ನಮ್ಮ ದೇಶದಲ್ಲೀಗ ೨೦ ಕೋಟಿಗೂ ಮಿಗಿಲಾದ ಅಂತರ್ಜಾಲ ಬಳಕೆದಾರರು ಇದ್ದಾರೆ. ಆದರೆ ಅಂತರ್ಜಾಲ ವ್ಯವಹಾರಗಳ ಮೇಲೆ ಎಷ್ಟುಮಾತ್ರವೂ ಸರ್ಕಾರದ ನಿಯಂತ್ರಣ ಇಲ್ಲ. ಅಂತರ್ಜಾಲ ಸೇವೆಗಳನ್ನು ಒದಗಿಸುವುವೆಲ್ಲ ವಿದೇಶೀ ಕಂಪೆನಿಗಳು – ಗೂಗಲ್, ಫೇಸ್ಬುಕ್ ಮೊದಲಾದವು. ಅವು ಯಾವುವೂ ನಮ್ಮ ಸರ್ಕಾರಕ್ಕೆ ತೆರಿಗೆ ಸಲ್ಲಿಸುತ್ತಿಲ್ಲ. ‘ಈ ದೇಶದ ಕಾನೂನುಗಳು ನಮಗೆ ಅನ್ವಯಿಸುವುದಿಲ್ಲ’ ಎಂದೇ ಈ ಕಂಪೆನಿಗಳು ಬಹಿರಂಗವಾಗಿಯೆ ಸಾರಿವೆ. ತೆರಿಗೆವಂಚನೆ, ‘ಸೈಬರ್-ಕ್ರೈಮ್’ ತಂತ್ರಗಳು – ಎರಡೂ ಮಾರ್ಗಗಳಲ್ಲಿ ಸರ್ಕಾರ ಬಿಲಿಯಾಂತರ ನಷ್ಟವನ್ನು ಅನುಭವಿಸುತ್ತಿದೆ.
ಕತ್ತಲ ರಾಜ್ಯದಲ್ಲಿ ನಡೆದದ್ದೇ ಶಾಸನ ಎಂಬುದು ಹಿಂದೀ ಸಾಮತಿ.
ಅಡಾಲ್ಫ್ ಹಿಟ್ಲರನೂ ಅವನ ಬಂಟ ಜೋಸೆಫ್ ಗೊಬೆಲ್ಸ್ನೂ ಪ್ರವರ್ತಿಸಿ ಅನುಸರಿಸಿದ ಧೋರಣೆ ಇದು: ನೀವು ಸುಳ್ಳನ್ನು ಹೇಳಲೇಬೇಕಾಗಿದ್ದರೆ ಜುಜುಬಿ ಸುಳ್ಳನ್ನು ಹೇಳಬೇಡಿ, ಭಾರೀ ಸುಳ್ಳನ್ನು ಹೇಳಿ, ಮತ್ತು ಅದನ್ನು ಮತ್ತೆಮತ್ತೆ ಉಚ್ಚರಿಸುತ್ತ ಹೋಗಿ. ಸುಳ್ಳು ಭಾರಿ ಪ್ರಮಾಣದ್ದಾದಾಗ ಮತ್ತು ಪದೇಪದೇ ಕಿವಿಗೆ ಬಿದ್ದಾಗ ಕ್ರಮೇಣ ಜನರು ಅದನ್ನು ನಂಬುತ್ತಾರೆ. ಆಭಾಸದ್ದೆನಿಸಿದರೂ ಈ ಅಪಸಿದ್ಧಾಂತದ ಅನುಸರಣೆ ಈಚಿನ ಕಾಲದಲ್ಲಿ ವ್ಯಾಪಕವಾಗಿಯೆ ನಡೆದಿರುವಂತಿದೆ.
ಈಚಿನ ದಿನಗಳಲ್ಲಿ ‘ಡಿಜಿಟಲ್ ಭಾರತ’ದತ್ತ ಕ್ರಮಿಸುವ ಗುರಿ, ವಿದ್ಯುನ್ಮಾನಾಧಾರಿತ (ಎಲೆಕ್ಟ್ರಾನಿಕ್) ವಾಣಿಜ್ಯ, ಸಕಲ ವ್ಯವಹಾರಗಳಲ್ಲಿಯೂ ಅಂತರ್ಜಾಲ (ಇಂಟರ್ನೆಟ್) ಮಾಧ್ಯಮದ ಬಳಕೆ, ಎಲ್ಲ ಮಾಹಿತಿಯ ಸಂಗ್ರಹಣೆಗೂ ಬಳಕೆಗೂ ‘ಇ-‘ ಮಾಧ್ಯಮದ ಪ್ರಯೋಗ, ಸಮಸ್ತ ಸಂವಹನಗಳಿಗೂ ‘ಇ-ಮೇಲ್’ ಬಳಕೆ, ಬ್ಯಾಂಕಿಂಗ್ ಸೇರಿದಂತೆ ಎಲ್ಲ ವಾಣಿಜ್ಯ ವಹಿವಾಟುಗಳಲ್ಲಿಯೂ ಇ-ಮೇಲ್ ಬಳಕೆ, ಏನನ್ನು ಖರೀದಿಸಬೇಕಾದರೂ ಇ-ಮೇಲ್ ಮೂಲಕ ಉಪಗ್ರಹಪೋಷಿತ ಅಂತರರಾಷ್ಟ್ರೀಯ ಕಂಪೆನಿಗಳೊಡನೆ ಸಂಪರ್ಕ – ಇದು ಈಚಿನ ಜಗತ್ತಿನ ಚಿತ್ರ. ಇದೆಲ್ಲ ನಮ್ಮ ಕಾಲದ ತಂತ್ರಜ್ಞಾನವಿಕ್ರಮಗಳೆಂದು ಅನೇಕರು ಖುಷಿಪಡಬಹುದು; ಇರಲಿ.
ಇಲ್ಲಿ ಕೇಳಬೇಕಾದ ಪ್ರಶ್ನೆಗಳು ಹಲವಿವೆ.
ಮೊತ್ತಮೊದಲನೆಯದಾಗಿ: ಜಗದ್ವ್ಯಾಪಿಯಾಗಿ ತುಂಬಾ ದೊಡ್ಡ ಪ್ರಮಾಣದಲ್ಲಿ ಜಗತ್ತಿನ ಮೂಲೆಮೂಲೆಗಳಲ್ಲಿ ಈ ವ್ಯವಹಾರಸರಣಿ ನಡೆದಿರುವುದರಿಂದ ಅದು ನಿಯಮಬದ್ಧವೇ ಆಗಿರಬೇಕು – ಎಂದು ಅಧಿಕಮಂದಿ ಭಾವಿಸಿದ್ದಾರೆ. ಆದರೆ ಈ ಸಂಭವಪ್ರತಿಜ್ಞೆಯನ್ನು ಪರೀಕ್ಷಿಸಬೇಡವೆ? ಕೇವಲ ಬಳಕೆಯ ಅಗಾಧತೆಯಿಂದ ಮತ್ತು ಸಾರ್ವತ್ರಿಕತೆಯಿಂದ ಒಂದಾನೊಂದು ಕಲಾಪವು ಕಾನೂನುಬದ್ಧವೆಂದು ಸ್ಥಿರಪಡುವುದಿಲ್ಲ. ದುರಂತವೆಂದರೆ – ಇಂತಹ ಆಧಾರಭೂತ ಸಂಗತಿಗಳನ್ನು ಯಾರೂ ಪ್ರಶ್ನಿಸುತ್ತಲೇ ಇಲ್ಲ. ಇವುಗಳ ಬಗೆಗೆ ಯಾವ ವೇದಿಕೆಯಲ್ಲಿಯೂ ಪರಾಮರ್ಶನೆ ನಡೆಯುತ್ತಲೇ ಇಲ್ಲ. ಮೇಲಿನದರಷ್ಟೆ ಪ್ರಶ್ನಾರ್ಹವಾದ ಇನ್ನೊಂದು ನಂಬಿಕೆಯೆಂದರೆ – ಸರ್ಕಾರವೇ ಈ ವ್ಯವಹಾರಗಳಲ್ಲಿ ತೊಡಗಿರುವುದರಿಂದ ಅವು ಕಾನೂನುಬದ್ಧವೇ ಆಗಿರಬೇಕು – ಎಂಬುದು. ಈ ನಂಬಿಕೆಗೂ ವಾಸ್ತವ ಆಧಾರವೇನಿಲ್ಲ.
ಇದೀಗ ದೇಶದಲ್ಲಿ ೨೦ ಕೋಟಿಗೂ ಮಿಗಿಲಾದ ಅಂತರ್ಜಾಲ ಬಳಕೆದಾರರು ಇದ್ದಾರೆ. ಆದರೆ ಅಂತರ್ಜಾಲ ವ್ಯವಹಾರಗಳ ಮೇಲೆ ಎಷ್ಟುಮಾತ್ರವೂ ಸರ್ಕಾರದ ನಿಯಂತ್ರಣ ಇಲ್ಲ. ಅಂತರ್ಜಾಲ ಸೇವೆಗಳನ್ನು ಒದಗಿಸುವುವೆಲ್ಲ ವಿದೇಶೀ ಕಂಪೆನಿಗಳು – ಗೂಗಲ್, ಫೇಸ್ಬುಕ್ ಮೊದಲಾದವು. ಅವು ಯಾವುವೂ ನಮ್ಮ ಸರ್ಕಾರಕ್ಕೆ ತೆರಿಗೆ ಸಲ್ಲಿಸುತ್ತಿಲ್ಲ. ‘ಈ ದೇಶದ ಕಾನೂನುಗಳು ನಮಗೆ ಅನ್ವಯಿಸುವುದಿಲ್ಲ’ ಎಂದೇ ಈ ಕಂಪೆನಿಗಳು ಬಹಿರಂಗವಾಗಿಯೆ ಸಾರಿವೆ. ತೆರಿಗೆ ವಂಚನೆ, ‘ಸೈಬರ್-ಕ್ರೈಮ್’ ತಂತ್ರಗಳು – ಎರಡೂ ಮಾರ್ಗಗಳಲ್ಲಿ ಸರ್ಕಾರ ಬಿಲಿಯಾಂತರ ನಷ್ಟವನ್ನು ಅನುಭವಿಸುತ್ತಿದೆ. ಈ ಕಂಪೆನಿಗಳು ವಿದೇಶಗಳಲ್ಲಿ ತಮ್ಮ ಸರ್ಕಾರಗಳಿಗೆ ತೆರಿಗೆಯನ್ನೂ ಸರ್ವಿಸ್ ಟ್ಯಾಕ್ಸ್ ಮೊದಲಾದವನ್ನೂ ಸಲ್ಲಿಸುತ್ತವೆ.
ಇದು ಕೇವಲ ಆರ್ಥಿಕ ನಷ್ಟದ ವಿಷಯವಲ್ಲ. ಈ ವ್ಯವಹಾರಗಳು ದೇಶದ ಭದ್ರತೆಗೂ ಧಕ್ಕೆ ತರುತ್ತವೆ.
ಕೇಂದ್ರಸರ್ಕಾರದ ಖಾತೆಗಳೇ ಯಾಹೂ, ಜಿ-ಮೇಲ್ ಮೊದಲಾದ ಕಂಪೆನಿಗಳ ಸೇವೆಯನ್ನು ಬಳಸಿಕೊಳ್ಳುತ್ತಿವೆ. ಹಲವಾರು ಕಂಪೆನಿಗಳ ಸರ್ವರುಗಳು ಇರುವುದೇ ವಿದೇಶಗಳಲ್ಲಿ. ಹೀಗಾಗಿ ದೇಶದೆಳಗಿನ ಪ್ರಜೆಗಳ ಮಾಹಿತಿಯಷ್ಟೂ ಬಿಡಿಬೀಸಾಗಿ ವಿದೇಶಗಳಿಗೆ ಹರಿದುಹೋಗುತ್ತಿದೆ. ಇಂತಹ ಮಾಹಿತಿಯ ಪರಭಾರೆಯು ಕಾನೂನಿನಂತೆ ನಿಷಿದ್ಧ. ‘ಪಬ್ಲಿಕ್ ರೆಕಾರ್ಡ್ಸ್ ಆಕ್ಟ್ – ೧೯೯೩’ ಶಾಸನದಂತೆ ಪರವಾನಗಿ ಇಲ್ಲದೆ ಆಂತರಿಕ ಮಾಹಿತಿಯನ್ನು ವಿದೇಶಗಳಿಗೆ ರವಾನಿಸುವುದು ದಂಡನಾರ್ಹ ಅಪರಾಧವಾಗಿದೆ. ಹಾಗೆ ಮಾಹಿತಿಯನ್ನು ರವಾನಿಸುವವರಿಗೆ ದಂಡವನ್ನೂ ಜೈಲುವಾಸವನ್ನೂ ವಿಧಿಸಬಹುದಾಗಿದೆ.
ಈ ವಹಿವಾಟುಗಳ ಯಾವ ಅಂಶವನ್ನು ಪರಿಶೀಲಿಸಿದರೂ ನಿಯಮೋಲ್ಲಂಘನೆಗಳೇ ಕಾಣುತ್ತಿವೆ. ನಿದರ್ಶನಕ್ಕೆ: ಸರ್ಕಾರ ಯಾವುದೋ ವಿಶಿಷ್ಟಸೇವೆಗಾಗಿ ನಿಯೋಜಿಸುವ ಪ್ರತಿಯೊಂದು ‘ಐಟಿ’ ಕಂಪೆನಿಯಲ್ಲಿಯೂ ಒಬ್ಬ ‘ಗ್ರೀವೆನ್ಸ್ ಆಫೀಸರ್’ ಕಡ್ಡ್ಡಾಯವಾಗಿ ಇರಬೇಕೆಂದು ೨೦೧೧ರಲ್ಲಿ ಶಾಸನ ಮಾಡಲಾಗಿದೆ. ಆದರೆ ಎಲ್ಲಿಯಾದರೂ ಇಂತಹ ‘ದೂರು ಅಧಿಕಾರಿ’ಗಳನ್ನು ಯಾರಾದರೂ ನೋಡಿದ್ದೇವೆಯೆ?
ಈಗ ಪ್ರಚಲನಗೊಂಡಿರುವ ಧೋರಣೆಗಳು ಎಷ್ಟು ಅವ್ಯವಸ್ಥೆ ಯನ್ನೂ ನ್ಯಾಯಬಾಹಿರ ವಹಿವಾಟುಗಳನ್ನೂ ಪೆತ್ಸಾಹಿಸುತ್ತಿವೆ ಎಂಬುದಕ್ಕೆ ದಿಕ್ಸೂಚಕವಾಗಿಯಷ್ಟೆ ಮೇಲಣ ಸಂಗತಿಗಳನ್ನು ದೃಷ್ಟಾಂತವಾಗಿ ಸೂಚಿಸಲಾಗಿದೆ. ಆದರೆ ಮೇಲಣ ಧೋರಣೆಗಳ ಜಾಡಿನ ಅಡ್ಡಪರಿಣಾಮಗಳು ಲೆಕ್ಕಕ್ಕೆ ಸಿಗದಷ್ಟು ಇವೆ.
ನಿದರ್ಶನಕ್ಕೆ: ಇತ್ತೀಚೆಗೆ ಕೇಂದ್ರಸರ್ಕಾರದ ಖಾತೆಗಳು ತಾವು ದಾಖಲೆಗಳಲ್ಲಿ ಡಿಜಿಟಲ್ ಎಂದರೆ ಎಲೆಕ್ಟ್ರಾನಿಕ್ ಸಹಿಗಳನ್ನು ಮಾತ್ರವೇ ಮಾನ್ಯಮಾಡುವುದಾಗಿ ಆಜ್ಞೆ ಹೊರಡಿಸಿವೆ. ಈ ವಿಕ್ಷಿಪ್ತ ಧೋರಣೆಯಿಂದ ಏನೇನು ಕಾನೂನಿನ ತೊಡಕುಗಳನ್ನು ಎದುರಿಸಬೇಕಾಗಿಬರುತ್ತದೆಂದು ಯಾರಾದರೂ ಪರಿಶೀಲಿಸಿದ್ದಾರೆಯೆ? ಹಿಂದಿನ ವರ್ಷಗಳಲ್ಲ್ಲಿ ಚಾಲನೆಗೊಂಡಿದ್ದ ಅಸಂಖ್ಯ ಕರಾರುಪತ್ರಗಳ ಮತ್ತು ದಾಖಲೆಗಳ ಮೇಲೆ ಈ ‘ಎಲೆಕ್ಟ್ರಾನಿಕ್ ಸಿಗ್ನೇಚರ್’ ನಿಯಮದ ಪರಿಣಾಮಗಳು ಏನಾಗಬಹುದು?
‘ಐಟಿ’ ಕ್ಷೇತ್ರದ ವಿದೇಶೀ ಕಂಪೆನಿಗಳ ನಿಯಂತ್ರಣವೂ ಅವುಗಳಿಂದ ತೆರಿಗೆ ಮತ್ತು ಸರ್ವಿಸ್ ಟ್ಯಾಕ್ಸ್ ವಸೂಲಾತಿಯೂ ಕಡ್ಡಾಯವೆಂದು ಸಾರ್ವಜನಿಕಹಿತಾಸಕ್ತಿ ಮೊಕದ್ದಮೆಯೊಂದರಲ್ಲಿ ದೆಹಲಿ ಉಚ್ಚನ್ಯಾಯಾಲಯದ ನ್ಯಾಯಮೂರ್ತಿಗಳಾದ ಬದರ್ ದುರೇಜ್ ಅಹ್ಮದ್ ಮತ್ತು ಸಿದ್ಧಾರ್ಥ ಮೃದುಲ್ ಅವರ ನ್ಯಾಯಪೀಠವು ಇತ್ತೀಚೆಗೆ (೨೮ ನವೆಂಬರ್ ೨೦೧೪) ತೀರ್ಪನ್ನು ಘೋಷಿಸಿ ಕೇಂದ್ರಸರ್ಕಾರಕ್ಕೆ ಆದೇಶ ನೀಡಿದೆ.
ಆರ್ಥಿಕ ಸ್ವಾಸ್ಥ್ಯ ಮಾತ್ರವಲ್ಲದೆ ದೇಶದ ಭದ್ರತೆಗೂ ಸಂಬಂಧಿಸಿರುವ ಈ ಪ್ರಚಲಿತ ನಡವಳಿಗಳ ಬಗೆಗೆ ವ್ಯಾಪಕ ಜನಜಾಗೃತಿಯೂ ಸಾರ್ವಜನಿಕ ವೇದಿಕೆಗಳಲ್ಲಿ ಪರ್ಯಾಲೋಚನೆಗಳೂ ನಡೆಯಬೇಕಾದುದರ ತೀವ್ರ ಆವಶ್ಯಕತೆ ಇದೆ.?