ಧೈರ್ಯಶಾಲಿಗಳು ಸಾಯುವಾಗಲೂ ಧೀರರಾಗಿಯೇ ಸಾಯುತ್ತಾರೆ. ಭಗತ್ಸಿಂಗ್ ಮರಣದಂಡನೆಗೆ ಗುರಿಯಾಗಿದ್ದಾಗ, ಲಾಹೋರ್ ಜೈಲಿನ ಮುಖ್ಯಾಧಿಕಾರಿಯಾಗಿದ್ದವರು ಸಿಖ್ಧರ್ಮದ ನಿಷ್ಠಾವಂತ ಅನುಯಾಯಿಯಾಗಿದ್ದ ಸರ್ದಾರ್ ಚತರ್ಸಿಂಗ್. ಅವರು ಭಗತ್ಸಿಂಗ್ನ ಬಳಿ ಬಂದು “ಮಗೂ, ನನ್ನನ್ನು ನಿನ್ನ ತಂದೆಯಂತೆ ಭಾವಿಸಿಕೋ. ನಿನ್ನ ಅಂತ್ಯ ಸಮೀಪಿಸುತ್ತಿರುವುದರಿಂದ ಗುರುವಾಣಿಯನ್ನು ಪಠಣ ಮಾಡುತ್ತಾ ’ವಾಹೇ ಗುರು’ ಎಂದು ನಾಮೋಚ್ಚಾರ ಮಾಡು” ಎಂದು ವಿನಂತಿಸಿದ. ಅದನ್ನು ಕೇಳಿದ ಭಗತ್ಸಿಂಗ್ ಜೋರಾಗಿ ನಗುತ್ತಾ, “ನಾನು ಹಾಗೆ ಮಾಡಿದರೆ, ’ನೀನು ಕೊನೆಗೆ ಪುಕ್ಕಲನಾಗಿ, ಸಾವನ್ನು ಧೈರ್ಯವಾಗಿ ಎದುರಿಸಲಾಗದೆ ನನ್ನ ಮೊರೆಹೋಗಿದ್ದೀಯೆ’ ಎಂದು ಭಗವಂತ ನನ್ನನ್ನು ಅಣಕಿಸಿಯಾನು” ಎಂದು ಉತ್ತರಿಸಿದ. ಧೈರ್ಯವೇ ಮಹಾತ್ಮರ ಮುಖ್ಯ ಲಕ್ಷಣ.
ಇದು ಮೊರಾರ್ಜಿ ದೇಸಾಯಿಯವರು ಪ್ರಧಾನಮಂತ್ರಿಯಾಗಿದ್ದಾಗ ನಡೆದ ಒಂದು ಘಟನೆ. ಅವರು ಸೂರತ್ ಸಮೀಪ ಒಂದು ಕಾರ್ಯಕ್ರಮದಲ್ಲಿ ಭಾಗವಹಿಸುವುದಿತ್ತು. ರಾತ್ರಿ ೮ಕ್ಕೆ ಮುಂಬೈನಿಂದ ರೈಲಿನಲ್ಲಿ ಪ್ರಯಾಣ ಮಾಡುವ ಏರ್ಪಾಡಾಗಿತ್ತು. ಮಧ್ಯಾಹ್ನ ಸುಮಾರು 3 ಗಂಟೆಗೆ ದೂರವಾಣಿಯ ಮೂಲಕ ಆ ರೈಲಿನಲ್ಲಿ ಬಾಂಬ್ ಇರುವುದಾಗಿ ಸಂದೇಶ ಬಂದಿತು. ಸುಮಾರು 3 ತಾಸು ತಪಾಸಣೆ ಮಾಡಿದರೂ ಬಾಂಬ್ ಪತ್ತೆಯಾಗಲಿಲ್ಲ. ಆದರೂ ಮುನ್ನೆಚ್ಚರಿಕೆ ಕ್ರಮವಾಗಿ ಪ್ರಧಾನಮಂತ್ರಿಯವರ ಕಾರ್ಯಕ್ರಮವನ್ನು ರದ್ದುಪಡಿಸಿ, ಆ ಬಗ್ಗೆ ಸುಮಾರು 6 ಗಂಟೆಗೆ ಮೊರಾರ್ಜಿಯವರಿಗೆ ತಿಳಿಸಲಾಯಿತು. ಅರ್ಧಗಂಟೆಯ ನಂತರ ಮೊರಾರ್ಜಿ ತಮ್ಮ ಕಾರ್ಯದರ್ಶಿಯನ್ನು ಕರೆದು ’ಅಲ್ಲಿ ಜನಕ್ಕೆ ಸಮಯ ಕೊಟ್ಟಾಗಿದೆ, ಅವರು ಕಾಯುತ್ತಿರುತ್ತಾರೆ. ಆದುದರಿಂದ ನಾವು ಹೋಗುವುದೇ ಸರಿ’ ಎಂದು ತಿಳಿಸಿದರು. ಕಾರ್ಯದರ್ಶಿ ಅಲ್ಲಿ ವಿಮಾನ ಅಥವಾ ಹೆಲಿಕಾಪ್ಟರ್ ಇಳಿಯಲು ಸಾಧ್ಯವಿದೆಯಾ ಎಂದು ಪತ್ತೆಮಾಡಲು ಮುಂದಾದಾಗ, ’ಇಲ್ಲ, ನಾನು ರೈಲಿನಲ್ಲಿಯೇ ಹೋಗುವೆನು’ ಎಂದರು. ರೈಲಿನಲ್ಲಿ ಬಾಂಬ್ ಇರುವ ಸುದ್ದಿಯಿತ್ತು ಎಂದು ಕಾರ್ಯದರ್ಶಿ ನೆನಪಿಸಿದಾಗ, ’ಆ ರೈಲು ರದ್ದಾಗಿದೆಯೋ?’ ಎಂದು ಮೊರಾರ್ಜಿ ಮರುಪ್ರಶ್ನಿಸಿದರು. ’ಇಲ್ಲ’ ಎಂದಾಗ, ’ಅಂದ ಮೇಲೆ ನಾನು ರೈಲಿನಲ್ಲಿಯೇ ಹೋಗುತ್ತೇನೆ’ ಎಂಬುದಾಗಿ ಧೈರ್ಯವಾಗಿ ಹೇಳಿದರು.
ಮನುಷ್ಯನಲ್ಲಿ ಸಿಗುವ ಅತಿ ವಿರಳ ಹಾಗೂ ಅತಿ ಅಮೂಲ್ಯವಾದ ವಸ್ತುವೆಂದರೆ ಧೈರ್ಯವೇ ಆಗಿದೆ. ಅದನ್ನು ಪೇಟೆಯಲ್ಲಿ ಖರೀದಿ ಮಾಡಲಾಗುವುದಿಲ್ಲ. ಅದು ಮಾರಾಟದ ವಸ್ತುವಾಗಿದ್ದರೆ ಪುಕ್ಕಲರೂ ಶ್ರೀಮಂತರಾದಿಯಾಗಿ ಎಲ್ಲರೂ ಅದನ್ನು ಕೊಂಡುಕೊಂಡು ತಮ್ಮ ಬಳಿ ಇರಿಸಿಕೊಳ್ಳುತ್ತಿದ್ದರು.
ಭಯದ ವಿಷವರ್ತುಲ
ಇವತ್ತು ಎಲ್ಲಿ ನೋಡಿದರೂ ಒಬ್ಬರು ಇನ್ನೊಬ್ಬರನ್ನು ಹೆದರಿಸುವುದರಲ್ಲಿಯೇ ತಲ್ಲೀನರಾಗಿದ್ದಾರೆ. ಇಡೀ ಸಮಾಜವೇ ಭಯದ ವಾತಾವರಣದಲ್ಲಿದೆ. ಯಾವುದೇ ಕಛೇರಿಗೆ ಹೋಗಿ ನೋಡಿದರೆ, ಅಲ್ಲಿ ಮಾಲೀಕ ಮ್ಯಾನೇಜರಿಗೆ ಹೆದರಿಸುತ್ತಿರುವವನು. ಮ್ಯಾನೆಜರ್ ಕ್ಲಾರ್ಕ್ಗಳಿಗೆ ಹೆದರಿಸುತ್ತಾನೆ. ಕ್ಲಾರ್ಕ್ ಚಪರಾಸಿಗಳಿಗೆ ಹೆದರಿಸುತ್ತಿರುತ್ತಾನೆ. ಚಪರಾಸಿ ಮನೆಗೆ ಬಂದು ತನ್ನ ಪತ್ನಿಗೆ ಹೆದರಿಸುತ್ತಿರುತ್ತಾನೆ. ಪತ್ನಿ ತನ್ನ ಮಕ್ಕಳನ್ನು ಹೆದರಿಸುತ್ತಾಳೆ. ಮಕ್ಕಳನ್ನು ಶೈಶವದಿಂದಲೇ ಭಯಗ್ರಸ್ತ ವಾತಾವರಣದಲ್ಲಿ ಬೆಳೆಸಿದರೆ ಅವರು ಮುಂದೆ ಸಮಾಜಕಂಟಕರಾಗಿ ಬೆಳೆದು ಹೆತ್ತವರನ್ನೇ, ಸಮಾಜವನ್ನೇ ಹೆದರಿಸುತ್ತಾರೆ. ಹೀಗೆ ಇದೊಂದು ವಿಷವರ್ತುಲ.
ಮನಃಸ್ಥೈರ್ಯ ಇದ್ದವರು ಯಾವುದೇ ರೋಗವನ್ನೂ ಎದುರಿಸಿ ಆರೋಗ್ಯವಾಗಿರುತ್ತಾರೆ ಎಂಬುದು ವೈದ್ಯಕೀಯ ವಿಜ್ಞಾನಿಗಳ ಅಭಿಪ್ರಾಯ. ಹೃದಯಾಘಾತ ಆದಾಗ ಧೈರ್ಯವಂತರು ಬದುಕುಳಿಯುವ ಸಾಧ್ಯತೆ ಹೆಚ್ಚು ಎಂಬುದು ವೈಜ್ಞಾನಿಕ ಸತ್ಯ.
ಎಲ್ಲಾ ಹೆದರಿಕೆಗಳು ನಾಳೆ ಏನಾಗುವುದೋ ಎಂಬ ಚಿಂತೆಯಿಂದಲೇ ಬರುವುದಂತಹದ್ದು. ಅದರಲ್ಲೂ ನಾಳೆ ನನ್ನ ಆರೋಗ್ಯ ಕೆಟ್ಟರೆ ನನ್ನನ್ನು ನೋಡುವವರು ಯಾರು ಎಂಬುದು ಎಲ್ಲ ಭಯಕ್ಕಿಂತಲೂ ದೊಡ್ಡ ಭಯ. ಆದರೆ ಎಲ್ಲಿ ನರಳಿ ನರಳಿ ಸಾಯಬೇಕಾಗುತ್ತದೋ ಎಂಬುದೇ ಹೆಚ್ಚಿನವರ ಹೆದರಿಕೆ. ನಾಳೆ ರೋಗ ಬರುತ್ತದೆ ಎಂಬ ಹೆದರಿಕೆಯಿಂದಲೇ ಇಂದೇ ರೋಗಿಯಾಗಿ ಬದುಕುವುದಕ್ಕಿಂತ ಹೆಚ್ಚಿನ ದುರಂತ ಬೇರೊಂದಿರಲಿಕ್ಕಿಲ್ಲ.
ಸದಾ ಒಂದಲ್ಲ ಒಂದು ಭಯದಿಂದ ಒದ್ದಾಡುವವರು ಎಂದಿಗೂ ಮನಃಶಾಂತಿಯನ್ನು ಪಡೆಯಲಾರರು. ಅದೊಂದು ರೋಗವಾಗಿ ಅವರನ್ನು ಕಾಡುತ್ತದೆ. ಇಂಥವರಿಗಾಗಿಯೇ ಪ್ರಾಯಶಃ ಸರ್ವಜ್ಞ ತನ್ನ ತ್ರಿಪದಿಯೊಂದರಲ್ಲಿ ಹೀಗೆ ಹೇಳಿದ್ದಾನೆ:
ಬಂದೀತು ರೋಗ ತನಗೆಂದು ಅಂಜಿಕೆ ಬೇಡ |
ಬಂದುದನು ಉಂಡುಟ್ಟು ಸುಖಿಸುತಲಿ ರೋಗ
ಬಂದರೆದ್ದೇಳು ಸರ್ವಜ್ಞ ||
ಸದಾ ಭಯದ ನೆರಳಿನಲ್ಲಿ ಉದ್ವಿಗ್ನರಾಗಿ ಬದುಕುವ ಮಂದಿ, ಸುಖ ಬಂದಾಗಲೂ ಸುಖಿಸುವುದಿಲ್ಲ, ಸುಖದಲ್ಲೂ ಅವರು ದುಃಖವನ್ನೇ ಕಾಣುತ್ತಾರೆ. ಸುಖ ಬಂದಾಗ ಸುಖಿಸಿ, ದುಃಖ ರೋಗ ಬಂದಾಗ ಧೈರ್ಯದಿಂದ ಎದುರಿಸಿದರೆ ಮಾತ್ರ ಜೀವನ ಸಾರ್ಥಕವೆನಿಸುತ್ತದೆ.
’ಬದುಕಿನಲ್ಲಿ ಹೆದರಬೇಕಾದಂಥದ್ದೇನೂ ಇಲ್ಲ; ಅದನ್ನು ಅರ್ಥಮಾಡಿಕೊಳ್ಳಬೇಕ?’ ಎಂಬುದಾಗಿ ಮೇರಿ ಕ್ಯೂರಿ ಹೇಳಿದ್ದಾರೆ.
‘ನೀವು ಹೆದರಲು ನಿರಾಕರಿಸಿಬಿಟ್ಟರೆ ಸಾಕು, ನಿಮ್ಮನ್ನು ಯಾರೂ ಬೆದರಿಸಲಾರರು’ ಎಂಬುದಾಗಿ ಗಾಂಧಿಯವರು ಹೇಳಿದ್ದಾರೆ.
ಭಯ ಇರುವುದು ನಮ್ಮ ಮನಸ್ಸಿನೊಳಗೇ ವಿನಾ ಪರಿಸ್ಥಿತಿಯಲ್ಲಿ ಅಲ್ಲ. ಹಾರೆಯಿಂದ ನೆಲ ಅಗೆದಾಗ ನೀರಿನ ಬುಗ್ಗೆ ಮೇಲೆ ಏಳುತ್ತದೆ. ಹಾರೆಯಿಂದ ನೀರು ಬರಲಿಲ್ಲ. ಬದಲಿಗೆ ಭೂಮಿಯ ಅಡಿಯಲ್ಲಿ ನೀರಿನ ಧಾರೆ ನಿರಂತರ ಹರಿಯುತ್ತಿರುತ್ತದೆ. ಹಾರೆಯಿಂದ ಅದು ಪ್ರಕಟಗೊಳ್ಳುತ್ತದೆ, ಅ?. ಅದೇ ರೀತಿ ನಮ್ಮ ಸುಪ್ತಮನಸ್ಸಿನೊಳಗೆ ಭೀತಿ ಸದಾ ಅಡಗಿರುತ್ತದೆ. ಯಾರಾದರೂ ಕತ್ತಿ ಹಿಡಿದು ನಮ್ಮ ಮುಂದೆ ನಿಂತರೆ ಆ ಭಯ ಪ್ರಕಟಗೊಳ್ಳುತ್ತದೆ. ಭೂಮಿಯೊಳಗಿನ ನೀರು ನಮ್ಮ ಕಣ್ಣಿಗೆ ಕಾಣುತ್ತದೆ. ಆದರೆ ನಮ್ಮ ಸುಪ್ತಮನಸ್ಸಿನ ಭೀತಿ ಕಣ್ಣಿಗೆ ಕಾಣುವುದಿಲ್ಲ. ಈ ಸ್ವಾರಸ್ಯ ನೋಡಿ –
ಧೀರ: “ಏನಯ್ಯ – ದರೋಡೆಕೋರ ಬಂದಾಗ ನೀನ್ಯಾಕೆ ಹೆದರಿಕೊಂಡೆ? ನಿನ್ನ ಹತ್ತಿರ ರಿವಾಲ್ವರ್ ಇತ್ತಲ್ಲ?”
ಹೇಡಿ: “ರಿವಾಲ್ವರ್ ಏನೋ ಇತ್ತು. ಆದ್ರೂ ಮುಚ್ಚಿಟ್ಕಂಡೆ. ಅವನು ಅದನ್ನೂ ಎಲ್ಲಿ ಕಿತ್ಕೊಂಡುಬಿಡ್ತಾನೋ ಅಂತ.”
ಮನಸ್ಸಿನೊಳಗಿನ ಭಯವನ್ನು ನಿವಾರಿಸಬೇಕಾದರೆ ಸುಪ್ತಮನಸ್ಸಿನಲ್ಲಿ ಧೈರ್ಯವನ್ನು ಬಿತ್ತಬೇಕು; ಇದಕ್ಕೆ ಭವಿಷ್ಯದ ಬಗ್ಗೆ ಭಯವನ್ನು ಬಿಡಬೇಕು. ಸದಾ ಸಕಾರಾತ್ಮಕವಾಗಿ ಚಿಂತಿಸಬೇಕು. ’ಆದದ್ದೆಲ್ಲ ಒಳ್ಳೆಯದಕ್ಕೆ, ಆಗುತ್ತಿರುವುದೆಲ್ಲ ಒಳ್ಳೆಯದಕ್ಕೆ, ಮುಂದೆಯೂ ಆಗಲಿರುವುದೆಲ್ಲ ಒಳ್ಳೆಯದಕ್ಕೆ’ ಎಂಬ ದೇವವಾಣಿಯಲ್ಲಿ ದೃಢವಿಶ್ವಾಸವಿಟ್ಟರೆ, ಭವಿಷ್ಯದ ಚಿಂತೆ ಮಾಯವಾಗುತ್ತದೆ. ಬದುಕನ್ನು ಬಂದಂತೆ ಸ್ವೀಕರಿಸಿದರೆ ಭಯ ಹೋಗಿ ನಿರ್ಭಯತೆ ಮೂಡುತ್ತದೆ. ’ಧೈರ್ಯ’ವೆಂದರೆ ’ಏನು ಇದೆಯೋ’ ಅದಕ್ಕೆ ಬಲಿಯಾಗದೆ ಅದರ ಜೊತೆಗೆ ’ಇರು’ವ ಸ್ಥಿತಿ. ಕೇವಲ ಭಯವನ್ನು ನಿವಾರಿಸುವುದಲ್ಲ. ಬದಲಿಗೆ ಅಲ್ಲಿ ನಿರ್ಭೀತಿಯನ್ನು ಬಿತ್ತಿ ಬೆಳೆಸಬೇಕು. ಧೈರ್ಯವೆಂದರೆ ಕೇವಲ ’ಭಯ’ದ ಅಭಾವವಲ್ಲ. ಬದಲಿಗೆ ’ನಿರ್ಭಯತ್ವ’ದ ಉಪಸ್ಥಿತಿಯನ್ನೇ ಧೈರ್ಯವೆನ್ನುತ್ತಾರೆ.
ಅಮೂಲ್ಯ ಪಾಠ
ಒಮ್ಮೆ ಕೃಷ್ಣ ಬಲರಾಮರಿಗೆ ರಾತ್ರಿಯೊಂದನ್ನು ಕಾಡಿನಲ್ಲಿ ಕಳೆಯಬೇಕಾಯಿತಂತೆ. ಕಾಡುಮೃಗಗಳ ಕಾಟದಿಂದ ಪಾರಾಗುವುದಕ್ಕಾಗಿ ಕೃಷ್ಣ ’ನಾನು ಮೊದಲು ಮಲಗಿಕೊಳ್ಳುತ್ತೇನೆ. ನೀನು ಕಾವಲು ಕಾಯುತ್ತಿರು. ಅರ್ಧರಾತ್ರಿಯ ನಂತರ ನೀನು ಮಲಗಿಕೋ. ನಾನು ಕಾವಲು ಕಾಯುತ್ತೇನೆ’ ಎಂದು ಬಲರಾಮನಿಗೆ ಹೇಳಿ, ಮಲಗಿಕೊಂಡ. ಬಲರಾಮ ಕಾವಲು ನಿಂತ. ಕೊಂಚ ಹೊತ್ತಿನಲ್ಲಿ ಅಲ್ಲೊಬ್ಬ ದೈತ್ಯಾಕಾರದ ರಕ್ಕಸ ಪ್ರತ್ಯಕ್ಷನಾದ. ಅವನ ದೈತ್ಯಾಕಾರ ನೋಡಿ ಬಲರಾಮ ಹೆದರಿದ. ನಡುಗುತ್ತಾ ’ನೀನ್ಯಾರು’? ಎಂದು ಕೇಳಿದ. ಬಲರಾಮನ ಹೆದರಿಕೆಯನ್ನು ನೋಡಿ ರಕ್ಕಸ ಗಟ್ಟಿಯಾಗಿ ನಕ್ಕ. ಅ? ಅಲ್ಲ, ತನ್ನ ಗಾತ್ರಕ್ಕಿಂತ ಎರಡರ? ಹಿರಿದಾಗಿ ಬೆಳೆದ. ಅವನ ಗಾತ್ರ ಹಿರಿದಾದುದನ್ನು ನೋಡಿ ಬಲರಾಮನು ಇನ್ನೂ ಹೆದರಿ, ’ನೀನ್ಯಾರು? ನಿನಗೇನು ಬೇಕೆಂಬುದನ್ನಾದರೂ ಹೇಳು’ ಎಂದು ಅಂಗಲಾಚಿದ. ರಕ್ಕಸ ಮತ್ತೂ ಬೆಳೆದು ಮರದೆತ್ತರವಾಗಿ ಗಟ್ಟಿಯಾಗಿ ನಕ್ಕ. ಅದನ್ನು ನೋಡಿ ಬಲರಾಮ ಮತ್ತ? ಹೆದರಿ, ಕೃಷ್ಣ! ಕೃಷ್ಣ! ಎಂದು ಕಿರುಚಿಕೊಂಡು ಪ್ರಜ್ಞೆತಪ್ಪಿ ಬಿದ್ದುಬಿಟ್ಟ.
ಬಲರಾಮನ ಕಿರುಚಾಟದಿಂದ ಕೃಷ್ಣ ಎಚ್ಚರಗೊಂಡ. ನೋಡಿದರೆ ಬಲರಾಮನು ನೆಲದ ಮೇಲೆ ಒರಗಿದ್ದ. ’ಬಹುಶಃ ನಿದ್ದೆ ಬಂದಿರಬೇಕು, ನಾನೀಗ ಕಾವಲು ಕಾಯಬೇಕು’ ಎಂದುಕೊಳ್ಳುತ್ತಾ ತಲೆಯೆತ್ತಿ ನೋಡಿದಾಗ, ದೈತ್ಯಾಕಾರದ ರಕ್ಕಸ ಕಾಣಿಸಿದ. ಕೃಷ್ಣ ಹೆದರಲಿಲ್ಲ. ಧೈರ್ಯವಾಗಿ ನೀನಾರೆಂದು ಕೇಳಿದ. ಕೃಷ್ಣನ ಧೈರ್ಯದಿಂದ ಬೆಕ್ಕಸಬೆರಗಾದ ರಕ್ಕಸ ’ನಾನೊಬ್ಬ ರಕ್ಕಸ’ ಎಂದಾಗ ರಕ್ಕಸನ ಗಾತ್ರ ಅರ್ಧವಾಗಿತ್ತು. ಆದರೂ ಕೃಷ್ಣ ಗಟ್ಟಿಯಾಗಿ ನಕ್ಕು ’ನೀನು ನನ್ನನ್ನು ತಿನ್ನುತ್ತೀಯೋ ಅಥವಾ ನೀನೇ ನನಗೆ ಬಲಿಯಾಗುತ್ತೀಯೋ ನೋಡೋಣ; ಕಾಳಗಕ್ಕೆ ಸಿದ್ಧನಾಗಿದ್ದೀಯಾ?’ ಎಂದಾಗ ರಕ್ಕಸನೇ ಹೆದರಿದ. ಆತನ ಗಾತ್ರ ಇನ್ನೂ ಕಿರಿದಾಯಿತು! ಆದರೂ ಆತ ಕಾಳಗಕ್ಕೆ ಮುಂದಾದಾಗ, ಕೃಷ್ಣನು ಗಹಗಹಿಸಿ ನಕ್ಕು ’ನಿನ್ನಂತಹ ರಕ್ಕಸರನ್ನು ಒಂದು ಗಳಿಗೆಯಲ್ಲಿ ಮುಗಿಸಬಲ್ಲೆ!’ ಎಂದು ತೊಡೆತಟ್ಟಿ ನಿಂತಾಗ ರಕ್ಕಸನ ಗಾತ್ರ ಕಿರುಬೆರಳಿನಷ್ಟಾಗಿಬಿಟ್ಟಿತು!
ಕೃಷ್ಣ ಬಗ್ಗಿ ಪುಟ್ಟ ರಾಕ್ಷಸನನ್ನು ಎತ್ತಿಕೊಂಡು ತನ್ನ ಅಂಗವಸ್ತ್ರದ ತುದಿಯಲ್ಲಿ ಗಂಟುಕಟ್ಟಿಕೊಂಡು ಕಾವಲನ್ನು ಮುಂದುವರಿಸಿದ.
ಬೆಳಗಿನ ಜಾವ ಬಲರಾಮ ಎದ್ದು “ನಿನ್ನೆ ರಾತ್ರಿ ದೈತ್ಯಾಕಾರದ ರಕ್ಕಸನೊಬ್ಬ ಬಂದಿದ್ದ. ನನ್ನನ್ನು ಹೆದರಿಸಿಬಿಟ್ಟ” ಎಂದಾಗ, ಕೃಷ್ಣ ಅಂಗವಸ್ತ್ರದ ತುದಿಗೆ ಕಟ್ಟಿದ್ದ ರಕ್ಕಸನನ್ನು ತೆಗೆದು ತೋರಿಸಿದರು. ಬಲರಾಮ “ಅರೆ, ಇದೇ ರಾಕ್ಷಸನನ್ನು ನಾನು ರಾತ್ರಿ ನೋಡಿದ್ದು. ಆಗ ಅವನದು ಬೃಹದಾಕಾರ. ಈಗ ಕಿರಿದಾಗಿದ್ದಾನಲ್ಲ!” ಎಂದಾಗ, ಕೃಷ್ಣ “ರಕ್ಕಸರಿಗೆ ಹೆದರಿಕೊಂಡರೆ ಅವರು ನಮಗಿಂತ ಹಿರಿದಾಗುತ್ತಾರೆ. ಧೈರ್ಯವಾಗಿ ಎದುರು ನಿಂತರೆ ನಮಗಿಂತ ಕಿರಿದಾಗುತ್ತಾರೆ! ಹಾಗೆಯೇ, ಬದುಕಿನಲ್ಲಿ ಕೃಷ್ಣಗಳು, ತೊಂದರೆ-ತಾಪತ್ರಯಗಳು. ಸವಾಲುಗಳು ಎದುರಾದಾಗ ನಾವು ಅವುಗಳಿಗೆ ಹೆದರಿಕೊಂಡರೆ ಅವು ನಮಗಿಂತ ಹಿರಿದಾಗಿ ಕಾಣುತ್ತವೆ. ನಾವು ಧೈರ್ಯವಾಗಿ ಎದುರಿಸಿದರೆ ಅವು ನಮಗಿಂತ ಕಿರಿದಾಗುತ್ತವೆ. ಇದು ಬದುಕಿನ ಅಮೂಲ್ಯ ಪಾಠ” ಎಂದು ಹೇಳಿದ.
ಧೈರ್ಯ ನಮ್ಮನ್ನು ಎಲ್ಲ ರೀತಿಯ ಅಪಾಯಗಳಿಂದಲೂ ಪಾರುಮಾಡುತ್ತದೆ. ಆದ್ದರಿಂದಲೇ ಹೀಗೆ ಹೇಳಲಾಗಿದೆ: ’ನೀವು ಐಶ್ವರ್ಯವನ್ನು ಕಳೆದುಕೊಂಡಾಗ ಕಳೆದುಕೊಂಡದ್ದು ಬಹಳ ಸ್ವಲ್ಪ. ನೀವು ಮಿತ್ರರೊಬ್ಬರನ್ನು ಕಳೆದುಕೊಂಡಾಗ ಹೆಚ್ಚು ಕಳೆದುಕೊಳ್ಳುತ್ತೀರಿ. ಆದರೆ ನೀವು ಧೈರ್ಯವನ್ನು ಕಳೆದುಕೊಂಡಾಗ ಸರ್ವಸ್ವವನ್ನೂ ಕಳೆದುಕೊಳ್ಳುತ್ತೀರಿ.’
ಮನುಷ್ಯನಲ್ಲಿ ಮೂರು ರೀತಿಯ ಧೈರ್ಯಗಳಿವೆ – ಒಂದು ಮನೋಸ್ಥೈರ್ಯ, ಇನ್ನೊಂದು ನೈತಿಕಸ್ಥೈರ್ಯ ಹಾಗೂ ಮೂರನೆಯದು ಆತ್ಮಸ್ಥೈರ್ಯ. ಇತಿಹಾಸದಲ್ಲಿ ಈ ಮೂರು ಧೈರ್ಯಗಳಿಗೆ ಸಾಕಷ್ಟು ಉದಾಹರಣೆಗಳು ನೋಡಲು ಸಿಗುತ್ತವೆ.
ಗೆಲವಿನ ಗುಟ್ಟು
‘ವಿಜೇತ ವಿಲಿಯಂ’ ಎಂದೇ ಪ್ರಸಿದ್ಧನಾದ ಹಾಲೆಂಡಿನ ವಿಲಿಯಂ ಇಂಗ್ಲೆಂಡಿನ ಮೇಲೆ ದಂಡೆತ್ತಿ ಬಂದ. ಸಮುದ್ರಮಾರ್ಗವಾಗಿ ಬಂದು, ಭೂಮಿಯ ಮೇಲೆ ಇಟ್ಟ ಪ್ರಥಮ ಹೆಜ್ಜೆಗೇ ಜಾರಿದ ಆತ ಹೇಗೋ ಸಾವರಿಸಿಕೊಂಡ. ಇದು ಅಪಶಕುನವೆಂದು ಸೈನಿಕರು ಪಿಸುಗುಟ್ಟತೊಡಗಿದರು. ಈ ಘಟನೆಯಿಂದ ಸೈನಿಕರ ಮನೋಬಲ ಕುಸಿದಿರುವುದನ್ನು ಆತ ಗಮನಿಸಿದ. ಸೈನಿಕರು ಯಾರೂ ಹಿಂದಕ್ಕೆ ನೋಡದೇ ಎದುರಲ್ಲಿರುವ ಬೆಟ್ಟದ ತುದಿಗೆ ತಲಪಬೇಕೆಂದು ಆಜ್ಞಾಪಿಸಿದ. ’ಎಲ್ಲರೂ ಮುಂದೆ ಹೋಗಿ, ಅಲ್ಲಿ ನಾನು ನಿಮ್ಮೊಡನೆ ಮಾತನಾಡುತ್ತೇನೆ’ ಎಂದ. ಎಲ್ಲರೂ ಮುಂದೆ ಹೋದ ನಂತರ ಅವರು ಬಂದ ಹಡಗುಗಳಿಗೆಲ್ಲ ಬೆಂಕಿ ಹಚ್ಚಲು ತನ್ನ ಬಂಟರಿಗೆ ಆಜ್ಞೆ ನೀಡಿದ. ತಾನು ಸೈನಿಕರೊಂದಿಗೆ ಬೆಟ್ಟದತುದಿ ತಲಪಿದ. “ನಾವು ಇಲ್ಲಿಗೆ ಬರುತ್ತಿದ್ದಂತೆ ಭಗವಂತ ನಮ್ಮನ್ನು ದೊಡ್ಡದಾಗಿ ಆಶೀರ್ವದಿಸಿದ್ದಾನೆ” ಎಂದ. “ನಾನು ಈ ಭೂಮಿಯ ಮೇಲೆ ಕಾಲಿಡುತ್ತಿದ್ದಂತೆ ನನ್ನ ಹಸ್ತಮುದ್ರೆ ಈ ಭೂಮಿಗೆ ಸ್ಪರ್ಶಿಸಿದ್ದರಿಂದ ನಮ್ಮ ವಿಜಯ ನಿಶ್ಚಿತವಾಗಿದೆ. ಮತ್ತೀಗ ಹಿಂದೆ ಸಮುದ್ರದತ್ತ ನೋಡಿರಿ. ನಾವು ಬಂz
ಹಡಗುಗಳೆಲ್ಲ ಬೆಂಕಿಗೆ ಆಹುತಿಯಾಗುತ್ತಿವೆ. ಈಗ ಹಿಂದಕ್ಕೆ ಹೋಗಲು ಬೇರೆ ದಾರಿಯೇ ಇಲ್ಲ. ನಾವು ಈ ಭೂಮಿಯಲ್ಲೇ ಇರಬೇಕಾದರೆ ಪರಾಕ್ರಮ ತೋರಿ ವಿಜಯ ಸಂಪಾದಿಸಬೇಕು. ಇಲ್ಲವೇ ಮೃತ್ಯುವನ್ನು ಆಹ್ವಾನಿಸಬೇಕು. ಈಗ ಹಿಂದಕ್ಕೆ ಹೋಗುವುದಂತೂ ಅಸಂಭವ” ಎಂದ ವಿಲಿಯಂ. ಬೇರೆ ದಾರಿಯೇ ಇಲ್ಲದಿರುವುದನ್ನು ಗಮನಿಸಿದ ಸೈನಿಕರು ಶಕ್ತಿ ಮತ್ತು ಪರಾಕ್ರಮದಿಂದ ಹೋರಾಡಿದರು. ವಿಜಯ ಅವರದೇ ಆಯಿತು.
ಇದು ಮನಃಸ್ಥೈರ್ಯಕ್ಕೆ ಒಂದು ಒಳ್ಳೆಯ ಉದಾಹರಣೆ.
ಚಂಪಾರಣ್ಯದಲ್ಲಿ ಭಾರತೀಯ ಕಾರ್ಮಿಕರು ಬಿಳಿಯರಾದ ತೋಟದ ಮಾಲೀಕರ ಶೋಷಣೆ, ಹಿಂಸೆ ಮತ್ತು ಅನ್ಯಾಯಗಳಿಗೆ ಗುರಿಯಾಗಿ ಕ?ಪಡುತ್ತಿದ್ದರು. ಗಾಂಧಿಯವರು ಅಲ್ಲಿಗೆ ಬಂದು ಅವರಿಗಾಗುತ್ತಿದ್ದ ತೊಂದರೆಗಳ ವಿರುದ್ಧ ಹೋರಾಟಕ್ಕೆ ಅಣಿಯಾದಾಗ ಪರಿಸ್ಥಿತಿ ನಿಧಾನವಾಗಿ ಸುಧಾರಿಸತೊಡಗಿತು. ಕೆಲಸಗಾರರು ಎಚ್ಚರಗೊಂಡು ಆತ್ಮವಿಶ್ವಾಸ ಬೆಳೆಸಿಕೊಂಡರು. ಇದರಿಂದಾಗಿ ಮಾಲೀಕರಿಗೆ ದಿಗಿಲಾಯಿತು.
ಯಾರೋ ಗಾಂಧಿಯವರಿಗೆ ಹೇಳಿದರು: “ನೋಡಿ, ಇಲ್ಲಿನ ತೋಟದ ಮಾಲೀಕ ಬಹಳ ಕೆಟ್ಟ ಮನುಷ್ಯ. ಯಾವುದಕ್ಕೂ ಹೇಸುವವನಲ್ಲ. ನಿಮ್ಮನ್ನು ಕೊಲೆ ಮಾಡಲು ಹೊಂಚುಹಾಕುತ್ತಿದ್ದಾನೆ. ಅದಕ್ಕಾಗಿ ಕೊಲೆಗಡುಕನನ್ನು ನೇಮಿಸಿದ್ದಾನೆ.” ಈ ಮಾತು ಕೇಳಿದ ಗಾಂಧಿಯವರು ಒಂದು ರಾತ್ರಿ ಏಕಾಂಗಿಯಾಗಿಯೇ ಬಿಳಿಯ ಮಾಲೀಕನ ಬಂಗಲೆಗೆ ಹೋದರು. “ನನ್ನನ್ನು ಮುಗಿಸಿಬಿಡಲು ನೀವು ಕೊಲೆಗಡುಕನನ್ನು ನೇಮಿಸಿದಿರಂತೆ. ಅದರ ಆವಶ್ಯಕತೆ ಇಲ್ಲ. ನಾನೇ ಏಕಾಂಗಿಯಾಗಿ ಇಲ್ಲಿಗೆ ಬಂದಿದ್ದೇನೆ” ಎಂದರು. ಮಾಲೀಕ ದಂಗಾಗಿ ಕ್ಷಮೆ ಕೇಳಿದ.
ಗಾಂಧಿಯವರ ಈ ಧೈರ್ಯ ನೈತಿಕಸ್ಥೈರ್ಯಕ್ಕೆ ಒಂದು ಒಳ್ಳೆಯ ನಿದರ್ಶನ
ಒಮ್ಮೆ ಮಹಮ್ಮದ್ ಪೈಗಂಬರರ ವಿರೋಧಿಗಳು ಅವರನ್ನು ಹತ್ಯೆಗೈಯಲು ಮೆಕ್ಕಾದಲ್ಲಿರುವ ಅವರ ಮನೆಯನ್ನು ಸುತ್ತುವರಿದರು. ಅವರು ಅಬೂಬಕರ್ ಎಂಬ ಸಹಾಯಕನೊಂದಿಗೆ ಹಿಂದಿನ ದಾರಿಯಿಂದ ಓಡಿಹೋಗಿ ಒಂದು ಗುಹೆಯಲ್ಲಿ ಅಡಗಿದರು. ಶತ್ರುಗಳು ಹುಡುಕುತ್ತಾ ಹತ್ತಿರವೇ ಬಂದದ್ದು ಅವರ ಹೆಜ್ಜೆ ಸಪ್ಪಳದಿಂದ ತಿಳಿಯಿತು. “ನಾವಿಬ್ಬರೇ, ಅವರು ಹೆಚ್ಚು ಸಂಖ್ಯೆಯಲ್ಲಿದ್ದಾರೆ. ನಾವು ಅವರ ಕೈಯಿಂದ ಬದುಕುವುದು ಹೇಗೆ?” ಎಂದು ಅಬೂಬಕರ್ ಗಾಬರಿಗೊಂಡ. “ನಾವು ಇಬ್ಬರಲ್ಲ, ಮೂವರಿದ್ದೇವೆ” ಎಂದು ಪೈಗಂಬರರು ಹೇಳಿದರು. “ಮೂರನೆಯವರು ಯಾರು?” ಎಂದಾಗ, “ದೇವರೇ ನಮ್ಮೊಡನಿದ್ದಾನೆ” ಎಂದು ಪೈಗಂಬರರು ಹೇಳಿದರು. “ಭಗವಂತ ತನ್ನ ಸಂದೇಶವನ್ನು ನಮ್ಮ ಮೂಲಕ ಜನರಿಗೆ ತಲಪಿಸಲು ನಿರ್ಧರಿಸಿದ್ದಲಿ, ನಮ್ಮನ್ನು ಯಾರೂ ಕೊಲ್ಲಲು ಸಾಧ್ಯವಿಲ್ಲ. ಬೇರೆಯವರಿಂದ ಈ ಕಾರ್ಯವಾಗಬೇಕೆಂದು ನಿಶ್ಚಯಿಸಿದರೆ ನಾವು ಉಳಿಯಲಾರೆವು” ಎಂದರು. ಕೊನೆಗೂ ಶತ್ರುಗಳಿಗೆ ಇವರು ಅಡಗಿದ್ದ ಸ್ಥಳದ ಸುಳಿವು ಸಿಗಲಿಲ್ಲ.
ಪೈಗಂಬರರ ಈ ಶ್ರದ್ಧೆ ಆತ್ಮಸ್ಥೈರ್ಯಕ್ಕೊಂದು ಉತ್ತಮ ನಿದರ್ಶನ.
ನಮ್ಮ ದೇಶದಲ್ಲಂತೂ ದೈವಸಾಕ್ಷಾತ್ಕಾರ ಪಡೆದ, ಆತ್ಮಸ್ಥೈರ್ಯದಿಂದಲೇ ಬದುಕಿದ ಹಲವಾರು ಋಷಿಪುಂಗವರು ಕಾಣಲು ಸಿಗುತ್ತಾರೆ.
ಕ್ಷತ್ರಿಯನಾದ ವಿಶ್ವಾಮಿತ್ರನು ವಸಿ?ರ ಮೇಲೆ ಯುದ್ಧಕ್ಕೆ ಹೋದಾಗ, ವಸಿ?ರ ಹತ್ತಿರ ಸೈನ್ಯವೂ ಇರಲಿಲ್ಲ, ಶಸ್ತ್ರವೂ ಇರಲಿಲ್ಲ. ಆಗ ಅವರು ವಿಶ್ವಾಮಿತ್ರನ ಸೈನ್ಯದ ಎದುರು ತಮ್ಮ ಮಂತ್ರದಂಡವನ್ನೇ ಹಿಡಿದರು. ಅದರ ಪ್ರಭಾವದಿಂದಲೇ ವಿಶ್ವಾಮಿತ್ರನನ್ನು ಸೋಲಿಸಿದರು. ವಸಿ?ರ ಆತ್ಮಸ್ಥೈರ್ಯದ ಎದುರು ವಿಶ್ವಾಮಿತ್ರನ ಸೈನ್ಯವು ಸೋಲಬೇಕಾಯಿತು.
ಎಲ್ಲ ಹೆದರಿಕೆಗೆ ಅಜ್ಞಾನವೇ ಮೂಲ. ದೇಹ ನಶ್ವರ, ಆತ್ಮ ಶಾಶ್ವತ ಎಂಬ ಆತ್ಮಜ್ಞಾನವಿದ್ದವರನ್ನು ಯಮನಿಂದಲೂ ಹೆದರಿಸಲು ಆಗುವುದಿಲ್ಲ. ಆತ್ಮಜ್ಞಾನಿ ಮಾತ್ರ ಆತ್ಮಸ್ಥೈರ್ಯದಿಂದ ಬದುಕಲು ಸಾಧ್ಯ.
ನಮ್ಮ ಹಿರಿಯರು ಭಗವಂತನಲ್ಲಿ “ಸದಾ ಧೈರ್ಯವನ್ನು ಕೊಡು” ಎಂಬುದಾಗಿ ಬೇಡುತ್ತಿದ್ದರು. ವೇದಕಾಲದ ಋಷಿಗಳು ಹೀಗೆ ಪ್ರಾರ್ಥಿಸುತ್ತಿದ್ದರು: “ಹೇ ದೇವ, ಮಿತ್ರಭಯದಿಂದಲೂ, ಶತ್ರುಭಯದಿಂದಲೂ ನಾನು ದೂರವಾಗುವಂತಾಗಲಿ. ಜ್ಞಾತ ಮತ್ತು ಅಜ್ಞಾತಗಳ ಭಯದಿಂದಲೂ ನಾನು ದೂರವಾಗುವಂತಾಗಲಿ.”
ಮಹಾಭಾರತದಲ್ಲಿ ಒಂದು ಪ್ರಸಂಗ ಬರುತ್ತದೆ. “ಎಲ್ಲ ರೀತಿಯ ಅಪಾಯಗಳಿಂದಲೂ ನಮ್ಮನ್ನು ಪಾರುಮಾಡುವುದು ಯಾವುದು?’ ಎಂಬುದಾಗಿ ಯುದಿಷ್ಠಿರನನ್ನು ಯಕ್ಷ ಕೇಳಿದಾಗ, ಒಂದೇ ಶಬ್ದದಲ್ಲಿ ಯುಧಿಷ್ಠಿರ ’ಧೈರ್ಯ’ ಎಂದು ಉತ್ತರಿಸಿದ.
ನಾವು ನಿರ್ಭೀತರಾಗಬೇಕು. ಆಗ ನಮ್ಮ ಕೆಲಸ ಪರಿಪೂರ್ಣವಾಗುವುದು. ’ಎದ್ದುನಿಲ್ಲು, ಜಾಗೃತನಾಗು ಮತ್ತು ಗುರಿ ಪ್ರಾಪ್ತವಾಗುವವರೆಗೂ ನಿಲ್ಲದಿರು’ ಎಂಬುದಾಗಿ ಸ್ವಾಮಿ ವಿವೇಕಾನಂದರು ಮನುಕುಲಕ್ಕೆ ದಿವ್ಯ ಸಂದೇಶ ಸಾರಿದರು. ಆ ಋಷಿವಾಣಿಯಂತೆ ಧೈರ್ಯದಿಂದ ಎದ್ದು ನಿಲ್ಲೋಣ, ದಿಟ್ಟತನದಿಂದ ಮುಂದೆ ಹೆಜ್ಜೆ ಹಾಕೋಣ, ಧೀರರಾಗಿ ಸಾಹಸಿಗರಾಗೋಣ, ಸಾಧಕರಾಗೋಣ.