಜೀವಿತದ ಕೊನೆಯವರೆಗೂ ಯಾರದೇ ಚಿತ್ರಗಳನ್ನು ಅವರು ಅನುಕರಿಸಲಿಲ್ಲ. ಅನಾರೋಗ್ಯವಿದ್ದಾಗಲೂ ವ್ಯಂಗ್ಯಚಿತ್ರಗಳನ್ನು ಬರೆದರು. ಮೊನ್ನೆಮೊನ್ನೆಯಷ್ಟೆ ಮಂಗಳಯಾನ ನಡೆಸುವ ಸಂದರ್ಭದಲ್ಲಿ ಇಸ್ರೋ ಸಂಸ್ಥೆಗಾಗಿ ೩ ವ್ಯಂಗ್ಯಚಿತ್ರಗಳನ್ನು ಬರೆದುಕೊಟ್ಟಿದ್ದರು. ಬರವಣಿಗೆಯಲ್ಲೂ ಆಸಕ್ತಿ ಹೊಂದಿದ್ದ ಲಕ್ಷ್ಮಣ್ ಅವರು ಹಲವಾರು ಪುಸ್ತಕಗಳನ್ನು ಬರೆದು ಪ್ರಕಟಿಸಿದ್ದಾರೆ. ಅವುಗಳಲ್ಲಿ ‘ದ ಟನಲ್ ಆಫ್ ಟೈಮ್’, ‘ಸರ್ವೆಂಟ್ಸ್ ಆಫ್ ಇಂಡಿಯಾ’, ‘ದ ಮೆಸೆಂಜರ್ಸ್’, ‘ಹೊಟೇಲ್ ರಿವೇರಾ’, ‘ದ ಬೆಸ್ಟ್ ಆಫ್ ಲಕ್ಷ್ಮಣ್ ಸೀರೀಸ್’, ‘ದ ಎಲೋಕ್ವೆಂಟ್ ಬ್ರಷ್’, ‘ಡಿಸ್ಟಾರ್ಟೆಡ್ ಮಿರರ್’, ‘ಬ್ರಷಿಂಗ್ ಆಫ್ ದ ಯಿಯರ್’ ಪ್ರಮುಖವಾದವುಗಳು.
ಭಾರತೀಯ ವ್ಯಂಗ್ಯಚಿತ್ರಕಲೆಗೆ ನೀಡಿದ ಅಪಾರ ಕೊಡುಗೆಗಾಗಿ ಆರ್.ಕೆ. ಲಕ್ಷ್ಮಣ್ ಅವರಿಗೆ ಹಲವು ಪ್ರಶಸ್ತಿಗಳು ಸಂದಿವೆ. ಅವುಗಳಲ್ಲಿ ಪದ್ಮಭೂಷಣ, ಪದ್ಮವಿಭೂಷಣ, ಬಿ.ಡಿ. ಗೊಯಂಕಾ ಪ್ರಶಸ್ತಿ, ದುರ್ಗಾರತನ್ ಸ್ವರ್ಣಪಾರಿತೋಷಿಕ, ಧಾರವಾಡ, ದೆಹಲಿ ವಿಶ್ವವಿದ್ಯಾಲಯಗಳಿಂದ ಗೌರವ ಡಾಕ್ಟರೇಟ್, ಭಾರತಭೂಷಣ, ಸಿಎನ್ಎನ್-ಐಬಿಎನ್ ಜೀವಮಾನದ ಸಾಧನಾ ಪ್ರಶಸ್ತಿ, ಬೆಂಗಳೂರಿನ ಭಾರತೀಯ ವ್ಯಂಗ್ಯಚಿತ್ರಕಾರರ ಸಂಘದಿಂದ ಜೀವಮಾನ ಸಾಧನಾ ಪ್ರಶಸ್ತಿಗಳು ಸೇರಿವೆ.
ಆರ್.ಕೆ. ಲಕ್ಷ್ಮಣ್ ಅವರು ಭೌತಿಕವಾಗಿ ನಮ್ಮನ್ನು ಅಗಲಿದ್ದರೂ, ಅವರು ಉಳಿಸಿಹೋದ ಲಕ್ಷಾಂತರ ವ್ಯಂಗ್ಯಚಿತ್ರಗಳು ಅಮರವಾಗಿವೆ.?
ಗುರುನಾಥ ಬೋರಗಿ
Article is really Interesting and informative. Thanks for this wonderful write up Dear Gurunathji.